ಗಾಂಧಿಯವರು ಪ್ರತಿಪಾದಿಸಿದ ನೂತನ ಸರ್ವೋದಯ ಆರ್ಥಿಕ ಮಾದರಿಯು ಊಳಿಗಮಾನ್ಯ ಪದ್ಧತಿ (Feudalism), ವ್ಯಾಪಾರೋದ್ಯಮವಾದ (Mercantalism) ಮತ್ತು ವಸಾಹತುಶಾಹಿ (Colonialism), ಸಾಮ್ರಾಜ್ಯವಾದಿ (Imperialism), ಬಂಡವಾಳಶಾಹೀ (Capitalism), ಸಮತಾವಾದೀ ಆರ್ಥಿಕವ್ಯವಸ್ಥೆಗಳಿಂದ (Communism)) ಹೇಗೆ ಭಿನ್ನವಾದುದು ಹಾಗೂ ಅವುಗಳಿಗಿಂತ ವೈಶಿಷ್ಟ್ಯಪೂರ್ಣವಾದುದು ಎಂಬುದನ್ನು ತಿಳಿಯಲು ಅವೆಲ್ಲವುಗಳ ತುಲನಾತ್ಮಕ ಅಧ್ಯಯನ ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಊಳಿಗಮಾನ್ಯ ಪದ್ಧತಿ, ವ್ಯಾಪಾರೋದ್ಯಮವಾದ, ವಸಾಹತುಶಾಹಿ ಮತ್ತು ಸಾಮ್ರಾಜ್ಯವಾದಗಳ ಸಂಕ್ಷಿಪ್ತ ಪರಿಚಯವನ್ನೂ ಬಂಡವಾಳಶಾಹಿ ಹಾಗೂ ಸಮತಾವಾದಿ ಆರ್ಥಿಕವ್ಯವಸ್ಥೆಗಳ ಸ್ಥೂಲ ವಿವರಣೆಯನ್ನೂ ನೋಡೋಣ. ಕೊನೆಯಲ್ಲಿ ಸರ್ವೋದಯ ಆರ್ಥಿಕಮಾದರಿಯನ್ನು ವಿಶ್ಲೇಷಿಸುತ್ತಲೇ ಅದು ಹೇಗೆ ಉಳಿದೆಲ್ಲ ‘ಇಸಂ’ ಮತ್ತು ಆರ್ಥಿಕ ಮಾದರಿಗಳಿಗಿಂತ ಹೆಚ್ಚು ಪ್ರಸ್ತುತವೂ ಪ್ರಯೋಜನಕಾರಿಯೂ ಆಗಿದೆ ಎಂಬುದನ್ನು ತಿಳಿಯಬಹುದು.
1. ಊಳಿಗಮಾನ್ಯ ಪದ್ಧತಿ
ಯೂರೋಪಿನಲ್ಲಿ ಸುಮಾರು 5ನೇ ಶತಮಾನದಿಂದ 15ನೇ ಶತಮಾನದವರೆಗೆ ಊಳಿಗಮಾನ್ಯ ಪದ್ಧತಿಯು ಪ್ರಬಲವಾಗಿತ್ತು. ಕ್ರಮೇಣ ದುರ್ಬಲಗೊಳ್ಳುತ್ತ ಬಂದಿತಾದರೂ 18ನೇ ಶತಮಾನದ ಉತ್ತರಾರ್ಧದವರೆಗೂ ಮುಂದುವರಿದು ಅಂತಿಮವಾಗಿ ಬಂಡವಾಳಶಾಹಿ ಪದ್ಧತಿಗೆ ದಾರಿಮಾಡಿಕೊಟ್ಟಿತು.
ಈ ಪದ್ಧತಿ ಭೂಸ್ವಾಧೀನತೆ ಮತ್ತು ಅದಕ್ಕಾಗಿ ಹಾಕಿದ ಶ್ರಮ ಹಾಗೂ ಲಭ್ಯ ಫಲ ವಿನಿಮಯದ ಸಂಬಂಧಗಳನ್ನು ತಿಳಿಸುತ್ತದೆ. ಭೂಮಿಯ ಒಡೆಯ, ಜಮೀನಿನ ಹಿಡುವಳಿದಾರ ಅಥವಾ ಸಾಮಂತ ಮತ್ತು ಊಳಿಗ ಮಾಡುವ ಕರಾರಿನ ಮೇಲೆ ಜಮೀನಿನ ಸಾಗುವಳಿ ಮಾಡಿ, ಪ್ರತಿಫಲವಾಗಿ ಬಾಡಿಗೆ ಹಣ ಮತ್ತು ಮಿಲಿಟರಿ ಸೇವೆಯನ್ನು ಮಾಲೀಕರಿಗೆ ಒದಗಿಸುವವರ (ಗುಲಾಮರ) ನಡುವಿನ ಕಾನೂನಾತ್ಮಕ ಹಾಗೂ ರಾಜಕೀಯ ವ್ಯವಸ್ಥೆಯಿದು. ಈ ವ್ಯವಸ್ಥೆ ಅಸ್ತಿತ್ವದಲ್ಲಿದ್ದ ಕಾಲಘಟ್ಟದಲ್ಲಿ ಯೂರೋಪಿನಾದ್ಯಂತ ರಾಷ್ಟ್ರೀಯ ಮನೋಭಾವನೆಯಾಗಲೀ ಇರಲಿಲ್ಲ. ಬದಲಿಗೆ ದೇಶಗಳೆಲ್ಲ ಅನೇಕ ಜಹಗೀರುಗಳಾಗಿ ಒಡೆದುಹೋಗಿದ್ದುವಲ್ಲದೆ, ಪ್ರತಿಯೊಂದು ಜಹಗೀರು ಒಬ್ಬೊಬ್ಬ ಭೂಮಾಲೀಕನ ವಶದಲ್ಲಿತ್ತು. ಅಂದು ಪ್ರಾದೇಶಿಕ ಭಾವನೆ ಪ್ರಭಲವಾಗಿದ್ದುದು ಕಂಡುಬರುತ್ತದೆ.
ಈ ಪದ್ಧತಿಯಲ್ಲಿ ವ್ಯವಸಾಯವೇ ಪ್ರಮುಖ ವೃತ್ತಿಯಾಗಿತ್ತು. ಸರಳ ಸಾಧನ-ಸಲಕರಣೆಗಳಿಂದ ಕೃಷಿಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಉತ್ಪನ್ನವೂ ಮಿತವಾಗಿತ್ತು. ಆದ್ದರಿಂದ ವ್ಯವಸಾಯ ಹೆಚ್ಚು ಲಾಭದಾಯಕವಾಗಿರಲಿಲ್ಲ. ಗುಲಾಮೀ ವರ್ಗ ಬೆವರುಸುರಿಸಿ ದುಡಿದು ಭೂಮಾಲೀಕರ ಸಂಪತ್ತು ಹಾಗೂ ಸುಖ ಸಂತೋಷಗಳನ್ನು ಹೆಚ್ಚಿಸಬೇಕಿತ್ತು. ಹಾಗಾಗಿ ಭೂಮಾಲೀಕರು ಮತ್ತು ಶ್ರೀಮಂತರು ವೈಭವೋಪೇತ ಜೀವನ ನಡೆಸುತ್ತಿದ್ದರು. ಇನ್ನೊಂದೆಡೆ ಗುಲಾಮರಿಗೆ ಸಿಗುತ್ತಿದ್ದ ಪ್ರತಿಫಲ ತೀರ ಅಲ್ಪವಾಗಿತ್ತಲ್ಲದೆ, ಅವರನ್ನು ಎಲ್ಲ ರೀತಿಯಿಂದಲೂ ಶೋಷಣೆ ಮಾಡಲಾಗುತ್ತಿತ್ತು. ಕೃಷಿಉತ್ಪಾದನೆಯೂ ಜೀವನಾಧಾರದವರೆಗೆ ಮಾತ್ರ ನಡೆಯುತ್ತಿತ್ತು.
ಪ್ರತಿಯೊಂದು ಹಳ್ಳಿಗಳಲ್ಲಿ ಗೃಹಕೈಗಾರಿಕೆಗಳಿದ್ದು ಆವಶ್ಯಕ ದಿನಬಳಕೆಯ ವಸ್ತುಗಳಾದ ಬಟ್ಟೆ, ಮಡಕೆ, ಕೃಷಿ ಸಾಧನ-ಸಲಕರಣೆಗಳನ್ನು ಉತ್ಪಾದಿಸುತ್ತಿದ್ದರು. ವ್ಯವಸಾಯೋತ್ಪನ್ನದ ಹೆಚ್ಚಿನ ಭಾಗ ಭೂಮಾಲೀಕರ ಹಾಗೂ ಶ್ರೀಮಂತ ವರ್ಗದವರ ಅನುಭೋಗಕ್ಕೆ ಬಳಕೆಯಾಗುತ್ತಿದುದರಿಂದ ಅಲ್ಪಪ್ರಮಾಣದ ವಸ್ತುಗಳು ಕೈಗಾರಿಕೋತ್ಪನ್ನಗಳ ವಿನಿಮಯಕ್ಕೆ ಬರುತ್ತಿದ್ದವು. ಈ ಕಾಲಘಟ್ಟದಲ್ಲಿ ಹಣಕಾಸಿನ ವ್ಯವಸ್ಥೆಗೆ ಬದಲಾಗಿ ‘ವಸ್ತುವಿನಿಮಯ ಪದ್ಧತಿ’ (Barter System) ಬಳಕೆಯಲ್ಲಿತ್ತು. ಗುಡಿಕೈಗಾರಿಕೆಗಳ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯಲ್ಲಷ್ಟೇ ವಿನಿಮಯವಾಗುತ್ತಿದ್ದವು. ಕೃಷಿ ಹಾಗೂ ಕೈಗಾರಿಕೆಗಳ ಉತ್ಪಾದಕಶಕ್ತಿ ಅಲ್ಪಪ್ರಮಾಣದ್ದಾಗಿತ್ತು. ಬಡತನದಿಂದಾಗಿ ಜನಸಾಮಾನ್ಯರ ಜೀವನ ದಯನೀಯ ಸ್ಥಿತಿಯಲ್ಲಿತ್ತು.
ಎಲ್ಲೆಡೆ ಅರಾಜಕತೆ ನೆಲೆಸಿದ್ದರಿಂದಾಗಿ ಬೆಳೆಕಟಾವಿನ ತರುವಾಯ ಬಿಡುವಿನ ವೇಳೆಯಲ್ಲಿ ಭೂಮಾಲೀಕರ ಮಧ್ಯೆ ಸಮರಗಳು ನಡೆಯುತ್ತಿದ್ದವು. ಆಗ ಗುಲಾಮರು ತಮ್ಮ ಭೂ ಮಾಲೀಕರಿಗೆ ಮಿಲಿಟರಿ ಸೇವೆಯನ್ನು ಸಲ್ಲಿಸಬೇಕಾಗಿತ್ತು.
ಊಳಿಗಮಾನ್ಯ ಪದ್ಧತಿಯಲ್ಲಿ ಶ್ರೀಮಂತ ಭೂಮಾಲೀಕ ವರ್ಗ ವೈಭವಯುತ ಜೀವನ ನಡೆಸುತ್ತಿದ್ದರೆ ಜನಸಾಮಾನ್ಯರ ಹಾಗೂ ಗುಲಾಮರ ಜೀವನ ಶೋಚನೀಯವಾಗಿತ್ತು.
2. ವ್ಯಾಪಾರೋದ್ಯಮ ವಾದ
15ನೇ ಶತಮಾನದ ಕೊನೆಯ ಭಾಗದಲ್ಲಿ ಊಳಿಗಮಾನ್ಯ ಪದ್ಧತಿಯ ಜಾಗದಲ್ಲಿ ವ್ಯಾಪಾರೋದ್ಯಮ ವಾದ ಪ್ರವರ್ಧಮಾನಕ್ಕೆ ಬಂದಿತು. ಇದು 18ನೇ ಶತಮಾನದ ಉತ್ತರಾರ್ಧದ ವರೆಗೆ ಯೂರೋಪಿನ ಅನೇಕ ದೇಶಗಳಲ್ಲಿ ಪ್ರಭಾವಶಾಲಿ ವಾದವಾಗಿದ್ದಿತು. ಇದೇ ಸಮಯದಲ್ಲಿ ಜಹಗೀರುದಾರಿ ಹಾಗೂ ಪ್ರಾದೇಶಿಕ ಚಿಂತನೆಯ ಬದಲು ರಾಷ್ಟ್ರೀಯತೆಯ ಭಾವನೆ ಜಾಗೃತವಾಗತೊಡಗಿತು. ಸಮಾನ ಪೂರ್ವಜರು, ಸಮಾನ ಭಾಷೆ, ಸಂಸ್ಕೃತಿ, ಧರ್ಮ, ಆಚಾರ-ವಿಚಾರಗಳು ಹಾಗೂ ಆರ್ಥಿಕ ಹಿತ – ಇತ್ಯಾದಿಗಳು ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸಲು ಕಾರಣವಾದವು. ಇದರ ಪರಿಣಾಮವಾಗಿ ಯೂರೋಪಿನಲ್ಲಿ ‘ರಾಷ್ಟ್ರೀಯ ರಾಜ್ಯಗಳ’ (Nation States) ಉದಯವಾಯಿತು. ಒಂದೆಡೆ ರಾಷ್ಟ್ರೀಯತೆಯ ಭಾವನೆ ಜನರನ್ನು ಬೆಸೆಯುವ ಕೆಲಸ ಮಾಡಿದರೆ ಇನ್ನೊಂದೆಡೆ ಅದು ಬೇರೆ ಬೇರೆ ರಾಷ್ಟ್ರಗಳಾಗುವಂತೆ ವಿಭಜಕ ಶಕ್ತಿಯಾಗಿಯೂ ಕೆಲಸಮಾಡಿತು; ಯೂರೋಪಿನಲ್ಲಿ ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಫ್ರಾನ್ಸ್, ಜರ್ಮನಿ – ಹೀಗೆ ವಿವಿಧ ದೇಶಗಳ ಜನನಕ್ಕೆ ಕಾರಣವಾಯಿತು. ಮೊದಲು ಜಹಗೀರುದಾರರ ಮತ್ತು ಸಾಮಂತರ ನಡುವೆ ನಡೆಯುತ್ತಿದ್ದ ಯುದ್ಧಗಳು ಆನಂತರ ವಿವಿಧ ದೇಶಗಳ ನಡುವಿನ ಯುದ್ಧಗಳಾಗಿ ಪರಿವರ್ತಿತವಾದವು (16-17ನೇ ಶತಮಾನದಲ್ಲಿ). ಒಂದು ದೇಶ ತನ್ನ ಆರ್ಥಿಕನೀತಿಯ ಮೂಲಕ ರಫ್ತನ್ನು ಹೆಚ್ಚಿಸಿ, ಆಮದನ್ನು ಕಡಿತಗೊಳಿಸಿ ಅನುಕೂಲಕರ ವ್ಯಾಪಾರೀ ಶಿಲ್ಕನ್ನು (Surlplus Balance of Trade) ಸಾಧಿಸುವ ನೀತಿಗೆ ‘ವ್ಯಾಪಾರೋದ್ಯಮವಾದ’ ಎನ್ನುತ್ತೇವೆ. ದೇಶದ ಆರ್ಥಿಕ ನೀತಿ ಈ ಉದ್ದೇಶವನ್ನು ಪೂರ್ಣಗೊಳಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುತ್ತದೆ:
1. ದೇಶದ ಪ್ರತಿಯೊಂದು ಅಂಗುಲ ಭೂಮಿಯನ್ನೂ ವ್ಯವಸಾಯ, ಕೈಗಾರಿಕೆ ಹಾಗೂ ಗಣಿ ಕಾರ್ಯಗಳಿಗೆ ಮೀಸಲಾಗಿಡುವುದು.
2. ಸಿದ್ಧವಸ್ತುಗಳ ಮಾರುಕಟ್ಟೆಯ ಬೆಲೆ ಕಚ್ಚಾವಸ್ತುಗಳ ಬೆಲೆಗಿಂತ ಹೆಚ್ಚಾಗಿರುವ ಕಾರಣ ದೇಶದಲ್ಲಿ ದೊರೆಯುವ ಎಲ್ಲ ಕಚ್ಚಾವಸ್ತುಗಳನ್ನು ಸಿದ್ಧಪಡಿಸಿದ ವಸ್ತುಗಳಿಗೆ ಪರಿವರ್ತಿಸುವ ಪ್ರಯತ್ನ ಮಾಡಬೇಕು.
3. ಚಿನ್ನ ಮತ್ತು ಬೆಳ್ಳಿಗಳ ರಫ್ತನ್ನು ಸ್ಥಗಿತಗೊಳಿಸಿ ದೇಶೀಯ ಹಣದ ಚಲಾವಣೆಯನ್ನು ಮಾಡಬೇಕು.
4. ವಿದೇಶೀ ವಸ್ತುಗಳ ಆಮದನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು.
5. ಕೆಲವು ವಸ್ತುಗಳ ಆಮದು ಅನಿವಾರ್ಯವಾದಾಗ ಅವುಗಳನ್ನು ಸ್ವದೇಶೀ ವಸ್ತುಗಳ ವಿನಿಮಯದ ಮೂಲಕ ಪಡೆಯಬೇಕು.
6. ಆಮದು ಆದಷ್ಟು ಕಚ್ಚಾವಸ್ತುಗಳಿಗೆ ಸೀಮಿತವಾಗಿರಬೇಕು.
7. ಹೆಚ್ಚುವರಿ ಸ್ವದೇಶೀ ಕೈಗಾರಿಕಾ ವಸ್ತುಗಳನ್ನು ಚಿನ್ನ ಬೆಳ್ಳಿಗಳಿಗೆ ವಿನಿಮಯ ಮಾಡಿಕೊಂಡು ರಫ್ತು ಮಾಡಬೇಕು.
8. ಯಾವ ವಸ್ತುಗಳನ್ನು ಸ್ವದೇಶದಲ್ಲೇ ಉತ್ಪಾದನೆ ಮಾಡಬಹುದೋ ಅಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು.
ಇವುಗಳ ಜೊತೆ ಇನ್ನೂ ಕೆಲವು ನೀತಿಗಳನ್ನು ಪಾಲಿಸಲಾಗುತ್ತಿತ್ತು. ಅವುಗಳೆಂದರೆ –
1. ಸಿದ್ಧಪಡಿಸಿದ ವಸ್ತುಗಳ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸುವುದು.
2. ಒಂದು ದೇಶದ ಅಧೀನದಲ್ಲಿರುವ ವಸಾಹತು ದೇಶ ಬೇರೆ ದೇಶಗಳ ಜೊತೆಗೆ ವ್ಯಾಪಾರ ಮಾಡಲು ನಿರ್ಬಂಧ ಹೇರುವುದು.
3. ಆಮದಿನ ಕಾರಣ ಬೇರೆ ದೇಶಗಳಿಗೆ ಕೊಡಬೇಕಾದ ಹಣವನ್ನು ಚಿನ್ನ-ಬೆಳ್ಳಿಗಳ ಮೂಲಕ ಕೊಡಲು ನಿರ್ಬಂಧ ಹೇರುವುದು.
4. ಪರದೇಶಿ ಹಡಗುಗಳ ಮೂಲಕ ವ್ಯಾಪಾರದ ನಿರ್ಬಂಧ.
5. ರಫ್ತಿನ ಉತ್ತೇಜನಕ್ಕೆ ಪ್ರೋತ್ಸಾಹಧನ ನೀಡುವುದು.
6. ಸಿದ್ಧವಸ್ತುಗಳ ಉತ್ಪಾದನಾ ಪ್ರಮಾಣ ಹೆಚ್ಚಿಸಲು ಎಲ್ಲ ರೀತಿಯ ಸಂಶೋಧನೆಗಳಿಗೆ ಸಹಾಯಧನದ ಮೂಲಕ ಪ್ರೋತ್ಸಾಹ ನೀಡುವುದು.
7. ದೇಶದ ಒಳಗೆ ಅನುಭೋಗದ ಪ್ರಮಾಣವನ್ನು ಕಡಮೆಮಾಡಿ ಅದನ್ನು ರಫ್ತುಮಾಡಲು ಉಪಯೋಗಿಸುವುದು – ಇತ್ಯಾದಿ.
ವ್ಯಾಪಾರೋದ್ಯಮವಾದದ ಪ್ರಮುಖ ಲಕ್ಷಣಗಳನ್ನು ಈ ರೀತಿ ಪಟ್ಟಿಮಾಡಬಹುದು.
1. ಪ್ರತಿಯೊಂದು ಸ್ವತಂತ್ರ ದೇಶವೂ ತಾನು ಆರ್ಥಿಕ ಹಾಗೂ ರಾಜಕೀಯವಾಗಿ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು ಎನ್ನುವುದರ ಕಡೆಗೆ ಗಮನ ಹರಿಸಿತು.
2. ಊಳಿಗಮಾನ್ಯ ಪದ್ಧತಿ ಹಾಗೂ ವಸ್ತುವಿನಿಮಯ ಪದ್ಧತಿಗಳು ನಿಧಾನವಾಗಿ ಮಾಯವಾಗಿ ಹಣಕಾಸಿನ ಆರ್ಥಿಕವ್ಯವಸ್ಥೆ ಆ ಜಾಗವನ್ನು ತುಂಬಲಾರಂಭಿಸಿತು.
3. ಆರ್ಥಿಕವಾಗಿ ಶಕ್ತಿಶಾಲಿ ಹಾಗೂ ಪ್ರಬಲ ದೇಶವಾಗಬೇಕಾದರೆ ಹಣದ ಪ್ರತಿರೂಪವಾದ ಚಿನ್ನ ಹಾಗೂ ಬೆಳ್ಳಿಯನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬೇಕೆನ್ನುವ ಮಹತ್ತ್ವಾಕಾಂಕ್ಷೆ ಪ್ರಾರಂಭವಾಯಿತು.
4. ಹೆಚ್ಚಿನ ಚಿನ್ನ ಬೆಳ್ಳಿಯ ಸಂಗ್ರಹದಿಂದಾಗಿ ತನಗೆ ಬೇಕಾದುದೆಲ್ಲವನ್ನೂ ದೇಶದ ಒಳಗೆ ಮತ್ತು ಹೊರಗೆ ಕೊಳ್ಳಬಹುದು, ಸೇನೆ ಹಾಗೂ ನೌಕಾಬಲವನ್ನು ವೃದ್ಧಿಸಿಕೊಳ್ಳಬಹುದು, ಯುದ್ಧಗಳ ಮೂಲಕ ಬೇರೆ ಬೇರೆ ದೇಶಗಳ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸಬಹುದು, – ಎನ್ನುವ ವಿಶ್ವಾಸ ಹೆಚ್ಚಾಗತೊಡಗಿತು.
5. ಚಿನ್ನ ಹಾಗೂ ಬೆಳ್ಳಿಯ ಸಂಗ್ರಹಪ್ರಮಾಣವನ್ನು ಹೆಚ್ಚಿಸಲು ಅವರು ಕಂಡುಕೊಂಡ ನೂತನ ಮಾರ್ಗಗಳೆಂದರೆ ಕೈಗಾರಿಕಾ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಿ ಅದನ್ನು ಬೇರೆ ದೇಶಗಳಿಗೆ ರಫ್ತುಮಾಡುವುದು, ಆಮದು ಪ್ರಮಾಣವನ್ನು ಕಡಮೆಗೊಳಿಸುವುದು, ರಫ್ತಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವುದು ಹಾಗೂ ಆಮದುಗಳ ಮೇಲೆ ಹೆಚ್ಚಿನ ನಿರ್ಬಂಧ ಹೇರುವುದು ಇತ್ಯಾದಿ.
6. ಚಿನ್ನ-ಬೆಳ್ಳಿಯನ್ನು ಹೆಚ್ಚು ಸಂಪಾದಿಸುವ ಹಾಗೂ ಶೇಖರಣೆ ಮಾಡುವ ಉದ್ದೇಶದ ಸಲುವಾಗಿ ಸರ್ಕಾರದ ಮಧ್ಯಪ್ರವೇಶ ಅನಿವಾರ್ಯವಾಗಿ ಆರ್ಥಿಕ ನಿಯಂತ್ರಣಗಳು ಹೆಚ್ಚತೊಡಗಿದವು. ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ನಿರ್ಬಂಧಗಳು ಅಧಿಕವಾಗಿ ಸರ್ಕಾರಗಳು ರಕ್ಷಣಾತ್ಮಕ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದವು.
7. ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವುದರ ಬದಲು ಸರ್ಕಾರಗಳು ಚಿನ್ನ-ಬೆಳ್ಳಿಯನ್ನು ಸಂಗ್ರಹಿಸಲು, ರಫ್ತುಪ್ರಮಾಣವನ್ನು ಹೆಚ್ಚಿಸಲು, ಅನುಕೂಲಕರ ವ್ಯಾಪಾರೀಶಿಲ್ಕನ್ನು ಹೆಚ್ಚಿಸಿಕೊಳ್ಳಲು ತಮ್ಮ ಗಮನವನ್ನು ಕೇಂದ್ರೀಕರಿಸಿದವು. ಆದ್ದರಿಂದ ವ್ಯಾಪಾರೋದ್ಯಮ ವಾದವನ್ನು ವ್ಯವಹಾರ ಅಥವಾ ವ್ಯಾಪಾರೀ ಬಂಡವಾಳಶಾಹಿ ಪದ್ಧತಿ ಎಂದು ಕರೆದರು.
ಹೀಗೆ ವ್ಯಾಪಾರೋದ್ಯಮ ವಾದ ದೇಶೀಯ ಹಾಗೂ ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ಮತ್ತು ಮಿತಗೊಳಿಸುವ ಮೂಲಕ ಹಣದ ಪ್ರತಿರೂಪವಾದ ಚಿನ್ನ-ಬೆಳ್ಳಿಯ ಸಂಗ್ರಹಪ್ರಮಾಣವನ್ನು ಹೆಚ್ಚಿಸಿ ಅನುಕೂಲಕರ ಅಂತರರಾಷ್ಟ್ರೀಯ ಶಿಲ್ಕನ್ನು ಸಾಧಿಸಿಕೊಂಡು ತನ್ಮೂಲಕ ಆರ್ಥಿಕ ಸಮೃದ್ಧಿಯನ್ನು ಹೊಂದುವ ಪ್ರಯತ್ನ ಮಾಡತೊಡಗಿದವು.
3. ವಸಾಹತುಶಾಹಿ ವಾದ
ಗ್ರೀಕ್, ಪರ್ಷಿಯನ್ ಮತ್ತು ರೋಮನ್ ಜನರು 5 ಮತ್ತು 6ನೇ ಶತಮಾನದಲ್ಲಿ ಹೊಸ ‘ವಸಾಹತು’ಗಳನ್ನು ನಿರ್ಮಿಸುವುದರ ಮೂಲಕ ವಸಾಹತುಶಾಹಿವಾದ ಪ್ರಾರಂಭವಾಯಿತು. ಅದು 15ರಿಂದ 19ನೇ ಶತಮಾನದ ಉತ್ತರಾರ್ಧದವರೆಗೂ ಪ್ರಭಾವಶಾಲಿಯಾಗಿತ್ತು. ಎರಡನೆಯ ಮಹಾಯುದ್ಧ ಮತ್ತು ನಂತರದ (1945-1975) ಅವಧಿಯಲ್ಲಿ ಯೂರೋಪಿನ ಅನೇಕ ದೇಶಗಳು ಸ್ವಾತಂತ್ರ್ಯ ಪಡೆಯುವುದರೊಂದಿಗೆ ವಸಾಹತುಶಾಹಿ ವಾದ ಕೊನೆಗೊಂಡಿತು.
ವಸಾಹತುಶಾಹಿ ವಾದ ಎಂದರೆ ಶಕ್ತಿಶಾಲಿ ದೇಶಗಳು ತಮ್ಮ ಆರ್ಥಿಕ ಲಾಭಕ್ಕಾಗಿ ಹಿಂದುಳಿದ, ಶಕ್ತಿಹೀನ, ದುರ್ಬಲ ದೇಶಗಳ ಅಥವಾ ಜನಾಂಗಗಳ ಮೇಲೆ ತಮ್ಮ ಆಡಳಿತ ಮತ್ತು ಪ್ರಭುತ್ವವನ್ನು ಹೇರುವ, ತಮ್ಮ ಮೂಗಿನ ನೇರಕ್ಕೆ ಆ ದೇಶಗಳ ದೈನಂದಿನ ವ್ಯವಹಾರಗಳನ್ನು ನಡೆಸುವ ನೀತಿ. ಅದರ ಪ್ರಮುಖ ಲಕ್ಷಣಗಳನ್ನು ಹೀಗೆ ವಿವರಿಸಬಹುದು :
1. ಹಿಂದುಳಿದ ದೇಶಗಳ ಮೂಲನಿವಾಸಿಗಳ ಸ್ವಾತಂತ್ರ್ಯವನ್ನು ಬಲಾತ್ಕಾರದಿಂದಲೋ ವಂಚನೆಯಿಂದಲೋ ಕಿತ್ತುಕೊಂಡು ಅವುಗಳ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಹಾಗೂ ನಿಯಂತ್ರಣವನ್ನು ಸಾಧಿಸುವುದು.
2. ಆ ದೇಶಗಳಲ್ಲಿ ಸಿಗುವ ಎಲ್ಲ ರೀತಿಯ ಸಂಪತ್ತನ್ನೂ ತಮ್ಮ ದೇಶಕ್ಕೆ ಸಾಗಿಸಿ, ಅದನ್ನು ಸಂಪೂರ್ಣವಾಗಿ ತಮ್ಮ ಆರ್ಥಿಕ ಪ್ರಗತಿಗೆ ಉಪಯೋಗಿಸಿಕೊಳ್ಳುವುದು.
3. ತಮ್ಮ ಆರ್ಥಿಕ ಹಾಗೂ ರಾಜಕೀಯ ಶಕ್ತಿಯ ಮೂಲಕ ವಸಾಹತು ನಾಡಿನ ಮೂಲನಿವಾಸಿಗಳನ್ನು ಅತಿಶಯವಾಗಿ ಶೋಷಿಸುವುದು.
4. ವಸಾಹತು ನಾಡಿನಲ್ಲಿ ತಮ್ಮ ಆಳ್ವಿಕೆಯನ್ನು ವಿಸ್ತರಿಸಿ ಸಶಕ್ತಗೊಳಿಸುವ ಮೂಲಕ ತಮ್ಮ ಧರ್ಮ, ಸಂಸ್ಕೃತಿ, ಶಿಕ್ಷಣ ಇತ್ಯಾದಿ ಪದ್ಧತಿಗಳನ್ನು ಮೂಲನಿವಾಸಿಗಳ ಮೇಲೆ ಹೇರಿ ತಮ್ಮ ಸ್ವಂತ ಹಿತವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುವುದು.
5. ವಸಾಹತು ನಾಡಿನಲ್ಲಿ ತಮ್ಮ ಆಳ್ವಿಕೆಯನ್ನು ಭದ್ರಪಡಿಸಲು ಕೆಲವು ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯ ಕಾರ್ಯವನ್ನು ಕೈಗೊಂಡರೂ ಅದರ ಮೂಲ ಉದ್ದೇಶ ಆ ದೇಶಗಳಿಂದ ತಾವು ಪ್ರಯೋಜನ ಪಡೆಯುವುದೇ ಆಗಿರುತ್ತದೆ. ಆದಕಾರಣ ಪ್ರಪಂಚದಲ್ಲಿ ವಸಾಹತುಶಾಹಿ ವಾದವನ್ನು ಅನುಸರಿಸಿದ ಶಕ್ತಿಶಾಲಿ ದೇಶಗಳು ಆರ್ಥಿಕವಾಗಿ ಸಮೃದ್ಧವಾದವೇ ಹೊರತು ವಸಾಹತು ನಾಡಿನ ಪ್ರಗತಿಯಂತೂ ಎಲ್ಲೂ ಕಂಡುಬಂದಿಲ್ಲ.
6. ಸಾಮ್ರಾಜ್ಯವಾದದ ಪರಿಣಾಮವಾಗಿ ಗುಲಾಮತನ ಹಾಗೂ ಜೀತಗಾರಿಕೆ ಜನ್ಮತಳೆದು, ವಸಾಹತುನಾಡಿನ ಮೂಲನಿವಾಸಿಗಳ ಜೀವನ ನರಕಸದೃಶ್ಯವಾಯಿತು.
7. ಯುದ್ಧಗಳ ಮೂಲಕ ವಸಾಹತುಗಳನ್ನು ಗೆಲ್ಲಬೇಕಾದ ಕಾರಣ ಅನೇಕ ಮಿಲಿಟರಿ ಆವಿಷ್ಕಾರಗಳು ಸಾಧ್ಯವಾದವು.
8. ಅನೇಕ ತರಹದ ನೂತನ ಕಾಯಿಲೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವೇಗವಾಗಿ ಹರಡತೊಡಗಿದವು.
ಹೀಗೆ ವಸಾಹತುವಾದದಿಂದ ಶಕ್ತಿಶಾಲಿ ದೇಶಗಳು ಇನ್ನಷ್ಟು ಬಲಶಾಲಿಗಳಾಗಿಯೂ ಸಂಪದ್ಭರಿತ ದೇಶಗಳಾಗಿಯೂ ರೂಪುಗೊಂಡವು; ಗುಲಾಮೀ ದೇಶಗಳು ಸರ್ವನಾಶದತ್ತ ದಾಪುಗಾಲಿಟ್ಟವು.
4. ಸಾಮ್ರಾಜ್ಯಶಾಹಿವಾದ/ಸಾಮ್ರಾಜ್ಯವಾದ
ಚರಿತ್ರೆಯ ಪುಟಗಳ ಪ್ರಕಾರ ಮೂರನೇ ಶತಮಾನದ ಮಧ್ಯಭಾಗದಲ್ಲಿ ಸಾಮ್ರಾಜ್ಯವಾದದ ಉದಯವಾಗಿ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ವಿವಿಧ ವಸಾಹತು ದೇಶಗಳು ರಾಜಕೀಯ ಸ್ವಾತಂತ್ರ್ಯ ಗಳಿಸುವುದರೊಂದಿಗೆ ಅಂತ್ಯವಾಯಿತು. ಈ ಕಾಲಾವಧಿಯಲ್ಲಿ ಸಾಮ್ರಾಜ್ಯವಾದ ಪ್ರಪಂಚದಾದ್ಯಂತ ಸಹಜವೂ ಸಾಮಾನ್ಯವೂ ಆಗಿದ್ದಿತು.
ಸಾಮ್ರಾಜ್ಯವಾದ ಎಂದರೆ ಒಂದು ದೇಶದ ಆಧಿಪತ್ಯ ಅಥವಾ ಪ್ರಭುತ್ವವನ್ನು ಮತ್ತು ಅದರ ಪ್ರಭಾವವನ್ನು ಹೊಸದಾದ ‘ವಸಾಹತು’ಗಳನ್ನು ನಿರ್ಮಾಣಮಾಡುವುದರ ಮೂಲಕ ಅಥವಾ ಸೈನಿಕಶಕ್ತಿಯ ಉಪಯೋಗದ ಮೂಲಕ ವಿಸ್ತರಣೆಮಾಡುವ ರಾಜಕೀಯ ನೀತಿ. ಸೈದ್ಧಾಂತಿಕ ಹಾಗೂ ಆರ್ಥಿಕ ಲಾಭದ ಆಸೆ ಈ ನೀತಿಯ ಉಗಮಕ್ಕೆ ಆಧಾರವಾಗಿದೆ. ಬಂಡವಾಳಶಾಹಿ ತತ್ತ್ವದ ಏಕಸ್ವಾಮ್ಯದ ಹಂತವೇ ಸಾಮ್ರಾಜ್ಯವಾದ ಎಂದು ಅನೇಕರು ಕರೆದಿದ್ದಾರೆ.
ಸಾಮ್ರಾಜ್ಯವಾದದ ಪ್ರಮುಖ ಅಂಶಗಳು ಹೀಗಿವೆ:
1. ಆಳ್ವಿಕೆ ಮಾಡುವ ದೇಶ ಒತ್ತಾಯಪೂರ್ವಕ ಹಾಗೂ ಬಲಪ್ರಯೋಗದ ಮೂಲಕ ನೂತನ ವಸಾಹತುಗಳನ್ನು ಸಾಗರೋತ್ತರ ಪ್ರದೇಶಗಳಲ್ಲಿ ನಿರ್ಮಿಸುತ್ತದೆ. ಆರ್ಥಿಕ ಮತ್ತು ಆರ್ಥಿಕೇತರ ಮಾರ್ಗಗಳ ಮೂಲಕ ತಮ್ಮ ಆಧಿಪತ್ಯವನ್ನು ಅವುಗಳ ಮೇಲೆ ಸಾಧಿಸಿ ಎಲ್ಲ ರೀತಿಯ ಶೋಷಣೆಯನ್ನೂ ನಡೆಸುತ್ತದೆ.
2. ಆಳ್ವಿಕೆ ಮಾಡುವ ದೇಶ ಗುಲಾಮೀದೇಶಕ್ಕೆ ಸಾಲ ಮತ್ತು ಹೂಡಿಕೆಗಳ ಮೂಲಕ ಬಂಡವಾಳವನ್ನು ರಫ್ತು ಮಾಡುತ್ತದೆ. ಜೊತೆಗೆ ಸರಕುಗಳ ವ್ಯಾಪಾರದ ಪ್ರಮಾಣವನ್ನೂ ಹೆಚ್ಚುಮಾಡುತ್ತದೆ.
3. ಇದರಿಂದ ಏಕಸ್ವಾಮ್ಯ ಬಂಡವಾಳ ಹೂಡಿಕೆಯ ಪ್ರತಿಸ್ಪರ್ಧಿ ದೇಶಗಳ ನಡುವೆ ಈಷ್ರ್ಯೆ, ಕಿತ್ತಾಟ ಹಾಗೂ ಕದನಗಳು ಏರ್ಪಟ್ಟು ಭೂಸ್ವತ್ತಿನ ಮತ್ತು ಜಾಗತಿಕ ಮಾರುಕಟ್ಟೆಯ ಪುನರ್ವಿಭಜನೆ ನಡೆಯುತ್ತದೆ.
4. ಇದರಿಂದ ಸಾಮ್ರಾಜ್ಯವಾದಿ ಬಂಡವಾಳಶಾಹಿ ರಾಷ್ಟ್ರಗಳ ನಡುವಿನ ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳಲ್ಲಿ ಏರುಪೇರುಗಳಾಗುತ್ತವೆ. ಜೊತೆಗೆ ಬಂಡವಾಳಶಾಹಿ ರಾಷ್ಟ್ರಗಳ ಹಾಗೂ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅಸಂತುಲಿತ ಬೆಳವಣಿಗೆಗೆ ಕಾರಣವಾಗುತ್ತದೆ.
5. ಬಂಡವಾಳಶಾಹಿ ರಾಷ್ಟ್ರಗಳು ಸೈನಿಕಶಕ್ತಿಯ ವೃದ್ಧಿಗೆ ಹೆಚ್ಚಿನ ಪ್ರಾಮುಖ್ಯ ನೀಡುವ ಕಾರಣ ದೇಶದಲ್ಲಿ ಯುದ್ಧಸಾಮಗ್ರಿಗಳ ಉತ್ಪಾದನೆ ಹೆಚ್ಚಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳ ಮಾರಾಟವೂ ಹೆಚ್ಚುತ್ತದೆ. ಯುದ್ಧಸಾಮಗ್ರಿಗಳು ಇತರ ಆವಶ್ಯಕ ವಸ್ತುಗಳಿಗಿಂತ ಹೆಚ್ಚಿನ ಲಾಭತರುವ ಕಾರಣ ಅವುಗಳ ಉತ್ಪಾದನೆ ಹೆಚ್ಚುತ್ತದೆ.
– ಹೀಗೆ ಸಾಮ್ರಾಜ್ಯವಾದದ ಉದಯ ಹಾಗೂ ವಿಸ್ತರಣೆಯು ಏಕಸ್ವಾಮ್ಯ ಬಂಡವಾಳಶಾಹಿಯ ನಿರ್ಮಿತಿ, ಬಂಡವಾಳದ ರಫ್ತು, ಜಾಗತಿಕ ಪ್ರದೇಶಗಳ ಮತ್ತು ಮಾರುಕಟ್ಟೆಗಳ ವಿಭಜನೆ, ಅವಸಾನದ ಹಂತದ ಮತ್ತು ಪರಾಶ್ರಿತ ಬಂಡವಾಳಶಾಹಿತ್ವ, ಅಸಮಾನ ಮತ್ತು ಅಸಂತುಲಿತ ಆರ್ಥಿಕ ಬೆಳವಣಿಗೆ, ರೈಲ್ವೇ ಅಭಿವೃದ್ಧಿ, ಯುದ್ಧಸನ್ನದ್ಧತೆ ಮತ್ತು ನವ-ವಸಾಹತುಶಾಹಿತ್ವ – ಇತ್ಯಾದಿಗಳಿಗೆ ಜನ್ಮನೀಡಿ ಜಗತ್ತಿನ ಎರಡು ಮಹಾಯುದ್ಧಗಳಿಗೆ ಕಾರಣವಾಯಿತು.
ಮೇಲೆ ತಿಳಿಸಿದ ಈ ನಾಲ್ಕು ವಿಶಿಷ್ಟ ವಾದಗಳು ಕೇವಲ ಕೆಲವು ಆರ್ಥಿಕ ಅಂಶಗಳ ಕಡೆಗಷ್ಟೆ ತಮ್ಮ ಗಮನ ನೀಡುತ್ತವೆ. ಈ ಅಂಶಗಳಾದರೂ ಇಡೀ ದೇಶದ ಸಮಸ್ತ ಪ್ರಜೆಗಳ ಸರ್ವತೋಮುಖ ಹಿತಸಾಧನೆ ಬಯಸದೆ ಕೇವಲ ವೈಯಕ್ತಿಕ ಸ್ವಾರ್ಥ, ಕೆಲವು ವ್ಯಕ್ತಿಗಳ ಗುಂಪುಗಳ ಹಿತವನ್ನು ಸಾಧಿಸಲು ಹೆಚ್ಚು ಗಮನ ನೀಡುತ್ತವೆ. ಹೀಗಾಗಿ ಅವು ಸಮಗ್ರ, ಸಂಪೂರ್ಣ ಆರ್ಥಿಕವ್ಯವಸ್ಥೆಗಳಾಗಿ ಹೊರಹೊಮ್ಮಲಿಲ್ಲ. ಗಾಂಧಿಯವರು ತಿಳಿಸಿದ ಯಾವುದೇ ಅಂಶಗಳೂ ಈ ವಾದಗಳಲ್ಲಿ ನಮಗೆ ಕಾಣಿಸುವುದಿಲ್ಲ. ಆದ್ದರಿಂದ ಗಾಂಧಿಯವರ ಸರ್ವೋದಯ ಮಾದರಿಯೊಂದಿಗೆ ಇವು ಯಾವರೀತಿಯಲ್ಲೂ ತಾಳೆಯಾಗುವುದಿಲ್ಲ.
ಬಂಡವಾಳಶಾಹಿ, ಸಮತಾವಾದ ಹಾಗೂ ಸರ್ವೋದಯಗಳ ತುಲನಾತ್ಮಕ ಅವಲೋಕನ ಸರ್ವೋದಯ ಆರ್ಥಿಕಮಾದರಿ ಹೇಗೆ ಬಂಡವಾಳಶಾಹಿ ಹಾಗೂ ಸಮತಾವಾದಿ ಆರ್ಥಿಕ ಪದ್ಧತಿಗಳಿಗಿಂತ ವಿಭಿನ್ನವಾದುದು, ಲಾಭಕಾರಿಯೂ ಪ್ರಯೋಜನಕಾರಿಯೂ ಆದದ್ದು ಎಂಬುದರ ವಿಶ್ಲೇಷಣೆಯ ಅಗತ್ಯವಿದೆ. ಈ ಮೂರೂ ಆರ್ಥಿಕ ವ್ಯವಸ್ಥೆಗಳ ತುಲನಾತ್ಮಕ ಅಧ್ಯಯನದಿಂದ ಸರ್ವೋದಯ ಮಾದರಿಯು ಯಾವೆಲ್ಲ ರೀತಿಯಲ್ಲಿ ಉಳಿದ ಎರಡು ವ್ಯವಸ್ಥೆಗಳಿಗಿಂತಲೂ ಹೆಚ್ಚು ಪ್ರಸ್ತುತ ಎನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದು. ಆದ್ದರಿಂದ ಈ ಮೂರೂ ವ್ಯವಸ್ಥೆಗಳ ಒಳನೋಟದ ಪರಿಚಯ ಮಾಡಿಕೊಳ್ಳೋಣ.
1. ಬಂಡವಾಳಶಾಹಿ ಆರ್ಥಿಕವ್ಯವಸ್ಥೆ
ಬಂಡವಾಳಶಾಹಿ ಆರ್ಥಿಕವ್ಯವಸ್ಥೆ 18ನೇ ಶತಮಾನದ ಉತ್ತರಾರ್ಧದಲ್ಲಿ ನಂತರ ಹೆಚ್ಚು ಚಲಾವಣೆಗೆ ಬಂದಿತು. ಈ ಆರ್ಥಿಕವ್ಯವಸ್ಥೆ 3 ಹಂತಗಳಲ್ಲಿ ಬೆಳವಣಿಗೆ ಹೊಂದಿದೆ. ಮೊದಲನೆಯ ಹಂತದಲ್ಲಿ (1815ರಿಂದ 1914ರವರೆಗೆ) ಸರ್ಕಾರ ಮಧ್ಯಪ್ರವೇಶ ಮಾಡದ (Laissez-faire Capitalism) ಬಂಡವಾಳಶಾಹಿ ಪದ್ಧತಿಯಾಗಿಯೂ; ಎರಡನೆಯ ಹಂತದಲ್ಲಿ ನಿರ್ವಹಣಾ ಅಥವಾ ನಿಯಂತ್ರಿತ ಬಂಡವಾಳ ಪದ್ಧತಿಯಾಗಿ (Managed or Regulated Capitalism)ಯೂ; (ಮೊದಲ ಮಹಾಯುದ್ಧ 1914-18 ಮತ್ತು ಮಹಾ ಆರ್ಥಿಕ ಮುಗ್ಗಟ್ಟು (Great Depression) 1929-36ರ ಅವಧಿಯಲ್ಲಿ); ಮೂರನೆಯ ಹಂತದಲ್ಲಿ (1936ರ ನಂತರದ ಅವಧಿಯಲ್ಲಿ) ಕಲ್ಯಾಣಕಾರಿ ಅಥವಾ ಆಧುನಿಕ ಬಂಡವಾಳಶಾಹಿ ಪದ್ಧತಿಯಾಗಿ (Welfare or Modern Capitalism)ಯೂ ಚಲಾವಣೆಗೆ ಬಂದಿತು.
ತಾತ್ತ್ವಿಕವಾಗಿ ಪರಿಶುದ್ಧ ಬಂಡವಾಳಶಾಹಿ ಪದ್ಧತಿಯ ಚಿತ್ರಣವನ್ನು ಕೊಡಬಹುದಾದರೂ ವಾಸ್ತವವಾಗಿ ಆ ಶುದ್ಧ ಪದ್ಧತಿ ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ಸಮಯದಲ್ಲಿ ಅಸ್ತಿತ್ವದಲ್ಲಿರಲಿಲ್ಲ, ಎಂಬುದನ್ನು ಗಮನಿಸಬೇಕು. ಸೂಕ್ಷ್ಮವಾಗಿ ಗಮನಿಸಿದರೆ ಈ ಆರ್ಥಿಕವ್ಯವಸ್ಥೆ ಪರಿವರ್ತನೆಗೊಳ್ಳುವ ಎಲ್ಲ ಲಕ್ಷಣಗಳನ್ನೂ ಒಳಗೊಂಡಿದೆ. 1815ರಿಂದ ಈಚೆಗೆ ಅನೇಕ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಇನ್ನಿತರ ಬದಲಾವಣೆಗಳು ಆದುದರ ಪರಿಣಾಮವಾಗಿ ಹಳೆಯ ಚಿಂತನೆ, ವ್ಯವಸ್ಥೆಗಳು ನಶಿಸಿ, ಹೊಸವಿಚಾರ-ಪದ್ಧತಿಗಳ ಪುನರ್ ನಿರ್ಮಿತಿಯಿಂದ ಬಂಡವಾಳಶಾಹಿ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಆದಕಾರಣ ಆ್ಯಡಂ ಸ್ಮಿತ್ ಕಾಲದಲ್ಲಿದ್ದ ಬಂಡವಾಳಶಾಹಿ ಪದ್ಧತಿ ಇಂದು ಉಳಿದಿಲ್ಲವಾದರೂ. ಕಾಲಕಾಲಕ್ಕೆ ಸೂಕ್ತ ಬದಲಾವಣೆಗಳು ಆಗಿದ್ದರೂ ಅದರ ಹೃದಯಭಾಗದಲ್ಲಿರುವ ಮೂಲಭೂತ ತತ್ತ್ವ-ವಿಚಾರಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲದಿರುವುದು ಈ ಪದ್ಧತಿಯ ವಿಶೇಷಗುಣ ಎಂದು ಹೇಳಬೇಕಾಗುತ್ತದೆ.
ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಅರ್ಥವಿವರಣೆ
ಬಂಡವಾಳಶಾಹಿ ಆರ್ಥಿಕ ಪದ್ಧತಿಯಲ್ಲಿ ಎಲ್ಲ ಉತ್ಪಾದನಾಂಗಗಳಾದ ಭೂಮಿ, ಶ್ರಮ, ಬಂಡವಾಳ ಹಾಗೂ ಸಂಘಟನೆಗಳ ಒಡೆತನ, ಉಪಯೋಗ, ಅವುಗಳ ನಿರ್ವಹಣೆ ಎಲ್ಲವೂ ಖಾಸಗಿ ವ್ಯಕ್ತಿಗಳಿಗೆ ಮತ್ತು ಸಂಘಸಂಸ್ಥೆಗಳಿಗೆ ಸೇರಿರುತ್ತದೆ. ಉತ್ಪಾದನೆಯಾಗುವ ಎಲ್ಲ ರೀತಿಯ ಸರಕು ಸೇವೆಗಳ ಉದ್ದೇಶ ಲಾಭ ಮಾಡುವುದೇ ಆಗಿರುತ್ತದೆ. ಉತ್ಪಾದನಾಂಗಗಳು ಖಾಸಗಿ ವ್ಯಕ್ತಿಗಳ ಮತ್ತು ಸಂಸ್ಥೆಗಳ ಸ್ವತ್ತು ಆಗಿರುವ ಕಾರಣ ಅವುಗಳ ಮಾಲೀಕರು ತಮಗೆ ಇಷ್ಟ ಬಂದಂತಹ ರೀತಿಯಲ್ಲಿ ಈ ಉತ್ಪಾದನಾಂಗಗಳ ಉಪಯೋಗ ಮಾಡಿ ಗರಿಷ್ಟಮಟ್ಟದ ಲಾಭ ಸಂಪಾದಿಸಬಹುದು. ಸರ್ಕಾರದ ಮಧ್ಯಪ್ರವೇಶ ಅತ್ಯಂತ ಸೀಮಿತವಾಗಿದ್ದು ಖಾಸಗಿ ವ್ಯಕ್ತಿಗಳು ಮೂಲಭೂತ ಆರ್ಥಿಕ ನಿರ್ಧಾರಗಳಾದ ಏನನ್ನು, ಎಲ್ಲಿ, ಯಾವಾಗ ಉತ್ಪಾದಿಸಬೇಕು; ಹೇಗೆ, ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಬೇಕು?; ಯಾವ ರೀತಿ ಅವುಗಳ ವಿತರಣೆ ಆಗಬೇಕು?; ಬಂಡವಾಳವನ್ನು ಹೇಗೆಲ್ಲ ಹೂಡಿ ಆರ್ಥಿಕ ಅಭಿವೃದ್ಧಿ ಮಾಡಿ ಜನಕಲ್ಯಾಣ ಮಾಡಬೇಕು ಎಂಬುದನ್ನು ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಸರಕು ಮತ್ತು ಸೇವೆಗಳ ಬೆಲೆಯನ್ನು ಕೊಳ್ಳುವವರಾಗಲಿ, ಮಾರಾಟಗಾರರಾಗಲಿ, ಸಂಸ್ಥೆಯಾಗಲಿ, ಕೈಗಾರಿಕೆ ಅಥವಾ ಸರ್ಕಾರವಾಗಲಿ ನಿರ್ಧರಿಸುವುದಿಲ್ಲ. ಮಾರುಕಟ್ಟೆಯ ಶಕ್ತಿ ಅಂದರೆ ಬೇಡಿಕೆ ಮತ್ತು ಪೂರೈಕೆಗಳು ವಸ್ತುಗಳ ಹಾಗೂ ಸೇವೆಗಳ ಬೆಲೆಯನ್ನು ನಿರ್ಧರಿಸುತ್ತವೆ. ಈ ವಿಶಿಷ್ಟ ಲಕ್ಷಣದ ಬಂಡವಾಳಶಾಹಿ ಪದ್ಧತಿಯು ಪರಿಪೂರ್ಣವಾಗಿರುವ ಮಾರುಕಟ್ಟೆಯಲ್ಲಿ ಮಾತ್ರ ನಮಗೆ ಅನುಭವಕ್ಕೆ ಬರುತ್ತದೆ. ಬಂಡವಾಳಶಾಹಿ ಪದ್ಧತಿಯನ್ನು ‘ಮುಕ್ತ ಉದ್ಯಮ ವ್ಯವಸ್ಥೆ’, ‘ಮುಕ್ತ ಮಾರುಕಟ್ಟೆ ವ್ಯವಸ್ಥೆ’, ‘ಮಾರುಕಟ್ಟೆ ಅಭಿಮುಖ ವ್ಯವಸ್ಥೆ’, ‘ಸರ್ಕಾರ ಮಧ್ಯಪ್ರವೇಶ ಮಾಡದ ವ್ಯವಸ್ಥೆ’ ಎಂದೂ ಕರೆಯುತ್ತಾರೆ.
ಗುಣಲಕ್ಷಣಗಳು
ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಗೆ ಖಾಸಗಿಯಾಗಿ ಆಸ್ತಿ, ಸಂಪತ್ತನ್ನು ಗಳಿಸುವ ಹಾಗೂ ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಹಕ್ಕುಗಳಿರುತ್ತವೆ. ಹಾಗೆಯೇ ಸಂಪತ್ತನ್ನು ಸಂಪಾದಿಸುವ, ಕೂಡಿಡುವ ಮತ್ತು ಅದನ್ನು ಯಾವ ಪ್ರಮಾಣದಲ್ಲಾದರೂ ವೃದ್ಧಿಮಾಡುವ ಹಕ್ಕು ಅವನಿಗಿದೆ. ತನ್ನ ಸಂಪತ್ತನ್ನು ತನಗೆ ಇಷ್ಟಬಂದ ರೀತಿಯಲ್ಲಿ ಉಪಯೋಗಿಸುವ ಪೂರ್ಣ ಸ್ವಾತಂತ್ರ್ಯ ಅವನಿಗಿದೆ. ಇಲ್ಲಿ ಪ್ರತಿ ವ್ಯಕ್ತಿಗೆ ಎಲ್ಲ ರೀತಿಯ ಆರ್ಥಿಕಸ್ವಾತಂತ್ರ್ಯ – ಆಯ್ಕೆಯ ಸ್ವಾತಂತ್ರ್ಯ, ಉದ್ದಿಮೆಯ ಸ್ವಾತಂತ್ರ್ಯ, ಒಪ್ಪಂದದ ಸ್ವಾತಂತ್ರ್ಯ ಹಾಗೂ ವೃತ್ತಿಸ್ವಾತಂತ್ರ್ಯವಿದೆ. ಅನುಭೋಗಿ ತನ್ನ ಹಣವನ್ನು ತನಗೆ ತೋರಿದಂತೆ ಖರ್ಚುಮಾಡಿ, ತನಗೆ ಇಷ್ಟಬಂದ ಸರಕು ಸೇವೆಗಳನ್ನು ಕೊಂಡು, ಅವುಗಳನ್ನು ಅನುಭೋಗಿಸಿ ತೃಪ್ತಿಪಡೆಯುವ ಅವಕಾಶವಿದೆ. ಆದಕಾರಣ ಅನುಭೋಗಿಯನ್ನು ‘ಸಾರ್ವಭೌಮ’, ‘ಮಹಾಪ್ರಭು’ ಎಂದೂ, ಉತ್ಪಾದಕನನ್ನು ಅವನ ‘ಸೇವಕ’ ಅಥವಾ ‘ಗುಲಾಮ’ ಎಂದೂ ಪರಿಗಣಿಸಲಾಗಿದೆ. ಲಾಭಗಳಿಕೆಯೇ ಎಲ್ಲ ಆರ್ಥಿಕ ಚಟುವಟಿಕೆಗಳ ಚಾಲಕ ಹಾಗೂ ಪ್ರೇರಕಶಕ್ತಿ. ಇಲ್ಲಿ ಲಾಭವಿಲ್ಲದ ಯಾವ ಆರ್ಥಿಕ ಚಟುವಟಿಕೆಗಳನ್ನೂ ಕಲ್ಪನೆಮಾಡಲು ಸಾಧ್ಯವಿಲ್ಲ.
ಈ ಆರ್ಥಿಕ ವ್ಯವಸ್ಥೆಯಲ್ಲಿ ಪರಿಪೂರ್ಣ ಪೈಪೋಟಿ ಮಾರುಕಟ್ಟೆ ಇದೆ. ಸಂಪೂರ್ಣ ಸ್ಪರ್ಧೆ ವಸ್ತುಗಳ ಹಾಗೂ ಉತ್ಪಾದನಾಂಗಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಪಾದಕಶಕ್ತಿಯನ್ನೂ ಕರ್ತೃತ್ವಶಕ್ತಿಯನ್ನೂ ಹೆಚ್ಚಿಸಲು ಸಹಕಾರಿಯಾಗುತ್ತದೆ. ‘ಕೈಗಾರಿಕಾ ನಾಯಕರು’ ಇಡೀ ಉತ್ಪಾದನಾವ್ಯವಸ್ಥೆಗೆ ಮಾರ್ಗದರ್ಶನ ಮಾಡಿ, ಅದಕ್ಕೆ ನಿರ್ದಿಷ್ಟ ದಿಕ್ಕುದಿಸೆಯನ್ನು ನೀಡುವಲ್ಲಿ ಸಫಲರಾಗುತ್ತಾರೆ. ಬೇಡಿಕೆ ಮತ್ತು ಪೂರೈಕೆ ಶಕ್ತಿಗಳನ್ನು ಆಧರಿಸಿದ ‘ಬೆಲೆಯಂತ್ರವು’ ಲಕ್ಷಾಂತರ ಮಂದಿ ಅನುಭೋಗಿಗಳನ್ನು ಹಾಗೂ ಉತ್ಪಾದಕರನ್ನು ಒಳಗೊಂಡಂತಹ ಅನಿರ್ಬಂಧಿತ ಮುಕ್ತಮಾರುಕಟ್ಟೆಯಲ್ಲಿ ಹೇಗೆ, ಯಾವ ರೀತಿಯಲ್ಲಿ ಮಿತ ಸಂಪನ್ಮೂಲಗಳು ಲಕ್ಷಾಂತರ ಸರಕು ಹಾಗೂ ಸೇವೆಗಳನ್ನು ಉತ್ಪಾದಿಸಲು ಹಂಚಲ್ಪಡುತ್ತದೆ ಎಂದು ನಮಗೆ ತಿಳಿಸುತ್ತದೆ.
ಈ ವ್ಯವಸ್ಥೆಯಲ್ಲಿ ಇಡೀ ದೇಶಕ್ಕೆ ಕೇಂದ್ರೀಕೃತವಾದ ಆರ್ಥಿಕ ಯೋಜನೆಗಳು ಇರುವುದಿಲ್ಲ. ಬದಲಿಗೆ ಲಕ್ಷಾಂತರ ಮಂದಿ ಉದ್ದಿಮೆದಾರರು ತಮ್ಮದೇ ಆದ ಸ್ವಂತ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವರು. ಆ್ಯಡಂ ಸ್ಮಿತ್ ಹೇಳಿದ ‘ಕಣ್ಣಿಗೆ ಕಾಣದ ಕೈ’ (Invisible hand) ಇಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು. ಆದಕಾರಣ ಸರ್ಕಾರದ ಯಾವುದೇ ರೀತಿಯ ನೇರವಾದ ನಿಯಂತ್ರಣಗಳಿಲ್ಲದೆ ಸ್ವಯಂಚಾಲಿತವಾಗಿ ನಡೆಯುವ ಆರ್ಥಿಕವ್ಯವಸ್ಥೆಯನ್ನು ನಾವು ಇಲ್ಲಿ ಕಾಣಬಹುದು. ಸರ್ಕಾರವು ಹಣಕಾಸಿನ ನೀತಿ, ಖಜಾನೆ ನೀತಿ ಇತ್ಯಾದಿ ಪರೋಕ್ಷ ನೀತಿಗಳ ಮೂಲಕ ಆರ್ಥಿಕ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ. ಬಂಡವಾಳಶಾಹಿ ಪದ್ಧತಿ ಒಂದು ಗಡುಸಾದ ಪದ್ಧತಿಯಲ್ಲ. ಅದು ತನ್ನ ಪ್ರಗತಿಗಾಗಿ ಎಲ್ಲ ರೀತಿಯ ಬದಲಾವಣೆಗಳನ್ನೂ ಸ್ವೀಕರಿಸಿ ತನ್ನದನ್ನಾಗಿ ಮಾಡಿಕೊಳ್ಳುವ ಸತ್ತ್ವವನ್ನು ಪಡೆದಿದೆ. ಈ ಕಾರಣದಿಂದಾಗಿಯೇ ಅದು ಅನೇಕ ದಶಕಗಳಿಂದ ಒಂದು ಜನಪ್ರಿಯ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
ಬಂಡವಾಳಶಾಹಿ ಪದ್ಧತಿಯ ಇನ್ನೊಂದು ಮುಖದ ಪರಿಚಯವನ್ನೂ ಮಾಡಿಕೊಳ್ಳುವುದು ಅವಶ್ಯಕ. ಈ ಪದ್ಧತಿಯಲ್ಲಿ ಖಾಸಗಿ ಏಕಸ್ವಾಮಿತ್ವದ ಭಾರೀ, ಬೃಹತ್ ಕಂಪೆನಿಗಳು ರೂಪುಗೊಳ್ಳುತ್ತವೆ; ದೊಡ್ಡ ಪ್ರಮಾಣದ ಟ್ರಸ್ಟ್ಗಳು, ಒಪ್ಪಂದ ಸಂಸ್ಥೆಗಳು, ಬೃಹತ್ ವ್ಯಾಪಾರ ಸಂಸ್ಥೆಗಳ ನಿರ್ಮಾಣವಾಗುತ್ತದೆ. ಮಾರುಕಟ್ಟೆಯಲ್ಲಿಯ ಪೈಪೋಟಿಯನ್ನು ತಪ್ಪಿಸಿ, ಹೆಚ್ಚು ಹೆಚ್ಚು ಲಾಭಗಳಿಸುವುದು ಈ ಉಪಕ್ರಮದ ಮೂಲ ಉದ್ದೇಶ. ಇದರಿಂದಾಗಿ ಲಕ್ಷಾಂತರ ಸಣ್ಣ ಸಣ್ಣ ವ್ಯಾಪಾರಿಗಳು, ಸಣ್ಣ ಗೃಹಕೈಗಾರಿಕೆಗಳು ನಾಶವಾಗಿ ಗ್ರಾಹಕರ, ಕಾರ್ಮಿಕರ ಮತ್ತು ಕಚ್ಚಾಸಾಮಗ್ರಿಗಳ ಪೂರೈಕೆದಾರರ ಶೋಷಣೆಗೆ ರಹದಾರಿಯಾಗುತ್ತದೆ. ಇಲ್ಲಿ ಅವಕಾಶವಾದಿಗಳಿಗೆ, ಶಕ್ತಿವಂತರಿಗೆ, ಬುದ್ಧಿವಂತರಿಗೆ, ಕೌಶಲ ಉಳ್ಳವರಿಗೆ ಹಾಗೂ ಶ್ರೀಮಂತರಿಗೆ ಹೆಚ್ಚಿನ ಸಂಪತ್ತನ್ನು ಗಳಿಸಲು ವಿಪುಲ ಅವಕಾಶಗಳು ದೊರೆತು, ದೇಶದ ಸಂಪತ್ತು ಕೇವಲ ಕೆಲವರ ಕೈಯಲ್ಲಿ ಶೇಖರವಾಗುತ್ತದೆ. ಬೆರಳೆಣಿಕೆಯಷ್ಟು ಜನ ಶ್ರೀಮಂತರು ಬಡವರನ್ನು, ಅವಕಾಶಹೀನರನ್ನು, ಕೌಶಲವಿಲ್ಲದ ಜನಸಾಮಾನ್ಯರನ್ನು ಶೋಷಿಸುವರಲ್ಲದೆ, ಸರ್ಕಾರವನ್ನೂ ತಮ್ಮ ಕೈಯಲ್ಲಿ ಇರಿಸಿಕೊಂಡು, ಭೋಗ ವೈಭವದ ತುತ್ತತುದಿಯಲ್ಲಿ ಅಟ್ಟಹಾಸದ ಜೀವನ ನಡೆಸಿದರೆ ಕೋಟಿಗಟ್ಟಲೆ ಜನರು ಅರೆಹೊಟ್ಟೆ, ಅರೆಬಟ್ಟೆಗಳಿಂದ ಅನಾರೋಗ್ಯಕರ-ಅಸಹನೀಯ ಜೀವನ ನಡೆಸಬೇಕಾಗುತ್ತದೆ. ಹಸಿವಿನಿಂದ ಬಳಲುವವರ ಮಧ್ಯೆ ಅಜೀರ್ಣದಿಂದ ನರಳುವವರೂ ಕಂಡುಬರುತ್ತಾರೆ. ಎಷ್ಟು ದುಡಿದರೂ ಜೀವನಾವಶ್ಯಕ ಆದಾಯ ಗಳಿಸಲು ಸಾಧ್ಯವಾಗದೆ ಅದೇ ಚಿಂತೆಯಲ್ಲಿ ಹೆಣಗಾಡುವ ಜನರ ನಡುವೆಯೇ ಏನನ್ನೂ ದುಡಿಯದೆ, ಶ್ರಮವಹಿಸದೆ ಅಪಾರ ಸಂಪತ್ತು ಗಳಿಸಿ, ಎಷ್ಟು ಖರ್ಚುಮಾಡಿದರೂ ಕರಗದಷ್ಟು ಕೂಡಿಡುವವರನ್ನೂ ಕಾಣುತ್ತೇವೆ. ಶ್ರೀಮಂತರು ಬಡವರ ಹೊಟ್ಟೆಯ ಮೇಲೆ ಹೊಡೆದು ಶ್ರೀಮಂತಿಕೆಯ ಸವಿಯನ್ನು ಯಾವುದೇ ಸಂಕೋಚವಿಲ್ಲದೆ ಸವಿಯುವರು; ಅದರಲ್ಲೇ ತಮ್ಮ ಸಂತೋಷ ಕಾಣುವರು. ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತಿನ ಕೇಂದ್ರೀಕರಣ ಆಗುವ ಕಾರಣ ಶ್ರೀಮಂತರು ಇನ್ನೂ ಶ್ರೀಮಂತರಾಗಿ ಬಡವರು ಇನ್ನೂ ಬಡವರಾಗುತ್ತಾರೆ. ಸಂಪತ್ತಿನ ಸಮಾನ ವಿತರಣೆ ಸಾಧ್ಯವಾಗದೆ ಆರ್ಥಿಕ ಅಸಮಾನತೆಗೆ ಇದು ದಾರಿಮಾಡಿಕೊಡುತ್ತದೆ. ಹೀಗಾಗಿ ‘ಸಮೃದ್ಧಿಯ ನಡುವೆ ಬಡತನ’ದ ವಿರೋಧಾಭಾಸ ಎದ್ದು ತೋರುತ್ತದೆ. ವಿಪುಲತೆಯಲ್ಲಿ ಕೊರತೆ ಕಾಣುತ್ತದೆ. ಸಮಾಜದಲ್ಲಿ ಕೆಲವೇ ಜನರು ಅತ್ಯಧಿಕ ಶ್ರೀಮಂತರೂ, ಬಹುಪಾಲು ಜನರು ಕಡುಬಡವರೂ ಆಗಿರುತ್ತಾರೆ.
ಸಮಾಜವು ‘ಇದ್ದವರು’ ಮತ್ತು ‘ಇಲ್ಲದವರು’ ಎಂದು ಎರಡು ಭಾಗವಾಗಿ ಒಡೆದುಹೋಗುತ್ತದೆ. ಬಡವರ, ಅಶಕ್ತರ ಶೋಷಣೆ ಅವ್ಯಾಹತವಾಗಿ ನಡೆಯುವ ಕಾರಣ ಈ ಎರಡು ಗುಂಪುಗಳ ನಡುವೆ ಸಮರಸತೆಯ ಕೊರತೆಯುಂಟಾಗಿ ‘ವರ್ಗಕಲಹ’ ಆರಂಭವಾಗುತ್ತದೆ. ಸರ್ಕಾರವೂ ಶ್ರೀಮಂತರ ಪರವಾಗಿ ನಿಲ್ಲುವ ಕಾರಣ ಬಡವರ ಸುಲಿಗೆ ಮತ್ತು ಶೋಷಣೆಗೆ ಮಿತಿ ಇರುವುದಿಲ್ಲ. ಇವರ ನಡುವೆ ಯಾವಾಗಲೂ ಘರ್ಷಣೆ-ತಿಕ್ಕಾಟಗಳು ಸಂಭವಿಸುತ್ತಲೇ ಇರುತ್ತವೆ. ಈ ವರ್ಗಸಂಘರ್ಷ ಕೊನೆಯಲ್ಲಿ ‘ರಕ್ತಕ್ರಾಂತಿ’ಯಲ್ಲಿ ಪರ್ಯವಸಾನಗೊಳ್ಳುವ ಸಂಭವವನ್ನೂ ತಳ್ಳಿಹಾಕಲು ಸಾಧ್ಯವಿಲ್ಲ.
ಈ ಅರ್ಥವ್ಯವಸ್ಥೆಯಲ್ಲಿ ಶಕ್ತಿವಂತ, ಪ್ರಭಾವಶಾಲಿ ಹಾಗೂ ಶ್ರೀಮಂತ ಉದ್ದಿಮೆದಾರರು, ಜಮೀನ್ದಾರರು ಶ್ರಮಿಕರನ್ನು ಎಲ್ಲ ರೀತಿಯಿಂದಲೂ ಶೋಷಣೆ ಮಾಡುತ್ತಾರೆ. ಅವರಿಗೆ ಕೊಡುವ ಕೂಲಿ, ಅವರು ಉತ್ಪಾದನೆ ಮಾಡುವ ಮೌಲ್ಯಕ್ಕಿಂತ, ಅತೀ ಕಡಮೆ ಮಟ್ಟದ್ದಾಗಿರುತ್ತದೆ. ಕಾರ್ಮಿಕರು ಉತ್ಪಾದಿಸಿದ ‘ಒಟ್ಟು ಉತ್ಪಾದನಾ ಮೌಲ್ಯ’ದಲ್ಲಿ ಅವರಿಗೆ ಕೊಡುವ ‘ವಾಸ್ತವ ಕೂಲಿ’ಯನ್ನು ಕಳೆದರೆ ಉಳಿಯುವುದೇ ‘ಅಧಿಕ ಮೌಲ್ಯ’ ಎಂದು ಕಾರ್ಲ್ಮಾಕ್ರ್ಸ್ ತಿಳಿಸುತ್ತಾನೆ. ಈ ಅಧಿಕ ಮೌಲ್ಯದ ಪ್ರಮಾಣವನ್ನು ಹೆಚ್ಚಿಸಿ ಅಧಿಕ ಲಾಭಗಳಿಕೆಯೇ ಉದ್ದಿಮೆದಾರರ ಮತ್ತು ಜಮೀನ್ದಾರರ ಗುರಿ. ಇದರ ಜೊತೆಗೆ ಕಾರ್ಮಿಕರಿಗೆ ಸಹಜವಾಗಿ ಸಿಗಬೇಕಾದ ಇತರ ಯಾವುದೇ ಮೂಲಭೂತ ಸೌಲಭ್ಯಗಳೂ ದೊರೆಯದೆ ಸರ್ವರೀತಿಯಲ್ಲೂ ಅವರ ಶೋಷಣೆ ನಡೆದು, ಅವರ ಬದುಕು ಅಸಹನೀಯವಾಗುತ್ತದೆ. ಪರಿಣಾಮ ಮಾಲೀಕರೊಂದಿಗೆ ಸಂಘರ್ಷ ಏರ್ಪಡುತ್ತದೆ.
ಬೃಹತ್ ಪ್ರಮಾಣದ ಕಂಪೆನಿಗಳು ತಮ್ಮ ಸ್ವಹಿತಸಾಧನೆಗೆ ಒತ್ತುಕೊಡುವುದರಿಂದ ಪರಿಪೂರ್ಣ ಹಾಗೂ ಮುಕ್ತ ಪೈಪೋಟಿ ಅನಾರೋಗ್ಯಕರ ಮತ್ತು ಮಾರಕ ಸ್ಪರ್ಧೆಯಾಗಿ ಪರಿವರ್ತನೆಗೊಂಡು ದುಂದುವೆಚ್ಚಕ್ಕೆ ಕಾರಣವಾಗುತ್ತದೆ. ವಿವಿಧ ರೀತಿಯ ‘ನಕಲು’ ಚಟುವಟಿಕೆಗಳಿಂದ ಮಿತಸಂಪನ್ಮೂಲಗಳ ದುರುಪಯೋಗವೂ ನಡೆಯುತ್ತದೆ. ‘ಬೆಲೆಯಂತ್ರದ (Price Mechanism) ಕಾರ್ಯಾಚರಣೆಯ ಪರಿಣಾಮವಾಗಿ ಮಿತಸಂಪನ್ಮೂಲಗಳಿಂದ ಆವಶ್ಯಕ ಸರಕು ಮತ್ತು ಸೇವೆಗಳ ಉತ್ಪಾದನೆ, ಸಮರ್ಪಕ ನಡೆಯುವುದಿಲ್ಲ. ಜನಸಾಮಾನ್ಯರ ಆಶೋತ್ತರಗಳನ್ನು ಪೂರೈಸುವ ಸಲುವಾಗಿ ಅಗತ್ಯ ಹಾಗೂ ದಿನಬಳಕೆಯ ವಸ್ತುಗಳ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದರ ಬದಲಿಗೆ ಶ್ರೀಮಂತರ ಅಗತ್ಯಗಳನ್ನು ಪೂರೈಸುವಂತಹ ಭೋಗವಸ್ತುಗಳ ಉತ್ಪಾದನೆಗೆ ಹೆಚ್ಚಿನ ಮಹತ್ತ್ವ ಸಿಗುವುದು. ಹೀಗೆ ಸಂಪನ್ಮೂಲಗಳ ದುರ್ಬಳಕೆ ಹಾಗೂ ಅಪವ್ಯಯ ಇಲ್ಲಿ ಸಾಮಾನ್ಯ.
ಸ್ವಯಂಚಾಲಿತ ಆರ್ಥಿಕ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ಲಕ್ಷಾಂತರ ಮಂದಿ ಉತ್ಪಾದಕರ, ಉದ್ದಿಮೆದಾರರ, ಜಮೀನ್ದಾರರ ಸ್ವತಂತ್ರ ಆರ್ಥಿಕ ನಿರ್ಧಾರಗಳಿಂದ ವಿವಿಧ ವಸ್ತು ಹಾಗೂ ಸೇವೆಗಳ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಅಸಮತೋಲನ ಏರ್ಪಟ್ಟು ಆರ್ಥಿಕ ಆವರ್ತನಗಳ ಉದಯಕ್ಕೆ ಕಾರಣವಾಗುತ್ತದೆ. ಇದರಿಂದ ಆರ್ಥಿಕ ಅಸ್ಥಿರತೆ ಉಂಟಾಗಿ ನಿರುದ್ಯೋಗ ಹೆಚ್ಚುತ್ತದೆ. ಆರ್ಥಿಕ ಆವರ್ತನಗಳ ಪರಿಣಾಮವಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಹಣಕಾಸಿನ ಮುಗ್ಗಟ್ಟು, ಉಬ್ಬರ ಹಾಗೂ ಉತ್ಕರ್ಷಗಳು ಕಾಣಿಸಿಕೊಳ್ಳುತ್ತವೆ. ಪರಿಣಾಮ ಅಸ್ಥಿರತೆ ಮತ್ತು ಅಶಾಂತಿ ತಲೆದೋರಿ, ಪ್ರಗತಿ ಕುಂಠಿತವಾಗುತ್ತದೆ.
ಲಾಭದ ಉದ್ದೇಶವನ್ನಿರಿಸಿಕೊಂಡ ಬಂಡವಾಳಶಾಹಿಗಳು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಕಾರಣ ಅನೇಕ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಂಡು ಬೀದಿಗೆ ಬರುತ್ತಾರೆ. ಅತ್ಯಂತ ಆಧುನಿಕ, ಬೃಹತ್ ಯಂತ್ರಗಳು ಕಾರ್ಮಿಕರನ್ನು ಅವರವರ ಕೆಲಸಗಳಿಂದ ಪಲ್ಲಟಮಾಡುವ ಕಾರಣ ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ.
ಪ್ರತಿಯೊಂದು ಆರ್ಥಿಕ ಚಟುವಟಿಕೆ ಸ್ವಾರ್ಥಪ್ರೇರಿತ ಹಾಗೂ ಖಾಸಗಿ ಲಾಭವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ನಡೆಯುವ ಕಾರಣ ‘ಸಮಾಜಕಲ್ಯಾಣ’ದ ಉದ್ದೇಶ ವಿಫಲವಾಗುತ್ತದೆ. ‘ಅಗತ್ಯತೆ ಹಾಗೂ ಆವಶ್ಯಕತೆ’ಯ ಮೇಲೆ ಆಧಾರಿತವಾಗಿರದೆ ‘ಕೊಳ್ಳುವ ಶಕ್ತಿ’ಯ ಮೇಲೆ ಆಧಾರಿತವಾಗಿರುವ ಮುಕ್ತಮಾರುಕಟ್ಟೆ ಗರಿಷ್ಠ ಸಾಮಾಜಿಕ ಸಂತೋಷವನ್ನು ತಂದುಕೊಡುವಲ್ಲಿ ವಿಫಲವಾಗುತ್ತದೆ. ಸೂಕ್ತ, ಸಮರ್ಪಕ ಯೋಜನೆ ಸಾಧ್ಯವಾಗದ ಕಾರಣದಿಂದಾಗಿ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿಯೂ ಸಮನ್ವಯದ ಕೊರತೆ ಎದ್ದು ಕಾಣುತ್ತದೆ. ಪರಿಣಾಮವಾಗಿ ಅನೇಕ ಬಾರಿ ಕೆಲವು ವಸ್ತುಗಳ ‘ಅಧಿಕ ಉತ್ಪಾದನೆ’ ಅಥವಾ ‘ಅಧಿಕ ಕೊರತೆ’ ಉಂಟಾಗಿ ಮಾರುಕಟ್ಟೆಬೆಲೆಯಲ್ಲಿ ತೀವ್ರ ಪ್ರಮಾಣದ ಏರಿಳಿತಗಳನ್ನು ಕಾಣುತ್ತೇವೆ.
ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಅನೇಕ ರೀತಿಯ ಅನಗತ್ಯ ಮತ್ತು ಅನವಶ್ಯಕ ಸಾಮಾಜಿಕ, ನೈತಿಕ ಹಾಗೂ ಮಾನಸಿಕ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗುತ್ತದೆ. ಖಾಸಗಿ ಸಂಪತ್ತಿನ ಒಡೆತನ, ಪಿತ್ರಾರ್ಜಿತ ಆಸ್ತಿ ಪಡೆಯುವ ಹಕ್ಕು, ವ್ಯಕ್ತಿವಾದ, ಬುದ್ಧಿವಂತಿಕೆ ಹಾಗೂ ವಿವಿಧ ರೀತಿಯ ಕೌಶಲಗಳ ಒಡೆತನದ ಕಾರಣದಿಂದಾಗಿ ಪೈಪೋಟಿಯ ವಾತಾವರಣದಲ್ಲಿ ಅತಿ ಹೆಚ್ಚಿನ ಸ್ವಹಿತಾಸಕ್ತಿ, ಲಾಭಸಂಪಾದನೆ ಮತ್ತು ಅಧಿಕ ಹಣಗಳಿಕೆಯ ಉದ್ದೇಶಗಳು ಮನುಷ್ಯನ ನೈತಿಕಪತನಕ್ಕೆ ಕಾರಣವಾಗುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತು ಗಳಿಸುವ ಮತ್ತು ಕೂಡಿಡುವ ಸಲುವಾಗಿ ವ್ಯಕ್ತಿಯಲ್ಲಿ ಅನೇಕ ರೀತಿಯ ಕಾನೂನುಬಾಹಿರ ಕೃತ್ಯಗಳಲ್ಲಿ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರವೃತ್ತಿಯನ್ನು ಜಾಗೃತಗೊಳಿಸುತ್ತದೆ. ಉದಾಹರಣೆಗೆ ಕಾಳಸಂತೆ ವ್ಯಾಪಾರ, ಕಳ್ಳಸಾಗಾಣಿಕೆ, ಕಳ್ಳಸಂಗ್ರಹಣೆ, ಕಪ್ಪುಹಣ ಜಮಾವಣೆ, ಕಾಳಸಂತೆ, ಕಲಬೆರಕೆ, ಕೃತಕ ಅಭಾವ ಸೃಷ್ಟಿ, ಸಟ್ಟಾ ವ್ಯಾಪಾರ, ವಸ್ತುಗಳ ಗುಣಮಟ್ಟದ ಕಡಿತ, ಅನಗತ್ಯ ಬೆಲೆಗಳ ಏರಿಕೆ, ಕಳ್ಳಲೆಕ್ಕ ಇಡುವಿಕೆ, ತೆರಿಗೆಗಳ್ಳತನ ಇತ್ಯಾದಿ. ಇಂತಹ ಸಮಾಜಘಾತುಕ ಮತ್ತು ರಾಷ್ಟ್ರಘಾತುಕ ಚಟುವಟಿಕೆಗಳು ಮಾನವನ ನೈತಿಕ ಅಧಃಪತನಕ್ಕೆ ಕಾರಣವಾಗಿ ಉದಾತ್ತ ಗುಣಗಳಾದ ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆ, ಸಹಕಾರ, ಸತ್ಯ ಮತ್ತು ಇತರರಿಗೆ ಸಹಾಯಮಾಡುವ ಪ್ರವೃತ್ತಿಯ ನಾಶಕ್ಕೆ ಕಾರಣವಾಗುತ್ತದೆ; ಪರಿಣಾಮವಾಗಿ ಕ್ರಮೇಣ ಮಾನವ ಮೃಗವಾಗುತ್ತ ಸಾಗುತ್ತಾನೆ.
ಬಂಡವಾಳಶಾಹಿ ಪ್ರಭುತ್ವವು ಕಾಲಕ್ರಮೇಣ ಸಾಮ್ರಾಜ್ಯಶಾಹಿಗೆ ಅವಕಾಶ ಮಾಡಿಕೊಡುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಶ್ರೀಮಂತ ರಾಷ್ಟ್ರಗಳು ತಮ್ಮ ಸಂಪತ್ತನ್ನು ಇನ್ನೂ ವೃದ್ಧಿಸಿಕೊಳ್ಳುವ ಸಲುವಾಗಿ ಇತರ ರಾಷ್ಟ್ರಗಳನ್ನು ಆಕ್ರಮಿಸಿ ತಮ್ಮ ಪ್ರಭುತ್ವವನ್ನು ಅಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತವೆ. ಬಂಡವಾಳಶಾಹಿ ಪ್ರಭುತ್ವರಾಷ್ಟ್ರಗಳು ತಮ್ಮತಮ್ಮಲ್ಲಿಯೇ ಪೈಪೋಟಿಗಿಳಿಯುತ್ತವೆ. ಇದರಿಂದ ಅವುಗಳ ನಡುವೆ ತಿಕ್ಕಾಟ, ಘರ್ಷಣೆ ಮತ್ತು ಯುದ್ಧಗಳು ಸಂಭವಿಸುತ್ತವೆ. ಮುಂದೆ ಒಂದು ದಿನ ಇದು ಸಾಮ್ರಾಜ್ಯಶಾಹಿಗೆ ಮತ್ತೆ ಅವಕಾಶ ಮಾಡಿಕೊಡುತ್ತದೆ. (ಮುಂದುವರಿಯುವುದು)