ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ಮುಗಿಯಿತು. ಶ್ರೀರಾಮಚಂದ್ರನ ವನವಾಸವೂ ಮುಗಿಯಿತು. ಕೊರೋನಾ ಲಾಕ್‍ಡೌನ್ ಮುಗಿಯಿತು. ಇಷ್ಟರ ತನಕ ಮನೆಯಲ್ಲಿ ಕೊರೋನಾ ಕೊರೋನಾ ಅಂತ ಖಾರದಂಟು, ಕೋಡುಬಳೆ ತಿಂದು ಮನೆ ಕೆಲಸ ಮಾಡಿ ಆರಾಮದಿಂದ ಇದ್ದ ತಿಮಿರ ಬಾಡಿದ ಮುಖ ಹೊತ್ತು ಕಛೇರಿಯತ್ತ ನಡೆದ.
ತಿಮಿರ ಕಛೇರಿಯ ಬೀಗ ತೆರೆದು ಕಸ ತೆಗೆಯುವ ಪೆÇರಕೆ ಹುಡುಕಿಕೊಂಡು ಹೋದ. ಪೆÇರಕೆ ಕೊನೆಗೂ ಸಿಕ್ಕಿತು. ಅದು ಕೋಣೆಯ ಮೂಲೆಯಲ್ಲಿ ಅಡಗಿ ಕುಳಿತಿತ್ತು. ವಿದೇಶದಿಂದ ಬಂದು ಎಲ್ಲೆಲ್ಲಿಯೋ ಮೂಲೆಯಲ್ಲಿ ಅಡಗಿ ಕುಳಿತ ಕೊರೋನಾ ವ್ಯಾಧಿ ಹರಡುವ ಡಿಸ್ಟ್ರಿಬ್ಯೂಟರ್ ಪೊಲೀಸರ ಕೈಗೆ ಸಿಕ್ಕುಹಾಕಿಕೊಂಡಂತೆ ಅಡಗಿಕುಳಿತ ಪೊರಕೆ ತಿಮಿರನಿಗೆ ಸಿಕ್ಕಿತು.
ಒಂದೇ ಸಮನೆ ಕಛೇರಿ ಗುಡಿಸಿ ಕಸಗಿಸ ಒಟ್ಟು ಮಾಡಿ ಒಣಕಸ, ಹಸಿಕಸ ಬೇರೆಮಾಡಿ ಕಸ ಶೇಖರಣೆಯ ಡಬ್ಬಕ್ಕೆ ಹಾಕಿಬಿಟ್ಟ ತಿಮಿರ. ಬಳಿಕ ಕಛೇರಿಯ ಮೇಜು, ಕುರ್ಚಿ, ಫ್ಯಾನ್ ಎಲ್ಲ ಒರೆಸಿ ಶುಚಿಮಾಡಿ ಕಛೇರಿಯ ನೆಲ ಒರೆಸಲು ಆರಂಭಿಸಿದ. ಕಛೇರಿಯ ನೆಲ ಲಕಲಕನೆ ಹೊಳೆಯಲು ತೊಡಗಿತು.
ಈಸ್ ಸಮ್‍ಥಿಂಗ್ ರಾಂಗ್?
ಅಷ್ಟಾಗುವಾಗ ಕಛೇರಿಯ ಜವಾನ, ಕಛೇರಿ ಗುಡಿಸುವಾಕೆ, ಹೆಡ್ಡಕ್ಲರ್ಕ್, ದೊಡ್ಡಕ್ಲರ್ಕ್, ಚಿಕ್ಕಕ್ಲರ್ಕ್, ಕ್ಯಾಶಿಯರ್ ಎಲ್ಲರ ಪಡೆ ಬಂತು. ಮ್ಯಾನೇಜರ್ ತಿಮಿರ ಸಾಹೇಬರು ಮಾಡಿದ ಕೆಲಸ ನೋಡಿ ಎಲ್ಲರೂ ತಮ್ಮ ಮೂಗಿನ ಮೇಲೆ ಬೆರಳನ್ನು ಏರಿಸಿದರು.
ಅಷ್ಟಾಗುವಾಗ ತಿಮಿರನ ಪಿ.ಎ. ಮಿಟುಕಲಾಡಿ ಮೀನಾಕ್ಷಿ ಕಛೇರಿ ಪ್ರವೇಶ ಮಾಡಿದಳು. “ನಿಮ್ಮನ್ನೇ ಕಾದುಕೊಂಡು ಕುಳಿತಿದ್ದೆ ತಾಯಿ. ಅದ್ಸರಿ ಕಛೇರಿಗೆ ಎಷ್ಟು ಜನ ಬಂದಿದ್ದಾರೆ, ಮಧ್ಯಾಹ್ನ ಊಟಕ್ಕೆ ಎಷ್ಟು ಅಕ್ಕಿ ಹಾಕಬೇಕು, ಬೆಳಗ್ಗೆ ಅಕ್ಕಿಯ ಅನ್ನ ಮಾಡಬೇಕೇ, ಅಲ್ಲಾ ಕುಚ್ಚಲು ಅಕ್ಕಿಯ ಅನ್ನ ಮಾಡಬೇಕೇ, ಟೊಮ್ಯಾಟೋ ಸಾರು ಮತ್ತು ಬೀನ್ಸ್ ಪಲ್ಯ ಮಾಡಿದರೆ ಸಾಕಾಗದೇ, ಅಂದ ಹಾಗೆ ಗ್ಯಾಸ್ ಸಿಲಿಂಡರ್ ಬಂದಿದೆಯೇ?” ಇತ್ಯಾದಿ ಪ್ರಶ್ನೆಗಳನ್ನು ಮ್ಯಾನೇಜರ್ ತಿಮಿರ ಮಿಟುಕಲಾಡಿ ಮೀನಾಕ್ಷಿಯಲ್ಲಿ ಕೇಳಲು, ಮೀನಾಕ್ಷಿಗೆ ಏನೋ ಸಮ್‍ಥಿಂಗ್ ರಾಂಗ್ ಆದಂತೆ ಅನ್ನಿಸಿತು.
ಕಛೇರಿಯಲ್ಲಿರುವ ಸಹೋದ್ಯೋಗಿಗಳಲ್ಲಿ ವಿಚಾರಿಸಲಾಗಿ ಅವರೆಲ್ಲರೂ ಮ್ಯಾನೇಜರ್ ಸಾಹೇಬರ ಈವತ್ತಿನ ಅಚ್ಚರಿಯ ಸ್ವಭಾವದ ಬಗ್ಗೆ ಒಂದಕ್ಕೆರಡು ಸೇರಿಸಿ ಹೇಳಿದರು – ಟಿ.ವಿ. ಮಾಧ್ಯಮದವರ ರೀತಿ. ಕೊರೋನಾ ಬಗ್ಗೆ ಜಗಭಯಂಕರ ಸುದ್ದಿ ಮಾಡಿದ ಟಿ.ವಿ. ಮಾಧ್ಯಮದವರ ರೀತಿ ಹೆಡ್ ಕ್ಲರ್ಕ್ ಹೇಳಿದ, “ಮ್ಯಾನೇಜರ್ ಸಾಹೇಬ್ರು ಬೆಳ್ಳಂಬೆಳಗ್ಗೆ ಬಂದು ಕಛೇರಿ ಗುಡಿಸಿ, ಒರೆಸಿ ಕ್ಲೀನ್ ಮಾಡಿದ್ದಾರೆ. ಇಷ್ಟಕ್ಕೂ ಇದು ಅವರ ಕೆಲಸ ಅಲ್ಲವಲ್ಲಾ? ಸ್ವೀಪರ್ ಕೆಲಸವನ್ನು ಮ್ಯಾನೇಜರ್ ಸಾಹೇಬ್ರು ಯಾಕೆ ಮಾಡಬೇಕು? ಅರ್ಥಾತ್ ಇದು ಕೊರೋನಾ ರೋಗದ ಲಕ್ಷಣ ಅಲ್ಲವಲ್ಲಾ?”
ಸಹೋದ್ಯೋಗಿಗಳು ಈ ರೀತಿ ಚರ್ಚೆ ಮಾಡುತ್ತಿರುವಾಗ, “ಟಾಯ್ಲೆಟ್ ಯಾವಾಗ ತೊಳೀಬೇಕು?” ಅಂತ ಮ್ಯಾನೇಜರ್ ಸಾಹೇಬರು ಕೇಳುವಾಗ ಇದನ್ನು ಆರ್ಡರ್ ಅಂತ ತಿಳಿದುಕೊಂಡ ಸ್ವೀಪರ್ “ಸಾರಿ ಸರ್, ನಾನು ಈಗಲೇ ತೊಳೆಯುತ್ತೇನೆ ಎನ್ನಬೇಕೇ?”
ಅದಾಗಲೇ ಮ್ಯಾನೇಜರ್ ಸಾಹೇಬರ ಇನ್ನೊಂದು ಸವಾಲು ಮೊದಲಾಯಿತು. “ಪಲ್ಯಕ್ಕೆ ಬೀನ್ಸ್ ಅನ್ನು ತೊಳೆದು ಕೊಯ್ಯಬೇಕೇ? ಅಲ್ಲಾ ಕೊಯ್ದು ತೊಳೆಯಬೇಕೇ?” ಅಂತ. ಸಹೋದ್ಯೋಗಿಗಳು ತಮತಮಗೆ ತೋಚಿದಂತೆ ಉತ್ತರ ಕೊಡಲು, ಕ್ಯಾಶಿಯರ್ ಪ್ರತಿಯೊಂದು ತರಕಾರಿಯ ಬಗ್ಗೆ ವಿಶ್ಲೇಷಿಸಿ, “ಕ್ಯಾಬೇಜ್ ಕೊಯ್ದು ತೊಳೆಯಬೇಕು, ಬೆಂಡೇಕಾಯಿ ತೊಳೆದು ಕೊಯ್ಯಬೇಕು” ಎಂದುಬಿಟ್ಟ.
ಆಪ್ತ ಸಲಹೆ
ಮ್ಯಾನೇಜರ್ ಸಾಹೇಬರ ಪಿ.ಎ. ಮಿಟುಕಲಾಡಿ ಮೀನಾಕ್ಷಿಗೆ ಸಾಹೇಬರ ಸ್ವಭಾವ ಬಹಳ ಮುಜುಗರವನ್ನು ತಂದುಕೊಟ್ಟಿತು. ಎಲ್ಲ ಸಹೋದ್ಯೋಗಿಗಳನ್ನು ತಮ್ಮತಮ್ಮ ಆಸನದಲ್ಲಿ ಆಸೀನರಾಗುವಂತೆ ಹೇಳಿ, ಆಕೆ ಮ್ಯಾನೇಜರ್ ಸಾಹೇಬರ ಬಳಿ ತೆರಳಿ, “ಸರ್, ಇದು ತಮ್ಮ ಮನೆಯಲ್ಲ, ಕಛೇರಿ. ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರ ಲಾಕ್‍ಡೌನ್ ಮಾಡಿದ ಕಾರಣ ನಮ್ಮ ಕಛೇರಿಯನ್ನು ಕೂಡ ಲಾಕ್‍ಡೌನ್ ಮಾಡಲಾಗಿತ್ತು. ತಾವು ಸುಮ್ಮನೇ ಕೂರುವ ಜಾಯಮಾನದವರು ಅಲ್ಲವಲ್ಲ? ಮನೆಯಲ್ಲಿ ಪ್ರಾಯಶಃ ಗುಡಿಸುವುದು, ನೆಲ ಒರೆಸುವುದು, ಅಡುಗೆ ಮಾಡುವುದು ಇತ್ಯಾದಿ ಇತ್ಯಾದಿ ಕೆಲಸವನ್ನು ಲಾಕ್‍ಡೌನ್ ವೇಳೆ ಮಾಡಿ ತಾವು ಅನುಭವಿಗಳಾಗಿದ್ದಿರಬೇಕು. ಸದ್ಯ ಕೊರೋನಾ ಲಾಕ್‍ಡೌನ್ ಮುಗಿಯಿತು. ಇಲ್ಲಿ ಅಡುಗೆ, ಕಸಗುಡಿಸುವುದು, ತರಕಾರಿ ಕೊಯ್ಯುವ ಚರ್ಚೆ ಬೇಡ. ತಾವು ಮುಖವನ್ನು ತಣ್ಣೀರಿನಿಂದ ತೊಳೆದು ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಿ ಸರ್. ಇದು ಕಛೇರಿ. ತಾವು ಮ್ಯಾನೇಜರ್. ನೀವು ನಮ್ಮ ಬಾಸ್” ಅಂತ ಹೇಳಲು, “ಓ! ಮರೆತುಹೋಯಿತು. ಲಾಕ್‍ಡೌನ್ ವೇಳೆ ಮನೆ ಕೆಲಸ ಮಾಡಿ ಮಾಡಿ ಅದುವೇ ಅಭ್ಯಾಸ ಆಯಿತು. ಸರಿ, ಸರಿ, ಇದು ಕಛೇರಿ. ಇಲ್ಲಿ ಕಛೇರಿಯ ಸಕ್ರ್ಯುಲರ್ ಬಗ್ಗೆ ಮಾತ್ರ ಮಾತನಾಡುತ್ತೇನೆ” ಅಂತ ತಮ್ಮ ಮುಖ ತೊಳೆಯಲು ತಿಮಿರ ಸಾಹೇಬರು ಹೋದರು.
ಮುಖ ತೊಳೆದು ವರ್ತಮಾನಕ್ಕೆ ಬಂದ ತಿಮಿರ ಸಾಹೇಬರು ತಮ್ಮಲ್ಲಿಯೇ ಗಟ್ಟಿಯಾಗಿ ಹೇಳಿಕೊಂಡರು – ‘ಅಭ್ಯಾಸ ಬಲವೇ ಬಲ, ಅದುವೇ ಸಬಲ. ಮನೆಕೆಲಸ ಮಾಡಿ ಕಛೇರಿಯ ಕೆಲಸವೇ ಮರೆತುಹೋದಂತಿದೆ. ಇನ್ನು ಕಛೇರಿ ಕೆಲಸವನ್ನೇ ಮಾಡಿ ಲಾಕ್‍ಡೌನ್, ಕೊರೋನಾ ಮರೆತುಬಿಡೋಣ.’
ಲೇಖಕರು ನಿವೃತ್ತ ಬ್ಯಾಂಕ್ ಉದ್ಯೋಗಿ,ಸಾಹಿತಿ, ಹಾಸ್ಯಬರಹಗಾರರು, ಪತ್ರಿಕಾ ವರದಿಗಾರರು ಹಾಗೂ ಅಂಕಣಕಾರರು.