ಅವ ಗುಂಡ.
ಅವ್ಳು ಗುಂಡಿ.
ಗಂಡ ಕನ್ನಡ ಪಂಡಿತ (ಕ.ಪಂ.).
ಹೆಂಡ್ತಿ ಕನಿ಼ಷ್ಟಬಿಲ್ಲೆ (ಕ.ಬಿ.).
ಅಪರೂಪದ ಜೋಡಿ.
ಕ.ಪಂ. ಸಪ್ಪಗಿನ ಇಡ್ಲಿ.
ಕ.ಬಿ. ಮಸಾಲಿ ಬೋಂಡ.
ಅವ್ನು ವೆಜ್ಜು, ಅವ್ಳು ನಾನ್.. ಉ.
ಒಂದು ಬಡಪಾಯಿ. ಇನ್ನೊಂದು ಬಡಾಬಾಯಿ.
ಗುಂಡ ಅಲ್ಪಪ್ರಾಣಿ. ಗುಂಡಿ ಮಹಾಪ್ರಾಣಿ.
ಮನೆಮಂದಿ ಬೇಡವೆಂದರೂ ಪ್ರೀತಿಸಿ ಮದುವೆಯಾದರು.
’ಗಂಡಾ-ಗುಂಡಿ ಸಂಸಾರವೆಂದರೆ ಇದಪ್ಪಾ, ಇದು’ ಎಂದು ಆಗದವರ ಹೊಟ್ಟೆ ಉರಿಸುತ್ತ ಸಾಗಿದೆ ಸಂಸಾರ.
ಕ.ಪಂ. ಶಾಲಾ-ಪಾಪುಗಳಿಗೆ ಕನ್ನಡದ ಕಂಪು ಬೀರುತ್ತದೆ.
ಕ.ಬಿ. ಪಾಪಿಜನಗಳ ಮೇಲೆ ಪೊಲೀಸ ಲಾಠಿ ಬೀಸುತ್ತದೆ. ಅದು ಅವರವರ ಕರ್ಮಸಿದ್ಧಾಂತ.
ಕ.ಪಂ. ಕನ್ನಡಗೋವಿನ ಮುದ್ದಿನ ಕರು. ಮುಂದೆ ಹಾಯದ, ಹಿಂದೆ ಒದೆಯಲರಿಯದ ಪುಣ್ಯಕೋಟಿ.
ಬೆಳೆದ ಹೈದರಂತೂ ಬೇಡ, ಚಡ್ಡಿ ಹಾಕದ ಸಣ್ಣಪೋರ ಕೂಡ ಹೆದರೊಲ್ಲ ಇದಕ್ಕೆ.
ಆದರೆ ಕ.ಬಿ. ಹಾಗಲ್ಲ. ಇಡೀ ಬ್ರಹ್ಮಾಂಡವನ್ನೇ ಸೀಳಿಡಬಲ್ಲ ಸಿಂಹಿಣಿ. ತಾಣ ಯಾವುದಾದರೇನು, ಅದೇ
ಅವಳ ಠಾಣೆ. ನಮ್ನಿಮ್ಮ ಫ್ಯಾಮಿಲಿಯಲ್ಲಿರೊ ಹಾಗೆ, ಇಲ್ಲೂ ಹೆಂಡ್ತಿ ಹೆಣ್ಣುಲಿ. ಗಂಡ ಸಣ್ಣಿಲಿ.
ಕ.ಬಿ. ಗುಂಡುಗುಂಡಾಗಿ ಉಬ್ಬಿದ್ದಾಳೆ. ಬೇಡವೆಂದರೂ ಸಿಗುವ ಗಿಂಬಳ ಕಾರಣವೆಂಬುದು ಗುಮಾನಿ.
ಖಾಕಿ, ಖಾದಿ, ಖಾವಿಯೊಳಗಂತರ್ಗತ ಸತ್ಯ ಕಂಡವರುಂಟೆ?
ಹಾಗಂತ ಯಾರಾದರೂ ಹಿಂದೆ ಆಡಿಕೊಳ್ಳೋದು ಕಿವಿಗೆ ಬಿತ್ತೋ, ’ಹೌಂದ್ರೀ, ತಿಂಥೀಣಿ. ಏನೀಗ?’
ಕ.ಬಿ. ಉರಿಗಣ್ಣು ಬಿಡುತ್ತದೆ.
’ಶಾಂತಂ ಪಾಪಂ! ಉಳದಾವ್ರಂಗಲ್ಲ ನಮ್ಮಾಕೆ’ ಕ.ಪಂ. ಸಾಫ್ ಎಳೆಯುತ್ತದೆ. ವಿಧಾನಸಭೆಯಲ್ಲಿ ಮಂತ್ರಿಗಳು ಕೊಡುವ ಉತ್ತರದಂತೆ ಇದೂ ಅರ್ಥವಿಲ್ಲದ್ದು, ಜಗಕ್ಕೇ ಗೊತ್ತಿರುವ ರಹಸ್ಯ.
ಪತಿಭಕ್ತಿ ಅಂದರೆ ಏನು ಅಂಬೋದನ್ನು ಕ.ಬಿ.ಯಿಂದಲೇ ಕಲಿಯಬೇಕು. ಆಕೆ ಗಂಡನನ್ನು ಏಕವಚನದಲ್ಲಿ ಎಂದೂ ಕರೆಯುವದಿಲ್ಲ. ಬೈಯುವಾಗಲೂ ಸಹ. ಆ ಬಹುವಚನದ ಫರಾಕು ಹೀಗಿರುತ್ತದೆ:
’ಠೈಮ್ ಎಷ್ಟಗೇದ ಅನ್ನೋ ಖಭರ ಅಧ ಏನ್ರಿ ನಿಮ್ಗ? ಇನ್ನೂ ಹಂಘೇ ಬಿದ್ಕೊಂಡ್ರೀಲ್ಲಾ’. ಸರ್ವ ಮಹಾಪ್ರಾಣಿಯಾಗಿ ಕ.ಬಿ. ಸಮ್ಮಾನಿಸುತ್ತಾಳೆ.
’ಮುಖಾ ಥೋಳ್ಕೊಂಡು, ಚಾಕ್ಕಿಡಬಾರ್ಧೇನ್ರಿ? ಅದ್ನೂ ಧಿನಾಲೂ ನಾನೇ ಹೇಳ್ಭೇಕ? ಇವತ್ಥ ಅಂವಾ ಯಾರೋ ಮಂಥ್ರಿ ನಮ್ಮೂರಿಗೆ ವಖ್ಖರಿಸಾಂವದನಂಥ. ಬಂಧೋಬಸ್ಥಿಗೆ ಜಲ್ದೀ ಭರ್ಬೇಕಂತ ಎಸ್ಸೈ ವಾರ್ನಿಂಗ್ ಮಾಢ್ಯಾರ.. ..’ ಕ.ಬಿ. ಡಿರ್ಪಾಟಮೆಂಟ್ ಭಾಷೆಯಲ್ಲಿ ಉಲಿಯುತ್ತಿದ್ದರೆ,
’ಹಾಂ, ಹೌದೌದು, ಇವತ್ತು ಸ್ಕೂಲಿಗೆ ಬಿಇಓ ಸಾಹೇಬ್ರು ಬರಾವ್ರದಾರ. ನಾನೂ ಅರ್ಜೆಂಟ್ ತಯಾರಾಗ್ಬೇಕು’ ಕ.ಪಂ. ಗಡಬಡಿಸುತ್ತ ಹಾಸಿಗೆಯಿಂದೇಳುತ್ತಾನೆ. ಇದು ನಿತ್ಯದ, ನಿಲ್ಲದ ಸುಪ್ರಭಾತ.
* * * * *
ಆದರೆ ಆವತ್ತು ಆದದ್ದೇ ಬೇರೆ.
ಕ.ಪಂ. ಹಾಸಿಗೆ ಬಿಟ್ಟೇಳೋದು ಸ್ವಲ್ಪ ತಡವಾಗೋದಕ್ಕೂ, ’ಹೇನ್ರಿ, ಇನ್ನೂ ಹಂಘೇ ಎಷ್ಟೊತ್ತ ಬಿದ್ಕೊಳ್ಳಾವ್ರು. ಖೆರ್ಯಾಗ ಕ್ವಾಣ ಬಿದ್ಕೊಂಡಾಂಘ?’ ಬುಸುಗುಟ್ಟೋದಕ್ಕೂ ಬರೋಬ್ಬರಿಯಾಯ್ತು
’ಯ್ಯಾಕ್ ಬಡ್ಕೊಂತಿ ಹೇಂತಿ? ಬಿಟ್ಟುಬಿಡು ನೀ ಚಿಂತಿ’ ಸಕ್ಕರೆ ನಿದ್ರೆಯಲ್ಲಿದ್ದ ಕ.ಪಂ.ಗೆ ಕವಿಗೋಷ್ಠಿಯ ಕನಸು. ಕಾಳಿದಾಸನ ಶಕುಂತಲೆ ತಲೆಹೊಕ್ಕಿದ್ದಳು. ಕನಸಿನ ಕನ್ಯೆ ಮನತುಂಬಿಕೊಂಡಿರಬೇಕಾದರೆ, ಕಪ್ಪನೆಯ ಕಲ್ಲಿದ್ದಲು ಮೂಟೆಗೆ ಕನವರಿಸುವ? ಅರಸಿಕನೇ ಕ.ಪಂ.!
ಏಕಾಏಕಿ ಬಂದೆರಗಿದ ಬೌನ್ಸರ್ಬಾಲ್ಗೆ ತಡಬಡಿಸುವ ಬ್ಯಾಟ್ಸ್ಉಮನ್ಳಂತಾದಳು ಒಂದು ಕ್ಷಣ. ಮರುಕ್ಷಣವೇ ಗುಂಡಿ ಚಾಮುಂಡಿ.
’ಇಖಾ ನಾ ಹೇಳಿಧಂಗ ಕೇಳಿದ್ರಿ ಅಂದ್ರ ಛಲೋ ಆತು, ಇರ್ಲಿಖಂದ್ರ.. . ಇರ್ಲಿಖಂದ್ರ’ ಕರಕರ ಹಲ್ಲು ಮಸೆದಳು.
’ಇರ್ಲಿಕಂದ್ರ ಏನ್ಮಾಡ್ತೀ ಅಂಥಾ ಮಹಾ?’ ಮುಸುಕಿನ ಒಳಗೆ ಮಿಸುಗಾಡಿದ, ಮೀಸೆಯಿಲ್ಲದ ಗಂಡ.
’ಖೆಣಕ್ಬ್ಯಾಡ್ರೀ ನನ್ನ.. . ಈಘೇ ಹೇಳೀರ್ತೀನಿ… ಜಲ್ದೀ ಎದ್ದು ಛಾ ಕಾಸಿಕೊಟ್ರೀ ಛಲೊ ಆತು.. ತಿಳೀಥೇನು…?’ ಸತಿಶಿರೋಮಣಿ ಕೆರಳಿದ ನಾಗಿಣಿಯಾದಳು.
ಆವತ್ತು ಪೌರುಷದ ಪುರುಷ ಕ.ಪಂ. ಮೈಯೊಳಗೆ ಹೊಕ್ಕಿರಬೇಕು… ’ಹೂಂ ಹೂಂ.. ಯಾವತ್ತು ಅಂದ್ರೆ ಯಾವತ್ತಿಗೂ ಇಂಥಾ ಅಡಗಿ ಗಡಗಿ ಕೆಲ್ಸಾ ಹೇಳಬ್ಯಾಡಾ, ನಾನೂ ಮಾಡೋದಿಲ್ಲಾ ಇನ್ಮುಂದ.. .’
ಮತ್ತೊಂದು ಬೌನ್ಸರ್ಬಾಲ್! ಕ.ಬಿ.ಯ ತಲೆ ಗಿರ್ರ್… ಗಿರ್ರ್… ಸುತ್ತತೊಡಗಿತು.
’ನನಘೇ ಎದುರು ಮಾತಾಡ್ತೀರಿ? ನೋಡೇ ಭಿಡ್ತಿನಿ ಹಂಘಾರ’ ಭುಸುಗುಟ್ಟಿದಳು.
ಆಗ್ಲೇ ಎಚ್ಚತ್ತು, ’ಪ್ರಿಯತಮೆ, ಅದೇನೋ ಹಾಳು ಕನಸು.. .. ಅದೇನು ಬಡಬಡಿಸಿದೇನೊ, ಮನ್ನಿಸಿಬಿಡು ಮನದನ್ನೆ’ ಅಂತ ಕಾವ್ಯಾತ್ಮಕವಾಗಿ ಹೇಳಿಬಿಟ್ಟಿದ್ದರೆ.. .. ಎಲ್ಲ ಥಣ್ಣಗಾಗುತ್ತಿತ್ತೇನೊ.. ..?
ಆದ್ರೆ, ಎಡವಟ್ಟಾದದ್ದು ಅಲ್ಲೇ. ’ಅದೇನ್ ನೋಡ್ಕೋತಿ.. . ನೋಡ್ಕೊ ಹೋಗು’ ಹುತ್ತದ ಬಾಯಿಗೆ ಕೈ ಹಾಕಿದ ಕ.ಪಂ.
’ಹಂಘೇನು, ನೋಢೆ ಬಿಡ್ತೀನಿ ನ್ನಾನೂ.. .’ ನಾಗಿಣಿ ಹೆಡೆಯಾಡಿಸಿತು.
ಸಮರೋತ್ಸಾಹದ ಕಹಳೆ ಮೊಳಗಿದವು.
* * * *
ಸಂಕಷ್ಟಗಳು ಬರತೊಡಗಿದರೆ ಟಿವಿ ಸೀರಿಯಲ್ನಂತೆ ಮುಗಿಯೋದೆ ಇಲ್ಲ. ಸಿನಿಯರ್ ಕ.ಪಂ.ಗೆ ಚಾರ್ಜ್ ಕೊಟ್ಟು, ರಜೆಹಾಕಿದ ಹೆಡ್ಮಾಸ್ತರು, ಇದೇ ವೇಳೆಗೆ, ಜೋಳದರಾಶಿ ಮಾಡಲು ಹಳ್ಳಿಗೆ ಹೋದರು.
ಅತ್ತ ಶಾಲೆ ಕಾಯುವ ಕಾಯಕ, ಇತ್ತ ಅಡುಗೆ ಅಟ್ಟುವ ಹೋಮ್ವರ್ಕ್. ಹೋಟೆಲ್ ಊಟ ಪಿತ್ತಪ್ರಕೃತಿಯ ಕ.ಪಂ.ಗೆ ಆಗಿಬರುವುದೇ ಇಲ್ಲ. ಎರಡನೇ ದಿನಕ್ಕೆ ತಲೆಸುತ್ತು. ವಾಂತಿ. ಹೈರಾಣಗೊಂಡ. ಎಂಟೇ ಎಂಟು ದಿನಕ್ಕೆ ಜೋಳದ ದಂಟಿನಂತೆ ಒಣಗಿ ಸಣಕಲಾದ.
ಗುಂಡಿಯದೊ ಕಲ್ಲುಗುಂಡು ಶರೀರ. ಏನೇ ತಿಂದ್ರೂ ಕರಗಿಸಿಕೊಳ್ಳುವ ತಾಕತ್ತು. ಮಸ್ತಮಸ್ತಾಗಿಯೇ ಇದ್ದಾಳೆ ಸಂತೆಯ ಎಮ್ಮೆಯಂತೆ, ಮನೆಯ ಪರಿಸ್ಥಿತಿ ಹದಗೆಟ್ಟು ಹೇರಾಫೇರಿ. ಗಾಳಿ ತೆಗೆದ ಬಲೂನಿನಂತೆ.
ಮೊದಲೆಲ್ಲ ಕ.ಬಿ.ಗೆ ಹೆದರಿ ಗಟ್ಟಿಹಾಲು ಹಾಕುತ್ತಿದ್ದ ಗಂಗಪ್ಪ, ಈಗ ನೀರಿಗಿಂತಲೂ ತೆಳ್ಳಗಿನ ಹಾಲು ತರುತ್ತಾನೆ. ಅವನಿಗೆ ಹಾಕಿದ ಹೆದರಿಕೆ ಬೆದರಿಕೆಗಳೆಲ್ಲ ಸುಂಕದಕಟ್ಟೆಯ ಹೆಳವನಂತೆ ಠುಸ್ಸ್. ಮನೆಯ ವಿದ್ಯುತ್ಫ್ಯೂಸ್ ಹೋಗಿ ಆರುದಿನಗಳಾದವು. ಕೊಡಬೇಕಾದ ಮಾಮೂಲು ಕೊಟ್ಟು ಬಂದಾಯ್ತು. ಆದ್ರೂ ಲೈನ್ಮನ್ ಕರೆಪ್ಪ ಇತ್ತ ಸುಳಿದಿಲ್ಲ. ಕರೆಪ್ಪಗೆ ಕರುಣೆ ಬಾರದೆ ಕರೆಂಟ್ ಭಾಗ್ಯವಿಲ್ಲ.
ಮುಂಚೆ ಹೀಗಾಗುತ್ತಿರಲಿಲ್ಲ. ಗಂಗಪ್ಪ, ಕರೆಪ್ಪನಂಥವರನ್ನೆಲ್ಲ ಕ.ಬಿ. ಹದ್ದುಬಸ್ತಿನಲ್ಲಿಟ್ಟದ್ದಳು. ಅವಳ ಸಣ್ಣ ಗುಟುರಿಗೆ, ಕಾಯ್ದ ಎಣ್ಣೆಯಲ್ಲಿ ತಕತಕ ಹೋಯ್ದಾಡುವ ಬಜ್ಜಿಗಳಿಂತಿದ್ದರು. ಈಗ ಕುದುರೆ ಏರಿ ಕುಂತಿದ್ದಾರೆ.
ಕಾಯಿಪಲ್ಲೆ ಮಾರುವ ಕಾಶಿಬಾಯಿ, ಅಗಸರ ಅಣ್ಣಪ್ಪ, ಬೀದಿಗುಡಿಸೊ ಹಣಮಂತೂ ಎಲ್ಲ ಎಲ್ಲರೂ ಒಂದು ನಮೂನೆ ನೋಡತೊಡಗಿದ್ದಾರೆಂಬ ಗುಮಾನಿ ಕ.ಪಂ. ಗೆ. ತನಗೂ ಇವಳಿಗೂ ಬಿಗಡಾಯಿಸಿದ್ದು ಊರಿಗೆಲ್ಲ ಗೊತ್ತಾಗಿರಬೇಕು. ಜನರ ವಿಷಯ ಹಾಗಿರಲಿ, ಮುಂಚೆ ಬೊಗಳಲೂ ಅಂಜುತಿದ್ದ ಆ ಸಣಕಲು ಬೀದಿನಾಯಿ ಕಚ್ಚುವಂತೆ ಮೈಮೇಲೆಯೆ ಬರುತ್ತಿದೆ. ಅದೂ ಹೋಗ್ಲಿ ಅಂದ್ರೆ, ಮನೆಯ ಟಾಮಿ ಈಗ ತನ್ನನ್ನು ಕಂಡರೂ ಕ್ಯಾರೆ ಅನ್ನೊಲ್ಲ.
’ಬರ್ನಲ್ ಆದ ಬಲ್ಬಿನಂತೆ ಯೂಸ್ಲೆಸ್ ಆಗಿಬಿಟ್ಟೆನೇ?’ ಆಗೆಲ್ಲ ಪೊಲೀಸಮ್ಮನ ಗಂಡ ಎಂಬ ಕಾರಣಕ್ಕೆ ಇರಬಹುದು ಇವರೆಲ್ಲ, (ಇವುಗಳೂ ಸಹ) ಮರ್ಯಾದೆ ಕೊಡುತ್ತಿದ್ದರೇನೊ? ಮನದಲ್ಲಿ ಅಂದ್ಕೊಂಡ.
ಈಗ ಸೋತು ಸುಣ್ಣವಾದ. ಸುಮ್ಮ ಸುಮ್ಮನೆ ಹಟಕ್ಕೆ ಬೀಳಬಾರದಾಗಿತ್ತು ನಾನು? ಹಳಹಳಿಸಿದ. ಮನದನ್ನೆ ಮುನಿಸಿಕೊಂಡರೆ ಎಷ್ಟೊಂದು ಅನಾಹುತ! ಅಬ್ಬಬ್ಬಾ!! ತನ್ನದೇ ತಪ್ಪು ಎಂದು ಕ್ಷಮೆ ಕೇಳಬೇಕು. ಅಂದುಕೊಂಡ.
ಅದರ ಮರುಕ್ಷಣವೆ, ತಾನು ಗಂಡಸು ಎಂಬ ಅಹಂ ಅಡ್ಡ ಬಂತು. ಹೀಗೆಯೆ, ಮತ್ತೆರಡು ದಿನಗಳು ಜಾರಿದವು. ಗೃಹಗತಿ ಬಿಗಡಾಯಿಸಿತು. ಶಿವನ ಮನೆಗೆ ಶಿವರಾತ್ರಿ ಬಂದಂತೆ, ಪರೀಕ್ಷಾ ಸಮಯವೂ ಆಗ್ಲೇ ಬರಬೇಕೆ? ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ನಾಳೆಗೇ ಮುಗಿಸಿ, ಫಲಿತಾಂಶ ಹೇಳಬೇಕು. ಕರೆಂಟಿಲ್ಲದ ಕತ್ತಲು ಮನೆ. ನೀರ್ಹಾಲು ಹಾಕಿ ಚಹಾವನ್ನಾದರೂ ಮಾಡಿ ಕುಡಿಯೋಣವೆಂದರೆ, ಹಾಳಾದ್ದು ಗ್ಯಾಸ್ ಕೂಡ ಖಾಲಿ. ಮೊದಲಾಗಿದ್ದರೆ, ಅವ ಒಂದು ಫೋನ್ ಕರೆಗೆ, ತಾಬಡತೋಬಡ ಹೊಸ ಗ್ಯಾಸ್ ಸಿಲಿಂಡರ್ ಮನೆಗೇ ಬರುತ್ತಿತ್ತು. ತಾನು ಸ್ವತಃ ಗ್ಯಾಸ್ ಅಂಗಡಿಗೆ ಹೋಗಿ, ಕೈಮುಗಿದು ಹೇಳಿಬಂದಾಗ್ಯೂ… ಹೂಂ.. ಹೂಂ..! ಕೆಲಸವಾಗಿರಲಿಲ್ಲ. ನೆರೆಹೊರೆಯವರಲ್ಲಿ ಸಿಲೆಂಡರ್ ಕಡ ಕೇಳಿದ್ದ. ಅವರೋ, ಅದು ಇದು ನೆಪ ಹೇಳಿ ನುಣಚಿಕೊಂಡರು.
ಒಂದು ಗ್ಯಾಸ್ ಸಿಲಿಂಡರ್ಗಾಗಿ ಸಿಕ್ಕಸಿಕ್ಕವರಿಗೆಲ್ಲ ಸರಂಡರ್ ಆಗುವುದೆ? ಛೇ, ಅವಮಾನ. ಹಾಗೆ ಸರಂಡರ್ ಆಗುವುದೇ ಆದರೆ, ಗುಂಡಿಗೇ ಯಾಕಾಗಬಾರದು? ಎಷ್ಟಾದರೂ ಇಷ್ಟಪಟ್ಟು ತನ್ನವಳಾದವಳು. ನೋಡಲು ಧಡೂತಿ. ಕೃ?ಸುಂದರಿ, ಆದ್ರೂ ಹೃದಯವಂತೆ. ’ಸ್ಸಾರಿ ಡಿಯರ್’ ಎಂದರಾಯಿತು. ಕರಗಿ ನೀರಾಗುತ್ತಾಳೆ. ಅವ್ಳ ಸ್ವಭಾವ ತಾನರಿಯನೆ?
ಹೀಗೆಯೆ ಸೆಟಗೊಂಡು ತಾನಾದರೂ ಎಷ್ಟು ದಿನಾಂತ ಬಿಕ್ಕೊಂಡು ಇರಲ್ಲಿಕ್ಕಾದೀತು! ಸಂಸಾರ ಅಂದ್ಮೇಲೆ ಒಂದು ಮಾತು ಬರತ್ತದೆ, ಹೋಗುತ್ತದೆ. ಸತಿಗೆ ಶರಣಾಗದ ಪತಿ ಲೋಕದೊಳಗುಂಟೆ? ಸಾವಿರ ಕುದುರೆಯ ಸರದಾರನಾದವನೂ ಮನೆಯ ಹೆಂಡತಿಗೆ ಪಿಂಜಾರನೇ. ತನಗೆ ತಾನೇ ಸಮರ್ಥಿಸಿಕೊಂಡ. ಜ್ಞಾನೋದಯವಾಯಿತು.
* * * * *
ಮತ್ತೆ ಮನೆ ಬೆಳಗತೊಡಗಿತು. ಗಟ್ಟಿಹಾಲು ಗ್ಯಾಸ್ ಒಲೆಯ ಮೇಲಿಟ್ಟು, ಲುಂಗಿ ಸೊಂಟಕ್ಕೆ ಸುತ್ತಿಕೊಂಡ ನಳಮಹಾರಾಜ, ತನ್ನ ದಮಯಂತಿ ಕ.ಬಿ.ಗಾಗಿ ಅಡುಗೆ ತಯಾರಿಯಲ್ಲಿದ್ದಾನೆ.
ಬಾನಲ್ಲಿನ ಚಂದ್ರ ನಗುತ್ತಿದ್ದಾನೆ. ಗಂಡಹೆಂಡಿರ ಜಗಳ ಆತನಿಗಿಂತ ಚೆನ್ನಾಗಿ ಬಲ್ಲವರಾರಿದ್ದಾರೆ!