ಲೇ ಪ್ರೇಮ, ಅದೇನೇ ಅದೂ ಈವತ್ತು ಬೆಳಗ್ಗೆ ಬೆಳಗ್ಗೇನೆ, ಸಿ.ಐ.ಡಿ. ಶೆರ್ಲಾಕ್ ಹೋಂಸ್ ಹುಡುಕೋ ಹಾಗೆ ಎಲ್ಲಾ ಕಡೆ ಹುಡುಕ್ತಾ ಇದ್ದೀಯಲ್ಲೆ ಎಂದೆ ನಾನು ಪ್ರೇಯಸಿಯತ್ತ.
ಮೂಗ್ಗೆ ಹಾಕ್ಕೊಳ್ಳೋದು ಹುಡುಕ್ತಾ ಇದ್ದೀನ್ರಿ. ಇಲ್ಲೇ ಇಟ್ಟಿದ್ದೆ, ಕಾಣ್ತಾ ಇಲ್ಲ ಎಂದು ಉಲಿದಳು ಕೋಗಿಲೆಯಂತೆ.
ಎಮ್ಮೆ ಬ್ರಾಂಡ್ ನಶ್ಯ ಏನೇ? ಅಲ್ಲೇ ಕಪಾಟಿನಲ್ಲಿತ್ತಲ್ಲಾ ಎಂದೆ.
ಥೂ, ಹೋಗ್ರಿ, ನಿಮಗ್ಯಾವಾಗಲೂ ತಮಾಷೇನೆ, ನನಗ್ಯಾಕೆ ನಶ್ಯ ಎಂದಳು ತನ್ನ ನವಿರಾದ ಬೆರಳುಗಳಿಂದ ಸಂಪಿಗೆ ಹೂವಿನಂತಹ ಮೂಗು ಒರೆಸಿಕೊಳ್ಳುತ್ತಾ.
ಅಲ್ಲವೇ ಥಂಡಿ ಆಗಿ ನಿನಗೆ ನೆಗಡಿಯಾಗಿ ನಗರದ ನಲ್ಲಿ ನೀರು ತೊಟ್ಟಿಕ್ಕೋ ಹಾಗಾಗಿತ್ತಲ್ಲ; ಅದಕ್ಕೇನಾದ್ರೂ ನಶ್ಯ ಬೇಕಿತ್ತೆ ಎಂದು ನೆನಪಿಸಿದೆ. ಗರ್ಮಾಗರಂ ಕಳ್ಳೆಕಾಯಿ ಬಾಯಿಗೆ ಹಾಕ್ಕೊತೀವಿ. ಬೇಕಾದ ಮಾತು ಕಿವಿ ಒಳಗೆ ಹಾಕ್ಕೋತಿವಿ ನಿಂದು ಯಾವುದಪ್ಪಾ ಮೂಗಿಗೆ ಹಾಕ್ಕೊಳ್ಳೋದು? ಹೋಗಲಿ ಬಿಡು. ನೀನು ಮೂಗು ಅಂದಾಗ ನನಗೆ ಜ್ಞಾಪಕ ಆಯ್ತು ನೋಡು….
ಏನು ಜ್ಞಾಪಕ ಆಯ್ತೋ, ಅಂಥ ವಿಚಾರ ನಿಮ್ಮ ಮೂಗಿಗೆ ಏನು ಹೊಳೀತೋ ಎಂದಳಾಕೆ.
ಮೂಗಿಗಲ್ಲವೇ ಹೊಳೆಯೋದು. ತಲೆ, ತಲೆಗೆ ಹೊಸ ಐಡಿಯಾ ಹೊಳೆಯೋದು ಕಣೇ. ಅದೇ ನಿನ್ನೆ ಗುರುವಾರ ಸಕಲೇಶಪುರದ ಸಂತೇಲಿ ನಮ್ಮನೆ ಪುಣ್ಯಕೋಟಿ ಹಸುಗೆ ಮೂಗಿಗೆ ಹಾಕ್ಕೊಳೋ ಮೂಗುದಾರ ತಂದಿದ್ನಲ್ಲಾ ಅದನ್ನ ನೀನೇನಾದ್ರೂ ಕಂಡ್ಯಾ? ಈಗ ಹುಡುಕ್ತಾ ಇದೀಯಲ್ಲಾ ಎಂದೆ.
ಅಯ್ಯೋ ಅದೇ, ಕಿರುಬೆರಳು ಗಾತ್ರದ ಬಿಳೀದಾರ. ನನ್ನ ಮೂಗಿನ ಯೋಚನೆ ನನಗೆ, ನಿಮ್ಮ ಹಸು ಮೂಗಿನ ಯೋಚನೆ ನಿಮಗೆ. ಆ ದಾರ ಕೊಟ್ಟಿಗೆ ಗೋಡೆಗೆ ಹಾಕಿರೋ ಗೂಟಕ್ಕೆ ನೀವೇ ನಿನ್ನೆ ನೇತು ಹಾಕಿದ್ದೀರಲ್ಲಾ ಎಂದು ಜ್ಞಾಪಿಸಿದಳು ಪ್ರಾಣಕಾಂತೆ.
ಥ್ಯಾಂಕ್ ಯು, ಥ್ಯಾಂಕ್ ಯು. ನಾನು ಮರೆತೇ ಬಿಟ್ಟಿದ್ದೆ. ನೀನು ಏನೋ ಹುಡುಕ್ತಾ ಇದ್ದೆಯಲ್ಲ. ಏನದು?
ಅದೇ ರೀ, ನನ್ನ ಮೂಗ್ಗೆ ಹಾಕ್ಕೊಳ್ತಿದ್ನಲ್ಲಾ……. ಜ್ಞಾಪಕಕ್ಕೇ ಬರವಲ್ದು ಎಂದಳು.
ಡಾಕ್ಟರ್ ನೆಗಡಿಗೆ ಕೊಟ್ಟಿದ್ದ, ಮೂಗಿಗೆ ಪಂಪ್ ಮಾಡಿಕೊಳ್ಳೊ ಸಾಧನ ಅಳವಡಿಸಿರೊ ಮೂಗಿನ ಔಷಧಿ ಬಾಟಲಿ ಏನೇ? ಎಂದೆ.
ಅಲ್ಲ ಕಣ್ರೀ ಎನ್ನುತಾ ಎದುರಿಗಿದ್ದ ಟೇಬಲ್ ಮೇಲೆಲ್ಲಾ ಕಣ್ಣಾಡಿಸಿದಳು. ಅಲ್ಲಿದ್ದಬದ್ದ ಪದಾರ್ಥ ಎಲ್ಲಾ ಕೆದಕಿದಳು.
ನಿನ್ನ ಮೂಗು ನೋಡಿದ್ರೆ ‘ನಾಸಾಕುಟ್ಮಳದಂತೆ ಮೆರೆವುದು ಉಜ್ಜಯಿನಿ ಪುರಂ’ ಎಂಬ ಕವಿ ಮಾತು ಜ್ಞಾಪಕ ಆಯ್ತು ನೋಡು.
ಅಯ್ಯೋ ನಿಮ್ಮ ಮೂಗಿನ ಕವಿತ್ವ ಸಾಕು, ನನ್ನ ಮೂಗಿನ ವಿಷಯಕ್ಕೆ ಬನ್ನಿ….
ನಿನ್ನ ಮೂಗು ಟ್ರಾಯ್ ನಗರದ ಹೆಲೆನ್ ಮೂಗಿನಂತಿದೆಯಲ್ಲೇ. ಅದು ಸರಿ. ಅದೇನೇ ಅದು ನಿನ್ನ ಎಡಗೈ ಮುಷ್ಟೀಲಿ ಏನೋ ಫಳ ಫಳ ಚಿನ್ನಾರಿ ಸುತ್ತಿದ ಮಿನಿ ಡಬ್ಬಿ ಬಿಗಿಯಾಗಿ ಹಿಡ್ಕೊಂಡಿದೀಯಲ್ಲೇ ಏನದು? ಎಂದೆ.
ಯಾವುದ್ರೀ ಎಂದು ತನ್ನ ಎಡಗೈ ಮುಷ್ಠಿ ಬಿಡಿಸಿ ನೋಡುತ್ತ ಅಯ್ಯೋ, ನಾನು ಹುಡುಕ್ತಾ ಇದ್ದದ್ದು ಇದೇ ಕಣ್ರೀ! ಮೂಗ್ಗೆ ಹಾಕ್ಕೊಳೋ ಚಿನ್ನದ ಮೂಗುಬಟ್ಟು, ಈ ಪುಟ್ಟ ಡಬ್ಬೀಲೆ ಇದೆಯಲ್ರೀ. ಮಗು ಕಂಕುಳಲ್ಲಿಟ್ಟುಕೊಂಡು ಊರೆಲ್ಲ ಹುಡುಕಿದ್ರು ಅನ್ನೊ ಗಾದೆ ಹಾಗೆ ಆಯ್ತಲ್ರೀ ಎಂದು ಮೂವತ್ತೆರಡು ಮೂಗು ಬಿಟ್ಕೊಂಡು…. ಸಾರಿ, ಸಾರಿ… ಮೂಗಲ್ಲ, ಮೂವತ್ತೆರಡು ಹಲ್ಲು ಬಿಟ್ಕೊಂಡು ನಕ್ಕಳು ಇಂಪಾಂಗಿ!