ರೀ
…. ರೀ…. ನೀವು ಸುಮ್ನಿದ್ದಿದ್ರೆ ಒಳ್ಳೇದೆ ಆಗ್ತಿತ್ತು ಎಂದಳು ಸುಂದರಿ ಪ್ರೇಮ.
ಯಾಕೆ? ಎಂದೆ.
ಜೋಯಿಸರ ಹತ್ತಿರ ಹೋಗಿ ನಿಮ್ಮ ಜಾತಕ ತೋರಿಸದೇ ಸುಮ್ನೆ ಇದ್ದಿದ್ರೆ ನೀವು ಹಾಯಾಗಿ ಇರ್ತಿದ್ರಿ. ಅವರು ನಿಮ್ಮ ಜಾತಕದಲ್ಲಿ ಗುರು ಮನೆಗೆ ಶನಿ ಬಂದಿದ್ದಾನೆ ಅಂದಕೂಡಲೇ ನೀವು ಪೆಚ್ಚಾಗಿ ಕೂಡಲೇ ಇಲ್ಲದ ನಿಮ್ಮ ತಲೆ ಕೆಡಿಸಿಕೊಂಡ್ರಿ. ಜೋಯಿಸರ ಹತ್ತಿರ ಹೋಗದೆ ಸುಮ್ಮನೆ ಇದ್ದಿದ್ರೆ ನಿಮಗೆ ಏನೂ ಆಗ್ತಿರಲಿಲ್ಲ. ಕೆಲಸದಿಂದ ನಿವೃತ್ತಿ ಆದ ಮೇಲೆ ಇನ್ಕ್ರಿಮೆಂಟೂ ಇಲ, ಪ್ರೊಮೋಷನ್ನೂ ಇಲ್ಲ. ಮತ್ತೆ ಯಾವ ಗ್ರಹಗಳೂ ಹತ್ತಿರ ಬರೋಲ್ಲ. ತಿಳ್ಳೊಳ್ಳಿ ಎಂದು ಗೃಹದಲ್ಲಿ ಗ್ರಹಗತಿ ಅಲ್ಲಾಡಿಸಿದಳು ಮಡದಿ.
ಇವತ್ತಿನ ದಿನಪತ್ರಿಕೆ ನೋಡಿದಿಯಾ? ಎಂದು ಸುಮ್ಮನಿರಲಾರದೆ ಕೇಳಿದೆ.
ಓಹೋ ಓದಿದೆ. ವಿದೇಶಿ ವಿನಿಮಯ ಮಾರುಕಟ್ಟೇಲಿ ಅಮೆರಿಕ ಡಾಲರ್ ಎದುರು ರೂಪಾಯಿ ಕುಸಿದಿದೆ.
ರೂಪಾಯಿ ಬಿದ್ದು ಹೋಯ್ತಲ್ಲೇ ಎಂದು ಸೊರಗಿದೆ.
ಡಾಲರ್ ಜೊತೆ ಹೋಲಿಸದೇ ಸುಮ್ನಿದ್ದಿದ್ರೆ ಮಾರ್ಕೆಟ್ಟಲ್ಲಿ ಕರಡಿ, ಗೂಳಿಗಳೂ ಸಹ ಮೆಲುಕು ಹಾಕ್ತಾ ಸುಮ್ಮನಿರುತ್ತವೆ.
ಎಲೆಲೆಲೆ….. ಇದು ನನಗೆ ಹೊಳೀಲೇ ಇಲ್ಲವಲ್ಲೇ ಎಂದೆ.
ಮೊನ್ನೆ ನಿಮ್ಮ ತಾಯಿ ಮೋಟಮ್ನೋರು ಮಾರ್ಕೆಟ್ಟಿಗೆ ಹೋಗದೇ ಮನೇಲೆ ಸುಮ್ನಿದ್ದಿದ್ರೆ ನಿಮಗೇ ಹತ್ತುಸಾವಿರ ರೂಪಾಯಿ ಉಳೀತಿತ್ತು ಕಣ್ರೀ ಎಂದಳು ಇಂಪಾಂಗಿ.
ಅದು ಹೇಗೆ ಸುಮ್ನಿದ್ರೆ ಒಳ್ಳೇದು ಅಂತೀಯ? ಎಂದು ವಿವರ ಕೇಳಿದೆ.
ಅಲ್ರೀ ಮೊನ್ನೆ ಬೀದೀಲಿ ಹೋಗ್ತಾ ಸುಮ್ಮನಿರೋದು ಬಿಟ್ಟು, ನಿಮ್ಮ ತಾಯಿ, ಯಾವುದೋ ಎದುರು ಬಂದ ಗೊತ್ತಿಲ್ಲದ ಹಸೂನ (ಅದರ ಏಙಅ ಗೊತ್ತಿಲ್ಲದ!) ಪುಣ್ಯಕೋಟಿ ಅಂತ ಕೈ ಮುಗಿದು ಅದನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳೋಕೆ ಹೋದಾಗ ಅದು ಮಾರ್ಕೆಟ್ ಬುಲ್ಲೀ ಹಾಗೆ ತನ್ನ ಚೂಪುಕೋಡು ಅಲ್ಲಾಡಿಸುತ್ತಾ ತಿವಿಯಲಿಕ್ಕೆ ಬಂದಾಗ ಇವರು ಹೆದರಿ ಹಿಂದಕ್ಕೆ ಬಂದು ಹಳ್ಳದಲ್ಲಿ ಬಿದ್ದಾಗ ಕೈ ಮೂಳೆ ಮುರ್ಕೊಂಡು ಆಸ್ಪತ್ರೆ ಸೇರಿ ನಿಮಗೆ ಹತ್ತುಸಾವಿರ ರೂಪಾಯಿ ಖರ್ಚಿಗೆ ದಾರಿ ಮಾಡಲಿಲ್ಲವೆ? ಅವರು ಹಸು ಮುಟ್ಟದೆ ಸುಮ್ನೆ ಇದ್ದಿದ್ರೆ ನಿಮ್ಮ ಜೇಬಿಂದ ರೂಪಾಯಿ ಕುಸೀತ ಇರಲಿಲ್ಲ. ಒಳ್ಳೇದೇ ಆಗ್ತಿತ್ತು ಅಲ್ಲವೇನ್ರೀ?
ಹೌದು ಹೌದು ಎಂದು ಹಸುವಿನಂತೆ ಗೋಣಾಡಿಸುತ್ತ ಹೆಂಡ್ತಿ ಮಾತು ಕೇಳ್ಕೊಂಡು ಹಾಯಾಗಿ ಸುಮ್ಮನಿದ್ದೀನಿ.
ಈಗ ನಿಮಗೊಂದು ಗುಟ್ಟಿನ ವಿಷಯ. ಸುಮ್ಮನಿರಲಾರದೇ ಹೇಳ್ತೀನಿ ಕೇಳಿ. ಪಕ್ಕದ ಮನೆ ಸುಂದರಿ ಇತ್ತೀಚೆಗೆ ಹೊಸ ಗದ್ವಾಲ್ ಸೀರೆ ತಂದಿದ್ದಾರೆ, ನನಗಂತೂ ಬಹಳ ಸೊಗಸಾಗಿ ಕಂಡಿತು. ನಾನು ಈಗ ಆ ಸೀರೆ ವಿಷಯ ನನ್ನ ಹೆಂಡತಿಗೆ ಹೇಳದೆ ಸುಮ್ಮನಿದ್ದೀನಿ, ಸುಮ್ಮನಿದ್ರೆ ಒಳ್ಳೇದೆ. ಇಲ್ಲದಿದ್ರೆ ನನ್ನ ಜೇಬಿಗೇ ಕತ್ತರಿ ಗ್ಯಾರಂಟಿ!
ತಾವೇನಂತೀರಿ? ಸುಮ್ನಿದ್ರೆ ಒಳ್ಳೇದೆ ಅಲ್ಲವೇ!
ಇದನ್ನೋದಿದ್ಮೇಲೆ ನಾನೂ ಸುಮ್ನಿರ್ತೀನಿ.