
ನನಗೆ ಅರಿವಿಲ್ಲದೆಯೇ ಎಲ್ಲ ನಡೆದುಹೋಗುತ್ತಿದೆ. ‘ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲುತ್ತೀಯಾ?’ ಎಂದು ಕೂಡಾ ನನ್ನನ್ನು ಯಾರೂ ಕೇಳಲಿಲ್ಲ; ‘ಕೋವಿಂದ್‌ಜೀ, ನೀವು ‘ರಾಷ್ಟ್ರಪತಿ ಅಭ್ಯರ್ಥಿ’ ಎಂದು ಧುತ್ತನೆ ದೆಹಲಿಯಿಂದ ಯಾರೋ ಫೋನ್ ಮಾಡಿ ಹೇಳಿದರು. ನನಗೆ ಫೋನ್ ಮಾಡಿದವರು ಯಾರೆಂದು ದೆಹಲಿಗೆ ಬಂದಾಗ ಕೇಳಿದ್ದಕ್ಕೆ ’ಹೌದು, ನಿಮಗೆ ಯಾರು ಫೋನ್ ಮಾಡಿದವರು?’ ಎಂದು ಎಲ್ಲರೂ ನನ್ನನ್ನೇ ಕೇಳಿದರು.
ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರ ಕೊಡಲು ಪ್ರಣವ್ ಮುಖರ್ಜಿ ಅವರಲ್ಲಿಗೆ ಹೋದಾಗ ಅವರೂ ಆಶ್ಚರ್ಯಗೊಂಡರು. “ನನಗೆ ಫೋನ್ ಕರೆ ಬರಬಹುದೆಂದು ನಾನು ನಿರೀಕ್ಷಿಸಿದ್ದೆ, ಆದರೆ ನಿಮಗೆ ಫೋನ್ ಬಂದಿತಲ್ಲ!” ಎಂದರು ಅವರು ಅಚ್ಚರಿಯಿಂದ.
ಅವರ ಮಾತು ಕೇಳಿ ನನಗೂ ಅಚ್ಚರಿಯೇ ಆಯಿತು.
“ಹೌದು ಕೋವಿಂದ್‌ಜೀ! ಇನ್ನು ಐದು ವರುಷವೂ ನೀವೇ ‘ರಾಷ್ಟ್ರಪತಿಯಾಗಿರುತ್ತೀರಿ ಪ್ರಣವ್‌ಜೀ ಎಂದು ಮೋದಿಯವರಿಂದ ಫೋನ್ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆ” ಎಂದರು ಅವರು.
“ತಾವು ಹಾಗೇಕೆ ಅಂದುಕೊಂಡಿದ್ದೀರಿ ಪ್ರಣವ್‌ಜೀ? ಹೇಳಿಕೇಳಿ ತಾವು ಸೋನಿಯಾರ ಕಡೆಯಿಂದ ಬಂದವರಲ್ಲವೇ?”
“ಇರಬಹುದು ಕೋವಿಂದ್‌ಜೀ. ಆದರೆ ಕಳೆದ ಐದು ವರ್ಷಗಳಲ್ಲಿ ನನಗೆ ಸೋನಿಯಾರಿಗಿಂತ ಮೋದಿಯವರೇ ಹೆಚ್ಚು ಸಲ ಫೋನ್ ಮಾಡಿದವರು. ಆದ್ದರಿಂದ ನಾನು ಹಾಗೆ ಭಾವಿಸಿದ್ದೆ.”
ನನ್ನ ರಾಜೀನಾಮೆ ಪತ್ರಕ್ಕೆ ಸಮ್ಮತಿಯ ಸಹಿ ಹಾಕುವಾಗ ಪ್ರಣವ್‌ಜೀ ಭಾವುಕರಾದರು.
“ನಿಮ್ಮನ್ನು ರಾಜ್ಯಪಾಲರನ್ನಾಗಿ ನೇಮಿಸಿದ್ದುದು ನಾನೇ. ಈಗ ನಿಮ್ಮ ರಾಜೀನಾಮೆ ಪತ್ರಕ್ಕೂ ನಾನೇ ಸಹಿ ಹಾಕಬೇಕಾಗಿದೆ. ಈ ಜೀವನವೆಲ್ಲ ವಿಚಿತ್ರವೆನಿಸುತ್ತಿದೆ ಕೋವಿಂದ್‌ಜೀ.”
“ಇದರಲ್ಲಿ ವಿಚಿತ್ರ ಏನು ಬಂತು ಪ್ರಣವ್‌ಜೀ? ರಾಜ್ಯಪಾಲರುಗಳ ನೇಮಕಕ್ಕೂ ನಿವೃತ್ತಿಗೂ ಸಹಿ ಮಾಡಬೇಕಾದವರು ‘ರಾಷ್ಟ್ರಪತಿಗಳೇ ತಾನೇ.”
“ಅದಲ್ಲ ನಾನು ಹೇಳುತ್ತಿರುವುದು. ನನ್ನ ಪದವಿಯನ್ನು ನಿಮಗೆ ಹಸ್ತಾಂತರಿಸುವುದಕ್ಕಾಗಿ ನಾನು ನಿಮ್ಮ ರಾಜೀನಾಮೆ ಪತ್ರಕ್ಕೆ ಸಹಿ ಮಾಡುತ್ತಿದ್ದೇನಲ್ಲ! ಜೀವನವೆಂಬುದು ನಿಜಕ್ಕೂ ಸೌಂದರ್ಯಮಯ.”
ಅವರ ಈ ಮಾತೂ ನನಗೆ ಅಚ್ಚರಿಯನ್ನುಂಟುಮಾಡಿತು.
“ನೀವು ಎರಡು ಬಗೆಯಾಗಿ ಮಾತಾಡುತ್ತಿದ್ದೀರಲ್ಲ ಪ್ರಣವ್‌ಜೀ? ಒಂದು ಕಡೆ ಜೀವನ ವಿಚಿತ್ರವೆನ್ನುತ್ತಿದ್ದೀರಿ. ಇನ್ನೊಂದುಕಡೆ ಜೀವನ ಸೌಂದರ್ಯಮಯ ಎನ್ನುತ್ತಿದ್ದೀರಿ!” ಎಂದೆ ನಾನು.
“ವೈಚಿತ್ರ್ಯ ತುಂಬಿರುವುದೇ ಜೀವನದ ಸೌಂದರ್ಯ ಕೋವಿಂದ್‌ಜೀ!” ಎಂದು ಪ್ರಣವ್‌ಜೀ ವಿಚಿತ್ರವಾಗಿಯೋ ಸುಂದರವಾಗಿಯೋ ಮುಗುಳ್ನಕ್ಕರು. ಆದರೆ ಆ ಮುಗುಳ್ನಗೆಯಲ್ಲಿ ಪ್ರಣವ್‌ಜೀ ಇರಲಿಲ್ಲ, ‘ರಾಷ್ಟ್ರಪತಿಗಳೂ ಇರಲಿಲ್ಲ. ಯಾರದೋ ಹೋಲಿಕೆ ಇದ್ದಿತಷ್ಟೆ. ಬಹುಶಃ ನಾನು ಇನ್ನು ಐದು ವರ್ಷ ಆದ ಮೇಲೆ ಇಂಥದೇ ಮುಗುಳ್ನಗೆ ನಗಬೇಕಾದೀತೇನೋ – ಜೀವನ ಸೌಂದರ್ಯಮಯ ಎಂದುಕೊಳ್ಳುತ್ತಾ!
ಜುಲೈ ೧೭ಕ್ಕೆ ಸಂಸತ್ತಿನ ಮಳೆಗಾಲ ಅಧಿವೇಶನ ಶುರುವಾಗುತ್ತದೆ. ಅಂದೇ ‘ರಾಷ್ಟ್ರಪತಿಯ ಚುನಾವಣೆ. ತುಂಬಾ ಸಂಭ್ರಮವೇನಿಲ್ಲ. ಮೊದಲು ಗೆದ್ದು ಅನಂತರ ಚುನಾವಣೆ ನಡೆಸುವಂತೆ ಇರುತ್ತದೆ ‘ರಾಷ್ಟ್ರಪತಿಯ ಆಯ್ಕೆ. ಆದರೆ ನನ್ನಲ್ಲಿ ’ಕಿಕ್’ ಉಂಟುಮಾಡುತ್ತಿರುವ ಸಂಗತಿ ಬೇರೆಯೇ ಇದೆ. ಆವತ್ತು ನನಗೆ ದೆಹಲಿಯಿಂದ ಫೋನ್ ಮಾಡಿದವರು ಯಾರು? ಅದನ್ನು ತಿಳಿದುಕೊಳ್ಳಬೇಕೆಂದಿದೆ.
– ಮಾಧವ್ ಸಿಂಗರಾಜು.
ಕೃಪೆ: ’ಸಾಕ್ಷಿ’ ತೆಲುಗು ದೈನಿಕ.