ಚಿನ್ನ, ರನ್ನ, ಹವಳ, ಗೋಮೇಧಿಕ, ವಜ್ರ, ಪಚ್ಚೆ, ಅವೆಲ್ಲ ನಿನ್ನ ಮುಂದೆ ಕಸ ಅಲ್ವಾ?
ನೀನ್ಯಾಕೆ ಹೀಗೆ ಮಾಡಿದೆ ಪದ್ದೀ? ನಾನೇನು ತಪ್ಪು ಮಾಡಿದೆ ಅಂತ ನನಗೀ ಶಿಕ್ಷೆ? ನೀನು ಕೇಳಿದ ಸಿನಿಮಾಗೆ ಕರೆದುಕೊಂಡು ಹೋಗಲಿಲ್ಲವೇ? ನೀನು ಕೇಳಿದ ಸೀರೆಯನ್ನು ಕೊಡಿಸಲಿಲ್ಲವೇ? ನೀನು ಕೇಳಿದ ಚುರುಮುರಿ, ಪಾನಿಪುರಿ, ಮಸಾಲೆಪುರಿಗಳನ್ನು ಕೊಡಿಸಿದೆನೋ ಇಲ್ಲವೋ? ಮತ್ಯಾಕೆ ಹೀಗೆ ಮಾಡಿದೆ? ಇದು ನಿನಗೆ ನ್ಯಾಯವೇ? ಹೋದೋಳು ಹೋದೆ, ಒಂದು ದಿನ ಸರಿ, ಎರಡು ದಿನ ಸರಿ; ಒಂದು ತಿಂಗಳು ನನ್ನನ್ನು ಬಿಟ್ಟುಹೋಗಿ ಅನಾಥನನ್ನಾಗಿ ಮಾಡಿಬಿಟ್ಟೆಯಲ್ಲ ಪದ್ದಿ. ಸಾರಿ, ಅನಾಥ ಅಲ್ಲ ಅ`ನಾಥೆ’. ಅಯ್ಯೋ, ಅದು ಸ್ತ್ರೀಲಿಂಗ ಆಗಿಹೋಯ್ತು. ಮತ್ತೆ? ಏನೋ ಒಂದು. ಒಟ್ಟಿನಲ್ಲಿ ನನಗೆ ನೀನಿಲ್ಲ ಅಷ್ಟೆ.
ರೇಡಿಯೋ ಹಾಕಿದರೆ ಅಲ್ಲೂ ಕೇಳೋದು ಒಂದೇ ಹಾಡು ‘ನೀನಿಲ್ಲದೇ ನನಗೇನಿದೆ?’. ನನಗೇನಿದೆ ಪದ್ದೀ? ಸೊನ್ನೆ, ಬರೀ ಸೊನ್ನೆ. ನೀ ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ. ನೀ ಹತ್ತಿರ ಇದ್ದರೆ ನಾನು ಒಬ್ಬ ಸಿಪಾಯಿ. ನರಸಿಂಹಸ್ವಾಮಿಗಳು ಹೇಳಿದ್ದು ನನ್ನಂಥವರಿಗೇ ತಾನೇ? ಆದರೆ, ನೀನಿಲ್ಲದೆ ನಾನೊಬ್ಬ ಭಿಕಾರಿಯಾಗಿಬಿಟ್ಟಿದ್ದೇನೆ.
ಮೊನ್ನೆ ಹಾಲಿನವಳು ಬಂದಳು. ಪಾತ್ರೆ ತಗೊಂಡು ಹೊಸಿಲು ದಾಟಿ ಹೋದೆ. ‘ಅಮ್ಮಾವ್ರಿಲ್ಲವ್ರಾ?’ ಅಂದಳು. ‘ಇಲ್ಲ’ ಅಂದೆ. ಕಿಸಕ್ ಅಂದಳು. ನನ್ನ ಮುಖಾನೇ ನೋಡ್ತಾ ಹಾಲು ಸುರಿದಳು. ಅವಳು ಹೋದಮೇಲೆ ನೋಡಿಕೊಂಡೆ; ಹಾಲು ನೀರು ನೀರು. ಪದ್ದೀ, ನನ್ನ ಗೋಳನ್ನ ಯಾರ ಹತ್ತಿರ ಹೇಳಿಕೊಳ್ಳಲಿ?
ಬೆಳಗ್ಗೆ ಎದ್ದು ನನ್ನ ಕೈಯಿಂದ ಮಾಡಿಕೊಂಡು ಕುಡಿದ ಕಾಫಿ ನನಗೆ ಎಂದಿಗೂ ಕಹಿಯೇ. ತಿಂಡಿ ಏನು ಮಾಡೋದು? ನನಗೆ ನೀನು ಹೇಳಿಕೊಟ್ಟಿರೋದು ಉಪ್ಪಿಟ್ಟೊಂದೇ. ಅದನ್ನೇ ಮಾಡೋಣ ಅಂತ ಈರುಳ್ಳಿ ಹಚ್ಚಲು ಮಣೆ ಚಾಕು ತಗೊಂಡೆ. ಬೇರೆಯೋರು ಹಾಲು ಕರೆಯೋಕೆ ಹೋದರೆ ಹಸು ಒದೆಯೋ ತರಹ, ನಾನು ಈರುಳ್ಳಿ ಹೆಚ್ಚೋಕೆ ಹೋದಾಗ ನನ್ನ ಕೈನೇ ಆ ಚಾಕು ಹೆಚ್ಚಿತು. ನೀನಿದ್ದಿದ್ದರೆ ‘ಏನಾಯ್ತ್ರೀ?’ ಅಂತ ಗಾಬರಿಯಿಂದ ನನ್ನ ಕೈ ಹಿಡಿದು ಬೆರಳಿಗೆ ಅರಿಶಿನ ಹಚ್ಚಿ ಹಳೇ ಸೀರೆಯ ಸೆರಗನ್ನು ಹರಿದು ನನ್ನ ಕೈಗೆ ಸುತ್ತುತ್ತಿದ್ದೆ. ಆದರೆ, ನನಗೀಗ ಅರಿಶಿನ ಹಚ್ಚುವವರಾರು, ಬ್ಯಾಂಡೇಜ್ ಕಟ್ಟುವರಾರು ಪದ್ದೀ? ನನ್ನ ಈ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಬಲ್ಲೆಯಾ? ಸಾಧ್ಯವಾದರೆ ದಯವಿಟ್ಟು ನಿನ್ನ ದೂರದೃಷ್ಟಿಯನ್ನು ನನ್ನತ್ತ ಬೀರ್ತೀಯಾ? ಕ್ಯಾಂಟೀನ್ ಇದ್ದೇ ಇದೆಯಲ್ಲ ಅಂತಂದುಕೊಂಡು ಉಪ್ಪಿಟ್ಟಿನ ಕೆಲಸವನ್ನು ಅಲ್ಲಿಗೇ ಸ್ಥಗಿತಗೊಳಿಸಿದೆ.
ಅಷ್ಟರಲ್ಲಿ ಕೆಲಸದ ಮುದುಕಿ ಬಂದಳು. ಜೊತೆಯಲ್ಲಿ ಅವಳ ಮಗಳನ್ನೂ ಕರೆದುಕೊಂಡು ಬಂದಳು. ಮಗಳು ನನ್ನ ರೂಮಲ್ಲಿ ಕಸ ಗುಡಿಸ್ತಾ ಇದ್ದರೆ, ಮುದುಕಿ ಬಚ್ಚಲಲ್ಲಿ ಪಾತ್ರೆ ತೊಳೀತಾ ಇದ್ದಳು. ನಾನು ಮಗಳನ್ನ ನೋಡಲಾ, ಮುದುಕೀನ ನೋಡಲಾ? ನಿರ್ಧಾರ ತೊಗೊಳ್ಳೋಕಾಗದೆ ಹಾಲಲ್ಲಿ ಸುಮ್ಮನೆ ಕೂತುಬಿಟ್ಟೆ, ಗೂಬೆ ತರಹ. ಕೆಲಸ ಮುಗಿಸಿ ಹೋಗುವಾಗ ಮುದುಕಿಗೆ ಹೇಳಿದೆ ‘ನಿಂಗಮ್ಮ, ನಾಳೆಯಿಂದ ನಿನ್ನ ಮಗಳನ್ನ ಕರಕೊಂಡುಬರಬೇಡ’ ಅಂತ. ಅಷ್ಟಕ್ಕೇ ಆ ಮುದುಕಿಗೆ ಕೋಪ. ಕೇಳೇಬಿಟ್ಟಳು ‘ನನ್ನ ಮಗಳು ಏನಾಗವ್ಳೇ ಸ್ವಾಮೀ?’ ಅಂತ. ನಾನೇನು ಹೇಳಲಿ? ‘ಚೆನ್ನಾಗಿದ್ದಾಳೆ’ ಅಂತ ಹೇಳಿದರೆ (ತುಂಬಾ ಲಕ್ಷಣವಾಗಿದ್ದಾಳೆ ಕಣೇ ಅವಳು!) ‘ಮತ್ಯಾಕೆ ಬೇಡ ಅಂತೀರಾ?’ ಅಂತ ನನ್ನನ್ನೇ ಕೇಳ್ತಾಳೆ. ‘ಚೆನ್ನಾಗಿಲ್ಲ’ ಅಂತ ಹೇಳಿದರೆ ಮುದುಕಿ ನನ್ನನ್ನ ಸುಮ್ಮನೆ ಬಿಡ್ತಿದ್ದಳಾ? ಅಯ್ಯೋ ಪದ್ದೀ, ನನ್ನನ್ನ ಎಂತಹ ಸಂದಿಗ್ಧಸ್ಥಿತಿಗೆ ತಂದು ನಿಲ್ಲಿಸಿಬಿಟ್ಟೆಯಲ್ಲೇ? ನನ್ನ ಜಾಗದಲ್ಲಿ ನೀನಿದ್ದಿದ್ದರೆ ಚಾಲಾಕಿತನದಿಂದ ಪರಿಸ್ಥಿತಿಯನ್ನು ಹೇಗೋ ನಿಭಾಯಿಸಿಬಿಡ್ತಿದ್ದೆ. ನನಗೆ, ದೇವರಾಣೆಗೂ ಆ ಶಕ್ತಿ ಇಲ್ಲ ಕಣೇ. ನಾನು ಶತಮೂರ್ಖ.
ಒಂದು ಕಾಗದಾನಾದರೂ ಬರೆಯೋಣ ಅಂತ ಅನ್ನಿಸಿ ಬರೀತಾ ಕೂತಿದ್ದೀನಿ. ನನಗೆ ಗೊತ್ತು. ಈ ಕಾಗದ ನಿನ್ನ ಕೈಸೇರಿದ ಕೂಡಲೇ ನೀನು ಸುತ್ತ ಮುತ್ತ ನೋಡಿ, ಯಾರೂ ನೋಡ್ತಾ ಇಲ್ಲ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡು ಅದಕ್ಕೊಂದು ಮುತ್ತು ಕೊಡ್ತೀಯ. ಆಮೇಲೆ, ಅದನ್ನ ಬೆನ್ನಹಿಂದೆ ಮುಚ್ಚಿಟ್ಟುಕೊಂಡು ರೂಮಿಗೆ ಓಡಿ ಬಾಗಿಲು ಹಾಕ್ಕೋತೀಯ. ಹಾಸಿಗೆ ಮೇಲೆ ಬೋರಲಾಗಿ ಬಿದ್ದುಕೊಳ್ತೀಯ. ರೈಟ್? ಮೆಲ್ಲಗೆ ಕವರ್ನ ಒಡೀತೀಯ. ಕಾಲುಗಳೆರಡನ್ನೂ ಭೂಮಿಗೆ ಲಂಬವಾಗಿ ಮಾಡಿಕೊಂಡು ಹಿಂದಕ್ಕೆ ಮುಂದಕ್ಕೆ ಆಡಿಸುತ್ತಾ ನಿಧಾನವಾಗಿ ಓದೋಕೆ ಶುರು ಮಾಡ್ತೀಯ. ‘ನನ್ನ ಪ್ರೀತಿಯ-ಗೀತಿಯ’ ಅಂತೇನೂ ಇಲ್ಲದೇ ಬರೀ ‘ಪದ್ದೀ’ ಅನ್ನೋದನ್ನ ನೋಡಿ ನೀನು ಕೋಪ ಮಾಡಿಕೊಳ್ಳೋಷ್ಟರಲ್ಲಿ ಅದರ ಮುಂದಿನ ಸಾಲನ್ನೂ ಓದಿರ್ತೀಯ. ನಿನಗೇ ಡೌಟ್ ಬರತ್ತೆ, ಕೋಪ ಮಾಡಿಕೋಬೇಕೋ ಬೇಡವೋ ಅಂತ. ಮುಂದೆ ಓದ್ತಿದ್ದ ಹಾಗೆ ಮಾಡಿಕೋಬೇಕು ಅಂತಿದ್ದ ಕೋಪವೆಲ್ಲಾ ಆರತಿತಟ್ಟೆಯಲ್ಲಿನ ಕರ್ಪೂರದಂತೆ ಕರಗಿಹೋಗುತ್ತದೆ. ಆಮೇಲೆ ನಿನಗೆ ನೀನೇ ಕೇಳಿಕೋತೀಯ ‘ನಾನು ಮಾಡಿದ್ದು ನ್ಯಾಯವೇ?’ ಅಂತ ಪ್ರಶ್ನೆ ಹಾಕ್ಕೊಂಡು ನಿನಗೆ ನೀನೇ ಉತ್ತರವನ್ನೂ ಕೊಟ್ಟುಕೊಳ್ತೀಯ. ಖಂಡಿತ ನಿನಗೇ ಅನ್ನಿಸುತ್ತೆ ನಾನೊಬ್ಬ ಅನಾಥ ಅಲ್ಲಲ್ಲ, ಅ`ನಾಥೆ’. ಗೊಂದಲ, ಆಶ್ಚರ್ಯ. ಅಂದರೆ, ನೀನೂ ರೇಡಿಯೋ ಹಾಕ್ತೀಯ. ಕಾಕತಾಳೀಯ ಅನ್ನೋ ಹಾಗೆ ನಿನ್ನ ರೇಡಿಯೋನಲ್ಲೂ ಅದೇ ಹಾಡು ‘ನೀನಿಲ್ಲದೇ ನನಗೇನಿದೇ?’ ಆ ಹಾಡನ್ನ ಕೇಳ್ತಿದ್ದ ಹಾಗೇ ನಿನ್ನ ಹೃದಯ ಕೂಡಾ ತಳಮಳಿಸಿ ಹೋಗುತ್ತೆ. ಹೌದೋ ಅಲ್ಲವೋ ಪದ್ದೀ? ಹಾಲಿನವಳಿಂದ ನೀರುಹಾಲನ್ನು ಹಾಕಿಸಿಕೊಂಡದ್ದು, ಕೆಲಸದ ಮುದುಕಿಯೊಡನೆ ಏಗಿದ್ದು, ಉಪ್ಪಿಟ್ಟು ಮಾಡಲು ಹೋಗಿ ಕೈ ಹೆಚ್ಚಿಕೊಂಡದ್ದು ಇವನ್ನೆಲ್ಲ ಓದುತ್ತ ಓದುತ್ತ ಉಲ್ಟಾ ಪೆಂಡುಲಮ್ನಂತೆ ಆಡುತ್ತಿದ್ದ ನಿನ್ನ ಕಾಲುಗಳು ಸೋತು ತೆಪ್ಪಗೆ ಮಲಗಿಬಿಡುತ್ತವೆ, ಉತ್ಸಾಹದ ಬುಗ್ಗೆಯಾಗಿದ್ದ ನಿನ್ನ ಮುಖ ಸೊರಗಿದ ಕಮಲವಾಗಿಬಿಡುತ್ತೆ, ಕತ್ತಿಯ ಅಂಚಿನಂತಿದ್ದ ನಿನ್ನ ಕಣ್ಣುಗಳು ಕಣ್ಣೀರ ಕೊಳಗಳಾಗಿ ಬಿಡುತ್ತವೆ ಅಂತ ನನಗೆ ಗೊತ್ತು ಪದ್ದಿ.
ಹಾಂ, ಒಂದು ವಿಷಯ ಹೇಳೋಕೆ ಮರೆತಿದ್ದೆ. ಹಿಂದಿನ ರಸ್ತೆಯ ಗೋಪಾಲಯ್ಯನೋರ ಮಗಳು, ಅದೇ, ಮೀನಾಕ್ಷಿಯೋ ಕಾಮಾಕ್ಷಿಯೋ, ಅದೇ ನಿನ್ನ ಹತ್ತಿರ ರಂಗೋಲಿ ಹೇಳಿಸಿಕೊಳ್ಳೋಕೆ ಬರ್ತಿದ್ದಳಲ್ಲೇ, ಅದೇ ಕಣೇ ಬಟ್ಟಲು ಗಣ್ಣಿನ ಚೂಟಿ ಹುಡುಗಿ, ಅವಳಿಗೆ ಕೆಮಿಸ್ಟ್ರಿ ಹೇಳಿಕೊಡಬೇಕಂತೆ. ಹಾಗಂತ ಅವರಪ್ಪ ನಮ್ಮ ಮನೇಗೆ ಬಂದು ಕೇಳಿಕೊಂಡರು ಪಾಪ. ‘ಆಗಲ್ಲ’ ಅಂತ ಹೇಳೋಕೆ ಮನಸ್ಸು ಬರಲಿಲ್ಲ. ಹಾಗಾಗಿ ನಾಳೆಯಿಂದ ಸಾಯಂಕಾಲ ಒಂದು ಗಂಟೆ ಮಟ್ಟಿಗೆ ಕೆಮಿಸ್ಟ್ರಿ ಹೇಳಿಕೊಡೋಕೆ ಒಪ್ಪಿಕೊಂಡೆ. ಇನ್ನೇನು ಮಾಡಲೀ? ಬೇರೆ ದಾರೀನೇ ಇಲ್ವಲ್ಲಾ!
ನೀನು ಪಾಪ, ತವರು ಮನೇಲಿ ಹಾಯಾಗಿ ಒಂದೆರಡು ತಿಂಗಳು ಇರಬೇಕೂಂತ ಹೋಗಿದ್ದೀಯ. ನಿನ್ನ ಸಂತೋಷವೇ ನನ್ನ ಸಂತೋಷ. ನೀನು ಹಾಯಾಗಿದ್ದರೆ ನಾನೂ ಹಾಯಾಗಿರ್ತೀನಿ. ನನಗೆ ಸ್ವಲ್ಪ ಕಷ್ಟ ಆಗುತ್ತೆ ನಿಜ. ಆದರೆ, ನಿನಗಾಗಿ ಅಷ್ಟು ಕಷ್ಟವನ್ನೂ ಸಹಿಸಿಕೊಳ್ಳಲಾಗದಿದ್ದರೆ ನಾನೆಂಥ ಗಂಡ ಹೇಳು.
ರೀಫಿಲ್ಲಲ್ಲಿ ಇಂಕ್ ಮುಗೀತಾ ಬರ್ತಿದೆ. ಹಾಗಾಗಿ ಇಲ್ಲಿಗೆ ನನ್ನ ಪತ್ರವನ್ನ ಮುಗಿಸ್ತಾ ಇದೀನಿ. ಬೈ.
ಇಂತೀ,
ನಿನ್ನ ಶಿಸ್ತಿನ ಸಿಪಾಯಿ
‘ಗೌತಮ’