ಮೊಬೈಲ್ ರಿಂಗ್ ಆಯಿತು. ನೊಡಿದರೆ ಯಾವುದೋ ಹೊಸ ನಂಬರ್. ಕಾಲ್ ರಿಸೀವ್ ಮಾಡಿದೆ.
‘ನೀವು ಸುಮಾ ತಾನೆ?’ ಎಂದು ಉಲಿಯಿತು ಅತ್ತ ಕಡೆಯಿಂದ ಒಂದು ಹೆಣ್ಣು ಧ್ವನಿ.
‘ಹೌದು, ತಾವು ಯಾರೆಂದು ತಿಳಿಯಲಿಲ್ಲ?’ ಎಂದು ಪ್ರಶ್ನಿಸಿದೆ.
‘ಮೇಡಂ, ಮೊನ್ನೆ ನೀವು ದಾವಣಗೆರೆಯ ಮಾಲ್ಗೆ ಭೇಟಿ ನೀಡಿದ್ದಿರಲ್ಲ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಕೂಪನ್ನಲ್ಲಿ ಬರೆಸಿಕೊಂಡಿದ್ದು ನೆನಪಿದೆ ತಾನೆ? ತಿಂಗಳಿಗೊಮ್ಮೆ ನಾವು ಖರೀದಿ ಮಾಡಿದ ಕಸ್ಟಮರ್ಸ್ಗಳಲ್ಲಿ ಐದು ಜನ ಅದೃಷ್ಟಶಾಲಿಗಳನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡುತ್ತೇವೆ, ಈ ತಿಂಗಳು ಆ ಐದು ನಂಬರ್ಗಳಲ್ಲಿ ನಿಮ್ಮದೂ ಒಂದು. ಎರಡು ಕಿಚನ್ ಐಟಮ್ಸ್ಗಳ ಬಹುಮಾನ ಬಂದಿದೆ, ಒಂದು ವಾರದೊಳಗೆ ಬಂದು ದಯವಿಟ್ಟು ಕಲೆಕ್ಟ್ ಮಾಡಿಕೊಂಡು ಹೋಗಿ’ ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಳು.
ಸುಮ್ಮನೆ ತಿರುಗಾಡಲೆಂದು ಹೋಗಿದ್ದ ಮಾಲ್ನಲ್ಲಿ ಇಪ್ಪತ್ತು ರೂಪಾಯಿಯ ಒಂದು ಡಬ್ಬಿ ಬಿಟ್ಟರೆ ಮತ್ತೇನೂ ಖರೀದಿಸಿರಲಿಲ್ಲ. ಇಪ್ಪತ್ತು ರೂಪಾಯಿಗೆ ಎರಡು ಬಹುಮಾನ ಅಂದರೆ ಯಾರಿಗೆ ಸಂತೋಷವಾಗುವುದಿಲ್ಲ ಹೇಳಿ? ತಕ್ಷಣ ಪತಿದೇವರಿಗೆ ಫೋನು ಮಾಡಿ ವಿಷಯ ತಿಳಿಸಿದೆ.
‘ಅಯ್ಯೋ ಹುಚ್ಚಿ, ಈಗಿನ ಕಾಲದಲ್ಲಿ ಸುಮ್ಮಸುಮ್ಮನೆ ಯಾರೂ ಒಂದು ರೂಪಾಯಿಯನ್ನೂ ಕೊಡುವುದಿಲ್ಲ, ಅಂಥದ್ದರಲ್ಲಿ ಬಹುಮಾನ ಬಂದಿದೆ ಎಂದರೆ ಏನೋ ಇರಬೇಕು, ಯಾರೋ ನಿನಗೆ ಟೊಪ್ಪಿಗೆ ಹಾಕುತ್ತಿರಬೇಕು, ಸರಿಯಾಗಿ ವಿಚಾರಿಸು’ ಎಂದು ನನ್ನ ಆಸೆಯ ಬಲೂನಿಗೆ ಟುಸ್ ಎಂದು ಸೂಜಿ ಚುಚ್ಚಿದರು.
ಸರಿ, ಮರುದಿನ ಮತ್ತೆ ಫೋನು ನಾನೇ ಮಾಡಿದೆ. ನಿಜವಾಗಿಯೂ ಬಹುಮಾನ ಬಂದಿದೆಯಾ, ನಾವು ಚಿತ್ರದುರ್ಗದಿಂದ ಬರಬೇಕು, ಸರಿಯಾಗಿ ಹೇಳಿ ಎಂದು ದಬಾಯಿಸಿದೆ.
‘ನಿಜವಾಗಿಯೂ ಬಂದಿದೆ ಮೇಡಂ, ಬೇಕಾದರೆ ನಮ್ಮ ಮ್ಯಾನೇಜರ್ ಅವರನ್ನು ವಿಚಾರಿಸಿ’ ಎಂದು ಮತ್ತೊಬ್ಬರ ಕೈಗೆ ಫೋನು ಕೊಟ್ಟಳು. ಮತ್ತೊಂದು ಗಂಭೀರವಾದ ಗಂಡಸಿನ ಧ್ವನಿ ಆಕೆ ಹೇಳಿದ್ದನ್ನೇ ಪುನರಾವರ್ತಿಸಿ, ‘ನಿಮಗೆ ಒಂದು ವಾರ ಮಾತ್ರ ಟೈಮಿದೆ’ ಬರುವುದಾದರೆ ನಮ್ಮ ರಿಸೆಪ್ಷನಿಸ್ಟ್ ನಿಮಗೆ ಅಡ್ರೆಸ್ ಕೊಡುತ್ತಾರೆ ಎಂದು ಆಕೆಯ ಕೈಗಿಟ್ಟರು.
ದಾವಣಗೆರೆಯಲ್ಲಿರುವ ಗೆಳತಿಯ ನೆನಪಾಗಿ ನಮ್ಮ ಪರವಾಗಿ ಗೆಳತಿ ಬಂದು ಬಹುಮಾನ ಕಲೆಕ್ಟ್ ಮಾಡಿದರೆ ಆಗಬಹುದೇ ಎಂದೆ.
‘ಸಾಧ್ಯವಿಲ್ಲ ಮೇಡಂ, ಫ್ಯಾಮಿಲಿ ಪೂರ್ತಿ ಬರಬೇಕು, ಸಾಕ್ಷಿಗಾಗಿ ದಂಪತಿಯ ಫೋಟೋ ತೆಗೆದುಕೊಳ್ಳುತ್ತೇವೆ, ಅದನ್ನು ನಾವು ಹೈಯರ್ ಆಫೀಸಿಗೆ ಕಳುಹಿಸಬೇಕು’ ಎಂದಳು.
‘ಸರಿ ಬಿಡಿ, ಮಾಲ್ ಅಡ್ರೆಸ್ ನಮಗೆ ಗೊತ್ತಿದೆ, ಬರುತ್ತೇವೆ’ ಎಂದೆ.
‘ವಿಜೇತರಿಗೆ ಪ್ರತ್ಯೇಕವಾಗಿ ಬಹುಮಾನ ವಿತರಿಸುವ ಸ್ಥಳ ನಿಗದಿಪಡಿಸಿದ್ದೇವೆ’ ಎಂದು ಒಂದು ಅಡ್ರೆಸ್ ಕೊಟ್ಟಳು.
ಅದೇಕೋ ಬಹುಮಾನದ ಆಸೆ ತಪ್ಪಿಸಿಕೊಳ್ಳಲಾಗಲಿಲ್ಲ. ಹೋಗಿಬರೋಣ ಎಂದು ಇವರನ್ನು ಗೋಗರೆಯತೊಡಗಿದೆ.
‘ಅಲ್ವೇ, ದಾವಣಗೆರೆಗೆ ಕಾರಿನಲ್ಲಿ ಹೋಗಿ ಬರಲು ಎರಡು ಸಾವಿರ ಖರ್ಚಾಗುತ್ತದೆ, ಅದೇ ದುಡ್ಡಿಗೆ ನಿನಗೇನು ಕಿಚನ್ ಐಟಮ್ಮುಗಳು ಬೇಕೋ ಅದನ್ನು ಇಲ್ಲೇ ಕೊಂಡುಕೊಳ್ಳಬಹುದಲ್ಲ’ ಎನ್ನುವ ಮಾತಿಗೆ ಸೊಪ್ಪು ಹಾಕದೆ ಹೋಗುವ ದಿನ ನಿರ್ಧರಿಸಿಬಿಟ್ಟೆ. ಯಾರಿಗ್ಗೊತ್ತು ಅವರ ಬಹುಮಾನದ ಐಟಮ್ಮುಗಳು ಇನ್ನೂ ಹೆಚ್ಚಿನ ಮೊತ್ತದ್ದಾಗಿದ್ದರೆ? ಎನ್ನುವ ದೂರದ ಆಸೆ(ದುರಾಸೆ). ಪತಿಯೂ ಒಮ್ಮೆ ಹೇಗಾದರಾಗಲಿ ಎಂದು ವಿಚಾರಿಸಿಯೇ ಹೊರಡಲು ತಯಾರಾದರು.
ಭಾನುವಾರ ಬೆಳ್ಳಂಬೆಳಗ್ಗೆಯೇ ಮಕ್ಕಳನ್ನು ರೆಡಿ ಮಾಡಿ, ಅವಸರಕ್ಕೆ ಅವಲಕ್ಕಿ ಕಲಸಿ, ತಿಂದು ಸಂಭ್ರಮದಿಂದ ತಯಾರಾಗಿ ದಾವಣಗೆರೆಗೆ ಹೊರಟಿದ್ದಾಯಿತು. ಮತ್ತೊಮ್ಮೆ ರಿಸೆಪ್ಷನಿಸ್ಟ್ಗೆ ಫೋನು ಮಾಡಿ ಅಡ್ರೆಸ್ ಎಲ್ಲಿ ಬರುತ್ತದೆಯೆಂದು ವಿಚಾರಿಸುತ್ತಾ ಅವರು ಹೇಳಿದ ಜಾಗಕ್ಕೆ ತಲಪಿದ್ದಾಯಿತು. ಒಳಗೆ ಹೋಗುತ್ತಿದ್ದಂತೆ ಯಾವುದೋ ಇನ್ಶೂರೆನ್ಸ್ ಆಫೀಸ್ ಎಂದು ತಕ್ಷಣ ಅರ್ಥವಾಯಿತು. ನಮ್ಮಂತೆಯೇ ಅಲ್ಲಿ ಐದಾರು ಜೋಡಿ ದಂಪತಿಗಳು ಕುಳಿತಿದ್ದರು. ಅವರನ್ನು ವಿಚಾರಿಸಿದಾಗ ನಾವೂ ಬಹುಮಾನ ವಿಜೇತರು ಎಂದಾಗ ನೆಮ್ಮದಿಯಾಯಿತು. ಅಲ್ಲಿಗೂ ಯಜಮಾನರಿಗೆ ಸಮಾಧಾನವಾಗದೆ ‘ಅಲ್ರೀ, ನಾವು ಖರೀದಿ ಮಾಡಿದ್ದು ಮಾಲ್ನಲ್ಲಿ, ನಿಮ್ಮದು ಇನ್ಶೂರೆನ್ಸ್ ಆಫೀಸ್, ಅದಕ್ಕೂ ಇದಕ್ಕೂ ಏನ್ರೀ ಸಂಬಂಧ?’ ಎಂದು ಪ್ರಶ್ನಿಸಿದರು.
‘ಸರ್, ಅವರ ಜೊತೆ ನಾವು ಟೈಅಪ್ ಆಗಿದ್ದೇವೆ’ ಎಂದು ಆಕೆ ಉಲಿದಾಗ ‘ಹೌದಾ’ ಎನ್ನುತ್ತಾ ತೆಪ್ಪಗೆ ಕೂತರು.
ಮತ್ತೂ ಅರ್ಧ ಗಂಟೆ ಕಳೆಯಿತು. ನಮ್ಮ ಯಜಮಾನರಿಗೆ ಸುಮ್ಮನೆ ಕುಳಿತುಕೊಳ್ಳಲು ಬೇಜಾರಾಗಿ ರಿಸೆಪ್ಷನ್ಗೆ ಹೋಗಿ ‘ನೋಡಿ, ನಾವು ಊರಿಗೆ ವಾಪಾಸು ಹೋಗಬೇಕು, ಅದೇನು ಬಹುಮಾನ ಕೊಡುವಿರೋ ಬೇಗ ಕೊಟ್ಟರೆ ಒಳ್ಳೆಯದು’ ಎಂದು ಸ್ವಲ್ಪ ಗರಮ್ ಆಗಿಯೇ ಹೇಳಿದರು.
ಆಕೆ ‘ಒಂದರ್ಧ ಗಂಟೆ ಪ್ರೆಸೆಂಟೇಷನ್ ಇರುತ್ತದೆ ಸರ್, ಅದಾದ ನಂತರ ನಿಮಗೆ ಬಹುಮಾನ ಸಿಗುತ್ತದೆ’ ಎಂದಾಗ ನನ್ನೆಡೆ ಸ್ವಲ್ಪ ಕೋಪದ ನೋಟ ಬೀರಿದರು. ನಾನು ‘ಇಷ್ಟು ದೂರ ಬಂದಿದ್ದೇವೆ, ಒಂದರ್ಧ ಘಂಟೆ ತಾನೆ, ಅದೇನು ಹೇಳುತ್ತಾರೋ ಕೇಳಿಕೊಂಡು ಬಹುಮಾನ ತೆಗೆದುಕೊಂಡು ಹೋಗೋಣ’ ಎಂದು ಸಮಾಧಾನಿಸಿದೆ. ಒಳಗಿನಿಂದ ಬರುವ ಜೋಡಿಗಳು ಬಹುಮಾನದ ಬಾಕ್ಸ್ ಹಿಡಿದು ಹೊರಬರುವುದನ್ನು ನೋಡಿ ನಮ್ಮ ಸರದಿ ಯಾವಾಗ ಬರುತ್ತದೆಯೋ ಎಂದು ಚಡಪಡಿಸತೊಡಗಿದೆ.
ಮತ್ತೊಂದು ಹತ್ತು ನಿಮಿಷಕ್ಕೆ ಒಳ ಕರೆದರು. ಟಿಪ್ಟಾಪಾಗಿ ಡ್ರೆಸ್ ಮಾಡಿದ್ದ ಲೇಡಿ ಒಂದೊಂದೇ ಪ್ರಶ್ನೆಗಳ ಬಾಣವನ್ನು ನಮ್ಮತ್ತ ತೂರತೊಡಗಿದಳು. ನಿಮ್ಮ ಹೆಸರು, ಊರು, ಎಷ್ಟು ಮಕ್ಕಳು, ಏನು ಓದುತ್ತಿದ್ದಾರೆ,
ಏನು ಕೆಲಸ ಮಾಡಿಕೊಂಡಿದ್ದೀರಿ, ನಿಮ್ಮ ತಿಂಗಳ ಸಂಬಳ ಎಷ್ಟು, ಹೀಗೆ ಪ್ರಶ್ನೆಪತ್ರಿಕೆಯ ಪ್ರಶ್ನೆಗಳ ಹಾಗೆ ಸಾಗುತ್ತಲೇ ಇತ್ತು. ಮಕ್ಕಳಿಗೆ ಬೋರು ಹೊಡೆಯಲು ಶುರುವಾಗಿ ಹೋಗೋಣಾ ಎಂದು ಗಂಟುಬಿದ್ದವು. ಅವಕ್ಕೆ ಚಾಕೋಲೇಟು ಕೊಟ್ಟು ಮತ್ತೆ ಆ ಲೇಡಿ ಮಾತು ಮುಂದುವರಿಸಿದಳು.
ನಿಮ್ಮ ಮಕ್ಕಳಿಗೆ ನೀವು ಏನು ಓದಿಸಬೇಕೆಂದಿದ್ದೀರಿ ಎಂದಾಗ ಯಜಮಾನರಿಗೆ ಸಿಟ್ಟು ಬಂದು ಅವು ಏನು ಓದುತ್ತವೆಯೋ ಅದನ್ನೇ ಓದಿಸುತ್ತೇವೆ ಎಂದರು.
ಮೆಡಿಕಲ್ ಓದಬೇಕೆಂದರೆ ಇಷ್ಟು ಖರ್ಚಾಗುತ್ತದೆ, ಇಂಜಿನಿಯರ್ ಓದಿಸಬೇಕೆಂದರೆ ಇಷ್ಟಾಗುತ್ತದೆ, ಹಾಗೆಯೇ ಎಂಬಿಎ ಅದೂ ಇದೂ ಎಲ್ಲ ಕೋರ್ಸುಗಳ ಮಾಹಿತಿ ನೀಡಿ, ಪ್ರತಿಯೊಂದಕ್ಕೆ ಇನ್ನು ಮುಂದಿನ ಹದಿನೈದು ವರ್ಷಗಳಲ್ಲಿ ಎಷ್ಟು ಖರ್ಚಾಗುತ್ತದೆ, ನಿಮ್ಮ ಸಂಬಳವನ್ನು ಯಾವ ರೀತಿ ನಮ್ಮ ಇನ್ಶೂರೆನ್ಸ್ ಕಂಪೆನಿಯಲ್ಲಿ ಇನ್ವೆಸ್ಟ್ ಮಾಡಿದರೆ ಒಳ್ಳೆಯದು, ಇಲ್ಲದಿದ್ದರೆ ಮುಂದೆ ಹೇಗೆಲ್ಲ ಪರದಾಡಬೇಕಾಗುತ್ತದೆ ಎಂದು ಆಕೆ ಹೇಳುತ್ತಾ ಹೋದಂತೆ ನಮ್ಮ ಭವಿಷ್ಯದ ಆಲೋಚನೆ ನಮಗಿಂತ ಇವರಿಗೇ ಹೆಚ್ಚು ಗೊತ್ತಿದೆಯಲ್ಲಾ ಎನ್ನಿಸಿತು.
ಇನ್ನು ಹೆಲ್ತ್ ಇನ್ಶೂರೆನ್ಸ್ ಸರದಿ. ನಿಮ್ಮ ಮನೆಯಲ್ಲಿ ಯಾರಿಗಾದರೂ ಕಿಡ್ನಿ ತೊಂದರೆ, ಆಕ್ಸಿಡೆಂಟ್, ಹೃದಯಾಘಾತ, ಬೈಪಾಸ್ ಸರ್ಜರಿ ಮತ್ತೆ ಯಾವ್ಯಾವವೋ ಕಾಯಿಲೆಗಳನ್ನು ಹೆಸರಿಸಿ ಅವುಗಳ ಖರ್ಚನ್ನು ನಿಮ್ಮಿಂದ ನಿಭಾಯಿಸಲು ಸಾಧ್ಯವಾಗದು, ಹಾಗಾಗಿ ಪಾಲಿಸಿ ಮಾಡಿಸಿದರೆ ಒಳ್ಳೆಯದು ಎಂದು ಕೊರೆಯತೊಡಗಿದಳು.
ನಮ್ಮ ಯಜಮಾನರಿಗೆ ಆಗಲೇ ಪಿತ್ತ ನೆತ್ತಿಗೇರುತ್ತಿತ್ತು. ಅಷ್ಟಾಗಿ ಹೆಸರು ಮಾಡದ ಒಂದು ಸಣ್ಣ ವಿಮಾ ಕಂಪೆನಿ ಗ್ರಾಹಕರನ್ನು ತನ್ನೆಡೆಗೆ ಸೆಳೆಯಲು ಹೂಡಿದ ತಂತ್ರ ಎಂದು ಗೊತ್ತಾಗಿ ನನ್ನತ್ತ ಉಗ್ರನೋಟ ಬೀರತೊಡಗಿದರು.
ನೀರಿನಲ್ಲಿಳಿದವರಿಗೆ ಗಾಳಿಯೇನು, ಛಳಿಯೇನು ಎಂಬಂತೆ ಕುಳಿತಿದ್ದೆ. ಬೆಳಗ್ಗೆ ಅವಸರಕ್ಕೆ ತಿಂದ ಅವಲಕ್ಕಿ ಯಾವಾಗಲೋ ಕರಗಿ ಹೋಗಿ ಹೊಟ್ಟೆ ಬೇರೆ ಚುರುಗುಟ್ಟುತ್ತಿತ್ತು. ಕೊನೆಗೆ ಅವರ ಮಾತಿಗೆಲ್ಲಾ ಹೂಂಗುಟ್ಟುತ್ತಾ ಮನೆಗೆ ಹೋಗಿ ಇದರ ಬಗ್ಗೆ ವಿಚಾರ ಮಾಡುತ್ತೇವೆ ಎಂದು ಆ ಲೇಡಿಗೆ ಭರವಸೆ ಕೊಟ್ಟಿದ್ದಾಯಿತು. ಅಲ್ಲಿಗೆ ಒಂದೂವರೆ ಘಂಟೆ ವ್ಯರ್ಥವಾಗಿತ್ತು.
ಕೊನೆಯಲ್ಲಿ ಆಕೆ ಎರಡು ಗಿಫ್ಟ್ಬಾಕ್ಸ್ಗಳನ್ನು ಕೊಟ್ಟಾಗ ಅಬ್ಬಾ! ಸದ್ಯಃ ಕೊಟ್ಟಳಲ್ಲಾ ಜೊತೆಗೆ ನಮ್ಮನ್ನು ಬಿಟ್ಟಳಲ್ಲಾ ಎಂದು ಖುಷಿಯಾಗಿ ಹೊರಗೆ ಓಡೋಡಿ ಬಂದು ಕಾರಿನಲ್ಲಿ ಕುಳಿತೆವು. ಮಕ್ಕಳು ಗಿಫ್ಟ್ಬಾಕ್ಸನ್ನು ನಾಯಿಗಳ ಹಾಗೆ ಎಳೆದಾಡಿ ಕಿತ್ತುಹಾಕಿದವು. ಒಳಗೆ ನೋಡಿದರೆ ನೂರು ರೂಪಾಯಿ ಬೆಲೆಯೂ ಬಾಳದ ಪ್ಲಾಸ್ಟಿಕ್ ಬೌಲ್ಸೆಟ್ ಹಾಗೂ ಪ್ಲಾಸ್ಟಿಕ್ ಲೋಟದ ಸೆಟ್ಟು ನನ್ನನ್ನು ಅಣಕಿಸುತ್ತಿದ್ದವು.
ಯಜಮಾನರ ಕಡೆಗೆ ತಿರುಗಿಯೂ ನೋಡದೆ ತಲೆನೋವೆಂದು ಕಣ್ಮುಚ್ಚಿ ಸೀಟಿಗೆ ಒರಗಿದೆ. ಫೋನು ರಿಂಗಾಯಿತು. ಹಲೋ ಎನ್ನುತ್ತಿದ್ದಂತೆ ಆ ಕಡೆಯಿಂದ’ ‘ಮೇಡಂ ನೀವು ಬೆಂಗಳೂರಿಗೆ ಬಂದಾಗ ಮಾಲ್ನಲ್ಲಿ ಲಕ್ಕಿಡಿಪ್ ಕೂಪನ್ ತುಂಬಿಕೊಟ್ಟಿದ್ದೀರಲ್ಲಾ, ಅದಕ್ಕೆ ಮೂರು ಬಹುಮಾನಗಳು ಬಂದಿವೆ. ನಾಲ್ಕು ಜನರಿಗೆ ಪ್ರವಾಸದ ಟಿಕೆಟ್, ವಾಟರ್ ವಲ್ರ್ಡ್ ಹಾಗೂ ಕಿಚನ್ ಐಟೆಮ್ಸ್ ನಿಮ್ಮದಾಗಿದೆ. ನೂರು ಜನರಲ್ಲಿ ಆರಿಸಿದ ಹತ್ತು ಜನ ಅದೃಷ್ಟಶಾಲಿಗಳಲ್ಲಿ ನೀವೂ ಒಬ್ಬರು’ ಎನ್ನುತ್ತಿದ್ದಂತೆ ಸುಮ್ಮನೆ ಫೋನು ಕಟ್ ಮಾಡಿದೆ.
ಬಹುಮಾನವಾಗಿ ಸಿಕ್ಕಿದ್ದ ಬೌಲ್ ಒಂದನ್ನು ಹಿಡಿದು ಮಗಳು ‘ಅಮ್ಮಾ ಇದು ನಿನ್ನ ತಲೆಗೆ ಹಚ್ಚಲು ಕಲೆಸುವ ಹೇರ್ಡೈ ಬಟ್ಟಲು ಇದ್ದ ಹಾಗೆ ಇದೆಯಲ್ಲ’ ಎನ್ನುತ್ತಿದ್ದಂತೆ ಗದರುವ ನೋಟದಿಂದ ದೊಡ್ಡ ಕಣ್ಣುಗಳನ್ನು ಬಿಟ್ಟೆ. ತೆಪ್ಪಗಾದಳು. ಯಜಮಾನರ ತುಟಿಯಂಚಿನಲ್ಲಿ ಹುಸಿನಗೆ ಮೂಡಿದ್ದು ಕಂಡು ಸಧ್ಯಃ ಬದುಕಿದೆಯಾ ಬಡಜೀವವೇ ಎಂದು ಮನ ಹಗುರಾಗಿತ್ತು.