ಇದೊಂದು ಕಾಡಿನಲ್ಲಿ ಬೆಳೆಯುವ ಸಾಮಾನ್ಯ ಸಸ್ಯ. ಹೆಸರು ‘ಬಿದಿರು’ ಎಂದು. ಅಕ್ಕಪಕ್ಕ ಏನನ್ನೂ ನೋಡದೆ ಸುಮ್ಮನೆ ಉದ್ದಕ್ಕೆ ಬೆಳೆಯುವುದು ಇದರ ಹವ್ಯಾಸ. ರೆಂಬೆ, ಕೊಂಬೆಗಳನ್ನು ಬಿಡದೆ, ಜನರಿಗೆ ಫಲ, ಪುಷ್ಪಗಳನ್ನೂ ಕೊಡದೆ, ಕೊನೆಗೆ ಯಾರಿಗೂ ನೆರಳಾಗದೆ ತನ್ನಷ್ಟಕ್ಕೆ ಉದ್ದುದ್ದ ಬೆಳೆದು ನಿಂತ ಬಿದಿರು ಎಂದಿಗೂ ಎತ್ತರವಾಗಲು ಸಾಧ್ಯವಿಲ್ಲ. ನಾಲ್ಕು ಜನರಿಗೆ ಉಪಕಾರ ಮಾಡಲಾಗದ ಬದುಕೂ ಒಂದು ಬದುಕೆ? ತನ್ನನ್ನೇಕೆ ಭಗವಂತ ಈ ರೀತಿ ಹುಟ್ಟಿಸಿದ? ಈ ಪ್ರಶ್ನೆಯನ್ನು ಬಿದಿರು ಅದೆಷ್ಟು ಬಾರಿ ತನ್ನನ್ನೇ ಕೇಳಿಕೊಂಡಿರಲಿಕ್ಕಿಲ್ಲ? ಒಳಗೆ ಮಡುಗಟ್ಟಿದ ದುಃಖ, ಹೊರಗೆ ಮಸುಕಾದ ಭವಿಷ್ಯ! ಬಿದಿರು ಅದೆಷ್ಟು ನಿದ್ದೆಯಿಲ್ಲದ ರಾತ್ರಿ ಕಳೆದಿದೆಯೋ ಲೆಕ್ಕ ಇಟ್ಟವರಾರು?
ಇಲ್ಲದ ಭಾಗ್ಯ
ಸುತ್ತಲಿನ ಗಿಡ, ಮರಗಳು ಎಲೆ ಚಿಗುರಿಸುವ, ಹೂ ಹಣ್ಣು ಕೊಡುವ ಸಂಭ್ರಮದÀಲ್ಲಿ ಮಗ್ನವಾಗಿದ್ದರೆ, ತನಗೇಕೆ ಈ ಭಾಗ್ಯವಿಲ್ಲ? ಎಂಬುದೇ ಬಿದಿರಿನ ಅಳಲು. ಉಳಿದ ಮರ, ಗಿಡಗಳಿಗೆ ನೆರಳಿದೆ, ಉಪಕರಣಕ್ಕಾಗಿ ಅವುಗಳ ಕಾಂಡವನ್ನು ಉಪಯೋಗಿಸುತ್ತಾರೆ. ಕೊನೆಗೆ ಉರುವಲಾಗಿಯಾದರೂ ಅವುಗಳು ಜನರ ಸಹಾಯಕ್ಕೆ ನಿಲ್ಲುತ್ತವೆ. ಆದರೆ ಬಿದಿರನ್ನು ಉರಿಸಲು ಯಾರಿಗೂ ಇಷ್ಟವಿಲ್ಲ. ಕಾರಣ, ಅದು ಅಪಶಕುನ ಎಂಬ ನಂಬಿಕೆ! ಎಂದಾದರೂ ಜನ ಅದನ್ನು ಬಳಸುತ್ತಾರೆ ಎಂದರೆ ಅದು ಹೆಣ ಹೊರುವ ಚಟ್ಟವಾಗಿ ಮಾತ್ರ! ಅಪರೂಪಕ್ಕೊಮ್ಮೆ ಏಣಿಯಾಗಿ ಬಿದಿರನ್ನು ಬಳಸಿದರೂ ಹತ್ತಿ ಹೋದವರಾರೂ ಅದನ್ನು ನೆನಪಿಸಿಕೊಂಡ ದಾಖಲೆ ಇಲ್ಲ. ಎಲ್ಲರಿಂದಲೂ ಅಸಡ್ಡೆಗೆ ಒಳಗಾದ ಬಿದಿರಿನದ್ದು ಎಂಥ ಹೀನಾಯ ಬದುಕು!
ಅಡಿಯಿಂದ ಮುಡಿಯವರೆಗೆ ಬಿದಿರು ತನ್ನನ್ನೇ ಒಮ್ಮೆ ನೋಡಿಕೊಂಡಿತು. ಮೆಚ್ಚಿಕೊಳ್ಳಲು ಏನಿದೆ ತನ್ನಲ್ಲಿ? ಒಳಗೆಲ್ಲ ಬರೀ ಪೊಳ್ಳು, ಖಾಲಿತನ! ಮೇಲಾಗಿ ಸಹಿಸಲಾರದ ಜಗತ್ತಿನ ಅಸಡ್ಡೆ ಬೇರೆ. ಅದರ ಮುಂದಿರುವ ಒಂದೇ ಪ್ರಶ್ನೆ ಏನೆಂದರೆ, ‘ಸಾವಿಲ್ಲದೇ ಬದುಕುವುದು ಹೇಗೆ?’ ನಿರಂತರ ಜಗತ್ತಿಗೆ ಉಪಕಾರಿಯಾಗಬೇಕು ಎನ್ನುವ ತುಡಿತ ಎದೆಯಲ್ಲಿ ಹೊತ್ತುಕೊಂಡು ನಿಂತುಕೊಂಡಿದೆ ಬಿದಿರು. ಮೇಲಾಗಿ ಯಾವುದೋ ಕೆಟ್ಟ ಗಳಿಗೆಯಲ್ಲಿ ದಾರಿತಪ್ಪಿದ ಕೀಟವೊಂದು ಅದರ ಮೈಮೇಲೆ ಹರಿದಾಡಿ ಮನಸ್ಸಿಗೆ ಬಂದಂತೆ ತೂತು ಕೊರೆದಿದೆ. ಮೊದಲೇ ಜೀವವಿಲ್ಲದ ಕೋಲಿನಂತೆ ಜೀವಚ್ಛವವಾಗಿದ್ದ ಬಿದಿರಿನ ತುಂಬೆಲ್ಲ ರಂಧ್ರಗಳು ಬೇರೆ ಕೇಡು. ಕೆಲವು ರಂಧ್ರಾನ್ವೇಷಿಗಳಿಗೆ ಇದರ ರಂಧ್ರಗಳೇ ಮಾತಿಗೆ ಆಹಾರ. ಮಾತುಮಾತಿಗೂ ಬಿದಿರಿನ ರೂಪ ಹಂಗಿಸುವ ಕೆಲಸ ಇವರಿಗೆ. ಬದುಕಿನ ಈ ಎಲ್ಲ ಅಪಸವ್ಯಗಳ ಮಧ್ಯೆಯೂ ಬಿದಿರಿಗೆ ಸಮಾಜಮುಖಿಯಾಗುವ ಕನಸು! ಈ ಮಣ್ಣಿನಲ್ಲಿ ಹುಟ್ಟಿದ್ದಕ್ಕಾಗಿ ಏನನ್ನೂ ಸಾಧಿಸದೇ ಸಾಯುವುದಕ್ಕಿಂತ, ಕಾಲನ ಕರೆ ಬರುವವರೆಗೂ ಹೆಮ್ಮೆಯಿಂದ ತಲೆಯೆತ್ತಿ ಬದುಕುವ ಹಂಬಲ!
ಉದ್ಧಾರತತ್ತ್ವ
ಹೀಗೆ ಅಂತರಂಗದ ತುಡಿತವನ್ನೇ ಉಸಿರಾಡುತ್ತ ನಿಂತ ಬಿದಿರಿನ ದಾರಿಯಲ್ಲಿ ಒಂದು ದಿನ ದನಕಾಯುವ ಗೋವಳನೊಬ್ಬ ನಡೆದು ಹೋಗುತ್ತಿದ್ದ. ಅವನ ಕಾಲು ಬಿದಿರಿಗೆ ತಾಕಿದಾಕ್ಷಣ ತನಗಿರುವ ಸಂಸ್ಕಾರದ ಹಿನ್ನೆಲೆಯಲ್ಲಿ ಆತ ಅದನ್ನೆತ್ತಿ ಹಣೆಗೆ ಒತ್ತಿಕೊಂಡ! ಬಿದಿರಿಗೆ ಎಂಥ ರೋಮಾಂಚನ! ಕೆಲ ಕ್ಷಣದಲ್ಲಿಯೇ ಆತ ತನಗೆ ಬೇಕಾದಷ್ಟು ತುಂಡನ್ನು ಮುರಿದುಕೊಂಡ. ಇಡೀ ಮೈ ಮುರಿದಂತೆ ನೋವಿನಲ್ಲಿ ಚೀತ್ಕರಿಸಬೇಕೆಂದರೆ, ಆಶ್ಚರ್ಯಕರವಾಗಿ ಅದು ಸುಖದ ಕೇಕೆಯಾಗಿ ಬದಲಾಗಿತ್ತು! ಏಕೆಂದರೆ ಇದುವರೆಗೂ ಯಾರೂ ತನ್ನನ್ನು ಇಷ್ಟು ಹತ್ತಿರಕ್ಕೆ ಸೇರಿಸಿ ಪ್ರೀತಿಯ ಧಾರೆಯೆರೆದವರೇ ಇಲ್ಲ. ಈತ ತನ್ನನ್ನು ಕೈಹಿಡಿದೆತ್ತಿದ್ದಲ್ಲದೆ ಹಣೆಗೆ ಒತ್ತಿಕೊಂಡು ಹಾಗೇ ಸುಮ್ಮನೆ ನೇವರಿಸಿದ್ದ. ಅಲ್ಲದೆ ಆ ದನಗಾಹಿ ಸಾಮಾನ್ಯದವನೇನಲ್ಲ, ಅವನು ಸಾಕ್ಷಾತ್ ಶ್ರೀಕೃಷ್ಣ! ಆತ ಮೆಲ್ಲನೆ ಬಿದಿರಿಗೆ ತುಟಿಯೊತ್ತಿದ. ನಾದಲೋಕವೇ ಮೈದಳೆದು ಭೋರ್ಗರೆದಂತಾಯಿತು! ನಾದಕ್ಕೆ ಹದಪಾಕ ತಂದಿಟ್ಟು ನನ್ನ ಒಡಲಿನಿಂದ ಸುರಲೋಕದ ನಾದವನ್ನೇ ಸೃಷ್ಟಿಸಿದ ಮಹಾನುಭಾವ ಆತ! ‘ಈ ಭೂಮಿ ಇರುವವರೆಗೂ ನಾನಿರಬೇಕು, ಎಂದೂ ಲಯವಾಗದಂತೆ ಬದುಕಬೇಕು’ ಎಂಬ
ನನ್ನೊಳಗಿನ ಹಸಿವೆಗೆ, ನನ್ನೊಳಗಿನ ಉಸಿರಿಗೆ ಆತನ ಉಸಿರು ಮಿಳಿತಗೊಂಡು ಜಗತ್ತೇ ಮಂತ್ರಮುಗ್ಧವಾಗುವಂತೆ ಸುರಲೋಕದ ನಾದವಾಗಿ ಹೊರಹೊಮ್ಮಿತ್ತು! ಹೀಗೆ ಕಾಡುಬಿದಿರೊಂದು ಕೊಳಲಾಯಿತು. ಕೃಷ್ಣನ ಕೈಯ ಮುರಲಿಯಾಯಿತು. ಆದರೂ ಬಿದಿರಿನ ತಲೆಯಲ್ಲಿ ಒಂದೇ ಪ್ರಶ್ನೆ, ‘ನನ್ನಲ್ಲಿ ಏನು ನೋಡಿ ಕೃಷ್ಣ ನನ್ನ ಕೈಹಿಡಿದ?’
ಒಮ್ಮೆ ರಾಧೆ, “ಕೃಷ್ಣಾ, ನಿನಗೆ ಮುರಲಿಯ ಮೇಲೆ ಅದೇಕೆ ಇಷ್ಟು ಪ್ರೀತಿ? ಜಗತ್ತಿನಲ್ಲಿ ನಾನು ನಿನಗೆ ಅತಿ ಹತ್ತಿರದವಳು. ನಾನು ನಿನ್ನ ಕೊಳಲಾಗಬಯಸುವೆ, ನಿನ್ನ ಕೊರಳಾಗ ಬಯಸುವೆ” ಎಂದು ಗೋಗರೆದಳು. ಆಗ ಕೃಷ್ಣ ನಗುತ್ತ ಹೇಳಿದ, “ರಾಧೆ, ಅದು ಸಾಧ್ಯವಿಲ್ಲ. ನನಗೆ ಕೊಳಲೆಂದರೆ ಅತ್ಯಂತ ಪ್ರೀತಿ. ಇದಕ್ಕೆ ಕಾರಣ ಅದು ಒಳಗಿನಿಂದ ಖಾಲಿಯಾಗಿದೆ! ಆದರೆ ನಿನ್ನೊಳಗೆ ಅಹಂಕಾರ ತುಂಬಿಕೊಂಡಿದೆ. ನೀನು ಅದನ್ನು ಮೊದಲು ಖಾಲಿಮಾಡು. ನನ್ನ ಮುರಲಿಯಂತೆ ಒಳಗಿನಿಂದ ಖಾಲಿಯಾದವರು ಮಾತ್ರ ನನ್ನ ಬಳಿ ಇರಲು ಅರ್ಹರು” ಎಂದ.
ನಾವೂ ಸಹ ಬದುಕಿನಲ್ಲಿ ನಮ್ಮೊಳಗೆ ಗೊಂದಲಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುತ್ತೇವೆ. ‘ನಾನು ಶ್ರೇಷ್ಠ, ನಾನು ಮಾಡುವ ಪೂಜೆ ಮಾತ್ರ ಶ್ರೇಷ್ಠ’ ಮುಂತಾಗಿ ಶ್ರೇಷ್ಠತೆಯ ವ್ಯಸನದಲ್ಲಿ ಬಿದ್ದು ಅಧ್ಯಾತ್ಮದ ನಿಜಾರ್ಥ ತಿಳಿಯದೇ ವರ್ತಿಸುತ್ತೇವೆ. ನಾವು ಖಾಲಿಯಾಗದಿದ್ದರೆ ಭಗವಂತ ನಮ್ಮ ಸಮೀಪವೂ ಸುಳಿಯಲಾರ. ಮೈತುಂಬ ರಂಧ್ರಗಳಿದ್ದರೂ ಒಳಗಿನಿಂದ ಖಾಲಿಯಾಗಿರುವ ಕೊಳಲು ಸುಸ್ವರ ನುಡಿಸುತ್ತದೆ. ಒಳಗೆ ಅಹಂ ತುಂಬಿದ್ದರೆ, ಬದುಕು ಉಸಿರುಗಟ್ಟಿ ಅಪಸ್ವರ ನುಡಿದೀತು. ‘ಖಾಲಿಯಾದವ ಮಾತ್ರ ತುಂಬಿಕೊಳ್ಳಲು ಸಾಧ್ಯ’ ಎಂಬುದನ್ನು ಅರಿತು ನಡೆಯಬೇಕಾಗಿದೆ. ನಮ್ಮಲ್ಲಿ ಇದ್ದುದನ್ನು ಕೊಡುವ ಗುಣ ನಮ್ಮದಾಗಬೇಕು. ಕೊಡುತ್ತ ಹೋದಂತೆ, ನಮ್ಮೊಳಗೆ ನಾವು ಖಾಲಿಯಾಗಿ, ಅಹಂಕಾರ ಕರಗಿಹೋಗಿ, ಒಳಗೆ ಪ್ರೀತಿಯ ನಾದ ಮೈದುಂಬೀತು. ಒಳಗೆ ಅಹಂ ತುಂಬಿಕೊಂಡು ಮಾಡಿದ ಪೂಜೆ, ಪುನಸ್ಕಾರಗಳೆಲ್ಲ ಅತಿರೇಕದ ಅಪಸವ್ಯಗಳಾಗುತ್ತವೆಯೇ ಹೊರತು ಎಂದಿಗೂ ಅಧ್ಯಾತ್ಮದ ಅನುಷ್ಠಾನ ಎನಿಸಲಾರವು. ತಲೆ ಖಾಲಿಯಾದವ ಹೊಸ ಜ್ಞಾನ ತುಂಬಿಕೊಳ್ಳಲು ಸಾಧ್ಯ. ಅಹಂ ಖಾಲಿಯಾದವ ಭಗವಂತನ ಪ್ರೀತಿ, ದಯೆ ತುಂಬಿಕೊಳ್ಳಬಲ್ಲ. ಅಹಂ ಆವಿಯಾಗಿ ಅಳಿದುಹೋದಾಗ ಜ್ಞಾನದ ಬೆಳಕು. ಆಧ್ಯಾತ್ಮದ ಸೆಳಕು.
ಸಾರ್ಥಕತೆಯ ರಹದಾರಿ
ಸಮಾಜದಲ್ಲಿ ಕೆಲವರು ತಮ್ಮ ಪಾಡಿಗೆ ತಾವು ಜೀವನ ಸಾಗಿಸುತ್ತಾರೆ. ಇತರರಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಬುದ್ಧಿ ಅವರಿಗಿರುವದಿಲ್ಲ. ಅಂತಹವರು ಸುಮ್ಮನೆ ಉದ್ದಕ್ಕೆ ಬೆಳೆದ ಕಾಡುಬಿದಿರಿನಂತೆ. ಯಾರ ಪ್ರಯೋಜನಕ್ಕೂ ಬರದೇ ಇದ್ದ ವ್ಯಕ್ತಿ ಪಶುಸಮಾನ. ತನಗೆ ಬೇಕಾದಂತೆ ಬದುಕಿದರೆ ಬಿದಿರು. ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಬದುಕಿದರೆ ಕೊಳಲು! ಸುಮ್ಮನೆ ನಿಷ್ಕ್ರಿಯರಾಗಿ ನೂರುವರ್ಷ ಬದುಕುವುದಕ್ಕಿಂತ, ನೋವಾದರೂ ಸರಿ ಉದಾತ್ತಜೀವನ ರೂಪಿಸಿಕೊಂಡು ಜನಮಾನಸದಲ್ಲಿ ನೆಲೆನಿಂತಾಗ ನಾವು ಕೊಳಲಾಗಿ ಭಗವಂತನ ಸಾನ್ನಿಧ್ಯಕ್ಕೆ ಪಾತ್ರರಾಗುತ್ತೇವೆ. ಶಿಲ್ಪಿಯ ಕೈಗೆ ಸಿಕ್ಕ ಕಲ್ಲು ಮೂರ್ತಿಯಾದಂತೆ, ಬಿದಿರು ಮುರಿದು ಕೊಳಲಾದಂತೆ, ನಮ್ಮ ನಿಷ್ಕ್ರಿಯತೆಗಳನ್ನು ಕೊನೆಗಾಣಿಸಿದರೆ ಸಮಾಜ ನಮ್ಮನ್ನು ಅಪ್ಪಿಕೊಂಡೀತು. ಮನೆ ಮೇಲೆ ಮನೆ ಕಟ್ಟುತ್ತ ಹೋಗುವುದಕ್ಕಿಂತ, ಪುಟ್ಟ ಗುಡಿಸಿಲಲ್ಲಿ ನಾಲ್ಕು ಜನರಿಗೆ ಆಸರೆ ನೀಡಿದರೆ ಬದುಕು ಸಾರ್ಥಕವಾದೀತು. ಕಾಡುಬಿದಿರು ತನ್ನೆಲ್ಲ ನ್ಯೂನತೆಗಳನ್ನು ಮೆಟ್ಟಿನಿಂತು ಕೊಳಲಾಗಿ ಬದಲಾಗಿ ಜಗತ್ತಿಗೆ ಪ್ರೀತಿಯ ರಾಗ ಉಣಬಡಿಸುವಂತೆ, ಮನುಕುಲದ ಒಳಿತಿಗಾಗಿ ಬದುಕುವುದರಲ್ಲಿಯೇ ಮನುಷ್ಯಜನ್ಮದ ಸಾರ್ಥಕತೆ ಅಡಗಿದೆ.