ರಾಮಾಯಣವನ್ನು ಎಷ್ಟು ಬಾರಿ ಹೇಗೆ ಓದಿಕೊಂಡರೂ, ಯಕ್ಷಗಾನ, ತಾಳಮದ್ದಳೆಗಳಲ್ಲಿ ಸಂಭಾಷಣೆಗಳನ್ನು ಆಲಿಸಿದರೂ, ಅತ್ಯಂತ ಗೊಂದಲಕ್ಕೋ ಸಂಕಟಕ್ಕೋ ನಮ್ಮನ್ನು ದೂಡುವ ಪ್ರಸಂಗ ಸೀತಾ ಪರಿತ್ಯಾಗ. ಸಾಕ್ಷಾತ್ ಶ್ರೀಲಕ್ಷ್ಮಿಯೇ ಅವಳೆಂದು ತಿಳಿದಿದ್ದರೂ, ಅಗ್ನಿಪರೀಕ್ಷೆಯಲ್ಲಿ ಅವಳು ಪುನೀತೆಯಾಗಿ ಬಂದಿದ್ದರೂ ತುಂಬುಗರ್ಭಿಣಿಯಾದ ಸೀತೆಯನ್ನು ಕೇವಲ ಅಗಸನೊಬ್ಬನ ಮಾತಿಗೆ ಬೆಲೆಕೊಟ್ಟು ಶ್ರೀರಾಮ ಕಾಡಿಗಟ್ಟಿದನೇ? ನಿರಪರಾಧಿ, ನಿರ್ದೋಷಿಯಾದ ಸೀತೆಗೆ ಅಂತಹ ಹೇಯವಾದ ಶಿಕ್ಷೆ ನೀಡಿ ಪ್ರಪಂಚಕ್ಕೆ ರಾಮ ನೀಡಿದ ಪಾಠವಾದರೂ ಏನು? – ಎಂಬುದು ಸಾಮಾನ್ಯವಾಗಿ ನಮಗೆ ಉತ್ತರ ದೊರೆಯದ, ನಾವು ಸುಲಭವಾಗಿ ಸಮರ್ಥಿಸಿಕೊಳ್ಳಲಾಗದ ವಿಷಯ. ಕಡೆಗೆ ಸೀತಾ ನಿರ್ಯಾಣಕ್ಕೆ ಅದೊಂದು ನೆಪವಷ್ಟೇ, ತನ್ಮೂಲಕ ರಾಮನಿಗಿಂತ ಮೊದಲೇ ಅವಳು ವೈಕುಂಠ ಸೇರಬೇಕಿತ್ತು ಎಂಬುದು ಇನ್ನೊಂದು ವಾದ. ಇಂತಹ ಚರ್ಚೆ, ವಿಶ್ಲೇಷಣೆಗಳು ಏನೇ ಇದ್ದರೂ, ಮಹಾರಾಣಿಯೊಬ್ಬಳು ಗರ್ಭದಲ್ಲಿ ಶಿಶುಗಳನ್ನು ಹೊತ್ತು ಕಾಡುಪಾಲಾಗಬೇಕಾಯಿತು ಎಂದುಕೊಂಡರೆ ಅವಳ ಪರಿಶುದ್ಧತೆಯ ಬಗ್ಗೆ ಮಾತಾಡಿದವರ ಮೇಲೆ ಕೋಪಿಸಿಕೊಳ್ಳುವಂತಾಗದೆ? ನಮಗರಿವಿಲ್ಲದೆಯೆ ನಾವು ಸ್ತ್ರೀ ವಾದಿಗಳಾಗಬೇಕಾಗುತ್ತದೆ.
ಇಂದಿನ ಪಠ್ಯಗಳಲ್ಲೂ ಸೀತಾಪರಿತ್ಯಾಗದ ಪದ್ಯಗಳು ಅಧ್ಯಯನಕ್ಕೆ ಇವೆ. ಆದರೆ ಸಮಸ್ಯೆಯೆಂದರೆ ಅದನ್ನು ಬೋಧಿಸಬೇಕಾದ ಶಿಕ್ಷಕವೃಂದದಲ್ಲಿ ಹಿರಿಯ ತಲೆಮಾರಿನ, ಪುರಾಣಕಾವ್ಯಗಳನ್ನು ಚೆನ್ನಾಗಿ ಓದಿ ಮನದಟ್ಟು ಮಾಡಿಕೊಂಡು ಆಯಾಯ ಯುಗಧರ್ಮದಂತೆ ಅಂದಿನ ರಾಜನೀತಿಯನ್ನು ಅರ್ಥಮಾಡಿಕೊಂಡು ಬೋಧಿಸುವವರನ್ನು ಹೊರತುಪಡಿಸಿ ಹೊಸ ತಲೆಮಾರಿನ ಅನೇಕರು ರಾಮಾಯಣವನ್ನು ಕುತೂಹಲಕ್ಕಾಗಿಯಾದರೂ ಸಂಪೂರ್ಣವಾಗಿ ಓದದೆ, ರಾಮನೆಂಬವನು ಮಹಾ ಕೆಟ್ಟವನೆಂದು ಬೋಧಿಸುವುದಕ್ಕೇ ಈ ಪದ್ಯಭಾಗವನ್ನು ಬಳಸಿಕೊಳ್ಳುವುದಿದೆ. ತಾವು ಬೋಧಿಸಬೇಕಾದ, ತರಗತಿಯಲ್ಲಿರುವ ಅರುವತ್ತೋ ಎಪ್ಪತ್ತೋ ಮಕ್ಕಳಿಗೆ ತಮ್ಮ ಮಾತುಗಳು ಬಹಳ ಮುಖ್ಯ ಎಂಬುದನ್ನು ಅರಿತೋ ಅರಿಯದೆಯೋ ಬೋಧನೆಗೆ ಹಚ್ಚಿಕೊಂಡ ಕೆಲವು ಮಂದಿಯಿಂದ ಆಯಾ ಕಾವ್ಯಕ್ಕೆ ಸಿಗಬೇಕಾದ ಗೌರವ, ಮನ್ನಣೆ ದೊರೆಯದೇ ಹೋಗುತ್ತಿದೆ ಎಂಬ ಭಯವೂ ಕಾಡುವಂತಹ ಸಂದರ್ಭ ನಮ್ಮೆದುರು ಇದೆ. ರಾಮನನ್ನು ಭಕ್ತಿಭಾವದಿಂದ ಕಾಣುವ ಎಳೆಯ ಮನಸ್ಸುಗಳು ಗೊಂದಲದ ಕೂಪಕ್ಕೆ ತಳ್ಳಲ್ಪಡುತ್ತಾರೆ.
ಲಾಕ್ಡೌನ್ನ ಕೃಪೆಯಾಗಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾದ ರಾಮಾನಂದ ಸಾಗರರ ಉತ್ತರರಾಮಾಯಣ ಒಂದು ಹಂತದವರೆಗೆ ಸೀತಾಪರಿತ್ಯಾಗಕ್ಕೆ ನಿರ್ದಿಷ್ಟ ಸ್ಪಷ್ಟೀಕರಣಗಳನ್ನು ಕೊಡುವ ಪ್ರಯತ್ನ ಮಾಡಿದೆ. ಹಲವು ರಾಮಾಯಣ-ಆಧಾರಿತ ಧಾರಾವಾಹಿ ಇದಾಗಿರುವುದರಿಂದ ಜನರಿಗೆ ತಲಪಿಸಲೇಬೇಕಾದ ಅನೇಕ ವಿಷಯಗಳನ್ನು ಅತ್ಯಂತ ಸ್ಫುಟವಾಗಿ ಹೇಳುವಲ್ಲಿ ಇಡಿಯ ತಂಡ ದುಡಿದಿದೆ ಎನ್ನಿಸುತ್ತದೆ. ಸೀತಾಪರಿತ್ಯಾಗಕ್ಕೆ ಸಂಬಂಧಪಟ್ಟಂತೆ ಇಲ್ಲಿನ ವಿಸ್ಮಯವೆಂದರೆ ರಾಮನೇ ಸೀತೆಗೊಂದು ಮಾತೂ ಹೇಳದೆ ಅವಳ ಇಚ್ಛೆಯಂತೆ ಋಷಿಮುನಿಗಳ ದರ್ಶನದ ನೆಪದಲ್ಲಿ ಅವಳನ್ನು ಗಂಗಾನದಿಯ ತಟದಲ್ಲಿಯೋ ಆಶ್ರಮದಲ್ಲಿಯೋ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಹೇಳುವುದಲ್ಲ. ಬದಲಾಗಿ ತಾನೇ ಗುಪ್ತವೇಷದಲ್ಲಿ ಊರು ಸುತ್ತಿ ರಾಮನು ಸಂಗ್ರಹಿಸಿದ ವಿಷಯಗಳ ಮಾಹಿತಿಯನ್ನು ಸೀತೆಗೂ ಅವಳ ಸಖಿ ಅವಳ ಆದೇಶದ ಮೇರೆಗೆ ಹೇಳುತ್ತಾಳೆ. ತಾನು ಮಹಾರಾಣಿಯಾಗಿ ಅಯೋಧ್ಯೆಯ ರಾಜಸಿಂಹಾಸನದಲ್ಲಿ ಕುಳ್ಳಿರುವುದು ಪ್ರಜೆಗಳಿಗೆ ಸಹಮತವಿಲ್ಲ ಎಂಬುದು ಅರಿವಾದಾಗ ಸೀತೆ ಅದನ್ನು ತ್ಯಜಿಸುವ ತೀರ್ಮಾನ ತಾನೇ ಕೈಗೊಳ್ಳುತ್ತಾಳೆ.
ಆದರೆ ಅದು ಸಾಧ್ಯವಾಗಬೇಕಾದರೆ ಶ್ರೀರಾಮ ಅವಳನ್ನು ಪರಿತ್ಯಜಿಸಿದನೆಂದಾಗಬೇಕು. ಅಂತಹ ಕಠಿಣ ನಿರ್ಧಾರ ತನ್ನಿಂದ ಅಸಾಧ್ಯ ಎನ್ನುವ ರಾಮ ಹಲವು ಮನಗಳ ಪ್ರತಿಬಿಂಬ. ರಾಜನಾದವನಿಗೂ ಹೃದಯ-ಭಾವನೆಗಳು, ನೋವು, ಸಂಕಟ ಇರುತ್ತವೆ ಎಂದ ರಾಮನಿಗೆ ಸೀತೆ ಪ್ರಬುದ್ಧವಾದ ಬೋಧನೆಯನ್ನೇ ಮಾಡುತ್ತಾಳೆ. ಇಲ್ಲಿ ಸೀತೆಯನ್ನು ಪರಿತ್ಯಜಿಸಿದ ರಾಮನನ್ನು ಜನರು ಯಾವ ರೀತಿಯಿಂದ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಸ್ವತಃ ಸೀತೆಯೇ ಜನರಿಗೆ ಉಪದೇಶಿಸಿದಂತಿದೆ. ಶ್ರೀರಾಮ ವಜ್ರಾದಪಿ ಕಠೋರಾಣಿ ಎನಿಸಿದರೂ ಅವನು ಈ ವಿಷಯದಲ್ಲಿ ನಿಷ್ಕರುಣಿಯಾಗಿ ವರ್ತಿಸಬೇಕಾದದ್ದಕ್ಕೆ ಗ್ರಾಹ್ಯವೆನಿಸುವ ಉತ್ತರಗಳೂ ಇಲ್ಲಿ ದೊರೆತಿವೆ.
ರಾಜಸಿಂಹಾಸನ ಪವಿತ್ರವಾಗಿದ್ದರಷ್ಟೇ ಸಾಲದು, ನೋಡುವವರ ಕಣ್ಣಿಗೂ ಪವಿತ್ರವಾಗಿರಬೇಕು. ತಾನು ಕಳಂಕಿತೆಯಲ್ಲ ನಿಜ, ಆದರೆ ಜನರ ದೃಷ್ಟಿ ಅವಳನ್ನು ಹಾಗೆ ಕಂಡಿದೆಯೆಂದರೆ ಆ ಕಳಂಕವೊಂದು ಚರಿತ್ರೆಯಲ್ಲಿ ಉಳಿದುಹೋಗುತ್ತದೆ. ಅದು ಸೀತಾ ರಾಮರಿಬ್ಬರಿಗೂ ಒಳ್ಳೆಯದಲ್ಲ. ಸೀತೆ ರಾಮನ ದಾಸಿಯಲ್ಲ, ಅವಳನ್ನು ತನ್ನ ಸ್ನೇಹಿತೆಯೆಂದೇ ರಾಮ ಸ್ವೀಕರಿಸಿದ್ದು ಹೌದಾದರೆ ತನ್ನಿಂದಲಾಗಿ ಅವನು ಸಿಂಹಾಸನಕ್ಕೆ ಅನರ್ಹ, ತನ್ನ ಮೋಹದಿಂದಾಗಿ ಅವನು ತನ್ನ ಪೂರ್ವಜರು ಗಳಿಸಿದ್ದ ಕುಲದ ಮರ್ಯಾದೆಯನ್ನು ಗಾಳಿಗೊಡ್ಡಿದ್ದಾನೆ ಎಂಬ ಕಳಂಕ ಅವನ ಮೇಲೆ ಬಂದಿದೆಯೆಂದಾದರೆ, ಅದನ್ನು ತೊಡೆಯಬೇಕಾದರೆ ಅವಳು ದೂರವಾಗಲೇ ಬೇಕು. ರಾಜನಾದವನು ಮೊದಲು ಮನ್ನಣೆ ಕೊಡಬೇಕಾದದ್ದು ಪ್ರಜಾಧ್ವನಿಗೆ. ಮಿಕ್ಕಿದ್ದೆಲ್ಲ ಆಮೇಲೆ. ಹಾಗಾಗಿಯೇ ರಾಜನಾದವನು ಸಂನ್ಯಾಸಿಯಂತೆ. ಅವನಿಗೆ ಯಾವುದೇ ಬಾಂಧವ್ಯವು ತನ್ನ ಕರ್ತವ್ಯಪಾಲನೆಗೆ ಕುಂದು ತರುವಂತಿರಬಾರದು ಎನ್ನುವ ಸೀತೆ ತ್ರೇತಾಯುಗದ ರಾಜನೀತಿಯನ್ನು ಸ್ಪಷ್ಟಪಡಿಸುತ್ತಾಳೆ.
ಅಂತರಾತ್ಮ ಯಾವುದನ್ನು ಸರಿಯೆಂದು ಒಪ್ಪುತ್ತದೋ ಅದು ಧರ್ಮ ಎಂದಾದರೆ ಅಂತರಂಗದಲ್ಲಿ ಸೀತೆಯ ಬಗ್ಗೆ ಜನಾಪವಾದ ಸುಳ್ಳು ಎಂಬುದನ್ನು ಅರಿತಿದ್ದೂ ಅವಳನ್ನು ತ್ಯಜಿಸುವುದು ಧರ್ಮವೆನಿಸದು ಎಂದ ರಾಮನಿಗೆ ಸೀತೆಯೇ ಸತ್ಯಹರಿಶ್ಚಂದ್ರ, ಶಿಬಿಚಕ್ರವರ್ತಿಗಳ ಉದಾಹರಣೆ ನೀಡುತ್ತಾಳೆ. ಚಂದ್ರಮತಿ ರೋಹಿತಾಶ್ವನ ಮೇಲೆ ಅತ್ಯಂತ ಪ್ರೇಮಭಾವವಿದ್ದೂ ಅವರನ್ನು ಮಾರುವ ಪರಿಸ್ಥಿತಿ ಬಂದಾಗ ಹರಿಶ್ಚಂದ್ರ ತನ್ನ ಧರ್ಮವನ್ನು ಪಾಲಿಸುವುದು ಮುಖ್ಯವೆಂದೇ ಭಾವಿಸುತ್ತಾನೆ. ರಘುಕುಲದ ಸೊಸೆಯಾಗಿ ಅವಳಿಗಿರುವ ಉತ್ತರದಾಯಿತ್ವ ತನ್ನಿಂದಾಗಿ ಕುಲಕ್ಕಂಟಿದ ಕಳಂಕವನ್ನು ತೊಡೆದುಹಾಕುವುದು. ಕುಲದ ಮರ್ಯಾದೆಗಾಗಿ ವ್ಯಕ್ತಿಯ ಬಲಿದಾನ ಅನಿವಾರ್ಯವೆಂದಾದರೆ ರಾಜ ಅದಕ್ಕೆ ಚಿಂತಿಸಬಾರದು.
ರಾಜನು ಶಸ್ತ್ರಗಳ ಮುಖೇನ ಹೋರಾಡಿ ವಿಜಯ ಸಾಧಿಸಬಹುದಾದರೆ ಹೆಣ್ಣಾದವಳು ಸ್ವತಃ ಶಕ್ತಿಸ್ವರೂಪಿಣಿಯಾಗಿದ್ದು ತನ್ನ ಶೀಲ ಮತ್ತು ಧರ್ಮಗಳಿಂದಲೇ ಜಗತ್ತನ್ನು ಜಯಿಸಬಲ್ಲವಳು. ಹೆಣ್ಣಿನ ಅಸ್ತ್ರ ಕತ್ತಿಯೋ ಖಡ್ಗವೋ ಅಲ್ಲ. ಅದು ಸಹನೆ. ಅವಳ ಗೆಲವಿಗಾಗಿ ಅವಳು ಬಳಸಬಹುದಾದ ಮೊದಲ ಆಯುಧ ತ್ಯಾಗ. ಎರಡನೆಯದು ಸೇಡಿಗಾಗಿ ಇತರರಿಗೆ ನೋವು ಕೊಡುವ ಬದಲು ತಾನೇ ನೋವುಣ್ಣುವುದು. ಪುರುಷನು ಶರೀರದಿಂದ ಜಯಿಸಿದರೆ ಸ್ತ್ರೀಯು ಮನಸ್ಸನ್ನು ಜಯಿಸುತ್ತಾಳೆ. ಇದೆರಡರಿಂದ ಅವಳು ತನ್ನ ವೈರಿಯಲ್ಲೂ ಪ್ರೇಮಭಾವ ಉದಿಸುವಂತೆ ಮಾಡಬಲ್ಲಳು. ಇಡಿಯ ಅಯೋಧ್ಯೆಯ ಪ್ರಜೆಗಳನ್ನು ಅವಳು ಮಕ್ಕಳಂತೆ ಪಾಲಿಸಬೇಕು. ಜನರು ಅರಿವಿದ್ದೊ ಇಲ್ಲದೆಯೊ ತಮ್ಮ ತಾಯಿಯ ಮೇಲೆ ಅಪವಾದ ಹೊರೆಸಿದ್ದಾರೆ. ಸೀತೆ ಅಯೋಧ್ಯೆಯಿಂದ ದೂರವಾಗಿ ಬದುಕಿದರೆ ಒಂದಲ್ಲ ಒಂದು ದಿನ ಜನರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಮಹಾಸತಿಯಾದ ಸೀತೆಯ ಮೇಲೆ ಕಳಂಕದ ಮಾತಾಡಿದ್ದಕ್ಕಾಗಿ ಅವರು ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದು ರಾಜಾರಾಮನ ಪದತಲದಲ್ಲಿ ಬೀಳುತ್ತಾರೆ. ಕ್ಷಮೆ ಯಾಚಿಸುತ್ತಾರೆ. ಅವಳ ಮೇಲೆ ಬಂದಿರುವ ಆರೋಪವನ್ನು ಇಲ್ಲವಾಗಿಸಲು ಬಲಪ್ರಯೋಗದಿಂದ ಏನೂ ಪ್ರಯೋಜನವಿಲ್ಲ. ಜನರ ಮನಃ ಪರಿವರ್ತನೆಯಾಗಿಸುವುದೇ ದಾರಿ. ಅದಕ್ಕಿರುವ ಏಕೈಕ ಮಾರ್ಗ ಸೀತಾಪರಿತ್ಯಾಗ.
ಆಂತರ್ಯದಲ್ಲಿ ಲಕ್ಷ್ಮಿಯು ನಾರಾಯಣನಿಂದ ದೂರವಾಗಲಾರಳು. ಭೌತಿಕವಾಗಿ ಅವರು ದೂರವಿದ್ದರೂ ಒಬ್ಬರಿನ್ನೊಬ್ಬರ ಮನಸ್ಸಿನ ಧ್ವನಿಯನ್ನು ಕೇಳಿಸಿಕೊಳ್ಳಬಲ್ಲರು. ಒಬ್ಬರಿನ್ನೊಬ್ಬರಿಗಾಗಿ ಹಾಡಬಲ್ಲರು ಎಂಬಲ್ಲಿ ಅವರು ಅವತಾರ ಎತ್ತಿರುವವರು; ಸಾಮಾನ್ಯವಾದ ಸ್ತ್ರೀ-ಪುರುಷರಲ್ಲ ಎಂಬುದನ್ನೂ ಧ್ವನಿಸುವಂತೆ ಸೀತೆ ಮಾತನಾಡುತ್ತಾಳೆ. ಜಗತ್ತಿನ ಕಣ್ಣಿಗೆ ಅತ್ಯಂತ ಕಠೋರವಾದ ತೀರ್ಮಾನ ತೆಗೆದುಕೊಂಡ ರಾಮನು ಯಾವುದೇ ಕಾರಣಕ್ಕೂ ಜನರ ಕಣ್ಣಿನಲ್ಲಿ ದುರ್ಬಲನಾಗಿ ಕಾಣಿಸಬಾರದು. ರಾಜನಾಗಿ ತನ್ನ ಕರ್ತವ್ಯವನ್ನು ಪಾಲಿಸುವಲ್ಲಿ ಸೀತಾವಿಯೋಗ ಒಂದು ನೋವಾಗಿ ಅಡ್ಡಿಯಾಗಬಾರದು ಎಂದೂ ಅವಳು ಎಚ್ಚರಿಸುತ್ತಾಳೆ. ರಾಜನಾದವನು ನೋವನ್ನು ಅನುಭವಿಸಬೇಕಾಗಿ ಬಂದರೂ ಅದನ್ನು ಹೊರಜಗತ್ತಿಗೆ ತೋರಿಸುವ ಅವಕಾಶ ಅವನಿಗಿಲ್ಲ. ಅವನು ದುರ್ಬಲನೆನಿಸಿದರೆ ಜನರ ಕಣ್ಣಲ್ಲಿ ಸಣ್ಣವನಾಗುತ್ತಾನೆ. ನೋವನ್ನೆಲ್ಲ ನುಂಗಿ ಹೊರಗಿನಿಂದ ನಿರ್ಭಾವುಕನಾಗಿ ಕಾಣುವುದು ಅವನಿಗೆ ಅನಿವಾರ್ಯ ಎಂಬ ಸಂದೇಶ ಕೊಡುತ್ತಾಳೆ. ಒಂದು ವೇಳೆ ರಾಮನು ಹಾಗಿಲ್ಲದೆ ಹೋದಲ್ಲಿ ಪರಿತ್ಯಾಗದ ಹೆಸರಿನಲ್ಲಿ ಅವರಿಬ್ಬರೂ ಮಾಡಿದ ಬಲಿದಾನ ವ್ಯರ್ಥವಾಗುತ್ತದೆ ಎಂಬುದು ಅವಳ ಕಳಕಳಿ. ಜನರಿಗೆ ರಾಜನ ಕಟು ತೀರ್ಮಾನದಿಂದ ತಮ್ಮ ತಪ್ಪಿನ ಅರಿವಾಗುವುದಷ್ಟೇ ಮುಖ್ಯ. ಅಂತಹ ದಿನ ತಾನು ಗರ್ಭದಲ್ಲಿ ಧರಿಸಿರುವ ಶ್ರೀರಾಮನ ಉತ್ತರಾಧಿಕಾರಿಯನ್ನು ಜನರ ಸಮ್ಮುಖದಲ್ಲೇ ಸ್ವೀಕರಿಸುವಂತಾಗುತ್ತದೆ ಎಂದು ಅವಳು ಅಯೋಧ್ಯೆಯಿಂದ ನಿರ್ಗಮಿಸುತ್ತಾಳೆ, ಮೈದುನ ಲಕ್ಷ್ಮಣನ ಜೊತೆಗೆ.
ಇಲ್ಲಿ ಗಮನಿಸಬೇಕಾದ್ದು ಸ್ವತಃ ಲಕ್ಷ್ಮಣನಿಗೂ ಇದಾವುದರ ಅರಿವಾಗದಂತೆ ರಾಮನೇ ಸೀತೆಯನ್ನು ತ್ಯಜಿಸಿದನೆಂಬ ಭಾವ ಬರುವಂತೆ ರಾಮನು ವರ್ತಿಸುವುದು. ಹಿಂದಿನ ಸಂದರ್ಭಗಳೆಲ್ಲದರಲ್ಲೂ ಅವನಿಗೆ ಮಾತಿಗೆ ಅವಕಾಶ ಕೊಟ್ಟಿದ್ದ ರಾಮನು ಇಲ್ಲಿ ಕೊಡುವುದಿಲ್ಲ. ರಾಜಾಜ್ಞೆಯನ್ನು ಪಾಲಿಸಬೇಕು ಎಂದು ಕರ್ಣಕಠೋರವಾಗಿ ನುಡಿಯುತ್ತಾನೆ. ಲಕ್ಷ್ಮಣನಿಗಾದರೂ ಎರಡು ಹನಿ ಕಂಬನಿ ಮಿಡಿಯುವುದಕ್ಕೆ ಅವಕಾಶವಿದೆ. ಆದರೆ ತಪ್ಪೇ ಮಾಡದ, ತನ್ನ ಪ್ರೇಮಖನಿಯಾದ ಸೀತೆಯನ್ನು ಕಾಡಿಗಟ್ಟುವಂಥ ಪರಿಸ್ಥಿತಿಗಾಗಿ ರಾಮನಿಗೆ ಮರುಗಲೂ ಅವಕಾಶವಿಲ್ಲ. ಅವನು ಅನುಭವಿಸಿದ ಸಂಕಟ, ಅವನೊಳಗಿನ ನೋವು ಕಡಮೆಯದ್ದೇ? ಮುಂದೆ ತಾನೆಂದಂತೆ ಲವಕುಶರನ್ನು ರಾಮನಿಗೊಪ್ಪಿಸಿ ಸೀತೆ ಭೂಗರ್ಭ ಸೇರುತ್ತಾಳೆ. ಅವಳು ಮತ್ತೆಂದೂ ಅಯೋಧ್ಯೆಯ ಮಹಾರಾಣಿಯಾಗಿ ಬರುವುದಿಲ್ಲ, ಸಿಂಹಾಸನ ಏರುವುದಿಲ್ಲ. ಅವಳನ್ನು ಶಂಕಿಸಿದ
ಅಯೋಧ್ಯೆಯ ಮಂದಿಗೆ ಬೇರೆ ಶಿಕ್ಷೆ ಬೇಕೆ? ರಾಮನಿಗಾದರೋ ಭೃಗು ಮುನಿಗಳ ಶಾಪ, ಪತ್ನೀವಿಯೋಗದ ಸಂಕಟ. ನಮ್ಮ ಪುರಾಣಗಳು ನಿಜಕ್ಕೂ ಅದ್ಭುತ!
ಎಲ್ಲ ಹೌದು, ಮನೆಮನೆಗಳ ನಾರೀಮಣಿಯರಿಗೆ ಸೀತೆ ಯಾಕೆ ಆದರ್ಶವಾಗಬೇಕು ಎಂಬುದಕ್ಕೂ ಇದು ಉತ್ತರ ಹೌದು. ಸಮಯ ಸಂದರ್ಭಗಳಿಗೆ ಅನುಸಾರವಾಗಿ ಅವಳು ಮಾಡುವ ತ್ಯಾಗ ದೊಡ್ಡದೇ ಆಗಿರುತ್ತದೆ. ಸೀತೆಯಂತೆ ತನ್ನ ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳುವುದು ಮನೆಯ ಗೃಹಿಣಿಗೂ, ಅವಳ ತ್ಯಾಗದ ಔನ್ನತ್ಯವನ್ನು ಅರ್ಥಮಾಡಿಕೊಳ್ಳುವುದು ಮನೆಯ ಸದಸ್ಯರಿಗೂ ಅರ್ಥವಾಗಿ ಬಾಳಿದರೆ ಅದಕ್ಕಿಂತ ದೊಡ್ಡ ರಾಮರಾಜ್ಯ ಬೇರಾವುದಿದ್ದೀತು?