ಮೇ 12, 2020ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದ್ದು ಎಲ್ಲರಿಗೂ ತಿಳಿದಿದೆ. ಪ್ರಧಾನಿಯವರು ಲಾಕ್ಡೌನ್ ವಿಚಾರವಾಗಿ ಮಾತನಾಡುತ್ತಾರೆ ಎಂದೇ ದೇಶದ ಜನತೆಯ ನಿರೀಕ್ಷೆಯಾಗಿತ್ತು. ಆದರೆ ನಮ್ಮ ಪ್ರಧಾನಿಯವರ ಕಾರ್ಯವೈಖರಿಯೇ ವಿಭಿನ್ನ.
ನಮ್ಮಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲೂ ಒಂದು ರೀತಿಯ ಗೊಂದಲವಿದೆ. ಅವರಿಗೆ ತಮ್ಮ ಕರ್ತವ್ಯವೇನು, ಅಧಿಕಾರಿಗಳ ಕರ್ತವ್ಯವೇನು ಎಂಬುದರ ಅರಿವಿನ ಕೊರತೆ ಇರುವುದನ್ನು ಕಾಣುತ್ತೇವೆ; ಈವತ್ತಿನ ಹೆಚ್ಚಿನ ಸಿನೆಮಾಗಳಲ್ಲಿ ಕಂಡುಬರುವ ಹಾಗೆ ಒಬ್ಬನೇ ನಟ ಸಿನೆಮಾದ ಮೊದಲ ತಾಸಿನಲ್ಲಿ ಹೀರೋ ಆಗುತ್ತಾನೆ; ಎರಡನೇ ತಾಸಿನಲ್ಲಿ ಜೋಕರ್ ಆಗಿ, ಮೂರನೇ ತಾಸಿನಲ್ಲಿ ವಿಲನ್ ಆಗಿಬಿಡುತ್ತಾನೆ! ನಮ್ಮ ರಾಜಕಾರಣಿಗಳೂ ದಿನದ ಮೊದಲ ಭಾಗದಲ್ಲಿ ನೀತಿ ರೂಪಿಸುವವರು, ಎರಡನೇ ಭಾಗದಲ್ಲಿ ವಕ್ತಾರರಾಗಿ, ಮೂರನೇ ಭಾಗದಲ್ಲಿ ಕ್ಷೇತ್ರ ಪರಿಶೀಲನೆ ಮಾಡುವವರೂ ಆಗುತ್ತಾರೆ.
ರಾಜಕಾರಣಿ ತಾನು ಎಲ್ಲವನ್ನೂ ಮಾಡಬಲ್ಲೆ, ಮಾಡಲೇಬೇಕು ಎಂದು ಅಂದುಕೊಳ್ಳುತ್ತಾನೆ. ಆದರೆ ನಮ್ಮ ಪ್ರಧಾನಿಯವರು ತಾನೇನು ಮಾಡಬೇಕು, ಅಧಿಕಾರಿಗಳು ಏನು ಮಾಡಬೇಕು ಎನ್ನುವುದರ ನಡುವಿನ ವ್ಯತ್ಯಾಸವನ್ನು ನಿಚ್ಚಳವಾಗಿ ಅರಿತವರು. ನಾಲ್ಕು ಗಂಟೆಗೆ ಪತ್ರಿಕಾಗೋಷ್ಠಿ ಇದೆ; ಕೊರೋನಾದ ಅಂಕಿ-ಅಂಶದ ವಿವರ ನೀಡಬೇಕು ಎಂಬುದು ಅಧಿಕಾರಿಗಳಿಗೆ ತಿಳಿದಿರುತ್ತದೆ; ಅಧಿಕಾರಿಗಳು ಅದರಲ್ಲಿ ಪರಿಣತರು. ತಮ್ಮ ಕೆಲಸ ಅಂಕಿ-ಅಂಶ ಹೇಳುವುದಲ್ಲ, ಅದು ಅಧಿಕಾರಿಗಳ ಕೆಲಸ ಎಂದು ಪ್ರಧಾನಮಂತ್ರಿಗಳಿಗೆ ತಿಳಿದಿದೆ. ಅಂಕಿ-ಅಂಶ ಹೇಳಿದರೆ ಅದು ಅವರ ಕೆಲಸ ಅಲ್ಲ ಎಂದೂ, ಹೇಳದಿದ್ದರೆ ಹೇಳಲೇ ಇಲ್ಲ ಎಂದೂ ಟೀಕಾಕಾರರು ದೂರುತ್ತಾರೆ ಎಂಬುದೂ ಅವರಿಗೆ ಗೊತ್ತು.
ಮೇ 12ರಂದು ಪ್ರಧಾನಿಯವರು ತಮ್ಮ 33 ನಿಮಿಷದ ಭಾಷಣದಲ್ಲಿ, ಬಹಳ ಜನ ನಿರೀಕ್ಷಿಸಿದಂತೆ, ಲಾಕ್ಡೌನ್ ಬಗ್ಗೆ ಮಾತನಾಡಲೇ ಇಲ್ಲ; ಬದಲಿಗೆ ಅವರು ಹೊಸದೊಂದು ಕನಸನ್ನೇ ದೇಶದ ಜನತೆಯ ಮುಂದೆ ಇಟ್ಟರು. ಹೊಸ ಪದದ ಬಳಕೆ ಮಾಡಿದರು; ಅದೇ – ‘ಆತ್ಮನಿರ್ಭರ ಭಾರತ.’
ಸಿದ್ಧ ನೀಲಿನಕ್ಷೆ
ಪ್ರಧಾನಿಯವರು ಮಾತನಾಡುವಾಗ ತಮ್ಮ ಮನಸ್ಸಿನಲ್ಲಿರುವ ವಿಚಾರದ ನೀಲಿನಕ್ಷೆಯನ್ನೂ ದೇಶದ ಮುಂದಿಟ್ಟಿದ್ದಾರೆ. ಆ ದಿಕ್ಕಿನೆಡೆಗೆ ಅವರು ಈಗಾಗಲೇ, ಕಳೆದ ಆರು ವರ್ಷಗಳಿಂದ ಪಯಣ ಆರಂಭಿಸಿದ್ದು, ದೇಶವನ್ನು ಆ ದಿಕ್ಕಿನಲ್ಲೇ ಕರೆದೊಯ್ಯುತ್ತಿರುವ ವಿಚಾರವನ್ನು ವಿವರವಾಗಿ ತೆರೆದಿಟ್ಟರು.
‘ಆತ್ಮನಿರ್ಭರ ಭಾರತ’ ಎಂಬ ಕಲ್ಪನೆ ಇಂದಿನದಲ್ಲ. ನಮ್ಮ ಪ್ರಾಚೀನ ವಿಚಾರಧಾರೆಗಳು, ಮೌಲ್ಯಗಳು, ಜೀವನವಿಧಾನ ಇವೆಲ್ಲ ಇದನ್ನೇ ಆಧರಿಸಿವೆ. ನಮ್ಮ ಪ್ರಾಚೀನ ಋಷಿಗಳು ಕಂಡುಕೊಂಡ ಆದರ್ಶ, ಬದುಕಿದ ರೀತಿ, ನಮಗೂ ತೋರಿದ ಮಾರ್ಗ ಇದೇ ಆಗಿದೆ. ನಮ್ಮ ಪ್ರಧಾನಿಯವರು ಆ ಆದರ್ಶದ ಮಾರ್ಗದಲ್ಲೇ ದೇಶವನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಏರಿಸಿಕೊಂಡಿದ್ದಾರೆ. ಆಧುನಿಕ ಭಾರತವು ‘ನವಭಾರತ’ದತ್ತ ಹೆಜ್ಜೆಹಾಕುತ್ತಿರುವ, ವಿಶ್ವದ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಈ ಕವಲಿನ ಗಳಿಗೆಯಲ್ಲಿ ನಾವು ಅದನ್ನು ‘ವಿಶ್ವಗುರು’ ಎನ್ನೋಣ ಅಥವಾ ‘ಗ್ಲೋಬಲ್ ಪವರ್’ ಎನ್ನೋಣ; ಯಾವುದೇ ಆದರೂ ಇಲ್ಲಿ ‘ಪವರ್’ ಪದದ ಬಳಕೆಯನ್ನು ಪಾಶ್ಚಾತ್ಯ ತತ್ತ್ವಶಾಸ್ತ್ರದಲ್ಲಿ, ಇಂಗ್ಲಿಷ್ ಶಬ್ದಕೋಶದಲ್ಲಿ ವಿವರಿಸಿದಂತೆ ಬಳಸಲಾಗಿಲ್ಲ; ಬದಲಾಗಿ ಗ್ಲೋಬಲ್ ಸೂಪರ್ ಪವರ್, ಗ್ಲೋಬಲ್ ಪವರ್ ಇವೆಲ್ಲ ‘ಪವರ್’ಗಳು ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕೃತಿಯ ಅರ್ಥವನ್ನಾಧರಿಸಿವೆ.
ಇಲ್ಲಿ ‘ಪವರ್’ ಎಂದರೆ ಯಾರನ್ನೋ ಗೆಲ್ಲುವುದಲ್ಲ; ಪವರ್ ಎಂದರೆ ನಮ್ಮ ಜೊತೆಯವರ ಒಳಿತನ್ನು ಸಾಧಿಸುವುದು – ‘ವೆಲ್ಫೇರ್ ಆಫ್ ಅದರ್ಸ್.’ ಪವರ್ ಪದದ ಅರ್ಥ ಪಾಶ್ಚಾತ್ಯ ತತ್ತ್ವಶಾಸ್ತ್ರಕ್ಕಿಂತ ಪೌರಸ್ತ್ಯ, ಅದರಲ್ಲೂ ಭಾರತೀಯ ಅಥವಾ ಹಿಂದೂ ತತ್ತ್ವಶಾಸ್ತ್ರದಲ್ಲಿ ಭಿನ್ನವೇ ಆಗಿದೆ. ಗ್ಲೋಬಲ್ ಪವರ್ ಎಂದರೆ ಅಮೆರಿಕನ್ ಗ್ಲೋಬಲ್ ಪವರ್, ರಶಿಯನ್ ಗ್ಲೋಬಲ್ ಪವರ್, ಅಥವಾ ಇತ್ತೀಚಿಗೆ ಕೇಳಿಬರುತ್ತಿರುವ ಚೈನೀಸ್ ಗ್ಲೋಬಲ್ ಪವರ್ ಅಥವಾ ಇನ್ನಾವುದೋ ಯೂರೋಪಿಯನ್ ಗ್ಲೋಬಲ್ ಪವರ್ ಎಂದಲ್ಲ; ಇಲ್ಲಿ ಗ್ಲೋಬಲ್ ಪವರ್ ಎನ್ನುವುದಕ್ಕೆ ವಿಶಾಲ ದೃಷ್ಟಿಕೋನವಿದೆ. ‘ಪವರ್’ ಪದವನ್ನು ಸ್ವಲ್ಪ ವಿಶ್ಲೇಷಿಸಿ, ನಾವು ಭಾರತೀಯರು ಬಳಸುವ ವಿಭಿನ್ನ ರೀತಿಯಲ್ಲೇ ಬಳಸುವ ಅಗತ್ಯವಿದೆ. ಸಾಮಾಜಿಕ ಏರಿಳಿತದಲ್ಲೂ ರೂಢಿಸಿಕೊಂಡ, ರೂಢಿಯಲ್ಲಿರುವ, ಆನುವಂಶಿಕವಾಗಿ ನಾವು ಬಳಸುವ ರೀತಿಯಲ್ಲಿ ಹೇಳುವುದಾದರೆ ‘ಪವರ್’ ಪದವು ಇನ್ನೊಬ್ಬರನ್ನು ಗೆಲ್ಲುವ, ಇನ್ನೊಬ್ಬರ ಮೇಲೆ ಜಯಗಳಿಸುವ ಗುಣಲಕ್ಷಣಗಳನ್ನು ಹೊಂದಿದ್ದಲ್ಲ; ಅಥವಾ ವಿಸ್ತರಣವಾದದ್ದೂ ಅಲ್ಲ; ಪ್ರತ್ಯೇಕತೆಯ, ವಿಸ್ತರಣೆಯ ಗುಣಲಕ್ಷಣವುಳ್ಳದ್ದಲ್ಲ; ‘ಆತ್ಮನಿರ್ಭರ’ ಎಂದರೆ ಪಾಶ್ಚಾತ್ಯ ಮಾದರಿ ಹೇಳುವ ಹಾಗೆ ಯಾರನ್ನೋ ಹೊರದಬ್ಬುವುದಲ್ಲ.
ಆತ್ಮನಿರ್ಭರ ಎಂದರೆ ಮೊದಲನೆಯದಾಗಿ ‘ನೀನು ಎಲ್ಲೆಡೆಗೂ ಹೋಗಿ ಜಯಶಾಲಿಯಾಗು; ಅದು ನಿನ್ನ ಗುಣದ ಬಲದ ಮೇಲೆ.’
ಆತ್ಮನಿರ್ಭರ ಎಂದರೆ ‘ನೀನು ಎಲ್ಲೆಡೆಗೂ ಹೋಗಿ ಜಯಶಾಲಿಯಾಗು; ಅದು ನಿನ್ನ ಕೌಶಲದ ಮೇಲೆ.’
ಆತ್ಮನಿರ್ಭರ ಎಂದರೆ ‘ನೀನು ಎಲ್ಲೆಡೆಗೂ ಹೋಗಿ ಜಯಶಾಲಿಯಾಗು; ಅದು ನೀನು ರೂಢಿಸಿಕೊಂಡ ಮೌಲ್ಯಗಳ ಬಲದ ಮೇಲೆ.’
– ಈ ತತ್ತ್ವಗಳ ಆಧಾರದ ಮೇಲೆ ಎಲ್ಲೆಡೆಗೂ ಹೋಗಿ ನೀನು ಮಾನವನ ಒಳಿತಿಗಾಗಿ ಕೆಲಸ ಮಾಡು – ಎಂಬುದು ಆವಾಹನೆ.
ದೃಷ್ಟಿಕೋನ ಮತ್ತು ಅನುಷ್ಠಾನ
ತಮ್ಮ ಮಾತಿನಲ್ಲಿ ಪ್ರಧಾನಿಯವರು ಆತ್ಮನಿರ್ಭರ ಭಾರತದ ಕುರಿತಾದ ತಮ್ಮ ದೃಷ್ಟಿಕೋನವನ್ನು ತೆರೆದಿಡುತ್ತ ಆರ್ಥಿಕತೆ, ಇನ್ನುಳಿದ ಸುಧಾರಣೆಗಳನ್ನು ಉಲ್ಲೇಖಿಸಿದರು. ‘ಆತ್ಮನಿರ್ಭರ ಭಾರತ’ ಇದು ನಮ್ಮ ‘ವಸುಧೈವ ಕುಟುಂಬಕಮ್’ ಎನ್ನುವ ಪದದಿಂದಲೇ ಹುಟ್ಟಿದ್ದು. ‘ವಸುಧೈವ ಕುಟುಂಬಕಮ್’ ಒಳಗೂಡಿಸುವಿಕೆಯೇ (ಇನ್ಕ್ಲೂಸಿವ್, ಅಂತರ್ವಿಷ್ಟ) ಹೊರತು ಪ್ರತ್ಯೇಕಿಸುವುದಲ್ಲ (ಎಕ್ಸಕ್ಲೂಸಿವ್). ನಾವು ಯಾರನ್ನೂ ಗೆಲ್ಲುವುದಲ್ಲ. ನಮ್ಮ ಸೈನಿಕ ಶಕ್ತಿಯ ಬಳಕೆಯಿಂದ ಯಾರ ಮೇಲೂ ಜಯ ಗಳಿಸಲು ಬಯಸುವುಲ್ಲ.
‘ವಸುಧೈವ ಕುಟುಂಬಕಮ್’ ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಹಿಂದೂ ತತ್ತ್ವಶಾಸ್ತ್ರವನ್ನೂ, ಭಾರತೀಯ ಜೀವನಪದ್ಧತಿಯನ್ನೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ‘ಪುರುಷಾರ್ಥ’ ಎನ್ನುತ್ತಾರೆ. ಅದು ಗುರುಕುಲದಲ್ಲಿ ಕಲಿಸಿದ ಪ್ರತಿಯೊಬ್ಬನ ಜೀವನದ ಗುರಿ, ನಮ್ಮ ಸಮಾಜದ ಜನರು ರೂಢಿಸಿಕೊಂಡ ಜೀವನವಿಧಾನ. ಇದು ನಮ್ಮಲ್ಲಿ ಅಕ್ಷರಸ್ಥರು ಮಾತ್ರವಲ್ಲ, ಅನಕ್ಷರಸ್ಥರೆನಿಸಿಕೊಂಡವರೂ ರೂಢಿಸಿಕೊಂಡ ಜೀವನವಿಧಾನ.
ನಮ್ಮ ಪ್ರಾಚೀನ ಋಷಿಗಳು ಹೇಳಿದ್ದು, ಪ್ರಧಾನಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ.’ ನಮ್ಮ ಸತ್ಯದ ದೇವರ ಸಾಕ್ಷಾತ್ಕಾರದ ಉದ್ದೇಶ ವಿಶ್ವದ ಒಳಿತು. ವಿಶ್ವದ ಒಳಿತು ಮೊದಲಾಗಬೇಕು.
ಇನ್ನು ‘ಕೃಣ್ವಂತೋ ವಿಶ್ವಮಾರ್ಯಂ’. ಚೀನಾದವರ ದೃಷ್ಟಿಕೋನವಾದಂಥ – ‘ಚೀನಾ ಮಾತ್ರ ಸ್ವರ್ಗ, ಉಳಿದವರೆಲ್ಲ ಅದರ ಕೈಕೆಳಗಿನವರು. ಉಳಿದವರೆಲ್ಲರೂ ಅವರಿಂದ ಹೇಗೆ ಬದುಕಬೇಕು ಎನ್ನುವುದನ್ನು ಕಲಿಯಬೇಕು’ ಎನ್ನುವ ತತ್ತ್ವಕ್ಕಿಂತ ತುಂಬ ಬೇರೆಯಾದ್ದು. ಅದು ಚೀನಾದ ಮೂಲತತ್ತ್ವ. ಅದನ್ನೇ ಆಧಾರವಾಗಿಟ್ಟುಕೊಂಡು ಚೀಣ ನಡೆಯುತ್ತಿದೆ.
‘ಕೃಣ್ವಂತೋ ವಿಶ್ವಮಾರ್ಯಂ’ ಎಂದಾಗ ಇಲ್ಲಿ ವಿಶ್ವವನ್ನು ಮುನ್ನಡೆಸಬೇಕಾದರೆ ಮೊದಲು ನೀನು ಕಲಿ, ನೀನು ಶಿಕ್ಷಣವಂತನಾಗು ಎನ್ನುವುದಕ್ಕೆ ಆದ್ಯತೆ. ಇಲ್ಲಿ ಶಿಕ್ಷಣವಂತನಾಗು ಎಂದರೆ ಪದವಿ ಪಡೆದು ನೌಕರಿ, ಹಣ, ಅಂತಸ್ತು ಗಳಿಸು ಎಂದಲ್ಲ. ಇವೆಲ್ಲ ಶಿಕ್ಷಣದ ಶಾಖೆಗಳು. ಶಿಕ್ಷಣದ ಗುರಿ ವಿಶ್ವವನ್ನು ಬದುಕುವುದಕ್ಕೆ ಯೋಗ್ಯವನ್ನಾಗಿ ಮಾಡುವುದು. ‘ಕೃಣ್ವಂತೋ ವಿಶ್ವಮಾರ್ಯಂ’ ಎಂದರೆ ನೀನು ಶಿಕ್ಷಣ ಹೊಂದು, ಸಂಸ್ಕಾರವಂತನಾಗು. ಅದನ್ನು ರೂಢಿಸಿಕೋ. ಆ ಮೂಲಕ ವಿಶ್ವವನ್ನು ಉತ್ತಮ ವಾಸಸ್ಥಾನವನ್ನಾಗಿ ಪರಿವರ್ತನೆ ಮಾಡಬೇಕು ಎಂಬುದಾಗಿ.
ನಮ್ಮ ಋಷಿಮುನಿಗಳು ಹೇಳಿದಂತೆ, ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವ ಮಾನವಾಃ ||
ನಮ್ಮ ಜೀವನದ ಅರ್ಥ ಏನು, ಸಮಾಜದ ಅರ್ಥ ಏನು, ಸಮಾಜದ ದಿಕ್ಕು ಏನು? ನಮ್ಮ ಸಮಾಜದ ಗುರಿ ‘ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವ ಮಾನವಾಃ’ ಇಡೀ ಮಾನವಕುಲದ ಕಾಳಜಿಯನ್ನು ಪರಿಗಣಿಸುವುದು.
ನಮ್ಮ ದೇಶದಲ್ಲಿ ಏಕಕಾಲದಲ್ಲಿ ಎರಡು ವಾಕ್ಯಗಳ ಬಳಕೆ ಇದೆ.
ಲಂಕೆಯನ್ನು ಗೆದ್ದ ಬಳಿಕ ಲಕ್ಷ್ಮಣ ರಾಮನಿಗೆ ‘ಲಂಕೆ ಅಯೋಧ್ಯೆಗಿಂತಲೂ ಉತ್ತಮವಾಗಿದೆ; ಅಯೋಧ್ಯೆಯನ್ನು ಈಗಾಗಲೇ ಭರತ ಆಳುತ್ತಿದ್ದಾನೆ; ನಾವೇಕೆ ಹಿಂದಿರುಗಿ ಹೋಗಬೇಕು?’ ಇಲ್ಲೇ ಇದ್ದು ಬಿಡೋಣ ಎಂದು ಕೇಳಿದಾಗ, ರಾಮ
“ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||”
ಎನ್ನುವ ಉತ್ತರ ಕೊಡುತ್ತಾನೆ. ಅದೇ ವೇಳೆಗೆ ಶಂಕರಾಚಾರ್ಯರು ‘ಸ್ವದೇಶೋ ಭುವನತ್ರಯಮ್’ ಎಂದಿದ್ದಾರೆ.
ಈ ಎರಡೂ ವಾಕ್ಯಗಳು ಒಂದೇ ನಾಣ್ಯದ ಎರಡು ಮುಖ. ‘ಬಾಂಧವಾಃ ಶಿವಭಕ್ತಾಶ್ಚ’ ಎಂದರು ಆದಿಶಂಕರರು. ಇಲ್ಲಿ ಶಿವಭಕ್ತರು ಎಂದರೆ ಒಬ್ಬ ದೇವರನ್ನು ಪೂಜಿಸುವವರು ಎಂದಲ್ಲ; ದೇವರಲ್ಲಿ ಭಯ-ಭಕ್ತಿ ಉಳ್ಳವರು ಎಂದು. ‘ಬಾಂಧವಾಃ ಶಿವಭಕ್ತಾಶ್ಚ’ ಎಂದರೆ ಯಾವುದೇ ಪಂಥದಿಂದ ನಿಯಂತ್ರಿಸಲ್ಪಟ್ಟಿರದ, ಶಾಸನದ ಆದೇಶಕ್ಕೆ ಒಳಪಟ್ಟಿರದ, ಯಾವುದೇ ಪ್ರವಾದಿಗಳಿಂದಲೋ ಇನ್ನಾರದೋ ಆದೇಶಕ್ಕೆ ಒಳಪಟ್ಟಿದ್ದಲ್ಲ; ‘ಬಾಂಧವಾಃ ಶಿವಭಕ್ತಾಶ್ಚ’ ಎಂದರೆ ವಿಶಾಲವಾದ್ದು. ‘ಸ್ವದೇಶೋ ಭುವನತ್ರಯಮ್’ ಎಂದರೆ ಭೂಲೋಕ, ಆಕಾಶ, ಪಾತಾಳ ಇವೆಲ್ಲ ನನ್ನ ಮಾತೃಭೂಮಿ. ‘ನನ್ನದು’ ಎಂದಾಗ ನಾವು ಅದರ ಬಗ್ಗೆ ಕಾಳಜಿ ವಹಿಸಲು ಮುಂದಾಗುತ್ತೇವೆ. ನನ್ನದು ಎಂದಾಗ ಅದು ಮಾಲೀಕತ್ವ ಅಲ್ಲ; ಸಂರಕ್ಷಣೆ (ಟ್ರಸ್ಟೀಶಿಪ್). ನಮ್ಮ ಸಮಾಜ, ದೇಶ ನಡೆಯುವುದು ಮಾಲೀಕತ್ವದ (ಓನರ್ಶಿಪ್) ನಂಬಿಕೆಯ ಮೇಲಲ್ಲ; ಬದಲಾಗಿ ಪಾಲನೆಯ (ಟ್ರಸ್ಟೀಶಿಪ್) ನಂಬಿಕೆಯ ಮೇಲೆ. ‘ಸ್ವದೇಶೋ ಭುವನತ್ರಯಮ್’ ಅಂತರ್ಗತವಾಗಿ ಈ ವಾಕ್ಯವು ನಮ್ಮ ಮಾತೃಭೂಮಿಯೆಡೆಗೆ ನಮ್ಮ ಕರ್ತವ್ಯವನ್ನು ಸೂಚಿಸುತ್ತದೆ. ಅದರ ಕಾಳಜಿಯನ್ನು ನಾವು ವಹಿಸಬೇಕು ಎನ್ನುವ ಧ್ವನಿಯನ್ನು ನೀಡುತ್ತದೆ.
ಪ್ರಧಾನಿಯವರು ‘ಆತ್ಮನಿರ್ಭರ ಭಾರತ’ ಎಂದದ್ದು ಅತ್ಯಾಧುನಿಕ ಸೈನಿಕ ಬಲವನ್ನು ರೂಪಿಸಬೇಕು ಎನ್ನುವ ಅರ್ಥದಲ್ಲಲ್ಲ. ಸಶಕ್ತ ಸೈನಿಕ ಬಲವನ್ನು ರೂಪಿಸಬೇಕು, ಅದು ಇಂದಿನ ಅಗತ್ಯವೂ ಹೌದು. ಆದರೆ ‘ಆತ್ಮನಿರ್ಭರ ಭಾರತ’ ಪದವು ತತ್ತ್ವಶಾಸ್ತ್ರ-ಆಧಾರಿತ ‘ವಸುಧೈವ ಕುಟುಂಬಕಮ್’ ಪದದಿಂದ ಉದಯಿಸಿದೆ. ಇಡೀ ವಿಶ್ವವೇ ನನ್ನ ಮನೆ, ನನ್ನ ಕುಟುಂಬ. ನನ್ನ ಕುಟುಂಬ ಎಂದಾಗ ತಪ್ಪು ಮಾಡಿದವರನ್ನು ತಿದ್ದುತ್ತೇವೆಯೇ ವಿನಾ ಯಾರನ್ನೂ ತುಳಿಯುವುದಿಲ್ಲ, ಶಿಕ್ಷಿಸುವುದಿಲ್ಲ.
ಭಾರತದ ಏಳೆಂಟು ಸಾವಿರ ವರ್ಷಗಳ ಲಿಖಿತ ಇತಿಹಾಸವನ್ನು ಹಾಗೂ ಲಕ್ಷಾಂತರ ವರ್ಷಗಳ ಹಿಂದಿನ ಅಲಿಖಿತ ಇತಿಹಾಸವನ್ನು ಗಮನಿಸಿದರೆ ಯಾವತ್ತೂ ಭಾರತ ಯಾರನ್ನೂ ಗೆಲ್ಲುವುದಕ್ಕೆ ದಂಡೆತ್ತಿ ಹೋಗಿಲ್ಲ. ಕಾಂಬೋಡಿಯಾದ ಪಾರ್ಲಿಮೆಂಟಿನ ಮುಂದುಗಡೆ ಒಂದು ಸ್ತಂಭ ಇದೆ. ಸ್ತಂಭದ ಮೇಲೆ ಒಂದು ದೋಣಿ. ದೋಣಿಯಲ್ಲಿ ಒಂದು ಮನುಷ್ಯ ಮೂರ್ತಿ, ಒಂದಷ್ಟು ಗ್ರಂಥಗಳ ಚಿತ್ರವಿದೆ. ಚಿತ್ರದ ಕೆಳಗಡೆ ಬರಹವಿದೆ. ಸನಿಹಕ್ಕೆ ಹೋಗಿ ನೋಡಿದರೆ ಆ ಮೂರ್ತಿಯದು ಮಂಗೋಲಿಯನ್ ಮುಖವಲ್ಲ. ಆದರೆ ಆ ಮೂರ್ತಿಯ ಮುಖ ಭಾರತದ ಮುಖವಿದ್ದ ಹಾಗಿದೆ. ಅದು ಭಾರತದಿಂದ ಬಂದ, ತಕ್ಷಶಿಲೆಯ ಗುರುಕುಲದ ಗುರು ಕಂಬನ ಮೂರ್ತಿ ಎಂದೂ, ಆತ ಇಲ್ಲಿಗೆ ಬಂದು ರಾಜನಾದ ಎಂದೂ ಬರೆದಿದೆ.
ಕತೆ ಹೀಗೆ ಮುಂದುವರಿಯುತ್ತದೆ. ಕಾಂಬೋಡಿಯದಲ್ಲಿ ಒಮ್ಮೆ ಅತಿದೊಡ್ಡ ಕ್ಷಾಮ ಬಂದಿತು; ಬಳಿಕ ವಿಚಿತ್ರವಾದ ರೋಗ ಬಂದು ಔಷಧವಿಲ್ಲದೆ ಬಹಳಷ್ಟು ಜನ ಅದಕ್ಕೆ ತುತ್ತಾದರು. ಆಗ ಒಂದಷ್ಟು ಮಂದಿ ಭಾರತದ ಕಡೆಗೆ ಪಯಣ ಬೆಳೆಸಿದರು. ಇಲ್ಲಿ ತಕ್ಷಶಿಲೆಗೆ ಬಂದು ಗುರುಕುಲದ ಗುರುವಿನ ಬಳಿಯಲ್ಲಿ ಆ ರೋಗಕ್ಕೆ ಮದ್ದು ಕೇಳಿದರು. ಆತ ಅದಕ್ಕೆ ಮದ್ದು ಅಲ್ಲೇ ನಿಮ್ಮಲ್ಲೇ ಇದೆ ಎಂದನು. ‘ವೋಕಲ್ ಫಾರ್ ಲೋಕಲ್’ ಎನ್ನುವುದು ಇದನ್ನೇ. ಇಲ್ಲೊಂದು ತತ್ತ್ವಶಾಸ್ತ್ರದ ನೋಟವಿದೆ. ವೋಕಲ್ ಫಾರ್ ಲೋಕಲ್ ಎಂದಾಗ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು ಎಂದು ಮಾತ್ರ ಅರ್ಥವಲ್ಲ;
ಜೊತೆಗೆ ಸ್ಥಳೀಯ ಸಂಪ್ರದಾಯಗಳನ್ನು ಗೌರವಿಸುವುದು. ಸ್ಥಳೀಯ ಜಾತ್ರೆ, ರಥೋತ್ಸವದಲ್ಲಿ ಭಾಗವಹಿಸುವುದು, ನಾವು ಹುಟ್ಟಿದ ಸ್ಥಳದ ಸಂಸ್ಕೃತಿಯನ್ನು ಗೌರವಿಸುವುದು ಎನ್ನುವ ವಿಶಾಲವ್ಯಾಪ್ತಿಯನ್ನು ಹೊಂದಿದೆ. ತಕ್ಷಶಿಲೆಯ ಗುರು ‘ಎಲ್ಲಿ ರೋಗ ಹುಟ್ಟಿದೆಯೋ ಅದರ ಮೂಲಸ್ಥಳದಲ್ಲೇ ಆ ರೋಗಕ್ಕೆ ಔಷಧವೂ ಇದೆ’ ಎಂದು ಕಂಬನನ್ನು ಕಾಂಬೋಡಿಯಾಕ್ಕೆ ಕಳುಹಿಸಿದ. ಕಂಬ ಒಂದಷ್ಟು ಗ್ರಂಥಗಳನ್ನೂ ತನ್ನ ಜೊತೆಗೆ ಒಯ್ದು, ಆ ರೋಗವನ್ನು ಅಭ್ಯಸಿಸಿ, ಔಷಧವನ್ನು ಕಂಡುಹಿಡಿದು ರೋಗಿಗಳಿಗೆ ನೀಡಿದ. ಸಂತೋಷಗೊಂಡ ಅಲ್ಲಿನ ಜನರು ಆತನನ್ನು ಹಿಂದಕ್ಕೆ ಕಳುಹಿಸಿಕೊಡದೆ ಅಲ್ಲಿನ ಹೆಣ್ಣುಮಗಳೊಡನೆ ಆತನ ವಿವಾಹ ಮಾಡಿದರು; ಕಂಬ ಗೃಹಸ್ಥನಾದ. ಮುಂದೆ ಆತನನ್ನೇ ಜನ ರಾಜನೆಂದು ಸ್ವೀಕರಿಸಿದರು. ಗಮನಿಸಬೇಕಾದ್ದೆಂದರೆ ಕಂಬ ಸೈನ್ಯಬಲದಿಂದ ರಾಜನಾಗಲಿಲ್ಲ; ಬದಲಿಗೆ ತನ್ನ ಸದ್ಗುಣಗಳಿಂದ, ಮೌಲ್ಯದಿಂದ ರಾಜನಾದ.
ತತ್ತ್ವಾಧಾರಗಳು
‘ವಸುಧೈವ ಕುಟುಂಬಕಮ್’ ಎನ್ನುವ ತತ್ತ್ವವೇ ‘ಆತ್ಮನಿರ್ಭರ ಭಾರತ’ದ ಹಿಂದಿನ ಸತ್ತ್ವ. ‘ಆತ್ಮನಿರ್ಭರ ಭಾರತ’ ಎಂದಾಗ ಒಂದಷ್ಟು ರಫ್ತು ಹೆಚ್ಚಬೇಕು, ಕೈಗಾರಿಕೆಗಳನ್ನು ಸ್ಥಾಪಿಸಬೇಕು, ನಮ್ಮ ಜಿಡಿಪಿ ಹೆಚ್ಚಬೇಕು, ಹಣದುಬ್ಬರ ನಿಯಂತ್ರಣಕ್ಕೆ ಬರಬೇಕು ಎಂದಷ್ಟೇ ಅಲ್ಲ. ಅದೆಲ್ಲ ಬೇಕು; ಇಲ್ಲಿ ನಕರಾತ್ಮಕ ಭಾವ ಇರದು. ಆತ್ಮನಿರ್ಭರ ಭಾರತ ಅದಕ್ಕಿಂತ ವಿಶಾಲವಾದ್ದು. ಅದು ಆರ್ಥಿಕತೆಯನ್ನು ಒಳಗೊಳ್ಳುತ್ತದೆ; ಆದರೆ ಆರ್ಥಿಕತೆಯನ್ನು ಮಾತ್ರ ಅಲ್ಲ. ಪ್ರಧಾನಿಯವರು ಕೂಡ ಮೊದಲನೆಯದಾಗಿ ಆರ್ಥಿಕತೆ, ಎರಡನೆಯದಾಗಿ ಮೂಲಭೂತ ಸೌಕರ್ಯ, ಮೂರನೆಯದಾಗಿ ವ್ಯವಸ್ಥೆ (ಸಿಸ್ಟಂ), ನಾಲ್ಕನೆಯದಾಗಿ ಸಚೇತನ ಪ್ರಜಾಪ್ರಭುತ್ವ (ವೈಬ್ರಂಟ್ ಡೆಮಾಕ್ರಸಿ), ಐದನೆಯದಾಗಿ ಬೇಡಿಕೆ ಇವುಗಳನ್ನು ನಮ್ಮ ಮುಂದಿಟ್ಟರು. ಇನ್ನೂ ಅನೇಕ ವಿಚಾರಗಳನ್ನು ಅದರೊಳಗೆ ಸೇರಿಸಿದರು.
ಆತ್ಮನಿರ್ಭರ ಭಾರತಕ್ಕೆ ಐದು ಸ್ತಂಭಗಳಿವೆ. ಒಂದನೆಯದು ಸ್ವಾಭಿಮಾನಿ ಭಾರತ, ಎರಡನೆಯದು ಸಶಕ್ತ ಭಾರತ, ಮೂರನೆಯದು ಸಂಘಟಿತ ಭಾರತ, ನಾಲ್ಕನೆಯದು ಸಂಪನ್ನ ಭಾರತ, ಐದನೆಯದು ಏಕಾತ್ಮ ಭಾರತ. ಈ ಐದು ಮುಖಗಳ ಮೇಲೆ ಆತ್ಮನಿರ್ಭರ ಭಾರತ ಅವಲಂಬಿತವಾಗಿದೆಯೇ ವಿನಾ ಆರ್ಥಿಕತೆ ಎನ್ನುವ ಯಂತ್ರಗಾರಿಕೆಯ ಮೇಲೆ ಮಾತ್ರ ಅದು ನಿಂತಿದ್ದಲ್ಲ. ಈ ಐದು ಮುಖಗಳ ಆಧಾರದ ಮೇಲೆ ಆರ್ಥಿಕತೆಯನ್ನೂ ಒಳಗೊಂಡ ಬಲಿಷ್ಠ ಭಾರತದೊಡನೆ ಹೊಸ ಗ್ಲೋಬಲ್ ಆರ್ಡರ್ನ ಬೆಳವಣಿಗೆ ಆತ್ಮನಿರ್ಭರದ ಅರ್ಥ. ಗ್ಲೋಬಲ್ ಆರ್ಡರ್ ಎಂದರೆ ವಿಶ್ವವನ್ನು ಭಾರತವು ಅಧಿಕಾರದಿಂದ ಆಳುವುದಲ್ಲ, ಗ್ಲೋಬಲ್ ಆರ್ಡರ್ ಎಂದರೆ ಭಾರತ ಅಲ್ಲಿ ಡಿಕ್ಟೇಟರ್ ಅಲ್ಲ; ಬದಲಾಗಿ ಭಾರತದ ಪ್ರತಿನಿಧಿತ್ವದ ಪಥದಲ್ಲಿ ಇರುವಂತಹ ಗ್ಲೋಬಲ್ ಆರ್ಡರ್. ನಾವು ಆ ಗ್ಲೋಬಲ್ ಆರ್ಡರ್ನ ನಾಯಕರಾಗಿರುವುದಿಲ್ಲ, ಬದಲಾಗಿ ಅದರ ವೇಗವರ್ಧಕಗಳಂತೆ ಇರಬೇಕು (ಕ್ಯಾಟಲಿಸ್ಟ್).
ಇದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ‘ಸ್ವಾಭಿಮಾನಿ’ ಎಂದರೆ ನಮ್ಮ ಸಂಸ್ಕøತಿಯ ಬಗ್ಗೆ ಹೆಮ್ಮೆ, ನಮ್ಮನ್ನು ಪೊರೆಯುತ್ತಿರುವುದರ ಬಗ್ಗೆ ಹೆಮ್ಮೆ, ನಮ್ಮೆಲ್ಲ ಪ್ರಾಚೀನ ಮೌಲ್ಯಗಳ ಬಗ್ಗೆ ಹೆಮ್ಮೆ. ಸದ್ಯ ಭಾರತದ ಬಗ್ಗೆ ಏನೆಲ್ಲ ನಕರಾತ್ಮಕ ಪ್ರಚಾರ ಆಗುತ್ತಿದೆಯೋ ಅದರ ಹೊರತಾದ ಪ್ರಾಚೀನ ಮೌಲ್ಯಗಳು ನಮ್ಮಲ್ಲಿ ಇವೆ; ಅದರ ಕುರಿತಾದ ಹೆಮ್ಮೆ; ಸ್ವಾಭಿಮಾನಿ ಭಾರತವೆಂದರೆ ಅದು. ಸ್ವಾಭಿಮಾನಿ ಭಾರತವೆಂದರೆ ಅದನ್ನು ಅನುಸರಿಸುವುದೂ ಸಹ. ಇಂದು ತಮ್ಮ ಹೆಸರಿನ ಜೊತೆಗೆ ಅಡ್ಡಹೆಸರು, ಊರಿನ ಹೆಸರನ್ನು ಹಾಕಿಕೊಳ್ಳುವ ಸ್ವಭಾವ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ನಮಗೆ ಇಂತಹ ಬದಲಾವಣೆ ಕಾಣುತ್ತಿದೆ. ಜನರು ತಮ್ಮ ಮೂಲಕ್ಕೆ ಹಿಂದಿರುಗಲು, ಅದನ್ನು ಅನುಭವಿಸಲು, ಆ ಸ್ಪಂದನಕ್ಕೆ ಹಾತೊರೆಯುತ್ತಿರುವುದರ ಸಂಕೇತ ಇದು. ಈ ಸ್ವಾಭಿಮಾನಿ ಭಾರತ ಆತ್ಮನಿರ್ಭರ ಭಾರತದ ಅತ್ಯಂತ ಮಹತ್ತ್ವದ ಸ್ತಂಭ.
ಸಶಕ್ತ ಭಾರತದ ಬಗ್ಗೆಯೂ ಹೇಳಲಾಗಿದೆ. ಸ್ವಾಮಿ ವಿವೇಕಾನಂದರು ‘ತಾನೇ ಬಲಿಷ್ಠನಿರದಿದ್ದರೆ ಜಗತ್ತನ್ನು ಪ್ರಭಾವಿತಗೊಳಿಸಲು, ಗೆಲ್ಲಲು ಹೇಗೆ ಸಾಧ್ಯ?’ ಎನ್ನುತ್ತಾರೆ. ಶಿಸ್ತಿನ ಸಮಾಜ ನಮ್ಮದಾಗದಿದ್ದರೆ, ಬಲಿಷ್ಠನಾದವನ ಕೈಯಲ್ಲಿ ನಮ್ಮ ದೇಶ ಇರದಿದ್ದರೆ ವಿಶ್ವಕ್ಕೆ ಆದೇಶಿಸಲು ಸಾಧ್ಯವಿಲ್ಲ. ದೇಶವೂ ಸಮಾಜವೂ ಸಂಘಟಿತವಾಗಿ ಇರದಿದ್ದರೆ, ಅಶಿಸ್ತು, ಅವ್ಯವಸ್ಥೆಗಳ ಆಗರವಾಗಿದ್ದರೆ ಗ್ಲೋಬಲ್ ಆರ್ಡರ್ ಆಗಿ ಪ್ರತಿನಿಧಿತವಾಗಲು ಸಾಧ್ಯವಾಗುವುದಿಲ್ಲ.
ಪ್ರಜಾಪ್ರಭುತ್ವದ ಶಕ್ತಿ
ಕೊರೋನಾದ ವೇಳೆಗೆ ಸಂಘಟಿತ ಭಾರತದ ಅನುಭವ ನಮ್ಮದಾಗಿತ್ತು. (ಅದರಲ್ಲಿ ಶೇ. 5-10 ಜನ ವಿಭಿನ್ನವಾಗಿದ್ದರೂ ನಾವು ನಾಣ್ಯದ ಎರಡೂ ಮುಖಗಳನ್ನು ನೋಡಬೇಕಾಗುತ್ತದೆ.) ಶೇ. 80ರಷ್ಟು ಜನ ಕೊರೋನಾ ವಿರುದ್ಧದ ಹೋರಾಟದಲ್ಲಿ ಸಹಕರಿಸಿದ್ದಾರೆ. ದೇಶದ ಎಲ್ಲ ದೇವಾಲಯಗಳು, ಮಸೀದಿಗಳು, ಚರ್ಚ್ಗಳು, ಗುರುದ್ವಾರಾಗಳು, ಜೈನಮಂದಿರಗಳು ಎಂದಿಗೂ ಮುಚ್ಚಿದ್ದೇ ಇರಲಿಲ್ಲ. ಆದರೆ ಸಮಾಜದ ಒಳಿತಿಗಾಗಿ ಅವೆಲ್ಲ ಕೊರೋನಾ ಬಂದಾಗ ಸ್ವತಃ ಬಾಗಿಲು ಹಾಕಿದವು; ಅದು ಸಮಾಜದ ಒಳಿತಿಗಾಗಿ. ಯುಗಾದಿಯನ್ನು ಹಿಂದುಗಳು ಮನೆಯಲ್ಲೇ ಆಚರಿಸಿದರು. ಈಸ್ಟರ್ ಅನ್ನು ಕ್ರಿಶ್ಚಿಯನ್ನರು ಮನೆಯಲ್ಲೇ ಆಚರಿಸಿದರು; ಜೈನರು ಮಹಾವೀರಜಯಂತಿಯನ್ನು ಮನೆಯಲ್ಲೇ ಆಚರಿಸಿದರು. ಬೌದ್ಧರು ಮನೆಯಲ್ಲೇ ಬುದ್ಧಜಯಂತಿಯನ್ನು ಆಚರಿಸಿದರು. ಈದ್ನ ದಿನ ಮುಸಲ್ಮಾನರು ಮನೆಯಲ್ಲಿಯೇ ನಮಾಜು ಮಾಡಿದರು. ಮಸೀದಿಗಳು ಇಂದಿಗೂ ಮುಚ್ಚಿವೆ. ಶೇ. 5 ಜನ ಇದಕ್ಕೆ ಹೊರತಾಗಿರಬಹುದು; ಅದು ಸಾರ್ವತ್ರಿಕವಲ್ಲ. ಒಂದು ದೇಶ, ಅದೂ ಹತ್ತಕ್ಕೂ ಹೆಚ್ಚು ಪಕ್ಷದ ಮುಖ್ಯಮಂತ್ರಿಗಳು ನಮ್ಮಲ್ಲಿದ್ದಾರೆ. ಈ ರೀತಿ ಬಹುಪಕ್ಷೀಯ ಪ್ರಜಾಪ್ರಭುತ್ವವಿರುವಲ್ಲಿ, (ಪಶ್ಚಿಮ ಬಂಗಾಳ ಹೊರತುಪಡಿಸಿ) ಎಲ್ಲರೂ ಸಹಕರಿಸಿದ್ದಾರೆ. ಇನ್ನು ಕೇರಳ ಸರ್ಕಾರ ಲಾಕ್ಡೌನ್ ವೇಳೆಗೆ ಮದ್ಯದಂಗಡಿ ತೆರೆಯಹೊರಟಾಗ ಕೇಂದ್ರದ ಗೃಹ ಇಲಾಖೆ ತಡೆಯಿತು; ಮೊದಲ ಅಂಗಡಿ ತೆರೆಯುವ ವೇಳೆಗೇ ಮುಚ್ಚಲಾಯಿತು. ಕೇರಳ ಒಪ್ಪಿಕೊಂಡಿತು. ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಶಕ್ತಿ. ನಾವು ಇದನ್ನು ಹೆಮ್ಮೆಯಿಂದ ನೋಡಬೇಕು. ಇಲ್ಲಿ ಕೆಲವರು ಆದೇಶಿಸುತ್ತಾರೆ, ಕೆಲವರು ಪಾಲಿಸುತ್ತಾರೆ ಎಂದಲ್ಲ; ಕೆಲವರು ಹೇಳುತ್ತಾರೆ, ಕೆಲವರು ಅರಿತುಕೊಳ್ಳುತ್ತಾರೆ. ಮೋದಿಯವರು ಸಂಜೆ 8 ಗಂಟೆಯ ತಮ್ಮ ಭಾಷಣದಲ್ಲಿ ‘ಈವತ್ತು ರಾತ್ರಿ ಹನ್ನೆರಡು ಗಂಟೆಗೆ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗುತ್ತದೆ’ ಎಂದರು. ಇಡೀ ದೇಶವೇ ಅದನ್ನು ಅನುಸರಿಸಿತು. ಜನತಾ ಕಫ್ರ್ಯೂವನ್ನೂ ಸಹ ಶೇ. 90ರಿಂದ 95 ಜನ ಅನುಸರಿಸಿದರು. ಇದು ಸಂಘಟಿತ ಭಾರತದ ಸಂಕೇತ. ಇದಕ್ಕೆ ಒಬ್ಬ ನಾಯಕನಿಂದ ಸ್ಫೂರ್ತಿ ಪಡೆಯುವುದರ ಜೊತೆ ಸಮಾಜದ ಒಳಗಡೆ ಅಂತಹ ಒಂದು ಸಾಮಾಜಿಕ ಆದೇಶವನ್ನು ಪಾಲಿಸುವ ಗುಣ ಇರಬೇಕಾಗುತ್ತದೆ.
ಇನ್ನು ಇದೇ ವೇಳೆಗೆ ಏಕಾತ್ಮ ಭಾರತ; 70 ವರ್ಷದಿಂದ ದೇಶ ಇದನ್ನೇ ನಿರೀಕ್ಷಿಸುತ್ತಿದೆ. ನೆಹರೂರವರಿಂದ ಆರಂಭವಾದ ಸೋಶಿಯಲಿಸಂ ನೀತಿಯ ಅಡಿಯಲ್ಲಿ ಒಡೆದು ಆಳುವ ನೀತಿಯಲ್ಲಿ ದೇಶದ ಏಕತೆಯನ್ನೇ ಮುರಿದುಹಾಕುವ ನೀತಿಯ ದಿನಗಳ ಬಳಿಕ ನರಸಿಂಹರಾವ್ ವೇಳೆಗೆ ಕೆಲವು ಬದಲಾವಣೆಗಳು ಕಾಣತೊಡಗಿದ್ದು, ದೇಶ ಒಗ್ಗೂಡಿತು. ಅಟಲಜೀಯವರ ವೇಳೆಗೆ ಅದು ಇನ್ನಷ್ಟು ಏಕತೆಯನ್ನು ತೋರಿಸಿತು. ಪುನಃ ನರೇಂದ್ರ ಮೋದಿಯವರ ವೇಳೆಗೆ ನಾವು ಅಂತಹ ಏಕತೆಯನ್ನು, ಸಮಾಜದಲ್ಲಿ ಅಂತರ್ಗತ ಮೌಲ್ಯವನ್ನು ಮತ್ತೆ ಕಾಣುವಂತಾಯಿತು. ಭಾರತೀಯ ಸಮಾಜ, ಹಿಂದೂ ಸಮಾಜದ ಅಂತರ್ಗತವಾಗಿರುವ ಗುಣ ಏಕತೆ. ಈ ಏಕಾತ್ಮ ಭಾರತ ಸಹ ಈಗ ನಮ್ಮ ಮುಂದೆ ಕಾಣತೊಡಗಿದೆ.
ಹೀಗಾಗಿ ನಮ್ಮ ಆತ್ಮನಿರ್ಭರ ಭಾರತದ ಮಾದರಿಯು. ಆರ್ಥಿಕ ನೀತಿಯ ಸುಧಾರಣೆಯ ಮಾದರಿ ಮಾತ್ರವಲ್ಲ; ಅದು ಅದರಲ್ಲಿ ಒಂದು ಭಾಗ ಮಾತ್ರ. ಆತ್ಮನಿರ್ಭರ ಭಾರತವೆಂದರೆ ನಮ್ಮ ಸಂಸ್ಕøತಿ, ಪರಂಪರೆಯ ಬಗೆಗಿನ ಹೆಮ್ಮೆಯನ್ನು ತಳೆದಿರುವ ಸ್ವಾಭಿಮಾನಿ ಭಾರತ, ಭಾರತವನ್ನು ಸದೃಢ ಮಾಡುವ ಸಶಕ್ತ ಭಾರತ, ಭಾರತ ಒಂದೇ ಎನ್ನುವ ಸಂಘಟಿತ ಭಾರತ, ಮತ್ತು ಏಕಾತ್ಮ ಭಾರತ.
ಅಭಿವೃದ್ಧಿಯ ನಿಯತಾಂಕಗಳು
ಈ ಐದು ಮುಖಗಳ ಆಧಾರದ ಮೇಲೆ ಭಾರತ ಮುನ್ನಡೆಯಲು ತಯಾರಾಗಿದ್ದು ಅದನ್ನೇ ಆತ್ಮನಿರ್ಭರ ಭಾರತವೆಂದು ಕರೆಯಲಾಗಿದೆ. ಪಂ. ದೀನದಯಾಳ ಉಪಾಧ್ಯಾಯರು ತಮ್ಮ ‘ಏಕಾತ್ಮ ಮಾನವತೆ’ಯಲ್ಲಿ ಈ ಬೀಜಗಳನ್ನು ಬಿತ್ತಿದ್ದರು. ಅದಕ್ಕೆ ಪ್ರಧಾನಿಯವರು ನೀರೆರೆದಿದ್ದಾರೆ. ಭಾರತದ ಬೆಳವಣಿಗೆಯಾಗಬೇಕು; ಆದರೆ ಅದು ಯಾವ ಯಾವ ನಿಯತಾಂಕ(ಪ್ಯಾರಾಮೀಟರ್)ಗಳ ಮೇಲೆ? ಸೀಮೆಯಿಲ್ಲದೆ, ಚೌಕಟ್ಟಿಲ್ಲದೆ ಅಭಿವೃದ್ಧಿ ಇರುವುದಿಲ್ಲ; ಮಾನವಸಮಾಜ, ಅದರ ಅಭಿವೃದ್ಧಿಗೆ ಒಂದು ಚೌಕಟ್ಟು ಇರಬೇಕಾಗುತ್ತದೆ. ಅಭಿವೃದ್ಧಿ ಆರ್ಥಿಕತೆ, ಪರಿಸರ, ನೈತಿಕತೆ (Economy, Ecology, Ethic)ಯ ಒಟ್ಟು ಪರಿಣಾಮ. ಅಭಿವೃದ್ಧಿ ಇಂದಿನ ಮಾದರಿ ಪಾಶ್ಚಾತ್ಯ ಮಾದರಿಯಿಂದ ಎತ್ತಿಕೊಂಡು ಬಂದದ್ದಾಗಿದ್ದು, ಇಡೀ ವಿಶ್ವವೇ ಅನುಸರಿಸುತ್ತಿರುವುದು. ಇದು ಸಂಪೂರ್ಣ ನೀತಿವಿರುದ್ಧವಾದದ್ದು (ಅನ್-ಎಥಿಕಲ್). ಕಮ್ಯೂನಿಸಂನಲ್ಲಿ ಆರ್ಥಿಕನೀತಿ ಇಲ್ಲ, ಕ್ಯಾಪಿಟಲಿಸಂನಲ್ಲಿ ಮಾನವಸ್ಪಂದನ (ಹ್ಯೂಮನ್ ಎಲಿಮೆಂಟ್) ಇಲ್ಲ. ಅಭಿವೃದ್ಧಿ ಎಂದಾಗ ಅದು ಮೂರು ಅಂಶಗಳನ್ನು ಹೊಂದಿರಬೇಕು: ಆರ್ಥಿಕವಾಗಿ ಮೇಲೆತ್ತುವುದು, ಪರಿಸರದ ಸಮತೋಲನ, ಹಾಗೂ ನೀತಿ ಆಧಾರಿತವಾಗಿರುವುದು.
ಕೊರೋನಾ ವೈರಸ್ ಬಗ್ಗೆ ಎದ್ದ ವಿವಾದಗಳ ಸುತ್ತ ನೋಡಿದರೆ ವೈರಸ್ ಮಾನವಜನಾಂಗಕ್ಕೆ ಹೊಸದೇನಲ್ಲ; ಕಳೆದ 100 ವರ್ಷಗಳಲ್ಲಿ ಪ್ರಮುಖವಾದ 70ಕ್ಕೂ ಹೆಚ್ಚು ವೈರಸ್ ದಾಳಿ ನಮ್ಮ ಮೇಲೆ ಆಗಿದೆ. ಏಡ್ಸ್, ಎಚ್1ಎನ್1, ಪೆÇೀಲಿಯೋ ವೈರಸ್ ಇವೆಲ್ಲವನ್ನೂ ಎದುರಿಸಿದ್ದೇವೆ. ಕೊರೋನಾದ ವಿಶೇಷತೆಯೆಂದರೆ ಅದು ಹುಟ್ಟಿದ ಮೂಲ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಅದನ್ನು ನಿರ್ವಹಣೆ ಮಾಡಿದ ರೀತಿ. ವಿಶೇಷವಾಗಿ ಜನವರಿ 15ರಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತು, ‘ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.’ ಈಗ ಅದು ಸೋಂಕಿನಿಂದಲೇ ಬರುವುದೆಂದು ಗೊತ್ತಾಗಿದೆ. ಬಳಿಕ ಫೆಬ್ರುವರಿ 15ರ ಸುಮಾರಿಗೆ ಮತ್ತೆ ಹೇಳಿತು, ‘ವಿಮಾನ ಹಾರಾಟವನ್ನು ನಿರ್ಬಂಧಿಸುವ ಅಗತ್ಯವಿಲ್ಲ. ಅದು ಮಾನವನಿಂದ ಮಾನವನಿಗೆ ಹಬ್ಬುವುದಿಲ್ಲ’ ಎಂದು. ವಿಶ್ವದ ಪ್ರತಿ ದೇಶವೂ ಈ ವೈರಸ್ಸನ್ನು ವಿಮಾನ ಪ್ರಯಾಣಿಕರಿಂದಲೇ ಪಡೆಯಿತು. ಮಿಲಾನ್ಗೆ ವೂಹನ್ನ ನೇರ ವಿಮಾನ ಸಂಪರ್ಕದಿಂದಲೇ ಬಂದಿದ್ದು. ಪ್ರತಿ ದೇಶವೂ ವಿಮಾನದಿಂದ ಬಂದವರಿಂದಲೇ ಕೊರೋನಾ ಹಬ್ಬುವಿಕೆಯನ್ನು ಕಂಡಿತು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಇದು ಮಾನವಸಂಪರ್ಕದಿಂದ ಬರುವುದಿಲ್ಲ ಎಂದಿತು! ಇಲ್ಲಿಯೇ ನೀತಿಯ (ಎಥಿಕ್ಸ್) ಕೊರತೆ ಎದ್ದುಕಾಣುತ್ತದೆ. ನಿರ್ವಹಣೆಯಲ್ಲಿ (ಮ್ಯಾನೇಜ್ಮೆಂಟ್), ವೈದ್ಯಕೀಯ ವ್ಯವಸ್ಥೆಯಲ್ಲಿ, ಬುದ್ಧಿಜೀವಿಗಳಲ್ಲಿ, ವೃತ್ತಿಪರರಲ್ಲಿ, ರಾಜಕಾರಣಿಗಳಲ್ಲಿ ನೈತಿಕತೆಯ (ಎಥಿಕ್ಸ್) ಕೊರತೆ ಇದ್ದರೆ ಏನಾಗುತ್ತದೆ ಎನ್ನುವುದನ್ನು ನಾವೀಗ ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಪ್ರತ್ಯಕ್ಷ ಅನುಭವಿಸುತ್ತಿದ್ದೇವೆ. ಎಲ್ಲವೂ ನೈತಿಕತೆಯ ಕೊರತೆಯ ಕಾರಣದಿಂದ. ಪಂ. ದೀನದಯಾಳ ಉಪಾಧ್ಯಾಯರು ಹೇಳಿದ್ದು, ಅಭಿವೃದ್ಧಿ ಎನ್ನುವುದು ಅದು ಆರ್ಥಿಕ, ಪಾರಿಸರಿಕ ಹಾಗೂ ನೈತಿಕತೆಯ ಘಟಕವನ್ನೂ ಹೊಂದಿರಬೇಕು – ಎಂದು.
ಪ್ರಧಾನಿಯವರು 2022ಕ್ಕೆ ‘ನವಭಾರತ’ದ ಗುರಿ ಇಟ್ಟುಕೊಂಡಿದ್ದಾರೆ. 2022ರ ಹೊತ್ತಿಗೆ ಭಾರತ ಆತ್ಮನಿರ್ಭರ ಭಾರತವಾಗಬೇಕು ಎಂಬುದು ಅವರ ಗುರಿ. ಲಾಕ್ಡೌನ್ ಸಮಯದಲ್ಲಿ ಈ ಸಂಕಷ್ಟವನ್ನು ಹೇಗೆ ಅವಕಾಶವನ್ನಾಗಿ ಪರಿವರ್ತಿಸಬೇಕು ಎಂಬುದರ ಬಗ್ಗೆಯೇ ಅವರು ತಜ್ಞರ ಜೊತೆಗೆ ಚರ್ಚೆ ಮಾಡಿದರು. ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ನಾವು ಹೇಗೆ ನಮ್ಮನ್ನು ಮುಂದಕ್ಕೆ ಒಯ್ಯಬೇಕು; 2022ರ ಗುರಿ ತಲುಪಬೇಕು? ಇದು ಅವರ ಚರ್ಚೆಯ ವಿಷಯವಾಗಿತ್ತು. ನಾವು ಕೈಗಾರಿಕಾ ಕ್ರಾಂತಿಯ ಬಸ್ ಹಿಂದೆಯೆ ಮಿಸ್ ಮಾಡಿಕೊಂಡಾಗಿದೆ. ಸ್ವಲ್ಪ ಮೈಮರೆತರೂ ಡಿಜಿಟಲ್ ಕ್ರಾಂತಿ, ಕೃತಕಬುದ್ಧಿಮತ್ತೆಯ (Artificial Intelligence) ಕ್ರಾಂತಿಯನ್ನೂ ಮಿಸ್ ಮಾಡಿಕೊಳ್ಳುತ್ತೇವೆ. ಪ್ರಧಾನಿಯವರು ಅದನ್ನು ಮಿಸ್ ಮಾಡಿಕೊಳ್ಳಲು ಬಯಸಿಲ್ಲ. ಕೋವಿಡ್-19ರ ಮೂಲಭೂತ ಸೌಕರ್ಯವನ್ನು ರೂಪಿಸುವಾಗ ಪ್ರತಿ ಹೆಜ್ಜೆಯಲ್ಲೂ ಸರ್ಕಾರವು ಸವಾಲನ್ನು ಅವಕಾಶವನ್ನಾಗಿ ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದನ್ನೇ ಗುರಿ ಆಗಿಸಿಕೊಂಡಿತ್ತು. ಅದೇ ಆತ್ಮನಿರ್ಭರ ಭಾರತ.
ಕನಸಿನ ಬೀಜ
ಅದರ ಬೀಜ ಈಗಾಗಲೇ 2022ರ ಕನಸಿನ ಭಾರತದಲ್ಲಿ ಇದೆ. ಪ್ರಧಾನಿಯವರ 2019ರ ಸ್ವಾತಂತ್ರ್ಯದಿನದ ಭಾಷಣದಲ್ಲಿ ದೇಸೀ ಉತ್ಪನ್ನಗಳನ್ನು ಕೊಳ್ಳುವಂತೆ ಹೇಳಿದರು. ಈ ಬಾರಿ ಅವರು ದೂರದರ್ಶನದಲ್ಲಿ ಬಂದಾಗ ಅವರು ದೇಶವನ್ನು ಬೇರೆಯೇ ಕನಸಿನತ್ತ ಕರೆದೊಯ್ದರು. ನಾವು ನಮ್ಮ ಹೆಜ್ಜೆಯನ್ನು ಅವರ ಹೆಜ್ಜೆಯ ಜೊತೆಗೆ ಹೊಂದಿಸಿಕೊಳ್ಳುವ ಅಗತ್ಯ ಈಗ ನಮ್ಮ ಮುಂದಿದೆ. ಆಗಲೇ ಭಾರತ ಇನ್ನಷ್ಟು ಬಲಿಷ್ಠವಾಗುವುದು. ಗ್ಲೋಬಲ್ ಆರ್ಡರ್ ಕುರಿತು ಭಾರತ ಸರಿಯಾದ ಸ್ಥಾನದಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕಾಗಿದೆ.
ಪ್ರಧಾನಿ ಮೋದಿ ಅವರು ಆತ್ಮನಿರ್ಭರ ಭಾರತಕ್ಕೆ ಐದು ಕಲ್ಪನೆಗಳನ್ನು ತೆರೆದಿಟ್ಟರು:
ಮೊದಲನೆಯದು ಆರ್ಥಿಕತೆ. ಅದು ವರ್ತಮಾನಕ್ಕೆ ಮಾತ್ರವಲ್ಲ, ಮುಂದಿನ ಮೂರು ವರುಷದ ಫಲಕ್ಕೆ ಬೀಜ ಬಿತ್ತಬೇಕಾಗಿದೆ. ಯೋಜನೆಗೆ ನೀರು ಉಣಿಸಬೇಕಾಗಿದೆ. ಆಗಲೇ ಫಲವನ್ನು ಕೊಯ್ಯಬಹುದು. ಇದು ಬೀಜ ಬಿತ್ತುವ ಸಮಯ. ಎರಡು ಮೂರು ತಿಂಗಳಲ್ಲಿ ಸಸಿಗೆ ನೀರು ಉಣಿಸುವ ಕಾಲ. ಕೆಲವು ವರ್ಷಗಳಲ್ಲಿ ಫಲವನ್ನು ಕೊಯ್ಯಬಹುದು. ಒಂದೇ ಸಸಿ ಸಾಲದು; ಹೆಚ್ಚು ಗಿಡವನ್ನು ಬೆಳೆಯಬೇಕು. ಎಕಾನಮಿ ಸರಳರೇಖೆಯಲ್ಲ; ಅದು ಕ್ವಾಂಟಮ್ ಜಂಪ್. ನಾವೀಗ ಬೀಜವನ್ನು ಬಿತ್ತುತ್ತಿದ್ದೇವೆ.
ಇನ್ನು ಮೂಲಭೂತ ಸೌಕರ್ಯದ ಬಗ್ಗೆ ಹೇಳುವುದಾದರೆ, ಅದು 21ನೇ ಶತಮಾನದ ಆಧುನಿಕ ಭಾರತವನ್ನು ಪ್ರತಿನಿಧಿಸುತ್ತದೆ. ಸರ್ಕಾರದ ವಿಚಾರದಲ್ಲಿ ಬಹಳಷ್ಟು ಯೋಜನೆಗಳಿವೆ; ಈ ಸಂಕಷ್ಟ ಒಂದು ಸಲ ದೂರವಾದರೆ, ಅವೆಲ್ಲ ಜಾರಿಗೆ ಬರುತ್ತವೆ. ನಾವು ಈಗಾಗಲೇ ಈ ಸಂಕಷ್ಟದೊಡನೆ ಬದುಕುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಕೊರೋನಾ ಸಂಕಷ್ಟ ದೂರವಾಗಬಹುದು ಅಥವಾ ನಾವು ಅದರೊಡನೆ ಜೀವಿಸುವುದನ್ನು ಕಲಿಯಬಹುದು; ಆ ಹಂತದಲ್ಲಿ ಈ ಯೋಜನೆಗಳೆಲ್ಲ ಜಾರಿಗೆ ಬರುತ್ತವೆ. ಆರ್ಥಿಕತೆ, ಅದು ಕ್ವಾಂಟಮ್ ಜಂಪ್.
ಎರಡನೆಯ ಆದ್ಯತೆ ಮೂಲಭೂತ ಸೌಕರ್ಯಕ್ಕೆ. ಮೂಲಭೂತ ಸೌಕರ್ಯವು ಹಳೆಯ ಕಾಲದ ಶಿಥಿಲಗೊಂಡ ವ್ಯವಸ್ಥೆಯಾಗಿರದೆ ಆಧುನಿಕ ಭಾರತವನ್ನು ಪ್ರತಿನಿಧಿಸುವಂಥದ್ದಾಗಿರಬೇಕು.
ಮೂರನೆಯದು ಸಿಸ್ಟಂ. ಅದು ತಂತ್ರಜ್ಞಾನಚಾಲಿತವಾಗಬೇಕು. ಅದು ಹಳೆಯಕಾಲದ ಫೈಲ್ ಚಾಲಿತವಲ್ಲ; ಈಗಲೂ ಬಹಳಷ್ಟು ಸರ್ಕಾರಗಳು ನಗದು-ನಗದು ಎನ್ನುವುದಿದೆ. ಎನ್ಡಿಎ ಸರ್ಕಾರ ನಗದು ಮೂಲಕ ನಡೆಯುವುದನ್ನು ನಿಲ್ಲಿಸಿ ತಂತ್ರಜ್ಞಾನದ ಮೂಲಕವೇ ಮಾಡುವ ಪರಿಪಾಟಿಯನ್ನು ಬೆಳೆಸಿದೆ. ರಾಜೀವ್ ಗಾಂಧಿ ಕಾಲದಲ್ಲಿ ನಾನು ಒಂದು ರೂಪಾಯಿ ಹಾಕಿದ್ದೇನೆ ಎಂದರೆ ಅದು ನಮ್ಮನ್ನು ತಲಪುತ್ತಲೇ ಇರಲಿಲ್ಲ; ಈಗ ಹಾಗಿಲ್ಲ. ಅಲ್ಲಿ ಒಂದು ರೂಪಾಯಿ ಹಾಕಿದರೆ ಅದು ನಮ್ಮನ್ನು ಖಂಡಿತವಾಗಿಯೂ ತಲಪುತ್ತದೆ. ಯಾಕೆಂದರೆ ಆಗೆಲ್ಲ ಇದ್ದ ದಲಾಲ್ಗಳು ಈಗ ಇಲ್ಲ. ನಾವೀಗ ತಂತ್ರಜ್ಞಾನ ಚಾಲಿತ ವ್ಯವಸ್ಥೆ ಹೊಂದಿದ್ದೇವೆ.
ಸಚೇತನ ಪ್ರಜಾತಂತ್ರ, ಶೇ. 63ರಷ್ಟು ಕೆಲಸ ಮಾಡಬಲ್ಲ ತರುಣ ಪೀಳಿಗೆಯನ್ನು ಹೊಂದಿದ್ದೇವೆ; ಮುಂದಿನ 30 ವರ್ಷಗಳ ವರೆಗೂ ನಾವು ಇಂತಹ ಅನುಕೂಲವನ್ನು ಹೊಂದಿರುತ್ತೇವೆ. ಮುಂದಿನ 30 ವರ್ಷಗಳವರೆಗೂ ಶೇ. 50ಕ್ಕಿಂತ ಹೆಚ್ಚು ಜನ ಉದ್ಯೋಗ ಮಾಡಬಲ್ಲ ಯುವಸಮದಾಯವು ನಮಗೆ ದೊರಕುವಂತಿದೆ. ಅಂತಹ ಮಾನವಸಂಪನ್ಮೂಲವನ್ನು ನಾವು ಬಳಸಿಕೊಳ್ಳಬೇಕು. ಇದೇ ಡೆಮೋಗ್ರೋಫಿಕ್ ಪ್ರಯೋಜನ.
ಸ್ಥಳೀಯವಾಗಿ, ಜಾಗತಿಕ ಮಟ್ಟದಲ್ಲಿ ಬೇಡಿಕೆಯನ್ನು ಸೃಷ್ಟಿಸಬಹುದು. ನಾವು ಈಗಾಗಲೇ ಅದನ್ನು ಸಣ್ಣಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಹೇಗೆ? ಕೊರೋನಾ ಆರಂಭದಲ್ಲಿ ನಮ್ಮಲ್ಲಿ ಮೂರೇ ಲ್ಯಾಬ್ ಇತ್ತು. ಇಂದು 600 ಲ್ಯಾಬ್ ಇದೆ. ಫೆಬ್ರುವರಿಯಲ್ಲಿ ಕೆಲವೇ ಪಿಪಿಇ ಕಿಟ್ ಇತ್ತು. ಈಗ ಸಾವಿರಾರು ಕಿಟ್ಗಳು ದೇಶದ ತುಂಬೆಲ್ಲ ಹಂಚಲ್ಪಡುತ್ತಿವೆ. ದಿನವೊಂದಕ್ಕೆ ಸಾವಿರಾರು ಟೆಸ್ಟ್ಗಳನ್ನು ಮಾಡುತ್ತಿದ್ದೇವೆ. ನಿತ್ಯ ಒಂದು ಲಕ್ಷಕ್ಕಿಂತ ಹೆಚ್ಚು ಪರೀಕ್ಷೆ ಮಾಡಿದ್ದೇವೆ. ದೇಶದ 8 ಇನ್ಸ್ಟಿಟ್ಯೂಟ್ಗಳು ಕಿಟ್ ಟೆಸ್ಟಿಂಗ್ ಕೈಗೆತ್ತಿಕೊಂಡಿದೆ.
ಆರ್ಟಿಪಿಸಿಆರ್ನಲ್ಲಿ ಹಾಗೂ ಆ್ಯಂಟಿ ಬಾಡಿ ಟೆಸ್ಟಿಂಗ್ ಕಿಟ್ನಲ್ಲಿ ಸ್ವಾವಲಂಬಿಯಾಗಲಿದೆ. ಜೂನ್-ಜುಲೈ ಮಧ್ಯದ ಅವಧಿಯ ಹೊತ್ತಿಗೆ ಪ್ರತಿದಿನ 5 ಲಕ್ಷ ಕಿಟ್ಗಳನ್ನು ತಯಾರಿಸುವ ಸಾಮಥ್ರ್ಯವನ್ನು ಭಾರತ ಬೆಳೆಸಿಕೊಂಡಿದೆ. ಈಗಾಗಲೇ ಭಾರತವು ಟೆಸ್ಟಿಂಗ್ನಲ್ಲಿ ವಿಶ್ವದಲ್ಲೇ ಮೂರನೆಯ ಸ್ಥಾನದಲ್ಲಿದೆ. ಅಮೆರಿಕ, ರಶಿಯಾ ನಂತರದ ಸ್ಥಾನ ಭಾರತದ್ದು. ಭಾರತವು ಅತಿ ದೊಡ್ಡ ಟೆಸ್ಟಿಂಗ್ ರಾಷ್ಟ್ರವಾಗಿದೆ. ಪ್ಲಾಸ್ಟಿಕ್ ಪಿಪಿಇ ಕಿಟ್ಗಳು ದೇಶದ ತುಂಬ ದೊರಕುತ್ತಿವೆ. ನಾವು ಸಿದ್ಧಪಡಿಸುತ್ತಿರುವುದು ಬಯೋ ಡಿಗ್ರೇಡಬಲ್, ಪುನರ್ಬಳಕೆಯ ಪಿಪಿಇ ಕಿಟ್ಗಳಂಥ ಕಿಟ್ಗಳನ್ನು ಎನ್ನುವುದು ಇಲ್ಲಿ ಗಮನಾರ್ಹ. ದೇಶದ ತುಂಬ 600 ಮ್ಯಾನ್ಯುಫ್ಯಾಕ್ಷರಿಂಗ್ ಯೂನಿಟ್ಗಳು ಇವೆ. ಬೆಂಗಳೂರು ಕ್ಲಸ್ಟರ್, ತಿರುಪೂರ್ ಕ್ಲಸ್ಟರ್, ಚೆನ್ನೈ ಕ್ಲಸ್ಟರ್, ಕಾನ್ಪೂರ್ ಕ್ಲಸ್ಟರ್, ಲೂಧಿಯಾನಾ ಕ್ಲಸ್ಟರ್ ಇವೆಲ್ಲವುಗಳಿಂದ ಭಾರತವು ದಿನವೊಂದಕ್ಕೆ 4 ಲಕ್ಷ ಪಿಪಿಇ ಕಿಟ್ ತಯಾರಿಸುತ್ತಿದೆ. ತಿಂಗಳೊಪ್ಪತ್ತಿನಲ್ಲಿ ನಾವು ಪಿಪಿಇ ಕಿಟ್ಗಳನ್ನು ರಫ್ತು ಕೂಡಾ ಮಾಡಲಿದ್ದೇವೆ. ಈಗಾಗಲೇ ಒಂದು ಕೋಟಿ ಪಿಪಿಇ ಕಿಟ್ ತಯಾರಿಸಲಾಗಿದೆ. ಸಿಟ್ರಾ ಟೆಸ್ಟೆಡ್ ಕೊವೆರಾಲ್ ಪಿಪಿಇ ಕಿಟ್ ಕೂಡಾ ಈಗ ನಮ್ಮಲ್ಲಿ ಇದೆ.
ವಿಶಾಖಪಟ್ಣಂ ಕ್ಲಸ್ಟರ್ನಲ್ಲಿ ಎನ್-95 ಮಾಸ್ಕ್ ಕೂಡ ತಯಾರಾಗುತ್ತದೆ. 1.3 ಕೋಟಿ ಮಾಸ್ಕ್ ತಯಾರಾಗಿವೆ. ಈಗ 8 ಇನ್ಸ್ಟಿಟ್ಯೂಟ್ಗಳಲ್ಲಿ ವ್ಯಾಕ್ಸಿನ್ ಮೇಲೂ ಕೆಲಸ ನಡೆಯುತ್ತಿದೆ. ಫಲಿತಾಂಶವೂ ಆಶಾದಾಯಕವಾಗಿಯೇ ಇದೆ. ವೈರಸ್ ಚೀನಾದಿಂದ ಬಂದಿದ್ದರೂ ವ್ಯಾಕ್ಸಿನ್ ಭಾರತದಿಂದ ತಯಾರಾಗುತ್ತದೆ ಎಂಬ ವಿಶ್ವಾಸವಿದೆ. 8 ತಂಡ ವ್ಯಾಕ್ಸಿನ್ ಮೇಲೆ ಕೆಲಸ ಮಾಡುತ್ತಿವೆ.
ಈ ರೀತಿ ಭಾರತ ಮುಂದುವರಿಯುತ್ತಿದೆ. ಪ್ರಧಾನಿಯವರು ಆತ್ಮನಿರ್ಭರ ಭಾರತದ ಕುರಿತು ಪ್ರಕಟಿಸಿದ ಬಳಿಕ, ಆತ್ಮನಿರ್ಭರ ಪ್ಯಾಕೇಜ್ ಅನ್ನು ಸರ್ಕಾರ ಪ್ರಕಟಿಸಿದ ಬಳಿಕ ಸರ್ಕಾರವು 200 ಕೋಟಿ ರೂ. ಹಾಗೂ ಕಡಮೆ ಮೌಲ್ಯದ ಎಲ್ಲ ಟೆಂಡರ್ಗಳಲ್ಲಿ ಗ್ಲೋಬಲ್ ಟೆಂಡರನ್ನು ರದ್ದುಪಡಿಸಿದೆ. ಭಾರತದ ಎಂಎಸ್ಎಂಇ ಇದನ್ನು ಲಾಭ ಮಾಡಿಕೊಳ್ಳಬೇಕು.
ರಕ್ಷಣಾ ವಿಭಾಗದಲ್ಲಿ 26 ರಕ್ಷಣಾವಸ್ತುಗಳನ್ನು ಆಮದುಪಟ್ಟಿಯಿಂದ ತೆಗೆಯಲಾಗಿದೆ. ಈ 26 ವಸ್ತುಗಳನ್ನು ದೇಶದ ಕೈಗಾರಿಕೆಯಡಿಯಲ್ಲೇ ಸಿದ್ಧಪಡಿಸಲಾಗುವುದು.
ಗೃಹ ಇಲಾಖೆಯು ಪೊಲೀಸ್ ಕ್ಯಾಂಟೀನ್ನಲ್ಲಿ ಕೇವಲ ಭಾರತದಲ್ಲೇ ಸಿದ್ಧವಾದ ಉತ್ಪನ್ನಗಳಿಗೆ ಅವಕಾಶ ಮಾಡಿಕೊಟ್ಟಿದೆ. ನಿಧಾನವಾಗಿ ತಳಮಟ್ಟದಲ್ಲೇ ಕಂಪನ ಉಂಟಾಗುತ್ತಿದೆ. 3 ಲಕ್ಷ ಕೋಟಿ ರೂ. ಸಾಲಗಳು ಎಂಎಸ್ಎಂಇ, ಸಣ್ಣಪ್ರಮಾಣದ ಕೈಗಾರಿಕೆಗಳಿಗೆ ಮೇಲಾಧಾರ (ಕೊಲ್ಯಾಟರಲ್) ಇಲ್ಲದೆ ಸರ್ಕಾರದ ಗ್ಯಾರಂಟಿಯ ಮೇಲೆ ನೀಡಲಾಗುತ್ತಿದೆ. ಈಗಾಗಲೇ ಗುಜರಾತ್, ಉತ್ತರಪ್ರದೇಶ, ತಮಿಳುನಾಡು, ತೆಲಂಗಾಣ ಸರ್ಕಾರಗಳು ಎಂಎಸ್ಎಂಇಗೆ ಸಾಲಮೇಳಗಳನ್ನೂ ಸಹ ನಡೆಸಲು ಆರಂಭಿಸಿವೆ. ಸರ್ಕಾರವು ‘ಒಂದು ಜಿಲ್ಲೆಗೆ ಒಂದು ಉತ್ಪನ್ನ’ ಮಾದರಿಯನ್ನು ಆರಂಭಿಸಿದೆ. ದೇಶದ ಉದ್ದಗಲಕ್ಕೂ 77 ಜಿಲ್ಲೆಯಲ್ಲಿ ಇದು ಆರಂಭವಾಗಿದೆ. ಅದು ರಫ್ತು ದೃಷ್ಟಿಯಿಂದ ಇದ್ದಂಥವು.
ನಮ್ಮಲ್ಲಿ ಕೊರೋನಾ ಸೊಂಕಿನ ಆರಂಭದಲ್ಲಿ 22 ಸಾವಿರ ವೆಂಟಿಲೇಟರ್ ಮಾತ್ರ ಇತ್ತು. ಈವತ್ತು ಭಾರತವು 60 ಸಾವಿರಕ್ಕಿಂತ ಹೆಚ್ಚು ವೆಂಟಿಲೇಟರ್ಗಳನ್ನು ಸಿದ್ಧಪಡಿಸಿದೆ. ವೆಂಟಿಲೇಟರ್ಗಳನ್ನು ಹಂಚುವ ಪ್ರಕ್ರಿಯೆ ಆರಂಭವಾಗಿದೆ. ಜೂನ್ ಕೊನೆಯ ಹೊತ್ತಿಗೆ 60 ಸಾವಿರಕ್ಕಿಂತ ಹೆಚ್ಚು ವೆಂಟಿಲೇಟರ್ಗಳನ್ನು ‘ಆರೋಗ್ಯಕಾಳಜಿ ಕೇಂದ್ರಕ್ಕೆ ತಲುಪಿಸಲಾಗುವುದು. ಆತ್ಮನಿರ್ಭರ ಭಾರತದತ್ತ ದೇಶವು ಈ ರೀತಿ ಹೆಜ್ಜೆ ಹಾಕುತ್ತಿದೆ.
ಧ್ಯೇಯದ ಗುಟ್ಟು
ಅದೇ ವೇಳೆಗೆ ಪ್ರಧಾನಿಯವರು ‘ಗೋ ವೋಕಲ್ ಫಾರ್ ಲೋಕಲ್’ ಎಂದು ಸಹ ಹೇಳಿದ್ದಾರೆ. ಇಲ್ಲೇ ಆತ್ಮನಿರ್ಭರ ಭಾರತದ ಗುಟ್ಟು ಅಡಗಿರುವುದು. ಸ್ಥಳೀಯವಾಗಿಯೇ ಉತ್ಪನ್ನಗಳನ್ನು ಉತ್ಪಾದಿಸಲಾಗುವುದು. ವಲಸೆಕಾರ್ಮಿಕರ ಸಮಸ್ಯೆಗೂ ಉತ್ತರ ದೊಡ್ಡ ಪ್ರಮಾಣದಲ್ಲಿ ಸ್ಥಳೀಯವಾಗಿ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಅಡಗಿದೆ. ತಮ್ಮ ಹಳ್ಳಿಯಲ್ಲೇ ಉದ್ಯೋಗ ದೊರಕಿದರೆ ಯಾರೂ ವಲಸೆ ಹೋಗುವುದಿಲ್ಲ. ನಗರಕ್ಕೆ ವಲಸೆ ಬರುವುದು ತಪ್ಪುತ್ತದೆ. ಕೊರೋನಾ ಸಂಕಷ್ಟದಲ್ಲಿ ಇದೊಂದು ಬಹುದೊಡ್ಡ ಕ್ರೈಸಿಸ್ ಆಗಿತ್ತು. ಸರ್ಕಾರ ಇದನ್ನು ತುಂಬ ಸಮರ್ಪಕವಾಗಿ ನಿರ್ವಹಿಸಿದೆ. ವಲಸೆಕಾರ್ಮಿಕ ಸಮಸ್ಯೆಯನ್ನೇ ವಿರೋಧಪಕ್ಷಗಳು ದೊಡ್ಡದಾಗಿ ಮಾಡಿದವು. ಸರಕಾರ 45 ಲಕ್ಷ ಪ್ರವಾಸೀ ಕಾರ್ಮಿಕರನ್ನು ರೈಲಿನ ಮೂಲಕ ಸ್ವಸ್ಥಾನಕ್ಕೆ ತಲುಪಿಸಿದೆ.
ಹಳ್ಳಿಗೆ ಅವರನ್ನು ಸ್ಥಳಾಂತರಿಸುವುದು ಕಥೆಯ ಮೊದಲ ಭಾಗ. ಬಳಿಕ ಅವರ ಮುಂದಿನ ಕಥೆ ಏನು? ಉದ್ಯೋಗ ಖಾತ್ರಿ ಯೋಜನೆ ಒಂದರಿಂದ ಮಾತ್ರ ಅದಕ್ಕೆ ಉತ್ತರ ದೊರಕಲಾರದು. ಹಾಗೆಂದು ಒಂದಷ್ಟು ಹಣ ನೀಡುವುದು ಅದಕ್ಕೆ ಪರಿಹಾರವಲ್ಲ; ಆ ಜನರು ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತೆ ಆಗಬೇಕು. ಇಲ್ಲೇ ವೋಕಲ್ ಫಾರ್ ಲೋಕಲ್ ಗುಟ್ಟು ಇದೆ. ಸ್ಥಳೀಯರು ತಮ್ಮ ಹಳ್ಳಿಯ ಸುತ್ತಮುತ್ತಲೇ ಉದ್ಯೋಗ ಕಂಡುಕೊಳ್ಳಬೇಕು. ಆಗ ಅವರೂ ತಮ್ಮ ಕುಟುಂಬದೊಡನೆ ಇರಬಹುದು. ಭಾವನಾತ್ಮಕ ಸಂಬಂಧವೂ ಉಳಿಯುತ್ತದೆ. ಆಗ ಆರ್ಥಿಕ ಹೊರ ಪ್ರಯಾಣ ಕೂಡ ಆಗುವುದಿಲ್ಲ. ಸರ್ಕಾರ ಈ ಬಗ್ಗೆ ಕೂಡ ಪ್ರಯತ್ನ ನಡೆಸಿದೆ.
ಸರ್ಕಾರವು ಈಗಾಗಲೇ ಕೆಲವು ವರ್ಷಗಳಿಂದ ಈ ದಿಸೆಯತ್ತ ಮುನ್ನಡೆಯುತ್ತಿದೆ. ‘ಒಂದು ದೇಶ ಒಂದು ತೆರಿಗೆ’ ಮೂಲಕ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ತರಲಾಗಿದೆ. ‘ಒಂದು ದೇಶ ಒಂದು ರೇಷನ್ ಕಾರ್ಡ್’ನ ಲಾಭ ಎಲ್ಲರಿಗೂ ಅರ್ಥವಾಗುತ್ತಿದೆ. ಒಂದು ದೇಶ, ಒಂದು ರೇಷನ್ ಕಾರ್ಡ್ ಇದ್ದರೆ ಒಂದು ತಿಂಗಳು ಎಲ್ಲಿಗೆ ಹೋದರೂ ಅಲ್ಲೇ ಪಿಡಿಎಸ್ ಅಂಗಡಿಯಿಂದ ರೇಷನ್ ಪಡೆಯಬಹುದು. ಅದು ಎಟಿಎಂ ಇದ್ದ ಹಾಗೆ. ಇದು ವಲಸೆ ಕಾರ್ಮಿಕರಿಗೆ ತುಂಬ ಅನುಕೂಲ. ಅವರು ಅದನ್ನು ಮುಂಬಯಿಗೆ ಒಯ್ದರೂ ಅಲ್ಲೇ ಪಡೆಯಬಹುದು. ಪತಿ ಮುಂಬಯಿಯಲ್ಲಿ, ಪತ್ನಿ ಉತ್ತರಪ್ರದೇಶದಲ್ಲಿ ಇದ್ದರೆ, ಪತಿ ತನ್ನ ಕೋಟಾವನ್ನು ಮುಂಬಯಿಯಲ್ಲಿ, ಪತ್ನಿ ತನ್ನ ಕೋಟಾವನ್ನು ಉತ್ತರಪ್ರದೇಶದಲ್ಲಿ ಪಡೆಯಬಹುದು. ರೇಷನ್ಗಾಗಿ ತಮ್ಮ ಮೂಲಸ್ಥಳಕ್ಕೆ ಬರಬೇಕಾಗಿಲ್ಲ. ಇದು ಡಿಜಿಟಲ್ ರೀತಿಯಲ್ಲಿ ನಿರ್ವಹಣೆಯಾಗಲ್ಪಡುವಂಥದು. ‘ಒಂದು ದೇಶ, ಒಂದು ಗ್ರಿಡ್’. ಇದರಿಂದ ಗ್ರಿಡ್ ಕುಸಿತದ ಭಯವಿರುವುದಿಲ್ಲ. ‘ಒಂದು ದೇಶ, ಒಂದು ಮಾರುಕಟ್ಟೆ’. ಎಪಿಎಂಸಿಯನ್ನು ಪ್ರತ್ಯೇಕಿಸಲಾಗಿದ್ದು, ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಯನ್ನು ಈ-ಮಾರುಕಟ್ಟೆಯಲ್ಲಿ ಮಾರಬಹುದು. ಎಲ್ಲಿ ಯಾರಿಗೆ ಬೇಕಾದರೂ ಮಾರಬಹುದು. ಬಿತ್ತನೆಗೆ ಮುನ್ನವೇ ಮಾರುವ ಒಪ್ಪಂದದ ಮಾರುಕಟ್ಟೆಯನ್ನೂ ಯೋಜಿಸುತ್ತಿದೆ. ಆ ಬಗ್ಗೆ ಕಾನೂನು ಬರುವುದಿದೆ. ‘ಒಂದು ದೇಶ, ಒಂದು ರುಪೇ ಕಾರ್ಡ್’. ಮಾಸ್ಟರ್ ಕಾರ್ಡ್, ವಿಸಾಕ್ಕೆ ಈ ರುಪೇ ಕಾರ್ಡ ಬಹುದೊಡ್ಡ ಪರ್ಯಾಯ ಹೆಜ್ಜೆಯಾಗುತ್ತದೆ.
ಸರ್ಕಾರವು ಒಂದೊಂದಾಗಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಸಮಾಜವು ಅದಕ್ಕೆ ಸ್ಪಂದಿಸಬೇಕು. ನಮ್ಮ ಸಮಾಜವು 70 ವರ್ಷ ಹಿಂದಿನ ನೆಹರೂ ಆರ್ಥಿಕತೆಗೇ ಇನ್ನೂ ಅಂಟಿಕೊಂಡಿದೆ. ನಮ್ಮ ಸಾಮಥ್ರ್ಯವು ತುಂಬ ದೊಡ್ಡದಿದ್ದು, ನಮ್ಮ ಗುರಿ ತೀರಾ ಚಿಕ್ಕದಿತ್ತು. ಹಿರಿಯರು ಹೇಳಿದ್ದಾರೆ ‘ಚಿಕ್ಕ ಗುರಿ ಅಪರಾಧವಿದ್ದಂತೆ’ ಎಂದು. ಉನ್ನತ ಸಾಮಥ್ರ್ಯವಿದ್ದವರು ಸಹ ಕನಿಷ್ಠ ಗುರಿ ಹಾಕಿಕೊಳ್ಳುತ್ತಿದ್ದರು. ಆಕಾಂಕ್ಷೆ (ಆಸ್ಪಿರೇಷನ್) ಇತ್ತು, ಏರುಗತಿ (ಸ್ಕೇಲಿಂಗ್) ಇರಲಿಲ್ಲ. ಆ ಬಗೆಯ ಮನೋಭಾವದ ಸಂಕೋಲೆಯನ್ನು ಕಳಚಿ ತೆಗೆದೊಗೆದು ಹೊಸ ದಿಸೆಯತ್ತ ಸಾಗಬೇಕು. ಭಾರತದ ಶಕ್ತಿ ನಮ್ಮ ಯುವಕರಲ್ಲಿ, ಬುದ್ಧಿವಂತ ವರ್ಗದಲ್ಲಿ, ವೃತ್ತಿಪರರಲ್ಲಿ ಇದೆ. ಭಾರತದ ಈ ಸಾಮಥ್ರ್ಯವನ್ನು ಅನಾವರಣಗೊಳಿಸಬೇಕಾಗಿದೆ. ಅನಾವರಣಗೊಳಿಸುವ ಕಾರ್ಯ ಸರ್ಕಾರದ ಯೋಜನೆಯ ಮಟ್ಟದಲ್ಲಿ ಆಗುತ್ತಿದೆ. ಈಗ ನಮ್ಮ ಸಮಾಜದಿಂದ ಆ ಕೆಲಸ ಆಗಬೇಕಿದೆ. ಆ ಜವಾಬ್ದಾರಿ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ. ನಾವು ಒಂದು ಹಳ್ಳಿಯಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಒಂದು ಉತ್ಪನ್ನವನ್ನು ಮುಂಬಯಿ, ಬೆಂಗಳೂರಿನಂತಹ ನಗರದ ಒಂದು ಸಿಂಗಲ್ ಅಪಾರ್ಟ್ಮೆಂಟಿಗೆ ತಲಪಿಸಲು ಸಾಧ್ಯವೆ? ‘ಇ-ಮಾರ್ಕೆಟ್ ಸರ್ವಿಸ್’ ಸಾಧ್ಯವೇ? ಇದನ್ನು ಸಾಫ್ಟ್ವೇರ್ ಇಂಜಿನಿಯರ್ಗಳು ಹೇಳಬೇಕು.
ಪುರುಷಸೂಕ್ತದಲ್ಲಿ ಹೇಳಿರುವಂತೆ ‘ಸಹಸ್ರಾಕ್ಷಃ ಸಹಸ್ರಪಾತ್’. ಇದು ಒಂದು ವ್ಯಕ್ತಿಯಿಂದ ಸಹಸ್ರ ಸಂಖ್ಯೆಯಲ್ಲಿ ಬೆಳೆಯಬೇಕು. ಒಬ್ಬೊಬ್ಬ ವ್ಯಕ್ತಿಯೂ ಇದಕ್ಕಾಗಿ ಮುಂದಕ್ಕೆ ಚಲಿಸಬೇಕು. ನಾವೇನು ಸ್ವದೇಶೀ ಎನ್ನುತ್ತೇವೋ ಅದಕ್ಕೆ ಸ್ವದೇಶೀ, ಸ್ವಭಾಷಾ, ಸ್ವಭೂಷಾ ಇವು ಮೂರು ಅಗತ್ಯ. ಇದು ಸ್ವಾಭಿಮಾನಿ ಭಾರತವನ್ನೂ ಏಕಾತ್ಮಭಾರತವನ್ನೂ ಸೃಷ್ಟಿಸುತ್ತದೆ. ದೀರ್ಘಕಾಲದಿಂದಲೂ ನಮ್ಮ ಸಂಘಟನೆಯು ಇದನ್ನು ಹೇಳುತ್ತಲೇ ಬರುತ್ತಿದೆ.
ಸ್ವಭಾಷಾ, ಸ್ವದೇಶೀ, ಸ್ವಭೂಷಾ
ಸ್ವಭಾಷಾ – ಒಂದು ಸ್ಥಳೀಯ ಪತ್ರಿಕೆ ಕೊಂಡು ಓದಿರಿ. ಮನೆಯಲ್ಲಿ ಇಂಗ್ಲೀಷ್ ಪದ ಬಳಕೆ ಕಡಮೆ ಮಾಡಿ ಮಾತೃಭಾಷೆಯನ್ನೇ ಬಳಕೆ ಮಾಡಿ. ಆಹಾರದ ಮೇಲಿನ ವಸ್ತುಗಳಿಗೆ ಇಂಗ್ಲೀಷ್ ಪದದ ಬಳಕೆ ಮಾಡಬೇಡಿ. ಭಾರತೀಯ ಪದಬಳಕೆ ಮಾಡಿ. ಸಹಿ ನಿಮ್ಮ ಗುರುತು. ನಿಮ್ಮ ಮಾತೃಭಾಷೆಯಲ್ಲೇ ಸಹಿ ಮಾಡಿ. ನಿಮ್ಮ ಸಹಿಯನ್ನು ಯಾವ ದೇಶವೂ ಪ್ರಶ್ನಿಸುವಂತಿಲ್ಲ. ಹಾಗಾಗಿ ಅದಕ್ಕೆ ಮಾತೃಭಾಷೆಯನ್ನೇ ಬಳಸಿ. ಇವೆಲ್ಲ ಸಣ್ಣಸಣ್ಣ ವಿಚಾರಗಳಾದರೂ ಬಹುದೊಡ್ಡ ಬದಲಾವಣೆಯನ್ನು ತರಬಲ್ಲದು. ಕೋಟಿ ಸಂಖ್ಯೆಯಲ್ಲಿ ಇದನ್ನು ಮಾಡತೊಡಗಿದಾಗ ಅವರೆಲ್ಲ ತಮ್ಮ ಸಂಸ್ಕೃತಿಯ ಬೇರನ್ನು ಸ್ಪರ್ಶಿಸಲು ಸಾಧ್ಯವಾಗುತ್ತದೆ.
ಸ್ವಭೂಷಾ – ನಮ್ಮ ಮನೆಯಲ್ಲಿ ಹಬ್ಬದ ದಿನ, ದೇವಸ್ಥಾನಗಳಿಗೆ ಹೋದಾಗ, ಮನೆಯ ಶುಭ ಕಾರ್ಯಕ್ರಮಗಳಲ್ಲಿ ಸಂಪ್ರದಾಯದ ಉಡುಪನ್ನೇ ಧರಿಸುವುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನಮ್ಮದೇ ಉಡುಪನ್ನು ಧರಿಸಿ.
ಸ್ವದೇಶೀ – ನಮ್ಮಲ್ಲಿ ಸಿದ್ಧವಾದ ವಸ್ತುವನ್ನು ಸಾಧ್ಯವಾದಷ್ಟು ಖರೀದಿಸಿ. ಗುಣಮಟ್ಟದ ವಸ್ತುವನ್ನು ಖರೀದಿಸಿ. ಅದು ಇನ್ನಷ್ಟು ಗುಣಮಟ್ಟದ ವಸ್ತುವಿನ ಉತ್ಪಾದನೆಗೆ ಸ್ಫೂರ್ತಿಯಾಗಬಹುದು.
‘ಆತ್ಮನಿರ್ಭರ ಭಾರತ’ ಮೋದಿಯವರ ಕಲ್ಪನೆಯಾಗಿರಬಹುದು, ಅವರು ಅದನ್ನು ನಮ್ಮ ಮುಂದಿಟ್ಟಿದ್ದಾರೆಯೆ ವಿನಾ ಅದನ್ನು ನಮ್ಮ ಮನೆಯ ಬಾಗಿಲಿಗೆ ತಂದುಮುಟ್ಟಿಸಲಾರರು. ಆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದರ ಯಶಸ್ಸಿನಲ್ಲಿ ದೇಶದ ಪ್ರತಿಯೊಬ್ಬನ ಪಾತ್ರವಿದೆ. ಸ್ವಭಾಷಾ, ಸ್ವಭೂಷಾ, ಸ್ವದೇಶೀ ಇದನ್ನು ಸಾಧ್ಯವಿದ್ದಲ್ಲೆಲ್ಲ ಜಾರಿಗೆ ತರಬಹುದು. ನಮ್ಮಲ್ಲಿ ಯುವಪಡೆಯಿದೆ, ಜನಸಂಖ್ಯೆಯಿದೆ. ದೇಶವೆಂದರೆ ಒಬ್ಬ ವ್ಯಕ್ತಿಯಿಂದಾಗುವುದಲ್ಲ. ಆತ್ಮನಿರ್ಭರ ಭಾರತದ ಐದು ಮುಖಗಳಾದ ಸ್ವಾಭಿಮಾನಿ, ಸಂಘಟಿತ, ಸಶಕ್ತ, ಸಂಪನ್ನ, ಏಕಾತ್ಮ ಇದನ್ನು ನಮ್ಮ ಯುವಜನರು ಅರ್ಥಮಾಡಿಕೊಂಡರೆ ಆ ಕಾರ್ಯದಲ್ಲಿ ಸುಲಭವಾಗಿ ಜಯ ಸಾಧ್ಯ.
17ನೇ ಶತಮಾನದಲ್ಲಿ ಆಂಗ್ಲೋ-ಫ್ರೆಂಚ್ ಯುದ್ಧ ನಡೆಯಿತು. ಫ್ರೆಂಚ್ ಸೇನೆ ಸಂಖ್ಯೆಯಲ್ಲಿ ದೊಡ್ಡದಾಗಿದ್ದರೂ, ಸಶಕ್ತವಾಗಿದ್ದರೂ ಯುದ್ಧದಲ್ಲಿ ಸೋತಿತು. ಫ್ರೆಂಚ್ ಜನರಲ್ಗೆ ಒಬ್ಬರು ‘ದೇಶದಲ್ಲಿ ಇಷ್ಟೆಲ್ಲ ಶಸ್ತ್ರಾಸ್ತ್ರವಿದೆ, ಸೈನ್ಯವಿದೆ. ಆದರೂ ಸೋತದ್ದೇಕೆ?’ ಎಂಬ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಜನರಲ್ “ಇಂಗ್ಲೆಂಡ್ ಮ್ಯಾಂಚೆಸ್ಟರ್ನ ಫುಟ್ಬಾಲ್ ಮೈದಾನದಲ್ಲಿ ಯುದ್ಧವನ್ನು ಗೆದ್ದಿತು. ಫ್ರಾನ್ಸ್ ಪ್ಯಾರಿಸಿನ ನೈಟ್ಕ್ಲಬ್ನಲ್ಲಿ ಯುದ್ಧವನ್ನು ಸೋತರು.’ (ಬ್ರಿಟೀಷಿ ಯುವಕರು ಪರಿಶ್ರಮಗಳಾದರೆ, ಪ್ರೆಂಚರು ವಿನೋದ, ವಿಲಾಸದಲ್ಲಿ ಮುಳುಗಿದ್ದರು). ಯಾವಾಗ ದೇಶದ ಮಕ್ಕಳು ಸ್ವಾರ್ಥಿಗಳಾಗುತ್ತಾರೋ, ಮಾರ್ಗದರ್ಶನದ ಕೊರತೆಯಿಂದ ಬಳಲುತ್ತಾರೋ, ‘ಹೇಗೋ ಆದರೆ ಆಯ್ತು’ ಎನ್ನುವ ಮನೋಭಾವ ಹೊಂದುತ್ತಾರೋ, ಆಗ ಆತ್ಮನಿರ್ಭರ ಭಾರತವು ಕೇವಲ ಮಾತಿನಲ್ಲೇ ಉಳಿಯುತ್ತದೆ; ಅರಳಿಕಟ್ಟೆಯ ಹರಟೆಯ ಪದವಾಗುತ್ತದೆ. ತಳಮಟ್ಟದಲ್ಲಿ ಅದರ ಬಗ್ಗೆ ಕಾರ್ಯವಾಗಬೇಕು. ಅದಕ್ಕಾಗಿ ದೇಶದ ಪ್ರತಿಯೊಬ್ಬರೂ ತಮ್ಮ ಕೈಜೋಡಿಸಬೇಕು. ದೇಶದ ಯುವಪೀಳಿಗೆ ವೃತ್ತಿಪರತೆಯಿಂದ ಯೋಚಿಸಬೇಕು. ಒಬ್ಬ ಭಾರತೀಯನಾಗಿ, ಭಾರತೀಯ ಚಿಂತನೆಯನ್ನು ತುಂಬಿಕೊಳ್ಳಬೇಕು. ನಮ್ಮಲ್ಲಿ ಶತಮಾನಗಳಿಂದ ಅನುಸರಿಸಿಕೊಂಡು ಬಂದ ರೀತಿಯಲ್ಲಿ ನಾವು ಯೋಚಿಸುವುದನ್ನು ರೂಢಿಸಿಕೊಳ್ಳಬೇಕು.
ಉಪಸಂಹಾರ
ರವೀಂದ್ರನಾಥ ಟಾಗೂರರ ಒಂದು ವಾಕ್ಯವನ್ನು ಇಲ್ಲಿ ಸ್ಮರಿಸುವುದು ತುಂಬ ಸಮಂಜಸವೆನಿಸುತ್ತದೆ:
‘ದೇವರು ಪ್ರತಿಯೊಂದು ದೇಶಕ್ಕೂ ಬೇರೆಬೇರೆಯದೇ ಆದ ಪ್ರಶ್ನಪತ್ರಿಕೆಗಳನ್ನು ನೀಡಿದ್ದಾನೆ. ನೀವು ನಿಮಗೆ ಬಂದ ಪ್ರಶ್ನಪತ್ರಿಕೆಗೆ ಉತ್ತರ ಬರೆದು ಪಾಸ್ ಆಗಬೇಕು. ನೀವೇನಾದರೂ ನಕಲು ಮಾಡಿದಿರೋ ಆಗ ಫೇಲ್ ಖಂಡಿತಾ; ಯಾಕೆಂದರೆ ಅವರದು ನಿಮ್ಮದು ಬೇರೆಬೇರೆಯೇ ಪ್ರಶ್ನಪತ್ರಿಕೆ ಇದೆ. ಪ್ರಶ್ನಪತ್ರಿಕೆ ಒಂದೇ ಇದ್ದರೆ ನಕಲು ಮಾಡಿದರೂ ಪಾಸ್ ಆಗಬಹುದು. ಪ್ರಶ್ನಪತ್ರಿಕೆಯೇ ಬೇರೆಬೇರೆ ಇದ್ದಾಗ ನಕಲು ಮಾಡಿದರೂ ಫೇಲ್ ಆಗುತ್ತೇವೆ.’ ನಾವು ನಮ್ಮ ಪ್ರಶ್ನಪತ್ರಿಕೆಗೆ ಉತ್ತರ ಬರೆಯಬೇಕು. ನಮ್ಮ ಮುಂದಿರುವ ದಾರಿ ‘ಆತ್ಮನಿರ್ಭರ ಭಾರತ’. ಅದರ ಮೂಲಕವೇ ವಿಶ್ವದ ಶಕ್ತಿಯಾಗೋಣ. ವಿಶ್ವಕಲ್ಯಾಣಕ್ಕೆ ನಾಂದಿ ಹಾಡೋಣ. ಹೊಸ ವಿಶ್ವ ವ್ಯವಸ್ಥೆಗೆ ದಾರಿ ಮಾಡಿಕೊಡೋಣ.