“ಒಂದು ಸಂಸ್ಕೃತಿಯ ಸಾಹಿತ್ಯ ಇನ್ನೊಂದು ಸಂಸ್ಕೃತಿಯಲ್ಲಿ ಮೊದಲು ಪ್ರವೇಶಿಸುವುದು ಭಾಷಾಂತರದ ಮೂಲಕ. ಆಮೇಲೆ ಅದು ಭಾವಾಂತರ, ಸ್ವತಂತ್ರ ಸಾಹಿತ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಅನುಗುಣವಾಗಿ ಆರಂಭದ ಕನ್ನಡ ಭಾವಗೀತೆ ಮತ್ತು ನಾಟಕಗಳು ಅನುವಾದದ ದಾರಿ ಹಿಡಿದೇ ಕನ್ನಡದೊಳಗೆ ಬಂದವು. ಅಂದರೆ ಇಂಗ್ಲಿಷ್ನಿಂದ ಕಾವ್ಯಸಾಹಿತ್ಯವನ್ನು, ಇಂಗ್ಲಿಷ್ ಮತ್ತು ಸಂಸ್ಕೃತಗಳಿಂದ ನಾಟಕಸಾಹಿತ್ಯವನ್ನು ಕನ್ನಡಿಗರು ಅನುವಾದಗೊಳಿಸಿಕೊಂಡರು.
ಕಳೆದ ಸಂಚಿಕೆಯಿಂದ…
೩) ಬಿ. ವೆಂಕಟಾಚಾರ್ಯರ ಅನುವಾದಗಳು
ಬಿ. ವೆಂಕಟಾಚಾರ್ಯರನ್ನು (೧೮೪೫-೧೯೧೪) ‘ಕನ್ನಡ ಕಾದಂಬರಿಗಳ ಪಿತಾಮಹ’ ಎಂದು ಕರೆಯಲಾಗಿದೆ. ಇವರ ಸಂಕ್ಷಿಪ್ತ ಪರಿಚಯ ಟಿಪ್ಪಣಿ- ೬ರಲ್ಲಿದೆ. (ಕೆಲವು ಲೇಖನಗಳಲ್ಲಿ ಗಳಗನಾಥರನ್ನೂ ಹಾಗೆ ಕರೆಯಲಾಗಿದೆ. ಬಹುಶಃ ವೆಂಕಟಾಚಾರ್ಯರು ಸ್ವತಂತ್ರ ಕಾದಂಬರಿಗಳನ್ನು ಬರೆಯಲಿಲ್ಲವೆನ್ನುವ ಕಾರಣದಿಂದ ಹೀಗಿರಬಹುದು. ಆದರೆ ಇಲ್ಲಿ ಗಳಗನಾಥರನ್ನು ‘ಕರ್ನಾಟಕ ಕಾದಂಬರಿ ಸಾಮ್ರಾಟ’ ಎಂದು ಕರೆಯಲಾಗಿದೆ). ಬಿ. ವೆಂಕಟಾಚಾರ್ಯರು ಕೊಳ್ಳೇಗಾಲದಲ್ಲಿ ಹುಟ್ಟಿ ಬ್ರಿಟಿಷರ ಕಾಲದಲ್ಲಿ ಸರ್ಕಾರಿ ಸೇವೆಯಲ್ಲಿದ್ದರು. ಕೊನೆಗೆ ಮೈಸೂರಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಅಲ್ಲಿಯೇ ನೆಲೆಸಿದ್ದರು. ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಪತ್ರಮುಖೇನ ಈಶ್ವರಚಂದ್ರ ವಿದ್ಯಾಸಾಗರರಿಂದ ಬಂಗಾಳಿ ಭಾಷೆ ಕಲಿತ ಅವರು ಬಂಗಾಳದ ಆಗಿನ ಮಹತ್ತ್ವದ ಕೃತಿಗಳನ್ನು ಮತ್ತು ಬಂಕಿಮಚಂದ್ರರ ಬಹುತೇಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿ ಹೊಸ ಕಾದಂಬರಿ ಕ್ರಾಂತಿಯನ್ನು ಉಂಟುಮಾಡಿದರು. ಮೊದಲು ಅವರು ತಮ್ಮ ಅಪ್ರತ್ಯಕ್ಷ ಗುರುವಾದ ಈಶ್ವರಚಂದ್ರ ವಿದ್ಯಾಸಾಗರರ ‘ಭ್ರಾಂತಿವಿಲಾಸ’ ಎಂಬ ಕಾದಂಬರಿಯನ್ನು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಇದು ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಮೊದಲ ಗ್ರಂಥ. ಈ ಗ್ರಂಥವನ್ನು ಮದರಾಸು ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿ ಏರ್ಪಡಿಸಿದುದರಿಂದ ವೆಂಕಟಾಚಾರ್ಯರಿಗೆ ಅನುವಾದಿಸಲು ಪ್ರೋತ್ಸಾಹ ಸಿಕ್ಕಿದಂತಾಯಿತು. ಅವರು ವಿದ್ಯಾಸಾಗರರ ‘ಸೀತಾ ವನವಾಸ’ ಮತ್ತು ‘ಶಾಕುಂತಲ’ ಕಾದಂಬರಿಗಳನ್ನು ಕನ್ನಡಕ್ಕೆ ತಂದರು. ಬಂಗಾಳಿ ಭಾಷೆಯ ಸಾಹಿತ್ಯಕೃತಿಗಳು ಮತ್ತು ಪತ್ರಿಕೆಗಳನ್ನು ಅವರು ನಿರಂತರವಾಗಿ ಓದುತ್ತಿದ್ದರು. ಬಂಗಾಳಿ ಸಾಹಿತ್ಯದ ಆಮೂಲಾಗ್ರ ಪರಿಚಯ ಅವರಿಗಿದ್ದುದರಿಂದ ಬಂಕಿಮಚಂದ್ರ ಮತ್ತಿತರ ಕಾದಂಬರಿಕಾರರ ಕಾದಂಬರಿಗಳನ್ನೂ ಅವರು ಅನುವಾದಿಸಿದರು. ಅವರು ತಿಂಗಳಿಗೊಂದು ಕಾದಂಬರಿಯನ್ನು ಪ್ರಕಟಿಸುತ್ತಿದ್ದರಂತೆ. ವೆಂಕಟಾಚಾರ್ಯರು ಬಂಕಿಮಚಂದ್ರ, ಈಶ್ವರಚಂದ್ರ ವಿದ್ಯಾಸಾಗರ, ಹರಪ್ರಸಾದ ಶಾಸ್ತ್ರಿ, ರಮೇಶಚಂದ್ರದತ್ತ, ಯೋಗೀಂದ್ರನಾಥ ಚಟ್ಟೋಪಾಧ್ಯಾಯ, ಯೋಗಿಂದ್ರನಾಥ ಬಸು ಇವರುಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅವರ ಪ್ರಸಿದ್ಧ ಅನುವಾದಗಳು ‘ದೇವಿ ಚೌಧುರಾಣಿ’, ‘ದುರ್ಗೇಶ ನಂದಿನಿ’, ‘ನವಾಬ ನಂದಿನಿ’, ‘ಆನಂದಮಠ’, ‘ವಿಷವೃಕ್ಷ’ ಮುಂತಾದ ಬಂಗಾಳಿ ಕಾದಂಬರಿಗಳು. ‘ಅರೇಬಿಯನ್ ನೈಟ್ಸ್ ಅನ್ನು ‘ಯವನ ಯಾಮಿನೀ ವಿನೋದ’ ಎಂದು ಅವರು ಕನ್ನಡಕ್ಕೆ ತಂದಿದ್ದಾರೆ.
ಅವರು ಪ್ರಕಟಿಸಿದ ೭೫ ಗ್ರಂಥಗಳಲ್ಲಿ ೬೦ ಗ್ರಂಥಗಳು ಕಾದಂಬರಿಗಳೇ ಆಗಿವೆ. ಬಂಗಾಳಿ ಕಾದಂಬರಿಗಳಲ್ಲಿ ದೇಶದ ಪರಿಸ್ಥಿತಿಗೆ ಕಾರಣವಾಗುವ ಚಾರಿತ್ರಿಕ ವ್ಯಕ್ತಿಗಳ ಮತ್ತು ಘಟನೆಗಳ ಕುರಿತಾದ ಐತಿಹಾಸಿಕ ಮತ್ತು ಅರೆ-ಐತಿಹಾಸಿಕ ಕಥಾನಕಗಳೇ ಹೆಚ್ಚು. ಇನ್ನು ಕೆಲವು ಕೃತಿಗಳಲ್ಲಿ ಸಮಾಜ ಸುಧಾರಣೆ, ಸ್ತ್ರೀ ವಿದ್ಯಾಭ್ಯಾಸ ಮೊದಲಾದ ಪ್ರಸ್ತುತ ಸಾಮಾಜಿಕ ವಿಚಾರಗಳು ಇರುತ್ತಿದ್ದವು. ಒಂದು ಪತ್ತೇದಾರಿ ಕಾದಂಬರಿಯನ್ನೂ ಅವರು ಅನುವಾದಿಸಿದ್ದಾರೆ (ಬಂಗಾಳಿಯ ‘ಪರಿಮಳಾ’ ಎಂಬ ಕಾದಂಬರಿ. ೧೯೦೨. ಮೂಲ- ಪಂಚಕಾರಿ ಡೇ). ಅವರು ‘ಅವಕಾಶ ತೋಷಿಣಿ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಅದರಲ್ಲಿ ಕತೆ, ಲಘುಲೇಖನ ಇತ್ಯಾದಿಗಳನ್ನು ಬರೆಯುತ್ತಿದ್ದರು.
ವಿದ್ಯಾವಂತ ಕನ್ನಡಿಗರು ಕನ್ನಡದಲ್ಲಿ ಮಾತನಾಡುವುದು ಅಪಮಾನವೆಂದುಕೊಂಡು, ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದ ಆ ಕಾಲದಲ್ಲಿ ವೆಂಕಟಾಚಾರ್ಯರು ಕನ್ನಡದಲ್ಲಿ ಕಾದಂಬರಿ ಯುಗವನ್ನೇ ನಿರ್ಮಿಸಿಬಿಟ್ಟರು. ಕನ್ನಡ ಓದುಗರ ಬಳಿ ವೆಂಕಟಾಚಾರ್ಯರ ಕಾದಂಬರಿಗಳು ಇದ್ದೇ ಇರುತ್ತಿದ್ದವಂತೆ.
ವೆಂಕಟಾಚಾರ್ಯರ ಮಹತ್ತ್ವವೇನೆಂದರೆ ಕಾದಂಬರಿಗಳ ವಿವಿಧ ಪ್ರಕಾರಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದು. ವ್ಯಕ್ತಿಗತ ಚಾರಿತ್ರ್ಯ ನಿರ್ಮಾಣ, ಸಾಮಾಜಿಕವಾಗಿ ದೇಶಪ್ರೇಮ ಮತ್ತು ಸದಾಚಾರಗಳ ಪ್ರೇರಣೆ ಇತ್ಯಾದಿಗಳನ್ನು ಕಾದಂಬರಿಗಳ ಮೂಲಕ ಬೆಳೆಸಬಹುದೆನ್ನುವುದು ಅವರ ಚಿಂತನೆಯಾಗಿತ್ತು. ಅವರು ತಮ್ಮ ಮುನ್ನುಡಿಗಳಲ್ಲಿ ಕಾದಂಬರಿ ಪ್ರಕಾರದ ಬಗ್ಗೆ ಬರೆದ ವಿಚಾರಗಳನ್ನು ಸಂಗ್ರಹಿಸಿ ಪ್ರಕಟಿಸಿದರೆ ಅದೊಂದು ಅಮೂಲ್ಯ ದಾಖಲೆಯಾಗುತ್ತದೆ. ಇಲ್ಲಿ ಮಾದರಿ ಉದಾಹರಣೆಗಳನ್ನು ಕೊಡಬಹುದು. ೧. ‘ದುರ್ಗೇಶ ನಂದಿನಿ’ಯ ಅನುವಾದದ ವಿಜ್ಞಾಪನೆಯಲ್ಲಿ ಅವರು ಹೇಳಿರುವ ಮಾತುಗಳಿವು: “ಗಾರ್ಹಸ್ಥ್ಯ ಸಂಬಂಧವಾದ ನಾವೆಲ್ಗಳು ಪ್ರಾರಂಭವಾಗಿ ಕ್ರಮೋನ್ನತಿಯಾಗಿ ಸ್ವಾಭಾವಿಕವಾದುದಾಗಿಯೂ ಮನುಷ್ಯಚರಿತ್ರ ಪರಿಚಾಯಕವಾದುದಾಗಿಯೂ, ಮನುಷ್ಯನ ಸದ್ವ್ಯವಹಾರ ನಡತೆಗಳಿಗೆ ಮೂಲಸೂತ್ರ ಜ್ಞಾಪಕ ಜನಕವಾದುದಾಗಿಯೂ ಇರುವ ಅತ್ಯುತ್ಕöÈಷ್ಟ ನಾವೆಲುಗಳ ಸೃಷ್ಟಿಯಾಯಿತು.” ೨. “….ಸಮಾಜದ ಹಾಗೂ ಸಮಾಜಕ್ಕೆ ಅಂಗಭೂತವಾದ ಮನುಷ್ಯನ ಚರಿತ್ರೆ, ನಡತೆಗಳಲ್ಲಿ ಕಂಡುಬರುವ ಅತ್ಯಾಚಾರ, ದುರಾಚಾರ, ಅಸದ್ವ್ಯವಹಾರ, ದುರ್ನಡತೆ ಮುಂತಾದವುಗಳನ್ನು ಉದಾಹರಣೆಗಳೊಡನೆ ಚಿತ್ರಿಸಿ, ಅವುಗಳಿಂದುಂಟಾಗುವ ವಿಪತ್ತುಗಳನ್ನು ತೋರ್ಪಡಿಸಿ, ಪ್ರತಿಯೊಬ್ಬನೂ ಸಮಾಜದಲ್ಲಿ ಸದ್ಭಾವದಿಂದ ನಡೆದುಕೊಳ್ಳಬೇಕಾದುದನ್ನು ತೋರ್ಪಡಿಸತಕ್ಕುದಾಗಿರುತ್ತದೆ.” (ದುರ್ಗೇಶ ನಂದಿನಿ) ೩. ಕಾದಂಬರಿಯಲ್ಲಿ ‘ಭಾವಮೂಲಕವಾದುದು ಮತ್ತು ಘಟನಾಪ್ರಧಾನವಾದುದು’ ಎಂದು ಎರಡು ಬಗೆಯ ಕೃತಿಗಳಿರುತ್ತವೆ, ಅವುಗಳಲ್ಲಿ ಭಾವಮೂಲಕವಾದುದು ಶ್ರೇಷ್ಠ. (‘ಸೀತಾರಾಮ’ ಕಾದಂಬರಿಯ ವಿಜ್ಞಾಪನೆಯಲ್ಲಿ) ೪. ‘ರಾಜಸಿಂಹ’ (೧೮೯೮) ಕಾದಂಬರಿಯ ವಿಜ್ಞಾಪನೆಯಲ್ಲಿ, “ಪ್ರತಿಯೊಬ್ಬ ಲೇಖಕರು ಚಾರಿತ್ರಿಕ ವಿಚಾರಗಳ ಬಗೆಗೆ ಕೂಲಂಕಷ ಅಧ್ಯಯನ ನಡೆಸಬೇಕು. ಒಂದು ಕೃತಿಯಲ್ಲಿರುವ ವಿಚಾರ ಮತ್ತೊಂದು ಕೃತಿಯಲ್ಲಿಲ್ಲದಿರುವುದು ಮುಂತಾದ ಆಭಾಸಗಳನ್ನು ತೊಡೆದುಹಾಕಬೇಕು” ಎಂದು ಐತಿಹಾಸಿಕ ಕಾದಂಬರಿಗಳನ್ನು ಬರೆಯುವವರಿಗೆ ಮಾರ್ಗದರ್ಶನ ಮಾಡಿದ್ದಾರೆ.
ಇಲ್ಲಿ ಗಮನಿಸಬೇಕಾದುದೇನೆಂದರೆ, ಗುಲ್ವಾಡಿ ವೆಂಕಟರಾಯರು ತಮ್ಮ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಕಾದಂಬರಿಯ ಮೂಲಕ ಕಾದಂಬರಿಯು ವರ್ತಮಾನಕಾಲದ ವಾಗ್ವಾದಗಳಲ್ಲಿ ಲೇಖಕನ ಪ್ರವೇಶ ಮತ್ತು ತನ್ನ ನಿಲುವನ್ನು ಸ್ಥಾಪಿಸುವ ಸಂಕಥನವಾಗುವ ಹೊಸದೊಂದು ಮಾದರಿಯನ್ನು ಪರಿಚಯಿಸಿದರು. ಈ ಮಾದರಿಗೆ ವೆಂಕಟಾಚಾರ್ಯರ ಅನುವಾದಗಳು ಮಾದರಿಯಾಗದೆ ರೆ. ಹರ್ಮನ್ ಮ್ಯೋಗ್ಲಿಂಗರ ‘ಈರಾರು ಪತ್ರಿಕೆ’, ಬಾಬಾ ಪದ್ಮಾಂಜಿಯ ‘ಯಮುನಾಬಾಯಿಯ ಸಂಚಾರ’ ಇತ್ಯಾದಿ ಕಾದಂಬರಿಗಳು ಮಾದರಿಯಾಗಿವೆ.
೪) ವೈಯಕ್ತಿಕ ಪ್ರಯತ್ನಗಳು
ಸಂಸ್ಕೃತ ಕಾವ್ಯಗಳನ್ನೂ, ನಾಟಕಗಳನ್ನೂ ಗದ್ಯ ರೂಪದಲ್ಲಿ ನಿರೂಪಿಸುವ ಕಾರ್ಯವು ಮುಮ್ಮಡಿಯವರ ಕಾಲದಲ್ಲಿ ಆರಂಭವಾದುದು ವಿದ್ವಾಂಸರ ವೈಯಕ್ತಿಕ ಆಸಕ್ತಿಯಿಂದ ಮುಂದುವರಿಯಿತು. ಸಿದ್ಧಾಂತಿ ಶಿವಶಂಕರ ಶಾಸ್ತ್ರಿ (ಜಯದೇವನ ಪ್ರಸನ್ನರಾಘವ ನಾಟಕದ ಕಥನರೂಪ ‘ಶ್ರೀರಾಮ ಕಥಾಸಂಗ್ರಹ ವಚನವು’, ೧೮೮೫), ಗರಣಿ ಕೃಷ್ಣಾಚಾರ್ಯ (ಶ್ರೀಹರ್ಷ ಮತ್ತು ಶೂದ್ರಕರ ನಾಟಕಗಳು), ಕರ್ಕಿ ವೆಂಕಟರಮಣ ಶಾಸ್ತ್ರಿ (ಪ್ರಾಚೀನ ನಾಟ್ಯ ಕಥಾರ್ಣವ, ೧೮೮೫). ಶ್ರೀನಿವಾಸಪುರಂ ಶ್ರೀನಿವಾಸರಾಯ (ನಾಟಕ ಕಥರತ್ನಮಾಲೆ – ೧೮೯೦), ಬಿ. ಕೃಷ್ಣಪ್ಪ, ಮೈಸೂರು (‘ಅಭಿಜ್ಞಾನ ಶಾಕುಂತಲ ನಾಟಕ: ಕರ್ಣಾಟಕ ಗದ್ಯಾನುವಾದ’ ೧೯೨೨) ಮುಂತಾದವರು ಈ ಕಾರ್ಯವನ್ನು ಮುಂದುವರಿಸಿದರು. (ಈ ಪಟ್ಟಿ ಸಮಗ್ರವಲ್ಲ).
ಅ) ಇಂಗ್ಲಿಷ್ ನಾಟಕಗಳ (ಮುಖ್ಯವಾಗಿ ಶೇಕ್ಸ್ಪಿಯರ್ ನಾಟಕಗಳ) ಗದ್ಯ ಕಥನ ರೂಪಗಳನ್ನು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅನುವಾದಿಸಿ ಪ್ರಕಟಿಸಿದ ಹಲವು ಕೃತಿಗಳಿವೆ. ಇವುಗಳ ವೈಶಿಷ್ಟ್ಯ ಏನೆಂದರೆ ಇವೆಲ್ಲ ‘ಹೊರಗಿನ ಲೇಖಕರನ್ನು ನಮ್ಮವರನ್ನಾಗಿ ಮಾಡಿಕೊಳ್ಳುವ ಬಗೆಯ’ ಅನುವಾದಗಳು ಅಥವಾ ರೂಪಾಂತರಗಳು. ಯಾವುದಾದರೊಂದು ಸನ್ನಿವೇಶ ಕನ್ನಡ ಜನತೆಗೆ ಹಿಡಿಸದು ಎಂದು ಅನುವಾದಕರಿಗೆ ಅನಿಸಿದರೆ ಅವರು ಅದನ್ನು ಬದಲಾಯಿಸುತ್ತಿದ್ದರು.
ಎಂ.ಎಸ್. ಪುಟ್ಟಣ್ಣನವರು ೧೮೮೧ರಿಂದ ೧೯೨೦ರ ನಡುವೆ ರೂಪಾಂತರಿಸಿ ಗದ್ಯರೂಪದಲ್ಲಿ ಬರೆದ ಶೇಕ್ಸ್ಪಿಯರಿನ ಮೂರು ನಾಟಕಗಳು – ಜಯಸಿಂಹರಾಜನ ಚರಿತ್ರ- ೧೮೮೧ (ಸಿಂಬೆಲೈನ್), ಹೇಮಚಂದ್ರ ವಿಲಾಸ- ೧೮೯೯ (ಕಿಂಗ್ ಲಿಯರ್) ಮತ್ತು ‘ಹೇಮಲತ’- ೧೯೨೦ (ಹ್ಯಾಮ್ಲೆಟ್); ಥಾಮಸ್ ಡೇ ಎಂಬವನ ‘ದ ಹಿಸ್ಟರಿ ಆಫ್ ಸ್ಯಾನ್ಫೋರ್ಡ್ ಅಂಡ್ ಮೆರ್ಟನ್’ ಎಂಬ ಕೃತಿಯ ರೂಪಾಂತರ ‘ಸುಮತಿ ಮದನಕುಮಾರ ಚರಿತ್ರೆ’ (೧೮೯೭) ಮತ್ತು ‘ಹಾತಿಮ ತಾಯ್’ (೧೯೨೦) ಕಥೆಯ ಅನುವಾದಗಳು ಈ ಪರಂಪರೆಯವು. ಇಂಗ್ಲಿಷ್ ಮೂಲದ ನಾಲ್ಕು ಕೃತಿಗಳನ್ನು ರೂಪಾಂತರ ಮಾಡಿದ ಪುಟ್ಟಣ್ಣನವರು ಪರ್ಷಿಯನ್ ಕೃತಿ ಹಾತಿಮ ತಾಯ್ ಚರಿತ್ರೆಯನ್ನು ಇಂಗ್ಲಿಷ್ ಭಾಷಾಂತರವನ್ನಾಧರಿಸಿ ಮಾಡಿದ್ದರು.
‘ಹಾತಿಮತಾಯಿ’ ಕಥೆಯನ್ನು ೧೯೧೩ರಲ್ಲಿ ಭೀಮಾಚಾರ್ಯ ಸುಬ್ರಹ್ಮಣ್ಯಾಚಾರ್ಯ ಕಿತ್ತೂರ ಅವರೂ ಕನ್ನಡದಲ್ಲಿ ನಿರೂಪಿಸಿದ್ದರು.
ಭಂಡೀವಾಡರು ರೂಪಾಂತರಿಸಿದ ‘ಕಮಲಾಕ್ಷ ಪದ್ಮಗಂಧಿಯರ ಕಥೆ’ (ಶೇಕ್ಸ್ಪಿಯರಿನ ‘ರೋಮಿಯೋ ಅಂಡ್ ಜೂಲಿಯೆಟ್’), ‘ಗಯ್ಯಾಳಿಯನ್ನು ಸಾಧು ಮಾಡುವಿಕೆ’ (ಶೇಕ್ಸ್ಪಿಯರಿನ ‘ಟೇಮಿಂಗ್ ಆಫ್ ದ ಶ್ರೂ’ ನಾಟಕದ ರೂಪಾಂತರ), ಬಿ. ಸುಬ್ಬರಾವ್ ಎಂಬವರು ಮಾಡಿದ ಶೇಕ್ಸ್ಪಿಯರಿನ ‘ಟೆಂಪೆಸ್ಟ್’ ನಾಟಕದ ರೂಪಾಂತರ ‘ಚಂಡಮಾರುತ’ – ೧೮೯೩, ಅಣ್ಣಾಜಿರಾವ್ ಮಲ್ಲೇಶ್ವರ ಗದ್ಯಾನುವಾದ ಮಾಡಿದ ‘ಕುಸುಮಾಕರ’ (ಶೇಕ್ಸ್ಪಿಯರ್ ನಾಟಕ ‘ದ ಟೂ ಜಂಟ್ಲ್ಮನ್ ಆಫ್ ವೆರೋನಾ’)- ೧೯೦೫, ಕೆ.ಎಂ. ಕರಿಬಸವಯ್ಯ ಅವರ ‘ನಗದವರನ್ನು ನಗಿಸುವ ಕಥೆ’ (ಶೇಕ್ಸ್ಪಿಯರಿನ ‘ಕಾಮೆಡಿ ಆಫ್ ಎರರ್ಸ್’) – ೧೯೧೩ ಇವು ಇನ್ನು ಕೆಲವು ಉದಾಹರಣೆಗಳು.
ಆ) ಇಂಗ್ಲಿಷಿನ ಕೆಲವು ರಮ್ಯ, ಸಾಹಸಪ್ರಧಾನ ಮತ್ತು ನವೋದಯ ಕಾದಂಬರಿಗಳನ್ನು ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶಕದಲ್ಲಿ ಕನ್ನಡ ಲೇಖಕರು ರೂಪಾಂತರಿಸಿದ್ದಾರೆ. ಅವುಗಳಲ್ಲಿ ಕೆಲವು:
೧೮೪೭ರಲ್ಲಿ ರೆ| ಮ್ಯೋಗ್ಲಿಂಗ್ ಮತ್ತು ರೆ| ವೈಗ್ಲೆಯವರು ಅನುವಾದಿಸಿದ ‘ಯಾತ್ರಿಕನ ಸಂಚಾರ’ (ಇಂಗ್ಲಿಷ್ ಮೂಲ – ಜಾನ್ ಬನ್ಯನ್ನ ‘ಪಿಲ್ಗಿçಮ್ಸ್ ಪ್ರೋಗ್ರೆಸ್’).
೧೮೫೪ರಲ್ಲಿ ಕೃಷ್ಣಸ್ವಾಮಯ್ಯಂಗಾರ್ ಅವರು ನಿರೂಪಿಸಿದ ‘ರಾಬಿನ್ಸನ್ ಕ್ರೂಸೋ ವೃತ್ತಾಂತಗಳು’. (ಇಂಗ್ಲಿಷ್ ಮೂಲ – ಡೇನಿಯಲ್ ಡೆಫೋ).
೧೮೬೩ರಲ್ಲಿ ವೆಂಕಟರಂಗೋ ಕಟ್ಟಿಯವರು ರೂಪಾಂತರಿಸಿದ ‘ಸುರಸ ಕಥೆಗಳ ಸಂಗ್ರಹ’ (ಎರಡು ಭಾಗಗಳಲ್ಲಿ ಅರೇಬಿಯನ್ ನೈಟ್ಸ್ ಕಥೆಗಳ ಮರುನಿರೂಪಣೆ).
೧೮೭೩ರಲ್ಲಿ ‘ಗಳ್ಳೀವರ ಎಂಬವನು ಲಿಲ್ಲಿಪಟ್ ದೇಶಕ್ಕೆ ಹೋದ ಕಥೆ’ – ಮುಂಬಯಿ ಗೌರ್ನಮೆಂಟ್ ಸೆಂಟ್ರಲ್ ಬುಕ್ ಡಿಪೋ’ ಪ್ರಕಟಣೆ. ಅನುವಾದಕರ ಹೆಸರು ಉಲ್ಲೇಖಿತವಾಗಿಲ್ಲ. ಬಹುಶಃ ಮಿಷನರಿಗಳು ಪಠ್ಯ ಪುಸ್ತಕವಾಗಿ ಬಳಸಲು ಅನುವಾದ ಮಾಡಿ / ಮಾಡಿಸಿ ಮುದ್ರಿಸಿದ ಪುಸ್ತಕ.
೧೯೦೦: ‘ಗಲಿವರನ ಲೋಕಸಂಚಾರ’. ಇಂಗ್ಲಿಷ್ ಮೂಲ: ಜೊನಾಥನ್ ಸ್ವಿಫ್ಟ್. ಕನ್ನಡದಲ್ಲಿ ಮಕ್ಕಳಿಗಾಗಿ ಮರುನಿರೂಪಣೆ: ಎಸ್.ಜಿ. ನರಸಿಂಹಾಚಾರ್ಯ.
ಸಾಹಸಿಕೆ. ಮೂಲ: ಸರ್ ಆರ್ಥರ್ ಕಾನನ್ ಡಾಯ್ಲ್. ರೂಪಾಂತರ: ಶ್ರೀನಿವಾಸರಾವ್ ಮತ್ತು ಹನುಮಾನ್, ೧೯೧೧.
ಎಸ್.ಜಿ. ಗೋವಿಂದರಾಜ ಅಯ್ಯಂಗಾರ್ ಅವರ ‘ಪ್ರಿಂರೋಜ ವಿಜಯಂ’. ಮೂಲ: ಗೋಲ್ಡ್ಸ್ಮಿತ್ನ ಕಾದಂಬರಿ ‘ದ ವಿಕಾರ್ ಆಫ್ ವೇಕ್ಫೀಲ್ಡ್’, ೧೯೧೩.
ಈ ಕಾಲದ ಭಾಷಾಂತರಗಳ ವೈಶಿಷ್ಟ÷್ಯ ಏನೆಂದರೆ ಭಾಷಾಂತರಕಾರರಿಗೆ ಕನ್ನಡ ಓದುಗರಿಗೆ ಪಾಶ್ಚಾತ್ಯರ ಕೆಲವು ಸನ್ನಿವೇಶಗಳನ್ನು, ಕೆಲವು ರೀತಿನೀತಿಗಳನ್ನು ಅನುವಾದಿಸಿ ಕೊಡಲು ಎದುರಾಗುತ್ತಿದ್ದ ಸಾಂಸ್ಕöÈತಿಕ ಸಮಸ್ಯೆಗಳು. ೧೯೧೫ರಲ್ಲಿ ಶ್ರೀನಿವಾಸಾಚಾರ್ಯ ಎಂಬವರು ಫ್ರೆಂಚ್ ಲೇಖಕ ಅಲೆಗ್ಸಾಂಡರ್ ಡ್ಯೂಮಾನ ‘ದ ಕೌಂಟ್ ಆಫ್ ಮಾಂಟೆಕ್ರಿಸ್ಟೋ’ ಎಂಬ ಕಾದಂಬರಿಯನ್ನು ‘ರಾಜಾ ಮಲಯಸಿಂಹ’ ಎಂದು ರೂಪಾಂತರಿಸಿದರು. ಈ ಕಾದಂಬರಿಯ ಓದನ್ನು ಸುಲಭವಾಗಿಸಲು ಪ್ರಾನ್ಸ್ ದೇಶದ ಚರಿತ್ರೆಯನ್ನು ಸಂಕ್ಷಿಪ್ತವಾಗಿ ನೀಡಿದರು. ಅವರು ಮಾಡಿದ ಬದಲಾವಣೆಗಳ ಬಗ್ಗೆ ಅವರೇ ವಿವರಿಸಿರುವುದು ಹೀಗೆ: “ಮೂಲಗ್ರಂಥದಲ್ಲಿ ಸಹಜವಾಗಿ ಫ್ರೆಂಚ್ರ ಆಚಾರ ವ್ಯವಹಾರಗಳೂ, ಯುರೋಪ್ ಖಂಡದ ಹಲವು ಕಡೆಗಳ ವರ್ಣನೆಗಳೂ ವಿಶೇಷವಾಗಿ ತುಂಬಿಹೋಗಿವೆ. ನಮ್ಮ ದೇಶಬಾಂಧವರಿಗೆ ಅವುಗಳೆಲ್ಲಾ ಪ್ರಾಯಶಃ ಹಿಡಿಸಲಾರವೆಂದು ಭಾವಿಸಿ, ಕಥಾಸ್ವಾರಸ್ಯಕ್ಕೆ ಸ್ವಲ್ಪವೂ ಲೋಪಬಾರದಂತೆ ನಮ್ಮ ದೇಶೀಯ ನಡವಳಿಕೆಗೆ ಸ್ಥಳಗಳನ್ನೂ ಪಾತ್ರಗಳನ್ನೂ ಯೋಜಿಸಿಕೊಂಡು, ‘ರಾಜಾ ಮಲಯಸಿಂಹ’ ಎಂಬ ಹೆಸರನ್ನಿಟ್ಟು ಈ ಗ್ರಂಥವನ್ನು ರಚಿಸಿದ್ದೇನೆ.” ಅನುವಾದಕರು ಕೊನೆಯಲ್ಲಿ ಒಂದು ಉಪಸಂಹಾರವನ್ನು ಸೇರಿಸಿ ದುರಂತವನ್ನು ಬದಲಾಯಿಸಿ, ಮಂಗಳಾಂತವನ್ನಾಗಿಸಿದ್ದಾರೆ.
* * *
ಮಂಗಳೂರಿನ ಬೆನೆಗಲ್ ರಾಮರಾಯರು ತೆಲುಗಿನ ಸುಪ್ರಸಿದ್ಧ ಲೇಖಕರಾದ ವೀರೇಶಲಿಂಗ ಪಂತುಲು ಅವರ ‘ಸತ್ಯವತೀ ಚರಿತ್ರೆ’ (೧೮೯೭), ‘ರಾಜಶೇಖರ ಚರಿತ್ರೆ’ (೧೮೯೮) ಮತ್ತು ‘ಸತ್ಯರಾಜಾ ಪೂರ್ವದೇಶಯಾತ್ರೆ’ (೧೮೯೯) ಎಂಬ ರಮ್ಯ ಕಾದಂಬರಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ಮದ್ರಾಸಿನಲ್ಲಿ ಹೈಕೋರ್ಟ್ ವಕೀಲರಾಗಿದ್ದ ರೆಂಟಾಲ ವೆಂಕಟಸುಬ್ಬರಾಯ ಎಂಬವರು ೧೮೯೫ರಲ್ಲಿಯೇ ‘ಕೇಸರಿ ವಿಲಾಸ’ ಎಂಬ ಸ್ವತಂತ್ರ ಕಾದಂಬರಿಯನ್ನು ಕನ್ನಡದಲ್ಲಿ ಬರೆದರು. ಅದೇ ಹೆಸರಿನಿಂದ ಅದು ತೆಲುಗಿನಲ್ಲಿಯೂ ಅದೇ ವರ್ಷ ಪ್ರಕಟವಾಯಿತು.
ನಗೆಗಡಲು (ತಮಿಳು ಮೂಲ: ಕಾನ್ಸ್ಟಂಟನ್ ಜೋಸೆಫ್ ಬೆಸ್ಕಿಯ ಪರಮಾರ್ಥ ಗುರುವಿನ ಕಥೆಗಳು). ರೂಪಾಂತರ – ಆರ್. ನರಸಿಂಹಾಚಾರ್ಯ. ‘ನಗೆಗಡಲು’ ಕೃತಿ ಕನ್ನಡದಲ್ಲಿ ಅಪಾರ ಜನಪ್ರಿಯತೆ ಪಡೆಯಿತು. ನಾ. ಕಸ್ತೂರಿ, ರಾ.ಶಿ. ಮತ್ತು ದಾಶರಥಿ ದೀಕ್ಷಿತರು ಗಾಂಪರೊಡೆಯರ ಕತೆಗಳನ್ನು ಮುಂದುವರಿಸಿದರು. ಅಂದರೆ ಆಧುನಿಕ ಸನ್ನಿವೇಶಗಳನ್ನು ಗ್ರಹಿಸಲು, ವಿಡಂಬಿಸಲು ಗಾಂಪರೊಡೆಯರು ಮತ್ತು ಶಿಷ್ಯರ ಪಾತ್ರಗಳನ್ನು ಬಳಸಿಕೊಂಡರು. ದಾಶರಥಿ ದೀಕ್ಷಿತರು ತಮ್ಮ ವಿದೇಶ ಯಾತ್ರೆಯ ಅನುಭವಗಳಿಗೆ ಕಲ್ಪನೆಯ ಬಣ್ಣ ಹಚ್ಚಿ ತಮ್ಮ ವಿದೇಶ ಪ್ರಯಾಣ – ವಾಸಗಳ ಅನುಭವವನ್ನು ಗಾಂಪರೊಡೆಯರ ವಿದೇಶಪ್ರಯಾಣದ ಕತೆಯನ್ನಾಗಿಸಿ ಕನ್ನಡಿಗರಿಗೆ ನೀಡಿದರು. ಮೊದಲು ‘ಕೊರವಂಜಿ’ಯಲ್ಲಿ ಧಾರಾವಾಹಿಯಾಗಿ, ಅನಂತರ ‘ಗಾಂಪರ ಗುಂಪು’ ಮತ್ತು ‘ಮರಳಿ ಮಠಕ್ಕೆ’ ಎಂಬ ಎರಡು ಪ್ರಸಿದ್ಧ ಹಾಸ್ಯಕೃತಿಗಳಾಗಿ ಅವು ಪ್ರಕಟಗೊಂಡಿವೆ. ದಾಶರಥಿ ದೀಕ್ಷಿತರ ಕೃತಿಗಳನ್ನು ‘ಪ್ರೇರಣೆ’ ಎಂದು ಕರೆಯಬಹುದು.
೫) ಗಳಗನಾಥರ ಅನುವಾದಗಳು
‘ಗಳಗನಾಥ’ (ಗಳಗನಾಥ ಎನ್ನುವುದು ಅವರ ಮೂಲ ಊರಿನ ಹೆಸರು, ಎಕ್ಕುಂಡಿ ಇದ್ದ ಹಾಗೆ) ಕಾವ್ಯನಾಮದ ವೆಂಕಟೇಶ ತಿರಕೊ ಕುಲಕರ್ಣಿಯವರು (೧೮೬೯-೧೯೪೨) ಕನ್ನಡದ ನವೋದಯಕಾಲದ ಪ್ರಾರಂಭದ ನಾಲ್ಕು ದಶಕಗಳಲ್ಲಿ ತಮ್ಮ ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಸಾಹಿತ್ಯಿಕ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರು. ಅವರ ಜೀವನ ಪರಿಚಯ ಟಿಪ್ಪಣಿ – ೭ ರಲ್ಲಿದೆ.
ಕೆಲವು ಬರಹಗಳಲ್ಲಿ ಗಳಗನಾಥರನ್ನು ಕೂಡ (ಬಿ. ವೆಂಕಟಾಚಾರ್ಯರನ್ನೂ ಹಾಗೆ ಕರೆಯುತ್ತಾರೆ) ‘ಕನ್ನಡ ಕಾದಂಬರಿಗಳ ಪಿತಾಮಹ’ ಎಂದು ಕರೆಯಲಾಗುತ್ತದೆ. ನಾವು ಗಳಗನಾಥರನ್ನು ‘ಕರ್ನಾಟಕ ಕಾದಂಬರಿ ಸಾಮ್ರಾಟ’ ಎಂದು ಗುರುತಿಸಬಹುದು. ಗಳಗನಾಥರು ೧೮೯೮ ರಿಂದ ೧೯೩೮ ರವರೆಗೆ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅವರ ಮೊದಲ ಸಾಹಿತ್ಯಿಕ ಕೃತಿ, ‘ಪದ್ಮನಯನಾ’ ೧೮೯೮ರಲ್ಲಿ ಪ್ರಕಟವಾಯಿತು; ಅವರ ಕೊನೆಯ ಕೃತಿ ‘ದುರ್ಗದ ಬಿಚ್ಚುಗತ್ತಿ’ ೧೯೩೮ರಲ್ಲಿ ಪ್ರಕಟವಾಯಿತು. ಅವರು ಸ್ವತಂತ್ರ ಕಾದಂಬರಿಗಳನ್ನೂ, ಮರಾಠಿ ಕಾದಂಬರಿಗಳ ರೂಪಾಂತರಗಳನ್ನೂ ಕನ್ನಡಕ್ಕೆ ಕೊಟ್ಟಿದ್ದಾರೆ. ಬಂಗಾಳಿ ಸಾಹಿತ್ಯಕ್ಕೆ ಬಂಕಿಮಚಂದ್ರ, ಮರಾಠಿ ಸಾಹಿತ್ಯಕ್ಕೆ ಹರಿ ನಾರಾಯಣ ಆಪ್ಟೆಯವರಿದ್ದಂತೆ ಕನ್ನಡ ಸಾಹಿತ್ಯಕ್ಕೆ ಗಳಗನಾಥರ ಕೊಡುಗೆ ಯುಗಪ್ರವರ್ತಕವಾದದ್ದು. ಅವರು ಮರಾಠಿಯಿಂದ ಹರಿ ನಾರಾಯಣ ಆಪ್ಟೆಯವರ ಗ್ರಂಥಗಳನ್ನು ಹೆಚ್ಚಾಗಿ ಅನುವಾದಿಸಿ ಕೊಟ್ಟರು.
ಗಳಗನಾಥರು ಒಟ್ಟು ೨೪ ಕಾದಂಬರಿಗಳನ್ನು ಬರೆದಿದ್ದಾರೆ, ೨೪ ಕಾದಂಬರಿಗಳಲ್ಲಿ ಆರು ಸ್ವತಂತ್ರ ಕಾದಂಬರಿಗಳು, ೧೮ ಅನುವಾದಿತ ಕಾದಂಬರಿಗಳು. ‘ಕಮಲಕುಮಾರಿ’ ಕೃತಿಯೊಂದೇ ಶಬ್ದಶಃ ಅನುವಾದವಾಗಿದೆ. ಉಳಿದವುಗಳೆಲ್ಲಾ ಗಳಗನಾಥರ ಸ್ವಂತ ಮಾರ್ಪಾಡುಗಳಿಂದ ‘ರೂಪಾಂತರ’ ಅಥವಾ ‘ಮುಕ್ತ ಭಾಷಾಂತರ’ವೆನ್ನುವ ರೀತಿಯಲ್ಲಿವೆ. (“ನಾನು ಕೈ. ವಾ. ಆಪಟೆಯವರ ‘ಕಮಲಕುಮಾರಿ’ ಎಂಬ ಒಂದು ಕಾದಂಬರಿಯ ಹೊರತು ಯಾವ ಕಾದಂಬರಿಯನ್ನೂ ಅಕ್ಷರಶಃ ಭಾಷಾಂತರ ಮಾಡಿರುವದಿಲ್ಲ. ಬೇಕಾದವರ ಕಾದಂಬರಿಯಿರಲಿ, ನಾನು ಹಾಗು ನನ್ನ ಕನ್ನಡಿಗರು, ಎಂಬ ಜೋಡನ್ನು ಮರೆಯದೆ ನಾನು ಕಾದಂಬರಿಯನ್ನು ಬೇಕಾದಲ್ಲಿ ಹಿಗ್ಗಿಸಿರುವೆನು. ಬೇಡಾದಲ್ಲಿ ಕುಗ್ಗಿಸಿರುವೆನು, ಬೇಕಾದಲ್ಲಿ ಹೊಸ ವಿಷಯವನ್ನು ಸೇರಿಸಿರುವೆನು, ಬೇಡಾದಲ್ಲಿ ಇದ್ದ ವಿಷಯವನ್ನು ತೆಗೆದುಹಾಕಿರುವೆನು. ಆ ಕಾದಂಬರಿಯೇ ನನ್ನ ಕೈಗೊಂಬೆಯಲ್ಲದೆ, ನಾನು ಕಾದಂಬರಿಯ ಕೈಗೊಂಬೆಯಾಗಿರುವದಿಲ್ಲ.” – ಗಳಗನಾಥ).
ಗಳಗನಾಥರಿಗೆ ಕಾದಂಬರಿ ಜನರ ಭಾವವನ್ನು ಬೆಳಗಿಸಿ, ಸಮಾಜವನ್ನು ತಿದ್ದಬೇಕು ಎನ್ನುವ ಉದಾತ್ತ ಧ್ಯೇಯವಿತ್ತು. ಅವರು ಸ್ವತಃ ಬರೆದ ಮತ್ತು ಮರಾಠಿಯಿಂದ ಅನುವಾದಿಸಿದ ಚಾರಿತ್ರಿಕ ಕಾದಂಬರಿಗಳು ಕನ್ನಡಿಗರ, ರಜಪೂತರ ಮತ್ತು ಮರಾಠರ ಸಾಹಸ, ದೇಶ ಪ್ರೇಮಗಳನ್ನು ಚಿತ್ರಿಸಿ ಓದುಗರ ಸ್ವಾಭಿಮಾನವನ್ನು ಮತ್ತು ಕೆಚ್ಚನ್ನು ಉದ್ದೀಪಿಸುವಂತಿದ್ದವು. ಬ್ರಿಟಿಷರ ಆಳ್ವಿಕೆಯಲ್ಲಿ ನೇರವಾಗಿ ಅವರ ವಿರುದ್ಧ ಬರೆದರೆ ಪ್ರಕಟಣೆ ಅಸಾಧ್ಯವಾಗಿದ್ದ ಆ ಕಾಲದಲ್ಲಿ ಪರೋಕ್ಷವಾಗಿ, ಮುಸಲ್ಮಾನರ ಆಕ್ರಮಣಗಳ ವಿರುದ್ಧ ಕ್ಷಾತ್ರತೇಜವನ್ನು ಮೆರೆದ ಸಾಹಸಿಗಳ ಕಥೆಗಳನ್ನು ಹೇಳುವ ಮೂಲಕ ರಾಷ್ಟ್ರಭಕ್ತಿಯನ್ನು ಉದ್ದೀಪಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಾಹಿತಿಗಳು ಪ್ರಯತ್ನಿಸಿರುವುದಕ್ಕೆ ಗಳಗನಾಥರದು ಒಂದು ಶ್ರೇಷ್ಠ ಉದಾಹರಣೆ. ಗಳಗನಾಥರು ಸನಾತನಧರ್ಮದ ಪುನರುಜ್ಜೀವನದ ಆಶಯದಿಂದ, ಉದಾತ್ತವಾದ ಭಾವನೆ ಹಾಗೂ ದಿವ್ಯವಾದ ಆದರ್ಶಗಳಿಂದ, ಜನರಲ್ಲಿ ತ್ಯಾಗ, ಸ್ವಾತಂತ್ರ್ಯ, ಸ್ವಾಭಿಮಾನಗಳು ಪ್ರಚೋದಿತವಾಗುವಂತೆ ಸಾಹಿತ್ಯವನ್ನು ರಚಿಸಿದರು. ಅವರು ಸಮಕಾಲೀನ ಚಿತ್ರವನ್ನು ಕೊಡುವ ಸಾಮಾಜಿಕ ಕಾದಂಬರಿಯನ್ನು ರಚಿಸದಿರಲು ಇದೇ ಕಾರಣವೆಂಬ ಅಭಿಪ್ರಾಯವಿದೆ.
ಗಳಗನಾಥರು ತಮ್ಮ ಓದು ಮತ್ತು ಚಿಂತನೆಗಳಿಂದ ರೂಪಿಸಿಕೊಂಡು ತಮ್ಮ ಬರವಣಿಗೆಯಲ್ಲಿ ಬಳಸಿದ ಕನ್ನಡವನ್ನು ಅವರೇ ‘ಸಂಜೀವನೀಕರಣ’ದ ಮೂಲಕ ರೂಪಗೊಂಡ ಕನ್ನಡವೆಂದು ಕರೆದುಕೊಂಡಿದ್ದಾರೆ. ಸಂಸ್ಕೃತ ಶಬ್ದಗಳನ್ನು ಹಿತಮಿತವಾಗಿ ಸ್ವೀಕರಿಸಿ, ಆಡುಮಾತಿನ ಸ್ವಾರಸ್ಯಗಳನ್ನು ಮತ್ತು ಗಾದೆಮಾತುಗಳನ್ನು ಬಳಸಿಕೊಂಡು, ನಾಡಿನ ಉತ್ತರ, ಮಧ್ಯ, ದಕ್ಷಿಣ ಪ್ರಾಂತಗಳ ಕನ್ನಡಗಳಿಗೆ ಸಮಾನ ಬೆಲೆ ಕೊಟ್ಟು ಎಲ್ಲರಿಗೂ ಅರ್ಥವಾಗಬಲ್ಲ ಕನ್ನಡ ಗದ್ಯಶೈಲಿಯೊಂದನ್ನು ಅವರು ಸೃಷ್ಟಿಸಿಕೊಂಡರು. ತಮ್ಮ ಕಾದಂಬರಿಗಳ ಜನಪ್ರಿಯತೆಗೆ ಅದೂ ಒಂದು ಕಾರಣವೆಂದು ಅವರೇ ವಿಶ್ಲೇಷಿಸಿಕೊಂಡಿದ್ದಾರೆ. ಮಿಷನರಿಗಳ ಹಾಗೆ ಎಲ್ಲರಿಗೂ ಹಿತವಾಗುವ ಕನ್ನಡ ಗದ್ಯದ ನುಡಿಗಟ್ಟನ್ನು ನಿರ್ಮಿಸಲು ಪ್ರಜ್ಞಾಪೂರ್ವಕವಾಗಿ ದುಡಿಮೆ ಮಾಡಿದ ಗಳಗನಾಥರು ಅದಕ್ಕಾಗಿಯೂ ಅಭಿನಂದನಾರ್ಹರು.
“ಒಂದು ಸಂಸ್ಕೃತಿಯ ಸಾಹಿತ್ಯ ಇನ್ನೊಂದು ಸಂಸ್ಕೃತಿಯಲ್ಲಿ ಮೊದಲು ಪ್ರವೇಶಿಸುವುದು ಭಾಷಾಂತರದ ಮೂಲಕ. ಆಮೇಲೆ ಅದು ಭಾವಾಂತರ, ಸ್ವತಂತ್ರ ಸಾಹಿತ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಅನುಗುಣವಾಗಿ ಆರಂಭದ ಕನ್ನಡ ಭಾವಗೀತೆ ಮತ್ತು ನಾಟಕಗಳು ಅನುವಾದದ ದಾರಿ ಹಿಡಿದೇ ಕನ್ನಡದೊಳಗೆ ಬಂದವು. ಅಂದರೆ ಇಂಗ್ಲಿಷ್ನಿಂದ ಕಾವ್ಯಸಾಹಿತ್ಯವನ್ನು, ಇಂಗ್ಲಿಷ್ ಮತ್ತು ಸಂಸ್ಕೃತಗಳಿಂದ ನಾಟಕಸಾಹಿತ್ಯವನ್ನು ಕನ್ನಡಿಗರು ಅನುವಾದಗೊಳಿಸಿಕೊಂಡರು. ಈ ಸಂದರ್ಭದ ಕಾದಂಬರಿ ಮಾತ್ರ ಇಂಗ್ಲಿಷ್ ಅನುವಾದ ದಾರಿಯನ್ನು ಬಿಟ್ಟು, ಮರಾಠಿ, ಬೆಂಗಾಲಿ ಕಾದಂಬರಿಗಳ ಅನುವಾದದ ದಾರಿ ಹಿಡಿಯಿತು; ಐತಿಹಾಸಿಕ ಮತ್ತು ಸಾಮಾಜಿಕವೆಂಬ ಎರಡು ಮುಖ್ಯ ಕವಲುಗಳಲ್ಲಿ ಬಿಚ್ಚಿಕೊಂಡಿತು. ಇವುಗಳಲ್ಲಿ ಐತಿಹಾಸಿಕ ಕಾದಂಬರಿ ಲೋಕವನ್ನು ಸರಿಯಾಗಿ ರೂಪಿಸಿ, ಅದನ್ನು ಗುಣಾತ್ಮಕವಾಗಿ ಮತ್ತು ಗಾತ್ರಾತ್ಮಕವಾಗಿ ಬೆಳೆಸಿದವರು, ಗಳಗನಾಥರು” ಎಂದು ಡಾ. ಎಂ.ಎಂ. ಕಲಬುರ್ಗಿಯವರು ಗಳಗನಾಥ ಸಂಪುಟಗಳ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.
ಸಣ್ಣಕತೆಗಳು: ಮಂಗಳೂರಿನ ಪತ್ರಿಕೆಗಳಲ್ಲಿ ಮಿಷನರಿಗಳು ಹಿಂದೂ ಧರ್ಮದ ಲೋಪಗಳನ್ನು ತೋರಿಸಲು ‘ಸಂವಾದ’ ಎಂಬ ಸಾಹಿತ್ಯ ಪ್ರಕಾರವನ್ನು ಬಳಸಿದರು. ಸುಮಾರು ೧೦೦೦ -೨೦೦೦ ಪದಗಳ ಒಳಗೆ, ಸಣ್ಣಕತೆಯ ಗಾತ್ರದಲ್ಲಿ ಇಬ್ಬರು (ಅಥವಾ ಮೂವರು) ವ್ಯಕ್ತಿಗಳ ನಡುವಿನ ಸಂಭಾಷಣೆಯ ರೂಪದಲ್ಲಿ ಯಾವುದಾದರೊಂದು ವಿಷಯವನ್ನು ಚರ್ಚಿಸುವುದು ಈ ಪ್ರಕಾರದ ವೈಶಿಷ್ಟ÷್ಯ. ಇದನ್ನು ಮಿಷನರಿಗಳು ಜರ್ಮನ್ ಸಾಹಿತ್ಯದಿಂದ ‘ಭಾಷಾಂತರಿಸಿ’ (ಪ್ರಕಾರ ಭಾಷಾಂತರ) ಕನ್ನಡಕ್ಕೆ ತಂದರು. ಹಿಂದೂ ಧರ್ಮವನ್ನು ಮಿಷನರಿಗಳ ‘ಸಂವಾದ’ಗಳ ಪಾತ್ರಗಳು ಟೀಕಿಸಿದಾಗ, ಹಿಂದೂಗಳ ‘ಸುದರ್ಶನ’ ಪತ್ರಿಕೆಯಲ್ಲಿ ಅದೇ ರೀತಿಯ ಸಂವಾದಗಳಲ್ಲಿ ಉತ್ತರ ನೀಡಲಾಗುತ್ತಿತ್ತು. ಉದಾಹರಣೆಗೆ ‘ಮಂಗೂ ನಾಗೂ ಸಂಭಾಷಣವು’ (೧೮೯೬) ‘ಸುದರ್ಶನ’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸಂವಾದ ಮಿಷನರಿಗಳ ಟೀಕೆಗೆ ಉತ್ತರಿಸಿದ್ದಾಗಿದೆ. ನಂತರ ಮಿಷನರಿಗಳು ಈ ಬಗೆಯ ಟೀಕೆಗಳನ್ನು ನಿಲ್ಲಿಸಿದರು.
ನಂತರ ಈ ಬಗೆಯ ಸಂವಾದವನ್ನು ಕೆ. ಹೊನ್ನಯ್ಯ ಶೆಟ್ಟಿಯವರು ಉಡುಪಿಯಲ್ಲಿ ಮತ್ತು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚಿತ್ತಾಯರು ಮಂಗಳೂರಿನಲ್ಲಿ ವಿಶಿಷ್ಟ ಉದ್ದೇಶಗಳಿಗಾಗಿ ಪ್ರಯೋಗಿಸತೊಡಗಿದ್ದರು. ಪುಣಿಂಚಿತ್ತಾಯರ ‘ಚೌಕಾರು ಮೇರಿ ಸಂವಾದ’ ಅಸ್ಪöÈಶ್ಯತೆಯ ವಿರುದ್ಧವಾಗಿರುವ ಸಂವಾದ. ಇಂತಹ ಸಂವಾದಗಳ ಓದುವಿಕೆ ಮತ್ತು ಪರಿಣಾಮ ಸಣ್ಣಕತೆಗಳ ಓದುವಿಕೆ ಮತ್ತು ಪರಿಣಾಮವನ್ನೇ ಹೋಲುತ್ತವೆ.
೧೮೪೩ರಲ್ಲಿ ಪ್ರಾರಂಭವಾದ ‘ಕ್ರೈಸ್ತ ಸಭಾಪತ್ರ’, ‘ಸುದರ್ಶನ’ (೧೮೮೬) ಮತ್ತು ‘ಸತ್ಯದೀಪಿಕೆ’ (೧೮೯೬) ಪತ್ರಿಕೆಗಳಲ್ಲಿ ಅನುವಾದಿತ ಭೋಧನಾತ್ಮಕ ಕಥೆಗಳು ಪ್ರಕಟವಾಗುತ್ತಿದ್ದವು. ಇವುಗಳು ಸಾಮಾನ್ಯವಾಗಿ ಹಿಂದೂ ಧರ್ಮದ ನ್ಯೂನತೆಗಳನ್ನು ತೋರಿಸಲು ಮಿಶನರಿಗಳು ಕಲ್ಪಿಸಿದ ಪ್ರಸಂಗಗಳಾಗಿರುತ್ತಿದ್ದವು.
೧೮೯೬ರಲ್ಲಿ ಡಬ್ಲ್ಯೂ. ಎಂಬವರು ‘ಕಠಿಣ ತಾಪತ್ರಯದಲ್ಲಿ ಅದ್ಭುತ ಸಹಾಯ ಒದಗಿದ್ದು’ ಎನ್ನುವ ಸಣ್ಣಕತೆಯನ್ನು ಮಿಷನರಿಗಳು ಹೊರಡಿಸುತ್ತಿದ್ದ ‘ಸತ್ಯದೀಪಿಕೆ’ ಪತ್ರಿಕೆಯಲ್ಲಿ (೧೮೯೬ ಸತ್ಯದೀಪಿಕೆ, ಸಂಪುಟ ೧, ಸಂಚಿಕೆ ೧ ಮತ್ತು ೨) ಪ್ರಕಟಿಸಿದ್ದರು. ಇದು ಮೂಲ ಕನ್ನಡದ್ದೇ ಕತೆಯೋ, ಅನುವಾದವೋ ತಿಳಿಯದು. ಕಠಿಣ ತಾಪತ್ರಯದಲ್ಲಿ ಒದಗಿದ ಸಹಾಯ ಅಂದರೆ ಇಲ್ಲಿ ಕ್ರಿಸ್ತನ ಅನುಗ್ರಹವಾಗಿದೆ. ಪವಾಡಗಳನ್ನುಳ್ಳ ಕತೆಗಳನ್ನು ಆಧುನಿಕ ಸಣ್ಣಕತೆಗಳೆಂದು ಪರಿಗಣಿಸಲಾಗದು ಎನ್ನುವ ಕಾರಣಕ್ಕೆ ಇದನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪರಿಗಣಿಸಲಾಗಿಲ್ಲ ಅನಿಸುತ್ತದೆ.
ನೇರವಾಗಿ ಅನುವಾದಗಳನ್ನೇ ನೋಡುವುದಾದರೆ ಸಣ್ಣಕತೆಗಳೂ ಕೂಡ ಬಂಗಾಳಿ ಭಾಷೆಯಿಂದಲೆ ಕನ್ನಡಕ್ಕೆ ಪ್ರವೇಶಿಸಿದವು. ೧೯೨೦ರಲ್ಲಿ ‘ಮುತ್ತಿನ ಸರ’ ಎಂಬ ಬಂಗಾಳಿ ಕತೆಗಳ ಅನುವಾದ ಸಂಕಲನವು ಪ್ರಕಟವಾಯಿತು. ಅದರಲ್ಲಿನ ಕತೆಗಳು ಮೊದಲೇ ‘ಶ್ರೀಕೃಷ್ಣ ಸೂಕ್ತಿ’ ಮತ್ತು ‘ಕಂಠೀರವ’ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಬಂಗಾಳದ ಪ್ರಿಯನಾಥ ಮುಖೋಪಾಧ್ಯಾಯ, ಬಿಂಕುಬಿಹಾರಿಧರ ಮುಂತಾದವರ ಕತೆಗಳು ಇದರಲ್ಲಿವೆ. ಅನುವಾದಕರು ವೆಂಕಟಾದ್ರಿ ಶಾಸ್ತ್ರಿ. ಈ ಪುಸ್ತಕವನ್ನು ಅವರು ‘ಕಾದಂಬರಿ ಮಾಲೆ’ ಎಂದು ಕರೆದಿದ್ದಾರೆ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮೊದಲನೆಯ ಕಥಾಸಂಕಲನವೂ ೧೯೨೦ರಲ್ಲಿಯೇ ಪ್ರಕಟವಾಯಿತು. ಮಾಸ್ತಿಯವರು ಮತ್ತು ಪಂಜೆ ಮಂಗೇಶರಾಯರಿಬ್ಬರೂ ಇಂಗ್ಲಿಷಿನ ‘ಸ್ಟ್ರಾಂಡ್’ ಪತ್ರಿಕೆಯಲ್ಲಿ ಬರುತ್ತಿದ್ದ ಕತೆಗಳನ್ನು ಓದಿ ಪ್ರೇರಣೆ ಪಡೆದವರು. ಆದರೆ ಅವುಗಳನ್ನು ಅನುವಾದಗಳೆನ್ನುವಂತಿಲ್ಲ. ಗೋವಿಂದ ಪೈಗಳು ಪಂಜೆಯವರ ಕತೆಗಳ ಬಗ್ಗೆ ಹೇಳಿರುವ ಈ ಮಾತುಗಳು ಸಮೀಚೀನವಾಗಿವೆ: “ಸುವಾಸಿನಿಯಲ್ಲಿ ಸಣ್ಣಕತೆಗಳನ್ನು ಮೊದಲು ಮಾಡಿದವರು ಶ್ರೀ ಪಂಜೆ ಮಂಗೇಶರಾಯರು. ಅವರಿಗೂ ಅವರ ಜತೆಯ ಕತೆಗಾರರಾದ ಶ್ರೀಮಾನ್ ಉಳ್ಳಾಲ ಮಂಗೇಶರಾಯರಿಗೂ ಆವಂದಿನ Strand Magazine ಇತ್ಯಾದಿ ಆಂಗ್ಲ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಆ ಕೆಲವು ಸಣ್ಣಕತೆಗಳೇ ಹೊರತು ಬೇರೆ ಗೊತ್ತಿರಲಿಲ್ಲ…… ಪಂಜೆಯವರು ತಾವು ಓದಿದ ಕತೆಗಳನ್ನು ಕನ್ನಡಿಸದೆ ಆ ಕಥಾಕಲೆಯನ್ನು ಕನ್ನಡಿಸಿದ ಕಾರಣ, ಕನ್ನಡ ಸಾಹಿತ್ಯದಲ್ಲಿ ಬರುವಂದೇ ಸಣ್ಣಕತೆ ಕನ್ನಡಿಗನಾಗಿ ಬಂತು. ಕನ್ನಡಿಗನಾಗಿಯೇ ನಿಂದಿತು.”
ಕಥಾಕಲೆಯನ್ನು ಕನ್ನಡಿಸುವುದು ಅಂದರೆ ಪ್ರಕಾರ ಭಾಷಾಂತರ ಎನ್ನುವ ಬಗೆಯಲ್ಲಿ ಒಂದು ಭಾಷೆಯ ಪ್ರೇರಣೆಯಿಂದ ಇನ್ನೊಂದು ಭಾಷೆಯಲ್ಲಿ ಸ್ವತಂತ್ರವಾದ ಕೃತಿಗಳು ರೂಪುಗೊಳ್ಳುವ ಪ್ರಕ್ರಿಯೆಯಾಗಿದೆ.
ಎಂ.ಎನ್. ಕಾಮತ್ ಅವರು ೧೯೧೦-೧೯೨೦ರ ನಡುವೆ ‘ಏಕಾದಶಿಯ ಪ್ರೇತ’ ಮತ್ತು ‘ಕುದುರೆಮುಖ’ ಎಂಬ ಕತೆಗಳನ್ನು ಬರೆದಿದ್ದರು. ಅವುಗಳು ನಿಜವಾಗಿ (ಕ್ರಮವಾಗಿ) ಗೋಲ್ಡ್ ಸ್ಮಿತ್ ಮತ್ತು ಓ. ಹೆನ್ರಿ ಇವರ ರಚನೆಗಳ ರೂಪಾಂತರಗಳಾಗಿವೆ. ಕಾಮತರಿಗೆ ಮೂಲವಾಗಿದ್ದುದು ಬಂಗಾಳಿ ಭಾಷೆಯಲ್ಲಿ ರೂಪಾಂತರಗೊಂಡಿದ್ದ ಕತೆಗಳೋ, ನೇರವಾಗಿ ಇಂಗ್ಲಿಷ್ ಮೂಲಗಳಿಂದಲೇ ಪಡೆದಿದ್ದರೋ ತಿಳಿಯದು. ಕಾಮತರು ಕೋಲ್ಕತದಲ್ಲಿದ್ದರು; ಅವರಿಗೆ ಬಂಗಾಳಿ ಭಾಷೆ ಬರುತ್ತಿತ್ತು. ಅವರು ಠಾಕೂರರ ‘ಎಲ್ಲಿ ಮನಕಳುಕಿರದೊ’ ಹಾಡನ್ನು ಮೂಲ ಬಂಗಾಳಿಯಿಂದಲೇ, ಅದೇ ಮಟ್ಟಿನಲ್ಲಿ ಅನುವಾದಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಪಡುಕೋಣೆ ರಮಾನಂದ ರಾಯರ ಕತೆಗಳ ಮತ್ತು ಹಾಸ್ಯಪ್ರಸಂಗಗಳ ಸಂಕಲನ ‘ಹುಚ್ಚು ಬೆಳದಿಂಗಳಿನ ಹೂಬಾಣಗಳು’ ಎಂಬ ಕೃತಿಯಲ್ಲಿಯೂ ಮೂಲ ಉಲ್ಲೇಖಿಸದ ಇಂಗ್ಲಿಷ್ ಸಣ್ಣಕತೆಗಳ ರೂಪಾಂತರಗಳಿವೆ. ಪಿ.ಜಿ. ವುಡ್ಹೌಸ್ ಸೃಷ್ಟಿಸಿದ ‘ಜೀವ್ಸ್’ ಎಂಬ ಗಂಡು ಪಾತ್ರವನ್ನು ಹೋಲುವ ‘ಮೀರೆ’ ಎಂಬ ಹೆಣ್ಣು ಪಾತ್ರವನ್ನು ಕುಡ್ಪಿ ವಾಸುದೇವ ಶೆಣೈಯವರೂ, ‘ಸೀತಾರತ್ನ’ ಎಂಬ ಹೆಣ್ಣುಪಾತ್ರವನ್ನು (ಬಹುಶಃ ಕುಡ್ಪಿಯವರನ್ನು ಅನುಸರಿಸಿ) ರಮಾನಂದ ಘಾಟೆಯವರೂ ಸೃಷ್ಟಿಸಿದರು. ಇದು ಭಾಷಾಂತರದ ಒಂದು ವಿಧವಾದ ‘ಪ್ರೇರಣೆ’ ಎನ್ನುವ ಬಗೆಯ ರಚನೆಗಳಾಗಿವೆ.
ಭಾಗ: ಮೂರು
ಎರಡನೆಯ ಮತ್ತು ಮೂರನೆಯ ಘಟ್ಟಗಳು
ಈಗಾಗಲೇ ನೋಡಿದಂತೆ, ಕಾದಂಬರಿ ಅನುವಾದಗಳ ಎರಡನೆಯ ಘಟ್ಟ ‘ನಿರ್ಮಾಣಶೀಲ ಯುಗ’ ಮತ್ತು ಮೂರನೆಯ ಘಟ್ಟ ‘ಸ್ವಾತಂತ್ರ್ಯೋತ್ತರ ಯುಗ’.
ನಿರ್ಮಾಣಶೀಲ ಯುಗ – ೧೯೩೦-೧೯೪೭: ನಿರ್ಮಾಣಶೀಲ ಯುಗದಲ್ಲಿ ಕೆಲವು ಲೇಖಕರು ‘ಭಾವಾಂತರ’ ಮಾಡಿದರು ಅಥವಾ ಸ್ಥಳೀಯ ಸಂಸ್ಕೃತಿಯ ಕಥೆಗಳನ್ನು ಪಾಶ್ಚಾತ್ಯ ಕಥನ ಚೌಕಟ್ಟಿಗೆ ಅಳವಡಿಸಿ ಹೇಳಿದರು. ಉದಾಹರಣೆಗೆ, ಕಟ್ಟಿ ಶೇಷಾಚಾರ್ಯರ ‘ಶೂರ್ಪಾಲಿಯ ಆಚಾರ್ಯರು’ (೧೯೪೧) ಎನ್ನುವುದು ಇಂಗ್ಲಿಷ್ ಕಾದಂಬರಿಕಾರ ಆಲಿವರ್ ಗೋಲ್ಡ್ ಸ್ಮಿತ್ನ ‘ದ ವಿಕಾರ್ ಆಫ್ ವೇಕ್ಫೀಲ್ಡ್’ ಅನ್ನುವ ಕಾದಂಬರಿಯಿಂದ ಪ್ರೇರಿತವಾದುದು. ಆದರೆ ಹಾಗೆ ಹೇಳದೆ ಇದ್ದರೆ ಇದು ಕನ್ನಡದ್ದೇ ಕಾದಂಬರಿ ಅನಿಸುವುದು. ಇದರ ಹೆಸರುಗಳೂ, ಸನ್ನಿವೇಶಗಳೂ, ಸಂಸ್ಕೃತಿಯೂ ಕನ್ನಡದ್ದೇ ಆಗಿದೆ. ಹುರುಳಿ ಭೀಮರಾಯರ ‘ಮುರುಕು ದಂಬೂಕು’ (೧೯೪೭) ಮತ್ತು ‘ಹಾಸನ್ ಟೋಪಿ’ (ಪ್ರಕಟಣೆ ಸ್ವಾತಂತ್ರ್ಯೋತ್ತರ) ಇಂತಹ ಇನ್ನೆರಡು ಕೃತಿಗಳು. ಅವುಗಳಿಗೆ ಕ್ರಮವಾಗಿ ವಾಷಿಂಗ್ಟನ್ ಐರ್ವಿಂಗ್ನ ನೀಳ್ಗತೆ ‘ರಿಪ್ ವ್ಯಾನ್ ವಿಂಕಲ್’ ಮತ್ತು ಥಾಮಸ್ ಹ್ಯೂಸ್ ಎಂಬವನ ‘ಟಾಮ್ ಬ್ರೌನ್ಸ್ ಸ್ಕೂಲ್ ಡೇಸ್’ ಎನ್ನುವ ಕಾದಂಬರಿ ಪ್ರೇರಣೆ ನೀಡಿವೆ. ಹುರುಳಿ ಭೀಮರಾಯರು ಮೂಲವನ್ನು ಸ್ಮರಿಸುವ ಅಗತ್ಯವೂ ಇಲ್ಲವೆಂದು ಯೋಚಿಸಿ, ಸ್ವತಂತ್ರ ಕೃತಿಗಳೆಂದೇ ಅವನ್ನು ಪ್ರಕಟಿಸಿದ್ದಾರೆ. ಇಂತಹ ಪ್ರಯತ್ನಗಳನ್ನು ‘ಭಾವಾಂತರ’ ಎನ್ನಬಹುದು.
ಎರಡನೆಯ ಕಾಲಘಟ್ಟದಲ್ಲಿಯೇ ಪಾಶ್ಚಾತ್ಯರ ಕ್ಲಾಸಿಕ್ ಕಾದಂಬರಿಗಳನ್ನು ಮೂಲಕ್ಕೆ ನಿಷ್ಠವಾದ ಭಾಷಾಂತರದ ಮೂಲಕ (ಶೀರ್ಷಿಕೆಯಲ್ಲಾಗಲಿ, ನಾಯಕ ನಾಯಕಿಯರ ಹೆಸರುಗಳಲ್ಲಾಗಲಿ, ಸ್ಥಳಗಳ ಹೆಸರುಗಳಲ್ಲಾಗಲಿ ಬದಲಾವಣೆ ಮಾಡಿಕೊಳ್ಳದೆ) ಕನ್ನಡಕ್ಕೆ ತಂದುಕೊಳ್ಳಲು ಪ್ರಾರಂಭಿಸಿದರು. ಉದಾಹರಣೆಗೆ, ಈ ಕಾಲಘಟ್ಟದಲ್ಲಿ ಸರ್ವಾಂಟಿಸನ ‘ಡಾನ್ ಕ್ವಿಕ್ಸೋಟ್’ ಕಾದಂಬರಿಯ ಹಲವು ಅನುವಾದಗಳು ಕನ್ನಡದಲ್ಲಿ ಸೃಷ್ಟಿಯಾದವು. ಸುಮಾರು ಆರು ಆವೃತ್ತಿಗಳ ಉಲ್ಲೇಖ ಸಿಗುತ್ತದೆ. ಉಗ್ರಾಣ ಮಂಗೇಶರಾವ್ ಇದರ ಸಂಕ್ಷಿಪ್ತ ಆವೃತ್ತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಶಿವರಾಮ ಕಾರಂತರೂ ಒಂದು ಸಂಕ್ಷೇಪಾನುವಾದವನ್ನು ಪ್ರಕಟಿಸಿದ್ದರು. ಸುಮಾರು ೯೦೦ ಪುಟಗಳ ಒಂದು ‘ಸಮಗ್ರ’ ಅನುವಾದ ಕನ್ನಡದಲ್ಲಿ ಪ್ರಕಟವಾಗಿತ್ತೆಂದು ಹೇಳಲಾಗಿದೆ. (೧೯೮೧ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಎಂ. ರಾಮ ರಾವ್ ಅವರ ‘ಡಾನ್ ಕ್ವಿಕ್ಸೋಟ್’ ಕೃತಿಯನ್ನು ಪ್ರಕಟಿಸಿದಾಗ ಮುನ್ನುಡಿಯಲ್ಲಿ ಪ್ರಸಾರಾಂಗದ ನಿರ್ದೇಶಕ ಡಾ. ಕೆ.ಸಿ. ಶಿವಪ್ಪನವರು ಈ ೯೦೦ ಪುಟಗಳ ಅನುವಾದ ಕೃತಿಯ ಕುರಿತು ಹೇಳಿದ್ದಾರೆ).
ಕಾದಂಬರಿ ಅನುವಾದಗಳ ನಿರ್ಮಾಣಶೀಲ ಘಟ್ಟ ಎನ್ನುವುದು ಗಳಗನಾಥೋತ್ತರವಾಗಿ ಕನ್ನಡದಲ್ಲಿ ಅನುವಾದಗೊಂಡ ಸಣ್ಣ ಕತೆಗಳು ಮತ್ತು ಕಾದಂಬರಿಗಳ ಘಟ್ಟವಾಗಿದೆ. ಈ ಎರಡು ಘಟ್ಟಗಳ ನಡುವಿನ ವ್ಯತ್ಯಾಸ ಮೂರು ಬಗೆಯದು.
೧. ಆರಂಭಕಾಲದ ಮುಖ್ಯ ಅನುವಾದಕರಾದ ವೆಂಕಟಾಚಾರ್ಯರಾಗಲಿ, ಗಳಗನಾಥರಾಗಲಿ ಇಂಗ್ಲಿಷಿನಿಂದ ನೇರವಾಗಿ ಅನುವಾದಿಸಲಿಲ್ಲ. ಹಾಗಾಗಿ ಇಂಗ್ಲಿಷಿನ ‘ನಾವೆಲ್’ ಪ್ರಕಾರ ಕನ್ನಡಕ್ಕೆ ಬಂದದ್ದು ಬಂಗಾಳಿಯ ಮೂಲಕ. ಈ ಘಟ್ಟದಲ್ಲಿ ಇಂಗ್ಲಿಷ್ ಕಾದಂಬರಿಗಳ ಅಥವಾ ಇಂಗ್ಲಿಷಿನ ಮೂಲಕ ಐರೋಪ್ಯ ಕತೆ, ಕಾದಂಬರಿಗಳ ಅನುವಾದವೇ ಮುಖ್ಯವಾಯಿತು.
೨. ಗಳಗನಾಥರವರೆಗೆ ನಡೆದ ಬೇರೆ ಅನುವಾದಗಳು (ನೇರವಾಗಿ ಇಂಗ್ಲಿಷಿನಿAದ ಮಾಡಿದ ಅನುವಾದಗಳು) ಕೂಡ ಜಾಗತಿಕ ಸಾಹಿತ್ಯದ ಮಹತ್ತ÷್ವದ ಕಾದಂಬರಿಗಳ ಅನುವಾದವಲ್ಲ.
೩. ಗಳಗನಾಥೋತ್ತರವಾಗಿ ಕಾದಂಬರಿಗಳನ್ನು ಅನುವಾದ ಮಾಡಿದ ಕನ್ನಡದ ಲೇಖಕರು ಇಂಗ್ಲಿಷಿನಲ್ಲಿ ಲಭ್ಯವಾದ ಯುರೋಪಿನ ಶ್ರೇಷ್ಠ ಕೃತಿಗಳು ಅಥವಾ ಅಭಿಜಾತ (ಕ್ಲಾಸಿಕ್) ಕೃತಿಗಳನ್ನು ಅನುವಾದ ಮಾಡಲು ತೊಡಗಿದರು.
೩. ಸ್ವಾತಂತ್ರ್ಯೋತ್ತರ ಕಾಲ: ಮೂರನೆಯ ಘಟ್ಟದಲ್ಲಿ ಬೇರೆ ಬಗೆಯ ಅನುವಾದಗಳು ನಡೆದವು. ಈಗ ವಿಶ್ವ ಸಾಹಿತ್ಯದ ಮಹತ್ತ್ವದ ಕೃತಿಗಳನ್ನು ಅಧ್ಯಯನಾಧಾರಿತ (ಅಕಾಡೆಮಿಕ್ ಶಿಸ್ತಿನ) ತಿಳಿವಳಿಕೆಯ ಮೂಲಕ ಅನುವಾದಿಸುವ ಕಾರ್ಯ ನಡೆಯಿತು. ಅದರಲ್ಲಿಯೂ ನವ್ಯ ಸಾಹಿತ್ಯದ ಆಗಮನದ ನಂತರ ಶಿಸ್ತುಬದ್ಧವಾದ ಸಾಹಿತ್ಯದ ಅಧ್ಯಯನಗಳು ಪ್ರಾರಂಭವಾದವು. ಕನ್ನಡ ನವ್ಯ ಸಾಹಿತಿಗಳಲ್ಲಿ ಹೆಚ್ಚಿನವರು ಆಂಗ್ಲಭಾಷಾ ಪ್ರಾಧ್ಯಾಪಕರಾಗಿದ್ದುದರಿಂದ ಕನ್ನಡಕ್ಕೆ ಅನುವಾದಿಸುವಾಗ ಯೋಗ್ಯವಾದ ಮೂಲಕೃತಿಗಳನ್ನು ಆರಿಸಿಕೊಳ್ಳಬೇಕೆನ್ನುವ ಪ್ರಜ್ಞೆ ಬೆಳೆಯಿತು. ಉದಾಹರಣೆಗೆ ಗೋಪಾಲಕೃಷ್ಣ ಅಡಿಗ (ನವ್ಯದ ನಾಯಕರಾದ ಇವರು ಇಂಗ್ಲಿಷ್ ಪ್ರಾಧ್ಯಾಪಕರು) ಮತ್ತು ಮಾವಿನಕೆರೆ ರಂಗನಾಥನ್ ಇವರಿಬ್ಬರು ಸೇರಿ ಪಾಶ್ಚಾತ್ಯ ಕೃತಿಗಳ ಅನುವಾದಕ್ಕೆಂದೇ ‘ಜಗತ್ ಸಾಹಿತ್ಯ ಮಾಲೆ’ ಎಂಬ ಮಾಲೆಯನ್ನು ಪ್ರಾರಂಬಿಸಿ ಕೆಲವು ಉತ್ತಮ ಸಾಹಿತ್ಯ ಕೃತಿಗಳನ್ನು ಅನುವಾದಿಸಿ ಕನ್ನಡಕ್ಕೆ ನೀಡಿದರು. ಸ್ವತಃ ಗೋಪಾಲಕೃಷ್ಣ ಅಡಿಗರು ನಥಾನಿಯಲ್ ಹಾಥರ್ನ್ನ ‘ಕೆಂಪು ಅಕ್ಷರ’ (ಸ್ಕಾರ್ಲೆಟ್ ಲೆಟರ್) ಮುಂತಾದ ಕಾದಂಬರಿಗಳನ್ನು ಅನುವಾದಿಸಿದ್ದರು. ಈ ಮಾಲೆಯ ಬಗ್ಗೆ ಸಂಪಾದಕದ್ವಯರು ಹೇಳಿರುವುದು ಹೀಗೆ: “ವಿಶ್ವಸಾಹಿತ್ಯದ ಉತ್ತಮ ಕೃತಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಕನ್ನಡ ಭಾಷೆಗೆ ಅನುವಾದಿಸಿ ಆ ಮೂಲಕ ನಮ್ಮ ಜನಕ್ಕೆ ಪರಿಚಯ ಮಾಡಿಕೊಡಬೇಕೆಂದು ನಾವು ಸುಮಾರು ಎರಡು ವರ್ಷಗಳಿಂದಲೂ ಯೋಚಿಸುತ್ತಿದ್ದೆವು…. ವಿಶ್ವದ ಕೆಲವು ಅತ್ಯುತ್ತಮ ಕೃತಿಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ; ಬರಬೇಕಾದದ್ದು ಬಹಳಷ್ಟಿದೆ.”
ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸಾಂಸ್ಥಿಕ ರಾಜಾಶ್ರಯದ ಮೂಲಕ ಸಮಿತಿಗಳು ಪೂರ್ವಚಿಂತನೆ ನಡೆಸಿ, ಕೃತಿಗಳನ್ನು ಅನುವಾದ ಮಾಡಿಸುವ ವಿದ್ಯಮಾನಗಳಿಗೆ ಪ್ರಾಧಾನ್ಯ ಬಂತು. ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾಭಾರತಿ ಮುಂತಾದ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಈ ರೀತಿ ಜವಾಬ್ದಾರಿಯಿಂದ ಅನುವಾದಗಳನ್ನು ಮಾಡಿಸಿದವು. ಈ ಕಾರ್ಯಗಳು ಈಗಲೂ ನಿರಂತರವಾಗಿ ನಡೆಯುತ್ತಿವೆ. ಉದಾಹರಣೆಗೆ ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ಭಾರತದ ವಿವಿಧ ಭಾಷೆಗಳ ಸಾಹಿತ್ಯವನ್ನು ಇತರ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುತ್ತದೆ. ಸುಮಾರು ೬೦ ಕತೆ, ಕಾದಂಬರಿ ಕೃತಿಗಳು ನ್ಯಾಷನಲ್ ಬುಕ್ ಟ್ರಸ್ಟ್ ಒಂದೇ ಸಂಸ್ಥೆಯ ಮೂಲಕ ಈಗಾಗಲೇ ವಿವಿಧ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಬಂದಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿಗಳ ಕೃತಿಗಳಿಂದ ಮಹತ್ತ್ವದ ಕತೆ, ಕಾದಂಬರಿಗಳ ಮಾದರಿಗಳನ್ನು ಅನುವಾದಿಸಿ ಕೊಡುವ ಮೂಲಕ ವಾಚಿಕೆಗಳನ್ನು ೧೯೯೦ ರ ದಶಕದಲ್ಲಿ ಪ್ರಕಟಿಸಿದೆ. ಕುವೆಂಪು ಭಾಷಾಭಾರತಿಯು ನೂರಾರು ಅನುವಾದಿತ ಕಾದಂಬರಿ ಹಾಗೂ ಸಣ್ಣಕಥಾ ಸಂಕಲನಗಳನ್ನು ಕೃತಿಗಳನ್ನು ಪ್ರಕಟಿಸಿದೆ.
ಸರಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ದೊಡ್ಡ ಪ್ರಕಾಶನ ಸಂಸ್ಥೆಗಳಲ್ಲದೆ ನೂರಾರು ಸಾಹಿತಿಗಳು ವೈಯಕ್ತಿಕ ಆಸಕ್ತಿಯಿಂದ ಗದ್ಯ ಕೃತಿಗಳನ್ನು ಅನುವಾದ ಮಾಡಿದ್ದಾರೆ. ವೈಯಕ್ತಿಕ ಆಸಕ್ತಿಯಿಂದ ಅನುವಾದ ಮಾಡಿದವರೂ ಪ್ರಜ್ಞಾಪೂರ್ವಕವಾಗಿ ಕೃತಿಗಳನ್ನು ಆರಿಸಿಕೊಂಡು, ಸಾಧ್ಯವಾದಷ್ಟು ಮಟ್ಟಿಗೆ ‘ಬಿಟ್ಟ ಸ್ಥಳವನ್ನು ತುಂಬಲು’ ಪ್ರಯತ್ನಿಸಿದ್ದಾರೆ. ನನ್ನ (ಬಿ. ಜನಾರ್ದನ ಭಟ್) ಉದಾಹರಣೆಯನ್ನೇ ಕೊಡುವುದಾದರೆ, ಕನ್ನಡದಲ್ಲಿ ಜೆಫ್ರಿ ಚಾಸರ್ನ ‘ಕ್ಯಾಂಟರ್ಬರಿ ಕತೆಗಳು’ ಅನುವಾದವಾಗಿಲ್ಲ ಎಂದು ತಿಳಿದು ಆ ಕೃತಿಯನ್ನು ಗದ್ಯದಲ್ಲಿ ಸಂಕ್ಷೇಪಾನುವಾದ ಮಾಡಿದೆ. ಅದೇ ಕಾರಣಕ್ಕೆ ಜೆ.ಎಂ. ಬ್ಯಾರಿಯ ‘ಪೀಟರ್ ಪ್ಯಾನ್ ಸಾಹಸಗಳು’ ಮತ್ತು ಬೊಕಾಚಿಯೋನ ‘ಡಿಕೆಮರಾನ್’ ಕೃತಿಗಳನ್ನು ಅನುವಾದಿಸಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪೋರ್ಚುಗಲ್ ದೇಶದ ಮಹಾಕಾವ್ಯ ‘ಲೂಸಿಯಾಡ್ಸ್’ ಅನ್ನು ಅನುವಾದಿಸುವ ಕಾರ್ಯವನ್ನು ನನಗೆ ವಹಿಸಿದ್ದುದರಿಂದ ಅದನ್ನು (ಇಂಗ್ಲಿಷ್ ಅನುವಾದಗಳನ್ನು ಆಧರಿಸಿ) ಕನ್ನಡಕ್ಕೆ ಗದ್ಯಾನುವಾದ ಮಾಡಲಾಗಿದೆ.
ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಆಗಿರುವ ಭಾಷಾಂತರಗಳು ಅಗಣಿತವಾಗಿವೆ. ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಇರುವ ನೂರಾರು ಕನ್ನಡ ಬರಹಗಾರರು ಇರುವುದರಿಂದ ಇಂಗ್ಲಿಷಿನ ಮೂಲಕ ಜಗತ್ತಿನ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಭಾಷಾಂತರವಾಗುತ್ತಲೇ ಇರುತ್ತವೆ. ಜಾಗತಿಕ ಸಾಹಿತ್ಯದಲ್ಲಿ ಒಳ್ಳೆಯ ಸಾಹಿತಿಗಳು ಕಾಣಿಸಿಕೊಂಡ ಕೆಲವೇ ವರ್ಷಗಳಲ್ಲಿ ಕನ್ನಡದಲ್ಲಿ ಅವರ ಕೃತಿಗಳನ್ನು ಓದಬಹುದು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ಸ್ಪ್ಯಾನಿಶ್ ಲೇಖಕ ಪೌಲೋ ಕೊಯಿಲೋನ ‘ದಿ ಆಲ್ಕೆಮಿಸ್ಟ್’ ಕಾದಂಬರಿ ಪ್ರಸಿದ್ಧವಾದ ಕೂಡಲೇ ನಾಲ್ಕು ಅನುವಾದಗಳು ಕನ್ನಡದಲ್ಲಿ ಹುಟ್ಟಿಕೊಂಡವು.
ಮಲಯಾಳಂ, ತೆಲುಗು, ತಮಿಳು, ಬಂಗಾಲಿ, ಮರಾಠಿ ಮೊದಲಾದ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಳ್ಳುವ ಕೃತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಮಾರು ಸಾವಿರಕ್ಕಿಂತಲೂ ಹೆಚ್ಚು ಕೃತಿಗಳು ಭಾಷಾಂತರದ ಮೂಲಕ ಕನ್ನಡಕ್ಕೆ ಬಂದಿವೆ. ನ್ಯಾಷನಲ್ ಬುಕ್ ಟ್ರಸ್ಟನವರೇ ಅರುವತ್ತಕ್ಕಿಂತ ಹೆಚ್ಚು ಅನ್ಯಭಾಷೆಯ ಸೃಜನಶೀಲ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿಸಿದ್ದಾರೆಂದರೆ ಸಾವಿರಕ್ಕಿಂತಲೂ ಹೆಚ್ಚು ಕೃತಿಗಳು ಭಾಷಾಂತರವಾಗಿರುವುದು ವಿಶೇಷವೇನಲ್ಲ. ಇಂತಹ ಪ್ರಬಂಧಗಳಲ್ಲಿ ಅವುಗಳನ್ನೆಲ್ಲ ದಾಖಲಿಸುವುದು ಮಾತ್ರ ಅಸಾಧ್ಯವಾಗಿದೆ. ಮಾದರಿಗಾಗಿ ಇಲ್ಲಿ ಕೆಲವನ್ನು ಉಲ್ಲೇಖಿಸಲಾಗಿದೆ:
ದೇಜಗೌ ಅವರು ಟಾಲ್ಸ್ಟಾಯ್ ಅವರ ‘ಆನಾ ಕೆರಿನಿನಾ’, ‘ವಾರ್ ಅಂಡ್ ಪೀಸ್’ (ಯುದ್ಧ ಮತ್ತು ಶಾಂತಿ) ಮತ್ತು ‘ರಿಸರೆಕ್ಷನ್’ (ಪುನರುತ್ಥಾನ) ಕಾದಂಬರಿಗಳನ್ನು, ಎಸ್.ಎಂ. ಅಂಗಡಿಯವರು ದೋಸ್ತೋವಸ್ಕಿಯ ‘ಅಪರಾಧ ಮತ್ತು ಶಿಕ್ಷೆ\ ಕಾದಂಬರಿಯನ್ನು, ಜೇನ್ ಆಸ್ಟೆನ್ಳ ‘ಪ್ರೈಡ್ ಅಂಡ್ ಪ್ರಿಜುಡಿಸ್’ ಅನ್ನು (ಹಮ್ಮು-ಬಿಮ್ಮು) ಕನ್ನಡಕ್ಕೆ ಅನುವಾದಿಸಿದ್ದಾರೆ. ಎ.ಪಿ. ಸುಬ್ಬಯ್ಯನವರು ಚಾರ್ಲ್ಸ್ ಡಿಕನ್ಸ್ನ ‘ಡೇವಿಡ್ ಕಾಪರ್ಫೀಲ್ಡ್’ ಮತ್ತು ವಿಕ್ಟರ್ ಹ್ಯೂಗೋನ ‘ಲೇ ಮಿಸರೆಬಲ್ಸ್’ ಎಂಬ ಫ್ರೆಂಚ್ ಕಾದಂಬರಿಯನ್ನು (ಇಂಗ್ಲಿಷ್ ಅನುವಾದವನ್ನಾಧರಿಸಿ) ‘ದುಃಖಾರ್ತರು’ ಎಂದು ಅನುವಾದಿಸಿದ್ದಾರೆ. ರಾಮಚಂದ್ರ ಕೊಟ್ಟಲಗಿಯವರು ಗೋಲ್ಡಸ್ಮಿತ್ನ ‘ವಿಕಾರ್ ಆಫ್ ವೇಕ್ಫೀಲ್ಡ್’ ಕಾದಂಬರಿಯನ್ನು ‘ವೇಕ್ಫೀಲ್ಡಿನ ಪಾದ್ರಿ ಮಹಾಶಯ’ ಎಂದು ಅನುವಾದಿಸಿದ್ದಾರೆ.
ಪ್ರೊ. ಕೆ.ಎಂ. ಸೀತಾರಾಮಯ್ಯನವರು ಜಗತ್ತಿನ ಪ್ರಮುಖ ಮಹಾಕಾವ್ಯಗಳನ್ನು ಇಂಗ್ಲಿಷ್ ಅನುವಾದಗಳನ್ನಾಧರಿಸಿ ಕನ್ನಡ ಗದ್ಯದಲ್ಲಿ ಮರುನಿರೂಪಿಸಿದ್ದಾರೆ. ಅವು: ಹೋಮರ್ನ ‘ಇಲಿಯಡ್’ ಮತ್ತು ‘ಒಡಿಸ್ಸಿ’, ವರ್ಜಿಲ್ ಕವಿಯ ‘ಈನಿಯಡ್’, ಡಾಂಟೆಯ ‘ಡಿವೈನ್ ಕಾಮಿಡಿ’, ಮಿಲ್ಟನ್ನ ‘ಪ್ಯಾರಡೈಸ್ ಲಾಸ್ಟ್’ ಮತ್ತು ‘ಪ್ಯಾರಡೈಸ್ ರೀಗೇಯ್ನ್ಡ್’. ಎ. ಮೈಲರ್ರಾವ್ ಅವರೂ ‘ಇಲಿಯಡ್’ ಮತ್ತು ‘ಒಡಿಸ್ಸಿ’ ಮಹಾಕಾವ್ಯಗಳನ್ನು ಗದ್ಯಾನುವಾದ ಮಾಡಿದ್ದಾರೆ. ಎಲ್.ಎಸ್. ಶೇಷಗಿರಿ ರಾಯರೂ ಇಲಿಯಡ್ ಕಾವ್ಯವನ್ನು ಗದ್ಯಾನುವಾದ ಮಾಡಿದ್ದಾರೆ.
ವಾಲ್ಟರ್ ಸ್ಕಾಟ್ನ ‘ಕೆನಿಲ್ವರ್ತ್’ ಅನ್ನು ನಾಗೇಗೌಡರು, ‘ಐವಾನ್ ಹೋ’ ಕಾದಂಬರಿಯನ್ನು ಆನಂದರು, ಸ್ಟೀವನ್ಸನ್ನನ ‘ಡಾ.ಜೆಕಿಲ್ ಅಂಡ್ ಮಿ.ಹೈಡ್’ ಅನ್ನು ಆನಂದರು (ಪುರುಷಾಮೃಗ), ಡೇನಿಯಲ್ ಡೀಫೋನ ‘ರಾಬಿನ್ಸನ್ ಕ್ರೂಸೋ ಕಥೆ’ಯನ್ನು ಆನಂದರು, ಜಾರ್ಜ್ ಎಲಿಯಟ್ಳ ‘ಸೈಲಾಸ್ ಮಾರ್ನರ್’ ಅನ್ನು ಎಂ.ರಾಮರಾಯರು, ರೈಡರ್ ಹಾಗಾರ್ಡ್ನ ‘ಷಿ’ ಕಾದಂಬರಿಯನ್ನು ಎ.ಮೈಲಾರಿರಾಯರು (ಆಷಾ) ಭಾಷಾಂತರಿಸಿದ್ದಾರೆ. ಸ್ಟೀವನ್ಸನ್ನ ‘ಟ್ರೆಷರ್ ಐಲಂಡ್’ ಸಾಹಸಕಥನವನ್ನು ಎಂ.ಎಸ್. ರಾಮ ರಾವ್ ‘ನಿಧಿ ದ್ವೀಪ’ ಎಂದು ಅನುವಾದಿಸಿದ್ದಾರೆ. ಮಾರ್ಕ್ ಟ್ವೆಯ್ನ್ ನ ‘ಹಕಲ್ಬೆರಿ ಫಿನ್ನನ ಸಾಹಸಗಳು’ ಕಾದಂಬರಿಯನ್ನು ಕೆ.ಎಸ್. ನರಸಿಂಹಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಡಿಕನ್ಸ್ನ ‘ಎರಡು ನಗರಗಳ ಕಥೆ’ಯನ್ನು ಎಲ್.ಎಸ್. ಶೇಷಗಿರಿರಾಯರು ಮತ್ತು ‘ಪಿಕ್ವಿಕ್ ಪ್ರಸಂಗಗಳು’ ಅನ್ನು ಎಸ್.ಎನ್. ಶಂಕರ್ ಅವರು ಅನುವಾದಿಸಿದ್ದಾರೆ. ಥೋರೋನ ‘ವಾಲ್ಡನ್’ ಅನ್ನು ದೇವುಡು ನರಸಿಂಹಶಾಸ್ತ್ರಿಗಳು, ಹೆಮಿಂಗ್ವೇಯ ‘ದಿ ಓಲ್ಡ್ ಮ್ಯಾನ್ ಅಂಡ್ ದ ಸೀ’ ಕಾದಂಬರಿಯನ್ನು ಪಂಕಜ ಅವರು (ಗೆದ್ದು ಸೋತವನು), ಹಾಥಾರ್ನನ ‘ಹೌಸ್ ಆಫ್ ಸೆವನ್ ಗೇಬಲ್ಸ್’ ಎಂ.ವಿ. ಸೀತಾರಾಮಯ್ಯನವರಿಂದ (ಏಳು ಇಪ್ಪಾರಿನ ಮನೆ) ಭಾಷಾಂತರಿಸಿದ್ದಾರೆ. ಥಾಮಸ್ ಹಾರ್ಡಿಯ ‘ರಿಟರ್ನ್ ಆಫ್ ದಿ ನೇಟೀವ್’ ಮತ್ತು ‘ಟೆಸ್ ಡರ್ಬರ್ವಿಲ್’ ಕಾದಂಬರಿಗಳನ್ನು ವಿ. ನಾಗರಾಜರಾಯರು ಅನುವಾದಿಸಿದ್ದಾರೆ ಮತ್ತು ಇದೇ ಲೇಖಕನ ‘ಮೇಯರ್ ಆಫ್ ಕ್ಯಾಸ್ಟರ್ಬ್ರಿಜ್’ ಅನ್ನು ಆನಂದರಾಯರು ‘ಏರಿಳಿತ’ ಎಂದು ಸಂಗ್ರಹಾನುವಾದ ಮಾಡಿದ್ದಾರೆ (ಏರಿಳಿತ). ವಿ. ನಾಗರಾಜ ರಾವ್ ಅವರು ಗುಸ್ತಾವ್ ಫ್ಲಬೇರ್ನ ‘ಮದಾಂ ಬೊವಾರಿ’ ಫ್ರೆಂಚ್ ಕಾದಂಬರಿಯನ್ನು, ಇಂಗ್ಲಿಷ್ ಅನುವಾದವನ್ನಾಧರಿಸಿ ಸಂಗ್ರಹಾನುವಾದ ಮಾಡಿದ್ದಾರೆ.
ಸಣ್ಣಕತೆಗಳು: ಟಾಲ್ಸ್ಟಾಯ್ ಅವರ ಎಲ್ಲ ಸಣ್ಣ ಕತೆಗಳನ್ನು ಎಲ್. ಗುಂಡಪ್ಪನವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆ.ಎಲ್. ಗೋಪಾಲ ಕೃಷ್ಣರಾವ್ ಅವರು ‘ತೊಲ್ಸ್ತೋಯ್ ನೀಳ್ಗತೆಗಳು’ ಎಂಬ ಕೃತಿಯಲ್ಲಿ ಟಾಲ್ಸ್ಟಾಯ್ನ ನೀಳ್ಗತೆಗಳನ್ನು ಅನುವಾದಿಸಿದ್ದಾರೆ. ಕು.ಶಿ. ಹರಿದಾಸ ಭಟ್ಟರು ‘ಅಮೆರಿಕದ ಆರು ಕಥೆಗಳು’ ಎಂಬ ಪುಸ್ತಕದಲ್ಲಿ ಆರು ಅಮೇರಿಕನ್ ಕತೆಗಳನ್ನು ಅನುವಾದಿಸಿದ್ದಾರೆ. ಎ.ಎನ್. ಮೂರ್ತಿರಾಯರು ಕೆಲವು ಪಾಶ್ಚಾತ್ಯ ಕಥೆಗಳನ್ನು ‘ಯೋಧನ ಪುನರಾಗಮನ’ ಮತ್ತು ‘ಪಾಶ್ಚಾತ್ಯ ಸಣ್ಣಕಥೆಗಳು’ ಎಂಬೆರಡು ಸಂಕಲನಗಳಲ್ಲಿ ಕೊಟ್ಟಿದ್ದಾರೆ.
೧೯೮೦ರಲ್ಲಿ ನವಕರ್ನಾಟಕ ಪ್ರಕಾಶನ ಸಂಸ್ಥೆ ಜಗತ್ತಿನ ಶ್ರೇಷ್ಠ ಸಣ್ಣಕತೆಗಳನ್ನು ೨೫ಸಂಪುಟಗಳಲ್ಲಿ ಕನ್ನಡಕ್ಕೆ ವಿವಿಧ ವಿದ್ವಾಂಸರಿAದ ಅನುವಾದ ಮಾಡಿಸಿತು. ಖ್ಯಾತ ಸಾಹಿತಿ ನಿರಂಜನರು ಈ ಯೋಜನೆಯ ಪ್ರಧಾನ ಸಂಪಾದಕರಾಗಿದ್ದರು. ‘ವಿಶ್ವಕಥಾಕೋಶ’ ಎಂಬ ಈ ಸಂಪುಟವು ಈಗಲೂ ಜನಪ್ರಿಯವಾಗಿದೆ. ಖಾಸಗಿ ಪ್ರಕಾಶನ ಸಂಸ್ಥೆಯಾದರೂ ಇದು ಜವಾಬ್ದಾರಿಯಿಂದ ಕತೆಗಳನ್ನು ಆರಿಸಿ ಮಾಡಿಸಿದ ಅನುವಾದ ಸತ್ರವಾಗಿತ್ತು. ಖಾಸಗಿ ಪ್ರಕಾಶನ ಸಂಸ್ಥೆಗಳು ಕೂಡ ಕನ್ನಡಕ್ಕೆ ಅಗತ್ಯವಾಗಿ ಅನುವಾದಗೊಳ್ಳಬೇಕಾದ ವಿಶ್ವ ಸಾಹಿತ್ಯದ ಶ್ರೇಷ್ಠ ಕತೆ, ಕಾದಂಬರಿಗಳು ಯಾವುವು ಎಂದು ಚಿಂತನೆ ನಡೆಸಿ ಅನುವಾದಗಳನ್ನು ಮಾಡಿಸಿದವು. ನವಕರ್ನಾಟಕದ ‘ವಿಶ್ವಕಥಾ ಕೋಶ’ ಒಂದು ಮಾದರಿ ಅನುವಾದ ಯೋಜನೆಯಾಗಿದೆ.
ಎಸ್. ದಿವಾಕರ್ ಅವರು ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿಗಳ ಕತೆಗಳ ಸಂಪುಟವನ್ನೂ, ಜಗತ್ತಿನ ಅತಿ ಸಣ್ಣ ಕತೆಗಳ ಸಂಕಲನವನ್ನೂ ಪ್ರಕಟಿಸಿದ್ದಾರೆ. ನಾನು (ಬಿ. ಜನಾರ್ದನ ಭಟ್) ‘ತುಷಾರ’ ಮಾಸಪತ್ರಿಕೆಗಾಗಿ ತಿಂಗಳಿಗೊಂದರಂತೆ ಸುಮಾರು ಎಂಬತ್ತು ಜಗತ್ತಿನ ಪ್ರಸಿದ್ಧ ಸಣ್ಣಕತೆಗಳನ್ನು ಅನುವಾದಿಸಿದ್ದೇನೆ. ಅವು: ‘ಜಗತ್ಪçಸಿದ್ಧ ಸಣ್ಣಕತೆಗಳು’ ಮತ್ತು ‘ಕನ್ನಡಕ್ಕೆ ಬಂದ ಕತೆಗಳು’ ಎಂಬ ಎರಡು ಸಂಪುಟಗಳಲ್ಲಿ ಮುದ್ರಿತವಾಗಿವೆ.
ಹೀಗೆ ಕನ್ನಡ ಕಥನ ಸಾಹಿತ್ಯವು ಭಾಷಾಂತರಗಳಿಂದ ಪ್ರೇರಣೆ ಮತ್ತು ಪ್ರಯೋಜನವನ್ನು ಪಡೆದು ಈಗ ವಿಶ್ವಮಟ್ಟಕ್ಕೆ ಬೆಳೆದುನಿಂತಿದೆ.
ಗ್ರಂಥ ಋಣ:
- ಹೊಸಗನ್ನಡದ ಅರುಣೋದಯ: ಡಾ. ಶ್ರೀನಿವಾಸ ಹಾವನೂರ. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು. ೧೯೭೪.
- ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ: ಡಾ. ಹರಿಕೃಷ್ಣ ಭರಣ್ಯ. ಸಪ್ನ ಬುಕ್ ಹೌಸ್, ಬೆಂಗಳೂರು. ೧೯೯೦.
- ಸೌಗಂಧಿಕಾ ಪರಿಣಯ: ಮುಮ್ಮಡಿ ಕೃಷ್ಣರಾಜ ಒಡೆಯರ್. ಕೇಂದ್ರ ಸಾಹಿತ್ಯ ಅಕಾಡೆಮಿ.
- ಮುದ್ರಾಮಂಜೂಷ: ಕೆಂಪು ನಾರಾಯಣ. ಕನ್ನಡ ಮತ್ತು ಸಂಸ್ಕöÈತಿ ನಿರ್ದೇಶನಾಲಯ, ಬೆಂಗಳೂರು. ೧೯೮೫.
- ಈರಾರು ಪತ್ರಿಕೆ: ಹರ್ಮನ್ ಮ್ಯೋಗ್ಲಿಂಗ್. ಸಂಪಾದಕರು: ಡಾ. ಹಾ.ತಿ. ಕೃಷ್ಣೇ ಗೌಡ. ವಾಚಸ್ಪತಿ ಪ್ರಕಾಶನ, ಮೈಸೂರು. ೨೦೨೨.
- ಬಿ. ವೆಂಕಟಾಚಾರ್ಯರು (ಲೇಖನ). ಲೇಖಕರು: ಜಿ. ವೆಂಕಟಸುಬ್ಬಯ್ಯ. ‘ಜೀವನ’ ಪತ್ರಿಕೆ. ಜೂನ್ ೧೯೬೩.
- ಗಳಗನಾಥ ಕಾದಂಬರಿ ಸಂಪುಟಗಳು. (ಆರು ಸಂಪುಟಗಳು) ಸಂಪಾದಕರು: ಡಾ. ಎಂ.ಎಂ. ಕಲಬುರ್ಗಿ. ಮನೋಹರ ಗ್ರಂಥಮಾಲಾ, ಧಾರವಾಡ. ೨೦೧೪
- ವಿವಿಧ ಅನುವಾದಿತ ಕೃತಿಗಳು.
- ವಿವಿಧ ಕನ್ನಡ ಆನ್ಲೈನ್ ಆರ್ಕೈವ್ ಸಂಗ್ರಹಗಳು.
- ಅಂತರ್ಜಾಲ.
ಕೃಪೆ: ಆಕಾಶವಾಣಿ, ಬೆಂಗಳೂರು. (ದಿನಾಂಕ ೮.೯.೨೦೨೩ರಂದು ಬೆಂಗಳೂರು ಆಕಾಶವಾಣಿ ಜಿ-೨೦ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತವು ವಹಿಸಿದ ಸಂದರ್ಭದಲ್ಲಿ ‘ಕನ್ನಡಕ್ಕೆ ಅನ್ಯಭಾಷೆಗಳ ಕೊಡುಗೆ’ ಎಂಬ ವಿಚಾರಸಂಕಿರಣವನ್ನು ಏರ್ಪಡಿಸಿತ್ತು. ಆ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧದ ವಿಸ್ತೃತ ರೂಪ ಇದು.)
ಟಿಪ್ಪಣಿ – ೬
ಬಿ. ವೆಂಕಟಾಚಾರ್ಯ: ವೆಂಕಟಾಚಾರ್ಯರ (೧೮೪೫- ೧೯೧೪) ಪೂರ್ವಜರು ಕೊಳ್ಳೇಗಾಲದವರು. ಅವರ ತಂದೆ ಗರುಡಾಚಾರ್ಯರಿಗೆ ಆರು ಜನ ಗಂಡುಮಕ್ಕಳು. ವೆಂಕಟಾಚಾರ್ಯರು ಎರಡನೆಯವರು. ಗರುಡಾಚಾರ್ಯರು ಕೊಳ್ಳೇಗಾಲವನ್ನು ಬಿಟ್ಟು, ಚಿತ್ರದುರ್ಗಕ್ಕೆ ಬಂದು, ಅನಂತರ ತುಮಕೂರಿಗೆ ಹೋದರು. ವೆಂಕಟಾಚಾರ್ಯರು ತುಮಕೂರಿನ ಇಂಗ್ಲಿಷ್ ಶಾಲೆಯಲ್ಲಿ ಕಲಿತು ಸರಕಾರದಲ್ಲಿ ಗುಮಾಸ್ತೆ ಕೆಲಸಕ್ಕೆ ಸೇರಿದರು. ಅಕೌಂಟೆಂಟರಾಗಿ ಚಿತ್ರದುರ್ಗದಲ್ಲಿ, ಶಿವಮೊಗ್ಗೆಯಲ್ಲಿ ಡಿವಿಜನ್ ಹೆಡ್ಮುನ್ಷಿ ಕೆಲಸ, ಆಮೇಲೆ ಡಿಸ್ಟ್ರಿಕ್ಟ್ ಕೋರ್ಟ್ ಶಿರಸ್ತೇದಾರ್, ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳನ್ನು ನಿರ್ವಹಿಸಿ, ಎಡೆಹಳ್ಳಿಗೆ ಅಂದರೆ, ಈಗಿನ ನರಸಿಂಹರಾಜಪುರಕ್ಕೆ, ಮುನ್ಸೀಫರಾಗಿ ವರ್ಗವಾದರು. ಆಮೇಲೆ ವೆಂಕಟಾಚಾರ್ಯರಿಗೆ ಚಿಕ್ಕಬಳ್ಳಾಪುರ, ಅಲ್ಲಿಂದ ಕೋಲಾರ, ಅಲ್ಲಿಂದ ಮೈಸೂರಿಗೆ ವರ್ಗವಾಯಿತು. ೧೯೦೨ರಲ್ಲಿ ಒಂದನೇ ತರಗತಿ ಮುನ್ಸೀಫರಾಗಿದ್ದಾಗ ಸರ್ಕಾರಿ ಕೆಲಸದಿಂದ ನಿವೃತ್ತರಾದರು. ಅನಂತರ ತಮ್ಮ ವಿರಾಮಕಾಲ ವನ್ನೆಲ್ಲ ಕನ್ನಡಸಾಹಿತ್ಯ ಸೇವೆಗೆಂದೇ ಮೀಸಲಾಗಿಟ್ಟಿದ್ದರು. ಅವರ ಬರೆಯುವ ಕೋಣೆಯಲ್ಲಿ ಒಂದು ಬೃಹದಾಕಾರದ, ಕಬ್ಬಿಣದ ತಿರುಗುವ ಪುಸ್ತಕ ಬೀರುವಿತ್ತು. ಅದರಲ್ಲಿ ಅಮೂಲ್ಯ ಗ್ರಂಥಗಳು, ನಿಘಂಟುಗಳು, ಬಂಗಾಳಿ ವಿಶ್ವಕೋಶಗಳು ಇದ್ದವಂತೆ. ಪಕ್ಕದಲ್ಲೇ ಅವರಿಗೆ ಬರೆಯಲು ಶಾನುಭೋಗರು ಬರೆಯುತ್ತಿದ್ದಂತಹ ಒಂದು ತಗ್ಗಾದ ಡೆಸ್ಕು ಇತ್ತಂತೆ. ನೆಲದ ಮೇಲೆ ಕೃಷ್ಣಾಜಿನ ಹಾಕಿಕೊಂಡು ಕೂತು ಬರೆಯುತ್ತಿದ್ದರು. ಬರೆಯುತ್ತಿದ್ದಂತೆಯೇ ಅಗತ್ಯವಿದ್ದರೆ ತಿರುಗುವ ಬೀರುವನ್ನು ತಿರುಗಿಸಿ ಬೇಕಾದ ಪುಸ್ತಕವನ್ನು ತೆಗೆದು ರೆಫರ್ ಮಾಡುತ್ತಿದ್ದರಂತೆ.
ವೆಂಕಟಾಚಾರ್ಯರ ಬಂಗಾಳಿ ಭಾಷೆಯ ಒಡನಾಟ ಪ್ರಾರಂಭವಾದದ್ದು ಅವರು ಕಲ್ಕತ್ತೆಯಿಂದ ಔಷಧಿಗಳನ್ನು ತರಿಸುತ್ತಿದ್ದಾಗ ಅವುಗಳಿಗೆ ಸುತ್ತಿದ್ದ ಬಂಗಾಳಿ ಪತ್ರಿಕೆಗಳ ಹಾಳೆಗಳನ್ನು ನೋಡಿ ಅವರಿಗೆ ಆಸಕ್ತಿ ಉಂಟಾದ ಮೂಲಕ. ಅವರ ಬಂಧು ನಾರಾಯಣ ಐಯಂಗಾರ್ ಬಂಗಾಳದಿಂದ ಕೆಲವು ಪುಸ್ತಕಗಳನ್ನು ತಂದುಕೊಟ್ಟರು. ನಂತರ ವೆಂಕಟಾಚಾರ್ಯರು ಬಂಗಾಳಿ ಲೇಖಕ ಈಶ್ವರಚಂದ್ರ ವಿದ್ಯಾಸಾಗರ ಅವರೊಡನೆ ಪತ್ರ ವ್ಯವಹಾರ ಪ್ರಾರಂಭಿಸಿ, ಪತ್ರಗಳ ಮೂಲಕವೇ ಅವರಿಂದ ಪಾಠ ಹೇಳಿಸಿಕೊಂಡು ಬಂಗಾಳಿ ಭಾಷೆಯನ್ನು ಕಲಿತರು. ಮೊದಲು ಈಶ್ವರ ಚಂದ್ರರ ‘ಭ್ರಾಂತಿ ವಿಲಾಸ’ವನ್ನು (‘ಭ್ರಾಂತಿವಿಲಾಸ’ ಎಂಬ ಕೃತಿಯು ಷೇಕ್ಸ್ಪಿಯರ್ನ ‘ಕಾಮಿಡಿ ಆಫ್ ಎರರ್ಸ್’ ನಾಟಕದ ಕಾದಂಬರಿರೂಪ) ಅನುವಾದಿಸಿ ಬಂಗಾಳಿ ಕಾದಂಬರಿಗಳ ಅನುವಾದವನ್ನು ಪ್ರಾರಂಭಿಸಿದರು. ಮುಂದೆ ಬಂಕಿಮಚಂದ್ರರ ಕಾದಂಬರಿಗಳನ್ನೂ ಇತರ ಹಲವು ಬಂಗಾಳಿ ಕಾದಂಬರಿಕಾರರನ್ನೂ ಕನ್ನಡಕ್ಕೆ ಅನುವಾದಿಸಿದರು.
ವೆಂಕಟಾಚಾರ್ಯರು ಕಾದಂಬರಿಗಳ ಜತೆಗೆ, ಕಥೆಗಳನ್ನೂ, ವೈಚಾರಿಕ ಕೃತಿಗಳನ್ನೂ ಪ್ರಬಂಧಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಅನುವಾದಿಸಿರುವ ‘ಲೋಕ ರಹಸ್ಯ’ ಎಂಬುದು ಕನ್ನಡದಲ್ಲಿ ಮೊದಲನೆಯ ಪ್ರಬಂಧ ಸಂಕಲನ ಎಂದು ಹೇಳಲಾಗಿದೆ. ಅವರ ಕೆಲವು ಅನುವಾದ ಕೃತಿಗಳು: ಭ್ರಾಂತಿವಿಲಾಸ (೧೮೭೬), ಶಾಕುಂತಲ, ಸೀತಾವನವಾಸ. ಚಂದ್ರಶೇಖರ, ರಜನಿ, ಕೃಷ್ಣಕಾಂತನ ಉಯಿಲು, ಆನಂದಮಠ, ರಾಜಸಿಂಹ, ದೇವಿ ಚೌಧರಾಣಿ, ಭಾರತ ಮಹಿಳೆ, ಆರ್ಯಶಾಸ್ತ್ರ ಪ್ರದೀಪ, ದುರ್ಗೇಶನಂದಿನಿ, ಸೀತಾರಾಮ, ಕಪಾಲ ಕುಂಡಲ, ಮೃಣಾಲಿನಿ, ವಿಷವೃಕ್ಷ, ಯುಗಳಾಂಗುರೀಯ.
ವೆಂಕಟಾಚಾರ್ಯರು ಅಧಿಕಾರದಿಂದ ನಿವೃತ್ತರಾದ ಮೇಲೆ ಪತ್ರಿಕೋದ್ಯಮವನ್ನು ಕೈಗೊಂಡರು. ‘ಅವಕಾಶ ತೋಷಿಣಿ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಅದರಲ್ಲಿ ಕಥೆ, ಲಘು ಲೇಖನಗಳನ್ನು ಬರೆಯುತ್ತಿದ್ದರು. ರಾತ್ರಿಯೆಲ್ಲಾ ಕುಳಿತು ಓದಿ ಬರೆಯುವ ಅಭ್ಯಾಸ ಅವರದು. ಅವರು ತಿಂಗಳಿಗೊAದು ಕಾದಂಬರಿಯನ್ನು ಪ್ರಕಟಿಸುತ್ತಿದ್ದರು. ಅವರ ಮನೆಗೆ ಸ್ವಾಮಿ ವಿವೇಕಾನಂದರು ಮತ್ತು ಬಂಗಾಳದ ಪ್ರಸಿದ್ಧ ಚಿಂತಕರು, ಸಾಹಿತಿಗಳು ಭೇಟಿ ನೀಡಿದ್ದರು. ವೆಂಕಟಾಚಾರ್ಯರು ೧೯೧೪ರ ಜೂನ್ ೨೬ರಂದು ಬೆಂಗಳೂರಿನಲ್ಲಿ ನಿಧನರಾದರು.
ಟಿಪ್ಪಣಿ – ೭
‘ಗಳಗನಾಥ’ ಕಾವ್ಯನಾಮದ ವೆಂಕಟೇಶ ತಿರಕೊ ಕುಲಕರ್ಣಿಯವರು (೧೮೬೯-೧೯೪೨) ಹುಟ್ಟಿದ್ದು ಹಾವೇರಿ ತಾಲೂಕಿನ ಗಳಗನಾಥ ಎನ್ನುವ ಹಳ್ಳಿಯಲ್ಲಿ. ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿದ ನಂತರ ಧಾರವಾಡ ಟ್ರೇನಿಂಗ್ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಪಡೆದು ಅವರು ೧೮೮೯ರಿಂದ ಶಿಕ್ಷಕರಾಗಿ ಕೆಲಸ ಮಾಡಿದರು. ಧಾರವಾಡದಲ್ಲಿ ಅವರು ಸಾಹಿತ್ಯದ ಪ್ರೇರಣೆ ಪಡೆದು ಕನ್ನಡ ಕಾದಂಬರಿಗಳನ್ನು ಬರೆಯುವ ಸಂಕಲ್ಪ ಮಾಡಿದರು. ಗಳಗನಾಥರು ೧೯೦೬ರ ಸುಮಾರಿಗೆ ಗುತ್ತಲದಲ್ಲಿ ಕೆಲಸ ಮಾಡುತ್ತಿದ್ದಾಗ, ಸಮೀಪದ ಅಗಡಿಯಲ್ಲಿದ್ದ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳಿಂದ ಪ್ರಭಾವಿತರಾದರು. ಅಲ್ಲಿಂದಲೇ ೧೯೦೮ನೆಯ ಇಸವಿಯಲ್ಲಿ ‘ಸದ್ಬೋಧ ಚಂದ್ರಿಕೆ’ ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಅದರಲ್ಲಿಯೇ ತಮ್ಮ ಬರಹಗಳನ್ನು ಪ್ರಕಟಿಸಲಾರಂಭಿಸಿದರು.
ಆಗ ಉತ್ತರ ಕರ್ನಾಟಕದಲ್ಲಿ ಬಾಲಗಂಗಾಧರ ತಿಲಕರ ‘ಕೇಸರಿ’ ಹಾಗೂ ಹರಿನಾರಾಯಣ ಆಪ್ಟೆಯವರ ‘ಕರಮಣೂಕ’ ಪತ್ರಿಕೆಗಳು ಹೆಚ್ಚು ಪ್ರಚಾರದಲ್ಲಿದ್ದವು. ಕನ್ನಡ ಪತ್ರಿಕೆಗಳ ಅಭಾವದಿಂದಾಗಿ ಕನ್ನಡಿಗರು ಮರಾಠಿ ಪತ್ರಿಕೆಗಳನ್ನೇ ಓದುತ್ತಿದ್ದರು. ಟ್ರೇನಿಂಗ್ ಕಾಲೇಜಿಗೆ ಬರುತ್ತಿದ್ದ ಈ ಎರಡು ಪತ್ರಿಕೆಗಳನ್ನು ಗಳಗನಾಥರು ತಪ್ಪದೆ ಓದುತ್ತಿದ್ದರಲ್ಲದೆ ತಮ್ಮ ಗೆಳೆಯರೊಂದಿಗೆ ಅಲ್ಲಿನ ವಿಷಯಗಳನ್ನು ಚರ್ಚಿಸುತ್ತಿದ್ದರು. ಆಪ್ಟೆಯವರ ಕಾದಂಬರಿಗಳಲ್ಲಿಯ ಕಲ್ಪನಾ ವೈಭವದ ವೈಖರಿ ಗಳಗನಾಥರ ಮನಸ್ಸನ್ನು ಸೆಳೆಯುತ್ತಿತ್ತು. ತಿಲಕರ ರಾಷ್ಟಿçÃಯತೆಯ ಕೆಚ್ಚು ಕೂಡ ಅವರನ್ನು ಆಕರ್ಷಿಸಿತ್ತು. ತಿಲಕರ ವಿಚಾರಧಾರೆಯನ್ನೂ ಆಪ್ಟೆಯವರ ಕಾದಂಬರಿ ಕತೆಗಳನ್ನೂ ಕನ್ನಡದಲ್ಲಿಯೇ ಹೇಳಿ ಕನ್ನಡಿಗರ ವಾಚನಾಭಿರುಚಿಯನ್ನು ಬೆಳೆಸುವ ಉತ್ಕಟ ಆಸೆ ಅವರಲ್ಲಿ ಮೂಡಿತು. ಅದೇ ಕಾಲಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕನ್ನಡ ಗ್ರಂಥಕರ್ತರಿಗೆ ಬಹುಮಾನ ಘೋಷಿಸಿ ಹಸ್ತಪ್ರತಿಗಳನ್ನು ಆಹ್ವಾನಿಸಿದರು. ಗಳಗನಾಥರು ಬರೆದ ಪ್ರಥಮ ಕಾದಂಬರಿ ‘ಪ್ರಬುದ್ಧ ಪದ್ಮನಯನೆ’ಗೆ ಬಹುಮಾನ ದೊರಕಿತು. ಹೀಗೆ ೧೮೯೮ರಲ್ಲಿ ಆರಂಭವಾದ ಅವರ ಬರವಣಿಗೆ ೧೯೪೨ರವರೆಗೂ ನಿರಂತರವಾಗಿ ಸಾಗಿತು. ಅಗಡಿಯ ಶ್ರೀ ಶೇಷಾಚಲ ಸ್ವಾಮಿಗಳು ಗಳಗನಾಥರ ಮೇಲೆ ವಿಶೇಷ ಪ್ರಭಾವವನ್ನು ಬೀರಿದರು. ಸರ್ಕಾರಿ ಕೆಲಸದಲ್ಲಿ ಘರ್ಷಣೆ ಬಂದಾಗ ಸ್ವಯಂನಿವೃತ್ತಿ ಪಡೆದು ಪಿಂಚಣಿದಾರರಾಗಿ ಅಗಡಿಯ ಆನಂದವನ ಆಶ್ರಮದಲ್ಲಿ ನೆಲೆಸಿದರು. ನಂತರ ಹಾವೇರಿಯಲ್ಲಿ ನೆಲೆಸಿದರು. ಆನಂದವನದಲ್ಲಿದ್ದಾಗ ‘ಸದ್ಬೋಧ ಚಂದ್ರಿಕೆ’ ಎಂಬ ಪತ್ರಿಕೆಯ ಮೂಲಕ ಮತ್ತು ಹಾವೇರಿಯಲ್ಲಿ ‘ಸದ್ಗುರು’ (೧೯೧೯) ಎಂಬ ಪತ್ರಿಕೆಯ ಮೂಲಕ ತಮ್ಮ ಬರೆವಣಿಗೆಯನ್ನು ಪ್ರಕಟಿಸಿದರು.
ನಿಧಾನವಾಗಿ ಗಳಗನಾಥರ ಆದಾಯ ಇಳಿಮುಖವಾಗುತ್ತ ಸಾಲ ಬೆಳೆಯತೊಡಗಿತು. ಸಾಲ ತೀರಿಸುವುದಕ್ಕಾಗಿ ಗಳಗನಾಥರು ಪುಸ್ತಕಗಳನ್ನು ಬರೆದು, ಪುಸ್ತಕಗಳ ಚೀಲಗಳನ್ನು ಹೊತ್ತುಕೊಂಡು ಊರಿಂದೂರಿಗೆ, ಮನೆಯಿಂದ ಮನೆಗೆ, ಆರೋಗ್ಯವನ್ನು ಲೆಕ್ಕಿಸದೆ ತಿರುಗಾಡುತ್ತಿದ್ದರು. ಅವರ ಆರೋಗ್ಯ ಕೆಟ್ಟು ಕ್ಯಾನ್ಸರ್ಗೆ ತುತ್ತಾಗಿ ತಮ್ಮ ೭೪ನೆಯ ವಯಸ್ಸಿನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ೧೯೪೨ರಲ್ಲಿ ತೀರಿಕೊಂಡರು.
ಗಳಗನಾಥರ ಕಾದಂಬರಿಗಳು ೨೨ ಅಥವಾ ೨೪ ಎನ್ನುವುದು ಖಚಿತವಾಗಿಲ್ಲ. ಅವರ ಸಮಗ್ರ ಸಂಪುಟದಲ್ಲಿ ೨೨ ಕಾದಂಬರಿಗಳಿವೆ. ಇಲ್ಲಿ ಕೊಟ್ಟಿರುವ ಪಟ್ಟಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿದೆ. ಸ್ವತಂತ್ರ ಕಾದಂಬರಿಗಳು: ೧.ಪದ್ಮನಯನೆ ಅಥವಾ ಪ್ರಬುದ್ಧ ಪದ್ಮನಯನೆ (ರಮ್ಯಾದ್ಭುತ ಕಾದಂಬರಿ – ೧೮೯೮). ೨. ಕುಮುದಿನಿ ಅಥವಾ ಬಾಲಕ್ಕೆ ಬಡಿದಾಟ. (ಕರ್ನಾಟಕದ ಇತಿಹಾಸಕಕ್ಕೆ ಸಂಬಂಧಪಟ್ಟ ಮೊದಲ ಕಾದಂಬರಿ. ಚಂದ್ರಗಿರಿಯಲ್ಲಿ ಬಾಳಿದ ವಿಜಯನಗರದ ರಾಜಮನೆತನದ ಕೊನೆಗಾಲದ ಚಿತ್ರವೇ ಇದರ ವಸ್ತು – ೧೯೧೩). ೩. ಸತ್ವಸಾರ ಅಥವಾ ಶೌರ್ಯಸಂಜೀವಿನಿ (ರಜಪೂತರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಮೇವಾಡದ ಪ್ರತಾಪಸಿಂಹನ ಕತೆಯೇ ಇದರ ವಸ್ತು. ೪. ಕನ್ನಡಿಗರ ಕರ್ಮಕಥೆ – ೧೯೧೬ (ಇದು ಮರಾಠೀ ‘ವಜ್ರಾಘಾತ’ ಎಂಬ ಕಾದಂಬರಿಯನ್ನು ಆಧರಿಸಿದ್ದೆಂದು ಹೇಳಲಾಗಿದೆ). ೫. ಮಾಧವ ಕರುಣಾವಿಲಾಸ – ೧೯೨೩ (ಇದು ತಮ್ಮ ಹಿರಿಯ ಕೃತಿಯೆಂದು ಅವರೇ ಹೇಳಿಕೊಂಡಿದ್ದಾರೆ. ವಿಜಯನಗರ ರಾಜ್ಯ ಸ್ಥಾಪನೆಯ ವಿಷಯವೇ ಇದರ ವಸ್ತು. ಕನ್ನಡ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡಿದ ಮಹಾಕೃತಿ). ೬. ದುರ್ಗದ ಬಿಚ್ಚುಗತ್ತಿ (೧೯೩೮. ಚಿತ್ರದುರ್ಗದ ನಾಯಕರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಗಳಗನಾಥರ ಐದನೆಯ ಸ್ವತಂತ್ರ ಕಾದಂಬರಿ. ಒಂದನೆಯ ಭಾಗ ಮಾತ್ರ ಅಚ್ಚಾಗಿದೆ). ೭. ಭಗವತೀ ಕಾತ್ಯಾಯಿನಿ. (ಪೌರಾಣಿಕ ಕಾದಂಬರಿ. ‘ಕನ್ನಡಿಗರ ಕರ್ಮಕಥೆ’ ಸ್ವತಂತ್ರವಲ್ಲದಿದ್ದರೆ ಇದು ಗಳಗನಾಥರ ಆರನೆಯ ಸ್ವತಂತ್ರ ಕಾದಂಬರಿ). ಉಳಿದವುಗಳು ಮರಾಠಿಯಿಂದ ಅನುವಾದ. ಅವುಗಳಲ್ಲಿ ಮರಾಠರಿಗೆ ಸಂಬಂಧಿಸಿದ ಕಾದಂಬರಿಗಳು: ೧.ಈಶ್ವರೀ ಸೂತ್ರ- ೧೯೧೩. ೨.ಮರಾಟರ ಅಭ್ಯುದಯ – ೧೯೧೮. ೩.ಕಮಲ ಕುಮಾರಿ- ೧೯೧೦. ೪.ಛತ್ರಪತಿ- ೧೯೧೯. ೫.ಗೃಹಕಲಹ- ೧೯೨೧. ೬.ಶಿವಪ್ರಭುವಿನ ಪುಣ್ಯ- ೧೯೧೮. ೭.ಸ್ವರಾಜ್ಯ ಸುಗಂಧ- ೧೯೩೮. ೮.ಕುರುಕ್ಷೇತ್ರ- ೧೯೧೯. ರಜಪೂತರಿಗೆ ಸಂಬಂಧಿಸಿದ ಕಾದಂಬರಿಗಳು: ೧.ಕ್ಷಾತ್ರತೇಜ- ೧೯೧೪. ೨.ಸತ್ವಸಾರ- ೧೯೧೫ ೩.ತಿಲೋತ್ತಮೆ- ೧೯೧೭. ೪.ಧಾರ್ಮಿಕ ತೇಜ- ೧೯೨೮. ೫.ರಾಣಾ ರಾಜಾಸಿಂಹ- ೧೯೨೮. ಸಂಕೀರ್ಣ ಕಾದಂಬರಿಗಳು: ೧.ರಾಣೀ ಮೃಣಾಲಿನಿ- ೧೯೧೧ (ಇದು ಬಂಕಿಮಚಂದ್ರರ ಬಂಗಾಳಿ ಕೃತಿಯ ಮರಾಠಿ ಅನುವಾದದ ಅನುವಾದ). ೨.ವೈಭವ- ೧೯೧೨. ೩.ಧರ್ಮರಹಸ್ಯ- ೧೯೧೪. ೪.ಸಂಸಾರಸುಖ- ೧೯೨೬