ಮಸೀದಿಯ ಬಗ್ಗೆ ಎಎಸ್ಐ ಶೋಧ ನಡೆಸುವಾಗ ಕಟ್ಟಡದ ಒಳಹೊರಗೆ ತುಂಬಿದ ಕಸಕಡ್ಡಿ ಮತ್ತು ಅವಶೇಷಗಳನ್ನು ತೆಗೆಯಬೇಕಾಯಿತು. ತೆಗೆದಾಗ ಹೂತುಹೋದ ಕಟ್ಟಡದ ವಾಸ್ತುಶಿಲ್ಪದ ವಿವರಗಳು ಮತ್ತು ಹೊಸಕಟ್ಟಡದ ಅವಶೇಷಗಳು ಕಂಡುಬAದವು. ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವಾಗ ಬಹಳಷ್ಟು ಮಾನವನಿರ್ಮಿತ ವಸ್ತುಗಳು ಕಂಡುಬಂದವು. ಸೆಂಟ್ರಲ್ ಹಾಲ್ನ ಮುಚ್ಚಿದ ದ್ವಾರದ ಎದುರು ಒಂದು ಶಿವಲಿಂಗದ ಅಲಂಕೃತ ಯೋನಿಪಟ್ಟವು ಕಂಡುಬಂತು. ಅದಲ್ಲದೆ ಹನುಮಂತ, ಮನುಷ್ಯ ಮತ್ತು ಪ್ರಾಣಿಗಳ ಟರ್ರಾಕೋಟಾ ಮೂರ್ತಿಗಳು, ಇತರ ವಸ್ತುಗಳು ಕಟ್ಟಡದ ಅವಶೇಷಗಳ ನಡುವೆ ಸಿಕ್ಕಿದವು. ಮೊಣಕಾಲೂರಿದ ಕಲ್ಲಿನ ಆನೆ ಅವಶೇಷಗಳ ನಡುವೆ ಸಿಕ್ಕಿದ ಒಂದು ಮುಖ್ಯ ವಸ್ತುವಾಗಿದೆ.
ಕಳೆದ ಸಂಚಿಕೆಯಿಂದ…
ಹಳೆಯ ಶಿಲಾಮಯ ಕಟ್ಟಡಗಳ ಬೇರೆಬೇರೆ ಭಾಗಗಳಲ್ಲಿ ವಿಭಿನ್ನ ಸಂಕೇತ, ಗುರುತು ಅಥವಾ ಸಣ್ಣ ಬರಹಗಳಿರುತ್ತವೆ. ಅವು ವಿಶೇಷ ವೈಯಕ್ತಿಕ ಗುರುತುಗಳಾಗಿದ್ದು, ಕಟ್ಟಡದ ಮಾಲೀಕ ಅಥವಾ ನಿರ್ಮಾಣದ ಕೆಲಸ ಮಾಡಿದ ಮುಖ್ಯಶಿಲ್ಪಿಯನ್ನು ಗುರುತಿಸಲು ಸಹಕಾರಿಯಾಗುತ್ತವೆ. ಇವುಗಳನ್ನು ಕಲ್ಲುಕುಟ್ಟಿಗನ (ಕಲ್ಲುಶಿಲ್ಪಿಯ) ಗುರುತು ಎನ್ನುತ್ತಾರೆ. ಈ ಗುರುತುಗಳ ನೈಜ ಉದ್ದೇಶದ ಬಗ್ಗೆ ವಿದ್ವಾಂಸರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಪ್ರಾಚೀನ ಕಟ್ಟಡ(ಶಿಲಾನಿರ್ಮಾಣ)ಗಳಲ್ಲಿ ಈ ಕೆತ್ತನೆಯ ಗುರುತು, ಅಕ್ಷರ ಅಥವಾ ಕೆತ್ತಿದ (ಅಲಂಕೃತ) ಕಲ್ಲಿನ ಚಪ್ಪಡಿಗಳು ಇರುತ್ತಿದ್ದವು.
ಕಲ್ಲಿನ ನಿರ್ಮಾಣದ ಈ ಗುರುತುಗಳಲ್ಲಿ ಮೂರು ವಿಭಾಗಗಳನ್ನು ಗುರುತಿಸಲಾಗುತ್ತದೆ.
೧) ಬ್ಯಾಂಕರ್ ಗುರುತು: ಇದನ್ನು ಶಿಲ್ಪಿಯ ಹಸ್ತಾಕ್ಷರ ಎಂದು ಕೂಡ ಗುರುತಿಸಲಾಗುತ್ತದೆ. ಅದು ಕಲ್ಲಿನ ಬ್ಲಾಕ್ ತಯಾರಿಸಿದ ಶಿಲ್ಪಿಯ ಬಗ್ಗೆ ಹೇಳುತ್ತದೆ; ಇದು ಸಾಮಾನ್ಯವಾಗಿ ಹಣ ಕೊಟ್ಟವನಿಗಾಗಿ ಮಾಡಿದ್ದಾಗಿರುತ್ತದೆ.
೨) ಜೋಡಣೆಯ (ಅಸೆಂಬ್ಲಿ) ಗುರುತು: ಇದು ಶಿಲೆಯ ಮುಖ್ಯ ಕೆತ್ತನೆಗಳನ್ನು ಸರಿಯಾಗಿ ಜೋಡಿಸುವ ಬಗ್ಗೆ ಮಾಡಿದ ಗುರುತಾಗಿರುತ್ತದೆ.
೩) ಕ್ವಾರಿ (ಕೋರೆ) ಕಲ್ಲಿನ ಗುರುತು: ಇದು ನಿರ್ಮಾಣಕ್ಕೆ ಬಳಸಿದ ಕಲ್ಲು ಎಲ್ಲಿಂದ ಬಂದುದೆಂದು ತಿಳಿಯಲು ಮಾಡಿದ ಗುರುತಾಗಿರುತ್ತದೆ. ಕೆಲವು ಸಲ ಕಲ್ಲಿನ ಗುಣಮಟ್ಟ ತಿಳಿಯಲು ಕೂಡ ಇಂತಹ ಗುರುತುಗಳನ್ನು ಮಾಡಲಾಗುತ್ತದೆ.
ಭಾರತದಲ್ಲಿ ಲೌಕಿಕ, ಧಾರ್ಮಿಕ ಎರಡೂ ಬಗೆಯ ಕಟ್ಟಡಗಳಲ್ಲಿ ಇಂತಹ ಶಿಲಾಶಿಲ್ಪಿಯ ಗುರುತು ಸಾಮಾನ್ಯ. ಮಧ್ಯಯುಗದ ವೇಳೆ ಎಲ್ಲ ರೀತಿಯ ಕಟ್ಟಡಗಳಲ್ಲಿ ಈ ಶಿಲ್ಪಿಯ ಗುರುತುಗಳು ಇರುತ್ತಿದ್ದವು. ಶಿಲ್ಪಿಯ ಗುರುತುಗಳಲ್ಲದೆ ಕೆಲವು ನಿರ್ದಿಷ್ಟ (specific) ಸಂಕೇತಗಳನ್ನು ಕೂಡ ಬಳಸುವುದು ಸಾಮಾನ್ಯವಾಗಿತ್ತು. ವಿವಿಧ ಕಾಲಘಟ್ಟಗಳ ಎಲ್ಲ ಬಗೆಯ ಕಟ್ಟಡಗಳಲ್ಲಿ ಅವು ಕಾಣಿಸುತ್ತವೆ.
ಪ್ರಸ್ತುತ ಶಿಲಾಶಿಲ್ಪಿಯ ಗುರುತಿನ ಉದ್ದೇಶವನ್ನು ತಿಳಿಯುವಾಗ ಒಂದು ಕಟ್ಟಡ (ನಿರ್ಮಾಣ) ಕಟ್ಟಿಸಲು ಅಂತಹ ಕಲ್ಲಿನ ಬ್ಲಾಕ್ ತಯಾರಿಸುತ್ತಿದ್ದ ಪ್ರಕ್ರಿಯೆಯನ್ನು ತಿಳಿಯುವುದು ಅವಶ್ಯ. ರಚನೆಗೆ ಬೇಕಾದ ವಾಸ್ತುಶಿಲ್ಪದ ಭಾಗವನ್ನು ನಿರ್ಮಿಸುವಾಗ ಈ ಮಹತ್ತ÷್ವದ ಹೆಜ್ಜೆಗಳು ಇರುತ್ತಿದ್ದವು. ಅಂದರೆ ಕೋರೆಯಲ್ಲಿ ನಿರ್ದಿಷ್ಟ ಗಾತ್ರದಲ್ಲಿ ಕಲ್ಲನ್ನು ಕತ್ತರಿಸುವುದು, ಅದನ್ನು ನಯ ಮಾಡುವುದು (ಕೀಸುಳಿ ಹಾಕುವುದು), ಚೆನ್ನಾಗಿ ಅಲಂಕರಿಸುವುದು (ಡ್ರೆಸ್ ಮಾಡುವುದು) ಮತ್ತು ಅದನ್ನು ನಿರ್ದಿಷ್ಟ ಜಾಗದಲ್ಲಿ ಬಳಸುವುದು (ಕೂರಿಸುವುದು).
ಗುರುತನ್ನು ತಿದ್ದಿದರು
ನಿರ್ದಿಷ್ಟ ಕೋರೆಯನ್ನು ಗುರುತಿಸುವ ಸಲುವಾಗಿ ಕಲ್ಲುಕೋರೆಯ ಜಾಗದಲ್ಲೇ ಈ ಸಂಕೇತಗಳನ್ನು ಮಾಡಿದರೆ ಒಂದು ಅಪಾಯವಿದೆ. ಅದಕ್ಕೆ ಕೀಸುಳಿ ಹಾಕುವಾಗ ಅಥವಾ ಡ್ರೆಸಿಂಗ್ ಮಾಡುವಾಗ ಅದು ಬೇರೆಲ್ಲೋ ಹೋಗಿಬಿಡಬಹುದು. ಆದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಕಟ್ಟಡ ನಿರ್ಮಾಣದ ಜಾಗದಲ್ಲೇ ಅಂತಹ ಗುರುತುಗಳನ್ನು ಮಾಡುತ್ತಿದ್ದರು. ಏಕೆಂದರೆ ಉದ್ದೇಶಕ್ಕೆ ಅನುಗುಣವಾಗಿ ಅಂತಿಮ ನಿರ್ಮಾಣ ಅಲ್ಲಿ ನಡೆಯುತ್ತದೆ. ಕಾಶಿಯ ಗ್ಯಾನವಾಪಿ ಮಸೀದಿಯಲ್ಲಿ ಕೆಲವು ಸಂದರ್ಭಗಳಲ್ಲಿ ಹಿಂದೆ ಇದ್ದ ಗುರುತನ್ನು ಅಳಿಸಿಹಾಕಿ ಹೊಸಗುರುತು ಹಾಕಿದ್ದು ಕಾಣಿಸುತ್ತದೆ. ಈ ಶಿಲ್ಪಿಯ ಗುರುತಿನ ಬಗ್ಗೆ ಇನ್ನೊಂದು ವಿವರಣೆ ಕೂಡ ಇದೆ; ಸಂಬಳ ಕೊಡುವ ಸಲುವಾಗಿ ನಿರ್ದಿಷ್ಟ ಕೆಲಸವನ್ನು ಯಾರು, ಯಾವ ಗುಂಪು ಮಾಡಿದ್ದೆಂದು ತಿಳಿಯಲು ಕೂಡ ಆ ಗುರುತುಗಳನ್ನು ಬಳಸಿಕೊಳ್ಳುತ್ತಿದ್ದರು.
ಗ್ಯಾನವಾಪಿಯಲ್ಲಿ ಕಂಡದ್ದು
ವಾರಾಣಸಿಯ ನಿವೇಶನ ಸಂಖ್ಯೆ ೯೧೩೦, ಅಂದರೆ ಜ್ಞಾನವಾಪಿ ಮಸೀದಿ ನಿವೇಶನದ ಗೋಡೆಗಳಲ್ಲಿ ಪ್ರಾಚ್ಯವಸ್ತು ಸಂಶೋಧನ ಸಂಸ್ಥೆಗೆ (ಎಎಸ್ಐ) ಬೇರೆಬೇರೆ ರೀತಿಯ ಸಂಕೇತಗಳು ಕಂಡುಬಂದವು. ಅವುಗಳಲ್ಲಿ ಏಳು ವಿಭಿನ್ನ ರೀತಿಯ ಗುರುತುಗಳಿವೆ. ಅದರಲ್ಲಿ ತ್ರಿಶೂಲ ಮತ್ತು ಸ್ವಸ್ತಿಕ ಗುರುತುಗಳು ಗರಿಷ್ಠ ಸಂಖ್ಯೆಯಲ್ಲಿದ್ದವು. ಅವುಗಳಲ್ಲಿ ಮೂರು-ನಾಲ್ಕು ಉಪವರ್ಗಗಳಿವೆ. ಸ್ವಸ್ತಿಕ ಹಲವು ಬಗೆಯವು ಕಂಡುಬಂದವು. ಈ ಗುರುತುಗಳಲ್ಲಿ ಹೆಚ್ಚಿನವು ಮಸೀದಿಯ ಪಶ್ಚಿಮಗೋಡೆಯಲ್ಲಿವೆ. ಹಿಂದಿನ (ದೇವಾಲಯ)ಕಟ್ಟಡದಲ್ಲಿದ್ದ ಅವುಗಳನ್ನು ಹೆಚ್ಚಾಗಿ ಹಾಳುಮಾಡಿಲ್ಲ. ಅವು ಈಗಿನ ಕಟ್ಟಡದ ಭಾಗವಾಗಿ ಉಳಿದುಕೊಂಡಿವೆ. ಈಗಿನ ಕಟ್ಟಡದ ಇತರ ಕಡೆಗಳಲ್ಲಿ – ಮಧ್ಯದ (ಸೆಂಟ್ರಲ್) ಹಾಲ್, ಉತ್ತರದ ಹಾಲ್, ದಕ್ಷಿಣದ ಹಾಲ್, ಎಲ್ಲ ಕಾರಿಡಾರ್ಗಳು ಮತ್ತು ನೆಲಮಾಳಿಗೆ(ಸೆಲ್ಲಾರ್)ಯಲ್ಲಿ ಕೂಡ – ಈ ಗುರುತುಗಳು ಕಂಡುಬಂದಿವೆ. ಪಶ್ಚಿಮಗೋಡೆಯ ಹೊರಮೈಯಲ್ಲಿ ಸೂಕ್ಷö್ಮವಾಗಿ ಗಮನಿಸಿದಾಗ, ಗೋಡೆಯ ಬೇರೆಬೇರೆ ಭಾಗಗಳಲ್ಲಿ ಅವು ರಾಶಿರಾಶಿಯಾಗಿ ಇರುವುದು ಕಾಣಿಸಿತು; ಅವುಗಳ ಸ್ವರೂಪ ಕೂಡ ಬೇರೆಬೇರೆಯಾಗಿದೆ ಎಂಬುದು ಗಮನಕ್ಕೆ ಬಂತು. ಅದರಿಂದ ತಿಳಿಯುವ ಅಂಶವೆಂದರೆ, ಮಸೀದಿಯ ಪಶ್ಚಿಮಗೋಡೆಗೆ ಬಳಸಿದ ಹಿಂದೂ ದೇವಾಲಯದ ವಾಸ್ತುಶಿಲ್ಪದ ಭಾಗಗಳನ್ನು ವಿಭಿನ್ನ ಗುಂಪಿನ ಶಿಲ್ಪಿಗಳು ನಿರ್ಮಿಸಿರಬಹುದು.
ವಿಭಿನ್ನ ಗಾತ್ರದ ತ್ರಿಶೂಲ
ಪಶ್ಚಿಮಗೋಡೆಯ ಉತ್ತರಭಾಗ ಮತ್ತು ವಾಯವ್ಯಭಾಗದಲ್ಲಿ ಬೇರೆಬೇರೆ ಗಾತ್ರದ ತ್ರಿಶೂಲಗಳಿವೆ; ಅವು ನಾಲ್ಕರಿಂದ ೧೫ ಸೆಂ.ಮೀ. ನಷ್ಟು ದೊಡ್ಡದಿವೆ. ಅದಲ್ಲದೆ ಗೋಡೆಯಲ್ಲಿ ತ್ರಿಶೂಲಗಳನ್ನು ಹೊಂದಿಸಿದ ರೀತಿ ಕೂಡ ವಿಭಿನ್ನವಾಗಿದೆ. ಕೆಲವು ಗುರುತುಗಳು ಉತ್ತರದಿಂದ ದಕ್ಷಿಣದ ಕಡೆಗಿವೆ; ಮತ್ತೆ ಕೆಲವು ದಕ್ಷಿಣದಿಂದ ಉತ್ತರಕ್ಕಿವೆ. ಕೆಲವು ತ್ರಿಶೂಲಗಳನ್ನು ಮೇಲ್ಮುಖವಾಗಿ ಕೆತ್ತಲಾಗಿದೆ. ಮತ್ತೆ ಕೆಲವನ್ನು ಕೆಳಮುಖವಾಗಿ ಕೆತ್ತಲಾಗಿದೆ. ಉತ್ತರಕ್ಕೆ ಅಭಿಮುಖವಾಗಿರುವ ಪಶ್ಚಿಮ ಚೇಂಬರ್ನ (ಕೊಠಡಿ) ಹೊರಭಾಗದ ಗೋಡೆಯಲ್ಲಿ ವಿವಿಧ ರೀತಿಯ ಸಂಕೇತಗಳಿವೆ. ಇಲ್ಲಿ ಅಲಂಕಾರಪಟ್ಟಿಯ ದಾರದ ಗಂಟಿನಂತಹ ರಚನೆಗಳಿದ್ದು, ಎರಡು ಗಂಟು (Knot) ಮತ್ತು ಒಂದು ಗಂಟಿನ ರಚನೆಗಳಿವೆ. ಪಂದಸದ ಮೇಲೆ ಒಂದು ತುಂಬ ಚಿಕ್ಕ ತ್ರಿಶೂಲವನ್ನು ಕೆತ್ತಲಾಗಿದೆ.
ಪಶ್ಚಿಮ ಚೇಂಬರ್ನ ಪಶ್ಚಿಮಾಭಿಮುಖ ಗೋಡೆಯಲ್ಲಿ (ಮಧ್ಯ ಚೇಂಬರ್ನ ಮುಖ್ಯ ಪ್ರವೇಶದ ಉತ್ತರ ಭಾಗ) ವಿಭಿನ್ನ ಗಾತ್ರದ, ವಿಭಿನ್ನ ರೀತಿ ಮತ್ತು ವಿಭಿನ್ನ ಆಕಾರದ ತ್ರಿಶೂಲಗಳಿವೆ. ತ್ರಿಶೂಲಕ್ಕೆ ಸಂಬಂಧಿಸಿ ಅತ್ಯಂತ ಮುಖ್ಯ ಅಂಶವೆಂದರೆ ಅವುಗಳ ಗಾತ್ರ. ಪಶ್ಚಿಮಗೋಡೆಯ ಇತರ ಭಾಗದ ತ್ರಿಶೂಲಗಳಿಗೆ ಹೋಲಿಸಿದರೆ ಇವು (ಪಶ್ಚಿಮ ಚೇಂಬರ್ನ ಪಶ್ಚಿಮಾಭಿಮುಖ ಗೋಡೆಯಲ್ಲಿ ಇರುವಂಥವು) ದೊಡ್ಡದಾಗಿವೆ. ಪಶ್ಚಿಮಾಭಿಮುಖ ಗೋಡೆಯ ಇನ್ನೊಂದು ಬದಿಯಲ್ಲಿ (ಮಧ್ಯ ಚೇಂಬರ್ಗೆ ಹೋಗುವ ಮುಖ್ಯದ್ವಾರದ ದಕ್ಷಿಣ ಭಾಗ) ಎರಡು ರೀತಿಯ ಗುರುತುಗಳಿವೆ – ಎರಡು ಗಂಟು ಮತ್ತು ಸ್ವಸ್ತಿಕ. ಅದರಲ್ಲಿ ಎರಡು ಗಂಟೇ ಜಾಸ್ತಿ.
ಪಶ್ಚಿಮ ಚೇಂಬರ್ನ ಉತ್ತರ ಮುಖದಲ್ಲಿ (face) ಸ್ವಸ್ತಿಕ ಗುರುತು ಮಾತ್ರ ಇದೆ. ಅದರ ಕಮಾನುದ್ವಾರದ ದಕ್ಷಿಣ ಮುಖದಲ್ಲಿ ಮತ್ತು ಪಶ್ಚಿಮಗೋಡೆಯ ನೈಋತ್ಯಭಾಗದ ಹೊರಭಾಗದ ಗೋಡೆಯಲ್ಲಿ ವಿವಿಧ ಗಾತ್ರದ ಸ್ವಸ್ತಿಕ ಮತ್ತು ಎರಡು ಗಂಟು (ಡಬಲ್ ನಾಟ್) ಇವೆ. ಪಶ್ಚಿಮಾಭಿಮುಖವಾದ ದಕ್ಷಿಣ ಹಾಲ್ನ ಪಶ್ಚಿಮ ದ್ವಾರದ ಕಲ್ಲಿನ ಅಂಚು (veneering) ಎರಡು ಬಗೆಯ ಗುರುತುಗಳನ್ನು ಹೊಂದಿದೆ – ಸ್ವಸ್ತಿಕ ಮತ್ತು ತ್ರಿಶೂಲ. ಪಶ್ಚಿಮಗೋಡೆಯ ಹೊರಭಾಗದ ಉಳಿದಭಾಗದಲ್ಲಿ ಬಹುತೇಕ ತ್ರಿಶೂಲ ಕೂಡ ಇವೆ.
ಹಲವೆಡೆ ಸ್ವಸ್ತಿಕ
ಮಧ್ಯಹಾಲ್ನ ಒಳಭಾಗದಲ್ಲಿ ಕೂಡ ಅದೇ ರೀತಿಯ ಗುರುತುಗಳಿವೆ. ಆದರೆ ಗುರುತಿಸಲು ಕಷ್ಟವಾಗಿದೆ. ಏಕೆಂದರೆ ಗೋಡೆಯ ಮೇಲೆ ಸಿಂಥೆಟಿಕ್ ಬಣ್ಣದ ದಪ್ಪದ ಹೊದಿಕೆ (ಪದರ) ಇದೆ. ಕಟ್ಟಡದ ಕಾರಿಡರ್ ಮತ್ತು ಸೆಲ್ಲಾರ್ಗಳಲ್ಲಿ ಕೂಡ ಗುರುತುಗಳಿವೆ; ಆದರೆ ಸಂಖ್ಯೆ ಕಡಮೆ. ಈಗಿನ ಕಟ್ಟಡದ (ಮಸೀದಿ) ಮೇಲೆ ಕಾಣುವ ಮೇಲೆ ಹೇಳಿದ ಗುರುತುಗಳಲ್ಲಿ ಸ್ವಸ್ತಿಕ ಮತ್ತು ತ್ರಿಶೂಲದ ಗುರುತುಗಳು ಗರಿಷ್ಠ ಸಂಖ್ಯೆಯಲ್ಲಿವೆ. ಅವುಗಳನ್ನು ಶುಭಸೂಚಕವೆಂದು ತಿಳಿಯಲಾಗುತ್ತದೆ.
ಕಂಡುಬರುವ ಅತ್ಯಂತ ಸಾಮಾನ್ಯ ಮತ್ತು ಅತ್ಯಂತ ಪ್ರಧಾನ ಗುರುತು ಸ್ವಸ್ತಿಕ ಎನ್ನಬಹುದು. ಅದು ಜಗತ್ತಿನ ತುಂಬ ಪ್ರಾಚೀನ ಸಂಕೇತಗಳಲ್ಲಿ ಒಂದಾಗಿದ್ದು, ಎಲ್ಲ ಪ್ರಾಚೀನ ನಾಗರಿಕತೆಗಳಲ್ಲಿ ಅದನ್ನು ಬಳಸಲಾಗಿದೆ. ಅಭಿವೃದ್ಧಿ ಅಥವಾ ವಿಸ್ತರಣೆಯನ್ನು ಸಂಕೇತಿಸುತ್ತದೆ. ಭಾರತದಲ್ಲಿ ಹಿಂದುಗಳು ಅದನ್ನು ಅತ್ಯಂತ ಶುಭಸೂಚಕವೆಂದು ತಿಳಿಯುತ್ತಾರೆ; ಧಾರ್ಮಿಕ ಸಂದರ್ಭಗಳಲ್ಲಿ ಕೂಡ ಅದನ್ನು ಬಳಸಲಾಗುತ್ತದೆ.
ಗ್ಯಾನವಾಪಿ ಕಟ್ಟಡದಲ್ಲಿ ಕಂಡುಬರುವ ಇನ್ನೊಂದು ಮುಖ್ಯಗುರುತಾದ ತ್ರಿಶೂಲವು ಶಿವನ ಆಯುಧವಾಗಿದೆ. ಹಿಂದುಗಳು, ಅದರಲ್ಲೂ ಶೈವರು ಮತ್ತು ಶಾಕ್ತರು ಇದನ್ನು ಪ್ರಧಾನ ಸಂಕೇತವಾಗಿ ಬಳಸುತ್ತಾರೆ. ಕಟ್ಟಡದಲ್ಲಿ ಕಂಡುಬರುವ ಗುರುತುಗಳ ಬಗ್ಗೆ ಸವಿವರ ಅಧ್ಯಯನ ನಡೆಸಿ ದಾಖಲಿಸಿದೆವು. (ಮಸೀದಿಯ) ಪಶ್ಚಿಮಗೋಡೆಯಲ್ಲಿ ಇವು ಬಹಳಷ್ಟು ಇರುವುದನ್ನು ಎಚ್ಚರದಿಂದ ದಾಖಲಿಸಲಾಯಿತು ಎಂದು ಎಎಸ್ಐ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಹೇಳಿದೆ.
ಇದೇ ವೇಳೆ ಎಎಸ್ಐ ಈಗಿನ ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿ ತನ್ನ ಅಭಿಪ್ರಾಯವನ್ನು ನೀಡಿದೆ. “ಈಗಿನ (ಮಸೀದಿ) ಕಟ್ಟಡವನ್ನು ಪಶ್ಚಿಮಗೋಡೆಯ ಪೂರ್ವಮುಖಕ್ಕೆ ಎದುರಾಗಿ ಕಟ್ಟಿಸಲಾಯಿತು. ಇದು ಒಂದೇ ಹಂತದಲ್ಲಿ ನಿರ್ಮಿಸಿದ್ದಲ್ಲ. ಇಲ್ಲಿ ಕಂಡುಬAದ ಶಾಸನಗಳ ಪ್ರಕಾರ ಮತಾಂಧ ಮೊಘಲ್ ದೊರೆ ಔರಂಗಬೇಬ ೧೬೭೬-೭೭ರಲ್ಲಿ ಗ್ಯಾನವಾಪಿ ಮಸೀದಿಯನ್ನು ಕಟ್ಟಿಸಿದ. ಎರಡನೇ ಹಂತದಲ್ಲಿ ಕಟ್ಟಡದ ದುರಸ್ತಿಯನ್ನು ಕೈಗೊಳ್ಳಲಾಯಿತು. ಈ ಕಾರ್ಯ ೧೭೯೨-೯೩ರಲ್ಲಿ ನಡೆಯಿತು. ಎರಡನೇ ಹಂತದಲ್ಲಿ ನಿರ್ಮಿಸಿದ ಸಹನ್(ಅಂಗಳ)ಗಾಗಿ ಕೆಳಗೆ ಸೆಲ್ಲಾರ್ಗಳ ರೂಪದಲ್ಲಿ ತಳಪಾಯವನ್ನು ಒದಗಿಸಲಾಯಿತು. (ಸೆಲ್ಲಾರ್ ಎನ್೪, ಎನ್೫). ದಕ್ಷಿಣ ಭಾಗದಲ್ಲಿ ಕೂಡ ಸೆಲ್ಲಾರ್ಗಳು ಅದೇ ರೀತಿಯಲ್ಲಿವೆ” ಎಂದು ಎಎಸ್ಐ ನಡೆಸಿದ ಜಿಪಿಆರ್ ಸರ್ವೆ ಹೇಳಿದೆ.
ಪ್ಲಾಟ್ಫಾರ್ಮ್ ವಿಸ್ತರಣೆ
ಪೂರ್ವಭಾಗದಲ್ಲಿ ತೆರೆದ ಪ್ಲಾಟ್ಫಾರ್ಮ್ನ ವಿಸ್ತರಣೆಯನ್ನು ಮಾಡಲಾಯಿತು. ಅದು ಕೂಡ ಸುದೀರ್ಘ ಕಾಲದಲ್ಲಿ ಹಂತಹಂತವಾಗಿ ನಿರ್ಮಾಣವಾದದ್ದು. ಉತ್ತರ-ದಕ್ಷಿಣವಾಗಿ ನಿರ್ಮಿಸಿದ ಸೆಲ್ಲಾರ್ ಎನ್೩ ಮತ್ತು ಎಸ್೩ಗಳು ಎನ್೪ ಮತ್ತು ಎನ್೫ಕ್ಕೆ ಸಮಕಾಲೀನ ರಚನೆಗಳಾಗಿವೆ. ಸೆಲ್ಲಾರ್ಗಳು ಪೂರ್ವದಲ್ಲಿ ಮತ್ತು ನೆಲಮಟ್ಟದಲ್ಲಿ ತೆರೆದುಕೊಂಡಿವೆ. ಮುಂದೆ ಇನ್ನೊಂದು ಹಂತದಲ್ಲಿ ತೆರೆದ ಪ್ಲಾಟ್ಫಾರ್ಮನ್ನು ಮತ್ತಷ್ಟು ಪೂರ್ವಕ್ಕೆ ವಿಸ್ತರಿಸಲಾಯಿತು (ನಮಾಜ್ಗೆ ಬಂದವರಿಗೆ ಸ್ಥಳಕ್ಕಾಗಿ). ಅದಕ್ಕಾಗಿ ಸೆಲ್ಲಾರ್ ಎನ್೧, ಎನ್೩, ಎಸ್೧ ಮತ್ತು ಎಸ್೩ಗಳ ನಡುವಣ ತೆರೆದ ಜಾಗವನ್ನು ಜೋಡಿಸಿದರು. ಅದರಿಂದಾಗಿ ಎನ್೨ ಮತ್ತು ಎಸ್೨ ಎನ್ನುವ ಮಧ್ಯದ ಸೆಲ್ಲಾರ್ಗಳು ಅಸ್ತಿತ್ವಕ್ಕೆ ಬಂದವು. ಅವುಗಳ ಸೀಲಿಂಗ್ಗೆ ಆಧಾರವಾಗಿ ಕಂಬಗಳನ್ನು ನಿರ್ಮಿಸಲಾಯಿತು.
ಗೋರಿಗಳು
ಎಎಸ್ಐ ಸರ್ವೆಯ ವೇಳೆ ಬೇಲಿಯೊಳಗಿನ ಜಾಗದಲ್ಲಿ ಗೋರಿಗಳ ಎರಡು ಗುಂಪುಗಳು ಕಂಡುಬಂದವು. ಮೊದಲ ಗುಂಪಿನಲ್ಲಿ ಪಶ್ಚಿಮ ಚೇಂಬರ್ನ ಎರಡು ಗೋರಿಗಳಿವೆ. ಎರಡನೇ ಗುಂಪಿನಲ್ಲಿ ಉತ್ತರಭಾಗದಲ್ಲಿರುವ ಅಂಗಡಿ ೨-೩ರ ನಡುವಣ ಮೂರು ಗೋರಿಗಳು ಸೇರಿವೆ. ಪಶ್ಚಿಮ ಚೇಂಬರ್ನ ಗೋರಿಗಳು ಮಧ್ಯದ ಚೇಂಬರ್ನ ಮುಚ್ಚಿದ ಬಾಗಿಲಿನ ಎದುರುಗಡೆ ಇವೆ. ಎರಡು ಗೋರಿಗಳು ಉತ್ತರ-ದಕ್ಷಿಣವಾಗಿ ರಚನೆಗೊಂಡಿದ್ದು, ಪರಸ್ಪರ ತಾಗಿಕೊಂಡಿವೆ. ಎರಡೂ ಗೋರಿಗಳಿಗೆ ಸಮಾನವಾದ ಕಲ್ಲಿನ ಪ್ಲಾಟ್ಫಾರ್ಮ್ ಇದೆ. ಅದರಲ್ಲಿ ಸಿಮೆಂಟಿನಿಂದ ದುರಸ್ತಿ ಮಾಡಿದ್ದು ಕಾಣಿಸುತ್ತದೆ. ಅವೆರಡನ್ನೂ ಕಲ್ಲಿನಿಂದ ಕಟ್ಟಿಸಲಾಗಿದೆ. ಮುಚ್ಚಿದ ಬಾಗಿಲಿನ ಸಮೀಪವಿರುವ ಮೊದಲ ಗೋರಿಯ ಕಲ್ಲು ಏಕಶಿಲೆಯಾಗಿದ್ದು, ಅದರಲ್ಲೊಂದು ಬಿರುಕು ಕಾಣಿಸುತ್ತದೆ. ಮೇಲಿನ ಕಲ್ಲಿನಲ್ಲಿ ಮೂರು ಸಣ್ಣ ಮೋಲ್ಡಿಂಗ್ಗಳಿವೆ. ಮೇಲಿನ ಚಪ್ಪಟೆ ಮೇಲ್ಮೈಯಲ್ಲಿ ಆಯತಾಕಾರದ ಸ್ವಲ್ಪ ಆಳದ ಗೆರೆ ಇದೆ.
ಎರಡನೇ ಗೋರಿ ಮೊದಲಿನದರ ಪಶ್ಚಿಮದಲ್ಲಿದೆ. ಅದರ ಸ್ವಲ್ಪ ಭಾಗ ಮೇಲಕ್ಕೆ ಉಬ್ಬಿದಂತಿದೆ. ಹಾಗೆ ಎತ್ತರಗೊಳಿಸುವ ಆಧುನಿಕ ಇಟ್ಟಿಗೆ ಮತ್ತು ಸಿಮೆಂಟ್ ಬಳಸಲಾಗಿವೆ. ಒಂದು ಸಣ್ಣ ವೇದಿಕೆಯ (ಪ್ಲಾಟ್ಫಾರ್ಮ್) ಮೇಲೆ ಮೂರು ಗೋರಿಗಳಿವೆ; ಇವು ಇಂದಿನ (ಮಸೀದಿ) ಕಟ್ಟಡದ ಉತ್ತರಗೋಡೆಗೆ ಎದುರಾಗಿವೆ. ಈ ಜಾಗದ ಪಶ್ಚಿಮ ಅಂಚಿನಲ್ಲಿ ಅಂಗಡಿ (ಶಾಪ್)-೩ ಇದೆ; ಮತ್ತು ಪೂರ್ವದಲ್ಲಿ ಶಾಪ್-೨ ಇದೆ. ಶಾಪ್-೨ರ ಬಳಿ ಇರುವ ಎರಡು ಗೋರಿಗಳು ಪರಸ್ಪರ ಸಮೀಪ ಇವೆ. ಮೂರನೆಯದು ಪಶ್ಚಿಮದಲ್ಲಿ ಶಾಪ್-೧ರ ಹತ್ತಿರ ಇದೆ. ಗೋರಿಗಳಿರುವ ವೇದಿಕೆಗೆ ಉತ್ತರಮುಖದಲ್ಲಿ ಕಲ್ಲಿನ ಅಂಚು ಇದೆ. ಪೂರ್ವಭಾಗದ ಎರಡು ಗೋರಿಗಳನ್ನು (ಮೇಲ್ಭಾಗದಲ್ಲಿ) ಲಖೌನ್ ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ. ಅವುಗಳಲ್ಲಿ ಒಂದು ಉತ್ತರಭಾಗದ ಕೊನೆಯಲ್ಲಿ ಒಡೆದಿದೆ.
ಪಶ್ಚಿಮಗೋಡೆ ಬದಲಾವಣೆ
ಹಿಂದಿನ (ದೇವಾಲಯ) ಕಟ್ಟಡವನ್ನು ನಾಶ ಮಾಡಿದ ಮೇಲೆ ಮರುಬಳಕೆಗೆ ಮುನ್ನ ಪಶ್ಚಿಮಗೋಡೆಯ ಕೆಲವು ಭಾಗಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಲಾಯಿತು. ಈಗ ಮುಚ್ಚಿರುವ ಉತ್ತರ ಮತ್ತು ದಕ್ಷಿಣದ ಹಾಲ್ಗಳ ದ್ವಾರಗಳ ಮೇಲಿನ ಗೋಡೆಯ ಭಾಗಗಳು ಮತ್ತು ಬೇರೆ ಕಡೆ ಮೋಲ್ಡಿಂಗ್ ಮೇಲಿನ ಭಾಗವನ್ನು ಇಟ್ಟಿಗೆ ಮತ್ತು ಸುಣ್ಣದ ಗಾರೆ ಬಳಸಿ ಬದಲಿಸಲಾಗಿದೆ. ಇಟ್ಟಿಗೆಯಿಂದ ಸಿದ್ಧಪಡಿಸಿದ ಭಾಗವನ್ನು ಅನಂತರ ಸುಣ್ಣದಿಂದ ಪ್ಲಾಸ್ಟರ್ ಮಾಡಲಾಗಿದೆ. ಗೋಡೆಯ ಮೇಲ್ಭಾಗವನ್ನು ಮರ್ಲನ್ಸ್ (ಕೋಟೆ ಭಾಗದ ತುಂಡು)ಗಳಿಂದ ಆವರಿಸಲಾಗಿದೆ. ಇಟ್ಟಿಗೆ ಮತ್ತು ಸುಣ್ಣದ ಗಾರೆ (ಮಾರ್ಟರ್) ಬಳಸಿ ತಯಾರಿಸಲಾದ ಈ ತುಂಡುಗಳು ಮೂಲ ವಾಸ್ತುಶಿಲ್ಪದ ವಿನ್ಯಾಸದಿಂದ ಪೂರ್ತಿ ಭಿನ್ನವಾಗಿವೆ; ಹಿಂದಿನ ಕಟ್ಟಡದಲ್ಲಿ ಅದನ್ನು ಕಲ್ಲುಗಳಿಂದ ತಯಾರಿಸಲಾಗಿತ್ತು.
ಪಶ್ಚಿಮಗೋಡೆಯ ಉತ್ತರ ಮತ್ತು ದಕ್ಷಿಣ ಮೂಲೆಗಳನ್ನು ಕೂಡ ಬದಲಿಸಲಾಗಿದೆ. ಎರಡೂ ಮೂಲೆಗಳಲ್ಲಿ ಮಾಮೂಲಿ ಕಲ್ಲಿನ ಚಪ್ಪಡಿ ಇದೆ; ಇದು ಹಿಂದಿನ ಕಟ್ಟಡದ (ಅದಕ್ಕೆ ತಾಗಿಕೊಂಡಿರುವ) ಮೌಲ್ಡ್ ಮಾಡಿದ ಗೋಡೆ ಮೇಲ್ಮೆöÊಗೆ ಪೂರ್ತಿ ಭಿನ್ನವಾಗಿದೆ. ವಾಯವ್ಯ ಮತ್ತು ನೈಋತ್ಯ ಭಾಗದಲ್ಲಿ ಅನುಕ್ರಮವಾಗಿರುವ ಉತ್ತರ ಮತ್ತು ದಕ್ಷಿಣ ಹಾಲ್ನ ಮುಖ್ಯದ್ವಾರಗಳು ಭಾರೀ ಬದಲಾವಣೆಗೆ ಗುರಿಯಾದದ್ದು ಕಂಡುಬಂದಿದೆ. ಎರಡೂ ದ್ವಾರಗಳನ್ನು ಕಲ್ಲು ಮತ್ತು ಗಾರೆ ಬಳಸಿ ಮುಚ್ಚಲಾಗಿದೆ. ದ್ವಾರಗಳ ಮುಂಭಾಗದ (faeade) ವಾಸ್ತುಶಿಲ್ಪದ ವಿನ್ಯಾಸವನ್ನು ಪೂರ್ತಿಯಾಗಿ ನಾಶ ಮಾಡಲಾಗಿದೆ.
ಒಳಗಡೆ ದ್ವಾರಗಳ ಹೊರಗಿನ ಮತ್ತು ಒಳಗಿನ ಹೊರಗಟ್ಟು (shell)ಗಳನ್ನು ಯಥಾವತ್ತಾಗಿ ಉಳಿಸಿಕೊಂಡು, ತಾಗಿರುವ ಗೋಡೆಗಳ ಉದ್ದೇಶವನ್ನು ಪೂರೈಸಿಕೊಳ್ಳಲಾಯಿತು. ಅವುಗಳ ಮಧ್ಯಭಾಗವನ್ನು ಕತ್ತರಿಸಿ ಹಾಕಿ ಮೆಟ್ಟಿಲುಗಳ ಸಾಲಿಗೆ ಅವಕಾಶ ಮಾಡಿಕೊಡಲಾಯಿತು. ಈಗಿನ ಕಟ್ಟಡದ ಚಪ್ಪಟೆಯಾದ ಛಾವಣಿಗೆ (roof) ದಾರಿಯಾದ ಮೆಟ್ಟಿಲುಗಳ ಒಳಮೇಲ್ಮೆöÊಗೆ ದಪ್ಪವಾದ ಸುಣ್ಣದ ಪ್ಲಾಸ್ಟರ್ನಿಂದ ಗಾರೆ ಮಾಡಲಾಗಿದೆ. ಅದರಿಂದಾಗಿ ಹಿಂದಿನ ಕಟ್ಟಡದ ಮೂಲಸ್ವರೂಪವನ್ನು ತಿಳಿಯಲು ಕಷ್ಟವಾಗಿದೆ.
ಶಾಸನ ಪತ್ತೆ
ಉತ್ತರದ ಹಾಲ್ನ ಪಶ್ಚಿಮಭಾಗದ ಮುಚ್ಚಿದ ಬಾಗಿಲಿನ ಜಾಗದಲ್ಲೀಗ ಸಣ್ಣ ಅವಕಾಶ (opening) ಇದೆ. ಅದು ಮೆಟ್ಟಿಲಿನ ಸಾಲಿಗೆ ದಾರಿಮಾಡಿಕೊಟ್ಟಿದೆ. ದಕ್ಷಿಣ ಹಾಲ್ನ ಮುಚ್ಚಿದ ಪಶ್ಚಿಮ ಬಾಗಿಲಿನ ಅಂತಹ ಅವಕಾಶವನ್ನು ಮುಂದೆ ಮುಚ್ಚಲಾಯಿತು. ಆದರೆ ನೈಋತ್ಯ ಭಾಗದಲ್ಲಿ ಮೇಲಿಂದ ಕೆಳಗೆ ಬರುವ ಮೆಟ್ಟಿಲಿನ ಸಾಲಿಗೆ ಈಗಲೂ ಪ್ರವೇಶ ಲಭ್ಯವಿದೆ. ದಕ್ಷಿಣ ಹಾಲ್ನ ಪಶ್ಚಿಮದ್ವಾರವನ್ನು ಒಳಗಿನಿಂದ ಮುಚ್ಚಲು ಬಳಸಿದ ವಾಸ್ತುಶಿಲ್ಪದ ತುಂಡಿನ ಎರಡು ಮುಖಗಳಲ್ಲಿ ಎರಡು ಶಾಸನಗಳು ಕಂಡುಬಂದಿವೆ. ಅದಲ್ಲದೆ ದಕ್ಷಿಣ ದ್ವಾರದ ಮೆಟ್ಟಿಲಿನ ಸೀಲಿಂಗ್ನಲ್ಲಿ ಈಗಾಗಲೇ ಹೇಳಿದ ಶಿಲ್ಪಿಯ ಗುರುತುಗಳು ಕಂಡುಬಂದಿವೆ. ನೈಋತ್ಯ ಭಾಗದ ಮುಚ್ಚಿದ ಮುಂಭಾಗದಲ್ಲಿ ಕೂಡ ಹೊರಗಡೆ ಶಾಸನವಿರುವ ಕಲ್ಲಿನ ಚಪ್ಪಡಿಯಿದೆ.
ವಿವಿಧ ವಸ್ತು, ಮೂರ್ತಿ ಪತ್ತೆ
ಮಸೀದಿಯ ಬಗ್ಗೆ ಎಎಸ್ಐ ಶೋಧ ನಡೆಸುವಾಗ ಕಟ್ಟಡದ ಒಳಹೊರಗೆ ತುಂಬಿದ ಕಸಕಡ್ಡಿ ಮತ್ತು ಅವಶೇಷಗಳನ್ನು ತೆಗೆಯಬೇಕಾಯಿತು. ತೆಗೆದಾಗ ಹೂತುಹೋದ ಕಟ್ಟಡದ ವಾಸ್ತುಶಿಲ್ಪದ ವಿವರಗಳು ಮತ್ತು ಹೊಸಕಟ್ಟಡದ ಅವಶೇಷಗಳು ಕಂಡುಬಂದವು. ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವಾಗ ಬಹಳಷ್ಟು ಮಾನವನಿರ್ಮಿತ ವಸ್ತುಗಳು ಕಂಡುಬಂದವು. ಸೆಂಟ್ರಲ್ ಹಾಲ್ನ ಮುಚ್ಚಿದ ದ್ವಾರದ ಎದುರು ಒಂದು ಶಿವಲಿಂಗದ ಅಲಂಕೃತ ಯೋನಿಪಟ್ಟವು ಕಂಡುಬಂತು. ಅದಲ್ಲದೆ ಹನುಮಂತ, ಮನುಷ್ಯ ಮತ್ತು ಪ್ರಾಣಿಗಳ ಟರ್ರಾಕೋಟಾ ಮೂರ್ತಿಗಳು, ಇತರ ವಸ್ತುಗಳು ಕಟ್ಟಡದ ಅವಶೇಷಗಳ ನಡುವೆ ಸಿಕ್ಕಿದವು. ಮೊಣಕಾಲೂರಿದ ಕಲ್ಲಿನ ಆನೆ ಅವಶೇಷಗಳ ನಡುವೆ ಸಿಕ್ಕಿದ ಒಂದು ಮುಖ್ಯ ವಸ್ತುವಾಗಿದೆ. ಅದು ಹಿಂದೆ ಇದ್ದ ದೇವಾಲಯದ ಕಟ್ಟಡದಿಂದ ಕಿತ್ತುಹಾಕಿದ್ದಾಗಿದೆ. ಅದು ಪಶ್ಚಿಮ ಚೇಂಬರ್ನ ದಕ್ಷಿಣದ ಕಮಾನಿನ ದ್ವಾರದ ಕೆಳಗೆ ಕಂಡುಬಂತು. ಈ ಶಿಲ್ಪವು ಒಂದು ಸಾಲಂಕೃತ ವಸ್ತುವಾಗಿದ್ದು, ಹಿಂದೆ ದ್ವಾರದ ಕಮಾನಿನಲ್ಲಿ ಇತ್ತೆಂದು ನಂಬಲಾಗಿದೆ. ಪಶ್ಚಿಮ ಚೇಂಬರ್(ಕೋಣೆ)ನಲ್ಲಿ ಇನ್ನೂ ಕೆಲವು ಪ್ರಮುಖ ವಾಸ್ತುಶಿಲ್ಪದ ವಸ್ತುಗಳು ಸಿಕ್ಕಿದವು.
ವಾಯವ್ಯ ಭಾಗದಲ್ಲಿ ಕಂಡುಬAದ ಅವಶೇಷ ಕೂಡ ವೈವಿಧ್ಯಮಯವಾಗಿತ್ತು. ಅದು ಪಶ್ಚಿಮಗೋಡೆಯ ಎದುರು ಭಾಗದಲ್ಲಿದ್ದು, ಗೋಡೆಯ ವಾಸ್ತುಶಿಲ್ಪದ ಲಕ್ಷಣಗಳನ್ನು ಮುಚ್ಚಿಹಾಕಿತ್ತು. ಅದರಲ್ಲಿ ಇಟ್ಟಿಗೆ ಚೂರುಗಳು, ತುಂಡಾದ ಟರ್ರಾಕೋಟಾ ಹಂಚುಗಳು, ಮಡಿಕೆ ಚೂರು, ಸುಣ್ಣದ ಕಾಂಕ್ರೀಟ್ ವಸ್ತು, ಸಿಮೆಂಟಿನ ಗಾರೆ, ಮರಳಿನ ಚೀಲ, ಪ್ಲಾಸ್ಟಿಕ್ ಬಾಟ್ಲಿ, ಪ್ಲಾಸ್ಟಿಕ್ ಬ್ಯಾಗ್, ತಂಬಾಕಿನ ಪ್ಯಾಕೆಟ್ ಮುಂತಾಗಿ ಏನೆಲ್ಲ ಕಂಡುಬಂದವು. ಅಲ್ಲಿ ಕಂಡುಬಂದ (ಮಾನವನಿರ್ಮಿತ) ವಸ್ತುಗಳಲ್ಲಿ ಟರ್ರಾಕೋಟಾ ಆಕೃತಿಗಳು, ಕಲ್ಲಿನ ಕೆತ್ತನೆಯ ಚೂರುಗಳು, ಮಧ್ಯಯುಗದ ಕೊನೆಭಾಗದ ತಾಮ್ರದ ನಾಣ್ಯಗಳು, ಈಸ್ಟ್ ಇಂಡಿಯಾ ಕಂಪೆನಿ ಮತ್ತು ಬ್ರಿಟಿಷರ ನಾಣ್ಯಗಳು ಸೇರಿವೆ. ಕಸಕಡ್ಡಿಗಳನ್ನು ತೆಗೆದಾಗ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಹಲವು ವಸ್ತುಗಳು ಕೂಡ ಸಿಕ್ಕಿದವು.
ಸೆಲ್ಲಾರ್ಗಳು
ಕಟ್ಟಡದ ತಳಭಾಗ ಅಥವಾ ನೆಲಮಾಳಿಗೆಯಲ್ಲಿ ಹಲವು ಸೆಲ್ಲಾರ್ಗಳಿದ್ದು ಉತ್ತರದ ಸೆಲ್ಲಾರ್ಗಳ ಬಾಗಿಲು ಮುಚ್ಚಿದೆ. ಸುಮಾರು ೩೦ ವರ್ಷಗಳ ಹಿಂದಿನವರೆಗೆ ಎನ್೨ ಸೆಲ್ಲಾರನ್ನು ಕಲ್ಲಿದ್ದಲು ಅಂಗಡಿಯಾಗಿ ಬಳಸುತ್ತಿದ್ದರು. ಅದರಿಂದಾಗಿ ಈಗಿನ ನೆಲಮಟ್ಟದ ಜಾಗ ಕಪ್ಪಾಗಿದೆ. ಎನ್೨ರಲ್ಲಿ ಆಧುನಿಕ ಇಟ್ಟಿಗೆಯೊಂದಿಗೆ ಸೇರಿದ ಸಿಮೆಂಟ್ನಂತಹ ನಿರ್ಮಾಣ ಸಂಬAಧಿ ಅವಶೇಷಗಳು ಇದ್ದವು. ಪೂರ್ವದ ಗೋಡೆಯ ೧, ೨ ಮತ್ತು ೩ನೇ ದ್ವಾರಗಳಲ್ಲಿ ಅದು ತುಂಬಿದೆ. ಅಲ್ಲಿ ರಾಶಿ ಹಾಕಲಾದ ಮಣ್ಣು-ಕಸಗಳನ್ನು ತೆಗೆದಾಗ ಮೂರು ಕಂಬಗಳ ಸುತ್ತಲಿನ ಜಾಗಗಳು ಕಾಣಿಸಿದವು. ಅಲ್ಲಿಯ ಅವಶೇಷಗಳನ್ನು ತೆಗೆದಾಗ ಒಂದು ಮುರಿದ ವರಾಹಮೂರ್ತಿ ಮತ್ತೆ ಕೆಲವು ವಾಸ್ತುಶಿಲ್ಪದ ವಸ್ತುಗಳು ದೊರೆತವು.
ಎಸ್೨ರ ಪಶ್ಚಿಮ ಬದಿಯಲ್ಲಿದ್ದ ಕಸಕಡ್ಡಿ, ಅವಶೇಷಗಳನ್ನು ತೆಗೆದಾಗ ವಿಷ್ಣು, ಶೈವ ದ್ವಾರಪಾಲಕ, ಸಣ್ಣ ದೇವಾಲಯದ ಪ್ರತಿರೂಪ, ಹನುಮಂತ ಮೂರ್ತಿಗಳು, ಶಿಲೆ ಮತ್ತು ಟರ್ರಾಕೋಟಾ ಆಕೃತಿಗಳು ಕಂಡುಬಂದವು. ವಿವಿಧ ಗಾತ್ರದ ಅಲಂಕಾರದ ಮಡಿಕೆಗಳು ದೊರೆತವು. ಎಸ್೩ರ ಮೂರನೇ ಬಾಗಿಲಿನ ಬಳಿ ಬ್ರಿಟಿಷ್ ಇಂಡಿಯದ ೬೪ ನಾಣ್ಯಗಳು ಕಂಡುಬಂದವು. ವಾಸ್ತುಶಿಲ್ಪದ ತುಂಡುಗಳು, ಇಟ್ಟಿಗೆ ಚೂರು, ಲಖೌರಿ ಮತ್ತು ಆಧುನಿಕ ಇಟ್ಟಿಗೆಗಳು ಕೂಡ ಸೆಲ್ಲಾರ್ ಎಸ್೨ರಲ್ಲಿ ಪತ್ತೆಯಾದವು.
ಕಸದ ಮಧ್ಯೆ ವಿವಿಧ ವಸ್ತು
ಸೆಲ್ಲಾರ್ನ ಪಶ್ಚಿಮಗೋಡೆ ಬಳಿಯಿದ್ದ ಕಸವನ್ನು ತೆಗೆದಾಗ ಎಸ್೩ರ ದ್ವಾರ ಪೂರ್ತಿಯಾಗಿ ಕಂಡುಬಂತು. ಕಟ್ಟಡದ ಅವಶೇಷ, ಮಣ್ಣು, ಇಟ್ಟಿಗೆ, ಇಟ್ಟಿಗೆ ತುಂಡು, ಮಡಿಕೆ ಮುಂತಾದವು ಅಲ್ಲಿದ್ದವು. ಕಟ್ಟಡದ ಪೂರ್ವಭಾಗದಲ್ಲಿ ತುಂಬಿದ್ದ ಕಸಕಡ್ಡಿಗಳನ್ನು ತೆಗೆದಾಗ ಅಲ್ಲಿ ಪ್ಲಾಸ್ಟಿಕ್ ಚೀಲ, ಬಿಸ್ಕತ್ತು, ತಂಬಾಕುಗಳ ಕವರ್, ಹಳೆ ಚಪ್ಪಲಿ, ಹಳೆ ಬಟ್ಟೆ, ಆಧುನಿಕ ಇಟ್ಟಿಗೆಗಳೆಲ್ಲ ಕಾಣಿಸಿದವು. ಅವಶೇಷಗಳ ಕೆಳಗೆ ಉತ್ತರಭಾಗದ ರೀತಿಯ ಕಲ್ಲಿನ ನೆಲ ಕಾಣಿಸಿತು. ಆ ಭಾಗದ ಚರಂಡಿಯಲ್ಲಿದ್ದ ಕಸಕಡ್ಡಿಯನ್ನು ತೆಗೆಯಲಾಯಿತು. ಕಂಬ ಮತ್ತು ಕಂಬಗಳ ಬುಡ ಸೇರಿದಂತೆ ಕೆಲವು ಕಲ್ಲಿನ ಶಿಲ್ಪಗಳು ಅಲ್ಲಿದ್ದವು; ಅಲ್ಲಿ ಒಂದು ಕಲ್ಲಿನ ಪುಟ್ಟ ಶಿವಲಿಂಗ ಕೂಡ ಇತ್ತು.
ಕಟ್ಟಡದ ದಕ್ಷಿಣ ಭಾಗವನ್ನು ಶೋಧಿಸಿದಾಗ ಯಾತ್ರಿಕರು ತಂದುಹಾಕಿದ ಕಸಗಳೇ ಹೆಚ್ಚಾಗಿ ಕಂಡುಬಂದವು. ಸಿಹಿತಿಂಡಿಯ ಪ್ಯಾಕೆಟ್, ಗಂಗಾನದಿ ಜಲವನ್ನು ಒಯ್ಯುವ ಪ್ಲಾಸ್ಟಿಕ್ ಕಂಟೈನರ್, ಪ್ಲಾಸ್ಟಿಕ್ ಡಬ್ಬ, ಹೂ, ಪ್ಲಾಸ್ಟಿಕ್ ಪ್ಯಾಕೆಟ್, ಅನ್ನಪೂರ್ಣ ದೇವಸ್ಥಾನದ ಟೋಕನ್ ಇತ್ಯಾದಿ ಅಲ್ಲಿದ್ದವು. ಪ್ಲಾಸ್ಟಿಕ್ ಬಾಟ್ಲಿ, ತಿಂಡಿ-ತಂಬಾಕುಗಳ ಕವರ್, ಚಪ್ಪಲಿ, ಬಟ್ಟೆ, ಪ್ಲೈವುಡ್ಬೋರ್ಡ್, ಗಟ್ಟಿಯಾದ ಸಿಮೆಂಟ್ ಬ್ಯಾಗ್, ಆಧುನಿಕ ಇಟ್ಟಿಗೆ ಇತ್ಯಾದಿ ಅಲ್ಲಿ ಕಂಡುಬಂದವು. ಅವುಗಳನ್ನೆಲ್ಲ ತೆಗೆದು ಸ್ವಚ್ಛಗೊಳಿಸಿದಾಗ ಪೂರ್ವ ಮತ್ತು ಉತ್ತರ ಭಾಗದಂತೆಯೇ ಕಲ್ಲಿನ ನೆಲ ಕಾಣಿಸಿತು. ಕಸವನ್ನು ತೆಗೆದಾಗ ಬಹುತೇಕ ಎಲ್ಲ ಕಡೆ ವಿವಿಧ ಮಾನವನಿರ್ಮಿತ ವಸ್ತುಗಳು ಕಂಡುಬಂದವು. ಕಂಡುಬಂದ ವಸ್ತುಗಳನ್ನು ಅವು ಯಾವ ಮೂಲವಸ್ತುವಿನಿಂದ ತಯಾರಾಗಿವೆ ಎನ್ನುವ ಆಧಾರದಲ್ಲಿ ಕಲ್ಲು, ಟರ್ರಾಕೋಟಾ, ಲೋಹ ಮತ್ತು ಗಾಜು (ಗ್ಲಾಸ್) ಎಂದು ವಿಭಜಿಸಲಾಯಿತು.
ಕಲ್ಲಿನ ವಸ್ತುಗಳು
ಗ್ಯಾನವಾಪಿ ಮಸೀದಿ ಆವರಣದಲ್ಲಿ ಕಂಡುಬAದ ವಸ್ತುಗಳಲ್ಲಿ ಹೆಚ್ಚಿನವು ಕಲ್ಲಿನಿಂದ ಮಾಡಿದಂಥವು. ಅದರಲ್ಲಿ ವಾಸ್ತುಶಿಲ್ಪದ ತುಂಡುಗಳು, ಶಿಲ್ಪಸಂಬಂಧಿ ವಸ್ತುಗಳು, ಪಾತ್ರೆ (ಬೌಲ್) ಇತ್ಯಾದಿ ಸೇರಿವೆ. ವಿವಿಧ ಕಡೆ ವಾಸ್ತುಶಿಲ್ಪದ ತುಂಬ ವಸ್ತುಗಳು ಸಿಕ್ಕಿದವು. ಅದರಲ್ಲಿ ಪಶ್ಚಿಮಗೋಡೆ, ಸೆಲ್ಲಾರ್ ಎನ್೨, ಪೂರ್ವ ಮತ್ತು ಪಶ್ಚಿಮಭಾಗಗಳಲ್ಲಿ ಅವು ದೊರೆತಿವೆ. ವಿವಿಧ ಗಾತ್ರದ ಪುಟ್ಟ ಪಾರಾಪೆಟ್ ಕಂಬಗಳು (ಶಿಖರಾಲಂಕಾರ ಸಹಿತ ಅಥವಾ ರಹಿತ) ಅಲ್ಲಿದ್ದವು. ನಾಲ್ಕು ಅಲಂಕೃತ ‘ಅಮಲಕ’ದೊಂದಿಗೆ ವಿವಿಧ ಅಲಂಕೃತ ವಸ್ತುಗಳಿದ್ದವು. ವಿವಿಧ ಗಾತ್ರ ಮತ್ತು ಶೈಲಿಯ ಶಿಖರಾಲಂಕಾರಗಳದ್ದು (finials) ಇನ್ನೊಂದು ಗುಂಪು. ಅವುಗಳ ಶೈಲಿಯನ್ನು ಗಮನಿಸಿದರೆ ಅವು ವಿವಿಧ ಕಾಲಘಟ್ಟಗಳಿಗೆ ಸೇರಿದವೆನಿಸುತ್ತದೆ. ಕೆಲವು ಭಾರವಾದ ಕಲ್ಲಿನ ಚಪ್ಪಡಿಗಳು ಕಂಡುಬಂದಿದ್ದು, ಅವುಗಳಲ್ಲಿ ಅಲಂಕಾರದ ಗುರುತು ಕೂಡ ಇವೆ. ಅಲ್ಲಿ ಪಂಡಸದ ಗುರುತು ಕೂಡ ಇದ್ದು, ಹಿಂದಿನ ಮತ್ತು ಈಗಿನ ಕಟ್ಟಡ ಎರಡರಲ್ಲೂ ಅದಿತ್ತು. ಸೆಲ್ಲಾರ್ಗಳಲ್ಲಿ ಕೂಡ ಪಂಡಸವನ್ನು ಬಳಸಲಾಗಿದೆ. ಮುರಿದ ಒಂದು ದೊಡ್ಡ ಕಲ್ಲಿನ ತುಂಡು ಕಂಡುಬಂದಿದ್ದು, ಅದು ತೋರಣದ ಭಾಗ ಇದ್ದಿರಬೇಕು. ಕಸಕಡ್ಡಿಯನ್ನು ತೆಗೆಯುವಾಗ ಕಮಾನಿನ ಅಲಂಕಾರಗಳು, ಪ್ರಣಾಳ ಕೂಡ ದೊರೆತಿದೆ.
ವಾಸ್ತುಶಿಲ್ಪದ ವಸ್ತುಗಳಲ್ಲದೆ ಕಲ್ಲಿನ ಹಲವು ಶಿಲ್ಪಗಳು ಶೋಧದ ವೇಳೆ ಎಎಸ್ಐಗೆ ಸಿಕ್ಕಿವೆ. ಅದರಲ್ಲಿ ವಿಷ್ಣು, ಶೈವ ದ್ವಾರಪಾಲಕ, ಶಿವಲಿಂಗ, ಶಿವಲಿಂಗವಿಲ್ಲದ ಯೋನಿಪಟ್ಟ, ಕೃಷ್ಣ, ಗಣೇಶ, ಹನುಮಂತ, ದ್ವಾರಪಾಲಕರು, ವ್ಯಾಳ, ನಂದಿ ಮುಂತಾದವು ಸೇರಿವೆ. ಹಲವು ಮೂರ್ತಿಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲಿಲ್ಲ; ಅವು ಯಾವುದೋ ಮೂರ್ತಿಯ ಚಿಕ್ಕಪುಟ್ಟ ತುಂಡುಗಳಾಗಿದ್ದುದು, ಮುಖ ಇಲ್ಲದಿರುವುದು ಅಥವಾ ಸವೆದುಹೋಗಿರುವುದು ಅದಕ್ಕೆ ಕಾರಣ. ವಿವಿಧ ದೇವತಾಮೂರ್ತಿಗಳನ್ನು ಒಳಗೊಂಡ ಪುಟ್ಟ ತೀರ್ಥಕ್ಷೇತ್ರದ ಪ್ರತಿರೂಪವು ಅಲ್ಲಿ ಕಂಡುಬಂದ ಒಂದು ಗಮನಾರ್ಹ ವಸ್ತುವಾಗಿದೆ.
ಅಲ್ಲಲ್ಲಿ ಭಗ್ನಮೂರ್ತಿ
ಮಸೀದಿಯ ಆವರಣದಲ್ಲಿ ಸಿಕ್ಕಿದ ಕಲ್ಲಿನ ಕೆತ್ತನೆಗಳಲ್ಲಿ ಶಿವಲಿಂಗ ಮತ್ತು ಯೋನಿಪಟ್ಟ ದೊಡ್ಡಸಂಖ್ಯೆಯಲ್ಲಿದ್ದವು; ಹಾಗೂ ಅವು ಸೆಲ್ಲಾರ್ ಎಸ್೨ ಮತ್ತು ಪಶ್ಚಿಮಗೋಡೆಯ ಭಾಗದಲ್ಲಿ ಕಂಡುಬಂದವು. ಸೆಲ್ಲಾರ್ ಎಸ್೨ರಲ್ಲಿ ವಿಷ್ಣುವಿನ ಎರಡು ಮೂರ್ತಿಗಳು ದೊರೆತವು. ಅವುಗಳಲ್ಲಿ ಒಂದು ಮೂರ್ತಿ ಇಡಿಯಾಗಿದ್ದರೆ, ಇನ್ನೊಂದು ಕುಳಿತ ವಿಷ್ಣುವಿನ ಪರಿಕರದ ಭಾಗ ಮಾತ್ರ ಆಗಿದೆ. ಸೆಲ್ಲಾರ್ ಎಸ್೨ರಲ್ಲಿ ಕೃಷ್ಣನ ಎರಡು ತುಂಡಾದ ಮೂರ್ತಿಗಳು ದೊರೆತವು. ಅದೇ ಜಾಗದಲ್ಲಿ ಅಮೃತಶಿಲೆಯಿಂದ ಮಾಡಿದ ಒಂದು ಗಣೇಶನ ಮೂರ್ತಿಯ ತಲೆ ಕಂಡುಬಂತು. ಪಶ್ಚಿಮ ಚೇಂಬರ್ನ ಕಸಕಡ್ಡಿಗಳನ್ನು ತೆಗೆಯುವಾಗ ನಂದಿಯ ಎರಡು ಭಗ್ನಮೂರ್ತಿಗಳು ದೊರೆತವು. ಸೆಲ್ಲಾರ್ ಎನ್೨ರಲ್ಲಿ ಕಸಕಡ್ಡಿ, ಅವಶೇಷಗಳನ್ನು ಎತ್ತುವಾಗ ಒಂದು ವರಾಹಮೂರ್ತಿಯ ಕೆಳಭಾಗ ಕಂಡುಬಂತು. ಅದಲ್ಲದೆ ಅಧ್ಯಯನದ ಪ್ರದೇಶದಲ್ಲಿ ೨೫ಕ್ಕೂ ಅಧಿಕ ವಿವಿಧ ದೇವತಾಮೂರ್ತಿಗಳ ತುಂಡುಗಳು ಕಂಡುಬಂದವೆಂದು ಎಎಸ್ಐ ದಾಖಲಿಸಿದೆ. ಮಸೀದಿ ಕಟ್ಟಡದ ವಿವಿಧೆಡೆ ಕೆಲವು ಮನೆ ಬಳಕೆ ವಸ್ತುಗಳು ಕೂಡ ದೊರೆತವು.
ಸಮೀಕ್ಷೆಯ ವೇಳೆ ಟರ್ರಾಕೋಟಾದ ವಿವಿಧ ವಸ್ತುಗಳು ಕೂಡ ಕಂಡುಬAದವು. ಅವುಗಳಲ್ಲಿ ದೇವತೆಗಳು, ಪುರುಷ ಮತ್ತು ಸ್ತ್ರೀ ಆಕೃತಿಗಳು, ಇಟ್ಟಿಗೆಗಳು, ಹಂಚುಗಳು ಮುಂತಾದವು ಸೇರಿವೆ. ಪಶ್ಚಿಮಗೋಡೆಯ ಪರಿಸರದಲ್ಲಿ ಟರ್ರಾಕೋಟಾದ ಹನುಮಂತ ಮತ್ತು ಗಣೇಶನ ಮೂರ್ತಿಗಳು ಕಂಡುಬಂದಿವೆ; ಪುರುಷ ಮತ್ತು ಸ್ತ್ರೀ ಆಕೃತಿಗಳು ಕೂಡ ಬಹುತೇಕ ಅದೇ ಜಾಗದಲ್ಲಿ ಕಾಣಿಸಿವೆ.
ಕುಂಭ ಕಲಾಕೃತಿ
ಕಸ-ಅವಶೇಷಗಳನ್ನು ಎತ್ತುವಾಗ ವಿವಿಧ ರೀತಿಯ ಹಲವು ಮಡಿಕೆ(ಕುಂಭಕಲಾಕೃತಿ)ಗಳು ಕಂಡುಬಂದಿದೆ. ಅವು ಹೆಚ್ಚಾಗಿ ನಿರ್ದಿಷ್ಟ ಸ್ಥಳಗಳಲ್ಲಿ ಕಂಡುಬಂದಿವೆ. ಅದೆಂದರೆ ಉತ್ತರದಿಂದ ದಕ್ಷಿಣಕ್ಕೆ ಇಡೀ ಪಶ್ಚಿಮಗೋಡೆಯ ಭಾಗ ಮತ್ತು ದಕ್ಷಿಣದ ಸೆಲ್ಲಾರ್ನ ಭಾಗ, ವಿಶೇಷವಾಗಿ ಎನ್೨ ಮತ್ತು ಎಸ್೩. ಕಂಡುಬಂದ ಮಡಿಕೆ, ಕುಂಭಕಲಾಕೃತಿಗಳು ಸಾಮಾನ್ಯ ಕೆಂಪು ಪಾತ್ರೆಗಳ ವರ್ಗಕ್ಕೆ ಸೇರಿದಂಥವು. ಅವುಗಳಲ್ಲಿ ಪುಟ್ಟ (miniature) ಪಾತ್ರೆಗಳು, ಘರಾ, ಲೋಟಾ, ಚಿಲ್ಲಮ್, ಹುಕ್ಕಾ ಪಾತ್ರೆ ಮತ್ತು ಪೈಪ್, ಸುರಾಹಿಗಳು, V ಆಕಾರದ ಬೌಲ್ಗಳು (ಸ್ಥಳೀಯವಾಗಿ ಪರಾಯ್ ಎನ್ನುವಂತವು), ಪೂರ್ವಾ ಎನ್ನುವ ಟರ್ರಾಕೋಟಾ ಕಪ್ಗಳು, ಪುಟ್ಟ ತಂಬಿಗೆಗಳು, ವಿವಿಧ ಗಾತ್ರದ ದೀಪಗಳು (lamps) ಇತ್ಯಾದಿ ಸೇರಿವೆ.
ಬಹಳಷ್ಟು ಕುಂಭಗಳಿಗೆ ಅವುಗಳ ಹೊರಮೈಯಲ್ಲಿ ಅಲಂಕಾರದ ಕೆತ್ತನೆಗಳಿವೆ. ಆ ಪಾತ್ರೆಗಳ ಮಧ್ಯಭಾಗದಲ್ಲಿ (ಹೊಟ್ಟೆ) ಸಾಮಾನ್ಯವಾಗಿ ದಪ್ಪವಾದ ಪಟ್ಟಿ ಇದೆ. ಮೇಲ್ಮೆöÊಯ ಇತರ ಅಲಂಕಾರಗಳಲ್ಲಿ ಚುಕ್ಕಿಗಳು, ರೇಖಾಗಣಿತದಂತಹ ಆಕೃತಿಗಳು, ಹೂಗಳು ಮತ್ತು ಸೂರ್ಯನ ಚಿಹ್ನೆಗಳು ಸೇರಿವೆ. ಕೆಲವು ಮಣ್ಣಿನ ಪಾತ್ರೆಗಳು ಮತ್ತು ಲ್ಯಾಂಪ್ಗಳನ್ನು ದೀರ್ಘಕಾಲ ಬಳಸಿದ ಕಾರಣ ಸವೆದಿವೆ.
ವಿವಿಧ ಗಾತ್ರದ ಲಖೌರಿ ಇಟ್ಟಿಗೆಗಳು ಮತ್ತು ಹಂಚುಗಳು ದೊಡ್ಡ ಪ್ರಮಾಣದಲ್ಲಿ ಸ್ಥಳದಲ್ಲಿ ಕಂಡು ಬಂದಿವೆ. ಅವು ಹೆಚ್ಚಾಗಿ ಸೆಲ್ಲಾರ್ಗಳಲ್ಲಿ (ಎಸ್೨ ಮತ್ತು ಎಸ್೩) ದೊರೆತಿವೆ.
ಲೋಹದ ವಸ್ತುಗಳು
ಬೇಲಿಯೊಳಗಿನ ಜಾಗದ ವಿವಿಧೆಡೆ ಕೆಲವು ಲೋಹದ ವಸ್ತುಗಳು ಕಂಡುಬಂದಿವೆ. ಅವುಗಳಲ್ಲಿ ಹೆಚ್ಚಿನವು ತಾಮ್ರದ ವಸ್ತುಗಳು ಅದರಲ್ಲಿ ಬಹಳಷ್ಟು ವಿವಿಧ ಕಾಲಘಟ್ಟದ ನಾಣ್ಯಗಳಾಗಿವೆ. ಅದಲ್ಲದೆ ಕೆಲವು ಕಬ್ಬಿಣದ ಕ್ಲಾಂಪ್ಗಳು, ಉಪಕರಣಗಳು ಕೂಡ ಸಿಕ್ಕಿವೆ. ಲೋಹದ ಎರಕದಿಂದ ತಯಾರಿಸಿದ ವಸ್ತುಗಳಲ್ಲಿ ಆಧುನಿಕ ನಾಣ್ಯಗಳು ಮತ್ತು ಆಭರಣಗಳು ಸೇರಿವೆ. ಕೆಲವು ಲೋಹದ ವಸ್ತುಗಳನ್ನು ಸ್ವಚ್ಛಗೊಳಿಸುವ ಮತ್ತು ಸರಂಕ್ಷಿಸುವ ಉದ್ದೇಶದಿಂದ ರಾಸಾಯನಿಕ ಸಂಸ್ಕರಣಕ್ಕೆ ಒಳಪಡಿಸಿದ್ದು ಕಂಡುಬಂದಿದೆ.
ವಿವಿಧ ಕಾಲಘಟ್ಟದ ಒಟ್ಟು ೮೬ ನಾಣ್ಯಗಳು ಅಧ್ಯಯನ ಪ್ರದೇಶದಲ್ಲಿ ದೊರೆತದ್ದನ್ನು ದಾಖಲಿಸಲಾಗಿದೆ. ಅವುಗಳಲ್ಲಿ ಮೂರು ಶಾ ಆಲಮ್ಗೆ ಸೇರಿದ್ದು, ಅವುಗಳ ಬಗ್ಗೆ ಪರ್ಶಿಯನ್ ಗ್ರಂಥಗಳಲ್ಲಿ ದಂತಕಥೆಗಳೇ ಇವೆ. ೬೪ ನಾಣ್ಯಗಳ ರಾಶಿ ಸೇರಿದಂತೆ ಬ್ರಿಟಿಷ್ ಇಂಡಿಯದ ಬಹಳಷ್ಟು ನಾಣ್ಯಗಳು ದೊರೆತಿವೆ. ಅದರಲ್ಲಿ ಈಸ್ಟ್ ಇಂಡಿಯಾ ಕಂಪೆನಿ, ವಿಕ್ಟೋರಿಯಾ ರಾಣಿ, ಎಡ್ವರ್ಡ್ VII ಮತ್ತು ಜಾರ್ಜ್ V ಕಾಲಕ್ಕೆ ಸೇರಿದಂಥವು ಕಂಡುಬಂದಿವೆ. ಸವೆದ ಕಾರಣ ಕೆಲವು ನಾಣ್ಯಗಳನ್ನು ಗುರುತಿಸಲು ಕಷ್ಟವಾಗಿದೆ. ಮಾಧವರಾವ್ ಸಿಂಧಿಯಾಗೆ ಸೇರಿದ ಒಂದು ನಾಣ್ಯ ಕೂಡ ಮಸೀದಿಯಲ್ಲಿ ಸಿಕ್ಕಿದೆ. ಆಧುನಿಕ ಕಾಲದ ಎರಡು ಪೈಸೆ, ಮೂರು ಪೈಸೆ, ಐದು ಪೈಸೆ, ಹತ್ತು ಪೈಸೆ ಮತ್ತು ೨೫ ಪೈಸೆ ನಾಣ್ಯಗಳು ಕೂಡ ಸಿಕ್ಕಿವೆ. ಯುಎಇಗೆ ಸೇರಿದ ಒಂದು ದರ್ಹಮ್ನ ನಾಣ್ಯ ಅಲ್ಲಿ ಸಿಕ್ಕಿದ ವಿದೇಶೀ ನಾಣ್ಯವಾಗಿದೆ.
ಕೆಲವು ಗಾಜಿನ (glass) ವಸ್ತುಗಳು, ಮುಖ್ಯವಾಗಿ ಉದ್ದ ಕುತ್ತಿಗೆಯ ಸಣ್ಣ ಪಾತ್ರೆಗಳು ಸೆಲ್ಲಾರ್ ಎಸ್೨ರಲ್ಲಿ ಕಸ ಎತ್ತುವಾಗ ಕಂಡುಬಂದವು. ಅವುಗಳನ್ನು ಬಹುಶಃ ಸುಗಂಧದ್ರವ್ಯ ಹಾಕಿಡಲು ಅಥವಾ ನೀರನ್ನು ಕೊಂಡೊಯ್ಯಲು ಬಳಸುತ್ತಿದ್ದಿರಬೇಕು. ತುಂಡಾದ ಗಾಜಿನ ಮುಚ್ಚಳಗಳು ದೊರೆತಿವೆ. ಹೊಳಪಿನ ಒಂದು ಗಾಜಿನ ಪಾತ್ರೆ ಕೂಡ ಪತ್ತೆಯಾಗಿದೆ ಎಂದು ಎಎಸ್ಐ ತನ್ನ ವರದಿಯಲ್ಲಿ ದಾಖಲಿಸಿದೆ.
ಗ್ಯಾನವಾಪಿ ಮಸೀದಿಯಲ್ಲಿ ದೊರೆತ ಪ್ರಾಚ್ಯ ವಸ್ತುಗಳನ್ನು ಸಮರ್ಥವಾಗಿ ದಾಖಲಿಸಿರುವುದು ಎಎಸ್ಐ ವರದಿಯ ಹೆಚ್ಚುಗಾರಿಕೆಯಾಗಿದೆ; ಸಿಕ್ಕಿದ ವಸ್ತುಗಳ ಛಾಯಾಚಿತ್ರಗಳು ಅತ್ಯಂತ ಸ್ಫುಟವಾಗಿವೆ. ಮಸೀದಿಯ ಯಾವುದೋ ಕೋಣೆಗಳಲ್ಲಿ, ಇನ್ಯಾವುದೋ ಮೂಲೆಗಳಲ್ಲಿ ಬಗೆಬಗೆಯ ದೇವತಾಮೂರ್ತಿಗಳು, ಅವುಗಳ ಅಲಂಕಾರಗಳು, ಕೈಕಾಲು ಅಂಗಾಂಗಗಳು ಮುರಿದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರೆ ಯಾರಿಗೂ ವ್ಯಥೆಯಾಗದಿರದು. ಗಮನಿಸಬೇಕಾದ ಅಂಶವೆಂದರೆ, ಸ್ಥಳದಲ್ಲಿ ಉತ್ಖನನವನ್ನು ಮಾಡದೇನೇ ಇಷ್ಟೆಲ್ಲ ವಸ್ತುಗಳು, ವಾಸ್ತುಶಿಲ್ಪ ಸಂಬಂಧಿ ಭಾಗಗಳು ಪತ್ತೆಯಾಗಿವೆ. ಉತ್ಖನನಕ್ಕೆ ನ್ಯಾಯಾಲಯವು ಅನುಮತಿ ನೀಡಿದ್ದರೆ ಏನೆಲ್ಲ ಸಿಗುತ್ತಿತ್ತೋ ಹೇಳಲಾಗದು. ಇಂತಹ ಜ್ಞಾನವಾಪಿ ಮಸೀದಿಯ ಸಮಸ್ಯೆಗೆ ಮುಕ್ತಿ ಎಂದು? ಹೇಗೆ?