ಶಶಿ ತರೂರ್ ಅವರ ‘ಆನ್ ಇರಾ ಆಫ್ ಡಾರ್ಕ್ನೆಸ್ – ದ ಬ್ರಿಟಿಷ್ ಎಂಪೈರ್ ಆಫ್ ಇಂಡಿಯಾ’ ಕೃತಿಯನ್ನು ಓದುತ್ತಹೋದಂತೆಲ್ಲ – ‘ಇಷ್ಟೆಲ್ಲ ನಮ್ಮ ದೇಶದಲ್ಲಿಯೇ ನಡೆದುಹೋದರೂ ನಮಗೆ ಎಲ್ಲಿಯೂ ತಿಳಿದುಬರಲೇ ಇಲ್ಲವಲ್ಲ!’ ಎಂಬ ಭಾವನೆ ನಮ್ಮಲ್ಲಿ ಒಡಮೂಡಿ ನಮ್ಮ ಅಜ್ಞಾನಕ್ಕೆ ನಾವೇ ನಾಚಿಕೊಳ್ಳುವಂತಾಗುತ್ತದೆ.
ಬ್ರಿಟಿಷರ ಸುಲಿಗೆ, ಕೊಳ್ಳೆಹೊಡೆಯುವಿಕೆ, ಪರಮಸ್ವಾರ್ಥತೆ, ಕುಟಿಲತನ, ಭ್ರಷ್ಟತೆ, ಒಡೆದು ಆಳುವ ನೀತಿ, ದುರಾಸೆ ಮುಂತಾದವುಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕೆಂದಾದರೆ ನಾವು ಈ ಕೃತಿಯನ್ನು ಖಂಡಿತ ಕೊನೆಯವರೆಗೂ ಓದಬೇಕು. ಈ ಲೇಖನದಲ್ಲಿ ಬ್ರಿಟಿಷರ ಬಗೆಗಿನ ಒಂದಿಷ್ಟು ಕಹಿಸತ್ಯಗಳ ಮಾದರಿಯನ್ನಷ್ಟೇ ನಿಮ್ಮ ಮುಂದಿಡಲಾಗುತ್ತದೆ.
ಬ್ರಿಟಿಷರು ನಮ್ಮನ್ನಾಳುತ್ತಿದ್ದ ಕಾಲದಲ್ಲಿ ಈ ದೇಶ ದಾಸ್ಯವನ್ನು ಅನುಭವಿಸಿದ್ದು ದಿಟವಾದರೂ, ರೈಲು, ಕೈಗಾರಿಕೆ, ಆಡಳಿತ ಮುಂತಾದವುಗಳ ಮೂಲಕ ಅವರು ನಮಗೆ ಸಾಕಷ್ಟು ಉಪಕಾರ ಮಾಡಿದ್ದಾರೆ…’ ಎಂದು ಮುಂತಾಗಿ ನಾವು ಇತಿಹಾಸ ಪುಸ್ತಕಗಳಲ್ಲಿ ಓದಿಯೇ ಇರುತ್ತೇವೆ. ನಮ್ಮ ಪಠ್ಯಪುಸ್ತಕಗಳೂ ನಮಗೆ ಕಲಿಸುವುದು ಇದನ್ನೇ. ‘ನಮ್ಮನ್ನಾಳಿದ ಆ ಬ್ರಿಟಿಷರು ನಮ್ಮ ದೇಶದ ಸಂಪತ್ತನ್ನೆಲ್ಲ ಕೊಳ್ಳೆಹೊಡೆದು ನಮ್ಮನ್ನೆಲ್ಲ ಕಗ್ಗತ್ತಲೆಗೆ ತಳ್ಳಿದರು’ ಎಂದು ಯಾರಾದರೂ ಹೇಳಿದರೆ ನಮಗೆ ನಂಬಿಕೆ ಬರುವುದೇ ಇಲ್ಲ. ‘ಬ್ರಿಟಿಷರ ಬಗ್ಗೆ ಒಂದಿಷ್ಟು ಕಹಿಭಾವನೆಯನ್ನು ಬೆಳೆಸಿಕೊಂಡ, ಬ್ರೇನ್ವಾಷ್ಗೆ ಒಳಪಟ್ಟ ಕೆಲವರು ಹೇಳುವ ಮಾತಿದು’ ಎಂದು ಹಲವರು ಹೀಗಳೆದಾರು.
ಆದರೆ ನಾವು ನಂಬಿಯೇವೋ ಬಿಟ್ಟೇವೋ, ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆದುದಕ್ಕೆ ಲೆಕ್ಕವೇ ಇಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕಹಿ ಸತ್ಯವನ್ನು ನಾವು ಅರಗಿಸಿಕೊಳ್ಳಲೇಬೇಕಾಗಿದೆ. ಇಂತಹ ಹಲವು ಸತ್ಯಸಂಗತಿಗಳನ್ನು ಶಶಿ ತರೂರ್ ಅವರು ‘ಆನ್ ಇರಾ ಆಫ್ ಡಾರ್ಕ್ನೆಸ್ – ದ ಬ್ರಿಟಿಷ್ ಎಂಪೈರ್ ಆಫ್ ಇಂಡಿಯಾ’ (An Era of Darkness: The British Empire in India) ಎಂಬ ತಮ್ಮ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿ ತೋರಿಸುತ್ತಾರೆ. ಇದೇ ಕೃತಿ ಕನ್ನಡದಲ್ಲಿ ‘ಕಗ್ಗತ್ತಲ ಕಾಲ – ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ’ ಎಂಬ ಹೆಸರಿನಿಂದ ಅನುವಾದಗೊಂಡಿದೆ. ಎಸ್.ಬಿ. ರಂಗನಾಥ ಅವರು ಇದನ್ನು ಅನುವಾದಿಸಿದ್ದಾರೆ. ಇಂಗ್ಲಿಷ್ ಮೂಲ ಹಾಗೂ ಕನ್ನಡ ಅನುವಾದ ಇವೆರಡನ್ನೂ ಸಾಹಿತ್ಯ ಅಕಾಡೆಮಿ ಪ್ರಕಾಶಿಸಿದೆ. ಮೂಲ ಇಂಗ್ಲಿಷ್ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
‘ಕೊಳ್ಳೆ’ಯ ಕಥೆ
ಶಶಿ ತರೂರ್ ಅವರು ಇಂದಿಗೂ ಕಾಂಗ್ರೆಸ್ಸಿನ ಪ್ರಮುಖ ನಾಯಕರಲ್ಲಿ ಒಬ್ಬರು. ಬ್ರಿಟಿಷರು ಕೊಳ್ಳೆ ಹೊಡೆದ ಪರಿಯನ್ನೆಲ್ಲವನ್ನೂ ಮೇಲೆ ತಿಳಿಸಿದ ಕೃತಿಯಲ್ಲಿ ಅವರು ಆಧಾರಸಹಿತವಾಗಿಯೆ ವಿವರಿಸುತ್ತಾರೆ. ನಮಗೆ ತಿಳಿದೇ ಇಲ್ಲದ ಹಲವಾರು ಸಂಗತಿಗಳನ್ನು ಅವರು ಅಂಕಿ-ಅಂಶ ಸಹಿತವಾಗಿ ವಿವರಿಸುತ್ತಾರೆ. ಕೃತಿಯನ್ನು ಓದುತ್ತಹೋದಂತೆಲ್ಲ – ‘ಇಷ್ಟೆಲ್ಲ ನಮ್ಮ ದೇಶದಲ್ಲಿಯೇ ನಡೆದುಹೋದರೂ ನಮಗೆ ಎಲ್ಲಿಯೂ ತಿಳಿದುಬರಲೇ ಇಲ್ಲವಲ್ಲ!’ ಎಂಬ ಭಾವನೆ ನಮ್ಮಲ್ಲಿ ಒಡಮೂಡಿ ನಮ್ಮ ಅಜ್ಞಾನಕ್ಕೆ ನಾವೇ ನಾಚಿಕೊಳ್ಳುವಂತಾಗುತ್ತದೆ. ಸ್ವಾತಂತ್ರ್ಯ ಬಂದ ನಂತರ ಏಳು ದಶಕಗಳಷ್ಟು ಕಾಲದ ಅವಧಿಯಲ್ಲಿ ಯಾವ ಪಕ್ಷದ ಆಡಳಿತದಲ್ಲಿ ಸಾಕಷ್ಟು ಸಂಗತಿಗಳನ್ನು ನಮ್ಮ ಇತಿಹಾಸಗ್ರಂಥಗಳಿಂದಲೂ ಪಾಠ್ಯಪುಸ್ತಕಗಳಿಂದಲೂ ಮುಚ್ಚಿಡಲಾಯಿತೋ ಅದೇ ಪಕ್ಷದ ಹಿರಿಯ ಮುಖಂಡರೊಬ್ಬರು ಬ್ರಿಟಿಷರು ಮಾಡಿದ ಕೊಳ್ಳೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಾಗ ಅದನ್ನೋದಿದ ನಮ್ಮ ರಕ್ತ ಕುದಿಯುತ್ತದೆ. ಯಾವ ಮಟ್ಟದಲ್ಲಿ ಇತಿಹಾಸದ ಹಲವು ಸಂಗತಿಗಳನ್ನು ಮುಚ್ಚಿಟ್ಟು ಅದನ್ನು ಬೇರೊಂದು ರೀತಿಯಲ್ಲಿ ನಮ್ಮ ಮುಂದಿರಿಸಲಾಯಿತು ಎಂಬುದು ಅರಿವಾದಾಗ ಬಲವಾದ ವಿಷಾದವೊಂದು ನಮ್ಮನ್ನು ಮೂಕರನ್ನಾಗಿ ಮಾಡಿಬಿಡುತ್ತದೆ. ಈ ಪುಸ್ತಕವನ್ನು ಮಾನ್ಯತೆ ಪಡೆದ ಸಾಹಿತ್ಯ ಅಕಾಡೆಮಿ ಪ್ರಕಾಶಿಸಿರುವುದರಿಂದ, ಲೇಖಕರು ಸ್ವತಃ ಕಾಂಗ್ರೆಸ್ ಮುಖಂಡರಾಗಿರುವುದರಿಂದ ಹಾಗೂ ಒಂದೊಂದು ಸಂಗತಿಯನ್ನೂ ಆಧಾರಸಹಿತವಾಗಿ ವಿವರಿಸಿರುವುದರಿಂದ ಈ ಪುಸ್ತಕದಲ್ಲಿ ವಿವರಿಸಿದ ಸಂಗತಿಗಳ ‘ಸತ್ಯತೆ’ಯ ಬಗ್ಗೆ ಸಂದೇಹಪಡಲು ಯಾವುದೇ ಎಡೆಯಿಲ್ಲ. ಬ್ರಿಟಿಷರ ಸುಲಿಗೆ, ಕೊಳ್ಳೆಹೊಡೆಯುವಿಕೆ, ಪರಮಸ್ವಾರ್ಥತೆ, ಕುಟಿಲತನ, ಭ್ರಷ್ಟತೆ, ಒಡೆದು ಆಳುವ ನೀತಿ, ದುರಾಸೆ ಮುಂತಾದವುಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕೆಂದಾದರೆ ನಾವು ಈ ಕೃತಿಯನ್ನು ಖಂಡಿತ ಕೊನೆಯವರೆಗೂ ಓದಬೇಕು. ಈ ಲೇಖನದಲ್ಲಿ ಬ್ರಿಟಿಷರ ಬಗೆಗಿನ ಒಂದಿಷ್ಟು ಕಹಿಸತ್ಯಗಳ ಮಾದರಿಯನ್ನಷ್ಟೇ ಇಲ್ಲಿ ಮುಂದಿಡಲಾಗುತ್ತದೆ.
‘ಅತ್ಯಂತ ಘೋರ ಅಪರಾಧ’
ವಿಲ್ ಡ್ಯುರಾಂಟ್ ಅವರ ಹೇಳಿಕೆಯೊಂದನ್ನು ಉಲ್ಲೇಖಿಸುವ ಮೂಲಕ ಈ ಕೃತಿಯ ಆರಂಭವಾಗುತ್ತದೆ. – ‘೧೯೩೦ರಲ್ಲಿ, ಅಮೆರಿಕದ ಯುವ ಇತಿಹಾಸಕಾರ-ತತ್ತ್ವಜ್ಞಾನಿ, ವಿಲ್ ಡುರಾಂಟ್ (೧೮೮೫-೧೯೮೧), ಮೊದಲ ಬಾರಿಗೆ ಭಾರತದ ಸಮುದ್ರತೀರಕ್ಕೆ ಕಾಲಿಟ್ಟ. ನಾಗರಿಕತೆಯ ಬಗ್ಗೆ ಗ್ರಂಥ ರಚಿಸಲು ವಿಶ್ವಪರ್ಯಟನೆ ಕೈಗೊಂಡಿದ್ದ. ಅವನು ಬರೆದ ಮಹತ್ತ್ವದ ಕೃತಿಯು, ‘ದಿ ಸ್ಟೋರಿ ಆಫ್ ಸಿವಿಲಿಜೇಷನ್’ – ‘ನಾಗರಿಕತೆಯ ಕಥೆ’ ಎಂಬ ಹೆಸರಿನ ಹನ್ನೊಂದು ಸಂಪುಟಗಳ ಬೃಹತ್ಕೃತಿಯಾಗಿ ಲೋಕಪ್ರಸಿದ್ಧವಾಯಿತು. ಆದರೆ ಆಂಗ್ಲರು ಉದ್ದೇಶಪೂರ್ವಕವಾಗಿ ಭಾರತದ ರಕ್ತ ಹೀರಿದ ಬಗ್ಗೆ ಕಣ್ಣಾರೆ ಕಂಡು ಹಾಗೂ ಓದಿ ತಿಳಿದುಕೊಂಡು, ಅಚ್ಚರಿಪಟ್ಟು ಕುಪಿತನಾದ ಅವನು ಎಷ್ಟು ವಿಚಲಿತನಾದನೆಂದರೆ, ತನ್ನ ಸಂಶೋಧನೆಯನ್ನು ಕೆಲಕಾಲ ಪಕ್ಕಕ್ಕಿಟ್ಟು ‘ಮಾನವ ಇತಿಹಾಸದ ಈ ಅತ್ಯಂತ ಘೋರ ಅಪರಾಧ’ವನ್ನು ಖಂಡಿಸುವ ಕೃತಿಯೊಂದನ್ನು ರಚಿಸಿದ. ‘ದಿ ಕೇಸ್ ಫಾರ್ ಇಂಡಿಯಾ’ (೧೯೩೦), (ಭಾರತದ ಕಥೆ) ಎಂಬ ಹೆಸರಿನ ಈ ಚಿಕ್ಕ ಪುಸ್ತಕ ಇಂದಿಗೂ ಒಂದು ಮಹತ್ಕೃತಿಯಾಗಿದೆ. ಭಾರತದ ಬಗ್ಗೆ ಬಹಳ ಅನುಕಂಪ ಹಾಗೂ ಸಹಾನುಭೂತಿ ವ್ಯಕ್ತಪಡಿಸಿ ಬರೆದಿರುವ ಈ ಕೃತಿಯಲ್ಲಿ ಡುರಾಂಟ್ ಆಂಗ್ಲರು ಭಾರತದಲ್ಲಿ ದೀರ್ಘಕಾಲ ಮಾಡಿದ ನಾಚಿಕೆಗೇಡು ಸುಲಿಗೆಯ ಬಗ್ಗೆ ಅವರ ಸ್ವಾರ್ಥ ಸಮರ್ಥನೆಗಳನ್ನು ಚಿಂದಿ ಮಾಡಿ ಕೆಂಡ ಕಾರಿದ್ದಾನೆ.
ಡ್ಯುರಾಂಟ್ ಬರೆಯುತ್ತಾನೆ –
‘ಆಂಗ್ಲರ ಭಾರತ ವಿಜಯ ಅತ್ಯುನ್ನತ ನಾಗರಿಕತೆಯೊಂದರ ಮೇಲೆ ವ್ಯಾಪಾರಿ ಕಂಪೆನಿಯೊAದು (ಈಸ್ಟ್ ಇಂಡಿಯಾ ಕಂಪೆನಿ) ನಡೆಸಿದ ವಿನಾಶಕರ ದಾಳಿ. ಅದಕ್ಕೆ ಯಾವ ನೀತಿಯಾಗಲಿ ತತ್ತ್ವವಾಗಲಿ ಇಲ್ಲ. ಕುರುಡಾದ ದುರಾಸೆಯಿಂದ ಕೂಡಿದ ಈ ಕಂಪೆನಿಯು, ಬೆಂಕಿ ಮತ್ತು ಖಡ್ಗದ ಬಲದಿಂದ ಒಂದು ದೇಶವನ್ನು ಅಲ್ಲೋಲ-ಕಲ್ಲೋಲ ಮಾಡಿ ಅಸಹಾಯಕಗೊಳಿಸಿತು. ಅದು ಪ್ರಾರಂಭಿಸಿರುವ ಭ್ರಷ್ಟಾಚಾರ, ಕೊಲೆ, ಅಪಹರಣ ಮತ್ತು ಕಳ್ಳತನಗಳಿಂದ ಕೂಡಿದ ‘ಕಾನೂನುಬದ್ಧ’ ಮತ್ತು ಕಾನೂನುಬಾಹಿರ ಕೊಳ್ಳೆಯು ನಿಷ್ಕರುಣೆಯಿಂದ ಅಬಾಧಿತವಾಗಿ ಇದುವರೆಗೆ (೧೯೩೦), ಒಂದು ನೂರಾ ಎಪ್ಪತ್ತು ವರ್ಷಗಳಿಂದ ನಿರಂತರವಾಗಿ ನಡೆದಿದೆ’.
೧೮ನೆಯ ಶತಮಾನದ ಭಾರತದಲ್ಲಿ ಮೊಗಲ್ ಸಾಮ್ರಾಜ್ಯ ಪತನಗೊಂಡು ದೇಶೀ ಸಂಸ್ಥಾನಗಳು ಅಧಿಕಾರಕ್ಕಾಗಿ ಕಾದಾಡುತ್ತಿದ್ದವು. ಇದರ ದುರ್ಲಾಭ ಪಡೆದು ಪರ್ಶಿಯಾದ ನಾದಿರ್ ಶಾ ೧೭೩೯ರಲ್ಲಿ ದಿಲ್ಲಿಯನ್ನು ಪತನಗೊಳಿಸಿ ಅಲ್ಲಿನ ಸಂಪತ್ತನ್ನು ಸೂರೆಗೊಂಡ. ಆತ ಭಾರತದಿಂದ ಲೂಟಿ ಹೊಡೆದ ಸಂಪತ್ತಿನಿಂದಾಗಿ ಪರ್ಶಿಯಾದಲ್ಲಿ ಮೂರು ವರ್ಷ ಯಾವ ತೆರಿಗೆಯನ್ನೂ ವಿಧಿಸಲಿಲ್ಲವಂತೆ. ಇದರಿಂದಲೇ ನಾವು ಊಹಿಸಬಹುದಾಗಿದೆ – ಬ್ರಿಟಿಷರು ಭಾರತಕ್ಕೆ ಬರುವುದಕ್ಕೂ ಮುಂಚೆ ಇಲ್ಲಿನ ಸಂಪತ್ತು ಎಷ್ಟಿತ್ತು ಎಂದು.
ಇದ್ದದ್ದು, ಆದದ್ದು
ಈಸ್ಟ್ ಇಂಡಿಯಾ ಕಂಪೆನಿಯು ಗೆದ್ದ ಭಾರತ ಬರಡು ಭೂಭಾಗವಾಗಿರದೆ ಮಧ್ಯಕಾಲೀನ ಪ್ರಪಂಚದ ಹೊಳೆಯುವ ನಕ್ಷತ್ರವಾಗಿತ್ತು. ವಿವಿಧ ಕೈಗಾರಿಕೆಗಳಿಂದ ಉತ್ಪಾದಿತವಾಗಿದ್ದ ಅದರ ಸಿರಿಸಂಪತ್ತನ್ನು ಯಾರ್ಕ್ಶೈರ್ ಸಂಜಾತ ಅಮೆರಿಕನ್ ಯುನಿಟರಿಯನ್ ಮಂತ್ರಿ ಜೆ.ಟಿ. ಸಂಡರ್ಲ್ಯಾಂಡ್ ಸಂಕ್ಷಿಪ್ತವಾಗಿ ಹೀಗೆ ವರ್ಣಿಸಿದ್ದಾನೆ.
‘ತನ್ನ ಉಪಯುಕ್ತತೆ ಅಥವಾ ಸೌಂದರ್ಯಕ್ಕೆ ಹೆಸರಾದ, ನಾಗರಿಕ ಪ್ರಪಂಚಕ್ಕೆ ಗೊತ್ತಿದ್ದ ಪ್ರತಿಯೊಂದು ಉತ್ಪನ್ನ, ಮನುಷ್ಯನ ಬುದ್ಧಿ ಮತ್ತು ಕೈಗಳ ಕೌಶಲದಿಂದ ತಯಾರಾದ ಕುಶಲವಸ್ತುಗಳು ಬಹು ಹಿಂದಿನಿಂದಲೂ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದವು. ಭಾರತವು ಯೂರೋಪ್ ಅಥವಾ ಏಷ್ಯಾಖಂಡದ ಯಾವುದೇ ದೇಶಕ್ಕಿಂತ ಬಹುದೊಡ್ಡ ಕೈಗಾರಿಕೆ ಮತ್ತು ಕಾರ್ಖಾನೆಗಳನ್ನು ಹೊಂದಿದ ದೇಶವಾಗಿತ್ತು. ಅದರ ಸೊಗಸಾದ ಹತ್ತಿ, ಉಣ್ಣೆ, ಲಿನನ್ ಮತ್ತು ರೇಷ್ಮೆ ಬಟ್ಟೆಗಳು ನಾಗರಿಕ ಪ್ರಪಂಚದಲ್ಲಿ ಜಗದ್ವಿಖ್ಯಾತವಾಗಿದ್ದವು. ಅದೇ ರೀತಿ ಅದರ ಅತ್ಯಂತ ಸುಂದರವಾದ ಎಲ್ಲ ನಮೂನೆಯ ಚಿನ್ನ ಮತ್ತು ವಜ್ರದ ಆಭರಣಗಳು, ಸುಂದರ ಕುಂಬಾರಿಕೆ, ಪಿಂಗಾಣಿ ವಸ್ತುಗಳು, ಹಾಗೂ ಕಬ್ಬಿಣ, ಉಕ್ಕು, ಬೆಳ್ಳಿ, ಬಂಗಾರದ ಕುಶಲ ವಸ್ತುಗಳು ಲೋಕಪ್ರಸಿದ್ಧವಾಗಿದ್ದವು. ಭಾರತದ ಉತ್ಕೃಷ್ಟ ವಾಸ್ತುಶಿಲ್ಪ ಸೌಂದರ್ಯವು ವಿಶ್ವದ ಯಾವುದೇ ದೇಶದ ಸೌಂದರ್ಯಕ್ಕೂ ಸರಿಸಾಟಿಯಾಗಿತ್ತು; ಅದು ಯಾಂತ್ರಿಕ ಕ್ಷೇತ್ರದಲ್ಲಿಯೂ ಮಹತ್ಸಾಧನೆ ಮಾಡಿತ್ತು. ಅಲ್ಲಿ ದೊಡ್ಡದೊಡ್ಡ ವ್ಯಾಪಾರಿಗಳು, ವ್ಯವಹಾರಸ್ಥರು, ಬ್ಯಾಂಕರುಗಳು ಮತ್ತು ಹಣಕಾಸು ಲೇವಾದೇವಿಗಾರರಿದ್ದರು. ಹಡಗು ನಿರ್ಮಿಸುವ ಅತ್ಯಂತ ದೊಡ್ಡ ದೇಶವಾಗಿತ್ತು ಅದು. ಅದಕ್ಕೆ ಭೂಮಾರ್ಗ ಹಾಗೂ ಜಲಮಾರ್ಗವಾಗಿ ಜಗತ್ತಿನ ಎಲ್ಲ ದೇಶಗಳೊಡನೆ ವ್ಯಾಪಾರ ಮತ್ತು ವಾಣಿಜ್ಯ ಸಂಪರ್ಕ ಇತ್ತು.’
ಇದು ಆಂಗ್ಲರು ಕಂಡ ಭಾರತ. ಆಂಗ್ಲ ಆರ್ಥಿಕ ಇತಿಹಾಸಕಾರ ಆಂಗಸ್ ಮ್ಯಾಡಿಸನ್ ವಿವರಿಸಿದಂತೆ, ೧೮ನೆಯ ಶತಮಾನದ ಆದಿಯಲ್ಲಿ ಜಗತ್ತಿನ ಆರ್ಥಿಕ ಉತ್ಪನ್ನದಲ್ಲಿ ಭಾರತದ ಪಾಲು ಶೇ. ೨೩. ಇದು ಇಡೀ ಯೂರೋಪಿನ ಉತ್ಪನ್ನಕ್ಕೆ ಸಮ. ಆಂಗ್ಲರು ಭಾರತ ಬಿಟ್ಟು ಹೋಗುವಾಗ ಇದು ಕೇವಲ ಶೇ. ೩ಕ್ಕಿಂತ ಸ್ವಲ್ಪ ಹೆಚ್ಚಿತ್ತು. ಕಾರಣ ಸ್ಪಷ್ಟ – ಆಂಗ್ಲರು ಭಾರತವನ್ನು ಆಳಿದ್ದು ತಮ್ಮ ಲಾಭಕ್ಕಾಗಿ ಮಾತ್ರ. ಬ್ರಿಟನ್ನಿನ ೨೦೦ ವರ್ಷಗಳ ಉಚ್ಛ್ರಾಯ ಸ್ಥಿತಿ ಸಾಧ್ಯವಾದದ್ದು ಭಾರತದ ಕೊಳ್ಳೆಯಿಂದ. ಈ ಕೊಳ್ಳೆ ಪ್ರಾರಂಭವಾದದ್ದು ೧೬೦೦ರಲ್ಲಿ ಬ್ರಿಟಿಷ್ ರಾಣಿ ಮೊದಲನೆಯ ಎಲಿಜಬೆತ್ ಭಾರತದಲ್ಲಿ ರೇಷ್ಮೆ, ಸಾಂಬಾರ ಪದಾರ್ಥಗಳು ಮತ್ತಿತರ ಲಾಭದಾಯಕ ಸರಕುಗಳ ವ್ಯಾಪಾರ ಮಾಡಲು ಈಸ್ಟ್ ಇಂಡಿಯಾ ಕಂಪೆನಿಯನ್ನು ಸ್ಥಾಪಿಸಿದಾಗ, ಈ ಕಂಪೆನಿಯು ತನ್ನ ವ್ಯಾಪಾರ ವಾಣಿಜ್ಯ ವೃದ್ಧಿಗಾಗಿ ಭಾರತೀಯ ಸಮುದ್ರತೀರದ ಪಟ್ಟಣಗಳಲ್ಲಿ ಮುಖ್ಯವಾಗಿ ಕೋಲ್ಕತಾ, ಮದ್ರಾಸ್ ಮತ್ತು ಮುಂಬಯಿಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿತು. ಈ ಕಾರ್ಖಾನೆಗಳು ಹಾಗೂ ತನ್ನ ಸಿಬ್ಬಂದಿಯ ರಕ್ಷಣೆಗಾಗಿ ಅದು ಸೈನ್ಯವನ್ನು ಇಟ್ಟುಕೊಂಡಿತು. ಇದಕ್ಕಾಗಿ, ಆಂತರಿಕ ಕಚ್ಚಾಟದಿಂದ ಜರ್ಜರಿತಗೊಂಡಿದ್ದ ಭಾರತದಲ್ಲಿ ಸೇನೆಗೆ ಯುವಕರನ್ನು ಭರ್ತಿಮಾಡಿಕೊಂಡಿತು. ಸಂದರ್ಭ ಬಂದಲ್ಲಿ ತನ್ನ ಗುರಿಸಾಧನೆಗಾಗಿ ಬಲಪ್ರಯೋಗ ಮಾಡುವ ಅಧಿಕಾರವನ್ನು ಕಂಪೆನಿಯು ಹೊಂದಿತ್ತು. ಈ ರೀತಿ ವಾಣಿಜ್ಯ-ವ್ಯಾಪಾರವು ವಿಜಯೋತ್ಸವದ ವ್ಯವಹಾರವಾಗಿ, ವಾಣಿಜ್ಯಕೇಂದ್ರಗಳು ಕೋಠಿಗಳಾಗಿ ಪರಿವರ್ತನೆಗೊಂಡವು. ವ್ಯಾಪಾರಿಗಳು ಸೇನೆಗೆ ಅಡಿಯಾಳಾದರು.
ಬ್ರಿಟಿಷರು ತಮ್ಮ ಸೇನೆಯ ಫಿರಂಗಿದಳ ಮತ್ತು ಅನೈತಿಕತೆಯ ಬಲದಿಂದ ಭಾರತದಂತಹ ವಿಶಾಲ ದೇಶವನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಅವರು ಭಾರತದ ನವಾಬರು ಮತ್ತು ಮಹಾರಾಜರನ್ನು ಹಣ ಕೊಟ್ಟು ಪದಚ್ಯುತಿಗೊಳಿಸಿದರು, ಮನಬಂದಂತೆ ಅವರ ಖಜಾನೆಗಳನ್ನು ಬರಿದುಗೊಳಿಸಿದರು. ೧೮೪೦ರಿಂದ ಸಂತಾನಹೀನ ರಾಜರು ಸತ್ತಾಗ ‘ದತ್ತುಪುತ್ರರಿಗೆ ಹಕ್ಕಿಲ್ಲ’ ಎಂಬ ಶಾಸನದ ಜಾರಿ ಮುಂತಾದ ಕುಟಿಲ ವಿಧಾನಗಳಿಂದ ಅವರ ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡರು. ಶತಮಾನಗಳಿಂದ ಉಳುಮೆ ಮಾಡಿಕೊಂಡಿದ್ದ ರೈತರಿಂದ ಅವರ ಜಮೀನನ್ನು ಕಸಿದುಕೊಂಡರು. ಪ್ರತಿಯೊಂದು ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಕುರಿತಂತೆ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿ ಜಾನ್ ಸಲಿವಾನ್ ೧೮೪೦ರಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾನೆ – ‘ಚಿಕ್ಕ ದೇಶೀ ನ್ಯಾಯಾಲಯ ಕಣ್ಮರೆಯಾಗುತ್ತಿದೆ. ವ್ಯಾಪಾರ ವಾಣಿಜ್ಯ ಕುಸಿಯುತ್ತಿದೆ. ರಾಜಧಾನಿ ನಶಿಸುತ್ತಿದೆ. ಭಾರತೀಯರು ನಿರ್ಗತಿಕರಾಗುತ್ತಿದ್ದಾರೆ. ಆಂಗ್ಲರು ಪ್ರವರ್ಧಮಾನರಾಗುತ್ತಿದ್ದಾರೆ. ಅವರು ಗಂಗಾನದೀ ತಟದ ಸತ್ತ್ವವನ್ನು ಸ್ಪಂಜಿನಂತೆ ಹೀರಿ ಥೇಮ್ಸ್ ನದಿ ದಂಡೆಯಲ್ಲಿ ಅದನ್ನು ಹಿಂಡುತ್ತಾರೆ’.
ಭಾರತದ ಕೈಗಾರಿಕೆಗಳ ವಿನಾಶ
ಬ್ರಿಟಿಷ್ ಸರ್ಕಾರವು ಮಿಲಿಟರಿ ಮತ್ತು ನೌಕಾಬಲದ ನೆರವಿನಿಂದ ಕಂಪೆನಿಯ ಬೆಳವಣಿಗೆಗೆ ನೆರವಾಯಿತು. ಬ್ರಿಟಿಷ್ ಪಾರ್ಲಿಮೆಂಟಿನಲ್ಲಿದ್ದ ಕಂಪೆನಿಯ ಪಾಲುದಾರರು ಅನುಕೂಲಕರ ಕಾನೂನುಗಳನ್ನು ಮತ್ತು ಸ್ಥಳೀಯರ ಪ್ರತಿಭಟನೆ ಹತ್ತಿಕ್ಕುವ ಹಾಗೂ ಫ್ರೆಂಚ್ ಮತ್ತು ಡಚ್ಚರಂತಹ ವಿದೇಶೀ ಪ್ರತಿಸ್ಪರ್ಧಿಗಳನ್ನು ಎದುರಿಸುವಂತಹ ವಿದೇಶಾಂಗ ನೀತಿಯನ್ನು ರೂಪಿಸಿದರು. ಇಂಗ್ಲೆಂಡ್ ಬ್ಯಾಂಕುಗಳು ಸಾಲ ನೀಡುತ್ತಿದ್ದವು. ಕಂಪೆನಿಯ ಮುಖ್ಯ ಉದ್ದೇಶ ಹಣ ಮಾಡುವುದಾಗಿದ್ದು ಅದು ಬ್ರಿಟನ್ ಮತ್ತು ಭಾರತದ ಆಳ್ವಿಕೆಯಲ್ಲಿ ಎದ್ದುಕಾಣುತ್ತಿತ್ತು.
ಇಂಗ್ಲೆಂಡ್ನ ‘ಕೈಗಾರಿಕಾ ಕ್ರಾಂತಿ’ ಅರಳಿದ್ದು ಭಾರತದ ಕೈಗಾರಿಕೆಗಳ ಸಮಾಧಿಯ ಮೇಲೆ. ಇದಕ್ಕೆ ನಿದರ್ಶನ ಭಾರತದ ಜವಳಿ ಉದ್ಯಮ. ಬ್ರಿಟಿಷರು ತುಂಬಾ ವ್ಯವಸ್ಥಿತವಾಗಿ ಭಾರತದ ಬಟ್ಟೆ ತಯಾರಿಕೆ ಮತ್ತು ರಫ್ತುಗಳನ್ನು ನಾಶಮಾಡಿದರು. ಭಾರತದ ಜವಳಿ ಬದಲಿಗೆ ಇಂಗ್ಲೆಂಡ್ನಲ್ಲಿ ತಯಾರಾದ ಜವಳಿಯನ್ನು ಭಾರತಕ್ಕೆ ತಂದರು. ವಿಷರ್ಯಾಸವೆಂದರೆ, ಬ್ರಿಟಿಷರು ಭಾರತದ ಕಚ್ಚಾ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಿದ ಸಿದ್ಧವಸ್ತುಗಳನ್ನು ಮರಳಿ ಭಾರತಕ್ಕೆ ಹಾಗೂ ವಿಶ್ವದ ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಇದು ಭಾರತದ ಗಾಯದ ಮೇಲೆ ಬರೆ ಎಳೆದಂತಿತ್ತು.
ಭಾರತದಲ್ಲಿ ಬ್ರಿಟಿಷರು ಮಾಡಿದ ಜವಳಿ ಉದ್ಯಮದ ವಿನಾಶ ಆಧುನಿಕ ಜಗತ್ತಿನ ಕೈಗಾರಿಕೀಕರಣದ ಶೀಘ್ರ ಅವನತಿಗೆ ನಾಂದಿಯಾಯಿತು. ಭಾರತದ ಕೈಮಗ್ಗದ ಬಟ್ಟೆಗಳಿಗೆ ಇಂಗ್ಲೆಂಡಿನಲ್ಲಿ ಭಾರೀ ಬೇಡಿಕೆಯಿತ್ತು. ಈಸ್ಟ್ ಇಂಡಿಯಾ ಕಂಪೆನಿಯು ಉದ್ದೇಶಪೂರ್ವಕವಾಗಿ, ಕೈ ಕೆಲಸದ ಕಲ್ಕಾರಿ ಬಟ್ಟೆಗಳಿಗೆ ಹೆಸರಾಗಿದ್ದ ದಕ್ಷಿಣ ಭಾರತದ ಬಂದರು ಮಚಲಿಪಟ್ಟಣದಲ್ಲಿ, ೧೬೧೩ರಲ್ಲಿ ತನ್ನ ಮೊದಲ ‘ಕಾರ್ಖಾನೆ’ಯನ್ನು ಸ್ಥಾಪಿಸಿತು. ಬಂಗಾಳದ ಕೈಮಗ್ಗ ಕುಶಲಕರ್ಮಿಗಳು ಶತಮಾನಗಳ ಕಾಲ ಗಾಳಿಯಷ್ಟು ಹಗುರಾದ ಸೊಗಸಾದ ಮಸ್ಲಿನ್ ಬಟ್ಟೆ ಸೇರಿದಂತೆ ಜಗತ್ತಿನಲ್ಲಿ ಬಹುಬೇಡಿಕೆಯುಳ್ಳ ನೇಯ್ಗೆ ಬಟ್ಟೆಗಳನ್ನು ಉತ್ಪಾದಿಸುತ್ತಿದ್ದರು. ಇವಕ್ಕೆ ಯೂರೋಪಿಯನ್ ಉಡುಪು ತಯಾರಕರು ಮುಗಿಬೀಳುತ್ತಿದ್ದರು. ಹದಿನೆಂಟನೆಯ ಶತಮಾನದ ಮಧ್ಯಭಾಗದವರೆಗೂ ಬಂಗಾಳದ ನೇಯ್ಗೆ ವಸ್ತುಗಳು ಪಶ್ಚಿಮದ ಈಜಿಪ್ಟ್, ಟರ್ಕಿ ಮತ್ತು ಪರ್ಶಿಯಾ ದೇಶಗಳಿಗೆ ಹಾಗೂ ಪೂರ್ವದ ಜಾವಾ, ಚೀನಾ ಮತ್ತು ಜಪಾನ್ಗಳಿಗೆ ಹಾಗೂ ಯೂರೋಪಿಗೆ, ಒಳ್ಳೆಯ ವಾಣಿಜ್ಯ ಮಾರ್ಗಗಳ ಮೂಲಕ ರಫ್ತಾಗುತ್ತಿದ್ದವು. ೧೭೫೦ರ ದಶಕದಲ್ಲಿ ಬಂಗಾಳವೊಂದರ ನೇಯ್ಗೆ ವಸ್ತುಗಳ ರಫ್ತು ಮೊತ್ತವು ಒಂದು ಕೋಟಿ ಅರವತ್ತು ಲಕ್ಷ ರೂ.ಗಳಷ್ಟಿತ್ತೆಂದು ಅಂದಾಜು ಮಾಡಲಾಗಿದೆ. ಇದರ ಜೊತೆಗೆ ೧೭೫೩ರ ವರೆಗೆ ಬಂಗಾಳದ ರೇಷ್ಮೆ ರಫ್ತುಗಳು ವಾರ್ಷಿಕ ೬೫ ಲಕ್ಷ ರೂ. ಗಳಷ್ಟಿರುತ್ತಿತ್ತು. ಅನಂತರ ಅದು ೫೦ ಲಕ್ಷಗಳಿಗಿಳಿಯಿತು. ೧೭೫೩ರವರೆಗೆ, ಬ್ರಿಟಿಷರು ಇನ್ನೂ ಅಧಿಕಾರಕ್ಕೆ ಬಾರದೇ ಕೇವಲ ವ್ಯಾಪಾರಿಗಳಾಗಿದ್ದಾಗ, ಅವರ ಬಂಗಾಳದ ನೇಯ್ಗೆ ಮತ್ತು ರೇಷ್ಮೆ ಬಟ್ಟೆಗಳ ಬೇಡಿಕೆ ಶೇ.೩೩ ರಷ್ಟು ಹೆಚ್ಚಿತ್ತು. ಆಗ ಭಾರತದ ನೇಯ್ಗೆ ಉದ್ಯಮವು ಕ್ರಿಯಾಶೀಲವಾಗಿ, ಸಂಶೋಧನಾತ್ಮಕವಾಗಿ ಮತ್ತು ಉತ್ಪಾದನಾಶೀಲವಾಗಿತ್ತು. ರಫ್ತುಗಳು ಹೆಚ್ಚುತ್ತಿದ್ದವು. ಆದರೆ ಬ್ರಿಟಿಷರು ಅಧಿಕಾರಕ್ಕೆ ಬಂದನಂತರ ಎಲ್ಲವೂ ತಲೆಕೆಳಗಾಯಿತು.
ಸ್ವಾರ್ಥ, ಅಮಾನುಷತೆ
ಇಂಗ್ಲಿಷರು ಅಧಿಕಾರಕ್ಕೆ ಬಂದ ಮೇಲೆ ನಿರ್ದಯಿಗಳಾದರು. ಅವರು ಬಂಗಾಳದ ನೇಯ್ಗೆ ವಸ್ತುಗಳು ಮತ್ತು ರೇಷ್ಮೆಗೆ ಇಂಗ್ಲೆಂಡಿನ ಪೌಂಡ್ಗಳನ್ನು ಕೊಡುವುದನ್ನು ನಿಲ್ಲಿಸಿ ಬಂಗಾಳದ ಆದಾಯ ಮೂಲಗಳಿಂದಲೇ ನೀಡತೊಡಗಿದರು. ದರಗಳನ್ನು ಕಡಿತಗೊಳಿಸಿದರು. ಬೇರೆ ವಿದೇಶೀ ವ್ಯಾಪಾರಿಗಳನ್ನು ಹತ್ತಿಕ್ಕಿ ಕಂಪೆನಿಯ ಏಕಸ್ವಾಮ್ಯವನ್ನು ಸ್ಥಾಪಿಸಿದರು. ಭಾರತದ ದೀರ್ಘಕಾಲದ ವಾಣಿಜ್ಯ ಸಂಪರ್ಕಗಳನ್ನು ಕತ್ತರಿಸಿ ಅದರ ಜವಳಿ ಮಾರುಕಟ್ಟೆಗಳನ್ನು ನಾಶಪಡಿಸಿದರು. ಬ್ರಿಟಿಷರ ಜವಳಿ ಉತ್ಪಾದನೆ ಹೆಚ್ಚಿದಂತೆ ಅವರು ಇನ್ನೂ ಮುಂದುವರಿದರು. ಭಾರತದ ಜವಳಿ ಉತ್ಪನ್ನಗಳು ಬ್ರಿಟಿಷ್ ಉತ್ಪನ್ನಗಳಿಗಿಂತ ತೀರಾ ಸೋವಿಯಾಗಿದ್ದರಿಂದ ಬ್ರಿಟಿಷರು ಭಾರತೀಯರೊಡನೆ ಸ್ಪರ್ಧಿಸಲಾಗಲಿಲ್ಲ. ಹಾಗಾಗಿ ಬ್ರಿಟಿಷರು ಅವರನ್ನು ಮುಗಿಸಲು ಬಯಸಿದರು. ಕಂಪೆನಿಯ ಸೈನಿಕರ ನೆರವಿನಿಂದ ಅವರು ಬಂಗಾಳದ ಕೆಲವು ನೇಕಾರರ ಮಗ್ಗಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಾಶಪಡಿಸಿದರು. ಆ ಕಾಲದಲ್ಲಿ ಪ್ರಚಲಿತವಿದ್ದ ಹೇಳಿಕೆ ಮತ್ತು ಖಚಿತಪಡಿಸಲಾಗದ ವದಂತಿಯೊAದರ ಪ್ರಕಾರ, ನೇಕಾರರು ಮುಂದೆ ಮಗ್ಗಗಳನ್ನು ನಡೆಸಲಾಗದಂತೆ ಅವರ ಹೆಬ್ಬೆರಳುಗಳನ್ನು ಕತ್ತರಿಸಿದರು.
ಇಂತಹ ಎದ್ದುಕಾಣುವ ವಿನಾಶಕಾರಿ ಕ್ರಮಗಳಷ್ಟೇ ಅಲ್ಲ. ಬ್ರಿಟಿಷರು ಇವಕ್ಕಿಂತ ಹೆಚ್ಚು ಸೂಕ್ಷ್ಮವಾದ ತಂತ್ರಗಳನ್ನೂ ಬಳಸಿದರು. ಭಾರತದ ನೇಯ್ಗೆ ವಸ್ತುಗಳ ಮೇಲೆ ಶೇ. ೭೦ರಿಂದ ೮೦ರವರೆಗೆ ತೆರಿಗೆ ಹಾಕಿ ಅವನ್ನು ಇಂಗ್ಲೆಂಡ್ಗೆ ಕಳಿಸಲಾಗದಂತೆ ಮಾಡಿದರು. ಅದರಿಂದ ಭಾರತದ ಬಟ್ಟೆ ದುಬಾರಿಯಾಯಿತು. ಕನಿಷ್ಠ ಕೂಲಿಗೆ, ಬಂಗಾಳಿ ಕಸಬುದಾರರು ತಯಾರಿಸಿದ ಬಟ್ಟೆ ದರಕ್ಕಿಂತ ಕಡಮೆ ದರದಲ್ಲಿ, ಬ್ರಿಟಿಷ್ ಕಾರ್ಖಾನೆಗಳು ಉತ್ಪಾದಿಸಿದ ಸೋವಿ ಬಟ್ಟೆಗಳ ಬೇಲುಗಳು ಭಾರತದ ಮಾರುಕಟ್ಟೆಯನ್ನು ತುಂಬಿದವು. ಬ್ರಿಟನ್ ಭಾರತದ ಸರ್ಕಾರ ಮತ್ತು ಬಂದರು ಪಟ್ಟಣಗಳನ್ನು ತನ್ನ ಸಂಪೂರ್ಣ ಸ್ವಾಧೀನದಲ್ಲಿಟ್ಟುಕೊಂಡಿದ್ದರಿಂದ ಹಾಗೂ ತನಗೆ ಬೇಕಾದ ರೀತಿಯಲ್ಲಿ ವಾಣಿಜ್ಯ ನಿಯಮಗಳನ್ನು ರೂಪಿಸಿಕೊಳ್ಳುತ್ತಿದ್ದದ್ದರಿಂದ ಭಾರತೀಯರು ಬ್ರಿಟನ್ನಿಂದ ಬರುವ ಸಿದ್ಧವಸ್ತುಗಳಿಗೆ ಪ್ರತಿಕ್ರಮವಾಗಿ ತೆರಿಗೆ ವಿಧಿಸುವುದು ಸಾಧ್ಯವಿರಲಿಲ್ಲ.
೧೮ನೆಯ ಶತಮಾನದ ಪ್ರಾರಂಭದಲ್ಲಿ ಭಾರತದ ಜವಳಿ ಉದ್ಯಮವು ಜಗತ್ತಿನ ಶೇ. ೨೫ರಷ್ಟಿತ್ತು. ಆದರೆ ಅನಂತರ ಅದರ ಸರ್ವನಾಶವಾಯಿತು. ಕಂಪೆನಿಯ ದಕ್ಷ ಅಧಿಕಾರಿ ಲಾರ್ಡ್ ವಿಲಿಯಂ ಬೆಂಟಿಂಕನ ಮಾತುಗಳಲ್ಲಿ ಹೇಳುವುದಾದರೆ ‘ಹತ್ತಿ ಕೈಮಗ್ಗಗಳ ಕೆಲಸಗಾರರ ಮೂಳೆಗಳು ಭಾರತದ ಬಯಲು ಪ್ರದೇಶಗಳನ್ನು ಬಿಳಿದುಗೊಳಿಸುತ್ತಿದ್ದವು.’
ಆದರೂ ಭಾರತವು ಹತ್ತಿಯನ್ನು ಬೆಳೆಯುತ್ತಲೇ ಇತ್ತು, ಬಹುಕಾಲ, ಮುಖ್ಯವಾಗಿ ಬ್ರಿಟನ್ಗೆ ಕಳಿಸುವುದಕ್ಕಾಗಿ. ಭಾರತದಲ್ಲಿ ಅದನ್ನು ನೂಲು ಮಾಡುವ ಅಥವಾ ನೇಯುವ ಕೆಲಸ ಬಹುಪಾಲು ನಡೆಯುತ್ತಿರಲಿಲ್ಲ. ಕುಶಲ ನೇಕಾರರು ಭಿಕ್ಷುಕರಾದರು. ಈ ವಿನಾಶದ ಘೋರ ನಿದರ್ಶನವನ್ನು, ಮಸ್ಲಿನ್ ಬಟ್ಟೆ ಉತ್ಪಾದನೆಯ ದೊಡ್ಡ ಕೇಂದ್ರವಾಗಿದ್ದ ಢಾಕಾದಲ್ಲಿ ಕಾಣಬಹುದಾಗಿತ್ತು.
ಭಾರತಕ್ಕೆ ಬ್ರಿಟಿಷ್ ಜವಳಿ ರಫ್ತುಗಳು ತೀವ್ರವಾಗಿ ಏರಿದವು. ೧೮೩೦ರಲ್ಲಿ ಇದು ವಾರ್ಷಿಕ ೬ ಕೋಟಿ ಗಜ ಇದ್ದದ್ದು ೧೮೫೮ರ ಹೊತ್ತಿಗೆ ೯೬ ಕೋಟಿ ೮೦ ಲಕ್ಷವಾಯಿತು. ೧೮೭೦ರಲ್ಲಿ ಇದು ೧೦೦ ಕೋಟಿ ಗಡಿ ದಾಟಿತು. ಇದು ಪ್ರತಿ ಭಾರತೀಯ ಪುರುಷ, ಮಹಿಳೆ ಆಥವಾ ಮಗುವಿಗೆ ವಾರ್ಷಿಕ ಸರಾಸರಿ ೩ ಗಜದಷ್ಟಾಗುತ್ತಿತ್ತು.
ಸರ್ವಾಂಗೀಣ ಅವನತಿ
ಕಂಪೆನಿಯ ವ್ಯಾಪಾರೀ ನೀತಿಗಳಿಂದಾಗಿ ಉಂಟಾದ ಭಾರತೀಯ ಕೈಗಾರಿಕೆಗಳ ನಾಶವು ಸಂಬಂಧಿಸಿದ ಕುಶಲ ಕೆಲಸಗಾರರಿಗಷ್ಟೇ ಸೀಮಿತಗೊಳ್ಳಲಿಲ್ಲ. ಬ್ರಿಟನ್ನಿನ ಕೈಗಾರಿಕಾ ಏಕಸ್ವಾಮ್ಯವು ಭಾರತೀಯರನ್ನು ಕೃಷಿ ಕ್ಷೇತ್ರಕ್ಕೆ ತಳ್ಳಿತು – ಕೃಷಿಭೂಮಿ ತಾಳಿಕೊಳ್ಳಲಾರದಷ್ಟು ಪ್ರಮಾಣದಲ್ಲಿ, ಇದು ಈವರೆಗೆ ಭೂಮಿಯನ್ನು ಉಳುತ್ತಿದ್ದ ರೈತರಿಗೆ ತೀವ್ರ ಹೊಡೆತ ಕೊಟ್ಟಿತು. ಹಳ್ಳಿಯ ಕೃಷಿ ಕೂಲಿಯ ಕೆಲಸವು, ಪದಚ್ಯುತಗೊಂಡ ಈ ಕುಶಲಕರ್ಮಿಗಳ ಪಾಲಾಯಿತು. ಈ ಮೊದಲು ಗ್ರಾಮೀಣ ಕುಟುಂಬಗಳಲ್ಲಿ ಪುರುಷರು ಹೊಲಗಳಲ್ಲಿ ಕೃಷಿಕಾಯಕದಲ್ಲಿ ತೊಡಗಿದಾಗ ಮಹಿಳೆಯರು ಮನೆಗಳಲ್ಲಿ ನೂಲು ತೆಗೆಯುತ್ತಿದ್ದರು, ಬಟ್ಟೆ ನೇಯುತ್ತಿದ್ದರು. ಈಗ ಇಬ್ಬರಿಗೂ ಭಾರೀ ಭಂಗವುಂಟಾಯಿತು. ಪ್ರತಿಕೂಲ ಹವಾಮಾನ, ಬರಗಾಲಗಳಿಂದ ಕೃಷಿ ಕೆಲಸ ಕುಂಠಿತಗೊಂಡಾಗ ಅವರಿಗೆ ನೇಯ್ಗೆಯಿಂದ ಬರುತ್ತಿದ್ದ ಆದಾಯ ಇಲ್ಲದಾಯಿತು. ಈ ರೀತಿಯಾಗಿ ಭಾರತದ ಹಳ್ಳಿಗಳ ಬಡತನವು ಬ್ರಿಟಿಷ್ ಆಡಳಿತದ ನೇರ ಫಲಶ್ರುತಿಯಾಯಿತು.
ವಸಾಹತುಯುಗದ ಬಹುಕಾಲವು, ಭಾರತದ ಉತ್ಪಾದನಾ ಉದ್ಯಮದ ಅಭದ್ರತೆ, ಅತಂತ್ರ ಮತ್ತು ಅಪಜಯದ ಗಾಥೆಯಾಗಿತ್ತು. ಭಾರತದ ಜವಳಿ ಉದ್ಯಮಕ್ಕೆ ಒದಗಿದ ದುಃಸ್ಥಿತಿ ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿತು. ಸಂಡರ್ಲ್ಯಾಂಡ್ ವರ್ಣಿಸಿದಂತೆ, ಬೃಹತ್ ಕೈಗಾರಿಕಾ ರಾಷ್ಟ್ರವಾಗಿದ್ದ ಭಾರತವು ಕೇವಲ ಕಚ್ಚಾವಸ್ತುಗಳು, ಆಹಾರ ಸಾಮಗ್ರಿಗಳು, ಹತ್ತಿ, ಸಣಬು, ರೇಷ್ಮೆ, ಕಲ್ಲಿದ್ದಲು, ಅಫೀಮು, ಅಕ್ಕಿ, ಸಾಂಬಾರ ಪದಾರ್ಥಗಳು ಹಾಗೂ ಟೀ – ಇವನ್ನು ರಫ್ತು ಮಾಡುವ ದೇಶವಾಯಿತು. ಬ್ರಿಟಿಷ್ ಆಡಳಿತಾವಧಿಯಲ್ಲಿ ಉಂಟಾದ ಉದ್ಯಮದ ಕುಸಿತದಿಂದ ಕೈಗಾರಿಕಾ ವಸ್ತುಗಳ ರಫ್ತು ಕುಂಠಿತಗೊಂಡು, ಮೊದಲು ಜಾಗತಿಕ ಕೈಗಾರಿಕಾ ಉತ್ಪನ್ನಗಳ ಶೇ.೨೭ರಷ್ಟು ಇದ್ದದ್ದು ಶೇ.೨ಕ್ಕೆ ಕುಸಿಯಿತು. ಆದರೆ ಬ್ರಿಟನ್ನಿಂದ ಭಾರತಕ್ಕೆ ರಫ್ತುಗಳು ತೀವ್ರಗತಿಯಲ್ಲಿ ಹೆಚ್ಚಾದವು. ಭಾರತದ ವಾಣಿಜ್ಯೋದ್ಯಮವು ತಿರುವುಮುರುವಾಯಿತು. ರಫ್ತು ಮಾಡುತ್ತಿದ್ದ ಬೃಹದ್ ರಾಷ್ಟ್ರವೊಂದು ಕೇವಲ ಬ್ರಿಟಿಷ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಮಾರುಕಟ್ಟೆಯಾಯಿತು. ಆ ಆಮದುಗಳಿಗೆ ಸುಂಕವಿರಲಿಲ್ಲ. ಗುಣಮಟ್ಟ ಹಾಗೂ ಬೆಲೆಯಲ್ಲಿ ಭಾರತೀಯ ವಸ್ತುಗಳಿಗಿಂತ ಕಳಪೆಯಾಗಿದ್ದ ಅವು ಭಾರತೀಯ ವಸ್ತುಗಳ ಕತ್ತು ಹಿಸುಕಿದವು – ಬ್ರಿಟಿಷ್ ಕಾನೂನುಗಳು ಮತ್ತು ನೀತಿ-ನಿಯಮಗಳ ಬಲದಿಂದ.
ಸುಲಿಗೆ ಹಾಗೂ ಕರಭಾರ
ಬ್ರಿಟಿಷ್ ಆಡಳಿತದ ದುಷ್ಪರಿಣಾಮಗಳು ಇಲ್ಲಿಗೇ ನಿಲ್ಲಲಿಲ್ಲ. ತೆರಿಗೆಗಳ ಹೆಸರಿನಲ್ಲಿ ದರೋಡೆ, ಸುಲಿಗೆ ಮಾಡುವುದು ಅಚ್ಚುಮೆಚ್ಚಾಗಿದ್ದ ಬ್ರಿಟಿಷರಿಗೆ ಭಾರತವು ಹಣ ಕೊಡುವ ಕಾಮಧೇನು ಆಗಿತ್ತು. ಚಾತಮï ಅರ್ಲ್ ವಿಲಿಯಂ ಪಿಟ್ನ ಮಾತಿನಲ್ಲಿ, ಲಂಡನ್ ಖಜಾನೆ ತುಂಬುತ್ತಿದ್ದ ಭಾರತದ ಸಂಪತ್ತು ‘ದೇಶವೊಂದರ ಉದ್ಧಾರಕ್ಕಾಗಿ ದೇವರು ಕೊಟ್ಟ ವರ’ಆಗಿತ್ತು. ಬ್ರಿಟಿಷರು ೧೭೬೫ ಮತ್ತು ೧೮೧೫ರ ಕಾಲಾವಧಿಯಲ್ಲಿ ಭಾರತದಿಂದ ಪ್ರತಿವರ್ಷ ಸುಮಾರು ೧ ಕೋಟಿ ೮೦ ಲಕ್ಷ ಪೌಂಡ್ ಮೊತ್ತವನ್ನು ವಸೂಲು ಮಾಡುತ್ತಿದ್ದರು. ಲಂಡನ್ನಲ್ಲಿ ಫ್ರೆಂಚ್ ರಾಯಭಾರಿ ಆಗಿದ್ದ ಕಾಮ್ಟೆ ಡಿ ಚಾಟ್ಲೆಟ್ ಪ್ರಕಾರ ‘ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ನಿರ್ದೇಶಕರುಗಳಿಗಿಂತ ಹೆಚ್ಚು ಶ್ರೀಮಂತರಾಗಿದ್ದ ಯೂರೋಪಿನ ರಾಜರು ಕೆಲವೇ ಕೆಲವು ಮಂದಿ ಇದ್ದರು’.
ಕಂಪೆನಿಯ ಭೂತೆರಿಗೆ ಭೂಉತ್ಪನ್ನದ ಕನಿಷ್ಠ ಅರ್ಧದಷ್ಟಿದ್ದು, ಇದನ್ನು ಕೊಡಲಾಗದೆ ೧೮ನೆಯ ಶತಮಾನದ ಕೊನೆಯಲ್ಲಿ, ೨/೩ ಭಾಗ ಜನರು ಭೂಮಿಯನ್ನೇ ತೊರೆದರು. ವಿಲ್ ಡ್ಯುರಾಂಟ್ ಬರೆದಂತೆ – ‘ತೆರಿಗೆ ಸುಸ್ತಿದಾರರನ್ನು ಸೆರೆಮನೆಗೆ ಹಾಕಲಾಗುತ್ತಿತ್ತು. ಅವರನ್ನು ಉರಿಬಿಸಿಲಲ್ಲಿ ನಿಲ್ಲಿಸಲಾಗುತ್ತಿತ್ತು. ತೆರಿಗೆ ಕಟ್ಟಲು ತಂದೆಯರು ಮಕ್ಕಳನ್ನು ಮಾರುತ್ತಿದ್ದರು. ತೆರಿಗೆಗಾಗಿ ಹಿಂಸಿಸಲಾಗುತ್ತಿತ್ತು. ಬಡಪಾಯಿಗಳ ಭೂಮಿಯನ್ನು ಬಲವಂತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿತ್ತು. ಈ ರೀತಿ ಈಸ್ಟ್ ಇಂಡಿಯಾ ಕಂಪೆನಿಯು ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಜನರ ಜೀವನಾಧಾರಕ್ಕೆ ಕಲ್ಲು ಹಾಕಿ ಭೂರಹಿತ ರೈತನನ್ನು ಸೃಷ್ಟಿಸಿತು. ವಿಚಿತ್ರವೆಂದರೆ, ಹಿಂದಿನ ಭಾರತೀಯ ರಾಜರು ರಾಜಾದಾಯಕ್ಕೆ ರೈತರಿಗೆ ತೆರಿಗೆ ಹಾಕದೆ, ದೇಶೀ ಮತ್ತು ವಿದೇಶೀ ವ್ಯಾಪಾರ ವಾಣಿಜ್ಯಗಳಿಂದ ಕರ ಸಂಗ್ರಹಿಸುತ್ತಿದ್ದರು. ಕಂಪೆನಿಯ ದುರಾಸೆಯಿಂದ ಪರಿಸ್ಥಿತಿ ತದ್ವಿರುದ್ಧವಾಯಿತು.
ಭಾರತದಲ್ಲಿ ಬ್ರಿಟಿಷ್ ಆಡಳಿತದ ಹೆಬ್ಬಾಗಿಲು ತೆರೆದ ೧೭೫೭ರ ಪ್ಲಾಸಿ ಯುದ್ಧದ ವೀರ ರಾಬರ್ಟ್ ಕ್ಲೈವ್ನಂಥ ವಸಾಹತುಶಾಹಿವಾದಿಗಳು ತಮ್ಮ ಧನದಾಹ ಮತ್ತು ಭ್ರಷ್ಟಾಚಾರಗಳ ಬಗ್ಗೆ ಎಂದಿಗೂ ನಾಚಿಕೆಪಟ್ಟುಕೊಳ್ಳಲಿಲ್ಲ. ಮೊದಲ ಬಾರಿ ಕ್ಲೈವ್ ಭಾರತದಿಂದ ಇಂಗ್ಲೆಂಡ್ಗೆ ಹಿಂದಿರುಗಿದಾಗ ಕೊಳ್ಳೆಹೊಡೆದ ೨,೩೪,೦೦೦ ಪೌಂಡ್ ಹಣವನ್ನು ಹೊತ್ತೊಯ್ದ. ಅದರ ಈಗಿನ ಮೌಲ್ಯ ೨ ಕೋಟಿ ೩೦ ಲಕ್ಷ ಪೌಂಡ್ ಆಗಿದ್ದು ಅದು ಅವನನ್ನು ಯೂರೋಪಿನ ಅತಿ ಶ್ರೀಮಂತರಲ್ಲಿ ಒಬ್ಬನನ್ನಾಗಿಸಿತ್ತು.
ಅವನು ಮತ್ತು ಅವನ ಅನುಯಾಯಿಗಳು ಭಾರತದಲ್ಲಿ ಲೂಟಿ ಹೊಡೆದ ಹಣದಿಂದ ಇಂಗ್ಲೆAಡ್ನಲ್ಲಿ ಹಲವು ಮತಕ್ಷೇತ್ರಗಳನ್ನೇ ಖರೀದಿಸಿದರು. ಆದರೆ ಬಹಿರಂಗವಾಗಿ ತಾವು ಭಾರತದಿಂದ ಏನನ್ನೂ ಕದ್ದಿಲ್ಲವೆಂದು ತಮ್ಮ ಹುಸಿ ಸ್ವಯಂ ಸಂಯಮವನ್ನು ಕೊಚ್ಚಿಕೊಳ್ಳುತ್ತಿದ್ದರು.
೧೭೬೫ರಲ್ಲಿ ಭಾರತಕ್ಕೆ ಮರಳಿಬಂದ ಕ್ಲೈವ್ ೨ ವರ್ಷಗಳ ನಂತರ ಇಂಗ್ಲೆಂಡ್ಗೆ ಹಿಂದಿರುಗುವಾಗ ನಾಲ್ಕು ಲಕ್ಷ ಪೌಂಡ್, ಈಗಿನ ೪ ಕೋಟಿ ಪೌಂಡ್, ಸಂಪತ್ತು ಕೊಂಡೊಯ್ದ. ಕ್ಲೈವ್ ವಾರ್ಷಿಕ ಕಾಣಿಕೆಯಾಗಿ ಲಕ್ಷಾಂತರ ರೂ.ಗಳನ್ನು ಪಡೆಯುತ್ತಿದ್ದ. ತನ್ನ ಅಧೀನಕ್ಕೊಳಪಟ್ಟ ಜನಗಳಲ್ಲಿದ್ದ ತನಗೆ ಬೇಕಾದ ಆಭರಣಗಳನ್ನು ತೆಗೆದುಕೊಳ್ಳುತ್ತಿದ್ದ. ಅವನ್ನು ಇಂಗ್ಲೆಂಡ್ನಲ್ಲಿ ೫ರಷ್ಟು ಹೆಚ್ಚು ಬೆಲೆಗೆ ಮಾರಿಕೊಳ್ಳುತ್ತಿದ್ದ. ಅವನ ಮಾತುಗಳಲ್ಲಿ ಹೇಳುವುದಾದರೆ, ‘ಸಿರಿವಂತ ನಗರವೊಂದು ನನ್ನ ಮರ್ಜಿಯಲ್ಲಿತ್ತು. ಅದರ ಶ್ರೀಮಂತ ಬ್ಯಾಂಕರುಗಳು ನನ್ನ ಮುಗುಳುನಗೆಗಾಗಿ ಮುಗಿಬೀಳುತ್ತಿದ್ದರು. ಎರಡೂ ಕಡೆ ಚಿನ್ನ ಮತ್ತು ಆಭರಣಗಳಿಂದ ತುಂಬಿದ, ತೆರೆದ ಬಾಗಿಲ ಸಂದೂಕುಗಳು ನನ್ನೊಬ್ಬನಿಗೆ ಮಾತ್ರ ಸ್ವಾಗತ ಕೋರುತ್ತಿದ್ದವು. ಆ ದೇಶದ ಅಗಾಧ ಸಂಪತ್ತಿನ ಬಗ್ಗೆ ಹಾಗೂ ನಾನು ಅದರಲ್ಲಿ ತೆಗೆದುಕೊಂಡ ಅತ್ಯಲ್ಪ ಪ್ರಮಾಣದ ಬಗ್ಗೆ ಯೋಚಿಸಿದಾಗ ನನ್ನ ಸಂಯಮದ ಬಗ್ಗೆ ನನಗೇ ಅಚ್ಚರಿಯುಂಟಾಗುತ್ತದೆ.’
ಕಂದಾಯ ವಸೂಲಿ
ಇಂಗ್ಲೆಂಡ್ನ ಹೌಸ್ ಆಫ್ ಕಾಮನ್ಸ್ ಸಭೆಯ ಚರ್ಚೆಗಳಲ್ಲಿ ಭಾರತದ ಆದಾಯದ ಅಂಕಿಸಂಖ್ಯೆಗಳದ್ದೇ ಸಿಂಹಪಾಲು ಇರುತ್ತಿತ್ತು. ಹಾಗಾಗಿ ಕಂಪೆನಿಯ ಅಧಿಕಾರಿಗಳು ಆಕರ್ಷಣೆಗೆ ಒಳಗಾಗುತ್ತಿದ್ದುದು ಸಹಜವೆಂದು ಬಹಳ ಜನ ಭಾವಿಸಿದ್ದರು. ಅದೇ ರೀತಿ ಆಗಿನ ಅನೇಕ ಬ್ರಿಟಿಷರು ತಮ್ಮ ದೇಶದ ಹೆಸರಿನಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ಭಯಭೀತರಾಗಿದ್ದರೆಂಬುದನ್ನು ತಿಳಿದುಕೊಳ್ಳುವುದು ಉಚಿತವೆನಿಸುತ್ತದೆ.
ಬಂಗಾಳದ ಬ್ರಿಟಿಷ್ ಆಡಳಿತಾಧಿಕಾರಿ ಎಫ್.ಜೆ. ಶೋರ್ ೧೮೫೭ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಒಂದು ಅಸಾಧಾರಣ ತಪ್ಪೊಪ್ಪಿಗೆಯಂತಹ ಹೇಳಿಕೆ ಕೊಟ್ಟ – ‘ಬ್ರಿಟಿಷರ ಮೂಲಭೂತ ಉದ್ದೇಶವು ತಮಗೆ ಅನುಕೂಲವಾಗುವ ಎಲ್ಲ ರೀತಿಗಳಿಂದಲೂ ಭಾರತವನ್ನು ತಮ್ಮ ಅಧೀನಕ್ಕೊಳಪಡಿಸಿಕೊಳ್ಳುವುದಾಗಿದೆ. ಭಾರತೀಯರಿಗೆ ಗರಿಷ್ಠಮಟ್ಟದ ತೆರಿಗೆ ಹಾಕಲಾಗಿದೆ. ನಮ್ಮ ವಶವಾದ ಪ್ರತಿಯೊಂದು ಪ್ರಾಂತವನ್ನೂ ಅಧಿಕ ಸುಲಿಗೆಯ ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ರೀತಿ ಮಾಡಿ ನಾವು, ಭಾರತೀಯ ರಾಜರುಗಳಿಗಿಂತ ಹೇಗೆ ಹೆಚ್ಚು ಆದಾಯವನ್ನು ಸಂಗ್ರಹಿಸಿದ್ದೇವೆಂದು ಜಂಬ ಕೊಚ್ಚಿಕೊಳ್ಳುತ್ತೇವೆ’.
ಬಹಳ ಜನ ಭಾರತೀಯ ರಾಜರ ಆಡಳಿತ ಒಳ್ಳೆಯದೇನಾಗಿರಲಿಲ್ಲವಾದರೂ ಕಂಪೆನಿಯ ಆಡಳಿತವು, ಶೋರ್ ಒಪ್ಪಿಕೊಂಡಂತೆ ಅದಕ್ಕಿಂತ ತೀರಾ ಕೆಟ್ಟದಾಗಿತ್ತು. ನೇರವಾಗಿ ತಮ್ಮ ಆಡಳಿತಕ್ಕೆ ಒಳಪಡಿಸಿಕೊಳ್ಳಲು ಇಚ್ಛಿಸದ ರಾಜ್ಯಗಳಲ್ಲಿ ಅವರು ತಮಗೆ ಅನುಕೂಲವರ್ತಿಗಳಾದ ‘ದೇಶೀ’ ರಾಜರುಗಳನ್ನು ನೇಮಿಸುತ್ತಿದ್ದರು. ಅವರನ್ನು ಸಿಂಹಾಸನದ ಮೇಲೆ ಕೂರಿಸಿದ್ದಕ್ಕಾಗಿ ಮತ್ತು ಶತ್ರುರಾಜ್ಯಗಳ ವಿರುದ್ಧ ಅವರ ರಕ್ಷಣೆಗಾಗಿ ‘ಸಂರಕ್ಷಣಾ ಧನ’ ಎಂಬ ಹೆಸರಿನಲ್ಲಿ ಈಗಿನ ಕಾಲದ ಮಾಫಿಯಾಗಳಂತೆ ಭಾರೀ ‘ಶುಲ್ಕ’ವನ್ನು ವಸೂಲು ಮಾಡುತ್ತಿದ್ದರು. ಅದನ್ನು ಬ್ರಿಟಿಷರು ನಯವಾದ ಭಾಷೆಯಲ್ಲಿ ‘ಪೂರಕ ಭತ್ಯೆ’ ಎಂದು ಕರೆಯುತ್ತಿದ್ದರು. ಈ ರಾಜರು ಕಂಪೆನಿಯೊಡನೆ ಹೊಂದಿಕೊಂಡು, ತಮ್ಮ ರಾಜ್ಯದಲ್ಲಿ ತಮ್ಮ ರಕ್ಷಣೆಗಾಗಿ ಕಂಪೆನಿಯು ನಿಯೋಜಿಸಿದ ಬ್ರಿಟಿಷ್ ಸೈನ್ಯಕ್ಕಾಗಿ ಭಾರೀ ಮೊತ್ತದ ಶುಲ್ಕ ತೆರುತ್ತಿದ್ದರು. ಒಂದು ಪಕ್ಷ ಹಣ ಕೊಡದಿದ್ದಲ್ಲಿ ಆ ಸೈನ್ಯವನ್ನು, ಆ ರಾಜರ ವಿರುದ್ಧ ಬಳಸಿಕೊಳ್ಳಲಾಗುತ್ತಿತ್ತು.
೧೯ನೆಯ ಶತಮಾನದ ಆದಿಭಾಗದಲ್ಲಿ ಹೈದರಾಬಾದ್ ನಿಜಾಮನಿಗೆ ಅತಿ ಹೆಚ್ಚು ಶುಲ್ಕಕ್ಕೆ ರಕ್ಷಣೆ ಒದಗಿಸಲು ಅವನನ್ನು ಬಲವಂತದಿಂದ ಒಪ್ಪಿಸಲಾಯಿತು. ಸೇನಾ ಕಮಾಂಡರ್ಗೆ ನಿಗದಿಯಾದ ವೇತನ ಮಾಸಿಕ ೫೦೦೦ ಪೌಂಡ್ ಮತ್ತು ಬ್ರಿಟಿಷರಿಗೆ ಕೊಡುವ ಎಲ್ಲ ವೆಚ್ಚವನ್ನು ಆ ರಾಜ್ಯದ ಖಜಾನೆಗೆ ಖರ್ಚು ಹಾಕಲಾಗುತ್ತಿತ್ತು. ಇದರಿಂದ, ಅವನು ೧೮೧೪ರಲ್ಲಿ ಸ್ಥಾಪನೆಗೊಂಡ, ಗವರ್ನರ್-ಜನರಲ್ಗೆ ಸಂಬಂಧಿಸಿದ ಬ್ಯಾಂಕ್ನಿಂದ ಶೇ.೨೪ರ ಬಡ್ಡಿಯಂತೆ ಸಾಲ ಪಡೆಯಬೇಕಾಗುತ್ತಿತ್ತು. ಅವನಿಗೆ ಗೊತ್ತಾಗುವಷ್ಟರಲ್ಲಿ ನಿಜಾಮನು ಆ ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ಸಾಲಗಾರನಾದ. ದಕ್ಷಿಣದಲ್ಲಿ ಆರ್ಕಾಟ್ ನವಾಬನ ಗತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅವನು ಬ್ಯಾಂಕ್ನಲ್ಲಿ ಮಾಡಿದ ಸಾಲ ತೀರಿಸಲಾಗದೆ ತನ್ನ ಪ್ರಾಂತದ ಬಹುಭಾಗವನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು.
ಕಂಪೆನಿಯ ಆಡಳಿತದ ಕಂದಾಯ ವಸೂಲು ಮಾಡುವ ಹಕ್ಕನ್ನು ಮೊದಲೇ ಪಡೆದುಕೊಂಡ ಬ್ರಿಟಿಷರು ಭಾರತದ ರೈತರ ರಕ್ತ ಹಿಂಡಿದರು. ಒಂದು ಕಡೆ ಗ್ರಾಮಾಂತರ ಭಾಗದಲ್ಲಿ ಕಂದಾಯ ವಸೂಲು ಮಾಡಲು ನೇಮಕಗೊಂಡಿದ್ದ ಅಧಿಕಾರಿಗಳು ಬಹಳ ಕಡಮೆ ಇದ್ದರು; ಇನ್ನೊಂದೆಡೆ ಸರ್ಕಾರವು ಅವರನ್ನು ಪೂರ್ಣ ನಂಬುವಂತೆಯೂ ಇರಲಿಲ್ಲ. ಹೀಗಾಗಿ ಕಂದಾಯ ವಸೂಲಿಗಾಗಿ ಬಹಳಷ್ಟು ಲಿಖಿತ ಕಾನೂನು ಕಟ್ಟಳೆಗಳು ಜಾರಿಗೆ ಬಂದವು. ಮೊದಲು ಸ್ಥಳೀಯ ರಾಜರು ಕಂದಾಯ ವಸೂಲು ಮಾಡುವಾಗ ಬರಗಾಲ, ಬೆಳೆನಾಶ ಹಾಗೂ ಕುಟುಂಬದಲ್ಲಿ ಮರಣ, ಮದುವೆ ಮುಂತಾದ ತುರ್ತು ಪರಿಸ್ಥಿತಿಗಳನ್ನು ಗಮನಿಸಿ ರೈತರಿಗೆ ರಿಯಾಯಿತಿ ತೋರಿಸುತ್ತಿದ್ದರು. ಆದರೆ ಈ ಕಂದಾಯ ವಸೂಲಿಗೆ ಲಿಖಿತ ಕಾನೂನುಗಳು ಜಾರಿಗೆ ಬಂದ ಮೇಲೆ ಬ್ರಿಟಿಷ್ ರೆವಿನ್ಯೂ ಅಧಿಕಾರಿಗಳು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೇ ಹೊರತು ಮೇಲ್ಕಂಡ ಯಾವ ಪರಿಸ್ಥಿತಿಗಳಿಗೂ ಬೆಲೆ ಕೊಡುತ್ತಿರಲಿಲ್ಲ. ಈ ಹೊಸ ವ್ಯವಸ್ಥೆಯ ಉದ್ದೇಶವು ಸ್ಥಳೀಯ ನಾಯಕರ ಮಧ್ಯಸ್ಥಿಕೆಯಿಲ್ಲದೆ ಕಂಪೆನಿಗೆ ನಿಯಮಿತವಾಗಿ ಕಂದಾಯಾದಾಯ ಬರುವುದನ್ನು ಖಾತ್ರಿ ಮಾಡಿಕೊಳ್ಳುವುದಾಗಿತ್ತು. ಮುಖತಃ ಸಂಪರ್ಕದ ಸ್ಥಾನದಲ್ಲಿ ಈಗ ಲಿಖಿತ ಕಾನೂನುಗಳು ಬಂದಿದ್ದವು. ಅವು ಭೂ ಹಿಡುವಳಿದಾರರು ತಕರಾರು ಮಾಡದೆ ತಪ್ಪದೆ ಪ್ರತಿ ತಿಂಗಳು ನಿಗದಿತ ಹಣವನ್ನು ಕೊಡಬೇಕೆಂದು ಹೇಳುತ್ತಿದ್ದವು. ಇದರಿಂದ ೧೮ನೆಯ ಶತಮಾನದ ಭಾರತದ ರಾಜಕೀಯಕ್ಕೆ ಅತ್ಯಗತ್ಯವಾಗಿದ್ದ ವೈಯಕ್ತಿಕ ಸಮಾಲೋಚನೆಯನ್ನು ಕಡೆಗಣಿಸಲಾಯಿತು. ಫಲವಾಗಿ ಈ ವ್ಯವಸ್ಥೆಯು ಅತ್ಯಂತ ಶ್ರೀಮಂತ ಸಂಪತ್ತಿನ ಸುಲಿಗೆ ಮತ್ತು ವಿನಾಶಕ್ಕೆ ಕಾರಣವಾಯಿತು.
ಅಮಿತ ಶೋಷಣೆ
ಬ್ರಿಟಿಷರು ಮೂರು ಬಗೆಯ ಕಂದಾಯ ವ್ಯವಸ್ಥೆಗಳನ್ನು ಜಾರಿಗೆ ತಂದರು – ಭಾರತದ ಪೂರ್ವಭಾಗ ಮತ್ತು ಮದ್ರಾಸ್ ಪ್ರಾಂತದ ಮೂರನೆಯ ಒಂದು ಭಾಗದಲ್ಲಿ ಜಮೀನ್ದಾರಿ ಪದ್ಧತಿ, ದಕ್ಷಿಣದ ಬಹುಭಾಗ ಹಾಗೂ ಭಾಗಶಃ ಉತ್ತರ ಭಾಗಗಳಲ್ಲಿ ರೈತವಾರಿ ಮತ್ತು ಪಶ್ಚಿಮ ಭಾರತದಲ್ಲಿ ಮಹಲ್ವಾರಿ. ಬ್ರಿಟಿಷರು ಜಮೀನ್ದಾರಿ ಪದ್ಧತಿಯ ಅಂಗವಾಗಿ ೧೭೯೩ರಲ್ಲಿ ಖಾಯಂ ಕಂದಾಯ ವಸೂಲಿ ವ್ಯವಸ್ಥೆಯನ್ನು ಜಾರಿಗೆ ತಂದರು. ಈ ವ್ಯವಸ್ಥೆಯಲ್ಲಿ ರೈತರು ಇದುವರೆಗೂ ಪ್ರಚಲಿತವಿದ್ದ ಬೆಳೆಯ ರೂಪದ ಕಂದಾಯದ ಬದಲು ಹಣದ ರೂಪದಲ್ಲಿ ಸಂದಾಯ ಮಾಡಬೇಕಾಯಿತು. ಬೆಳೆ ನಷ್ಟವಾದರೂ ಅವನಿಗೆ ಕಂದಾಯ ವಿನಾಯಿತಿ ದೊರೆಯುತ್ತಿರಲಿಲ್ಲ. ಎಷ್ಟೋ ಬಾರಿ ಬ್ರಿಟಿಷರಿಗೆ ಕಟ್ಟಬೇಕಾಗಿದ್ದ ತೆರಿಗೆಯು ರೈತರು ಭೂಮಿಯಲ್ಲಿ ಬೆಳೆದ ಬೆಳೆಯ ಒಟ್ಟು ಬೆಲೆಗಿಂತ ಜಾಸ್ತಿಯಾಗಿರುತ್ತಿತ್ತು. ರೈತವಾರಿ ಮತ್ತು ಮಹಲ್ವಾರಿ ಪ್ರದೇಶಗಳಲ್ಲಿ ಕಂದಾಯವನ್ನು ಖಾಯಂ ಆಗಿ ನಿಗದಿಗೊಳಿಸಿರಲಿಲ್ಲ. ಅದನ್ನು ಆಗಾಗ ಪರಿಷ್ಕರಿಸಿ ಹೆಚ್ಚಿಸುತ್ತಿದ್ದುದು ರೈತರಿಗೆ ಕಷ್ಟಕರವಾಗುತ್ತಿತ್ತು. ಇನ್ನೂ ಕಠಿಣವೆಂದರೆ ಕಂದಾಯವನ್ನು ಧಾನ್ಯದ ರೂಪದಲ್ಲಿ ಕೊಡದೆ ನಗದು ರೂಪದಲ್ಲಿ ಕೊಡಬೇಕಾಗಿದ್ದುದು (ಇದನ್ನು ನೇರವಾಗಿ ಅಥವಾ ಜಮೀನ್ದಾರಿ ಮಧ್ಯವರ್ತಿಗಳ ಮೂಲಕ ಸಂದಾಯಿಸಬಹುದಾಗಿತ್ತು). ೧೮೮೦ರವರೆಗೆ ಅಧಿಕ ಪ್ರಮಾಣದ ಕಂದಾಯ ವಸೂಲು ಮಾಡಲಾಗುತ್ತಿತ್ತು. ಅನಂತರ ಸಾಲದ ವ್ಯವಸ್ಥೆಯಲ್ಲಿ ೧೮೮೦ರಿಂದ ೧೯೩೦ರವರೆಗೆ ಇನ್ನೂ ಹೆಚ್ಚಿನ ಮೊತ್ತವನ್ನು ವಸೂಲು ಮಾಡಲಾಯಿತು. ವಿಲಿಯಂ ಡಿಗ್ಬಿ ಪ್ರಕಾರ ‘ಖಾಯಂ ಕಂದಾಯ ವ್ಯವಸ್ಥೆಯಡಿ ಬಾರದ ಜಿಲ್ಲೆಗಳ ರೈತರಿಗೆ ಉಣ್ಣಲು ಸಿಗುತ್ತಿದ್ದುದು ಅವರ ಅಜ್ಜಂದಿರಿಗೆ ಸಿಗುತ್ತಿದ್ದುದರ ಅರ್ಧಭಾಗ ಹಾಗೂ ಮುತ್ತಜ್ಜಂದಿರಿಗೆ ಸಿಗುತ್ತಿದ್ದುದರ ಮೂರನೆಯ ಒಂದು ಭಾಗ. ಹೀಗಿದ್ದರೂ ಅತ್ಯಂತ ಕಟ್ಟುನಿಟ್ಟಾಗಿ ಕಂದಾಯವನ್ನು, ಬೆಳೆ ಕೈಗೆ ಬರುವ ಮೊದಲೇ ಹಣದ ರೂಪದಲ್ಲಿ ಸಂದಾಯ ಮಾಡಬೇಕಾಗಿತ್ತು’.
೧೮೨೬ರಲ್ಲಿ ಬಿಷಪ್ ಹೆಬರ್, ‘ನಾವು ವಸೂಲು ಮಾಡುವಷ್ಟು ಹೆಚ್ಚು ಕಂದಾಯವನ್ನು ಯಾವ ದೇಶೀಯ ರಾಜರೂ ಮಾಡುತ್ತಿಲ್ಲ’ ಎಂದು ಹೇಳುತ್ತಾರೆ. ಭಾರತದಲ್ಲಿ ವಿಧಿಸುತ್ತಿದ್ದ ಭೂತೆರಿಗೆಯು ಭೂಬಾಡಿಗೆಯ ಸರಾಸರಿ ಶೇ.೮೦-೯೦ ರಷ್ಟಾಗುತ್ತಿತ್ತು. ೩೦ ವರ್ಷಗಳಲ್ಲಿ ಕೇವಲ ಬಂಗಾಳದಲ್ಲಿ ವಸೂಲಾದ ಭೂಕಂದಾಯ ೮,೧೭,೫೫೩ ಪೌಂಡ್ಗಳಿಂದ ೨೬,೮೦,೦೦೦ ಪೌಂಡ್ಗಳಿಗೆ ಏರಿತು.
ಇಂಗ್ಲೆಂಡನ್ನು ಸಾಕಿದ್ದು ಭಾರತ
ಬ್ರಿಟಿಷರು ರೈತರಿಂದ ವಸೂಲು ಮಾಡುತ್ತಿದ್ದ ವಿಪರೀತ ತೆರಿಗೆ ಹಣವನ್ನು ಅವರಿಗೆ ಪ್ರಯೋಜನವಾಗುವಂಥ ಸಾರ್ವಜನಿಕ ಕೆಲಸಗಳಿಗೆ ಬಳಸುತ್ತಿದ್ದಿದ್ದರೆ ಅವರ ಕ್ರಮವನ್ನು ಭಾಗಶಃ ಕ್ಷಮಿಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೆ, ಆ ಆದಾಯವನ್ನು ಲಂಡನ್ನಿನ ಬ್ರಿಟಿಷ್ ಸರ್ಕಾರಕ್ಕೆ ಕಳಿಸುತ್ತಿದ್ದರು. ಖಾಯಂ ಕಂದಾಯ ಪದ್ಧತಿಯು ಭಾರತದ ಅರ್ಥವ್ಯವಸ್ಥೆಗೆ ದಮನಕಾರಿಯಾಗಿದ್ದು ದೇಶದ ಕೃಷಿಯನ್ನು ನಾಶಗೊಳಿಸಿತು. ತೆರಿಗೆ ಪದ್ಧತಿ ಮತ್ತು ಕಂಪೆನಿಯ ಆಡಳಿತದಲ್ಲಿ ಭಾರತೀಯ ಜನಜೀವನವು ಬಹಳ ಕಷ್ಟಕರ ಹಾಗೂ ಅಸಹನೀಯವಾಗಿತ್ತು.
೧೯ನೆಯ ಶತಮಾನದ ಕೊನೆಗೆ ಭಾರತವು ಬ್ರಿಟನ್ನಿನ ಅತಿ ದೊಡ್ಡ ಆದಾಯದ ಮೂಲವಾಗಿತ್ತು. ಬ್ರಿಟಿಷ್ ಉತ್ಪನ್ನಗಳ ಅತಿ ದೊಡ್ಡ ಖರೀದಿದಾರ ರಾಷ್ಟ್ರವಾಗಿ, ಅತಿ ಹೆಚ್ಚು ಸಂಬಳದ ಸಿವಿಲï ಅಧಿಕಾರಿಗಳು ಮತ್ತು ಸೈನಿಕರನ್ನು ಹೊಂದಿದ ದೇಶವಾಗಿತ್ತು – ಇದೆಲ್ಲ ಭಾರತದ ಖರ್ಚಿನಲ್ಲಿ. ವಾಸ್ತವವಾಗಿ ನಮ್ಮ ಹಣದಿಂದಲೇ ನಮ್ಮ ಮೇಲೇ ದಬ್ಬಾಳಿಕೆ ನಡೆಯುತ್ತಿತ್ತು.
ತೆರಿಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು. ಕೃಷಿ ತೆರಿಗೆಗಳು ರೈತರ ಬೆಳೆ ಉತ್ಪನ್ನಗಳ ಕನಿಷ್ಠ ಅರ್ಧದಷ್ಟು ಕೆಲವೊಮ್ಮೆ ಅರ್ಧಕ್ಕಿಂತಲೂ ಹೆಚ್ಚು ಇದ್ದು ರೈತನ ಹಾಗೂ ಅವನ ಕುಟುಂಬದ ನಿರ್ವಹಣೆಗೂ ಕೊರತೆ ಬರುತ್ತಿತ್ತು. ಬ್ರಿಟಿಷ್ ಲೆಕ್ಕಾಚಾರದ ಪ್ರಕಾರ ತೆರಿಗೆಗಳು ಬ್ರಿಟಿಷ್ ಆಡಳಿತಕ್ಕೆ ಮೊದಲು ಇದ್ದುದರ ಎರಡು ಅಥವಾ ಮೂರರಷ್ಟು ಇದ್ದು, ನಿಸ್ಸಂಶಯವಾಗಿ ಜಗತ್ತಿನ ಬೇರೆ ಯಾವುದೇ ದೇಶದ ತೆರಿಗೆಗಳಿಗಿಂತ ಹೆಚ್ಚಾಗಿದ್ದವು. ಭಾರತದ ಪ್ರತಿಯೊಂದು ಬ್ರಿಟಿಷ್ ‘ಪ್ರಾಂತವೂ’ ಅಗಾಧ ಮೊತ್ತದ ‘ಉಳಿತಾಯದ ಹಣ’ವನ್ನು ಇಂಗ್ಲೆಂಡ್ಗೆ ಕಳುಹಿಸುತ್ತಿತ್ತು. ನಾಗರಿಕ ಸೇವಾ ಅಧಿಕಾರಿಗಳು, ವ್ಯಾಪಾರಿಗಳು ಹಾಗೂ ಭಾರತದಲ್ಲಿ ನೇಮಕಗೊಂಡ ಸೈನಿಕರೂ ಹಾಗೆಯೇ ಮಾಡುತ್ತಿದ್ದರು. ನಾಲ್ಕು ವರ್ಷಗಳ ರಜೆಯೊಡನೆ ಇಪ್ಪತ್ನಾಲ್ಕು ವರ್ಷ ಸೇವೆಸಲ್ಲಿಸುವ ಬ್ರಿಟಿಷ್ ನಾಗರಿಕ ಸೇವಾ ಅಧಿಕಾರಿಯು, ಭಾರತದ ತೆರಿಗೆದಾರರ ಹಣದಿಂದ ಭರಿಸುವ ಧಾರಾಳ ಪಿಂಚಣಿ ಮೊತ್ತದೊಡನೆ ನಿವೃತ್ತನಾಗಬಹುದಿತ್ತು. ರಾಮ್ಸೆ ಮ್ಯಾಕ್ಡೊನಾಲ್ಡï ೧೯೨೦ರ ಉತ್ತರಾರ್ಧದ ದಶಕಗಳಲ್ಲಿ ಲೆಕ್ಕ ಹಾಕಿದಂತೆ, ಸುಮಾರು ೭೫೦೦ ಬ್ರಿಟಿಷರು ಭಾರತದಿಂದ ವಾರ್ಷಿಕ ಸುಮಾರು ೨ ಕೋಟಿ ಪೌಂಡ್ ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತಿದ್ದರು.
ಬ್ರಿಟಿಷರ ಆದಾಯ ಗಗನಕ್ಕೇರುತ್ತಿದ್ದಂತೆ ಭಾರತದ ರಾಷ್ಟ್ರೀಯ ಸಾಲದ ಹೊರೆ ಅಷ್ಟೇ ವೇಗವಾಗಿ ದ್ವಿಗುಣಗೊಂಡಿತು. ಭಾರತದ ಅರ್ಧಕ್ಕಿಂತ ಹೆಚ್ಚು ಆದಾಯ ಹೊರಹೋಗುತ್ತಿತ್ತು, ಬಹುಭಾಗ ಇಂಗ್ಲೆಂಡಿಗೆ, ತೋರಿಕೆಗೆ ಭಾರತದ ರಕ್ಷಣೆಗೆಂದು ನೇಮಕಗೊಂಡ ಬ್ರಿಟಿಷ್ ಇಂಡಿಯನ್ ಸೈನ್ಯದ ಸಂಬಳವೂ ಸೇರಿದಂತೆ, ಬರ್ಮಾದಿಂದ ಮೆಸಪೊಟೇಮಿಯಾದವರೆಗೆ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಗಾಗಿ ಕೈಗೊಳ್ಳುವ ಎಲ್ಲ ವಸಾಹತುಶಾಹಿ ಕ್ರಮಗಳ ವೆಚ್ಚಗಳನ್ನೂ ಭಾರತೀಯರು ತೆರಿಗೆ ರೂಪದಲ್ಲಿ ಭರ್ತಿ ಮಾಡಬೇಕಿತ್ತು. ಉದಾಹರಣೆಗೆ ೧೯೨೨ರಲ್ಲಿ ಭಾರತದ ಒಟ್ಟು ಆದಾಯದ ಶೇ. ೬೪ರಷ್ಟನ್ನು ವಿದೇಶಗಳಿಗೆ ಕಳುಹಿಸಿದ ಬ್ರಿಟಿಷ್ ಇಂಡಿಯಾ ಸೈನ್ಯದ ಸಂಬಳಕ್ಕೆ ವೆಚ್ಚ ಮಾಡಲಾಗಿತ್ತು. ವಿಲ್ ಡ್ಯುರಾಂಟ್ ಪ್ರಕಾರ ಆಗ ಪ್ರಪಂಚದ ಯಾವ ದೇಶದ ಸೈನ್ಯವೂ ಅಷ್ಟು ಹೆಚ್ಚು ಮೊತ್ತದ ಸಾರ್ವಜನಿಕ ಹಣವನ್ನು ಕಬಳಿಸುತ್ತಿರಲಿಲ್ಲ.
ನಿರ್ಗತಿಕವಾದ ಭಾರತ
ಅಷ್ಟು ನಾಚಿಕೆಗೆಟ್ಟು ಭಾರತದ ಅಗಾಧ ಮೊತ್ತದ ಹಣವನ್ನು ಹೊರಗೆ ಕಳಿಸುತ್ತಿದ್ದುದು ಅಚ್ಚರಿಯ ಸಂಗತಿ. ಆದರೆ ಲೆಕ್ಕದ ಪುಸ್ತಕಗಳಲ್ಲಿ, ಶೋಷಣೆಯನ್ನು ಮರೆಮಾಚುವಂತೆ, ಒಳ್ಳೆಯ ಅಂಕಿ ಸಂಖ್ಯೆಗಳನ್ನು ನೀಡಲಾಗುತ್ತಿತ್ತು. ವ್ಯಾಪಾರ ವಹಿವಾಟಿನಲ್ಲಿ ಹೆಚ್ಚು ನಿವ್ವಳ ಆದಾಯವನ್ನು ಅವು ತೋರಿಸಿದರೂ ಖರ್ಚಿನ ಬಾಬಿನಲ್ಲಿ ‘ಆಂತರಿಕ ವೆಚ್ಚಗಳು’ ಮತ್ತು ‘ಇತರ ಅನಿರೀಕ್ಷಿತ ವೆಚ್ಚಗಳು’ ಇವುಗಳ ವೆಚ್ಚದಿಂದ ವಿಪರೀತ ಖೋತಾ ಆಗುತ್ತಿತ್ತು. ದಾದಾಭಾಯಿ ನವರೋಜಿಯವರ ಪ್ರಕಾರ ೧೮೩೫ರಿಂದ ೧೮೭೨ರ ಅವಧಿಯಲ್ಲಿ ಭಾರತದಿಂದ ಬ್ರಿಟನ್ನಿಗೆ ಪ್ರತಿವರ್ಷ ಸರಾಸರಿ ೧೩,೦೦೦,೦೦೦ ಪೌಂಡ್ ಮೊತ್ತದ ಸರಕು ಸಾಗಣೆಯಾಗುತ್ತಿತ್ತು. ಆದರೆ ಅಷ್ಟು ಮೊತ್ತದ ಹಣ ಮಾತ್ರ ಭಾರತಕ್ಕೆ ಮರಳಿ ಬರುತ್ತಿರಲಿಲ್ಲ. ವಾಸ್ತವವಾಗಿ ಬ್ರಿಟನ್ನಿನಲ್ಲಿದ್ದ ಕಂಪೆನಿಯ ಷೇರುದಾರರಿಗೆ ಕೊಡಬೇಕಾದ ಲಾಭ, ರೈಲ್ವೇ ಹೂಡಿಕೆದಾರರಿಗೆ ಕೊಡಬೇಕಾದ ಡಿವಿಡೆಂಡ್ ಅಥವಾ ನಿವೃತ್ತ ನೌಕರರಿಗೆ ಕೊಡಬೇಕಾದ ಪಿಂಚಣಿಯಿಂದಾಗಿ ವಾರ್ಷಿಕ ೩ ಕೋಟಿ ಪೌಂಡ್ ನಷ್ಟವುಂಟಾಗುತ್ತಿತ್ತು. ಬ್ರಿಟನ್ನಿನಿಂದ ಬರುತ್ತಿದ್ದ ಅಲ್ಪಸ್ವಲ್ಪ ಹೂಡಿಕೆಯಾದರೂ ಕೇವಲ ಸಾಮ್ರಾಜ್ಯದ ಉದ್ದೇಶಗಳಿಗೆ ಬಳಕೆಯಾಗುತ್ತಿತ್ತು. ತನ್ನ ಸಂಪತ್ತಿನ ಈ ಸೋರಿಕೆಯಿಂದಾಗಿ ಭಾರತವು ಸಂಪೂರ್ಣ ಖಾಲಿಯಾಯಿತು, ನಿಶ್ಶÀಕ್ತವಾಯಿತು, ನಿರ್ವಿಣ್ಣವಾಗಿ ಕ್ಷಾಮ, ಬಡತನ ಮತ್ತು ಸಂಕಟಗಳಿಗೆ ತುತ್ತಾಯಿತು. ಬ್ರಿಟಿಷ್ ಲೇಖಕ ವಿಲಿಯಂ ಡಿಗ್ಬಿಯ ವಿಸ್ತೃತ ಲೆಕ್ಕಾಚಾರಗಳು, ಕುಂಠಿತಗೊಳ್ಳುತ್ತಿರುವ ಭಾರತೀಯರ ಪ್ರಗತಿ ಹಾಗೂ ಅದರ ಸಂಪತ್ತನ್ನು ಬ್ರಿಟಿಷರು ವ್ಯವಸ್ಥಿತವಾಗಿ ಕಬಳಿಸುತ್ತಿದ್ದ ಪರಿಯನ್ನು ತೆರೆದು ತೋರಿಸುತ್ತವೆ. ಅವರ ಲೆಕ್ಕಾಚಾರದಂತೆ ೧೯೦೧ರಲ್ಲಿ ಭಾರತದ ತೆರಿಗೆ ಹಣದಿಂದ ಕೊಡಮಾಡುತ್ತಿದ್ದ ಭಾರತದ ಸೆಕ್ರೆಟರಿ ಆಫ್ ಸ್ಟೇಟ್ನ ಸಂಬಳವು ೯೦,೦೦೦. ಅದು ಭಾರತೀಯರ ಸರಾಸರಿ ವಾರ್ಷಿಕ ಆದಾಯಕ್ಕೆ ಸಮನಾಗಿತ್ತು.
ಆ್ಯಂಗಸ್ ಮ್ಯಾಡಿಸನ್ ನಿರ್ಣಾಯಕವಾಗಿ ಹೇಳುತ್ತಾನೆ – ‘೧೯೦ ವರ್ಷಗಳವರೆಗೆ ಸಂಪತ್ತು ನಿರಂತರವಾಗಿ ಸೂರೆಗೊಂಡುದುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಸಂಪತ್ತನ್ನು ಭಾರತದಲ್ಲೇ ತೊಡಗಿಸಿಕೊಂಡಿದ್ದರೆ ಭಾರತೀಯರ ಆದಾಯದ ಮಟ್ಟ ಗಣನೀಯವಾಗಿ ಏರುತ್ತಿತ್ತು’. ಭಾರತದ ಆದಾಯದಿಂದ ಇಂಗ್ಲೆಂಡ್ಗೆ ಜಮಾ ಆಗುತ್ತಿದ್ದ ಅಧಿಕೃತ ಮತ್ತು ಖಾಸಗಿ ಜಮಾವಣೆಗಳ ಜೊತೆಗೆ ಬ್ರಿಟಿಷ್ ಅಧಿಕಾರಿಗಳ ಮಿತಿಮೀರಿದ ಸಂಬಳಗಳು ಸೇರಿ ಅದನ್ನು ದ್ವಿಗುಣಗೊಳಿಸುತ್ತಿದ್ದವು. ಅದು ಇಂಗ್ಲೆಂಡ್ ದೇಶದಲ್ಲಿ ತಮ್ಮ ಆರ್ಥಿಕ ಹಿತಾಸಕ್ತಿ ಹೊಂದಿದ್ದ ವಿದೇಶೀಯರ ಬ್ರಿಟಿಷ್ ರಾಜï ಆಗಿದ್ದುದರಿಂದ ಇದು ಸಹಜವಾಗಿತ್ತು. ಹಿಂದಿನಂತೆ ಭಾರತೀಯ ಆಡಳಿತವಿದ್ದಿದ್ದರೆ ಆದಾಯವೆಲ್ಲ ಉಳಿತಾಯವಾಗಿ ಸ್ಥಳೀಯ ಅಭಿವೃದ್ಧಿಗೆ ಖರ್ಚಾಗುತ್ತಿತ್ತು. ಆದರೆ ಈಗ ಅದು ವಿದೇಶೀಯರ ಪಾಲಾಗಿ ಅದನ್ನು ಅವರು ಸ್ವಹಿತಾಸಕ್ತಿಯಿಂದ ತಮ್ಮ ದೇಶಕ್ಕೆ ಕಳಿಸುತ್ತಿದ್ದರು. ಬಹಳ ಸಂದರ್ಭಗಳಲ್ಲಿ ಆಡಳಿತಗಾರರ ಆದಾಯವು ಆರ್ಥಿಕ ಅಭಿವೃದ್ಧಿಯ ಮೂಲವಾಗಿರುತ್ತದೆ. ಏಕೆಂದರೆ ಅದು ಜನರಿಗೆ ಖರೀದಿಸುವ ಶಕ್ತಿಯನ್ನು ನೀಡುತ್ತದೆ. ಅದನ್ನು ಅವರು ತಮ್ಮ ಸ್ಥಳೀಯ ಅಭಿವೃದ್ಧಿಗಾಗಿ ಬಳಸುತ್ತಿದ್ದರು. ಅದರಿಂದ ಅಪ್ರತ್ಯಕ್ಷವಾಗಿ ಸ್ಥಳೀಯ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತಿತ್ತು. ಆದರೆ ಇಂಗ್ಲೆಂಡ್ನಲ್ಲಿ ಹಿತಾಸಕ್ತಿ ಹೊಂದಿದ್ದ ಹಾಗೂ ಭಾರತದಲ್ಲಿ ವಿದೇಶೀ ವಸ್ತು ಬಳಕೆಯ ಅಭಿರುಚಿ ಹೊಂದಿದ್ದ ಜನರಿಗೆ ಭಾರತ ಸರ್ಕಾರದಿಂದ ಸಿಕ್ಕಾಪಟ್ಟೆ ಸಂಬಳ-ಭತ್ಯೆಗಳನ್ನು ಕೊಡಲಾಗುತ್ತಿತ್ತು. ಇದರಿಂದ ಬ್ರಿಟನ್ನಿಂದ ಆಮದಾಗುವ ಗ್ರಾಹಕ ವಸ್ತುಗಳು ಹೆಚ್ಚಾದವು ಹಾಗೂ ಭಾರತದಲ್ಲಿನ ಶ್ರೀಮಂತ ವರ್ಗಗಳ ಬೇಡಿಕೆ ವಸ್ತುಗಳನ್ನು ತಯಾರಿಸುತ್ತಿದ್ದ ಸ್ಥಳೀಯ ಕೈಗಾರಿಕೆಗಳಿಗೆ ತೀವ್ರ ಹಾನಿಯಾಯಿತು.
೧೯ನೆಯ ಶತಮಾನದಲ್ಲಿ ಆದ ಭಾರತದ ಸಂಪತ್ತಿನ ಸೂರೆಯನ್ನು ೧೯೦೧ರಲ್ಲಿ ವಿಲಿಯಂ ಡಿಗ್ಬಿ ಕರಾರುವಾಕ್ಕಾಗಿ ಲೆಕ್ಕ ಹಾಕಿ ೪,೧೮೭,೯೨೨,೭೩೨ ಪೌಂಡ್ ಎಂದು ಹೇಳಿದ್ದಾನೆ. ಈ ವಿವಾದಿತ ಮೊತ್ತವು ಈಗಿನ ಲೆಕ್ಕದಲ್ಲಿ, ಗ್ರಂಥಕರ್ತ ಮಿನ್ಹಾಜï ಮರ್ಚೆಂಟ್ ಲೆಕ್ಕಾಚಾರದ ೧/೯ ಭಾಗವಾಗಿತ್ತು. ಇದು ೧೯ನೆಯ ಶತಮಾನದ ವಿದ್ಯಮಾನವಾಗಿದ್ದು ಇಪ್ಪತ್ತನೆಯ ಶತಮಾನದಲ್ಲಿ ಪರಿಸ್ಥಿತಿ ಇನ್ನೂ ಹದಗೆಡಲಿತ್ತು.
ಬ್ರಿಟನ್ನಿನ ಸಾಮ್ರಾಜ್ಯಶಾಹಿ ವಿಸ್ತರಣೆಯಲ್ಲಿ ಭಾರತದ ಕೊಡುಗೆ ಬಹು ದೊಡ್ಡದು. ಅದು ವಿದೇಶಗಳ ಯುದ್ಧಗಳಿಗೆ ಭಾರತದ ಸೇನೆಯನ್ನು ಪದೇ ಪದೇ ಕಳಿಸುತ್ತಿದ್ದ ಅಂಶದಿಂದ ಇದು ಸ್ಪಷ್ಟವಾಗುತ್ತದೆ. ಇದರಿಂದ ಭಾರತಕ್ಕೆ ಯಾವ ಲಾಭವೂ ಇರಲಿಲ್ಲ – ಬ್ರಿಟಿಷ್ ಹಿತಾಸಕ್ತಿಯ ರಕ್ಷಣೆ ಮಾತ್ರ ಇತ್ತು. ಇದೆಲ್ಲ ಆಗುತ್ತಿದ್ದುದು ಭಾರತದ ಹಣದಲ್ಲಿ – ವಿಶೇಷವಾಗಿ ಭಾರತದ ಬಡಪಾಯಿ ರೈತ ಸಮುದಾಯದಿಂದ ವಸೂಲು ಮಾಡಿದ ತೆರಿಗೆಯಿಂದ ಅಥವಾ ಭಾರತೀಯ ರಾಜರುಗಳಿಂದ ವಸೂಲು ಮಾಡಿದ ‘ರಕ್ಷಣಾ’ ಭತ್ಯೆಯಿಂದ.
೧೯ನೆಯ ಶತಮಾನದ ಕೊನೆಯ ಹೊತ್ತಿಗೆ ಇಂಗ್ಲೆಂಡ್ ೩,೨೫,೦೦೦ ಸೈನ್ಯ ಹೊಂದಿತ್ತು. ಇದರ ೨/೩ ಭಾಗದ ಸಂಬಳವನ್ನು ಭಾರತದ ತೆರಿಗೆ ಹಣದಿಂದ ಕೊಡಲಾಗುತ್ತಿತ್ತು. ಭಾರತದಲ್ಲಿದ್ದ ಪ್ರತಿಯೊಬ್ಬ ಇಂಗ್ಲಿಷ್ ಸೈನಿಕನ ಸಂಬಳ, ಶಸ್ತ್ರಾಸ್ತ್ರ, ಭತ್ಯೆ – ಕೊನೆಗೆ ಪಿಂಚಣಿಯನ್ನೂ ಭಾರತ ಸರ್ಕಾರ ಕೊಡಬೇಕಾಗಿತ್ತು, ಇಂಗ್ಲೆಂಡ್ ಸರ್ಕಾರವಲ್ಲ. ಯೂರೋಪ್ ಮತ್ತು ಭಾರತೀಯ ಸೈನಿಕರ ಹುದ್ದೆ, ಪದವಿ, ವೇತನ, ಬಡ್ತಿ, ಪಿಂಚಣಿ, ಪಡಿತರ ಮತ್ತಿತರ ಸೌಲಭ್ಯಗಳಲ್ಲಿ ಗಮನಾರ್ಹ ತಾರತಮ್ಯಗಳಿದ್ದವು.
ಹಡಗು: ವ್ಯಾಪಾರ ಮತ್ತು ಉದ್ಯಮದ ನಾಶ
ಬ್ರಿಟಿಷರ ಕಳ್ಳತನವು ಎಷ್ಟು ಕ್ರೂರವಾಗಿತ್ತೆಂದರೆ ಅದನ್ನು ಆಗಿನ ಇಂಗ್ಲಿಷರೇ ಒಪ್ಪಿಕೊಂಡಿದ್ದಾರೆ. ಭಾರತದ ಕೈಗಾರಿಕೆ, ವ್ಯಾಪಾರ ವಾಣಿಜ್ಯ, ಸಮುದ್ರ ವ್ಯಾಪಾರ, ಹಡಗು ನಿರ್ಮಾಣ ಎಲ್ಲವೂ ನಾಶವಾದವು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಭಾರತಕ್ಕೆ ಬರುವ ಮೊದಲು ಬಂಗಾಳ, ಮಚಲಿಪಟ್ಟಣ, ಸೂರತ್ ಮತ್ತು ಮಲಬಾರ್ ಬಂದರುಗಳಾದ ಕಲ್ಲಿಕೋಟೆ ಮತ್ತು ಕ್ವಿಲಾನ್ಗಳಲ್ಲಿ ಹಡಗು ನಿರ್ಮಾಣ ಕೈಗಾರಿಕೆ ಯಶಸ್ವಿಯಾಗಿ ನಡೆಯುತ್ತಿತ್ತು. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಗಳಲ್ಲಿ ಭಾರತದ ವಾಣಿಜ್ಯ ಹಡಗುಗಳು ಸಂಚರಿಸುತ್ತಿದ್ದವು. ಹದಿನಾರನೆಯ ಶತಮಾನದಲ್ಲಿ ಮರಾಠರ ಬಳಿ ದೊಡ್ಡ ಹಡಗು ಪಡೆ ಇತ್ತು. ಶಿವಾಜಿ ಭೋನ್ಸ್ಲೆಯ ನೌಕಾದಳವು ಪೋರ್ಚುಗೀಸರ ಆಕ್ರಮಣವನ್ನು ಎದುರಿಸಿ ಪಶ್ಚಿಮ ಕಡಲತೀರವನ್ನು ಕಾಯುತ್ತಿತ್ತು. ದಕ್ಷಿಣದಲ್ಲಿ ಮುಸಿಲ್ಲ, ಕುಂಜಲಿ ಮರೈಕರರ ನೌಕಾಶಕ್ತಿ ಅಪಾರವಾಗಿತ್ತು. ೧೭ನೆಯ ಶತಮಾನದ ಆದಿಭಾಗದಲ್ಲಿ ಬಂಗಾಳ ಹಡಗು ಪಡೆಯಲ್ಲಿ ೪೦೦-೫೦೦ ಟನ್ ತೂಕದ ೪೦೦೦-೫೦೦೦ ಹಡಗುಗಳಿದ್ದವು.
ಇವೆಲ್ಲ ಅಲ್ಲೇ ತಯಾರಾಗಿ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಅವುಗಳಲ್ಲಿ ಮಾರಾಟವಾಗುತ್ತಿದ್ದ ಸಾಮಾನು ಸರಕುಗಳ ಹೆಚ್ಚುತ್ತಿದ್ದ ಜನಪ್ರಿಯತೆಯಿಂದಾಗಿ ೧೮ನೆಯ ಶತಮಾನದ ಮಧ್ಯಭಾಗದವರೆಗೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಪ್ರವರ್ಧಮಾನವಾಗುತ್ತಿದ್ದ ಈ ಹಡಗು ವ್ಯಾಪಾರ ಮತ್ತು ಹಡಗು ನಿರ್ಮಾಣದ ಕೈಗಾರಿಕೆಯನ್ನು ಬ್ರಿಟಿಷರು ಪಾತಾಳಕ್ಕೆ ತುಳಿದರು.
೧೭೫೭ರ ನಂತರ, ಸ್ಪರ್ಧೆಯನ್ನು ತಪ್ಪಿಸಲು ಕಂಪೆನಿಯ ಮತ್ತು ಒಪ್ಪಂದ ಮಾಡಿಕೊಂಡ ಬ್ರಿಟಿಷ್ ಹಡಗುಗಳಿಗೆ, ಮೊದಲು ಭಾರತೀಯ ವ್ಯಾಪಾರಿಗಳು ಬಳಸುತ್ತಿದ್ದವೂ ಸೇರಿದಂತೆ, ಎಲ್ಲ ಜಲಮಾರ್ಗಗಳ ಏಕಸ್ವಾಮ್ಯತೆ ಕೊಡಲಾಯಿತು. ವಿದೇಶೀ ಬಂದರುಗಳಲ್ಲದೆ, ಭಾರತದ ಬಂದರುಗಳಿಗೂ ಹೋಗಿ ಬರುವ ಭಾರತದ ವ್ಯಾಪಾರಿ ಹಡಗುಗಳಿಗೆ ತೆರಿಗೆ ವಿಧಿಸಲಾಯಿತು. ಇದರಿಂದ ಎಲ್ಲ ಹಂತಗಳಲ್ಲೂ ಅಪ್ರಸ್ತುತವಾದ ಭಾರತೀಯ ಹಡಗು ಉದ್ಯಮದ ಉಸಿರು ಕಟ್ಟಿತು. ಕೇವಲ ಸೋವಿ ಬೆಲೆಯ ಸ್ಥಳೀಯ ವಸ್ತುಗಳ ಮಾರಾಟಕ್ಕೆ, ಪ್ರಮುಖವಲ್ಲದ ಕೆಲವು ಜಲಮಾರ್ಗಗಳಲ್ಲಿ ಮಾತ್ರ ಅವಕ್ಕೆ ಅನುಮತಿ ನೀಡಲಾಗಿತ್ತು.
ಅಪಾರ ಸಾಗರತೀರವುಳ್ಳ ಭಾರತದಲ್ಲಿ ಬಹು ಹಿಂದಿನಿಂದಲೂ ಇದ್ದ ಹಡಗು ಕಟ್ಟುವ ಕೈಗಾರಿಕೆಯದ್ದು ಬಹಳ ಜಟಿಲ ಹಾಗೂ ವಿಚಾರಾರ್ಹ ಕಥೆ. ಪ್ರಾರಂಭದ ನಿಧಾನಗತಿ ಹಾಗೂ ಈಸ್ಟ್ ಇಂಡಿಯಾ ಕಂಪೆನಿಯು ಅಧಿಕಾರಕ್ಕೆ ಬಂದ ಮೇಲೆ ಉಂಟಾದ ಅವನತಿಯ ನಂತರ, ೧೮ನೆಯ ಶತಮಾನದ ಕೊನೆಯ ಕಾಲುಭಾಗದಲ್ಲಿ ಬಂಗಾಳದಲ್ಲಿ ಭಾರತದ ಹಡಗು ಉದ್ಯಮ ಊರ್ಜಿತಗೊಂಡಿತು. ಇದಕ್ಕೆ ಕಾರಣ, ಬ್ರಿಟಿಷ್ ಉದ್ಯಮಿಗಳಿಗೆ, ತಮ್ಮ ಹಡಗುಗಳನ್ನು ಭಾರತೀಯ ಕೆಲಸಗಾರರನ್ನು ಬಳಸಿಕೊಂಡು ಕೋಲ್ಕತಾದಲ್ಲೇ ಕಟ್ಟುವಲ್ಲಿ ಇರುವ ಅನುಕೂಲಗಳ ಅರಿವಾದದ್ದು. ೧೮೦೦ರ ಹೊತ್ತಿಗೆ ೧೦,೦೦೦ ಟನ್ ತೂಕದ ಹಡಗುಗಳನ್ನು ಕೋಲ್ಕತಾದ ಬ್ರಿಟಿಷ್ ಇಂಡಿಯನ್ ಬಂದರಿನಲ್ಲಿ ಕಟ್ಟಲಾಯಿತು ಎಂದು ಗವರ್ನರ್-ಜನರಲ್ ವೆಲೆಸ್ಲಿ ವರದಿ ಮಾಡಿದ್ದಾನೆ. ೧೮೦೧ರಿಂದ ೧೮೩೯ರ ಅವಧಿಯಲ್ಲಿ ಮತ್ತೆ ೩೨೭ ಹಡಗುಗಳನ್ನು ನಿರ್ಮಿಸಲಾಯಿತು. ಎಲ್ಲವೂ ಬ್ರಿಟಿಷರವು.
ಉದ್ಯಮ ಹೋಯಿತು; ಪರಿಣತಿಯೂ!
ಭಾರತದಲ್ಲಿ ಬ್ರಿಟಿಷರ ಈ ವ್ಯವಹಾರವು ಶುದ್ಧ ವೃತ್ತಿಪರ ಹಾಗೂ ಲೆಕ್ಕಾಚಾರದ ಕ್ರಮವಾಗಿತ್ತು. ಭಾರತೀಯರ ಕಾರ್ಯಕ್ಷಮತೆ ಮತ್ತು ಭಾರತದ ಹಡಗು ಕಟ್ಟುವ ಕಲೆಯ ಸುದೀರ್ಘ ಇತಿಹಾಸವನ್ನು ಬಹುವಾಗಿ ಗೌರವಿಸುತ್ತಿದ್ದ ಬ್ರಿಟಿಷ್ ಹಡಗು ನಿರ್ಮಾತೃಗಳು ಭಾರತೀಯ ಹಡಗು ಕಟ್ಟುವ ತಂತ್ರಗಳನ್ನು ತಮ್ಮ ಕೆಲಸಗಳಲ್ಲಿ ಬಳಸಿಕೊಳ್ಳುತ್ತಿದ್ದರು. ಆ ಕಾಲದ ಒಬ್ಬ ಬ್ರಿಟಿಷ್ ವೀಕ್ಷಕನ ಪ್ರಕಾರ ಭಾರತದ ಹಡಗುಗಳು ‘ಸೌಂದರ್ಯ ಮತ್ತು ಉಪಯುಕ್ತತೆಯ ಪ್ರತೀಕ’. ಅವು ಅತ್ಯಂತ ಸಾವಧಾನದಿಂದ ಮಾಡಿದ ಸೊಗಸಾದ ಕೆಲಸಗಾರಿಕೆಯ ಮಾದರಿಗಳು. ಭಾರತೀಯ ಕೆಲಸಗಾರರು ಹಡಗು ಕಟ್ಟುವ ವಸ್ತುಗಳಾದ ಮರ, ಕಬ್ಬಿಣ ಮತ್ತು ಹಿತ್ತಾಳೆಗಳ ವಿಷಯದಲ್ಲಿ ಪರಿಣತರೆಂದು ಭಾವಿಸಲಾಗುತ್ತಿತ್ತು. ಭಾರತೀಯ ಕೆಲಸಗಾರರು ಕಟ್ಟಿದ ಹಡಗುಗಳು ದೀರ್ಘಕಾಲ ಬಾಳಿಕೆ ಬರುತ್ತಿದ್ದವು. ಅವು ಇಪ್ಪತ್ತು ವರ್ಷಗಳಿಗೂ ಹೆಚ್ಚು ಬಾಳಿಕೆ ಬಂದರೆ ಬ್ರಿಟಿಷರು ಕಟ್ಟಿದವು ೧೧-೧೨ ವರ್ಷಗಳಿಗಿಂತ ಹೆಚ್ಚು ಕಾಲ ಬಾಳುತ್ತಿರಲಿಲ್ಲ.
ಈ ರೀತಿಯಾಗಿ ಭಾರತದಲ್ಲಿ ತಯಾರಾದ ಹಡಗುಗಳ ಬೆಲೆಯು ಇಂಗ್ಲೆಂಡ್ನಲ್ಲಿ ತಯಾರಾದವುಗಳಿಗಿಂತ ಕಡಮೆ ಇದ್ದುದಲ್ಲದೆ ಅವುಗಳ ಸವಕಳಿ ಕೂಡ ತುಂಬಾ ದೀರ್ಘಕಾಲ ತೆಗೆದುಕೊಳ್ಳುತ್ತಿದ್ದುದನ್ನು ಬ್ರಿಟಿಷ್ ಉದ್ಯಮಿಗಳು ಬೆಲೆ ನಿಗದಿಯಲ್ಲಿ ಪರಿಗಣಿಸುತ್ತಿದ್ದರು. ಹಾಗೂ ಭಾರತೀಯ ಹಡಗುಗಳು ಇಂಗ್ಲಿಷ್ ಹಡಗುಗಳು ವಿಧಿಸುತ್ತಿದ್ದ ಸಾಗಣೆ ದರಗಳಿಗಿಂತ ಕಡಮೆ ದರ ನಿಗದಿ ಮಾಡಿದ್ದವು. ಆದುದರಿಂದ ಭಾರತದಲ್ಲಿ ಹಡಗು ಕಟ್ಟುವುದು ಬ್ರಿಟಿಷ್ ಉದ್ಯಮಿಗಳಿಗೆ ಎಷ್ಟು ಆಕರ್ಷಣೀಯವಾಯಿತೆಂದರೆ ೧೯ನೆಯ ಶತಮಾನದ ದ್ವಿತೀಯ ದಶಕದ ಹೊತ್ತಿಗೆ ಇಂಗ್ಲೆಂಡಿನ ಹಡಗು ಕಟ್ಟುವ ಉದ್ಯಮದಲ್ಲಿ ತೀವ್ರ ನಿರುದ್ಯೋಗ ಉಂಟಾಯಿತು.
ಬ್ರಿಟಿಷ್ ಹಡಗು ನಿರ್ಮಾಣ ಕಂಪೆನಿಗಳು ಭಾರತದವುಗಳೊಡನೆ ಸ್ಪರ್ಧಿಸಲಾರದೆ ಭಾರತದವುಗಳನ್ನು ನಿಷೇಧಿಸುವಂತೆ ಬ್ರಿಟಿಷ್ ಪಾರ್ಲಿಮೆಂಟನ್ನು ಕೋರಿದವು. ಅವರ ಪರವಾಗಿ ೧೮೧೩ರಲ್ಲಿ ಮೊದಲ ಕಾಯ್ದೆ ಬಂತು. ಅದರ ಪ್ರಕಾರ ೩೫೦ ಟನ್ಗಿಂತ ಕಡಮೆ ತೂಕದ ಹಡಗುಗಳು ಭಾರತದ ವಸಾಹತುಗಳು ಹಾಗೂ ಇಂಗ್ಲೆಂಡ್ ಮಧ್ಯೆ ಓಡಾಡುವುದನ್ನು ನಿಷೇಧಿಸಲಾಯಿತು. ಇದರಿಂದ ಸುಮಾರು ಶೇ. ೪೦ರಷ್ಟು ಬಂಗಾಳ ನಿರ್ಮಿತ ಹಡಗುಗಳು ಲಾಭದಾಯಕ ಇಂಡಿಯಾ-ಇಂಗ್ಲೆಂಡ್ ವ್ಯಾಪಾರದಿಂದ ವಂಚಿತವಾದವು. ೧೮೧೪ರಲ್ಲಿ ಇನ್ನೊಂದು ಕಾಯ್ದೆಯನ್ನು ತಂದು ಭಾರತ ನಿರ್ಮಿತ ಹಡಗುಗಳನ್ನು ‘ಬ್ರಿಟಿಷ್ ನೋಂದಾಯಿತ’ ಪಟ್ಟಿಯಿಂದ ತೆಗೆದುಹಾಕಿ, ಅವು ಯು.ಎಸ್. ಮತ್ತು ಯೂರೋಪ್ ದೇಶಗಳೊಡನೆ ವ್ಯಾಪಾರ ಮಾಡದಂತೆ ನಿರ್ಬಂಧಿಸಲಾಯಿತು. ಚೀನಾದೊಡನೆ ಅವು ವ್ಯಾಪಾರ ಮಾಡಬಹುದಾಗಿದ್ದರೂ ಅದು ಲಾಭದಾಯಕವಾಗಿರಲಿಲ್ಲ. ಏಕೆಂದರೆ ಮೊದಲು ಈ ಹಡಗುಗಳು ಕೋಲ್ಕತಾದಿಂದ ಭಾರತೀಯ ವಸ್ತುಗಳನ್ನು ತುಂಬಿಕೊAಡು ಹೋಗಿ ಚೀನಾದಲ್ಲಿ ಇಳಿಸಿ, ಅಲ್ಲಿಂದ ಟೀ ತೆಗೆದುಕೊಂಡು ಲಂಡನ್ನಿಗೆ ಹೋಗುತ್ತಿದ್ದವು. ಅಲ್ಲಿಂದ ಇಂಗ್ಲಿಷ್ ಸಾಮಾನುಗಳೊಡನೆ ಕೋಲ್ಕತಾಕ್ಕೆ ಮರಳುತ್ತಿದ್ದವು. ಈಗ ಲಂಡನ್ ವ್ಯಾಪಾರವನ್ನು ನಿಷೇಧಿಸಿದುದರಿಂದ ಈ ಹಡಗುಗಳು ಕೋಲ್ಕತಾದಿಂದ ಚೀನಾದವರೆಗೆ ಮಾತ್ರ ಹೋಗಿ ಮರಳಿ ಬರಬೇಕಾಯಿತು. ಆಗ ಚೀನೀ ವಸ್ತುಗಳಿಗೆ ಭಾರತದಲ್ಲಿ ಮಾರುಕಟ್ಟೆ ಇರಲಿಲ್ಲ; ಹೀಗಾಗಿ ಲಂಡನ್ ಪ್ರವೇಶ ನಿಷೇಧಕ್ಕೊಳಗಾದ ಹಡಗುಗಳು ಅನೇಕ ಬಾರಿ ಖಾಲಿಯಾಗಿ ವಾಪಸು ಬರಬೇಕಾಗಿತ್ತು.
ಈ ಮಧ್ಯೆ ಸಾಕಷ್ಟು ಸಂಖ್ಯೆಯ ಭಾರತೀಯ ನಾವಿಕರನ್ನು ಬ್ರಿಟಿಷೇತರರೆಂದು ಪರಿಗಣಿಸಿ, ಅವರನ್ನು ಲಂಡನ್ ಜಲಯಾನಕ್ಕೆ ನೇಮಕಮಾಡಿಕೊಳ್ಳುವುದನ್ನು ನಿರುತ್ಸಾಹಗೊಳಿಸಲಾಯಿತು. ಭಾರತದ ಬಂದರುಗಳಲ್ಲಿ ಬ್ರಿಟಿಷ್ ನಾವಿಕರು ಕಡಮೆ ಇದ್ದುದರಿಂದ ಭಾರತೀಯ ನಾವಿಕರು, ಗವರ್ನರ್ರಿಂದ ‘ಬ್ರಿಟಿಷ್ ನಾವಿಕರು ಇಲ್ಲ’ ಎಂಬ ಪ್ರಮಾಣಪತ್ರ ಪಡೆದು ದೊಡ್ಡ ಹಡಗುಗಳನ್ನು ಇಂಗ್ಲೆಂಡ್ಗೆ ತೆಗೆದುಕೊಂಡು ಹೋಗಬಹುದಿತ್ತು. ಆದರೆ ಅಲ್ಲಿಂದ ಮರಳಿ ಬರುವಾಗ ಹಡಗಿನ ಮಾಲಿಕ ಬ್ರಿಟಿಷ್ ನಾವಿಕರನ್ನೇ ನೇಮಿಸಿಕೊಳ್ಳಬೇಕಾಗಿತ್ತು. ಇದರಿಂದ ಇಬ್ಬರು ನಾವಿಕರಿಗೆ ಭತ್ಯೆ ಕೊಡಬೇಕಾಗಿ ಬಂದು ಅವನಿಗೆ ವಿಪರೀತ ಖರ್ಚು ಬರುತ್ತಿತ್ತು. ಅಲ್ಲದೆ ಬ್ರಿಟಿಷ್ ನಾವಿಕರ ಭತ್ಯೆ ತುಂಬಾ ಹೆಚ್ಚು ಇರುತ್ತಿತ್ತು.
ಬ್ರಿಟಿಷ್ ಪಾರ್ಲಿಮೆಂಟಿನ ತಾರತಮ್ಯ ನೀತಿಯ ಕಾಯ್ದೆಗಳಿಂದಾಗಿ, ಬ್ರಿಟಿಷ್ ಕಂಪೆನಿಗಳು ಭಾರತದಲ್ಲಿ ಹಡಗು ಕಟ್ಟಿ ಅಲ್ಲಿಂದಲೇ ವ್ಯವಹರಿಸುವ ಲಾಭದಾಯಕ ಪದ್ಧತಿ ನಿಂತುಹೋಯಿತು. ಪ್ರವರ್ಧಮಾನದಲ್ಲಿದ್ದ ಭಾರತದ ಹಡಗು ನಿರ್ಮಾಣ ಕೈಗಾರಿಕೆ ಕುಸಿಯುತ್ತಾ ಬಂದು ೧೮೫೦ರ ಹೊತ್ತಿಗೆ ಹೆಸರಿಲ್ಲದಂತಾಯಿತು.
ಭಾರತದ ಉಕ್ಕಿನ ಕಳ್ಳತನ
ಭಾರತದ ಉಕ್ಕಿನ ಕೈಗಾರಿಕೋದ್ಯಮದ ವೃತ್ತಾಂತವು ವಸಾಹತುಶಾಹಿ ಆಡಳಿತದ ಕೊನೆಯವರೆಗೂ ಭಾರತದ ಶೋಷಣೆಯು ಹೇಗೆ ಮುಂದುವರಿಯಿತೆಂಬುದನ್ನು ತೋರಿಸುತ್ತದೆ. ಆದರೆ ಈ ಅವಧಿಯನ್ನು ಸಾಮ್ರಾಜ್ಯವಾದಿಗಳು, ಕೆಲವು ಬಾರಿ, ವಸಾಹತು ಆಡಳಿತದ ಬಹಳ ಸಮೃದ್ಧ ಕಾಲವೆಂದು ಹೇಳಿದ್ದಾರೆ. ವಾಸ್ತವವಾಗಿ ಈ ಅವಧಿಯಲ್ಲಿ ದಬ್ಬಾಳಿಕೆ ಮತ್ತು ತಾರತಮ್ಯ ಅತಿ ಹೆಚ್ಚಾಗಿ, ಆದರೆ ತುಂಬಾ ಸೂಕ್ಷ್ಮ ರೂಪದಲ್ಲಿ ನಡೆಯುತ್ತಿದ್ದವು.
ಭಾರತವು ತನ್ನ ಉಕ್ಕು ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಬ್ರಿಟಿಷರಿಗೆ ಸುತರಾಂ ಇಷ್ಟವಿರಲಿಲ್ಲ. ಭಾರತವು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು. ೬ನೆಯ ಶತಮಾನದಷ್ಟು ಮುಂಚಿನಿಂದಲೇ ಅಚ್ಚು ಉಕ್ಕನ್ನು ಭಾರತದಲ್ಲಿ ತಯಾರಿಸಲಾಗುತ್ತಿತ್ತು ಮತ್ತು ಅದು ವಿಶ್ವದಲ್ಲೇ ಅತ್ಯುತ್ತಮವೆಂದು ಹೆಸರಾಗಿತ್ತು.
ಅರಬ್ಬರು ೧೨ನೆಯ ಶತಮಾನದಲ್ಲಿ ಭಾರತದ ಮಾದರಿಯಲ್ಲಿ ಉಕ್ಕಿನ ಉದ್ಯಮವನ್ನು ಸ್ಥಾಪಿಸಿ ಉತ್ಪಾದಿಸಿದ ಡಮಾಸ್ಕಸ್ ಉಕ್ಕು ವಿಶ್ವಪ್ರಸಿದ್ಧವಾಯಿತು. ಭಾರತದಲ್ಲಿ ತಯಾರಾದ ಖಡ್ಗಗಳು ಜಗತ್ತಿನಲ್ಲಿಯೇ ಶ್ರೇಷ್ಠವಾಗಿದ್ದವು. ಇಲ್ಲಿ ವಸಾಹತುಶಾಹಿ ವಿಸ್ತರಣೆಯ ಪ್ರಾರಂಭದ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಇಂಗ್ಲಿಷ್ ಸೈನಿಕರು ತಮ್ಮ ಖಡ್ಗಗಳನ್ನು ಸೋತ ವೈರಿಗಳ ಶಸ್ತ್ರಾಸ್ತ್ರಗಳೊಡನೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ೧೮ನೆಯ ಶತಮಾನದ ಕೊನೆಯ ಹೊತ್ತಿಗೆ ಬ್ರಿಟಿಷರು ಈ ಕುರಿತ ತಂತ್ರಜ್ಞಾನವನ್ನು ಕಲಿತುಕೊಂಡು ಭಾರತದಲ್ಲಿನ ಲೋಹಸಂಬಂಧಿ ಕೈಗಾರಿಕೆಗಳನ್ನು ಮುಚ್ಚಿದರು. ಅವುಗಳ ಪುನರುಜ್ಜೀವನಕ್ಕಾಗಿ ಮಾಡಿದ ಪ್ರಯತ್ನಗಳನ್ನು ವಿರೋಧಿಸಿ, ಜನಾಂಗೀಯ ಕಾರಣಗಳಿಂದ ಅಪಹಾಸ್ಯ ಮಾಡಿ ಹತ್ತಿಕ್ಕಲಾಯಿತು. ಬ್ರಿಟಿಷರು ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸಲು ನಾನಾ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿದರು. ಬ್ರಿಟಿಷರ ಒಡೆತನದಲ್ಲಿನ ಸರ್ಕಾರ ಮತ್ತು ರೈಲ್ವೆಗಳು ಬ್ರಿಟಿಷ್ ಗುಣಮಟ್ಟ ಪ್ರಮಾಣಿತ ಬಿ.ಎಸ್.ಎಸ್.ಎಸ್. (ಬ್ರಿಟಿಷ್ ಸ್ಟ್ಯಾಂಡರ್ಡ್ ಸ್ಪೆಸಿಫಿಕೇಷನ್ ಸ್ಟೀಲ್) ಉಕ್ಕನ್ನು ಮಾತ್ರ ಖರೀದಿಸತೊಡಗಿದವು. ಇದು ಪ್ರಪಂಚದ ಬಹುಭಾಗ ಉಪಯೋಗಿಸುತ್ತಿದ್ದ ಬ್ರಿಟಿಷ್ ಗುಣಮಟ್ಟ ಪ್ರಮಾಣಿತವಲ್ಲದ ಉಕ್ಕಿಗಿಂತ (ಎನ್.ಬಿ.ಎಸ್.ಎಸ್.ಎಸ್- ನಾನ್ ಬ್ರಿಟಿಷ್ ಸ್ಟ್ಯಾಂಡರ್ಡ್ ಸ್ಪೆಸಿಫಿಕೇಷನ್ ಸ್ಟೀಲ್) ಉತ್ತಮ ಗುಣಮಟ್ಟದ ಉಕ್ಕು. ವಸಾಹತು ಭಾರತದ ಮಾರುಕಟ್ಟೆಯಿಂದ ಅಗ್ಗದ ಇತರ ಉಕ್ಕನ್ನು ಹೊರಗಿಡುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಈ ಬಿ.ಎಸ್.ಎಸ್.ಎಸ್. ವ್ಯವಸ್ಥೆಯು ಭಾರತೀಯ ಉಕ್ಕು ಉದ್ಯಮಗಳಿಗೆ ಮಾರಕವಾಗಿತ್ತು. ದೇಶೀಯ ಉಕ್ಕು ಉತ್ಪಾದಕರಾದ ಟಾಟಾ ಮತ್ತಿತರ ಕಂಪೆನಿಗಳು ಈ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿತ್ತು, ಇಲ್ಲವೇ ಸರ್ಕಾರ ಮತ್ತು ರೈಲ್ವೆಗಳ ಗುತ್ತಿಗೆಗಳಿಂದ ಹೊರಬೀಳಬೇಕಾಗಿತ್ತು.
ಕಾನೂನು ಪ್ರಕಾರ ಬಿ.ಎಸ್.ಎಸ್.ಎಸ್. ಉಕ್ಕನ್ನು ಉತ್ಪಾದಿಸಬೇಕಾದ ಭಾರತೀಯ ಕಂಪೆನಿಗಳು, ಬ್ರಿಟನ್ ಹೊರತುಪಡಿಸಿ ಇತರ ಬಹುಪಾಲು ದೇಶಗಳು ಬಳಸುತ್ತಿದ್ದ ಎನ್.ಬಿ.ಎಸ್.ಎಸ್.ಎಸ್. ಉಕ್ಕನ್ನು ಜೊತೆ ಜೊತೆಗೇ ಉತ್ಪಾದಿಸಲು ಸಾಧ್ಯವಾಗಲಿಲ್ಲ. ಬಿ.ಎಸ್.ಎಸ್.ಎಸ್. ಉಕ್ಕಿನ ಉತ್ಪಾದನೆಯಿಂದಾಗಿ ಭಾರತದ ದೇಶೀಯ ಉಕ್ಕು ಉತ್ಪಾದನೆಯು ದುಬಾರಿಯಾಗುತ್ತಿತ್ತು. ಹೀಗಾಗಿ ಅದರ ಮಹಾಪತನ. ಪರಿಸ್ಥಿತಿ ಸುಧಾರಣೆಗೊಂಡ ೧೯೩೦ರ ಕೊನೆ ದಶಕಗಳಲ್ಲಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡಲಾಗಲಿಲ್ಲ. ಭಾರತದ ಸ್ಥಿತಿಯಲ್ಲಿದ್ದ ಬೇರೆ ಅಭಿವೃದ್ಧಿಶೀಲ ರಾಷ್ಟ್ರಗಳು ೧೯೩೦ರ ದಶಕಗಳಲ್ಲಿ, ದೊಡ್ಡ ಸಮಸ್ಯೆಗಳಿಲ್ಲದೆ ಎನ್.ಬಿ.ಎಸ್.ಎಸ್.ಎಸ್. ಉಕ್ಕನ್ನು ಬಳಸಿ ತಮ್ಮ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಂಡವು.
ಈ ದೇಶಗಳು ಬ್ರಿಟನ್ಗೆ ಬಿ.ಎಸ್.ಎಸ್.ಎಸ್. ಉಕ್ಕನ್ನು ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೂ ಬ್ರಿಟಿಷ್ ಉಕ್ಕಿನ ಉದ್ಯಮವು ಅದಕ್ಕೆ ಅವಕಾಶ ಕೊಡಲಿಲ್ಲ. ಭಾರತೀಯ ಉಕ್ಕಿನ ಆಮದುಗಳ ಮೇಲೆ ಇಂಗ್ಲೆಂಡ್ ನಿರ್ಬಂಧಗಳನ್ನು ಹೇರಿತು. ಇದರಿಂದ ಬ್ರಿಟನ್ ತನ್ನ ಕಬ್ಬಿಣದ ಕೇಕ್ ಅನ್ನು ಏಕಕಾಲಕ್ಕೇ ತಿನ್ನಲೂಬಹುದು ಹಾಗೂ ಉಳಿಸಿಕೊಳ್ಳಲೂಬಹುದು ಎಂಬುದನ್ನು ತೋರಿಸಿಕೊಟ್ಟಿತು.
ಈ ರೀತಿ, ಭಾರತವು ತನಗೆ ಬೇಕಾದುದಕ್ಕಿಂತ ಹೆಚ್ಚು ಉಕ್ಕನ್ನು ಉತ್ಪಾದಿಸಬೇಕಾದ ಹಾಗೂ ಅದನ್ನು ಬಳಸಬೇಕಾದ ಅನಿವಾರ್ಯತೆಗೆ ಸಿಕ್ಕಿಕೊಂಡಿತು. ಅದಕ್ಕೆ ಸಾಗರೋತ್ತರ ಮಾರುಕಟ್ಟೆಯಾಗಲಿ ವಿಸ್ತರಣೆಗೆ ಅವಕಾಶವಾಗಲಿ ಇರಲಿಲ್ಲ. ಟಾಟಾ ಸ್ಟೀಲ್ನಂತಹ ಭಾರತೀಯ ಕಂಪೆನಿಗಳು, ಬ್ರಿಟಿಷ್ ಆರ್ಥಿಕ ವ್ಯವಸ್ಥೆಯಲ್ಲಿ ಬೆಳೆಯಲು ಸೀಮಿತ ಅವಕಾಶಗಳು ಮಾತ್ರ ಇದ್ದವು.
ಭಾರತದ ಮಹಾರೈಲ್ವೆ ಎಂಬ ವೈಚಿತ್ರ್ಯ
ಬ್ರಿಟಿಷ್ ವಸಾಹತುಶಾಹಿಯು ಭಾರತ ಉಪಖಂಡಕ್ಕೆ ಮಾಡಿರುವ ಅನುಕೂಲಗಳಲ್ಲಿ ರೈಲ್ವೇ ನಿರ್ಮಾಣವು ಒಂದು ಎಂದು ಸಾಮ್ರಾಜ್ಯಪರವಾದಿಗಳು ಹೇಳುವುದುಂಟು. ಆದರೆ ಎಷ್ಟೋ ದೇಶಗಳು ವಸಾಹತುಗಳಾಗುವ ತೊಂದರೆಗೊಳಗಾಗದೆ ಹಾಗೂ ಅಷ್ಟೊಂದು ದುಬಾರಿ ಬೆಲೆ ತೆರದೆ ರೈಲ್ವೆಯನ್ನು ನಿರ್ಮಿಸಿಕೊಂಡಿರುವುದನ್ನು ಅವರು ಮರೆಯುತ್ತಾರೆ. ಆದರೆ ವಾಸ್ತವಿಕತೆಯು ಇನ್ನೂ ಬಹಳ ಖೇದಕರವಾಗಿದೆ.
ತನ್ನ ಲಾಭಕ್ಕಾಗಿ ಈಸ್ಟ್ ಇಂಡಿಯಾ ಕಂಪೆನಿಯು ಬೇರೆಲ್ಲ ಲೆಕ್ಕಾಚಾರಗಳಂತೆಯೆ, ರೈಲ್ವೆಯನ್ನು ಪ್ರಾರಂಭಿಸಲು ಉದ್ದೇಶಿಸಿತು. ೧೮೪೩ರಲ್ಲಿ ಗವರ್ನರ್-ಜನರಲ್ ಲಾರ್ಡ್ ಹಾರ್ಡಿಂಗ್, ರೈಲ್ವೆಯು ‘ವ್ಯಾಪಾರ-ವಾಣಿಜ್ಯ, ಸರ್ಕಾರ ಮತ್ತು ಸೈನ್ಯದ ಹತೋಟಿಗೆ ಅನುಕೂಲ’ ಎಂದು ವಾದಿಸಿದ. ಹತ್ತು ವರ್ಷಗಳ ನಂತರ ಅವನ ಉತ್ತರಾಧಿಕಾರಿ ಲಾರ್ಡ್ ಡಾಲ್ಹೌಸಿಯು ‘ಬ್ರಿಟಿಷ್ ಉತ್ಪಾದಕರ ಮಾರುಕಟ್ಟೆಯಾಗಿ ಮತ್ತು ಕೃಷಿ ಕಚ್ಚಾವಸ್ತುಗಳ ಸರಬರಾಜುದಾರನಾಗಿ’, ಭಾರತದ ಮುಖ್ಯ ಪಾತ್ರದ ಬಗ್ಗೆ ಒತ್ತಿ ಹೇಳಿದ. ವಾಸ್ತವವಾಗಿ ಭಾರತದ ವಿಶಾಲ ಭೂಪ್ರದೇಶವನ್ನು ಇಂಗ್ಲೆಂಡ್ನ ಮಾರುಕಟ್ಟೆಯಾಗಿ ಮಾರ್ಪಡಿಸುವುದು ರೈಲ್ವೆಯಿಂದ ಮಾತ್ರ ಸಾಧ್ಯವಿತ್ತು. ಹೊಸ ಉದ್ಯಮಗಳಿಗೆ ಬೇರೆ ಕಡೆಗಳಿಂದ ಹಾಗೂ ಆ ಪ್ರದೇಶಗಳಿಗೆ ಬೇಕಾದ ಕೂಲಿಕಾರರನ್ನು ಸಾಗಿಸಲು ಮತ್ತು ಇಂಗ್ಲೆಂಡಿನ ದೈತ್ಯ ಕಾರ್ಖಾನೆಗಳಿಗೆ ಬೇಕಾದ ಕಚ್ಚಾಪದಾರ್ಥಗಳನ್ನು ಭಾರತದ ಹೊಲಗಳು ಮತ್ತು ಗಣಿಗಳಿಂದ ಸಾಗಿಸಲು ಅವು ಅತ್ಯವಶ್ಯವಾಗಿದ್ದವು.
ಪ್ರಾರಂಭ ಮತ್ತು ನಿರ್ಮಾಣ ಹಂತದಿಂದಲೇ ಭಾರತೀಯ ರೈಲ್ವೆಯು ಬ್ರಿಟಿಷ್ ವಸಾಹತುಶಾಹಿಯ ಒಂದು ದೊಡ್ಡ ಹಗರಣವಾಗಿತ್ತು. ಬ್ರಿಟಿಷ್ ಷೇರುದಾರರು ರೈಲ್ವೆಯಲ್ಲಿ ಹಣ ತೊಡಗಿಸಿ ಅಗಾಧ ಮೊತ್ತದ ಹಣ ಸಂಪಾದಿಸಿದರು. ಬೇರೆ ಯಾವುದೇ ಸುರಕ್ಷಿತ ಹಣ ಹೂಡಿಕೆಯಲ್ಲಿಯೂ ಇರದಷ್ಟು, ಶೇ.೫ ಲಾಭಾಂಶವನ್ನು ಸರ್ಕಾರವು ಖಾತ್ರಿ ಕೊಟ್ಟಿತ್ತು. ಆ ದಿನಗಳಲ್ಲಿ ಅದು ಅತಿ ಹೆಚ್ಚು ಲಾಭಾಂಶವಾಗಿತ್ತು. ಖೋತಾವನ್ನು ಸರ್ಕಾರವು ಭಾರತದ ತೆರಿಗೆಗಳ ಆದಾಯದಿಂದ ಭರ್ತಿ ಮಾಡುತ್ತಿತ್ತೇ ಹೊರತು ಇಂಗ್ಲೆಂಡಿನ ತೆರಿಗೆಗಳಿಂದಲ್ಲ. ಈ ಹೆಚ್ಚಿನ ಮೊತ್ತದ ಖಾತ್ರಿಗಳಿಂದಾಗಿ ಮಿತವ್ಯಯ ಮಾಡಲು, ಖಾಸಗಿ ರೈಲ್ವೇ ನಿರ್ಮಾಣ ಕಂಪೆನಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿರಲಿಲ್ಲ. ಅವರ ಬಂಡವಾಳ ಹೆಚ್ಚು ಖರ್ಚಾದಷ್ಟೂ ಅವರಿಗೆ ಹೆಚ್ಚು ಬಡ್ಡಿ ಸಿಗುತ್ತಿತ್ತು. ಇದರ ಪರಿಣಾಮವಾಗಿ ೧೮೫೦-೧೮೬೦ರ ದಶಕಗಳಲ್ಲಿ ಒಂದು ಮೈಲಿ ಉದ್ದದ ಭಾರತೀಯ ರೈಲುಮಾರ್ಗ ನಿರ್ಮಾಣದ ವೆಚ್ಚವು ಸರಾಸರಿ ೧೮೦೦೦ ಪೌಂಡ್ ಆಗುತ್ತಿತ್ತು. ಆದರೆ ಅದಕ್ಕೆ ಆಗ ಅಮೆರಿಕದಲ್ಲಿ ಖರ್ಚಾಗುತ್ತಿದ್ದುದು ಕೇವಲ ೨೦೦೦ ಪೌಂಡ್. ಹೀಗಾಗಿ ಭಾರತೀಯ ರೈಲ್ವೆಯು ಶೇ.೫ ಕ್ಕಿಂತ ಹೆಚ್ಚು ಲಾಭ ಗಳಿಸಲು ೨೦ ಅಥವಾ ಅದಕ್ಕಿಂತ ಹೆಚ್ಚು ವರ್ಷ ಕಾಲಾವಧಿ ಬೇಕಾಯಿತು. ಆದರೆ ೧೮೮೦ರಲ್ಲಿ ಸರ್ಕಾರವು ರೈಲ್ವೇ ನಿರ್ಮಾಣವನ್ನು ಕೈಗೆತ್ತಿಕೊಂಡನಂತರವೂ ಖಾಸಗಿ ಬ್ರಿಟಿಷ್ ರೈಲ್ವೇ ನಿರ್ಮಾಣ ಕಂಪೆನಿಗಳ ದುರಾಸೆಯಿಂದಾಗಿ ಭಾರತೀಯ ರೈಲು ಮಾರ್ಗದ ನಿರ್ಮಾಣ ವೆಚ್ಚವು ಅಷ್ಟೇ ದುರ್ಗಮ ಹಾಗೂ ಜನನಿಬಿಡ ಕೆನಡಾ ಮತ್ತು ಆಸ್ಟ್ರೇಲಿಯಾದ ಕೊಳ್ಳಗಳಲ್ಲಿನ ಮಾರ್ಗ ನಿರ್ಮಾಣ ವೆಚ್ಚದ ದುಪ್ಪಟ್ಟಿಗಿಂತ ಹೆಚ್ಚಿತ್ತು.
ಭಾರತೀಯ ಬಡ ತೆರಿಗೆದಾರರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಇದೊಂದು ಲಾಭದಾಯಕ ಕಾನೂನುಬಾಹಿರ ಉದ್ಯಮವಾಗಿತ್ತು. ಲಾಭದ ವಿಷಯದಲ್ಲಿ ಭಾರತೀಯ ರೈಲ್ವೆ ಷೇರುಗಳು ಬ್ರಿಟಿಷ್ ಸರ್ಕಾರದ ಸ್ಟಾಕ್ಗಳ ಲಾಭದ ಎರಡರಷ್ಟನ್ನು ಕೊಡುತ್ತಿದ್ದವು. ೧೮೭೦ರವರೆಗಿನ ೨೦ ವರ್ಷಗಳಲ್ಲಿ ಭಾರತೀಯ ರೈಲ್ವೆಯ ೧/೫ ಭಾಗ ಹೂಡಿಕೆಯು ಬ್ರಿಟಿಷ್ ಬಂಡವಾಳವಾಗಿತ್ತು. ಆದರೆ ಅದರ ಕೇವಲ ಶೇ.೧ ಭಾಗ ಮಾತ್ರ ಭಾರತದ್ದಾಗಿತ್ತು. (ಮೊದಲ ರೈಲು ಮಾರ್ಗ ೧೮೫೩ರಲ್ಲಿ ಪ್ರಾರಂಭವಾಯಿತು). ಇಂಗ್ಲಿಷರು ಹಣ ಮಾಡಿಕೊಂಡರು. ತಂತ್ರಜ್ಞಾನ ಅವರ ವಶದಲ್ಲಿತ್ತು. ಎಲ್ಲ ಸಲಕರಣೆಗಳನ್ನೂ ಅವರೇ ಸರಬರಾಜು ಮಾಡುತ್ತಿದ್ದರು. ಹೀಗಾಗಿ ಎಲ್ಲ ಲಾಭಗಳೂ ಪುನಃ ಅವರಿಗೇ ಆಗುತ್ತಿದ್ದವು. ಆಗ ಆ ಯೋಜನೆಯನ್ನು ‘ಸಾರ್ವಜನಿಕ ಜವಾಬ್ದಾರಿಯ ಖಾಸಗಿ ಉದ್ಯಮ’ ಎಂದು ಕರೆಯಲಾಗುತ್ತಿತ್ತು. ಎಲ್ಲ ನಷ್ಟಗಳನ್ನೂ ಭಾರತೀಯರು ಭರಿಸುತ್ತಿದ್ದು, ಲಾಭಗಳನ್ನೆಲ್ಲ (ರೈಲ್ವೆ ಮೂಲಕ ಭಾರತದ ಅರ್ಥವ್ಯವಸ್ಥೆಯನ್ನು ಛಿದ್ರಗೊಳಿಸಿದ್ದ) ಬ್ರಿಟಿಷ್ ವ್ಯಾಪಾರಿ ಜೇಬಿಗೆ ಹಾಕಿಕೊಳ್ಳುತ್ತಿದ್ದ. ಇಂಗ್ಲೆಂಡಿನ ಉಕ್ಕು ಉದ್ಯಮದ ದುಬಾರಿ ಬೆಲೆಯ ಉತ್ಪನ್ನಗಳಿಗೆ ಅಗತ್ಯವಾಗಿ ಬೇಕಾಗಿದ್ದ ಮಾರುಕಟ್ಟೆ ಭಾರತದಲ್ಲಿ ಸಿಕ್ಕಿತ್ತು. ರೈಲ್ವೆಗೆ ಬೇಕಾಗಿದ್ದ ಎಲ್ಲವೂ – ಉಕ್ಕಿನ ಹಳಿಗಳು, ಇಂಜಿನ್ಗಳು, ಬೋಗಿಗಳು, ಯಂತ್ರಗಳು ಮತ್ತೆಲ್ಲವೂ ಇಂಗ್ಲೆಂಡಿನಿಂದ ಬರುತ್ತಿದ್ದವು. ಬ್ರಿಟಿಷರು ಭಾರತಕ್ಕೆ ಬಹಳ ಒಳ್ಳೆಯದನ್ನು ಮಾಡಿದ್ದಾರೆ ಎಂಬ ವಾದಕ್ಕೆ ವಿರುದ್ಧವಾಗಿ, ಅವರು ಅದಕ್ಕೆ ಕೊಟ್ಟಿರುವುದಕ್ಕಿಂತ ಎಷ್ಟೋಪಟ್ಟು ಹೆಚ್ಚನ್ನು ತಮ್ಮ ಈ ಭವ್ಯ ವಸಾಹತುವಿನಿಂದ ತೆಗೆದುಕೊಂಡು ಹೋಗಿದ್ದಾರೆ ಎಂಬುದಕ್ಕೆ ಭಾರತೀಯ ರೈಲ್ವೆ ಸಾಕ್ಷಿಯಾಗಿದೆ.
ರೈಲ್ವೆಯಿಂದ ಭಾರತೀಯರಿಗೆ ಅನಂತರವೂ ಯಾವ ಲಾಭವೂ ಇರಲಿಲ್ಲ. ಬ್ರಿಟಿಷರು ಇಲ್ಲಿ ರೈಲ್ವೆಯನ್ನು ನಿರ್ಮಾಣ ಮಾಡಿದ ಉದ್ದೇಶವು ಮುಖ್ಯವಾಗಿ ದೇಶದಲ್ಲಿನ ಸಂಪತ್ತುಗಳಾದ ಕಲ್ಲಿದ್ದಲು, ಕಬ್ಬಿಣದ ಅದಿರು, ಹತ್ತಿ ಮುಂತಾದವನ್ನು ಅವರು ತಮ್ಮ ತಾಯ್ನೆಲದ ಕಾರ್ಖಾನೆಗಳಿಗೆ ಕಳುಹಿಸಲು ಭಾರತದ ಬಂದರುಗಳಿಗೆ ತಲಪಿಸುವುದಾಗಿತ್ತು. ರೈಲ್ವೆಯು ಪ್ರಯಾಣಿಕರಿಗಾಗಿ ಉಪಯೋಗವಾಗುತ್ತಿದ್ದುದೂ ವಸಾಹತುಶಾಹಿ ಹಿತಾಸಕ್ತಿಯಿದ್ದಾಗ ಮಾತ್ರ. ಭಾರತೀಯರಿಗಾಗಿ ತಯಾರಿಸಿದ್ದ ಮರದ ಬೆಂಚುಗಳ ಮೂರನೇ ದರ್ಜೆ ರೈಲ್ವೇ ಬೋಗಿಗಳಲ್ಲಿ ಯಾವ ಮೂಲಭೂತ ಅನುಕೂಲಗಳೂ ಇರಲಿಲ್ಲ. ಅವುಗಳಲ್ಲಿ ಜನರನ್ನು ದನಗಳಂತೆ ತುಂಬಲಾಗುತ್ತಿತ್ತು. ಅವುಗಳ ಬಗ್ಗೆ ಆ ಕಾಲದಲ್ಲೇ ಉಗ್ರ ಟೀಕೆಗಳು ಬರುತ್ತಿದ್ದವು. ಆದರೂ ೩ನೆಯ ದರ್ಜೆ ರೈಲು ಪ್ರಯಾಣಿಕರು ರೈಲ್ವೆಯ ಲಾಭದ ಮೂಲವಾಗಿದ್ದರು. ಬ್ರಿಟಿಷ್ ವ್ಯಾಪಾರಿಗಳು ಸರಕು ಸಾಗಣೆ ದರ ಕಡಮೆಯಾಗಿಯೂ, ಪ್ರಯಾಣಿಕರ ಪ್ರಯಾಣ ದರ ಹೆಚ್ಚಿರುವಂತೆಯೂ ನೋಡಿಕೊಂಡಿದ್ದರು. ಭಾರತ ರೈಲ್ವೆಯ ಸರಕು ಸಾಗಣೆ ದರವು ಆಗ ಜಗತ್ತಿನಲ್ಲೇ ಅತ್ಯಂತ ಕನಿಷ್ಠಮಟ್ಟದ್ದಾಗಿತ್ತು. ಪ್ರಯಾಣ ದರ ಆದಾಯವು ರೈಲ್ವೆ ಕಂಪೆನಿಗಳ ಪ್ರಮುಖ ಲಾಭದ ಮೂಲವಾಗಿತ್ತು. ಆದರೂ ಜನರ ಪ್ರಯಾಣದ ಅನುಕೂಲಕ್ಕಾಗಿ ಬೇಡಿಕೆಗೆ ತಕ್ಕ ಪ್ರಮಾಣದಲ್ಲಿ ರೈಲು ಮಾರ್ಗಗಳನ್ನು ನಿರ್ಮಿಸುವ ಪ್ರಯತ್ನಗಳು ಬ್ರಿಟಿಷರಿಂದ ಆಗಲಿಲ್ಲ. ರೈಲು-ಮಾರ್ಗಗಳ ನಿರ್ಮಾಣದ ಆಯ್ಕೆಯಲ್ಲಿ ವಾಣಿಜ್ಯದೃಷ್ಟಿಯೇ ಪ್ರಮುಖವಾಗಿತ್ತು.
ಕಹಿ ಆದ ಸಿಹಿ ಚಾ
ಚಹಾವನ್ನು ಭಾರತದಲ್ಲಿ ಒಂದು ವಾಣಿಜ್ಯ ಬೆಳೆಯಾಗಿ ಬೆಳೆಯುವುದನ್ನು ಪ್ರಾರಂಭಿಸಿದವರು ಬ್ರಿಟಿಷರು ಎಂಬುದು ದಿಟ. ಇದರಲ್ಲಿಯೂ ಯಥಾಪ್ರಕಾರ ವ್ಯಾವಹಾರಿಕ ಉದ್ದೇಶಗಳೇ ಪುನಃ ಮುನ್ನೆಲೆಗೆ ಬಂದವು. ಇಂಗ್ಲಿಷರು ಆಳುತ್ತಿದ್ದುದು ಭಾರತವನ್ನು, ಚೀನಾವನ್ನಲ್ಲ. ಚೀನಾದ ಟೀಗೆ ಅಪಾರ ಹಣ ತೆರುವುದರ ಬದಲು ಅದನ್ನು ಭಾರತದಲ್ಲೇ ಏಕೆ ಬೆಳೆಯಬಾರದು ಎಂದು ಅವರು ಯೋಚಿಸತೊಡಗಿದರು. ಚೀನೀ ಟೀ ಮೇಲಿನ ಅವಲಂಬನೆಯನ್ನು ತಪ್ಪಿಸಬೇಕೆಂಬ ಅವರ ಆಸೆಯು ಅವರನ್ನು ಕೃಷಿಯ ಗೂಢಚರ್ಯೆಯನ್ನು ಮಾಡಲು ಪ್ರೇರೇಪಿಸಿತು. ಬ್ರಿಟಿಷನೊಬ್ಬ ಅಚಾನಕ್ಕಾಗಿ ಅಸ್ಸಾಮಿನಲ್ಲಿ ಅಲೆದಾಡುತ್ತಿದ್ದಾಗ ಕಾಡಿನಲ್ಲಿ ಬೆಳೆಯುತ್ತಿದ್ದ ಸ್ಥಳೀಯ ಟೀ ಗಿಡಗಳನ್ನು ಗಮನಿಸಿದ. ಅವುಗಳ ಎಲೆಗಳನ್ನು ನೀರಿನಲ್ಲಿ ಕುದಿಸಿ ರುಚಿ ನೋಡಿದಾಗ ಅವನಿಗೆ ಚಿನ್ನ ಸಿಕ್ಕಿದ್ದು ಗೊತ್ತಾಯಿತು – ಅವನು ಟೀಯನ್ನು ‘ಕಂಡು ಹಿಡಿದಿದ್ದ’!
ಇದರಿಂದ ಬ್ರಿಟಿಷರಿಗೆ ಭಾರತದಲ್ಲಿ ಅವರದೇ ಆದ ಟೀ ಉದ್ಯಮ ಸಿಕ್ಕಂತಾಯಿತು. ಅಸ್ಸಾಮಿನಲ್ಲಿ ಬೆಳೆದ ಟೀ, ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದುದಕ್ಕಿಂತ ಉತ್ತಮವಾಗಿದ್ದು ಬ್ರಿಟಿಷ್ ಗೃಹಿಣಿಯರಿಗೆ ಹೆಚ್ಚು ಪ್ರಿಯವಾಯಿತು. ೧೮೩೦ರ ದಶಕಗಳಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ೩ ಕೋಟಿ, ೧೫ ಲಕ್ಷ ಪೌಂಡ್ (೧ ಕೋಟಿ ೪೦ ಲಕ್ಷ ಕೆ.ಜಿ.) ಚೀನೀ ಟೀಯನ್ನು ವಾರ್ಷಿಕ ಮಾರಾಟ ಮಾಡುತ್ತಿತ್ತು. ಈಗ ಭಾರತವೊಂದೇ ವಾರ್ಷಿಕ ಸುಮಾರು ೩೦ ಕೋಟಿ ಕೆ.ಜಿ.ಯಷ್ಟು ಟೀಯನ್ನು ಉತ್ಪಾದಿಸತೊಡಗಿತು. ಈ ಟೀ ಕೂಡ ವಸಾಹತುಶಾಹಿ ಶೋಷಣೆಯಿಂದ ಹೊರತಾಗಿರಲಿಲ್ಲ. ಕೆಲಸಗಾರರು ಅತ್ಯಂತ ಕ್ಲಿಷ್ಟಕರ ವಾತಾವರಣದಲ್ಲಿ ತೀರಾ ಕಡಮೆ ಕೂಲಿಗೆ ದುಡಿಯುತ್ತಿದ್ದರು, ಲಾಭಗಳೆಲ್ಲ ಬ್ರಿಟಿಷ್ ಕಂಪೆನಿಗಳ ಪಾಲಾಗುತ್ತಿದ್ದವು. ೨೦ನೆಯ ಶತಮಾನದ ಆದಿಭಾಗದಲ್ಲಿ, ಪ್ರಖರ ವಸಾಹತುಶಾಹಿವಿರೋಧಿ ಲೇಖಕ ಸರ್ ವಾಲ್ಟರ್ ಸ್ಟಿçಕ್ಲಂಡ್ (ಈಗ ಲಭ್ಯವಿಲ್ಲದ) ತನ್ನ ಕೃತಿ ‘ದಿ ಬ್ಲ್ಯಾಕ್ ಸ್ಪಾಟ್ ಇನ್ ದಿ ಈಸ್ಟ್’ (ಪೂರ್ವದಲ್ಲಿನ ಕಪ್ಪು ಚುಕ್ಕೆ)ನಲ್ಲಿ ಹೀಗೆ ಬರೆದಿದ್ದಾನೆ – ‘ಇದನ್ನು ಮನೆಯಲ್ಲಿ ಕುಳಿತು ಓದುವ ಇಂಗ್ಲಿಷರು – ತಾವು ಅಪಾಯಕಾರಿ ಹಳದಿ ರಸವನ್ನು (ಟೀ) ಹೀರುತ್ತಿದ್ದಂತೆ ಅದೇ ಪ್ರಮಾಣದಲ್ಲಿ ಮನುಷ್ಯರ ಮಾಂಸ ಮತ್ತು ರಕ್ತವನ್ನು ಆಪೋಶನ ತೆಗೆದುಕೊಳ್ಳುತ್ತಿದ್ದೇವೆಂಬುದನ್ನು ಅರಿಯಲಿ. ತಾವು ಕುಡಿಯುವುದು ಕೇವಲ ಟೀ ಅಲ್ಲ, ಅದು ಗುಲಾಮರ ಕೆಂಪು ಕಣ, ಜೀವಸತ್ತ್ವ ಇಲ್ಲದ ಬಡರಕ್ತ ಎಂಬ ಜ್ಞಾನವಿರಲಿ.’
ಬ್ರಿಟಿಷರು ಟೀ ಬೆಳೆಯುತ್ತಿದ್ದುದು ತಮಗಾಗಿಯೇ ಹೊರತು ಸ್ಥಳೀಯರಿಗಲ್ಲ. ಹಗುರ, ಸುಗಂಧಭರಿತ ಡಾರ್ಜಿಲಿಂಗ್ ಟೀ, ಕಟುವಾದ ಅಸ್ಸಾಂ ಟೀ, ಮತ್ತೇರಿಸುವ ನೀಲಗಿರಿ ಟೀ ಎಲ್ಲವೂ ಅವು ಬೆಳೆಯುವ ಭಾರತ ಪ್ರದೇಶಗಳ ಮಣ್ಣಿನ ಗುಣ, ಹವಾಮಾನ ಮತ್ತು ಭೂಗೋಳದ ಹೆಸರುಗಳಿಂದ ಕರೆಯಲ್ಪಡುತ್ತಿದ್ದವು. ಸ್ಕಾಟ್ ಒಡೆಯರ ಆ ತೋಟಗಳಲ್ಲಿ ಟೀ ಎಲೆ ಕೊಯ್ಯುತ್ತಿದ್ದವರು ನಿಕೃಷ್ಟ ಕೂಲಿಗೆ ಕೆಲಸ ಮಾಡುತ್ತಿದ್ದ ಭಾರತೀಯ ಕೆಲಸದಾಳುಗಳು. ಅನಂತರ ಅದನ್ನು ಬಹು ಬೇಡಿಕೆಯಿದ್ದ ಇಂಗ್ಲೆಂಡಿಗೆ ಹಡಗುಗಳಲ್ಲಿ ರವಾನಿಸಿ, ಸ್ವಲ್ಪ ಭಾಗವನ್ನು ಭಾರತದಲ್ಲಿದ್ದ ಬ್ರಿಟಿಷರಿಗಾಗಿ ಉಳಿಸಿಕೊಳ್ಳಲಾಗುತ್ತಿತ್ತು. ಅವರು ಬೆಳೆದ ಟೀಯನ್ನು ಭಾರತೀಯರು ಕುಡಿಯುತ್ತಿರಲಿಲ್ಲ. ೧೯೩೦ರ ದಶಕದ ಮಹಾಪತನದ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿ ಬೇಡಿಕೆ ಕುಸಿದು ಬ್ರಿಟಿಷ್ ವ್ಯಾಪಾರಿಗಳು ಹಡಗಿನಿಂದ ಸರಕನ್ನು ಭಾರತದಲ್ಲೇ ಇಳಿಸುವ ಸಂದರ್ಭ ಎದುರಾದಾಗ, ಇಂಗ್ಲಿಷರು ಅದನ್ನು ಭಾರತೀಯರಿಗೆ ಮಾರುವ ಯೋಚನೆ ಮಾಡಿದರು. ಅಲ್ಲಿಯವರೆಗೆ ಒಂದು ಶತಮಾನ ಕಾಲ ಅವರು ಈ ಯೋಚನೆ ಮಾಡಿರಲಿಲ್ಲ. ಭಾರತದ ಜನಸಾಮಾನ್ಯರು ಬಹಳ ಸಂತೋಷದಿಂದ ಟೀ ಕುಡಿಯತೊಡಗಿದರು. ಅದರ ಸವಿರುಚಿಯ ಖ್ಯಾತಿಯು ಮಹಾ ಪತನದ ಅವಧಿ ಹಾಗೂ ವಿಶ್ವಯುದ್ಧ ವರ್ಷಗಳುದ್ದಕ್ಕೂ ಪಸರಿಸಿತು.
ಭಾರತವನ್ನು ಒಂದಾಗಿಸಿದ್ದು ಯಾರು?
ಭಾರತವನ್ನು ರಾಜಕೀಯವಾಗಿ ಒಗ್ಗೂಡಿಸಿದ್ದು ಬ್ರಿಟಿಷ್ ಆಡಳಿತ ಎನ್ನುವ ಜನಪ್ರಿಯ ವಾದದಲ್ಲಿ ಯಾವುದೇ ಹುರುಳಿಲ್ಲ. ಡಾ. ರೋಹಿಣಾಕ್ಷ ಶಿರ್ಲಾಲುರವರು ತಮ್ಮ ಸ್ತಂಭಲೇಖನವೊಂದರಲ್ಲಿ ಈ ಕುರಿತಂತೆ ಶಶಿ ತರೂರರ ಆಶಯವನ್ನು ಹೀಗೆ ಸಂಗ್ರಹಿಸಿದ್ದಾರೆ: “ಭಾರತೀಯರ ದೃಷ್ಟಿಯಲ್ಲಿ ಅಖಂಡ ರಾಷ್ಟ್ರದ ಕಲ್ಪನೆ ಮೊದಲಿನಿಂದಲೂ ಅಂತರ್ಗತವಾಗಿಯೇ ಇತ್ತು. ರಾಮಾಯಣ, ಮಹಾಭಾರತಾದಿ ಮಹಾಕಾವ್ಯಗಳಲ್ಲಿ ಈ ಕುರಿತು ಹೇರಳ ಉದಾಹರಣೆಗಳು ದೊರೆಯುತ್ತವೆ. ಕೇವಲ ಹಿಂದುಗಳು ಮಾತ್ರವಲ್ಲ, ಜಗತ್ತಿನ ಬೇರೆಲ್ಲ ದೇಶಗಳೂ ಭಾರತವನ್ನು ಅಖಂಡವಾಗಿಯೇ ನೋಡಿದ್ದವು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಆದರೆ ಬ್ರಿಟಿಷ್ ಆಡಳಿತ ಭಾರತೀಯ ಸ್ಥಳೀಯ ಆಡಳಿತವನ್ನು, ಗ್ರಾಮ ವ್ಯವಸ್ಥೆಯನ್ನು ಸಮೂಲವಾಗಿ ನಾಶಮಾಡಿತು. ಬ್ರಿಟಿಷ್ ಆಡಳಿತ ಭಾರತೀಯರನ್ನು ಆಳುವುದಕ್ಕಾಗಿ ಒಡೆಯುವ ಪ್ರಯತ್ನ ಆರಂಭಿಸಿತು. ‘ಭಾರತೀಯರಲ್ಲಿ ಪರಸ್ಪರ ದ್ವೇಷಿಸುವ ಗುಂಪುಗಳಿರಬೇಕಾದುದು ನಮ್ಮ ರಾಜಕೀಯ ಅಸ್ತಿತ್ವಕ್ಕೆ ಅತ್ಯಗತ್ಯ,’ ಎನ್ನುವ ಸರ್ ಜಾನ್ ಸ್ಟಾçಚೆ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಜನಾಂಗೀಯ, ಧಾರ್ಮಿಕ, ಜಾತೀಯ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ಭಾರತವನ್ನು ಶಾಶ್ವತವಾಗಿ ವಿಭಜಿಸಲಾಯಿತು. ವಿಭಜಿಸುವುದಕ್ಕಾಗಿಯೇ ಸಂಕುಚಿತ ರೀತಿಯಲ್ಲಿ ಜನಗಣತಿಯನ್ನೂ ಮಾಡಲಾರಂಭಿಸಲಾಯಿತು. ಜನಗಣತಿಯು ಸಮುದಾಯಗಳ ಪ್ರತ್ಯೇಕತಾ ಭಾವನೆಗಳನ್ನು ಬಲಗೊಳಿಸಿತು. ಬ್ರಿಟಿಷ್ ಪೂರ್ವದಲ್ಲಿಯೇ ಇಲ್ಲಿ ಜಾತಿಗಳಿದ್ದರೂ, ಬ್ರಿಟಿಷರು ಈ ಜಾತಿ ಪದ್ಧತಿಯು ಗಟ್ಟಿಗೊಂಡು ಅನ್ಯಾಯಗಳು ಶಾಶ್ವತವಾಗಿ ಉಳಿಯಲು ಕಾರಣರಾದರು ಮತ್ತು ಬ್ರಿಟಿಷ್ ಪೂರ್ವದಲ್ಲಿ ವ್ಯವಸ್ಥಿತ ಸಾಮಾಜಿಕ ಸಂರಚನೆಯಾಗದೆ, ಸಂಚಾರಿ ರೂಪದಲ್ಲಿದ್ದ ಜಾತಿಯನ್ನು ಒಂದು ಶಾಶ್ವತ ವ್ಯವಸ್ಥೆಯನ್ನಾಗಿಸಿದರು. ಸಾಮಾಜಿಕ, ಮನೋವೈಜ್ಞಾನಿಕ, ಭೌತಿಕ ಪ್ರತ್ಯೇಕತೆಯಾಗಿ ಈ ವರ್ಗೀಕರಣ ರೂಪಾಂತರಗೊಂಡಿತು. ಇದೇ ವಿಭಜನಕಾರಿ ನೀತಿಯು ಹಿಂದೂ-ಮುಸ್ಲಿಂ ಪ್ರತ್ಯೇಕತೆಯಲ್ಲೂ ಕೆಲಸ ಮಾಡಿತು. ಬ್ರಿಟಿಷರು ಭಾರತದ ರಾಜಕೀಯ ಐಕ್ಯವನ್ನು ಪೋಷಿಸುವ ಬದಲು ಗುಂಪುಗಳಾಗಿ ಒಡೆದು ಅದನ್ನು ಸಕ್ರಮಗೊಳಿಸಿದರು. ಈ ಒಡೆದು ಆಳುವ ಯೋಜನೆಯ ಪರಾಕಾಷ್ಠೆಯೇ ೧೯೪೭ರಲ್ಲಿ ದೇಶವಿಭಜನೆಯ ರೂಪದಲ್ಲಿ ಪ್ರಕಟವಾಯಿತು. ಹೀಗೆ ಬ್ರಿಟಿಷ್ ಆಡಳಿತವು ಅಂತಿಮವಾಗಿ ಭಾರತದ ವಿರೂಪಕ್ಕೆ ಕಾರಣವಾಯಿತು. ಒಂದು ದೇಶದ ಉತ್ತಮಿಕೆಗಾಗಿ ಆಳುತ್ತೇವೆ ಎಂದು ಹೇಳಿ, ಆ ದೇಶವನ್ನು ತುಂಡರಿಸಿ ಬಿಟ್ಟು ಹೋಗುವುದು, ಹತ್ತು ಲಕ್ಷ ಜನರನ್ನು ಸಾಯಿಸಿ, ಒಂದು ಕೋಟಿ ಮೂವತ್ತು ಲಕ್ಷ ಜನರನ್ನು ನೆಲೆ ತಪ್ಪಿಸಿ, ಶತಕೋಟಿಗಟ್ಟಲೆ ಆಸ್ತಿ-ಪಾಸ್ತಿಗಳನ್ನು ನಾಶಗೊಳಿಸಿ, ವಿನಾಶಕ್ಕೊಳಗಾದ ಆ ದೇಶದಲ್ಲಿ ಜಾತಿಯ ದ್ವೇಷದ ದಳ್ಳುರಿಗಳು ಪ್ರಜ್ವಲಿಸುವಂತೆ ಮಾಡಿದ ಬ್ರಿಟಿಷ್ ವಿಫಲ ಆಡಳಿತದ ದುರಂತಮಯ ಅಂತ್ಯವು ಅದರ ಘೋರ ಅಪರಾಧವಾಗಿದೆ ಎಂಬ ಮಾತು ಗಮನಾರ್ಹ.”
ಈ ಮೇಲೆ ವಿವರಿಸಿದವು – ಬ್ರಿಟಿಷರ ಕ್ರೌರ್ಯ, ವಂಚನೆಗಳ ಕೆಲವು ಝಲಕುಗಳು ಮಾತ್ರ. ಇಲ್ಲಿ ವಿವರಿಸಿಲ್ಲದ ಹಲವಾರು ಸಂಗತಿಗಳೂ ಶಶಿ ತರೂರರ ಪುಸ್ತಕದಲ್ಲಿವೆ. ಆ ‘ಕಗ್ಗತ್ತಲ’ ಕಾಲದಲ್ಲಿ ಏನೇನು ನಡೆಯಿತು ಎಂಬುದು ಅರಿವಾಗುತ್ತಹೋದಂತೆ, ನಮಗೆ ತಿಳಿದ ಇತಿಹಾಸವೆಂಬುದು ಸಮುದ್ರದಲ್ಲಿ ಮುಳುಗಿದ ಮೈನಾಕ ಪರ್ವತದ ಶಿಖರದ ತುದಿ ಮಾತ್ರ ಎಂಬುದು ಮನದಟ್ಟಾಗುತ್ತದೆ. ಈ ಪುಸ್ತಕದ ವ್ಯಾಪ್ತಿಯಲ್ಲಿ ಅಡಕವಾಗಿರದ ಇತಿಹಾಸ ಸಂಗತಿಗಳೂ ಸಾಕಷ್ಟಿದ್ದೇ ಇವೆ. ಇಂತಹವುಗಳನ್ನೆಲ್ಲ ನಮ್ಮಿಂದ ಮುಚ್ಚಿಟ್ಟು ಸಿದ್ಧಪಡಿಸಿದ ಇತಿಹಾಸವನ್ನೇ ನಾವು ನೆಚ್ಚಿ ಮೆಚ್ಚಿಕೊಂಡಿದ್ದೆವು ಎಂಬುದನ್ನು ನೆನೆದಾಗ ಬ್ರಿಟಿಷರು ಇದ್ದಾಗಿನ ಕಗ್ಗತ್ತಲಲ್ಲದೆ ಅವರು ನಿರ್ಗಮಿಸಿದ ನಂತರವೂ ಇನ್ನೊಂದು ಬಗೆಯ ‘ಕಗ್ಗತ್ತಲ ಕಾಲ’ ಇಂದಿಗೂ ಮುಂದುವರಿಯುತ್ತಿದೆಯಲ್ಲ ಎಂಬುದು ಮನದಾಳಕ್ಕಿಳಿದು ವಿವರಿಸಲಾಗದ ಮನಃಸಂಕಟವೊAದು ಒಡಮೂಡಿ ನಮ್ಮನ್ನು ಖತಿಗೊಳಿಸುತ್ತದೆ.