ಕಳೆದ ಕೆಲವು ವರ್ಷಗಳಿಂದ ವಿವಿಧ ಅಂಶಗಳಲ್ಲಿ ಸಾರ್ವಜನಿಕ ವಲಯವು ಸುಧಾರಣೆಯ ಹಾದಿಯಲ್ಲಿ ಸಾಗಿವೆ. ಅನೇಕ ಉದ್ಯಮಗಳು ಹೆಚ್ಚಿದ ಆದಾಯ ಮತ್ತು ಲಾಭಗಳೊಂದಿಗೆ ಸುಧಾರಿತ ಹಣಕಾಸಿನ ಕಾರ್ಯಕ್ಷಮತೆಯನ್ನು ವರದಿ ಮಾಡಿವೆ. ಈ ಸುಧಾರಣೆಗಳು ಉತ್ತಮ ನಿರ್ವಹಣಾ ಅಭ್ಯಾಸಗಳು, ವೆಚ್ಚ ನಿಯಂತ್ರಣ ಮತ್ತು ಹೊಸ ಕಾರ್ಯತಂತ್ರದ ಹೂಡಿಕೆಗಳಿಗೆ ಅನುವುಮಾಡಿದೆ ಎಂದು ಹೇಳಬಹುದು. ತಂತ್ರಜ್ಞಾನದ ಅಳವಡಿಕೆ, ಯಾಂತ್ರೀಕೃತಗೊಂಡ ಮತ್ತು ಪ್ರಕ್ರಿಯೆಗಳ ಸರಳೀಕರಣದ ಮೂಲಕ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ. ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಿಯಂತ್ರಣಗಳ ಅಗತ್ಯತೆಗಳು ಸೇರಿದಂತೆ ಉದ್ಯಮಗಳಲ್ಲಿ ಕಾರ್ಪೊರೇಟ್ ಆಡಳಿತದ ಅಭ್ಯಾಸಗಳನ್ನು ಹೆಚ್ಚಿಸಲು ಸಂಘಟಿತ ಪ್ರಯತ್ನಗಳಾಗಿವೆ. ಇದು ಹೂಡಿಕೆದಾರರ ವಿಶ್ವಾಸವನ್ನು ಮತ್ತೆ ಗಳಿಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡಿದೆ.
ಭಾರತದಲ್ಲಿ ಸಾರ್ವಜನಿಕವಲಯದ ಉದ್ಯಮಗಳು ದೇಶದ ಆರ್ಥಿಕ ಅಭಿವೃದ್ಧಿಯ ಸಕಾರಾತ್ಮಕ ಬೆಳವಣಿಗೆಯ ಮೂಲ ಉದ್ದೇಶದೊಂದಿಗೆ ಸ್ಥಾಪಿಸಲ್ಪಟ್ಟಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕಾರ್ಯತಂತ್ರದ ಅಗತ್ಯವಿರುವ ಕೈಗಾರಿಕೆ, ಮೂಲಸೌಕರ್ಯ ಯೋಜನೆಗಳಲ್ಲಿ ಖಾಸಗಿ ಹೂಡಿಕೆಯು ಸಾಕಷ್ಟಿಲ್ಲದಿದ್ದುದರಿಂದ ಸಾರ್ವಜನಿಕವಲಯದ ಕಡೆ ಸರ್ಕಾರವು ಗಮನಹರಿಸಲು ಕಾರಣವಾಯಿತು. ಸಮೂಹ ಬಂಡವಾಳದ ಉದ್ಯಮಗಳು ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ರಕ್ಷಣೆ, ವಿದ್ಯುತ್, ಪರಮಾಣು ಶಕ್ತಿ, ರಕ್ಷಣೆ, ದೂರಸಂಪರ್ಕ, ಸಾರಿಗೆ, ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪೂರಕವೂ ಮತ್ತು ಅಗತ್ಯವೂ ಎನಿಸಿದೆ. ಸಮಾಜಕಲ್ಯಾಣ ಸೇವೆಗಳಾದ ಆರೋಗ್ಯ, ಶಿಕ್ಷಣ, ವಸತಿ, ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸಲು ಹಾಗೂ ರಾಷ್ಟ್ರೀಯ ಅಭಿವೃದ್ಧಿಯನ್ನು ಉತ್ತೇಜಿಸಲು ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಲಾಗಿದೆ. ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ಏಕಸ್ವಾಮ್ಯತೆಯನ್ನು ನಿಯಂತ್ರಿಸಲು ಸಹ ಸಾರ್ವಜನಿಕ ಉದ್ಯಮಗಳು ಅಗತ್ಯವಿದೆ.
ಸ್ವಾತಂತ್ರ್ಯದ ಆರಂಭಿಕ ದಿನಗಳಲ್ಲಿ ದೇಶವು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಸುಳಿಯಲ್ಲಿತ್ತು. ದುರ್ಬಲ ಕೈಗಾರಿಕಾ ವಲಯ, ಕೆಳಮಟ್ಟದ ಉಳಿತಾಯ, ಅಸಮರ್ಪಕ ಹೂಡಿಕೆಗಳು ಮತ್ತು ಮೂಲಸೌಕರ್ಯ ಸೌಲಭ್ಯಗಳ ಕೊರತೆಯ ಕೃಷಿ ಆಧಾರಿತವಾದ ಆರ್ಥಿಕತೆಯಾಗಿತ್ತು. ಆದಾಯ ಮತ್ತು ಉದ್ಯೋಗದ ಮಟ್ಟಗಳಲ್ಲಿ ಹೆಚ್ಚಿನ ಅಸಮಾನತೆಗಳಿದ್ದವು. ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನ, ತರಬೇತಿ ಪಡೆದ ಮಾನವಶಕ್ತಿಯ ಕೊರತೆಯ ಕಾರಣಗಳಿಂದ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರದ ನಿರ್ವಹಣೆ ಅಪೇಕ್ಷಣೀಯವೂ ಮತ್ತು ಅನಿವಾರ್ಯವೂ ಆಗಿತ್ತು. ಏಕೆಂದರೆ ಖಾಸಗಿ ವಲಯವು ಸಂಪನ್ಮೂಲಗಳು, ನಿರ್ವಹಣಾ ಮತ್ತು ವೈಜ್ಞಾನಿಕ ಕೌಶಲಗಳ ಕೊರತೆಯಲ್ಲಿದ್ದು ದೊಡ್ಡ ಮತ್ತು ದೀರ್ಘಾವಧಿಯ ಹೂಡಿಕೆಗಳಿಗೆ ವಿಮುಖವಾಗಿದ್ದವು.
ಆ ಸಮಯದ ಸರ್ಕಾರದ ಮುಂದಿದ್ದ ಅನಿವಾರ್ಯತೆಗಳೆಂದರೆ ದೇಶದ ತ್ವರಿತ ಆರ್ಥಿಕ ಅಭಿವೃದ್ಧಿ, ಕೈಗಾರಿಕೀಕರಣ ಮತ್ತು ಆರ್ಥಿಕ ಮುನ್ನಡೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಸೃಷ್ಟಿಸುವುದು. ಬಡತನ ನಿರ್ಮೂಲನೆ, ಆದಾಯದ ಸಮಾನ ಹಂಚಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯ ಸವಾಲುಗಳನ್ನು ಎದುರಿಸುವುದು. ಪ್ರಾದೇಶಿಕ ಅಸಮತೋಲನದ ನಿವಾರಣೆ, ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಯ ವೇಗದ ಬೆಳವಣಿಗೆ, ನೈಸರ್ಗಿಕ ಸಂಪನ್ಮೂಲಗಳ ಉತ್ತಮ ಬಳಕೆ, ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯ ಮತ್ತು ಆಮದು ಪರ್ಯಾಯಗಳನ್ನು ಉತ್ತೇಜಿಸಿ ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ದೇಶದ ಮುನ್ನಡೆ ಸಾಧಿಸುವುದು.
ನೆಹರು ಚಿಂತನೆಯ ಅಭಿವೃದ್ಧಿ ಮಾದರಿ
ದೇಶದ ಮೊದಲ ಸರ್ಕಾರ ರಚಿಸಿದ ನೆಹರೂ ಅವರು ಭಾರೀ ಉದ್ಯಮವನ್ನು ಸ್ವಾವಲಂಬನೆಗೆ ಅಗತ್ಯವೆಂದು ಪರಿಗಣಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸೋವಿಯತ್ ಆರ್ಥಿಕ ವ್ಯವಸ್ಥೆ ಅವರನ್ನು ಹೆಚ್ಚು ಆಕರ್ಷಿಸಿತ್ತು. ಅವರು ಖಾಸಗಿವಲಯವನ್ನು ಸಾರಾಸಗಟು ನಿರಾಕರಿಸದಿದ್ದರೂ ಸರಕಾರದ ಮಾಲೀಕತ್ವಕ್ಕೆ ಮನ್ನಣೆ ಕೊಟ್ಟರು. ಸಾರ್ವಜನಿಕ ವಲಯದ ಉದ್ಯಮಗಳನ್ನು ನೆಹರು “ಆಧುನಿಕ ಭಾರತದ ದೇವಾಲಯಗಳು” ಎಂದು ಬಣ್ಣಿಸಿದ್ದರು. ದೇಶವು ನಂತರದಲ್ಲಿ ಸಾಗಿದ್ದು ‘ಮಿಶ್ರ ಅರ್ಥ’ ವ್ಯವಸ್ಥೆಯಲ್ಲಿ.
ಸಾರ್ವಜನಿಕವಲಯವನ್ನು ಬಲಪಡಿಸುವ ಪ್ರಯತ್ನಗಳು ಆಗ ನಡೆದವು ಮತ್ತು ಅದರ ಸಲುವಾಗಿ ಅನೇಕ ಕ್ಷೇತ್ರಗಳಲ್ಲಿ ಖಾಸಗಿ ಉದ್ಯಮಿಗಳ ಪ್ರವೇಶ ನಿರ್ಬಂಧಿಸಲಾಯಿತು. ಸರ್ಕಾರದ ನಿಯಂತ್ರಣಗಳು ಮತ್ತು ನಿಬಂಧನೆಗಳ ಸಂಕೀರ್ಣತೆಗಳು ಖಾಸಗಿ ಮಾರುಕಟ್ಟೆಯನ್ನು ದುರ್ಬಲಗೊಳಿಸುವುದರಲ್ಲಿ ಸಫಲವಾಯಿತು. ಖಾಸಗಿ ಉದ್ಯಮಗಳು ಪರವಾನಗಿ ಪಡೆಯುವ ಅನಿವಾರ್ಯತೆಗೊಳಪಟ್ಟವು. ಆ ಕಾರಣದಿಂದಾಗಿ ಸಿ. ರಾಜಗೋಪಾಲಾಚಾರಿಯವರು ನೆಹರೂ ಅವರ ಕಾಲವನ್ನು ‘ಲೈಸೆನ್ಸ್ರಾಜ್’ ಎಂದು ಕರೆದು ಸರಕಾರದ ‘ವೈಫಲ್ಯ’ಗಳತ್ತ ಬೊಟ್ಟು ತೋರಿದರು.
ಅನೇಕ ಸಾರ್ವಜನಿಕ ಉದ್ಯಮಗಳು ಅಸಮರ್ಥತೆ, ಅಧಿಕಾರಶಾಹಿ ಮತ್ತು ಅತಿಯಾದ ಸಿಬ್ಬಂದಿಯಿಂದ ಬಳಲಿದವು. ಸ್ವಾಯತ್ತತೆಯ ಕೊರತೆ, ಸಮಯೋಚಿತ ನಿರ್ಧಾರಗಳಿಲ್ಲದೆ ಹೊಸತನದ ಚಿಂತನೆ, ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಕುಂಠಿತವಾಯಿತು. ಕೆಲವು ಉದ್ಯಮಗಳು ಹಣಕಾಸಿನ ದುರುಪಯೋಗ, ಸಾಲಗಳ ಮರುಪಾವತಿ ಮಾಡದಿರುವುದು ಮತ್ತು ಸಮರ್ಥನೀಯವಲ್ಲದ ವ್ಯಾಪಾರಗಳತ್ತ ಹೊರಳಿ ನಷ್ಟದ ಹಾದಿ ತುಳಿದವು. ಕೆಲವು ಉದ್ಯಮಗಳು ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗಿ ಪ್ರಮುಖ ಸ್ಥಾನಗಳಿಗೆ ನೇಮಕಾತಿಗಳು ಅರ್ಹತೆಗಿಂತ ಹೆಚ್ಚಾಗಿ ರಾಜಕೀಯ ಪರಿಗಣನೆಗಳಿಂದ ಪ್ರಭಾವಿತವಾದವು.
ಖಾಸಗಿವಲಯದಿಂದ ಸ್ಪರ್ಧೆ ಇಲ್ಲದ ಕಾರಣ ಸಾರ್ವಜನಿಕವಲಯದ ಸಂಸ್ಥೆಗಳ ಅಸ್ತಿತ್ವಕ್ಕೆ ಯಾವುದೇ ಬೆದರಿಕೆ ಇಲ್ಲವಾಯ್ತು. ಯಾವುದೇ ಹೊಣೆಗಾರಿಕೆ ಇರದ ಕಾರಣ ಅಸಮರ್ಥತೆಯ ಮಾಪನವಿಲ್ಲದೆ, ದಕ್ಷತೆಗೆ ಪ್ರೋತ್ಸಾಹವೂ ಇಲ್ಲದ ವಾತಾವರಣ ನಿರ್ಮಾಣಗೊಂಡಿತು. ಕಾರ್ಮಿಕ ಸಂಘಗಳು ಶಕ್ತಿಯುತವಾಗಿ ಬೆಳೆದವು. ವೇತನ ಹೆಚ್ಚಳದ ಬೇಡಿಕೆಗಳು ಹೆಚ್ಚಾದವಷ್ಟೇ ಹೊರತು ಕಾರ್ಯಕ್ಷಮತೆ ಮೂಲೆಗೆ ಸರಿಯಿತು. ಉತ್ಪನ್ನಗಳ ಮಾರುಕಟ್ಟೆಯ ಸ್ಥಿತಿಗಳು ಹಿನ್ನೆಲೆಗೆ ಸರಿದು ಕಾರ್ಮಿಕ ಸಂಘಗಳ ಮತ್ತು ಪ್ರಬಲ ರಾಜಕಾರಣಿಗಳ ಹಿಡಿತ ಹೆಚ್ಚಾಗತೊಡಗಿತು.
ಒಟ್ಟಾರೆಯಾಗಿ, ನೆಹರು ಆಡಳಿತ ಕಾಲದಲ್ಲಿ ಭಾರತದ ಕೈಗಾರಿಕೀಕರಣ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಾರ್ವಜನಿಕ ವಲಯವು ನಿರ್ಣಾಯಕ ಪಾತ್ರವನ್ನು ವಹಿಸಿಯೂ, ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸುಧಾರಣೆಯ ಅಗತ್ಯಗಳಿಂದ ನಿರೀಕ್ಷಿತ ಅಭಿವೃದ್ಧಿಯಲ್ಲಿ ಸೋತಿತು.
ಇಂದಿರಾಗಾಂಧಿ ಸಮಯದ ಸಾರ್ವಜನಿಕ ವಲಯದ ಉದ್ಯಮ
ಇಂದಿರಾಗಾಂಧಿ ೧೯೬೬ರಲ್ಲಿ ಪ್ರಧಾನಿಯಾಗಿ, ಬಡವರ ಪರವೆನಿಸುವ ಅನೇಕ ಕಾರ್ಯಕ್ರಮಗಳ ಘೋಷಣೆಗಳನ್ನು ಮಾಡಿದರು. ದೇಶದ ಅನೇಕ ದೊಡ್ಡ ಬ್ಯಾಂಕ್ಗಳು ರಾಷ್ಟ್ರೀಕರಣಗೊಂಡು, ಸರಕಾರದ ಹಿಡಿತಕ್ಕೆ ಬಂದವು. ಇದು ಬಡವರಿಗೆ ಮತ್ತು ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಕೂಡಿತ್ತು. ಬ್ಯಾಂಕುಗಳು ‘ಸಾಲ ಮೇಳ’ಗಳ ಮೂಲಕ ಬಹುಸಂಖೈಯಲ್ಲಿ ಸಾಲ ಕೊಡತೊಡಗಿದವು. ಆದರೆ ಸಾಲದ ಸದುದ್ದೇಶಗಳು ಪರಿಣಾಮಕಾರಿ ಎನಿಸದೆ ಬಡವರ ಆರ್ಥಿಕತೆಗೆ ಸಹಾಯವಾಗುವುದರಲ್ಲಿ ವಿಫಲವಾದವು.
ಇಂದಿರಾ ಆಡಳಿತದಲ್ಲಿ ಭಾರತದ ಆರ್ಥಿಕತೆ ದುರ್ಬಲಗೊಂಡಿತು. ಆಗ ಜಾರಿಯಾದ ಸಣ್ಣಕೈಗಾರಿಕೆಗಳಿಗೆ ಅಗತ್ಯವಾದ ಕಾಯಿದೆಗಳು ನಿರೀಕ್ಷಿತ ಪರಿಣಾಮ ಬೀರುವುದರಲ್ಲಿ ಸೋತವು. ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ, ‘ಅರ್ಬನ್ ಲ್ಯಾಂಡ್ ಸೀಲಿಂಗ್ ಆ್ಯಕ್ಟ್’ ಮುಂತಾದವು ವಿರುದ್ಧ ಪರಿಣಾಮ ಬೀರಿದವು.
‘ಲೈಸೆನ್ಸ್ ರಾಜ್’ ಮತ್ತಷ್ಟು ಮುನ್ನಲೆಗೆ ಬಂದಿತು. ಪ್ರಬಲ ಕಾರ್ಪೊರೇಟ್ ಸಂಸ್ಥೆಗಳು ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ನೇಮಕಾತಿಗಳಲ್ಲಿಯೂ ಪ್ರಮುಖ ಪಾತ್ರಗಳನ್ನು ವಹಿಸಲು ಪ್ರಾರಂಭಿಸಿದವು. ಆಡಳಿತ ಯಂತ್ರವು ತೀವ್ರವಾಗಿ ದುರ್ಬಲಗೊಂಡಿತು, ಸಾರ್ವಜನಿಕವಲಯದ ಉದ್ಯಮಗಳ ದಕ್ಷತೆಯ ಮೇಲೆ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರಿತು.
ವಾಜಪೇಯಿ ಸರ್ಕಾರದ ಐದು ವರ್ಷಗಳು
೧೯೯೯-೨೦೦೪ರಲ್ಲಿ ವಾಜಪೇಯಿ ಸರ್ಕಾರವು ಸಾರ್ವಜನಿಕವಲಯದ ಅನೇಕ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆದುಕೊಳ್ಳುವಿಕೆಯ ನಿರ್ಧಾರಗಳನ್ನು ಮಾಡಿತು. ಖಾಸಗೀಕರಣವನ್ನು ಸರ್ಕಾರ ಬೆಂಬಲಿಸುವ ಸೂಚನೆಗಳು ಕಂಡವು. ವಿಎಸ್ಎನ್ಎಲ್, ಹಿಂದೂಸ್ತಾನ್ ಜಿಂಕ್, ಬಾಲ್ಕೊ, ಐಪಿಸಿಎಲ್, ಮಾಡರ್ನ್ ಫುಡ್ಸ್ ಮತ್ತು ಕೆಲವು ಐಟಿಡಿಸಿ ಹೋಟೆಲ್ಗಳನ್ನು ಖಾಸಗೀಕರಣಗೊಳಿಸಲಾಯಿತು. ಸರಕಾರದ ಸಹಯೋಜಿತ ಮಾರುತಿ ಸುಜುಕಿ ಮತ್ತು ಅನೇಕ ಉದ್ಯಮಗಳು ಸಾರ್ವಜನಿಕವಲಯದಿಂದ ನಿರ್ಗಮಿಸಿತು. ಸಾರ್ವಜನಿಕವಲಯದ ಉದ್ಯಮಗಳು ತೆರಿಗೆದಾರರ ಹಣದ ಮೇಲೆ ಹೊರೆಯಾಗಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿಲ್ಲ ಎನ್ನುವ ನಿಲವು ಆಗಿನ ಸರ್ಕಾರದ್ದಾಗಿತ್ತು.
‘ಯುಪಿಎ’ ಸರ್ಕಾರದ ಅಧಿಕಾರಾವಧಿ
೨೦೦೪ರಲ್ಲಿ ಡಾ. ಮನಮೋಹನ್ಸಿಂಗ್ ಪ್ರಧಾನಿಯಾದರು. ‘ಯುಪಿಎ’ ಎರಡನೇ ಕಾಲಾವಧಿಯಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳು ದುಂದುಗಾರಿಕೆ, ಅದಕ್ಷತೆಗಳತ್ತ ಸರಿದವು. ರಾಜಕೀಯ ಧುರೀಣರು ಮತ್ತು ಮೇಲಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ಸಾಲಗಳು ಸಿಲುಕಿಕೊಂಡವು. ಬ್ಯಾಂಕುಗಳ ಉನ್ನತ ಹುದ್ದೆಗಳ ನೇಮಕಾತಿಗಳು ರಾಜಕೀಯ ಮೇಲಾಟದ ಸುಳಿಗೆ ಸಿಕ್ಕವು. ಹಲವಾರು ‘ಆದ್ಯತೆಯ’ ಅಧಿಕಾರಿಗಳು ಹಿಂಬಾಗಿಲಿನ ಮೂಲಕ ಪ್ರಮುಖ ಸ್ಥಾನಗಳನ್ನು ಪಡೆದರು. ಉದಾಹರಣೆಗೆ, ೨೦೦೯ರಲ್ಲಿ, ‘ಯುಪಿಎ’ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಗುಜರಾತ್ ಹೈಕೋರ್ಟ್ ಪತ್ರಿಕಾ ವರದಿಯ (ಇಂಡಿಯನ್ ಎಕ್ಸ್ಪ್ರೆಸ್) ಆಧಾರದ ಮೇಲೆ “ರಾಷ್ಟ್ರೀಯ ಬ್ಯಾಂಕುಗಳ ಆಡಳಿತ ಮಂಡಳಿಗಳಲ್ಲಿ ಸ್ವತಂತ್ರ ನಿರ್ದೇಶಕರ ನೇಮಕಾತಿಯನ್ನು ಅರ್ಹತೆಯ ಮೇಲೆ ಮಾಡಲಾಗಿಲ್ಲ ಮತ್ತು ಅಧಿಕಾರದಲ್ಲಿರುವ ಪಕ್ಷದ ಸಂಪರ್ಕ ಹೊಂದಿದ ರಾಜಕಾರಣಿಗಳಿಗೆ ಒಲವು ತೋರಿದೆ” ಎಂದು ತೀರ್ಪು ನೀಡಿತು! ಮನಮೋಹನ್ಸಿಂಗ್ ಸರ್ಕಾರವು ೩೭ ಸ್ವತಂತ್ರ ನಿರ್ದೇಶಕರುಗಳನ್ನು ಬ್ಯಾಂಕುಗಳ ಮಂಡಳಿಗಳಿಗೆ ನೇಮಕ ಮಾಡಿದ್ದರ ವಿರುದ್ಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಉಲ್ಲೇಖಿಸಿ ನ್ಯಾಯಾಲಯ ಈ ತೀರ್ಪು ನೀಡಿತು. ಆಗ ಮಾಡಿದ ನೇಮಕಾತಿಗಳಲ್ಲಿ ಕನಿಷ್ಠ ೩೩ ಮಂದಿ ಅಧಿಕಾರ ಪಕ್ಷದ ನಿಷ್ಠಾವಂತರು, ಐವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮತ್ತು ಸೇವಾದಳದ ಕಾರ್ಯದರ್ಶಿಗಳಾದ್ದರು! ಇಷ್ಟಾಗಿಯೂ, ಸಾರ್ವಜನಿಕವಲಯದ ಬ್ಯಾಂಕ್ ಮತ್ತು ಉದ್ಯಮಗಳ ಹುದ್ದೆಗಳಿಗೆ ಪಕ್ಷದ ಕೈಗೊಂಬೆಗಳು ಮತ್ತು ಕಾರ್ಪೊರೇಟ್ವಲಯದ ಆಪ್ತರನ್ನು ನೇಮಿಸುವ ಪರಿಪಾಠ ಮುಂದುವರಿದದ್ದು ವಿಪರ್ಯಾಸವೇ ಸರಿ.
ನರೇಂದ್ರ ಮೋದಿ ನೇತೃತ್ವದ ‘ಎನ್ಡಿಎ’ ಸರ್ಕಾರ
೨೦೧೪ರಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಒಕ್ಕೂಟವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ರಚಿಸಿದಾಗ, ಅಪಾಯದಲ್ಲಿರುವ ಆರ್ಥಿಕತೆಯನ್ನು ಬೆನ್ನಿಗೆ ಕಟ್ಟಿಕೊಂಡೇ ಕಾರ್ಯಪ್ರವೃತ್ತವಾಯಿತು. ಅದು ಖಾಸಗಿವಲಯದ ಹೂಡಿಕೆಯನ್ನು ಗಮನಾರ್ಹವಾಗಿ ತಡೆಯಲೂ ಅಸಮರ್ಥವಾಗಿತ್ತು. ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿ ಸಾರ್ವಜನಿಕವಲಯದ ಬಂಡವಾಳ ಹೆಚ್ಚಿಸುವುದು ಆದ್ಯತೆಯ ವಿಷಯವಾಗಿತ್ತು.
ಆ ಸಮಯದಲ್ಲಿ ಮೋದಿಯವರ ರಾಜಕೀಯ ಸ್ಪರ್ಧಿಗಳು ಸಾರ್ವಜನಿಕವಲಯದ ಉದ್ಯಮಗಳನ್ನು ಮೋದಿ ದುರ್ಬಲಗೊಳಿಸುತ್ತಿದ್ದಾರೆಂದೂ, ಕೆಲವು ದೊಡ್ಡ ಉದ್ಯಮಿಗಳಿಗೆ ತಮ್ಮ ಸಹಾಯಹಸ್ತ ಚಾಚುತ್ತಿದ್ದಾರೆಂದೂ ಆಧಾರರಹಿತ ಮಿಥ್ಯಾರೋಪದಲ್ಲಿ ತೊಡಗಿದರು.
ಆರೋಪಗಳನ್ನು ಬದಿಗಿರಿಸಿ ವಾಣಿಜ್ಯ ವಹಿವಾಟುಗಳನ್ನು ಸುಧಾರಿಸುವುದರ ಮೇಲೆ ಒತ್ತು ನೀಡಿ ಆ ಮೂಲಕ ಅವುಗಳ ಸಂಪತ್ತು ವರ್ಧಿಸುವ ಮತ್ತು ಸಾರ್ವಜನಿಕವಲಯ ಉದ್ಯಮಗಳ ಸ್ಟಾಕ್ ಹೊಂದಿರುವವರಿಗೆ ಭರವಸೆಯನ್ನು ತುಂಬುವ ಕಾರ್ಯವಾಗಬೇಕಿರುವುದನ್ನು ಮೋದಿ ಮನಗಂಡಿದ್ದರು. ಆ ಸಲುವಾಗಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ)ಯನ್ನು ಸರ್ಕಾರವು ರಚಿಸಿತು.
೨೦೧೮ರಲ್ಲಿ, ರಾಹುಲ್ಗಾಂಧಿ ಅವರು ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ ಸೇರಿದಂತೆ ಸಾರ್ವಜನಿಕ ವಲಯ ಉದ್ಯಮಗಳನ್ನು ಮೋದಿ ಸರ್ಕಾರವು ನಿರ್ಲಕ್ಷಿಸುತ್ತಿದೆ ಎಂದು ದೂರಿದರು. ಅಚ್ಚರಿಯೆಂದರೆ, ಅಂಥ ದೂರುಗಳ ಸಮಯದಲ್ಲೇ ಕೇಂದ್ರ ಸರ್ಕಾರವು ಎಚ್ಎಎಲ್ ಸಂಸ್ಥೆಯನ್ನು ‘ಮೇಕ್ ಇನ್ ಇಂಡಿಯಾ’ ಯೋಜನೆಯ ಭಾಗವನ್ನಾಗಿಸಿತು. ಎಚ್ಎಎಲ್ ೧.೩೫ ಲಕ್ಷ ಕೋಟಿ ರೂಪಾಯಿಯ ಕಂಪೆನಿಯಾಗಿ ಅಮೋಘ ಬೆಳವಣಿಗೆ ತೋರಿತು! ಅದರ ಷೇರುಗಳು ೨೦೧೩ರಲ್ಲಿ ಇದ್ದ ಬೆಲೆಗಿಂತ ಐದು ಪಟ್ಟು ಹೆಚ್ಚಾಯಿತು. ಸಂಸ್ಥೆಯ ಹೇಳಿಕೆಯ ಪ್ರಕಾರ ಎಚ್ಎಎಲ್ ೮೪,೦೦೦ ಕೋಟಿ ರೂ.ಗಳ ಉತ್ಪಾದನೆಗೆ ಆದೇಶಗಳನ್ನು ಪಡೆದಿದ್ದು ಇನ್ನೂ ೫೦,೦೦೦ ಕೋಟಿ ರೂಪಾಯಿಯ ಬೇಡಿಕೆಯನ್ನು ಹೊಂದಿದೆ. ಅರ್ಜೆಂಟೀನಾ, ಈಜಿಪ್ಟ್ ಮತ್ತು ಫಿಲಿಪೈನ್ಸ್ಗೆ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಅದು ಸಿದ್ಧವಾಗಿದೆ. ಮೋದಿಯವರ ಚಾಣಾಕ್ಷ ನಡೆಗಳು ‘ಎಚ್ಎಎಲ್’ನ ಈ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದು ಜಗಜ್ಜಾಹೀರಾಗಿದೆ.
ಮೋದಿಯವರ ನಿಲವು ಅವರ ಸರ್ಕಾರದಲ್ಲಿನ ಹೊಸ ಚಿಂತನೆಯನ್ನು ಪ್ರತಿಬಿಂಬಿಸಿತು. ಲಾಭದಾಯಕ ಉದ್ಯಮಗಳಲ್ಲಿನ ಸರ್ಕಾರೀ ಹಿಡುವಳಿಗಳನ್ನು ತರಾತುರಿಯಲ್ಲಿ ಅಥವಾ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಯಾವ ಸೂಚನೆಗಳೂ ಅವರ ಸರ್ಕಾರದಿಂದ ಬರಲಿಲ್ಲ ಅನ್ನುವುದು ಗಮನಾರ್ಹ.
“ವಿಶ್ವದ ಯಾವುದೇ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯಗಳೆರಡೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇದ್ದಕ್ಕಿದ್ದಂತೆ ಸಾರ್ವಜನಿಕ ವಲಯವನ್ನು ತೊಡೆದುಹಾಕಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡಲಾಗದು’’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆ ‘ದಿ ವಾಲ್ ಸ್ಟ್ರೀಟ್ ಜರ್ನಲ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದು, ಅದು ಸರ್ಕಾರದ ಸಾರ್ಜನಿಕ ವಲಯಗಳ ಬಗೆಗಿನ ಧನಾತ್ಮಕ ಚಿಂತನೆಯನ್ನು ಸ್ಪಷ್ಟಪಡಿಸುವುದೇ ಆಗಿದೆ. ೨೦೧೫ರಲ್ಲಿ ಕೇಂದ್ರವು ದೇಶದ ಸರ್ವಾಂಗೀಣ ಅಭಿವೃದ್ದಿಯ ಗುರಿಗಾಗಿ ‘ನೀತಿ’ (NITI) ಆಯೋಗವನ್ನು ರಚಿಸಿದ್ದನ್ನು ಸಹ ಗಮನಿಸಬೇಕಿದೆ.
ಸಮೂಹ ಬಂಡವಾಳ ಉದ್ಯಮಗಳತ್ತ ಮೋದಿಯವರ ನಡೆ
೨೦೧೬ರಲ್ಲಿ ನರೇಂದ್ರ ಮೋದಿ ಸರ್ಕಾರವು ಲಾಭ ಗಳಿಸುವ ಸಾರ್ವಜನಿಕವಲಯದ ಘಟಕಗಳಿಗೆ ಭೂಮಿ ಮತ್ತು ಆಸ್ತಿಯನ್ನು ಖರೀದಿಸುವ ಸ್ವಾತಂತ್ರ್ಯ ಕೊಟ್ಟಿತು. ನಷ್ಟದಲ್ಲಿರುವ ಉದ್ಯಮಗಳನ್ನು ಮಾರಾಟ ಮಾಡುವ ನಿರ್ಧಾರವನ್ನು ಆಯಾ ಆಡಳಿತ ಸಚಿವಾಲಯಗಳು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೂ ಅವರು ಕೊಟ್ಟರು.
ಪ್ರಸ್ತುತ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ಸರ್ಕಾರದ ಯೋಜನೆಗಳು ಸ್ಪಷ್ಟವಾಗಿ ಸಾರ್ವಜನಿಕವಲಯದ ಪರವಾಗಿದ್ದು, ಮೋದಿಯವರು ತಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಸಾರ್ವಜನಿಕ ಉದ್ಯಮಗಳ ಷೇರುಗಳ ಮೌಲ್ಯವನ್ನು ಬಹುಪಟ್ಟು ಹೆಚ್ಚಿಸುವ ಉಪಕ್ರಮಗಳ ಮೂಲಕ ಷೇರುದಾರರ ವಿಶ್ವಾಸ ಹೆಚ್ಚುವಂತೆ ಮಾಡಿದರು. ಇದು ‘ಮೋದಿ ಪ್ರೀಮಿಯಂ’ ಎಂದು ಜನಪ್ರಿಯವಾಗಿದೆ.
ಕಳೆದ ಕೆಲವು ವರ್ಷಗಳಿಂದ ವಿವಿಧ ಅಂಶಗಳಲ್ಲಿ ಸಾರ್ವಜನಿಕ ವಲಯವು ಸುಧಾರಣೆಯ ಹಾದಿಯಲ್ಲಿ ಸಾಗಿವೆ. ಅನೇಕ ಉದ್ಯಮಗಳು ಹೆಚ್ಚಿದ ಆದಾಯ ಮತ್ತು ಲಾಭಗಳೊಂದಿಗೆ ಸುಧಾರಿತ ಹಣಕಾಸಿನ ಕಾರ್ಯಕ್ಷಮತೆಯನ್ನು ವರದಿ ಮಾಡಿವೆ. ಈ ಸುಧಾರಣೆಗಳು ಉತ್ತಮ ನಿರ್ವಹಣಾ ಅಭ್ಯಾಸಗಳು, ವೆಚ್ಚ ನಿಯಂತ್ರಣ ಮತ್ತು ಹೊಸ ಕಾರ್ಯತಂತ್ರದ ಹೂಡಿಕೆಗಳಿಗೆ ಅನುವುಮಾಡಿದೆ ಎಂದು ಹೇಳಬಹುದು. ತಂತ್ರಜ್ಞಾನದ ಅಳವಡಿಕೆ, ಯಾಂತ್ರೀಕೃತಗೊಂಡ ಮತ್ತು ಪ್ರಕ್ರಿಯೆಗಳ ಸರಳೀಕರಣದ ಮೂಲಕ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ. ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಿಯಂತ್ರಣಗಳ ಅಗತ್ಯತೆಗಳು ಸೇರಿದಂತೆ ಉದ್ಯಮಗಳಲ್ಲಿ ಕಾರ್ಪೊರೇಟ್ ಆಡಳಿತದ ಅಭ್ಯಾಸಗಳನ್ನು ಹೆಚ್ಚಿಸಲು ಸಂಘಟಿತ ಪ್ರಯತ್ನಗಳಾಗಿವೆ. ಇದು ಹೂಡಿಕೆದಾರರ ವಿಶ್ವಾಸವನ್ನು ಮತ್ತೆ ಗಳಿಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡಿದೆ. ಕೆಲವು ಉದ್ಯಮಗಳು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಗೆ ಕಾರಣವಾಗಿವೆ. ಇದು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ಹೊಸ ಬೆಳವಣಿಗೆಯ ಅವಕಾಶಗಳನ್ನು ಅನ್ವೇಷಿಸಲು ಅನುವು ಮಾಡಿಕೊಟ್ಟಿದೆ. ಅನೇಕ ಸಾರ್ವಜನಿಕ ಉದ್ಯಮಗಳು ಹೊಸ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಅಸ್ತಿತ್ವದಲ್ಲಿರುವ ಕ್ಷೇತ್ರಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ತಮ್ಮ ವ್ಯಾಪಾರ/ಬಂಡವಾಳಗಳನ್ನು ವೈವಿಧ್ಯಗೊಳಿಸಿಕೊಂಡಿವೆ. ಒಟ್ಟಾರೆಯಾಗಿ, ಈ ಸುಧಾರಣೆಗಳು ಬದಲಾಗುತ್ತಿರುವ ಮಾರುಕಟ್ಟೆ ವಾತಾವರಣಕ್ಕೆ ಹೊಂದಿಕೊಳ್ಳುವ ಬದ್ಧತೆಯನ್ನು ತೋರಿಸುತ್ತಿದೆ.
ಮೋದಿ ಸರ್ಕಾರದ ಅಡಿಯಲ್ಲಿ, ಸಾರ್ವಜನಿಕ ವಲಯದ ಉದ್ಯಮ ಮತ್ತು ಬ್ಯಾಂಕ್ ವ್ಯವಸ್ಥೆಗಳ ದಕ್ಷತೆ, ಸ್ಪರ್ಧಾತ್ಮಕತೆ ಮತ್ತು ಆರ್ಥಿಕತೆಗೆ ಕೊಡುಗೆಯನ್ನು ಹೆಚ್ಚಿಸಲು, ಸುಧಾರಿಸಲು ಮತ್ತು ಪುನರುಜ್ಜೀವನಗೊಳಿಸಲು ಹೆಚ್ಚಿನ ಗಮನವನ್ನು ನೀಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಸುಧಾರಣೆಯನ್ನು ತೋರಿಸಿರುವ ಭಾರತೀಯ ಸಾರ್ವಜನಿಕ ವಲಯದ ಉದ್ಯಮಗಳನ್ನು ನಾವು ಗಮನಿಸಬಹುದು.
ಭಾರತ್ ಹೆವಿ ಎಲೆಕ್ಟಿçಕಲ್ಸ್ ಲಿಮಿಟೆಡ್ (BHEL), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC), ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(SAIL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (NTPC) ತಮ್ಮ ಅಸ್ತಿತ್ವವನ್ನು ವಿಸ್ತರಿಸುವ ಮೂಲಕ, ವೈವಿಧ್ಯೀಕರಣದ ಗುರಿ ಮತ್ತು ದಕ್ಷತೆಯೊಂದಿಗೆ ಹೆಚ್ಚಿನ ಲಾಭದಾಯಕತೆಗೆ ಮುಖಮಾಡಿವೆ.
ಡಿಸೆಂಬರ್ ೨೦೨೩ರಲ್ಲಿ ೧೦ ಸಾರ್ವಜನಿಕವಲಯ ಉದ್ಯಮಗಳು ನಿವ್ವಳ ಲಾಭದಲ್ಲಿ ಪ್ರತಿಶತ ೧೦೦ ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ತೋರಿವೆ ಮತ್ತು ೧೮ ಕಂಪೆನಿಗಳು ಪ್ರತಿಶತ ೫೦ಕ್ಕೂ ಮೇಲಿನ ಲಾಭವನ್ನು ವರದಿ ಮಾಡಿದೆ.
ಬ್ಯಾಂಕಿಂಗ್, ರಕ್ಷಣೆ, ಇಂಜಿನಿಯರಿಂಗ್ ಮತ್ತು ತೈಲ ಮಾರ್ಕೆಟಿಂಗ್ ಕಂಪೆನಿಗಳಂತಹ ವಿವಿಧ ವಿಭಾಗಗಳ ಅಡಿಯಲ್ಲಿ ಬರುವ ಸಾರ್ವಜನಿಕವಲಯದ ಉದ್ಯಮಗಳು ಡಿಸೆಂಬರ್ ೩೧, ೨೦೨೩ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ೨೪ ಕ್ಕಿಂತ ಹೆಚ್ಚು ಉದ್ಯಮಗಳು ಒಟ್ಟು ೧.೧೫ ಲಕ್ಷ ಕೋಟಿ ರೂ.ಗಳ ನಿವ್ವಳ ಲಾಭವನ್ನು ವರದಿ ಮಾಡಿರುವುದು ಗಮನಾರ್ಹ. ಪ್ರತಿಶತ ೧೦೬೮ ಏರಿಕೆಯೊಂದಿಗೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ನಿವ್ವಳ ಲಾಭದ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ.
ಒಟ್ಟಾರೆಯಾಗಿ, ಐಒಸಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಸೇರಿದಂತೆ ತೈಲ ಮಾರುಕಟ್ಟೆ ಕಂಪೆನಿಗಳ ಒಟ್ಟು ನಿವ್ವಳ ಲಾಭವು ತ್ರೈಮಾಸಿಕದಲ್ಲಿ ಪ್ರತಿಶತ ೩೩೬ಕ್ಕೆ ಏರಿ ದಾಖಲೆ ನಿರ್ಮಿಸಿದೆ.
ಇತರ ಪ್ರಮುಖ ಸಾರ್ವಜನಿಕ ವಲಯಗಳ ಪೈಕಿ, ಇಂಜಿನಿಯರ್ಸ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಲ್ಐಸಿ ಹೌಸಿಂಗ್ ಫೈನಾನ್ಸ್, ಕೊಚ್ಚಿನ್ ಶಿಪ್ಯಾರ್ಡ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಹೌಸಿಂಗ್ ಮತ್ತು ಅರ್ಬನ್ ಡೆವಲಪ್ಮೆಂಟ್ ಕಾರ್ಪೊರೇಷನ್ ಸಹ ಡಿಸೆಂಬರ್ ೨೦೨೩ ತ್ರೈಮಾಸಿಕದಲ್ಲಿ ತಮ್ಮ ನಿವ್ವಳ ಲಾಭ ಪ್ರತಿಶತ ೧೦೦ಕ್ಕಿಂತ ಹೆಚ್ಚು ಮಾಡಿದೆ. ಇದರ ಪರಿಣಾಮ ಷೇರು ಬೆಲೆಗಳು ಹೆಚ್ಚಿನ ಸೂಚ್ಯಂಕಗಳನ್ನು ಮುಟ್ಟಿವೆ.
ಮೋದಿ ಮೋಡಿಯಲ್ಲಿ ಬ್ಯಾಂಕಿಂಗ್ ವಲಯ
ಬ್ಯಾಂಕಿಂಗ್ ವಲಯದಲ್ಲಿ, ಸರ್ಕಾರೀ ಸ್ವಾಮ್ಯದ ಬ್ಯಾಂಕ್ಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ವಿಸ್ತರಿಸುವ ಮೂಲಕ ಆಡಳಿತವನ್ನು ಬಲಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರಾಜ್ಯ ಬ್ಯಾಂಕುಗಳನ್ನು ಎಸ್ಬಿಐ (SBI) ಅಡಿಯಲ್ಲಿ ವಿಲೀನಗೊಳಿಸುವ ನಿರ್ಧಾರಕ್ಕೆ ಸರ್ಕಾರದ ಹಸಿರು ನಿಶಾನೆ ದೊರಕಿತು. ಸಾರ್ಜನಿಕ ವಲಯದ ಬ್ಯಾಂಕುಗಳು ೨೦೧೭ರಲ್ಲಿ ರೂ. ೮೫೩೯೦ ಕೋಟಿ ನಿವ್ವಳ ನಷ್ಟದಲ್ಲಿದ್ದವು. ೨೦೧೯ರಲ್ಲಿ, ಸರ್ಕಾರವು ಏಪ್ರಿಲ್ ೧, ೨೦೨೨ರಿಂದ ಸಾರ್ವಜನಿಕ ಬ್ಯಾಂಕುಗಳ ಗಳ ‘ಮೆಗಾ ಕ್ರೋಡೀಕರಣ’ವನ್ನು ಘೋಷಿಸಿತು. ಅನೇಕ ವಾಣಿಜ್ಯ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಡೆದು ೨೭ ಸಂಖ್ಯೆಯಲ್ಲಿದ್ದ ಬ್ಯಾಂಕುಗಳು ೧೨ಕ್ಕೆ ಇಳಿದು, ಜಾಗತಿಕ ಮಟ್ಟದಲ್ಲಿ ಅಗತ್ಯವಾದ ‘ಬೃಹತ್ ಬ್ಯಾಂಕ್’ ಅನುಷ್ಠಾನಗೊಂಡು, ದೇಶದಲ್ಲಿ ಪ್ರಬಲ ಬ್ಯಾಂಕಿಂಗ್ ವ್ಯವಸ್ಥೆ ಸ್ಥಾಪಿತವಾಯಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಬ್ಯಾಂಕ್ಗಳು ೨೫ರಿಂದ ೬೨ ಪ್ರತಿಶತದಷ್ಟು ಆದಾಯವನ್ನು ನೀಡಲು ಸಾಧ್ಯವಾಯಿತು.
ಜನ ಕಲ್ಯಾಣ ಕಾರ್ಯಕ್ರಮಗಳಿಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಭಾರತದ ಮೊದಲ ಪ್ರಧಾನಿ ಮೋದಿ. ಅವರ ಅವಧಿಯಲ್ಲಿ ರೂಪುಗೊಂಡ ಯೂನಿಫೈಡ್-ಪೇಮೆಂಟ್-ಇಂಟರ್ಫೇಸ್ (UPI) ಪರಿಣಾಮ ಭಾರತದ ಆರ್ಥಿಕತೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ.
ಮೋದಿಯವರ ಆಡಳಿತ ಕಾಲವನ್ನು ಬ್ಯಾಂಕ್ ಕ್ಷೇತ್ರದ ಕ್ರಾಂತಿ ಕಾಲವೆಂದೇ ಗುರುತಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಗಳ ವ್ಯವಸ್ಥೆಯು ಗಮನಾರ್ಹವಾಗಿ ಬೆಳೆದಿದೆ. ಇದು ಸರ್ಕಾರದ ಉತ್ತೇಜನ, ಅಂತರ್ಜಾಲ ಹಾಗೂ ಸ್ಮಾರ್ಟ್ಫೋನ್ ಬಳಕೆಯಲ್ಲಿನ ಹೆಚ್ಚಳ ಮತ್ತು ಇ-ಕಾಮರ್ಸ್ನ ಏರಿಕೆಯಿಂದ ಬೆಳೆದಿದೆ. ಪ್ರಮುಖ ಪಾವತಿ ವ್ಯವಸ್ಥೆಗಳಲ್ಲಿ ಒಂದಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮತ್ತು ಡಿಜಿಟಲ್ ವಹಿವಾಟುಗಳನ್ನು ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಭಾರತ್ ಇಂಟರ್ಫೇಸ್ ಫಾರ್ ಮನಿ (BHIM) ಅಪ್ಲಿಕೇಶನ್ ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಸುವ್ಯವಸ್ಥೆಗೊಳಿಸಿದೆ. ‘ಕಡಮೆ ನಗದು ವ್ಯವಹಾರ’ದ ಆರ್ಥಿಕತೆಯನ್ನು ಪ್ರೋತ್ಸಾಹಿಸುವ ‘ರುಪೇ’ (RuPay) ದೇಶ ಮತ್ತು ಜಾಗತಿಕಮಟ್ಟದಲ್ಲಿ ಸೇವೆಗಳನ್ನು ಪೂರೈಸುತ್ತಿದೆ. ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ ವರದಿಯ ಪ್ರಕಾರ, ೨೦೨೩ರಲ್ಲಿ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ೮೦೦ ಮಿಲಿಯನ್ ಮೀರಿ ವಿಶ್ವದಾಖಲೆ ಎನಿಸಿದೆ.
ಜೂನ್ ೨೦೨೩ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ೩೪೭೭೪ ಕೋಟಿ ರೂ.ಗಳ ದುಪ್ಪಟ್ಟು ಲಾಭವನ್ನು ದಾಖಲಿಸುವ ಮೂಲಕ ಸಾರ್ವಜನಿಕವಲಯದ ಬ್ಯಾಂಕ್ ಉತ್ತಮ ಕಾರ್ಯಕ್ಷಮತೆಯನ್ನು ತೋರಿವೆ.
ಕಳೆದ ದಶಕದಲ್ಲಿ ಸರ್ಕಾರವು ಕೈಗೊಂಡ ಸುಧಾರಣೆಗಳು, ಸುಧಾರಿತ ಆಡಳಿತ, ತಂತ್ರಜ್ಞಾನ ಅಳವಡಿಕೆ, ಬ್ಯಾಂಕ್ಗಳ ವಿಲೀನ ಮತ್ತು ಅವುಗಳ ಸಾಧನೆಗಳು ಜನಸಾಮಾನ್ಯರ ವಿಶ್ವಾಸ ಗಳಿಸುವುದರಲ್ಲಿ ಗೆದ್ದಿವೆ.
೨೦೨೩ರಲ್ಲಿ, ಮೋದಿ ‘ದಾವ್ ಲಗಾ ದೀಜಿಯೇ’ ಎಂದು ಹೇಳುವ ಮೂಲಕ ಸಾರ್ವಜನಿಕವಲಯದ ಉದ್ಯಮಗಳಲ್ಲಿ ಹೂಡಲು ಹೂಡಿಕೆದಾರರಿಗೆ ಕರೆ ಕೊಟ್ಟಿದ್ದರು. ಹಾಗೆ ಹೇಳಿಕೆ ಕೊಟ್ಟ ನಂತರದಲ್ಲಿ ೨೨ ಸಾರ್ವಜನಿಕ ಉದ್ಯಮಗಳ ಷೇರುಗಳ ಮೌಲ್ಯವು ಹೆಚ್ಚು ಎತ್ತರಕ್ಕೆ ಜಿಗಿದಿವೆ. ಇದರ ಪರಿಣಾಮವಾಗಿ ಒಟ್ಟು ಮಾರುಕಟ್ಟೆ ಮೌಲ್ಯವು ಪ್ರತಿಶತ ೬೬ರಷ್ಟು ಏರಿಕೆ ಕಂಡಿದೆ.
ಫೆಬ್ರುವರಿ ೨೦೨೪ರಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ತಿಳಿಸುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು “೨೦೧೪ರಿಂದ ಭಾರತದ ಸಾರ್ವಜನಿಕ ಉದ್ಯಮಗಳ ನಿವ್ವಳ ಲಾಭವು ೭೮ ಪ್ರತಿಶತದಷ್ಟು ಏರಿಕೆಯಾಗಿ ಆದಾಯದ ಹೆಚ್ಚಳವಾಗಿದೆ” ಅನ್ನುವ ಮಾಹಿತಿ ನೀಡಿದ್ದಾರೆ. “ಸಾರ್ವಜನಿಕ ಕಂಪನಿಗಳ ನಿವ್ವಳ ಮೌಲ್ಯವು ೧೭ ಲಕ್ಷ ಕೋಟಿ ರೂ.ಗಳನ್ನು ಮೀರಿದೆ ಮತ್ತು ೨೦೧೪ರಲ್ಲಿ ೨೩೪ ಸಾರ್ವಜನಿಕವಲಯ ಉದ್ಯಮಗಳ ಸಂಖ್ಯೆ ೨೦೨೪ರಲ್ಲಿ ೨೫೪ಕ್ಕೆ ಏರಿದೆ” ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ‘ಇಂಡಿಯಾ ಟುಡೇ ಕಾನ್ಕ್ಲೇವ್ ೨೦೨೪’ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, “ನಮ್ಮ ಪರಿಣಾಮಕಾರಿ ಆಡಳಿತದಿಂದಾಗಿ ಹೆಚ್ಚಿನ ಸಾರ್ವಜನಿಕವಲಯದ ಉದ್ಯಮಗಳು ಹೂಡಿಕೆದಾರರಿಗೆ ನಿಶ್ಚಿತ ಆದಾಯವನ್ನು ನೀಡುತ್ತಿದ್ದು ಹೂಡಿಕೆದಾರರ ವಿಶ್ವಾಸ ಪಡೆದಿದ್ದಾರೆ’’ ಎಂದು ಹೇಳಿದ್ದಾರೆ. “ಕಳೆದ ಹತ್ತು ವರ್ಷಗಳಲ್ಲಿ ಸಾರ್ವಜನಿಕ ಉದ್ಯಮಗಳ ಲಾಭವು ಎರಡು ಪಟ್ಟು ಹೆಚ್ಚಾಗಿದೆ. ಅವುಗಳ ನಿವ್ವಳ ಮೌಲ್ಯವು ದಶಕದ ಹಿಂದೆ ೯.೫ ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಈಗ ೭೦ ಲಕ್ಷ ಕೋಟಿ ರೂಗಳಿಗೆ ಮುಟ್ಟಿದೆ’’ ಎಂದಿದ್ದಾರೆ.
ವಿಶ್ವದ ಯಾವುದೇ ದೇಶವೂ ಸಾರ್ವಜನಿಕವಲಯ ಉದ್ಯಮವನ್ನು ತಿರಸ್ಕರಿಸಿದ ಉದಾಹರಣೆಗಳಿಲ್ಲ. ಖಾಸಗಿ ಉದ್ಯಮಗಳೂ ದೇಶದ ಸಮಗ್ರ ಸಾಮರ್ಥ್ಯಕ್ಕೆ ಅವಶ್ಯವೆನಿಸಿವೆ. ಜಾಗತಿಕವಾಗಿ ಕಂಡುಬರುತ್ತಿರುವ ಆರ್ಥಿಕ ಬಿಕ್ಕಟ್ಟುಗಳಿಗೆ ಸಮೂಹ ಬಂಡವಾಳ ಮತ್ತು ಖಾಸಗೀ ಉದ್ಯಮಗಳ ಸಾಪೇಕ್ಷ ಅಳವಡಿಕೆ ದೇಶದ ಅಗತ್ಯವಾಗಿದೆ. ಮೋದಿ ಈ ಸಮಸ್ಯೆಗಳ ಬಗ್ಗೆ ಹೆಚ್ಚು ದೃಢವಾದ ಪ್ರಾಯೋಗಿಕ ನೆಲೆಯ ಚಿಂತಕರಾಗಿ ಬಂದವರು. ಅವರು ತೆಗೆದುಕೊಂಡ ಅನೇಕ ನಿರ್ಧಾರಗಳು ಇಲ್ಲಿಯವರೆಗೆ ಧನಾತ್ಮಕವಾಗಿರುವುದು ಸಾಬೀತಾಗಿದೆ.
ಮೋದಿ ಸರ್ಕಾರವು ಸಾರ್ವಜನಿಕವಲಯದ ಸ್ವಾಯತ್ತತೆಯನ್ನು ಹೆಚ್ಚಿಸಲು ಮುಂದೆಯೂ ವಿವಿಧ ಕ್ರಮಗಳನ್ನು ಪ್ರಾರಂಭಿಸುವುದು ಸುನಿಶ್ಚಯ. ಮೋದಿಯವರ ಆಡಳಿತವು ಇದುವರೆಗಿನ ಮೂಲಸೌಕರ್ಯ ಯೋಜನೆಗಳು, ವ್ಯಾಪಾರ ಪರವಾದ ಸುಧಾರಣೆಗಳು, ಹಣಕಾಸು ಸೇರ್ಪಡೆ ಮತ್ತು ಆರ್ಥಿಕ ಸುಧಾರಣೆಗಳ ಮೇಲೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವ ಮೂಲಕ ವಿಶ್ವಾಸಾರ್ಹತೆಯನ್ನು ಗಳಿಸಿದೆ. ಇದೆಲ್ಲವೂ ರಾಜಕೀಯ ಸ್ಥಿರತೆಯೊಂದಿಗೆ ಮಾರುಕಟ್ಟೆಗೆ ಪೂರಕವೆನಿಸಿದೆ. ಮೋದಿ ಆಡಳಿತವು ಷೇರು ಮಾರುಕಟ್ಟೆಯ ಮೇಲೆ ಬಲವಾದ ಪ್ರಭಾವವನ್ನು ಹೊಂದಿದೆ ಎಂದು ಉತ್ತಮ ವಿಶ್ಲೇಷಕರು ಈ ಹಿಂದೆಯೇ ನುಡಿದಿದ್ದಾರೆ. ಇಂದು ಕಾಣುತ್ತಿರುವ ಸರ್ವಾಂಗೀಣ ಮುನ್ನಡೆಯ ಹಾದಿ ಸುಗಮವಾಗಿ ಸಾಗಿ ಭಾರತದ ‘ಜಿಡಿಪಿ’ ಬರುವ ಮೂರು ವರ್ಷಗಳಲ್ಲಿ ೫ ಟ್ರಿಲಿಯನ್ ಡಾಲರ್ ಮುಟ್ಟಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗಲಿ ಅನ್ನುವುದು ಆಶಯವೂ ಮತ್ತು ಹಾರೈಕೆಯೂ ಆಗಿದೆ.