ಕನ್ನಡವು ಲೋಕಾನುಭವಗಳಿಗೆ ಮತ್ತು ಹೊಸ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಕಾವ್ಯಕ್ಕಿಂತ ಗದ್ಯವೇ ಹೊಸ ಅನುಭವಗಳ ದಾಖಲಾತಿಗೆ ಮತ್ತು ಅಭಿವ್ಯಕ್ತಿಗೆ ಹಿತವೆಂಬ ಅರಿವು ಮೂಡಿದ್ದು ಕೂಡ ಇದೇ ಶತಮಾನದಲ್ಲಿ. ಈ ಪರಿವರ್ತನೆ, ಈ ಹೊಸತನ ಕನ್ನಡದಲ್ಲಿ ಸಾಕಾರವಾದದ್ದು ಅನ್ಯಭಾಷೆಗಳ ಸಾಹಿತ್ಯದ ಪರಿಚಯ ಹಾಗೂ ಭಾಷಾಂತರಗಳ ಕಾರಣದಿಂದಾಗಿ. ಈ ಪ್ರಬಂಧದಲ್ಲಿ ಅನ್ಯಭಾಷೆಗಳಿಂದ ಕನ್ನಡ ಗದ್ಯಕ್ಕೆ ಭಾಷಾಂತರ ಮಾಡಿದ ವಿದ್ಯಮಾನಗಳನ್ನು ಕಾಲಘಟ್ಟಗಳಲ್ಲಿ ಪರಿಶೀಲಿಸಲಾಗಿದೆ. ಯಾವುದೇ ವಿದ್ಯಮಾನಕ್ಕೆ ಈ ಪ್ರಬಂಧದಲ್ಲಿ ಕೊಟ್ಟಿರುವ ಉದಾಹರಣೆಗಳು ಸಮಗ್ರವಲ್ಲ – ಕನ್ನಡದಲ್ಲಿ ಅನ್ಯಭಾಷೆಗಳ ಸಾಹಿತ್ಯ ಕೃತಿಗಳು ಅನುವಾದಗೊಂಡ ವಿದ್ಯಮಾನಗಳನ್ನು ಗ್ರಹಿಸುವ ಕೆಲಸವೇ ಮುಖ್ಯ ಎನ್ನುವುದು ಇಲ್ಲಿನ ನೆಲೆಯಾಗಿದೆ.
ಭಾಗ: ಒಂದು
ಪ್ರಸ್ತಾವನೆ
ಕನ್ನಡದ ಆಧುನಿಕ ಗದ್ಯವನ್ನು ರೂಪಿಸುವಲ್ಲಿ ೧೯ನೆಯ ಮತ್ತು ೨೦ನೆಯ ಶತಮಾನಗಳ ಗದ್ಯ-ಅನುವಾದಗಳ ಕೊಡುಗೆ ದೊಡ್ಡದು. ಅದರಲ್ಲಿಯೂ ಹತ್ತೊಂಬತ್ತನೆಯ ಶತಮಾನದಲ್ಲಿ ನಡೆದ ಅನುವಾದ ಪ್ರಕ್ರಿಯೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಕನ್ನಡದಲ್ಲಿ ಜನಪ್ರಿಯ ಆಧುನಿಕ ಗದ್ಯಪ್ರಕಾರಗಳೆಂದರೆ ಕಾದಂಬರಿ ಮತ್ತು ಸಣ್ಣಕತೆಗಳು. ಇವೆರಡೂ ೧೮೯೯-೧೯೦೦ರ ಆಸುಪಾಸಿನಲ್ಲಿ, ಅಂದರೆ ಇಪ್ಪತ್ತನೆಯ ಶತಮಾನದ ಹೊಸ್ತಿಲಲ್ಲಿ ಕನ್ನಡದಲ್ಲಿ ಮೊದಲು ಕಾಣಿಸಿಕೊಂಡವು ಎನ್ನುವುದನ್ನು ನಾವು ಸಾಹಿತ್ಯ ಚರಿತ್ರೆಯಲ್ಲಿ ನೋಡುತ್ತೇವೆ. ಮೊದಲನೆಯ ಸ್ವತಂತ್ರ ಸಾಮಾಜಿಕ ಕಾದಂಬರಿ ೧೮೯೯ರಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಎನ್ನುವ ಕಾದಂಬರಿ, ಮತ್ತು ಮೊದಲನೆಯ ಸಣ್ಣಕತೆ, ಮಂಗಳೂರಿನ ‘ಸುವಾಸಿನಿ’ ಪತ್ರಿಕೆಯಲ್ಲಿ ೧೯೦೦ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಎಂಬ ಸಣ್ಣಕತೆ ಎನ್ನುವುದು ಸಾಹಿತ್ಯಚರಿತ್ರೆಯಲ್ಲಿ ದಾಖಲಾಗಿರುವ ಸಂಗತಿ. ಇವುಗಳ ಹಿಂದೆಮುಂದೆಯೂ ಕೆಲವು ಕೃತಿಗಳು ಪ್ರಕಟವಾಗಿರುವುದಿದೆ. ಈ ಪ್ರಬಂಧವು ಸೃಜನಶೀಲ ಗದ್ಯದ ಕುರಿತಾಗಿ ಅಲ್ಲವಾದುದರಿಂದ ಈ ಬಗ್ಗೆ ಚರ್ಚಿಸುವುದಕ್ಕೆ ಇದು ವೇದಿಕೆಯಲ್ಲ.
ಆದರೆ ಇದನ್ನು ಯಾಕೆ ಉಲ್ಲೇಖಿಸಬೇಕಾಯಿತು ಎಂದರೆ ಹೀಗೆ ಸ್ವತಂತ್ರ ಕನ್ನಡ ಕತೆ, ಕಾದಂಬರಿಗಳನ್ನು ಬರೆಯಬೇಕಾದರೆ ಅದಕ್ಕೆ ಅನ್ಯಭಾಷೆಗಳಿಂದ ಅನುವಾದಗಳ ಮೂಲಕ ತಕ್ಕ ವೇದಿಕೆಯನ್ನು ನಿರ್ಮಿಸಿ, ಕನ್ನಡ ಗದ್ಯಕ್ಕೆ ಒಂದು ನುಡಿಗಟ್ಟನ್ನು ಸಿದ್ಧಮಾಡಿಕೊಟ್ಟ ಮತ್ತು ಸಣ್ಣಕತೆ ಹಾಗೂ ಕಾದಂಬರಿಗಳ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ ವಿದ್ಯಮಾನಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸುವುದು ಸೂಕ್ತ ಎನ್ನುವ ಕಾರಣಕ್ಕಾಗಿ.
ಆಧುನಿಕ ಕನ್ನಡ ಕಥನಗಳೆಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಕಾಣಿಸಿಕೊಂಡ ಕಾವ್ಯ ಪುರಾಣಗಳ ಗದ್ಯಾನುವಾದಗಳು, ಸಂಸ್ಕೃತ ಮತ್ತು ಇಂಗ್ಲಿಷ್ ನಾಟಕಗಳ (ಕಾದಂಬರಿ ಗಾತ್ರದ) ಕಥನರೂಪಗಳು, ಸಣ್ಣಕತೆ, ಕಾದಂಬರಿ, ರಮ್ಯಕಥಾನಕ ಮತ್ತು ಸಂವಾದಗಳಂತಹ ಗದ್ಯಕಥನಗಳನ್ನೆಲ್ಲ ಪರಿಗಣಿಸಲಾಗಿದೆ. ಆಧುನಿಕ ಕನ್ನಡ ಸಾಹಿತ್ಯವು ಇಪ್ಪತ್ತನೆಯ ಶತಮಾನದಲ್ಲಿ ರಮ್ಯ ಕಥಾನಕ ಮತ್ತು ಸಂವಾದಗಳನ್ನು ಬಿಟ್ಟುಕೊಟ್ಟು ಸಣ್ಣಕತೆ ಮತ್ತು ಕಾದಂಬರಿಗಳೆಂಬ ಎರಡು ಸಾಹಿತ್ಯಪ್ರಕಾರಗಳಲ್ಲಿ ಬೆಳೆಯಿತು. ಕನ್ನಡದ ಆಧುನಿಕ ಕತೆ ಮತ್ತು ಕಾದಂಬರಿಗಳ ಮೇಲೆ ಪ್ರಭಾವ ಬೀರಿದ ಭಾಷಾಂತರಗಳನ್ನು ಇಲ್ಲಿ ಪ್ರಧಾನವಾಗಿ ಗಮನಿಸಲಾಗಿದೆ. ನಾಟಕ ಮತ್ತು ಕಾವ್ಯ ಪ್ರಕಾರಗಳನ್ನು ಗಮನಿಸಲಾಗಿಲ್ಲ.
ಕನ್ನಡವು ಲೋಕಾನುಭವಗಳಿಗೆ ಮತ್ತು ಹೊಸ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಕಾವ್ಯಕ್ಕಿಂತ ಗದ್ಯವೇ ಹೊಸ ಅನುಭವಗಳ ದಾಖಲಾತಿಗೆ ಮತ್ತು ಅಭಿವ್ಯಕ್ತಿಗೆ ಹಿತವೆಂಬ ಅರಿವು ಮೂಡಿದ್ದು ಕೂಡ ಇದೇ ಶತಮಾನದಲ್ಲಿ. ಈ ಪರಿವರ್ತನೆ, ಈ ಹೊಸತನ ಕನ್ನಡದಲ್ಲಿ ಸಾಕಾರವಾದದ್ದು ಅನ್ಯಭಾಷೆಗಳ ಸಾಹಿತ್ಯದ ಪರಿಚಯ ಹಾಗೂ ಭಾಷಾಂತರಗಳ ಕಾರಣದಿಂದಾಗಿ. ಈ ಪ್ರಬಂಧದಲ್ಲಿ ಅನ್ಯಭಾಷೆಗಳಿಂದ ಕನ್ನಡ ಗದ್ಯಕ್ಕೆ ಭಾಷಾಂತರ ಮಾಡಿದ ವಿದ್ಯಮಾನಗಳನ್ನು ಕಾಲಘಟ್ಟಗಳಲ್ಲಿ ಪರಿಶೀಲಿಸಲಾಗಿದೆ. ಯಾವುದೇ ವಿದ್ಯಮಾನಕ್ಕೆ ಈ ಪ್ರಬಂಧದಲ್ಲಿ ಕೊಟ್ಟಿರುವ ಉದಾಹರಣೆಗಳು ಸಮಗ್ರವಲ್ಲ – ಕನ್ನಡದಲ್ಲಿ ಅನ್ಯಭಾಷೆಗಳ ಸಾಹಿತ್ಯಕೃತಿಗಳು ಅನುವಾದಗೊಂಡ ವಿದ್ಯಮಾನಗಳನ್ನು ಗ್ರಹಿಸುವ ಕೆಲಸವೇ ಮುಖ್ಯ ಎನ್ನುವುದು ಇಲ್ಲಿನ ನೆಲೆಯಾಗಿದೆ.
ಅನುವಾದ ಅಥವಾ ಭಾಷಾಂತರ (ಇವೆರಡು ಶಬ್ದಗಳಿಗೆ ವ್ಯತ್ಯಾಸಗಳಿವೆಯಾದರೂ ಇಲ್ಲಿ ಸಮಾನಾರ್ಥಕಗಳೆಂಬಂತೆ ಬಳಸಲಾಗಿದೆ) ಎನ್ನುವುದು ಕೇವಲ ಒಂದು ಸೃಜನಶೀಲ ಕೃತಿಯನ್ನು ಅದೇ ಪ್ರಕಾರದ ಇನ್ನೊಂದು ಭಾಷೆಯ ಕೃತಿಯಾಗಿ ಪರಿವರ್ತಿಸುವುದಕ್ಕೆ ಸೀಮಿತವಲ್ಲ. ಭಾಷಾಂತರ ಎನ್ನುವುದು ಹಲವು ಆಯಾಮಗಳಿಗೆ ವಿಸ್ತರಿಸಿದೆ. ಶಾಲೆ, ಕೈಗಾರಿಕೆಗಳು, ಕೋರ್ಟು ಕಚೇರಿಗಳು, ಅಂಚೆವ್ಯವಸ್ಥೆ – ಹೀಗೆ ಪಾಶ್ಚಾತ್ಯ ನಾಗರಿಕ ವ್ಯವಸ್ಥೆಗಳನ್ನು ನಮ್ಮ ನಾಡಿನಲ್ಲಿ ಪ್ರಾರಂಭಿಸಿದಾಗ ಅದೂ ಒಂದು ಬಗೆಯ (ಭೌತಿಕ) ಅನುವಾದವೇ ಆಗುತ್ತದೆ. ಒಂದು ಯಕ್ಷಗಾನ ಪ್ರಸಂಗ ಕಾವ್ಯದಂತಹ ಸಾಹಿತ್ಯಕೃತಿಯನ್ನು ರಂಗದ ಮೇಲೆ ಅಭಿನಯಿಸಿದಾಗ ಇನ್ನೊಂದು ಬಗೆಯ (ಮಾಧ್ಯಮ) ಅನುವಾದವಾಗುತ್ತದೆ. ವೈಚಾರಿಕ ಸಾಹಿತ್ಯಕೃತಿಗಳನ್ನು ಸೃಜನಶೀಲ ಸಾಹಿತ್ಯದ ಮಾದರಿಯಲ್ಲಿ ಕೊಟ್ಟರೆ ಅದು ಕೂಡ ಒಂದು ಬಗೆಯ (ಪ್ರಕಾರ) ಅನುವಾದವೇ ಆಗುತ್ತದೆ. ಗುಲ್ವಾಡಿ ವೆಂಕಟರಾಯರು ಆ ಕಾಲದಲ್ಲಿ ನಡೆಯುತ್ತಿದ್ದ ವಿಧವಾವಿವಾಹ ಇತ್ಯಾದಿ ಸುಧಾರಣೆಗಳ ಪರವಾಗಿ ಚಿತ್ರಾಪುರ ಮಠದ ಸ್ವಾಮಿಜೀಯವರಾದ ಪಾಂಡುರಂಗಾಶ್ರಮ ಸ್ವಾಮಿಜೀಯವರ ತಂಡದ ಜತೆಗೆ ನಡೆಸುತ್ತಿದ್ದ ಧರ್ಮಜಿಜ್ಞಾಸೆ-ವಾಗ್ವಾದಗಳನ್ನು ಕಾದಂಬರಿ ರೂಪದಲ್ಲಿ ಮುಂದುವರಿಸಿದಾಗ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಎಂಬ ಸೃಜನಶೀಲ ಕೃತಿ ಹುಟ್ಟುತ್ತದೆ. ಇದು ವೈಚಾರಿಕತೆಯನ್ನು ಮತ್ತು ಸನ್ನಿವೇಶಗಳನ್ನು ಇನ್ನೊಂದು ಪ್ರಕಾರಕ್ಕೂ, ಇನ್ನೊಂದು ಮಾಧ್ಯಮಕ್ಕೂ ಅನುವಾದಿಸಿದ ಸಂಕೀರ್ಣ ಭಾಷಾಂತರವಾಗಿದೆ. ಈ ಕಾದಂಬರಿಗೆ ‘ಸದ್ಧರ್ಮ ವಿಜಯ’ ಎನ್ನುವ ಪರ್ಯಾಯ ನಾಮವನ್ನು ಅವರು ಕೊಡುವುದಕ್ಕೆ ಹಿನ್ನೆಲೆಯಾಗಿ ಗುಲ್ವಾಡಿಯವರು ಭಾಗವಹಿಸಿದ ವಾಗ್ವಾದಗಳನ್ನು ಮತ್ತು ಸುಧಾರಣಾಪರ ಕೆಲಸಗಳನ್ನು ಗಮನಿಸಬೇಕು. ಈ ಬಗೆಯ ಗ್ರಹಿಕೆಗಳು ಕೂಡ ಈ ಪ್ರಬಂಧದ ಹಿನ್ನೆಲೆಯಲ್ಲಿವೆ.
ಕಾವ್ಯಕೃತಿಗಳನ್ನು ಅಥವಾ ನಾಟಕಕೃತಿಗಳನ್ನು ಗದ್ಯ ಕಥಾನಕಗಳಾಗಿ ಮರುನಿರೂಪಿಸಿದರೆ ಅದು ‘ರೂಪಾಂತರ’ ಎಂದು ಇಲ್ಲಿ ಪರಿಗಣಿಸಲಾಗಿದೆ.
ಹತ್ತೊಂಬತ್ತನೆಯ ಶತಮಾನದಲ್ಲಿ ನಡೆದ ವಿಪುಲ ಭಾಷಾಂತರಗಳನ್ನು ನೋಡಿದರೆ ಇಪ್ಪತ್ತನೆಯ ಶತಮಾನದಲ್ಲಿ ನಡೆದ ಸ್ವತಂತ್ರ ಕತೆ ಕಾದಂಬರಿಗಳ ರಚನೆ ಅವುಗಳಿಂದ ಪ್ರೇರಣೆ ಪಡೆದು ಮುಂದುವರಿದ ಹಾಗೆ ಕಾಣಿಸುತ್ತದೆ; ರಿಲೇ ಓಟದಲ್ಲಿ ಒಬ್ಬ ಓಟಗಾರನಿಂದ ಇನ್ನೊಬ್ಬ ಓಟಗಾರ ದಂಡವನ್ನು ಪಡೆದು ಓಟವನ್ನು ಮುಂದುವರಿಸುವುದಕ್ಕೆ ಇದನ್ನು ಹೋಲಿಸಬಹುದು.
ಆಧುನಿಕ ಗದ್ಯಕಥನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾಷಾಂತರದ ಮೂರು ಯುಗಗಳನ್ನು ಹೀಗೆ ಗುರುತಿಸಲಾಗಿದೆ: ೧. ಆರಂಭ ಕಾಲ (೧೮೧೦-೧೯೩೦), ೨. ನಿರ್ಮಾಣಶೀಲ ಯುಗ (೧೯೩೦-೧೯೪೭) ಮತ್ತು ೩. ಸ್ವಾತಂತ್ರ್ಯೋತ್ತರ ಕಾಲ (೧೯೪೭ರಿಂದ ಇದುವರೆಗೆ).
ಭಾಗ: ಎರಡು
೧. ಆರಂಭ ಕಾಲ
ಆಧುನಿಕ ಭಾಷಾಂತರದ ಆರಂಭ ಕಾಲ ಎನ್ನುವುದು ೧೮೧೦ರಿಂದ ೧೯೩೦ರವರೆಗಿನ ಕಾಲ ಎಂದು ಗುರುತಿಸಬಹುದು. ಈ ಕಾಲದಲ್ಲಿ ಅನ್ಯಭಾಷೆಗಳಿಂದ ಕನ್ನಡಕ್ಕೆ ಆದ ಗದ್ಯ ಭಾಷಾಂತರಗಳನ್ನು ಇಲ್ಲಿ ಗಮನಿಸಲಾಗಿದೆ.
ಭಾಷಾಂತರ ಅಥವಾ ರೂಪಾಂತರ ಮಾಡುವಾಗ ಸಂಸ್ಕೃತ ಕೃತಿಗಳ ಲೋಕದೃಷ್ಟಿ, ಸನ್ನಿವೇಶಗಳು ಮತ್ತು ಹೆಸರುಗಳು ಕನ್ನಡಕ್ಕೆ ಸಾಂಸ್ಕೃತಿಕವಾಗಿ ಅನ್ಯವೆನಿಸದ ಕಾರಣ ಆ ಭಾಷೆಯ ಕೃತಿಗಳು ಕಾವ್ಯಪ್ರಕಾರದಿಂದ ಗದ್ಯಕ್ಕೆ ರೂಪಾಂತರವಾದವೇ ಹೊರತು ಕೃತಿಯ ಹೂರಣವನ್ನು ಪರಿವರ್ತಿಸುವ ಅಗತ್ಯ ಅನುವಾದಕರಿಗೆ ಉಂಟಾಗಲಿಲ್ಲ. ಆದರೆ ಈ ಕಾಲಘಟ್ಟದಲ್ಲಿ ಅನುವಾದಕರು ಪಾಶ್ಚಾತ್ಯ ಕೃತಿಗಳ ರೂಪಾಂತರಗಳನ್ನೆ ಪ್ರಧಾನವಾಗಿ ಮಾಡುತ್ತಿದ್ದರು. ಉದಾಹರಣೆಗೆ, ‘ಶಾಕುಂತಲ’ ನಾಟಕದ ಯಾವ ಸನ್ನಿವೇಶವೂ ಕನ್ನಡಿಗರಿಗೆ ಅರಗಿಸಿಕೊಳ್ಳಲಾಗದಂತೆ ಇರಲಿಲ್ಲ. ಆದರೆ ಶೇಕ್ಸ್ಪಿಯರಿನ ‘ರೋಮಿಯೋ ಅಂಡ್ ಜೂಲಿಯೆಟ್’ ನಾಟಕವನ್ನು ‘ರಾಮವರ್ಮ ಲೀಲಾವತಿ’ ಎಂದು ಅನುವಾದಿಸುವಾಗ ಅನುವಾದಕರು ಅದರ ಕೊನೆಯ ದುರಂತವನ್ನು (ನಾಯಕ ನಾಯಕಿ ಇಬ್ಬರೂ ಸಾಯುವ ಅಂತ್ಯ) ಪರಿವರ್ತಿಸಿ ದೇವರು ಪ್ರತ್ಯಕ್ಷನಾಗಿ ಇಬ್ಬರನ್ನೂ ಬದುಕಿಸುವಂತೆ ಮಾಡುತ್ತಾರೆ. ಕಾದಂಬರಿ ಅನುವಾದದಲ್ಲಿ ಇದೇ ರೀತಿಯ ‘ಸಾಂಸ್ಕೃತಿಕ ಸಮಸ್ಯೆ’ಯನ್ನು ಎದುರಿಸಿದ ‘ಕೌಂಟ್ ಆಫ್ ಮಾಂಟೆಕ್ರಿಸ್ಟೋ’ ಕಾದಂಬರಿಯ ಅನುವಾದಕರು ಮಾಡಿದ ಬದಲಾವಣೆಗಳನ್ನು ಮುಂದೆ ಉದಾಹರಿಸಲಾಗಿದೆ. ವೆಂಕಟಾಚಾರ್ಯರು ಕೂಡ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿದ್ದಿದೆ. ಆದರೆ ಬಂಗಾಳಿ ಭಾಷೆಯಿಂದ ಅನುವಾದಿಸಿದ್ದರಿಂದ ಅವರಿಗೆ ಸಾಂಸ್ಕೃತಿಕ ಸಮಸ್ಯೆ ಇರಲಿಲ್ಲ.
* * *
ಭಾಷಾಂತರಗಳ ಮೂಲಕ ಹೊಸಗನ್ನಡ ಗದ್ಯಕ್ಕೆ ಸೂಕ್ತವಾದ ನುಡಿಗಟ್ಟುಗಳನ್ನು ರೂಪಿಸಿದ ಮತ್ತು ಸೃಜನಶೀಲ ಗದ್ಯ ಬರವಣಿಗೆಗೆ ಪ್ರೇರಣೆ ನೀಡಿದ ಐದು ವಿದ್ಯಮಾನಗಳ ಚೌಕಟ್ಟಿನಲ್ಲಿ ಇವುಗಳನ್ನು ಪರಿಶೀಲಿಸಿದರೆ ಪರಿಶೀಲನೆ ಹೆಚ್ಚು ಅರ್ಥಪೂರ್ಣವಾಗುವುದು.
ಆ ಐದು ವಿದ್ಯಮಾನಗಳು ಹೀಗಿವೆ:
೧. ಮುಮ್ಮಡಿ ಕೃಷ್ಣರಾಜ ಒಡೆಯರ ಕೊಡುಗೆ: ಹತ್ತೊಂಬತ್ತನೆಯ ಶತಮಾನದ ಎರಡನೆಯ ದಶಕದಿಂದಾರಭಿಸಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ರಾಜಾಶ್ರಯದಲ್ಲಿ ನಡೆದ ಆಧುನಿಕ ಕನ್ನಡ ಗದ್ಯ ಕೃತಿಗಳ ದೊಡ್ಡ ವಾಙ್ಮಯ ಮತ್ತು ಗದ್ಯದ ನುಡಿಗಟ್ಟುಗಳ ನಿರ್ಮಾಣ. ಈ ಕಾಲದಲ್ಲಿ ಸಂಸ್ಕೃತ ಕಾವ್ಯಗಳ ಗದ್ಯ ರೂಪಾಂತರಗಳು ಸೃಷ್ಟಿಯಾದವು.
೨. ಮಿಷನರಿಗಳ ಅನುವಾದಗಳು: ಮಂಗಳೂರು, ಬಳ್ಳಾರಿ, ಬೆಂಗಳೂರು ಮುಂತಾದ ಕೇಂದ್ರಗಳಲ್ಲಿ ಮಿಷನರಿಗಳು ಮಾಡಿದ ಬೈಬಲ್ ಭಾಷಾಂತರ ಮತ್ತು ಇತರ ಅನುವಾದಗಳು. ಮಿಷನರಿಗಳ ಪಠ್ಯಪುಸ್ತಕ ರಚನೆಯ ಸಂದರ್ಭದಲ್ಲಿ ಆದ ಕಿರುಗದ್ಯಗಳ ಅನುವಾದಗಳು. ಮಂಗಳೂರು ಕೇಂದ್ರದಲ್ಲಿ ರೆ| ಹರ್ಮನ್ ಮ್ಯೋಗ್ಲಿಂಗ್ ಅವರ (ಕೆಲವೊಮ್ಮೆ ರೆ| ವೈಗ್ಲೆಯವರ ಜತೆಗೆ ಮಾಡಿದ) ಕೆಲಸಗಳು – ಅನುವಾದ, ಸೃಜನಶೀಲ ಕೃತಿರಚನೆ ಮತ್ತು ‘ಮಂಗಳೂರ ಸಮಾಚಾರ’ ಪತ್ರಿಕೆಯ ಮೂಲಕ ರೂಪಿಸಿದ ಆಧುನಿಕ ಕನ್ನಡ ಗದ್ಯದ ಮಾದರಿ.
೩. ‘ವೆಂಕಟಾಚಾರ್ಯರ ಅನುವಾದಗಳು: ಕನ್ನಡ ಕಾದಂಬರಿ ಪಿತಾಮಹ ಬಿ. ವೆಂಕಟಾಚಾರ್ಯರು ೧೮೭೬ರಿಂದ ಪ್ರಾರಂಭಿಸಿ ಬಂಗಾಳಿ ಕಾದಂಬರಿಗಳನ್ನು ಅನುವಾದಿಸುವ ಮೂಲಕ ಆಧುನಿಕ ಕಾದಂಬರಿ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ್ದು.
೪. ಪ್ರಾರಂಭಿಕ ಘಟ್ಟದ ಬಿಡಿ ರೂಪಾಂತರಗಳು: ಹತ್ತೊಂಬತ್ತನೆಯ ಶತಮಾನದಲ್ಲಿ ಸಾಹಿತ್ಯಕೃತಿಗಳನ್ನು ರಚಿಸಲು ಉತ್ಸಾಹ ತಾಳಿದ ಶಿಕ್ಷಕರು ಮತ್ತು ಸಾಹಿತ್ಯಾಸಕ್ತ ವಿದ್ಯಾವಂತರು ಬಗೆಬಗೆಯ ರೂಪಾಂತರ ಪ್ರಕ್ರಿಯೆಗಳಿಂದ ರಚಿಸಿದ ಕಾದಂಬರಿಯ ಗಾತ್ರದ ಕಥಾನಕಗಳು ಮತ್ತು ಕಾದಂಬರಿಗಳ ಅನುವಾದಗಳು.
೫. ಗಳಗನಾಥರ ಅನುವಾದಗಳು: ಮರಾಠಿಯಿಂದ ರೂಪಾಂತರಿಸಿದ ಮತ್ತು ತಾವು ಸ್ವತಃ ರಚಿಸಿದ ಐತಿಹಾಸಿಕ ಕನ್ನಡ ಕಾದಂಬರಿಗಳನ್ನು ಮನೆಮನೆಗೆ ಒಯ್ದು ಮಾರಾಟ ಮಾಡಿ ಕನ್ನಡಿಗರಿಗೆ ಕಾದಂಬರಿ ಓದಿನ ರುಚಿ ಹಿಡಿಸಿದ ಗಳಗನಾಥರ ಏಕಾಂಗಿ ಪ್ರಯತ್ನ. ಗಳಗನಾಥರು ಇಪ್ಪತ್ತನೆಯ ಶತಮಾನದ ಪ್ರಾರಂಭದ ನಾಲ್ಕು ದಶಕಗಳಲ್ಲಿ ಕಾದಂಬರಿ ಸಾಮ್ರಾಟರಾಗಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದರು.
ಈ ಐದು ವಿದ್ಯಮಾನಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿಕೊಳ್ಳೋಣ.
* * *
೧) ಮುಮ್ಮಡಿ ಕೃಷ್ಣರಾಜ ಒಡೆಯರ ನೇತೃತ್ವದ ಗದ್ಯ ಕೃತಿಗಳ ರಚನಾಸತ್ರ:
ಮೈಸೂರು ಸಂಸ್ಥಾನವನ್ನು ಟಿಪ್ಪು ಸುಲ್ತಾನನ ನಂತರ ಬ್ರಿಟಿಷರು ಮರಳಿ ಒಡೆಯರ್ ರಾಜವಂಶಕ್ಕೆ (ತಮ್ಮ ಹತೋಟಿಯನ್ನಿಟ್ಟುಕೊಂಡು) ನೀಡಿದಾಗ ಹಕ್ಕುದಾರರಾಗಿದ್ದವರು ಮುಮ್ಮಡಿ ಕೃಷ್ಣರಾಜ ಒಡೆಯರ್ (೧೭೯೪-೧೮೬೮) ಅವರು. ಅವರು ಸ್ವತಃ ಸಾಹಿತಿ, ಸಾಹಿತ್ಯಪೋಷಕರು. ಅವರ ಆಸ್ಥಾನದಲ್ಲಿ ಖ್ಯಾತ ವಿದ್ವಾಂಸರಿದ್ದರು. ಅವರೆಲ್ಲ ಸೇರಿ ಸಂಸ್ಕೃತ ಪುರಾಣ, ಕಾವ್ಯ ಮತ್ತು ನಾಟಕಗಳನ್ನು ಕಥನರೂಪಕ್ಕೆ ತಿರುಗಿಸಿ ಬರೆಯುತ್ತಿದ್ದರು. ಅವುಗಳೆಲ್ಲ ಹೆಚ್ಚಾಗಿ ಮುಮ್ಮಡಿಯವರ ಹೆಸರಿನಲ್ಲಿಯೇ ಇವೆ. (ಅರಮನೆಯ ವಿದ್ವಾಂಸರೇ ಬರೆದು ಮಹಾರಾಜರ ಹೆಸರನ್ನು ಹಾಕಿದರೆನ್ನುವ ಅಭಿಮತ ಡಾ. ಶ್ರೀನಿವಾಸ ಹಾವನೂರ್ ಮುಂತಾದ ವಿದ್ವಾಂಸರದು).
ಆ ಕಾಲದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಾಗವತ ಗ್ರಂಥಗಳನ್ನು ಕನ್ನಡ ಗದ್ಯದಲ್ಲಿ ಅನುವಾದ ಮಾಡಿಸಿದ್ದು ಮುಮ್ಮಡಿಯವರ ದೊಡ್ಡ ಕೊಡುಗೆಯೂ, ಯುಗಪ್ರವರ್ತಕ ಉಪಕ್ರಮವೂ ಆಯಿತು. ಅವು – ಶ್ರೀ ಕೃಷ್ಣರಾಜ ವಾಣೀವಿಲಾಸ ಭಾರತ, ಶ್ರೀ ಜಯಚಾಮರಾಜೋಕ್ತಿ ವಿಲಾಸವೆಂಬ ರಾಮಾಯಣ, ಶ್ರೀ ಕೃಷ್ಣರಾಜ ವಾಣೀವಿಲಾಸ ಭಾಗವತ.
ಮೂಲದಲ್ಲಿ ಪದ್ಯರೂಪದಲ್ಲಿರುವ ಈ ಗ್ರಂಥಗಳನ್ನು ಗದ್ಯರೂಪದಲ್ಲಿ ಜನಸಾಮಾನ್ಯರು ಓದುವಂತೆ ಕೊಡಬೇಕೆನ್ನುವ ಕ್ರಾಂತಿಕಾರಕವಾದ ಆಲೋಚನೆ ಮುಮ್ಮಡಿಯವರಿಗೆ ಬಂದದ್ದು ಮಹತ್ತ್ವದ ಸಂಗತಿ. ಮಹಾರಾಜರು ಬರೆಯಿಸಿ, ಅರಮನೆಯ ಗ್ರಂಥಭಂಡಾರದಲ್ಲಿ ಇರಿಸಿದ್ದ ಈ ಮೂರು ಕೃತಿಗಳು ಮುದ್ರಣರೂಪದಲ್ಲಿ ಬಂದದ್ದು ೧೮೯೦ರ ದಶಕದಲ್ಲಿ, ಬೆಂಗಳೂರಿನ ಶ್ರೀ ಚಾಮುಂಡೇಶ್ವರಿ ಮುದ್ರಾಕ್ಷರ ಶಾಲೆಯಲ್ಲಿ. ಈ ಕಾರ್ಯಕ್ಕೆ ಆಗಿನ ಮೈಸೂರು ಮಹಾರಾಜ ಚಾಮರಾಜ ಒಡೆಯರ ಧನಸಹಾಯ ದೊರಕಿತ್ತು. ಆ ಗ್ರಂಥಗಳು ಕನ್ನಡ ನಾಡಿನಲ್ಲೆಲ್ಲ ಜನಪ್ರಿಯವಾದವು. ಅನಂತರ ೧೯೬೦ರ ದಶಕದಲ್ಲಿ ರಾಜ್ಯದ ಪ್ರಮುಖರು ಇದ್ದ ಸಮಿತಿಯು (ಜಯಚಾಮರಾಜ ಒಡೆಯರು ಮಹಾಪೋಷಕರು, ಮುಖ್ಯಮಂತ್ರಿ ನಿಜಲಿಂಗಪ್ಪನವರು ಪೋಷಕರು, ಡಿ.ವಿ.ಜಿ.ಯವರು ಸದಸ್ಯರಲ್ಲೊಬ್ಬರು, ವಿದ್ವಾನ್ ಎನ್. ರಂಗನಾಥ ಶರ್ಮರು ಪ್ರಧಾನ ಸಂಪಾದಕರು) ಅವುಗಳನ್ನು ಮರುಮುದ್ರಣ ಮಾಡಿತು. ಸಂಪಾದಕ ಮಂಡಳಿಯವರು ಇದರ ಗದ್ಯವನ್ನು ಆಧುನಿಕ ಕಾಲಕ್ಕೆ ಸರಿಯಾಗಿ ಪರಿಷ್ಕರಣೆಯನ್ನು ಮಾಡಿದರು.
ಮುಮ್ಮಡಿಯವರ ಕಾಲದ ಇನ್ನುಳಿದ ಗದ್ಯ ನಿರೂಪಣೆಯ ಗ್ರಂಥಗಳಲ್ಲಿ ಮುಖ್ಯವಾದವುಗಳು: ಬತ್ತೀಸ ಪುತ್ತಳಿ ಕಥೆ, ಬೇತಾಳ ಪಂಚವಿಂಶತಿ ಕಥೆ, ಪಂಚತಂತ್ರ, ಶುಕಸಪ್ತತಿ, ಬಾಣನ ಕಾದಂಬರಿ, ದಶಕುಮಾರ ಕಥಾಕಾಲನಿಧಿ. ಅರಮನೆಯ ಸರಸ್ವತಿ ಗ್ರಂಥಭಂಡಾರದಲ್ಲಿದ್ದ ಈ ಗ್ರಂಥಗಳನ್ನು ಮುಮ್ಮಡಿಯವರ ಪುತ್ರ ಚಾಮರಾಜ ಒಡೆಯರು (೧೮೬೮- ೧೮೯೫) ಮುದ್ರಣ ಮಾಡಿಸಿ ಜನತೆಗೆ ಒದಗಿಸಿದರು. ಮುಮ್ಮಡಿಯವರ ಕಾಲದಲ್ಲಿ ಮುದ್ರಣಯಂತ್ರ ಇರದೆ, ಚಾಮರಾಜ ಒಡೆಯರ ಕಾಲದಲ್ಲಿ ಮುದ್ರಣಯಂತ್ರ ಬಂದದ್ದೇ ಇದಕ್ಕೆ ಕಾರಣ.
ಮುಂದೆ ಜಯಚಾಮರಾಜ ಒಡೆಯರ ಕಾಲದಲ್ಲಿ (೧೯೪೦-೧೯೪೭) ಋಗ್ವೇದ ಮತ್ತು ಮಹಾ ಪುರಾಣಗಳ ಕನ್ನಡ ಅರ್ಥಾನುಸಂಧಾನ, ಗದ್ಯಾನುವಾದ, ವಿವರಣೆ ಇತ್ಯಾದಿಗಳನ್ನು ವಿದ್ವಾಂಸರಿಂದ ಮಾಡಿಸಿ ಪ್ರಕಟಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಮುಮ್ಮಡಿ ಕೃಷ್ಣರಾಜ ಒಡೆಯರ ಹೆಸರಿನಲ್ಲಿರುವ ಕಾಳಿದಾಸ (ಶಾಕುಂತಲ ನಾಟಕದ ನವೀನ ಟೀಕೆ) ಮತ್ತು ಭವಭೂತಿಯ (ಉತ್ತರರಾಮ ಚರಿತ್ರ ಕಥೆ) ಸಂಸ್ಕೃತ ನಾಟಕಗಳ ಗದ್ಯಕಥನ ರೂಪಗಳು ಮುಂದೆ ಈ ಬಗೆಯ ರೂಪಾಂತರಗಳ ಒಂದು ಪರಂಪರೆಯನ್ನೇ ಸೃಷ್ಟಿಸಿದವು. (ಕೆಲವು ಉದಾಹರಣೆಗಳು ೪ನೆಯ ಉಪವಿಭಾಗ, ‘ವೈಯಕ್ತಿಕ ಪ್ರಯತ್ನಗಳು’ ಭಾಗದಲ್ಲಿವೆ).
ಅದನ್ನು ಅನುಸರಿಸಿ ಶೇಕ್ಸ್ಪಿಯರ್ ನಾಟಕಗಳ ಕಥನರೂಪಗಳು ಕೂಡ ಬಂದವು. ಅವುಗಳ ಉದಾಹರಣೆಗಳನ್ನು ಮುಂದಿನ ಭಾಗದಲ್ಲಿ ನೋಡಬಹುದು. ಅಲ್ಲದೆ ಕನ್ನಡಕ್ಕೆ ಮೊದಲಾಗಿ ಅನುವಾದಗೊಂಡ ಕಾದಂಬರಿ, ಬಂಗಾಳದ ಈಶ್ವರಚಂದ್ರರ ‘ಭ್ರಾಂತಿ ವಿಲಾಸ’ವು ಶೇಕ್ಸ್ಪಿಯರಿನ ‘ಕಾಮೆಡಿ ಆಫ್ ಎರರ್ಸ್’ ನಾಟಕದ ಕಾದಂಬರಿರೂಪವೇ ಆಗಿರುವುದು ವಿಶೇಷವಾಗಿ ಗಮನಿಸಬೇಕಾದುದು. ಆಮಟ್ಟಿಗೆ ಕನ್ನಡದಲ್ಲಿ ಅಂತಹ ಪ್ರಯತ್ನಗಳು ಮೊದಲೇ ನಡೆದಿದ್ದವು ಎನ್ನುವುದೇ ವಿಶೇಷ. ಆದರೆ ಸಮಕಾಲೀನ ಸಮಾಜದ ಚಿತ್ರಣ ಮಾಡುವುದನ್ನು ಬಂಗಾಳಿ ಕಾದಂಬರಿಗಳು ಕಲಿಸಿಕೊಟ್ಟವು. ಅಲ್ಲಿಯೂ ಮೊದಲು ಸಂಸ್ಕೃತ ಮತ್ತು ಇಂಗ್ಲಿಷ್ ನಾಟಕಗಳ ಕಥನರೂಪಗಳು ಬಂದಿದ್ದವು. ಅನಂತರ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳೂ, ಪತ್ತೇದಾರಿ ಕಾದಂಬರಿಯೂ ಹುಟ್ಟಿಕೊಂಡಿತ್ತು. ವೆಂಕಟಾಚಾರ್ಯರ ಅನುವಾದಗಳ ಮೂಲಕ ಆ ಮಾದರಿಗಳೆಲ್ಲ ಕನ್ನಡಕ್ಕೆ ಅನುವಾದಗೊಂಡವು.
೨) ಮಿಷನರಿಗಳು ಮಾಡಿದ ಬರವಣಿಗೆಯ ಭಾಷಾಶೈಲಿಯ ಅನುವಾದ ಮತ್ತು ಗದ್ಯಾನುವಾದ:
ಮಿಷನರಿಗಳು ನೇರವಾಗಿ ಗದ್ಯಾನುವಾದ ಮಾಡಿದ ಮತ್ತು ಮಾಡಿಸಿದ ಉದಾಹರಣೆಗಳಿಗಿಂತ ಮುಖ್ಯವಾದುದು ಅವರು ಕನ್ನಡದ ಬರವಣಿಗೆಯ ಗದ್ಯಕ್ಕೆ ಬಹಳ ಮುಖ್ಯವಾದ ಒಂದು ಧನಾತ್ಮಕ ತಿರುವನ್ನು ಕೊಟ್ಟದ್ದು. ಅದೇನೆಂದರೆ ಮುಮ್ಮಡಿಯವರ ಕಾಲದ ಗದ್ಯದಲ್ಲಿ ಪದಗಳು ಸಂಧಿಯಾಗಿ ಕೂಡುನುಡಿಗಳಂತೆ ಬಳಕೆಯಾಗುತ್ತಿದ್ದದ್ದನ್ನು ಕೈಬಿಟ್ಟು ಅನಗತ್ಯ ಸಂಧಿಗಳನ್ನು ಬಿಡಿಸಿ, ಬಿಡಿಬಿಡಿಯಾದ ಪದಗಳನ್ನು ಬರೆಯುವ ಪದ್ಧತಿಯನ್ನು ಬಳಕೆಗೆ ತಂದದ್ದು. ಎರಡನೆಯದು ಪುಟಗಟ್ಟಲೆ ಪೂರ್ಣವಿರಾಮವಿಲ್ಲದೆ ಸಾಗುತ್ತಿದ್ದ ವಾಕ್ಯಗಳನ್ನು ವಾಚನಯೋಗ್ಯವಾಗಿ ತುಂಡರಿಸಿ ಪೂರ್ಣವಿರಾಮ ಚಿಹ್ನೆಯನ್ನು ಬಳಕೆಗೆ ತಂದದ್ದು.
ಇವುಗಳನ್ನು ಮಿಷನರಿಗಳು ಪ್ರಜ್ಞಾಪೂರ್ವಕವಾಗಿ ‘ಅನುವಾದ’ ಮಾಡಿಕೊಂಡರು. ಈ ಬದಲಾವಣೆ ಅರ್ಥವಾಗಬೇಕಾದರೆ ಮುಮ್ಮಡಿಯವರ ‘ಸೌಗಂಧಿಕಾ ಪರಿಣಯ’ (೧೮೨೧) ಕೃತಿಯ ಒಂದು ವಾಕ್ಯವನ್ನು ಕೊನೆಯಲ್ಲಿ ಕೊಟ್ಟಿರುವ ‘ಟಿಪ್ಪಣಿ – ೧’ರಲ್ಲಿ (ಅಲ್ಲಿ ಉದ್ಧರಿಸಿದಷ್ಟು ಭಾಗದಲ್ಲಿಯೂ ಅದು ಕೊನೆಗೊಳ್ಳದೆ ಅಪೂರ್ಣವಾಗಿದೆ) ನೋಡಬಹುದು. ‘ಮುದ್ರಾಮಂಜೂಷ’ (೧೯೨೩) ಗ್ರಂಥವನ್ನು ಸಂಪಾದಿಸುವಾಗ ಸಂಪಾದಕ ರೆ. ಸ್ಟೀವನ್ಸನ್ ಮಾಡಿರಬಹುದಾದ ಸುಧಾರಣೆಗಳನ್ನು ಗಮನಿಸಲು ಅದರ ಮಾದರಿಯನ್ನೂ ಕೊಡಲಾಗಿದೆ (ಟಿಪ್ಪಣಿ – ೨).
ಮಿಷನರಿಗಳು ಪಠ್ಯಪುಸ್ತಕವಾಗಿ ಬಳಸಲು ೧೮೪೦ ರ ದಶಕದಲ್ಲಿ ರಚಿಸಿದ ಎಪ್ಪತ್ತು ಕಥೆಗಳುಳ್ಳ ‘ಕಥಾ ಸಪ್ತತಿ’ ಎಂಬ ಪುಸ್ತಕದಲ್ಲಿ ಮತ್ತು ಅಡಕ್ಕಿ ಸುಬ್ಬರಾಯ ಎಂಬವರಿಂದ ಬರೆಯಿಸಿದ ೧೮೪೬ ರ ‘ಅ ಸಿಲೆಕ್ಷನ್ ಆಫ್ ಸ್ಟೋರೀಸ್’ ಎಂಬ ಪುಸ್ತಕದಲ್ಲಿ ಕನ್ನಡ ಗದ್ಯಕ್ಕೆ ಅಲ್ಲಲ್ಲಿ ಪೂರ್ಣವಿರಾಮಗಳನ್ನೂ, ಉದ್ಧರಣ ಚಿಹ್ನೆಗಳನ್ನೂ, ಪದಗಳ ನಡುವೆ ಸ್ಥಳಗಳನ್ನೂ ಕೊಟ್ಟು ಇಂಗ್ಲಿಷ್, ಜರ್ಮನ್ ಮುಂತಾದ ಪಾಶ್ಚಾತ್ಯ ಭಾಷೆಗಳ ಗದ್ಯ ಬರವಣಿಗೆಯಂತೆ ಬರೆಯುವ ಕ್ರಮವನ್ನು ಜಾರಿಗೆ ತಂದರು. ಇದರಲ್ಲಿರುವ ಕಥೆಗಳ ಮಾದರಿಯನ್ನು ‘ಟಿಪ್ಪಣಿ – ೩’ರಲ್ಲಿ ನೋಡಬಹುದು. ೧೯೨೦ ರ ಬೈಬಲ್ ಅನುವಾದದಲ್ಲಿ ಕನ್ನಡದಲ್ಲಿ ಆಗ ಪ್ರಚಲಿತವಾಗಿದ್ದ ಶೈಲಿಯಲ್ಲಿ ಶಬ್ದಗಳನ್ನು ಬಿಡಿಸದೆ, ಪೂರ್ಣವಿರಾಮವನ್ನು ಕೊಡದೆ ಮುದ್ರಿಸಿದ್ದ ಮಿಷನರಿಗಳು ಮುಂದಿನ ಪರಿಷ್ಕರಣೆಗಳಲ್ಲಿ ಅವುಗಳನ್ನೆಲ್ಲ ಸರಿಪಡಿಸಿಕೊಂಡರು.
ಬರವಣಿಗೆಯಲ್ಲಿ ಮತ್ತು ಮುದ್ರಣದಲ್ಲಿ ಮಾತಿನ ಲಯವನ್ನು ಹಿಡಿಯುವ ಕ್ರಮವನ್ನು ಪಾಶ್ಚಾತ್ಯ ಭಾಷೆಗಳಿಂದ ಕನ್ನಡಕ್ಕೆ ತಂದುಕೊಂಡದ್ದು ಕೂಡ ಒಂದು ‘ಅನುವಾದ’ ಅಥವಾ ‘ಭಾಷಾಂತರ’ ಪ್ರಕ್ರಿಯೆಯೇ ಆಗಿದೆ.
‘ಕಥಾ ಸಪ್ತತಿ’ ಪುಸ್ತಕದಲ್ಲಿ ಮಿಷನರಿಗಳು ಅಥವಾ ಅವರ ದೇಶೀಯ ಸಹಕಾರಿಗಳು ಎಪ್ಪತ್ತು ಕಥೆಗಳನ್ನು ಮತ್ತು ಸನ್ನಿವೇಶಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಈಸೋಪ, ಪಂಚತಂತ್ರ ಇತ್ಯಾದಿ ಕೃತಿಗಳಿಂದಲೂ, ಪಾಶ್ಚಾತ್ಯ ಪಠ್ಯ ಪುಸ್ತಕಗಳಿಂದಲೂ ಕಥೆಗಳನ್ನು ಅನುವಾದ ಮಾಡಿರುವಂತಿದೆ. ಶೀರ್ಷಿಕೆಗಳು ಮಿಷನರಿಗಳ ಶೈಲಿಗೆ ಮಾದರಿಯಾಗಿವೆ. ಉದಾಹರಣೆಗೆ – ‘ಇಂಗ್ಲಿಷ್ ದೊರೆಯನ್ನೂ ಅವನ ದ್ವಿಭಾಷಿಯನ್ನೂ ಕುರಿತದ್ದು.’
ಈ ಪುಸ್ತಕದ ಭಾಷೆಯ ಮಾದರಿ ಹೀಗಿದೆ: “ಕಳವು ಮಾಡಲು ನನ್ನ ಮನೆಗೆ ಬರುವಾಗ ಮುಂಚಿತ ತಿಳಿಸಬಾರದಿತ್ತೆ? ಅಂದರೆ ಸಾಕ್ಷಿಗಳ ವ್ಯವಸ್ಥೆ ಮಾಡುತ್ತಿದ್ದೆ”. (ಕಥಾ ಸಪ್ತತಿ, ೧೮೪೦ರ ದಶಕದ ಪಠ್ಯ ಪುಸ್ತಕ).
ಇದರ ಪ್ರಸ್ತಾವನೆಯಲ್ಲಿ ಕನ್ನಡ ಗದ್ಯದ ವಾಚನೀಯತೆಯನ್ನು ಕಠಿಣಗೊಳಿಸುತ್ತಿದ್ದ ಸಂಧಿಗಳನ್ನು ತಾವು ಬಿಟ್ಟುಕೊಟ್ಟು ಜಗತ್ತಿನ ಇತರ ನಾಗರಿಕ ಭಾಷೆಗಳಲ್ಲಿರುವಂತೆ ಪದಗಳನ್ನು ವಿಂಗಡಿಸಿ ಬರೆದಿರುವುದನ್ನು ಮಿಷನರಿ ವಿದ್ವಾಂಸರು (ಕಥಾಸಪ್ತತಿಯ ಸಂಪಾದಕರು) ಸ್ಪಷ್ಟವಾಗಿ ದಾಖಲಿಸಿದ್ದಾರೆ. “The publication of the Seventy Stories is designed to supply in some measure, the want of books written in an easy and familiar style and adopted to the use of beginners. As a further help Sandhi is almost wholly omitted and spaces introduced between the words as is usual in the writings of every civilized people.” (ಕಥಾ ಸಪ್ತತಿ. ಹೊಸಗನ್ನಡದ ಅರುಣೋದಯದಲ್ಲಿ ಉಲ್ಲೇಖಿಸಿದಂತೆ).
ಮಂಗಳೂರಿನಲ್ಲಿಯೂ ಮ್ಯೋಗ್ಲಿಂಗ್, ವೈಗೆಲ್, ಕಿಟೆಲ್ ಮುಂತಾದವರೆಲ್ಲರೂ ಪಠ್ಯ ಪುಸ್ತಕಗಳಿಗಾಗಿ ಅನುವಾದಗಳನ್ನು ಮಾಡಬೇಕಿತ್ತು. ಅದು ಮಿಷನರಿಗಳ ಕರ್ತವ್ಯಗಳಲ್ಲಿ ಒಂದೆಂದು ಪರಿಗಣಿತವಾಗಿತ್ತು. ಹಾಗಾಗಿ ಈ ಪಠ್ಯಗಳನ್ನು ಸಿದ್ಧಪಡಿಸಿದವರ ಹೆಸರುಗಳು ದಾಖಲಾಗಿಲ್ಲ. ಆದರೂ ರೆ| ಗುಸ್ತಾವ್ ಕೀಸ್ ಎಂಬ ಮಂಗಳೂರಿನ ಮಿಷನರಿ (೧೮೪೦- ೧೮೬೬) ಈ ಭಾಗದಲ್ಲಿ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿದ ಆದ್ಯರೆಂದು ದಾಖಲಾಗಿದೆ. ಮಿಷನರಿಗಳಿಗೆ ದೇಶೀಯ ವಿದ್ವಾಂಸರ ಸಹಾಯ ಇದ್ದಿರುವುದು ಸಹಜವಾಗಿದೆ. ಈ ಸಮೂಹ ಪ್ರಯತ್ನವನ್ನು ಮುಮ್ಮಡಿಯವರ ಆಸ್ಥಾನದಲ್ಲಿ ನಡೆದ ಸಾಮೂಹಿಕ ವಿದ್ವತ್ ಕಾರ್ಯಕ್ಕೆ ಹೋಲಿಸಬಹುದು.
ಮಂಗಳೂರಿನ ಬಾಸೆಲ್ ಮಿಷನಿನ ಮುಖ್ಯಸ್ಥ ರೆ| ಹರ್ಮನ್ ಮ್ಯೋಗ್ಲಿಂಗ್ ಅವರು ೧೮೪೪ರಲ್ಲಿ ಆನಂದರಾವ್ ಕೌಂಡಿಣ್ಯ ಎಂಬ ಸಾರಸ್ವತ ಬ್ರಾಹ್ಮಣ ಯುವಕನನ್ನು ಮತಾಂತರ ಮಾಡಿದ ಘಟನೆ ಮಂಗಳೂರಿನಲ್ಲಿ ಕೋಲಾಹಲ ಎಬ್ಬಿಸಿತ್ತು. ಮಿಷನರಿ ನಿಲುವು ಅಥವಾ ಕ್ರೈಸ್ತ ಮತೀಯ ನಿಲುವಿನಿಂದ ಈ ಇಡೀ ಘಟನೆಯನ್ನು ಮತ್ತು ಮತಾಂತರದ ತಾತ್ವಿಕ ಜಿಜ್ಞಾಸೆಯನ್ನು ಮ್ಯೋಗ್ಲಿಂಗ್ ಒಂದು ಸೃಜನಶೀಲ ಕಿರು ಕಾದಂಬರಿಯಾಗಿ ರಚಿಸಿದರು. ೧೮೪೮ರಲ್ಲಿ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡು ಜನಪ್ರಿಯವಾಗಿದ್ದ ಈ ಕೃತಿಯೇ ‘ಈರಾರು ಪತ್ರಿಕೆ’. ಈರಾರು ಅಂದರೆ ಎರಡು ಆರು (ಹನ್ನೆರಡು) ಪತ್ರಗಳ ಮೂಲಕ ಇಡೀ ಸನ್ನಿವೇಶವನ್ನು ದಾಖಲಿಸಿರುವ ಎಪಿಸ್ಟಲರಿ ತಂತ್ರ ಈ ಕಾದಂಬರಿಯಲ್ಲಿದೆ. ಇಲ್ಲಿ ಗಮನಿಸಬೇಕಾದುದು, ಅನುವಾದಗಳ ಮೂಲಕ ಮತ್ತು ಪ್ರಜ್ಞಾಪೂರ್ವಕವಾಗಿ ಆಧುನಿಕ ಕನ್ನಡ ಗದ್ಯದ ನುಡಿಗಟ್ಟುಗಳನ್ನು ಸಿದ್ಧಮಾಡಿಕೊಡುವ ಕಾರ್ಯದಲ್ಲಿ ತೊಡಗಿದ್ದ ಮ್ಯೋಗ್ಲಿಂಗರ ಸೃಜನಶೀಲ ಗದ್ಯ ಹೇಗಿತ್ತೆನ್ನುವುದನ್ನು ಮಾತ್ರ. ಮ್ಯೋಗ್ಲಿಂಗ್ ಅವರ ಭಾಷೆಗೆ ಉದಾಹರಣೆಯಾಗಿ ‘ಈರಾರು ಪತ್ರಿಕೆ’ಯ ಎರಡು ಪುಟಗಳನ್ನು ‘ಟಿಪ್ಪಣಿ – ೪’ರಲ್ಲಿ ಕೊಡಲಾಗಿದೆ.
ಈ ಗದ್ಯ ಭಾಷೆ ನಾವು ಈಗ ಬಳಸುವ ಕನ್ನಡಕ್ಕೆ ಸಮೀಪವಾಗಿರುವುದನ್ನು ಗಮನಿಸಿದರೆ ಆಧುನಿಕ ಕನ್ನಡ ಗದ್ಯವನ್ನು ರೂಪಿಸುವುದರಲ್ಲಿ ಮಿಷನರಿಗಳ ಪಾತ್ರ ಮುಖ್ಯವಾಗಿತ್ತು ಎನ್ನುವುದನ್ನು ತಿಳಿಯಬಹುದು.
ಮಂಗಳೂರಿನ ಬಾಸೆಲ್ ಮಿಷನರಿಗಳು ಮರಾಠಿಯಿಂದ ಬಾಬಾ ಪದಂಜೀ ಮುಳೆ ಅವರ (ಇವರು ಪ್ರೊಟೆಸ್ಟೆಂಟ್ ಕ್ರೈಸ್ತರು; ಮರಾಠಿಯಲ್ಲಿ ಕ್ರೈಸ್ತ ಸಾಹಿತ್ಯವನ್ನು ಬರೆದವರು) ‘ಯಮುನಾ ಪರ್ಯಟನ’ ಎಂಬ ಕಾದಂಬರಿಯನ್ನು ೧೮೬೮ರಲ್ಲಿ ‘ಯಮುನಾಬಾಯಿಯ ಸಂಚಾರ’ ಎಂದು (ಅನುವಾದ- ಸೊಲೊಮನ್ ಭಾಸ್ಕರ) ಮತ್ತು ಮಲಯಾಳಂ ಭಾಷೆಯ, ಜೋಸೆಫ್ ಮುಳಿಯಿಲ್ ಅವರ ‘ಸುಕುಮಾರಿ’ ಎಂಬ ಕಾದಂಬರಿಯನ್ನು (ಅನುವಾದ – ಎಚ್. ರಾಬರ್ಟ್) ೧೮೯೯ರಲ್ಲಿ ಕನ್ನಡಕ್ಕೆ ತಂದರು. ಮೊದಲನೆಯದು ಹಿಂದುಗಳ ವಿಧವಾ ಸಮಸ್ಯೆ ಮತ್ತು ಕ್ರೈಸ್ತ ಧರ್ಮದಲ್ಲಿ ಪರಿಹಾರ ತೋರಿಸುವ ‘ಕ್ರೈಸ್ತ ಕಾದಂಬರಿ’ಗಳಾಗಿದ್ದರೆ ‘ಸುಕುಮಾರಿ’ ಭಾರತೀಯ ಕ್ರೈಸ್ತ ಸಮಾಜದ ಚಿತ್ರಣವಾಗಿದೆ. ಈ ಪರಂಪರೆಗೆ ಸೇರಿದ ಕನ್ನಡದ ಸ್ವತಂತ್ರ ಕ್ರೈಸ್ತ ಕಾದಂಬರಿ ಗೋ. ನ. ಸವಣೂರ್ ಎಂಬವರಿಂದ ೧೯೦೪ರಲ್ಲಿ ರಚಿತವಾಯಿತು. ‘ಹೇಮಲತೆ ಪ್ರಭಾಕರ’ ಎಂಬ ಶೀರ್ಷಿಕೆಯ ಆ ಕಾದಂಬರಿಯನ್ನು ಬೆಂಗಳೂರಿನಲ್ಲಿ ಪ್ರಕಟಿಸಿದವರು ವೆಸ್ಲಿಯನ್ ಮಿಷನಿನವರು.
ಮಿಷನರಿಗಳ ಬೈಬಲ್ ಭಾಷಾಂತರ ಸತ್ರಗಳು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಷನರಿಗಳು ಮಾಡಿದ ಮುಖ್ಯ ಭಾಷಾಂತರವೆಂದರೆ ಬೈಬಲಿನ ಕನ್ನಡ ಭಾಷಾಂತರ ಮತ್ತು ಪರಿಷ್ಕರಣೆಗಳು. ಬೈಬಲ್ ಅನುವಾದ ೧೮೧೧-೨೭ರ ಸಮಯದಲ್ಲಿ ನಡೆದರೆ, ೧೮೪೩-೫೯ರ ಅವಧಿಯಲ್ಲಿ ಒಮ್ಮೆ ಮತ್ತು ೧೮೯೩-೧೯೦೧ರ ಅವಧಿಯಲ್ಲಿ ಇನ್ನೊಮ್ಮೆ ಅದನ್ನು ಪರಿಷ್ಕರಿಸಲಾಯಿತು. ಈ ಅನುವಾದದಿಂದ ಕನ್ನಡ ಗದ್ಯಕ್ಕೆ ನೇರವಾಗಿ ಯಾವ ಪ್ರಯೋಜನವೂ ಆಗಲಿಲ್ಲ ಎನ್ನಲಾಗಿದೆ (‘ಟಿಪ್ಪಣಿ – ೫’ ನೋಡಿ). ಕನ್ನಡ ಬೈಬಲ್ಗಳನ್ನು ಉಚಿತವಾಗಿ ಹಂಚುತ್ತಿದ್ದುರಿಂದ ಮತ್ತು ಇವುಗಳನ್ನು ಕ್ರೈಸ್ತೇತರ ಜನರು ಮುಗಿಬಿದ್ದು ಪಡೆದುಕೊಂಡು ಹೋಗಿ ಓದುತ್ತಿದ್ದುದರಿಂದ ‘ಹೀಗೆಯೆ’ ಎಂದು ಹೇಳಲಾಗದು. ಅಲ್ಲದೆ, ಈ ಭಾಷಾಂತರ ಸತ್ರಗಳಲ್ಲಿ ಭಾಗವಹಿಸಿದ್ದ ಮಿಷನರಿ ವಿದ್ವಾಂಸರು ತಮ್ಮ ತಿಳಿವಳಿಕೆಗಳನ್ನು ತಮ್ಮ ‘ಸೆಕ್ಯೂಲರ್’ ಕೃತಿಗಳಲ್ಲಿ ಬಳಸಿಕೊಂಡದ್ದರಿಂದ ಪರೋಕ್ಷವಾಗಿ ಕನ್ನಡಕ್ಕೆ ಅದರಿಂದ ಪ್ರಯೋಜನವಾಯಿತು ಎಂದು ಊಹಿಸಬಹುದು. ಉದಾಹರಣೆಗೆ ರೆ. ಮ್ಯೋಗ್ಲಿಂಗ್ ಮತ್ತು ರೆ. ಕಿಟೆಲ್ ಹೀಗೆ ಬೈಬಲ್ ಭಾಷಾಂತರಗಳಲ್ಲಿ ಭಾಗವಹಿಸಿದ್ದ ಇಬ್ಬರು ವಿದ್ವಾಂಸರು. ಕನ್ನಡ ಸೃಜನಶೀಲ ಬರವಣಿಗೆಗೆ ಅವರ ಕೊಡುಗೆ ಪ್ರಸಿದ್ಧವಾದುದೇ ಆಗಿದೆ.
ಬೈಬಲ್ ಭಾಷಾಂತರದಲ್ಲಿ ಭಾಷಾಂತರ ಅಧ್ಯಯನಕಾರರು ಗಮನಿಸಬೇಕಾದ ಕೆಲವು ಸಂಗತಿಗಳಿವೆ. ೧.ಕಾಲಕಾಲಕ್ಕೆ ಭಾಷೆಯನ್ನು ಸಮಕಾಲೀನಗೊಳಿಸಬೇಕು ಎನ್ನುವ ತಿಳಿವಳಿಕೆ. ೨. ಪ್ರಾದೇಶಿಕ ಭಾಷಾ ವೈವಿಧ್ಯಗಳನ್ನು ಗಮನಿಸಿ ಸೂಕ್ತವಾದ ಸಮನ್ವಯವನ್ನು ಸಾಧಿಸುವುದು. ೩. ಪ್ರತಿಯೊಂದು ಪದವನ್ನೂ ಮೂಲಕ್ಕೆ ಸರಿಯಾಗುವಂತೆ ವಿವೇಚಿಸಿ ಬಳಸುವುದು. (ಅನುವಾದದಲ್ಲಿ ಮೂಲನಿಷ್ಠತೆಗೆ ಪ್ರಾಮುಖ್ಯ ಬಂದದ್ದೇ ಬೈಬಲ್ ಭಾಷಾಂತರಗಳಿಂದಾಗಿ). ಮೂಲದಲ್ಲಿದ್ದುದನ್ನು ವಿಸ್ತರಿಸಲು ಹೋಗಬಾರದು. ಸ್ವೀಕಾರ ಭಾಷೆಯಲ್ಲಿ ಮೂಲಕ್ಕೆ ಸಂವಾದಿಯಾದ ಪದಗಳಿದ್ದರೆ ಮಾತ್ರ ಅನುವಾದಿಸಬೇಕು; ಇಲ್ಲದಿದ್ದರೆ ಆಕರ ಭಾಷೆಯ ಪದಗಳನ್ನೇ ಇಟ್ಟುಕೊಳ್ಳಬೇಕು (ಉದಾಹರಣೆಗೆ, ‘ಅಪೋಸ್ತಲರು’). ೪. ಭಾಷೆಗೂ ಸಂಸ್ಕೃತಿಗೂ ಇರುವ ಸಂಬಂಧವನ್ನು ತಿಳಿದು ಭಾಷಾಂತರಿಸುವುದು. (ಬೈಬಲ್ ಭಾಷಾಂತರದ ಸಂದರ್ಭದ ನಡಾವಳಿಗಳನ್ನು ಮಿಷನರಿಗಳು ಹಸ್ತಾಕ್ಷರದಲ್ಲಿರುವ ದಾಖಲೆಯೊಂದರಲ್ಲಿ ಬರೆದು ಇಟ್ಟಿದ್ದಾರೆ. ಡಾ. ಶ್ರೀನಿವಾಸ ಹಾವನೂರ್ ಇದನ್ನು ಪರಿಶೀಲಿಸಿ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಮೇಲಿನ ಅಂಶಗಳನ್ನು ನಾನು ಗ್ರಹಿಸಿದ್ದೇನೆ).
ಮೊದಲನೆಯ ಅಂಶಕ್ಕೆ ಮಿಷನರಿಗಳು ಬೈಬಲಿನ ಮೊದಲನೆಯ ಕನ್ನಡ ಅನುವಾದದ ಭಾಷೆ ಜನರು ಆಡುವ ಮಾತಿಗಿಂತ ದೂರವಾಗಿದೆ ಎಂದು ತಿಳಿದು ಪರಿಷ್ಕರಣೆಗೆ ತೊಡಗಿದ್ದೇ ಉದಾಹರಣೆಯಾಗಿದೆ. ಎರಡನೆಯದಕ್ಕೆ ಉದಾಹರಣೆಯೆಂದರೆ ಉತ್ತರ ಕರ್ನಾಟಕಕ್ಕೆ ಮತ್ತು ದಕ್ಷಿಣ ಕರ್ನಾಟಕಕ್ಕೆ ಎರಡು ಪ್ರತ್ಯೇಕ ಭಾಷಾಂತರಗಳು ಬೇಕೆಂದು ಬೋಧಕರು ಬೇಡಿಕೆ ಸಲ್ಲಿಸಿದಾಗ ಪರಿಷ್ಕರಣ ಸಮಿತಿಯು ಅದನ್ನು ಚರ್ಚಿಸಿ, ಹಾಗೆ ಮಾಡುವುದಕ್ಕಿಂತ ಸಮನ್ವಯದ ಭಾಷೆಯೊಂದನ್ನು ಬಳಸಲು ನಿರ್ಧರಿಸಿದ್ದು. ಮೂರನೆಯ ಅಂಶಕ್ಕೆ ಉದಾಹರಣೆಯೆಂದರೆ, ಪರಿಷ್ಕರಣೆ ಮಾಡುವಾಗ ಸಮಿತಿಯು ಸಾಕಷ್ಟು ಚರ್ಚಿಸಿ ಅವುಗಳನ್ನು ದಾಖಲಿಸಿದ್ದು. ಉದಾಹರಣೆಗೆ, ‘ಆದಿಯಲ್ಲಿ ವಾಕ್ಯವಿತ್ತು’ (ಇನ್ ದ ಬಿಗಿನಿಂಗ್ ವಾಸ್ ದ ವರ್ಡ್) ಎನ್ನುವ ವಾಕ್ಯದಲ್ಲಿರುವ ‘ವರ್ಡ್’ ಪದಕ್ಕೆ ‘ವಾಕ್ಯ’ ಎನ್ನುವ ಅನುವಾದವು ಸೂಕ್ತವಲ್ಲ; ಅದನ್ನು ‘ವಾಕ್ಕು’ ಎಂದು ಪರಿಷ್ಕರಿಸಬೇಕು, ವೇದಗಳಲ್ಲಿಯೂ ‘ವಾಕ್ಕು’ ಎನ್ನುವ ಪದ ಇದಕ್ಕೆ ಸಂವಾದಿಯಾದ ಅರ್ಥವನ್ನು ಕೊಡುತ್ತದೆ ಎಂದು ಕಿಟೆಲ್ ವಾದಿಸಿದ್ದರಂತೆ. ಆದರೆ ಇಲ್ಲಿ ‘ವಾಕ್ಯ’ ಎನ್ನುವುದನ್ನೇ ಉಳಿಸಿಕೊಳ್ಳಲಾಯಿತು. ‘ದ ವರ್ಡ್ ವಾಸ್ ಮೇಡ್ ಫ್ಲೆಶ್’ ಎನ್ನುವ ವಾಕ್ಯದಲ್ಲಿರುವ ‘ಫ್ಲೆಶ್’ – ಗ್ರೀಕ್ ಪದ ‘ಸಾರ್ಕ್್ಸ’ – ಎನ್ನುವುದಕ್ಕೆ, ಕನ್ನಡದಲ್ಲಿ ಮೊದಲು ಬೈಬಲ್ ಅನುವಾದವನ್ನು ಸಿದ್ಧಪಡಿಸಿದ ಲಂಡನ್ ಮಿಷನಿನ ರೆ. ಜಾನ್ ಹ್ಯಾಂಡ್ಸ್ ‘ಮನುಷ್ಯತ್ವವನ್ನು ಧರಿಸಿಕೊಂಡು’ ಎಂದು ಅನುವಾದಿಸಿದ್ದ. ನಂತರ ಪರಿಷ್ಕರಣೆ ಮಾಡುವಾಗ ಅದನ್ನು ‘ಮಾಂಸ’ ಎಂದು ತಿದ್ದಲಾಯಿತು. ಇದನ್ನು ಅಂತಿಮಗೊಳಿಸುವ ಮುನ್ನ ಮಿಷನರಿ ವಿದ್ವಾಂಸರು ಸೂಚಿಸಿದ ಪರ್ಯಾಯ ಪದಗಳು – ಶರೀರ, ನರ ಭಾವ, ದೇಹ, ವಿಷಯ ಲಂಪಟತ್ವ, ಪ್ರಪಂಚ ಜಡಭಾವ -ಇವುಗಳು.
ನಾಲ್ಕನೆಯ ಅಂಶ – ಅನುವಾದದ ಭಾಷೆಯ ಪದಗಳು ತಮ್ಮದೇ ಆದ ಸಾಂಸ್ಕೃತಿಕ ಅರ್ಥಭಾರವನ್ನು ಹೊತ್ತುಕೊಂಡಿರುತ್ತವೆ ಎನ್ನುವ ಅರಿವು ಮಿಷನರಿಗಳಿಗೆ ಇತ್ತು. ಅದಕ್ಕಾಗಿ ಅವರು ಸಂಸ್ಕೃತ ಪದಗಳನ್ನು ಆದಷ್ಟು ಕಡಿಮೆ ಬಳಸಬೇಕು ಎಂದು ನಿರ್ಧರಿಸಿಕೊಂಡಿದ್ದರು. ಅವರು ಕೆಲವು ಪದಗಳಿಗೆ ಹೊಸ ಅರ್ಥಗಳನ್ನು ನೀಡಿದರು – ಉದಾಹರಣೆಗೆ, ‘ಪ್ರಸಂಗ’, ‘ಒಡಂಬಡಿಕೆ’ ಇತ್ಯಾದಿ ಪದಗಳು. ‘ವೇದ’ ‘ಕ್ರೈಸ್ತ ವೇದ’ ಇತ್ಯಾದಿ ಪದಗಳನ್ನು ಬಳಸುವುದರಿಂದ ಕ್ರೈಸ್ತ ಮತದ ಶ್ರೇಷ್ಠತೆಯನ್ನು ಸಾಧಿಸಲು ಕಷ್ಟವಾಗಬಹುದು ಎನ್ನುವ ಅರಿವು ಪರಿಷ್ಕರಣೆಗಳ ಕಾಲಕ್ಕೆ ಮಿಷನರಿ ವಿದ್ವಾಂಸರಿಗೆ ಉಂಟಾಗಿತ್ತು.
(ಸಶೇಷ)
ಟಿಪ್ಪಣಿ – ೧
ಸೌಗಂಧಿಕಾ ಪರಿಣಯದ ಗದ್ಯಕ್ಕೆ ಉದಾಹರಣೆ:
ಸೌಗಂಧಿಕಾ ಪರಿಣಯ ಎಂಟನೆಯ ಆಶ್ವಾಸ ಪ್ರಾರಂಭ
ಅನಂತರದಲ್ಲಿ ಸುಗಂಧರಾಜಕುಮಾರನ ಯುವರಾಜ್ಯಾಭಿಷೇಕವಂ ನೋಡಬೇಕೆಂದು ಕುತೂಹಲದಿಂದ ಬರುವನೋ ಎಂಬಂತೆ ಸೂರ್ಯನು ಉದಯಿಸಲು ಸುಚರಿತ್ರರಾಯನು ನಿರೂಪಿಸಿದ ಪರಿಯಾಗಿ ಮಂತ್ರಿಯಾದ ಸುಬುದ್ಧಿಯು ಸುಗಂಧರಾಜಕುಮಾರನ ಯುವ ರಾಜ್ಯಾಭಿಷೇಕಕ್ಕೆ ಉಪಯುಕ್ತಂಗಳಾದ ಸಮಸ್ತ ವಸ್ತು ಮುಸ್ತೈದುಗಳಂ ಸನ್ನದುಗಳಂ ಸನ್ನಹಿಸಿಕೊಂಡು ಅಂತಃಪುರದ ಬಾಗಿಲೊಳ್ ಬಂದು ನಿಂತು ಮಂಜುವಾಣಿಯ ಮುಖದಿಂದ ರಾಯಂಗೆ ತಾನು ಬಂದಿರುವ ಅವಶ್ಯ ಕಾರ್ಯವಂ ಬಿನ್ನೈಸಲು ರಾಯನು ಮಣಿಮಂಚದಿಂದ ಯೆದ್ದು ಶುಭವಸ್ತುಗಳಂ ನೋಡುತ ಬರುತ್ತಿರಲಾಗ ಸುಬುದ್ಧಿಯು ಸಾಷ್ಟಾಂಗ ಪ್ರಣಾಮವಂಗೈದು ಬಿನ್ನೈಸಿದ ಪರಿಯೆಂತೆಂದರೆ ಎಲೈ ಮಹಾರಾಜನೆ ನಿನ್ನ ಅಪ್ಪಣೆ ಮೇರೆಗೆ ಸುಗಂಧರಾಜಕುಮಾರಂಗೆ ಚಿಕ್ಕರಾಯಪಟ್ಟವಂ ಕಟ್ಟುವದಕ್ಕೆ ಸಕಲ ವಸ್ತು ಮುಸ್ತೈದುಗಳಂ ಸನ್ನಹಿಸಿ ಪುರೋಹಿತ ಮೊದಲಾದ ಸಕಲ ವಿದ್ವಜ್ಜನಂಗಳಂ ಸಾಮಾಜಿಕರಂ ಸಹ ಕಾದುಯಿರುವಂತೆ ನಿಯಮಿಸಿ ಇದೇನೆಂದು ಬಿನ್ನೈಸಲಾ ಮಾತಂ ಕೇಳಿ ರಾಯನು ಸ್ನಾನಾಹ್ನಿಕಗಳನ್ನೆರವೇರಿಸಿ ಅತಿ ಸಂಭ್ರಮದಿಂದ ಸುಗಂಧರಾಜಕುಮಾರಂಗೆ ಮಂಗಳ ಸ್ನಾನವಂಗೈಯಿಸಿ ಅಪರಿಮಿತಂಗಳಾದ ಅಮೂಲ್ಯ ವಸ್ತ್ರಾಭರಣಂಗಳಿಂದ ಅಲಂಕರಿಸಿ ಪಣೆಯೊಳ್ ಕಸ್ತೂರಿ ತಿಲಕವನ್ನಿಟ್ಟು ಮುತ್ತಿನ ಹಸೆಯೊಳ್ ಕುಳ್ಳಿರಿಸಿ ಆರತಿಯಂ ಬೆಳಗಿಸಿ ನವರತ್ನದ ಸೇಸೆಯನ್ನಿಟ್ಟು ಸಮಸ್ತ ಮಂತ್ರಿಗಳಿಂದಲೂ ಸೇನಾಪತಿಗಳಿಂದಲೂ ಸಕಲ ಸಾಮಂತರಾಜ ಮಂಡಲಿಗಳಿಂದಲೂ ಸಾಮಾಜಿಕರಿಂದಲೂ ಮತ್ತೂ ಸಮಸ್ತ ವಿದ್ಯಾವಿಶಾರದರಾದ ವಿದ್ವಜ್ಜನಗಳಿಂದಲೂ ಕೇಳುವರ ಕಿವಿಗಿಂಪಾಗಿ ಕೊರಳು ಬೆರಳುಗಳು ಒಂದಾಗಿ ಕಾಲಂಗಳು ತಿಳಿದು ಶ್ರುತಿಗಳಂ ಬಿಡದೆ ಘನನಯ ದೇಶೀಯ ರಾಗಂಗಳವರ್ಜ್ಯಾವರ್ಜ್ಯಂಗಳಂ
ಅರಿತು ರಂಜನೆಯಾಗಿ ವೀಣಾವಾದನೆಯಂಗೈಯುವ ವೈಣಿಕ ಶಿರೋಮಣಿಗಳಿಂದಲೂ ಮತ್ತಂ ವಾರೆನೋಟದ ವೈಯ್ಯಾರಗಳಿಂದ ವಿಟರಂ ಒಲಿಸಿ ವಸ್ತç ಮೊದಲಾದ ಓಡವೆಗಳಂಗೊಂಡು ಮತ್ತೂ ಕಂಡೂ ಕಾಣದಂತಿರುವ ಕುಚಂಗಳಿಂದ ತಮ್ಮ ಹೃದಯ ಕಾಠಿನ್ಯವಂ ಮುಂಗುರುಳುಗಳಿಂದ ಕೌಟಿಲ್ಯವಂ ನೇತ್ರಂಗಳಿಂ ಚಾಂಚಲ್ಯವಂ ಕೂಡಾ ಅಭಿನಯವಂಗೈಯುತಲಿರುವ ವಾರನಾರಿಯರಿಂದಲೂ ರಮಣೀಯಂಗಳಾದ ಬಿರುದು ಗದ್ಯಪದ್ಯಗಳಂ ಪೇಳಿ ಕೈವಾರಿಸುವ ವಂದಿಮಾಗಧರಿಂದಲೂ ಒಡಗೂಡಿ ಕುಮಾರನ ಕೈಪಿಡಿದು ಕರೆತಂದು ಅನೇಕ ವಾದ್ಯಧ್ವನಿಗಳಿಂದ ಪರಿಶೋಭಿತಮಾದ ನವರತ್ನಮಯವಾದ ಆಸ್ಥಾನಮಂಟಪದೊಳ್ ದೇದೀಪ್ಯಮಾನವಾದ ಮಾಣಿಕ್ಯಮಯವಾದ ಸಿಂಹಾಸನವನ್ನೇರಿ ಬಲಭಾಗದೊಳ್ ಸಿದ್ದವಿಟ್ಟಿರುವ ಮಣಿಮಯಪೀಠದಲ್ಲಿ ಸುಗಂಧರಾಜಕುಮಾರನಂ ಕುಳ್ಳಿರಿಸಿ ಶಿರಸ್ಸಿನಲ್ಲಿ ನವರತ್ನಮಯವಾದ ಕಿರೀಟವನ್ನಿಟ್ಟು ಯೌವರಾಜ್ಯಾಭಿಷೇಕವಂ ಗೈದು ಚಿಕ್ಕರಾಜ ಪಟ್ಟಕ್ಕೆ ಯೋಗ್ಯವಾದ ಮುದ್ರೆಯುಂಗುರವಂ ಕೊಟ್ಟು ಸಮಸ್ತ ಶತ್ರುರಾಯರಂ ಜಯಿಸಿ ದಿಗ್ವಿಜಯವಂ ಪಡೆಯೆಂದು ಹರಸಿ ಹಸ್ತದೊಳ್ ವೀರಕಂಕಣವಂ ಕಟ್ಟಿ, ಸುಬುದ್ದಿಯ ಮಗನಾದ ಸುಮತಿಗೆ ಯೌವರಾಜ್ಯದ ಮಂತ್ರಿತನವಂ ನಿಯಮಿಸಿ ಸೇನಾಪತಿಯಾದ ವೀರಸೇನನಂ ಕರದು ಎಲೆ ವೀರಸೇನನೆ ಈ ಶುಭ ದಿವಸದೊಳ್ ಸುಗಂಧರಾಜಕುಮಾರನು ದಿಗ್ವಿಜಯಾರ್ಥವಾಗಿ ತೆರಳುವದರಿಂದ ಈತನ ಛಾಯಾನುಗುಣ್ಯವಾಗಿ ನಡೆದುಕೊಂಡು ಸಂಗಡಲೇ ಇರುವದೆಂದು ಆಜ್ಞಾಪಿಸಿ ಕುಮಾರನೊಡಗೂಡಿ ಗಜಾರೋಹಣವಂಗೈದು ಸೇನಾಸಮೇತನಾಗಿ ಸುಬುದ್ದಿ ವೀರಸೇನರರ್ವರೂ ಹಿಂಭಾಗದೊಳ್ ಕುಳಿತು ಚಾಮರವಂ ಬೀಸುತ್ತಿರಲು ಮಹಾರಾಜ ವೈಭವದಿಂದ ಪಟ್ಟದರಸಿ ಮೊದಲಾದ ಕಾಂತೆಯರ ಸಮೂಹವು ಸಕಲ ವೈಭವದಿಂದ ಪಟ್ಟಣದ ಪುರೋಭಾಗದಲ್ಲಿರುವ ಕಟಕವಂ ಕುರಿತು ಬರಲೀ ಎಂದು ನಿರೂಪಿಸಿ ಪುರದ ರಾಜಬೀದಿಗಳಲ್ಲಿ ಪ್ರದಕ್ಷಿಣಾಕಾರವಾಗಿ ಬಂದು ಕಟಕವ ಪ್ರವೇಶಿಸಿ ಉಪರ್ವತಗಳಿಂದ ಪರಿವೃತಮಾದಹಿಮವತ್ಪರ್ವತದಂತೆ ಶುಭ್ರಮಾದ ಉನ್ನತಮಾದ ಸೈನಿಕರ ಗುಡಾರದ ಮಧ್ಯದೊಳ್ ಪೊಳೆವ ಬಿಡಾರವಂನೈದಿ ಪತ್ನಿಪುತ್ರಾದಿ ಆಪ್ತ ಬಂಧು ಜನಸಮೇತನಾಗಿ ಮಧುರಮಾದ ಮೃಷ್ಟಾನ್ನ ಭೋಜನಂಗೈದು ಮುತ್ತಿನ ಬಲೆಗಳಿಂದಯುಕ್ತವಾದ ರತ್ನಸ್ತಂಭದಿಂದ ವಿರಾಜಿತಮಾದ ಪೀತಾಂಬರಮಯವಾದ ಗುಡಾರದ ಮುಂಭಾಗದ ಚಪ್ಪರದೊಳ್…….
(ಸೌಗಂಧಿಕಾ ಪರಿಣಯ)
ಟಿಪ್ಪಣಿ – ೨
ಮುದ್ರಾಮಂಜೂಷ (೧೮೨೩) ದ ಗದ್ಯ ಭಾಷೆ:
ದ್ವಿತೀಯಾಶಯ ಪ್ರಾರಂಭವು.
ಚಂದ್ರಗುಪ್ತ ಬಂಧವಿಮೋಚನೆ.
ಅನಂತರದೊಳ್ ರ್ವಾರ್ಥಸಿದ್ಧಿರಾಜಂ ಕೆಲವು ಕಾಲದ ಮೇಲೆ ಪ್ರವರ್ಧಮಾನನೂ ಪ್ರಿಯಪತ್ನೀಪುತ್ರನೂ ಆದ ಮರ್ಯನಿಗೆ ಸಕಲ ವಿದ್ಯಾಭ್ಯಾಸಮಂ ಮಾಡಿಸಿದ ಮೇಲೆ ಪ್ರಬುದ್ಧನಾಗಿ ವಿನಯಾದಿಗುಣಸಂಪನ್ನನಾದಾತಂಗೆ ಅನೇಕ ಕನ್ಯಾರತ್ನಗಳಂ ಮದುವೆಯಂ ಮಾಡಿಸಿ ಸಿಂಹಾಸನಾರೋಹಣವೊಂದನ್ನುಳಿದು ಇತರ ರ್ವಾಧಿಕಾರಂಗಳ ವಿಚಾರಮಂ ಮಾಡುವಂತೆ ನೇಮಿಸಲು ಆ ಮರ್ಯನು ಪ್ರಜಾನಿಕರಕ್ಕೆ ಸಮ್ಮತವಾಗಿ ವೃದ್ಧ ಮಂತ್ರಿಗಳ ಪುತ್ರರಿಗೆ ಬುದ್ಧಿಯಂ ಪೇಳುತ್ತ ಸರ್ವರಿಗೂ ಯಥಾಯೋಗ್ಯಮಾದ ಅಧಿಕಾರಂಗಳಂ ನೇಮಿಸಿ ಅವರಿಂದ ಆಗುವ ಕರ್ಯನರ್ವಾಹಮಂ ಸಮಯಾನುಸಾರವಾಗಿ ತಿಳಿಯುತ್ತ ಪರಂಪರೆಯಿಂದ ಶೂರರಾಗಿ ಬಂದವರೂ ತನಗೆ ಸಮಾನ ವಯಸ್ಕರೂ ಆದ ಸಿಂಹಬಲ, ಬಾಗುರಾಯಣ, ಭದ್ರಭಟ, ಡಿಂಗಿರಾತ, ಬಲಗುಪ್ತ, ವಿಜಯರ್ಮ, ಲೋಹಿತಾಕ್ಷ, ಪುರುಷದತ್ತರೆಂಬ ಜನಗಳಿಗೆ ಸೇನಾಧಿಪತ್ಯವಂ ನೇಮಿಸಿ ಅವರನ್ನು ಹಗೆಗಳ ಪಾಳೆಯದ ಮೇಲೆ ಕಳುಹಿಸುತ್ತ ಪರ್ವ್ವ ಸಂಚಿತ ಧನವನ್ನಪೇಕ್ಷಿಸದೆ ಪುಷ್ಟರಾದ ಪ್ರಜೆಗಳಿಂದ ಬಹು ಧನಗಳನ್ನರ್ಜಿಸಿ ಅವುಗಳನ್ನು ರಾಜ್ಯ ತಂತ್ರದ ವೆಚ್ಚಕ್ಕೆ ಒದಗಿಸುತ್ತ ತಂದೆಗೆ ಆಯಾಸವಿಲ್ಲದಂತೆ ರಾಜ್ಯವಿಚಾರವಂ ಮಾಡುತ್ತ ನಂದರಂ ಕಂಡರೆ ಸ್ವಾಮಿ ಭಕ್ತಿಯಿಂದ ನಡೆಯುತ್ತ ರಾಕ್ಷಸನಿಗೂ ಸಮ್ಮತನಾಗಿ ಇರಲು ಆ ರಾಯಂ ಕೆಲವು ಕಾಲದ ಮೇಲೆ ಪಟ್ಟಮಹಿಷೀ ಪುತ್ರರಾದ ನವನಂದರು ಪ್ರರ್ಧಮಾನರಾದುದಂ ನೋಡಿ ಅವರನ್ನಮಾತ್ಯರಾಕ್ಷಸನ ವಶವಂ ಮಾಡಲು ಆತನು ಆ ನಂದರಿಗೆ ಸಕಲ ವಿದ್ಯಾಭ್ಯಾಸವಂ ಮಾಡಿಸಿ ವಿವಾಹಕ್ಕೆ ಯೋಗ್ಯವಯಸ್ಕರಾದುದಂ ನೋಡಿ ಅವರವರ ಇಚ್ಛಾನುಸಾರವಾಗಿ ಯಥೋಚಿತ ರಾಜಕುಲ ಕನ್ಯಾರತ್ನಗಳನ್ನು ಮದುವೇ ಮಾಡಿಸಿದನು.
ಆ ಬಳಿಕ ಪ್ರಿಯಪತ್ನಿಪುತ್ರನಾದ ಮರ್ಯನಿಗೆ ತನ್ನ ಬಹು ಪತ್ನಿಯರಲ್ಲಿ ಚಂದ್ರಗುಪ್ತ ಮೊದಲಾದ ನೂರು ಮಂದಿ ಮಕ್ಕಳು ಹುಟ್ಟಿದರು”. (ಮುದ್ರಾಮಂಜೂಷ. ಬರೆದುದು ೧೮೨೩. ಮುದ್ರಣ: ೧೮೭೧. ಸಂಪಾದಕ: ೧೮೭೧ರಲ್ಲಿ ರೆ. ಫಾ. ಜೆ. ಸ್ಟೀವನ್ಸನ್).
ಈ ಕೃತಿಯನ್ನು ವೆಸ್ಲಿಯನ್ ಮಿಷನರಿ ಅರ್ಧ ಶತಮಾನದ ನಂತರ, ಕನ್ನಡ ಗದ್ಯದಲ್ಲಿ ಕೊಮ, ಪೂರ್ಣವಿರಾಮಗಳನ್ನು ಮತ್ತು ಪಾರ ವಿಂಗಡಣೆಗಳನ್ನು ಮಾಡುವ ಪರಿಪಾಠ ಪ್ರಾರಂಭವಾದ ನಂತರ ಸಂಪಾದಿಸಿ – ಬಹುಶಃ ಈ ಕೃತಿಗೂ ಅವುಗಳನ್ನೆಲ್ಲ ಅಳವಡಿಸಿ ವಾಚನೀಯತೆಯನ್ನು ಹೆಚ್ಚಿಸಿ – ಮುದ್ರಿಸಿದ್ದಾನೆ. ಆದುದರಿಂದ ಮೂಲದಲ್ಲಿ ಹೇಗಿತ್ತು ಎನ್ನುವುದನ್ನು ಹಸ್ತಪ್ರತಿ ಪರಿಶೀಲನೆಯ ನಂತರವಷ್ಟೇ ತಿಳಿಯಬಹುದು. ಇಲ್ಲಿ ಪಾರ ವಿಂಗಡಣೆ, ಹಲವು ಹೆಸರುಗಳು ಬಂದಾಗ ಪ್ರತಿಯೊಂದು ಹೆಸರಿನ ನಂತರ ಕೊಮ ಹಾಕುವ ಪದ್ಧತಿ ಕನ್ನಡದಲ್ಲಿ ಇರಲಿಲ್ಲ ಎನ್ನುವುದಕ್ಕೆ ಎರಡೇ ವರ್ಷಗಳ ಹಿಂದೆ ಅದೇ ಆಸ್ಥಾನದಲ್ಲಿ ರಚಿತವಾದ ‘ಸೌಗಂಧಿಕಾ ಪರಿಣಯ’ ಕೃತಿಯೇ ಸಾಕ್ಷಿಯಾಗಿದೆ.
ಟಿಪ್ಪಣಿ – ೩
ಮಿಷನರಿ ಪಠ್ಯ ಪುಸ್ತಕಗಳಲ್ಲಿ ಕೊಮ, ಉದ್ಧರಣ
ಚಿಹ್ನೆಗಳು ಮತ್ತು ಪೂರ್ಣ ವಿರಾಮಗಳ ಬಳಕೆಗೆ ಒಂದು ಉದಾಹರಣೆ:
ಅಡಕ್ಕಿ ಸುಬ್ಬರಾಯ ಎಂಬವರಿಂದ ಮಿಷನರಿ ಶಿಕ್ಷಣತಜ್ಞರು ‘Selection of Stories’ (೧೮೪೬) ಎಂಬ ಪುಸ್ತಕವನ್ನು ಪೂರಕ ಪಠ್ಯವಾಗಿ ಬರೆಯಿಸಿದರು. ಕನ್ನಡ ವಾಕ್ಯರಚನೆ ಮತ್ತು ಮಾತಿನ ಸರಣಿಗಳನ್ನು ರೂಢಿಸಿ ಕೊಳ್ಳುವ ದೃಷ್ಟಿಯಿಂದ ಪೋರ್ಟ್ ಸೇಂಟ್ ಜಾರ್ಜ್ ಕಾಲೇಜಿನವರಿಗಾಗಿ ಈ ಗ್ರಂಥವನ್ನು ರಚಿಸಿದ್ದಾಗಿತ್ತು. ಇದನ್ನು ಮಿಷನರಿ ವಿದ್ವಾಂಸ ಎಲಿಯಟ್ ಎಂಬವರು ಪರಿಷ್ಕರಿಸಿದ್ದಾರೆ. ಹಾವನೂರರು ಕೊಟ್ಟಿರುವ ಈ ಪುಸ್ತಕದ ಕತೆಗಳಲ್ಲಿರುವ ಗದ್ಯದ ಮಾದರಿ ಹೀಗಿದೆ: “ಒಬ್ಬ ಅರಸು ಒಬ್ಬ ಋಷಿಯನ್ನು ಕಂಡು, “ನೀನು ಯಾವಾಗಾದರೂ ಅ ನನ್ನ ನೆನಸುವದು ಉಂಟೊ” ಎಂತ ಕೇಳಿದನು. “ಹವುದಪ್ಪ, ನಾನು ದೇವರನ್ನು ಮರೆತಾಗ ನಿನ್ನ ನೆನಸುತ್ತೇನೆ” ಎಂತ ಋಷಿ ಉತ್ತರ ಕೊಟ್ಟನು.
೨. ಒಂದು ಹದ್ದೂ ಒಂದು ಕಾಗಿಯೂ ಸುಡುಗಾಡಿನಲ್ಲಿ ವೊಂದು ಮರದ ಮೇಲೆ ಕೂತುಕೊಂಡು ಮಾತನಾಡುತ್ತಾ ಯಿರುವಾಗ ಆ ಹದ್ದು ಕಾಗಿಯಂನು ನೋಡಿ ಇಲ್ಲಿಗೆ ಮನುಷ್ಯರ ಹೆಣಗಳು ಆ ವೂರಿಂದ ಮುಂಚಿನ ಹಾಂಗೆ ಹೇರಾಳವಾಗಿ ಯಾತಕ್ಕೆ ಬರುವುದಿಲ್ಲ” ಎಂದು ಕೇಳಿತು. “ಈ ವೂರಲ್ಲಿ ಇದ್ದ ವೈದ್ಯನು ಕೆಲವು ದಿವಸಕ್ಕೆ ಮುಂಚೆ ದೂರ ದೇಶಕ್ಕೆ ಹೊರಟುಹೋದನು. ಆ ಅವನು ತಿರಿಗೀ ಬಂದರೆ ಹೆಣಗಳಿಗೆ ಕಡಮೆಯಿರದು” ಯೆಂಬುದಾಗಿ ಕಾಗಿ ಉತ್ತರಾ ಕೊಟ್ಟಿತು.
ಟಿಪ್ಪಣಿ – ೪
ಈರಾರು ಪತ್ರಿಕೆಯ ಗದ್ಯ ಶೈಲಿಗೆ ಉದಾಹರಣೆ:
ಪತ್ರಿಕೆ: ೭ ಶ್ರೀ ರಾಜಮಾನ್ಯರಾಜಶ್ರೀ ದೇವಪುರದಲ್ಲಿರುವ ಭಾವ ಆನಂದಯ್ಯನವರ ಪಾದಕ್ಕೆ
ಕೃಷ್ಣಾಪುರದ ನಿಮ್ಮ ರಾಮಚಂದ್ರಯ್ಯನು ಮಾಡುವ ಸಾಷ್ಟಾಂಗ ಬಿನ್ನಹ. ಅದಾಗಿ, ಈ ಸಾಧಾರಣ ಸಂವತ್ಸರದ ಶ್ರಾವಣ ಶುದ್ಧ ೧೪ ಆದಿತ್ಯವಾರ ರಾತ್ರಿ ನಾಲ್ಕುಗಳಿಗೆವರೆಗೆ ಇಲ್ಲಿ ಎಲ್ಲರೂ ಜೀವಂತರಾಗಿದ್ದಾರೆ. ನಿಮ್ಮ ಯೋಗಕ್ಷೇಮವನ್ನು ಆಗಾಗ್ಗೆ ಬರದು ಕಳುಹಿಸುವಂತೆ ಮಾಡಿಸಬೇಕು. ಸಾಂಪ್ರತ,
ಈ ದಿವಸದ ಬೆಳಿಗ್ಯೆ ನಾನು ಬರದ ಕಾಗದವನ್ನು ಟಪ್ಪಾಲಿಗೆ ಕೊಟ್ಟ ಮೇಲೆ, ನೀವು ಗುರುವಾರ ದಿವಸ ಬರದ ಕಾಗದ ಬಂದು ಮುಟ್ಟಿತು. ಆ ಕಾಗದದ ಅಭಿಪ್ರಾಯಕ್ಕೆ ಉತ್ತರವಾಗಿ ಬಹಳ ವಿವರಿಸುವದಕ್ಕೆ ಕಾರಣವಿಲ್ಲ. ಈಗ ನಿಮಗೆ ಮನಸ್ಸು ಬಂದ ಹಾಗೆ ಅತ್ಯಾಸಕ್ತಿಯಿಂದ ಬರಿಯುತ್ತೀರಿ. ಇದರ ವಿಷಯ ನಾನು ತರ್ಕಿಸಿದರೆ, ಒಂದಕ್ಕೊಂದು ಹೆಚ್ಚುವದೇ ಹೊರ್ತು ಕಡಿಮೆಯಾಗದು. ನಾವಿಬ್ಬರೂ ಬಾಲ್ಯದಲ್ಲಿ ಕೃಷ್ಣನನ್ನು ನಂಬಿ, ದೇವಸ್ಥಾನದಲ್ಲಿರುವ ಕರಿ ಶಿಲೆಯಲ್ಲಿ ಜೀವ ಉಂಟೆಂದು ವಿಶ್ವಾಸಿಸಿ, ಕೃಷ್ಣನ ಕಥೆಗಳೆಲ್ಲಾ ಸತ್ಯವೆಂದು ನಿಶ್ಚಯಿಸಿ, ಬಣಜಿಗ ಹುಡುಗರ ಸಂಗಡ ಜಗಳವಾಡಿದೆವಲ್ಲ? ಮತ್ತೆ ಬುದ್ಧಿ ಬಂದ ಮೇಲೆ, ಅದೆಲ್ಲಾ ಸುಳ್ಳೆಂದು ತಿಳಿದುಕೊಂಡೆವಲ್ಲ? ಅದೇ ಪ್ರಕಾರ ಈಗ ನಿಮಗೆ ಹೊಸ ಬಾಲ್ಯವು ಬಂದದೆ. ಅದರಿಂದ ಕೃಷ್ಣನನ್ನು ಬಿಟ್ಟು, ಕ್ರಿಸ್ತನನ್ನು ನಂಬುತ್ತೀರಿ. ಈ ವಿಷಯವಾದ ತರ್ಕಕ್ಕೋಸ್ಕರ ಈ ಕಾಗದವನ್ನು ನಾನು ಬರೆಯುವವನಲ್ಲ. ಈ ಸಾಯಂಕಾಲದಲ್ಲಿ ಇಲ್ಲಿ ನಡದ ವರ್ತಮಾನವನ್ನು ತಿಳಿಸುವದಕ್ಕೆ ಬರೆಯುತ್ತೇನೆ.
ನಾನು ಈ ದಿವಸ ೪ ಗಂಟೆ ವೇಳೆಯಲ್ಲಿ ವಿದ್ವಾಂಸ ವೆಂಕಟಾಚಾರ್ಯರ ಮನೆಗೆ ಈ ಸಂಗತಿಯ ವಿಷಯ ಮಾತಾಡುವದಕ್ಕಾಗಿ ಹೋಗಿ, ಮಾತನಾಡಿ ಮನಹ ಮನೆಗೆ ಬರುತ್ತಾ ಇರುವಲ್ಲಿ, ಇಸ್ಕೂಲ್ ಮೇಸ್ತ್ರೀರು ನನ್ನನ್ನು ಮನೆಗೆ ಕರದರು. ನಾನು ಮನೆಯೊಳಗೆ ಹೋದಾಗ, ಅವರು ಸ್ವಲ್ಪ ಸಾರಾಯ ಉಳಿದಿರುವ ಸೀಸೆ ಇಟ್ಟು ಇದ್ದ ಮೇಜಿನ ಬಳಿಯ ಕುಳಿತುಕೊಂಡಿದ್ದರು. ಅವರ ಮುಖವು ಒಂದು ಪ್ರಕಾರ ಕಾಣಿಸುತ್ತಾ ಇತ್ತು. ನನ್ನನ್ನು ಕೂತುಕೋ ಎಂದು ಹೇಳಿ – ಆನಂದಯ್ಯನ ವರ್ತಮಾನವು ನನಗೆ ತಿಳಿದದೆ. ನಿಮಗೆ ಬಂದ ದುಃಖದ ಸಲವಾಗಿ ನನಗೂ ವ್ಯಸನ ಅದೆ. ಅವನಿಗೆ ಈ ಭ್ರಮೆ ಹಿಡಿದದ್ದಕ್ಕೆ ನಾನು ಬಹಳ ಆಶ್ಚರ್ಯವಾಗುತ್ತೇನೆಂದು ತೇಕುತ್ತಾ ಹೇಳಿದರು. ನಾನು ಹೌದು, ನಮಗೆ ಬಹಳ ಚಿಂತೆ ಬಂತೆಂದು ಹೇಳಲು, ಅವರು – ನಿಮ್ಮ ಭಾವನು ದುಷ್ಟನೆಂದು ಬಹಳ ದಿವಸದಿಂದ ನಾನು ತಿಳಿದಿದ್ದೇನೆ. ೧ ಅವನು ಬಹಳ ಗರ್ವಿಷ್ಠನು; ಸಾಲೆಯಲ್ಲಿ ತರ್ಕಿಸುತ್ತಿದ್ದನು. ನಾನು ಹೇಳಿದ ಜ್ಞಾನೋಪದೇಶದಲ್ಲಿ ಅವನಿಗೆ ರುಚಿ ಹುಟ್ಟಲಿಲ್ಲ; ಹುಟ್ಟಿದರೆ ಇಂಥಾ ಮೂರ್ಖ ಕೆಲಸ ಮಾಡುತ್ತಿದ್ದಿಲ್ಲ. ಜ್ಞಾನವಿಲ್ಲದವರಲ್ಲಿ ನಂಬಿಕೆ ಹುಟ್ಟುವುದು ವಾಡಿಕೆ; ಜ್ಞಾನವಂತನಿಗೆ ತಿಳುವಿಕೆಯೇ ಮುಖ್ಯ. ನಾನು ಕ್ರೈಸ್ತಮತದವನಲ್ಲವೋ? ವಿದ್ವಾಂಸರು ಬರದ ಪುಸ್ತಕಗಳನ್ನೆಲ್ಲ ನಾನು ಓದಿರಲಿಲ್ಲವೋ? ಬೈಬಲಿನಲ್ಲಿರುವ ಜ್ಞಾನದ ಮಾತುಗಳೆಲ್ಲಾ ಒಳ್ಳೇದು; ಉಳಿದ ಆಶ್ಚರ್ಯವೆಲ್ಲಾ ಬರೀ ಸಿಪ್ಪೆ. ದೇವರಿಗೆ ಪಕ್ಷ ಪರಪಕ್ಷಗಳಿಲ್ಲ. ಹಿಂದೂ ಮನುಷ್ಯನಾಗಲಿ, ಮುಸಲ್ಮಾನನಾಗಲಿ, ಕ್ರೈಸ್ತನಾಗಲಿ, ನೀತಿವಂತನೇ ದೇವರಿಗೆ ಹಿತನು. ಎಲ್ಲಾ ಮತಗಳಲ್ಲಿಯೂ ಬಹಿರಂಗದ ಆಚರಣೆಗಳೂ ಸುಳ್ಳು ನಂಬಿಕೆಗಳೂ ಪ್ರಬಲವಾಗಿವೆ. ಸಜ್ಜನರಾದ ಜ್ಞಾನಿಗಳಿಗೆಲ್ಲಾ ಒಂದೇ ಮಾರ್ಗವು. ಒಂದು ಮತವನ್ನು ಬಿಟ್ಟು ಮತ್ತೊಂದು ಮತದಲ್ಲಿ ಸೇರುವುದು ಯಾಕೆ? ಹನಿಗೆ ಹೆದರಿ ಹೊಳೆಯಲ್ಲಿ, ಚಳಿ ತಾಳಲಾರದೆ ಉರಿಯಲ್ಲಿ ಬೀಳಬೇಕೋ? ‘ನಿಮ್ಮ ಆನಂದಯ್ಯನಿಗೆ – ನನ್ನ ಹತ್ತರ ಬಂದು, ನನ್ನಿಂದ ಉಪದೇಶ ತೆಗದುಕೊಳ್ಳಬೇಕೆಂದು ಹೇಳಿರಿ’ ಎಂದು ಸೀಸೆಯಲ್ಲಿ ಉಳಿದಿದ್ದ ಸಾರಾಯವನ್ನು ಪಾನಪಾತ್ರದಲ್ಲಿ ಹೊಯಿದು ಒಂದೇ ಗುಟುಕಾಗಿ ಕುಡಿದುಬಿಟ್ಟರು. ಅಷ್ಟರಲ್ಲಿ ನಮ್ಮ ಮನೇ ಆಳು ತಿಪ್ಪನು ಬಂದು ನಿಮ್ಮನ್ನು – ಕರೆಯಲಿಕ್ಕೆ ದೊರೆಯವರ ಕಡೆಯಿಂದ ಪ್ಯಾದೆ ಬಂದಿದ್ದಾನೆಂದು ಹೇಳಿದನು. ಆಗ ನಾನು ಅಲ್ಲಿಂದ ಹೊರಟು ದೊರೆಯವರ ಬಳಿಗೆ ಹೋದೆನು. ಅವರು ಅಸ್ತಮಾನಕಾಲದಲ್ಲಿ ಕೈಸಾಲೆಯಲ್ಲಿ ನಡೆದಾಡುತ್ತಿದ್ದರು. ನಾನು ಸಲಾಂ ಮಾಡಿದಾಗ, ಹತ್ತಿರ ಇದ್ದ ಚಾಕರರನ್ನು ದೂರ ಹೋಗಿರಿ ಎಂದು ಇಷಾರೆ ಮಾಡಿ, ನನ್ನನ್ನು ಹತ್ತಿರ ಕರೆದು – ಈ ವರ್ತಮಾನವೇನು? ಆನಂದಯ್ಯನ ವಿದ್ಯಮಾನ ಏನು? ನಿಜವಾಗಿ ಎಲ್ಲಾ ಹೇಳೆಂದು ಅಪ್ಪಣೆ ಕೊಟ್ಟರು….” (ಈರಾರು ಪತ್ರಿಕೆ, ೧೮೪೮)
ಟಿಪ್ಪಣಿ – ೫
೧. “ಬೈಬಲಿನ ಕನ್ನಡ ಗದ್ಯರೂಪವು ಕನ್ನಡ ಭಾಷಾ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆಯೆನ್ನುವುದರಲ್ಲಿ ಸಂದೇಹವಿಲ್ಲ. ಮುಂದಿನ ಗದ್ಯ ರಚನೆಯ ಮೇಲೆ ಪ್ರಭಾವವನ್ನು ಬೀರುವ ಒಂದು ಅವಕಾಶವೂ ಒದಗಿ ಬಂದಿದ್ದಿತು. ಆದರೆ ಅದರ ಜೊತೆಗೇ, ಕನ್ನಡ ಪುರಾಣ ಕಥನಗಳ ಗದ್ಯವು ಕಳೆದ ಶತಮಾನದಲ್ಲಿ ಬೆಳೆದು ಬಂದಿತು. ಮತ್ತು ದೇಶೀಯರ ಸಾಹಿತ್ಯಿಕ ಕಾರ್ಯವು ಮುಂದುವರಿದು ಸಂಸ್ಕೃತದ ಹೆಚ್ಚಳವಿರುವ ಗದ್ಯ ಶೈಲಿಯು ರೂಪುಗೊಂಡು ಅದರದೇ ಮೇಲುಗೈಯಾಯಿತು. ಆ ವಿಕಾಸ ಕ್ರಮದಲ್ಲಿ ಬೈಬಲ್ ಗದ್ಯದ ಪ್ರಭಾವವು ಕನ್ನಡ ಗದ್ಯದ ಮೇಲೆ ಸ್ವಲ್ಪ ಮಟ್ಟಿಗೆ ಮಾತ್ರವೆ ತೋರಿಬಂದಿತು” – ಡಾ. ಶ್ರೀನಿವಾಸ ಹಾವನೂರ, ೧೯೭೪.
೨.“ಆದರೆ ಹತ್ತೊಂಬತ್ತನೆಯ ಶತಮಾನದಲ್ಲಿ ರೂಪುಗೊಂಡ ಪುರಾಣ ಪುರಾಣಕಥನ ರೂಪದ ಆಲಂಕಾರಿಕ ಕನ್ನಡ ಗದ್ಯದ ಮೇಲೆ ಬೈಬಲ್ ಗದ್ಯ ಅಷ್ಟಾದ ಪರಿಣಾಮ ಬೀರಲಿಲ್ಲ.” – ಎ.ವಿ. ನಾವಡ, ೨೦೧೭).