ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ೧೯೬೨ರಲ್ಲಿ ಪ್ರಾರಂಭವಾದಾಗಿನಿಂದ ಗಮನಾರ್ಹವಾಗಿ ವಿಕಸನಗೊಂಡಿದೆ. ಇದರ ನೇತೃತ್ವ ವಹಿಸಿರುವ ‘ಇಸ್ರೋ’ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪರಿಶೋಧನೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದೆ. ಸಂಸ್ಥೆಯ ತಾಂತ್ರಿಕ ಕಾರ್ಯಕ್ರಮಗಳಾದ ಉಪಗ್ರಹಗಳ ಉಡಾವಣೆ ಮತ್ತು ಇತರ ಗ್ರಹಗಳ ಅನ್ವೇಷಣೆಯಲ್ಲಿ ಭಾರತವನ್ನು ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನದ ಪಥದಲ್ಲಿ ಮುಖ್ಯ ಸ್ಥಾನದಲ್ಲಿರಿಸಿದೆ. ಭಾರತದ ಬಾಹ್ಯಾಕಾಶ ಯೋಜನೆ ಮತ್ತು ಕಾರ್ಯಕ್ರಮವು ನಿಸ್ಸಂದೇಹವಾಗಿ ಪ್ರಗತಿಯತ್ತ ಸಾಗಿದ್ದು ಅದರ ಸಾಧನೆಗಳು ದೇಶದ ಆರ್ಥಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸುತ್ತಿವೆ.
ಬಾಹ್ಯಾಕಾಶ ತಂತ್ರಜ್ಞಾನವು ನಿರಂತರ ಪ್ರಯೋಗ, ಹೊಸ ಅನ್ವೇಷಣೆ ಮತ್ತು ಆವಿಷ್ಕಾರಗಳ ಮೂಲಕ ಮನುಕುಲದ ಸಮಸ್ಯೆಗಳ ಪರಿಹಾರ ಮತ್ತು ಮಾನವಕಲ್ಯಾಣದ ಗುರಿಯನ್ನು ಹೊಂದಿದೆ ಎನ್ನುವುದು ಅನುಭವವೇದ್ಯ. ನಮ್ಮ ನಿತ್ಯಜೀವನದಲ್ಲಿ ತಂತ್ರಜ್ಞಾನ ವಹಿಸುತ್ತಿರುವ ಪಾತ್ರ ಅನೇಕಮುಖವಾಗಿವೆ. ಮನುಷ್ಯನಿಗೆ ಬೇಕಿರುವ ಸುದ್ದಿ, ಸಂವಹನ, ಬೌದ್ಧಿಕಜ್ಞಾನ, ಮನರಂಜನೆ ಇತ್ಯಾದಿಗಳು ವಿಜ್ಞಾನದ ಆವಿಷ್ಕಾರಗಳ ಮೂಲಕ ಹೊಸ ಹೊಸ ರೂಪದಲ್ಲಿ ಒದಗುತ್ತಿವೆ. ಮಾನವನಿರ್ಮಿತ ಕೃತಕ ಉಪಗ್ರಹಗಳ ಸಹಾಯದಿಂದ ತಂತ್ರಜ್ಞಾನದ ಬಹುತೇಕ ಆವಿಷ್ಕಾರಗಳು ಸುಲಭದಲ್ಲಿ ಇಂದು ಮನುಷ್ಯನ ಅಗತ್ಯಗಳನ್ನು ಪೂರೈಸುತ್ತಿವೆ. ಆಕಾಶವಾಣಿ-ದೂರದರ್ಶನ ಪ್ರಸಾರಗಳು, ಅಂತರ್ಜಾಲ, ಇ-ಮೇಲ್, ಮೊಬೈಲ್ಗಳ ಸಂಪರ್ಕ, ‘ಜಿಪಿಎಸ್’ (ಜಾಗತಿಕ ಸ್ಥಾನ ಗುರುತಿಸುವಿಕೆ ವ್ಯವಸ್ಥೆ), ಬಾಹ್ಯಾಕಾಶ ಯಾನ, ಹವಾಮಾನ ಮುನ್ಸೂಚನೆ, ಭೂ ಅನ್ವೇಷಣೆ ಮತ್ತು ಅಧ್ಯಯನ, ಕೃಷಿ ಮತ್ತು ರಕ್ಷಣೆ, ಮಿಲಿಟರಿ ಮತ್ತು ಬೇಹುಗಾರಿಕೆ ಮುಂತಾದವುಗಳ ನಿರ್ವಹಣೆಯಲ್ಲಿ ಬಾಹ್ಯಾಕಾಶ ವಿಜ್ಞಾನದ ಉಪಯೋಗಗಳು ಬಹುಪ್ರಾಮುಖ್ಯದವೆನಿಸಿವೆ. ಸುಧಾರಿತ ಸೌರಫಲಕಗಳು, ಹೃದಯಚಿಕಿತ್ಸಾ ಉಪಕರಣಗಳು, ಕ್ಯಾನ್ಸರ್ ಚಿಕಿತ್ಸೆ, ತಂತಿರಹಿತ ಉಪಕರಣಗಳ ಮೂಲಕ ಸಂವಹನ, ಹಗುರ-ಅಧಿಕ ತಾಪಮಾನ ಮಿಶ್ರಲೋಹಗಳು, ನೀರಿನ ಶುದ್ಧೀಕರಣ ವ್ಯವಸ್ಥೆಗಳು, ಜೈವಿಕ ವೈದ್ಯಕೀಯ ತಂತ್ರಜ್ಞಾನ ಮುಂತಾದವು ಬಾಹ್ಯಾಕಾಶಜ್ಞಾನದಿಂದ ಮಾನವಜನಾಂಗಕ್ಕೆ ಒದಗುತ್ತಿರುವ ಉಪಯೋಗಗಳೇ ಆಗಿವೆ.
ಬಾಹ್ಯಾಕಾಶ ವಿಜ್ಞಾನದ ಸಂಕ್ಷಿಪ್ತ ಇತಿಹಾಸ
ಹನ್ನೊಂದನೆಯ ಶತಮಾನದ ಸಮಯದಲ್ಲಿ ಚೀನೀಯರು ರಾಕೆಟ್ ಅಭಿವೃದ್ಧಿಪಡಿಸಿದರು. ಅನಂತರದಲ್ಲಿ ಅದು ಹೊಸ ಆಕ್ರಮಣದ ತಂತ್ರವಾಗಿ ಯುದ್ಧಗಳಲ್ಲಿ ಬಳಕೆಯಾಗತೊಡಗಿತು. ಗನ್-ಪೌಡರ್ ದ್ರಾವಣವನ್ನು ಸುಧಾರಿಸುವವರೆಗೂ ರಾಕೆಟ್ಗಳಿಗೆ ಪ್ರೊಪಲ್ಷನ್ (ಮುಂತಳ್ಳುವ ಸಾಧನ) ಇರಲಿಲ್ಲ. ಮುಂದೆ ಯೂರೋಪ್ ಮತ್ತು ಏಷ್ಯಾ ದೇಶಗಳಲ್ಲಿ ರಾಕೆಟ್ ಆವಿಷ್ಕಾರದ ಕಾರ್ಯ ಪ್ರಾಮುಖ್ಯ ಪಡೆದು ಯುದ್ಧಗಳಲ್ಲಿ ಬಳಸಲಾಯಿತು. ೧೭ನೇ ಶತಮಾನದ ವೈಜ್ಞಾನಿಕ ಕ್ರಾಂತಿಯವರೆಗೂ ರಾಕೆಟ್ ತಂತ್ರವು ವಿಜ್ಞಾನದ ಭಾಗವೆನಿಸಿರಲಿಲ್ಲ ಎನ್ನುವುದು ನಿಜಕ್ಕೂ ಕುತೂಹಲಕಾರಿಯೇ.
ರಾಕೆಟ್ ವಿಕಸನವು ಆಧುನಿಕ ಬಾಹ್ಯಾಕಾಶ ನೌಕೆಯಾಗಿ ಅಭಿವೃದ್ಧಿ ಹೊಂದುತ್ತಿದ್ದಂತೆ, ಅನೇಕ ದೇಶಗಳು ಗಗನಯಾತ್ರೆಯತ್ತ ಗಮನಹರಿಸಿದವು. ೧೯೫೭ರಲ್ಲಿ ಸೋವಿಯತ್ ಒಕ್ಕೂಟವು ‘ಸ್ಪುಟ್ನಿಕ್’ ಹೆಸರಿನ ಮೊದಲ ಭೂ ಕಕ್ಷೆಯ ಕೃತಕ ಉಪಗ್ರಹವನ್ನು ಉಡಾಯಿಸಿತು. ೧೯೫೮ರಲ್ಲಿ ಅಮೆರಿಕ ದೇಶವು ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಸಂಸ್ಥೆಯನ್ನು ನಾಸಾ (NASA) ಎಂದೂ ಕರೆಯಲಾಗುತ್ತದೆ.
‘ಸ್ಪುಟ್ನಿಕ್’ ಉಡಾವಣೆಯ ಅನಂತರದ ವರ್ಷಗಳಲ್ಲಿ ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ದೇಶಗಳು ಉಪಗ್ರಹಗಳ ಬಳಕೆಯಲ್ಲಿ ಅನೇಕ ಸುಧಾರಣೆಗಳನ್ನು ತಂದವು. ಮಾನವರಹಿತ ಬಾಹ್ಯಾಕಾಶ ಓಟದಲ್ಲಿ ಸೋವಿಯತ್ ದೇಶವು ಅಮೆರಿಕಗಿಂತಲೂ ಮುಂದುವರಿಯಿತು. ೧೯೬೧ರಲ್ಲಿ ಅದು ಮೊದಲಬಾರಿಗೆ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಯೂರಿ ಗಗಾರಿನ್ ಬಾಹ್ಯಾಕಾಶದಲ್ಲಿ ಭೂಮಿಯ ಸುತ್ತ ಸುತ್ತಿದ ಮೊದಲ ಮಾನವನೆನಿಸಿದನು. ಸೋವಿಯತ್ ಒಕ್ಕೂಟವು ಮೊದಲ ಬಾಹ್ಯಾಕಾಶ ನಿಲ್ದಾಣವನ್ನೂ ಪ್ರಾರಂಭಿಸಿತು.
೧೯೬೯ರಲ್ಲಿ ಅಮೆರಿಕ ದೇಶವು ಅಪೊಲೊ-೧೧ ಅನ್ನು ಉಡಾಯಿಸಿತು. ಬಾಹ್ಯಾಕಾಶ ನೌಕೆಯು ಮೂರು ಜನರನ್ನು ಚಂದ್ರನ ಮೇಲೆ ಇಳಿಸಿ ಸಾಧನೆ ಮಾಡಿತು. ಇದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿಯ ಮುಖ್ಯ ಘಟ್ಟವೆನಿಸಿತು. ೧೯೬೫ರಲ್ಲಿ ಅಮೆರಿಕ ದೇಶವು ಬಾಹ್ಯಾಕಾಶದಲ್ಲಿ ಮಾನವ ಸಾರಿಗೆ ವ್ಯವಸ್ಥೆಯ ಯೋಜನೆಗೆ ನಾಂದಿ ಹಾಡಿತು. ಇದರಲ್ಲಿ ನಿಲ್ದಾಣ ಮತ್ತು ಮರುಬಳಕೆ ಮಾಡಬಹುದಾದ ಭಾಗಗಳು ಸೇರಿವೆ. ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಯು ತನ್ನ ಮೊದಲ ಹಾರಾಟವನ್ನು ೧೯೮೧ರಲ್ಲಿ ಮಾಡಿತು.
ಇತ್ತೀಚಿನ ವರ್ಷಗಳಲ್ಲಿ ಹೊಸ ತಂತ್ರಜ್ಞಾನ ಮತ್ತು ಪರಿಶೋಧನೆಗಳ ಮೂಲಕ ಬಾಹ್ಯಾಕಾಶ ವಿಜ್ಞಾನದ ಅಂಗಳದಲ್ಲಿ ಅಸಾಧಾರಣ ಕ್ಷಮತೆ ಕಾಣಬಹುದಾಗಿದೆ. ವಿಶ್ವದ ಅನೇಕ ದೇಶಗಳು ಬಾಹ್ಯಾಕಾಶ ಪರಿಶೋಧನೆ, ಉಡಾವಣೆ ಮತ್ತು ಅಧ್ಯಯನಕ್ಕಾಗಿ ಬಾಹ್ಯಾಕಾಶ ಕೇಂದ್ರಗಳನ್ನು ರಚಿಸುವತ್ತ ಹೆಚ್ಚು ಗಮನಹರಿಸಲಾರಂಭಿಸಿವೆ. ಅಮೆರಿಕ ದೇಶವು ‘ಕೆನಡಿ ಬಾಹ್ಯಾಕಾಶ ಕೇಂದ್ರ’ ಸ್ಥಾಪಿಸಿ ಅನೇಕ ಸಾಧನೆಯ ಮೈಲಿಗಲ್ಲುಗಳನ್ನು ಸಾಧಿಸಿದೆ. ೨೦೦೦ದ ದಶಕದಲ್ಲಿ ಅದು ೧೦೦ ನೌಕೆಗಳನ್ನು ಉಡಾವಣೆ ಮಾಡಿದ ಸಾಧನೆ ಮಾಡಿದೆ.
ಇತರ ಗ್ರಹಗಳಲ್ಲಿ ಸಂಭವನೀಯ ಜೀವನದ ಅನ್ವೇಷಣೆಗೆ ರಾಕೆಟ್ ತಂತ್ರಜ್ಞಾನ ಆವಶ್ಯಕವೆನಿಸಿದೆ. ನಮ್ಮ ಭೂಮಿಯ ಆಚೆಗೆ ಏನಿದೆ ಎಂಬುದರ ಕುರಿತು ಅಧ್ಯಯನ, ಸೌರವ್ಯೂಹ ಮತ್ತು ಭೂಮಿಯ ಬಗೆಗೆ ಹೊಸ ವಿಷಯಗಳ ಅನ್ವೇಷಣೆ ಇಂದಿನ ಅಗತ್ಯಗಳೂ ಹೌದು. ಇದರಲ್ಲಿ ರಾಕೆಟ್ ನಿರ್ಣಾಯಕ ಅಂಶವಾಗಿದೆ.
ಬಾಹ್ಯಾಕಾಶ ವಿಕಸನದ ಮುಂದಿನ ಮಹತ್ತ್ವದ ಗುರಿ ಬಾಹ್ಯಾಕಾಶಕ್ಕೆ ವಾಣಿಜ್ಯ ವಿಮಾನಗಳ ಉಡ್ಡಯನ. ಬಾಹ್ಯಾಕಾಶ ಪ್ರವಾಸೋದ್ಯಮವು ಆರ್ಥಿಕ ಅಭಿವೃದ್ಧಿಯ ಅವಕಾಶಗಳ ಬಾಗಿಲು ತೆರೆಯುವ ಹಂತದಲ್ಲಿದ್ದು ಮುಂದಿನ ವರ್ಷಗಳಲ್ಲಿ ಅನೇಕ ದೇಶಗಳ ಸ್ಪರ್ಧೆ ಇದ್ದು, ಭಾರತವೂ ಆ ನಿಟ್ಟಿನಲ್ಲಿ ದಾಪುಗಾಲಿಡುವುದರಲ್ಲಿ ಸಂಶಯವಿಲ್ಲ.
‘ಇಸ್ರೋ’ ಸಂಸ್ಥೆಯ ಸ್ಥಾಪನೆ
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವು ೧೯೬೨ರಲ್ಲಿ ಪ್ರಾರಂಭವಾಯಿತು. ೧೯೬೯ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯನ್ನು ಪ್ರಾರಂಭಿಸಲಾಯಿತು. ಬಾಹ್ಯಾಕಾಶ ತಂತ್ರಜ್ಞಾನದ ತ್ವರಿತ ಅಭಿವೃದ್ಧಿಯ ಗುರಿ ಸಾಧನೆಗಾಗಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಸ್ಥಾಪಿಸಲಾಯಿತು. ೧೯೬೨ರಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ರಾಷ್ಟ್ರೀಯ ಸಮಿತಿ (INCOSPAR) ರಚಿಸಲಾಯಿತು. ತಿರುವನಂತಪುರಂ ಬಳಿಯ ತುಂಬಾದಲ್ಲಿ ರಾಕೆಟ್ಗಳನ್ನು ಉಡಾವಣೆ ಮಾಡಲು ಬಳಸುವ ಬಾಹ್ಯಾಕಾಶ ನಿಲ್ದಾಣ ‘ಈಕ್ವಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಷನ್’ (TERLS)ಅನ್ನು ಪ್ರಾರಂಭಿಸಲಾಯಿತು. ೧೯೭೨ರಲ್ಲಿ ಬಾಹ್ಯಾಕಾಶ ಆಯೋಗವನ್ನು ಸ್ಥಾಪಿಸಲಾಯಿತು.
ಬಾಹ್ಯಾಕಾಶದ ಉಡಾವಣಾ ವಾಹನಗಳ ವಿನ್ಯಾಸ ಮತ್ತು ಅಭಿವೃದ್ಧಿ, ಉಪಗ್ರಹಗಳು ಮತ್ತು ಬಾಹ್ಯಾಕಾಶ ಪ್ರವೇಶ ಸಂಬAಧಿತ ವಿಷಯಗಳಲ್ಲಿ ಅಗತ್ಯವಾದ ತಂತ್ರಜ್ಞಾನಗಳ ಅಭಿವೃದ್ಧಿ, ಆಕಾಶಯಾನ, ಭೂ ವೀಕ್ಷಣೆ, ಭೌಗೋಳಿಕ ಮಾಹಿತಿ, ಸಂವಹನ, ಹವಾಮಾನ ಮುನ್ಸೂಚನೆ, ದೂರಸಂಪರ್ಕ ಸಂವಹನ ಕಾರ್ಯಕ್ರಮ, ಟೆಲಿವಿಷನ್ ಪ್ರಸಾರ, ಗ್ರಹಗಳ ಸಂಶೋಧನೆ ಮತ್ತು ಅನ್ವೇಷಣೆಗಳು ‘ಇಸ್ರೋ’ವಿನ ಕಾರ್ಯಕ್ಷೇತ್ರಗಳಾಗಿವೆ.
‘ಇಸ್ರೋ’ ಸಂಸ್ಥೆಯು ಆರಂಭದಲ್ಲಿ ಅಮೆರಿಕ, ಫ್ರಾನ್ಸ್ ಮತ್ತು ಸೋವಿಯತ್ ಒಕ್ಕೂಟ ದೇಶಗಳ ಸಹಾಯದಿಂದ ತನ್ನ ಕಾರ್ಯನಿರ್ವಹಿಸಿತು.
ಉಪಗ್ರಹ ಸೂಚನಾ ದೂರದರ್ಶನ ಪ್ರಯೋಗ (SITE) ಭಾರತದ ಮೊದಲ ಪ್ರಮುಖ ಉಪಗ್ರಹ-ಆಧಾರಿತ ದೂರಸಂಪರ್ಕ ಪ್ರಯೋಗವಾಗಿದ್ದು, ಇದು ೧೯೭೫ರಲ್ಲಿ ಪ್ರಾರಂಭವಾಯಿತು. ಅದೇ ವರ್ಷ ಸಂಸ್ಥೆಯು ತನ್ನ ಮೊದಲ ಬಾಹ್ಯಾಕಾಶ ನೌಕೆ ‘ಆರ್ಯಭಟ’ವನ್ನು ಅಭಿವೃದ್ಧಿಪಡಿಸಿ ಸೋವಿಯತ್ ದೇಶದ ಲಾಂಚರ್ ಬಳಸಿ ಉಡಾವಣೆ ಮಾಡಿತು. ಅನಂತರ ೧೯೮೩ರಲ್ಲಿ ‘ರೋಹಿಣಿ’ ಉಪಗ್ರಹವನ್ನು ದೇಶದ ಮೊದಲ ಉಪಗ್ರಹ ಉಡಾವಣಾ ವಾಹನವಾದ ‘ಸ್ಯಾಟಲೈಟ್ ಲಾಂಚ್ ವೆಹಿಕಲ್’ (SLV-3) ಬಳಸಿ ಉಡಾವಣೆ ಮಾಡಲಾಯಿತು. ೧೯೯೩ರಲ್ಲಿ ‘ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (PSLV) ಬಳಸಿ ತನ್ನ ಮೊದಲ ಯಶಸ್ವಿ ಉಪಗ್ರಹ ಉಡಾವಣೆಯನ್ನು ಸಾಧಿಸಿತು. ‘ಇಸ್ರೋ’ ಸಂಸ್ಥೆಯು ತನ್ನ ಮೊದಲ ರಿಮೋಟ್ ಸೆನ್ಸಿಂಗ್ ಉಪಗ್ರಹ(IRS-1A)ವನ್ನು ೧೯೮೮ರಲ್ಲಿ ಉಡಾವಣೆಗೊಳಿಸಿತು.
‘ಇಸ್ರೋ’ ಮೂರು ವಿಧದ ಉಡಾವಣಾ ವಾಹನಗಳನ್ನು (ರಾಕೆಟ್) ಅಭಿವೃದ್ಧಿಪಡಿಸಿದೆ. ಅವುಗಳೆಂದರೆ, ಪಿಎಸ್ಎಲ್ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಜಿಎಸ್ಎಲ್ವಿ (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮತ್ತು ಜಿಎಸ್ಎಲ್ವಿ ಮಾರ್ಕ್ III (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III).
ದೇಶದ ಸಾಮಾಜಿಕ ಹಾಗೂ ಆರ್ಥಿಕ ಪ್ರಯೋಜನಗಳಿಗಾಗಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅಗತ್ಯವಿದ್ದು ‘ಇಸ್ರೋ’ ತನ್ನ ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ಅವುಗಳನ್ನು ಕಾರ್ಯಗತಗೊಳಿಸುತ್ತ ಬಂದಿದೆ.
ಭಾರತದಾದ್ಯಂತ ‘ಇಸ್ರೋ’ ತನ್ನ ೨೧ ಕಾರ್ಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಅವೆಲ್ಲವೂ ಬಾಹ್ಯಾಕಾಶ ಸಂಶೋಧನೆಯ ವಿವಿಧ ಅಂಗಗಳಾಗಿ ಕೆಲಸ ಮಾಡುತ್ತಿವೆ.
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC)
ಈ ಕೇಂದ್ರವು ತಿರುವನಂತಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಡಾವಣೆಯ ವಿನ್ಯಾಸ ಮತ್ತು ವಾಹನ ತಂತ್ರಜ್ಞಾನ ಅಭಿವೃದ್ಧಿಯ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ಪ್ರಮುಖ ಕಾರ್ಯಕ್ರಮಗಳು – ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV), ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV), ಲಾಂಚ್ ವೆಹಿಕಲ್ ಮಾರ್ಕ್-೩ (LVM-3), ರೋಹಿಣಿ ಸೌಂಡಿಂಗ್ ರಾಕೆಟ್ ಹಾಗೂ ಸಣ್ಣ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿ, ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (RLV), ಟೆಸ್ಟ್ ವೆಹಿಕಲ್ ಪ್ರಾಜೆಕ್ಟ್ (TVP), ಪ್ರೊಪಲ್ಷನ್ ತಂತ್ರಜ್ಞಾನಗಳ ನಿರ್ವಹಣೆ ಮತ್ತು ಅಭಿವೃದ್ಧಿಪಡಿಸುವಿಕೆ.
ಯು.ಆರ್. ರಾವ್ ಉಪಗ್ರಹ ಕೇಂದ್ರ (URSC)
ಈ ಕೇಂದ್ರವು ಬೆಂಗಳೂರಿನಲ್ಲಿದ್ದು, ಕೃತಕ ಉಪಗ್ರಹಗಳ ನಿರ್ಮಾಣ, ವಿನ್ಯಾಸ, ಅಭಿವೃದ್ಧಿಪಡಿಸುವ ಕಾರ್ಯ ಕೇಂದ್ರವಾಗಿದೆ. ಇಲ್ಲಿ ವಿಜ್ಞಾನಿಗಳ, ಇಂಜಿನಿಯರುಗಳ ಮತ್ತು ತಂತ್ರಜ್ಞರ ವಿಶೇಷ ತಂಡಗಳ ಸಂಕೀರ್ಣವಿದ್ದು, ದೂರಸಂಪರ್ಕ, ದೂರದರ್ಶನ ಕ್ಷೇತ್ರಗಳಿಗೆ ಅಗತ್ಯವಾದ ವಿವಿಧ ಸುಧಾರಿತ ಉಪಗ್ರಹಗಳು, ಪ್ರಸಾರ, VSAT ಸೇವೆಗಳು, ಟೆಲಿಮೆಡಿಸಿನ್, ಟೆಲಿ-ಶಿಕ್ಷಣ, ಹವಾಮಾನ ಮುನ್ಸೂಚನೆ, ನೈಸರ್ಗಿಕ ವಿಪತ್ತು ಎಚ್ಚರಿಕೆ ಮತ್ತು ರಕ್ಷಣಾ ಕಾರ್ಯಾಚರಣೆಗಳು, ಭೂಮಿಯ ವೀಕ್ಷಣೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಬಾಹ್ಯಾಕಾಶ ವಿಜ್ಞಾನ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸುತ್ತಿದೆ.
೨೦೦೬ರಲ್ಲಿ ಸ್ಥಾಪಿತವಾದ ‘ಇಸ್ರೋ ಉಪಗ್ರಹ ಏಕೀಕರಣ ಮತ್ತು ಪರೀಕ್ಷಾ ಸ್ಥಾಪನೆ’ (ISITE) ಸಂಪೂರ್ಣ ಜೋಡಣೆ (ಅಸೆಂಬ್ಲಿ) ಮತ್ತು ಪರೀಕ್ಷಾ ಕ್ರಮದ ಸೌಲಭ್ಯ, ಮೂಲಭೂತ ರಚನೆಯ ಹಂತದಿಂದ ಹಾರಾಟ ಯೋಗ್ಯ ಬಾಹ್ಯಾಕಾಶ ನೌಕೆ, ಪರಿಸರ ಪರೀಕ್ಷಾ ಸೌಲಭ್ಯ ಮುಂತಾದವುಗಳ ಹೊಣೆಗಾರಿಕೆ ನಿರ್ವಹಿಸುತ್ತಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC)
ಬಂಗಾಳಕೊಲ್ಲಿಯ ದ್ವೀಪವಾದ ಶ್ರೀಹರಿಕೋಟದಲ್ಲಿ ಈ ಉಪಗ್ರಹ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿಂದ ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿ ಮುಂತಾದ ರಾಕೆಟ್-ಮೂಲ ಕೃತಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡ್ಡಯಿಸಲಾಗುತ್ತಿದೆ. ಶ್ರೀಹರಿಕೋಟದಿಂದ ಇತ್ತೀಚೆಗೆ ಚಂದ್ರಯಾನವನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಕಳುಹಿಸಲಾಯಿತು. ಮತ್ತೊಂದು ‘ತುಂಬಾ ಈಕ್ವಟೋರಿಯಲ್ ರಾಕೆಟ್ ಸ್ಟೇಷನ್’ ಆರಂಭಿಸಿದ್ದು ಭಾರತದ ಎರಡು ಉಪಗ್ರಹ ಉಡಾವಣಾ ಕೇಂದ್ರಗಳಲ್ಲಿ ಒಂದಾಗಿದೆ. ಬಾಹ್ಯಾಕಾಶ ನಿಲ್ದಾಣ, ಉಡಾವಣಾ ನೆಲೆಯನ್ನು ಸ್ಥಾಪಿಸುವಲ್ಲಿ ಈ ಕೇಂದ್ರವು ಪ್ರಮುಖ ಪಾತ್ರ ವಹಿಸಿದೆ.
ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC)
ಇದು ವಿನ್ಯಾಸ, ಅಭಿವೃದ್ಧಿ ಮತ್ತು ಸುಧಾರಣೆಗಳ ಪ್ರಮುಖ ಕೇಂದ್ರವಾಗಿದೆ. ಉಡಾವಣಾ ವಾಹನಗಳಿಗೆ ಪ್ರೊಪಲ್ಷನ್ ಸಿಸ್ಟಮ್ಸ್ (ಮುಂತಳ್ಳುವ ಪ್ರೇರಕ ವ್ಯವಸ್ಥೆ) ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬಾಹ್ಯಾಕಾಶ ಪ್ರೊಪಲ್ಷನ್ ಸಿಸ್ಟಮ್ಸ್ ತಯಾರಿಸಲಾಗುತ್ತದೆ. ಹೆಚ್ಚಿನ ಕಾರ್ಯಕ್ಷಮತೆಯ ವಿನ್ಯಾಸ, ಅಭಿವೃದ್ಧಿ ಮತ್ತು ವಿತರಣೆಯ ಜವಾಬ್ದಾರಿ ಇಲ್ಲಿ ನಿರ್ವಹಿಸಲಾಗುತ್ತದೆ. ಇದರ ಎರಡು ಕೇಂದ್ರಗಳು ತಿರುವನಂತಪುರಂ ಮತ್ತು ಬೆಂಗಳೂರಿನಲ್ಲಿವೆ. ಭೂಮಿ ಶೇಖರಿಸಬಹುದಾದ, ಕ್ರಯೋಜೆನಿಕ್, ಅರೆ-ಕ್ರಯೋಜೆನಿಕ್ ಮತ್ತು ಎಲೆಕ್ಟ್ರಿಕ್ ವಿನ್ಯಾಸ ಮತ್ತು ಅಭಿವೃದ್ಧಿ ಘಟಕಗಳು, ಪ್ರೊಪಲ್ಷನ್ ಸಿಸ್ಟಮ್ಸ್. ಫ್ಲೋ ನಿಯಂತ್ರಣದ ಪೂರ್ಣ ವಿನ್ಯಾಸ, ಅಭಿವೃದ್ಧಿ ಘಟಕಗಳು ಮತ್ತು ಮಾಡ್ಯೂಲ್, ಸುಧಾರಿತ ಉತ್ಪಾದನೆ ಮತ್ತು ಮೂಲ ತಯಾರಿಕೆ (ಪ್ರೊಟೊ ಫ್ಯಾಬ್ರಿಕೇಶನ್), ಸಂಜ್ಞಾಪರಿವರ್ತಕಗಳು ಮತ್ತು ಸಂವೇದಕಗಳ (ಸೆನ್ಸರ್) ಉತ್ಪಾದನೆ ಇತ್ಯಾದಿ ಕಾರ್ಯಗಳನ್ನು ಇಲ್ಲಿ ನಿರ್ವಹಿಸಲಾಗುತ್ತದೆ.
ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ (SAC)
ಇದು ಅಹಮದಾಬಾದಿನಲ್ಲಿರುವ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ. ಬಾಹ್ಯಾಕಾಶ ಉಪಕರಣಗಳ ವಿನ್ಯಾಸ, ಅಭಿವೃದ್ಧಿ, ಸಂಚಾರ (ನ್ಯಾವಿಗೇಷನ್) ಮತ್ತು ದೇಶದ ದೂರ-ಸಂವೇದಿ (ರಿಮೋಟ್ ಸೆನ್ಸಿಂಗ್) ಅಗತ್ಯಗಳಿಗೆ INSAT ಮತ್ತು GSAT ಸಂವಹನ ಟ್ರಾನ್ಸ್ಪಾಂಡರ್ಗಳನ್ನು ಅಭಿವೃದ್ಧಿಪಡಿಸುತ್ತದೆ. INSAT ವ್ಯವಸ್ಥೆಯು ದೂರಸಂಪರ್ಕ, ದೂರದರ್ಶನ ಪ್ರಸಾರ, ಉಪಗ್ರಹ ಸುದ್ದಿ ಸಂಗ್ರಹ, ಹವಾಮಾನ ಮುನ್ಸೂಚನೆ, ವಿಪತ್ತು ಮುನ್ನೆಚ್ಚರಿಕೆ, ಪರಿಸರ ಮೇಲ್ವಿಚಾರಣೆ, ನೈಸರ್ಗಿಕ ಸಂಪನ್ಮೂಲ ಸಮೀಕ್ಷೆ ಮುಂತಾದ ಸೇವೆಗಳಲ್ಲಿ ತೊಡಗಿದೆ.
ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ (HSFC)
ಮಾನವ ಬಾಹ್ಯಾಕಾಶ ಹಾರಾಟ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ೨೦೧೯ರಲ್ಲಿ ಮಾನವ ಬಾಹ್ಯಾಕಾಶ ಕೇಂದ್ರವನ್ನು ರಚಿಸಲಾಯಿತು. ಯೋಜನೆಯ ಅನುಷ್ಠಾನದ ಜವಾಬ್ದಾರಿ ಈ ಕೇಂದ್ರಕ್ಕೆ ವಹಿಸಲಾಗಿದ್ದು ಈಗಾಗಲೇ ಸಿಬ್ಬಂದಿಗಳ ಹಾರಾಟಕ್ಕಾಗಿ ಹೆಚ್ಚಿನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ನಿಗದಿತ ಸಮಯದಲ್ಲಿ ಯೋಜನೆಯು ಪೂರ್ಣಗೊಂಡರೆ. ರಷ್ಯಾ, ಅಮೆರಿಕ ಚೀನಾ ದೇಶಗಳ ನಂತರ ಸ್ವತಂತ್ರ ಮಾನವ ಬಾಹ್ಯಾಕಾಶ ಹಾರಾಟವನ್ನು ನಡೆಸುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ.
ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC)
ಇದು ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ದೂರ-ಸಂವೇದಿ ಉಪಗ್ರಹಗಳಿಂದ ಡೇಟಾ (ದತ್ತಾಂಶ) ಸ್ವೀಕಾರ, ಸಂಸ್ಕಾರ, ಪ್ರಸರಣ, ವಿಪತ್ತು ನಿರ್ವಹಣೆಗೆ ಬೆಂಬಲ, ಉತ್ತಮ ಆಡಳಿತಕ್ಕಾಗಿ ಭೌಗೋಳಿಕ (ಜಿಯೋಸ್ಪೇಷಿಯಲ್) ಸೇವೆಗಳು ಸೇರಿದಂತೆ ದೂರ-ಸಂವೇದಿ (ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್) ತಂತ್ರಗಳ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತಿದೆ.
‘ಇಸ್ರೋ’ ಪ್ರಮುಖ ಸಾಧನೆಗಳು
೧೯೯೦ರ ದಶಕದಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ವಿದೇಶಗಳ ಸಹಾಯ ಪಡೆಯದೆ ತನ್ನ ಉಪಗ್ರಹಗಳನ್ನು ವಿನ್ಯಾಸಗೊಳಿಸಿ ಉಡಾವಣೆ ಮಾಡಿ ಸ್ವಾವಲಂಬನೆ ಮೆರೆಯಿತು.
೧. ಭಾರತ ತನ್ನ ಮೊದಲ ಭೂಸ್ಥಿರ ಉಪಗ್ರಹವಾದ ‘ಇನ್ಸಾ÷್ಯಟ್-೨ಬಿ’ಯನ್ನು ೧೯೯೩ರಲ್ಲಿ ಉಡಾವಣೆ ಮಾಡಿತು. ಹವಾಮಾನಕ್ಕೆ ಮೀಸಲಾದ ಮೊದಲ ಉಪಗ್ರಹ ‘ಮೆಟ್ಸಾ÷್ಯಟ್’ ಅನ್ನು ೨೦೦೨ರಲ್ಲಿ ಉಡಾವಣೆ ಮಾಡಿತು.
೨. ಮಾರ್ಸ್ ಆರ್ಬಿಟರ್ ಮಿಷನ್
ಮಂಗಳಯಾನ ಎಂದೂ ಕರೆಯಲ್ಪಡುವ ಭಾರತದ ‘ಮಾರ್ಸ್ ಆರ್ಬಿಟರ್ ಮಿಷನ್’ ಅನ್ನು ೫ ನವೆಂಬರ್ ೨೦೧೩ರಂದು ಉಡ್ಡಯಿಸಿ ೨೪ ಸೆಪ್ಟೆಂಬರ್ ೨೦೧೪ಕ್ಕೆ ಮಂಗಳದ ಕಕ್ಷೆಗೆ ಸೇರಿಸಿತು. ತನ್ನ ಪ್ರಥಮ ಪ್ರಯತ್ನದಲ್ಲಿಯೇ ಭಾರತವು ಯಶಸ್ವಿಯಾಗಿ ಮಂಗಳಗ್ರಹವನ್ನು ತಲಪಿದ ಮೊದಲ ರಾಷ್ಟ್ರವೆನಿಸಿತು.
೩. ಉಪಗ್ರಹಗಳ ಉಡಾವಣೆ
೨೦೧೭ ಫೆಬ್ರುವರಿಯಲ್ಲಿ ಭಾರತವು ೧೦೪ ಉಪಗ್ರಹಗಳನ್ನು ಒಂದೇ ರಾಕೆಟ್ ಮೂಲಕ ಕಕ್ಷೆಗೆ ಸೇರಿಸಿ ವಿಶ್ವ ದಾಖಲೆ ಮಾಡಿತು. ಒಂದೇ ಉಡಾವಣೆಯಲ್ಲಿ ೩೭ ಉಪಗ್ರಹಗಳನ್ನು ಉಡಾವಣೆ ಮಾಡಿದ ರಷ್ಯಾದ ಹಿಂದಿನ ದಾಖಲೆ ಮುರಿದ ಸಾಧನೆ ಭಾರತವು ಮಾಡಿತು. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆಯಾದ ‘ಪಿಎಸ್ಎಲ್ವಿ-ಸಿ೩೭ ಮಿಷನ್’ ಆರು ದೇಶಗಳ ಉಪಗ್ರಹಗಳನ್ನು ಒಳಗೊಂಡಿದ್ದುದು ವಿಶೇಷ.
೪. ಜಿ ಎಸ್ಎಲ್ವಿ ಎಮ್ಕೆ III
೨೦೧೭ರಲ್ಲಿ, ‘ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III’ (GSLV Mk III) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಭಾರವಾದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆಯಿತು.
೫. ಉಪಗ್ರಹ ವಿರೋಧಿ ಪರೀಕ್ಷೆ
೨೦೧೯ರಲ್ಲಿ, ಭಾರತವು ಉಪಗ್ರಹ ವಿರೋಧಿ (ASAT) ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಇದು ಯುದ್ಧಗಳಲ್ಲಿ ಉಪಗ್ರಹಗಳನ್ನು ಅಸಮರ್ಥಗೊಳಿಸುವ ಬಾಹ್ಯಾಕಾಶ ಅಸ್ತ್ರವೆನಿಸಿದ್ದು, ಇಂಥ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ.
೬. ಚಂದ್ರಯಾನ-೧
ದೇಶದ ಮೊದಲ ಚಂದ್ರನ ಕಾರ್ಯಾಚರಣೆ ‘ಚಂದ್ರಯಾನ-೧’ನ್ನು ಅಕ್ಟೋಬರ್ ೨೨, ೨೦೦೮ರಂದು ಪ್ರಾರಂಭಿಸಲಾಯಿತು. ಚಂದ್ರನ ಮೇಲೆ ನೀರಿನ ಉಪಲಬ್ಧತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಉಡ್ಡಯಿಸಲಾದ ಮೊದಲ ಬಾಹ್ಯಾಕಾಶ ನೌಕೆ ಅದಾಗಿದ್ದು, ಹತ್ತು ತಿಂಗಳ ಕಾಲ ಚಂದ್ರನನ್ನು ಸುತ್ತಿ ನೀರಿನ ಮಂಜುಗಡ್ಡೆ ಮತ್ತು ೪೦ಕ್ಕೂ ಹೆಚ್ಚಿನ ಕುಳಿಗಳನ್ನು ಕಂಡುಹಿಡಿಯಿತು.
ಚಂದ್ರಯಾನ-೧ ಚಂದ್ರನ ಮೇಲೆ ಭಾರತದ ಮೊದಲ ಉಪಗ್ರಹ ಉಡ್ಡಯನ. ಇದನ್ನು ೨೦೦೮ರಲ್ಲಿ ಪಿಎಸ್ಎಲ್ವಿ ರಾಕೆಟ್ನಲ್ಲಿ ಉಡಾವಣೆ ಮಾಡಲಾಯಿತು. ಭಾರತ, ಅಮೆರಿಕ, ಇಂಗ್ಲೆಂಡ್, ಜರ್ಮನಿ, ಸ್ವೀಡನ್ ಮತ್ತು ಬಲ್ಗೇರಿಯಾದಲ್ಲಿ ನಿರ್ಮಿಸಲಾದ ೧೧ ವೈಜ್ಞಾನಿಕ ಉಪಕರಣಗಳನ್ನು ರವಾನಿಸಲಾಯಿತು. ಈ ಉಪಗ್ರಹವು ಚಂದ್ರನ ಸುತ್ತ ೩೪೦೦ ಕಕ್ಷೆಗಳನ್ನು ಮಾಡಿದ್ದು ಚಂದ್ರನ ಮೇಲೆ ನೀರನ್ನು ಕಂಡುಹಿಡಿದ ಸಾಧನೆ ಮಾಡಿದೆಯೆಂದು ‘ನಾಸಾ’ ಘೋಷಿಸಿತು.
೭. ಚಂದ್ರಯಾನ-೨
೨೦೧೯ರಲ್ಲಿ ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನ ಮಾರ್ಕ್ III ಅನ್ನು ಬಳಸಿಕೊಂಡು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು. ಚಂದ್ರಯಾನ-೨ ಬಾಹ್ಯಾಕಾಶ ನೌಕೆಯು ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಅನ್ನು ಒಳಗೊಂಡಿತ್ತು.
ಚAದ್ರನ ಮೇಲ್ಮೈಯಲ್ಲಿ ವಿಕ್ರಮ್ ಅನ್ನು ಇಳಿಸಿ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲು ‘ಪ್ರಗ್ಯಾನ್’ ಅನ್ನು ನಿಯೋಜಿಸಲಾಗಿತ್ತು. ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಬಾರಿಗೆ ಇಳಿಯಬೇಕಿದ್ದು ಕಠಿಣ ಚಂದ್ರ ಸ್ಪರ್ಶದ ಕಾರಣದಿಂದ ಸಂಪೂರ್ಣ ಯಶಸ್ವಿಯೆನಿಸಲಿಲ್ಲ.
೮. ಚಂದ್ರಯಾನ-೩
ಶ್ರೀಹರಿಕೋಟ ಕೇಂದ್ರದಿಂದ ರಾಕೆಟ್ ಉಡಾವಣೆಯಾಗಿ ೨೩ ಅಗಸ್ಟ್ ೨೦೨೩ರ ಸಂಜೆ ೬.೦೪ ನಿಮಿಷಕ್ಕೆ ‘ವಿಕ್ರಮ್ಲ್ಯಾಂಡರ್’ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು ಭಾರತಕ್ಕೆ ಅಭೂತಪೂರ್ವ ಯಶಸ್ಸು ಮತ್ತು ಕೀರ್ತಿಯನ್ನು ತಂದುಕೊಟ್ಟಿತು. ದಕ್ಷಿಣ ಧ್ರುವದ ಪರಿಸರದಲ್ಲಿ ಇಳಿದ ‘ವಿಕ್ರಮ್ ಲ್ಯಾಂಡರ್’ ಮತ್ತು ‘ಪ್ರಗ್ಯಾನ್ ರೋವರ್’ ೧೪ ದಿನಗಳ ಕಾಲ ಸಂಶೋಧನೆ ನಡೆಸಿ ಅಲ್ಲಿಂದ ಭೂಮಿಗೆ ಅಮೂಲ್ಯವಾದ ಮಾಹಿತಿಯನ್ನು ರವಾನಿಸಿದವು.
ಲ್ಯಾಂಡರ್ ಮತ್ತು ರೋವರ್ ಅನ್ನು ಅದರ ಮೇಲ್ಮೈಗೆ ತಲಪಿಸುವ ಮೂಲಕ ಚಂದ್ರನ ಮೇಲೆ ಮೃದುವಾದ ಇಳಿಯುವಿಕೆ (ಲ್ಯಾಂಡಿಂಗ್) ಸಾಧಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವುದು ಚಂದ್ರಯಾನ-೩ರ ಪ್ರಾಥಮಿಕ ಉದ್ದೇಶವಾಗಿತ್ತು.
ಈ ಸಾಧನೆಯಿಂದ ಬಾಹ್ಯಾಕಾಶ ಕ್ಷೇತ್ರದ ಪ್ರಥಮ ನಾಲ್ಕು ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ನೌಕೆಯನ್ನು ಪ್ರಪ್ರಥಮವಾಗಿ ಇಳಿಸಿದ ಭಾರತದ ಸಾಮರ್ಥ್ಯ ಅದ್ವಿತೀಯವೆನಿಸಿದೆ.
ಚಂದ್ರನ ಮೇಲೆ ಇದುವರೆಗೂ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ತಮ್ಮ ನೌಕೆಗಳನ್ನು ಯಶಸ್ವಿಯಾಗಿ ಇಳಿಸಿದ್ದವು. ಈ ಮೂರೂ ದೇಶಗಳು ಯಶಸ್ಸಿಗಾಗಿ ಹಲವು ಪ್ರಯತ್ನಗಳನ್ನು ನಡೆಸಿದ್ದರೆ, ಭಾರತ ಕೇವಲ ಮೂರೇ ಪ್ರಯತ್ನಗಳಲ್ಲಿ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಮೂಲಕ ವಿಕ್ರಮ ಸಾಧಿಸಿದೆ.
೯. ಆದಿತ್ಯ-ಎಲ್೧
೨ ಸೆಪ್ಟೆಂಬರ್ ೨೦೨೩ರಂದು ಪಿಎಸ್ಎಲ್ವಿ ಸಿ-೫೭ ರಾಕೆಟ್ ಮೂಲಕ ‘ಆದಿತ್ಯ ಎಲ್೧’ ನೌಕೆಯನ್ನು ಸೂರ್ಯನ ಕಡೆಗೆ ರವಾನಿಸಲಾಯಿತು. ಉಡಾವಣೆಯಾದ ದಿನದಿಂದ ೧೨೬ ದಿನಗಳಲ್ಲಿ ೧.೫ ಮಿಲಿಯನ್ ಕಿ.ಮೀ. ದೂರದ ಭೂಮಿ ಮತ್ತು ಸೂರ್ಯನ ನಡುವಿನ ಕಕ್ಷೆಯಲ್ಲಿ ಸೇರಿಸಲಾಗುವ ಯೋಜನೆ ಇದಾಗಿದೆ. ಈ ಬಾಹ್ಯಾಕಾಶ ನೌಕೆಯ ಸಹಾಯದಿಂದ ಸೌರ ವಾತಾವರಣ, ಸೌರ ಕಾಂತೀಯ ಚಂಡಮಾರುತ ಮತ್ತು ಭೂಮಿಯ ಸುತ್ತಲಿನ ಪರಿಸರದ ಮೇಲೆ ಅವುಗಳ ಪ್ರಭಾವ ಇತ್ಯಾದಿಗಳ ಅಧ್ಯಯನ ನಡೆಸಲಾಗುತ್ತದೆ. ಇದು ಸೂರ್ಯನನ್ನು ವೀಕ್ಷಿಸಲು ಮೀಸಲಾಗಿರುವ ಮೊದಲ ಭಾರತೀಯ ನೌಕೆಯಾಗಿದೆ.
೧೦. ೧ ಜನವರಿ, ೨೦೨೪ರಂದು ‘ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಸಿ೫೮’ (PSLVC58) ರಾಕೆಟ್ಮೂಲಕ ‘ಎಕ್ಸ್ಪೋಸ್ಯಾಟ್’ (X-ray Polarimeter Satellite) ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶ್ರೀಹರಿಕೋಟದಿಂದ ಈ ಮಹತ್ತ್ವದ ಉಪಗ್ರಹವನ್ನು ಉಡಾವಣೆ ಮಾಡಲಾಗಿದ್ದು, ಇದು ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ (ಕ್ಷ-ಕಿರಣ ಧ್ರುವೀಕರಣ ಮಾಪಕ) ಉಪಗ್ರಹವಾಗಿದೆ. ಈ ಉಡಾವಣೆಯಲ್ಲಿ ಇತರ ಹತ್ತು ಉಪಗ್ರಹಗಳನ್ನು ಪಿಎಸ್ಎಲ್ವಿ-ಸಿ೫೮ ಒಯ್ದು ಸಾಧನೆ ಮಾಡಿದೆ. ಈ ಉಪಗ್ರಹಗಳನ್ನು ಸ್ಟಾರ್ಟ್ಅಪ್ ಮತ್ತು ಶೈಕ್ಷಣಿಕ ಸಂಸ್ಥೆಗಳ ನೆರವಿನಿಂದ ‘ಇಸ್ರೋ’ ನಿರ್ಮಾಣ ಮಾಡಿದೆ. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಈ ಉಪಗ್ರಹದ ಉಪಕರಣಗಳು ಸುಮಾರು ಐದು ವರ್ಷಗಳ ಕಾಲ ಕಪ್ಪು ಕುಳಿ, ನಕ್ಷತ್ರಪುಂಜದ ನ್ಯೂಕ್ಲಿಯಸ್ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಆಕಾಶಕಾಯಗಳ ಮೂಲಗಳ ಅಧ್ಯಯನದ ವರದಿ ಕೊಡಲಿದೆ.
೧೧. ‘ಇಸ್ರೋ’ ೨೦೧೬ರಲ್ಲಿ, ‘ಸ್ಕಾçಮ್ಜೆಟ್’ ಎಂಜಿನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಇದು ಜಲಜನಕ (ಹೈಡ್ರೋಜನ್)ವನ್ನು ಇಂಧನವಾಗಿ ಮತ್ತು ವಾಯುಮಂಡಲದ ಗಾಳಿಯಿಂದ ಆಮ್ಲಜನಕವನ್ನು ಆಕ್ಸಿಡೈಸರ್ ಆಗಿ ಬಳಸಿ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದ್ದು, ಇಸ್ರೋದ ಸುಧಾರಿತ ತಂತ್ರಜ್ಞಾನ ವಾಗಿದ್ದು(ATV), ಸುಧಾರಿತ ಸೌಂಡಿಂಗ್ ರಾಕೆಟ್ ಎನಿಸಿಕೊಂಡಿದೆ.
ಭವಿಷ್ಯದ ಇತರ ಯೋಜನೆಗಳು
ಬಾಹ್ಯಾಕಾಶಕ್ಕೆ ಭಾರತದ ಮಾನವಸಹಿತ ನೌಕೆಯ ಕಳುಹಿಸುವಿಕೆಯನ್ನು ‘ಗಗನಯಾನ್’ ಎಂದು ಹೆಸರಿಸಲಾಗಿದೆ. ಈ ಯೋಜನೆಯ ಉದ್ದೇಶ ಬಾಹ್ಯಾಕಾಶದಲ್ಲಿ ಜಾಗತಿಕ ಕಡಮೆ ವೆಚ್ಚದ ಸೇವೆಗಳನ್ನು ಭಾರತವು ಒದಗಿಸುವ ಕಾರ್ಯಕ್ರಮವಾಗಿದೆ. ಈ ಮಹತ್ತ್ವಾಕಾಂಕ್ಷೆಯ ಸಾಕಾರಕ್ಕಾಗಿ GSLV Mk-III ಅನ್ನು ಕ್ರಯೋಜೆನಿಕ್ ಎಂಜಿನ್ನೊAದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ‘ಇಸ್ರೋ’ ಈಗಾಗಲೇ GSLV Mk-III ಅನ್ನು ಪ್ರಾಯೋಗಿಕ ಸಿಬ್ಬಂದಿ ಮಾಡ್ಯೂಲ್ ಮತ್ತು ‘ಕ್ರೂ÷್ಯ ಎಸ್ಕೇಪ್ ಸಿಸ್ಟಮ್’ (CES) ನೊಂದಿಗೆ ಪರೀಕ್ಷೆಗೆ ಒಳಪಡಿಸಿದೆ.
ನಾಸಾ ಮತ್ತು ‘ಇಸ್ರೋ’ದಿಂದ ‘ನಿಸಾರ್’ (NISAR) ಉಪಗ್ರಹ ಯೋಜನೆ – ಭೂಮಿಯ ಮಾಹಿತಿ ಸಂಗ್ರಹಕ್ಕಾಗಿ ‘ಇಸ್ರೋ’-ನಾಸಾ ಜಂಟಿ ಕಾರ್ಯಾಚರಣೆ ಕೈಗೊಳ್ಳಲಿದ್ದು, ಸದ್ಯದಲ್ಲೇ ಉಡಾವಣೆ ಮಾಡುವ ಯೋಜನೆಯಾಗಿದೆ. ಪರಿಸರ, ಹಿಮಪ್ರದೇಶ ಅವಲೋಕನ, ಸಸ್ಯಜೀವಿಗಳು, ಅಂತರ್ಜಲ, ಭೂಕಂಪ, ಭೂಕುಸಿತ ಇತ್ಯಾದಿ ವಿಕೋಪಗಳ ಅಭ್ಯಾಸ ಮತ್ತು ಮಾಹಿತಿ ಈ ಕಾರ್ಯಕ್ರಮದಿಂದ ದೊರಕಲಿದೆ.
ಕೇಂದ್ರಸರ್ಕಾರದ ನಿರ್ಧಾರಗಳು
೨೦೨೦ ಜೂನ್ನಲ್ಲಿ ಕೇಂದ್ರಸರ್ಕಾರವು ಎಲ್ಲ ರೀತಿಯ ಖಾಸಗಿ ಉದ್ಯಮಗಳಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದುದರ ಪರಿಣಾಮದಿಂದ ದೇಶೀಯ ಪ್ರತಿಭೆಗಳಿಗೆ ಅವಕಾಶಗಳು ಹೆಚ್ಚಾದವು. ಇದರ ಪರಿಣಾಮವಾಗಿ, ದೇಶದಲ್ಲಿ ೧೪೦ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್ಗಳು ನೋಂದಣಿಯಾದವು. ಈ ಸ್ಟಾರ್ಟ್-ಅಪ್ಗಳು ೧೨೦ ಮಿಲಿಯನ್ ಡಾಲರ್ ಮೌಲ್ಯದ ಹೂಡಿಕೆಯನ್ನು ಇದುವರೆಗೆ ತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರುವ ನಿರೀಕ್ಷೆಯಿದೆ. ೨೦೧೪ರ ನಂತರದಲ್ಲಿ ‘ಇಸ್ರೋ’ ೪೭ ಉಪಗ್ರಹಗಳ ಉಡಾವಣೆಯನ್ನು ಮಾಡಿದೆ. ಇತರ ದೇಶಗಳಿಗೆ ಹೋಲಿಸಿದಾಗ ಅವೆಲ್ಲವೂ ಬಹು ಕಡಮೆ ವೆಚ್ಚದಲ್ಲಿ ಮಾಡಲಾದ ಉಡಾವಣೆಗಳಾಗಿವೆ. ಒಂದು ಅಂಕಿಅಂಶಗಳ ಪ್ರಕಾರ, ೨೦೨೫ರ ವೇಳೆಗೆ ಭಾರತದ ಉಪಗ್ರಹ ಉಡಾವಣಾ ಸೇವೆಗಳ ಮೌಲ್ಯ ಒಂದು ಬಿಲಿಯನ್ ಡಾಲರ್ ತಲಪಬಹುದು ಎಂದು ಅಂದಾಜಿಸಲಾಗಿದೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ೧೯೬೨ರಲ್ಲಿ ಪ್ರಾರಂಭವಾದಾಗಿನಿಂದ ಗಮನಾರ್ಹವಾಗಿ ವಿಕಸನಗೊಂಡಿದೆ. ಇದರ ನೇತೃತ್ವ ವಹಿಸಿರುವ ‘ಇಸ್ರೋ’ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪರಿಶೋಧನೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದೆ. ಸಂಸ್ಥೆಯ ತಾಂತ್ರಿಕ ಕಾರ್ಯಕ್ರಮಗಳಾದ ಉಪಗ್ರಹಗಳ ಉಡಾವಣೆ ಮತ್ತು ಇತರ ಗ್ರಹಗಳ ಅನ್ವೇಷಣೆಯಲ್ಲಿ ಭಾರತವನ್ನು ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನದ ಪಥದಲ್ಲಿ ಮುಖ್ಯ ಸ್ಥಾನದಲ್ಲಿರಿಸಿದೆ. ಭಾರತದ ಬಾಹ್ಯಾಕಾಶ ಯೋಜನೆ ಮತ್ತು ಕಾರ್ಯಕ್ರಮವು ನಿಸ್ಸಂದೇಹವಾಗಿ ಪ್ರಗತಿಯತ್ತ ಸಾಗಿದ್ದು ಅದರ ಸಾಧನೆಗಳು ದೇಶದ ಆರ್ಥಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸುತ್ತಿವೆ. ಬಾಹ್ಯಾಕಾಶ ತಂತ್ರಜ್ಞಾನದ ಯಶಸ್ಸಿನ ಕಾರಣದಿಂದ ವಿಶ್ವದ ಅನೇಕ ದೇಶಗಳು ಭಾರತದ ನೆರವನ್ನು ಪಡೆಯಲು ಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯ. ಈ ಪ್ರಗತಿಯ ಚಕ್ರ ಮತ್ತಷ್ಟು ಔನ್ನತ್ಯಕ್ಕೇರಲಿ ಎನ್ನುವುದೇ ಆಶಯ.
ಭಾರತದ ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳು
ವಿಕ್ರಮ್ ಸಾರಾಭಾಯ್
ಶ್ರೇಷ್ಠ ಭಾರತೀಯ ವಿಜ್ಞಾನಿಗಳಲ್ಲಿ ಒಬ್ಬರಾದ ಸಾರಾಭಾಯ್ ಅವರನ್ನು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞರಾಗಿದ್ದು, ಬಾಹ್ಯಾಕಾಶ ಸಂಶೋಧನೆ ಮತ್ತು ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸಿ ದೇಶದ ಬಾಹ್ಯಾಕಾಶ ಕಾರ್ಯಕ್ರಮದ ಭವಿಷ್ಯವನ್ನು ರೂಪಿಸಿದ ಪ್ರಮುಖರೆನಿಸಿದ್ದಾರೆ. ವಿಕ್ರಮ್ ಸಾರಾಭಾಯ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್ನ ಪ್ರಮುಖ ಸಂಸ್ಥಾಪಕರು. ‘ಇಸ್ರೋ’ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಗೌರವಗಳಿಂದ ಗೌರವಿಸಲಾಗಿದೆ.
ಸತೀಶ್ ಧವನ್
ವಿಕ್ರಂ ಸಾರಾಭಾಯ್ ಅವರ ನಂತರ ೧೯೭೨ರಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಗಣಿತ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳೆರಡರಲ್ಲೂ ಪಿಎಚ್ಡಿ ಪದವಿ ಗಳಿಸಿದ್ದ ಅವರು ಭಾರತೀಯ ಸ್ಪೇಸ್ ಕಮಿಷನ್ನಿನ ಅಧ್ಯಕ್ಷರಾಗಿ ಮತ್ತು ಭಾರತೀಯ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದರು. ಅವರ ನಿರ್ದೇಶನದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳು ಹೆಚ್ಚಿನ ಮುನ್ನಡೆ ಸಾಧಿಸಿದವು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಅಲ್ಲಿ ಪ್ರಪ್ರಥಮ ‘ಸೂಪರ್ ಸಾನಿಕ್ ವಿಂಡ್ ಟನೆಲ್’ ಅನ್ನು ಸ್ಥಾಪಿಸಿದರು. ಅವರ ದೂರದರ್ಶಿತ್ವದಿಂದಾಗಿ ಭಾರತದ ‘ಇನ್ಸಾಟ್’ ದೂರಸಂಪರ್ಕ ವ್ಯವಸ್ಥೆ, ‘ಐ.ಆರ್.ಎಸ್’ ಸೂಕ್ಷ್ಮಗ್ರಾಹಿ ಉಪಗ್ರಹ ವ್ಯವಸ್ಥೆ ಮತ್ತು ‘ಪಿ.ಎಸ್.ಎಲ್.ವಿ’ ಉಡ್ಡಯನ ವ್ಯವಸ್ಥೆಗಳು ಮುನ್ನೆಲೆಗೆ ಬಂದವು. ಅವರ ಗೌರವಾರ್ಥ ಶ್ರೀಹರಿಕೋಟದಲ್ಲಿರುವ ಬಾಹ್ಯಾಕಾಶ ಕೇಂದ್ರವನ್ನು ‘ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ’ವೆಂದು ಹೆಸರಿಸಲಾಗಿದೆ. ಸತೀಶ್ ಧವನ್ ಭಾರತದ ಪದ್ಮಭೂಷಣ ಪ್ರಶಸ್ತಿ, ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಎ.ಪಿ.ಜೆ. ಅಬ್ದುಲ್ ಕಲಾಂ
ಏರೋಸ್ಪೇಸ್ ವಿಜ್ಞಾನಿಯಾಗಿ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದವರಲ್ಲಿ ಒಬ್ಬರಾಗಿದ್ದಾರೆ. ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿ.ಆರ್.ಡಿ.ಒ) ಕಾರ್ಯ ನಿರ್ವಹಿಸಿದ್ದು, ಭಾರತದ ಮಿಲಿಟರಿ ಕ್ಷಿಪಣಿ ಅಭಿವೃದ್ಧಿ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ಕಾರಣದಿಂದ ಅವರು ‘ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಡಾವಣಾ ವಾಹನ ತಂತ್ರಜ್ಞಾನ’ ಕ್ಷೇತ್ರದ ‘ಮಿಸೈಲ್ ಮ್ಯಾನ್’ ಎಂದು ಕರೆಯಲ್ಪಟ್ಟರು. ಕಲಾಂ ಇಸ್ರೋ ಸಂಸ್ಥೆಯ ನಿರ್ದೇಶಕರಾಗಿದ್ದರು. ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವಾದ ‘ಎಸ್ಎಲ್ವಿ-III’ ರ ಯೋಜನಾ ನಿರ್ದೇಶಕರಾಗಿದ್ದರು. ಅವರ ಸಮಯದಲ್ಲಿ ಭಾರತವು ಕ್ಷಿಪಣಿ ಉತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಗಳಲ್ಲಿ ತ್ವರಿತ ಅಭಿವೃದ್ಧಿ ಕಂಡಿತು. ಕಲಾಂ ಅವರು ಭಾರತದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಮೊದಲ ವಿಜ್ಞಾನಿಯೂ ಹೌದು. ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿ ಕಲಾಂ ಅವರಿಗೆ ನೀಡಲಾಗಿದೆ.
ಯು.ಆರ್. ರಾವ್
೧೯೮೪ರಿಂದ ಇಸ್ರೋ ಅಧ್ಯಕ್ಷರಾಗಿ ‘ಪಿಎಸ್ಎಲ್ವಿ’ ಮತ್ತು ‘ಜಿಎಸ್ಎಲ್ವಿ’ ರಾಕೆಟ್ ಅಭಿವೃದ್ಧಿಪಡಿಸಿದ್ದಲ್ಲದೆ ಭಾರತದ ಮೊದಲ ರಿಮೋಟ್ ಸೆನ್ಸಿಂಗ್ ಉಪಗ್ರಹ ‘ಐಆರ್ಎಸ್-೧ಎ’ ಅನ್ನು ಪ್ರಾರಂಭಿಸಿದರು.
ಕೆ ಕಸ್ತೂರಿ ರಂಗನ್
೧೯೯೪ರಿಂದ ಇಸ್ರೋ ಅಧ್ಯಕ್ಷರಾಗಿ ಚಂದ್ರಯಾನ-೧, ಎಡುಸಾಟ್, ಕಾರ್ಟೋಸಾಟ್ ಮತ್ತು ಓಸಿಯಾನ್ಸಾಟ್ ಮುಂತಾದ ಹಲವು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿಸಿದರು. ಅವರು ರಾಜ್ಯಸಭೆ ಮತ್ತು ಯೋಜನಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಡಾ. ರಾಧಾಕೃಷ್ಣನ್
೧೯೭೧ರಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಏವಿಯಾನಿಕ್ಸ್ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಅಲ್ಲಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು. ಇಸ್ರೋದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ, ಬಾಹ್ಯಾಕಾಶ ಅಪ್ಲಿಕೇಶನ್ ಮತ್ತು ಬಾಹ್ಯಾಕಾಶ ಕಾರ್ಯಕ್ರಮ ಕ್ಷೇತ್ರಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ವಹಿಸಿ ಯಶಸ್ವಿಯಾದರು.
ಜಿ. ಮಾಧವನ್ ನಾಯರ್
೨೦೦೩ರಿಂದ ಇಸ್ರೋ ಅಧ್ಯಕ್ಷರಾಗಿದ್ದರು. ಒಂದೇ ಯೋಜನೆಯ ಅಡಿಯಲ್ಲಿ ೧೦ ಉಪಗ್ರಹಗಳನ್ನು ಉಡಾವಣೆ ಮಾಡುವುದು (ಪಿಎಸ್ಎಲ್ವಿ-ಸಿ೯), ಚಂದ್ರನ ಮೇಲ್ಮೈಯಲ್ಲಿ ನೀರನ್ನು ಕಂಡುಹಿಡಿದ ಮಾನವರಹಿತ ಚಂದ್ರ ಆರ್ಬಿಟರ್ (ಚಂದ್ರಯಾನ-೧) ಕಳುಹಿಸುವುದು ಮುಂತಾದ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದರು. ಭಾರತದ ಮೊದಲ ಅಂತರಗ್ರಹ ಮಿಷನ್ (ಮಾರ್ಸ್ ಆರ್ಬಿಟರ್ ಮಿಷನ್) ಅನ್ನು ಪ್ರಾರಂಭಿಸಿದ ಹಿರಿಮೆ ಮಾಧವನ್ ನಾಯರ್ ಅವರದಾಗಿದೆ.
ನಂಬಿ ನಾರಾಯಣನ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಏರೋಸ್ಪೇಸ್ ಇಂಜಿನಿಯರ್ ಆಗಿದ್ದು, ಭಾರತವು ಉಡಾವಣೆ ಮಾಡಿದ ಮೊದಲ ‘ಪಿಎಸ್ಎಲ್ವಿ’ ಗಾಗಿ ಬಳಸಲಾದ ವಿಕಾಸ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ‘ಇಸ್ರೋ’ದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಅವರು ಕ್ರಯೋಜೆನಿಕ್ಸ್ ವಿಭಾಗದ ಉಸ್ತುವಾರಿ ವಹಿಸಿದ್ದರು. ಶ್ರೇಷ್ಠ ಭಾರತೀಯ ವಿಜ್ಞಾನಿಗಳ ಕೊಡುಗೆಗಳಲ್ಲಿ ನಂಬಿ ನಾರಾಯಣನ್ ಅವರ ಕೊಡುಗೆಯನ್ನು ತಡವಾಗಿಯಾದರೂ ಗುರುತಿಸಲಾಗಿದೆ. ಅವರು ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದು, ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.