ರಾಮಜನ್ಮಭೂಮಿಯ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದ್ದಾಗ ರಾಮಭದ್ರಾಚಾರ್ಯರು ಮಹತ್ತ್ವದ ಪಾತ್ರ ವಹಿಸಿದ್ದರು. ೨೦೦೩ರಲ್ಲಿ ಅಲಹಾಬಾದ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ರಾಮಭದ್ರಾಚಾರ್ಯರು ಅಯೋಧ್ಯೆಯೇ ರಾಮನ ಜನ್ಮಭೂಮಿ ಎನ್ನುವುದನ್ನು ಸ್ಪಷ್ಟವಾದ ದಾಖಲೆಗಳಿಂದ ಪ್ರತಿಪಾದಿಸಿದರು.
ಸ್ಕಾಂದಪುರಾಣದಲ್ಲಿ ರಾಮಮಂದಿರದ ಭೌಗೋಳಿಕ ವಿವರಣೆಯಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇವರು ಪ್ರತಿಪಾದಿಸಿದ ಅನೇಕ ವಿಷಯಗಳು ನ್ಯಾಯಾಲಯದ
ತೀರ್ಪಿನಲ್ಲಿ ಉಲ್ಲಿಖಿತವಾಗಿವೆ. ಕಣ್ಣಿಲ್ಲದವರೂ ಜಗತ್ತಿಗೆ ಬೆಳಕಾಗಬಹುದು ಎಂಬುದರ ಉದಾಹರಣೆಯಾಗಿ ರಾಮಭದ್ರಾಚಾರ್ಯರು ನಮ್ಮ ಮುಂದೆ ನಿಲ್ಲುತ್ತಾರೆ.
ಮನುಸ್ಮೃತಿಯಲ್ಲಿನ ‘ಯೋಽನೂಚಾನಃ ಸ ನೋ ಮಹಾನ್’ ಎಂಬ ವಾಕ್ಯವು ಮಹಾತ್ಮರ ಲಕ್ಷಣವನ್ನು ತಿಳಿಸುತ್ತದೆ. ಯಾರೂ ಕೂಡಾ ಹುಟ್ಟಿನಿಂದಲೇ ಮಹಾತ್ಮರಾಗಿರುವುದಿಲ್ಲ. ಸಾಮಾನ್ಯ ಜನರೇ ತಮ್ಮ ಅದ್ಭುತವಾದ ನಡವಳಿಕೆಗಳಿಂದ, ಲೋಕೋತ್ತರವಾದ ಕೆಲಸಗಳಿಂದ, ಜೀವನಪ್ರೀತಿಯಿಂದ ಮಹಾತ್ಮರ ಪದವನ್ನು ಏರುತ್ತಾರೆ ಎಂಬುದು ಯೋಽನೂಚಾನಃ ಸ ನೋ ಮಹಾನ್ ಎಂಬ ಸೂಕ್ತಿಯ ತಾತ್ಪರ್ಯ. ಈ ಸೂಕ್ತಿಯು ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಸಂಸ್ಕೃತ ವಿದ್ವಾಂಸ ಸ್ವಾಮಿ ರಾಮಭದ್ರಾಚಾರ್ಯರ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಮಹಾಮಹೋಪಾಧ್ಯಾಯರಾದ ತುಲಸೀ ಪೀಠಾಧೀಶ್ವರ ಜಗದ್ಗುರು ರಾಮಭದ್ರಾಚಾರ್ಯರ ಜೀವನ, ಚಿಂತನೆ, ಪಾಂಡಿತ್ಯ, ವ್ಯಕ್ತಿತ್ವ ಹಾಗೂ ಕೆಲಸಗಳು ಅದ್ಭುತವಾಗಿ ಅನುಸರಣೀಯವಾಗಿವೆ.
ವರ್ತಮಾನ ಕಾಲದ ಆರ್ಷ ಪರಂಪರೆಯಲ್ಲಿ ರಾಮಭದ್ರಾಚಾರ್ಯರ ಚಿಂತನೆಗಳನ್ನು ಗೌರವಿಸಲಾಗುತ್ತಿದೆ. ಅವರ ವ್ಯಕ್ತಿತ್ವ ವಿಲಕ್ಷಣ ಪ್ರತಿಭೆಯಿಂದ ಕೂಡಿದೆ. ಶಾಸ್ತ್ರಗಳ ಮರ್ಮವನ್ನು ಚೆನ್ನಾಗಿ ಬಲ್ಲವರಾಗಿ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡವರಲ್ಲಿ ರಾಮಭದ್ರಾಚಾರ್ಯರು ಅಗ್ರಗಣ್ಯರು.
ರಾಮಭದ್ರಾಚಾರ್ಯರು ಯಾವಾಗಲೂ – ಮನುಷ್ಯತ್ವವೇ ನನ್ನ ಮಂದಿರ, ನಾನು ಮನುಷ್ಯತ್ವವನ್ನು ಪೂಜಿಸುತ್ತೇನೆ. ನನ್ನ ದೃಷ್ಟಿಯಲ್ಲಿ ಅಂಗವಿಕಲರು ಮಹೇಶ್ವರನಿಗೆ ಸಮನಾದವರು. ಅವರ ಕೃಪೆಯನ್ನು ನಾನು ಬಯಸುತ್ತೇನೆ ಎಂದು ನುಡಿಯುತ್ತಾರೆ. ಈ ರೀತಿಯಾಗಿ ಉದಾತ್ತಭಾವನೆ ಅವರ ಜೀವನದಲ್ಲಿ ತುಂಬಿಕೊಂಡಿದೆ.
ವ್ಯಕ್ತಿತ್ವ
೧೯೫೦, ಜನವರಿ ೧೪ರಂದು ಉತ್ತರಪ್ರದೇಶದ ಜೌನಪುರ ಜಿಲ್ಲೆಯಲ್ಲಿ ರಾಮಭದ್ರಾಚಾರ್ಯರ ಜನನವಾಯಿತು. ಈ ಮೂಲಕ ಮಕರ ಸಂಕ್ರಾಂತಿಯ ದಿನ ಸರಯೂ ನದೀ ದಡದಲ್ಲಿ ವಸಿಷ್ಠಗೋತ್ರದ ಮಹಾತ್ಮರೊಬ್ಬರ ಉದಯವಾಯಿತು. ತಂದೆ ಪಂಡಿತ ರಾಜದೇವಮಿಶ್ರ, ತಾಯಿ ಶಚೀದೇವಿ. ಅಲೌಕಿಕ ಲಕ್ಷಣಗಳಿಂದ ಕೂಡಿದ್ದ ಮಗುವಿಗೆ ಗಿರಿಧರಮಿಶ್ರ ಎಂದು ನಾಮಕರಣ ಮಾಡಲಾಯಿತು. ಹುಟ್ಟಿ ಎರಡು ತಿಂಗಳುಗಳಲ್ಲೇ ಕಣ್ಣಿನ ದೃಷ್ಟಿ ನಷ್ಟವಾಯಿತು. ಈ ಹೃದಯವಿದ್ರಾವಕ ಘಟನೆಯಿಂದ ತಂದೆತಾಯಿಯರು ಕಂಗಾಲಾದರು. ದೇವರ ಇಚ್ಛೆಯನ್ನು ತಪ್ಪಿಸಲಾಗದು ಎಂದು ಊರ ಜನರು ಸಮಾಧಾನದ ಮಾತುಗಳನ್ನಾಡಿದರು. ರಾಮಭದ್ರಾಚಾರ್ಯರ ವಿಚಾರದಲ್ಲಿ, ಕುಟುಂಬವೆAಬ ಸಂಕುಚಿತ ಪ್ರಪಂಚದಿಂದ ಹೊರಬಂದು ಸಮಾಜವೆಂಬ ವಿಶಾಲ ಪ್ರಪಂಚಕ್ಕೆ ತೆರೆದುಕೊಳ್ಳುವುದಕ್ಕಾಗಿಯೇ ಚರ್ಮದ ಕಣ್ಣುಗಳನ್ನು ಕಿತ್ತುಕೊಂಡ ದೇವರು ಜ್ಞಾನದ ಕಣ್ಣುಗಳನ್ನು ನೀಡಿದ ಎಂದರೆ ಅತಿಶಯೋಕ್ತಿಯಲ್ಲ. ಜ್ಞಾನದ ಕಣ್ಣುಗಳನ್ನು ತೆರೆದಾಗ ಗಿರಿಧರನ ಅನೇಕ ಪ್ರತಿಭೆಗಳು ತೆರೆದುಕೊಂಡವು.
ಶಿಕ್ಷಣ
ಬಾಲಕನಾದ ಗಿರಿಧರನ ಬುದ್ಧಿಶಕ್ತಿ ಹಾಗೂ ಚುರುಕುತನ ಬಾಲ್ಯಕಾಲದಿಂದಲೇ ಅದ್ಭುತವಾಗಿತ್ತು. ಐದನೆಯ ವರ್ಷಕ್ಕೆ ಸಂಪೂರ್ಣ ಭಗವದ್ಗೀತೆಯನ್ನೂ ಎಂಟನೆಯ ವರ್ಷಕ್ಕೆ ಸಂಪೂರ್ಣ ರಾಮಚರಿತಮಾನಸ ಕಾವ್ಯವನ್ನೂ ಪುಸ್ತಕದ ಸಹಾಯವಿಲ್ಲದೆ ಹೇಳುತ್ತಿದ್ದ. ಮನೆಯಲ್ಲಿ ಹಿರಿಯರು ಓದುವುದನ್ನು ಕೇಳುತ್ತ ವ್ಯಾಕರಣ-ಕೋಷ-ಉಪನಿಷತ್ ಮೊದಲಾದ ಗ್ರಂಥಗಳ ಸಾಲುಗಳು ಕಂಠಸ್ಥವಾದವು. ತದನಂತರ ರಾಮವಲ್ಲಭದಾಸರ ಶಿಷ್ಯರಾದ ಈಶ್ವರದಾಸರಿಂದ ಶ್ರೀರಾಮಮಂತ್ರದೀಕ್ಷೆಯನ್ನು ಪಡೆದರು. ದೀಕ್ಷೆಯ ನಂತರ ಸ್ವಾಮಿ ರಾಮಭದ್ರಾಚಾರ್ಯ ಎಂದು ಪ್ರಸಿದ್ಧರಾದರು. ವೈಷ್ಣವ ಪರಂಪರೆಯಂತೆ ದೀಕ್ಷೆ ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ತೆರಳಿದರು. ಶ್ರೀ ಸಂಪೂರ್ಣಾನಂದ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರಿ-ಆಚಾರ್ಯ (ಬಿ.ಎ., ಎಂ.ಎ.) ತರಗತಿಗಳಲ್ಲಿ ಚಿನ್ನದ ಪದಕಗಳನ್ನು ಪಡೆದರು. ಅಭಿನವ ಪಾಣಿನಿ ಎಂದೇ ಪ್ರಸಿದ್ಧರಾಗಿದ್ದ ಶ್ರೀ ರಾಮಪ್ರಸಾದ ತ್ರಿಪಾಠಿಯವರ ಮಾರ್ಗದರ್ಶನದಲ್ಲಿ ರಾಮಾಯಣದಲ್ಲಿ ಅಪಾಣಿನೀಯ ಪ್ರಯೋಗಗಳ ವಿಮರ್ಶೆ ಎಂಬ ವಿಷಯದಲ್ಲಿ ವಿದ್ಯಾವಾರಿಧಿ (ಪಿಹೆಚ್.ಡಿ) ಪದವಿ ಪಡೆದರು. ಅಷ್ಟಾಧ್ಯಾಯಿಯ ಸೂತ್ರಗಳಲ್ಲಿ ಶಾಬ್ದಬೋಧ ವಿಮರ್ಶೆ ಎಂಬ ವಿಷಯದಲ್ಲಿ ವಿದ್ಯಾವಾಚಸ್ಪತಿ (ಡಿ.ಲಿಟ್) ಪದವಿಯನ್ನೂ ಗಳಿಸಿದರು.
ಸಾಮಾಜಿಕ ಕೆಲಸಗಳು
ವನವಾಸ ಕಾಲದಲ್ಲಿ ಶ್ರೀರಾಮನು ವಾಸಸ್ಥಾನವಾಗಿದ್ದ ಚಿತ್ರಕೂಟದಲ್ಲಿ ರಾಮಭದ್ರಾಚಾರ್ಯರು ೧೯೭೮ರಲ್ಲಿ ತುಲಸೀಪೀಠವನ್ನು ಸ್ಥಾಪಿಸಿದರು. ರಾಮಕಥೆಯನ್ನು ಎಲ್ಲ ಕಡೆಗಳಲ್ಲೂ ಪಸರಿಸುವುದು ಈ ಪೀಠದ ಉದ್ದೇಶವಾಗಿತ್ತು. ಹೀಗೆ ಸ್ಥಾಪನೆಯಾದ ಪೀಠವು ಕಳೆದ ನಲವತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದ ರಾಮಕತೆಯ ಸುಧೆಯನ್ನು ಎಲ್ಲ ಕಡೆಗಳಲ್ಲೂ ಹರಿಸುತ್ತಿದೆ. ಇದರೊಂದಿಗೆ ಕೃಷ್ಣ ಕತೆಯೂ, ಆರ್ಷಪರಂಪರೆಗೆ ಸಂಬಂಧಿಸಿದ ಕಥಾನಕಗಳೂ ಬಿತ್ತರಗೊಳ್ಳುತ್ತಿವೆ.
ರಾಮಭದ್ರಾಚಾರ್ಯರ ಮತ್ತೊಂದು ಮಹತ್ತ್ವಪೂರ್ಣ ಕೆಲಸವೆಂದರೆ ಜಗದ್ಗುರು ವಿಕಲಾಂಗ ವಿಶ್ವವಿದ್ಯಾಲಯದ ಸ್ಥಾಪನೆ. ೨೦೦೧ರ ಸೆಪ್ಟೆಂಬರ್ ೨೭ರಂದು ಚಿತ್ರಕೂಟದಲ್ಲೇ ವಿಶ್ವವಿದ್ಯಾಲಯ ಆರಂಭವಾಯಿತು. ದೇಶದಲ್ಲಿ ಮೊಟ್ಟಮೊದಲಿಗೆ ಇಂತಹ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಈ ವಿಶ್ವವಿದ್ಯಾಲಯದಲ್ಲಿ ನಿರಾಶ್ರಿತರಾದ ವಿಕಲಾಂಗರನ್ನು ಕರೆತಂದು ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ದೇಶದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರಕೂಟದಲ್ಲಿ ಅಂಧ ವಿದ್ಯಾರ್ಥಿಗಳಿಗಾಗಿ ಪ್ರಜ್ಞಾಚಕ್ಷು ವಿಶ್ವವಿದ್ಯಾಲಯದ ಸ್ಥಾಪನೆಯೂ ರಾಮಭದ್ರಾಚಾರ್ಯರ ಮುತುವರ್ಜಿಯಲ್ಲಿ ನಡೆಯಿತು.
ಶಾಸ್ತ್ರೀಯ ಕೊಡುಗೆಗಳು
ರಾಮಭದ್ರಾಚಾರ್ಯರು ೨೨ ಭಾಷೆಗಳಲ್ಲಿ ಪರಿಣತರು. ಬಲ್ಲ ಎಲ್ಲ ಭಾಷೆಗಳಲ್ಲೂ ಗ್ರಂಥಗಳನ್ನು ರಚಿಸಿದ್ದಾರೆ. ಸಂಸ್ಕೃತ, ಹಿಂದಿ, ಗುಜರಾತಿ, ಒಡಿಯಾ, ಮೈಧಿಲೀ, ಭೋಜಪುರೀ, ಅವಧೀ, ವ್ರಜ ಮುಂತಾದ ಭಾಷೆಗಳಲ್ಲಿ ೨೦೦ಕ್ಕೂ ಹೆಚ್ಚಿನ ಗ್ರಂಥಗಳು ಪ್ರಕಟವಾಗಿವೆ. ಭಾರ್ಗವ ರಾಘವೀಯಮ್, ರಾಮಾನಂದಾಚಾರ್ಯ ಚರಿತಮ್ ಎಂಬ ಮಹಾಕಾವ್ಯಗಳು ಸಂಸ್ಕೃತದಲ್ಲಿಯೂ ಅರುಂಧತೀ ಮಹಾಕಾವ್ಯ ಹಿಂದಿಯಲ್ಲೂ ರಚಿತವಾಗಿವೆ. ಐದು ಖಂಡಕಾವ್ಯಗಳನ್ನೂ ರಾಮಭದ್ರಾಚಾರ್ಯರು ರಚಿಸಿದ್ದಾರೆ. ಅವುಗಳಲ್ಲಿ ಆಜಾದ ಚಂದ್ರಶೇಖರ ಚರಿತಮ್, ಲಘುರಘುವರಮ್ ಸರಯೂಲಹರೀ ಎಂಬ ಕಾವ್ಯಗಳು ಸಂಸ್ಕೃತದಲ್ಲೂ, ಕಾಕಾವಿದುರಸ, ಮಾಂಶಬರೀ ಎಂಬ ಕಾವ್ಯಗಳು ಹಿಂದಿಯಲ್ಲಿಯೂ ಇವೆ. ಕುಬ್ಜಪತ್ರ ಎಂಬ ದೂತಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ರಾಘವಗೀತಿಗುಂಜನಮ್ ಎಂಬ ಗೀತಿಕಾವ್ಯ ಸಂಸ್ಕೃತದಲ್ಲೂ ಭಕ್ತಿಗೀತಸುಧಾ ಎಂಬ ಗೀತಿಕಾವ್ಯ ಹಿಂದಿಯಲ್ಲೂ ರಚಿತವಾಗಿವೆ.
ಶ್ರೀರಾಮಭಕ್ತಿಶತಕ, ಆರ್ಯಾಶತಕ, ಚಂಡೀಶತಕ ರಾಘವೇಂದ್ರಶತಕ, ಗಣಪತಿಶತಕ, ರಾಘವಚರಣಚಿಹ್ನಶತಕ ಎಂಬ ಆರು ಶತಕಕಾವ್ಯಗಳೂ, ಗಂಗಾಮಹಿಮ್ನ ಸ್ತೋತ್ರ, ಜಾನಕೀಕೃಪಾಕಟಾಕ್ಷಸ್ತೋತ್ರ, ರಾಮವಲ್ಲಭಾಸ್ತೋತ್ರ, ಚಿತ್ರಕೂಟವಿಹಾರ್ಯಷ್ಟಕ, ಭಕ್ತಿಸಾರಸರ್ವಸ್ವ ಶ್ರೀರಾಘವಭಾವದರ್ಶನ, ನರ್ಮದಾಷ್ಟಕ ಮುಂತಾದ ಸ್ತೋತ್ರಕಾವ್ಯಗಳೂ, ಬ್ರಹ್ಮಸೂತ್ರೇಷು ರಾಘವಕೃಪಾಭಾಷ್ಯಮ್, ಭಗವದ್ಗೀತಾಯಾಂ ರಾಘವಕೃಪಾಭಾಷ್ಯಂ ಮೊದಲಾದ ಹದಿನೈದು ಭಾಷ್ಯಗ್ರಂಥಗಳೂ, ಈಶ ಕೇನ ಮಾಂಡೂಕ್ಯ ಕಠ ಪ್ರಶ್ನ ತೈತ್ತಿರೀಯ ಐತರೇಯ ಶ್ವೇತಾಶ್ವತರ ಛಾಂದೋಗ್ಯ ಬೃಹದಾರಣ್ಯಕ ಉಪನಿಷತ್ತುಗಳಿಗೆ ರಾಘವಕೃಪಾ ಎಂಬ ಹೆಸರಿನ ಭಾಷ್ಯವೂ ನಾರದ ಭಕ್ತಿಸೂತ್ರ ಭಾಷ್ಯ ಮುಂತಾದ ಕೃತಿಗಳೂ ರಾಮಭದ್ರಾಚಾರ್ಯರ ಲೇಖನಿಯಿಂದ ಹೊರಹೊಮ್ಮಿವೆ.
ರಾಮಚರಿತಮಾನಸ ಗ್ರಂಥವನ್ನು ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಬಾರಿ ಪಾರಾಯಣ ಮಾಡಿದ ಮಹಾತ್ಮ ರಾಮಭದ್ರಾಚಾರ್ಯರು. ಐದು ವರ್ಷಗಳಲ್ಲಿ ಐವತ್ತಕ್ಕಿಂತಲೂ ಹೆಚ್ಚಿನ ತಾಳೆಗರಿ ಗ್ರಂಥಗಳನ್ನು ಸಂಗ್ರಹಿಸಿ ರಾಮಚರಿತಮಾನಸದ ಕ್ರಿಟಿಕಲ್ ಎಡಿಶನ್ ತಯಾರಿಸಿದ ಶ್ರೇಯಸ್ಸೂ ರಾಮಭದ್ರಾಚಾರ್ಯರಿಗೇ ಸಲ್ಲುತ್ತದೆ. ರಾಮಭದ್ರಾಚಾರ್ಯರು ಸಂಗ್ರಹಿಸಿದ ರಾಮಚರಿತಮಾನಸ ಗ್ರಂಥಕ್ಕೆ ವಿದ್ವದ್ಲೋಕದಲ್ಲಿ ಅದರದೇ ಆದ ಮಾನ್ಯತೆಯಿದೆ.
ಪ್ರಶಸ್ತಿಗಳು
೧. ತುಲಸೀಪೀಠಾಧೀಶ್ವರ – ೧೯೭೮ರಲ್ಲಿ ತುಲಸೀಪೀಠದ ಸ್ಥಾಪನೆಯಾದ ನಂತರ ರಾಮಾನಂದೀಯ ವೈಷ್ಣವರು ಕೊಡಮಾಡಿದ ಬಿರುದು.
೨. ಜಗದ್ಗುರು ರಾಮಾನಂದಾಚಾರ್ಯ – ೧೯೮೮ರ ಜೂನ್ ತಿಂಗಳಲ್ಲಿ ಕಾಶಿಯಲ್ಲಿ, ೧೯೯೫ರ ಆಗಸ್ಟ್ ತಿಂಗಳಲ್ಲಿ ಅಯೋಧ್ಯೆಯಲ್ಲಿ ಅಖಂಡ ವೈಷ್ಣವ ಪರಿಷತ್ ವತಿಯಿಂದ ನೀಡಲಾದ ಬಿರುದು.
೩. ಧರ್ಮಚಕ್ರವರ್ತೀ- ಹರಿದ್ವಾರದ ಮಹಾಕುಂಭದಲ್ಲಿ ವಿಶ್ವಧರ್ಮಸಂಸತ್ತಿನ ವತಿಯಿಂದ ನೀಡಲಾದ ಬಿರುದು.
೪. ಭಾಊದೇವರಸ ಪುರಸ್ಕಾರ – ೨೦೦೯ರಲ್ಲಿ
೫. ಮಹರ್ಷಿ ಬಾದರಾಯಣ ಪುರಸ್ಕಾರ – ೨೦೦೩ರಲ್ಲಿ ಭಾರತಸರ್ಕಾರ ನೀಡಿದ ಬಿರುದು
೬. ಸಾಹಿತ್ಯ ಅಕಾಡೆಮಿ ಪುರಸ್ಕಾರ – ೨೦೦೫ರಲ್ಲಿ ಭಾರತಸರ್ಕಾರದಿಂದ
೭. ಶ್ರಾವಣೀ ಅಲಂಕರಣ- ೨೦೦೬ರಲ್ಲಿ
೮. ಜ್ಞಾನಪೀಠ- ೨೦೨೪ರಲ್ಲಿ
ರಾಮಜನ್ಮಭೂಮಿಯ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದ್ದಾಗ ರಾಮಭದ್ರಾಚಾರ್ಯರು ಮಹತ್ತ್ವದ ಪಾತ್ರ ವಹಿಸಿದ್ದರು. ೨೦೦೩ರಲ್ಲಿ ಅಲಹಾಬಾದ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ರಾಮಭದ್ರಾಚಾರ್ಯರು ಅಯೋಧ್ಯೆಯೇ ರಾಮನ ಜನ್ಮಭೂಮಿ ಎನ್ನುವುದನ್ನು ಸ್ಪಷ್ಟವಾದ ದಾಖಲೆಗಳಿಂದ ಪ್ರತಿಪಾದಿಸಿದರು. ಸ್ಕಾಂದಪುರಾಣದಲ್ಲಿ ರಾಮಮಂದಿರದ ಭೌಗೋಳಿಕ ವಿವರಣೆಯಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇವರು ಪ್ರತಿಪಾದಿಸಿದ ಅನೇಕ ವಿಷಯಗಳು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲಿಖಿತವಾಗಿವೆ. ಕಣ್ಣಿಲ್ಲದವರೂ ಜಗತ್ತಿಗೆ ಬೆಳಕಾಗಬಹುದು ಎಂಬುದರ ಉದಾಹರಣೆಯಾಗಿ ರಾಮಭದ್ರಾಚಾರ್ಯರು ನಮ್ಮ ಮುಂದೆ ನಿಲ್ಲುತ್ತಾರೆ.
ಜಗತ್ತಿಗೆ ಮಾರ್ಗದರ್ಶಕವಾದ ರಾಮಭದ್ರಾಚಾರ್ಯರ ಕೆಲವು ಮಾತುಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ. ಅಂತರ್ಮುಖಿ ಬಹಿರ್ಮುಖಿಯಾದರೆ ಜಗತ್ತೇ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ರಾಮನಲ್ಲಿ ವಿಶ್ವಾಸವಿದ್ದರೆ ಬೆಟ್ಟದಂತಹ ಕಷ್ಟಗಳೂ ಕರಗುತ್ತವೆ. ದೇವರಲ್ಲಿ ದೃಢವಿಶ್ವಾಸವಿರಬೇಕು. ದೇವರು ತೋರಿದ ದಾರಿಯಲ್ಲಿ ಮುಂದುವರಿಯಬೇಕು. ದೇವರ ಕೃಪೆಯಿರುವವರೆಗೂ ಯಾರಿಗೂ ಹೆದರಬೇಕಾದ ಆವಶ್ಯಕತೆಯಿಲ್ಲ. ದೇವರ ಕೃಪೆಯಿದ್ದರೆ ಜ್ಞಾನವು ಲಭ್ಯವಾಗುತ್ತದೆ. ಆ ಜ್ಞಾನವೇ ಎಲ್ಲ ಕಷ್ಟಗಳಲ್ಲೂ ಆಸರೆಯಾಗಿ ನಿಲ್ಲುತ್ತದೆ. ದೇವರ ಕೃಪೆಯನ್ನು ಪಡೆದುಕೊಳ್ಳಲು ತ್ಯಾಗ ಹಾಗೂ ಭಕ್ತಿಗಳೇ ಸಾಧನಗಳು.
ನಿರಂತರ ಶ್ರಮ, ಏಕಾಗ್ರತೆ, ಆರಂಭಿಸಿದ ಕೆಲಸವನ್ನು ಕೊನೆಯ ತನಕ ಬಿಡದಿರುವುದು, ಶಿಸ್ತುಬದ್ಧ ಜೀವನ ಮೊದಲಾದ ಗುಣಗಳು ಯಾರಲ್ಲಿವೆಯೋ ಆತ ವಿಶಿಷ್ಟವಾದ ಸಿದ್ಧಿಯನ್ನು ಗಳಿಸದೆ ಇರುವುದಿಲ್ಲ – ಎಂಬುವುದನ್ನು ರಾಮಭದ್ರಾಚಾರ್ಯರು ತಮ್ಮ ಬದುಕಿನಿಂದಲೇ ಸಾಧಿಸಿ ತೋರಿಸಿದ್ದಾರೆ. ಸಂಕಲ್ಪಶಕ್ತಿ ದೃಢವಾಗಿದ್ದರೆ ಏನನ್ನು ತಾನೇ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುವುದಕ್ಕೆ ರಾಮಭದ್ರಾಚಾರ್ಯರ ಜೀವನ ಉದಾಹರಣೆಯಾಗಿ ನಿಲ್ಲುತ್ತದೆ.
ರಾಮಭದ್ರಾಚಾರ್ಯರು ಇಂದಿಗೂ ಕೂಡಾ ಸಾಹಿತ್ಯರಚನೆ, ರಾಮಕಥೆ, ವಿಕಲಾಂಗರ ಸೇವೆ ಮೊದಲಾದ ಕೆಲಸಗಳಲ್ಲಿ ನಿರತರಾಗಿ ಕಾಲ ಕಳೆಯುತ್ತಾರೆ. ಅವರು ತಮ್ಮ ಬದುಕನ್ನೇ ರಾಮ ಹಾಗೂ ರಾಷ್ಟ್ರಕ್ಕಾಗಿ ಸಮರ್ಪಿಸಿದ್ದಾರೆ. ಶ್ರೀರಾಮನೇ ರಾಷ್ಟ್ರ, ರಾಷ್ಟ್ರವೇ ಶ್ರೀರಾಮ ಎಂಬುವುದು ಅವರ ಧ್ಯೇಯವಾಕ್ಯವಾಗಿದೆ. ಅವರ ಶಾಸ್ತ್ರನಿಷ್ಠೆ ಹಾಗೂ ರಾಮನಿಷ್ಠೆ ಹೃದ್ಯವೂ, ವಂದ್ಯವೂ ಅನುಸರಣೀಯವೂ ಆಗಿದೆ. ರಾಮಭದ್ರಾಚಾರ್ಯರ ಆಯಸ್ಸು ಆರೋಗ್ಯ ಅಭ್ಯುದಯಗಳು ಉತ್ತರೋತ್ತರವಾಗಿ ಉತ್ಕರ್ಷದೆಡೆಗೆ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
ಸಂಸ್ಕೃತದಿಂದ ಕನ್ನಡ ಅನುವಾದ: ಸೂರ್ಯ ಹೆಬ್ಬಾರ