ಕಿರಿಯ ಕುಣಿಗಲ ರಾಮಶಾಸ್ತ್ರಿಗಳು ತಮ್ಮ ಮನೆಯನ್ನು ಯಾವುದಾದರೂ ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕೆಂದು ಯೋಚಿಸಿದ್ದರು. ಇದಕ್ಕೆ ಅವಕಾಶ ತಾನಾಗಿಯೇ ಒದಗಿಬಂದಿತು. ಶೃಂಗೇರಿಯ ಶ್ರೀಶಾರದಾಪೀಠದ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು {ಕ್ರಿ.ಶ. ೭-೪-೧೯೧೨ ರಿಂದ ೨೬-೯-೧೯೫೪} ತಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು {ಪೀಠಾಧಿಪತ್ಯದ ಕಾಲ: ಕ್ರಿ.ಶ. ೨೭-೬-೧೮೭೯ ರಿಂದ ೨೦-೩-೧೯೧೨} ಜನ್ಮತಳೆದ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದರು. ಇದಕ್ಕಾಗಿ ಆಗ ಶ್ರೀಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀಕಂಠಶಾಸ್ತ್ರಿಗಳೇ ಈ ಕೆಲಸವನ್ನು ಸಾಧಿಸಲು ಸಮರ್ಥರು ಎಂದು ಅರಿತು ಅವರಿಗೆ ಈ ಕೆಲಸವನ್ನು ಒಪ್ಪಿಸಿದರು. ಶಾಸ್ತ್ರಿಗಳು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಮಾಡಿ ಈ ವಿಚಾರವನ್ನು ಚರ್ಚಿಸಿದರು. ಶ್ರೀಮಠದ ಪರಮಭಕ್ತರಾಗಿದ್ದ ಮಹಾರಾಜರು ಈ ಸಂಬಂಧವಾಗಿ ಅಗತ್ಯವಿದ್ದ ನೆರವನ್ನು ಸಂತೋಷದಿಂದ ಒದಗಿಸಲು ಮುಂದಾದರು. ಕುಣಿಗಲ ರಾಮಶಾಸ್ತ್ರಿಗಳು ಕೂಡ ಇದಕ್ಕೆ ಸಂತೋಷದಿಂದ ಒಪ್ಪಿಕೊಂಡು ತಮ್ಮ ಸುಪರ್ದಿಯಲ್ಲಿದ್ದ ಮನೆಯನ್ನು ಶ್ರೀಮಠಕ್ಕೆ ಬಿಟ್ಟುಕೊಟ್ಟರು.
ಶ್ರೀಶಾರದಾಗುರುಭ್ಯೋ ನಮಃ
ಭಾರತೀ ಕರುಣಾಪಾತ್ರಂ ಭಾರತೀಪದಭೂಷಣಂ |
ಭಾರತೀಪದಮಾರೂಢಂ ಭಾರತೀತೀರ್ಥಮಾಶ್ರಯೇ ||
ವಿದ್ಯಾವಿನಯಸಂಪನ್ನಂ ವೀತರಾಗಂ ವಿವೇಕಿನಂ |
ವಂದೇ ವೇದಾಂತತತ್ತ್ವಜ್ಞಂ ವಿಧುಶೇಖರಭಾರತೀಮ್ ||
ಅಭಿನವ ಶಂಕರಾಲಯವಿರುವ ಪ್ರದೇಶವು ಮೂಲತಃ ಶೃಂಗೇರಿ ಶ್ರೀಮಠದ ೩೩ನೆಯ ಪೀಠಾಧಿಪತಿಗಳಾಗಿದ್ದ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ಜನ್ಮಸ್ಥಳವಾಗಿದೆ. ಶ್ರೀಶಂಕರಾಚರ್ಯರು ಜನಿಸಿದ ಈಗಿನ ಕೇರಳ ರಾಜ್ಯದಲ್ಲಿರುವ ಕಾಲಟೀ ಕ್ಷೇತ್ರವನ್ನು ಕಂಡುಹಿಡಿದು, ಶಂಕರರ ಗ್ರಂಥಗಳನ್ನು ಪ್ರಕಟವಾಗುವಂತೆ ಮಾಡಿ ಅಭಿನವ ಶಂಕರರೆಂದೇ ಖ್ಯಾತರಾಗಿದ್ದವರು ನೃಸಿಂಹಭಾರತೀ ಸ್ವಾಮಿಗಳು. ಈ ಕಾರಣಕ್ಕಾಗಿಯೇ ಅದು ಅಭಿನವ ಶಂಕರಾಲಯವೆನಿಸಿದೆ. ಮೈಸೂರಿನ ಸಾಂಸ್ಕೃತಿಕ-ಆಧ್ಯಾತ್ಮಿಕ ಚಟುವಟಿಕೆಗಳ ಒಂದು ಕೇಂದ್ರವಾಗಿರುವ ಈ ಸ್ಮಾರಕಕ್ಕೆ ಈಗ ೧೦೦ ವರ್ಷಗಳ ಸಂಭ್ರಮ. ಈ ಸಂದರ್ಭದಲ್ಲಿ ಈ ಸ್ಥಳದ ಇತಿಹಾಸದ ಬಗೆಗೆ ತಿಳಿದುಕೊಳ್ಳಬೇಕಾದ್ದು ಬಹಳವಿದೆ.
ಪೂರ್ವೇತಿಹಾಸ
ಮೈಸೂರು ಸಂಸ್ಥಾನದ ಅರಸರಾಗಿದ್ದ, ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲ (ಕ್ರಿ.ಶ. ೧೭೯೮-೧೮೬೮) ನಮ್ಮ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ್ದು. ಆ ದಶಕಗಳಲ್ಲಿ ಸಾಹಿತ್ಯ ಸಂಸ್ಕೃತಿಗಳಿಗೆ ದೊರೆತಷ್ಟು ಪ್ರೋತ್ಸಾಹವು ಸದಾ ಸ್ಮರಣೀಯವಾದ್ದು. ಕನ್ನಡ ಸಾಹಿತ್ಯದೊಂದಿಗೆ ಸಂಸ್ಕೃತ ಸಾಹಿತ್ಯವೂ ಬಹುಮುಖವಾಗಿ ಬೆಳೆಯಿತು. ರಾಜರ ಆಸ್ಥಾನದಲ್ಲಿ ಮಹಾಮಹಾ ಸಂಸ್ಕೃತವಿದ್ವಾಂಸರು ಇದ್ದರು. ಇವರಲ್ಲಿ ಕುಣಿಗಲ ರಾಮಶಾಸ್ತ್ರಿಗಳು ಪ್ರಮುಖರು (ಜನನ: ೨೩-೪-೧೮೦೭; ನಿಧನ: ೨೭-೧-೧೮೬೦). ಇವರ ಮೂಲನೆಲೆ ಇಂದಿನ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಎಡತೊರೆ (ಈಗ ಇದನ್ನು ಕೃಷ್ಣರಾಜನಗರ ಎಂದು ಕರೆಯಲಾಗುತ್ತಿದೆ). ಆದರೆ ಅವರ ಮಾತಾಮಹರ (ತಾಯಿಯವರ ತಂದೆ) ಸ್ಥಳ ತುಮಕೂರು ಜಿಲ್ಲೆಯ ಕುಣಿಗಲ್. ಹೇಗೋ ಈ ಸ್ಥಳದ ಹೆಸರೇ ರಾಮಶಾಸ್ತ್ರಿಗಳಿಗೆ ಸೇರಿ, ಅವರನ್ನು ಕುಣಿಗಲ ರಾಮಶಾಸ್ತ್ರಿಗಳೆಂದೇ ಕರೆಯುವುದು ರೂಢಿಯಾಯಿತು. ಅವರದು ಅತ್ಯಂತ ಗಣ್ಯವಾದ ಮನೆತನ. ರಾಮಶಾಸ್ತ್ರಿಗಳು ‘ಶತಕೋಟಿ’ಯೆಂಬ ತರ್ಕಗ್ರಂಥದ ಕರ್ತೃಗಳಾಗಿ ಪ್ರಸಿದ್ಧರಾಗಿದ್ದವರು.
ಮೊದಲು ರಾಯದುರ್ಗದ ಭಟ್ಟ ತ್ರ್ಯಂಬಕಶಾಸ್ತ್ರಿಗಳಲ್ಲಿಯೂ ಅನಂತರ ಮೈಸೂರಿನ ತಿರುಪತಿ ಶ್ರೀನಿವಾಸಾಚರ್ಯರಲ್ಲಿಯೂ ವಿದ್ಯಾಭ್ಯಾಸವನ್ನು ನಡೆಸಿದ ರಾಮಶಾಸ್ತ್ರಿಗಳು, ತದನಂತರದ ಕಾಲದಲ್ಲಿ ಮುಮ್ಮಡಿ ಕೃಷ್ಣರಾಜರ ಆಸ್ಥಾನಿಕರೂ ರಾಜರಿಗೆ ಪರಮಾಪ್ತರೂ ಆದರು. ಇವರು ಮೈಸೂರಿನಲ್ಲಿ ಕೊಂಡುಕೊಂಡು ವಾಸವಾಗಿದ್ದ ಮನೆಯೇ ಇಂದು ಅಭಿನವ ಶಂಕರಾಲಯವೆಂದು ಹೆಸರಾಗಿರುವ ಶೃಂಗೇರಿ ಶ್ರೀಮಠಕ್ಕೆ ಸೇರಿರುವ ಸ್ಥಳವಾಗಿದೆ. ಈ ಮನೆ ಕುಣಿಗಲ ರಾಮಶಾಸ್ತ್ರಿಗಳಿಗೆ ಹೇಗೆ ದೊರಕಿತು ಎಂಬುದು ಸ್ವಾರಸ್ಯಕರ.
ರಾಮಶಾಸ್ತ್ರಿಗಳು ಕೊಂಡುಕೊಂಡ ಮನೆಯು ತಂಜಾವೂರಿನ ನಾಯಕನೊಬ್ಬನಿಗೆ ಸೇರಿತ್ತು. ತಂಜಾವೂರಿನ ಅರಸರಿಗೆ ಗಂಡುಸಂತಾನ ಇರಲಿಲ್ಲವಾಗಿ, ದತ್ತುಪುತ್ರನನ್ನು ಸ್ವೀಕರಿಸುವ ಯೋಚನೆಯಲ್ಲಿ ಆ ನಾಯಕರು ಇದ್ದರು. ಆದರೆ ಬ್ರಿಟಿಷರು ಇದಕ್ಕೆ ಅಡ್ಡಗಾಲಾಗಿ ನಿಂತಿದ್ದರು. ಈ ಗೊಂದಲಗಳ ಗೂಡಿನಲ್ಲಿ ತಂಜಾವೂರು ರಾಜ್ಯ ನಲುಗಿತ್ತು. ಇಂತಹ ಸಂದರ್ಭದಲ್ಲಿ ರಾಮಶಾಸ್ತ್ರಿಗಳು ಕೊಂಡುಕೊಂಡ ಮನೆಯ ಯಜಮಾನನಾದ ತಂಜಾವೂರಿನ ನಾಯಕನು ಕಾಲಕ್ಕೆ ಉಚಿತವಾದ ಮರ್ಯಾದೆಯನ್ನು ಅನುಸರಿಸಿಕೊಂಡು ಮೈಸೂರಿನ ಆಸ್ಥಾನಕ್ಕೆ ರಾಯಭಾರಿಯಾಗಿ ಬಂದಿದ್ದನು. ಮೈಸೂರಿನಲ್ಲಿಯೂ ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನಿಕರು ಮತ್ತು ಬಂಧುಗಳಲ್ಲಿ ಕೆಲವರು ಬ್ರಿಟಿಷರ ಪರ ನಿಂತು ೧೮೩೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅಧಿಕಾರ ತಪ್ಪುವಂತೆ ಮಾಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಸಮಯದಲ್ಲಿ ಪರ ರಾಜ್ಯಕ್ಕೂ ಮೈಸೂರು ಸಂಸ್ಥಾನಕ್ಕೂ ಸಂಬAಧಗಳು ಸೌಹಾರ್ದಯುತವಾಗಿರಲು ಶ್ರಮಿಸುತ್ತಿದ್ದವರು ರಾಯಭಾರಿಗಳು. ಇಂತಹ ರಾಯಭಾರಿಗಳಲ್ಲಿ ಮೇಲೆ ಪ್ರಸ್ತಾವಿಸಿದ ತಂಜಾವೂರಿನ ನಾಯಕನು ಒಬ್ಬನಾಗಿದ್ದನು. ಈತ ಕಂಪೆನಿ ಸರ್ಕಾರಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದನೆಂಬ ಆಪಾದನೆಯನ್ನು ಹೊರಿಸಿ ಈತನನ್ನು ಮತ್ತು ಬೇರೆ ಹಲವು ಅಧಿಕಾರಿಗಳನ್ನು ಬ್ರಿಟಿಷರು ಬಂಧಿಸಿ, ಅವರನ್ನೆಲ್ಲ ಬೆಂಗಳೂರಿಗೆ ಸಾಗಿಸಿ ನಜರುಬಂದಿಯಲ್ಲಿ ಇಟ್ಟರು. ಇಂತಹ ಪರಿಸ್ಥಿತಿಯಲ್ಲಿ ತಂಜಾವೂರಿನ ನಾಯಕನು ರಾಮಶಾಸ್ತ್ರಿಗಳ ಪ್ರಭಾವವನ್ನು ಮತ್ತು ತನಗೆ ಸಂಭವಿಸಬಹುದಾಗಿದ್ದ ತೊಂದರೆಯನ್ನು ಮನಗಂಡು ರಾಮಶಾಸ್ತ್ರಿಗಳಿಗೆ ತನ್ನ ಮನೆಯನ್ನು ಸುಮಾರು ೪೦೦ ರೂಪಾಯಿಗಳಿಗೆ ಮಾರಾಟ ಮಾಡಿದನು. ಅನಂತರದಲ್ಲಿ ಈ ಮನೆಯಲ್ಲಿಯೇ ರಾಮಶಾಸ್ತ್ರಿಗಳು ನೆಲಸಿದರು.
ರಾಮಶಾಸ್ತ್ರಿಗಳಿಗೆ ಮನೆಯನ್ನು ಮಾರಾಟ ಮಾಡಿದ ತಂಜಾವೂರಿನ ನಾಯಕನು ಯಾರೆಂಬುದು ಖಚಿತವಾಗಿ ತಿಳಿದುಬರುತ್ತಿಲ್ಲ. ಈತ ರಾಯಭಾರಿಯಾಗಿ ಬಂದು ಮೈಸೂರಿನಲ್ಲಿಯೇ ನೆಲೆ ನಿಂತಿದ್ದಂತೆ ಕಾಣುತ್ತದೆ. ಇಲ್ಲವಾದಲ್ಲಿ ಮೈಸೂರಿನಲ್ಲಿಯೇ ಮನೆಯನ್ನು ಹೊಂದಿರಲು ಕಾರಣ ಕಾಣುವುದಿಲ್ಲ. ಜೊತೆಗೆ ಮೊದಲೇ ಇದ್ದ ಮನೆಯನ್ನು ಈ ನಾಯಕನು ಹೊಂದಿದ್ದನೋ ಇಲ್ಲವೇ ಹೊಸದಾಗಿಯೇ ಕಟ್ಟಿಸಿಕೊಂಡಿದ್ದನೋ ಎಂಬುದನ್ನು ಹೇಳಲು ಆಧಾರಗಳು ಲಭ್ಯವಿಲ್ಲ. ರಾಮಶಾಸ್ತ್ರಿಗಳು ತಂಜಾವೂರು ನಾಯಕನಿಂದ ಮನೆಯನ್ನು ಕೊಂಡದ್ದು ಬಹುಶಃ ೧೮೩೧ರ ಆಸುಪಾಸಿನಲ್ಲಿ ಎಂದು ಕಾಣುತ್ತದೆ.
ಈ ಮನೆಯಲ್ಲಿಯೇ ರಾಮಶಾಸ್ತ್ರಿಗಳ ತೃತೀಯ ಪುತ್ರರಾದ (ಅನಂತರ ಶೃಂಗೇರಿ ಶ್ರೀಮಠದ ಪೀಠಾಧಿಪತಿಗಳೂ ಆದ) ಶಿವಸ್ವಾಮಿಗಳು ಜನಿಸಿದ್ದು [ಪೈಂಗಳ ಫಾಲ್ಗುಣ ಬಹುಳ ಏಕಾದಶೀ, ಶ್ರವಣ ನಕ್ಷತ್ರ ರಾತ್ರಿ ೯ ಘಂಟೆ = ಕ್ರಿ.ಶ. ಮಾರ್ಚ್ ೧೧, ೧೮೫೮, ಬುಧವಾರ]. ರಾಮಶಾಸ್ತ್ರಿಗಳು ನಿಧನಹೊಂದಿದ ಅನಂತರದಲ್ಲಿ ಈ ಮನೆಯು ಅವರ ಹಿರಿಯ ಪುತ್ರರಾದ ಲಕ್ಷ್ಮೀನರಸಿಂಹಶಾಸ್ತ್ರಿಗಳ (ಜನನ: ೧೮೪೧) ಒಡೆತನಕ್ಕೆ ಬಂದಿತು. ಲಕ್ಷ್ಮೀನರಸಿಂಹಶಾಸ್ತ್ರಿಗಳ ಅನಂತರದಲ್ಲಿ ಅವರ ದತ್ತುಪುತ್ರರಾದ ಕುಣಿಗಲ ರಾಮಶಾಸ್ತ್ರಿಗಳ ವಶಕ್ಕೆ ಈ ಮನೆ ಬಂದು ಅದರಲ್ಲಿಯೇ ಅವರು ವಾಸವಾಗಿದ್ದರು. (ಇವರನ್ನು ಕಿರಿಯ ಕುಣಿಗಲ ರಾಮಶಾಸ್ತ್ರಿಗಳೆಂದು ಕರೆಯುವುದು ರೂಢಿ.) ಇವರು ಈ ಮನೆಯನ್ನು ಧರ್ಮಕಾರ್ಯಕ್ಕೆ ಉಪಯೋಗಿಸಬೇಕೆಂದು ಯೋಚಿಸಿದ್ದರಂತೆ.
ಅಭಿನವ ಶಂಕರಾಲಯ ರೂಪಗೊಂಡದ್ದು
ಕಿರಿಯ ಕುಣಿಗಲ ರಾಮಶಾಸ್ತ್ರಿಗಳು ತಮ್ಮ ಮನೆಯನ್ನು ಯಾವುದಾದರೂ ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕೆಂದು ಯೋಚಿಸಿದ್ದರಷ್ಟೆ. ಇದಕ್ಕೆ ಅವಕಾಶ ತಾನಾಗಿಯೇ ಒದಗಿಬಂದಿತು. ಶೃಂಗೇರಿಯ ಶ್ರೀಶಾರದಾಪೀಠದ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು {ಕ್ರಿ.ಶ. ೭-೪-೧೯೧೨ ರಿಂದ ೨೬-೯-೧೯೫೪} ತಮ್ಮ ಗುರುಗಳಾಗಿದ್ದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು {ಪೀಠಾಧಿಪತ್ಯದ ಕಾಲ: ೨೭-೬-೧೮೭೯ ರಿಂದ ೨೦-೩-೧೯೧೨} ಜನ್ಮತಳೆದ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದರು. ಇದಕ್ಕಾಗಿ ಆಗ ಶ್ರೀಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀಕಂಠಶಾಸ್ತ್ರಿಗಳೇ ಈ ಕೆಲಸವನ್ನು ಸಾಧಿಸಲು ಸಮರ್ಥರು ಎಂದು ಅರಿತು ಅವರಿಗೆ ಈ ಕೆಲಸವನ್ನು ಒಪ್ಪಿಸಿದರು. ಶಾಸ್ತ್ರಿಗಳು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಮಾಡಿ ಈ ವಿಚಾರವನ್ನು ಚರ್ಚಿಸಿದರು. ಶ್ರೀಮಠದ ಪರಮಭಕ್ತರಾಗಿದ್ದ ಮಹಾರಾಜರು ಈ ಸಂಬAಧವಾಗಿ ಅಗತ್ಯವಿದ್ದ ನೆರವನ್ನು ಸಂತೋಷದಿಂದ ಒದಗಿಸಲು ಮುಂದಾದರು. ಕುಣಿಗಲ ರಾಮಶಾಸ್ತ್ರಿಗಳು ಕೂಡ ಇದಕ್ಕೆ ಸಂತೋಷದಿಂದ ಒಪ್ಪಿಕೊಂಡು ತಮ್ಮ ಸುಪರ್ದಿಯಲ್ಲಿದ್ದ ಮನೆಯನ್ನು ಶ್ರೀಮಠಕ್ಕೆ ಬಿಟ್ಟುಕೊಟ್ಟರು. ಆಗ ಮೈಸೂರು ನಗರದ ಪೌರಸಭಾಧ್ಯಕ್ಷರಾಗಿದ್ದ ಶ್ರೀಕಂಠೇಶ್ವರ ಅಯ್ಯರ್ ಮತ್ತು ನಾಗರಿಕರ ಸಹಕಾರದಿಂದ, ಕುಣಿಗಲ ರಾಮಶಾಸ್ತ್ರಿಗಳು ಶ್ರೀಮಠಕ್ಕೆ ಒಪ್ಪಿಸಿದ ಮನೆಯಲ್ಲದೆ ಅಕ್ಕಪಕ್ಕದಲ್ಲಿದ್ದ ಮನೆ, ನಿವೇಶನಗಳನ್ನೂ ಅವುಗಳ ಮಾಲಿಕರಿಗೆ ಸೂಕ್ತ ಪರಿಹಾರಗಳನ್ನು ಇತ್ತು ಸ್ವಾಧೀನಪಡಿಸಿಕೊಂಡು, ೧೯೨೨ರ ಸುಮಾರಿನಲ್ಲಿ ಕಟ್ಟಡದ ಕೆಲಸವನ್ನು ಆರಂಭಿಸಲಾಯಿತು. ಕಟ್ಟಡದ ಮುಂಭಾಗದಲ್ಲಿ ತೆಂಗಿನ ತೋಟ, ಹಿಂಭಾಗದಲ್ಲಿ ಹೂ ಗಿಡಗಳ ಪುಟ್ಟ ಕೈತೋಟ, ಸ್ವಾಮಿಗಳ ಬಿಡಾರಕ್ಕಾಗಿ ಒಂದು ಹೆಂಚಿನ ಮನೆ ಸಿದ್ಧಗೊಂಡಿತು. ಬೊಂಬಾಯಿಯಲ್ಲಿ ಇಂಜಿನಿಯರ್ ಆಗಿದ್ದ ಶ್ರೀ ರಾಮಸ್ವಾಮಿಯವರು ಮೂರು ವಸತಿಗೃಹಗಳನ್ನು ನಿರ್ಮಿಸಿಕೊಟ್ಟರು (ಎರಡು ಅರ್ಚಕರಿಗಾಗಿ, ಒಂದು ಅತಿಥಿಗಳಿಗಾಗಿ). ಈ ಎಲ್ಲಾ ಕೆಲಸಗಳು ಮುಗಿದು ೩೧-೩-೧೯೨೪ರ ಭಾನುವಾರದಂದು (ಫಾಲ್ಗುಣ ಕೃಷ್ಣ ಏಕಾದಶೀ), ತಮ್ಮ ಗುರುಗಳ ಜನ್ಮದಿನದಂದು ನೂತನ ಮಂದಿರವನ್ನು ಜಗದ್ಗುರುಗಳಾದ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು ಮಹಾರಾಜರು ಮತ್ತು ಭಕ್ತಜನರ ಎದುರು ಉದ್ಘಾಟಿಸಿದರು. ಶ್ರೀ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ಶಿಲಾಮೂರ್ತಿಯನ್ನು ಸ್ಥಾಪಿಸಿ, ಆ ಭವ್ಯಮಂದಿರಕ್ಕೆ ‘ಅಭಿನವ ಶಂಕರಾಲಯ’ವೆಂಬ ಹೆಸರನ್ನು ಇಟ್ಟರು. ಪ್ರತಿದಿನವೂ ಸಂಜೆಯ ವೇಳೆ ಪಾಲ್ಘಾಟ್ ನಾರಾಯಣಶಾಸ್ತ್ರಿಗಳು, ನವೀನಂ ವೆಂಕಟೇಶಶಾಸ್ತ್ರಿಗಳು, ರಾಮಚಂದ್ರ ಸೋಮಯಾಜಿಗಳಂತಹ ಘನವಿದ್ವಾಂಸರ ಮೂಲಕ ಬ್ರಹ್ಮಸೂತ್ರಗಳು, ಉಪನಿಷತ್ತುಗಳು, ಗೀತಾಭಾಷ್ಯ, ವೇದಾಂತ ಪಾಠಗಳು ಇತ್ಯಾದಿಗಳು ನಡೆದುಕೊಂಡು ಬರುವಂತೆ ವ್ಯವಸ್ಥೆಯನ್ನು ಮಾಡಲಾಯಿತು.
ಬೆಳವಣಿಗೆ, ವಿಸ್ತಾರ
ಅಭಿನವ ಶಂಕರಾಲಯದಲ್ಲಿ ಶ್ರೀಶಾರದಾಂಬೆ ಮತ್ತು ಶ್ರೀಶಂಕರಾಚಾರ್ಯರ ಮೂರ್ತಿಗಳು ಇರಲಿಲ್ಲವಾಗಿ ಅನೇಕ ಭಕ್ತರಿಗೆ ಇದೊಂದು ಕೊರತೆಯಾಗಿ ತೋರುತ್ತಿತ್ತು. ಆ ವೇಳೆಗಾಗಲೇ ‘ವಿದ್ಯಾಶಂಕರನಿಲಯ’ ಎಂಬ ಕಲ್ಯಾಣಮಂಟಪವು ನರ್ಮಿತವಾಗಿತ್ತು. ಅನಂತರದಲ್ಲಿ ‘ವಿದ್ಯಾಭಾರತೀ ನಿಲಯ’ ಎಂಬ ಮತ್ತೊಂದು ಕಲ್ಯಾಣ ಮಂಟಪವೂ ನಿರ್ಮಾಣಗೊಂಡಿತು. (ವಿದ್ಯಾಭಾರತೀ ಕಲ್ಯಾಣ ಮಂಟಪವನ್ನು ನರ್ಮಿಸಿದವರು ಹೊಸೂರು ಸುಬ್ಬರಾವ್ ಕುಟುಂಬ ಟ್ರಸ್ಟೀ ಅವರು.) ೧೯೬೨ರಲ್ಲಿ ಜಗದ್ಗುರುಗಳಾದ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಮೈಸೂರಿಗೆ ಮೊತ್ತಮೊದಲ ಬಾರಿಗೆ ಆಗಮಿಸಿದ್ದ ಸಂದರ್ಭದಲ್ಲಿ, ಅಭಿನವ ಶಂಕರಾಲಯದ ರ್ಮಾಧಿಕಾರಿಗಳಾಗಿದ್ದ ಪಿ. ಆರ್. ಹರಿಹರನ್, ಮೈಸೂರಿನ ಗಣ್ಯರಲ್ಲಿ ಒಬ್ಬರಾಗಿದ್ದ ಅಗರಂ ರಂಗಯ್ಯ, ಖ್ಯಾತ ಭಾಷಾಶಾಸ್ತ್ರಜ್ಞ ಎ.ಎನ್. ನರಸಿಂಹಯ್ಯ ಮುಂತಾದವರು ಸ್ವಾಮಿಗಳಲ್ಲಿ ಈ ವಿಷಯವನ್ನು ಅರಿಕೆ ಮಾಡಿಕೊಂಡರು. ಇದಾದ ಅನಂತರವೂ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಬೇರೆ ಸಂದರ್ಭಗಳಲ್ಲಿ ಮೈಸೂರಿಗೆ ಬಂದಾಗಲೂ ಇದೇ ವಿಷಯವನ್ನು ಅರಿಕೆ ಮಾಡುತ್ತಿದ್ದರು. ಕೊನೆಗೆ ಜಗದ್ಗುರುಗಳು ೧೯೭೬ರಲ್ಲಿ ಇದಕ್ಕೆ ತಮ್ಮ ಒಪ್ಪಿಗೆಯನ್ನು ಇತ್ತರು. ಜಗದ್ಗುರುಗಳ ಅನುಮತಿ ದೊರೆತ ಅನಂತರವೂ ಕೆಲಸ ಆರಂಭವಾಗಲಿಲ್ಲ. ಏಕೆಂದರೆ ವಿಗ್ರಹಗಳನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂಬುದು ಪ್ರಶ್ನೆಯಾಗಿ ಕಾಡಿತು. ಇದಕ್ಕಾಗಿ ಅನೇಕ ಸಭೆಗಳಾಗಿ ಚರ್ಚೆಗಳು ನಡೆದವು. ಕೊನೆಗೆ ಜಗದ್ಗುರುಗಳು ೧೯೭೯ರ ಸುಮಾರಿನಲ್ಲಿ ಮೈಸೂರಿಗೆ ಬಂದಾಗ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ಮೂರ್ತಿ ಇರುವ ಗರ್ಭಗುಡಿಯಲ್ಲಿ ಶ್ರೀಶಾರದಾಂಬೆಯನ್ನು ಪ್ರತಿಷ್ಠೆ ಮಾಡಬೇಕು, ಈ ಗರ್ಭಗೃಹದ ಬಲಕ್ಕೆ ದಕ್ಷಿಣದಲ್ಲಿ ದಕ್ಷಿಣಾಮೂರ್ತಿ ಸ್ವರೂಪರಾದ ಶ್ರೀಶಂಕರಾಚರ್ಯರ ವಿಗ್ರಹವನ್ನೂ ಶ್ರೀ ಶಾರದಾಂಬೆಯ ಎಡಪಾರ್ಶ್ವಕ್ಕೆ ಉತ್ತರದಲ್ಲಿ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ವಿಗ್ರಹವನ್ನೂ ಸ್ಥಾಪಿಸಬೇಕೆಂದು ಸೂಚಿಸಿದರು. ಆದರೂ ಕೂಡ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು ಪ್ರತಿಷ್ಠೆ ಮಾಡಿದ್ದ ವಿಗ್ರಹವನ್ನು ಕದಲಿಸಬಹುದೇ ಎಂಬ ವಿಷಯದಲ್ಲಿ ಚರ್ಚೆಗಳು ಉಂಟಾದವು. ಕೊನೆಗೆ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳೇ ತಮ್ಮ ಪರಮ ಗುರುಗಳ [=ಗುರುಗಳ ಗುರುಗಳು] ವಿಗ್ರಹವನ್ನು ತಾವೇ ಕದಲಿಸಿ ಮರುಪ್ರತಿಷ್ಠೆ ಮಾಡುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೆ ಈ ವಿಷಯದಲ್ಲಿ ಯಾರಿಗಾದರೂ ಆಕ್ಷೇಪಣೆ, ಅನುಮಾನಗಳು ಇದ್ದರೆ ಕೇಳಬಹುದೆಂದು ಕೂಡ ಅಪ್ಪಣೆ ಮಾಡಿದರು. ಇದಾದ ಅನಂತರ ಯಾವುದೇ ಸಮಸ್ಯೆಗಳು ಉಳಿಯಲಿಲ್ಲ.
ಅಭಿನವ ಶಂಕರಾಲಯಕ್ಕೆ ಅದು ನರ್ಮಾಣವಾದ ಕಾಲದಲ್ಲಿ ಪೂರ್ವಕ್ಕೆ ಮಹಾದ್ವಾರವೂ, ಉತ್ತರ-ದಕ್ಷಿಣ ಪಾರ್ಶ್ವಗಳಲ್ಲಿ ಒಂದೊಂದು ದ್ವಾರವೂ, ಪಶ್ಚಿಮದಲ್ಲಿ ಗರ್ಭಗುಡಿಯ ಅಕ್ಕಪಕ್ಕಗಳಲ್ಲಿ ಒಂದೊಂದು ದ್ವಾರವೂ ಇದ್ದವು. ಇವುಗಳಲ್ಲಿ ಪಶ್ಚಿಮದ ದ್ವಾರಗಳನ್ನು ಮುಚ್ಚಿಸಿ, ಅಲ್ಲಿ ಗರ್ಭಗೃಹಗಳನ್ನು ನಿರ್ಮಿಸಲಾಯಿತು. ಶ್ರೀ ಶಾರದಾಂಬೆಯ ಪಂಚಲೋಹದ ಎರಕದ ವಿಗ್ರಹ, ಶ್ರೀಶಂಕರಾಚಾರ್ಯರ ಅಮೃತಶಿಲಾಮೂರ್ತಿ ಪ್ರತಿಷ್ಠಾಪನೆಗಾಗಿ ಸಿದ್ಧವಾದವು. ಇವುಗಳಲ್ಲಿ ಶಾರದಾಂಬೆಯ ಮರ್ತಿಯು ೧೯೭೬ರ ಆಸುಪಾಸಿನಲ್ಲಿಯೇ ಸಿದ್ಧವಾದರೂ ಪ್ರತಿಷ್ಠೆ ಸಾಧ್ಯವಾಗದೆ ಶೃಂಗೇರಿಯಲ್ಲಿ ಮೂಲಮೂರ್ತಿಯ ಸನ್ನಿಧಿಯಲ್ಲಿ ಪೂಜೆಗೊಳ್ಳುತ್ತಿತ್ತು.
ಇಷ್ಟೆಲ್ಲ ಹಂತಗಳನ್ನು ದಾಟಿ ಬಂದರೂ ಪ್ರತಿಷ್ಠಾಪನೆಗೆಂದು ಗೊತ್ತುಮಾಡಲ್ಪಟ್ಟ ಲಗ್ನವು ಚರಲಗ್ನವೆಂದೂ, ಸ್ಥಿರಲಗ್ನದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಆಗುವುದು ಉತ್ತಮವೆಂದೂ ಕೆಲವರು ಋತ್ವಿಜರು, ತಂತ್ರಿಗಳು ಅಭಿಪ್ರಾಯಪಟ್ಟರು. ಕೊನೆಗೆ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ‘ಇದರಿಂದ ಯಾವುದೇ ಬಾಧಕವಿಲ್ಲ. ಆದರೂ ಈ ಗೊಂದಲ ಎಲ್ಲರ ಮನಸ್ಸಿನಲ್ಲಿ ಕುಳಿತಿರುವ ಕಾರಣ ಬೇರೆ ಲಗ್ನವನ್ನು ಗೊತ್ತುಮಾಡಿ’ ಎಂದು ಹೇಳಿದರು. ಅಂತಿಮವಾಗಿ ಎಲ್ಲ ಗೊಂದಲಗಳು ಪರಿಹಾರವಾಗಿ ೧೯೮೦ರ ಮೇ ತಿಂಗಳಲ್ಲಿ ಎಲ್ಲ ವಿಗ್ರಹಗಳ ಪ್ರತಿಷ್ಠಾಪನೆಗೆ ದಿನ ಮತ್ತು ಲಗ್ನವನ್ನು ಗೊತ್ತುಪಡಿಸಲಾಯಿತು.
ಮೇ ೧, ೧೯೮೦ರಂದು ಮೈಸೂರಿಗೆ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಮತ್ತು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಇಬ್ಬರೂ ಆಗಮಿಸಿದರು. ಪ್ರತಿಷ್ಠೆಯ ಅಂಗವಾದ ಕರ್ಯಕ್ರಮಗಳು ಮೇ ೩, ೧೯೮೦ರಂದು ಮಹಾಗಣಪತಿ ಹೋಮದಿಂದ ಆರಂಭವಾದವು. ಶೃಂಗೇರಿಯನ್ನೂ ಒಳಗೊಂಡು ಅನೇಕ ಕಡೆಗಳಿಂದ ವೇದವಿದರು, ಋತ್ವಿಜರು ಆಗಮಿಸಿದ್ದರು. ವೈಶಾಖ ಬಹುಳ ಪಂಚಮೀ ಸೋಮವಾರ (೫-೫-೧೯೮೦) ಸಿಂಹಲಗ್ನದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು. ಜಗದ್ಗುರುಗಳು ಮೂರು ಗರ್ಭಗೃಹಗಳಲ್ಲಿನ ಮರ್ತಿಗಳಿಗೆ ದೀಪಾರಾಧನೆ, ಪೂಜಾಭಿಷೇಕಗಳನ್ನು, ಅನಂತರ ಅಭಿನವ ಶಂಕರಾಲಯದ ಗೋಪುರಕ್ಕೆ ಕುಂಭಾಭಿಷೇಕವನ್ನು ನೆರವೇರಿಸಿದರು.
ಮೈಸೂರಿನ ಭಕ್ತರಲ್ಲಿ ಒಬ್ಬರಾದ ಭಾಸ್ಕರರಾಯರು ಅಭಿನವ ಶಂಕರಾಲಯದಲ್ಲಿ ಗಣಪತಿ ಮತ್ತು ಸತ್ಯನಾರಾಯಣ ಸ್ವಾಮಿಯ ಸನ್ನಿಧಿ ಇರಬೇಕೆಂದು ಪಿ. ಆರ್. ಹರಿಹರನ್ ಅವರ ಮೂಲಕವಾಗಿ ಗುರುಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ಮತ್ತು ಶ್ರೀ ಭಾರತೀತೀರ್ಥ ಸ್ವಾಮಿಗಳು ೧೯೮೪ರಲ್ಲಿ ಮೈಸೂರಿಗೆ ಆಗಮಿಸಿ ಇವೆರಡೂ ದೈವಗಳ ಪ್ರತಿಷ್ಠೆಯನ್ನು ನೆರವೇರಿಸಿದರು. ಇದಾದ ಅನಂತರ ಸೂರ್ಯನಾರಾಯಣ, ನವಗ್ರಹಗಳ ಪ್ರತಿಷ್ಠಾಪನೆ ಆಲಯದ ಉತ್ತರಪಾರ್ಶ್ವದಲ್ಲಿ ಪ್ರತ್ಯೇಕವಾಗಿ ನೆರವೇರಿತು. ಜಗದ್ಗುರುಗಳು ಮೈಸೂರಿಗೆ ಬಂದಾಗ ಬಿಡಾರವನ್ನು ಮಾಡಲು ಈ ಮೊದಲೇ ‘ಶ್ರೀ ಅಭಿನವ ವಿದ್ಯಾತೀರ್ಥಪ್ರವಚನ ಮಂದಿರ’ವು ನಿರ್ಮಿತಗೊಂಡಿತ್ತು. ಅನಂತರ ‘ಶ್ರೀ ಭಾರತೀತೀರ್ಥ ವೇದಸಂಸ್ಕೃತ ಪಾಠಶಾಲೆ’ಯು ಸ್ಥಾಪಿತವಾಯಿತು.
ಸಂಬಂಧಪಟ್ಟ ಹಲವರು ಗಣ್ಯವ್ಯಕ್ತಿಗಳು
ಅಭಿನವ ಶಂಕರಾಲಯವು ರೂಪಗೊಳ್ಳಲು ಅನೇಕರ ಪರಿಶ್ರಮ ಕಾರಣವಾಗಿದೆ. ಜೊತೆಗೆ ಪರಿಶ್ರಮಿಸಿರುವ ವ್ಯಕ್ತಿಗಳ ವಂಶಿಕರು ಹಾಗೂ ಬಂಧುವರ್ಗದವರು ಕೂಡ ಶ್ರೀಮಠದ ಭಕ್ತರಾಗಿದ್ದು, ತಮ್ಮ ಕೊಡುಗೆಯನ್ನು ಶ್ರೀಮಠಕ್ಕೆ ಸಲ್ಲಿಸಿದ್ದಾರೆ.
- ಹಿರಿಯ ಕುಣಿಗಲ ರಾಮಶಾಸ್ತ್ರಿಗಳ ಹಿರಿಯ ಪುತ್ರರಾದ ಲಕ್ಷ್ಮೀನರಸಿಂಹಶಾಸ್ತ್ರಿಗಳು ೧೮೪೧ರಲ್ಲಿ ನರಸಿಂಹ ಜಯಂತಿಯ ದಿನದಂದು, ಈಗ ಅಭಿನವ ಶಂಕರಾಲಯವೆಂದು ಹೆಸರಾಗಿರುವ ಸ್ಥಳದಲ್ಲಿ ಮೊದಲು ಇದ್ದ ಮನೆಯಲ್ಲಿಯೇ ಜನಿಸಿದರು. ತಂದೆಯವರಿಂದಲೇ ಕಾವ್ಯನಾಟಕಾಲಂಕಾರಗಳನ್ನೂ, ತರ್ಕಶಾಸ್ತ್ರವನ್ನೂ ಕಲಿಯಲಾರಂಭಿಸಿದರೂ ಆರೋಗ್ಯ ತೃಪ್ತಿಕರವಾಗಿ ಇರದಿದ್ದ ಕಾರಣ, ತಂದೆ ಹೆಚ್ಚು ಒತ್ತಾಯಿಸುತ್ತಿರಲಿಲ್ಲ. ಆದರೂ ಶಾಸ್ತ್ರಿಗಳು ಸ್ವತಂತ್ರ ಚಿಂತನೆಯ ಬಲದಿಂದ ತರ್ಕಶಾಸ್ತ್ರದಲ್ಲಿ ನೈಪುಣ್ಯವನ್ನು ಸಾಧಿಸಿದರು. ತಂದೆ ರಾಮಶಾಸ್ತ್ರಿಗಳು ನಿಧನರಾದ ಅನಂತರ ಅವರಿಗಿದ್ದ ವೇತನದ ಆಧಾರದ ಮೇಲೆ ಅರಮನೆಯ ರ್ಮಾಧಿಕಾರಿಗಳಾಗಿ ನೇಮಕವಾಗಿ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಆಪ್ತರಾಗಿದ್ದರು. ‘ಶತಕೋಟಿಮಂಡನ’, ‘ನ್ಯಾಯೇಂದುಶೇಖರ’ ಇವು ಶಾಸ್ತ್ರಿಗಳು ರಚಿಸಿರುವ ತರ್ಕಶಾಸ್ತ್ರಗ್ರಂಥಗಳಾಗಿವೆ. ‘ಶತಕೋಟಿಮಂಡನ’ ಎಂಬುದು ತಮ್ಮ ತಂದೆಯವರ ಕೃತಿ ಶತಕೋಟಿಯನ್ನು ಖಂಡಿಸಿ ಬರೆಯಲಾಗಿದ್ದ ಕೃತಿಗೆ ಪ್ರತ್ಯುತ್ತರರೂಪವಾಗಿ ಮಂಡಿಸಿದ ಕೃತಿಯಾಗಿದೆ. ಇಷ್ಟೇ ಅಲ್ಲದೆ ಕ್ರೋಡಪತ್ರಗಳು, ಕೆಲವು ತರ್ಕಗ್ರಂಥಗಳ ಪರಿಷ್ಕರಣಗಳು ಕೂಡ ಶಾಸ್ತ್ರಿಗಳಿಂದ ನಡೆದಿದೆ. ತಮ್ಮ ಸೋದರ ಶಿವಸ್ವಾಮಿಯು ಸಂನ್ಯಾಸವನ್ನು ಸ್ವೀಕರಿಸಿದ ಅನಂತರ ಶ್ರೀ ಉಗ್ರನರಸಿಂಹಭಾರತೀ ಸ್ವಾಮಿಗಳ {ಕ್ರಿ.ಶ. ೧೨-೩-೧೮೧೮ರಿಂದ ಕ್ರಿ.ಶ. ೧೧-೫-೧೮೭೯} ಆದೇಶದಂತೆ ಕಿರಿಯ ಸ್ವಾಮಿಗಳಿಗೆ ಪಾಠಪ್ರವಚನಗಳನ್ನೂ ಮಾಡಿದರು. ಶಾಸ್ತ್ರಿಗಳಿಗೆ ಗಂಡುಮಕ್ಕಳಿರಲಿಲ್ಲವಾಗಿ ನಂಜನಗೂಡು ಶ್ರೀಕಂಠಶಾಸ್ತ್ರಿಗಳ ಸೋದರ ಕೃಷ್ಣಶಾಸ್ತ್ರಿಗಳನ್ನು ದತ್ತು ಪುತ್ರರಾಗಿ ಸ್ವೀಕರಿಸಿದರು. ೫೫ ವರ್ಷಗಳ ಕಾಲ ಜೀವಿಸಿದ್ದ ಶಾಸ್ತ್ರಿಗಳು ೧೮೯೬ರ ಸುಮಾರಿನಲ್ಲಿ ನಿಧನಹೊಂದಿದರು.
- ಹಿರಿಯ ಕುಣಿಗಲ ರಾಮಶಾಸ್ತ್ರಿಗಳ ದ್ವಿತೀಯ ಪುತ್ರರು ಯಜ್ಞನಾರಾಯಣಶಾಸ್ತ್ರಿಗಳು. ಇವರು ಹುಟ್ಟಿದ್ದು ಕೂಡ ತಮ್ಮ ಅಣ್ಣಂದಿರು ಹುಟ್ಟಿದ ಮನೆಯಲ್ಲಿಯೇ ಎಂದು ತಿಳಿದುಬರುತ್ತದೆ (ಎನ್. ಬಾಲಸುಬ್ರಹ್ಮಣ್ಯ ಅವರು ಕಂಚಿಯಲ್ಲಿ ಹುಟ್ಟಿದ್ದು ಎಂದು ಬರೆದಿದ್ದಾರೆ). ಆದರೆ ಚಿಕ್ಕವಯಸ್ಸಿನಲ್ಲಿಯೇ ಮೃತರಾದರೆಂದು ತಿಳಿದುಬರುವ ಕಾರಣ ಹೆಚ್ಚಿನ ವಿವರಗಳು ದೊರಕುವುದಿಲ್ಲ. ಚಿಕ್ಕವಯಸ್ಸೆಂದರೂ ತೀರಾ ಬಾಲ್ಯದ ವಯಸ್ಸಲ್ಲ ಎಂದು ವಂಶಿಕರಿಂದ ತಿಳಿದುಬರುತ್ತದೆ. ಒಂದು ಅಂದಾಜಿನ ಪ್ರಕಾರ ೧೮-೨೦ ವರ್ಷಗಳಷ್ಟು ಕಾಲ ಜೀವಿಸಿದ್ದು, ಪ್ರತಿಭಾಶಾಲಿಗಳಾಗಿದ್ದರೆಂದು ತಿಳಿಯುತ್ತದೆ. ಇವರು ಹುಟ್ಟಿದ ವರ್ಷ ತಿಳಿಯದು. ಆದರೆ ಇವರ ಅಣ್ಣಂದಿರಾದ ಲಕ್ಷ್ಮೀನರಸಿಂಹಶಾಸ್ತ್ರಿಗಳು ಜನಿಸಿದ್ದು ೧೮೪೧ರಲ್ಲಿ ಆದುದರಿಂದ ಯಜ್ಞನಾರಾಯಣಶಾಸ್ತ್ರಿಗಳ ಜನನ ೧೮೪೧ಕ್ಕಿಂತ ಈಚೆಗೆ ಎಂಬುದು ಖಚಿತ. ಇವರು ನಿಧನರಾದದ್ದು ರಕ್ತಾಕ್ಷಿ ಸಂವತ್ಸರದಲ್ಲಿ ಎಂದು ತಿಳಿಯುತ್ತದೆ. ಈ ರಕ್ತಾಕ್ಷಿ ಸಂವತ್ಸರವು ಕ್ರಿ.ಶ. ೧೮೬೪-೬೫ರಲ್ಲಿ ಬಂದಿತ್ತು. ಯಜ್ಞನಾರಾಯಣಶಾಸ್ತ್ರಿಗಳ ತಂಗಿ ಶ್ರೀಲಕ್ಷ್ಮೀ ನಿಧನಹೊಂದಿದ್ದು ಕೂಡ ಇದೇ ಸಂವತ್ಸರದಲ್ಲಿ, ಅಣ್ಣನೊಂದಿಗೇ ಎಂಬುದು ಗಮನಿಸತಕ್ಕುದಾಗಿದೆ. ಶ್ರೀಲಕ್ಷ್ಮೀ ಹುಟ್ಟಿದ್ದು ೧೮೫೨ರ ಪರೀಧಾವೀ ಸಂವತ್ಸರದಲ್ಲಿ. ಆದುದರಿಂದ ಯಜ್ಞನಾರಾಯಣಶಾಸ್ತ್ರಿಗಳು ಹುಟ್ಟಿದ್ದು ೧೮೪೧-೧೮೫೨ರ ಒಳಗೆ ಎಂಬುದು ಖಚಿತವಾಗುತ್ತದೆ (ಎನ್. ಬಾಲಸುಬ್ರಹ್ಮಣ್ಯ ಅವರು ೧೮೪೭ ಎಂದು ಬರೆದಿದ್ದಾರೆ). ೧೮-೨೦ವರ್ಷಗಳಷ್ಟು ವಯಸ್ಸಾಗಿದ್ದಾಗ ಯಜ್ಞನಾರಾಯಣಶಾಸ್ತ್ರಿಗಳು ಮೃತರಾದರು ಎಂಬ ವಂಶಿಕರ ಹೇಳಿಕೆಗೆ ಈ ತೇದಿಗಳು ಹೆಚ್ಚುಕಡಮೆ ಸರಿಹೊಂದುತ್ತವೆ. ಈಚೆಗೆ ೨೦೧೦ರಲ್ಲಿ ಶೃಂಗೇರಿಯ ಶ್ರೀಮಠದಿಂದ ‘ನ್ಯಾಯಶೇಖರಿ’ ಎಂಬ ಗ್ರಂಥ ಪ್ರಕಟವಾಗಿದ್ದು, ಇದರ ಕರ್ತೃ ಯಜ್ಞನಾರಾಯಣಶಾಸ್ತ್ರಿಗಳೆಂದು ತಿಳಿದುಬರುತ್ತದೆ. ಹಸ್ತಪ್ರತಿಯಲ್ಲಿ ಮತ್ತು ಗ್ರಂಥದೊಳಗೆ ಕರ್ತೃವಿನ ಬಗೆಗೆ ಯಾವುದೇ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಈ ಯಜ್ಞನಾರಾಯಣಶಾಸ್ತ್ರಿಗಳು ಹಿರಿಯ ಕುಣಿಗಲ ರಾಮಶಾಸ್ತ್ರಿಗಳ ದ್ವಿತೀಯ ಪುತ್ರರೇ ಆಗಿದ್ದು, ಚಿಕ್ಕವಯಸ್ಸಿನಲ್ಲಿಯೇ ಕೃತಿಯನ್ನು ರಚಿಸಿರಬಹುದೇ ಎಂಬುದು ವಿಚಾರಣೀಯವಾಗಿದೆ (ಏಕೆಂದರೆ ವೇದ, ತರ್ಕ ಇತ್ಯಾದಿಗಳಲ್ಲಿ ಇವರು ಕೂಡ ಪ್ರತಿಭಾಶಾಲಿಗಳಾಗಿದ್ದರೆಂದು ವಂಶಿಕರಿಂದ ತಿಳಿದುಬರುತ್ತದೆ). ಆದರೂ ನ್ಯಾಯಶೇಖರಿಯ ಪೀಠಿಕೆಯಲ್ಲಿ ಹೇಳಿರುವಂತೆ ಈ ವ್ಯಾಖ್ಯೆಯ ಕರ್ತೃ ಕುಣಿಗಲ ರಾಮಶಾಸ್ತ್ರಿಗಳ ಯಾರೋ ಪೂರ್ವಜರಾಗಿರುವ ಸಂಭಾವ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಕೃತಿಯು ಅನ್ನಂಭಟ್ಟರ ತರ್ಕಸಂಗ್ರಹಕ್ಕೆ ರಚಿತವಾಗಿರುವ ಅಭಿನವ ವ್ಯಾಖ್ಯೆಯಾಗಿದೆ.
- ನಂಜನಗೂಡು ಶ್ರೀಕಂಠಶಾಸ್ತ್ರಿಗಳು ತಮ್ಮ ೧೯ನೆಯ ವಯಸ್ಸಿನಲ್ಲಿ ಶೃಂಗೇರಿಯ ಶ್ರೀಮಠವನ್ನು ಸೇರಿದರು. ಅವರು ಸೇರಿದ್ದು ಜಗದ್ಗುರುಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳಿಗೆ ಅಗತ್ಯವಾದ ಅಡುಗೆಯ ಕೆಲಸವನ್ನು ಮಾಡುವ ಸಲುವಾಗಿ. ಇದರೊಂದಿಗೆ ಕ್ರಮೇಣ ಅಧ್ಯಯನಕ್ಕೂ ತಮ್ಮನ್ನು ತೊಡಗಿಸಿಕೊಂಡರು. ಈ ಸಂಬಂಧವಾದ ಛಾಯಾಚಿತ್ರವೊಂದು ಲಭ್ಯವಿದ್ದು, ಸ್ವಾಮಿಗಳ ಬಲಗಡೆ ಶ್ರೀಕಂಠಶಾಸ್ತ್ರಿಗಳು, ಸ್ವಾಮಿಗಳ ಎಡಬದಿ ಕೃಷ್ಣಶಾಸ್ತ್ರಿಗಳು (ಉತ್ತರೋತ್ತರ ಕಿರಿಯ ಕುಣಿಗಲ ರಾಮಶಾಸ್ತ್ರಿಗಳು), ಕೃಷ್ಣಶಾಸ್ತ್ರಿಗಳ ಎಡಬದಿಯಲ್ಲಿ ಯಜ್ಞೇಶ್ವರ ಶಾಸ್ತ್ರಿಗಳು ಕುಳಿತಿದ್ದಾರೆ. ಶ್ರೀಕಂಠಶಾಸ್ತ್ರಿಗಳು ಕ್ರಮೇಣ ತಮ್ಮ ಕಾರ್ಯದಕ್ಷತೆಯಿಂದ ಶ್ರೀಮಠದ ಆಡಳಿತಾಧಿಕಾರಿಗಳಾಗಿ ಶೃಂಗೇರಿ ಶ್ರೀಮಠದ ವೈಭವಕ್ಕೆ ಕಾರಣರಾದರು. ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ಕಾಲದಲ್ಲಿ ೨೪ ವರ್ಷಗಳು, ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳ ಕಾಲದಲ್ಲಿ ೧೯ ವರ್ಷಗಳು ಅತ್ಯಂತ ದಕ್ಷತೆಯಿಂದ ಆಡಳಿತವನ್ನು ನಡೆಸಿದ ಕೀರ್ತಿ ಅವರದು. ಶ್ರೀ ನೃಸಿಂಹಭಾರತೀ ಸ್ವಾಮಿಗಳ ಮಾತೆಂದರೆ ಅದು ಶ್ರೀಕಂಠಶಾಸ್ತ್ರಿಗಳಿಗೆ ನಡೆಸಲೇಬೇಕಾದ ಆಜ್ಞೆ. ‘ಗುರುಪ್ರಸಾದ ಮಹಿಮಾದರ್ಶ’ ಎಂಬ ಹೆಸರಿನ ಭಕ್ತಿಗೀತೆಗಳ ಸಂಗ್ರಹವಿರುವ ಕೃತಿ ಇವರದ್ದಾಗಿದೆ. ಇದರೊಂದಿಗೆ ‘ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ದಿವ್ಯಚರಿತ್ರೆ’ಯನ್ನು ಬರೆದಿದ್ದಾರೆ. ಇದರಲ್ಲಿ ಉಗ್ರನರಸಿಂಹ ಭಾರತೀ ಸ್ವಾಮಿಗಳ ಬಗೆಗೆ ಬೇರೆಲ್ಲೂ ದೊರಕದ ಅಮೂಲ್ಯ ವಿವರಗಳಿವೆ. ಶ್ರೀ ನೃಸಿಂಹಭಾರತೀ ಸ್ವಾಮಿಗಳ ಜೀವನ, ವ್ಯಕ್ತಿತ್ವ, ತಪೋನಿಷ್ಠೆ ಮುಂತಾದವುಗಳ ಬಗೆಗೆ ತಿಳಿಯಬೇಕೆಂದರೆ ಈ ಕೃತಿಯನ್ನೇ ಓದಬೇಕು.
- ಅಭಿನವ ಶಂಕರಾಲಯದ ಸಂಬಂಧವಾಗಿ ಮೊದಲ ನೀಲನಕ್ಷೆಯನ್ನು ಸಿದ್ಧಪಡಿಸಿದವರು ಶ್ರೀಕಂಠಶಾಸ್ತ್ರಿಗಳೆಂಬುದನ್ನು ಇಲ್ಲಿ ನೆನೆಯಬೇಕು ಈ ಮಹನೀಯರು ೧೯೪೯ರಲ್ಲಿ ಆತುರ ಸಂನ್ಯಾಸವನ್ನು ಸ್ವೀಕರಿಸಿ ೧೯೫೦ರಲ್ಲಿ ಮೈಸೂರಿನಲ್ಲಿ ನಿಧನಹೊಂದಿದರು. ನಂಜನಗೂಡಿನ ಬಳಿಯಿರುವ ಕಲ್ಲಹಳ್ಳಿಯಲ್ಲಿ ಇವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು (ಇವರ ಬಗೆಗೆ ಹೆಚ್ಚಿನ ವಿವರಗಳಿಗೆ ನೋಡಿ: ಗುರುಸೇವಾ ಪ್ರವೀಣ ನಂಜನಗೂಡು ಶ್ರೀಕಂಠಶಾಸ್ತ್ರೀ-ಲ.ನ. ಶಾಸ್ತ್ರಿ, ಭಾರತೀ ಪ್ರಕಾಶನ, ಮೈಸೂರು-೨೦೧೩).
- ಶ್ರೀಕಂಠಶಾಸ್ತ್ರಿಗಳ ತಮ್ಮಂದಿರು ಕೃಷ್ಣಶಾಸ್ತ್ರಿಗಳು. ಇವರು ನೃಸಿಂಹಭಾರತೀ ಸ್ವಾಮಿಗಳ ಬಳಿಯೇ ವೇದಾಂತ ವ್ಯಾಸಂಗವನ್ನು ಮಾಡಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಹಿರಿಯ ಕುಣಿಗಲ ರಾಮಶಾಸ್ತ್ರಿಗಳಿಗೆ ಮೂವರು ಗಂಡುಮಕ್ಕಳು (ಲಕ್ಷ್ಮೀನರಸಿಂಹ ಶಾಸ್ತ್ರಿಗಳು, ಯಜ್ಞನಾರಾಯಣ ಶಾಸ್ತ್ರಿಗಳು, ಶಿವಸ್ವಾಮಿ). ಕುಣಿಗಲ ರಾಮಶಾಸ್ತ್ರಿಗಳು ನಿಧನ ಹೊಂದಿದ ಅನಂತರದಲ್ಲಿ ಅವರ ಹಿರಿಯ ಮಕ್ಕಳಾದ ಲಕ್ಷ್ಮೀನರಸಿಂಹಶಾಸ್ತ್ರಿಗಳೇ ತಮ್ಮ ಸಹೋದರ ಶಿವಸ್ವಾಮಿಯನ್ನು ಪೋಷಿಸುತ್ತಿದ್ದರು. ಲಕ್ಷ್ಮೀನರಸಿಂಹಶಾಸ್ತ್ರಿಗಳಿಗೆ ಮಕ್ಕಳಿರಲಿಲ್ಲವಾಗಿ ಅವರಿಗೆ ತಮ್ಮನೇ ಸರ್ವಸ್ವವಾಗಿದ್ದ. ಉಗ್ರನರಸಿಂಹ ಭಾರತೀ ಸ್ವಾಮಿಗಳ ಇಚ್ಛೆ ಮತ್ತು ಮೈಸೂರು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ ಆಣತಿ ಎರಡರ ನಿರ್ಬಂಧವು ಒದಗಿ ತಮ್ಮನಾದ ಶಿವಸ್ವಾಮಿಯನ್ನು ಶ್ರೀ ಶೃಂಗೇರಿ ಜಗದ್ಗುರುಗಳಿಗೆ ಒಪ್ಪಿಸಿದರು. ಲಕ್ಷ್ಮೀನರಸಿಂಹಶಾಸ್ತ್ರಿಗಳು ಈ ಘಟನೆಯ ಅನಂತರದಲ್ಲಿ ಶೃಂಗೇರಿ ಮಠದ ಆಡಳಿತಾಧಿಕಾರಿಗಳಾಗಿದ್ದ ನಂಜನಗೂಡು ಶ್ರೀಕಂಠಶಾಸ್ತ್ರಿಗಳ ತಮ್ಮಂದಿರು ಕೃಷ್ಣಶಾಸ್ತ್ರಿಗಳನ್ನು ದತ್ತು ತೆಗೆದುಕೊಂಡರು. ತಮ್ಮ ಮನೆತನಕ್ಕೆ ದತ್ತು ಸ್ವೀಕರಿಸುವಾಗ ಕುಣಿಗಲ ರಾಮಶಾಸ್ತ್ರಿ ಎಂದು ತಮ್ಮ ತಂದೆಯವರ ಹೆಸರನ್ನೇ ನಾಮಕರಣ ಮಾಡಿದರು. ಇದರಿಂದ ಕೃಷ್ಣಶಾಸ್ತ್ರಿ ಎಂದು ಇದ್ದ ಹೆಸರು ಕುಣಿಗಲ ರಾಮಶಾಸ್ತ್ರಿ ಎಂದಾಯಿತು. ಲಕ್ಷ್ಮೀನರಸಿಂಹಶಾಸ್ತ್ರಿಗಳ ಆಸ್ತಿಗೆ ಇವರು ಉತ್ತರಾಧಿಕಾರಿಗಳಾದರು. ಅರಮನೆಯ ಧರ್ಮಾಧಿಕಾರಿಗಳೂ ಆಗಿದ್ದ ಕುಣಿಗಲ ರಾಮಶಾಸ್ತ್ರಿಗಳು ಈಗ ಅಭಿನವ ಶಂಕರಾಲಯ ಇರುವ ಸ್ಥಳದಲ್ಲಿ ಮೊದಲು ಇದ್ದ ಮನೆಯಲ್ಲಿಯೇ ವಾಸವಾಗಿದ್ದರು. ಅನಂತರದಲ್ಲಿ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳ ಅಪೇಕ್ಷೆಯಂತೆ ತಮ್ಮ ಮನೆಯನ್ನು ಶ್ರೀಮಠಕ್ಕೆ ಒಪ್ಪಿಸಿದರು. ಶ್ರೀ ನೃಸಿಂಹಭಾರತೀ ಸ್ವಾಮಿಗಳ ಆಪ್ತರೂ ಅಂತರಂಗದ ಶಿಷ್ಯರೂ ಆಗಿದ್ದ ಶಾಸ್ತ್ರಿಗಳು ಮುಂದೆ ಈ ಪೀಠಕ್ಕೆ ನರಸಿಂಹನೇ (ಉತ್ತರೋತ್ತರ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು) ಉತ್ತರಾಧಿಕಾರಿ ಎಂಬುದನ್ನು ಸ್ವಾಮಿಗಳಿಂದಲೇ ನೇರವಾಗಿ ತಿಳಿದುಕೊಂಡು, ನರಸಿಂಹನಿಗೆ ಸ್ವಾಮಿಗಳು ಉಪದೇಶಿಸಿದ್ದ ಮೂರು ಶ್ಲೋಕಗಳನ್ನು ಉಳಿಸಿಕೊಟ್ಟವರು ಕೂಡ. ‘ಹೌತ್ರ ಮೀಮಾಂಸಾ’ ಎಂಬ ೩೧ ಪುಟಗಳಿಂದ ಕೂಡಿರುವ ಪುಟ್ಟ ಕೃತಿಯನ್ನು ಕೂಡ ಶಾಸ್ತ್ರಿಗಳು ರಚಿಸಿದ್ದು ಶ್ರೀರಂಗಂನ ವಾಣೀವಿಲಾಸ ಮುದ್ರಣಾಲಯದಿಂದ ೧೯೧೬ರಲ್ಲಿ ಪ್ರಕಟವಾಗಿದೆ. ಇದಲ್ಲದೆ ಕಾಶೀ ಲಕ್ಷ್ಮಣಶಾಸ್ತ್ರಿಯ ಗುರುವಂಶ ಕಾವ್ಯದ ೧-೭ ಅಧ್ಯಾಯಗಳನ್ನು ಕೂಡ ಪರಿಷ್ಕರಿಸಿದ್ದು, ಇದು ಕೂಡ ಶ್ರೀರಂಗಂನ ವಾಣೀವಿಲಾಸ ಮುದ್ರಣಾಲಯದಿಂದ ೧೯೨೮ರಲ್ಲಿ ಪ್ರಕಟವಾಗಿದೆ. ಬ್ರಹ್ಮರ್ಯ ಜೀವನವನ್ನು ನಡೆಸಿಕೊಂಡು ಬಂದ ಶಾಸ್ತ್ರಿಗಳು ವಿದ್ಯಾವಿಶಾರದ, ವಿದ್ವತ್ ಶಿರೋಭೂಷಣ ಎಂಬ ಬಿರುದುಗಳಿಂದ ಸಂಮಾನಿತರಾಗಿದ್ದರು.
- ಶ್ರೀಕಂಠಶಾಸ್ತ್ರಿಗಳ ಒಡಹುಟ್ಟಿದವರಲ್ಲಿ ಇಬ್ಬರು ಅಣ್ಣಂದಿರು, ಒರ್ವ ತಮ್ಮ ಇದ್ದರು. ಇವರಲ್ಲಿ ಎರಡನೆಯ ಅಣ್ಣಂದಿರಾದ ಯಜ್ಞೇಶ್ವರಶಾಸ್ತ್ರಿಗಳ ಮೊಮ್ಮಕ್ಕಳು ನಂಜನಗೂಡು ಬಾಲಸುಬ್ರಹ್ಮಣ್ಯ ಅವರ ಹೆಸರು ಎದ್ದು ಕಾಣುವಂತಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಬಾಲಸುಬ್ರಹ್ಮಣ್ಯ ಅವರು ಸಂಸ್ಕೃತ, ಇಂಗ್ಲಿಷ್, ಕನ್ನಡ, ಗ್ರೀಕ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದರಲ್ಲದೆ ವೇದಾಂತ, ನಿಘಂಟುಶಾಸ್ತ್ರ, ಅಲಂಕಾರಶಾಸ್ತ್ರ ಮುಂತಾದವುಗಳಲ್ಲಿ ನಿಷ್ಣಾತರಾಗಿದ್ದರು. ಅವರು ನೇರವಾಗಿ ಗ್ರೀಕ್ ಭಾಷೆಯಿಂದಲೇ ಅನುವಾದಿಸಿರುವ ‘ಅರಿಸ್ಟಾಟಲನ ಕಾವ್ಯಮೀಮಾಂಸೆ’ ಆ ಕ್ಷೇತ್ರದ ಆಚಾರ್ಯಕೃತಿಗಳಲ್ಲಿ ಒಂದಾಗಿದೆ. ಇದೇ ರೀತಿ ‘ಹೊರೇಸನ ಸಾಹಿತ್ಯ ವಿಮರ್ಶೆ’ ಮುಂತಾದ ಕೃತಿಗಳನ್ನು ಕೂಡ ಕನ್ನಡಕ್ಕೆ ತಂದಿದ್ದಾರೆ. ಸೌಂದರ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ ಹಾಗೂ ಅನುವಾದಿಸಿದ್ದಾರೆ. ಸದಾನಂದಯೋಗಿಯ ‘ವೇದಾಂತಸಾರ’ವನ್ನು ಕನ್ನಡಕ್ಕೆ ಟೀಕೆ, ಟಿಪ್ಪಣಿಗಳ ಸಹಿತ ಅನುವಾದಿಸಿದ್ದಾರೆ. ಅವರ ‘ಶ್ರೀಚಕ್ರಾರ್ಚನ ಪದ್ಧತಿ’ಯೆಂಬ ಗ್ರಂಥವು ಕನ್ನಡ ಭಾಷೆಯಲ್ಲಿ ಶ್ರೀಚಕ್ರಾರ್ಚನೆಯ ವಿಧಿವಿಧಾನಗಳನ್ನು ಅತ್ಯಂತ ವಿಶದವಾಗಿ ಪ್ರಯೋಗಸಹಿತವಾಗಿ ಪ್ರತಿಪಾದಿಸುತ್ತದೆ. ಈ ಗ್ರಂಥವನ್ನು ಶ್ರೀಕಂಠಶಾಸ್ತ್ರಿಗಳಿಗೆ ಅರ್ಪಿಸಿದ್ದಾರೆ. ಇದರ ಲೇಖಕರ ಅರಿಕೆಯಲ್ಲಿ ಶ್ರೀಕಂಠಶಾಸ್ತ್ರಿಗಳ ಬಗೆಗೆ ಅನೇಕ ವಿವರಗಳು ದಾಖಲಾಗಿವೆ. ಶೃಂಗಗಿರಿ ಕವಿ ನರಸಿಂಹರ್ಮರು ಬಾಲಸುಬ್ರಹ್ಮಣ್ಯ ಅವರ ವೇದಾಂತದ ಗುರುಗಳಾಗಿದ್ದರು. ಲೂಯಿ ರೈಸರು ಸಂಪಾದಿಸಿ ಪ್ರಕಟಿಸಿದ್ದ, ‘ಅಮರಕೋಶ’ವನ್ನು ಪರಿಷ್ಕರಿಸಿ ವಿಷಯಭರಿತ ಉಪೋದ್ಘಾತದ ಸಹಿತ ಪ್ರಕಟಿಸಿರುವ ಕೀರ್ತಿ ಇವರದು. ನಾಲ್ಕು ಸಂಪುಟಗಳಲ್ಲಿ ಅಚ್ಚಾಗಿರುವ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿರುವ ಬಾಲಸುಬ್ರಹ್ಮಣ್ಯ ಅವರು ನಮ್ಮ ದೇಶದ ಶ್ರೇಷ್ಠವಿದ್ವಾಂಸರಲ್ಲಿ ಒಬ್ಬರು. ಪ್ರಪಂಚದ ಅನೇಕ ವಿದ್ವಾಂಸರೊಡನೆ ಸಂಪರ್ಕವನ್ನು ಹೊಂದಿದ್ದ ಅವರು ಮಿತಭಾಷಿಗಳು, ಸರಳರು, ಸಜ್ಜನರು ಆಗಿದ್ದರು. ಕೆಲಕಾಲ ತಮ್ಮ ಚಿಕ್ಕತಾತಂದಿರಾದ ಶ್ರೀಕಂಠಶಾಸ್ತ್ರಿಗಳೊಡನೆಯೂ ಇರುವ ಭಾಗ್ಯ ಅವರದಾಗಿತ್ತು (ಎನ್. ಬಾಲಸುಬ್ರಹ್ಮಣ್ಯ ಅವರ ಬಗೆಗೆ ಹೆಚ್ಚಿನ ವಿವರಗಳಿಗೆ ನೋಡಿ: ಎನ್. ಬಾಲಸುಬ್ರಹ್ಮಣ್ಯ-ಟಿ.ವಿ. ವೆಂಕಟಾಚಲಶಾಸ್ತ್ರಿ, ನೆನಪುಗಳ ನೆರಳಲ್ಲಿ, ವಸಂತ ಪ್ರಕಾಶನ, ಬೆಂಗಳೂರು-೨೦೧೬, ಪುಟ ೩೮೩-೩೮೭).
- ಕುಣಿಗಲ ರಾಮಶಾಸ್ತ್ರಿಗಳಿಗೆ ಸಂತಾನವಿರಲಿಲ್ಲವಾಗಿ ಗಂಡುಮಗುವನ್ನು ದತ್ತು ತೆಗೆದುಕೊಂಡು ಅವರಿಗೂ ತಮ್ಮ ತಂದೆ ಲಕ್ಷ್ಮೀನರಸಿಂಹಶಾಸ್ತ್ರಿಗಳ ಹೆಸರನ್ನೇ ನಾಮಕರಣ ಮಾಡಿದರು. ಇವರ ಸಂತತಿ ಮುಂದುವರಿದಿದೆ. ಲಕ್ಷ್ಮೀನರಸಿಂಹಶಾಸ್ತ್ರಿಗಳ ಹಿರಿಯ ಮಕ್ಕಳು ಕುಣಿಗಲ ರಾಮಶಾಸ್ತ್ರಿಗಳು ಮೈಸೂರಿನಲ್ಲಿ ನೆಲಸಿದ್ದಾರೆ. ಇವರ ಸಹೋದರರಾದ ಕುಣಿಗಲ ಶಿವಸ್ವಾಮಿಯವರು ಕೂಡ ಮೈಸೂರಿನಲ್ಲಿಯೇ ನೆಲಸಿದ್ದು, ಇವರ ಗೃಹದಲ್ಲಿ ವಂಶಪರಂಪರೆಯಿಂದ ಬಂದಿರುವ ಶ್ರೀಚಕ್ರವೂ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ಪಾದುಕೆಗಳೂ ಇವೆ. ಪ್ರತಿವರ್ಷವೂ ಶ್ರೀಸ್ವಾಮಿಗಳ ಆರಾಧನೆಯು ಇವರ ಮನೆಯಲ್ಲಿ ಮನೆತನದ ಮಟ್ಟಿಗೆ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ (ಪ್ರಕೃತ ಬರಹಕ್ಕೂ ಅಮೂಲ್ಯವಾದ ಅನೇಕ ವಿವರಗಳನ್ನು ತಿಳಿಸಿಕೊಟ್ಟು, ಛಾಯಾಚಿತ್ರಗಳನ್ನು ಒದಗಿಸಿದವರು ಕೂಡ ಶಿವಸ್ವಾಮಿಯವರೇ ಎಂಬುದನ್ನು ಕೃತಜ್ಞತೆಯಿಂದ ನೆನೆಯಬೇಕಿದೆ). ಈ ಮನೆತನದವರು ಎಲ್ಲರೂ ಗುರುಗಳ ಹಾಗೂ ದೈವದ ಕೃಪೆಯಿಂದ ಸುಸ್ಥಿತಿಯಲ್ಲಿ ಇದ್ದು, ತಮ್ಮ ತಮ್ಮ ಶಕ್ತ್ಯಾನುಸಾರ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
- ಈಗ ೯೫ ವರ್ಷಗಳ ಹರಯದಲ್ಲಿರುವ, ಲ.ನ. ಶಾಸ್ತ್ರಿ ಎಂದೇ ಪರಿಚಿತರಾದ ಹುರಗಲವಾಡಿ ಲಕ್ಷ್ಮೀನರಸಿಂಹ ಶಾಸ್ತ್ರಿಯವರು ಶೃಂಗೇರಿಯ ಶ್ರೀಮಠಕ್ಕೆ ಸಲ್ಲಿಸಿರುವ ಸೇವೆ ಅನುಪಮವಾದುದು. ಶ್ರೀಮಠದ ಬಗೆಗೆ ಮತ್ತು ಸ್ವಾಮಿಗಳ ಬಗೆಗೆ ಅನೇಕ ಅಮೂಲ್ಯ ಪುಸ್ತಕಗಳನ್ನು ರಚಿಸಿರುವ ಶಾಸ್ತ್ರಿಗಳು ಮೂಲತಃ ಶೃಂಗೇರಿಯವರು, ಶೃಂಗೇರಿಯಲ್ಲಿಯೇ ಜನಿಸಿದವರು. ಅಂಚೆ ಕಛೇರಿಯ ಉದ್ಯೋಗದಲ್ಲಿದ್ದರೂ ಶಾಸ್ತ್ರಿಗಳು ಅತ್ಯುತ್ತಮ ಸಂಶೋಧಕರು ಸಹ ಆಗಿದ್ದಾರೆ. ಶಾಸ್ತ್ರಿಗಳ ತಾಯಿ ಶೃಂಗೇರಿ ಶ್ರೀಮಠದ ಪೇಷ್ಕಾರ್ ಆಗಿದ್ದ ಶಂಕರಶಾಸ್ತ್ರಿಗಳ ಮಗಳು ಸೀತಮ್ಮನವರು. ತಂದೆ ನರಸಿಂಹ ಶಾಸ್ತ್ರಿಗಳು. ಸೀತಮ್ಮನವರ ತಾಯಿ ಶ್ರೀಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀಕಂಠಶಾಸ್ತ್ರಿಗಳ ರ್ಮಪತ್ನಿ ಸಾವಿತ್ರಮ್ಮನವರ ತಂಗಿ ನಂಜಮ್ಮನವರು. ಲ.ನ. ಶಾಸ್ತ್ರಿಗಳು ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳನ್ನು ದರ್ಶಿಸಿ, ಆಶರ್ವಾದ ಪಡೆದುಕೊಂಡಿದ್ದ ಅದೃಷ್ಟಶಾಲಿಗಳು. ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳಿಗೆ ಅತ್ಯಂತ ಪ್ರಿಯರು ಕೂಡ. ಶೃಂಗೇರಿಯ ಗುರುಪರಂಪರೆಯಲ್ಲಿ ನಾಲ್ಕುಜನ ಪೀಠಾಧಿಪತಿಗಳನ್ನು ಕಂಡು ಅವರೊಡನೆ ನಿಕಟವಾಗಿ ಸಂಬAಧವನ್ನು ಹೊಂದಿರುವಂತಹ ಮಹಾನ್ ಅದೃಷ್ಟಶಾಲಿಗಳು ಶಾಸ್ತ್ರಿಗಳು. ಅಭಿನವ ಶಂಕರಾಲಯದ ಸಂಬಂಧವಾಗಿ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಮೈಸೂರಿಗೆ ಬಂದಿದ್ದಾಗ ನಡೆದ ಚರ್ಚೆಗಳಲ್ಲಿ ಶಾಸ್ತ್ರಿಗಳು ಪ್ರತ್ಯಕ್ಷದರ್ಶಿಗಳಾಗಿದ್ದರು. ಅಭಿನವ ಶಂಕರಾಲಯದ ಮೇಲೆ ಸಣ್ಣಪ್ರಮಾಣದ ಲೇಖನಗಳನ್ನು ಮೊದಲು ಬರೆದವರು ಕೂಡ ಬಹುಶಃ ಶಾಸ್ತ್ರಿಗಳೇ ಎಂದು ಕಾಣುತ್ತದೆ {ಲ.ನ. ಶಾಸ್ತ್ರಿಗಳ ಬಗೆಗೆ ಹೆಚ್ಚಿನ ವಿವರಗಳಿಗೆ ನೋಡಿ: ಸದ್ಧರ್ಮಮೇರು: ಶ್ರೀ ಹುರಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿ-ಎಚ್. ಎಂ. ನಾಗರಾಜರಾವ್, ರಚನ ಪ್ರಕಾಶನ, ಮೈಸೂರು-೨೦೨೦, ಪುಟ ೧-೧೦; ಲ.ನ. ಶಾಸ್ತ್ರಿ-ಟಿ.ವಿ. ವೆಂಕಟಾಚಲಶಾಸ್ತ್ರೀ, ನೆನಪುಗಳ ನೆರಳಲ್ಲಿ, ವಸಂತ ಪ್ರಕಾಶನ, ಬೆಂಗಳೂರು-೨೦೧೬; ಸಾರಸ್ವತ ಭಿಕ್ಷು (ಆತ್ಮಚರಿತ್ರೆ)-ಲ.ನ.ಶಾಸ್ತ್ರೀ, ಭಾರತೀ ಪ್ರಕಾಶನ, ಮೈಸೂರು-೨೦೧೯}.
- ಮೇಲೆ ದಿಙ್ಮಾತ್ರವಾಗಿ ಹೇಳಲಾಗಿರುವ ವ್ಯಕ್ತಿಗಳಲ್ಲದೆ ಇನ್ನೂ ಅನೇಕರು ಕುಣಿಗಲ ರಾಮಶಾಸ್ತ್ರಿಗಳ ಮತ್ತು ಶ್ರೀಕಂಠಶಾಸ್ತ್ರಿಗಳ ಮನೆತನಕ್ಕೆ ಸೇರಿದವರಾಗಿದ್ದಾರೆ. ಉದಾಹರಣೆಗೆ: ವೀರಕೇಸರಿ ಸೀತಾರಾಮ ಶಾಸ್ತ್ರಿಗಳು ಶ್ರೀಕಂಠಶಾಸ್ತ್ರಿಗಳ ಅಕ್ಕ ಪಾರ್ವತಮ್ಮನವರ ಪುತ್ರರಾಗಿದ್ದು, ಶೃಂಗೇರಿಯಲ್ಲಿ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳ ಪೂರ್ವಾಶ್ರಮದ ಸಹಪಾಠಿಗಳಾಗಿದ್ದವರು. ತರ್ಕ, ವ್ಯಾಕರಣ, ಮೀಮಾಂಸಾ ಮುಂತಾದವುಗಳಲ್ಲಿ ವಿದ್ವಾಂಸರಾಗಿದ್ದರಲ್ಲದೆ, ಪ್ರಸಿದ್ಧ ನ್ಯಾಯಪರ ಹೋರಾಟಗಾರರೂ ಆಗಿದ್ದರು. ಕಾದಂಬರಿಕಾರರಾಗಿ ಪ್ರಸಿದ್ಧಿಯನ್ನು ಪಡೆದವರು ಶಾಸ್ತ್ರಿಗಳು. ಹಾಗೆಯೇ ಶ್ರೀಕಂಠಶಾಸ್ತ್ರಿಗಳ ತಂಗಿ ಲಕ್ಷ್ಮೀನರಸಮ್ಮನವರ ಪತಿ ತೋಗೆರೆ ಶ್ರೀಕಂಠಶಾಸ್ತ್ರಿಗಳು ಪ್ರಸಿದ್ಧ ವೈಮಾನಿಕ ಆನೇಕಲ್ ಅಥವಾ ತೋಗೆರೆ ಸುಬ್ಬರಾಯಶಾಸ್ತ್ರಿಗಳ ಸಹೋದರ ಎಂಬುದು ಗಮನಾರ್ಹ.
ಮೇಲೆ ಅಭಿನವ ಶಂಕರಾಲಯಕ್ಕೆ ಸಂಬಂಧಪಟ್ಟ ವಿವರಗಳ ಪಕ್ಷಿನೋಟವನ್ನಷ್ಟೇ ನೀಡಲಾಗಿದೆ. ಮತ್ತಷ್ಟು ವಿವರಗಳು ಅಗತ್ಯವಾಗಿ ಪ್ರಕಟವಾಗಬೇಕಿದೆ. ಶೃಂಗೇರಿ ಶ್ರೀ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವು ಅಭಿನವ ಶಂಕರಾಲಯವನ್ನು ಸತತವಾಗಿ ಅಭಿವೃದ್ಧಿಗೊಳಿಸಿ, ಆಸ್ತಿಕ ಜನರ ವೈದಿಕಾಚರಣೆ, ಅಧ್ಯಾತ್ಮದ ಅನುಸಂಧಾನ, ಭಕ್ತಿ ಎಂದರೇನೆಂಬುದನ್ನು ಜನರಿಗೆ ತಿಳಿಯಪಡಿಸುವ ಕರ್ಯ, ಸಂಸ್ಕೃತಿ, ಪರಂಪರೆ ಎಂದರೆ ಏನು, ಅದರ ಅರ್ಥವೇನು ಎಂಬುದರ ಬಗೆಗೆ ಮಾರ್ಗದರ್ಶನವನ್ನು ಮಾಡುತ್ತ ಬರುತ್ತಿದೆ. ಇದರಿಂದಾಗಿ ಈ ಸ್ಥಳವು ಮೈಸೂರಿನ ಸಾಂಸ್ಕೃತಿಕ, ಧರ್ಮಿಕ, ಅಧ್ಯಾತ್ಮಿಕ ಕೇಂದ್ರಗಳಲ್ಲಿ ಪ್ರಮುಖವಾದುದಾಗಿ ಶೋಭಿಸುತ್ತಿದ್ದು ೧೦೦ ವರ್ಷಗಳನ್ನು ಪೂರೈಸುತ್ತಿದೆ.
ಆಧಾರಸೂಚಿ:
ಕುಣಿಗಲ ರಾಮಶಾಸ್ತ್ರಿಗಳ ಚರಿತ್ರೆ-ಎಂ.ಎಸ್. ಪುಟ್ಟಣ್ಣ, ಕಾವ್ಯಾಲಯ, ಮೈಸೂರು-೧೯೫೨ (ದ್ವಿತೀಯ ಮುದ್ರಣ); ಪ್ರಥಮ ಮುದ್ರಣ-೧೯೧೦
ಕುಣಿಗಲ ರಾಮಶಾಸ್ತ್ರಿ-ನಂಜನಗೂಡು ಬಾಲಸುಬ್ರಹ್ಮಣ್ಯ, ಮುಲಕನಾಡು ಮಹನೀಯರು [ಮಾಲೆ]-೨, ಮೈಸೂರು ಮುಲಕನಾಡು ಸಭಾ (ರಿ), ಮೈಸೂರು-೨೦೦೦
ಗುರುವಂದನ (ಸ್ಮರಣ ಸಂಚಿಕೆ), ಅಭಿನವ ಶಂಕರಾಲಯ, ಶ್ರೀ ಶೃಂಗೇರಿ ಶಂಕರಮಠ, ಮೈಸೂರು-೨೦೦೨
ಜಗದ್ಗುರು (ಸ್ಮರಣ ಸಂಚಿಕೆ), ಅಭಿನವ ಶಂಕರಾಲಯ, ಶ್ರೀ ಶೃಂಗೇರಿ ಶಂಕರಮಠ, ಮೈಸೂರು-೨೦೧೦
ಮುಲಕನಾಡು ಬ್ರಾಹ್ಮಣರು (ಸಮುದಾಯ, ಸಂಸ್ಕೃತಿ)-ಟಿ.ವಿ. ವೆಂಕಟಾಚಲಶಾಸ್ತ್ರೀ, ಮುಲಕನಾಡು ಮಹಾಸಂಘ, ಬೆಂಗಳೂರು-೨೦೧೩, ದ್ವಿತೀಯ ಪರಿಷ್ಕೃತ ಮುದ್ರಣ
ಮೈಸೂರಿನ ಅಭಿನವ ಶಂಕರಾಲಯದಲ್ಲಿ ನಡೆದ ಪ್ರತಿಷ್ಠಾ ಮಹೋತ್ಸವಗಳು-ಭಾರದ್ವಾಜ, ಶ್ರೀಶಂಕರಕೃಪ ೧೫-೮, ಪು. ೨೧-೨೪
ಶ್ರೀಚಕ್ರಾರ್ಚನ ಪದ್ಧತಿಃ-ನಂ[ಜನಗೂಡು]. ಬಾಲಸುಬ್ರಹ್ಮಣ್ಯ, ಆರ್ಷವಿದ್ಯಾ ಪ್ರಕಾಶನ, ಬೆಂಗಳೂರು-೨೦೧೦, ಎರಡನೆಯ ಮುದ್ರಣ
ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳವರ ದಿವ್ಯಚರಿತ್ರೆ-ನಂಜನಗೂಡು ಶ್ರೀಕಂಠಶಾಸ್ತ್ರೀ, ಶ್ರೀಜಗದ್ಗುರು ಶಂಕರಾಚರ್ಯ ಮಹಾಸಂಸ್ಥಾನಮ್, ದಕ್ಷಿಣಾಮ್ನಾಯ ಶ್ರೀಶಾರದಾಪೀಠಮ್, ಶೃಂಗೇರಿ-೨೦೦೭ ಪುನರ್ ಮುದ್ರಣ
ಶ್ರೀ ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮುಲವಾರಿ ದಿವ್ಯ ಚರಿತ್ರಮು- (ಮೂಲಂ) ನಂಜನಗೂಡು ಶ್ರೀಕಂಠಶಾಸ್ತ್ರೀ (ತೆಲುಗು ಅನುವಾದಂ) ನಾಗಪೂಡಿ ಕುಪ್ಪುಸ್ವಾಮಯ್ಯ, ಶ್ರೀಶ್ರೀ ಜಗದ್ಗುರು ಶಂಕರಾಚರ್ಯ ಮಹಾಸಂಸ್ಥಾನಮ್, ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಮ್, ಶೃಂಗೇರಿ-೨೦೧೮ ಪುನರ್ ಮುದ್ರಣಮು
ಸ್ವಾಮಿ ಶ್ರೀಚಂದ್ರಶೇಖರಭಾರತೀ ಜಗದ್ಗುರು ದರ್ಶನ-(ಮೂಲ) ಆರ್. ಕೃಷ್ಣಸ್ವಾಮಿ ಅಯ್ಯರ್, (ಸಂಪಾದಕರು) ಹುರಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರೀ, ಭಾರತೀ ಪ್ರಕಾಶನ, ಮೈಸೂರು – ೨೦೨೩
Sons of Sarasvati: Late Exemplars of the Indian Intellectual Tradition {Translation of Biographies in Kannada by Chamarajanagara Venkataramana Sastry and Maisuru Suryanarayana Bhatta Puttanna}-Chinya V. Ravishankar, Published by Permanent Black, Ranikhet-2017
Sri Narasimha Bharati Paduka Sannidhi, Mohanur {Paduka Sannidhi of Sri Sri Sachchithananda Sivabhinava Narasimha Bharati Swami the 33rd Pontiff of Sri Sharada Peetham Sringeri. Located in the Premises of Sri Arulmigu Madhukaraveni Sameta Sri Achala Deepeshwara Swami Temple, Mohanur : A. Brief History}, 18th March 2023
The Multifaceted Jīvanmukta: His Holiness Jagadguru Śrī Abhinava Vidyātīrtha Mahāsvāmin, Published by Sri Vidyateertha Foundation, Chennai-2017