“ಹಿಂದಿನ ಎಲ್ಲ ಪ್ರಧಾನಿಗಳಿಗಿಂತ ಮೋದಿ ಅವರು ಭಿನ್ನವಾಗಿದ್ದಾರೆ. ಮುಂದೆ ಬಂದ ಪ್ರತಿಯೊಂದು ಪ್ರಸ್ತಾವವನ್ನು ಅವರು ಸವಿವರವಾಗಿ ಪರಿಶೀಲಿಸುತ್ತಾರೆ. ವಿವಿಧ ಹಂತದ ಅಧಿಕಾರಿಗಳಿಂದ, ಪಕ್ಷ ಮತ್ತು ಸಂಪುಟದ ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಇಂತಹ ಆಯ್ಕೆ ವಿಚಾರದಲ್ಲಿ ವಾಜಪೇಯಿ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಮತ್ತು ಓರ್ವ ಹಿರಿಯ ಐಎಎಸ್ ಅಧಿಕಾರಿಯನ್ನು ಅವಲಂಬಿಸುತ್ತಿದ್ದರು. ಎಲ್.ಕೆ. ಆಡ್ವಾಣಿ, ಜಾರ್ಜ್ ಫೆರ್ನಾಂಡಿಸ್ ಮುಂತಾದ ಕೆಲವು ಸಹೋದ್ಯೋಗಿಗಳಲ್ಲಿ ಚರ್ಚಿಸುತ್ತಿದ್ದರು. ಆದರೆ ಮೋದಿ ನೇಮಕದ ನಿರ್ಧಾರಗಳಿಗೆ ಈ ರೀತಿ ಯಾರನ್ನೂ ಅವಲಂಬಿಸುವುದಿಲ್ಲ ಅಥವಾ ಪಕ್ಷದ ಒಳಗಿನ ಮತ್ತು ಹೊರಗಿನ ಯಾವುದೇ ಬಗೆಯ ಒತ್ತಡಗಳಿಗೆ ಒಳಗಾಗುವುದಿಲ್ಲ. ಅವರಿಗೆ ಬೇಕಿರುವುದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು. ಒಮ್ಮೆ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದರೆಂದರೆ ಮತ್ತೆ ಅವರನ್ನು ಸಾಧ್ಯವಾದಷ್ಟು ತಮ್ಮೊಂದಿಗೆ ಉಳಿಸಿಕೊಳ್ಳಲು ಯತ್ನಿಸುತ್ತಾರೆ.
ಪ್ರತಿಭಾ ಪಲಾಯನವು ಸುದೀರ್ಘ ಕಾಲದಿಂದ ಭಾರತದ ಒಂದು ಸಮಸ್ಯೆಯಾಗಿ ಬೆಳೆದುಬಂದಿದೆ. ದೇಶದ ಅತ್ಯಂತ ಅಮೂಲ್ಯ ಮತ್ತು ಸೀಮಿತ ಸಂಪನ್ಮೂಲದಿಂದ ಕಲಿತು ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿದ ಯುವಜನರು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾಗಿ ವಿದೇಶಗಳಲ್ಲಿ ಹೋಗಿ ನೆಲೆಸುವುದು. ಇದರಿಂದ ದೇಶಕ್ಕೆ ಎಷ್ಟು ನಷ್ಟ! ದೇಶದ ಅಭಿವೃದ್ಧಿ, ಸಮೃದ್ಧಿಗಳಿಗೆ ತಮ್ಮ ಕೊಡುಗೆಯನ್ನು ನೀಡಿ ತಾವು ಕೂಡ ಬೆಳೆಯಬೇಕಾದವರು ಹುಟ್ಟಿದ ದೇಶದ ಪಾಲಿಗೆ ಶಾಶ್ವತವಾಗಿ ಇಲ್ಲವಾಗುವುದೆಂದರೇನು? ಆ ರೀತಿಯಲ್ಲಿ ತಾಯ್ನಾಡಿಗೆ ಬಹುತೇಕ ಪೂರ್ತಿಯಾಗಿ ಗೈರಾಗುತ್ತಿದ್ದವರಲ್ಲಿ ದೇಶದ ಐಐಟಿ ಪದವೀಧರರು ಮುಂಚೂಣಿಯಲ್ಲಿದ್ದರು. ಈಗ, ಅಂದರೆ ಮುಖ್ಯವಾಗಿ ಕಳೆದ ಸುಮಾರು ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ ಎಂದು ಐಐಟಿ ಕಾನ್ಪುರದ ನಿರ್ದೇಶಕ ಅಭಯ್ ಕರಂದೀಕರ್ ಅವರು ಈಚಿನ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
“ಜನ ಕಲಿಯಲು ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತಾರೆ. ಹಾಗಾಗಿ ನಾವು ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಶಿಕ್ಷಣವ್ಯವಸ್ಥೆಯನ್ನು ರೂಪಿಸಬೇಕು. ನೂತನ ಶಿಕ್ಷಣ ನೀತಿಯು (ಎನ್ಇಪಿ) ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಉತ್ತಮ ವಿಶ್ವವಿದ್ಯಾಲಯಗಳ ಸ್ಥಾಪನೆ ಇದರ ಗುರಿ. ಶಿಕ್ಷಕರ ಮಟ್ಟದಲ್ಲೂ ಇದನ್ನು ಮಾಡಲಾಗುತ್ತಿದೆ. ಶಿಕ್ಷಕರ ಗುಣಮಟ್ಟವು ಉತ್ತಮವಾದರೆ ನಮ್ಮ ವಿದ್ಯಾರ್ಥಿಗಳು ಇಲ್ಲೇ ದೇಶದಲ್ಲೇ ವಿದ್ಯಾಭ್ಯಾಸವನ್ನು ಕೈಗೊಳ್ಳುತ್ತಾರೆ. ಈಗ ದೇಶದಲ್ಲಿ ತುಂಬ ಉದ್ಯೋಗಾವಕಾಶಗಳಿವೆ. ಹತ್ತು ವರ್ಷಗಳ ಹಿಂದೆ ಶೇ. ೯೦ರಷ್ಟು ಐಐಟಿ ಪದವೀಧರರು ವಿದೇಶಗಳಿಗೆ ಹೋಗುತ್ತಿದ್ದರು. ಈಗ ಶೇ. ೧೦ರಷ್ಟು ಜನ ಮಾತ್ರ ಹೊರಗೆ ಹೋಗುತ್ತಾರೆ” ಎಂದು ಏಷ್ಯಾನೆಟ್ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
ಮುಂದುವರಿದು, “ದೇಶದಲ್ಲಿ ನಿಂತ ಹಲವರು ಸ್ವಂತ ಸ್ಟಾರ್ಟಪ್ಗಳನ್ನು ಹೊಂದಿದ್ದಾರೆ. ಅದರಿಂದ ಉದ್ಯೋಗಾವಕಾಶ ಹೆಚ್ಚುತ್ತಿದೆ. ಇದರಿಂದ ದೇಶ ಬೆಳೆಯುತ್ತದೆ. ಈಗ ನಾವು ದೇಶೀಯವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಭಾರತವು ತಂತ್ರಜ್ಞಾನದ ಬಹುದೊಡ್ಡ ಮಾರುಕಟ್ಟೆಯಾಗಿದೆ. ಇದನ್ನು ನಾವು ದೇಶೀಯವಾಗಿ ಸಿದ್ಧಪಡಿಸುತ್ತೇವೆ; ಮತ್ತು ಹಲವು ದೇಶಗಳಿಗೆ ರಫ್ತು ಮಾಡುತ್ತೇವೆ. ಕೋವಿಡ್ ಲಸಿಕೆ ಇದಕ್ಕೊಂದು ಉತ್ತಮ ಉದಾಹರಣೆ. ೫ಜಿ, ೬ಜಿ ತಂತ್ರಜ್ಞಾನಗಳ ಅಭಿವೃದ್ಧಿ, ವೈದ್ಯಕೀಯ ಉಪಕರಣಗಳು ಮತ್ತು ಕೃತಕ ಅಂಗಾಂಗಗಳ ಅಭಿವೃದ್ಧಿ ನಮ್ಮಲ್ಲೇ ನಡೆದಿದ್ದು, ಕೃತಕ ಹೃದಯವನ್ನು ತಯಾರಿಸುವತ್ತ ಪ್ರಯತ್ನ ಸಾಗಿದೆ. ಇವು ದೇಶದಲ್ಲಿ ಸದ್ಯ ಉಪಯೋಗಕ್ಕೆ ಬಾರದಿರಬಹುದು. ಆದರೆ ಅವುಗಳ ರಫ್ತು ಸಾಧ್ಯ. ಕೇಂದ್ರಸರ್ಕಾರವೀಗ ಸೆಮಿಕಂಡಕ್ಟರ್ ಕಮಿಷನ್ ಆರಂಭಿಸಿದೆ. ಇದು ಭವಿಷ್ಯದಲ್ಲಿ ದೇಶದ ಉತ್ಪಾದನಾ ವಲಯದಲ್ಲಿ ಕ್ರಾಂತಿಯನ್ನೇ ಮಾಡಲಿದೆ” ಎಂದು ಅಭಯ್ ಕರಂದೀಕರ್ ವಿವರಿಸಿದರು.
ಪ್ರತಿಭಾ ಪಲಾಯನವನ್ನು ತಡೆಯುವುದು ಸೇರಿದಂತೆ ಕೇಂದ್ರಸರ್ಕಾರದ ಹೊಸ ಶಿಕ್ಷಣ ನೀತಿಯಿಂದ ಬಹಳಷ್ಟು ಪ್ರಗತಿಯನ್ನು ಸಾಧಿಸಬಹುದು. ಆದರೆ ಅದರ ನಡುವೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎನ್ಇಪಿಗೆ ಅವಕಾಶ ನೀಡದಿರುವಂತಹ ವಿದ್ಯಮಾನಗಳು ಕೂಡ ನಮ್ಮ ಮುಂದಿವೆ.
ಗುಣಮಟ್ಟ–ರಫ್ತು ಏರಿಕೆ
ದೇಶದಲ್ಲಿ ಇದೇ ರೀತಿ ಪೂರ್ತಿ ಬದಲಾವಣೆಯನ್ನು ತಂದ ಇನ್ನೊಂದು ಕ್ಷೇತ್ರ ಉತ್ಪಾದನಾರಂಗ ಎನ್ನಬಹುದು. ಹಿಂದೆ ದೊಡ್ಡ ರೀತಿಯ ಉತ್ಪಾದನೆಗೆ ಅಂಜುತ್ತಿದ್ದ ಅಥವಾ ಹಿಂಜರಿಯುತ್ತಿದ್ದ ಹಲವು ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಸರ್ಕಾರವೀಗ ದೊಡ್ಡ ಹೆಜ್ಜೆಗಳನ್ನೇ ಇಡುತ್ತಿದೆ; ಯಶಸ್ವೀ ಉತ್ಪಾದನೆಯೊಂದಿಗೆ ರಫ್ತು ಮಾರುಕಟ್ಟೆಗೂ ಪ್ರವೇಶಿಸಿ ಪ್ರಮುಖ ಸ್ಪರ್ಧಿ ಎನಿಸುತ್ತಿದೆ. ಆ ಹಿನ್ನೆಲೆಯನ್ನು ಕೇಂದ್ರ ವಾಣಿಜ್ಯ ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರಗಳ ಪ್ರಭಾವೀ ಸಚಿವರಾದ ಪೀಯೂಷ್ ಗೋಯಲ್ ವಿವರಿಸಿ, ಗುಣಮಟ್ಟದಲ್ಲಿ ಭಾರತವೀಗ ವಿಶ್ವ ನಾಯಕ ಆಗುತ್ತಿದೆ ಎಂದಿದ್ದಾರೆ. “ಉತ್ಪಾದನೆಯಲ್ಲಿ ‘ಶೂನ್ಯ ದೋಷ ಮತ್ತು ಶೂನ್ಯ ದುಷ್ಪರಿಣಾಮ’ ಎನ್ನುವ ಪ್ರಧಾನಿ ಮೋದಿ ಅವರ ಕರೆಗೆ ಅನುಗುಣವಾಗಿ ಭಾರತವು ಅತ್ಯುನ್ನತ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅತ್ಯುನ್ನತ ಉತ್ಪನ್ನಗಳನ್ನು ಪೂರೈಸಿ ವಿಶ್ವನಾಯಕನಾಗಲು ಉದ್ದೇಶಿಸಿದೆ. ೨೦೪೭ರ ಹೊತ್ತಿಗೆ ಭಾರತವು ಮುಂದುವರಿದ (ಅಭಿವೃದ್ಧಿ ಹೊಂದಿದ) ದೇಶವಾಗುವ ಗುರಿಯಲ್ಲಿ ಪ್ರಮುಖ ಭಾಗವೆಂದರೆ ಸ್ಪರ್ಧಾತ್ಮಕ ದರಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವುದಾಗಿದೆ. ‘ಮೇಕ್ ಇನ್ ಇಂಡಿಯಾ’ ಬ್ರಾಂಡ್ ದೇಶದ ಮತ್ತು ವಿದೇಶೀ ಗ್ರಾಹಕರನ್ನು ತೃಪ್ತಿಪಡಿಸುವ ಗುಣಮಟ್ಟದ ಮುದ್ರೆಯಾಗಿದೆ. ಆ ಬಗ್ಗೆ ದಿಟ್ಟಕ್ರಮ ಕೈಗೊಳ್ಳಲಾಗುತ್ತಿದೆ. ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿಗಳಲ್ಲಿ ಸಮತೋಲನ ಕಾಯ್ದುಕೊಂಡಾಗ ಲಾಭದಾಯಕ ಮಾರುಕಟ್ಟೆಯನ್ನು ಉಳಿಸಿಕೊಳ್ಳಬಹುದೆಂದು ಮೋದಿ ಹೇಳುತ್ತಾರೆ. ಆ ಕಾರ್ಯತಂತ್ರದ ಪ್ರಮುಖ ಆದ್ಯತೆ ಗುಣಮಟ್ಟದ ವರ್ಧನೆಯಾಗಿದೆ” ಎಂದವರು ತಿಳಿಸಿದ್ದಾರೆ.
ಆ ಸಂಬಂಧವಾಗಿ ಆದೇಶಗಳನ್ನು ಹೊರಡಿಸಲಾಗಿದ್ದು, ನಮ್ಮ ಉತ್ಪನ್ನಗಳು ಭಾರತೀಯ ಮಾನಕ ಬ್ಯೂರೋದ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ಮಾನದಂಡಗಳಿಗೆ ಅನುಗುಣವಾಗಿರಬೇಕು. ಇದು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಯಸುವ ಗ್ರಾಹಕರಿಗೆ ವರದಾನವಾಗಿದೆ. ಮೋದಿ ಅವರ ಡಿಜಿಟಲ್ ಇಂಡಿಯಾ ಜಗತ್ತಿನ ಜೊತೆ ಸಂಪರ್ಕ ಹೊಂದಲು ಮತ್ತು ಉತ್ತಮ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲಕರವಾಗಿದೆ. ಯಾವ ಉತ್ಪನ್ನದ ಬಗ್ಗೆ ಅಸಮಾಧಾನ ಉಂಟಾಗಿದೆಯೋ ಅದನ್ನು ಸಾರ್ವಜನಿಕವಾಗಿ ತಿಳಿಸಲಾಗುತ್ತದೆ. ಅದರಿಂದ ಉತ್ಪನ್ನಗಳ ಗುಣಮಟ್ಟ, ಬೆಲೆ ಮತ್ತು ನಾವೀನ್ಯಗಳಲ್ಲಿ ಸಮತೋಲನ ಬರುತ್ತದೆ. ಈಗ ಸರ್ಕಾರ ರಫ್ತು ಹೆಚ್ಚಿಸುವ ಉದ್ದೇಶದಿಂದ ಗುಣಮಟ್ಟದ ಉತ್ಪನ್ನ ಪೂರೈಸಲು ಆದ್ಯತೆ ನೀಡುತ್ತಿದೆ.
ಆಟಿಕೆ ಸುಧಾರಣೆ
೨೦೧೪ರ ಮುನ್ನ ಒಟ್ಟು ೧೦೬ ಉತ್ಪನ್ನಗಳಿಗೆ ಕೇವಲ ೧೪ ಗುಣಮಟ್ಟ ನಿಯಂತ್ರಣ ಕಚೇರಿ (ಕ್ಯೂಸಿಐ)ಗಳಿದ್ದವು. ಈಗ ೬೫೩ ಉತ್ಪನ್ನಗಳಿಗೆ ೧೪೮ ಕಚೇರಿಗಳಿವೆ. ಇದರಲ್ಲಿ ಆಟಿಕೆ, ಪಾದರಕ್ಷೆ, ಗೃಹಬಳಕೆ ವಸ್ತು, ಏರ್ಕಂಡೀಷನ್ಗಳೆಲ್ಲ ಸೇರಿವೆ. ಈ ಕ್ಯೂಸಿಐಗಳು ‘ಜಗತ್ತಿಗಾಗಿ ಮೇಕ್ ಇನ್ ಇಂಡಿಯಾ’ ಧ್ಯೇಯವನ್ನು ವೇಗಗೊಳಿಸುತ್ತಿವೆ. ಅದರ ಅಡಿಯಲ್ಲಿ ಅನೇಕ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹಲವು ಗುಣಮಟ್ಟ- ನಿಯಂತ್ರಿತ ವಸ್ತುಗಳು ಕೂಡ ರಫ್ತು ಆಗುತ್ತಿವೆ. ಎರಕ ಹೊಯ್ದ ಕಬ್ಬಿಣದ ಉತ್ಪನ್ನವು ಕಳೆದ ವರ್ಷ ೫೩೫ ಮಿಲಿಯನ್ ಡಾಲರ್ನಷ್ಟು ರಫ್ತಾಗಿತ್ತು; ಅದೇ ವೇಳೆ ಅದರ ಆಮದಿನ ಮೌಲ್ಯ ಕೇವಲ ೬೮ ಮಿಲಿಯನ್ ಡಾಲರ್ನಷ್ಟು. ಸುಮಾರು ೨೫ ಕ್ಯೂಸಿಐಗಳು ಆಮದನ್ನು ಮೀರಿದ ರಫ್ತು ಹೊಂದಿವೆ. ಅಂದರೆ ದೇಶದಲ್ಲೀಗ ಕ್ಯೂಸಿಐಗಳು ವಸ್ತುಗಳ ಗುಣಮಟ್ಟದ ಬಗ್ಗೆ ಪ್ರಜ್ಞೆಯನ್ನು ಬೆಳೆಸುತ್ತಿವೆ. ಕಳಪೆ ವಸ್ತುಗಳು ದೇಶಕ್ಕೆ ಆಮದಾಗಿ ಬಂದು ರಾಶಿ ಬೀಳುವುದು ತಪ್ಪುತ್ತಿದೆ. ಜನರ ಆರೋಗ್ಯ, ಸುರಕ್ಷತೆಯ ದೃಷ್ಟಿಯಿಂದಲೂ ಕ್ಯೂಸಿಐಗಳು ಮಹತ್ತ್ವದ್ದನ್ನು ಸಾಧಿಸುತ್ತಿವೆ. ವಿದೇಶದಿಂದ (ಮುಖ್ಯವಾಗಿ ಚೀನಾದಿಂದ) ಬರುವ ಆಟಿಕೆಗಳ ವಿಷಕಾರಿ ವಸ್ತು, ಕಳಪೆ ಪ್ಲಾಸ್ಟಿಕ್, ಬೆಂಕಿಯ ಅಪಾಯಗಳನ್ನು ತಡೆಯಲು ಸಾಧ್ಯವಾಗಿದೆ; ಆಟಿಕೆಗಳ ವಿಷಯದಲ್ಲಿ ಗ್ರಾಹಕರು ಉತ್ತಮ ಉತ್ಪಾದಕರಿಬ್ಬರಿಗೂ ಅನುಕೂಲವಾಗಿದೆ. ಕ್ಯೂಸಿಐ ಜಾರಿಗೆ ಮುನ್ನ ದೇಶದ ಮಾರುಕಟ್ಟೆಯಲ್ಲಿ ಅಗ್ಗದ ಮತ್ತು ಕಳಪೆ ಗುಣಮಟ್ಟದ ವಸ್ತುಗಳು ತುಂಬಿದ್ದವು. ೨೦೧೯ರಲ್ಲಿ ಕ್ಯೂಸಿಐ ಒಂದು ಸಮೀಕ್ಷೆ ನಡೆಸಿದಾಗ ಶೇ. ೩೩ರಷ್ಟು ಆಟಿಕೆಗಳು ಮಾತ್ರ ಸಂಬಂಧಪಟ್ಟ ಮಾನದಂಡಗಳಿಗೆ ಅನುಗುಣವಾಗಿದ್ದವು; ಉಳಿದವು ಮಕ್ಕಳಿಗೆ ಅಪಾಯಕಾರಿಯಾಗಿದ್ದವು. ೨೦೨೧ರ ಜನವರಿಯಿಂದ ಕ್ಯೂಸಿಐ ಮೂಲಕ ಸೂಕ್ತವಾಗಿ ಸ್ಪಂದಿಸಿದ ಮೋದಿ ಸರ್ಕಾರ ಅದು ಸ್ವೀಕಾರಾರ್ಹವಲ್ಲ ಎಂದು ನಿರ್ಬಂಧಿಸಿತು.
ಈಗ ದೇಶದ ಆಟಿಕೆಗಳ ಗುಣಮಟ್ಟ ತುಂಬ ಸುಧಾರಿಸಿದೆ. ಶೇ. ೮೪ರಷ್ಟು ಆಟಿಕೆಗಳು ಬಿಐಎಸ್ ಮಾನದಂಡಕ್ಕೆ ಬದ್ಧವಾಗಿವೆ ಎಂದು ಈಚಿನ ಒಂದು ಸಮೀಕ್ಷೆ ತಿಳಿಸಿದೆ. ಕ್ಯೂಸಿಐಗಳು ದೇಶದ ಮಕ್ಕಳ ಹಿತವನ್ನು ಕಾಪಾಡಿವೆ. ೨೦೧೮-೧೯ಕ್ಕೆ ಹೋಲಿಸಿದರೆ, ೨೦೨೨-೨೩ರಲ್ಲಿ ದೇಶದ ಆಟಿಕೆಗಳ ರಫ್ತು ಶೇ. ೬೦ರಷ್ಟು ಅಧಿಕವಾಗಿದೆ. ಗುಣಮಟ್ಟವನ್ನು ಉತ್ತಮಪಡಿಸುವ ಉತ್ಪಾದಕರನ್ನು ಸರ್ಕಾರ ಯಾವಾಗಲೂ ಬೆಂಬಲಿಸುತ್ತದೆ. ಅನ್ನ-ಬಟ್ಟೆ-ವಸತಿಗಳ ಜೊತೆಗೆ ಆರೋಗ್ಯರಕ್ಷಣೆ ಮತ್ತು ಉತ್ತಮ ಮೂಲಸವಲತ್ತು ಒದಗಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
ಡಿಜಿಟಲ್ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾವನ್ನು ಯಾವ ರೀತಿಯಲ್ಲಿ ರೂಪಿಸಿ ಬೆಳೆಸಿದ್ದಾರೆಂದರೆ ಹತ್ತು ವರ್ಷಗಳ ಹಿಂದೆ ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದುಗಡೆ ಎಲ್ಲೋ ಇದ್ದ ಭಾರತ ಒಮ್ಮೆಲೇ ಮೊದಲ ಸ್ಥಾನಕ್ಕೆ ಬಂದು ನಿಂತಿದೆ. ಈಗ ದೇಶದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸವಲತ್ತನ್ನು ಬಹುತೇಕ ಎಲ್ಲರೂ ಬಳಸುತ್ತಿದ್ದಾರೆ. ಮೋದಿ ಏನು ಮಾಡಿದ್ದಾರೆ ಎಂದು ಕೇಳುವವರಿಗೆ “೫೦ ವರ್ಷಗಳಲ್ಲಿ ಮಾಡಬಹುದಾಗಿದ್ದುದನ್ನು ಮೋದಿ ಐದು ವರ್ಷಗಳಲ್ಲಿ ಮಾಡಿ ಮುಗಿಸಿದ್ದಾರೆ” ಎಂದು ಹೇಳಬಹುದು. ಡಿಜಿಟಲೀಕರಣದಿಂದ ಏಳೆಂಟು ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಭಾರೀ ಬದಲಾವಣೆಯಾಗಿದೆ. ಜೀವನವು ಹೆಚ್ಚು ಅನುಕೂಲಕರವಾಗಿದೆ. ಅದಕ್ಕೆ ಮುಖ್ಯ ಕಾರಣ ಮೊಬೈಲ್ ಫೋನ್. ಅದರೊಂದಿಗೆ ಸೂಕ್ತ ಆ್ಯಪ್ಗಳು, ಇಂಟರ್ನೆಟ್ ಸೌಕರ್ಯ, ನೆಟ್ವರ್ಕಿಂಗ್, ಸರ್ಕಾರದ ಪ್ರೋತ್ಸಾಹ ಎಲ್ಲವೂ ಇದೆ.
ದೇಶದ ಜನ ಈಗ ಯುಪಿಐ (ಯುನಿಪೈಡ್ ಪೇಮೆಂಟ್ ಇಂಟರ್ಫೇಸ್) ಬಳಸುತ್ತಿದ್ದಾರೆ. ಡಿಜಿ ಲಾಕರ್ ಹೊಂದಿದ್ದಾರೆ. ಕೋವಿಡ್ ಆ್ಯಪ್ ಬಳಸಿ ವ್ಯಾಕ್ಸಿನ್ ಪಡೆಯಲಾಗಿದೆ. ಆಧಾರ್ಕಾರ್ಡ್ ಎಲ್ಲರ ಬಳಿ ಇದೆ. ಕೇಂದ್ರಸರ್ಕಾರದ ಅನೇಕ ಸೇವೆಗಳನ್ನು ಜನ ಡಿಜಿಟಲ್ ವ್ಯವಸ್ಥೆಯ ಮೂಲಕವೇ ಪಡೆಯುತ್ತಿದ್ದಾರೆ. ಗ್ಯಾಸ್ ಬುಕ್ ಮಾಡುವುದರಿಂದ ಹಿಡಿದು ಪಾಸ್ಪೋರ್ಟ್ ಪಡೆಯವವರೆಗೆ ಎಲ್ಲ ಡಿಜಿಟಲ್ ಆಗಿದೆ. ರೈತರಿಗೆ ಹವಾಮಾನದ ಮಾಹಿತಿ, ಬೆಳೆಯ ಸಬ್ಸಿಡಿ, ಜಮೀನಿನ ನಕ್ಷೆ – ಇವೆಲ್ಲ ಈಗ ಮೊಬೈಲ್ನಲ್ಲೇ ಸಿಗುತ್ತವೆ. ಅನಕ್ಷರಸ್ಥ ಹೂ ಮಾರುವವರು ಕೂಡ ಡಿಜಿಟಲ್ ಸೇವೆ ಬಳಸುತ್ತಿದ್ದಾರೆ. ಇದನ್ನು ಗುರುತಿಸಿದ ವಿಶ್ವಬ್ಯಾಂಕ್ ೫೦ ವರ್ಷಗಳಲ್ಲಿ ಒಂದು ದೇಶ ಸಾಧಿಸಬಹುದಾದುದನ್ನು ಮೋದಿ ಸರ್ಕಾರ ಕೇವಲ ಆರು ವರ್ಷಗಳಲ್ಲಿ ಮಾಡಿದೆ ಎಂದು ಹೇಳಿತು.
ದೇಶದಲ್ಲಿ ಡಿಜಿಟಲ್ ತಂತ್ರಜ್ಞಾನದ ಮೇಲಿನ ಅವಲಂಬನೆಯು ದಿನೇದಿನೇ ಹೆಚ್ಚಾಗುತ್ತಿದೆ. ಇದರಿಂದ ಭ್ರಷ್ಟಾಚಾರವು ನಿಯಂತ್ರಣಕ್ಕೆ ಬರುತ್ತಿದೆ. ಕಾಗದದ ಬಳಕೆ ಕಡಮೆಯಾಗುತ್ತಿದೆ. ಸಮಯದ ಉಳಿತಾಯವಾಗುತ್ತಿದೆ. ‘ಪವರ್ ಟು ಎಂಪವರ್’ ಎನ್ನುವ ಗುರಿಯೊಂದಿಗೆ ೨೦೧೫ರಲ್ಲಿ ಡಿಜಿಟಲ್ ಇಂಡಿಯಾ ಶುರುವಾಯಿತು. ಇಂಟರ್ನೆಟ್ ಬಳಕೆ ಆರಂಭವಾಯಿತು. ಆನ್ಲೈನ್ ವ್ಯವಹಾರವು ವ್ಯಾಪಕವಾಗಿ ಬೆಳೆದ ಪರಿಣಾಮವಾಗಿ ಇ-ಕಾಮರ್ಸ್ ತುಂಬ ಅಭಿವೃದ್ಧಿ ಹೊಂದಿತು. ಇ-ಕಾಮರ್ಸ್ನಲ್ಲೀಗ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅಮೆಜಾನ್, ಫ್ಲಿಪ್ಕಾರ್ಟ್ನಂತಹ ಕಂಪೆನಿಗಳು ಸ್ಪರ್ಧೆಗೆ ಇಳಿದಿದ್ದು, ಬಟ್ಟೆ, ದಿನಬಳಕೆ ವಸ್ತುಗಳು, ಪುಸ್ತಕ ಮುಂತಾಗಿ ಎಲ್ಲವನ್ನೂ ಮನೆಬಾಗಿಲಿಗೆ ತಲಪಿಸುತ್ತಿವೆ. ಯುಪಿಐ (ಯುನಿಪೈಡ್ ಪೇಮೆಂಟ್ ಇಂಟರ್ಫೇಸ್)ನಲ್ಲಿ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಅನಂತರದ ನಾಲ್ಕು ದೇಶಗಳಲ್ಲಿ ಒಟ್ಟು ನಡೆಯುವಷ್ಟು ಯುಪಿಐ ವ್ಯವಹಾರ ಭಾರತ ಒಂದರಲ್ಲೇ ಆಗುತ್ತಿದೆ. ಈಗ ಇತರ ದೇಶಗಳು ಭಾರತವನ್ನು ಅನುಕರಿಸುತ್ತಿವೆ. ಸಿಂಗಾಪುರ, ಫ್ರಾನ್ಸ್, ಜರ್ಮನಿ ಮೊದಲಾದ ದೇಶಗಳು ನಮ್ಮ ಗೂಗಲ್ ಪೇ, ಪೇಟಿಎಂಗಳಲ್ಲಿ ಪಾವತಿ ಮಾಡುತ್ತಿವೆ ಮುಂತಾದ ವಿವರಗಳನ್ನು ಗೀರ್ವಾಣಿ ಎಂ.ಎಚ್. ಅವರು ಲೇಖನವೊಂದರಲ್ಲಿ ನೀಡಿದ್ದಾರೆ.
ಮಧ್ಯವರ್ತಿಗಳಿಲ್ಲ
ಮೋದಿ ಸರ್ಕಾರವು ೨೦೧೪ರಲ್ಲಿ ಅಧಿಕಾರಕ್ಕೆ ಬಂದೊಡನೆ ಸಾಮಾನ್ಯ ಜನರಿಗಾಗಿ ಜನಧನ್ (ಬ್ಯಾಂಕ್) ಖಾತೆ ಯೋಜನೆಯನ್ನು ಜಾರಿಗೆ ತಂದಿತು. ಆಗ ಕೆಲವರು ಇದರಿಂದೇನು ಪ್ರಯೋಜನ ಎಂದು ತಕರಾರು ತೆಗೆದಿದ್ದರು. ಕೊರೋನಾದಿಂದಾಗಿ ಜನ ಮನೆಯಿಂದ ಹೊರಗೆ ಬರಲಾರದ ಪರಿಸ್ಥಿತಿ ಉಂಟಾದಾಗ ಸರ್ಕಾರ ನೇರವಾಗಿ ಜನರ ಖಾತೆಗಳಿಗೆ ಹಣ ರವಾನಿಸಿತು. ರೈತರಿಗೆ ಪ್ರತಿವರ್ಷ ೬,೦೦೦ ರೂ. ಗಳನ್ನು (ಕಿಸಾನ್ ಸಮ್ಮಾನ್ ಯೋಜನೆ) ಈಗಲೂ ಜನಧನ್ ಖಾತೆ ಮೂಲಕವೇ ನೀಡಲಾಗುತ್ತಿದೆ. ಬಡವರು, ರೈತರು ಮುಂತಾದವರು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸರ್ಕಾರದಿಂದ ನೇರವಾಗಿ ಹಣ, ನೆರವುಗಳನ್ನು ಪಡೆಯುತ್ತಿದ್ದಾರೆ. ಕೋವಿಡ್ ವೇಳೆ ಆನ್ಲೈನ್ ಸೇವೆ ಇದ್ದ ಕಾರಣ (ಬಾಗಿಲುಹಾಕಿ ಕುಳಿತ ಕಾರಣ) ‘ಮನೆಯಿಂದಲೇ ಕೆಲಸ’ (work from home) ವ್ಯವಸ್ಥಿತವಾಗಿ ನಡೆಯಿತು. ಮಕ್ಕಳು ಆನ್ಲೈನ್ ಮೂಲಕ ಶಿಕ್ಷಣ ಪಡೆದರು. ಕೋವಿಡ್ ಆ್ಯಪ್ನಲ್ಲಿ ನೋಂದಣಿ ಮಾಡಿ ಜನ ಲಸಿಕೆ ಪಡೆದರು. ವೇಗದ ಇಂಟರ್ನೆಟ್ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ಜನ ನಡೆಸಿದ ಒಂದು ರೂ. ವ್ಯವಹಾರ ಕೂಡ ಈಗ ಲೆಕ್ಕಕ್ಕೆ ಸಿಗುತ್ತಿದೆ. ಭಾರತ ಸರ್ಕಾರ ೩೧೨ ವಿವಿಧ ಸ್ಕೀಮ್ಗಳಿಂದ ಬಡವರ ಖಾತೆಗೆ ಒಟ್ಟು ೩೬,೧೦೦ ಕೋಟಿ ಡಾಲರಿನಷ್ಟು ಹಣ ವರ್ಗಾವಣೆ ಮಾಡಿದೆ ಎಂಬುದನ್ನು ಸ್ವತಃ ವಿಶ್ವಬ್ಯಾಂಕ್ ಗುರುತಿಸಿದೆ.
ಡಿಜಿಟಲ್ ಹಣ ಪಾವತಿಯಿಂದ ಐಟಿ ಕ್ಷೇತ್ರ, ಹಣಕಾಸು ವ್ಯವಹಾರ, ಆನ್ಲೈನ್ ಶಿಕ್ಷಣ, ಇ-ಕಾಮರ್ಸ್, ಪ್ರವಾಸೋದ್ಯಮ ಎಲ್ಲ ಕ್ಷೇತ್ರಗಳಿಗೂ ಲಾಭವಾಗಿದೆ. ಹಳ್ಳಿಗಳು ನಗರಗಳೊಂದಿಗೆ ಸುಲಭವಾಗಿ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಐಟಿ ಉದ್ಯೋಗಿಗಳು ಹಳ್ಳಿಗಳಲ್ಲಿ ಕುಳಿತು ಕೆಲಸ ಮಾಡಿದ್ದಾರೆ; ಹಳ್ಳಿಯಿಂದಲೇ ಅವರು ಹೊರದೇಶಗಳನ್ನು ಕೂಡ ಸಂಪರ್ಕಿಸುತ್ತಾರೆ. ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಜಗತ್ತು ಆಶ್ಚರ್ಯದಿಂದ ನೋಡುತ್ತಿದೆ. ಭಾರತವನ್ನು ‘ಹಾವಾಡಿಗರ ದೇಶ’ ಎನ್ನುತ್ತಿದ್ದವರು ಕಣ್ಣು ಬಿಟ್ಟು ನೋಡುವಂತಾಗಿದೆ. ಜರ್ಮನಿಯ ಮಂತ್ರಿಯೊಬ್ಬರು ಈಚೆಗೆ ಬೆಂಗಳೂರಿನಲ್ಲಿ ಗೂಗಲ್ ಪೇ ಮೂಲಕ ಮೆಣಸು ಖರೀದಿಸಿದರು; ಗಣರಾಜ್ಯೋತ್ಸವಕ್ಕೆ ಬಂದಿದ್ದ ಫ್ರಾನ್ಸ್ ಅಧ್ಯಕ್ಷರಿಗೂ ಅಂತಹ ಅನುಭವವಾಯಿತು. ಇದಕ್ಕೆಲ್ಲ ಮೋದಿ ಅವರಂಥ ಸಮರ್ಥ ನಾಯಕ ಕಾರಣ ಎಂದು ಎಲ್ಲರೂ ಉದ್ಗರಿಸುತ್ತಿದ್ದಾರೆ.
ವ್ಯಕ್ತಿಗಳ ಆಯ್ಕೆ ಕ್ರಮ
ಹಾಗಾದರೆ ಪ್ರಧಾನಿ ಮೋದಿಯವರ ಯಾವ ಗುಣಲಕ್ಷಣ-ಸ್ವಭಾವ-ಸಾಮರ್ಥ್ಯಗಳು ಇದಕ್ಕೆಲ್ಲ ಕಾರಣವಾಗುತ್ತಿವೆ ಎನ್ನುವ ಒಂದು ಆಸಕ್ತಿ ಮೂಡುವುದು ಸಹಜ. ಜೊತೆಗೆ ಅವರ ಕಾರ್ಯಶೈಲಿ ಹೇಗಿರುತ್ತದೆ ಎಂಬುದು ಕೂಡ ಕುತೂಹಲ ಸೃಷ್ಟಿಸಬಹುದು. ರಾಜ್ಯದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬಳಿಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರ ನೇಮಕದಲ್ಲಿ ವಿಳಂಬವಾಯಿತು. ಪಕ್ಷದ ರಾಜ್ಯ ನಾಯಕರಿಗೆ ಸ್ವಲ್ಪ ಮುಜುಗರವೂ ಆಯಿತು; ಮಾಧ್ಯಮಗಳು ಕೂಡ ಅದನ್ನು ಕೆದಕಿದವು. ಆದರೂ ಪಕ್ಷದ ಹೈಕಮಾಂಡ್ ದೃಢವಾಗಿದ್ದು ಏನನ್ನೋ ಸೂಚಿಸುವಂತಿತ್ತು. ಆ ಕುರಿತು ಪ್ರಸ್ತಾವಿಸಿದ ಖ್ಯಾತ ಪ್ರತಕರ್ತ ದಿ|| ಕೆ.ಎಸ್. ಸಚ್ಚಿದಾನಂದಮೂರ್ತಿ ಅವರು, “ಮೋದಿ ಕೈಗೊಳ್ಳುವ ನಿರ್ಧಾರಗಳೇ ಹಾಗೆ. ದಿಢೀರಾಗಿ ಆಗುವಂಥದ್ದಲ್ಲ. ಅದೆಷ್ಟೋ ಕಡತಗಳು ಪ್ರತಿನಿತ್ಯ ಅವರ ಮುಂದೆ ಬಂದು ಹೋಗಬಹುದು. ಆದರೆ ಯಾವುದೇ ನೇಮಕಕ್ಕೆ ಮೋದಿ ಆತುರ ತೋರುವುದಿಲ್ಲ. ಸೂಕ್ತ ವ್ಯಕ್ತಿಗಾಗಿ ಅವರು ಸೂಕ್ಷ್ಮ ಹುಡುಕಾಟವನ್ನು ಸಾಕಷ್ಟು ಸಮಯ ನಡೆಸುತ್ತಾರೆ” ಎಂದರು.
“ಹಿಂದಿನ ಎಲ್ಲ ಪ್ರಧಾನಿಗಳಿಗಿಂತ ಮೋದಿ ಅವರು ಭಿನ್ನವಾಗಿದ್ದಾರೆ. ಮುಂದೆ ಬಂದ ಪ್ರತಿಯೊಂದು ಪ್ರಸ್ತಾವವನ್ನು ಅವರು ಸವಿವರವಾಗಿ ಪರಿಶೀಲಿಸುತ್ತಾರೆ. ವಿವಿಧ ಹಂತದ ಅಧಿಕಾರಿಗಳಿಂದ, ಪಕ್ಷ ಮತ್ತು ಸಂಪುಟದ ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಇಂತಹ ಆಯ್ಕೆ ವಿಚಾರದಲ್ಲಿ ವಾಜಪೇಯಿ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಮತ್ತು ಓರ್ವ ಹಿರಿಯ ಐಎಎಸ್ ಅಧಿಕಾರಿಯನ್ನು ಅವಲಂಬಿಸುತ್ತಿದ್ದರು. ಎಲ್.ಕೆ. ಆಡ್ವಾಣಿ, ಜಾರ್ಜ್ ಫೆರ್ನಾಂಡಿಸ್ ಮುಂತಾದ ಕೆಲವು ಸಹೋದ್ಯೋಗಿಗಳಲ್ಲಿ ಚರ್ಚಿಸುತ್ತಿದ್ದರು. ಆದರೆ ಮೋದಿ ನೇಮಕದ ನಿರ್ಧಾರಗಳಿಗೆ ಈ ರೀತಿ ಯಾರನ್ನೂ ಅವಲಂಬಿಸುವುದಿಲ್ಲ ಅಥವಾ ಪಕ್ಷದ ಒಳಗಿನ ಮತ್ತು ಹೊರಗಿನ ಯಾವುದೇ ಬಗೆಯ ಒತ್ತಡಗಳಿಗೆ ಒಳಗಾಗುವುದಿಲ್ಲ. ಅವರಿಗೆ ಬೇಕಿರುವುದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು. ಒಮ್ಮೆ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದರೆಂದರೆ ಮತ್ತೆ ಅವರನ್ನು ಸಾಧ್ಯವಾದಷ್ಟು ತಮ್ಮೊಂದಿಗೆ ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಜಾರಿ ನಿರ್ದೇಶನಾಲಯದ (ಇ.ಡಿ.) ನಿರ್ದೇಶಕ ಎಸ್.ಕೆ. ಮಿಶ್ರಾ ಅವರದ್ದು ಅದಕ್ಕೊಂದು ಉದಾಹರಣೆ. ಅವರನ್ನು ಮುಂದುವರಿಸಬಾರದೆಂದು ವ್ಯಾಪಕ ಒತ್ತಾಯ ಬಂದರೂ ಕೂಡ ಮೋದಿ ಬಿಡಲು ಒಪ್ಪಲಿಲ್ಲ. ನ್ಯಾಯಾಲಯದಲ್ಲೇ ವಾದ ಮಾಡಿ ಗೆದ್ದರು” ಎಂದು ಸಚ್ಚಿದಾನಂದ ಮೂರ್ತಿ ವಿವರಿಸಿದ್ದಾರೆ.
ರೈಲ್ವೇ ಮಂತ್ರಿಯ ಆಯ್ಕೆಯನ್ನು ಇನ್ನೊಂದು ಉದಾಹರಣೆಯಾಗಿ ಅವರು ಉಲ್ಲೇಖಿಸಿದ್ದಾರೆ. ರೈಲ್ವೆ ಮಂತ್ರಿಯಾಗಿ ಅವರಿಗೆ ಬೃಹತ್ ಯೋಜನೆಗಳನ್ನು ಜಾರಿ ಮಾಡಬಲ್ಲ ಸಮರ್ಥರು ಬೇಕಿತ್ತು. ಡಿ.ವಿ. ಸದಾನಂದಗೌಡ ಮತ್ತು ಸುರೇಶ್ ಪ್ರಭು ಅವರಿಂದ ಸ್ವಲ್ಪಮಟ್ಟಿನ ನಿರಾಸೆ ಅನುಭವಿಸಿದ ಬಳಿಕ ಪೀಯೂಷ್ ಗೋಯಲ್ ಅವರಿಗೆ ಅದರ ಹೆಚ್ಚುವರಿ ಹೊಣೆಯನ್ನು ನೀಡಿದ್ದರು. ಹುಡುಕಾಟ ಮುಂದುವರಿದಿತ್ತು. ಇದೀಗ ಎರಡು ವರ್ಷಗಳ ಹಿಂದೆ ರೈಲ್ವೆ, ಸಂವಹನ (ಕಮ್ಯುನಿಕೇಶನ್) ಮತ್ತು ಮಾಹಿತಿ ತಂತ್ರಜ್ಞಾನದ (ಐ.ಟಿ.) ಮಹತ್ತ್ವದ ಖಾತೆಗಳನ್ನು ಮಾಜಿ ಐಎಎಸ್ ಅಧಿಕಾರಿ ಅಶ್ವಿನಿ ವೈಷ್ಣವ್ ಅವರಿಗೆ ನೀಡಿದರು. ಕೊನೆಗೂ ಅವರ ಈ ಪ್ರಯೋಗ ಫಲ ನೀಡಿತು. ಇಂದು ‘ವಂದೇ ಭಾರತ್’ನಂತಹ ಅಪೂರ್ವ ರೈಲ್ವೆ ಜಾಲವು ದೇಶದಲ್ಲಿ ಹಬ್ಬುತ್ತಿದೆ.
ಕರ್ನಾಟಕದಲ್ಲಿ ಮೋದಿ ಅವರು ಶಿವರಾಜಸಿಂಗ್ ಚೌಹಾಣ್, ದೇವೆಂದ್ರ ಫಡ್ನವೀಸ್, ಯೋಗಿ ಆದಿತ್ಯನಾಥರಂತಹ ಪ್ರಬಲ ನಾಯಕರಿಗಾಗಿ ಹುಡುಕುತ್ತಿದ್ದಾರೆ ಎಂಬುದು ಪತ್ರಕರ್ತ ಸಚ್ಚಿದಾನಂದ ಮೂರ್ತಿ ಅವರ ಅಭಿಪ್ರಾಯ.
ಮೋದಿ ಅಲಿಪ್ತ ನೀತಿ
ವಿದೇಶಾಂಗ ವ್ಯವಹಾರವು ಪ್ರಧಾನಿ ಮೋದಿ ಅವರಿಗೆ ತುಂಬ ಪ್ರಿಯವಾದ ವಿಷಯ ಎಂಬುದು ಈ ನಿಟ್ಟಿನ ಅವರ ಸಾಧನೆಯಿಂದ ವ್ಯಕ್ತವಾಗುತ್ತದೆ. ಅಲಿಪ್ತ ನೀತಿಯು ದೇಶದ ಪ್ರಥಮ ಪ್ರಧಾನಿ ನೆಹರು ಅವರ ಕೈಯಲ್ಲಿ ಹಾಸ್ಯಾಸ್ಪದ ವಸ್ತುವಾಯಿತು. ಅದನ್ನೇ ಮೋದಿ ರೂಪಾಂತರಗೊಳಿಸಿ ಹೇಗೆ ಬಳಸುತ್ತಿದ್ದಾರೆನ್ನುವುದು ಅಧ್ಯಯನಯೋಗ್ಯ ವಿಷಯವಾಗಿದೆ. ಅಂಕಣಕಾರ ಶಿಶಿರ ಹೆಗಡೆ ಆ ಕುರಿತು ಹೀಗೆ ಹೇಳುತ್ತಾರೆ: “ಇಂದಿಗೂ ಭಾರತವು ಇತರರಿಗೆ ಹೋಲಿಸಿದರೆ ಅಲಿಪ್ತವೇ. ಆದರೆ ನಮ್ಮ ಹಿತಾಸಕ್ತಿಗೆ ಮೊದಲ ಮಣೆ. ಅಲಿಪ್ತವಾಗುವ ಮೊದಲು ಬೇಕಾದ್ದು ತಾಕತ್ತು; ಅದು ಕನಿಷ್ಠ ಅರ್ಹತೆ (ನೆಹರು ಇದನ್ನು ಮರೆತರು). ಸುಮ್ಮನೆ ದುರ್ಬಲವಾಗಿದ್ದು ನಾನು ಅಲಿಪ್ತನೆಂದರೆ ಆಪತ್ಕಾಲದಲ್ಲಿ ಯಾರೂ ಸಹಾಯಕ್ಕೆ ಬರುವುದಿಲ್ಲ. ಇಂದು ಭಾರತದ ನಿಲವುಗಳು ಪ್ರಾಯೋಗಿಕ ಮತ್ತು ವ್ಯಾವಹಾರಿಕವಾಗಿದೆ. ಉಕ್ರೇನ್-ರಷ್ಯಾ ಯುದ್ಧದ ವೇಳೆ ರಷ್ಯಾದಿಂದ ಕಚ್ಚಾತೈಲ ಖರೀದಿಸಿದ್ದನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಅದನ್ನು ಪಾಶ್ಚಾತ್ಯ ದೇಶಗಳು ಖಂಡಿಸಿದರೂ ಕೂಡ ಭಾರತ ಅದನ್ನು ಸಮರ್ಥಿಸಿಕೊಂಡು ಜೀರ್ಣಿಸಿಕೊಂಡಿತು. ತೈಲ ಇಲ್ಲಿ ಕಡಮೆ ದರಕ್ಕೂ ಸಿಕ್ಕಿತ್ತು. ಇಲ್ಲಿ ದೇಶದ ಹಿತವೇ ಮುಖ್ಯ. ಇಂದು ಮೋದಿ ಸರ್ಕಾರ ಇಸ್ರೇಲ್ ಅಥವಾ ಶ್ರೀಲಂಕಾವನ್ನು ಬೆಂಬಲಿಸಬೇಕಾದಲ್ಲಿ ಮಿತ್ರಪಕ್ಷಗಳ ಅನುಮತಿ ಕೇಳಬೇಕಿಲ್ಲ. ಪುಲ್ವಾಮಾ ಘಟನೆಗೆ ಪ್ರತಿಕ್ರಿಯೆ, ಉರಿ ಘಟನೆ, ಬಾಲಾಕೋಟ್ ವೈಮಾನಿಕ ದಾಳಿ, ಅಭಿನಂದನ್ ವರ್ಧಮಾನ್ ಬಿಡುಗಡೆ, ೩೭೦ನೇ ವಿಧಿ ರದ್ದತಿ ಮುಂತಾದವುಗಳಲ್ಲಿ ಭಾರತಕ್ಕೆ ಜಗತ್ತಿನಾದ್ಯಂತ ವ್ಯಾಪಕ ಬೆಂಬಲ ಸಿಕ್ಕಿತು. ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನಕ್ಕೆ ಕೊಡುತ್ತಿದ್ದ ನೆರವನ್ನು ನಿಲ್ಲಿಸಿದ್ದರ ಹಿಂದೆ ಅದೊಂದು ಭಯೋತ್ಪಾದಕ ರಾಷ್ಟ್ರವೆಂದು ಭಾರತವು ಚಿತ್ರಿಸಿದ್ದರ ಪಾತ್ರವಿದೆ.
ಭಾರತಕ್ಕಿಂದು ಯಾರ ಬೆನ್ನಿನಾಸರೆಯೂ ಬೇಕಿಲ್ಲ. ನಮ್ಮ ಸ್ವತಂತ್ರ ನಿಲವು ಸಾಧ್ಯವಾಗಿದೆ. ಅಲಿಪ್ತ ತೃತೀಯರಂಗವನ್ನು ಮುನ್ನಡೆಸುತ್ತಿರುವುದೇ ಭಾರತ ಎಂಬಂತಿದೆ. ಆಫ್ರಿಕದ ಅಲಿಪ್ತ ದೇಶಗಳಲ್ಲಿ ಭಾರತ ಐಟಿ ಸೆಂಟರ್ಗಳನ್ನು ತೆರೆಯುತ್ತಿದೆ; ಕಟ್ಟಡ, ರೈಲ್ವೆ, ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಹಲವು ದೇಶಗಳಿಗೆ ಕೋವಿಡ್ ಲಸಿಕೆ ನೀಡಿದೆ. ಎಲ್ಲಾದರೂ ಪ್ರಕೃತಿವಿಕೋಪವಾದರೆ ಆಹಾರ, ಔಷಧಿ ಮುಂತಾಗಿ ಆ ರಾಷ್ಟ್ರಕ್ಕೆ ಮೊದಲ ನೆರವು ಹೋಗುವುದೇ ಭಾರತದ್ದು.
ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮಾಡುವ ಕೆಲಸಕ್ಕಿಂತ ತೆಗೆದುಕೊಳ್ಳುವ ನಿಲವೂ ಮುಖ್ಯ. ನಿಲವು ಮುಖ್ಯವಾಗುವುದು ಆ ರಾಷ್ಟ್ರ ಎಷ್ಟು ಬಲಶಾಲಿಯಾಗಿದೆ ಎಂಬುದರ ಮೇಲೆ ಅವಲಂಬಿಸಿದೆ ಎನ್ನುವ ಶಿಶಿರ ಹೆಗಡೆ, ನಮ್ಮ ನಿಲವನ್ನು ಸ್ಪಷ್ಟವಾಗಿ ಹೇಳುವುದು ಮುಖ್ಯ; ಮೋದಿ ಹಿಂದೊಮ್ಮೆ ‘ನಾವು ನಮ್ಮ ಅಣ್ವಸ್ತ್ರಗಳನ್ನು ದೀಪಾವಳಿ ಹಬ್ಬಕ್ಕೆ ಇಟ್ಟುಕೊಂಡದ್ದಲ್ಲ’ ಎಂದಿದ್ದನ್ನು ಉಲ್ಲೇಖಿಸಿದ್ದಾರೆ. ಯೋಧ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆ ಇನ್ನು ಒಂದೆರಡು ತಾಸು ತಡವಾಗಿದ್ದರೂ ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಹಲವು ನಗರಗಳನ್ನು ಉಡಾಯಿಸುತ್ತಿದ್ದವಂತೆ. ಮೋದಿ ಅವರ ಮಾತಿನ ಸ್ಪಷ್ಟ ಸಂದೇಶವು ಪಾಕಿಸ್ತಾನಕ್ಕೆ ಮುಟ್ಟಿತ್ತು; ಅಂದಿನ ಪಾಕ್ ಪ್ರಧಾನಿ ಹೆದರಿದ್ದರು. ೧೯೯೮ರಲ್ಲೇ ದೇಶದ ಅಣ್ವಸ್ತ್ರ ಪರೀಕ್ಷೆ ನಡೆದಿದ್ದರೂ ಆ ತನಕ ನಮ್ಮ ಯಾವುದೇ ಪ್ರಧಾನಿ ಅಂತಹ ಮಾತು ಆಡಿರಲಿಲ್ಲ. ಈ ಒಂದು ಮಾತು ಪಾಕಿಸ್ತಾನದ ಮುಂದಿನ ಅದೆಷ್ಟೋ ಕೃತ್ಯಗಳಿಗೆ ತಡೆಹಾಕಿತು. ಅದರ ನಿರಂತರ ಕದನವಿರಾಮ ಉಲ್ಲಂಘನೆ, ಭಾರತದ ಬಗೆಗಿನ ಬ್ಲಾಕ್ಮೇಲ್ ತಂತ್ರಗಳು (ಅಣ್ವಸ್ತ್ರದ ಬೆದರಿಕೆ) ಈಗ ಎಲ್ಲಿವೆ?
ಗಟ್ಟಿ ಮಾತು ಅಗತ್ಯ
ಜಾಗತಿಕ ರಾಜಕಾರಣದಲ್ಲಿ ಈ ರೀತಿ ಗಟ್ಟಿಯಾಗಿ ಮಾತನಾಡಬೇಕು. ಮಿತ್ರದೇಶಗಳ ಬೆನ್ನಿಗೆ ಬೇಕಾದಾಗ ಎಷ್ಟು ಬೇಕೋ ಅಷ್ಟು ನಿಲ್ಲಬೇಕು. ಮೊದಲಿಗೆ ನಮ್ಮ ದೇಶ ಬಲಶಾಲಿಯಾಗಬೇಕು. ಅದು ಕೇವಲ ಅಂಕಿ-ಅಂಶಗಳಲ್ಲಲ್ಲ. ಮಾತನಾಡುವ ಸಮಯ ಬಂದರೆ ತನ್ನ ಬಲವನ್ನು ತೋರಿಸಬಲ್ಲ ದೇಶ ಎಂಬ ಭಯ ಇತರ ದೇಶಗಳಿಗಿರಬೇಕು. ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ಭೇಟಿಯಲ್ಲಿದ್ದಾಗ ಯುದ್ಧ ನಡೆಸುತ್ತಿರುವ ರಷ್ಯಾದಿಂದ ತೈಲ ಖರೀದಿಸುವುದು ಸರಿಯೆ ಎಂಬ ಪ್ರಶ್ನೆ ಮುಂದೆ ಬಂತು. ಆಗ ಅವರು “ನೀವು ಈ ಪ್ರಶ್ನೆಯನ್ನು ಯೂರೋಪಿಗೆ ಕೇಳಬೇಕು. ಅದಕ್ಕಿಂತ ಮೊದಲು ಯೂರೋಪ್ ತನ್ನ ಬಣ್ಣದ ಕನ್ನಡಕದಿಂದ ಜಗತ್ತನ್ನು ನೋಡುವುದನ್ನು ನಿಲ್ಲಿಸಬೇಕು” ಎಂದು ಖಡಕ್ಕಾಗಿ ಹೇಳಿದರು. ಇದು ನಿಲವಿನ ಸ್ಪಷ್ಟತೆ ಮತ್ತು ಅಂತಾರಾಷ್ಟ್ರೀಯವಾಗಿ ಸಮರ್ಥಿಸಿಕೊಳ್ಳುವ ಕ್ರಮ. ಆ ಚರ್ಚೆ ಅಲ್ಲಿಗೇ ನಿಂತುಹೋಯಿತು.
“ಅಲಿಪ್ತವಾಗಿರುವುದೆಂದರೆ ಹೀಗೆ: ಶಕ್ತಿ ಇರಬೇಕು, ಮತ್ತು ಜಾಗತಿಕವಾಗಿ ಅದರ ಪ್ರದರ್ಶನ ಆಗಾಗ ಆಗಲೂಬೇಕು. ಸ್ವಂತ ರಕ್ಷಣೆಯ ವಿಷಯದಲ್ಲಿ ಕೋಡಂಗಿಯ ಹಾಗೆ ನಡೆದುಕೊಳ್ಳಬಾರದು. ದೇಶದ ನಿಲವಿನ ಜೊತೆ ಆಡುವವರ ಮಾತಿನ ನಿಲವು ಇರಬೇಕು. ಮೋದಿ, ಜೈಶಂಕರ್, ರಾಜನಾಥಸಿಂಗ್, ಅಜಿತ್ ಧೋವಲ್ ಅವರ ಮಾತುಗಳು ಹಾಗೆ ಇರುತ್ತವೆ. ಹಿಂದಿನ ನಾಯಕರಲ್ಲಿ (ಮುಖ್ಯವಾಗಿ ಕಾಂಗ್ರೆಸ್ ನಾಯಕರಲ್ಲಿ) ಇಂತಹ ನೇರಮಾತು ಅಪರೂಪವಾಗಿತ್ತು ಎನ್ನುವ ಲೇಖಕ ಹೆಗಡೆ, ಯುದ್ಧ ಮಾಡಿ ನಮ್ಮ ಬಲವನ್ನು ತೋರಿಸುವುದಲ್ಲ; ಶತ್ರುದೇಶವು ಹೆದರಿ ಸುಮ್ಮನಿರಬೇಕು. ಸ್ವಹಿತಾಸಕ್ತಿಯನ್ನು ಕಡೆಗಣಿಸುವ ಅಲಿಪ್ತನೀತಿ ಸಲ್ಲದು ಎಂದು ವಿಶ್ಲೇಷಿಸುತ್ತಾರೆ.
ಪಾಕಿಸ್ತಾನವನ್ನು ಹೆದರಿಸಿ ಇಟ್ಟಿರುವ ಪ್ರಧಾನಿ ಮೋದಿ ಸಂದರ್ಭ ಬಂದಾಗ ಚೀನಾದ ಬಗ್ಗೆಯೂ ಮಾತಿನ ಚಾಟಿ ಬೀಸಲು ಅನುಮಾನಿಸುವುದಿಲ್ಲ. ಕೆಲವು ಶಕ್ತಿಗಳು ಆರ್ಥಿಕ ಬಿಕ್ಕಟ್ಟಿನಲ್ಲಿರುವ ದೇಶಗಳನ್ನು ದುರ್ಬಳಕೆ ಮಾಡಿಕೊಂಡು ಆ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸುತ್ತಿವೆ. ಇಂತಹ ಜಾಲಕ್ಕೆ ಬೀಳಬಾರದು. ಎಲ್ಲ ದೇಶಗಳು ಹಣಕಾಸು ಅಶಿಸ್ತಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದ ಮೋದಿ, ನೇರ ಮಾತಿಗೇ ಇಳಿದರು: “ಚೀನಾ ಈಗಾಗಲೆ ಬಿಲಿಯನ್ಗಟ್ಟಲೆ ಡಾಲರ್ ಸಾಲ ನೀಡಿ ೧೨ಕ್ಕೂ ಅಧಿಕ ದೇಶಗಳನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿದೆ. ಕೀನ್ಯಾ, ಜಾಂಬಿಯಾ, ಲಾವೋಸ್, ಮಂಗೋಲಿಯ, ಶ್ರೀಲಂಕಾ, ಪಾಕಿಸ್ತಾನ ಸೇರಿ ಹಲವು ದೇಶಗಳು ಚೀನಾದ ಮೋಸದ ಬಲೆಗೆ ಬಿದ್ದಿವೆ. ಆ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು” ಎಂದು ಕಿವಿಮಾತು ಹೇಳಿದರು.
ಆತ್ಮವಿಶ್ವಾಸದ ಮಾತು
ಆ ಬಗೆಗಿನ ಅರ್ಹತೆಯಿಂದಲೇ ಮೋದಿ ಈ ಮಾತುಗಳನ್ನು ಹೇಳುತ್ತಾರೆ. ದುರ್ಬಲರಿಗೆ ನೆರವು ಮತ್ತು ‘ವಸುಧೈವ ಕುಟುಂಬಕಮ್’ ತತ್ತ್ವಗಳು ಅವರ ವಿದೇಶಾಂಗ ನೀತಿಯ ಆಧಾರಸ್ತಂಭಗಳಾಗಿವೆ. ಒಂದು ವರ್ಷದ ಜಿ-೨೦ ಗುಂಪಿನ ಅಧ್ಯಕ್ಷತೆಯ ಸಂದರ್ಭವನ್ನು ಅವರು ಅದಕ್ಕೆ ಬಳಸಿಕೊಂಡರು. ದೇಶದ ಜನರಲ್ಲಿ ಮತ್ತು ದೇಶವನ್ನು ಕಾಯುವ ಸೈನಿಕರಲ್ಲಿ ವಿಶ್ವಾಸ ತುಂಬುವ ಮಾತುಗಳನ್ನು ಪ್ರಧಾನಿ ಮೋದಿ ಆಗಾಗ ಆಡುತ್ತಾರೆ. “ಭಾರತವು ಮುಂದೆ ವಿಶ್ವದ ಟಾಪ್-೩ ದೇಶಗಳಲ್ಲಿ ಸ್ಥಾನ ಪಡೆಯಲಿದೆ. ೨೦೪೭ರಲ್ಲಿ ಮುಂದುವರಿದ
(ಅಭಿವೃದ್ಧಿ ಹೊಂದಿದ) ದೇಶಗಳ ಸಾಲಿಗೆ ಸೇರುತ್ತದೆ. ಈ ಬಗ್ಗೆ ನನಗೆ ಪೂರ್ಣ ಖಾತ್ರಿ ಇದೆ. ಈ ಆರ್ಥಿಕ ಬೆಳವಣಿಗೆಗೆ ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ನೆಲೆಯೂರಿದ ಆರ್ಥಿಕ ಸ್ಥಿರತೆಯೇ ಕಾರಣ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಗಳಿಗೆ ಯಾವುದೇ ಸ್ಥಾನ ಇಲ್ಲ. ಹೆಚ್ಚಿನ ಮುಂದುವರಿದ ದೇಶಗಳು ಆರ್ಥಿಕ ಕುಸಿತ, ದೀರ್ಘಕಾಲ ಅಗತ್ಯ ವಸ್ತುಗಳ ಕೊರತೆ, ಹಣದುಬ್ಬರ, ವಯಸ್ಸಾದವರ ಸಂಖ್ಯೆ ಹೆಚ್ಚಳದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಭಾರತ ಅತಿ ಹೆಚ್ಚು ಯುವಜನರ ಸಂಖ್ಯೆಯೊಂದಿಗೆ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ” ಎಂದವರು ವಿವರಿಸಿದರು. ದೇಶದ ಆಡಳಿತದ ಮೇಲೆ ಭದ್ರವಾದ ಹಿಡಿತವಿರುವ ಮೋದಿ ಅವರ ಮಾತುಗಳಿಗೆ ಅದರದ್ದಾದ ತೂಕ ಇದ್ದೇ ಇದೆ.
ಇನ್ನೊಂದು ಸಂದರ್ಭದಲ್ಲಿ ಅವರು “ರಕ್ಷಣಾ ವಲಯದಲ್ಲಿ ಭಾರತ ಜಾಗತಿಕ ಬಲಿಷ್ಠ ರಾಷ್ಟ್ರವಾಗಿ ವೇಗವಾಗಿ ಹೊರಹೊಮ್ಮಿದೆ. ದೇಶದ ಭದ್ರತಾಪಡೆಗಳ ಸಾಮರ್ಥ್ಯವು ನಿರಂತರವಾಗಿ ಏರುತ್ತಿದೆ. ಒಂದು ಕಾಲದಲ್ಲಿ ನಾವು ಸಣ್ಣ ವಿಷಯಗಳಿಗೂ ಇತರರ ಮೇಲೆ ಅವಲಂಬಿತರಾಗಿದ್ದೆವು. ಈಗ ನಮ್ಮ ಮಿತ್ರರಾಷ್ಟ್ರಗಳ ಅಗತ್ಯವನ್ನು ಪೂರೈಸುವ ಮಟ್ಟಕ್ಕೆ ಬೆಳೆದಿದ್ದೇವೆ” ಎಂದರು. ಆಗ ಅವರು ದೇಶದ ಗಡಿಭಾಗದಲ್ಲಿ ಐಟಿಬಿಪಿ ಯೋಧರ ಜೊತೆ ದೀಪಾವಳಿಯನ್ನು ಆಚರಿಸುತ್ತಿದ್ದರು. ದೇಶದಲ್ಲಿಂದು ಶಾಂತಿ ಇದೆ. ಅದಕ್ಕೆ ಕಾರಣ ನಮ್ಮ ಯೋಧರು ಎಂದು ಅವರು ಶ್ಲಾಘಿಸಿದರು.
ಜಿ–೨೦ ಶೃಂಗಸಭೆ
ದೆಹಲಿಯಲ್ಲಿ ನಡೆದ ಜಿ-೨೦ ಶೃಂಗಸಭೆಯು ಅಪ್ಪಟ ರಾಜತಾಂತ್ರಿಕ ಕ್ರಾಂತಿಯಂತಿತ್ತು ಎಂದು ವಿಶ್ಲೇಷಿಸಿದವರು ಖ್ಯಾತ ಪತ್ರಕರ್ತ ಹಾಗೂ ರಾಜಕೀಯ ಮುಂದಾಳು ಎಂ.ಜೆ. ಅಕ್ಬರ್ ಅವರು. ಜಿ-೨೦ ಶೃಂಗಸಭೆಯಲ್ಲಿ ಮೋದಿ ಮೂರು ಮುಖ್ಯ ಯಶಸ್ಸುಗಳಿಗೆ ಪಾತ್ರರಾದರು ಎಂದವರು ವಿಶ್ಲೇಷಿಸಿದ್ದಾರೆ.
ಅವುಗಳೆಂದರೆ –
೧. ಜಗತ್ತಿನಲ್ಲಿ ಈಗ ನಡೆಯುತ್ತಿರುವ ಯುದ್ಧಗಳಿಗೆ ಕದನವಿರಾಮದ ನಿರೀಕ್ಷೆ.
೨. ಆಫ್ರಿಕ ಒಕ್ಕೂಟವನ್ನು ಜಿ-೨೦ ಗುಂಪಿಗೆ ಸೇರಿಸುವ ಮೂಲಕ ಅವು ಆರ್ಥಿಕವಾಗಿ ಬಲ ಸಂಪಾದಿಸಲು ಅವಕಾಶ ಕಲ್ಪಿಸಿದ್ದು.
೩. ಭಾರತ-ಮಧ್ಯಪ್ರಾಚ್ಯ-ಯೂರೋಪ್ ಆರ್ಥಿಕ ಕಾರಿಡಾರನ್ನು (ಐಎಂಇಇಸಿ) ಸಾಧಿಸಿದ್ದು.
ಮೋದಿ ಅವರ ಕಲ್ಪನೆಯ ಭಾರತ-ಮಧ್ಯಪ್ರಾಚ್ಯ- ಯೂರೋಪ್ ಆರ್ಥಿಕ ಕಾರಿಡಾರ್ ಭಾರತವನ್ನು ಯುಎಇ, ಸೌದಿ ಅರೇಬಿಯ, ಇಸ್ರೇಲ್ಗಳ ಮೂಲಕ ಇಟಲಿ, ಸ್ಪೇನ್, ಯೂರೋಪಿಗೆ ಸಂಪರ್ಕಿಸುವ ಮಹತ್ತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಸಾಕಾರಗೊಂಡರೆ ಜಾಗತಿಕ ಮತ್ತು ವ್ಯೂಹಾತ್ಮಕ ವ್ಯವಹಾರಗಳಲ್ಲಿ ಹೊಸತಿರುವು ತರಲಿದೆ (ಗೇಮ್ಚೇಂಜರ್). ಸೌದಿ ಅರೇಬಿಯ ಮತ್ತು ಹೈಫಾ (ಇಸ್ರೇಲ್) ಸಂಪರ್ಕದಿಂದ ಆ ಭಾಗದ ವ್ಯಾಪಾರದಲ್ಲಿ ಕ್ರಾಂತಿಕಾರಕ ಬದಲಾವಣೆ ಬರಬಹುದು. ಇದು ಪ್ರಾಚೀನ ಕಾಲದ ಸಂಬಾರ ಮಾರ್ಗವನ್ನು (ಸ್ಪೈಸ್ ರೂಟ್) ಹೋಲುವಂತಿದೆ. ಇದು ಕಾರ್ಯಗತವಾದಲ್ಲಿ ವಾಣಿಜ್ಯ ಹಡಗುಗಳು ಯುಎಇ, ಸೌದಿ ಅರೇಬಿಯ ಮಾರ್ಗವಾಗಿ ಹೈಫಾಕ್ಕೆ ಹೋಗಿ, ಅಲ್ಲಿಂದ ಯೂರೋಪಿಗೆ ತೆರಳುತ್ತವೆ. ದಕ್ಷಿಣ ಏಷ್ಯಾ ಮತ್ತು ಯೂರೋಪಿಗೆ ಕೊಲ್ಲಿ ರಾಷ್ಟ್ರಗಳು ಸೇತುವೆ ಆಗುತ್ತವೆ. ಇದರಿಂದ ಬೆಳೆಯುವ ಕೆಂಪುಸಮುದ್ರ ಪ್ರದೇಶದ ಆರ್ಥಿಕತೆಯು ಜಗತ್ತಿಗೇ ದೊಡ್ಡ ಆಸ್ತಿಯಾಗುತ್ತದೆಂದು ನಿರೀಕ್ಷೆ.
ಇದು ಇಸ್ರೇಲ್, ಯುಎಇ ಮತ್ತು ಬಹ್ರೇನ್ಗಳ ನಡುವೆ ಮಾಡಿಕೊಂಡ ಅಬ್ರಹಾಂ ಅಕಾರ್ಡ್ (ಸೆಪ್ಟೆಂಬರ್ ೧೫, ೨೦೨೦) ಎಂಬ ಒಪ್ಪಂದವನ್ನು ನೆನಪಿಸುವಂತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅಧ್ಯಕ್ಷತೆಯಲ್ಲಿ ನಡೆದ ಅದು ಮೂರು ದೇಶಗಳಿಗೆ ಸೀಮಿತವಾದದ್ದು. ಹಾಗೆ ಸೀಮಿತವಾಗಬಾರದು; ಅದನ್ನು ವಿಸ್ತರಿಸಬೇಕೆಂಬುದು ಮೋದಿ ಅವರ ಕಲ್ಪನೆ. ಸಂಕೀರ್ಣವಾಗಿರುವ ಒಂದು ಸಮಸ್ಯೆಯನ್ನು ಪರಿಹರಿಸಬೇಕೆನ್ನುವ ಒಂದು ಉದಾತ್ತ ಉದ್ದೇಶ ಕೂಡ ಅವರಿಗಿದೆ. ಬಹಳ ನಾಜೂಕಾಗಿ ಅವರು ಸಹಕಾರದ ವರ್ತುಲವನ್ನು ವಿಸ್ತರಿಸಿ, ಅಪಾಯಕಾರಿ ಅಥವಾ ಸ್ಫೋಟಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ. ಈ ದೇಶಗಳ ನಡುವೆ ಭೂ, ರಾಜಕೀಯ ಹಾಗೂ ಐತಿಹಾಸಿಕ ದ್ವೇಷಗಳೇನೇ ಇರಲಿ; ವ್ಯಾಪಾರಕ್ಕೆ ಸಂಬಂಧಿಸಿ ಸೌದಿ ಅರೇಬಿಯ ಮತ್ತು ಇಸ್ರೇಲ್ ನಮಗೆ ಸಹಕಾರ ನೀಡಿದರೆ ಸಾಕೆಂಬುದು ಮೋದಿ ಅವರ ಚಾಣಾಕ್ಷ ನಿಲವು. ಈ ರೀತಿಯಲ್ಲಿ ಭಾರತ-ಯೂರೋಪ್ ಕಾರಿಡಾರ್ ಒಪ್ಪಂದದಲ್ಲಿ ಮಧ್ಯಪ್ರಾಚ್ಯವನ್ನು (ಕೊಲ್ಲಿ ರಾಷ್ಟ್ರಗಳು) ಸೇರಿಸಲು ಸಾಧ್ಯವಾಗಿದೆ. ಈ ಒಪ್ಪಂದದ ಗುಣಾತ್ಮಕ ಅಂಶವೆಂದರೆ ಇದು ಮೋದಿ ಅವರ ವಿದೇಶಾಂಗ ನೀತಿಯ ಮೂಲತತ್ತ್ವಕ್ಕೆ ಪೂರಕವಾಗಿದೆ. ದೆಹಲಿಯ ಜಿ-೨೦ ಶೃಂಗಸಭೆಯ ಘೋಷವಾಕ್ಯ “ವಸುಧೈವ ಕುಟುಂಬಕಮ್’ ಆಗಿತ್ತೆಂಬುದು ಇಲ್ಲಿ ಉಲ್ಲೇಖಾರ್ಹ.
ಯಾವುದು ನೆರೆರಾಷ್ಟ್ರ?
ನರೇಂದ್ರ ಮೋದಿ ಅವರ ಇನ್ನೊಂದು ಸಿದ್ಧಾಂತ ಕೂಡ ಅವರ ಜಿ-೨೦ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನೆರೆರಾಷ್ಟ್ರ ಯಾವುದೆಂದು ಎರಡು ದೇಶಗಳ ನಡುವಣ ಅಂತರದಿಂದಲೇ ನಿರ್ಧರಿಸಬಾರದು; ಬದಲಾಗಿ ಎಷ್ಟು ಸುಲಭವಾಗಿ ಅವು ಪರಸ್ಪರ ಸಂಪರ್ಕಿಸಬಹುದು ಎಂಬುದರಿಂದ ಆಗಬೇಕು ಎಂಬುದೇ ಆ ಸಿದ್ಧಾಂತ. ೨೦೧೪-೧೫ರಲ್ಲಿ ಪ್ರಧಾನಿ ಮೋದಿ ಬಂಗ್ಲಾದೇಶ ಮತ್ತು ಪಾಕಿಸ್ತಾನ ಎರಡೂ ದೇಶಗಳತ್ತ ಸ್ನೇಹಹಸ್ತವನ್ನು ಚಾಚಿದರು. ಆದರೆ ಅದಕ್ಕೆ ಸ್ಪಂದಿಸಿದ್ದು ಬಂಗ್ಲಾದೇಶ ಮಾತ್ರ. ಭಾರತ-ಬಂಗ್ಲಾ ಸಂಬಂಧವು ಮುಂದೆ ಕ್ರಮೇಣ ಬೆಳೆಯುತ್ತ ಬಂತು. ಇನ್ನೊಂದೆಡೆ ಪಾಕಿಸ್ತಾನ ಈಗಲೂ ಭಾರತದಿಂದ ದೂರವಿದೆ; ದೂರದೃಷ್ಟಿಯ ಕೊರತೆ, ದುರಹಂಕಾರ, ಮತ್ತು ದ್ವೇಷ – ಇವೇ ಅದಕ್ಕೆ ಕಾರಣ. ಆ ದೇಶವನ್ನೀಗ ಎಲ್ಲರೂ ಕಡೆಗಣಿಸುತ್ತಾರೆ. ಮೋದಿ ನಾಯಕತ್ವದಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಿತು; ಮತ್ತು ಪಾಕಿಸ್ತಾನ ಅವಸಾನದತ್ತ ಹೋಯಿತು ಎಂಬುದನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರೇ ಬಣ್ಣಿಸಿದ್ದಾರೆ.
ಅದೇ ವೇಳೆ ಭಾರತ-ಬಂಗ್ಲಾ ಗಡಿಯ ಸಂಚಾರಕೇಂದ್ರಗಳು, ವಿಮಾನನಿಲ್ದಾಣಗಳು ಸೌಹಾರ್ದದ ತಾಣಗಳಾಗಿವೆ. ಈ ರೀತಿ ನೋಡಿದರೆ ಕೊಲ್ಲಿ ರಾಷ್ಟ್ರಗಳು ಭಾರತಕ್ಕೆ ನಿಜವಾದ ನೆರೆರಾಷ್ಟ್ರಗಳಾಗಿವೆ. ಭಾರತ ಮತ್ತು ಇವುಗಳ ನಡುವೆ ವಾರಕ್ಕೆ ಕನಿಷ್ಠ ಸಾವಿರ ವಿಮಾನಗಳು ಹಾರುತ್ತವೆ. ಈ ದೇಶಗಳೊಂದಿಗೆ ನಮ್ಮ ಜನಕ್ಕೆ ಬಹುಮುಖೀ ಸಹಕಾರವಿದೆ. ಈ ಸ್ನೇಹಕ್ಕೆ ಮೋದಿ ಸಾಕಷ್ಟು ಬಂಡವಾಳ ಹೂಡಿದ್ದಾರೆ. ಯುಎಇಗೆ ೩೬ ವರ್ಷಗಳಲ್ಲಿ ಭೇಟಿ ನೀಡಿದ ನಮ್ಮ ಮೊದಲ ಪ್ರಧಾನಿ ಅವರಾಗಿದ್ದರು. ಅವರ ಪ್ರವಾಸ ಫಲ ನೀಡಿತು. ಉತ್ಪಾದನಾ ಕೇಂದ್ರ ಮತ್ತು ಹೂಡಿಕೆ ತಾಣವಾಗಿ ಭಾರತ ಬೆಳೆಯುತ್ತಿದೆ; ಎರಡು ಖಂಡಗಳ ನಡುವಣ ಸಮೃದ್ಧಿಯ ಪೂರ್ವ ಕಾರಿಡಾರ್ ಆಗಿದೆ. ಈ ದೇಶಗಳ ಜೊತೆಗಿನ ಸಂಬAಧ ಉತ್ತಮವಾಗಿದೆ. ದ್ವೇಷ, ಘರ್ಷಣೆಗಳನ್ನು ಬದಿಗಿಟ್ಟು ಆರ್ಥಿಕ ಬೆಳವಣಿಗೆಗೆ ಹಂಬಲಿಸಿದ್ದರ ಫಲವಿದು. ಇದು ಐತಿಹಾಸಿಕ ಸಂಗತಿ. ಇದರಿಂದ ಮೋದಿ ಅವರ ಜಾಗತಿಕ ಬಳಗ ವಿಸ್ತಾರವಾಗುತ್ತಿದೆ.
ಗೆಲವು ನಿರಂತರ
ಚುನಾವಣೆಗಳಲ್ಲಿ ಮೋದಿ ಏಕೆ ಗೆಲ್ಲುತ್ತ ಹೋಗುತ್ತಾರೆ ಎನ್ನುವುದು ಹಲವರಿಗೆ ಬಿಡಿಸಲಾಗದ ಪ್ರಶ್ನೆ; ಇನ್ನು ಕೆಲವರಿಗೆ ಅದು ನುಂಗಲಾರದ ತುತ್ತು. ಈ ಪ್ರಶ್ನೆಗೆ ಉತ್ತರ ಹುಡುಕುವ ಎಂ.ಜೆ. ಅಕ್ಬರ್, ಭಾರತಕ್ಕೆ ಮೋದಿಯವರು ಒಂದು ಆಧುನಿಕ ಆಡಳಿತ ವ್ಯವಸ್ಥೆಯನ್ನು ರಚಿಸಿಕೊಟ್ಟಿದ್ದಾರೆ. ಅದರಲ್ಲಿ ಜಾತೀಯತೆ, ಮತಾಂಧತೆಗಳನ್ನು ತನ್ನಿಂತಾನೇ ನಿರ್ಮೂಲಗೊಳಿಸುವ ಮಂತ್ರದಂಡವನ್ನು ಅಳವಡಿಸಿದ್ದಾರೆ. ಯಾವುದೇ ವ್ಯಕ್ತಿಯ ಗುರುತು ಆತನ ಹುಟ್ಟು ಅಥವಾ ಮತಧರ್ಮದಿಂದ ನಿರ್ಧಾರವಾಗಬಾರದು; ಆರ್ಥಿಕತೆಯಿಂದ ನಿರ್ಧಾರವಾಗಬೇಕೆಂಬುದು ಮೋದಿ ಅವರ ಸಿದ್ಧಾಂತ. ಹಾಗಿದ್ದರೆ ಮಹಿಳೆಯರೇಕೆ ಮೋದಿ ಅವರಿಗೆ ಮತ ಹಾಕುತ್ತಾರೆ ಎನ್ನುವ ಒಂದು ಉಪಪ್ರಶ್ನೆ ಇಲ್ಲಿ ಏಳುತ್ತದೆ. ಅದಕ್ಕೆ ಉತ್ತರ ಹೇಳಲು ಕಷ್ಟವಿಲ್ಲ. ರಾಜಕೀಯದ ಈ ಮಹತ್ತ್ವದ ಬೆಳವಣಿಗೆಯ ಸಾರಾಂಶ ಇಷ್ಟೆ. ಇಷ್ಟು ಕಾಲ ಹಿಂದುಳಿದಿದ್ದ ನಿರ್ಲಕ್ಷಿತ ಸಮುದಾಯಗಳ ಮಹಿಳೆಯರಲ್ಲೀಗ ರಾಜಕೀಯ ಪ್ರಜ್ಞೆ ಜಾಗೃತವಾಗುತ್ತಿದೆ. ಮತದಾನದ ವಿಷಯದಲ್ಲಿ ಅವರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಮೋದಿ ಆಡಳಿತದ ದಶಕದಲ್ಲಿ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ಅವರ ಪ್ರಗತಿ ಕೇವಲ ಅಂಕಿ-ಅಂಶಗಳಲ್ಲಿಲ್ಲ. ವಾಸ್ತವದಲ್ಲೂ ಸಾಕಾರವಾಗುತ್ತಿದೆ. ದೇಶಾದ್ಯಂತ ಇರುವ ಬಡವರಿಗೆ ಅವರ ನಾಯಕ ಲಭಿಸಿದ್ದಾರೆ. ಇಷ್ಟು ವರ್ಷ ಕೇವಲ ಭರವಸೆಗಳನ್ನು ಕೇಳಿದ್ದು ಈಗ ನಿಜವಾಗಿ ಸಿಗುತ್ತಿದೆ.
ದೇಶದಲ್ಲಿ ಬಡ, ಮಧ್ಯಮವರ್ಗದ ಮನೆಗಳ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ; ದೊಡ್ಡ ಬದಲಾವಣೆ ಆಗಬೇಕಷ್ಟೆ. ಬೇರೆ ಬೇರೆ ರಾಜ್ಯದ ಮಹಿಳೆಯರು ಆಗಾಗ ಮದ್ಯನಿಷೇಧದ ಬಗ್ಗೆ ಹೋರಾಡುತ್ತಿದ್ದಾರೆ. ಏಕೆಂದರೆ ಗಂಡಸರ ಹಣ ಕುಡಿತಕ್ಕೆ ಹೋಗಿ ಮಕ್ಕಳು ಉಪವಾಸ ಬೀಳುತ್ತಾರೆಂಬುದು ಅವರಿಗೆ ಮನವರಿಕೆಯಾಗಿದೆ; ಹೋರಾಟದ ಕೆಚ್ಚು ಈಗಷ್ಟೆ ಬರುತ್ತಿದೆ. ಹೆಂಗಸರ ದುಡಿಮೆ (ಹಣ) ಸುರಕ್ಷಿತವಾಗಿ ಇರುತ್ತದೆ. ಪ್ರಧಾನಿ ಮೋದಿ ಇದನ್ನು ಚೆನ್ನಾಗಿ ಬಲ್ಲರು. ಅದರಿಂದಾಗಿ ಅವರು ‘ಸ್ವಚ್ಛ ಭಾರತ’ದಿಂದ ಆರಂಭಿಸಿ ಜನಧನ್ ಬ್ಯಾಂಕ್ ಖಾತೆ, ಉಚಿತ ಅಡುಗೆ ಅನಿಲ ಸಿಲಿಂಡರ್, ಮುದ್ರಾ ಬ್ಯಾಂಕ್ ಸಾಲ, ಗರೀಬ್ ಕಲ್ಯಾಣ್ ಯೋಜನೆ (ಕೋವಿಡ್ ವೇಳೆ ಆರಂಭಿಸಿದ ಉಚಿತ ಅಕ್ಕಿ ನೀಡಿಕೆ) ಮುಂತಾದವುಗಳ ಮೂಲಕ ಹೆಂಗಸರ ಮನಸ್ಸು ತಟ್ಟಿದರು. ಕೊರೋನಾ ವೇಳೆ ಜನ ಉಪವಾಸದ ಭಯದಲ್ಲಿದ್ದಾಗ ಅಕ್ಕಿ ಅಥವಾ ಗೋಧಿ, ಬೇಳೆ ಮನೆಗೇ ಬಂತು. ಮನೆಯವರ ಜಾತಿ-ಧರ್ಮಗಳನ್ನು ಯಾರೂ ಕೇಳಲಿಲ್ಲ. ಈ ಯೋಜನೆ ದೇಶದ ಸುಮಾರು ೮೦ ಕೋಟಿ ಜನರನ್ನು ಕಾಪಾಡಿತು; ಅವರಿಗೆ ಆಹಾರದ ಭದ್ರತೆ ನೀಡಿತು. ಇದನ್ನೀಗ ಮೋದಿ ೨೦೨೮ರ ವರೆಗೆ ವಿಸ್ತರಿಸಿದ್ದಾರೆ (೫ ಕೆಜಿ ಅಕ್ಕಿ). ಇದು ಅತಿದೊಡ್ಡ ಸಾಮಾಜಿಕ ಕಲ್ಯಾಣ ಯೋಜನೆಯಾಗಿದ್ದು, ಇಂತಹ ಅನ್ನದಾತ ನಾಯಕನನ್ನು ಮಹಿಳೆಯರು ಏಕೆ ಅಲಕ್ಷಿಸುತ್ತಾರೆ?
ಆಹಾರ, ವಿದ್ಯುತ್, ಸೂರು (ಮನೆ), ಗ್ಯಾಸ್, ನೀರು, ನೈರ್ಮಲ್ಯ, ಆರೋಗ್ಯ, ಶಿಕ್ಷಣ – ಇದನ್ನೆಲ್ಲ ದೇಶದ ಎಲ್ಲ ಮನೆಗಳಿಗೆ ಜಾತಿ-ಮತಗಳನ್ನು ಕೇಳದೆ ಮೋದಿ ಸರ್ಕಾರ ನೀಡುತ್ತಿದೆ. ಹೀಗೆ ಮೋದಿ ವರ್ಣಾಶ್ರಮ ವ್ಯವಸ್ಥೆಯ ಮರುವಿನ್ಯಾಸವನ್ನು ಮಾಡಿದ್ದಾರೆ. ಇದರಲ್ಲಿ ಮಹಿಳೆಯರದ್ದು ‘ಪ್ರಧಾನ ಜಾತಿ’. ಎಲ್ಲ ಮಹಿಳೆಯರು ಒಂದು ಜಾತಿ ಎಂದು ಈಚೆಗೆ ಒಂದು ಚುನಾವಣಾ ರ್ಯಾಲಿಯಲ್ಲಿ ಅವರು ಹೇಳಿದ್ದರು; ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಮಹಿಳೆಯರು ಒಗ್ಗಟ್ಟಾಗಬೇಕು ಎಂದು ಮೋದಿ ಸಲಹೆ ನೀಡಿದರು. ಅವರು ಪಟ್ಟಿ ಮಾಡಿದ ಹೊಸ ‘ಜಾತಿ’ಗಳೆಂದರೆ ಬಡವರು, ಯುವಕರು, ಮಹಿಳೆಯರು ಮತ್ತು ಕೃಷಿಕರು. “ನಮ್ಮ ಅನುಭವದ ಮೂಲಕ ಬಡತನವನ್ನು ನಿರ್ಮೂಲನಗೊಳಿಸಬೇಕು. ಯುವಕರು ದೇಶದ ಭವಿಷ್ಯ; ಮಹಿಳೆಯರು ದೇಶದ ಸಂರಕ್ಷಕರು; ಮತ್ತು ರೈತರು ಅನ್ನ ಕೊಡುವ ಪುಣ್ಯಾತ್ಮರು” ಎಂದವರು ಬಣ್ಣಿಸಿದರು.
ಮಹಿಳಾ ಮೀಸಲಾತಿ
ಈ ನಿಲವಿಗೆ ಪೂರಕವೆಂಬಂತೆ ಮೋದಿ ಸರ್ಕಾರ ಈಚೆಗೆ ಬಹುಕಾಲದ ಬೇಡಿಕೆಯಾಗಿದ್ದ ಮಹಿಳೆಯರ ರಾಜಕೀಯ ಮೀಸಲಾತಿಯನ್ನೂ ಜಾರಿಗೆ ತಂದಿತು. ಇದು ಮಹಿಳಾ ಸಬಲೀಕರಣದ ಮಹತ್ತ್ವದ ಸಾಧನವಾಗಿದೆ. ಆ ಸಂಬಂಧವಾದ ನಾರೀಶಕ್ತಿ ವಂದನ ಅಧಿನಿಯಮ ಅಥವಾ ಮಹಿಳಾ ಮೀಸಲಾತಿ ಮಸೂದೆ (ವಿಧೇಯಕ)ಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಈಚೆಗೆ ಸಂಸತ್ತಿನಲ್ಲಿ ಮಂಡಿಸಿದರು. “ಈ ಸಂವಿಧಾನ ತಿದ್ದುಪಡಿಯು ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.೩೩ ಸ್ಥಾನಗಳ ಮೀಸಲಾತಿಯನ್ನು ನೀಡುತ್ತದೆ. ಇದು ರಾಜಕೀಯದಲ್ಲಿ ಮಹಿಳೆಯರ ಸಬಲೀಕರಣದ ದೊಡ್ಡ ಹೆಜ್ಜೆ” ಎಂದವರು ಹೇಳಿದರು.
ಹಿಂದೆ ೧೯೭೧ರಲ್ಲಿ ದೇಶದ ಮಹಿಳೆಯರ ಸ್ಥಿತಿಯ ಕುರಿತು ವರದಿ ನೀಡಲು ಒಂದು ಸಮಿತಿಯನ್ನು ರಚಿಸಲಾಗಿತ್ತು. ಅದು ೧೯೭೪ರಲ್ಲಿ ವರದಿ ನೀಡಿತು. ವರದಿಯ ಏಳನೇ ಅಧ್ಯಾಯದಲ್ಲಿ, ಮಹಿಳೆಯರಿಗೆ ಸಾಂವಿಧಾನಿಕ ಖಾತರಿಯನ್ನು ನೀಡಬೇಕೆಂದು ಅಂದಿನ ಭಾರತೀಯ ಜನಸಂಘವು ಸೂಚಿಸಿತ್ತು; ಆ ಮೂಲಕ ಮಹಿಳಾ ಮೀಸಲಾತಿಯನ್ನು ಪ್ರತಿಪಾದಿಸಿತ್ತು. ಬಿಜೆಪಿ ತನ್ನ ಸಂಘಟನೆಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಿದ ಮೊದಲ ಪಕ್ಷವಾಗಿದೆ ಎಂದು ಸಚಿವೆ ತಿಳಿಸಿದರು. ವಿಧೇಯಕವು ಬಂದಾಗ ಕೆಲವರು ‘ಇದು ನಮ್ಮ ವಿಧೇಯಕ’ ಎಂದರು; ಮತ್ತೆ ಕೆಲವರು ಅದರ ಬಗ್ಗೆ ಪತ್ರ ಬರೆದಿದ್ದೇವೆ ಎಂದರು. ಇನ್ನು ಕೆಲವರು ‘ಅದರ ಸಂಪೂರ್ಣ ಸಾಂವಿಧಾನಿಕ ಚೌಕಟ್ಟನ್ನು ನಾವೇ ಹಾಕಿದ್ದು’ ಎಂದು ಹೇಳಿಕೊಂಡರು! ಏನಿದ್ದರೂ ಲೋಕಸಭೆ, ವಿಧಾನಸಭೆಗಳಲ್ಲಿನ ಮಹಿಳಾ ಮೀಸಲಾತಿ ವಿಳಂಬವಾದುದರಲ್ಲಿ ಬಹುತೇಕ ಎಲ್ಲ ಪಕ್ಷಗಳ ಪಾಲೂ ಇದೆ.
ಈ ಮೀಸಲಾತಿಯು ೧೫ ವರ್ಷಗಳವರೆಗೆ ಮುಂದುವರಿಯುತ್ತದೆ; ಮತ್ತು ಪ್ರತಿಯೊಂದು ಪುನರ್ವಿಂಗಡಣೆಯ ಅನಂತರ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ಆವರ್ತನಗೊಳಿಸಲಾಗುವುದು. ಇದು ದೀರ್ಘಾವಧಿ ಪರಿಣಾಮವನ್ನು ಖಾತ್ರಿಪಡಿಸುತ್ತದೆ. ಕಾಂಗ್ರೆಸ್ ಕೇವಲ ಹತ್ತು ವರ್ಷಗಳ ಮಹಿಳಾ ಮೀಸಲಾತಿಯನ್ನು ಪ್ರಸ್ತಾವಿಸಿತ್ತು ಎಂದು ಸರ್ಕಾರ ತಿಳಿಸಿದೆ. ಕೆಲವರು ಓಬಿಸಿ ಮತ್ತು ಅಲ್ಪಸಂಖ್ಯಾತರನ್ನು ಕೂಡ ಈ ಮೀಸಲಾತಿಯು ಒಳಗೊಳ್ಳಬೇಕೆಂದು ಸಲಹೆ ನೀಡಿದರು. ಆದರೆ ಧರ್ಮದ ಆಧಾರದ ಮೀಸಲಾತಿಯನ್ನು ಸಂವಿಧಾನವು ನಿಷೇಧಿಸಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತು.
“ರಾಜಕೀಯ ಪ್ರಾತಿನಿಧ್ಯವು ಮಹಿಳಾ ಸಬಲೀಕರಣದ ಮೂಲಭೂತ ಅಂಶವಾಗಿದ್ದು, ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಮೋದಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದೆ. ಇದರೊಂದಿಗೆ ಶಿಕ್ಷಣ, ಆರೋಗ್ಯರಕ್ಷಣೆ, ರಾಜಕೀಯ ಪ್ರಾತಿನಿಧ್ಯ, ಆರ್ಥಿಕ ಸಬಲೀಕರಣ, ಲಿಂಗಸಮಾನತೆಗಳನ್ನು ಸಾಧಿಸಲು ಉದ್ದೇಶಿಸಿದೆ. ಈಗ ಶಾಲೆ ಬಿಡುವ (ಡ್ರಾಪ್ಔಟ್) ಹುಡುಗಿಯರ ಸಂಖ್ಯೆ ಕಡಮೆಯಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಅವಕಾಶಗಳು ಹೆಚ್ಚುತ್ತಿವೆ. ಕೇಂದ್ರಸರ್ಕಾರ ಮುಂಗಡಪತ್ರದಲ್ಲಿ ಮಹಿಳಾ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಇರಿಸುತ್ತಿದೆ. ಸವಾಲುಗಳು ಇದ್ದರೂ ಲಿಂಗಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗೆಗಿನ ಸರ್ಕಾರದ ಬದ್ಧತೆಯು ಕೋಟ್ಯಂತರ ಮಹಿಳೆಯರಿಗೆ ಭರವಸೆಯ ದಾರಿದೀಪವಾಗಿದೆ; ಶಿಕ್ಷಣ, ಆರೋಗ್ಯ, ರಾಜಕೀಯ-ಆರ್ಥಿಕ ಅವಕಾಶಗಳ ಮೂಲಕ ದೇಶದ ಮಹಿಳೆಯರು ಹೊಸ ರೀತಿಯ ಸಬಲೀಕರಣವನ್ನು ಕಾಣುತ್ತಿದ್ದಾರೆ; ರಾಷ್ಟ್ರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ರಾಜಕೀಯ ಮೀಸಲಾತಿಯು ಆರ್ಥಿಕ ಸಬಲೀಕರಣವನ್ನು ಸಂಕೇತಿಸುತ್ತದೆ. ಇದು ಸ್ವಾವಲಂಬನೆ, ಸ್ವಯಂನಿರ್ಣಯದತ್ತ ಪ್ರಮುಖ ಹೆಜ್ಜೆಯಾಗಿದೆ. ಇದು ದೇಶದ ಉಜ್ಜ್ವಲ ಭವಿಷ್ಯಕ್ಕೆ ದೊರೆತ ಅವಕಾಶವಾಗಿದೆ” ಎಂದು ಸ್ಮೃತಿ ಇರಾನಿ ತಮ್ಮ ಭಾಷಣದಲ್ಲಿ ಹೇಳಿದರು.
ರೈತರ ಯೋಜನೆಗಳು
ಪ್ರಧಾನಿ ಮೋದಿ ಅವರು ಸದಾ ರೈತರ ಹಿತಚಿಂತನೆ ಮಾಡುತ್ತ ಅವರ ಆದಾಯವನ್ನು ದೊಡ್ಡ ರೀತಿಯಲ್ಲಿ (ಇಮ್ಮಡಿ) ಹೆಚ್ಚಿಸುವ ಪ್ರಯತ್ನವನ್ನು ನಡೆಸುತ್ತಿದ್ದರೂ ಕೂಡ ಅವರನ್ನು ರೈತವಿರೋಧಿ ಎಂದು ಬಿಂಬಿಸುವ ಪ್ರಯತ್ನ ಒಂದು ವರ್ಗದಿಂದ ನಡೆಯುತ್ತಬಂದಿದೆ. ರೈತರ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆ ಸಿಗುವುದು ಸೇರಿದಂತೆ ಕೆಲವು ಉತ್ತಮ ಅಂಶಗಳಿರುವ ಕಾಯ್ದೆಯನ್ನು ತಂದರೆ ಅದರ ವಿರುದ್ಧ ತಿಂಗಳುಗಟ್ಟಲೆ ಹೋರಾಟ ನಡೆಸಿ ವಾಪಸು ಪಡೆಯುವಂತೆ ಮಾಡಲಾಯಿತು. ಅದರ ಹಿಂದೆ ಎಪಿಎಂಸಿ ಹಿತಾಸಕ್ತಿಯ ಲಾಬಿ ಇದ್ದುದು ಸ್ಪಷ್ಟ. ಅಷ್ಟು ಮಾತ್ರವಲ್ಲದೆ, ದೇಶದ್ರೋಹಿ ಖಲಿಸ್ತಾನಿಗಳು ಕೂಡ ಇದ್ದರೆನ್ನುವುದು ಮತ್ತೆ ಬೆಳಕಿಗೆ ಬಂತು. ಕಳೆದ ೯ ವರ್ಷಗಳಲ್ಲಿ ಮೋದಿ ಅವರು ತಂದ ಗ್ಯಾರಂಟಿ ಯೋಜನೆಗಳಿಂದ ದೇಶದ ಕೋಟ್ಯಂತರ ರೈತರು ಪ್ರಯೋಜನ ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ರೈತರ ಮಾರುಕಟ್ಟೆ ಸುಧಾರಣೆಗೆ ಮೋದಿ ಸರ್ಕಾರ ನೆರವಾದರೆ ರೈತರು ಜಿಡಿಪಿ ಹೆಚ್ಚಳದ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.
೨೦೧೫ರಲ್ಲಿ ಕೇಂದ್ರಸರ್ಕಾರವು ಜಾರಿಗೆ ತಂದ ಕೃಷಿ ಸಿಂಚಯ ಯೋಜನೆಯು ಸುಸ್ಥಿರ ನೀರಾವರಿ ಕಾರ್ಯಯೋಜನೆಯಾಗಿದೆ. ಇದು ಪ್ರತಿ ಕೃಷಿ ಭೂಮಿಗೂ ಎಂಬ ಗುರಿಯನ್ನು ಹೊಂದಿದ್ದು, ಹೊಸ ಜಲಮೂಲ ಸೃಷ್ಟಿ, ನೀರಿನ ಸಂಗ್ರಹ-ವಿತರಣೆಗಳ ಮೂಲಸೌಕರ್ಯ, ಸಣ್ಣ ನೀರಾವರಿ ತಂತ್ರ ಮುಂತಾದವು ಅದರಲ್ಲಿ ಸೇರಿವೆ. ಅದೇ ವರ್ಷ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯನ್ನು ಕೂಡ ಜಾರಿಗೊಳಿಸಿದರು. ಅದು ರೈತರಿಗೆ ಅವರ ಭೂಮಿಯ ಮಣ್ಣಿನ ಬಗ್ಗೆ ವರದಿಯನ್ನು ಒದಗಿಸುತ್ತದೆ.
೨೦೧೫ರಲ್ಲಿಯೆ ಆರಂಭಿಸಿದ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯು ರೈತರಿಗೆ ಮತ್ತು ಗ್ರಾಮೀಣ ಯುವಜನರಿಗೆ ಕೌಶಲ ತರಬೇತಿ ನೀಡುತ್ತದೆ. ಯೋಜನೆಯ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು ೪ ಕೋಟಿ ಜನರಿಗೆ ತರಬೇತಿ ನೀಡಿದೆ. ರೈತರ ಉತ್ಪಾದಕತೆ ವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಗಳು ಅದರಲ್ಲಿ ಸೇರಿವೆ. ಪರಂಪರಾಗತ ಕೃಷಿ ವಿಕಾಸ ಯೋಜನೆ-೨೦೧೫ ಸಾವಯವ ಮತ್ತು ಸಾಂಪ್ರದಾಯಿಕ ಕೃಷಿಗೆ ಪೂರಕವಾಗಿದೆ. ೨೦೧೬ರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ಬೆಳೆಗೆ ರಕ್ಷಣೆ ಮತ್ತು ಪರಿಹಾರಗಳನ್ನು ಒದಗಿಸಿದರೆ, ಅದೇ ವರ್ಷ ಆರಂಭಿಸಿದ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯು ಎಲೆಕ್ಟ್ರಾನಿಕ್ ಟ್ರೇಡಿಂಗ್ ಪೋರ್ಟಲ್ ಆಗಿದೆ. ಇದರಿಂದ ಕ್ರಾಂತಿಯೇ ಉಂಟಾಗಿ ಕೃಷಿಕರಿಗೆ ಮಧ್ಯವರ್ತಿಗಳ ಶೋಷಣೆ ತಪ್ಪಿತು. ಮಾರಾಟದಲ್ಲಿ ಪಾರದರ್ಶಕತೆ ಬಂದು ರೈತರಿಗೆ ನ್ಯಾಯಸಮ್ಮತ ಬೆಲೆಗಳು ದೊರೆತವು. ೨೦೧೭ರ ಪ್ರಧಾನಮಂತ್ರಿ ಕೃಷಿಸಂಪದ ಯೋಜನೆಯಿಂದ ಆಹಾರ ಸಂಸ್ಕರಣೆ ವಲಯದ ಆಧುನಿಕೀಕರಣವಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಉದ್ಯೋಗಾವಕಾಶಗಳಿಗೆ ದಾರಿಯಾಯಿತು.
ಕೃಷಿ ಸಮ್ಮಾನ್ ನಿಧಿ
ಪ್ರಧಾನಿ ಮೋದಿ ಅವರು ೨೦೧೮ರಲ್ಲಿ ಕೃಷಿ ಸಮ್ಮಾನ್ ನಿಧಿಯನ್ನು ಜಾರಿಗೆ ತಂದು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಾರ್ಷಿಕ ೬,೦೦೦ರೂ. ನೀಡಲು ಆರಂಭಿಸಿದರು. ದೇಶದ ೧೨ ಕೋಟಿ ರೈತರಿಗೆ ಅದರಿಂದ ಪ್ರಯೋಜನವಾಗುತ್ತಿದೆ. ಪ್ರಧಾನಮಂತ್ರಿ ಆತ್ಮನಿರ್ಭರ್ ಭಾರತ್ ಅಭಿಯಾನವು ೨೦೨೦ರಲ್ಲಿ ಆರಂಭಗೊಂಡಿದ್ದು, ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಅದರ ಉದ್ದೇಶವಾಗಿದೆ. ರೈತರ ಆದಾಯವನ್ನು ಇಮ್ಮಡಿಗೊಳಿಸುವ ಉದ್ದೇಶ ಕೂಡ ಅದರಲ್ಲಿದ್ದು, ಬಹುಬೆಳೆ (ಮಿಶ್ರ ಬೆಳೆ) ಮತ್ತು ಸುಸ್ಥಿರ ಕೃಷಿಗಳಿಗೆ ಅದು ಪೂರಕವಾಗಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸಲು ಮೋದಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ; ಕೃಷಿ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತಿದೆ. ಅಗ್ಗದ ದರದಲ್ಲಿ ರಸಗೊಬ್ಬರ ಪೂರೈಕೆ, ಸಬ್ಸಿಡಿ ನೀಡಿಕೆ, ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮುಂತಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ೯ ವರ್ಷಗಳಲ್ಲಿ ಕೇಂದ್ರಸರ್ಕಾರವು ರಸಗೊಬ್ಬರ ಸಬ್ಸಿಡಿಗೆ ಸುಮಾರು ೧೦ ಲಕ್ಷ ಕೋಟಿ ರೂ. ವೆಚ್ಚ ಮಾಡಿದ್ದು, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯೂರಿಯಾ ಅಗ್ಗವಾಗಿದೆ ಎಂದು ವಿಶ್ವನಾಥ ಸುಂಕನಾಳ ಅವರು ಲೇಖನವೊಂದರಲ್ಲಿ ತಿಳಿಸಿದ್ದಾರೆ.
ಸ್ವಚ್ಛಭಾರತ್ ಅಭಿಯಾನ
“ಮೋದಿ ನೇತೃತ್ವದ ಪ್ರಮುಖ ಉಪಕ್ರಮವಾದ ಸ್ವಚ್ಛ ಭಾರತ್ ಅಭಿಯಾನವು ನಮ್ಮ ದೇಶದಲ್ಲಿ ಸಾಮೂಹಿಕ ಇಚ್ಛಾಶಕ್ತಿಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉಜ್ಜ್ವಲ ಉದಾಹರಣೆಯಾಗಿದೆ” ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರು ಹೇಳಿದ್ದಾರೆ. ಸ್ವಚ್ಛಭಾರತ್ ಮಿಷನ್ ಸ್ವಚ್ಛ, ಆರೋಗ್ಯಕರ, ಸುಸ್ಥಿರ ಭಾರತಕ್ಕಾಗಿ ನಡೆಸಿದ ಜನಾಂದೋಲನವಾಗಿದೆ. ಇದರ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯನಿರ್ವಹಣೆಯನ್ನು ಕ್ರಮಬದ್ಧಗೊಳಿಸಲಾಯಿತು. ಸರ್ಕಾರದ ವಿವಿಧ ಇಲಾಖೆಗಳ ಜಂಟಿ ಕ್ರಮದಿಂದ ಇದು ಸಾಧ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅದರಂತೆ ವಿವಿಧ ರಾಜ್ಯಗಳ ಭೇಟಿ, ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಈಗ ಎರಡನೇ ಹಂತದ ಕೆಲಸ ನಡೆಯುತ್ತಿದ್ದು, ಒಟ್ಟು ೧೧.೨೫ ಕೋಟಿಗೂ ಅಧಿಕ ಗೃಹ ಶೌಚಾಲಯಗಳು ಮತ್ತು ೨.೩೬ ಲಕ್ಷ ಸಮುದಾಯ ನೈರ್ಮಲ್ಯ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ೨೦೨೨ರಲ್ಲಿ ಅಭಿಯಾನವು ಆಳವಾದ ಪರಿಣಾಮವನ್ನು ಬೀರಿತು. ಸುಮಾರು ೧೦ ಕೋಟಿ ಜನ ಅದರ ಶ್ರಮದಾನದಲ್ಲಿ ಭಾಗಿಯಾದರು. ೨೦೨೩ರಲ್ಲಿ ೧೨ ದಿನ ೨೦ ಕೋಟಿಗೂ ಅಧಿಕ ಜನ ವಿವಿಧ ಚಟುವಟಿಕೆಗಳನ್ನು ಕೈಗೊಂಡರು. ಬಯಲುಶೌಚಮುಕ್ತ ಗ್ರಾಮಗಳ ಸಂಖ್ಯೆ ಶೇ.೭೫ಕ್ಕೇರಿದೆ.
ಈ ವರ್ಷ ‘ಕಸಮುಕ್ತ ಭಾರತ’ ಎಂಬ ಬ್ಯಾನರ್ನ ಅಡಿಯಲ್ಲಿ ನೈರ್ಮಲ್ಯವು ಸಾಮೂಹಿಕ ಕರ್ತವ್ಯ; ಸ್ವಚ್ಛತೆಯು ಜೀವನದ ಆಂತರಿಕ ಭಾಗ ಎನ್ನುವ ಪ್ರಚಾರ ನಡೆಯಿತು. ಸಾರ್ವಜನಿಕರ ಸ್ವಚ್ಛತೆಗೆ ಒತ್ತು ನೀಡಿ, ತೆರೆಮರೆಯ ಹೀರೋಗಳಾದ ಸಫಾಯಿ ಕರ್ಮಚಾರಿಗಳ ಕಲ್ಯಾಣ ವಿಸ್ತರಣೆ ನಡೆಯಿತು. ನದಿ ದಡ, ಜಲಮೂಲ, ಪ್ರವಾಸಿತಾಣ, ಐತಿಹಾಸಿಕ ಸ್ಮಾರಕಗಳ ಸ್ವಚ್ಛತೆ ನಡೆಸಲಾಯಿತು. ಸಮುದಾಯಗಳ ಅಭೂತಪೂರ್ವ ಭಾಗವಹಿಸುವಿಕೆಯು ಅತ್ಯಂತ ಮಹತ್ತ್ವದ ಸಾಧನೆಯಾಗಿತ್ತು ಎಂದು ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಕ್ರಾಂತಿ
ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ ವೇಗಳ ನಿರ್ಮಾಣವು ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ ಎನ್ನಬಹುದು. ಇದರಲ್ಲಿ ಹಿಂದಿನ ಸರ್ಕಾರದ ಸಾಧನೆಗೆ ಹೋಲಿಸಿದರೆ ಈಗ ನಡೆಯುತ್ತಿರುವ ಅದ್ಭುತವು ಮನದಟ್ಟಾಗಲು ಸಾಧ್ಯ. ೨೦೦೪-೧೪ರಲ್ಲಿ ಅಂದಿನ ಯುಪಿಎ ಸರ್ಕಾರವು ಕೇವಲ ೧೬ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿತ್ತು. ಬಿಜೆಪಿಯೇತರ ಸರ್ಕಾರಗಳ ೬೦ ವರ್ಷಗಳ ಅವಧಿಯಲ್ಲಿ ಆದ ಒಟ್ಟು ರಾಷ್ಟ್ರೀಯ ಹೆದ್ದಾರಿ ೭೦ ಸಾವಿರ ಕಿ.ಮೀ. ಮಾತ್ರ. ಬಿಜೆಪಿ ೧೫ ವರ್ಷಗಳಲ್ಲಿ ನಿರ್ಮಿಸಿದ್ದು ಸುಮಾರು ೭೫ ಸಾವಿರ ಕಿ.ಮೀ. ದೇಶದಲ್ಲಿ ದೊಡ್ಡ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಆರಂಭಿಸಿದವರು ಅಟಲ್ ಬಿಹಾರಿ ವಾಜಪೇಯಿ ಅವರು. ೧೯೯೯ರಲ್ಲಿ ಅವರು ಸುವರ್ಣ ಚತುಷ್ಪಥ ಹೆದ್ದಾರಿ ಎಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೊಸ ಆಯಾಮ ನೀಡಿದರು. ಆ ಮೂಲಕ ದೇಶದಲ್ಲಿ ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾದವು. ಮೊದಲಿಗೆ ದೆಹಲಿ-ಮುಂಬಯಿ-ಚೆನ್ನೈ-ಕೋಲ್ಕತಾಗಳನ್ನು ಜೋಡಿಸುವ ೫,೮೪೬ ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣವಾಯಿತು. ಅನಂತರ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಪ್ರಕಾರ ಕಾಶ್ಮೀರ-ಕನ್ಯಾಕುಮಾರಿ ಆರು ಪಥಗಳ ರಸ್ತೆಯನ್ನು ಕೈಗೊಂಡರು. ೨೦೦೬ರಲ್ಲಿ ಅದು ಮುಗಿಯಬೇಕಿತ್ತು. ಕಾಂಗ್ರೆಸ್ ಸರ್ಕಾರದ ವಿಳಂಬನೀತಿಯಿಂದಾಗಿ ಅದು ೨೦೧೨ರಲ್ಲಿ ಮುಗಿಯಿತು; ಅವರು ಕೇವಲ ೧೬ ಸಾವಿರ ಕಿ.ಮೀ. ನಿರ್ಮಿಸಿದರು.
ಈಗ ದೇಶದ ಹೆದ್ದಾರಿ ನಿರ್ಮಾಣದ ವೇಗ ಹೇಗಿದೆಯೆಂದರೆ, ೨೦೧೪-೧೫ರಲ್ಲಿ ದಿನಕ್ಕೆ ೧೨.೧ ಕಿ.ಮೀ. ರಸ್ತೆ ಆಗುತ್ತಿದ್ದರೆ ಈಗ ಅದು ೨೮.೮ ಕಿ.ಮೀ.ಗೆ ಏರಿದೆ. ಒಟ್ಟು ರಸ್ತೆ ನಿರ್ಮಾಣದಲ್ಲಿ ಈಗ ದೇಶ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಸ್ಥಾನಕ್ಕೇರಿದೆ.
ನರೇಂದ್ರ ಮೋದಿಯವರ ಕಾರ್ಯಶೈಲಿಗೆ ಒಂದು ಉದಾಹರಣೆಯಾಗಿ ಮಾಲ್ಡೀವ್ಸ್ ಬಗೆಗೆ ಅವರು ಕೈಗೊಂಡ ಕ್ರಮವನ್ನು ಉದಾಹರಿಸಬಹುದು. ಲಕ್ಷದ್ವೀಪದ ಕಡಲತೀರದಲ್ಲಿ ಮೋದಿ ಪ್ರವಾಸದಲ್ಲಿದ್ದಾರೆ ಎನ್ನುವ ಸುದ್ದಿ ಪತ್ರಿಕೆಗಳಲ್ಲಿ ಚಿತ್ರಸಹಿತ ಪ್ರಕಟವಾಯಿತು. ಇದೇನಪ್ಪಾ, ಎಂದೂ ರಜೆ ತೆಗೆದುಕೊಳ್ಳದ ಪ್ರಧಾನಿ ರಜೆ ಮಾಡುವುದಕ್ಕೆ ಆರಂಭಿಸಿದರೇ ಎಂದು ಅಚ್ಚರಿಗೊಳ್ಳುವಂತಾಯಿತು. ತಡವಾಗದೆ ಅದರ ಹಿನ್ನೆಲೆಯೂ ತಿಳಿಯಿತು. ನೆರೆಯ ಮಾಲ್ಡೀವ್ಸ್ನಲ್ಲಿ ಚೀನಾ ಪರ ವ್ಯಕ್ತಿ ಈಚೆಗೆ ಅಧಿಕಾರಕ್ಕೆ ಬಂದು ಬಹುಬೇಗ ಭಾರತವಿರೋಧಿ ಧೋರಣೆಯನ್ನು ಪ್ರಕಟಪಡಿಸಿದರು. ಆ ಪುಟ್ಟ ದೇಶಕ್ಕೆ ಪ್ರವಾಸೋದ್ಯಮವೇ ಆಧಾರ. ನಮ್ಮ ದ್ವೀಪದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದರೆ ಮಾಲ್ಡೀವ್ಸ್ ಕುಸಿಯುವುದು ನಿಶ್ಚಿತ. ಅದಕ್ಕಾಗಿಯೆ ಮೋದಿ ಲಕ್ಷದ್ವೀಪಕ್ಕೆ ಹೋಗಿದ್ದರು. ಅದರ ಪರಿಣಾಮ ಈಗಾಗಲೇ ಕಾಣಲು ಆರಂಭವಾಗಿದೆ. ಇದಲ್ಲವೆ ಮುತ್ಸದ್ದಿತನ!