೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ ಏಷ್ಯಾದ ೧೧ ದೇಶಗಳು, ೧೫ ಆಫ್ರಿಕಾ ಖಂಡ ದೇಶಗಳು, ೯ ಅಮೆರಿಕಾ ಖಂಡ ದೇಶಗಳು, ಆಸ್ಟ್ರೇಲಿಯ ಖಂಡದಲ್ಲಿ ೪ ದೇಶಗಳು. ಒಟ್ಟು ೨ ಶತಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಈ ವರ್ಷವೇ ಚುನಾವಣೆ ನಡೆಯಲಿದೆ.
ಪ್ರಜಾಸ್ವಾಮ್ಯ ದೇಶಗಳಲ್ಲಿ ಚುನಾವಣೆ ನಾಲ್ಕೋ ಐದೋ ಆರೋ ವರ್ಷಗಳಿಗೊಮ್ಮೆ ನಡೆಯುವುದು ನಿಯತಿಯಾಗಿದ್ದರೂ ಇಷ್ಟು ದೊಡ್ಡ ಸಂಖ್ಯೆಯ ದೇಶಗಳಲ್ಲಿ ಒಂದೇ ವರ್ಷದಲ್ಲಿ ಚುನಾವಣೆಗಳು ನಡೆಯುತ್ತಿರುವುದು ವಿಶೇಷ. ಮತ್ತು ಇದರ ಪರಿಣಾಮ ಅಂತಾರಾಷ್ಟ್ರೀಯ ರಾಜಕೀಯ-ಆರ್ಥಿಕ ಸಂಬಂಧಗಳ ಮೇಲೂ ಆಗುತ್ತದೆ.
ವಸುಧೈವ ಕುಟುಂಬಕಂ’ ಎಂಬುದು ಭಾರತ ಜಗತ್ತಿಗೆ ಕೊಟ್ಟ ಆದರ್ಶ. ನಾವು ಗಡಿಗಳನ್ನು ಗುರುತಿಸಿಕೊಂಡು ಒಂದೊಂದು ದೇಶವಾಗಿ ಹೊರಹೊಮ್ಮಿರಬಹುದು, ಪ್ರಪಂಚದ ವಿವಿಧ ಭಾಗದ ಜನರ ಆಹಾರ, ಭಾಷೆ, ಮತ-ಸಂಪ್ರದಾಯಗಳು, ಉಡುಗೆ-ತೊಡುಗೆ, ಪ್ರಾಕೃತಿಕ ವಾತಾವರಣ, ವ್ಯಾವಹಾರಿಕ ನೀತಿ ಬೇರೆ ಬೇರೆ ಇರಬಹುದು. ಆದರೆ ನಾವು ದ್ವೀಪಗಳಾಗಿ ನಮ್ಮಷ್ಟಕ್ಕೆ ಬದುಕಲು ಸಾಧ್ಯವಿಲ್ಲ. ಈ ಎಲ್ಲ ಭಿನ್ನತೆಗಳನ್ನು ಇಟ್ಟುಕೊಂಡೂ ಒಂದು ಕುಟುಂಬವಾಗಿ, ಕೊಡುಕೊಳ್ಳುವಿಕೆ ಹಾಗೂ ಪರಸ್ಪರ ಸಹಕಾರದಿಂದ ಹೆಜ್ಜೆಯಿಟ್ಟರಷ್ಟೇ ಅದು ವಿಶ್ವಕ್ಕೆ ಮಂಗಳಕರ ಎನ್ನುವುದನ್ನು ಭಾರತ ಬಹಳ ಹಿಂದೆಯೇ ಜಗತ್ತಿಗೆ ಸಾರಿ ಹೇಳಿತು.
ಜಾಗತೀಕರಣೋತ್ತರ ಯುಗದಲ್ಲಿ ಇದು ಜಗತ್ತಿಗೆ ಹೆಚ್ಚು ಮನವರಿಕೆಯಾಯಿತು. ಪರಸ್ಪರ ಅವಲಂಬನೆ ಅನಿವಾರ್ಯ ಎನಿಸತೊಡಗಿತು. ಎರಡನೇ ಪ್ರಪಂಚಯುದ್ಧದ ಭಯಾನಕತೆ, ಮುಂದೆ ಅಂತಹ ಅವಘಡವನ್ನು ಆಗಗೊಡಬಾರದು ಎಂಬ ಸಂಕಲ್ಪಕ್ಕೆ ಪ್ರೇರಣೆಯಾಯಿತು. ಹಲವು ದೇಶಗಳು ಒಟ್ಟಾಗಿ ವಿಶ್ವಸಂಸ್ಥೆ ರೂಪಗೊಂಡು ಜಾಗತಿಕ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆ ಸಿದ್ಧವಾಯಿತು.
ಏಳಿಗೆ ಸಾಧಿಸಬಯಸುವ ಯಾವುದೇ ರಾಷ್ಟ್ರ, ಕೇವಲ ತನ್ನ ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಬಂಧ ಕಾಯ್ದುಕೊಂಡರೆ ಸಾಲದು, ತನ್ನ ವ್ಯಾವಹಾರಿಕ, ಆರ್ಥಿಕ ಮತ್ತು ಭದ್ರತೆಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ದ್ವಿಪಕ್ಷೀಯ ಸಂಬಂಧವನ್ನು ನೆರೆಹೊರೆಯ ರಾಷ್ಟ್ರಗಳಾಚೆಗೂ ವಿಸ್ತರಿಸಿಕೊಳ್ಳಬೇಕು ಎಂಬುದು ಮನವರಿಕೆಯಾಯಿತು. ಪೂರೈಕೆ ಜಾಲದಲ್ಲಿ ಮುಖ್ಯ ಪಾತ್ರಧಾರಿಯಾದರೆ ಮಾತ್ರ ಜಾಗತಿಕ ವೇದಿಕೆಗಳಲ್ಲಿ ಮನ್ನಣೆ ಎಂಬುದು ಸಿದ್ಧವಾಯಿತು. ಈ ಎಲ್ಲ ಅಂಶಗಳ ಮೇಲೆ ನಮ್ಮ ದೇಶದ ವಿದೇಶಾಂಗ ನೀತಿ ರೂಪಗೊಂಡಿತು. ದೇಶೀಯ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು, ಆ ಮೂಲಕ ಆರ್ಥಿಕ ಸಬಲತೆಯನ್ನು ಸಾಧಿಸಬೇಕು ಎಂಬುದು ಗುರಿಯಾಯಿತು.
೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ ಏಷ್ಯಾದ ೧೧ ದೇಶಗಳು, ೧೫ ಆಫ್ರಿಕಾ ಖಂಡ ದೇಶಗಳು, ೯ ಅಮೆರಿಕಾ ಖಂಡ ದೇಶಗಳು, ಆಸ್ಟ್ರೇಲಿಯ ಖಂಡದಲ್ಲಿ ೪ ದೇಶಗಳು. ಒಟ್ಟು ೨ ಶತಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಈ ವರ್ಷವೇ ಚುನಾವಣೆ ನಡೆಯಲಿದೆ.
ಪ್ರಜಾಸ್ವಾಮ್ಯ ದೇಶಗಳಲ್ಲಿ ಚುನಾವಣೆ ನಾಲ್ಕೋ ಐದೋ ಆರೋ ವರ್ಷಗಳಿಗೊಮ್ಮೆ ನಡೆಯುವುದು ನಿಯತಿಯಾಗಿದ್ದರೂ ಇಷ್ಟು ದೊಡ್ಡ ಸಂಖ್ಯೆಯ ದೇಶಗಳಲ್ಲಿ ಒಂದೇ ವರ್ಷದಲ್ಲಿ ಚುನಾವಣೆಗಳು ನಡೆಯುತ್ತಿರುವುದು ವಿಶೇಷ. ಮತ್ತು ಇದರ ಪರಿಣಾಮ ಅಂತಾರಾಷ್ಟ್ರೀಯ ರಾಜಕೀಯ-ಆರ್ಥಿಕ ಸಂಬಂಧಗಳ ಮೇಲೂ ಆಗುತ್ತದೆ.
ಸ್ವತಂತ್ರ ಭಾರತದ ವಿದೇಶಾಂಗ ನೀತಿ, ಆದರ್ಶಗಳ ಮೂಸೆಯಲ್ಲಿ ಅರಳಿತ್ತು. ಅಲಿಪ್ತ ನೀತಿ ಆ ಕಾಲಘಟ್ಟದ ಅನಿವಾರ್ಯತೆ ಇದ್ದಿರಬಹುದು. ಆದರೆ ಅನಂತರ ಆದ ಅನುಭವಗಳು ನಮ್ಮ ವಿದೇಶಾಂಗ ನೀತಿಗೆ ಪಕ್ವತೆಯನ್ನು ಜೋಡಿಸಿತು. ಪಾಕಿಸ್ತಾನ ಗಡಿಯಲ್ಲಿ ತಂಟೆ ತೆಗೆದು ಭಾರತದ ಮೇಲೆರಗಿದಾಗ, ‘ಹಿಂದಿ-ಚೀನೀ ಭಾಯಿ ಭಾಯಿ’ ಎಂಬ ಭ್ರಾತೃತ್ವದ ಆಶಯಕ್ಕೆ ಚೀನಾ ಸ್ಪಂದಿಸದೆ ನಂಬಿಕೆದ್ರೋಹ ಎಸಗಿದಾಗ, ವಿದೇಶಾಂಗ ನೀತಿಯನ್ನು ಆದರ್ಶದ ನೆಲೆಯಲ್ಲಿ ರೂಪಿಸಿದರೆ ಸಾಲದು ಅದಕ್ಕೆ ವಾಸ್ತವದ ತಳಹದಿ ಇರಬೇಕು ಎಂಬ ಪಾಠ ನಮ್ಮ ನಾಯಕರಿಗೆ ಅರ್ಥವಾಯಿತು. ಆಗಲೇ ನಾವು ಸೋವಿಯತ್ ರಷ್ಯಾದೊಂದಿಗೆ ಸಖ್ಯ ಗಟ್ಟಿಮಾಡಿಕೊಂಡದ್ದು. ರಷ್ಯಾದೊಂದಿಗಿನ ಗೆಳೆತನ, ಸಂಕಷ್ಟದ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬಂತು. ಸೋವಿಯತ್ ವಿಘಟನೆ ಹೊಸ ವಾಸ್ತವಕ್ಕೆ ತೆರೆದುಕೊಳ್ಳುವಂತೆ ಮಾಡಿತು.
ಪಿ.ವಿ. ನರಸಿಂಹ ರಾವ್ ಅವರ ಅವಧಿಯಲ್ಲಿ ‘ಲುಕ್ ಈಸ್ಟ್’ನೀತಿಯ ಮೂಲಕ ಹೊಸ ಹೆಜ್ಜೆಯನ್ನು ಭಾರತ ಇಟ್ಟಿತು. ವಾಜಪೇಯಿ, ಮನಮೋಹನ್ಸಿಂಗ್ ಅವರ ಅವಧಿಯಲ್ಲಿ ಇತರ ದೇಶಗಳೊಂದಿಗಿನ ಭಾರತದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗತೊಡಗಿತು. ೨೦೧೪ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ, ಭಾರತ ಹೆಚ್ಚಿನ ಆತ್ಮವಿಶ್ವಾಸದಿಂದ ಜಾಗತಿಕ ಆಗುಹೋಗುಗಳಿಗೆ ಪ್ರತಿಕ್ರಿಯಿಸತೊಡಗಿತು. ಸಬಲಗೊಂಡ ಆರ್ಥಿಕತೆ, ಮಾನವಸಂಪನ್ಮೂಲ, ವಿಜ್ಞಾನ ಮತ್ತು ತಂತ್ರಜ್ಞಾನದ ಕೌಶಲ – ಇವೆಲ್ಲ ಭಾರತದ ವರ್ಚಸ್ಸನ್ನು ಹೆಚ್ಚಿಸಿದವು. ಭಾರತದ ವಿದೇಶಾಂಗ ನೀತಿಗೆ ಹೊಸ ಆಯಾಮಗಳು ಜೋಡಣೆಯಾದವು.
ಈ ಪೂರ್ವಪೀಠಿಕೆಯೊಂದಿಗೆ ನಾವು ೨೦೨೪ನ್ನು ನೋಡಬೇಕು. ೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಈ ವರ್ಷ, ಜಗತ್ತಿನ ಹಲವು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿದೆ. ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಇರುವ ಅಮೆರಿಕದಂತಹ ದೇಶದ ಜನ ತಮ್ಮ ನೂತನ ಅಧ್ಯಕ್ಷರನ್ನು ಈ ವರ್ಷ ಆರಿಸಲಿದ್ದಾರೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾದಂತಹ ಸಂಸದೀಯ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಲ್ಲಿ ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬರಲಿವೆ. ಯಾವುದೇ ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಹೊಸ ನಾಯಕ ದೇಶದ ಚುಕ್ಕಾಣಿ ಹಿಡಿದರೆ ಆ ದೇಶದ ಆದ್ಯತೆ, ಒಲವು-ನಿಲವುಗಳು, ಆರ್ಥಿಕ ಮತ್ತು ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದು ಜಾಗತಿಕ ಸ್ಥಿತ್ಯಂತರಗಳನ್ನು ಕುತೂಹಲದಿಂದ ಗಮನಿಸಬೇಕಾದ, ಈ ಬದಲಾವಣೆಗಳಿಂದ ಭಾರತದ ಮೇಲಾಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಅಂದಾಜಿಸಬೇಕಾದ ವರ್ಷವೂ ಹೌದು.
ಬಾಂಗ್ಲಾದೇಶ
ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ಮೊದಲಿಗೆ ಚುನಾವಣೆ ಎದುರಿಸಿತು. ಜನವರಿ ೭ರಂದು ನಡೆದ ಚುನಾವಣೆಯನ್ನು ಖಲೀದ್ ಜಿಯಾ ನೇತೃತ್ವದ ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಕ್ಷ ಬಹಿಷ್ಕರಿಸಿದ್ದರಿಂದ, ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಪ್ರಬಲ ವಿರೋಧವೇ ಇರಲಿಲ್ಲ. ಅಂದುಕೊಂಡಂತೆಯೇ ಶೇಕ್ ಹಸೀನಾ ಅವರು ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದರು.
ಹಸೀನಾ ಅವರು ‘ಬಂಗಬಂಧು’ ಶೇಕ್ ಮುಜೀಬುರ್ ರೆಹಮಾನ್ ಅವರ ಮಗಳು. ಬಾಂಗ್ಲಾದೇಶ ರೂಪಗೊಂಡ ಬಗೆಯನ್ನು, ಆ ಸಂದರ್ಭದಲ್ಲಿ ಭಾರತ ನೀಡಿದ ನೆರವು ಮತ್ತು ಸಹಕಾರವನ್ನು ಚೆನ್ನಾಗಿ ಬಲ್ಲವರು. ಆ ಕಾರಣದಿಂದಲೇ ರಾಜಕೀಯವಾಗಿ ತಾವು ಬೆಳೆದು ಅಧಿಕಾರ ಹಿಡಿದ ಮೇಲೆ ಭಾರತದೊಂದಿಗೆ ಅವರು ನಿಕಟ ಸಂಬಂಧ ಇರಿಸಿಕೊಳ್ಳಲು ಪ್ರಯತ್ನಿಸಿದರು.
ಬಾಂಗ್ಲಾದೇಶದ ರಚನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದ್ದರಿಂದ ಎರಡು ದೇಶಗಳ ನಡುವಿನ ಆರಂಭಿಕ ಸಂಬಂಧ ಉತ್ತಮವಾಗಿತ್ತಾದರೂ, ಬಾಂಗ್ಲಾದೇಶದಲ್ಲಿ ಸೇನಾ ಆಡಳಿತ ಜಾರಿಗೆ ಬಂದಾಗ ಅದು ಭಾರತದತ್ತ ವಕ್ರದೃಷ್ಟಿಯಿಂದಲೇ ನೋಡಿತು. ಗಡಿವಿವಾದ, ನದಿನೀರು ಹಂಚಿಕೆ ಕುರಿತ ವೈಮನಸ್ಯ ಎರಡು ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತಂದಿತು. ಬಾಂಗ್ಲಾದಲ್ಲಿ ಭಾರತವಿರೋಧಿ ಭಾವನೆ ಬೆಳೆಯಲು ಆಸ್ಪದವಾಯಿತು. ತೊಂಬತ್ತರ ದಶಕದ ಮಧ್ಯಭಾಗದವರೆಗೂ ದ್ವಿಪಕ್ಷೀಯ ಸಂಬಂಧದಲ್ಲಿ ಒಂದು ಬಗೆಯ ಅಸ್ಥಿರತೆ ಇತ್ತು. ಶೇಕ್ ಹಸೀನಾ ಅವರು ಆಡಳಿತದ ಚುಕ್ಕಾಣಿ ಹಿಡಿದ ಬಳಿಕ, ಎರಡು ದೇಶಗಳ ನಡುವೆ ಮಾತುಕತೆಗಳು ನಡೆದು, ನೀರುಹಂಚಿಕೆಯ ಒಪ್ಪಂದವಾಗಿ, ಸಂಬಂಧ ನಿಕಟವಾಯಿತು.
ನಾಲ್ಕನೆಯ ಅವಧಿಗೆ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡಿರುವ ಶೇಕ್ ಹಸೀನಾ ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಭಾರತದ ಕುರಿತು ಆಪ್ತವಾಗಿ ಮಾತನಾಡಿದರು. ಹಲವು ಸಮಸ್ಯೆಗಳು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಇವೆಯಾದರೂ ‘ಭಾರತವು ಬಾಂಗ್ಲಾದೇಶದ ಮಹಾನ್ ಸ್ನೇಹಿತ’ ಎಂಬುದನ್ನು ಪುನರುಚ್ಚರಿಸಿದರು. ೧೯೭೧ ಮತ್ತು ೧೯೭೫ರಲ್ಲಿ ಬಾಂಗ್ಲಾದೇಶದ ಪರ ಭಾರತ ಬಲವಾಗಿ ನಿಂತಿತ್ತು. ‘ನನಗೆ, ನನ್ನ ಸಹೋದರಿಯರು ಮತ್ತು ಕುಟುಂಬಸ್ಥರಿಗೆ ಸಂಕಷ್ಟದ ಸಮಯದಲ್ಲಿ ಭಾರತ ಆಶ್ರಯ ನೀಡಿತು’ ಎಂಬ ಮಾತನ್ನು ಹಸೀನಾ ಅವರು ತಾವು ಆರು ವರ್ಷ ಭಾರತದಲ್ಲಿ ಕಳೆಯಬೇಕಾಗಿ ಬಂದ ದಿನಗಳನ್ನು ನೆನಪು ಮಾಡಿಕೊಳ್ಳುತ್ತ ಆಡಿದ್ದಿರಬೇಕು.
ಹೌದು. ಅದು ನಿಜಕ್ಕೂ ಶೇಕ್ ಹಸೀನಾ ಅವರ ಬದುಕಿನ ಸಂಕಷ್ಟದ ದಿನಗಳು. ೧೯೭೫ರ ಆಗಸ್ಟ್ ತಿಂಗಳಿನಲ್ಲಿ ಶೇಕ್ ಮುಜೀಬುರ್ ರೆಹಮಾನ್ ಅವರ ಕುಟುಂಬದ ಮೇಲೆ ಬಾಂಗ್ಲಾದ ಸೇನೆ ದಾಳಿ ಮಾಡಿತು. ಶೇಕ್ ಮುಜೀಬುರ್ ರೆಹಮಾನ್, ಅವರ ಪತ್ನಿ, ಮೂವರು ಗಂಡುಮಕ್ಕಳು, ಸೊಸೆಯಂದಿರು ಹಾಗೂ ಅವರ ಸಿಬ್ಬಂದಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಅದೃಷ್ಟವಶಾತ್ ಪುತ್ರಿಯರಾದ ಹಸೀನಾ ಮತ್ತು ರೆಹಾನಾ ಅವರು ಆ ಸಂದರ್ಭದಲ್ಲಿ ಅಲ್ಲಿ ಇರದ ಕಾರಣ ಪ್ರಾಣಾಪಾಯದಿಂದ ಪಾರಾದರು. ಭಾರತ ಹಸೀನಾ ಮತ್ತು ಸಹೋದರಿಗೆ ಆಶ್ರಯ ನೀಡಿತ್ತು.
ಅದನ್ನು ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾದಾಗ ಮರೆಯಲಿಲ್ಲ. ಭಾರತದೊಂದಿಗಿನ ಉತ್ತಮ ಸಂಬಂಧ ಬಾಂಗ್ಲಾದ ಏಳಿಗೆಯ ದೃಷ್ಟಿಯಿಂದ ಮುಖ್ಯ ಎಂಬುದನ್ನು ಹಸೀನಾ ಮನಗಂಡರು. ಹಾಗಾಗಿ ಹಸೀನಾ ಅವರ ಅವಧಿಯಲ್ಲಿ ಬಾಂಗ್ಲಾದೇಶದ ವಿದೇಶಾಂಗ ನೀತಿ ಭಾರತಕೇಂದ್ರಿತವಾಗಿ ರೂಪಗೊಂಡಿತು.
ಈ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹಸೀನಾ ಅವರು ತಮ್ಮ ಸರ್ಕಾರದ ಆದ್ಯತೆಯ ಬಗ್ಗೆ ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಆರ್ಥಿಕತೆಗೆ ಶಕ್ತಿ ತುಂಬುವತ್ತ ಗಮನಹರಿಸಲಿದೆ, ೨೦೩೧ರ ಹೊತ್ತಿಗೆ ಉನ್ನತ ಮಧ್ಯಮ ಆದಾಯ ಸ್ಥಿತಿಯನ್ನು ಸಾಧಿಸುವ ಗುರಿಯನ್ನು ಬಾಂಗ್ಲಾ ಹೊಂದಿದೆ ಎಂದು ಹಸೀನಾ ಹೇಳಿದರು. ಮೂರನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪಗೊಳ್ಳುತ್ತಿರುವ ಭಾರತದ ಜೊತೆಜೊತೆಗೆ ತಾನು ಹೆಜ್ಜೆ ಹಾಕಿದರೆ ತನ್ನ ಗುರಿಯನ್ನು ತಲಪುವುದು ಸಾಧ್ಯ ಎಂದು ಅವರು ಭಾವಿಸಿರಲಿಕ್ಕೆ ಸಾಕು. ಬಾಂಗ್ಲಾದೇಶದ ಬಗಲಿಗೆ ನಾವು ನಿಲ್ಲುವುದು ಭಾರತದ ಹಿತಾಸಕ್ತಿಯ ದೃಷ್ಟಿಯಿಂದಲೂ ಮುಖ್ಯವೇ.
ಇಂಡೋ ಪೆಸಿಫಿಕ್ ಪ್ರಾಂತದಲ್ಲಿ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುವತ್ತ ಗಮನಹರಿಸಿರುವುದು ಗುಟ್ಟಾಗಿ ಉಳಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ ಹಣಹೂಡಿಕೆ ಮಾಡಿದೆ. ೧೨ ಹೆದ್ದಾರಿಗಳು, ೨೧ ಸೇತುವೆಗಳು ಹಾಗೂ ೨೭ ವಿದ್ಯುತ್ ಮತ್ತು ಇಂಧನ ಯೋಜನೆಗಳು ಚೀನಾದ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿವೆ. ಹಣವನ್ನು ಸಾಲದ ರೂಪದಲ್ಲಿ ನೀಡಿ, ಅಗತ್ಯವೋ ಅನಗತ್ಯವೋ ರಸ್ತೆ, ಬಂದರು, ವಿಮಾನನಿಲ್ದಾಣ, ಕ್ರೀಡಾಂಗಣಗಳನ್ನು ನಿರ್ಮಿಸಿ ಸಾಲದ ಪ್ರಪಾತಕ್ಕೆ ಕೆಡವಿ ತನ್ನ ಪರ ಹಿಡಿದಿಟ್ಟುಕೊಳ್ಳುವುದು ಚೀನಾ ಹಲವು ದೇಶಗಳ ವಿಷಯದಲ್ಲಿ ಪ್ರಯೋಗಿಸಿರುವ ತಂತ್ರ.
ಬಾಂಗ್ಲಾದೇಶವನ್ನು ಭಾರತದ ಪರವಾಗಿಯೇ ಉಳಿಸಿಕೊಳ್ಳುವ ಪ್ರಯತ್ನವನ್ನು ಭಾರತ ಕೂಡ ಬಿಟ್ಟಿಲ್ಲ. ಕಳೆದ ವರ್ಷ ಜಿ-೨೦ರ ಶೃಂಗಸಭೆ ದೆಹಲಿಯಲ್ಲಿ ನಡೆದಾಗ, ಆ ಶೃಂಗಸಭೆಗೆ ಬಾಂಗ್ಲಾದೇಶವನ್ನು ವಿಶೇಷ ಆಹ್ವಾನಿತ ರಾಷ್ಟ್ರವನ್ನಾಗಿ ಭಾರತ ಬರಮಾಡಿಕೊಂಡಿತ್ತು. ವ್ಯಾಪಾರ, ಇಂಧನ, ಮೂಲಸೌಕರ್ಯ, ಸಂಪರ್ಕ, ರಕ್ಷಣೆ, ಭದ್ರತೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜೊತೆಯಾಗಿ ಮುಂದಡಿಯಿಡುವ ಕುರಿತು ಈಗಾಗಾಲೇ ಎರಡೂ ದೇಶಗಳ ನಡುವೆ ಸಹಕಾರ ಒಪ್ಪಂದಗಳು ಆಗಿವೆ. ಅಭಿವೃದ್ಧಿಯ ಕನಸನ್ನು ನನಸು ಮಾಡಿಕೊಳ್ಳಲು ಚೀನಾಕ್ಕಿಂತ ಭಾರತದ ಜೊತೆಗೆ ದೃಢವಾಗಿ ನಿಲ್ಲುವುದು ಅಗತ್ಯ ಎನ್ನುವುದನ್ನು ಬಾಂಗ್ಲಾದೇಶ ಅರಿಯಬೇಕಿದೆ. ಹಸೀನಾ ಅವರ ಪುನರಾಯ್ಕೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರೆ ಅಚ್ಚರಿಯಿಲ್ಲ.
ಭೂತಾನ್
ಬಾಂಗ್ಲಾದೇಶದ ಚುನಾವಣೆಯ ಬೆನ್ನಲ್ಲೇ ಭೂತಾನ್ ಕೂಡ ಜನಮತಗಣನೆಗೆ ತೆರೆದುಕೊಂಡಿತು. ಚೀನಾ ಮತ್ತು ಭಾರತ ಎಂಬ ಪ್ರಬಲ ರಾಷ್ಟ್ರಗಳ ನಡುವಿನಲ್ಲಿರುವ ಈ ಪುಟ್ಟ ರಾಷ್ಟ್ರ, ರಾಜತಾಂತ್ರಿಕ ಮಹತ್ತ್ವವನ್ನು ಹೊಂದಿದೆ. ಭೂತಾನ್ಗೆ ಸೇರಿದ ಗಡಿಭಾಗದಲ್ಲಿ ಯಥಾಪ್ರಕಾರ ತನ್ನ ಗಡಿ ವಿಸ್ತರಣಾ ಕಾರ್ಯ ನಡೆಸಿರುವ ಚೀನಾ, ಅಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿದೆ.
ಭೂತಾನ್ ಮತ್ತು ಭಾರತದ ನಡುವಿನ ಸಂಬಂಧ ಬಹಳ ಹಳೆಯದು. ಭೂತಾನ್ ಮತ್ತು ಚೀನಾದ ನಡುವೆ ಮಾತುಕತೆ ಆರಂಭವಾದದ್ದು ಬಹಳ ಇತ್ತೀಚೆಗೆ. ೧೯೭೦ರವರೆಗೂ ಭೂತಾನ್ನ ಎಲ್ಲ ಕಳವಳ ಮತ್ತು ಆಕ್ಷೇಪಗಳನ್ನು ಚೀನಾಕ್ಕೆ ಮುಟ್ಟಿಸುವ ಕೆಲಸವನ್ನು ಭಾರತ ಮಾಡುತ್ತಿತ್ತು. ೧೯೭೧ರಲ್ಲಿ ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ ಭೂತಾನ್ ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸಿಕೊಂಡಿತು.
ಭೂತಾನ್ ಈ ಮಧ್ಯೆ ಕೊಂಚ ಚೀನಾದ ಕಡೆಗೆ ವಾಲಿತ್ತು. ೨೦೧೮ ರಿಂದ ೨೦೨೩ರವರೆಗೆ ಅಧಿಕಾರದಲ್ಲಿದ್ದ ಲೋಟೇ ಶೇರಿಂಗ್ ಅವರನ್ನು ‘ಚೀನಾದ ಪರ’ ಎಂದು ಕರೆಯಲಾಗಿತ್ತು. ಅವರು ತೆಗೆದುಕೊಂಡ ಕೆಲವು ನಿರ್ಣಯಗಳು ಹಾಗಿದ್ದವು. ಭೂತಾನ್ ಪರ ಭಾರತದ ಸೇನೆ ಡೋಕ್ಲಾಮ್ನಲ್ಲಿ ಚೀನಾಕ್ಕೆ ಎದೆಯೊಡ್ಡಿ ನಿಂತು ಗಡಿಯನ್ನು ರಕ್ಷಿಸಿದ್ದರೂ, ಲೋಟೇ ಚೀನಾದ ಜೊತೆ ಮಾತುಕತೆಗೆ ಮುಂದಾಗಿದ್ದು ಮತ್ತು ಗಡಿವಿಷಯವನ್ನು ಬಗೆಹರಿಸಿಕೊಳ್ಳುವ ಒಪ್ಪಂದ ಮಾಡಿಕೊಂಡದ್ದು ಭಾರತಕ್ಕೆ ಮುಜುಗರ ಉಂಟುಮಾಡಿತ್ತು.
ಈ ಚುನಾವಣೆಯಲ್ಲಿ ಷೆರಿಂಗ್ ಟೊಬ್ಗೇ ಗೆದ್ದಿದ್ದಾರೆ. ಈ ಹಿಂದೆ ೨೦೧೩-೧೮ರ ಅವಧಿಯಲ್ಲಿ ಟೊಬ್ಗೇ ಭೂತಾನ್ ಸರ್ಕಾರದ ಚುಕ್ಕಾಣಿ ಹಿಡಿದಿದ್ದರು. ಈಗ ಮತ್ತೊಮ್ಮೆ ಅವರಿಗೆ ಪ್ರಧಾನಿಯಾಗುವ ಅವಕಾಶ ಲಭಿಸಿದೆ. ಈ ಹಿಂದೆ ಅವರು ಭೂತಾನ್ ಪ್ರಧಾನಿಯಾಗಿದ್ದಾಗ ೨೦೧೫ರಲ್ಲಿ ‘ವೈಬ್ರಂಟ್ ಗುಜರಾತ್’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಟೋಬ್ಗೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಲಿತವರು ಮತ್ತು ಅನಂತರ ಹಾರ್ವರ್ಡ್ ಕೆನೆಡಿ ಶಾಲೆಯಲ್ಲಿ ಸಾರ್ವಜನಿಕ ನೀತಿಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ನಾಗರಿಕ ಸೇವೆಯ ಮೂಲಕ ವೃತ್ತಿ ಆರಂಭಿಸಿದವರು. ಭೂತಾನ್ ರಾಜಪ್ರಭುತ್ವದಿಂದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಗೊಂಡ ಬಳಿಕ ರಾಜಕೀಯದಲ್ಲಿ ನೆಲೆ ಕಂಡುಕೊಂಡರು.
ಈ ಬಾರಿಯ ಭೂತಾನ್ ಚುನಾವಣೆಯಲ್ಲಿ ಆರ್ಥಿಕತೆ ಪ್ರಮುಖ ವಿಷಯವಾಗಿತ್ತು. ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಭೂತಾನ್ ಆರ್ಥಿಕತೆ, ಕೊರೋನಾ ಕಾರಣದಿಂದ ಹೊಡೆತ ತಿಂದಿತ್ತು. ಈಗ ಅದು ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಭೂತಾನ್ನ ಶಕ್ತಿ ಎಂದರೆ, ಅಲ್ಲಿನ ಜನಸಂಖ್ಯೆಯ ಅರ್ಧದಷ್ಟು ಜನ ೩೦ರ ವಯೋಮಾನದ ಕೆಳಗಿದ್ದಾರೆ. ಹಾಗಾಗಿ ಭೂತಾನ್ ಯುವರಾಷ್ಟ್ರ ಎಂದು ಕರೆಸಿಕೊಂಡಿದೆ. ಆದರೆ ನಿರುದ್ಯೋಗ ಪ್ರಮಾಣ ಶೇಕಡ ೨೯ರಷ್ಟಿದೆ. ಆರ್ಥಿಕತೆಯನ್ನು ಮೇಲೆತ್ತುವ, ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಸುವ ಜವಾಬ್ದಾರಿ ಟೋಬ್ಗೆ ಅವರ ಮೇಲಿದೆ.
ಟೋಬ್ಗೆ ಭಾರತ ಸರ್ಕಾರ ಮತ್ತು ಭಾರತದ ಉದ್ಯಮಿಗಳೊಂದಿಗೆ ಉತ್ತಮ ಸ್ನೇಹ ಹೊಂದಿರುವ ನಾಯಕ. ಭಾರತದ ಉದ್ಯಮಿಗಳು ಭೂತಾನ್ನಲ್ಲಿ ಹೂಡಿಕೆ ಮಾಡಬೇಕು ಎಂದು ಅವರು ಎದುರುನೋಡುತ್ತಿದ್ದಾರೆ. ಅದು ಭಾರತದ ಹಿತಾಸಕ್ತಿಗೆ ಪೂರಕವಾಗಿದೆ. ಭೂತಾನ್ನ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರತ ಈಗಾಗಲೇ ಹಣ ಹೂಡಿಕೆ ಮಾಡಿದೆ. ಭೂತಾನ್ ಜಲವಿದ್ಯುತ್ ಉತ್ಪಾದಕ ರಾಷ್ಟ್ರ ಮತ್ತು ಭಾರತವನ್ನು ಅದು ಗ್ರಾಹಕ ದೇಶವನ್ನಾಗಿ ನೋಡುತ್ತಿದೆ. ಈ ನಿಟ್ಟಿನಲ್ಲೂ ಭಾರತ-ಭೂತಾನ್ ಸಖ್ಯ ಗಟ್ಟಿಗೊಳ್ಳುವ ಸಾಧ್ಯತೆ ಇದೆ.
೨೦೧೭ರಲ್ಲಿ ಚೀನಾದ ಎದುರು ಭಾರತದ ಸೇನೆ ಎದೆಸೆಟೆಸಿ ನಿಂತು ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ನಿಮಗೆ ನೆನಪಿರಬಹುದು. ೨೦೨೦ರಲ್ಲಿ ಲಡಾಖ್ನಲ್ಲಿ ಉಭಯ ದೇಶಗಳ ಸೈನಿಕರು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಭಾರತದ ಈಶಾನ್ಯ ರಾಜ್ಯಗಳನ್ನು ಮುಖ್ಯ ಭೂಪ್ರದೇಶದೊಂದಿಗೆ ಜೋಡಿಸಿರುವ ಸಿಲಿಗುರಿ ಕಾರಿಡಾರ್ (ಚಿಕನ್ ನೆಕ್) ಮೇಲೆ ಚೀನಾ ಕಣ್ಣಿಟ್ಟಿದೆ. ಭೂತಾನ್ ತನ್ನ ಪರವಾದರೆ ಅಲ್ಲಿ ಸೇನಾ ನೆಲೆ ಸ್ಥಾಪಿಸಿ ಭಾರತದ ಮೇಲೆ ಒತ್ತಡ ಹೇರಬಹುದು ಎಂಬ ಯೋಚನೆ ಚೀನಾದ್ದು. ಹೀಗಾಗಿಯೇ ಅದು ಭೂತಾನ್ ಗಡಿಪ್ರದೇಶಗಳ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಸದ್ಯದಮಟ್ಟಿಗೆ ಭೂತಾನ್ ದೊರೆ ಭಾರತದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ನೂತನ ಪ್ರಧಾನಿಯ ಆದ್ಯತೆಯೂ ಭಾರತವೇ ಆಗಿರುವುದರಿಂದ ಚೀನಾ ನಿರಾಶೆಗೊಂಡಿರಲಿಕ್ಕೆ ಸಾಕು.
ತೈವಾನ್
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಮತ್ತೊಂದು ದೊಡ್ಡ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಹುದೇ ಎಂಬ ಪ್ರಶ್ನೆಗೆ ಕಾರಣವಾಗಿರುವ ದೇಶ ಎಂದರೆ ಅದು ತೈವಾನ್. ಈ ವರ್ಷದ ಆರಂಭದಲ್ಲಿ ತೈವಾನ್ನಲ್ಲಿ ಚುನಾವಣೆ ನಡೆಯಿತು ಮತ್ತು ಭಾವೀ ಅಧ್ಯಕ್ಷರನ್ನು ಅಲ್ಲಿನ ಜನ ಆರಿಸಿದರು.
ತೈವಾನ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಟ್ಟಿಲ್ಲ. ಕಾರಣ ತೈವಾನ್ ಅನ್ನು ಒಂದು ದೇಶವಾಗಿ ಭಾರತ ಗುರುತಿಸುವುದಿಲ್ಲ. ಭೂತಾನ್ ಮತ್ತು ಬಾಂಗ್ಲಾದೇಶದಲ್ಲಿ ಚುನಾವಣೆಯನ್ನು ಗೆದ್ದ ನಾಯಕರನ್ನು ಭಾರತ ಅಭಿನಂದಿಸಿತಾದರೂ ತೈವಾನ್ ಚುನಾವಣೆಯ ವಿಷಯದಲ್ಲಿ ಬೇರೆಯದೇ ರೀತಿ ಪ್ರತಿಕ್ರಿಯಿಸಿತು. ‘ತೈವಾನ್ನ ಇತ್ತೀಚಿನ ಬೆಳವಣಿಗೆಯನ್ನು ಭಾರತ ಗಮನಿಸಿದೆ. ತೈವಾನ್ ಮತ್ತು ಭಾರತದ ಜನರ ನಡುವೆ ಉತ್ತಮ ಸಂಬಂಧವಿದೆ. ಸಾಂಸ್ಕೃತಿಕ, ಶೈಕ್ಷಣಿಕ, ವ್ಯಾಪಾರ ಸೇರಿದಂತೆ ಹಲವು ಸ್ತರದಲ್ಲಿ ನಮ್ಮ ಸಂಬಂಧ ಬೆಳೆದಿದೆ ಮತ್ತು ಅದು ಮುಂದುವರಿಯಲಿದೆ’ ಎಂದು ವಿದೇಶಾಂಗ ಇಲಾಖೆ ಪ್ರಕಟಣೆ ಹೊರಡಿಸಿತು.
ಇತ್ತೀಚಿನ ವರ್ಷಗಳಲ್ಲಿ ನಾವು ‘ಒಂದು ಚೀನಾ’ ಧೋರಣೆಯ ಬಗ್ಗೆ ಬಹಿರಂಗವಾಗಿ ಏನೂ ಹೇಳಿಲ್ಲವಾದರೂ, ಈ ಹಿಂದೆ ಭಾರತ ‘ಒಂದು ಚೀನಾ’ ನೀತಿಯನ್ನು ಅನುಮೋದಿಸಿತ್ತು ಮತ್ತು ತೈವಾನ್ ಚೀನಾದ ಭಾಗ ಎಂದು ಒಪ್ಪಿಕೊಂಡಿತ್ತು. ಆದರೆ ಬದಲಾದ ಸಂದರ್ಭದಲ್ಲಿ ಚೀನಾ ಭಾರತದ ಕಾಶ್ಮೀರದ ಕುರಿತು ಮಾತನಾಡಬಹುದಾದರೆ, ಗಡಿತಂಟೆಯ ಮೂಲಕ ಭಾರತವನ್ನು ಕೆಣಕಬಹುದಾದರೆ, ಭಾರತ ‘ಒಂದು ಚೀನಾ’ ಧೋರಣೆಯಿಂದ ಹಿಂದೆಸರಿದು ತೈವಾನ್ಅನ್ನು ಗುರುತಿಸಬಾರದೇಕೆ ಎಂಬ ಅನಿಸಿಕೆಗಳೂ ಚಿಂತಕರ ಚಾವಡಿಯಲ್ಲಿ ಕೇಳಿಬರುತ್ತಿವೆ.
ಈಗಾಗಲೇ ತೈವಾನ್ ವಿಷಯವಾಗಿ ಚೀನಾ ಮತ್ತು ಅಮೆರಿಕದ ನಡುವೆ ಸಂಬಂಧ ಹಳಸಿದೆ. ಈ ಹಿಂದೆ ಅಮೆರಿಕದ ಸಂಸತ್ತಿನ ಸಭಾಪತಿ ನ್ಯಾನ್ಸಿ ಫೆಲೋಸಿ ಅವರು ಸಂಸದೀಯ ನಿಯೋಗದೊಂದಿಗೆ ತೈವಾನಿಗೆ ಭೇಟಿಯಿತ್ತಾಗ ಚೀನಾ ವ್ಯಗ್ರಗೊಂಡಿತ್ತು. ಆ ಬಳಿಕ ತೈವಾನ್ ದೇಶವನ್ನು ಸುತ್ತುವರಿದು ಸಮರಾಭ್ಯಾಸ ನಡೆಸಿ ಅಮೆರಿಕಕ್ಕೆ ಸಂದೇಶ ರವಾನಿಸುವ ಕೆಲಸ ಮಾಡಿತ್ತು.
ಇದೀಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಲಾಯ್ ಚಿಂಗ್ ದು, ತೈವಾನ್ ಸಾರ್ವಭೌಮತ್ವದ ಪ್ರತಿಪಾದಕರಾಗಿರುವುದರಿಂದ ಚೀನಾ ಮತ್ತು ತೈವಾನ್ ನಡುವಿನ ತಿಕ್ಕಾಟ ಹೆಚ್ಚಬಹುದು ಎನ್ನಲಾಗುತ್ತಿದೆ. ೨೦೨೪ರಲ್ಲಿ ತೈವಾನ್ ವಶಪಡಿಸಿಕೊಳ್ಳುವ ಸಾಹಸವನ್ನು ಚೀನಾ ಮಾಡಲಾರದು. ಆದರೆ ತೈವಾನ್ ಚೀನಾದ ಆಡಳಿತಕ್ಕೆ ಒಳಪಡುವಂತೆ ಮಾಡುವುದು ಅದರ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಮುಂದಾದರೆ ಅದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಬಹುದು. ಅಮೆರಿಕ ತೈವಾನ್ ಬೆಂಬಲಕ್ಕೆ ನಿಂತರೆ ಆ ಸಂಘರ್ಷ ಯುದ್ಧದ ಸ್ವರೂಪ ಪಡೆದುಕೊಳ್ಳಬಹುದು. ಪ್ರಾದೇಶಿಕ ಅಸ್ಥಿರತೆಗೆ ನಾಂದಿ ಹಾಡಬಹುದು. ಆಗ ‘ಒಂದು ಚೀನಾ’ ನೀತಿಯ ಕುರಿತು ಭಾರತ ಮರುಯೋಚಿಸುವ ಸಂದರ್ಭ ಬರಬಹುದು.
ಮಾಲ್ಡೀವ್ಸ್
ಒಂದು ದೇಶದ ಆಡಳಿತದ ಚುಕ್ಕಾಣಿ ಕೈ ಬದಲಾದರೆ, ಶೀಘ್ರವೇ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದಕ್ಕೆ ತಾಜಾ ಉದಾಹರಣೆ ಎಂದರೆ ಅದು ಮಾಲ್ಡೀವ್ಸ್. ಕಳೆದ ವರ್ಷ ಮಾಲ್ಡೀವ್ಸ್ ನೂತನ ಅಧ್ಯಕ್ಷರನ್ನು ಆರಿಸಿಕೊಂಡಿತು. ಸಾಮಾನ್ಯವಾಗಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮೊದಲಿಗೆ ಭಾರತಕ್ಕೆ ಭೇಟಿ ನೀಡುವ ಅಲಿಖಿತ ಸಂಪ್ರದಾಯ ಜಾರಿಯಲ್ಲಿತ್ತು. ಆದರೆ ಮೊಹಮ್ಮದ್ ಮುಯಿಝ್ ಭಾರತಕ್ಕೆ ಭೇಟಿ ನೀಡಲಿಲ್ಲ. ಬದಲಾಗಿ ಟರ್ಕಿಗೆ ಮೊದಲು ಭೇಟಿಯಿತ್ತರು. ಅನಂತರ ಯುಎಇಗೆ ಹೋಗಿ ಬಂದರು. ಚೀನಾಕ್ಕೂ ಐದು ದಿನಗಳ ಭೇಟಿಯಿತ್ತರು. ವ್ಯಾಪಾರ, ಅಭಿವೃದ್ಧಿ ಮತ್ತು ಸಾಮಾಜಿಕ ಆರ್ಥಿಕ ಸಹಕಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಮಾಲ್ಡೀವ್ಸ್ ನಡುವೆ ಒಪ್ಪಂದಗಳು ಆದವು.
ಬಹಳ ಇತ್ತೀಚಿನವರೆಗೆ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸೌಹಾರ್ದಯುತ ಸಂಬಂಧವಿತ್ತು. ೨೦೧೩ರಿಂದ ೨೦೧೮ರ ವರೆಗಿನ ಅಬ್ದುಲ್ಲಾ ಯಮೀನ್ ಅವರ ಅವಧಿಯಲ್ಲಿ ಚೀನಾದ ಜೊತೆ ನಿಕಟವಾಗಿ ಗುರುತಿಸಿಕೊಳ್ಳುವ ಹೆಜ್ಜೆಯನ್ನು ಮಾಲ್ಡೀವ್ಸ್ ಆಡಳಿತ ಇಟ್ಟಿತು. ಈ ಅವಧಿಯಲ್ಲಿ ಮಾಲ್ಡೀವ್ಸ್ ಚೀನಾದ ‘ಬೆಲ್ಟ್ ಅಂಡ್ ರೋಡ್’ ಯೋಜನೆಯ ಭಾಗವಾಯಿತು.
೨೦೧೮ರಿಂದ ೨೦೨೩ರ ವರೆಗೆ ಮಾಲ್ಡೀವ್ಸ್ ನೇತೃತ್ವ ವಹಿಸಿದ ಇಬ್ರಾಹಿಂ ಮೊಹಮದ್ ಸೋಲಿಹ್ ಅವರ ಅವಧಿಯಲ್ಲಿ ಭಾರತದೊಂದಿಗೆ ಮಾಲ್ಡೀವ್ಸ್ ಸಖ್ಯ ಮತ್ತೊಮ್ಮೆ ಕುದುರಿತು. ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಮಾಲ್ಡೀವ್ಸ್ ಮತ್ತೊಮ್ಮೆ ‘ಭಾರತ ಮೊದಲು’ ಎಂದಿತು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸೇನೆಯ ಹಂತದ ಸಾಮೀಪ್ಯ ಚೀನಾವನ್ನು ಕಳವಳಕ್ಕೆ ಈಡುಮಾಡಿತು. ಚೀನಾದ ಪೋಷಣೆಯಿಂದ ಮಾಲ್ಡೀವ್ಸ್ ಪ್ರತಿಪಕ್ಷಗಳು ‘ಇಂಡಿಯಾ ಔಟ್’ ಅಭಿಯಾನ ರೂಪಿಸಿದವು. ಮಾಲ್ಡೀವ್ಸ್ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದವು. ೨೦೨೧ರಲ್ಲಿ ರಾಷ್ಟ್ರೀಯ ರಕ್ಷಣಾ ದಳದ ಕೋಸ್ಟ್ ಗಾರ್ಡ್ ಬಂದರನ್ನು ಭಾರತ ಮತ್ತು ಮಾಲ್ಡೀವ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸುವ ಕುರಿತು ಯುಟಿಎಫ್ ಒಪ್ಪಂದ ಏರ್ಪಟ್ಟಾಗ ಈ ಅಭಿಯಾನ ತಾರಕಕ್ಕೇರಿತು. ೨೦೨೩ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ವಿಷಯ ಮುಖ್ಯ ಚುನಾವಣಾ ವಿಷಯವಾಗಿ ಮಾರ್ಪಟ್ಟಿತು.
ಇದೀಗ ಮಾಲ್ಡೀವ್ಸ್ ಅಧ್ಯಕ್ಷರು, ಭಾರತೀಯ ಪಡೆಗಳನ್ನು ಮಾಲ್ಡೀವ್ಸ್ನಿಂದ ಹೊರಹಾಕಲು ದಿನಾಂಕ ನಿಗದಿಮಾಡಿದ್ದಾರೆ. ಪ್ರವಾಸೋದ್ಯಮವನ್ನೇ ಬಹುವಾಗಿ ನೆಚ್ಚಿಕೊಂಡಿರುವ ಮಾಲ್ಡೀವ್ಸ್ಗೆ ಆಘಾತ ನೀಡಲು ಭಾರತವೂ ತಂತ್ರಗಾರಿಕೆ ರೂಪಿಸಿ ಹೆಜ್ಜೆಯಿಟ್ಟಿದೆ. ಸದ್ಯದಮಟ್ಟಿಗೆ ಭಾರತ-ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿರುವುದು ಚೀನಾಕ್ಕೆ ಖುಷಿತಂದಿದೆ. ಚೀನಾವನ್ನು ಅತಿಯಾಗಿ ನೆಚ್ಚಿಕೊಂಡರೆ ಏನಾದೀತು ಎಂದು ಮಾಲ್ಡೀವ್ಸ್ ಪಾಠ ಕಲಿಯುವುದು ಬಾಕಿಯಿದೆ.
ಶ್ರೀಲಂಕಾ
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿಕ್ಕಿದೆ. ಪ್ರಸ್ತುತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ನಾಯಕತ್ವದಲ್ಲಿ ಶ್ರೀಲಂಕಾ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಪ್ರವಾಸೋದ್ಯಮವನ್ನೇ ಅತಿಯಾಗಿ ನೆಚ್ಚಿಕೊಂಡಿದ್ದ ಶ್ರೀಲಂಕಾಕ್ಕೆ ಕೊರೋನಾ ಬಹಳ ಪ್ರಬಲ ಹೊಡೆತವನ್ನೇ ನೀಡಿತ್ತು.
ರಾಜಪಕ್ಸೆ ಸಹೋದರರು ಅಧ್ಯಕ್ಷ ಮತ್ತು ಪ್ರಧಾನಿ ಸ್ಥಾನದಲ್ಲಿ ಕೂತು ಶೀಲಂಕಾದ ಆಡಳಿತವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದರು. ಜನಪ್ರಿಯ ಯೋಜನೆಗಳನ್ನು ಘೋಷಿಸಿ, ಅದಕ್ಕೆ ಚೀನಾದಿಂದ ಹಣ ತಂದರು. ಸಾಲದ ಮರುಪಾವತಿ ಸಾಧ್ಯವಾಗದಿದ್ದಾಗ ಚೀನಾ ಆಯಕಟ್ಟಿನ ಜಾಗಗಳನ್ನು ಕ್ರಯಕ್ಕೆ ಪಡೆದು ತನ್ನ ಸೇನಾ ನೆಲೆ ಸ್ಥಾಪಿಸಲು ಮುಂದಾಯಿತು. ದಕ್ಷಿಣ ಶ್ರೀಲಂಕಾದ ಹಂಬನತೋಟ ಬಂದರನ್ನು ಅಭಿವೃದ್ಧಿಪಡಿಸಲು ಹಣಹೂಡಿ, ೯೯ ವರ್ಷಗಳ ಕ್ರಯಕ್ಕೆ ಪಡೆದುಕೊಳ್ಳುವ ಒಪ್ಪಂದ ಮಾಡಿಕೊಂಡಿತು. ಕೊಲಂಬೋ ಬಂದರಿನ ಮೇಲೂ ಚೀನಾ ಕಣ್ಣಿಟ್ಟಿತು. ಚೀನಾದ ಯುದ್ಧನೌಕೆಗಳು ಕೊಲಂಬೋ ಬಂದರನ್ನು ತಂಗುದಾಣ ಮಾಡಿಕೊಂಡವು. ಭಾರತದ ಎಚ್ಚರಿಕೆಗೆ ಶ್ರೀಲಂಕಾ ಕಿವಿಗೊಡಲಿಲ್ಲ.
ಚೀನಾದ ಸಖ್ಯದಲ್ಲಿ ಶ್ರೀಲಂಕಾ ಮೈಮರೆಯಿತು. ರಾಜಪಕ್ಸೆ ಸಹೋದರರು ಮುಂಗಾಣ್ಕೆ ಇಲ್ಲದೆ ಯೋಜನೆಗಳನ್ನು ರೂಪಿಸಿದರು. ಹಲವು ವಿಮಾನನಿಲ್ದಾಣಗಳನ್ನು ನಿರ್ಮಿಸಲಾಯಿತಾದರೂ, ವಿಮಾನಗಳು ಬಂದಿಳಿಯಲಿಲ್ಲ. ಜನಪ್ರಿಯ ಯೋಜನೆಗಳಿಂದ ಸಂತಸಪಟ್ಟಿದ್ದ ಜನ, ಕೆಲವು ದಿನಗಳಲ್ಲೇ ಹಣದುಬ್ಬರದಿಂದ ಕಂಗಾಲಾದರು. ಪೆಟ್ರೋಲ್, ಡೀಸೆಲ್ ದುಬಾರಿಯಾಯಿತು. ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವುದೂ ಕಠಿಣವಾಯಿತು. ವಿದೇಶಿ ವಿನಿಮಯ ದಾಸ್ತಾನನ್ನು ಕರಗಿಸಿದ್ದ ಆಡಳಿತ, ಅಗತ್ಯವಸ್ತುಗಳನ್ನು ಆಮದು ಮಾಡಿಕೊಳ್ಳಲೂ ಆಗದೆ ಕೈಚೆಲ್ಲಿತು. ಜನರು ರಸ್ತೆಗೆ ಇಳಿದರು. ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕಿದರು. ಗೋಟಬಯ ರಾಜಪಕ್ಷೆ ದೇಶದಿಂದ ಪಲಾಯನ ಮಾಡಬೇಕಾಗಿ ಬಂತು.
ಕೊನೆಗೆ ಸಂಕಷ್ಟದ ಸಮಯದಲ್ಲಿ ಭಾರತ ಶ್ರೀಲಂಕಾದ ಸಹಾಯಕ್ಕೆ ನಿಂತಿತು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವೂ, ಕೆಲವು ನಿಬಂಧನೆಗಳ ಜೊತೆಗೆ ಬಂತು. ಆಡಳಿತವು ಅನುಭವಿ ವಿಕ್ರಮಸಿಂಘೆ ಅವರ ಕೈಗೆ ಬಂತು ಜನಜೀವನ ನಿಟ್ಟುಸಿರುಬಿಟ್ಟು ಸಹಜಸ್ಥಿತಿಗೆ ಮರಳುವುದು ಸಾಧ್ಯವಾಯಿತು. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಗೆದ್ದು ಯಾರು ಶ್ರೀಲಂಕಾದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕುತೂಹಲವಂತೂ ಜಗತ್ತಿಗಿದೆ.
ಐರೋಪ್ಯ ಒಕ್ಕೂಟ
ಮಾರುಕಟ್ಟೆಯ ದೃಷ್ಟಿಯಿಂದ, ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ದೃಷ್ಟಿಯಿಂದ ಭಾರತ ಮತ್ತು ಚೀನಾದ ಗಮನ ನೆಟ್ಟಿರುವುದು ಐರೋಪ್ಯ ರಾಷ್ಟ್ರಗಳ ಕಡೆಗೆ. ಉಕ್ರೇನ್ ಯುದ್ಧದ ವಿಷಯದಲ್ಲಿ ಪರೋಕ್ಷವಾಗಿ ರಷ್ಯಾವನ್ನು ಚೀನಾ ಬೆಂಬಲಿಸುತ್ತಿದ್ದರೂ, ಅದು ನೇರವಾಗಿ ರಷ್ಯಾದ ಜೊತೆಗೆ ಗುರುತಿಸಿಕೊಂಡಿಲ್ಲ. ಹಾಗೆ ರಷ್ಯಾದ ಜೊತೆಗೆ ನೇರವಾಗಿ ಗುರುತಿಸಿಕೊಂಡರೆ ಐರೋಪ್ಯ ರಾಷ್ಟ್ರಗಳ ಬಾಗಿಲು ತನಗೆ ಮುಚ್ಚಿಹೋಗಬಹುದು, ದಿಗ್ಬಂಧನದ ಕ್ರಮಕ್ಕೆ ತುತ್ತಾಗಬೇಕಾದೀತು ಎಂಬ ಆತಂಕ ಚೀನಾಕ್ಕೆ ಇದೆ.
ವಾಣಿಜ್ಯಿಕ ವ್ಯವಹಾರಗಳನ್ನು ಐರೋಪ್ಯ ರಾಷ್ಟ್ರಗಳಲ್ಲಿ ಇನ್ನಷ್ಟು ವಿಸ್ತರಿಸಬೇಕು ಎಂಬ ಮಹತ್ತ್ವಾಕಾಂಕ್ಷೆ ಭಾರತಕ್ಕೂ ಇದೆ. ಜಿ-೨೦ ಶೃಂಗಸಭೆಯ ವೇಳೆ ಭಾರತ-ಮಧ್ಯಪ್ರಾಚ್ಯ ಮತ್ತು ಯೂರೋಪ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ್ದನ್ನು ನೆನಪು ಮಾಡಿಕೊಳ್ಳಬಹುದು. ಭಾರತ, ಅಮೆರಿಕ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಐರೋಪ್ಯ ಒಕ್ಕೂಟದ ನಾಯಕರು ಈ ಯೋಜನೆಗೆ ಅಂಕಿತ ಹಾಕಿದರು. ರೈಲ್ವೇ ಮತ್ತು ಸಮುದ್ರ ಮಾರ್ಗಗಳ ಮೂಲಕ ಯೂರೋಪ್ ಮತ್ತು ಏಷ್ಯಾದ ರಾಷ್ಟ್ರಗಳಿಗೆ ಸಂಪರ್ಕ ಸುಲಭವಾಗಿಸುವುದು ಈ ಯೋಜನೆಯ ಉದ್ದೇಶ. ಇದು ಚೀನಾದ ‘ಬೆಲ್ಟ್ ಅಂಡ್ ರೋಡ್’ ಯೋಜನೆಗೆ ಪರ್ಯಾಯವಾಗಿ ರೂಪಗೊಂಡಿರುವ ಯೋಜನೆ.
ಈ ಯೋಜನೆ ತ್ವರಿತವಾಗಿ ಅನುಷ್ಠಾನಕ್ಕೆ ಬರಬೇಕಾದರೆ ಐರೋಪ್ಯ ಒಕ್ಕೂಟದ ಚುಕ್ಕಾಣಿ ಯಾರ ಕೈಯಲ್ಲಿ ಇರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿ ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ನಡೆಯುವ ಐರೋಪ್ಯ ಒಕ್ಕೂಟದ ಚುನಾವಣೆ ಮಹತ್ತ್ವ ಪಡೆದುಕೊಂಡಿದೆ.
ಅಷ್ಟಲ್ಲದೇ ಬ್ರೆಕ್ಸಿಟ್ ಮೂಲಕ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಹೋದಮೇಲೆ, ಫ್ರಾನ್ಸ್ ಮತ್ತು ಇತರ ರಾಷ್ಟ್ರಗಳಲ್ಲೂ ಒಕ್ಕೂಟ ತೊರೆಯೋಣ ಎಂಬ ಕೂಗು ಗಟ್ಟಿಯಾಗುತ್ತಿದೆ. ಮುಕ್ತ ಮಾರುಕಟ್ಟೆ, ಹಾಗೂ ವಲಸೆ ನೀತಿಯಲ್ಲಿ ಐರೋಪ್ಯ ಒಕ್ಕೂಟ ಸುಧಾರಣೆ ತರದಿದ್ದರೆ ಸದಸ್ಯ ರಾಷ್ಟ್ರಗಳನ್ನು ಒಕ್ಕೂಟದ ಒಳಗೆ ಹಿಡಿದಿಟ್ಟುಕೊಳ್ಳುವುದು ಕಷ್ಟ, ಆ ದೃಷ್ಟಿಯಿಂದಲೂ ಐರೋಪ್ಯ ಒಕ್ಕೂಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂದು ಜಗತ್ತು ಕುತೂಹಲದಿಂದ ನೋಡುತ್ತಿದೆ.
ರಷ್ಯಾ
ಸೋವಿಯತ್ ಪತನದ ಬಳಿಕ ಅಮೆರಿಕ ಮತ್ತು ಸೋವಿಯತ್ ರಷ್ಯಾದ ನಡುವಿನ ಶೀತಲ ಸಮರ ಮುಕ್ತಾಯಗೊಂಡಿತಾದರೂ, ಪುಟಿನ್ ಅವರು ರಷ್ಯಾದ ಪ್ರಬಲ ನಾಯಕನಾಗಿ ಹೊರಹೊಮ್ಮಿದ ಮೇಲೆ ಅಮೆರಿಕ ಮತ್ತು ರಷ್ಯಾ ನಡುವೆ ತೆರೆಮರೆಯ ಕದನ ಪುನಃ ಆರಂಭಗೊಂಡಿತು.
೨೦೧೬ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಚುನಾವಣಾ ಹಸ್ತಕ್ಷೇಪದ ಕುರಿತು ಹೆಚ್ಚು ಚರ್ಚೆಯಾಯಿತು. ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಲು ಅವರ ವಿರುದ್ಧ ಅಭಿಪ್ರಾಯ ರೂಪಿಸುವ ಕೆಲಸದಲ್ಲಿ ರಷ್ಯಾ ತೊಡಗಿದೆ ಎನ್ನಲಾಯಿತು. ಡೊನಾಲ್ಡ್ ಟ್ರಂಪ್ ಮತ್ತು ಪುಟಿನ್ ನಡುವಿನ ಗೆಳೆತನದ ವಿಷಯ ಚರ್ಚೆಗೆ ಬಂದಿತು. ೨೦೨೦ರಲ್ಲಿ ಟ್ರಂಪ್ ಸೋತು ಬೈಡೆನ್ ಅಧ್ಯಕ್ಷರಾದ ಬಳಿಕ ಉಕ್ರೇನನ್ನು ನ್ಯಾಟೋದ ಭಾಗವಾಗಿಸಿಕೊಂಡು ರಷ್ಯಾದ ಗಡಿಯವರೆಗೆ ಪ್ರಭಾವ ವಿಸ್ತರಿಸಿಕೊಳ್ಳುವ ಅಮೆರಿಕದ ಪ್ರಯತ್ನ ಉಕ್ರೇನ್ ಯುದ್ಧಕ್ಕೆ ಕಾರಣವಾಯಿತು.
ಉಕ್ರೇನ್ ಯುದ್ಧ ಚಾಲ್ತಿಯಲ್ಲಿರುವಾಗಲೇ, ರಷ್ಯಾದ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದು ಆ ಕುರಿತ ಕುತೂಹಲವನ್ನು ಹೆಚ್ಚಿಸಿದೆ. ಸದ್ಯದ ಮಟ್ಟಿಗೆ ಪುಟಿನ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಇದ್ದಂತೆ ಕಾಣುತ್ತಿಲ್ಲ. ವ್ಯಾಗ್ನರ್ ಪಡೆಯ ದಂಗೆ ಪುಟಿನ್ ಅವರಲ್ಲಿ ಸಣ್ಣ ಆತಂಕ ಸೃಷ್ಟಿಸಿದ್ದಿರಬಹುದು. ಆದರೆ ಪುಟಿನ್ ಆ ದಂಗೆಯನ್ನು ತಮ್ಮದೇ ಶೈಲಿಯಲ್ಲಿ ನಿರ್ವಹಿಸಿ, ವ್ಯಾಗ್ನರ್ ಪಡೆಯ ಮುಖ್ಯಸ್ಥನನ್ನು ಮಟ್ಟಹಾಕುವಲ್ಲಿ ಯಶಸ್ವಿಯಾದರು.
ಉಕ್ರೇನ್ ಯುದ್ಧ ಹೇಗೆ ಅಂತ್ಯವಾದೀತು ಎಂಬ ಚರ್ಚೆ ನಡೆದಾಗ, ಒಂದೊಮ್ಮೆ ರಷ್ಯಾದ ಜನರೇ ಪುಟಿನ್ ವಿರುದ್ಧ ತಿರುಗಿಬಿದ್ದರೆ, ಆಂತರಿಕ ಬಿಕ್ಕಟ್ಟು ಉಂಟಾದರೆ ರಷ್ಯಾ ಮಣಿಯಬಹುದು ಎಂಬ ಸಾಧ್ಯತೆಯನ್ನು ಚರ್ಚಿಸಲಾಗಿತ್ತು. ಆದರೆ ಯುದ್ಧ ಆರಂಭವಾಗಿ ಎರಡು ವರ್ಷ ಆಗುತ್ತಿರುವ ಈ ಸಂದರ್ಭದಲ್ಲಿ ಅಂತಹ ಯಾವುದೇ ಸಾಧ್ಯತೆ ಕಾಣುತ್ತಿಲ್ಲ. ಹಾಗಾಗಿ ಪುಟಿನ್ ಅವರು ರಷ್ಯಾದ ಸರ್ವೋಚ್ಚ ನಾಯಕನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚು.
ಇನ್ನು ಭಾರತದ ದೃಷ್ಟಿಯಿಂದ ನೋಡಿದರೆ, ರಷ್ಯಾ ಮತ್ತು ಭಾರತದ ಸಖ್ಯ ಕಾಲದ ಪರೀಕ್ಷೆಗೆ ಒಳಪಟ್ಟಿರುವಂತಹದು. ಏಷ್ಯಾದಲ್ಲಿ ಅಮೆರಿಕ ಮತ್ತು ಚೀನಾದ ಪ್ರಾಬಲ್ಯವನ್ನು ಸರಿದೂಗಿಸಲು ಭಾರತದೊಂದಿಗೆ ಮೈತ್ರಿ ಬೆಳೆಸಲು ಮಾಸ್ಕೋ ಮುಂದಾಯಿತು. ಭಾರತಕ್ಕೂ ಈ ಸ್ನೇಹದ ಅಗತ್ಯವಿತ್ತು. ಸ್ವಾತಂತ್ರ್ಯ ಪಡೆದ ಬಳಿಕ ಅಭಿವೃದ್ಧಿಕೇಂದ್ರಿತ ನವಭಾರತವನ್ನು ಕಟ್ಟಲು ರಷ್ಯಾದ ಸಹಕಾರ ಒದಗಿತ್ತು. ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗಳು, ಅಣೆಕಟ್ಟುಗಳು, ಜಲವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ರಷ್ಯಾದ ಸಲಹೆ ಮತ್ತು ಸಹಭಾಗಿತ್ವ ಇತ್ತು. ರಕ್ಷಣಾ ಉಪಕರಣಗಳ ಸರಬರಾಜು ಕೂಡ ರಷ್ಯಾದಿಂದಲೇ ದೊಡ್ಡಮಟ್ಟದಲ್ಲಿ ಆಯಿತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿ ರಷ್ಯಾ, ಕಾಶ್ಮೀರದ ವಿಷಯದಲ್ಲಿ ಭಾರತದ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಂಡಿತು. ೧೯೭೧ರಲ್ಲಿ ಭಾರತ ಮತ್ತು ರಷ್ಯಾದ ನಡುವೆ ಏರ್ಪಟ್ಟ ‘ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದ’ ಭಾರತಕ್ಕೆ ಹೆಚ್ಚಿನ ಬಲತುಂಬಿತು. ೧೯೫೫ರಲ್ಲಿ ಕಾಶ್ಮೀರದ ಮೇಲಿನ ಭಾರತದ ಹಕ್ಕನ್ನು ಪುನರುಚ್ಚರಿಸುತ್ತಾ ಅಂದಿನ ರಷ್ಯಾ ಅಧ್ಯಕ್ಷ ನಿಖಿತ್ ಕ್ರುಶ್ಚೇವ್ “ನಾವು ಎಷ್ಟು ಹತ್ತಿರದಲ್ಲಿ ಇದ್ದೇವೆ ಎಂದರೆ, ನೀವು ಪರ್ವತದ ತುದಿಗೆ ಏರಿ ಅಲ್ಲಿಂದ ಕೂಗು ಹಾಕಿದರೆ ಸಾಕು, ನಾವು ನಿಮ್ಮ ಬಗಲಿನಲ್ಲಿ ಇರುತ್ತೇವೆ” ಎಂದಿದ್ದರು. ಆ ಮಾತು ರಷ್ಯಾ ಭಾರತದ ಸಹಾಯಕ್ಕೆ ಧಾವಿಸಲಿದೆ ಎಂಬುದರ ದ್ಯೋತಕವಾಗಿತ್ತು.
೧೯೫೭, ೬೨ ಮತ್ತು ೭೧ರಲ್ಲಿ ಕಾಶ್ಮೀರದ ವಿಷಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಗೆ ಬಂದು, ಅಂತರರಾಷ್ಟ್ರೀಯ ಹಸ್ತಕ್ಷೇಪ ಅನಿವಾರ್ಯ ಎಂಬ ನಿರ್ಣಯ ಕೈಗೊಂಡಾಗ ರಷ್ಯಾ ತನ್ನ ವೀಟೋ ಅಧಿಕಾರ ಬಳಸಿ ಆ ನಿರ್ಣಯವನ್ನು ಅನೂರ್ಜಿತಗೊಳಿಸಿತು ಮತ್ತು ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ವಿಷಯ, ಆ ಎರಡು ದೇಶಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿತು. ಅದು ಭಾರತದ ವಾದವೂ ಆಗಿತ್ತು.
೨೦೧೯ರಲ್ಲಿ ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ ೩೭೦ನೆಯ ವಿಧಿಯನ್ನು ರದ್ದುಗೊಳಿಸಿದಾಗ, ಕೆಲವು ದೇಶಗಳು ಭಾರತದ ಕ್ರಮವನ್ನು ಟೀಕಿಸಿದ್ದವು. ಆದರೆ ರಷ್ಯಾ ‘ಇದು ಭಾರತದ ಆಂತರಿಕ ವಿಷಯ’ ಎಂದು ಪ್ರತಿಕ್ರಿಯಿಸಿ ಭಾರತದ ನಿರ್ಣಯವನ್ನು ಪರೋಕ್ಷವಾಗಿ ಬೆಂಬಲಿಸಿತು. ಉಕ್ರೇನ್ ಯುದ್ಧದ ವಿಷಯದಲ್ಲಿ, ಅಮೆರಿಕ ರಷ್ಯಾದ ಮೇಲೆ ಹೇರಿದ ದಿಗ್ಬಂಧನದ ವಿಷಯದಲ್ಲಿ ಭಾರತ ರಷ್ಯಾವನ್ನು ಬಿಟ್ಟುಕೊಡಲಿಲ್ಲ. ಭಾರತದ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ರಷ್ಯಾದ ಜೊತೆ ವಾಣಿಜ್ಯಿಕ ವ್ಯವಹಾರವನ್ನು ಮುಂದುವರಿಸಿತು. ‘ಇದು ಯುದ್ಧದ ಕಾಲವಲ್ಲ’ ಎಂದು ರಷ್ಯಾಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ನೈತಿಕತೆಯನ್ನು ಮೆರೆಯಿತು.
ಪ್ರಸ್ತುತ ರಷ್ಯಾದ ಅಗ್ರನಾಯಕನಾಗಿರುವ ಪುಟಿನ್ ಕೂಡ ಭಾರತದ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿದ್ದಾರೆ ಎಂಬುದು ಅವರ ಇತ್ತೀಚಿನ ಮಾತುಗಳಲ್ಲಿ ವ್ಯಕ್ತವಾಗಿದೆ. ‘ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಹಾಲಿ ಪ್ರಧಾನಿಯ ನಾಯಕತ್ವ ಗುಣ ಅದಕ್ಕೆ ಒಂದು ಕಾರಣ’ ಎಂದಿದ್ದಾರೆ. ಹಾಗಾಗಿ ರಷ್ಯಾ ಮತ್ತು ಭಾರತದ ನಡುವಿನ ಸ್ನೇಹ ಮತ್ತು ಸಂಬಂಧದ ಮೇಲೆ ರಷ್ಯಾದ ಅಧ್ಯಕ್ಷೀಯ ಚುನಾವಣೆ ಹೆಚ್ಚಿನ ಪರಿಣಾಮವನ್ನು ಬೀರಲಾರದು.
ಅಮೆರಿಕ
ಕೊನೆಯದಾಗಿ, ಜಗತ್ತಿನ ಆಗುಹೋಗುಗಳನ್ನು ಪ್ರಭಾವಿಸುವ ಶಕ್ತಿ ಇರುವುದು, ಸದ್ಯದಮಟ್ಟಿಗೆ ಏಕೈಕ ಸೂಪರ್-ಪವರ್ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕಕ್ಕೆ. ಈ ವರ್ಷದ ನವೆಂಬರಿನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ಪೂರ್ವತಯಾರಿ ಆರಂಭವಾಗಿದೆ. ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂದು ಆರಿಸಲು ಪ್ರಾಥಮಿಕ ಹಂತದ ಚುನಾವಣೆಗಳು ನಡೆಯುತ್ತಿವೆ.
ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಟ್ರಂಪ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮುವ ಸೂಚನೆ ಕಾಣುತ್ತಿದೆ. ಆದರೆ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ೨೦೨೦ರ ಚುನಾವಣೆಯ ಬಳಿಕ ನಡೆದ ಗಲಭೆಗಳ ಸಂಬಂಧ ಟ್ರಂಪ್ ಅವರ ವಿರುದ್ಧ ದಾವೆ ಹೂಡಲಾಗಿದೆ ಮತ್ತು ಆ ಪ್ರಕರಣಗಳು ಈಗ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ತಲಪಿವೆ. ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುತ್ತಾರೆಯೇ ಕಾದುನೋಡಬೇಕು.
ಅಮೆರಿಕದ ಅಧ್ಯಕ್ಷರು ಯಾರಾಗುತ್ತಾರೆ ಎಂಬುದರ ಮೇಲೆ ಹಲವು ಬದಲಾವಣೆ ಆಗುವ ನಿರೀಕ್ಷೆ ಇದೆ. ಪ್ರಸ್ತುತ ಅಧ್ಯಕ್ಷ ಬೈಡೆನ್ ಉಕ್ರೇನ್ ಬೆನ್ನಿಗೆ ಬಲವಾಗಿ ನಿಂತಿದ್ದಾರೆ. ಅಮೆರಿಕದ ಶಸ್ತ್ರಾಸ್ತ್ರಗಳು ಉಕ್ರೇನ್ ಬತ್ತಳಿಕೆ ಬರಿದಾಗದಂತೆ ನೋಡಿಕೊಳ್ಳುತ್ತಿವೆ. ತಾನು ಅಧ್ಯಕ್ಷನಾದರೆ ಒಂದು ದಿನದಲ್ಲಿ ಉಕ್ರೇನ್ ಯುದ್ಧಕ್ಕೆ ಕೊನೆ ಹಾಡುತ್ತೇನೆ ಎಂದು ಟ್ರಂಪ್ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಯುದ್ಧದ ಮುಂದಿನ ಸ್ವರೂಪ ರಷ್ಯಾ ಮತ್ತು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಳಿಕ ತೀರ್ಮಾನವಾಗಬಹುದು.
ಅದಲ್ಲದೆ ಇಸ್ರೇಲ್ ಮತ್ತು ಹಾಮಾಸ್ ನಡುವಿನ ಕದನ, ಚೀನಾ-ತೈವಾನ್ ವಿಷಯಗಳು ಕೂಡ ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗಬಹುದು ಎಂಬುದರ ಮೇಲೆ ಹೊಸ ತಿರುವನ್ನು ಪಡೆದುಕೊಳ್ಳಬಹುದು. ಇತಿಹಾಸವನ್ನು ಗಮನಿಸಿದರೆ, ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷರು ಇದ್ದ ಸಂದರ್ಭಗಳಲ್ಲಿ ಅಮೆರಿಕ ಹೆಚ್ಚಿನ ಯುದ್ಧಗಳಲ್ಲಿ ತೊಡಗಿದೆ ಎಂಬುದು ಕಾಣುತ್ತದೆ. ಟ್ರಂಪ್ ಅವರ ಅವಧಿಯಲ್ಲಿ ಯಾವುದೇ ಯುದ್ಧದಲ್ಲಿ ಅಮೆರಿಕ ನೇರವಾಗಿ ತೊಡಗಿಕೊಳ್ಳಲಿಲ್ಲ. ಆಫ್ಘಾನಿಸ್ತಾನದಿಂದ ಕಾಲುತೆಗೆಯುವ ನಿರ್ಧಾರವನ್ನೂ ಕೈಗೊಂಡಿತ್ತು. ಈ ಚುನಾವಣೆಯಲ್ಲಿ ‘ನ್ಯಾಟೋದ ಪ್ರಸ್ತುತತೆ ಏನು, ಜಗತ್ತಿನ ಉಸಾಬರಿ ನಮಗೆ ಬೇಡ, ನಮ್ಮ ಭದ್ರತೆಯನ್ನು ನಾವು ನೋಡಿಕೊಳ್ಳೋಣ’ ಎಂಬ ಅರ್ಥದಲ್ಲಿ ಟ್ರಂಪ್ ಮಾತನಾಡುತ್ತಿದ್ದಾರೆ. ಈ ನಿಲವಿಗೆ ಅವರು ಅಂಟಿಕೊಂಡರೆ ರಷ್ಯಾಕ್ಕೆ ಅಭದ್ರತೆ ಇಲ್ಲವಾಗಬಹುದು, ಉಕ್ರೇನ್ ಯುದ್ಧ ನಿರ್ಣಾಯಕ ಘಟ್ಟ ತಲಪಬಹುದು.
ಭಾರತ ಮತ್ತು ಅಮೆರಿಕದ ಸಂಬಂಧ ನೋಡುವುದಾದರೆ, ಟ್ರಂಪ್ ಮತ್ತು ಮೋದಿ ಅವರ ನಡುವಿನ ಸ್ನೇಹ ಹಲವು ಸಂದರ್ಭಗಳಲ್ಲಿ ಜಾಹೀರುಗೊಂಡಿತ್ತು. ಟ್ರಂಪ್ ಅವರು ಚುನಾವಣೆಯಲ್ಲಿ ಸೋತಾಗ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧದ ಮೇಲೆ ಪರಿಣಾಮವಾಗಬಹುದು ಎನ್ನಲಾಗಿತ್ತು. ಆದರೆ ಹಾಗಾಗಲಿಲ್ಲ. ಅಧ್ಯಕ್ಷ ಬೈಡೆನ್, ಭಾರತದ ಪ್ರಧಾನಿಗೆ ಕೆಂಪು ಹಾಸಿನ ಗೌರವ ನೀಡಿ ಶ್ವೇತಭವನದ ಅತಿಥಿಯನ್ನಾಗಿ ಬರಮಾಡಿಕೊಂಡರು.
‘ಇದು ಭಾರತದ ಕಾಲ’ ಎಂದು ಪ್ರಧಾನಿ ಮೋದಿ ಆಗಾಗ ಹೇಳುತ್ತಿರುತ್ತಾರೆ. ಅದು ನಿಜ. ಭಾರತೀಯರ ಕೌಶಲ, ಮಾನವ ಸಂಪನ್ಮೂಲ, ಮೂರನೇ ಸ್ಥಾನಕ್ಕೆ ಜಿಗಿಯುವ ಉಮೇದಿನಲ್ಲಿರುವ ಆರ್ಥಿಕತೆ, ಸೇನಾ ಸಾಮರ್ಥ್ಯ ಎಲ್ಲವೂ ಭಾರತದ ಶಕ್ತಿಯನ್ನು ಜಾಗತಿಕ ವೇದಿಕೆಯಲ್ಲಿ ಹೆಚ್ಚಿಸಿದೆ. ಭಾರತವನ್ನು ಅಮೆರಿಕ ಚೀನಾಕ್ಕೆ ಪರ್ಯಾಯವಾಗಿ ನೋಡುತ್ತಿದೆ. ಭಾರತದೊಂದಿಗೆ ವಾಣಿಜ್ಯಿಕ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕು ಎಂಬ ಉತ್ಸಾಹ ಐರೋಪ್ಯ ರಾಷ್ಟ್ರಗಳಲ್ಲಿದೆ. ಜಪಾನ್, ಆಸ್ಟ್ರೇಲಿಯಾ ಕ್ವಾಡ್ ಮೂಲಕ ಭಾರತದ ಜೊತೆ ಗುರುತಿಸಿಕೊಂಡಿವೆ. ದಕ್ಷಿಣ ಜಗತ್ತಿನ ರಾಷ್ಟ್ರಗಳು (ಗ್ಲೋಬಲ್ ಸೌತ್) ನಾಯಕನ ಸ್ಥಾನದಲ್ಲಿ ಭಾರತವನ್ನು ನೋಡುತ್ತಿವೆ. ಈ ಎಲ್ಲ ದೃಷ್ಟಿಯಿಂದಲೂ ‘ಇದು ಭಾರತದ ಕಾಲ’.
ಸ್ಥಿರ ಮತ್ತು ಸ್ನೇಹಪರ ನೆರೆಹೊರೆಯನ್ನು ಹೊಂದುವುದು, ಜಗತ್ತಿನ ಎಲ್ಲ ರಾಷ್ಟ್ರಗಳೊಂದಿಗೆ ಬೆರೆತು ಬಾಳುವುದು, ಯಾರ ಮೇಲೂ ಆಕ್ರಮಣಶೀಲತೆ ತೋರದಿರುವುದು ಭಾರತದ ಗುಣ. ಇದರ ಜೊತೆಗೆ ಜಗತ್ತಿನ ಆಗುಹೋಗುಗಳನ್ನು ಭಾರತದ ಹಿತಾಸಕ್ತಿಯ ದೃಷ್ಟಿಯಿಂದ, ವಾಸ್ತವದ ನೆಲೆಗಟ್ಟಿನಲ್ಲಿ ನೋಡಬೇಕು ಎಂಬುದೂ ನಮಗೆ ಅರಿವಾಗಿದೆ. ಹಾಗಾಗಿ ೨೦೨೪ರ ಬೆಳವಣಿಗೆಗಳನ್ನೂ ನಾವು ಅದೇ ಸಮಚಿತ್ತದಿಂದ ನೋಡಬೇಕಿದೆ.
೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ ಏಷ್ಯಾದ ೧೧ ದೇಶಗಳು, ೧೫ ಆಫ್ರಿಕಾ ಖಂಡ ದೇಶಗಳು, ೯ ಅಮೆರಿಕಾ ಖಂಡ ದೇಶಗಳು, ಆಸ್ಟ್ರೇಲಿಯ ಖಂಡದಲ್ಲಿ ೪ ದೇಶಗಳು. ಒಟ್ಟು ೨ ಶತಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಈ ವರ್ಷವೇ ಚುನಾವಣೆ ನಡೆಯಲಿದೆ.
ಪ್ರಜಾಸ್ವಾಮ್ಯ ದೇಶಗಳಲ್ಲಿ ಚುನಾವಣೆ ನಾಲ್ಕೋ ಐದೋ ಆರೋ ವರ್ಷಗಳಿಗೊಮ್ಮೆ ನಡೆಯುವುದು ನಿಯತಿಯಾಗಿದ್ದರೂ ಇಷ್ಟು ದೊಡ್ಡ ಸಂಖ್ಯೆಯ ದೇಶಗಳಲ್ಲಿ ಒಂದೇ ವರ್ಷದಲ್ಲಿ ಚುನಾವಣೆಗಳು ನಡೆಯುತ್ತಿರುವುದು ವಿಶೇಷ. ಮತ್ತು ಇದರ ಪರಿಣಾಮ ಅಂತಾರಾಷ್ಟ್ರೀಯ ರಾಜಕೀಯ-ಆರ್ಥಿಕ ಸಂಬಂಧಗಳ ಮೇಲೂ ಆಗುತ್ತದೆ.