‘ಯಾಕೋ ಕಾಣೆ ರುದ್ರವೀಣೆ ಹಿಡಿಯುತ್ತಿರುವುದು
ಜೀವದಾಣೆಯಂತೆ ತಾನೆ ನುಡಿಯುತ್ತಿರುವುದು’
– ದ.ರಾ. ಬೇಂದ್ರೆ
ನೀವು ಬಹಳ ವಿರಾಮವಾಗಿ ಕಾಲ ಕಳೆಯಲು ಪ್ರವಾಸಕ್ಕೆಂದು ಸ್ನೇಹಿತನ ಇಲ್ಲವೆ ಸಂಬಂಧಿಕರ ಊರಿಗೆ ಹೋಗಿರುತ್ತೀರಿ. ಮುಂಜಾನೆ ಸ್ನಾನ, ತಿಂಡಿ-ತೀರ್ಥ ಮುಗಿಸಿ ಸುಮಾರು ಬೆಳಗಿನ ಹತ್ತುಗಂಟೆಗೆ ಅವರ ತೋಟ ಇಲ್ಲವೆ ಹತ್ತಿರದ ನಿಸರ್ಗ ದೃಶ್ಯ ಸವಿಯಲು ಹೋಗುತ್ತೀರಿ. ನೀವು ಹೊರಟು ಅಲ್ಲಿನ ತೋಟವನ್ನು ಸುತ್ತಿಯೋ, ಇಲ್ಲ ಗುಡ್ಡವನ್ನು ಏರಿಯೋ ಅಲ್ಲೇ ಪ್ರಕೃತಿಯ ಮಡಿಲಲ್ಲಿ ಒಂದಿಷ್ಟು ವಿರಮಿಸಲು ಕೂಡುತ್ತೀರಿ. ಪ್ರಶಾಂತ ವಾತಾವರಣ, ಹಿತಗಾಳಿ, ಮನಸ್ಸಿಗೆ ಮುದನೀಡುವ ಪ್ರಕೃತಿಸೊಬಗು ಕಣ್ತುಂಬಿಕೊಂಡು ನಿದ್ರೆಬಂದವರಂತೆ ಕಣ್ಣುಮುಚ್ಚಿ ಆ ಕ್ಷಣವನ್ನು ಆನಂದಿಸುತ್ತೀರಿ. ಆ ಕ್ಷಣದ ಬದುಕಿನ ಜಂಜಾಟಗಳೆಲ್ಲ ಕ್ಷಣವೇ ಮರೆತು ಲೌಕಿಕಜಗತ್ತನ್ನು ಬದಿಗಿರಿಸಿ, ಅಲೌಕಿಕಜಗತ್ತಿನ ವಿಶಾಲಾವಸ್ಥೆಯ ಸ್ಥಿತಿಗೊಯ್ಯುವ ಆ ಮನಃಸ್ಥಿತಿಯಲ್ಲಿ ಉಲಿಯುವುದೇ ‘ಈ ಆನಂದವೇ ಜಗದ ಸತ್ಯ’ ಮತ್ತು ‘ಅದು ನೀನೇ ಆಗಿದ್ದೀ’ ಎಂದು ನಮ್ಮೊಳಗಿನ ಸಂನ್ಯಾಸಿಮನೋಭಾವ ಗರಿಗೆದರಿಬಿಡುತ್ತದೆ. ಮುಚ್ಚಿದ ಕಣ್ಣಿನ ತುದಿಯ ಒದ್ದೆಯ ಸ್ಥಿತಿಯೇ ‘ತೋಡಿ ರಾಗ’.
ತೋಡಿ ರಾಗದ ಕಾಲಾವಧಿಯು ಬೆಳಗಿನ 11 ಗಂಟೆ. ಈ ರಾಗವು ಭಕ್ತಿ-ಆರಾಧನೆ ಹಾಗೂ ಅದರ ಸಿದ್ಧಾಂತರೂಪವೂ ಆಗಿರುವುದರಿಂದ, ರಾಜಸಂಸ್ಥಾನಗಳಲ್ಲಿ ‘ದಿನ್-ಕೀ-ದರ್ಬಾರೀ’ ಎಂದು ಕರೆಯಲ್ಪಡುತ್ತಿತ್ತು. ಗುಜರಿ ತೋಡಿ ಹಾಗೆ ರಾಗ ಮುಲ್ತಾನಿ ಕೂಡ ನೇರವಾಗಿ ಪ್ರಕೃತಿಗೆ ಸಂಬಂಧಿಸಿದ್ದು, ಕರ್ನಾಟಕ ಸಂಗೀತದಲ್ಲಿ ತೋಡಿಗೆ ಹತ್ತಿರವಾದದ್ದು ಶುಭಪಂತುವರಾಳಿ. ತೋಡಿ ರಾಗವು ಹಿಂದೋಳ ರಾಗದ ಪತ್ನಿ. ಹಿಂದೋಳ ರಾಗದ ಆರು ರಾಗಿಣಿಯರು ಭೂಪಾಲಿ, ವರಾಳಿ, ತೊಡಿಕಾ, ಪ್ರಥಮ ಮಂಜರಿ ಹಾಗೂ ತೋಡಿ. ಹಾಗೆ ಪುತ್ರ ರಾಗಗಳು – ರಾಗದ ಮಕ್ಕಳು – ವಸಂತ, ಶುದ್ಧ-ವಂಗಳಾ, ಶ್ಯಾಮಾ, ಸಮಂತಾ ಮತ್ತು ಕಾಮೋದ.
ಬಹುತೇಕ ತೋಡಿ ರಾಗಮಾಲಾ ಚಿತ್ರಗಳು ತೋಡಿ ರಾಗದ ‘ವಿಳಂಬಿತ’ ಬಂದಿಶ್ಗೆ ಒಳಪಟ್ಟಿವೆ. ಸ್ವರಸಂಗತಿಯನ್ನು ಬಳಸಿ ಹಾಡಿದಲ್ಲಿ ಗುರುತಿಸಬಹುದಾದರೆ ಅದನ್ನು ತೋಡಿ ಅಂಗವೆಂದು ಗುರುತಿಸಲಾಗುತ್ತದೆ. ಹೀಗಾಗಿ ಈ ರಾಗಗಳ ಅಂಗ ಅಂದರೆ ರಾಗಾಂಗವೆಂದು ತೋಡಿಯನ್ನು ಕರೆಯುತ್ತಾರೆ. ಆಗಲೇ ಹೇಳಿದಂತೆ ದಿನದ ಎರಡನೇ ಪ್ರಹರದ ಈ ರಾಗ ಗಂಭೀರವಾದದ್ದು. ‘ಧ’ ಧೈವತ್ ಇದರ ರಾಜ, ಗಾಂಧಾರ್ ಸಂವಾದವು ಎರಡನೆಯದು.
ಇನ್ನು ತೋಡಿ ರಾಗ ರಾಗಮಾಲಾದ ಸರಣಿ ಚಿತ್ರಗಳನ್ನು ನೋಡೋಣ. ಮೊದಲ ಚಿತ್ರದಲ್ಲಿ ಒಬ್ಬಂಟಿ ನಾಯಕಿ ಪ್ರಧಾನವಾಗಿ ಚಿತ್ರಿತಗೊಂಡಿದೆ. ನಾಯಕಿ ಇಲ್ಲಿ ‘ವಿಪ್ರಲಂಭ’ ಸ್ಥಿತಿಯಲ್ಲಿರುವಂತೆ ಚಿತ್ರಿಸಿದೆ. ‘ವಿಪ್ರಲಂಭ’ ಎಂಬುದು ಹೆಣ್ಣಿನ ಒಂದು ಸ್ಥಿತಿ. ಕ್ರಿ.ಪೂ. 1475ರಲ್ಲಿ ರಚನೆಗೊಂಡ ಕಲ್ಪಸೂತ್ರದಲ್ಲಿ ಹೆಣ್ಣಿನ ಎಂಟುಬಗೆಯ ಸ್ಥಿತಿಯ ವಿವರಣೆಗಳಿವೆ. ವಿಪ್ರಲಂಭ ಮತ್ತು ಶೃಂಗಾರ ಎಂಬ ಎರಡು ಬಗೆ ನಾಟ್ಯಶಾಸ್ತ್ರದಲ್ಲಿ ಪ್ರಚಲಿತದಲ್ಲಿದೆ.
ಮೊದಲ ಚಿತ್ರ ರಾಜಸ್ಥಾನದ ಮೇವಾರ ಪ್ರಾಂತದ್ದು. ಇಲ್ಲಿನ ನಾಯಕಿ ತನ್ನ ಪ್ರಿಯಕರನನ್ನು ಹುಡುಕುತ್ತ ಕೈಯಲ್ಲಿ ರುದ್ರವೀಣೆ (ಬಿನ್ಸಿತಾರ) ಹಿಡಿದು ವಿರಹಗೀತೆಗಳನ್ನು ಹಾಡುತ್ತ ಕಾಡುಮೇಡುಗಳನ್ನು ಅಲೆಯುತ್ತಿರುವ ದೃಶ್ಯವಿದೆ. ಪ್ರಿಯಕರನ ಸಾನ್ನಿಧ್ಯಕ್ಕಾಗಿ ಪರಿತಪಿಸುತ್ತಿರುವ ನಾಯಕಿ ಇಲ್ಲಿ ತನ್ನೆದುರು ಬಂದು ನಿಂತ ಕೃಷ್ಣಮೃಗಕ್ಕೆ ತನ್ನ ಮನದ ಇಂಗಿತವನ್ನು ನಿವೇದಿಸಿಕೊಳ್ಳುತ್ತಿದ್ದಾಳೆ. ತೋಡಿ ರಾಗದಲ್ಲಿ ಕೇವಲ ಎರಡು ಪಾತ್ರಗಳು ಪಾತ್ರಪ್ರಧಾನವಾಗಿ ಚಿತ್ರದಲ್ಲಿ ಸಂಯೋಜಿಸಿರುತ್ತವೆ. ಒಂದು ಹೆಣ್ಣಿನ ಚಿತ್ರ, ಇನ್ನೊಂದು ಕೃಷ್ಣಮೃಗ. ಹಾಗೆ ಕೆಲವೊಮ್ಮೆ ಪ್ರದೇಶಗಳ ಬೇರೆಬೇರೆ ಕಾರಣದಿಂದಾಗಿ ಇತರ ಪಕ್ಷಿಗಳು, ಜೀವಸಂಕುಲವೂ ಚಿತ್ರಿತಗೊಂಡಿವೆ. ಕಲಾವಿದ ಇಲ್ಲಿ ನಾಯಕಿಯ ಅನುರಕ್ತ ಮನಸ್ಸಿನ ಮಿಡಿತ, ಚಂಚಲತೆ ಹಾಗೂ ಕೋಮಲಭಾವವನ್ನು ಸಾಂಕೇತಿಕವಾಗಿ ಅಭಿವ್ಯಕ್ತಗೊಳಿಸಲು ಕೃಷ್ಣಮೃಗವನ್ನು ಚಿತ್ರಿಸಿದ್ದಾನೆ. ಕೃಷ್ಣಮೃಗವನ್ನೆ ಏಕೆ ಕಲಾವಿದ ಈ ರಾಗಕ್ಕೆ ಚಿತ್ರಿಸಲು ಬಳಸಿದ್ದಾನೆ ಎಂದರೆ ಈ ಕೃಷ್ಣಮೃಗಗಳ ಹಿಂಡು ಕಾಡಿನಲ್ಲಿ ದೈನಂದಿನ ಕಾಲದಲ್ಲಿ (diurnal antelope) ಕ್ರಿಯಾಶೀಲವಾಗಿರುತ್ತದೆ. ಅಂದರೆ ಕಾಡಿನಲ್ಲಿ ಸಾಮಾನ್ಯವಾಗಿ ಹಗಲುಹೊತ್ತಿನಲ್ಲಿ ಸಂಚಾರಿಗಳಾಗಿ ಕಾಣಸಿಗುತ್ತವೆ. ರಾಗದ ಕಾಲವು ಬೆಳಗಿನ 11ರ ಸುಮಾರು ಆಗಿರುವ ಕಾರಣ ಕಲಾವಿದ ಸಂಗೀತ ಗಾಯನವನ್ನು ದೃಶ್ಯರೂಪದಲ್ಲಿ ತರುವಾಗ ಈ ಕಾಲದಲ್ಲಿ ಸಂಚಾರದಲ್ಲಿರುವ ಕೃಷ್ಣಮೃಗವನ್ನು ಬಳಸಲು ಕಾರಣವಿದ್ದಿರಬಹುದು. ಹಾಗೆ ಗಂಡು ಕೃಷ್ಣಮೃಗವು ನಾಯಕಿಯ ವಿರಹಭಾವವನ್ನು ಮೌನದಲ್ಲಿ ಆಲಿಸುವುದು, ಶೂನ್ಯ ಪ್ರತಿಕ್ರಿಯೆಯು ನಾಯಕಿಯ ಭಾವಸೂಚಕವಾಗಿದೆ. ಇಲ್ಲಿ ನಾಯಕಿಯ ಸ್ಥಿತಿಯನ್ನು, ವಿರಕ್ತ ಸನ್ನಿವೇಶವನ್ನು ಜಗತ್ತನ್ನೇ ತ್ಯಜಿಸುವ ಸಂನ್ಯಾಸಿಯಂತೆ ಎಂದು ಆನಂದಕುಮಾರಸ್ವಾಮಿ ಅಭಿಪ್ರಾಯಪಡುತ್ತಾರೆ. ಈ ಸ್ಥಿತಿಯನ್ನು ಅವರು ಹೀಗೆ ವಿವರಿಸುತ್ತಾರೆ:
‘Divided from her darling, most unhappy in love, like a nun renouncing the world, this Todi abides in the grove and charms the hearts of the deers.’
ಕಾಂಗ್ರಾ ಪ್ರದೇಶವು ಪರ್ವತಕಣಿವೆ ಪ್ರದೇಶವಾದ್ದರಿಂದ ವಿರಳ ವೃಕ್ಷಗಳು, ಹೂಗಿಡಗಳು, ಬಳ್ಳಿಗಳನ್ನು ಯಥೇಚ್ಛವಾಗಿ ಕಲಾವಿದ ಚಿತ್ರಿಸಿರುವುದು ಆಲಂಕಾರಿಕ ಭಾವದಿಂದಲೇ. ಹಗಲನ್ನು ಸಂಕೇತಿಸುವ ಹಾಗೂ ಬಿಸಿಲಿನ ಝಳದ ಕಾರಣದಿಂದ ಆ ಕಾಲಕ್ಕೆ ಮನಸ್ಸಿನಲ್ಲಿ ಉಂಟಾಗುವ ಮ್ಲಾನತೆಯನ್ನು ಪ್ರತಿರೂಪಿಸಲು ಹಳದಿಬಣ್ಣವನ್ನು ಕಲಾವಿದ ಪ್ರಧಾನವಾಗಿ ಹಾಗೂ ವಿಸ್ತಾರವಾಗಿ ಬಳಸಿದ್ದಾನೆ. ಈ ಮೊದಲೇ ಹೇಳಿದಂತೆ ನೀವು ದೂರದ ಪ್ರಕೃತಿಯ ಸಾನ್ನಿಧ್ಯದಲ್ಲಿ ವಿರಮಿಸುವ ಮನಸ್ಸು ಹಗಲಿನ ಆ ವೇಳೆಗೆ ತುಸು ಕಣ್ಣುಮುಚ್ಚುವ ಇಲ್ಲವೆ ತೂಕಡಿಕೆಯ ಸ್ಥಿತಿಯದ್ದಾದರೆ, ಮನಸ್ಸಿನಲ್ಲಿ ಮ್ಲಾನತೆ ಮೂಡಿ ಬುದ್ಧಿಯಲ್ಲಿ ಶೂನ್ಯಭಾವ ಆವರಿಸಿಬಿಡುತ್ತದೆ. ಈ ಚಿತ್ರಗಳಲ್ಲಿ ಕಲಾವಿದ ಹೀಗೆ ಹಳದಿಬಣ್ಣವನ್ನು ಪ್ರಧಾನವಾಗಿರಿಸಿರುವುದಕ್ಕೂ ಇದೇ ಕಾರಣ.
ಇನ್ನು ಇಲ್ಲಿ ನಾಯಕಿ ರುದ್ರವೀಣೆ ಹಿಡಿದಿದ್ದಾಳೆ. ಸಂಗೀತವಾದ್ಯ ರುದ್ರವೀಣೆ ಹುಟ್ಟುವಿಕೆಗೆ ಒಂದು ಪೌರಾಣಿಕ ಕಥನವಿದೆ. ದಕ್ಷಯಜ್ಞದ ನಂತರ ಪಾರ್ವತಿ ಮುಂದೆ ಪರ್ವತರಾಜನ ಮಗಳಾಗಿ ಜನ್ಮತಳೆಯುತ್ತಾಳೆ. ಆಕೆಯ ಒಲುಮೆಗಾಗಿ ಪರಿತಪಿಸುತ್ತ ವಿರಹವೇದನನಾಗಿ ಅಲೆದಾಡುತ್ತಿದ್ದ ಈ ಸ್ಥಿತ್ಯಂತರ ಅವಧಿಯಲ್ಲಿಯೇ ಶಿವನು ವಿಶ್ವಕರ್ಮನಿಗೆ ಹೇಳಿ ವಾದ್ಯವೊಂದನ್ನು ನಿರ್ಮಿಸುತ್ತಾನೆ. ಅದುವೇ ರುದ್ರವೀಣೆಯಾಗಿದೆ. ಪ್ರೇಮಕಾತರತೆಯ ಸಂಕೇತವಾದ ರುದ್ರವೀಣೆ ಹಾಗೂ ಅದನ್ನು ಹಿಡಿಯುವ ಕ್ರಮವೂ ಕಲಾಕೃತಿಯಲ್ಲಿ ಬಹುಮುಖ್ಯವಾಗಿ ಗೋಚರಗೊಳ್ಳುವ ದೃಶ್ಯರೂಪಕವಾಗಿದೆ.
ಇನ್ನು ಚಿತ್ರ 2ರಲ್ಲಿ ತೋಡಿ ರಾಗದ ಭಾವಪೂರ್ಣವಾದ ಇನ್ನೊಂದು ಚಿತ್ರಣವಿದೆ. ಈ ಚಿತ್ರ ಕಾಂಗ್ರಾ (ಶಾಲೆ) ಪ್ರದೇಶದ್ದು, ಈ ಮೊದಲಿನ ಚಿತ್ರದಂತೆ ಮೇವಾರ ಪ್ರಾಂತದ್ದಲ್ಲ. ಇಲ್ಲಿ ರಾಗವು ‘ಮಿಯಾ ಕೀ ತೋಡಿ’ಯನ್ನಾಧರಿಸಿದೆ. ಇಲ್ಲಿ ಹಳದಿಬಣಕ್ಕ್ಣೆ ಪ್ರಾಧಾನ್ಯವಿಲ್ಲ. ಆದರೆ ಹಿಮಾಚಲ ಪ್ರದೇಶದ ರಮ್ಯ ಪ್ರಕೃತಿಯು ಗುಡ್ಡಕಣಿವೆಗಳ ಪ್ರದೇಶ. ದೊಡ್ಡದೊಡ್ಡ ವಟವೃಕ್ಷಗಳನ್ನು ಕಲಾವಿದ ಚಿತ್ರಿಸಿದ್ದು, ಹಾಗೆ ತಾವರೆ ಹೂಗಳಿಂದ ಕೂಡಿದ ಸರೋವರವನ್ನು, ಹಾಗೆಯೆ ಅದರಲ್ಲಿ ಈಜುತ್ತಿರುವ ಹಂಸಗಳನ್ನು ಚಿತ್ರಿಸುವ ಮೂಲಕ ಕಲಾವಿದನು ವಾತಾವರಣವನ್ನು ರಂಜನಮಯಗೊಳಿಸಿದ್ದಾನೆ.
ಹಾಗೆ ಪ್ರಧಾನ ಪಾತ್ರದ ಸೊಬಗನ್ನು ಹೆಚ್ಚಿಸಲು ಹಿನ್ನೆಲೆಯಲ್ಲಿ ವಿಸ್ತಾರವಾಗಿ ಕೆಂಪುಬಣ್ಣದಲ್ಲಿ ಖಾಲಿ ಜಾಗವನ್ನು ಭರ್ತಿಮಾಡಿದ್ದಾನೆ. ಇಲ್ಲಿ ನಾಯಕಿಯ ಎರಡು ಬದಿಯಲ್ಲಿ ಸಂಯೋಜನೆ ದೃಷ್ಟಿಯಿಂದ ಗಂಡು ಮತ್ತು ಹೆಣ್ಣು ಕೃಷ್ಣಮೃಗಗಳು ಚಿತ್ರಿತಗೊಂಡಿವೆ. ಹೆಣ್ಣು ಕೃಷ್ಣಮೃಗವು ಆಕೆಯತ್ತ ಅತ್ಯಂತ ಆಪ್ತವಾಗಿ ಕೂತೂಹಲದಿಂದ ತನ್ನ ಕಿವಿಗಳನ್ನು ನಿಮಿರಿಸಿ ನೋಡುತ್ತಿರುವ ಪರಿ; ಗ್ರಹಿಕೆಗೆಟಕುವ ವಿಷಯವೊಂದನ್ನು ಕುರಿತಂತೆ ಸ್ತ್ರೀಯೋರ್ವಳಲ್ಲಿ ಪ್ರಕೃತಿಸಹಜವಾಗಿ ಇರಬಹುದಾದಂಥ ಕುತೂಹಲ ಹಾಗೂ ಆಲಿಸುವ ತಲ್ಲೀನತೆಯನ್ನು ಕಲಾವಿದ ಚಿತ್ರಿಸಿದ್ದಾನೆ. ಗಂಡು ಕೃಷ್ಣಮೃಗಕ್ಕೆ ಆ ಪರಿಯ ತಲ್ಲೀನತೆ ಸಾಧ್ಯವಿಲ್ಲವಾದ್ದರಿಂದ ಅದು ನಾಯಕಿಯ ಆಂಗಿಕ ಕೈಸನ್ನೆಯನ್ನು ಮೂಸಿ ನೋಡಲು ಧಾವಿಸುತ್ತಿದೆ.
ಉಳಿದ ಇನ್ನೆರಡು ಚಿತ್ರಗಳು ತೋಡಿಯ ಇನ್ನೊಂದು ಪ್ರಕಾರದ ರಾಗಕ್ಕೆ ಸಂಬಂಧಿಸಿದ್ದು, ಮೊದಲನೆಯದು (ಚಿತ್ರ 3) ಮುಸ್ಲಿಂ ಕಲಾವಿದರು ತೋಡಿ ರಾಗವನ್ನು ನೋಡಿದ ಬಗೆ. ಇತಿಹಾಸದುದ್ದಕ್ಕೂ ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿ ರಾಜಸ್ಥಾನ ಭೂಭಾಗವನ್ನು ಅನೇಕ ರಾಜಮನೆತನಗಳು ಆಳಿವೆ. ಅವುಗಳಲ್ಲಿ ಕನೌಜಿನ ಪ್ರತಿಹಾರರು, ಮೀನರು, ಗುಜಾರಿ, ಭಿಲ್ಲ ಹಾಗೂ ಜಾಟ್ ಸಮುದಾಯವು ಮುಖ್ಯವಾದವು. ಈ ರಾಜಾಡಳಿತ ಕಾಲದಲ್ಲಿ ಸಾಂಸ್ಕೃತಿಕವಾಗಿಯೂ ತಮ್ಮ ಪ್ರಭಾವ ಬೀರಿದ್ದಾರೆ. ಸಂಗೀತ ವಿಷಯದಲ್ಲಿ ಗಿರಿಜನರ ಗುಜರಿ ತೋಡಿಯೂ ಸೇರ್ಪಡೆಯಾದದ್ದು ಹೀಗೆಯೆ. ಮುಂದೆ ಮೊಗಲರ ಆಳ್ವಿಕೆಯಲ್ಲಿ ಸಂಗೀತ ಹಾಗೂ ಚಿತ್ರಕಲೆ ದೆಹಲಿ ಸುಲ್ತಾನರ ಪೋಷಣೆಗೊಳಗಾಯಿತು. ಅಲ್ಲಿಯ ತನಕ ಗುಡ್ಡಗಾಡು ಕಣಿವೆಗಳಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿದ್ದ ತೋಡಿ ಲಹರಿಯು ದೆಹಲಿ ಸುಲ್ತಾನರ ಅಂತಃಪುರದಲ್ಲಿ ಕುಳಿತು ಆಲಿಸುವ ಗಾಯನವಾಯಿತು. ಈ ಮುಸ್ಲಿಂ ದೊರೆಗಳ ಪೋಷಣೆಯಲ್ಲಿ ತೋಡಿ ರಾಗವು ಹೊಸಬಗೆಯಲ್ಲಿ ಗಾಯನಕ್ಕೂ ಕಾರಣವಾಗಿ ಮಿಯಾ ಕೀ ತೋಡಿ ಹಾಗೂ ಬಿಲಾಸ್ಖಾನಿ ತೋಡಿ ರಾಗಗಳು ‘ದಿನ್-ಕೀ-ದರ್ಬಾರೀ’ಯಾಗಿ ಸೇರ್ಪಡೆಗೊಂಡವು.
ರಾಗದ ಆಂತರ್ಯವನ್ನು ದೃಶ್ಯರೂಪವಾಗಿ ಪರಿವರ್ತಿಸುವಲ್ಲಿ ಬಳಸುತ್ತಿದ್ದ ಬಣ್ಣ ಹಾಗೆ ಚಿತ್ರಿಸುತ್ತಿದ್ದ ರೂಪಕ(ಚಿಹ್ನೆ)ಗಳನ್ನು ಭಾರತೀಯ ಕಲಾವಿದರು ಕಂಡುಕೊಂಡಂತಹ ಒಳಾಂಶಗಳನ್ನು ಆಸ್ಥಾನದಲ್ಲಿನ ಕಲಾಪೋಷಣೆಗಳು ಚಿತ್ರಿಸಲಾಗಲಿಲ್ಲ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ಇದರ ಪರಿಣಾಮ ಬಿಲಾಸ್ಖಾನಿ ತೋಡಿ ಕುರಿತಾದ ಕಲಾಕೃತಿಯಲ್ಲಿ ಕಾಡುಮೇಡುಗಳಲ್ಲಿ ಸಂಚರಿಸುತ್ತ ತನ್ನ ಒಲುಮೆಗಾಗಿ ಪರಿತಪಿಸುತ್ತ ವಿಪ್ರಲಂಭ ನಾಯಕಿ ಅರಸರ ಬೈಠಕ್ಖಾನೆಗೆ ಬಂದಳು. ಬಿಲಾಸ್ಖಾನಿ ತೋಡಿ ಹುಟ್ಟಿದ್ದು ಅಕ್ಬರನ ಆಸ್ಥಾನದ ಪ್ರಸಿದ್ಧ ಗಾಯಕ ತಾನ್ಸೇನ್ ಸತ್ತಾಗ ಆತನ ಮೃತದೇಹದ ಬಳಿ ತಾನ್ಸೇನ್ ಮಗ ಬಿಲಾಸ್ಖಾನ್ ರೋದಿಸುತ್ತ ಹಾಡತೊಡಗಿದಾಗ ಹುಟ್ಟಿದರಾಗವೆಂದು. ಹಾಗೆ ಈ ಗಾಯನ ಕೇಳಿ ತಾನ್ಸೇನ್ನ ಪಾರ್ಥಿವಶರೀರದ ಕೈ ಮೇಲೆದ್ದು ಮಗನನ್ನು ಆಶೀರ್ವದಿಸಿತೆಂಬ ಕಥೆಯಿದೆ. ಈ ರಾಗದ ಸಮಯಾವಧಿಯು ತೋಡಿಗಿಂತ ತುಸು ಮುಂಜಾನೆಯದು. ಬಿಲಾಸ್ಖಾನಿ ತೋಡಿ ಆಲಿಸುವಾಗ ರಾಗ ಭೈರವಿಯ ಛಾಯೆ ಕಾಣುತ್ತದೆಯಾದರೂ ಭೈರವಿರಾಗದಲ್ಲಿ ಶಿವನ ಆರಾಧನೆಯ ಭಕ್ತಿರೂಪಕವಿದ್ದರೆ, ತೋಡಿಯಲ್ಲಿ ಶಿವನ ವಿರಹವೇದನೆಯ ಭಾವರೂಪಕವಿದೆ. ಅದಕ್ಕಾಗಿ ಕಲಾವಿದರು ತೋಡಿ ರಾಗಕ್ಕೆ ನಾಯಕಿಯನ್ನು ಕಾಡುಮೇಡಿನಲ್ಲಿ ಹಾಡುತ್ತ ಅಲೆಯುತ್ತಿರುವಂತೆ ಚಿತ್ರಿಸಿದ್ದು. ರಾಗ ಬಿಲಾಸ್ಖಾನಿ ತೋಡಿಯಲ್ಲಿ ಕೃತಿ ರಚಿಸುವಾಗ ಕಲಾವಿದರು ಕಲಾಕೃತಿಯಲ್ಲಿನ ನಾಯಕಿಯನ್ನು ಕಾಡಿನ ಅಂಚಿನ (ನಗರ ಸಮೀಪಕ್ಕೆ) ಪರಿಸರಕ್ಕೆ ತಂದರು. ಅಷ್ಟೇ ಅಲ್ಲ, ಕಲಾಕೃತಿಯಲ್ಲಿ ಒಬ್ಬಂಟಿಯಾಗಿ ಚಿತ್ರಿಸುತ್ತಿದ್ದ ನಾಯಕಿಯೊಂದಿಗೆ ಕೆಲವೊಮ್ಮೆ ಆಕೆಯ ಸಖಿಯೂ ಜೊತೆಗೂಡಿದ್ದು ಅಂತಃಪುರದ ನಾಯಕಿಯಾಗಿ ಚಿತ್ರಿಸಿದ್ದು ಉಂಟು. ಕೆಲವು ಚಿತ್ರಗಳಲ್ಲಿ ಅರಮನೆಯ ಉಪ್ಪರಿಗೆ ಇಲ್ಲವೆ ಊರಿನ ಹೊರವಲಯಗಳಲ್ಲಿ ಕೃಷ್ಣಮೃಗಗಳ ಹೊರತಾಗಿಯೂ ನಿಂತ ನಾಯಕಿಯನ್ನು ಕಾಣಬಹುದು. ಇದರ ಅರ್ಥ ಕಾಡಿನಿಂದ ನಗರದ ಅಂಚಿಗೆ, ಅಲ್ಲಿಂದ ಆಸ್ಥಾನಕ್ಕೆ ತೋಡಿ ಹರಿದು ಬಂತು. ಏಕಾಂಗಿಯಾಗಿ ಕಾಡುಮೇಡುಗಳಲ್ಲಿ ಸಂಚರಿಸುತ್ತ ತನ್ನ ಅಗಲಿಕೆಯ ದುಃಖವನ್ನು ನಿವೇದಿಸುತ್ತಿದ್ದ ತೋಡಿರಾಗದ ನಾಯಕಿ, ಬಿಲಾಸ್ಖಾನಿ ತೋಡಿಯಲ್ಲಿ ತನ್ನ ಸಖಿ ಹಾಗೂ ಊರಿನ ಹೊರವಲಯಗಳ ದೃಶ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ತನ್ನ ಮೂಲ ಅಸಲಿತನ ಬುಡಕಟ್ಟು ಮುಗ್ಧತೆ, ಗ್ರಾಮೀಣ ರಸಾನುಭವ ಕಳೆದುಕೊಳ್ಳತೊಡಗಿತು.
ಹಾಗೆಯೆ ಇನ್ನೊಂದು ಚಿತ್ರ (ಚಿತ್ರ 4) ತೀರ ಇತ್ತೀಚಿನ ಕಾಲದ್ದು. ರಾಗಮಾಲಾ ಚಿತ್ರದ ನಕಲು ಕಲಾಕೃತಿ. ಇಲ್ಲಿ ಕಲಾವಿದ ಮೂಲ ಚಿತ್ರವನ್ನು ಯಥಾರೀತಿಯಲ್ಲಿ ನಕಲು ಮಾಡಿದ್ದಾನೆ. ತೋಡಿ ರಾಗದ ಆಂತರ್ಯದ ಆಶಯಗಳನ್ನಾಗಲಿ, ಓಜಸ್ಸನ್ನಾಗಲಿ ಕಲಾವಿದ ಸೆರೆಹಿಡಿಯುವುದಕ್ಕೆ ಇಲ್ಲಿ ಸೋತಿದ್ದಾನೆ. ಬಣ್ಣಬಳಕೆ, ಕೃತಿಯಲ್ಲಿನ ಪ್ರತೀಕಗಳನ್ನು ಗಮನಿಸಿದಾಗ ಕಲಾವಿದನಿಗೆ ರಾಗಗಳ ಕುರಿತ ಪರಿಜ್ಞಾನವಾಗಲಿ, ಮೂಲ ಕೃತಿರಚನೆಯ ಮಹತ್ತ್ವಪೂರ್ಣವಾದ ಮಾಹಿತಿಯ ಅರಿವಾಗಲಿ ಇಲ್ಲ ಎಂಬುದು ಗಮನಕ್ಕೆ ಬರುತ್ತದೆ.
ತೋಡಿ ರಾಗ ಆಧಾರಿತ ಚಲನಚಿತ್ರ ಗೀತೆಗಳು: ಮೈ ತೊ ಎಕ್ ಖ್ವಾಬು ಹೂಂ’, ‘ಹಿಮಾಲಯ್ ಕೀ ಗೋದ್ ಮೇ’ – 1965, ಗಾಯಕರು: ಮುಕೇಶ್
‘ಮಾಡಿ ಮಾಡಿ ಕೆಟ್ಟರೋ’, ಬಸವೇಶ್ವರರ ವಚನ, ಗಾಯಕರು: ಡಾ. ಬಸವರಾಜ್ ರಾಜಗುರು
ಕನ್ನಡದಲ್ಲಿ ಶುಭಪಂತುವರಾಳಿ ರಾಗದಲ್ಲಿ ಪ್ರಸಿದ್ದ ವಯೋಲಿನ್ ವಾದಕ ಎಲ್. ವೈದ್ಯನಾಥನ್ ಸಂಯೋಜಿಸಿರುವ ‘ಶಿವ ಶಿವ ಎನ್ನದ ನಾಲಿಗೆ ಏಕೆ’ ಗೀತೆ, ಚಿತ್ರ – ‘ಹೇಮಾವತಿ’ (1977).
ಹಾಗೆ ತೋಡಿ ಆಧಾರಿತ ‘ಓ ಚೆಲುವೆ ನಾಟ್ಯದ ಸಿರಿ ನವಿಲೆ’, ಚಿತ್ರ – ರಾಗತಾಳ