‘ಸೀಕರಣೆ’ ಎಂದಾಕ್ಷಣ ಬಾಯಲ್ಲಿ ನೀರೂರದೇ ಇರುವುದಿಲ್ಲ. ಬಾಳೆಹಣ್ಣಿನ ರಸಾಯನ ಮಾಮೂಲು. ಮಾವಿನಹಣ್ಣಿನ ರಸಾಯನ…. ಸೀಕರಣೆಯ ಸಂಭ್ರಮವೇ ಬೇರೆ. ಮಾವಿನಹಣ್ಣು ಹಣ್ಣುಗಳ ರಾಜನಲ್ಲವೇ? ಮಾವಿನಹಣ್ಣಿನ ಕಾಲದಲ್ಲಿ ಸೀಕರಣೆಯಾಗಿಬಿಟ್ಟು…. ಅದು ಸುಪರ್ಫಾಸ್ಟ ರಾಜಧಾನಿ ಎಕ್ಸಪ್ರೆಸ್ನಂತೆ ಶರವೇಗದಿಂದ ಓಡುತ್ತಿದ್ದರೆ ಉಳಿದ ಪಲ್ಯ, ಚಟ್ನಿ, ಕೋಸಂಬರಿಗಳೆಲ್ಲ ಬದಿಗೆ ಸರಿದು ಜಾಗ ಮಾಡಿಕೊಟ್ಟು ಮೂಲೆ ಸೇರುವುದೇ!
ಸ್ವಲ್ಪ ತಾಳಿ! ಸೀಕರಣೆಯನ್ನು ಬಿಟ್ಟು ಉತ್ತರಕರ್ನಾಟಕಕ್ಕೆ ಬಂದು ‘ಶೀಕರ್ಣಿ’ಯನ್ನು ಸವಿಯೋಣ. ಇದು ಉತ್ತರ ಕರ್ನಾಟಕದಲ್ಲೇ ಹೆಚ್ಚು ಪ್ರಸಿದ್ಧ. ಇದರ ಇತಿಹಾಸವೂ ದೊಡ್ಡದೇ. ಯುಗಾದಿ ಹಬ್ಬದಲ್ಲಿ ಮಾವಿನಕಾಯಿ, ಮಾವಿನೆಲೆಗಳನ್ನು ತರುವಾಗಲೇ “ಈ ಸಲಾ ಸೀಸನ್ ಹೆಂಗದಪಾ..?” ಎಂಬ ಪ್ರಶ್ನೆಗಳು ಆರಂಭವಾಗಿರುತ್ತವೆ. “ಜೋರ ಐತ್ರಿ” ಎಂದು ಅವ ಹೇಳಿದನೆಂದರೆ ಇವರ ಮುಖದಲ್ಲಿ ಮಂದಹಾಸ. ಮಾವಿನಕಾಯಿಗಳನ್ನು ತಿಂದು ಚಟ್ನಿ, ಉಪ್ಪಿನಕಾಯಿ, ಗುಳಂಬಗಳಾದ ಮೇಲೆ ಹಣ್ಣಿನ ಘಮಲು ಶುರು.
ರತ್ನಾಗಿರಿ ಅಪೂಸ್ ಘಮಲು ಈ ಭಾಗದ ಜನರಿಗೆ ರತ್ನಾಗಿರಿಯ ತಳಿ ಬಲು ಮುಖ್ಯ. ರತ್ನಾಗಿರಿ ಬರೀ ಹೆಸರಷ್ಟೇ. ಆದರೆ ಆಪೂಸ ಮಾವು ಅಕ್ಕಪಕ್ಕದ ದೇವಗಢ, ಸಿಂಧುದುರ್ಗ, ರಾಯದುರ್ಗ, ಚಿಪಳೂಣ ಮುಂತಾದ ಅನೇಕ ಭಾಗಗಳಿಂದ ಸೇರಿಬಂದು ‘ರತ್ನಾಗಿರಿ ಆಪೂಸ್ – ಅಲ್ಫಾನ್ಸೊ’ ಆಗುತ್ತದೆ. ಬರೀ ನಮ್ಮ ದೇಶದಲ್ಲಷ್ಟೇ ಅಲ್ಲ, ಹೊರದೇಶಗಳಿಗೂ ರಫ್ತಾಗುತ್ತದೆ. ಬೇಸಿಗೆಯಲ್ಲಿ ಬೆಳಗಾವಿ ಧಾರವಾಡ ಹುಬ್ಬಳ್ಳಿ ರೈಲುನಿಲ್ದಾಣಗಳಲ್ಲಿ ನಿಂತ ಜನರನ್ನು ನೋಡಬೇಕು ನೀವು. ಪ್ರತಿಯೊಬ್ಬರ ಕೈಯಲ್ಲೂ ಒಂದೋ ಎರಡೋ ಆಪೂಸ ಮಾವಿನ ಪೆಟ್ಟಿಗೆಗಳು. ಇಡೀ ಸ್ಟೇಷನ್ ಹಣ್ಣಿನವಾಸನೆಯಿಂದ ಸುಗಂಧಿತವಾಗಿರುತ್ತದೆ. ಸ್ಟೇಷನ್ನಲ್ಲಿಯೂ ಮಾರಾಟ ನಡೆದಿರುತ್ತದೆ. ಕೊಂಡೊಯ್ಯದವರೇ ಪಾಪಿಗಳು. ರೈಲೇರಿದ ತಕ್ಷಣ ಈ ಎಲ್ಲ ಬಾಕ್ಸ್ಗಳೂ ಸೀಟುಗಳ ಕೆಳಗೋ, ಇಲ್ಲವೇ ಅಪ್ಪರ್ ಬರ್ಥ್ ಮೇಲೆಯೋ ಸುರಕ್ಷಿತಸ್ಥಾನ ಕಂಡುಕೊಳ್ಳುತ್ತವೆ. ಮೇಲೇನೂ ಭಾರ ಹೇರದೆ ಅಪ್ಪಚ್ಚಿಯಾಗದಂತೆ ನೋಡಿಕೊಳ್ಳಬೇಕಲ್ಲ. ಇದು ಸರ್ವವಿದಿತವಾದ್ದರಿಂದ ಎಲ್ಲರೂ ಸಹಕರಿಸುತ್ತಾರೆ. ಮಹಾರಾಷ್ಟ್ರದಿಂದ ಹೊರಡುವ ಅಥವಾ ಹಾದುಹೋಗುವ ಎಲ್ಲ ರೈಲುಗಳಲ್ಲಿಯೂ ಈ ಚಿತ್ರಣ ಮಾವಿನ ಸೀಸನ್ನಲ್ಲಿ ಸರ್ವೇಸಾಮಾನ್ಯ. ಬಸ್ಗಳಲ್ಲೂ ಇದೇ ಕಥೆ. ಲಕ್ಸುರಿ ಬಸ್ಗಳ ಡಿಕ್ಕಿಯಲ್ಲಿ ಬಾಕ್ಸಿಟ್ಟವರು “ಮ್ಯಾಲೇನೂ ಭಾರ ಹಾಕಬ್ಯಾಡಪಾ. ಇಲ್ಲಾಂದ್ರ ಇಲ್ಲೇ ಶೀಕರ್ಣಿಯಾಗಿ ಹೋಗ್ತದ” ಎಂದು ಒದ್ದಾಡುತ್ತಾರೆ. ಸ್ಟೇಷನ್ನಿಂದ ಕರೆದೊಯ್ಯಲೂ ಅಷ್ಟೇ ನಮ್ಮ ಮನೆಯಲ್ಲಿ ಪತಿರಾಯರೊಬ್ಬರೇ ಅನಿವಾರ್ಯವಾಗಿ ಬರುತ್ತಿದ್ದುದು. “ಮಾವಿನಹಣ್ಣಿನ ಬಾಕ್ಸ ತರ್ಲಿಕ್ಕತ್ತೇನಿ” ಎಂದು ಫೋನಿನಲ್ಲಿ ಹೇಳಿದರೆ ಸಾಕು ಮಕ್ಕಳೂ ಹಾಜರ್. ಅಲ್ಲದೇ ಪೈಪೆÇೀಟಿಯ ಮೇಲೆ ಹಣ್ಣಿನ ಬಾಕ್ಸ್ಗಳನ್ನು ಎತ್ತಿಕೊಂಡು ಮನೆಗೆ ಬರುತ್ತಿದ್ದರು.
“ಈ ಸಲಾ ರತ್ನಾಗಿರಿ ಭಾಗದಾಗ ಪೀಕು ಜೋರದ ಅಂತ. ಭಾಳ ಹಣ್ಣವ ಅಂತ. ಹಂಗಾರ ಹಣ್ಣು ಸೋವಿ ಇರ್ತಾವ” ಎಂದು ಅಪ್ಪ ಹೇಳಿದರೆ ಅಮ್ಮನ ಮುಖ ಊರಗಲವಾಗುತ್ತಿತ್ತು. ಮುಗುಳ್ನಗುತ್ತಲೇ ಅವಳು “ಜೋಶಿಯವರು.. ದೇಶಪಾಂಡೆಯವರು ಕಾಯಿಗೊಳ್ನ ಅಡಿ ಹಾಕ್ಯಾರಂತ” ಎಂಬ ಸುದ್ದಿ ಕೊಡುತ್ತಿದ್ದಳು. ಹಣ್ಣಿಗಾಗಿ ಕಾಯುವುದು ಕೊಳ್ಳುವವರ ಪಾಡು. ಸ್ವಂತತೋಟ ಉಳ್ಳವರು ಕಾಯಿಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಅಡಿ ಹಾಕುತ್ತಿದ್ದರು. ತೋಟದಲ್ಲೋ ಮನೆಯಲ್ಲೋ ಪೆಟ್ಟಿಗೆಯಲ್ಲಿಟ್ಟು, ಇಲ್ಲವಾದರೆ ಗೋಣಿತಟ್ಟು ಸಿಕ್ಕರೂ ಸರಿ ಎಂದು ಅವುಗಳಲ್ಲಿ ಸುರಿದು ಬೆಚ್ಚಗಿರಲೆಂದು ಮೇಲೆ ಕೆಳಗೆಲ್ಲ ಹುಲ್ಲು ಮುಚ್ಚಿ ಅಡಿ ಹಾಕುವುದು ಮೊದಲಿನಿಂದಲೂ ಪಾಲಿಸಿಕೊಂಡು ಬಂದ ಪದ್ಧತಿ. ಆಗಾಗ ಇವನ್ನು
ತೆಗೆದು ನೋಡಬೇಕು. ಅಕಸ್ಮಾತ್ ಒಂದು ಹಣ್ಣು ಕೆಟ್ಟಿದ್ದರೆ ತೆಗೆಯಬೇಕು. ಇಲ್ಲವಾದರೆ ಸುತ್ತಲಿನ ಹಣ್ಣುಗಳೂ ಕೆಡುತ್ತವೆ. ಹಣ್ಣಾಗುತ್ತಿದ್ದಂತೆ ಘಮ್ಮನೆ ಪರಿಮಳ ಹರಡುತ್ತದೆ. ಮಾರಾಟಗಾರರು ಸಗಟು ಖರೀದಿ ಮಾಡಿ ತಾವೇ ಆಕಾರ, ಬಣ್ಣಕ್ಕೆ ತಕ್ಕಂತೆ ವಿಂಗಡಿಸಿ ಪೆಟ್ಟಿಗೆ ತುಂಬುತ್ತಾರೆ. ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿಯಾಗುತ್ತದೆ. ಹಣ್ಣುಗಳು ಮಾರ್ಕೆಟ್ಟಿಗೆ ಬಂದರೆ ಸಾಕು, ಮೇನ್ರೋಡುಗಳಲ್ಲಿ ತಾತ್ಕಾಲಿಕ ಟೆಂಟುಗಳಲ್ಲಿ ವಹಿವಾಟು ಆರಂಭವಾಗುತ್ತದೆ.
ಅದಲು–ಬದಲು ಕಂಚಿಕದಲು
ಏಪ್ರಿಲ್ನ ವೇಳೆಗೆ “ಬರ್ರಿ ಅಕ್ಕಾರ, ಅಸ್ಸಲ ರತ್ನಾಗಿರಿ ಆಪೂಸ ಹಣ್ಣವರಿ… ನೀವು ತಿಂದರೇ ನೋಡ್ರಿ…. ಹೊಳ್ಳಿ ಇಲ್ಲೇ ಬರ್ತೀರಿ” ಎಂಬ ಮಾತುಗಳು ಬೀದಿಯಲ್ಲೆಲ್ಲ ಅನುರಣಿಸುತ್ತವೆ. ಅವನ ಮುಂದೆ ಒಂದು ಡಝನ್, ಒಂದೂವರೆ, ಎರಡು, ಎರಡೂವರೆ ಡಝನ್ನ ರಟ್ಟಿನ ಪೆಟ್ಟಿಗೆಗಳು ಒಳಗೆ ಗುಲಾಬಿ ಪೇಪರ್ ಹಾಸಿಕೊಂಡು, ಹುಲ್ಲು ಹೊದ್ದುಕೊಂಡು ಕುಳಿತಿರುತ್ತವೆ. ಮೊದಲೆಲ್ಲ ಇನ್ನೂರು ಇನ್ನೂರೈವತ್ತಕ್ಕೆ ಸಿಗುತ್ತಿದ್ದ ಪೆಟ್ಟಿಗೆ, ಈಗ ಸೀಸನ್ನಿಗೆ ತಕ್ಕಂತೆ ಸಾವಿರದ ಮುಂದೆ ಓಡುತ್ತದೆ. ನೀವು ಸ್ವಲ್ಪ ಮುಂದುವರಿದು “ಹೆಂಗ ಹಣ್ಣು?” ಎಂದು ಕೇಳಿದಿರೋ ತಿನ್ನಲು ಒಂದು ಚೂರು ಕೊಡುತ್ತಾನೆ. ಬೆಲೆ ಚೌಕಾಸಿ ಮಾಡುತ್ತಾನೆ. “ರತ್ನಾಗಿರ್ಯಾಗ ಮುನ್ನೂರು ರುಪಾಯಿ ಡಝನ್ ಅವರಿ” ಎನ್ನುತ್ತಾನೆ. ಬಾಕ್ಸ ತೋರಿಸುತ್ತಾನೆ. ನೀವು “ಇದು ಏಕೋ ಸಣ್ಣದದ.. ಬ್ಯಾಡ” ಎಂದು ಚಾಪೆಯ ಕೆಳಗೆ ತೂರಿದರೆ, “ಬದಲ ಮಾಡ್ತೇನಿ ನಿಂದರ್ರಿ, ಅಕ್ಕಾರ” ಎಂದವನೇ ಬೇರೆ ಇಟ್ಟು ಅದಲುಬದಲು ಕಂಚೀಕದಲು ಮಾಡಿ ರಂಗೋಲಿಯ ಕೆಳಗೆ ನುಸುಳುತ್ತಾನೆ. ನೀವು ಗೆದ್ದ ಮುಖಭಾವದಿಂದ ಮನೆಗೆ ಮರಳಿದಾಗ ಎರಡು ಚಿಕ್ಕ ಹಣ್ಣು ಇದ್ದೇ ಇರುತ್ತವೆ!
ಖ್ಯಾತ ಮಾರಾಟಗಾರರು “ಫಸ್ಟಕ್ಲಾಸ್ ಹಣ್ಣವರಿ ಬಾಯಿ. ಗ್ಯಾರಂಟಿ ಕೊಡ್ತೇನಿ. ಒಂದ ಕೆಟ್ರೂ ನಿಮ್ಮ ರೊಕ್ಕಾ ಪರತ ಕೊಡ್ತೇನಿ. ನೀವು ಬೇಕಾರ ಬೆಂಗಳೂರಿಗೆ ವೈರಿ. ಲಂಡನ್ನಿಗರೆ ವೈರಿ” ಎಂದು ಹೇಳುತ್ತಿರುವವರ ವ್ಯವಹಾರಕುಶಲತೆಗೆ ನೀವು ದುಡ್ಡು ಕೊಡಬೇಕು. ಇತ್ತೀಚೆಗಂತೂ ಬೆಂಗಳೂರು, ಹೈದರಾಬಾದ ಮುಂತಾದ ದೊಡ್ಡ ಊರುಗಳಲ್ಲಿ ಸೀದಾ ರತ್ನಾಗಿರಿಯಿಂದಲೇ ತರಿಸಿ ಮಾರುವವರ ಸಂಖ್ಯೆ ಹೆಚ್ಚುತ್ತಿದೆ. ಒಂದು ಹಣ್ಣು ಕೆಟ್ಟಿತ್ತೆಂದು ನೀವು ಹೇಳಿದರೂ ಬದಲಾಗಿ ಇನ್ನೊಂದು ಹಣ್ಣು ಕೊಟ್ಟು ಹೋಗುತ್ತಾರೆ. ನಿಮ್ಮ ಮಾಮೂಲಿ ವ್ಯಾಪಾರಸ್ಥರಾದರೂ ಅಷ್ಟೇ. ಕೆಟ್ಟಹಣ್ಣಿಗೆ ಬದಲಾಗಿ ಒಳ್ಳೆಯ ಹಣ್ಣುಗಳನ್ನು ಕೊಡುವ ಪರಿಪಾಠ ಇಟ್ಟುಕೊಂಡಿದ್ದಾರೆ.
ಈಶ್ಯಾಡಿ ಶೀಕರ್ಣಿ
ಮಾವಿನಲ್ಲಿ ಬೇಕಾದಷ್ಟು ವಿಧಗಳು. ಬೆಂಗಳೂರಲ್ಲಾದರೆ ಮಲಗೋಬಾ ಶ್ರೇಷ್ಠ. ದೊಡ್ಡ ದೊಡ್ಡ ಹಣ್ಣುಗಳಿವು. ರಸಭರಿತವಾದ ರಸಪೂರಿ ಹಣ್ಣುಗಳಿಗೆ ಉತ್ತರ ಕರ್ನಾಟಕದಲ್ಲಿ ‘ಪೈರಿ’ ಎನ್ನುವುದುಂಟು. ಇವುಗಳಲ್ಲಿ ಸಿಪ್ಪೆ ದಪ್ಪ, ಜೊತೆಗೆ ನಾರು ಹೆಚ್ಚು. ರಸ ಜಾಸ್ತಿ. ಸಿಹಿಯಾಗೂ ಇರುತ್ತವೆ. ಬೆಂಗಳೂರಿನಲ್ಲೂ ಬಾದಾಮಿ, ನೀಲಮ್ ಇತ್ಯಾದಿ ತಳಿಗಳುಂಟು. ಅದೇ ಧಾರವಾಡಕ್ಕೆ ಬಂದರೆ ಅಲ್ಲಿಯ ಕಲಮಿಮಾವಿನ ಹಣ್ಣುಗಳದ್ದು ವಿಶಿಷ್ಟ ರುಚಿ. ಸೀಕರಣೆಯೂ ಸಿಹಿಯಾಗಿ ಚೆನ್ನಾಗಿರುತ್ತದೆ. ‘ಈಶ್ಯಾಡಿ’ ತಳಿಯ ಹಣ್ಣುಗಳೂ ಇಲ್ಲಿ ಬಲು ಪ್ರಸಿದ್ಧ. “ಎರಡು ಈಶ್ಯಾಡಿ ಹಿಂಡಿದರ ಪಾತ್ರೇಲಿ ತುಂಬ ಶೀಕರ್ಣಿಯಾಗ್ತಿತ್ತು; ಮನಿ ಮಂದೆಲ್ಲ ತಿನ್ನೋ ಹಂಗ” ಎಂದು ಅಮ್ಮ ಹೇಳುತ್ತಿದ್ದುದಿತ್ತು. “ಗುಟಲಿ ಹಣ್ಣಗೊಳು ಎಷ್ಟು ಶೀಂ ಇರತಿದ್ದುವಂದ್ರ ಚೀಪಗೋತನ ಇರಬೇಕನಸ್ತಿತ್ತು. ನಾವು ಸಣ್ಣವರಿದ್ದಾಗ ಕೈಯಾಗ ಕೊಟ್ಟು ಕೂಡಿಸಿಬಿಡ್ತಿದ್ರು. ಚೀಪಗೋತ ಕೂಡತಿದ್ವಿ” ಎಂದು ಅಪ್ಪ ತಮ್ಮ ಅನುಭವ ಸೇರಿಸುತ್ತಿದ್ದರು.
ಹಣ್ಣಿನ ತಳಿಗಳ ಬಗ್ಗೆ ಇದು ಪೀಠಿಕೆಯಷ್ಟೇ. ಇವೆಲ್ಲ ಮಾತುಗಳೊಂದಿಗೆ ಚೌಕಾಸಿ ಮಾಡಿ ಮನೆಗೆ ತಂದ ಆಪೂಸಿನ ಪೆಟ್ಟಿಗೆ ತೆಗೆದು ಅಪ್ಪ ಇದ್ದುದರಲ್ಲಿ ಹಣ್ಣಾಗಿ ಕೇಸರಿಬಣ್ಣಕ್ಕೆ ತಿರುಗಿದ ಹಣ್ಣುಗಳನ್ನು ತೆಗೆದುಕೊಂಡು ಹಿಂಡಲು ಕುಳಿತುಕೊಳ್ಳುತ್ತಿದ್ದರು. ಅವನ್ನು ತೊಳೆದು, ಒರೆಸಿಕೊಡುವುದು ನನ್ನ ಕೆಲಸ. ಅಪ್ಪ ತೊಟ್ಟಿನ ಬಳಿ ಕೊಂಚ ಚಾಕುವಿಂದ ಗೀರು ಮಾಡಿ ಸಿಪ್ಪೆ ಸುಲಿಯುತ್ತಿದ್ದರು. ಹಳದಿ ಇದ್ದರೆ ಹುಳಿಯಾಗಿರುತ್ತದೆಂಬ ಲೆಕ್ಕ. ಒಳ್ಳೆ ಆಪೂಸ ಹಣ್ಣಿನ ಲಕ್ಷಣಗಳೆಂದರೆ ತೆಳ್ಳಗಿನ ಸಿಪ್ಪೆ, ಚಿಕ್ಕ ಗೊಟ್ಟ (ವಾಟೆ), ಕೇಸರಿ ಬಣ್ಣದ ಗಟ್ಟಿಯಾದ ಹಣ್ಣು. ಹಿಂಡಿದರೆ ಕರಣಿ ಕರಣಿಯಾಗಿ ಗಟ್ಟಿಯಾಗಿ ಬರುವುದೇ ಶೀಕರ್ಣಿ.
ಅಪ್ಪ ಹಿಂಡುತ್ತ ಇದೇ ಲಕ್ಷಣಗಳುಳ್ಳ ಹಣ್ಣುಗಳು ಬಂದರೆ – “ಛೊಲೋ ಕೊಟ್ಟಾನ” ಎಂದೂ, ಇಲ್ಲದಿದ್ದರೆ “ಬ್ಯಾರೇ ತಳಿ ಕೂಡಸ್ಯಾನ ನೋಡು” ಎನ್ನುವುದೂ ಮಾಮೂಲು. ಹಾಗೇ ಮೆತ್ತಗೆ, “ಇವು ಬರೇ ಆಪೂಸಿನ ಶೀಕರ್ಣಿ ಭಾಳ ಘಟ್ಟಿಯಾಗ್ತದ. ಒಂದೆರೆಡು ಪೈರೀನೋ ಮಾಣಕೂರೋ ಹಿಂಡಿ ಕೂಡಸ್ಲಿ?” ಎಂದು ಕೇಳುತ್ತಿದ್ದರು. ಅಮ್ಮನಿಗೆ ಬಲು ಕೋಪ. ಅವಳು ಬಾಲ್ಯದಿಂದ ಅಸಲಿ ಆಪೂಸ್ ಹಣ್ಣನ್ನೇ ತಿಂದಾಕೆ. “ಏನೂ ಬ್ಯಾಡ. ಬರೇ ಆಪೂಸ ಹಿಂಡರಿ” ಎನ್ನುತ್ತಿದ್ದಳು. ಅಪ್ಪನ ದಪ್ಪಗಾಗಿದ್ದ ಮುಖವನ್ನು ನೋಡುತ್ತ ನಾನು ಸಿಪ್ಪೆಗೆ ಅಂಟಿದ್ದನ್ನೂ ವಾಟೆಯನ್ನೂ ಚಾಕುವಿನಿಂದ ಕೆರೆಯುತ್ತಿದ್ದೆ. ಕೊನೆಗೆ ಪಾತ್ರೆ ತುಂಬಿದ ಗಟ್ಟಿ ಭಾಗವನ್ನು ಕೈಗಳಿಂದಲೇ ಹಿಸುಕಿ ಘನದ್ರವಗಳ ಮಿಶ್ರರೂಪಕ್ಕೆ ತಂದು ಒಂದೇ ಒಂದು ವಾಟೆಯನ್ನು ಅದರಲ್ಲಿ ಉಳಿಸುತ್ತಿದ್ದರು. ನೈವೇದ್ಯಕ್ಕೆ ಹಾಕಿಡಬೇಕಾಗುತ್ತಿತ್ತು. ಅಮ್ಮ ಅದಕ್ಕೆ ಚಿಟಿಕೆ ಉಪ್ಪು, ಬೇಕಾದಷ್ಟು ತುರಿದ ಬೆಲ್ಲ, ಜಾಜಿಕಾಯಿ ಜಾಕಾಯಿಯ ಪುಡಿ ಹಾಕಿ, ಕಾಳುಮೆಣಸಿನ ಪುಡಿ ಉದುರಿಸುತ್ತಿದ್ದಳು. ಎಲ್ಲ ಸೇರಿ ಗೋಟಾಯಿಸುತ್ತ, “ಯಾಲಕ್ಕಿ ಪುಡಿ ಹಾಕು” ಎಂದು ಅಪ್ಪ ಹೇಳಿದರೆ ಅಮ್ಮ “ಬ್ಯಾಡ, ಅದರಲೇ ಹಣ್ಣಿನ್ಯಾಗಿನ ಸತ್ತ್ವ ಹೋಗಿಬಿಡ್ತದಂತ” ಎನ್ನುತ್ತಿದ್ದಳು. “ಯಾರ ಕಡೆ ಕೇಳಿರ್ತಾಳೋ….” ಎಂದು ಅಪ್ಪ ಮೆಲ್ಲನೆ ಗೊಣಗಿ ಪಾತ್ರೆಯನ್ನು ದೇವರ ಮುಂದಿಟ್ಟು, “ಗೋವಿಂದಾ…” ಎಂದು ಸಮರ್ಪಣೆ ಮಾಡಿದರಾಯಿತು. ಮನಸ್ಫೂರ್ತಿ ತಿನ್ನುವುದೇ! ಮೊದಲೆರೆಡು ಬಟ್ಟಲು ಚಪಾತಿಯ ಜೊತೆಯಲ್ಲಿ ಹೊಡೆದರೆ, ನಂತರ ಬರೀ ಶೀಕರ್ಣಿ ತಿನ್ನುವುದು. ಇದಕ್ಕೆ ಮೇಲೆ ಕಾಸಿದ ತುಪ್ಪ ಇರಲೇಬೇಕು. ಒಂದೋ ಎರಡೋ ಚಮಚ ಕರಗಿದ ತುಪ್ಪವನ್ನು ಶೀಕರ್ಣಿಯ ಮೇಲೆ ಹಾಕಿದರೆ ಆಹಾ…. ಪರಮಾನಂದ! ಅನಂತರ ಬಟ್ಟಲಿನಲ್ಲಿ ತಿಂದರೆ ಲೆಕ್ಕ ಗೊತ್ತಾಗುತ್ತದೆಂದು ನಾವು ತಟ್ಟೆಯಲ್ಲೇ ಬಡಿಸಿಕೊಳ್ಳುತ್ತಿದ್ದುದಿತ್ತು.
ಸೀಕರ್ಣಿ ಊಟ
ಸೀಕರಣೆಯ ಊಟವಿರುವ ದಿನ, ವಿಶೇಷವಾಗಿ ಹಿರಿಯರಿರುವ ಮನೆಯಲ್ಲಿ ಊಟಕ್ಕೆ ನೀರನ್ನಿಡುವುದಿಲ್ಲ. ಸೀಕರಣೆಯ ಜೊತೆಯಲ್ಲಿ ನೀರು ಕುಡಿಯಬಾರದೆಂಬ ನಂಬಿಕೆ ತಲೆತಲಾಂತರಗಳಿಂದ ಬಂದಿದೆ. ಕುಡಿದರೆ ಭೇದಿಯಾಗಬಹುದೆಂಬ ವಿಷಯ ಒಂದೆಡೆಯಾದರೆ, ಅಷ್ಟು ಸೀಕರಣೆ ಕಡಮೆ ಹೊಟ್ಟೆಯಲ್ಲಿ ಹಿಡಿಸುತ್ತದೆಂಬ ಒಳಾರ್ಥ ಇನ್ನೊಂದೆಡೆ! ಜಾಕಾಯಿ, ಕಾಳುಮೆಣಸಿನ ಪುಡಿ ಹಾಕಿದರೆ ಹೆಚ್ಚು ತಿಂದರೂ ಹೊಟ್ಟೆಗೆ ಬಾಧಿಸುವದಿಲ್ಲವಂತೆ. ಏಲಕ್ಕಿಪುಡಿ ಹಾಕಿದರೆ ಮಾವಿನಹಣ್ಣಿನ ಸತ್ತ್ವ ಕಡಮೆಯಾಗುತ್ತದಂತೆ. ಹೀಗೆ ಸೀಕರಣೆಯೊಂದಿಗೆ ತಳಕು ಹಾಕಿಕೊಂಡಿರುವ ಸಂಗತಿಗಳು ಅನೇಕ. ಆಪೂಸ ಹಣ್ಣನ್ನು ಹಿಂಡುವ ವಿಧಾನ ಬೇರೆಯಾದರೆ ರಸಪೂರಿ ಹಣ್ಣುಗಳಿಂದ ರಸ ತೆಗೆಯುವ ರೀತಿಯೇ ಬೇರೆ. ಹಣ್ಣನ್ನು ಬೆರಳುಗಳಿಂದ ಒತ್ತಿ ಒತ್ತಿ ಮೆತ್ತಗೆ ಮಾಡುತ್ತ ತೊಟ್ಟು ತೆಗೆದು ಪಾತ್ರೆಯಲ್ಲಿ ಹಾಕುವುದು. ನಂತರ ಸಿಪ್ಪೆಯನ್ನು ತಿರುಗಿಸಿ ಕೈಯಿಂದಲೋ ಚಾಕುವಿನಿಂದಲೋ ಹಣ್ಣಿನಂಶವನ್ನು ತೆಗೆದರಾಯಿತು. ಒಂದೇ ತೊಂದರೆಯೆಂದರೆ ಹಣ್ಣು ಕೆಟ್ಟಿದ್ದರೆ ಹಿಂಡಿ ಹೊರತೆಗೆಯುವವರೆಗೂ ತಿಳಿಯುವದಿಲ್ಲ. ಸಿಪ್ಪೆ ತೆಗೆದರೆ ತಕ್ಷಣ ಗೊತ್ತಾಗುತ್ತದೆ. ಕೆಲವರು ಸಿಪ್ಪೆಗಳನ್ನು ವಾಟೆಗಳನ್ನು ಹಾಲಿನಲ್ಲಿ ತೊಳೆದು ಆ ಹಾಲನ್ನು ಸೀಕರಣೆಗೆ ಬೆರೆಸುತ್ತಾರೆ. ಒಟ್ಟಿನಲ್ಲಿ ‘ಲೋಕೋ ಭಿನ್ನ ರುಚಿಃ’ ಎಂಬಂತೆ ಮಾವು ಹೊಟ್ಟೆಯನ್ನು ಸೇರುವುದಂತೂ ನಿಜ. ಮನಸ್ವೀ ತಿಂದು ಅರ್ಧಗಂಟೆಯ ನಂತರ ನೀರು ಕುಡಿಯುತ್ತಾ, ‘ಅ..ಬ್, ಅ..ಬ್..’ ಎಂದು ತೇಗುವುದೇ. ಮತ್ತೆ “ಹೊಟ್ಟಿ ತುಂಬ ಗಡದ್ದಾಗಿ ಶೀಕರ್ಣಿ ತಿಂದರ ಹಿಂಗ ನೋಡ್ರಿ. ಸಂಜೀ ತನಕಾ ಢೇಕರಣೀನ….” ಎನ್ನುವ ಉವಾಚ.
ಸೀಕರ್ಣಿ ಜೊತೆಗಾರರು ಬರೀ ಸೀಕರಣೆಯ ವಿಚಾರವೇ ಆಯಿತಲ್ಲ. ಅದರ ಜೊತೆಗಾರರ ಬಗ್ಗೆಯೂ ಹೇಳಲೇಬೇಕು. ಸೀಕರಣೆಗೆ ಚಪಾತಿ ಮಾಮೂಲಿ ಜೊತೆಗಾರ. ಅತಿಥಿಗಳಿದ್ದರೆ ಕೊಂಚ ಮೇಲ್ಮಟ್ಟದ್ದಾಗಿರಬೇಕೆಂದರೆ ಪೂರಿ ಸರಿಯಾಗಿರುತ್ತದೆ. ಸಿಹಿ ಹೆಚ್ಚಾಗಿ ಇಷ್ಟಪಡುವವರು ಹೂರಣದ ಹೋಳಿಗೆ-ಸೀಕರಣೆಯನ್ನೂ ಪ್ರೀತಿಯಿಂದ ತಿನ್ನುತ್ತಾರೆ. ಸೀಕರಣೆಗೋಸ್ಕರ ವಿಶೇಷವಾಗಿ ಅಕ್ಕಿಹಿಟ್ಟಿನ ಮೆತ್ತಗಿನ ಸಪ್ಪೆಹೋಳಿಗೆಯನ್ನೂ ಮಾಡುತ್ತಾರೆ. ಇದು ಚೆನ್ನಾಗಿರುತ್ತದೆ. ದೋಸೆ, ಸೀಕರಣೆ ತಿನ್ನುವವರ ಸಂಖ್ಯೆಯೂ ದೊಡ್ಡದಾಗಿದೆ. ದೋಸೆ ಎಂದರೆ ಇಲ್ಲಿ ಮಾಮೂಲು ಅಕ್ಕಿ, ಉದ್ದಿನ ದೋಸೆಗಿಂತ ಗೋಧಿಹಿಟ್ಟಿನ ದೋಸೆ ಮಾಡುತ್ತಾರೆ. ಆದರೆ ಏನೇ ಹೇಳಿ, ಮಾವಿನಹಣ್ಣಿನ ಕಾಲದಲ್ಲಿ ಒಮ್ಮೆಯಾದರೂ ಪೂರಿ-ಸೀಕರಣೆಯಾಗಲೇಬೇಕು. ಅಂದ್ರೆನೇ ತಿಂದಂತೆ. ಮೊದಲೆಲ್ಲ ಹೋಟಲ್ಗಳಲ್ಲಿ ಸೀಕರಣೆ ದೊರೆಯುತ್ತಿರಲಿಲ್ಲ. ಅನಂತರ ಲಭ್ಯವಾಗಿ, ಪೂರಿ-ಸೀಕರಣೆ ಪ್ರಸಿದ್ಧವಾಯಿತು. ‘ಸೀಕರಣೆ ಇಷ್ಟವಿಲ್ಲ’ ಎನ್ನುವ ವರ್ಗದ ಜನರೂ ಇದ್ದಾರೆ. ಅವರಿಗೆ ಹಣ್ಣನ್ನು ಹೆಚ್ಚಿ ತಿನ್ನುವುದರಲ್ಲೇ ಹೆಚ್ಚು ಖುಷಿ! ಆದರೆ ಜೀವನದಲ್ಲಿ ಅವರು ಅಪರೂಪವಾದ ಪಕ್ವಾನ್ನದಿಂದ ವಂಚಿತರಾಗುತ್ತಿದ್ದಾರೆ ಎನ್ನುವುದು ನನ್ನ ಭಾವನೆ.
ಪೆಟಿಗಿ ಮಾವು
ಚಿಕ್ಕಂದಿನಲ್ಲಿ ಶಾಲೆಯ ಪರೀಕ್ಷೆ ಮುಗಿದು ರಜ ಬಿಟ್ಟಾಕ್ಷಣ, ರಜಕ್ಕೆ ಬರಲು ಅನೇಕರ ಆಹ್ವಾನಗಳು ಬರುತ್ತಿದ್ದವು. ಅದರಲ್ಲಿ “ಮಾವಿನ ಹಣ್ಣಿನ ಪೆಟಿಗಿ ಬಂದದ. ಬಾರ ಸುಬ್ಬಿ” ಎಂದು ಸೋದರಮಾವ ಕರೆದಾಕ್ಷಣ ಮನಸ್ಸು ಅತ್ತಲೇ ಬಾಗುತ್ತಿತ್ತು. ಅಂದಿನ ‘ಪೆಟಿಗಿ’ ಎಂದರೆ ಒಂದೆರೆಡು ಡಝನ್ಗಳದ್ದಲ್ಲ, ಹತ್ತು ಡಝನ್ಗಳ ದೊಡ್ಡ ಪೆಟ್ಟಿಗೆ ಬರುತ್ತಿತ್ತು. ಅದನ್ನು ತಿನ್ನಲು ಮನೆಯಲ್ಲಿ ಜನವೂ ಇರಬೇಕಿತ್ತು. ನಿತ್ಯ ಅದನ್ನು ಪರೀಕ್ಷಿಸುವ ಕೆಲಸ ಮಾವನದೇ. ಆಗ ಲಭ್ಯವಾಗುತ್ತಿದ್ದ ಐದಾರು ಹಣ್ಣುಗಳು ರಾತ್ರಿ ಹೆಚ್ಚಿಕೊಂಡು ತಟ್ಟೆಯಲ್ಲಿ ಕುಳಿತುಕೊಳ್ಳುತ್ತಿದ್ದವು. ಎಲ್ಲರೂ ಕೈಹಾಕುವ ಮೊದಲೇ ಅಜ್ಜಿಗೆ ಕೊಡುತ್ತಿದ್ದ ಮಾವ “ಹಣ್ಣು ಹೆಂಗವ ಅಮ್ಮಾ?” ಎಂದು ಕೇಳುತ್ತಿದ್ದ. ನಾವೆಲ್ಲ ತಿಂದು “ಶೀಂ ಅವ” ಎಂದರೆ ಅವಳು ಮಾತ್ರ “ಹುಳಿ ಮಧುರ ಅವಪಾ” ಎನ್ನುತ್ತಿದ್ದಳು! ಸಿಹಿ ಹೆಚ್ಚು ತಿನ್ನುತ್ತಿದ್ದ ಅವಳಿಗೆ ಹಣ್ಣುಗಳೆಂದೂ ಸಿಹಿ ಎನಿಸಲೇ ಇಲ್ಲ. “ಬೆಲ್ಲಾ ತಂದಿಟ್ರೂ ನಮ್ಮವ್ವ ಹುಳಿಮಧುರನ ಅಂತಾಳ” ಎಂದು ನಗುತ್ತಿದ್ದ. ಆಗೆಲ್ಲರೂ ಸೇರಿದಾಗ ಸೀಕರಣೆಯ ಸಂಭ್ರಮವೇ ಸಂಭ್ರಮ. ಹಿಂಡಲು ಐದಾರು ಜನ ಸಿದ್ಧರಾಗುತ್ತಿದ್ದರು. ನಾವೆಲ್ಲ ತುಂಬಾ ಚಿಕ್ಕವರು ಸಾಲಾಗಿ ಕುಳಿತುಕೊಳ್ಳುತ್ತಿದ್ದೆವು. ಚಿಕ್ಕ ಹೆಣ್ಣುಮಕ್ಕಳನ್ನು ಒಳ ಅಂಗಿಯಲ್ಲಿ (ಆಗ ಅದಕ್ಕೆ ಪೆಟಿಕೋಟ್ ಎನ್ನುತ್ತಿದ್ದೆವು) ಕೂರಿಸಿದರೆ ಗಂಡುಮಕ್ಕಳು ಚಡ್ಡಿ ತೊಟ್ಟು ಕುಳಿತಿರುತ್ತಿದ್ದರು. ಸಿಪ್ಪೆ ವಾಟೆಗಳನ್ನು ಸಾಲಾಗಿ ಒಬ್ಬೊಬ್ಬರಿಗೇ ಕೊಡುತ್ತಿದ್ದರು. ನಾವೆಲ್ಲ ಅವನ್ನು ಚೀಪಿ ಚೀಪಿ ಎಸೆಯುತ್ತಿದ್ದೆವು. ಮತ್ತೆ ವಾಟೆಗೆ ಗಲಾಟೆ. ಅನಂತರ ಕೈ ಬಾಯಿ ತೊಳೆದುಕೊಂಡು ಬಟ್ಟೆ ತೊಟ್ಟು ಊಟಕ್ಕೆ ಕೂರುತ್ತಿದ್ದುದಿತ್ತು. ಏಕೆಂದರೆ ಮಾವಿನಹಣ್ಣಿನ ಕಲೆ ಬಹಳ ಗಟ್ಟಿ. ಬಟ್ಟೆಗಳ ಮೇಲೆ ಬಿದ್ದರೆ ಹೋಗುವುದು ತಡವೇ. ಹಿಂಡಿದವರ ಕೈಗಳೆಲ್ಲ ಸ್ವಲ್ಪ ಹೊತ್ತು ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು.
ಅಮ್ಮ ಚಿಕ್ಕವಳಿದ್ದಾಗ ಹಣ್ಣಿನ ಖಯಾಲಿ ಇನ್ನೂ ಜಾಸ್ತಿ ಇತ್ತಂತೆ. ಅಜ್ಜ ಚಿಕ್ಕೋಡಿಯಲ್ಲಿ ಕನ್ನಡ ಶಾಲೆಯಲ್ಲಿ ಹೆಡ್ಮೇಸ್ಟ್ರಾಗಿದ್ದರು. ಆರು ಮಕ್ಕಳ ತುಂಬು ಸಂಸಾರ. ಆಗೆಲ್ಲ ದುಡ್ಡಿಗೆ ಕಷ್ಟ. ಆದ್ರೂ ಹಣ್ಣು ಚೆನ್ನಾಗಿ ತರೋರಂತೆ ಅಜ್ಜ. ಅಲ್ಲದೇ “ಆತಿನ್ನ…. ಈ ಸಲಾನ ಛೊಲೋತ್ನ್ಯಾಗಿ ತಿಂದ ಬಿಡ್ರಿ. ಹೊಟ್ಟ್ಯಾಗ ಹಣ್ಣಿಂದು…. ಶೀಕರ್ಣಿದು ಕಲೆ ಬೀಳಬೇಕು ನೋಡ್ರಿ. ಮತ್ತಿನ್ನ ಮುಂದಿನ ವರ್ಷನ….” ಎಂದಾಗ ದೊಡ್ಡ ಕೊಳಗದ ತುಂಬ ತುಂಬಿದ್ದ ಸೀಕರಣೆ ಮೊದಲ ಪಂಕ್ತಿಗೇ ಖಾಲಿ ಆಗುತ್ತಿತ್ತು. ಅಜ್ಜ ಬಂದು ನೋಡಿ, “ನಿನಗ ಉಳದದೊ ಇಲ್ಲೋ….” ಎಂದು ಮತ್ತೆ ಐದಾರು ಹಣ್ಣು ಅಜ್ಜಿಗೆ ಹಿಂಡಿ ಕೊಡುತ್ತಿದ್ದರಂತೆ. ಸಂಸಾರದ ತಾಪತ್ರಯದಲ್ಲಿ ಆಗಾಗ ಹಣ್ಣು ತರಲಾಗುತ್ತಿರಲಿಲ್ಲ. ಆದರೆ ಅತಿಥಿಗಳು ಬಂದಾಗ ಸಾಲವಾದರೂ ಹಣ್ಣು ತರುವುದೇ. ಖ್ಯಾತ ಸಾಹಿತಿಗಳನ್ನು ಕರೆಸಿ ಭಾಷಣ ಮುಂತಾದ ಕಾರ್ಯಕ್ರಮಗಳನ್ನು ಅಜ್ಜ ಹಮ್ಮಿಕೊಳ್ಳುತ್ತಿದ್ದುದಿತ್ತು. ಅದಕ್ಕೆ ಮಕ್ಕಳೆಲ್ಲ ಅತಿಥಿಗಳ ದಾರಿ ಕಾಯುತ್ತಿದ್ದರು. ಅತಿಥಿಗಳ ಆಗಮನವಾಗುತ್ತಿದ್ದಂತೆ ಹಣ್ಣಿನ ಅಂಗಡಿಯ ಮೆಹೆಬೂಬನಿಗೆ ಅಜ್ಜನಿಗಿಂತ ಮೊದಲೇ ಐದು ಡಝನ್ ಹಣ್ಣಿನ ಆರ್ಡರ್ ಆಗಿರುತ್ತಿತ್ತು!
ಮಾರಿಹಾಳದ ನೆನಪು
ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದ ಘಟನೆ ಮಾರಿಹಾಳದ್ದು. ಒಮ್ಮೆ ಅಮ್ಮ ಅಪ್ಪನೊಂದಿಗೆ ಮಾರಿಹಾಳದ ನೆಂಟರ ಮನೆಗೆ ಹೋದದ್ದಿತ್ತು. ಬೇಸಿಗೆ ಕಾಲ. ಅಪರೂಪಕ್ಕೆ ಬಂದಿದ್ದಾರೆಂದು ಅವರಿಗೂ ಸಂಭ್ರಮ. ಮಾವಿನಹಣ್ಣುಗಳ ಸೀಕರಣೆಯಾಗಿ ಗಡದ್ದಾಗಿ ಊಟವಾಯಿತು. ಇನ್ನು ಪಾತ್ರೆಗಳನ್ನು ಖಾಲಿ ಮಾಡುವ ಸಂದರ್ಭದಲ್ಲಿ ಉಳಿದ ಕೊಂಚವೇ ಸೀಕರಣೆಯನ್ನು ಚಿಕ್ಕಪಾತ್ರೆಗೆ ತೆಗೆದು ಮಕ್ಕಳನ್ನು ಕರೆದರು ಮಾಮಿ. ಮೂರು ಚಿಕ್ಕ ಗಂಡುಮಕ್ಕಳು. ನೋಡನೋಡುತ್ತಿದ್ದಂತೆ ದೊಡ್ಡ ಪಾತ್ರೆಯನ್ನು ಬೋರಲು ಹಿಡಿದು ಮೂವರೂ ತಲೆ ಒಳಗೆಹಾಕಿ ಒಂದೊಂದು ಭಾಗವನ್ನು ನೆಕ್ಕಿಬಿಟ್ಟರು; ಪೂರ್ತಿ ಸ್ವಚ್ಛವಾಗಿತ್ತು ಪಾತ್ರೆ! ನಾವು ನಕ್ಕಿದ್ದೂ ನಕ್ಕಿದ್ದೇ. ಫೊಟೋ ತೆಗೆದುಕೊಳ್ಳಲು ಆಗ ಕೈಯಲ್ಲಿ ಕ್ಯಾಮೆರಾ ಇರಲಿಲ್ಲ. ಮೊಬೈಲ್ಗಳಿಲ್ಲದ ಕಾಲವದು. ಇನ್ನೂ ನೆನೆಸಿಕೊಳ್ಳುತ್ತೇನೆ. ಅಷ್ಟು ಪ್ರೀತಿ…. ಹುಚ್ಚು ಸೀಕರಣೆಯದ್ದು.
ಸವಿಸವಿ ಆಮರಸ
ಮಹಾರಾಷ್ಟ್ರ, ಗುಜರಾತ ಸೇರಿ ಭಾರತದ ಮೇಲ್ಭಾಗಗಳೆಲ್ಲ ಬೇಸಿಗೆಯಲ್ಲಿ ‘ಆಮರಸ’ ಎಂದರೆ ಸೀಕರಣೆಯಲ್ಲಿ ಮೀಯುತ್ತವೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ, ಅದೂ ಬೆಂಗಳೂರಿನಲ್ಲಿ ಸೀಕರಣೆಯ ಗಲಾಟೆ ಕಡಮೆ. ಮನೆಯ ಹಿಂದೆಯೇ ಬೆಂಗಳೂರಿನ ಸಂಸಾರವೊಂದು ಬೆಳಗಾವಿಗೆ ವರ್ಗವಾಗಿ ಬಂತು. ಸ್ನೇಹ ಬೆಳೆಯಿತು. ನಾವು ಊಟಕ್ಕೆ ಕರೆದು ಸೀಕರಣೆ ಮಾಡಿದ್ದೆವು. “ಹಣ್ಣು ಇಷ್ಟಾಪ್ಪ. ತಿಂತೇವೆ. ಆದರೆ ನೀವು ಕೈಯಿಂದ ಹಿಂಡಿ ಅದರ ರಸ ತೆಗೆಯುತ್ತೀರಲ್ಲ…. ಶೀಕರ್ಣಿ…. ತಿನ್ನಲು ಅಸಹ್ಯವೆನಿಸುತ್ತದೆ” ಎಂದಿದ್ದರು. ಕೈಯಿಂದ ಹಿಂಡಬಾರದೆಂದು ಹಣ್ಣನ್ನು ಮಿಕ್ಸಿಯಲ್ಲಿ ಹಾಕಿದರಂತೆ. ಆದರೆ ಅದು ಮಾವಿನ ‘ಸ್ಕ್ವಾಶ್’, ‘ಶೇಕ್’ ಆಯಿತು. ಸೀಕರಣೆಯಾಗಲಿಲ್ಲ. ನಿಧಾನವಾಗಿ ಸೀಕರಣೆಯ ರುಚಿಗೆ ಮನಸೋತವರು ಚೆನ್ನಾಗೇ ತಿನ್ನಲಾರಂಭಿಸಿದರು. “ಈಗ ಕೈ ಅಲ್ಲ…. ಕಾಲಿಂದ ಹಿಂಡಿದ್ರೂ ಚಪ್ಪರಿಸಿ ಹೊಡೀತಾರೆ!” – ಎಂದು ಅವರ ಹೆಂಡತಿ ರೇಗಿಸುತ್ತಿದ್ದರು.
ಸೀಕರಣೆಯ ರುಚಿಯೇ ಹಾಗೆ. ಮಾಯೆಯಾಗಿ ಎಂಥೆಂಥವರ ಮನಸ್ಸನ್ನೂ ವಿಚಲಿತವಾಗಿಸಿಬಿಡುತ್ತದೆ. ಒಮ್ಮೆ ನಮ್ಮ ಮನೆಗೆ ನೆಂಟರೊಬ್ಬರು ಬಂದಿದ್ದರು. ಯೋಗಪಟುಗಳಾದ ಅವರು ಊಟದಲ್ಲಿ ತುಂಬಾ ಕಟ್ಟುನಿಟ್ಟು. ಒಂದೇ ಚಪಾತಿ, ಒಂದು ಬಟ್ಟಲು ಪಲ್ಯ, ಒಂದು ಬಟ್ಟಲು ಹುಳಿ, ಒಂದು ಬಟ್ಟಲು ಅನ್ನ, ಅರ್ಧ ಬಟ್ಟಲು ಮಜ್ಜಿಗೆ! ಕೊಂಚವೂ ಜಾಸ್ತಿ ಸೇವಿಸುತ್ತಿರಲಿಲ್ಲ. ವಯಸ್ಸೂ ಎಂಭತ್ತರ ಮೇಲಿತ್ತು. ಆಗ ಮಾವಿನಹಣ್ಣಿನ ಕಾಲ. ಮನೆಯಲ್ಲಿದ್ದ ಬಾಕ್ಸನಲ್ಲಿ ಐದು ಹಣ್ಣುಗಳು ಉಳಿದಿದ್ದವು. “ಹೆಂಗೂ ಅವರೇನು ಹೆಚ್ಚು ತಿನ್ನೂದುಲ್ಲ. ತಿಂದರ ಒಂದ ಬಟ್ಟಲಾ….” ಎಂದು ಅಮ್ಮ ಹಣ್ಣುಗಳನ್ನು ಹಿಂಡಿ, ಅಪ್ಪನೊಂದಿಗೆ ಊಟಕ್ಕೆ ಬಡಿಸಿದಳು. “ಭಾಳ ಛೊಲೋ ಆಗೇದ್ರಿ ವೈನಿ…. ಇವತ್ತ ನನ್ನ ಊಟದ ಪದ್ಧತಿ ಬಿಟ್ಟು ಹೊಡದಬಿಡ್ತೇನಿ….” ಎಂದವರು ಎರಡರಿಂದ ನಾಲ್ಕು ಬಟ್ಟಲಿಗೇರಿದರು. ಸೂಕ್ಷ್ಮ ಅರಿತ ಅಪ್ಪ ಒಂದು ಬಟ್ಟಲಿನಲ್ಲೇ ಉಳಿದರು. ಐದನೇ ಬಟ್ಟಲಿಗೆ ಪಾತ್ರೆ ಖಾಲಿಯಾಯಿತು. ಅಮ್ಮನ ಮನಸ್ಸು ತಳಮಳಿಸಿತು. ಇನ್ನೂ ಅವರ ಊಟ ಮುಗಿದಿಲ್ಲ. ಕೊನೆಗೆ, “ವೈನಿ…. ಶೀಕರ್ಣಿ ತೊಗೊಂಬರ್ರಿ” ಎಂದಾಗ ಪಾತ್ರೆ ಎತ್ತಿಕೊಂಡವಳು ಜಾರಿಸಿ…. “ಅಯ್ಯಯ್ಯ ಬಿತ್ತಲ್ಲ ನಮ್ಮವ್ವಾ…. ಎಲ್ಲಾ ಶೀಕರ್ಣಿ ಚೆಲ್ಲಿ ಹೋತು” ಎಂದು ಇಲ್ಲದ ಸೀಕರಣೆಯನ್ನು ಚೆಲ್ಲಿ ‘ಉಶ್’ ಎಂದು ಉಸಿರು ಬಿಟ್ಟಳು! “ನಿಮಗಿಲ್ದಂಗಾತಲಾ….” ಎಂದು ಅವರೂ ಒದ್ದಾಡಿದರು.
ಪುರಾಣದ ನಂಟು
ದೇವತೆಗಳಿಗೂ ಈ ಮಾವಿನಹಣ್ಣು ಪ್ರಿಯವೆಂದು ಪುರಾಣಗಳಲ್ಲೂ ಉಲ್ಲೇಖವಿದೆ. ರಾಘವೇಂದ್ರ ಸ್ವಾಮಿಗಳು ತುಂಬಿದ ಸೀಕರಣೆಯ ಪಾತ್ರೆಯಲ್ಲಿ ಬಿದ್ದು ತೊಂದರೆಗೊಳಗಾದ ದೇಸಾಯರ ಮಗನನ್ನು ಉಳಿಸಿದ ಬಗ್ಗೆ ರಾಘವೇಂದ್ರ ಮಹಾತ್ಮೆ ಹೇಳುತ್ತದೆ…. ಮಾವಿನ ರೂಪ, ರುಚಿ ಅಪರೂಪ ಬಿಡಿ. ಎಲ್ಲೋ ಕೇಳಿದ ಜಾನಪದ ಕಥೆಯ ಪ್ರಕಾರ ಎಲ್ಲ ಹಣ್ಣುಗಳೂ ಭೂಮಿಗೆ ಬರುವಾಗ ಭಗವಂತನ ಬಳಿ ಹೋದವಂತೆ. ಬಾಳೆ, ಸೀಬೆ, ಸೇಬು ಮುಂತಾದ ಅನೇಕ ಹಣ್ಣುಗಳು ವರ್ಷಪೂರ್ತಿ ಸದಾ ಇರುವ ವರ ಬೇಡಿದವಂತೆ. ಭಗವಂತ ‘ತಥಾಸ್ತು’ ಎಂದ. ಮಾವು “ಮೂರೇ ತಿಂಗಳು ಜೀವ ಕೊಟ್ಟರೂ ಪರವಾಗಿಲ್ಲ, ವಿಜೃಂಭಿಸುವ ಹಾಗೆ ಮಾಡು” ಎಂದು ಬೇಡಿತಂತೆ. ಅದಕ್ಕೂ ‘ತಥಾಸ್ತು’ ಎಂದ ಭಗವಂತ. ಸದಾ ಉಳಿವ ವರ ಬೇಡಿದ ಹಣ್ಣುಗಳು ಮಾವನ್ನು ನೋಡಿ ನಕ್ಕವು. ಆದರೆ ಮುಂದೆ ಅವುಗಳಿಗೆ ಅರಿವಾಗತೊಡಗಿತು. ಮಾವಿನ ಕಾಲದಲ್ಲಿ ತಮ್ಮನ್ನು ಕೇಳುವವರಿಲ್ಲ. ಕಾಯಿಯಾಗಿರುವಾಗಲೂ ರುಚಿಯಾಗೇ ತಿಂದು, ಚಟ್ನಿಯಾಗಿ ಕುಟ್ಟಿಸಿಕೊಂಡು, ಉಪ್ಪಿನಕಾಯಿಯಾಗಿ ಜಾಡಿಯಲ್ಲಿ ಸೇರಿ ವರ್ಷಪೂರ್ತಿ ಉಳಿದ ಮಾವು ಹಣ್ಣಾಗಿ ಸೀಕರಣೆಯಾಗಿ ಅಮರವಾಯಿತು!
ಏನಿದ್ದರೂ ಮಳೆ ಬರುವವರೆಗೆ ಮಾತ್ರ ಮಾವಿನಹಣ್ಣುಗಳ ಹಾರಾಟ. ಮಳೆ ಆರಂಭವಾದರೆ ತಿನ್ನಲಾಗುವುದಿಲ್ಲ. “ಹುಳ ಬೀಳ್ತಾವ” ಎಂದು ಹಿರಿಯರು ಅಡ್ಡಿಪಡಿಸುತ್ತಾರೆ. ಹಿಂದೆ ಹಳ್ಳಿಗಳಲ್ಲಂತೂ ಮಳೆಯ ನಂತರ ಉಳಿದ ಮಾವುಗಳನ್ನು ದನಗಳಿಗೂ ಹಾಕದೆ ಕಾಲಿನಿಂದ ತುಳಿದು ನಾಶಮಾಡುತ್ತಿದ್ದರಂತೆ! ಇತ್ತೀಚಿನವರು ಹಾಗೇನು ನಂಬುವುದಿಲ್ಲ. ಸೀಸನ್ ಮುಂದೋಡುತ್ತಲೇ ಇರುತ್ತದೆ. ಆದರೂ ಜೀವನದ ಪರಮ ಸತ್ಯವೊಂದು ಮಾವಿನಲ್ಲಿ ಅಡಗಿಲ್ಲವೇ? ಮೂರೋ ನಾಲ್ಕೋ ತಿಂಗಳ ಬದುಕಿನಲ್ಲಿ ಜನರೆಲ್ಲ ನೆನೆಯುವಂತೆ ರುಚಿಕಟ್ಟಾಗಿ, ಪರೋಪಕಾರಿಯಾಗಿ ವೈಭವದಿಂದ ಮೆರೆದು ಬದುಕು ಮುಗಿಸುತ್ತದೆ. ಮುಂದಿನ ವರ್ಷಕ್ಕೆ ಕಾಯುವಂತೆ ಮಾಡುತ್ತದೆ. ನಮ್ಮ ಬದುಕೂ ಹಾಗೇ ಇದ್ದರೆ ಚೆನ್ನ ಅಲ್ಲವೇ?