ರಾಕ್ಷಸನ ಹರಿತವಾದ ಖಡ್ಗದ ಹೊಡೆತಕ್ಕೆ ಎರಡೂ ರೆಕ್ಕೆಗಳು ಕತ್ತರಿಸಲ್ಪಟ್ಟು ನೆಲಕ್ಕೆ ಬಿದ್ದುಬಿಟ್ಟೆ. ರಕ್ತ ಧಾರೆಧಾರೆಯಾಗಿ ಹರಿದು ಹೋಗುತ್ತಿತ್ತು. ಸಮೀಪದಲ್ಲಿ ಆ ದುಷ್ಟನ ಕೈಯಲ್ಲಿ ಸಿಲುಕಿದ ಜಾನಕಿಯ ಆರ್ತನಾದ ಕೇಳುತ್ತಿತ್ತು. ವಿಲಪಿಸುವುದನ್ನು ಉಳಿದು ಬೇರೇನೂ ಮಾಡಲಾಗದ ನನ್ನ ಕಿವಿಗಳಿಗೆ ಅವಳ ದನಿ ಅಸ್ಪಷ್ಟವಾಗುತ್ತ ಕೊನೆಗೆ ಕೇಳಿಸದಾಯಿತು. ಅವರಿಬ್ಬರೂ ನನ್ನಿಂದ ದೂರವಾಗುತ್ತಿರುವುದು ತಿಳಿಯಿತು. ಅಯ್ಯೋ! ಅಮಾಯಕಳಾದ ಮೈಥಿಲಿಯನ್ನು ರಕ್ಷಿಸಲಾರದೇ ಹೋದೆನಲ್ಲಾ! ಈ ವೇದನೆ ದೇಹದ ಯಾತನೆಗಿಂತ ಅಧಿಕವಾಗಿ ತೋರಿತು. ಅವಳಾದರೋ ಅಸಹಾಯಕಳೂ ಆರ್ತಳೂ ಆಗಿ ಕಣ್ಣೀರ್ಗರೆಯುತ್ತ ರಾಮ ಲಕ್ಷ್ಮಣರನ್ನು ಕೂಗಿ ಕರೆಯುತ್ತಿದ್ದಳು. ಅವರಿಲ್ಲದ ಕಾಲದಲ್ಲಿ ಸೀತೆಯನ್ನು ಸಂರಕ್ಷಿಸುವ ಹೊಣೆಯನ್ನು ಹೊರಬೇಕಾದವನು ನಾನು. ರಾಮನೆದುರು ಅದನ್ನಾಡಿಯೂ ಇದ್ದೆ. ಆದರೇನು, ಇದೀಗ ಹೀಗಾಗಿಹೋಯಿತಲ್ಲ!
ಕೊಂಚ ಹೊತ್ತಿನ ಹಿಂದೆ ಎಲ್ಲೋ ಪರ್ವತಾಗ್ರದಲ್ಲಿ ಕುಳಿತಿದ್ದೆ. ವೃದ್ಧನಾದುದರಿಂದ ಹಿಂದಿನಂತೆ ಇಷ್ಟಬಂದಂತೆ ಹಾರಾಡುವುದು ಸಾಧ್ಯವಾಗುತ್ತಿರಲಿಲ್ಲ. ಅಥವಾ ಉತ್ಸಾಹವಿರಲಿಲ್ಲ ಎಂದರೂ ಸರಿಯೇ. ದೈಹಿಕ ಬಲವೇನೋ ಇನ್ನೂ ಇತ್ತು. ಆದರೆ ಏನೋ ವಿಷಣ್ಣತೆಯ ಕಾರಣ ನಿಷ್ಕ್ರಿಯನಾಗಿ ಕುಳಿತಿದ್ದೆ. ಆಗ ಸೀತೆಯ ಆರ್ತನಾದ ಕಿವಿಗಳಿಗೆ ಬಡಿಯಿತು. ಮೊದಲು ಯಾರು ಎನ್ನುವುದು ಗಮನಕ್ಕೆ ಬರಲಿಲ್ಲ. ಹೆಣ್ಣೊಬ್ಬಳನ್ನು ಯಾರೋ ಪೀಡಿಸುತ್ತಿದ್ದಾರೆ ಎಂದುಕೊಂಡೆ. ಆದರೆ ಯಾವಾಗ ಅವಳು ರಾಮಲಕ್ಷ್ಮಣರನ್ನು ಕರೆಯಲಾರಂಭಿಸಿದಳೋ ಆ ಕ್ಷಣ ಜಾಗೃತನಾದೆ. ಹೌದು ಇದು ಸೀತೆಯ ಧ್ವನಿ. ಮತ್ತೆ ತಡಮಾಡಲಿಲ್ಲ. ಆಕಾಶದಲ್ಲಿ ಎತ್ತರಕ್ಕೇರಿ ಸುತ್ತ ಹದ್ದಿನಕಣ್ಣು ಹಾಯಿಸಿದೆ. ಅದೋ ಅಲ್ಲಿ, ಅನತಿ ದೂರದಲ್ಲಿ ಯಾವುದೋ ಒಂದು ರಥದಂತಹ ವಿಮಾನವು ಹಾರುತ್ತಾ ಈ ಕಡೆಗೆ ಬರುತ್ತಿದೆ! ಕರ್ರಗಿನ ಮೈಯ, ಸ್ವರ್ಣಾಭರಣ ಭೂಷಿತನಾದ ದೈತ್ಯನೊಬ್ಬ ಅಬಲೆಯಾದ ಜಾನಕಿಯನ್ನು ಬಲಾತ್ಕಾರದಿಂದ ಎಳೆದೊಯ್ಯುತ್ತಿದ್ದಾನೆ. ಅವರನ್ನು ಸಮೀಪಿಸುತ್ತಿದ್ದಂತೆ ಬೃಹದಾಕಾರದಲ್ಲಿದ್ದ ನನ್ನನ್ನು ಜಾನಕಿ ಗುರುತಿಸಿದಳು.
“ಅಯ್ಯಾ ಪಕ್ಷಿರಾಜನಾದ ಜಟಾಯುವೆ, ಇದೋ ಈ ದುಷ್ಟನಾದ ರಾವಣನು ಅಬಲೆಯಾದ ನನ್ನನ್ನು ಅಪಹರಿಸುತ್ತಿದ್ದಾನೆ. ನಾನು ತಪ್ಪಿಸಿಕೊಳ್ಳುವ ದಾರಿ ಕಾಣದು. ದಯವಿಟ್ಟು ರಾಮ ಲಕ್ಷ್ಮಣರಿಗೆ ನನ್ನನ್ನು ರಾವಣನೆಂಬ ಅಸುರನು ಕೊಂಡೊಯ್ದನೆಂದು ತಿಳಿಸು… ಅಯ್ಯೋ ರಾಮಾ ಲಕ್ಷ್ಮಣಾ…” ಅವಳ ಮೊರೆಯನ್ನು ಕೇಳಿದ ಬಳಿಕ ಸುಮ್ಮನಿರುವುದು ನನ್ನಿಂದಾಗಲಿಲ್ಲ. ತಡೆಯುವುದಕ್ಕೆ ಮುಂದಾದೆ. ಆಗ ಆ ರಥದ ವಿಶಿಷ್ಟತೆಯು ಗಮನಕ್ಕೆ ಬಂತು.
ರಾವಣನ ರಥಕ್ಕೆ ಕುದುರೆಗಳ ಬದಲಾಗಿ ಕತ್ತೆಗಳನ್ನು ಕಟ್ಟಿದ್ದರು. ಅದು ಚಕ್ರಗಳ ಚಲನೆಯಿಂದ ಸಾಗುತ್ತಿದ್ದುದಲ್ಲ. ಸ್ವಯಂಶಕ್ತಿಯಿಂದ ಆಕಾಶದಲ್ಲಿ ಹಾರುತ್ತಿತ್ತು. ಅದರ ವಿಶೇಷವೇನೇ ಇರಲಿ, ಸದ್ಯ ನಾನೂ ಹಾರಬಲ್ಲವನಾದ್ದರಿಂದ ಅವನನ್ನು ತಡೆಯುವುದು ಶಕ್ಯವಿತ್ತು. ಅಲ್ಲದೆ ನಾನು ಸೀತಾರಕ್ಷಣೆ ಮಾಡುವ ಬದ್ಧತೆಯುಳ್ಳವನಾದುದರಿಂದ ಅದಕ್ಕೆ ಮುಂದಾಗಬೇಕಾದುದು ಧರ್ಮ ಎಂದು ಯೋಚಿಸಿದೆ. ಅವಳು ರಾಮಲಕ್ಷ್ಮಣರ ಹೆಸರೆತ್ತಿ ಕೂಗುತ್ತಿದ್ದುದರಿಂದ
ಈ ಧೂರ್ತ ಅವರಿಲ್ಲದ ಸಂದರ್ಭ ಸಾಧಿಸಿ ಅಪಹರಣಕ್ಕೆ ಮುಂದಾಗಿರಬೇಕು. ಇನ್ನು ವಿಳಂಬ ಸಲ್ಲದೆಂದು ರೆಕ್ಕೆ ಬಿಡಿಸಿ ಅವನ ರಥದ ಮುಂದೆ ಹಾರಿ ಬಂದೆ. ನನ್ನನ್ನು ಕಂಡಾಗ ರಥ ನಿಂತಿತು.
ಅಪಹರಣಕಾರ ನನ್ನನ್ನೇ ನೋಡಿದ. ಅವನ ದೇಹದಾಢ್ರ್ಯ ಹಾಗೂ ಲಕ್ಷಣಗಳನ್ನು ನೋಡಿದರೆ ರಾಕ್ಷಸನಂತಿದ್ದ. ಕಪ್ಪಾದ ಮೈಯಲ್ಲಿಯೂ ಒಂದು ಆಕರ್ಷಣೆಯಿತ್ತು. ಸುಸಂಸ್ಕೃತನಂತೆ ಕಾಣುತ್ತಿದ್ದ. ಆದರೆ ಕಣ್ಣುಗಳಲ್ಲಿ ಕ್ರೌರ್ಯ. ಈಗಾಗಲೇ ರಾವಣನ ಕುರಿತು ಕೇಳಿದ್ದೆ. ಆದರೆ ನೋಡಿರಲಿಲ್ಲ. ಅವರ ಪರಸ್ತ್ರೀ ವ್ಯಾಮೋಹದ ಕುರಿತು ತಿಳಿದವರು ಹೇಳುವುದನ್ನು ಕೇಳಿದ್ದೆ. ಈಗ ಅವನ ದೃಷ್ಟಿ ರಾಮನ ಪತ್ನಿಯ ಮೇಲೆ! ನೇರ ಆಕ್ರಮಣವೆಸಗುವುದಕ್ಕಿಂತ ಅವನ ವಿವೇಕವು ಜಾಗೃತಗೊಳ್ಳುವಂತೆ ಮಾಡಿ ನೋಡೋಣ ಎಂದುಕೊಂಡೆ. ಯಾಕೆಂದರೆ ನಾನು ಎಷ್ಟು ಬಲಶಾಲಿಯಾಗಿದ್ದರೂ ವರಬಲ, ಶಸ್ತ್ರಬಲ, ದೇಹಬಲಗಳಿಂದ ಪ್ರಮತ್ತನಾದ ರಾವಣನನ್ನು ಗೆಲ್ಲುವುದು ಸಾಧ್ಯವಿರಲಿಲ್ಲ. ಅಲ್ಲದೆ ರಾವಣನು ವಿಶ್ರವಸು ಮಹರ್ಷಿಯ ಪುತ್ರನೆಂದು ಕೇಳಿದ್ದೆ. ಹಾಗಾಗಿ ನೀತಿಯುಕ್ತವಾದ ಮಾತನ್ನು ಕೇಳಿದರೂ ಕೇಳಿಯಾನು ಅಥವಾ ಅಷ್ಟು ಹೊತ್ತು ತಡೆದರೆ ರಾಮಲಕ್ಷ್ಮಣರು ಬಂದರೂ ಬರಬಹುದು ಎಂದು ಆಲೋಚಿಸಿದೆ. ಅವನಲ್ಲಿ ಹೀಗೆಂದೆ,
“ಅಯ್ಯಾ ರಾವಣ, ನಿನ್ನ ಪ್ರಸಿದ್ಧಿಯನ್ನು ನಾನು ಕೇಳಿಬಲ್ಲೆ. ಬಹುಪರಾಕ್ರಮಶಾಲಿಯೂ, ಸ್ವರ್ಣಲಂಕಾಧೀಶನೂ ಆದ ನಿನಗೆ ಇದು ಯೋಗ್ಯವಲ್ಲ. ದಶರಥನ ಸೊಸೆಯೂ, ರಾಮನ ಪತ್ನಿಯೂ ಆದ ಸೀತೆಯನ್ನು ಕದ್ದೊಯ್ಯುವುದು ಯುಕ್ತವಲ್ಲ. ಅಪಕೀರ್ತಿಕರವಾದ ಈ ಪ್ರಯತ್ನವನ್ನು ಕೈಬಿಡು. ಒಂದು ವೇಳೆ ನೀನು ಅವಳನ್ನು ಒಯ್ದರೂ ಉಳಿಸಿಕೊಳ್ಳಲಾರೆ. ಸಕಲ ಶಸ್ತ್ರಾಸ್ತ್ರವಿದನಾದ ರಾಮ ಇದನ್ನು ಸಹಿಸಿಕೊಂಡು ಸುಮ್ಮನಿರುವನೆಂದು ತಿಳಿಯಬೇಡ. ಹರಿತವಾದ ಬಾಣಗಳಿಂದ ನಿನ್ನನ್ನು ಶಿಕ್ಷಿಸುತ್ತಾನೆ. ವಿನಾ ಕಾರಣ ಅವನ ಆಗ್ರಹಕ್ಕೆ ತುತ್ತಾಗಬೇಡ.”
ನನ್ನ ಮಾತುಗಳನ್ನು ಅವನು ಕೇಳಿದ. ಆದರೆ ಉತ್ತರಿಸಲಿಲ್ಲ. ಕೋಪದಿಂದ ಅವನ ಕಣ್ಣುಗಳು ಮತ್ತಷ್ಟು ಕೆಂಪೇರಿದವಷ್ಟೆ. ನಾನು ಅವನ ರಥದ ಎದುರೇ ಅಡ್ಡವಿಸಿ ನಿಂತ ಕಾರಣದಿಂದ ಅವನಿಗೆ ಮುಂದುವರಿಯುವುದು ಸಾಧ್ಯವಿರಲಿಲ್ಲ. ಯಾಕೆ ಇವನು ಈ ಕುಕೃತ್ಯಕ್ಕೆ ಮುಂದಾದ ಎಂಬ ಪ್ರಶ್ನೆಗೆ ನನಗೆ ದೊರೆತ ಉತ್ತರ ಹಳೆಯ ಪ್ರಕರಣಗಳು. ಅದನ್ನೇ ಉಲ್ಲೇಖಿಸುತ್ತ ಹೇಳಿದೆ,
“ನಿನಗೆ ರಾಮನ ಕುರಿತು ಹಗೆತನ ಇರುವುದಾದರೆ ಶೂರ್ಪನಖೆಯ ನಾಸಾಛೇದ ಹಾಗೂ ಖರಾದಿಗಳ ಸಂಹಾರದ ಕಾರಣದಿಂದ ಇರಬೇಕು. ಅದರಲ್ಲಿ ರಾಮನ ಅಪರಾಧವೇನು? ಶೂರ್ಪನಖೆಯ ಅಪೇಕ್ಷೆ ರಾಮನಂತಹ ಉದಾತ್ತನಿಗೆ ಸಹ್ಯವಲ್ಲ. ಅವಳ ಅಪರಾಧಕ್ಕಾಗಿ ಅವಳನ್ನು ರಾಮ ಶಿಕ್ಷಿಸಿದ. ಖರ ಮತ್ತವನ ಸಹೋದರರು ಮೇಲೆ ಬಿದ್ದು ಯುದ್ಧಕ್ಕೆ
ತೊಡಗಿದಾಗ ಕ್ಷತ್ರಿಯನಾದ ರಾಮ ಅವರನ್ನು ಎದುರಿಸಿದ. ಅವರು ಪ್ರಾಣತೆತ್ತರು. ಇದರ ಹೊರತು ರಾಮ ವಿನಾಕಾರಣ ಹಗೆತನ ಸಾಧಿಸಿದ್ದಿಲ್ಲ. ತನ್ನ ಅಪೇಕ್ಷೆಗೆ ರಾಮ ಮಣಿಯತಕ್ಕದ್ದೆಂದು ಶಾಸನ ಮಾಡುವ ಅಧಿಕಾರ ಶೂರ್ಪನಖಿಗಾಗಲೀ ಇತರ ರಾಕ್ಷಸರಿಗಾಗಲೀ ಎಲ್ಲಿದೆ? ಅವರವರ ಸಂಸ್ಕಾರದಂತೆ ಜೀವಿಸುವ ಹಕ್ಕು ಅವರದು. ಹಾಗಾಗಿ ಅಲ್ಲಿ ರಾಮನ ತಪ್ಪನ್ನು ಕಾಣುವಂತಿಲ್ಲ. ಅದಕ್ಕಾಗಿ ಇಂತಹ ಹೇಯ ಕಾರ್ಯ ಸಮಂಜಸವಲ್ಲ. ಮುಂದಿನ ಪರಿಣಾಮವನ್ನು ಲಕ್ಷಿಸಿ ಈ ದುಸ್ಸಾಹಸವನ್ನು ಕೈಬಿಡು.”
ನನ್ನ ಮಾತುಗಳು ರಾವಣನ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಅವನ ಕ್ರೋಧ ಹೆಚ್ಚಾಯಿತು ಮಾತ್ರ. ಅವನು ಮುಂದುವರಿಯುವುದಕ್ಕೆ ಯತ್ನಿಸುತ್ತಿದ್ದ. ನಾನು ತಡೆಯುವಂತೆ ರೆಕ್ಕೆಗಳನ್ನು ನೀಳವಾಗಿ ಹರಡಿ ನಿಂತಿದ್ದೆ. ನನ್ನನ್ನು ಬಲವಂತವಾಗಿ ಸರಿಸಿ ಮುಂದೆ ಸಾಗುವುದಲ್ಲದೆ ಅವನಿಗೆ ಬೇರೆ ದಾರಿ ಇರಲಿಲ್ಲ. ಅವನು ಆಯುಧ ಎತ್ತಿದರೆ ಯುದ್ಧ ಅನಿವಾರ್ಯವಿತ್ತು. ಅವನು ಯೋಚಿಸುತ್ತಿದ್ದ. ಎಷ್ಟೇ ಪ್ರಬಲನಾದರೂ ವಿರೋಧಿಯ ಪರಿಚಯವಿಲ್ಲದೆ ಮೇಲೆ ಬೀಳುವುದು ಕ್ಷೇಮವಲ್ಲವಷ್ಟೆ?
ನಾನಾದರೋ ಅವನಷ್ಟು ಶಕ್ತಿವಂತನಲ್ಲವಾದರೂ ವೃದ್ಧನಾಗಿದ್ದರೂ ತೀರ ದುರ್ಬಲನಾಗಿರಲಿಲ್ಲ. ಅಲ್ಲದೆ ದಶರಥ ಹಾಗೂ ರಾಮನ ಕುರಿತ ಗೌರವ, ಸೀತೆಯ ಆರ್ತತೆ ಒಂದು ಹೊಸಶಕ್ತಿಯನ್ನು ನನ್ನಲ್ಲಿ ಸಂಚಯಿಸುವಂತೆ ಮಾಡಿತ್ತು. ಪ್ರಾಣದ ಹಂಗಿಲ್ಲದ ಹೋರಾಟಕ್ಕೆ ನಾನು ಸಜ್ಜಾಗಿಯೇ ಇದ್ದೆ. ರಾವಣ ರಥದಲ್ಲಿದ್ದ ಧನುರ್ಬಾಣಗಳನ್ನು ಎತ್ತಿಕೊಂಡ. ಹುಬ್ಬುಗಂಟಿಕ್ಕಿ, ‘ದೂರಸರಿ ದುಷ್ಟಪಕ್ಷಿ’ ಎಂದ.
“ಇಲ್ಲ. ನಿನ್ನನ್ನು ಹೋಗಗೊಡಲಾರೆ. ಒಂದೋ ಈ ಕಳ್ಳತನದ ಕೆಲಸ ನಿಲ್ಲಿಸು. ಅಲ್ಲವಾದರೆ ನನ್ನನ್ನು ಎದುರಿಸು” ಎಂದೆ ನಾನು. ಸಾಯುವುದಿದ್ದರೂ ಅವನನ್ನು ಸಾಧ್ಯವಾದಷ್ಟು ಹೊತ್ತು ತಡೆದು ನಿಲ್ಲಿಸಿ ರಾಮಲಕ್ಷ್ಮಣರನ್ನು ನಿರೀಕ್ಷಿಸುತ್ತಿರೋಣ ಅಂತ ಯೋಚಿಸಿದೆ. ಕಾದಾಟಕ್ಕೆ ಸನ್ನದ್ಧನಾದೆ.
ರಾವಣ ಹೆದೆಯೇರಿಸಿ ಎಡೆಬಿಡದೆ ಬಾಣಗಳನ್ನು ಪ್ರಯೋಗಿಸಲಾರಂಭಿಸಿದ. ದಟ್ಟವಾಗಿ ಬೆಳೆದಿದ್ದ ಗರಿಗಳ ದೆಸೆಯಿಂದ ನನ್ನ ದೇಹಕ್ಕೆ ಗಾಯವಾಗಲಿಲ್ಲ. ಅನೇಕ ಬಾಣಗಳನ್ನು ರೆಕ್ಕೆಗಳ ಬೀಸುವಿಕೆಯಿಂದ ಹಾರಿಸಿದೆ. ಕೆಲವನ್ನು ಕೊಕ್ಕಿನಿಂದ ಕಚ್ಚಿ ಮುರಿದೆ. ಹಲವನ್ನು ಕೈಗಳಲ್ಲಿ ಹಿಡಿದು ತುಂಡರಿಸಿದೆ. ನಡುನಡುವೆ ಅವನ ಮೇಲೆ ಎರಗುತ್ತಿದ್ದೆ. ಅವನ ಕೈಗಳನ್ನು ಕುಕ್ಕಿದೆ. ಕವಚವನ್ನು ಹರಿದೆ. ಧ್ವಜದಂಡವನ್ನು ಮುರಿದೆ. ನನ್ನ ಹರಿತವಾದ ಉಗುರುಗಳು ಹಾಗೂ ಕೊಕ್ಕಿನ ದೆಸೆಯಿಂದ ರಾವಣನ ಮೈಯೆಲ್ಲ ಗಾಯಗಳಾದವು ನೆತ್ತರು ಸುರಿಯತೊಡಗಿತು. ಅವನು ಆಯಾಸಗೊಳ್ಳುತ್ತಿದ್ದ. ಬಹುಬಲಶಾಲಿಯಾದ ಅವನಿಗೆ ನಾನು ಎದುರಾಳಿಯಲ್ಲ. ಆದರೆ ಅವನಲ್ಲಿಲ್ಲದ ಒಂದು ಬಲ ನನಗಿತ್ತು. ನಾನು ಧರ್ಮವನ್ನು ನಂಬಿ ಹೋರಾಡುತ್ತಿದ್ದೆ. ಇಂತಹ ಒಂದು ವಿಶ್ವಾಸ ಕೊಡುವ ಸ್ಥೈರ್ಯ ನನ್ನಲ್ಲಿತ್ತು. ಅವನಾದರೂ ಕಳ್ಳತನ ಮಾಡುವಾಗ ಸಿಕ್ಕಿಬಿದ್ದವನು. ಅದರಿಂದ ಹುಟ್ಟಿದ ಒಂದು ಅಳುಕು ಅವನನ್ನು ಹತಪ್ರಭನನ್ನಾಗಿ ಮಾಡುತ್ತಿತ್ತು.
ಕೊಂಚಕಾಲ ಹೀಗೆಯೇ ಯುದ್ಧ ಸಾಗಿತು. ಅವನ ಕತ್ತೆಗಳನ್ನೂ, ಸಾರಥಿಯನ್ನೂ ಕೊಂದುಹಾಕಿದೆ. ನನ್ನ ರೆಕ್ಕೆಗಳ ಘಾತಕ್ಕೆ ಅವನ ರಥವೂ ಪುಡಿಯಾಯಿತು. ಛಿದ್ರವಾದ ರಥದೊಂದಿಗೆ ಅವನು ನೆಲಕ್ಕೆ ಬಿದ್ದ. ನಾನೂ ಕೆಳಗಿಳಿದು ಹೋರಾಡತೊಡಗಿದೆ. ಇಲ್ಲಿ ಒಂದು ತೊಡಕಿತ್ತು. ನನಗೆ ಆಕಾಶದಲ್ಲಿ ಸಹಜ ಚಲನೆಯಿಂದಾಗಿ ಅವನನ್ನು ಆಕ್ರಮಿಸುವುದು ಸುಲಭ. ಆದರೆ ನೆಲದಲ್ಲಿ ವೇಗದ ಚಲನೆ ಕಷ್ಟವಾಗುತ್ತಿತ್ತು. ಅವನೀಗ ಖಡ್ಗವನ್ನೆತ್ತಿಕೊಂಡಿದ್ದ. ಬಿಲ್ಲು ಬಾಣ ಹಿಡಿದವನ ಸಮೀಪ ನಿಂತು ಹೋರಾಡುವುದು ಕಷ್ಟವಾಗುತ್ತಿರಲಿಲ್ಲ. ಆದರೆ ಖಡ್ಗ ಹಿಡಿದವನ ಬಳಿಗೆ ಹೋಗುವಂತಿರಲಿಲ್ಲ. ಅವನು ಸರಿಯಾದ ಸಂದರ್ಭಕ್ಕೆ ಕಾಯುತ್ತಿದ್ದ. ಹೋರಾಡುತ್ತ ನನಗೆ ಆಯಾಸ ಹೆಚ್ಚುತ್ತಿತ್ತು. ಅವನು ಸಾಕಷ್ಟು ಗಾಯಗೊಂಡಿದ್ದನಾದರೂ ಅವನಲ್ಲಿ ಚೈತನ್ಯ ಉಳಿದಿತ್ತು. ನಾನು ಸೋಲುತ್ತ ಬಂದೆ. ಕೊನೆಗೆ ಆದದ್ದಾಗಲಿ ಎಂದು ಕೊನೆಯ ಆಕ್ರಮಣವೆಸಗಿದೆ. ಆದರೇನು? ಅವನನ್ನು ಮುಟ್ಟುವ ಮುನ್ನವೇ ಖಡ್ಗಪ್ರಹಾರದಿಂದ ನನ್ನ ಎರಡೂ ಪಕ್ಷಗಳನ್ನು ಕತ್ತರಿಸಿಬಿಟ್ಟ. ಅವನ ನೆತ್ತಿಯ ಮೇಲೆ ಹಾರಾಡುತ್ತಿದ್ದ ನಾನು ಅಸಹಾಯನಾಗಿ ನೆಲಕ್ಕೆ ಬಿದ್ದೆ. ಅಲ್ಲಿಗೆ ನನ್ನ ಹೋರಾಟ ಕೊನೆಯಾಯಿತು. ರಾವಣ ಸೀತೆಯನ್ನು ಬಂಧಿಸಿ ಗಗನಮಾರ್ಗವಾಗಿ ಹಾರಿಹೋದ.
ನಾನು ನನ್ನ ನೆತ್ತರಿನಲ್ಲಿ ಹೊರಳುತ್ತ ಬಿದ್ದಿದ್ದೆ. ದೇಹ ಜರ್ಝರಿತವಾಗಿತ್ತು. ಮನಸ್ಸು ವಿಹ್ವಲವಾಗಿತ್ತು. ಇನ್ನೇನು ನನ್ನ ಅಂತಿಮಕ್ಷಣ ಬಂತು ಎಂದುಕೊಂಡೆ.
ಆ ಗಳಿಗೆಯಲ್ಲಿ ನೆನಪಾದದ್ದು ನನ್ನ ಅಣ್ಣ ಸಂಪಾತಿಯದು. ಎಳವೆಯ ದಿನಗಳಲ್ಲಿ ಒಂದು ಸಲ ಸ್ಪರ್ಧಾಬುದ್ಧಿಯಿಂದ ಸೂರ್ಯನ ಎತ್ತರಕ್ಕೆ ಹಾರಲು ಹೊರಟೆವು. ನಮ್ಮ ತಂದೆ ಅರುಣನ ಸಮೀಪ ಹೋಗುತ್ತೇವೆಂಬ ಕಲ್ಪನೆಯೂ ಇದ್ದಿರಬಹುದು. ಮೇಲೇರುತ್ತಿದ್ದಂತೆ ಸೂರ್ಯನ ತಾಪಕ್ಕೆ ನಾನು ಕಂಗೆಡತೊಡಗಿದೆ. ಕಣ್ಣುಕತ್ತಲೆ ಬರಲಾರಂಭಿಸಿತು. ನನ್ನ ಅಣ್ಣ ಸಂಪಾತಿಗೆ ಇದು ಅರಿವಿಗೆ ಬಂದಿರಬೇಕು. ತಮ್ಮನ ಮೇಲಣ ಮಮಕಾರದಿಂದ ಸ್ಪರ್ಧೆಯನ್ನು ಬಿಟ್ಟು ತನ್ನ ಎರಡೂ ರೆಕ್ಕೆಗಳನ್ನು ನನ್ನ ಮೇಲೆ ನೆರಳಾಗಿ ಹರಡಿ ಕಾಪಾಡುವುದಕ್ಕೆ ಮುಂದಾದ. ನಾನೇನೋ ಉಳಿದುಕೊಂಡೆ. ಆದರೆ ನನ್ನಣ್ಣ ಸಂಪಾತಿಯ ರೆಕ್ಕೆಗಳು ಸುಟ್ಟುಹೋದವು. ನಾನು ಪ್ರಜ್ಞೆ ಕಳೆದುಕೊಂಡು ದಂಡಕಾರಣ್ಯ ಪ್ರದೇಶದಲ್ಲಿ ಬಿದ್ದೆ. ಚೇತರಿಸಿಕೊಳ್ಳುವುದಕ್ಕೆ ಬಹುಕಾಲ ಬೇಕಾಯಿತು. ಅಣ್ಣ ಬದುಕಿದ್ದಾನೋ, ನನ್ನ ಪತ್ನಿ ಮಕ್ಕಳೆಲ್ಲ ಎಲ್ಲಿದ್ದಾರೊ ತಿಳಿಯದಾಯಿತು. ಆಮೇಲೆ ಒಂಟಿಯಾದ ಬದುಕು ನನ್ನದು. ಕೆಲವು ಕಾಲದ ಹಿಂದೆ ರಾಮಾದಿಗಳು ಅರಣ್ಯಕ್ಕೆ ಬಂದಾಗ ಅವರನ್ನು ಸಂಧಿಸಿ ದಶರಥ ಭೂಪತಿಯ ಸ್ನೇಹವನ್ನು ನೆನಪಿಸಿಕೊಂಡು ಅವರ ಹಿತೈಷಿಯಾಗಿ ಸಮೀಪದಲ್ಲಿ ವಾಸವಾಗಿದ್ದೆ. ಅಯ್ಯೋ ಈಗ ಹೀಗಾಯಿತಲ್ಲ!
*******
ಎಚ್ಚರವೋ ಕನಸೋ ನಿದ್ರೆಯೋ ಏನೆಂದೇ ಅರಿಯದ ಒಂದು ಅವಸ್ಥೆಯಲ್ಲಿ ಎಷ್ಟೋ ಕಾಲ ಬಿದ್ದಿದ್ದೆ. ನನ್ನ ಪ್ರಾಣ ಉಳಿಯುವುದಿಲ್ಲ ಎನ್ನುವುದು ಖಚಿತವಾಗಿತ್ತು. ಆದರೆ ಸಾಯುವ ಮುನ್ನ ರಾಮನ ದರ್ಶನವಾದರೆ ಸಾಕು ಎಂದಷ್ಟೇ ನನ್ನ ಅಪೇಕ್ಷೆಯಿದ್ದುದು. ಅವನನ್ನು ಕಂಡು ರಾವಣ ಸೀತೆಯನ್ನು ಅಪಹರಿಸಿದ್ದಾನೆ ಎಂಬ ಮಾತನ್ನು ಹೇಳಬೇಕಿತ್ತು. ಆಮೇಲೆ ಬದುಕುವ ಹಂಬಲವಾಗಲೀ ಭರವಸೆಯಾಗಲೀ ನನಗಿರಲಿಲ್ಲ.
ಹೀಗೆ ನರಳುತ್ತ ಮಲಗಿದ್ದ ನನ್ನ ಮಂಜಾದ ದೃಷ್ಟಿಗೆ ದೂರದಲ್ಲಿ ನಡೆದು ಬರುತ್ತಿದ್ದ ಇಬ್ಬರು ಕಾಣಿಸಿದರು. ಅವರು ರಾಮಲಕ್ಷ್ಮಣರಿರಬಹುದು ಎಂಬ ನಿರೀಕ್ಷೆ ನಿಜವಾಯಿತು. ಅವರು ನನ್ನ ಬಳಿಗೆ ಬಂದರು. ಅಸಹಾಯಕನಾಗಿ ಬಿದ್ದ ನನ್ನಲ್ಲಿ ಮಾಯೆಯನ್ನು ಶಂಕಿಸಿದರೋ ಎಂಬಂತೆ ಅವರ ಕೈಗಳು ಆಯುಧವನ್ನು ತುಡುಕಿದವು. ಆದರೆ ನನ್ನ ಧ್ವನಿಯನ್ನು ಕೇಳಿ ಗುರುತಿಸಿದರೋ ಎನ್ನುವಂತೆ ಸನಿಹದಲ್ಲಿ ಬಂದು ನಿಂತರು. ಅವರನ್ನು ಉದ್ದೇಶಿಸಿ ತಡವರಿಸುತ್ತಿದ್ದ ನಾಲಗೆಯಿಂದ ಹೀಗೆ ಹೇಳಿದೆ,
“ಅಯ್ಯಾ, ನಾನು ಜಟಾಯು. ರಾವಣನು ಸೀತೆಯನ್ನು ಅಪಹರಿಸುವುದನ್ನು ಕಂಡು ತಡೆಯುವ ಪ್ರಯತ್ನವನ್ನು ಮಾಡಿದೆ. ಅವನೊಂದಿಗೆ ಹೋರಾಡಿ ಅವನ ರಥವನ್ನು ಧ್ವಂಸಮಾಡಿ ಸಾರಥಿಯನ್ನು ಕೊಂದೆ. ಆದರೆ ಅವನು ನನ್ನೆರಡೂ ರೆಕ್ಕೆಗಳನ್ನು ಕತ್ತರಿಸಿ ಬೀಳಿಸಿ ಹೊರಟುಹೋದ” ಎಂದು ನುಡಿದೆ. ಇಷ್ಟು ಮಾತನಾಡುವಾಗಲೇ ನಿತ್ರಾಣಗೊಂಡೆ. ಬಾಯಿಯಿಂದ ನೆತ್ತರು ಸುರಿಯುತ್ತಿತ್ತು.
ರಾಮ ನನ್ನ ಸಮೀಪ ನೆಲದಲ್ಲಿ ಕುಳಿತು ನನ್ನನ್ನು ತಬ್ಬಿಕೊಂಡು ಸಂತೈಸಿದ. ಅವನ ಸ್ಪರ್ಶದಿಂದ ಅದೇನೋ ದಿವ್ಯಾನುಭೂತಿ ನನ್ನಲ್ಲಿ ಉಂಟಾಯಿತು. ಸೀತೆಯನ್ನು ಅಪಹರಿಸಿದವನ ವಿವರವನ್ನು ಕೇಳಿದ. ನಾನು ಬಲ್ಲವನಾದರೂ ಹೇಳುವಷ್ಟು ಶಕ್ತಿ ನನ್ನಲ್ಲಿ ಉಳಿದಿರಲಿಲ್ಲ. ಮರಣ ಹತ್ತಿರವಾಗುತ್ತಿದೆ ಎಂಬುದು ಅರಿವಾಗುತ್ತಿತ್ತು.
ರಾಮನಿಗೆ ಬೇಕಾದ ವಿವರವನ್ನು ಹೇಳಬೇಕು ಎಂಬ ಛಲದಿಂದ ಅಳಿದುಳಿದ ಚೈತನ್ಯವನ್ನು ಒಗ್ಗೂಡಿಸಿಕೊಂಡೆ.
ನಡುಗುತ್ತಿದ್ದ ದನಿಯಲ್ಲಿ, “ಶ್ರೀರಾಮಾ, ನಿನ್ನ ಪತ್ನಿಯಾದ ಜಾನಕಿಯನ್ನು ಒಯ್ದವನು ರಾವಣ. ವಿಶ್ರವಸುವಿನ ಪುತ್ರ. ಕುಬೇರನ ತಮ್ಮ” ಇಷ್ಟನ್ನು ಹೇಳುತ್ತಿದ್ದಂತೆ ಮತ್ತೆ ನೆತ್ತರು ಸುರಿಯಿತು. ದನಿ ಉಡುಗಿತು. ರಾಮನ ತೊಡೆಯ ಮೇಲೆ ತಲೆವಾಲಿಸಿದೆ. ಅಷ್ಟೆ. ನನ್ನ ಆಯುಸ್ಸು ತೀರಿತು. ಎಚ್ಚರ ತಪ್ಪಿತು.