ಬ್ರಹ್ಮಚಾರಿಗೆ ರಾಜ್ಯದಾನ ಎಂಬ ಆರನೆಯ ಕಥೆ
ಅನಂತರ ಭೋಜರಾಜನು ಪುನಃ ಸಿಂಹಾಸನವನ್ನು ಏರಲು ತೊಡಗಿದನು. ಆಗ ಅವನನ್ನು ತಡೆದು ಇನ್ನೊಂದು ಗೊಂಬೆಯು, ‘‘ಕೇಳು ರಾಜನೆ! ವಿಕ್ರಮಾರ್ಕನು ರಾಜ್ಯವನ್ನಾಳುತ್ತ, ಒಮ್ಮೆ ಚೈತ್ರಮಾಸದ ವಸಂತೋತ್ಸವದಲ್ಲಿ ಅಂತಃಪುರದವರೆಲ್ಲರನ್ನು ಜೊತೆಗೂಡಿಕೊಂಡು ಆಟವಾಡಲು ಶೃಂಗಾರವನಕ್ಕೆ ಹೋದನು. ನಾನಾವಿಧವಾದ ಮರಗಳಿಂದ ಶೋಭಿತವಾದ ಶೃಂಗಾರವನದಲ್ಲಿ ಇಂದ್ರನೀಲಖಚಿತವಾದ ಗೋಡೆಗಳಿಂದ ಕೂಡಿದ, ಸುಂದರವಾದ ಚಂದ್ರಕಾಂತ ಶಿಲೆಯಿಂದ ನಿರ್ಮಿತವಾದ ಅಂಗಳದಲ್ಲಿ ಅಂತಃಪುರದ ಸ್ತ್ರೀಯರೊಂದಿಗೆ ತುಂಬಾ ಹೊತ್ತು ಆಟವಾಡುತ್ತಿದ್ದನು. ಆ ವನದ ಹತ್ತಿರ ಅಂಬಿಕಾಮಂದಿರವೊಂದಿತ್ತು. ಅಲ್ಲಿ ಇರುವ ಒಬ್ಬ ಬ್ರಹ್ಮಚಾರಿಯು ಬಂದಿರುವ ಮಹಾರಾಜನನ್ನು ನೋಡಿ ನನ್ನ ಮನಸ್ಸಿನಲ್ಲಿ ಹೀಗೆ ಚಿಂತಿಸುತ್ತಿದ್ದನು –
‘ನಾನು ತಪಸ್ಸು ಮಾಡುತ್ತ ತನ್ನ ಜನ್ಮವನ್ನು ವ್ಯರ್ಥವಾಗಿ ಕಳೆಯುತ್ತಿದ್ದೇನೆ. ನಾನು ಸ್ವಪ್ನದಲ್ಲಿಯೂ ವಿಷಯಸುಖಗಳನ್ನು ಅನುಭವಿಸಿಲ್ಲ. ತುಂಬ ಕಷ್ಟಪಟ್ಟಾದರೂ ಸಂಸಾರದಲ್ಲಿ ಸ್ತ್ರೀಸುಖವನ್ನು ಅನುಭವಿಸಲೇಬೇಕು. ಈ ವಿಕ್ರಮಾರ್ಕನು ಅಕಸ್ಮಾತ್ತಾಗಿ ಇಲ್ಲಿ ಬಂದಿರುವನು. ನಾನು ಅವನನ್ನು ಬೇಡಿ ಒಂದು ಅಗ್ರಹಾರವನ್ನು ದಾನವಾಗಿ ಪಡೆಯುತ್ತೇನೆ. ಆಮೇಲೆ ಕನ್ಯೆಯೊಬ್ಬಳನ್ನು ಮದುವೆಯಾಗಿ ಸುಖವನ್ನು ಅನುಭವಿಸುತ್ತೇನೆ’ – ಹೀಗೆ ಚಿಂತಿಸಿ ಅವನು ರಾಜನ ಹತ್ತಿರ ಬಂದು ಅವನಿಗೆ ಆಶೀರ್ವಾದ ಮಾಡಿದನು.
ವಿಕ್ರಮಾರ್ಕನು ಅವನನ್ನು ಆಸನದಲ್ಲಿ ಕುಳ್ಳಿರಿಸಿ, ‘‘ಎಲೈ ಬ್ರಾಹ್ಮಣನೆ! ಎಲ್ಲಿಂದ ಬಂದಿರುವೆ, ಬಂದ ಕಾರಣವೇನು?” ಎಂದು ಕೇಳಿದನು.
ಅವನು ‘‘ರಾಜನ್! ನಾನು ಇಲ್ಲಿಯೇ ಜಗದಂಬಿಕೆಯ ಸೇವೆಯನ್ನು ಮಾಡುತ್ತಾ ಇದ್ದೇನೆ. ಇವಳ ಸೇವೆಯನ್ನು ಮಾಡುತ್ತ ನನಗೆ ಐವತ್ತು ವರ್ಷಗಳು ಕಳೆದವು. ಇಷ್ಟರವರೆಗೆ ನಾನು ಬ್ರಹ್ಮಚಾರಿಯಾಗಿಯೇ ಇದ್ದೆ. ಇಂದು ರಾತ್ರಿಯ ಕೊನೆಯ ಜಾವದಲ್ಲಿ ಸ್ವಪ್ನದಲ್ಲಿ ದೇವತೆಯು ಬಂದು, ‘ಎಲೈ ಬ್ರಾಹ್ಮಣ! ನೀನು ಇಷ್ಟರವರೆಗೆ ನನ್ನ ಸೇವೆಗೈಯುತ್ತ ಬಳಲಿದ್ದೀಯೆ. ನಾನು ನಿನಗೆ ಪ್ರಸನ್ನಳಾಗಿದ್ದೇನೆ. ನೀನು ಈಗ ಗೃಹಸ್ಥಾಶ್ರಮವನ್ನು ಸ್ವೀಕರಿಸು. ಒಳ್ಳೆಯ ಮಕ್ಕಳನ್ನು ಪಡೆದು ಮೋಕ್ಷಮಾರ್ಗವನ್ನು ಕಂಡುಕೋ. ನೀನು ಮಹಾರಾಜ ವಿಕ್ರಮಾರ್ಕನ ಬಳಿಗೆ ಹೋಗಿ ನಿನ್ನ ವೃತ್ತಾಂತವನ್ನು ತಿಳಿಸು. ಅವನು ನಿನ್ನ ಮನೋರಥವನ್ನು ಪೂರೈಸುವನು’ ಎಂದು ಆದೇಶಿಸಿದ್ದಾಳೆ. ಆದ್ದರಿಂದ ನಾನು ದೇವತೆಯ ಮಾತಿನಂತೆ ನಿನ್ನ ಬಳಿಗೆ ಬಂದಿದ್ದೇನೆ” ಎಂದನು. ಹೀಗೆ ಆ ಬ್ರಹ್ಮಚಾರಿ ವಂಚನೆಯ ಮಾತುಗಳಿಂದ ಸುಳ್ಳನ್ನೇ ಹೇಳಿದನು.
ಅದನ್ನು ಕೇಳಿದ ರಾಜನಿಗೆ ಈ ಬ್ರಹ್ಮಚಾರಿಯು ಹೇಳುತ್ತಿರುವುದು ಸುಳ್ಳು ಎಂಬುದು ಗೊತ್ತಾಯಿತು. ಆದರೂ ಅವನು, ‘ಇವನು ಹೇಳುತ್ತಿರುವುದು ಸುಳ್ಳೇ ಇರಬಹುದು. ಆದರೂ ಇವನು ಯಾಚಕನಿದ್ದಾನೆ. ಇವನ ಮನೋರಥವನ್ನು ಪೂರ್ಣ ಮಾಡಬೇಕು’ ಎಂದು ಯೋಚಿಸಿ, ಅಲ್ಲಿಯೇ ಒಂದು ಹೊಸ ನಗರವನ್ನು ನಿರ್ಮಿಸಿ, ಆ ಬ್ರಹ್ಮಚಾರಿಯನ್ನು ಆ ನಗರದ ರಾಜನನ್ನಾಗಿ ಮಾಡಿದನು. ಅವನ ಸೇವೆಗಾಗಿ ನೂರು ಸ್ತ್ರೀಯರನ್ನು ನೇಮಿಸಿದನು. ಮಾತ್ರವಲ್ಲದೆ ಅವನಿಗೆ ಐವತ್ತು ಆನೆಗಳನ್ನೂ, ಐದುನೂರು ಕುದುರೆಗಳನ್ನೂ, ನಾಲ್ಕು ಸಾವಿರ ಭಟರನ್ನೂ ಕೊಟ್ಟು ಆ ನಗರಕ್ಕೆ ‘ಚಂಡಿಕಾಪುರ’ ಎಂದು ನಾಮಕರಣವನ್ನೂ ಮಾಡಿದನು. ಅನಂತರ ಪರಿಪೂರ್ಣಮನೋರಥನಾದ ಬ್ರಹ್ಮಚಾರಿಯು ರಾಜನನ್ನು ಆಶೀರ್ವದಿಸಿದನು. ರಾಜನೂ ತನ್ನ ನಗರಕ್ಕೆ ಹಿಂದಿರುಗಿದನು.
ಹೀಗೆ ಕಥೆಯನ್ನು ಹೇಳಿ ಗೊಂಬೆಯು ಭೋಜರಾಜನಿಗೆ ‘‘ಎಲೈ ರಾಜನೆ! ನಿನ್ನಲ್ಲಿ ಈ ರೀತಿಯ ಔದಾರ್ಯ ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ಸುಮ್ಮನಾದನು.
ಮೃತೋಜ್ಜೀವನ ಎಂಬ ಏಳನೆಯ ಕಥೆ
ಮರುದಿನ ಭೋಜರಾಜನು ಸಿಂಹಾಸನವನ್ನು ಏರಲು ಉದ್ಯುಕ್ತನಾದನು. ಆಗ ಅವನನ್ನು ತಡೆದು ಇನ್ನೊಂದು ಗೊಂಬೆಯು, ‘‘ಮಹಾರಾಜ! ವಿಕ್ರಮಾರ್ಕನು ರಾಜ್ಯವಾಳುತ್ತಿದ್ದಾಗ ಎಲ್ಲ ಪ್ರಜೆಗಳೂ ಸುಖದಿಂದ ಇದ್ದರು. ಪ್ರಪಂಚದಲ್ಲಿ ದುಷ್ಟರು ಇರಲಿಲ್ಲ. ಎಲ್ಲ ವರ್ಗದ ಜನರೂ ತಮ್ಮತಮ್ಮ ಕರ್ತವ್ಯಗಳನ್ನು ಪಾಲಿಸುತ್ತ ಸುಖದಿಂದ ಇದ್ದರು.
ಆ ದಿನಗಳಲ್ಲಿ ಉಜ್ಜಯಿನಿನಗರದಲ್ಲಿ ಧನದ ಎಂಬ ವ್ಯಾಪಾರಿ ಇದ್ದನು. ಅವನ ಸಂಪತ್ತಿಗೆ ಕೊನೆಯೇ ಇರಲಿಲ್ಲ. ಅವನು ಯಾವುದನ್ನು ಇಚ್ಛಿಸುತ್ತಾನೋ ಅದೆಲ್ಲವೂ ಅವನ ಮನೆಯಲ್ಲಿ ಇರುತ್ತಿತ್ತು. ಹೀಗೆ ಸಕಲಸಂಪತ್ತುಗಳಿದ್ದರೂ ಅವನಿಗೆ ಒಮ್ಮೆ ಎಲ್ಲ ವಸ್ತುಗಳಲ್ಲೂ ಅನಿತ್ಯತ್ವಬುದ್ಧಿ ಉಂಟಾಯಿತು.
‘ಈ ಜಗತ್ತು ನಿಸ್ಸಾರವಾದದ್ದು. ಅತ್ಯಂತ ದುರ್ಲಭವಾದ ವಸ್ತುವೂ ಅನಿತ್ಯವೇ ಹೊರತು ಶಾಶ್ವತವಲ್ಲ’ ಎಂದು ತುಂಬಾ ರೀತಿಯಲ್ಲಿ ಯೋಚಿಸಿ, ಪಂಡಿತರನ್ನು ಕರೆದು ಅವರ ಮಾರ್ಗದರ್ಶನ ಪಡೆದು ಅನೇಕ ವ್ರತಗಳನ್ನು ಆಚರಿಸಿದನು. ಸತ್ಪಾತ್ರರಿಗೆ ನಾನಾರೀತಿಯ ದಾನಗಳನ್ನು ಕೊಟ್ಟನು. ಕೊನೆಗೆ ‘ಇಷ್ಟಾದರೂ ನಾನು ದ್ವಾರಕೆಗೆ ಹೋಗಿ ಶ್ರೀಕೃಷ್ಣನ ದರ್ಶನ ಮಾಡಿದರೆ, ಆಗ ಮಾತ್ರ ನಾನು ಮಾಡಿದ ವ್ರತ ಮತ್ತು ದಾನಗಳು ಸಫಲವಾಗುತ್ತವೆ’ ಎಂದು ತೀರ್ಮಾನಿಸಿ ದ್ವಾರಕೆಗೆ ಹೊರಟನು. ಅವನು ಸಮುದ್ರತೀರಕ್ಕೆ ಹೋಗಿ ನಾವಿಕರನ್ನು ಕರೆದು ಅವರಿಗೆ ತುಂಬಾ ದ್ರವ್ಯಗಳನ್ನು ಕೊಟ್ಟು, ತನ್ನೊಂದಿಗೆ ಅನೇಕ ಜನರನ್ನೂ ಕರೆದುಕೊಂಡು ನೌಕಾಪ್ರಯಾಣವನ್ನು ಆರಂಭಿಸಿದನು.
ಸ್ವಲ್ಪಕಾಲ ಕಳೆದ ಮೇಲೆ ಸಮುದ್ರದ ಮಧ್ಯದಲ್ಲಿ ಸಣ್ಣ ಪರ್ವತವು ಕಂಡುಬಂತು. ಅಲ್ಲಿ ಒಂದು ದೇವಾಲಯವೂ ಇತ್ತು. ಧನದನು ನೌಕೆಯಿಂದ ಇಳಿದು ಪರ್ವತವನ್ನು ಹತ್ತಿ ದೇವಾಲಯಕ್ಕೆ ಹೋದನು. ಅಲ್ಲಿ ದೇವಿಯಾದ ಭುವನೇಶ್ವರಿಯನ್ನು ಷೋಡಶೋಪಚಾರಗಳಿಂದ ಪೂಜಿಸಿ, ನಮಸ್ಕಾರ ಮಾಡಿ ಎಡಭಾಗದ ಕಡೆ ದೃಷ್ಟಿ ಹಾಯಿಸಿದಾಗ ಅಲ್ಲಿ ತಲೆಕಡಿಯಲ್ಪಟ್ಟ ಸ್ತ್ರೀಪುರುಷರ ಜೋಡಿಯೊಂದನ್ನು ಕಂಡನು. ಮುಂದೆ ಇರುವ ಗೋಡೆಯ ಮೇಲೆ ಕೆಲವು ಅಕ್ಷರಗಳು ಕಾಣಿಸಿದವು. ಅಲ್ಲಿ ‘ಪರೋಪಕಾರಿಯೂ, ಮಹಾಧೈರ್ಯವಂತನೂ ಆದ ಯಾರಾದರೂ ತನ್ನ ಕಂಠದ ರಕ್ತದಿಂದ ಭುವನೇಶ್ವರಿಯನ್ನು ಪೂಜಿಸಿದರೆ ಈ ಸ್ತ್ರೀಪುರುಷರ ಜೋಡಿಗೆ ಜೀವ ಬರುತ್ತದೆ’ ಎಂದು ಬರೆದಿತ್ತು. ಅದನ್ನು ಓದಿ ಆಶ್ಚರ್ಯಗೊಂಡ ಧನದನು ಮತ್ತೆ ಹಡಗನ್ನು ಹತ್ತಿ ದ್ವಾರಕೆಗೆ ಬಂದನು. ಅಲ್ಲಿ ಶ್ರೀಕೃಷ್ಣನನ್ನು ಕಂಡು ಸಾಷ್ಟಾಂಗ ನಮಸ್ಕಾರ ಮಾಡಿ ಅವನನ್ನು ಪÀÇಜಿಸಿದನು. ಆ ಮೇಲೆ ಅವನ ಅನುಗ್ರಹವನ್ನು ಪಡೆದು ತನ್ನ ನಗರಕ್ಕೆ ಹಿಂದಿರುಗಿದನು.
ಅನಂತರ ತನ್ನ ಬಂಧುಗಳಿಗೆಲ್ಲ ಶ್ರೀಕೃಷ್ಣನ ಪ್ರಸಾದವನ್ನು ಕೊಟ್ಟು, ಅಪೂರ್ವವಾದ ಒಂದು ವಸ್ತುವನ್ನು ಉಡುಗೊರೆಯಾಗಿ ತೆಗೆದುಕೊಂಡು ಮಹಾರಾಜನಾದ ವಿಕ್ರಮಾರ್ಕನ ದರ್ಶನಕ್ಕೆಂದು ಅರಮನೆಗೆ ಹೋದನು. ಅಲ್ಲಿ ವಿಕ್ರಮಾರ್ಕನನ್ನು ನೋಡಿ ಅವನಿಗೆ ಕೃಷ್ಣಪ್ರಸಾದವನ್ನು ಮತ್ತು ಉಡುಗೊರೆಯನ್ನು ಕೊಟ್ಟು ಕುಳಿತುಕೊಂಡನು. ಬಳಿಕ ಮಹಾರಾಜನು ಅವನ ಯಾತ್ರೆಗೆ ಸಂಬಂಧಿಸಿದ ಕ್ಷೇಮ ಸಮಾಚಾರವನ್ನು ತಿಳಿದುಕೊಂಡು, ‘‘ಗೆಳೆಯ, ನೀನು ಯಾತ್ರೆಯ ಸಂದರ್ಭದಲ್ಲಿ ಏನಾದರೂ ಅಪೂರ್ವವಾದ ದೃಶ್ಯವನ್ನು ನೋಡಿದೆಯಾ?” ಎಂದು ಕೇಳಿದನು.
ಆಗ ಧನದನು ಸಮುದ್ರಮಧ್ಯದಲ್ಲಿರುವ ಭುವನೇಶ್ವರೀ ದೇವಾಲಯದ ವೃತ್ತಾಂತವನ್ನು ಹೇಳಿದನು. ಅದನ್ನು ಕೇಳಿದ ರಾಜನು ಆಶ್ಚರ್ಯಪಟ್ಟು, ‘‘ಹಾಗಿದ್ದರೆ ನಾನು ಈಗಲೇ ಅಲ್ಲಿಗೆ ಹೋಗಬೇಕು” ಎಂದು ನಿರ್ಣಯ ಮಾಡಿದನು. ಬಳಿಕ ಆ ಕ್ಷಣವೇ ಹೊರಟು ಧನದನ ಜೊತೆಯಲ್ಲಿಯೇ ಭುವನೇಶ್ವರಿಯ ಮಂದಿರಕ್ಕೆ ಬಂದನು. ಅಲ್ಲಿ ದೇವಿಗೆ ನಮಸ್ಕರಿಸಿ, ಎಡಭಾಗದಲ್ಲಿದ್ದ ತುಂಡರಿಸಿದ ತಲೆಯುಳ್ಳ ಸ್ತ್ರೀಪುರುಷರ ಜೋಡಿಯನ್ನು ನೋಡಿದನು. ಗೋಡೆಯ ಮೇಲಿದ್ದ ಬರಹವನ್ನೂ ಓದಿದನು. ಅನಂತರ ದೇವತೆಯನ್ನು ಮನಸ್ಸಿನಲ್ಲಿ ಸ್ಮರಿಸಿ ಖಡ್ಗವನ್ನು ಎತ್ತಿ ತನ್ನ ಕುತ್ತಿಗೆಯನ್ನು ಕತ್ತರಿಸಿಕೊಳ್ಳಲು ಮುಂದಾದನು. ಮರುಕ್ಷಣವೇ ಆ ಸ್ತ್ರೀಪುರುಷಜೋಡಿಗೆ ಹೊಸ ತಲೆಯೂ ಜೀವವೂ ಬಂದಿತು.
ದೇವತೆಯು ಪ್ರತ್ಯಕ್ಷಳಾಗಿ ಮಹಾರಾಜನ ಕೈಯಲ್ಲಿದ್ದ ಖಡ್ಗವನ್ನು ಎಳೆದು ತೆಗೆದುಕೊಂಡು, ‘‘ಎಲೈ ರಾಜನೆ! ನಾನು ಪ್ರಸನ್ನಳಾಗಿದ್ದೇನೆ. ವರವನ್ನು ಬೇಡಿಕೋ” ಎಂದು ಹೇಳಿದಳು. ರಾಜನು ‘‘ದೇವಿ! ನೀನು ಪ್ರಸನ್ನಳಾಗಿರುವುದು ಹೌದಾಗಿದ್ದರೆ ಈ ಜೋಡಿಗೆ ರಾಜ್ಯವನ್ನು ಕರುಣಿಸು” ಎಂದು ಬೇಡಿಕೊಂಡನು. ದೇವಿಯು ಆ ಜೋಡಿಗೆ ರಾಜ್ಯವನ್ನು ಕೊಟ್ಟಳು. ರಾಜನು ಧನದನೊಂದಿಗೆ ತನ್ನ ನಗರಕ್ಕೆ ಹಿಂದಿರುಗಿದನು.”
ಈ ಕಥೆಯನ್ನು ಹೇಳಿ ಗೊಂಬೆಯು ಭೋಜನಿಗೆ, ‘‘ಎಲೈ ರಾಜನೆ! ನಿನ್ನಲ್ಲಿ ಈ ರೀತಿಯ ಪರೋಪಕಾರ ಮಾಡುವ ಗುಣವಿದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ಸುಮ್ಮನಾದನು.