–ಶೈಲಜಾ ಗೋರನಮನೆ
ಶಿರಸಿಯ ಹೋಳಿಯಾಟದ ಹುಲಿವೇಷ ಮತ್ತು ಬೇಡರವೇಷಗಳೆರಡೂ ಇಂದಿಗೂ ವಿಕೃತಿಯ ವಿನಾಶವನ್ನು ತಡೆಗಟ್ಟುತ್ತ ನಾಗರಿಕ ಕರ್ತವ್ಯಗಳನ್ನು ನೆನಪಿಸುತ್ತ ಸಂಸ್ಕೃತಿಯೊಂದರ ರಾಯಭಾರಿಗಳಂತೆ ನಿಂತಿವೆ.
“ಬೇಡ ಕೃಷ್ಣ… ರಂಗಿನಾಟ ಸೀರೆ ನೆನೆವುದೂ. ಮಧ್ಯರಾತ್ರಿ ಚಂದ್ರಚಳಿಯು ತುಂಬುತಿರುವುದು.. ರಾಧೆ ತೊಟ್ಟ ರವಿಕೆ ಜರಿ ರೇಶ್ಮೆಯಾಗಿದೆ. ಕೃಷ್ಣನ ಬಳಿ ರಂಗು ತುಂಬಿದ ಗಡಿಗೆ ಕಾದಿದೆ…’’ ಬಾಲ್ಯದಲ್ಲಿ ಬಣ್ಣಬಣ್ಣದ ಲಂಗ-ದಾವಣಿ ತೊಟ್ಟು, ಗುಲಾಬಿರಂಗಿನ ಓಡನಿ ಹೊದ್ದು ಗೆಜ್ಜೆಯನ್ನು ಗಿಲಿಗಿಲರೆನಿಸುತ್ತಿದ್ದ ನರ್ತನವು ಹೆಜ್ಜೆಯಿಂದ ಎದೆಗೇರಿ ಕೆನ್ನೆಗಳನ್ನು ತುಂಬಿದಾಗ ಯೌವನ ಬಂದಿತ್ತು. ರಂಗುರಂಗಿನ ಗೋಕುಲದಲ್ಲಿ ಪಿಚಕಾರಿ ಸಿಡಿಯದೆಯೂ ಬಣ್ಣ ತುಂಬಿಕೊಳ್ಳುತ್ತಿತ್ತು. ಹೀಗೆ ಹೋಲಿ ಅಥವಾ ಹೋಳಿಹಬ್ಬವೆಂದರೆ ನೆನಪಾಗುವುದು ಬಣ್ಣತುಂಬಿದ ಬದುಕಿನ ನೂರೆಂಟು ಚಿತ್ರಗಳು. ಬದುಕಿನ ಬಣ್ಣಗಳು!
ಹೋಳಿಯೆಂದರೆ ಕನ್ನಡದಲ್ಲಿ ತುಂಟಾಟವೆಂಬ ಪ್ರಾದೇಶಿಕ ಅರ್ಥವೂ ಇದೆ. ಹೋಳಿಹಬ್ಬವೆನ್ನುವುದಕ್ಕೆ ಅನ್ವರ್ಥವಾಗುವಂತೆ ಬದುಕಿದ ಆ ಬಾಲ್ಯ – ಬೆರಗು. ಮುಯ್ಯಿ ತೀರಿಸಿಕೊಳ್ಳಲಾಗದವರ ಮೇಲೆ ಅಡಗಿ ಕುಳಿತು ಬಣ್ಣವೆರಚಿ ಮಜಾ ನೋಡಿದ್ದರಿಂದ ತೊಡಗಿ ಜೀವನದಿಯಲ್ಲಿ ಅದ್ದಿಹೋದ ಎಲ್ಲ ಸಂಗತಿಗಳೂ ಬಣ್ಣಪಡೆದುಕೊಂಡ ಯಾತ್ರೆಯೇ ಹೋಳಿ. ಪ್ರಕೃತಿಯು ವಸಂತದಲ್ಲಿ ಚಿಗುರಿ ಬಣ್ಣ ತುಂಬಿಕೊಂಡು ಹೊಸ ಬದುಕನ್ನು ಪಡೆದರೆ ಹೋಳಿಯ ರಂಗು ನಿತ್ಯಜನನ, ನಿತ್ಯಮರಣದ ಬದುಕಿಗೆ ಉಲ್ಲಾಸ ಉತ್ಸಾಹಗಳನ್ನು ತುಂಬಿತರುತ್ತದೆ. ಒಳಗಿನ ವಾಂಛೆಯ ಅಭಿವ್ಯಕ್ತಿಯ ಮಾರ್ಗವೂ ಆಗಿರುತ್ತದೆ.
ಇಂತಹ ಹೋಳಿಹಬ್ಬದಾಚರಣೆ ಶಿವ-ಪಾರ್ವತಿಯರ ಕಲ್ಯಾಣ, ಕಾಮದಹನದಂತಹ ಆತ್ಮ ಮತ್ತು ಅಧ್ಯಾತ್ಮಗಳೆರಡನ್ನೂ ಬೆಸೆದು ವಿರಕ್ತಿ-ವಿಹಾರ-ವಿಕೃತಿಗಳ ಅಮೂರ್ತ ಛಾಯೆಗಳನ್ನು ಭಾರತೀಯ ಸಂಸ್ಕೃತಿಗಳಲ್ಲಿ ಮೂರ್ತವಾಗಿಸಿದ ಹಬ್ಬವೂ ಹೌದು. ಆದ್ದರಿಂದ ಆಯಾ ಪ್ರದೇಶಗಳ ನಂಬಿಕೆ, ಜೀವನಕ್ರಮಗಳಿಗನುಗುಣವಾಗಿ ಭಾರತದಾದ್ಯಂತ ವೈಶಿಷ್ಟ್ಯಮಯವಾಗಿ ಆಚರಿಸಲ್ಪಡುತ್ತದೆ. ಕರ್ನಾಟಕರಾಜ್ಯದ ಪುಟ್ಟ ಊರು ಶಿರಸಿಯಲ್ಲಿ ನಡೆಯುವ ಹೋಳಿಹಬ್ಬವೂ ಅಂತಹ ವಿಶಿಷ್ಟ ಆಚರಣೆಗಳ ಪಟ್ಟಿಯ ಮುಂಚೂಣಿಯಲ್ಲಿದೆ. ದೇಶದಲ್ಲಿಯೇ ವಿಶಿಷ್ಟವಾದದ್ದೆಂದರೂ ತಪ್ಪಿಲ್ಲ. ಸಾಮಾನ್ಯವಾಗಿ ಎಲ್ಲೆಡೆ ಹೋಳಿಹಬ್ಬವು ಪ್ರತಿವರ್ಷವೂ ನಡೆಯುವ ಆಚರಣೆಯಾದರೆ, ಶಿರಸಿಯಲ್ಲಿ ಮಾತ್ರ ಎರಡುವರ್ಷಗಳಿಗೊಮ್ಮೆ ನಡೆಯುತ್ತದೆ.
ಒಂದುವರ್ಷ ಶ್ರೀಮಾರಿಕಾಂಬಾ ಜಾತ್ರೆಗೆ, ಇನ್ನೊಂದುವರ್ಷ ಹೋಳಿಹಬ್ಬದಾಚರಣೆಗೆ ಮೀಸಲು. ಎರಡುವರ್ಷಕ್ಕೊಮ್ಮೆ ಜರಗುವ ಹೋಳಿಯ ಬಣ್ಣದ ಬೆಡಗಿಗೆ ವಿಶಿಷ್ಟವಾದ ‘ಬೇಡರವೇಷ’ ಮತ್ತು ‘ಹುಲಿವೇಷ’ವೆಂಬ ಜನಪದ ಆಚರಣೆಗಳು ಬೆಡಗನ್ನು ತುಂಬುತ್ತವೆ. ಹುಲಿವೇಷ ಹಗಲಿನ ವೇಷವಾದರೆ, ಬೇಡರವೇಷ ರಾತ್ರಿಯದ್ದು.
ಈ ಎರಡು ವೇಷಗಳಿಗೂ ಐತಿಹಾಸಿಕವಾಗಿ, ಜನಪದೀಯವಾಗಿ ಹಲವು ಆಯಾಮಗಳಿವೆ. ಅಭಿವ್ಯಕ್ತಿಯ ಸ್ವರೂಪವೂ ವಿಶಿಷ್ಟವಾದದ್ದು. ಈ ಬೇಡರವೇಷಕ್ಕೆ ದೃಶ್ಯವೈಭವದ ಜೊತೆಗೆ ಜೀವನಸಂದೇಶವನ್ನು ಬಿಂಬಿಸುವ ಸಾಹಸಗಾಥೆಯಿದೆ. ವೀರ, ರೌದ್ರ, ಗಾಂಭೀರ್ಯಗಳ ಅಬ್ಬರವಿದೆ, ಆಡಂಬರವಿಲ್ಲ. ಇತಿಹಾಸ, ನಂಬಿಕೆ, ದಂತಕಥೆ ಮತ್ತು ಜನಪದ ಸಂಸ್ಕೃತಿಗಳ ಸಮ್ಮಿಲನವೆಂದರೆ ಅದು ಶಿರಸಿಯ ಬೇಡರವೇಷ! ಚಿತ್ರದುರ್ಗದಲ್ಲಿ ‘ಖಾಸಾ’ ಬೇಡರ ನೃತ್ಯ ಹಾಗೂ ದಕ್ಷಿಣಕನ್ನಡದಲ್ಲಿ ‘ಬೇಡನ್ ಮರ್ದನ್’ ಎಂಬ ಕೋಲನೃತ್ಯವಿದೆಯಾದರೂ, ಅದು ಶಿರಸಿಯ ಬೇಡರವೇಷದಂತಿಲ್ಲ. ಶಿರಸಿಯ ವರ್ಣರಂಜಿತ ಬೇಡರವೇಷÀಕ್ಕೆ ಸುಮಾರು ಮುನ್ನೂರಕ್ಕಿಂತ ಹೆಚ್ಚು ವರ್ಷಗಳ ಇತಿಹಾಸ, ಹಿನ್ನೆಲೆಯನ್ನು ಊಹಿಸಲಾಗುತ್ತಿದೆ. ಬೇಡರವೇಷದ ಕುರಿತಾಗಿ ಪರಂಪರೆಯಿಂದ ಹೇಳುತ್ತ, ಕೇಳುತ್ತ ಬಂದಿರುವ ಹಲವಾರು ಐತಿಹ್ಯಗಳೂ ದಂತಕಥೆಗಳೂ ಇವೆ.
ಹಿನ್ನೆಲೆ
ಎಲ್ಲ ಕಥೆಗಳಿಗೂ ಮೂಲವಾಗಿದ್ದ ಶಿರಸಿ ಪಟ್ಟಣ ಅಂದು ಉತ್ತರಕರ್ನಾಟಕ ಹಾಗೂ ಪಶ್ಚಿಮ ಕರಾವಳಿಯನ್ನು ಬೆಸೆಯುವ ಮಧ್ಯವರ್ತಿ ಪ್ರದೇಶವಾಗಿತ್ತು. ಸಹಜವಾಗಿಯೇ ಕರಾವಳಿ-ಬಯಲುಸೀಮೆಯ ನಡುವಿನ ಪ್ರಮುಖ ವಿನಿಮಯ ಕೇಂದ್ರವಾಗಿದ್ದಿದ್ದರಲ್ಲಿ ಆಶ್ಚರ್ಯವಿಲ್ಲ. ಪಶ್ಚಿಮಘಟ್ಟಗಳ ಶಿರಸ್ಸಿನಲ್ಲಿ ಪ್ರತಿಷ್ಠಾಪಿತವಾಗಿರುವ ಶಿರಸಿ ಅಂದು ಕಲ್ಯಾಣನಗರಿಯಾಗಿ ಪ್ರಚಲಿತದಲ್ಲಿತ್ತು. ಕಥೆಯೊಂದರ ಪ್ರಕಾರ ವಿಜಯನಗರ ಅರಸೊತ್ತಿಗೆಯು ಅಳಿವಿನ ಅಂಚಿನಲ್ಲಿದ್ದ ಕಾಲಘಟ್ಟವದು. ಅವರ ಸಾಮಂತರಾಗಿದ್ದ ಸೋದೆಯ ಅರಸರು ಈ ಭಾಗದಲ್ಲಿ ಅಧಿಕಾರ ಪಡೆದಿದ್ದರು. ಆ ಸಂದರ್ಭದಲ್ಲಿ ಕಲ್ಯಾಣಪಟ್ಟಣವಾಗಿದ್ದ ಶಿರಸಿಯ ಆಡಳಿತದ ಹೊಣೆ ದಾಸಪ್ಪಸೆಟ್ಟಿ ಎನ್ನುವವರ ಹೆಗಲಿಗೇರಿತ್ತು. ಅತ್ತ ಬಿಜಾಪುರದ ಮುಸ್ಲಿಮರು ಇತ್ತ ಮೈಸೂರಿನ ಮುಸ್ಲಿಮರ ದಾಳಿಯ ಭೀತಿ, ದರೋಡೆ, ಸುಲಿಗೆ, ಕಳ್ಳತನಗಳ ಪುಂಡ ವಾತಾವರಣ ಹೆಚ್ಚಿ ಈ ವಾಣಿಜ್ಯಪ್ರದೇಶವನ್ನು ಕಂಗೆಡಿಸಿತ್ತು. ಅಂತಹ ಸಂದರ್ಭದಲ್ಲಿ ನಗರದ ರಕ್ಷಣೆಗಾಗಿ ದಾಸಪ್ಪಸೆಟ್ಟಿ ಆಯ್ಕೆ ಮಾಡಿಕೊಂಡಿದ್ದು ಮಲ್ಲೇಶಿ ಎಂಬ ಯುವವೀರನನ್ನು.
ಕಣ್ಣುಗಳಿಗೆ ವಿಶೇಷ ಶಕ್ತಿಯಿದ್ದು ಯಾರೂ ಆತನನ್ನು ಸೋಲಿಸಲು ಸಾಧ್ಯವಿಲ್ಲವೆಂಬ ಪ್ರತೀತಿ ಹೊಂದಿದ್ದ ಯುವಕನಾಗಿದ್ದ ಮಲ್ಲೇಶಿ. ಎದುರೇ ಇಲ್ಲದ ಧೀರನಾಗಿ ನಗರರಕ್ಷಣೆಗೆ ನಿಂತ. ಮಲ್ಲೇಶಿಯೆಂಬ ಆ ದಂಡನಾಯಕ ಕ್ರಮೇಣ ಅಹಂಕಾರ, ಹೆಣ್ಣುಗಳ ಚಪಲದ ವ್ಯಸನಕ್ಕೆ ಬಿದ್ದ. ಬೆಳೆದು ಕಣ್ತುಂಬುವ ಯಾವ ಹೆಣ್ಣನ್ನೂ ಬಿಡದೆ ಹೊಸಕಿಹಾಕುತ್ತಿದ್ದ. ಅಡ್ಡಬಂದವರಿಗೆ ಉಳಿಗಾಲವಿರಲಿಲ್ಲ. ಹೆಣ್ಣುಹೆತ್ತವರು ಮಲ್ಲೇಶಿಯ ಕಣ್ತಪ್ಪಿಸಿ ಊರನ್ನೇ ತೊರೆಯುತ್ತಿದ್ದರು ಅಥವಾ ಮಲ್ಲೇಶಿಗೆ ಬಲಿಕೊಟ್ಟು ಕಣ್ಣೀರಾಗುತ್ತಿದ್ದರು.
ಇಂತಹ ಸಂದರ್ಭದಲ್ಲಿಯೇ ದಾಸಪ್ಪಸೆಟ್ಟಿಯ ಮಗಳು ರುದ್ರಾಂಬೆ ತ್ರಿಲೋಕಸುಂದರಿಯಾಗಿ ಬೆಳಗಿದಳು. ಜಾಣ್ತನದ ಮತ್ತು ಗುಣವತಿಯಾದ ರುದ್ರಾಂಬಿಕೆ ಸೆಟ್ಟಿಯ ಕಣ್ಣಾಗಿದ್ದವಳು ಮುಚ್ಚಿಟ್ಟರೂ ಬೆಳಗುವ ದೀಪದಂತೆ ಪ್ರಕಾಶಿಸುತ್ತ ಮಲ್ಲೇಶಿಯ ಕಣ್ಣನ್ನು ಕುಕ್ಕಿದ್ದಳು. ಮಲ್ಲೇಶಿ ರುದ್ರಾಂಬೆಯನ್ನೊಪ್ಪಿಸುವಂತೆ ದಾಸಪ್ಪಸೆಟ್ಟಿಗೇ ಆದೇಶಿಸಿದ್ದನಂತೆ! ಬೇರೆ ದಾರಿಗಾಣದ ಸೆಟ್ಟಿ ರಾತ್ರೋರಾತ್ರಿ ಪಟ್ಟಣವನ್ನು ತೊರೆಯಲು ಸಿದ್ಧತೆ ನಡೆಸಿದ್ದ. ಆಗ ರುದ್ರಾಂಬಿಕೆ ಮಲ್ಲೇಶಿಯ ಪುಂಡಾಟಕ್ಕೊಂದು ಇತಿಶ್ರೀ ಮಾಡಲೇಬೇಕೆಂಬ ದೃಢಸಂಕಲ್ಪದಿಂದ ತಂದೆಯನ್ನು ಒಪ್ಪಿಸಿ ಮಲ್ಲೇಶಿಯನ್ನು ಮದುವೆಯಾಗುತ್ತಾಳೆ. ತನ್ನ ಮೋಹದ ಮಾಯಕದಲ್ಲಿ ಗಂಡ ಮಲ್ಲೇಶಿಯನ್ನು ಕೆಡವಿ ಆತನ ವಿಶಿಷ್ಟಶಕ್ತಿಯಿರುವ ಕಣ್ಣುಗಳನ್ನು ಕಿತ್ತು ಸೆರೆಹಿಡಿಸುತ್ತಾಳೆ. (ಕಣ್ಣುಗಳಿಗೆ ಆಮ್ಲವನ್ನು ಸುರಿದು ಕುರುಡಾಗಿಸಿ ಸೆರೆಹಿಡಿಸುತ್ತಾಳೆ ಎಂಬ ಕಥನವೂ ಇದೆ.)
ಸೆರೆಹಿಡಿದ ಪುಂಡದಂಡನಾಯಕನನ್ನು ಊರಿನಜನ ಹಗ್ಗದಲ್ಲಿ ಕಟ್ಟಿ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ದು ಜೀವಂತವಾಗಿ ದಹಿಸುತ್ತಾರೆ. ಆತನ ಮೆರವಣಿಗೆಯಲ್ಲಿ ಮುಂದೆಮುಂದೆ ನಡೆದ ರುದ್ರಾಂಬಿಕೆಯೂ ಪತಿ ಮಲ್ಲೇಶಿಯ ಚಿತೆಯಲ್ಲಿ ಸಹಗಮನ ಮಾಡಿ ಹುತಾತ್ಮಳಾಗುತ್ತಾಳೆ.
ಸೆರೆಯಾದ ಕುರುಡ ಮಲ್ಲೇಶಿ ರೋಷ ಮತ್ತು ರೌದ್ರಾವೇಶದಿಂದ ದಿಕ್ಕುದೆಸೆ ತಪ್ಪಿ ಸೆಣೆಸಾಡುವ ಆರ್ಭಟವೇ ಬೇಡರನೃತ್ಯದ ನೃತ್ಯಪಟ್ಟುಗಳು ಎನ್ನಲಾಗುತ್ತದೆ. ಹೀಗೆ ಜನರ ಸಂಕಷ್ಟಗಳನ್ನು ನೀಗಿಸಲು ಗಂಡನ ಪುಂಡಡಗಿಸಿ ಸ್ವತಃ ಹುತಾತ್ಮಳಾದ ಹೆಂಡತಿಯೊಬ್ಬಳ ವೀರಗಾಥೆಯ ಮಹಾಕಥನವನ್ನು ಈ ಜನಪದ ವೇಷ ಹೇಳುತ್ತದೆ. ಜನಪದದ ಪ್ರಕಾರ ಮಲ್ಲೇಶಿಯ ದಹನ ನಡೆಯುವುದು ಹೋಳಿಹುಣ್ಣಿಮೆಯಂದು. ಆ ಹಿನ್ನೆಲೆಯಲ್ಲಿ ಹೋಳಿಹುಣ್ಣಿಮೆ ಮತ್ತು ಬೇಡರವೇಷ ಪರಸ್ಪರ ಬೆಸೆದು ಬಂದಿವೆ.
ಕಥಾವರಸೆಗಳು
ಹಿರಿಯರು ಹೇಳುವ ಇನ್ನೊಂದು ಕಥೆಯ ಪ್ರಕಾರ ಸೋದೆಯ ಅರಸರ ಕಾಲದಲ್ಲಿ ವಾಣಿಜ್ಯನಗರಿ ಶಿರಸಿಯನ್ನು ದೋಚುವುದರಲ್ಲಿ ಇಂದಿನ ಹಾವೇರಿಜಿಲ್ಲೆಗೆ ಸೇರಿದ್ದ ಹಾನಗಲ್ಲಿನ ಚೋರನೊಬ್ಬ ಬಹಳ ಪ್ರಖ್ಯಾತನಾಗಿದ್ದ. ಆತನಿಗೆ ವಿಶೇಷಶಕ್ತಿಯಿದ್ದು, ಎದುರಾದವರನ್ನು ಸೋಲಿಸುವ ತಾಕತ್ತನ್ನು ಪಡೆದವನಾಗಿದ್ದ. ಆಳುವವರಿಗೆ ತಲೆನೋವಾಗಿದ್ದ ಆ ದುಷ್ಟನನ್ನು ಹಿಡಿಯಲು ಪ್ರಯತ್ನಿಸಿ ಆಡಳಿತಗಾರರು ಸೋತುಸುಣ್ಣವಾಗಿದ್ದರು. ಆ ಸಂದರ್ಭದಲ್ಲಿ ಮಲ್ಲಿ ಎಂಬ ಯುವತಿಯೊಬ್ಬಳು ಆ ಕಳ್ಳನನ್ನು ತನ್ನ ಮೋಹದ ಬಲೆಯಲ್ಲಿ ಕೆಡವಿ ಸೆರೆಹಿಡಿದು ಕೊಡುತ್ತಾಳೆ. ಆತನನ್ನು ಮೆರವಣಿಗೆ ನಡೆಸಿ ಜೀವಂತವಾಗಿ ದಹಿಸಲಾಗುತ್ತದೆ. ಹೋಳಿಹುಣ್ಣಿಮೆಯ ದಿನವು ಕಳ್ಳನ ಸಂಕಟ ಪರಿಹಾರವಾದ ದಿನವಾಗಿದ್ದು, ಆ ಹಿನ್ನೆಲೆಯಲ್ಲಿ ಬೇಡರವೇಷ ಬೆಳೆದು ಬಂದಿದೆ ಎನ್ನಲಾಗುತ್ತದೆ. ಹೀಗೆ ಕಾಮದಹನದಂದೇ ಪುಂಡತನವೊಂದು ಅಳಿದುಹೋಗುವ ಜನಪರ ಸಂದೇಶವಿರುವ ಆಚರಣೆಯೆಂದರೆ ಅದು ಬೇಡರವೇಷ.
ರಂಗಕರ್ಮಿ ಶ್ರೀಪಾದಭಟ್ಟರು ತಮ್ಮ ಸಂಶೋಧನ ಗ್ರಂಥದಲ್ಲಿ ಉಲ್ಲೇಖಿಸಿರುವ ಇನ್ನೊಂದು ಕಥಾವರಸೆಯು ಸರಿಸುಮಾರು ಈ ಮೇಲಿನ ಕಥೆಗಳನ್ನು ಹೋಲುತ್ತದೆಯಾದರೂ, ಬೇಡರವೇಷ ಶುರುವಾಗಿರಬಹುದಾದ ಒಂದು ಸಾಮಾನ್ಯ ಕಾಲ ಮತ್ತು ಕಾರಣವನ್ನು ಊಹಿಸಲು ಅನುಕೂಲಕರವಾಗಿದೆ. ಅಂದು ವಣಿಕರ ಶಹರವಾಗಿದ್ದ ಶಿರಸಿ ಅದೆಷ್ಟು ಶ್ರೀಮಂತವಾಗಿತ್ತೆಂದರೆ ವಿಜಯನಗರದ ಅರಸರಿಗೂ ಸಾಲ ನೀಡುವಷ್ಟು! ಈ ಹಿನ್ನೆಲೆಯಲ್ಲಿ ಶಿರಸಿಯನ್ನು ‘ಚಿನ್ನಪಟ್ಟಣ’ವೆಂದೂ ಕರೆಯಲಾಗುತ್ತಿತ್ತು. (ಇಂದಿಗೂ ‘ಚೆನ್ನಪಟ್ಟಣ ಬಝಾರ್’ ಎಂದು ಗುರುತಿಸಲಾಗುವ ಪ್ರದೇಶವಿದೆ ಶಿರಸಿಯಲ್ಲಿ) ಇಲ್ಲಿಯ ಪ್ರಮುಖ ವಣಿಕವರ್ಗ ವೀರಶೈವರದ್ದಾಗಿತ್ತು. ಆಗಿನಕಾಲದಲ್ಲೇ ಇವರ ಹೆಣ್ಣುಮಕ್ಕಳು ವಿಜಯನಗರದಲ್ಲಿ ವಿದ್ಯಾಭ್ಯಾಸವನ್ನೂ ಮಾಡುತ್ತಿದ್ದರಂತೆ.
ಅತ್ತ 1556ರಲ್ಲಿ ರಕ್ಕಸತಂಗಡಿಯ ಯುದ್ಧದ ಸೋಲಿನ ನಂತರ ವಿಜಯನಗರ ಅರಸರ ಖಾಸಾ ಅಂಗರಕ್ಷಕರ ಪಡೆಯಾಗಿದ್ದ ಬೇಡರ ಜನಾಂಗವೂ ಚೆದರಿಹೋಗುತ್ತದೆ. ಶಿರಸಿಗೆ ಸಮೀಪದ ದಾಸನಕೊಪ್ಪವೆಂಬಲ್ಲಿಗೂ ಬಂದು ಬೇಡರು ನೆಲೆನಿಂತರು. ವಿಜಯನಗರದ ಪತನದ ನಂತರ ಅರಾಜಕತೆ, ದರೋಡೆ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಅದರ ಬಿಸಿ ಚಿನ್ನಪಟ್ಟಣದ ವಣಿಕರಿಗೂ ತಾಕಿತ್ತು. ಈ ವಣಿಕರಿಗೆ ಸೋದೆಯ ಅರಸರ ಜೊತೆಗೆ ವ್ಯವಹಾರವಿದ್ದರೂ, ತಮ್ಮ ರಕ್ಷಣೋಪಾಯಗಳ ಕುರಿತ ಕ್ರಮಗಳಿಗೆ ತಾವೇ ಮುಂದಾದರು. ದಾಸನಕೊಪ್ಪದಲ್ಲಿದ್ದ ಬಲಿಷ್ಠ ಬೇಡ ಮಲ್ಲೇಶಿಯನ್ನು ಬಂಟನನ್ನಾಗಿ ನಿಯಮಿಸಿಕೊಳ್ಳುತ್ತಾರೆ. ಈತನ ಕಣ್ಣುಗಳಲ್ಲಿರುವ ವಿಶೇಷಶಕ್ತಿಯಿಂದ ಈತನನ್ನು ಸೋಲಿಸುವುದು ಅಸಾಧ್ಯವಾಗಿತ್ತು. ಆತನಿಗೆ ದವಸಧಾನ್ಯಗಳನ್ನು ಇತ್ತು ಸಾಕಿಕೊಂಡರು.
ಆದರೆ ಈತ ಕ್ರಮೇಣ ರಾತ್ರಿ ದರೋಡೆಗಿಳಿಯುತ್ತಾನೆ. ಶಿರಸಿಗೆ ಸಮೀಪದ ಸುಗ್ಗಾವಿ (ಈಗಲೂ ಇದೆ) ಈತನ ನೆಲೆಯಾಗಿತ್ತಂತೆ. ಬೆಟ್ಟ, ಗುಡ್ಡ, ಕಣಿವೆಗಳಿಂದಾವೃತ ಗಡಳ್ಳಿ (ಈಗ ಗಡಿಹಳ್ಳಿಯಾಗಿದೆ) ಆತನ ಚಟುವಟಿಕೆಯ ಕೇಂದ್ರವಾಗಿತ್ತು. ವಿಜಯನಗರದಿಂದ ನೆಲೆ ತಪ್ಪಿಬಂದ ವಣಿಕರನ್ನೆಲ್ಲ ಕೊಳ್ಳೆಹೊಡೆಯುತ್ತಾನೆ. ಅಷ್ಟೇ ಅಲ್ಲ ತನ್ನದೇ ಸೈನ್ಯಪಡೆಯನ್ನು ಕಟ್ಟಿಕೊಂಡು, ನೀಕುಂದ (ನಿಲಕುಂದ), ಬಿಳಗಿ, ಸ್ವಾದೆ, ಗೇರುಸೊಪ್ಪ ಪ್ರದೇಶದ ಮಾಂಡಲಿಕರನ್ನೆಲ್ಲ ಹೆದರಿಸಿಟ್ಟುಕೊಳ್ಳುವಷ್ಟು ಪ್ರಬಲನಾದ. ತನ್ನದೇ ಬೇಹುಪಡೆಯನ್ನೂ ರಚಿಸಿಕೊಂಡಿದ್ದನಂತೆ. ಅಂದು ಶಿರಸಿಯ ಆಯಕಟ್ಟಿನ ಪ್ರದೇಶಗಳಾದ ಭೀಮನಗುಟ್ಟ, ಕತ್ಲಿಗುಡ್ಡ, ಕಳಸದಗುಡ್ಡಗಳಲ್ಲಿ ರಾತ್ರಿಯವೇಳೆ ಸೂಡಿಗಳ ಮೂಲಕ ಸಂಜ್ಞೆಗಳನ್ನು ವಿನಿಮಯಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ. ದುಷ್ಟ ದರೋಡೆಕೋರ, ಲಂಪಟನಾಗಿ ಮಾರ್ಪಟ್ಟ ಮಲ್ಲೇಶಿ ಕಂಡಕಂಡ ಹೆಣ್ಣುಗಳನ್ನು ಬಳಸುವುದೊಂದೇ ಅಲ್ಲ, ವಣಿಕರ ಮಕ್ಕಳೂ ಮೈನೆರೆದರೆ ‘ಮೀಸಲು ಮುರಿಯುವ’ ದೊರೆಯಾಗಿದ್ದ. ಈತನ ಹುಟ್ಟಡಗಿಸಲು ಅದೇ ವಣಿಕರು ಸ್ವಾದಿಯ ಬಳಿ ರಹಸ್ಯವಾಗಿ ಯುವಪಡೆಯೊಂದಕ್ಕೆ ತರಬೇತಿ ನೀಡುತ್ತಿದ್ದರು.
ಈ ನಡುವೆ ವಿಜಯನಗರದಿಂದ ವಿದ್ಯಾಭ್ಯಾಸ ಮುಗಿಸಿ ಶಿರಸಿಗೆ ವಾಪಸಾಗುತ್ತಿದ್ದ ವಣಿಕಶ್ರೇಷ್ಠಿಯ ಮಗಳು ರುದ್ರಾಂಬೆಯ ಗೆಳತಿಯ ಮೇಲೆ ಮಲ್ಲೇಶಿ ಅತ್ಯಾಚಾರ ಮಾಡುತ್ತಾನೆ. ಅವಳು ಈ ವಿಷಯವನ್ನು ಗೆಳತಿ ರುದ್ರಾಂಬಿಕೆಗೆ ಕಾಗದ ಬರೆದು ತಿಳಿಸಿ ಮರಣವನ್ನಪ್ಪುತ್ತಾಳೆ. ಮುಂದೆ ರುದ್ರಾಂಬೆಯ ಮೇಲೆ ಮಲ್ಲೇಶಿಯ ಕಣ್ಣುಬಿದ್ದು, ಅವಳು ಅವನನ್ನೇ ವಿವಾಹವಾಗಿ ಆತನ ಮರಣಕ್ಕೆ ಕಾರಣಳಾಗುತ್ತಾಳೆ. ಮಲ್ಲೇಶಿ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ನಗರದ ಹೊರಭಾಗದಲ್ಲಿದ್ದ ವೀರಭದ್ರೇಶ್ವರ ದೇವಾಲಯದಲ್ಲಿ ಆವೇಶದ ವೀರನೃತ್ಯವನ್ನು ಮಾಡುತ್ತಿದ್ದ. ಆ ನೃತ್ಯದ ಸಂದರ್ಭದಲ್ಲಿಯೇ ರುದ್ರಾಂಬೆ ಆತನ ಕಣ್ಣಿಗೆ ಬಂಗಾರವನ್ನು ಕರಗಿಸುವ ಔಷಧಿ ‘ತೇಜಪ್ಪು’ ವನ್ನು ಎಸೆದು ಕಣ್ಣನ್ನು ಕುರುಡಾಗಿಸಿಬಿಡುತ್ತಾಳೆ. ಈ ಮೊದಲೇ ಸೂಚನೆಸಿಕ್ಕಿದ್ದ ಯುವಪಡೆ ಆತನನ್ನು ಸೆರೆಹಿಡಿದು ಮೆರವಣಿಗೆ ನಡೆಸಿ ಸಜೀವದಹನ ಮಾಡುತ್ತದೆ.
ಇಲ್ಲಿ ಉಲ್ಲೇಖಿತವಾದ, ಇಂದಿಗೂ ಆಚರಣೆಯಲ್ಲಿರುವ ಒಂದು ಅಂಶವೆಂದರೆ ಬೇಡರವೇಷ ಪಟ್ಟಣದ ಯಾವುದೇ ಭಾಗದಿಂದ ಆರಂಭವಾಗಿದ್ದರೂ, ಮಾರಿಕಾಂಬಾ ದೇವಾಲಯವನ್ನು ತಲಪಿ ವೀರಭದ್ರದೇವಸ್ಥಾನದಲ್ಲಿ ಕೊನೆಯ ಕುಣಿತವನ್ನು ನೀಡಿ ವಿಸರ್ಜನೆಯಾಗುತ್ತದೆ.
ಐತಿಹಾಸಿಕ ವಿಶ್ಲೇಷಣೆ
ಹೀಗೆಲ್ಲ ನಂಬಿಕೆ, ಶ್ರದ್ಧೆ, ವದಂತಿ, ಜನಪದ ಸಂಸ್ಕೃತಿ, ಪರಂಪರೆಯ ಆಚರಣೆಯಾಗಿ, ಶಿರಸಿಯ ಹೆಗ್ಗುರುತಾಗಿ ಆಚರಿಸುವ ಹಗಲಿನ ಹುಲಿವೇಷ, ರಾತ್ರಿಯ ಬೇಡರವೇಷಗಳ ಬಗ್ಗೆ ಯಾವುದೇ ಐತಿಹಾಸಿಕ ಉಲ್ಲೇಖವಿನ್ನೂ ಸಿಕ್ಕಿಲ್ಲ. ಅಧಿಕೃತ ದಾಖಲೆಗಳು ಈವರೆಗೂ ಇಲ್ಲ. ಸುಮಾರು ನೂರಿಪ್ಪತ್ತೈದು ವರ್ಷಗಳ ಹಿಂದೆ ‘ಗದಿಗಯ್ಯ’ ಎನ್ನುವವರು ಈ ವೇಷವನ್ನು ಜನಪ್ರಿಯಗೊಳಿಸಿದರೆನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇತಿಹಾಸತಜ್ಞ ಲಕ್ಷ್ಮೀಶ ಸೋಂದಾ ಅವರು ವಿಶ್ಲೇಷಿಸುವ ಸಂಗತಿಯೊಂದು ಇತಿಹಾಸದ ಇನ್ನೊಂದು ಮುಖದಮೇಲೆ ಬೆಳಕು ಚೆಲ್ಲುವಂತಿದೆ. ಟಿಪ್ಪುವಿನ ಆಡಳಿತಕ್ಕೆ ಸಂಬಂಧಿಸಿದ ಕೈಫಿಯತ್ ಒಂದರಲ್ಲಿ ಉಲ್ಲೇಖಗೊಂಡಿದೆ ಎನ್ನಲಾದ ಉತ್ತರಕನ್ನಡ ಜಿಲ್ಲೆಗೆ ವಿಧಿಸಲಾಗಿದ್ದ ಅತಿಯಾದ ಕರಭಾರದ ದಾಖಲೆಯನ್ನು ಪ್ರಸ್ತಾವಿಸುವ ಅವರು, ಇವೆರಡು ವೇಷಗಳೂ ಆಳರಸರ ಇಂತಹ ದುರಾಳ್ವಿಕೆ ಹಾಗೂ ಶೋಷಣೆಯ ಕುರಿತಾದ ರೋಷ-ಆಕ್ರೋಶವನ್ನು ಹೊರಚೆಲ್ಲುವ ಮಾಧ್ಯಮವಾಗಿತ್ತು. ದಂಗೆಯೆದ್ದ ಪ್ರಜೆಗಳ ಸಾಂಕೇತಿಕ ಪ್ರತೀಕಾರಮಾರ್ಗವೂ ಆಗಿತ್ತೆನ್ನುತ್ತಾರೆ.
ಆ ಕುರಿತಂತೆ ಲಕ್ಷ್ಮೀಶ ಸೋಂದಾ, “ಹುಲಿವೇಷ, ಬೇಡರವೇಷಗಳೆರಡೂ ವಿಶೇಷವಾಗಿ ಉತ್ತರಕನ್ನಡದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಜಾನಪದಕಲೆ. ಈ ಕಲೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಅದು ಸುಮಾರು 225 ವರ್ಷಗಳಷ್ಟು ಹಿಂದಕ್ಕೆ ಹೋಗಬಹುದು. ಆಗ ಟಿಪ್ಪುಸುಲ್ತಾನನ ಆಳ್ವಿಕೆಯ ಕಾಲ. ಆತ ಉತ್ತರಕನ್ನಡ ಜಿಲ್ಲೆಯ ರೈತರ ಮೇಲೆ ವಿಪರೀತವಾಗಿ ತೆರಿಗೆ ವಿಧಿಸಿ ಶೋಷಿಸುತ್ತಿದ್ದ. ಆತನ ಸೈನಿಕರು ನಡೆಸುತ್ತಿದ್ದ ಶೋಷಣೆಯೂ ಮಿತಿಮೀರಿತ್ತು. ಅವರು ಹುಲಿಯ ಮೈಬಣ್ಣದ ರೀತಿಯ ಪೋಷಾಕುಗಳನ್ನು ಧರಿಸುತ್ತಿದ್ದರು. ಟಿಪ್ಪು ಕೂಡಾ ಮೈಸೂರಿನ ಹುಲಿಯೆಂದೇ ಜನಜನಿತನಾಗಿದ್ದ. ಹಾಗೆಯೇ ಬಿಂಬಿಸಲ್ಪಡುತ್ತಿದ್ದ. ತೆರಿಗೆಯ ಭಾರದಿಂದ ನೊಂದು ಆಕ್ರೋಶಗೊಂಡಿದ್ದ ರೈತರು ಟಿಪ್ಪುವಿನ ಹಾಗೂ ಅವನ ಸೈನಿಕರ ಕುರಿತ ಆಕ್ರೋಶವನ್ನು ಹುಲಿವೇಷದ ಮೂಲಕ ಮತ್ತು ಬೇಡರವೇಷದ ಮೂಲಕ ಹೀಯಾಳಿಕೆಯಾಗಿ ಪ್ರದರ್ಶಿಸುತ್ತಿದ್ದರು. ಹುಲಿವೇಷವನ್ನು ಬಳಿದುಕೊಂಡ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗುವುದು, ಹುಲಿವೇಷಧಾರಿ ಭಿಕ್ಷೆ ಎತ್ತುವುದು, ಹುಲಿವೇಷಧಾರಿಯ ಬೇಟೆಯಾಡುವುದೇ ಮೊದಲಾದ ವ್ಯಂಗ್ಯಪ್ರದರ್ಶನದ ಮೂಲಕ ಮೈಸೂರಿನ ವೀರಹುಲಿಯ ಅವಹೇಳನ ಮಾಡಲಾಗುತ್ತಿತ್ತು. ರಾತ್ರಿ ಆಕ್ರೋಶಗೊಂಡ ರೈತರು ಆಳರಸರನ್ನು ಹಿಡಿದು ಅಟ್ಟಾಡಿಸುವ ಅಣಕು ಕಾರ್ಯಾಚರಣೆ ಇದಾಗಿತ್ತು. ರೈತರ ರೋಷದ ಅಭಿವ್ಯಕ್ತಿಯೇ ಇಂದು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಬೇಡರವೇಷವಾಗಿ ಪ್ರಚಲಿತದಲ್ಲಿದೆ” ಎಂದು ಅಭಿಪ್ರಾಯಪಡುತ್ತಾರೆ.
ಅನ್ಯಾಯವನ್ನು ಪ್ರತಿಭಟಿಸಲು ಸಾಹಿತ್ಯ, ನೃತ್ಯ ಮುಂತಾದ ಎಲ್ಲ ಅಭಿವ್ಯಕ್ತಿ ಮಾಧ್ಯಮಗಳ ಬಳಕೆಯ ಇತಿಹಾಸವನ್ನು ಜಗತ್ತಿನಾದ್ಯಂತ ನೋಡುತ್ತೇವೆ. ಅಂತಹ ಒಂದು ಪ್ರತಿಭಟನೆಯ ಮಾಧ್ಯಮವಾಗಿರುವ ಹುಲಿವೇಷ ಮತ್ತು ಬೇಡರವೇಷವು ಇಂದಿಗೂ ಇತಿಹಾಸವನ್ನೊಮ್ಮೆ ಹೊರಳಿನೋಡುವಂತೆ ಪ್ರೇರೇಪಿಸುತ್ತದೆ.
ರಾಚಕ ದೃಷ್ಟಿಕೋನದಲ್ಲಿ
ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಬೇಡರವೇಷದ ವೇಷ-ಭೂಷಣ, ಆಚರಣೆಯ ಕೆಲವೊಂದು ಸ್ವರೂಪಗಳು ಮಾರಿಕಾಂಬೆಯ ಕಥೆಯ ಆವರಣಕ್ಕೂ ಸೂಚಿತವಾಗಿರುವುದು! ಆ ಬಗ್ಗೆ ತಮ್ಮ ಸಂಶೋಧನಾ ಕೃತಿಯಲ್ಲಿ ವಿಶ್ಲೇಷಿಸುವ ಶ್ರೀಪಾದ ಭಟ್ಟರು, “ಶ್ರೀ ಮಾರಿಕಾಂಬಾ ಜಾತ್ರೆಯಿರದ ವರ್ಷಗಳಲ್ಲಿ ನಡೆಯುವ ಬೇಡರವೇಷವನ್ನು ರಾಚಕ ದೃಷ್ಟಿಯಿಂದ ಅವಲೋಕಿಸಿದಲ್ಲಿ, ಬೇಡರವೇಷ ಶಿರಸಿಯಲ್ಲಿಯೇ ನೆಲೆಗೊಂಡಿರುವುದರ ಅರ್ಥ ಹಾಗೂ ಪ್ರಚಲಿತದಲ್ಲಿರುವ ಬೇಡರ ಮಲ್ಲೇಶಿಯ ಕಥನಗಳಿಗಿಂತಲೂ ಭಿನ್ನವಾದ ಅರ್ಥಗಳು ಗೋಚರವಾಗುತ್ತವೆ. ಬೇಡವೇಷಗಾರನ ತಲೆಯ ಮೇಲಿರುವ ಕೊಂಬಿನ ವಿನ್ಯಾಸ ಕೋಣನ ಕೊಂಬನ್ನು ಹೋಲುತ್ತದೆ. ಮುಖದಲ್ಲಿ ಅಗಲವಾಗಿ ಬಿಡಿಸಲ್ಪಡುವ ಕಣ್ಣು ಪ್ರಾಣಿಯ ಕಣ್ಣನ್ನು ಹೋಲುತ್ತದೆ. ಕುಣಿತದ ಆರಂಭ ಕೂಡ ಪ್ರಾಣಿಯೊಂದರ ಅನುಕರಣದಂತೆ ತೋರುತ್ತದೆ. ಶಿರಸಿಯ ಯಾವುದೇ ಭಾಗದವರು ವೇಷ ಹಾಕಿದರೂ ಅವರು ಮಾರಿಕಾಂಬಾ ದೇವಾಲಯದ ಮುಂದೆ ಕುಣಿಯಲೇಬೇಕೆಂಬ ಸಂಪ್ರದಾಯವಿದೆ.
ಮಾರಿಕಾಂಬೆಯ ಕುರಿತಾದ ಕಥೆಯೊಂದರಲ್ಲಿಯೂ ‘ಅಸಾದಿ’ ಎಂಬ ಜನಾಂಗಕ್ಕೆ ಸೇರಿದ ಯುವಕ ಮಾರಿಕಾಂಬೆಯಿಂದ ಹತನಾಗುತ್ತಾನೆ. ಆತ ಮಾರಿಕಾಂಬೆಯಿಂದ ಪಾರಾಗಲು ಕುರಿ, ಕೋಳಿ ಮುಂತಾದ ಪ್ರಾಣಿಗಳಲ್ಲೆಲ್ಲ ಅಡಗಿ ಕೊನೆಯಲ್ಲಿ ಕೋಣನಲ್ಲಿ ಅಡಗುತ್ತಾನೆ. ಮಾರಮ್ಮ ಅಲ್ಲಿಗೂ ಬಿಡದೆ ಕೋಣವನ್ನೇ ವಧಿಸಿ ತಾನು ವಿಧವೆಯಾಗಿ ದೇಹತ್ಯಾಗ ಮಾಡುತ್ತಾಳೆ. ಅಸಾದಿಗಳು ಬೈಯುತ್ತಾ ಬೊಬ್ಬಿರಿಯುತ್ತಾ ಸಾಗುತ್ತಾರೆ. ಈ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಕೋಣನ ಬಲಿಯು ಸಾಂಕೇತಿಕವಾಗಿಯಾದರೂ ಜರಗುವುದೊಂದು ಪ್ರಮುಖ ವಿಧಿಯಾಗಿದೆ. ಅದರ ಅಂಗವಾಗಿ ಇಂದಿಗೂ ಜಾತ್ರಾವಿಸರ್ಜನೆಯ ಹಂತದಲ್ಲಿ ಅಸಾದಿಗಳು ಮಾರಿಕಾಂಬೆಯನ್ನು ವಾಚಾಮಗೋಚರವಾಗಿ ಬೈಯುವ ಸಂಪ್ರದಾಯವಿದೆ. ಇಲ್ಲಿ ಬೇಡರವೇಷದಲ್ಲಿಯೂ ವೇಷದ ಮುಂದೆ ಬಾಯಿಬಡಿದುಕೊಳ್ಳುತ್ತಾ ಸಾಗುವ ವಿಧವೆ, ಅವಳನ್ನು ಬೈಯುವ ಮಂದಿಗಳ ತಂಡವಿರುತ್ತದೆ. ಅಲ್ಲದೆ ಶ್ರೀದೇವಿಯ ಕಾಲಕೆಳಗಿರುವ ಕೋಣನ ತಲೆಗೆ ಮಾನವನ ದೇಹವಿದೆ. ಇಲ್ಲಿ ಬೇಡರವೇಷದಲ್ಲಿಯೂ ಕೋಣನ ತಲೆ, ಮನುಷ್ಯದೇಹದ ಆಕಾರವೇ ಇದೆ. ಬೇಡರವೇಷ ತನ್ನ ಮುಂದಿರುವ ಹೆಂಗಸಿನ ಮೇಲೆ ಹೂಂಕರಿಸಿ ನುಗ್ಗುತ್ತಾನೆ (ಮಾರಿಕಾಂಬೆಯ ಕಥೆಯಲ್ಲಿಯೂ ಕೋಣನೊಳಗೆ ಸೇರಿದ್ದ ಮಾರಿಕಾಂಬೆಯ ಪತಿ ಇದೇ ವೇಷದಲ್ಲಿ ತನ್ನನ್ನು ಸಂಹರಿಸಲು ಬಂದ ಮಾರಿಕಾಂಬೆಯ ಮೇಲೆ ಏರಿ ನುಗ್ಗಿಹೋಗುತ್ತಾನೆ). ಹೀಗೆ ಕೋಣನ ತಲೆ ಸ್ಥಳೀಯ ಐತಿಹ್ಯದ ಜೊತೆ ಸೇರಿ ಬೇಡರವೇಷವಾಯಿತು.
ಇದಕ್ಕೆ ಪೂರಕವಾಗಿ ತುಂಬ ಹಿಂದೆ ಬೇಡರವೇಷವನ್ನು ಮಾರಿಕಾಂಬೆಯ ಪತಿಯ ವಂಶದವರೆನ್ನಲಾದ ಅಸಾದಿಗಳೇ ಹಾಕುತ್ತಿದ್ದರು ಎನ್ನಲಾಗಿದೆ. ಬೇಡರವೇಷದಲ್ಲಿ ಬಳಸುವ ವಾದ್ಯ ತಮಟೆ. ತಮಟೆಯೂ ಹರಿಜನರ ವಾದ್ಯವೆಂದು ಹೆಸರಾಗಿರುವುದು ಕೂಡ ಮಾರಿಯ ಐತಿಹ್ಯದೊಂದಿಗೆ ಈ ವೇಷದ ಸಂಬಂಧವನ್ನು ದೃಢಪಡಿಸುತ್ತದೆ. ಅಂದರೆ ಬೇಡರವೇಷ ಮಾರಿಯ ಕಥೆಯ ಒಂದು ಪುನರಭಿನಯವಾಗಿದೆ ಎನ್ನಬಹುದು.
ಸ್ಮೃತಿಜನಿತ ಕಲೆ
ಬೇಡರವೇಷ ಒಂದು ಬಗೆಯ ಹಗಣ. (‘ಹಗಣ’ ಎಂಬ ಶಬ್ದದ ಮೂಲರೂಪ ‘ಹರನ ಗಣ’ ಎಂಬುದಾಗಿ ಕೆಲವುಮಂದಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.) ಪುನರಭಿನಯದ ಐತಿಹ್ಯದೊಂದಿಗೆ ಇದರ ಸಂಬಂಧವನ್ನು ಅವಲೋಕಿಸಿದಾಗ ಈ ಕಲೆಯನ್ನು ಸ್ಮೃತಿಜನಿತ ಕಲೆ ಎಂದೂ ಕರೆಯಬಹುದಾಗಿದೆ. ಸಮೂಹವೊಂದರ ಸ್ಮೃತಿ ಇಲ್ಲಿ ಕಲೆಯ ರೂಪ ತಾಳಿದೆ. ಆಚರಣೆಯ ಕಟ್ಟುಪಾಡು ಇಲ್ಲದಿರುವುದರಿಂದ ಕೆಲವು ಮೂಲ ಚಹರೆಗಳನ್ನುಳಿಸಿಕೊಂಡು ವೇಷ, ಬಣ್ಣ, ಕುಣಿತ ಇವುಗಳಲ್ಲೆಲ್ಲ ಕಾಲಕಾಲಕ್ಕೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.
ಸಿನೆಮಾ ಮತ್ತು ರಂಗಭೂಮಿಯಲ್ಲಿ ದುಡಿದು ಅನುಭವವಿದ್ದ ಪುತ್ತಣ್ಣ ಬೇಡರವೇಷಕ್ಕೆ ಹೊಸ ಆಯಾಮ ನೀಡಿದವರು. ಅವರು “ಇದೊಂದು ಅಪರೂಪದ ಜನಪದಲೋಕ’’ ಎಂಬ ನಿರ್ಣಯಕ್ಕೆ ಬರುತ್ತಾರೆ. ಎರಡುವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ಜಾತ್ರಾಉತ್ಸವದ ಸಮಯವೂ ಪ್ರತಿಬಾರಿ ಹೋಳಿಹಬ್ಬದ ಮಿತಿಯೊಂದಿಗೆ ಹೊಂದಿಕೊಂಡಿರುವುದೊಂದು ವಿಶೇಷ. ವೇಷದ ತಂಡದವರೂ ಸಹ ಕುಣಿತದ ದಾರಿಯಲ್ಲಿ ಬರುವ ಎಲ್ಲ ಮಾಸ್ತಿಕಟ್ಟೆ, ಭೂತದ ಮರ, ಚೌಡಿಯ ಕಟ್ಟೆಯಂತಹ ಪ್ರದೇಶಗಳಿಗೆ ಈಡುಗಾಯನ್ನೊಡೆದು ಸ್ಥಳದೇವತೆಗಳನ್ನು ಶಾಂತಗೊಳಿಸುತ್ತ ಸಾಗಬೇಕು. ಅಷ್ಟೇ ಅಲ್ಲ. ವೇಷಹಾಕುವ ಮೊದಲು ಮಾರಿಕಾಂಬಾ ದೇವಸ್ಥಾನಕ್ಕೆ ಬಂದು ಕಾಯಿಗಳನ್ನಿಟ್ಟು ಸೇವೆಯನ್ನು ಅರ್ಪಿಸಬೇಕು. ಇಂದಿಗೂ ಈ ಸಂಪ್ರದಾಯ ನಡೆದುಬಂದಿದೆ.
ಆಕರ್ಷಣೆಯ ಸ್ವರೂಪ
ಮುಗಿಯದ ಆಕರ್ಷಣೆಯಾಗಿರುವ ಬೇಡರವೇಷದ ಸ್ವರೂಪವೂ ಅಪರೂಪದ್ದೇ. ವೇಷದ ಪ್ರದರ್ಶನದ ಅವಧಿ ಒಟ್ಟು ಐದುದಿನಗಳು. ಶಿರಸಿಯಲ್ಲಿ ಕಾಮ-ರತಿಯರ ಪ್ರತಿಷ್ಠಾಪನೆಯಾದ ಮರುದಿನ ಬೆಳಗಿನಿಂದ ಹುಲಿವೇಷ ಬೀದಿಯಲ್ಲಿ ಅಲೆಯುತ್ತಿದ್ದರೆ, ರಾತ್ರಿಯಿಂದ ಬೇಡರವೇಷ ಆರಂಭವಾಗುತ್ತದೆ. ಮುಸ್ಸಂಜೆ ಇಳಿದು ರಾತ್ರಿಯ ಪರದೆ ಹರಡಿಕೊಳ್ಳುತ್ತಿರುವಾಗ ಬೇಡರವೇಷ ಬೀದಿಗಿಳಿದ ಸದ್ದು ಪಟ್ಟಣದ ದಿಕ್ಕುದಿಕ್ಕುಗಳಿಂದ ಮಾರ್ದನಿಸತೊಡಗುತ್ತದೆ. ಆರುಜನರು ಬಾರಿಸುವ ಅಬ್ಬರದ ತಮಟೆಯ ಢಂ-ಡಣಕ್ಕು-ಢಂ-ಢಕ್ಕು-ಡಕಣಕ್ಕೆಂಬ ಠೇಂಕಾರದ ಬಿಡ್ತಿಕೆಯ ಜೊತೆಗೆ ವಿಧವೆ ವೇಷಧಾರಿಯ ‘ಹೊಯ್’ ಕೂಗು. ಅದಕ್ಕೆ ಪ್ರತಿಯಾಗಿ ವಿಧವೆಯನ್ನು ಅಟ್ಟಿಸಿ ಹೇ.. ಹೇಯ್, ಹೊಯ್.. ಹೊಯ್.. ಹೇಯ್ ಹ್ಹಾಆಆ.. ಹೂಮ್ ಎಂಬಂತಹ ಹೂಂಕಾರದ ಹೇಷಾರವ, ಕಿವಿಸೀಳುವ ಸೀಟಿಯೂದುವ ಸದ್ದುಗಳು.. ಪರಸ್ಪರ ಬೈಗುಳಗಳು, ತೂಗಿ ನೆಗೆಯುವ ವೇಷಧಾರಿಯ ಜೊತೆ ಹಿಲಾಲು ಹಿಡಿದು ಬರುವವರು. ವೇಷಗಾರನನ್ನು ಹಗ್ಗದಲ್ಲಿ ಕಟ್ಟಿ ನಿಯಂತ್ರಿಸುವವರು.. ಬೇಡರವೇಷ ಧರಿಸಿದ ಪ್ರಮುಖ ವೇಷಧಾರಿಯೊಡನೆ ಕನಿಷ್ಠವೆಂದರೂ ಹನ್ನೆರಡು ಜನರ ತಂಡವಿರುತ್ತದೆ. ಹಿಲಾಲಿನ ಬೆಳಕಿಗೆ ತೂಗುವ ಅವರೆಲ್ಲರ ನೆರಳು.. ಬೇಡರವೇಷವೆಂದರೆ ರಂಗಿನ ಗುಂಗು ವಿಭಿನ್ನವಾಗಿ ಶಿರಸಿಯ ಬೀದಿಬೀದಿಗಳಲ್ಲಿ ರಿಂಗಣಿಸುತ್ತದೆ. ಬೇಡವೇಷಧಾರಿಯ ಪದಾಘಾತ, ಮೆರೆದಾಟದ ಆರ್ಭಟ ಎದೆಬಡಿತದ ತಾಳತಪ್ಪಿಸುತ್ತದೆ. ಅದು ಬರೇ ನೃತ್ಯವಲ್ಲ. ರೌರವನರ್ತನ! ಸರಿಸುಮಾರು ಐವತ್ತು ತಂಡಗಳ ಐದು ದಿನಗಳ ನೃತ್ಯಪ್ರದಕ್ಷಿಣೆ.
ನಗರದ ವಿವಿಧ ಬೀದಿಗಳ ಯುವಸಂಘಟನೆಗಳು, ಹರಕೆಹೊತ್ತು ಆಡುವವರು ಹೀಗೆ ಪ್ರತಿಯೊಂದು ಹೋಳಿಹಬ್ಬದ ಸಂದರ್ಭದಲ್ಲಿ ಸುಮಾರು ಐವತ್ತು ತಂಡಗಳು ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತವೆ. ಮೊದಮೊದಲು ಅಸಾದಿಗಳಷ್ಟೆ ಹಾಕುತ್ತಿದ್ದ ಬೇಡರವೇಷವನ್ನು ಕ್ರಮೇಣ ಎಲ್ಲ ವರ್ಗದವರೂ ಹಾಕಲು ಶುರುಮಾಡಿದ್ದಾರೆ. ಮೇಲ್ವರ್ಗದವರೂ ಬೇಡರವೇಷವನ್ನು ಹಾಕುವುದೊಂದು ವಿಶೇಷ. ತೀರಾ ಇತ್ತೀಚಿನ ದಶಕಗಳವರೆಗೂ ಬೇಡರವೇಷವನ್ನು ಹಿಂದುಗಳು ಮಾತ್ರವೇ ಅಲ್ಲ, ಕ್ರಿಶ್ಚಿಯನ್ನರು ಮುಸ್ಲಿಮರೂ ಹಾಕುತ್ತಿದ್ದರೆಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈಗಲೂ ಎಲ್ಲ ಜನಾಂಗದವರೂ ವಂತಿಗೆ ನೀಡುವುದು ವಿಶೇಷ. ಈ ಎಲ್ಲ ನೃತ್ಯತಂಡಗಳು ಶಿರಸಿ ಪಟ್ಟಣದ ಪ್ರಮುಖ ಬೀದಿಗಳು, ವೃತ್ತಗಳನ್ನು ಹಾದು ನಾಡಿನ ಪ್ರಖ್ಯಾತ ಶಕ್ತಿಪೀಠಗಳಲ್ಲೊಂದಾದ ಶ್ರೀಮಾರಿಕಾಂಬೆಯ ಗುಡಿಯೆದುರು ನರ್ತಿಸಿ ಅಲ್ಲಿಂದ ಅಂತಿಮವಾಗಿ ವೀರಭದ್ರ ದೇವಸ್ಥಾನದ ಎದುರು ಅಬ್ಬರದ ನೃತ್ಯಸೇವೆ ಸಲ್ಲಿಸಿ ಆನಂತರ ವೇಷವಿಸರ್ಜನೆಯಾಗಬೇಕು.
‘ಸ್ಟೆಮಿನಾ’ಕ್ಕೆ ಸವಾಲು
ಈ ಸುದೀರ್ಘ ಪ್ರದರ್ಶನ ನೀಡುವುದೆಂದರೆ ಅದು ಸುಲಭದ ಮಾತಲ್ಲ. ಪ್ರತಿಯೊಂದು ನೃತ್ಯತಂಡ ರಾತ್ರಿ ಸುಮಾರು ಹತ್ತುಗಂಟೆಗೆ ಬೀದಿಗಿಳಿದರೆ ಬೆಳಗಿನ ಝಾವ ನಾಲ್ಕು-ನಾಲ್ಕುವರೆಯ ತನಕ ವೇಷವನ್ನು ಮೆರೆಸುತ್ತವೆ. ಪಯಣದುದ್ದಕ್ಕೂ ಬೇಡವೇಷಧಾರಿ ನೃತ್ಯಗತಿಯನ್ನು ಕಾಯ್ದುಕೊಂಡು, ಅಬ್ಬರವನ್ನುಳಿಸಿಕೊಂಡು ಮೆರೆದಾಡಬೇಕು. ರಾತ್ರಿಯಿಡೀ ಸೋಲದೆ ಕುಣಿಯುತ್ತಲೇ ಸಾಗುವ ‘ಸ್ಟೆಮಿನಾ’ ಸಾಧಿಸಿರಬೇಕು. ಆವೇಶ ಕಳೆದುಕೊಳ್ಳದ ರೋಷವಿರಬೇಕು. ಇದನ್ನೆಲ್ಲ ಸಾಧಿಸುವುದೆಂದರೆ ಒಂದು ದಿನದ ಮಾತಲ್ಲ. ತಿಂಗಳಾನುಗಟ್ಟಲೆ ಸತತವಾಗಿ ನಡೆಸುವ ತಾಲೀಮು ಹಾಗೂ ಶ್ರದ್ಧೆ ವೇಷಧಾರಿಗಳನ್ನು ಆ ಕಠಿಣ ಪ್ರದರ್ಶನಕ್ಕೆ ಸಜ್ಜು ಮಾಡಿರುತ್ತದೆ. ಹೋಳಿಹುಣ್ಣಿಮೆಗೆ ತಿಂಗಳಿಗೂ ಮೊದಲೇ ಬೇಡರವೇಷದ ತಾಲೀಮು ಶುರುವಾಗುತ್ತದೆ. ಚಿಕ್ಕದಾಗಿ ಆರಂಭವಾಗುವ ತಾಲೀಮು ಹಂತಹಂತವಾಗಿ ತಡರಾತ್ರಿಯನ್ನು ದಾಟಿ ಬೆಳಗನ್ನು ತಲಪುತ್ತದೆ. ಶಿರಸಿಗರು ದಶದಿಕ್ಕುಗಳಿಂದಲೂ ಮಾರ್ದನಿಸುವ ಬೇಡರವೇಷದ ತಮಟೆಯ ಜೋಗುಳದಲ್ಲಿ ನಿದ್ರಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಲೇ ವೇಷದ ಗುಂಗಿಗೆ ಬೀಳುತ್ತಾರೆ.
ತಾಲೀಮಿನಲ್ಲಿ ಹಳಬರು ಹೆಜ್ಜೆಯ ಗತಿಯನ್ನು ಗಟ್ಟಿಮಾಡಿಕೊಳ್ಳುತ್ತ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಾರೆ. ಇವರಲ್ಲಿ ಕೆಲವರು 8-10 ಹೋಳಿಯ ಅವಧಿಯ ಬೇಡರವೇಷವನ್ನು ನಿರ್ವಹಿಸಿದವರೂ ಇದ್ದಾರೆ. ತಮ್ಮ ಜೊತೆಗೇ ಹೊಸಬರನ್ನು ತಿದ್ದುತ್ತ, ನಡೆಸುತ್ತ ಗುರು-ಶಿಷ್ಯ ಸಂಬಂಧವನ್ನು ನಿರ್ವಹಿಸಿದ ಉದಾಹರಣೆಗಳೂ ಇವೆ. ಇದಲ್ಲದೆ ಬಾಲ್ಯದಿಂದಲೇ ಬೇಡರವೇಷದ ಗುಂಗಿಗೆ ಬಿದ್ದು ಸ್ವತಃ ತಾವೇ ಗತಿಯನ್ನು ಪಡೆದು ಮುನ್ನಡೆಯುವವರೂ ಇದ್ದಾರೆ.
ಈಚಿನ ವರ್ಷಗಳಲ್ಲಿ ಹತ್ತು-ಹನ್ನೆರಡು ವರ್ಷದ ಬಾಲಕರೂ ವೇಷಕಟ್ಟಿ ಕುಣಿಯುವುದಕ್ಕೆ ತೊಡಗಿದ್ದಾರೆ.
ಈಚಿನವರೆಗೂ ಹರಕೆಕಟ್ಟಿ ಸೇವಾರ್ಥವಾಗಿ ಬೇಡರವೇಷವನ್ನು ವ್ರತದಂತೆ ನಿರ್ವಹಿಸುವ ಸಂಪ್ರದಾಯವೂ ಇತ್ತು. ಈಗ ಇದೊಂದು ತಂಡಗಳ ನಡುವಿನ ಸ್ಪರ್ಧಾತ್ಮಕ ಸನ್ನಿವೇಶವನ್ನು ಸೃಷ್ಟಿಸುವುದರಿಂದ ಬೇಡರವೇಷದ ನೃತ್ಯತಂಡಗಳ ಪರಿಣತಿಯ ಪ್ರದರ್ಶನವೂ ಆಗುತ್ತದೆ. ಜೊತೆಗೆ ಇತಿಹಾಸ ಪುರಾಣಗಳನ್ನು ದೃಶ್ಯೀಕರಿಸಿದ ಬಂಡಿಗಳು, ಸಿದ್ಧಪ್ರಸಿದ್ಧರ ಪ್ರತಿಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಡಿಜೆಯ ಅಬ್ಬರ ಮೂಲವೇಷದ ಸೊಗಡನ್ನು ಕಳೆದು ಆಧುನಿಕತೆಯ ಸ್ಪರ್ಶ ಆಚರಣೆಯನ್ನು ತಟ್ಟಿದೆ.
ವೇಷಸಿಂಗಾರ
ಇನ್ನು ಬೇಡರವೇಷವೋ ಅದು ನೋಡಲೂ ಅಷ್ಟೇ ರುದ್ರಭಯಾನಕ. ಅಚ್ಚಕೆಂಪು ಬಣ್ಣದ ಉದ್ದತೋಳಿನ ಅಂಗಿ, ಮೊಣಕಾಲು ಮುಟ್ಟುವ ದೊಗಲೆಚಡ್ಡಿ. ಚಡ್ಡಿಯಂಚಿಗೆ ಕಪ್ಪು-ಬಿಳುಪು ಅಥವಾ ಹಳದಿಯ ಹಾವಿನಂತಹ ನೇಯ್ಗೆ. ಕಾಲಿಗೆ ಹೆಜ್ಜೆಯಿಟ್ಟರೆ ಘೀಳಿಡುವ ಗೆಜ್ಜೆ. ಬೆನ್ನಿಗೆ ದಪ್ಪನಾದ ನವಿಲುಗರಿಗಳ ಪದರು. ಕುತ್ತಿಗೆಗೆ ಬೆಂಡಿನ/ನೋಟಿನ/ಕವಡೆಯ ಮಾಲೆ. ಬಿಳಿ, ಕಪ್ಪು ಬಣ್ಣವನ್ನು ಐದಾರುಪಟ್ಟು ದೊಡ್ಡದಾಗಿ ಬಳಿದು ಕಣ್ಣನ್ನು ಕ್ರೂರವಾಗಿ ಪ್ರಕಾಶಿಸುವಂತೆ ಮಾಡುವುದು. ಸಹಜಹುಬ್ಬನ್ನು ಮರೆಮಾಚಿ ಅಗಲವಾಗಿಸುವುದು. ಹಣೆಯ ಮೇಲೆ ತಲೆಬುರುಡೆಯ ಚಿತ್ರ. ತುಟಿಯ ಸುತ್ತ ಅಗಲವಾಗಿ ಹಳದಿಯ ಬಣ್ಣ ಬಳಿಯುವುದು. ಉಳಿದ ಇಡೀ ಮುಖಕ್ಕೆ ಕೆಂಪು ಬಣ್ಣ ಬಳಿಯುವುದು. ಗದ್ದದ ಕೆಳಭಾಗಕ್ಕೆ ಕಪ್ಪುಬಣ್ಣ ಹಚ್ಚುವುದು. ಅದರೊಂದಿಗೆ ಮೂಗಿನ ಮೇಲೊಂದು ಗುಂಡನೆಯ ಹತ್ತಿ ಅಥವಾ ಬೆಂಡಿನ ಉಂಡೆ. ಇವೆಲ್ಲದರ ಕ್ರೌರ್ಯಬಿಂಬ ಹೆಚ್ಚಿಸುವಂತಹ ಕಪ್ಪನೆಯ ದಪ್ಪಮೀಸೆ. ತಲೆಗೆ ಪಾರಿವಾಳ/ಪಕ್ಷಿಗಳ ಗರಿಗಳಿಂದ ಕೂಡಿದ ಮುತ್ತಿನ ಸರ ಸುತ್ತಿ ಕೋಡುಗಳ ಕಿರೀಟ ಹಾಕುವುದು. (ಹಿಂದಿನ ಕಾಲದಲ್ಲಿ ಆಡು ಅಥವಾ ಪ್ರಾಣಿಯ ನಿಜವಾದ ಕೋಡುಗಳನ್ನೇ ಕಿರೀಟಕ್ಕೆ ಬಳಸುತ್ತಿದ್ದರಂತೆ). ಬೆನ್ನಿಗೆ ನವಿಲುಗರಿಯಿಂದ ಹೆಣೆದ ಎರಡರಿಂದ ಮೂರಡಿ ಅಗಲ, ನಾಲ್ಕಡಿ ಎತ್ತರದ ಅಟ್ಟೆಯನ್ನು ಕಟ್ಟುತ್ತಾರೆ. ಅದು ವೇಷಧಾರಿಯ ತಲೆಗಿಂತ ಮೂರಡಿ ಎತ್ತರವಿರುತ್ತದೆ. ರಟ್ಟೆಗಳಿಗೆ ಬಾಲದಂತೆ ಜೋಲುವ ಚೌರಿ. ಸೊಂಟಕ್ಕೆ ಗಂಟೆಯ ಸರ. ಬಲಗೈಯಲ್ಲಿ ಝಳಪಿಸುವ ಕತ್ತಿ, ಎಡಗೈಯಲ್ಲಿ ಡಾಲು – ಇದು ಸ್ಥೂಲವಾದ ಬೇಡರವೇಷದ ವೇಷಭೂಷಣ. ಈ ವಿಪರೀತ ಆಕಾರದ ಬೇಡ ತಮಟೆಯ ತಾಳದ ಗತಿಯನ್ನು ಅನುಸರಿಸಿ ಮುಂಗಾಲಿನದೊಂದು, ಹಿಂಗಾಲಿನದೊಂದು ಹೆಜ್ಜೆಯ ಜೊತೆಗೆ ಕುಣಿತವನ್ನು ನಿಧಾನಗತಿಯಲ್ಲಿ ಆರಂಭಿಸುತ್ತಾನೆ. ನೃತ್ಯದ ಆರಂಭದಲ್ಲಿ ವೇಷಧಾರಿಯ ಎರಡೂ ಕಾಲುಗಳಡಿಯಲ್ಲಿ ನಿಂಬೆಯ ಹಣ್ಣುಗಳನ್ನು ಇರಿಸಲಾಗುತ್ತದೆ. ವೇಷಧಾರಿ ಹೆಜ್ಜೆಯಿಟ್ಟು ಏಳುವ ಸಂದರ್ಭದಲ್ಲಿ ತನ್ನ ಪದಾಘಾತದಿಂದ ಹಣ್ಣುಗಳನ್ನು ತುಳಿದು ಅಪ್ಪಚ್ಚಿಯಾಗಿಸಬೇಕೆಂಬ ನಿಯಮವೂ ಇದೆ.
ಮುಂದೆ ಅದೇ ಗತಿಯನ್ನು ತೀವ್ರಗೊಳಿಸುತ್ತ ನೆಗೆಯುತ್ತ, ಬೀಸುಗಾಲನ್ನೊಗೆಯುತ್ತ ಮುಂದಿರುವ ವಿಧವೆಯನ್ನು ಆಕ್ರಮಿಸುವ ಭಂಗಿಯಲ್ಲಿ ಅಬ್ಬರಿಸತೊಡಗುತ್ತಾನೆ. ಬೇಡನಸೊಂಟಕ್ಕೆ ಹಗ್ಗವನ್ನು ಕಟ್ಟಿ ಹಿಡಿದವರು ನಿಯಂತ್ರಿಸುವ ಪರಿಗೆ ಇಡೀ ವೇಷ ತೂಗುತ್ತಾ ಹಿಂದೆಗೆಯವ ಪರಿ ಅಪರೂಪದ್ದು. ಮತ್ತೆ ಆಕಾಶಕ್ಕೆ ಎದೆಯೊಡ್ಡಿ ಮಂಡಿಯನ್ನು ಮಡಚಿ ಹಿಂಮೈಯನ್ನು ಹಿಂದೆ ಭಾಗಿಸಿ ಮತ್ತೆ ಚಿಮ್ಮಿ ಹಾರುತ್ತಾನೆ. ಕುಳಿತಲ್ಲಿಂದ ಗಡಗುಡಿಸಿ ಏಳುವ ಕ್ರಮ….ಹೀಗೆ ಇಡೀ ನೃತ್ಯದ ಗತಿಯೇ ವಿಚಿತ್ರ ಮತ್ತು ಬೀಭತ್ಸ. ಕತ್ತಿಯನ್ನು ಝಳಪಿಸುತ್ತ ನೆರೆದ ಪ್ರೇಕ್ಷಕರ ಮೇಲೇರಿ ಬರುವ ವೇಷಧಾರಿಯ ಅಬ್ಬರ ಎಂಥವರ ಎದೆಯನ್ನೂ ಝಲ್ ಎನ್ನಿಸಿಬಿಡುತ್ತದೆ. ಪ್ರಶ್ನೆಯೇ ಇಲ್ಲ, ಅದೊಂದು ಕಣ್ಣುಕಿತ್ತ ಕುರುಡು ಠೇಂಕಾರದ ಮಾರ್ದನಿಯೇ ಹೌದು. ಇಡೀ ವಾತಾವರಣದಲ್ಲೊಂದು ಅರಿಯದ ಕರಾಳತೆ ತಾನೇತಾನಾಗಿ ಧ್ವನಿಸುತ್ತಿರುತ್ತದೆ. ಕೆಲವೊಮ್ಮೆ ವೇಷಧಾರಿಯಲ್ಲಿ ಮೈಯಾಳಿಕೆಯಾಗುತ್ತದೆಯೆಂಬ ನಂಬಿಕೆಯೂ ಕೆಲವರಲ್ಲಿ ಇದೆ. ಆದ್ದರಿಂದ ವೇಷಹಾಕುವವನು ಹಾಗೂ ವೇಷ ಬರೆಯುವವರಿಬ್ಬರ ನಡುವೆ ಆಹಾರ, ನಡವಳಿಕೆಗೆ ಕೆಲವು ಸಾಂಪ್ರದಾಯಿಕ ನಿಯಮಗಳು ಅನುಸರಿಸಲ್ಪಡುತ್ತವೆ.
ಈ ಬಣ್ಣದ ವೇಷವನ್ನು ಬರೆಯುವವರು ಬಹುತೇಕವಾಗಿ ಗುಡಿಗಾರರ ಮನೆತನದವರು. ವೇಷಧಾರಿಯಿಂದ ವೀಳೆಯ ಪಡೆದು ಬಣ್ಣಬರೆಯಲು ತೊಡಗಿದರೆ ಬರೆದು ಮುಗಿಸಲು ಕನಿಷ್ಠ ಮೂರುತಾಸುಗಳು ಹಿಡಿಯುತ್ತದೆ. ಬೆವರಿಗೆ ಕರಗದಿರುವಂತೆ ಆಯಿಲ್ಪೇಂಟ್ ಅನ್ನು ಬಳಸಲಾಗುತ್ತದೆ. ಪಾತ್ರಧಾರಿಯೂ ಅಷ್ಟೆ. ಅಂಗಾತ ಮಲಗಿ ಬಣ್ಣಬಳಿಸಿಕೊಂಡು ತಾಯಿ ನೀಡಿದ ಹಾಲು ಕುಡಿದು, ಹಾನದ ಬೊಟ್ಟನ್ನು ಇಡಿಸಿಕೊಂಡು ಹೆಜ್ಜೆಯಿಟ್ಟರೆ ನೃತ್ಯ ಮುಗಿಸಿಯೇ ಪಾತ್ರವಿಸರ್ಜನೆ ಮಾಡಿಕೊಳ್ಳಬೇಕು. ಹಾಗಾಗಿ ಬೇಡರವೇಷವೆಂದರೆ ಹುಡುಗಾಟವಲ್ಲ.
ಕೊನೆಯಲ್ಲಿ ಬಣ್ಣದೋಕುಳಿಯ ನಂತರ ಕಾಮದಹನವನ್ನು ಮುಗಿಸಿ ಶಿರಸಿಯ ವಿಶಿಷ್ಟ ಹೋಳಿಯ ಆಚರಣೆಗೆ ತೆರೆ ಬೀಳುತ್ತದೆ.
ಈ ಮೊದಲೇ ಉಲ್ಲೇಖಿಸಿದಂತೆ ಹುಲಿವೇಷಕ್ಕೆ ಸಂಬಂಧಿಸಿಯೂ ಅನೇಕ ಸಂಗತಿಗಳಿವೆ. ಮುಖ್ಯವಾಗಿ ಹರಕೆಯ ವೇಷಗಳಲ್ಲಿ ಹುಲಿವೇಷವೂ ಒಂದು. ಅವುಗಳಲ್ಲಿ ಪ್ರಮುಖವಾದ ಒಂದು ಸಂಗತಿಯೆಂದರೆ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಶಿರಸಿಯಲ್ಲಿ ಹಿಂದೆ ಹುಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಹುಲಿಯ ಆರಾಧನೆಯ ಅಂಗವಾಗಿಯೂ ಈ ವೇಷ ಚಾಲ್ತಿಗೆ ಬಂದಿರಬಹುದು ಎಂಬ ವಾದವೂ ಇದೆ. ಒಟ್ಟಿನಲ್ಲಿ ಹೋಳಿಯಾಟದ ಹುಲಿವೇಷ ಮತ್ತು ಬೇಡರವೇಷಗಳೆರಡೂ ಇಂದಿಗೂ ವಿಕೃತಿಯ ವಿನಾಶವನ್ನು ಮಾರ್ದನಿಸುತ್ತ ನಾಗರಿಕ ಕರ್ತವ್ಯಗಳನ್ನು ನೆನಪಿಸುತ್ತ ಸಂಸ್ಕøತಿಯೊಂದರ ರಾಯಭಾರಿಗಳಂತೆ ನಿಂತಿವೆ.
ಹೋಳಿಯ ಗುಂಗಿನಿಂದ ಹೊರಬರದ ಮಕ್ಕಳು ತಮ್ಮದೇ ಗತಿಯಲ್ಲಿ ತಮಟೆ ಬಾರಿಸಿಕೊಂಡು ಹೆಜ್ಜೆಯನ್ನು ಹಾಕುತ್ತ ಸಿಳ್ಳೆಹೊಡೆಯುತ್ತಿರುತ್ತಾರೆ. ನಾಳಿನ ಹೆಜ್ಜೆಗೆ ಗತಿಗೂಡಿಸುತ್ತ ಸಾಗುತ್ತಾರೆ. ಹೋಳಿಯೆಂದರೆ ಅದೇ ತಾನೇ. ರಂಗುತುಂಬಿದ ಗುಂಗು, ಗೋಕುಲವನ್ನು ಬೆಳಗಿದ ಓಕುಳಿಯ ಬಣ್ಣದ ಬೆಳಕನ್ನು ಜಗತ್ತಿಗೇ ನೀಡುವ ಮಾಟವೆನ್ನುವುದನ್ನು ಮತ್ತೆ ಮತ್ತೆ ನೆನಪಿಸುವುದು. ಅದೊಂದು ಬಣ್ಣದ ಬೆಡಗು-ಬೆರಗು!