
ಆರಂಭದ ಹಂತಗಳಲ್ಲಿ ಆಧಾರ್ ಕಾರ್ಡ್ ನೀಡಿಕೆ ಐಚ್ಛಿಕ ಎಂಬ ಘೋಷಣೆ ಇದ್ದರೂ ವ್ಯಾವಹಾರಿಕ ಮಟ್ಟದಲ್ಲಿ ವಿವಿಧ ಸೇವೆಗಳ ಲಭ್ಯತೆಗೆ ಅದನ್ನು ಕಡ್ಡಾಯಗೊಳಿಸುವ ದಿಕ್ಕಿನಲ್ಲಿ ೨೦೧೧ರಿಂದಲೇ ಪ್ರಯತ್ನಗಳು ನಡೆದಿವೆ. ಅದಕ್ಕೆ ಆಗಿನ ಯು.ಪಿಎ. ಸರ್ಕಾರದ ಪೂರ್ಣ ಮದ್ದತು ಇದ್ದಿತು. ಸ್ಥೂಲವಾಗಿ ಪ್ರಜೆಯ ಖಾಸಗಿತನವೆಂಬುದು ಮೂಲಭೂತ ಹಕ್ಕುಗಳ ಪರಿಧಿಗೆ ಒಳಪಡುತ್ತದೆ ಎಂಬ ಕಳೆದ (೨೦೧೭) ಆಗಸ್ಟ್ ೨೪ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ದೂರಗಾಮಿ ಪರಿಣಾಮದ್ದಾಗಿದೆ. ಖಾಸಗಿತನವೆಂಬುದು ಪ್ರಜೆಯ ವ್ಯಕ್ತಿಘನತೆಯ ಮತ್ತು ನಿಸರ್ಗಸಿದ್ಧ ಆಯ್ಕೆಯ ಸ್ವಾತಂತ್ರ್ಯದ ಅಂಶವೇ ಆಗಿದೆಯೆಂಬುದು ತೀರ್ಪಿನ ಹೃದ್ಭಾಗ. […]