ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ.
ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಾರಣ ಮನುಷ್ಯನು ಸಹಜವಾಗಿ ಉತ್ಸವಪ್ರಿಯನಾಗಿರುವುದು. ಈ ಸತ್ಯವನ್ನು ಮಹಾಕವಿ ಕಾಲಿದಾಸನು ತನ್ನ ಶಾಕುಂತಲ ನಾಟಕದ 6ನೇ ಅಂಕದಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ: ‘ಉತ್ಸವಪ್ರಿಯಾಃ ಖಲು ಮನುಷ್ಯಾಃ.’ ಉತ್ಸವಗಳು ಮನುಷ್ಯಜೀವನದಲ್ಲಿ ಒದಗುವ ಸಂತೋಷದ ಸಂದರ್ಭಗಳು. ಬಂಧು-ಬಳಗ, ಇಷ್ಟಮಿತ್ರರು ಎಲ್ಲ ಒಂದೆಡೆ ಕಲೆತು, ಐಂದ್ರಿಯಕ ಹಾಗೂ ಮಾನಸಿಕ ಆನಂದವನ್ನು ಅನುಭವಿಸುವುದಕ್ಕಲ್ಲದೆ, ಜೀವನದ ಕಷ್ಟಕಾರ್ಪಣ್ಯಗಳನ್ನು ಮರೆಯಲೂ ಉತ್ಸವಗಳು, ಹಬ್ಬ-ಹರಿದಿನಗಳು ಕಾರಣವಾಗುತ್ತವೆ. ಮಾತ್ರವಲ್ಲ, ಅವು ನಮ್ಮ ಆಂತರ್ಯವನ್ನು ಸಮೃದ್ಧಗೊಳಿಸುವ ಸಾಧನಗಳೂ ಆಗಿವೆ.
ಜಗತ್ತಿನಲ್ಲೆ ಅತ್ಯಂತ ವರ್ಣಮಯ ಹಬ್ಬ ಎಂದರೆ ಅದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ಹೋಳಿಹಬ್ಬ. ಪ್ರತಿ ವರ್ಷ ಹೋಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಜಾತಿಭೇದ, ಲಿಂಗಭೇದ ಮರೆತು ಜನರು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಹಾಡುತ್ತ ಕುಣಿಯುತ್ತ ಸಂಭ್ರಮಿಸುವ ಕಾರಣದಿಂದ ಈ ಹಬ್ಬವು ಬೀದಿ ಬೀದಿಗಳಲ್ಲಿ ಬಣ್ಣದ ಲೋಕವನ್ನೆ ಸೃಷ್ಟಿಸುತ್ತದೆ; ಆಬಾಲವೃದ್ಧರೂ ಸೇರಿದಂತೆ ಎಲ್ಲರಲ್ಲೂ ಸಂಭ್ರಮದ ಹೊನಲನ್ನು ಹರಿಸುತ್ತದೆ.
ಸದ್ದು-ಗದ್ದಲದಿಂದ ತುಂಬಿದ ಮೆರವಣಿಗೆಗಳು, ಘೋಷಗಳು, ಡೋಲು-ಡಕ್ಕೆಗಳ ಬಡಿಯುವಿಕೆ, ಬಣ್ಣಗಳಲ್ಲಿ ಮುಚ್ಚಿಹೋದ ಮುಖಗಳು, ಹಾದುಹೋಗುವವರ ಮೇಲೆಲ್ಲ ಚಿಮ್ಮಿಸುವ ಬಣ್ಣಬಣ್ಣದ ನೀರಿನ ಕಾರಂಜಿ – ಇಂತಹ ದೃಶ್ಯ ಹೋಳಿಹಬ್ಬದ ಸಂದರ್ಭಗಳಲ್ಲಿ ಭಾರತದ ಉದ್ದಗಲಕ್ಕೂ ಸರ್ವೇಸಾಮಾನ್ಯ. ಬೇರೆ ದೇಶಗಳಲ್ಲೂ ಹಬ್ಬದ ಸಂದರ್ಭದಲ್ಲಿ ಇಂತಹ ಅಮೋದಪ್ರಮೋದದ ದೃಶ್ಯಗಳು ಕಂಡುಬರುತ್ತವೆ. ಅಲ್ಲೆಲ್ಲ ಉನ್ನತ ವರ್ಗದವರು ಹೂವಿನ ಅಲಂಕಾರಗಳನ್ನೂ, ಹಾಡು ಸಂಗೀತಗಳನ್ನೂ, ಸುವಾಸನಾಯುಕ್ತ ನೀರಿನ ಕಾರಂಜಿಯನ್ನು ಚಿಮ್ಮಿಸುವ ಮೂಲಕವೂ ತಮ್ಮ ಅಮೋದಪ್ರಮೋದದ ಖುಷಿಯನ್ನು ಹೆಚ್ಚಿಸಿಕೊಳ್ಳುವುದುಂಟು.
‘ಕಾಮನಹಬ್ಬವನ್ನು ಹೋಳಿಕಾ ಎಂದೂ ನಿರ್ದೇಶಿಸಲಾಗಿದೆ. ಅಥರ್ವಪರಿಶಿಷ್ಟದಲ್ಲಿ ಹೋಲಾಕಾ (ಹೋಲೋಕ, ಹೋಲಿಕಾ) ಪೂಜೆಯನ್ನು ಸಾಯಂಕಾಲ ಮಾಡಬೇಕೆಂದು ಹೇಳಿದೆ. ‘ಹೋಲೋಕಾಸ್’, ‘ಹಿಲೇಲಿಯ’ ಮುಂತಾದ ದಹನಸಂಬಂಧವಾದ ಆಚಾರಗಳು ಪ್ರಪಂಚದ ನಾನಾ ಭಾಗಗಳಲ್ಲಿದ್ದವು. ಭಾರತದಲ್ಲಿಯೂ ಅಥರ್ವವೇದಕಾಲದಿಂದಲೂ ಪ್ರಚಾರದಲ್ಲಿದೆಯೆಂದು ಹೇಳಬಹುದು’ – ಎಂದು ನಾಡಿನ ಪ್ರಸಿದ್ಧÀ ಸಂಶೋಧಕರಾದ ಡಾ|| ಎಸ್. ಶ್ರೀಕಂಠಶಾಸ್ತ್ರೀ ತಮ್ಮ ಒಂದು ಲೇಖನದಲ್ಲಿ ಉಲ್ಲೇಖಿಸಿದ್ದಿದೆ.
ಹೋಳಾಕ, ಹೋಳಿಕ, ಹೋಳಿಕೋತ್ಸವ, ಹೋಳೀ, ಫಾಲ್ಗುನಿಕಾ, ವಸಂತೋತ್ಸವ, ಕಾಮನಹಬ್ಬ, ಡೋಲಾ – ಎಂದೆಲ್ಲ ಕರೆಯಲ್ಪಡುವ ಹೋಳಿಹಬ್ಬವನ್ನು ನಮ್ಮ ದೇಶದಲ್ಲಿ ವ್ಯಾಪಕವಾಗಿ ವೈವಿಧ್ಯದಿಂದಲೂ ಅತ್ಯಂತ ಸಂಭ್ರಮದಿಂದಲೂ ಆಚರಿಸುತ್ತಾರೆ. ಮೇಷಸಂಕ್ರಾಂತಿಗೆ ಹತ್ತಿರದಲ್ಲಿ, ಫಾಲ್ಗುಣ ಹುಣ್ಣಿಮೆಯಂದು ಈ ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ನ ಫೆಬ್ರುವರಿ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ತಿಂಗಳ ಆರಂಭದಲ್ಲಿ ಬರುವ ಹೋಳಿಹಬ್ಬವನ್ನು ಅತ್ಯಂತ ಪುರಾತನ ಕಾಲದಿಂದಲೂ, ಅಂದರೆ ಕ್ರಿಸ್ತಪೂರ್ವ ಹಲವು ಶತಮಾನಗಳಷ್ಟು ಹಿಂದಿನಿಂದಲೂ, ಜನರು ಶ್ರದ್ಧೆಯಿಂದ ಆಚರಿಸುತ್ತಾ ಬರುತ್ತಿದ್ದಾರೆ. ಜೈಮಿನಿಯ ಪೂರ್ವಮೀಮಾಂಸಸೂತ್ರ ಹಾಗೂ ಕಾಠಕಗೃಹ್ಯಸೂತ್ರಗಳಲ್ಲಿ ಇದನ್ನು ‘ಹೋಳಿಕಾ’ ಎಂದು ಉಲ್ಲೇಖಿಸಲಾಗಿದೆ. ನೂತನವಧುವು ವಿವಾಹಾನಂತರ ಮೊದಲು ತನ್ನ ಕುಟುಂಬದ ಶ್ರೇಯೋಭಿವೃದ್ಧಿಗೋಸ್ಕರ ಪೂರ್ಣಚಂದ್ರನನ್ನು ಪೂಜಿಸುವ ಒಂದು ವಿಶೇಷವಾದ ಹಬ್ಬ ಇದು.
ಚಾಂದ್ರಮಾನ ಪದ್ಧತಿಯಲ್ಲಿ ಒಂದು ಮಾಸವನ್ನು ಎರಡು ರೀತಿಯಿಂದ ಗಣಿಸಲಾಗುತ್ತದೆ: ಒಂದು ‘ಪೂರ್ಣಿಮಾಂತ’; ಇನ್ನೊಂದು ‘ಅಮಾಂತ’. ಮೊದಲನೆಯ ‘ಪೂರ್ಣಿಮಾಂತ’ದಲ್ಲಿ ಪೂರ್ಣಿಮೆಯ ನಂತರದ ದಿನವನ್ನು ಮಾಸದ ಮೊದಲದಿನವಾಗಿ ಪರಿಗಣಿಸಿದರೆ, ‘ಅಮಾಂತ’ದಲ್ಲಿ ಅಮಾವಾಸ್ಯೆಯ ನಂತರದ ದಿನವನ್ನು ಮಾಸದ ಮೊದಲದಿನವಾಗಿ ಪರಿಗಣಿಸಲಾಗುತ್ತದೆ. ‘ಅಮಾಂತ’ ರೀತ್ಯಾ ದಿನಗಣನೆಯು ಇಂದು ವ್ಯಾಪಕವಾಗಿ ಬಳಕೆಯಲ್ಲಿದೆ. ಕಾಲಗಣನೆಯು ಪ್ರಾರಂಭವಾದ ದಿನಗಳಲ್ಲಿ ‘ಪೂರ್ಣಿಮಾಂತ’ ಪದ್ಧತಿಯೂ ಬಳಕೆಯಲ್ಲಿತ್ತು. ‘ಪೂರ್ಣಿಮಾಂತ’ ಪದ್ಧತಿಯಂತೆ ಫಾಲ್ಗುಣ ಪೂರ್ಣಿಮೆಯು ವರ್ಷದ ಕೊನೆಯದಿನ ಮತ್ತು ಮಾರನೆಯ ದಿನದಿಂದ ಹೊಸವರ್ಷದ ಆರಂಭ ಹಾಗೂ ವಸಂತ ಋತುವಿನ ಆಗಮನ. ಹೀಗೆ ಹೋಳೀಹಬ್ಬವು ಸಹಜವಾಗಿ ಜನಮನದಲ್ಲಿ ಸಂತೋಷ ಸಂಭ್ರಮಗಳನ್ನು ಉಂಟುಮಾಡುವ ವಸಂತೋತ್ಸವವಾಗಿ ಬೆಳೆದುಬಂತು. ಬಹುಶಃ ಇದೇ ಕಾರಣಕ್ಕಾಗಿ ಹೋಳಿಹಬ್ಬಕ್ಕೆ ‘ವಸಂತೋತ್ಸವ’, ‘ಕಾಮ-ಮಹೋತ್ಸವ’ ಎಂಬ ಹೆಸರುಗಳೂ ಬಳಕೆಗೆ ಬಂದವು.
ಹಿನ್ನೆಲೆ – ಆಚರಣೆ
‘ಧರೆಯೊಳೀ ಹೋಳಿ ಪದಗಳನು ಪೇಳುವೆನು ಹರನಿಂದ ಮಡಿದ ಕಾಮಣ್ಣ’ ಎಂದು ಶಿವನ ಹಣೆಗಣ್ಣಿನಿಂದ ಸುಟ್ಟುಹೋದ ಕಾಮಣ್ಣನ ಕಥೆಯನ್ನು ‘ಶಿವಪುರಾಣ’ ತಿಳಿಸುತ್ತದೆ. ಅಲ್ಲದೆ ಸ್ಕಾಂದಪುರಾಣ, ಕಾಲಿದಾಸನ ಕುಮಾರಸಂಭವ, ಹರಿಹರನ ಗಿರಿಜಾಕಲ್ಯಾಣ, ವಚನಸಾಹಿತ್ಯ, ದಾಸಸಾಹಿತ್ಯಗಳಲ್ಲಿಯೂ ಹೋಳಿಹಬ್ಬದ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುತ್ತವೆ. ಪುರಾಣಗಳಲ್ಲಿ, ಪ್ರಾದೇಶಿಕ ಜಾನಪದ ಕಥೆಗಳಲ್ಲಿ ದೊರಕುವಂತೆ ಈ ಹಬ್ಬದ ದಿನಕ್ಕೆ ಮೂರು ವಿಶೇಷತೆಗಳಿವೆ:
1. ತಾರಕಾಸುರನ ಉಪಟಳವನ್ನು ಸಹಿಸಿಕೊಳ್ಳಲಾಗದೆ ದೇವತೆಗಳು ಅವನ ಸಂಹಾರಕ್ಕಾಗಿ ಎಲ್ಲ ರೀತಿಯಿಂದ ಪ್ರಯತ್ನ ನಡೆಸಿದರು. ಋಷಿಮುನಿಗಳು ಶಿವಪುತ್ರನಿಂದ ಆತನ ಸಾವು ಸಾಧ್ಯವೆಂದು ತಿಳಿಸಿದಾಗ ಅವರೆಲ್ಲ ಸೇರಿ ಶಿವನಿಗೆ ವಿವಾಹಮಾಡಿಸುವ ಸಂಭ್ರಮದಲ್ಲಿ ತೊಡಗಿಕೊಂಡರು. ಈ ಮಹತ್ಕಾರ್ಯ ಕಾಮದೇವನಿಂದ ಮಾತ್ರ ಸಾಧ್ಯವೆಂದು ನಿರ್ಣಯಿಸಿ, ಆತನಿಗೆ ಆ ಜವಾಬ್ದಾರಿಯನ್ನು ವಹಿಸಿದರು. ಅನಂತರ ಪಾರ್ವತಿಯು ಪೂಜೆ ಮಾಡುತ್ತಿದ್ದಾಗ ತಪೋಮಗ್ನನಾದ ಶಿವನ ಮೇಲೆ ಕಾಮದೇವನು ಪುಷ್ಪಶರಗಳನ್ನು ಹೂಡುತ್ತಾನೆ. ತಪೋಭಂಗವುಂಟಾಗಿದ್ದರಿಂದ ಸಿಟ್ಟುಗೊಂಡ ಶಿವನು ತನ್ನ ಉರಿಗಣ್ಣನ್ನು ತೆರೆದು ಕಾಮನನ್ನು ಸುಡುತ್ತಾನೆ. ಇದರಿಂದ ಶೋಕತಪ್ತಳಾದ ರತಿಯ ಬೇಗುದಿಗೆ ಕರಗಿದ ಪಾರ್ವತಿ ಶಿವನನ್ನು ಕಾಡಿಬೇಡಿ ರತಿಗೆ ಪತಿಭಿಕ್ಷೆ ನೀಡಲು ಪ್ರಾರ್ಥಿಸುತ್ತಾಳೆ. ಅದಕ್ಕೆ ಶಿವನು ಕಾಮದೇವನು ಅನಂಗನಾಗಿ ಬದುಕಲಿ ಎಂದು ಆಶೀರ್ವದಿಸುತ್ತಾನೆ. ಕಾಮನ ಮರುಹುಟ್ಟಿನ ಸಂಕೇತವಾಗಿ ಆಚರಿಸುವ ಹಬ್ಬವೇ ಹೋಳಿಹಬ್ಬ.
2. ರಾಕ್ಷಸದೊರೆ ಹಿರಣ್ಯಕಶಿಪು ಹಾಗೂ ದೇವತೆಗಳ ನಡುವೆ ನಡೆದ ಸಮರದಲ್ಲಿ ಹಿರಣ್ಯಕಶಿಪು ಜಯಶಾಲಿಯಾಗಿ ಗರ್ವಿಯಾದ. ತನ್ನನ್ನು ಬಿಟ್ಟು ಬೇರಾವ ದೇವರನ್ನೂ ಮುಂದೆ ಪೂಜಿಸಬಾರದೆಂದೂ, ಒಂದುವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅಂಥವರಿಗೆ ಶಿಕ್ಷೆ ನೀಡುವುದಾಗಿಯೂ ಆಜ್ಞೆ ಹೊರಡಿಸಿದ. ಆತನ ಮಗ ಪ್ರಹ್ಲಾದ ಪರಮ ಹರಿಭಕ್ತನಾದ್ದರಿಂದ ತಂದೆಯ ಆಜ್ಞೆ ಮೀರಿ ಹರಿಯನ್ನು ಪೂಜಿಸತೊಡಗಿದ. ಇದನ್ನು ತಿಳಿದ ಹಿರಣ್ಯಕಶಿಪು ಮಗನಿಗೆ ವಿವಿಧ ರೀತಿಯ ಘೋರಶಿಕ್ಷೆ ವಿಧಿಸಿದ. ಅವುಗಳಿಂದ ಏನೂ ಪ್ರಯೋಜನ ಆಗಲಿಲ್ಲ. ಆಗ ಆತ ತನ್ನ ತಂಗಿ ಹೋಲಿಕಳ (ಈಕೆ ದುಷ್ಟರನ್ನು ಬೆಂಕಿಯಿಂದ ಸುಡುವ ಶಕ್ತಿ ಪಡೆದಿದ್ದಳು) ಬಳಿಗೆ ಬಂದು ಪ್ರಹ್ಲಾದನನ್ನು ಸುಟ್ಟುಹಾಕುವಂತೆ ಆಜ್ಞಾಪಿಸಿದ. ಹೋಲಿಕಳು ಅಗ್ನಿಯನ್ನು ಸೃಷ್ಟಿಸಿಕೊಂಡು ಪ್ರಹ್ಲಾದನನ್ನು ಸುಡಲು ತನ್ನ ತೊಡೆಯ ಮೇಲೆ ಕೂರಿಸಿಕೊಂಡಾಗ, ತಾನೇ ಸುಟ್ಟು ಬೂದಿಯಾದಳು. ದುಷ್ಟ ರಾಕ್ಷಸಿಯು ತನ್ನ ಪಾಪಕರ್ಮಕ್ಕೆ ತಕ್ಕ ಫಲ ಅನುಭವಿಸಿ ಸತ್ಪುರುಷನ ರಕ್ಷಣೆಯಾದುದನ್ನು ನೆನಪಿಸಿಕೊಳ್ಳುವುದೇ ಈ ಕಟ್ಟಿಗೆ ಹಾಕಿ ಸುಡುವ ಹೋಳಿಹಬ್ಬದ ಆಚರಣೆಗೆ ಮೂಲಪ್ರೇರಣೆ.
3. ಪೃಥು ಅಥವಾ ರಘು ಎಂಬ ರಾಜನ ಕಾಲದಲ್ಲಿ ಶಿವನಿಂದ ವರವನ್ನು ಪಡೆದು ಶಿಶುಹತ್ಯೆ ಮಾಡುತ್ತ, ಮಕ್ಕಳಿಗೆ ಕಂಟಕಪ್ರಾಯಳಾಗಿದ್ದ, ಮಾಲೀ ಎಂಬ ರಾಕ್ಷಸರಾಜನ ಪುತ್ರಿ ‘ಢುಂಢಾ’ ಎಂಬ ರಾಕ್ಷಸಿಯ ಉಪಟಳವು ಕೊನೆಗೊಂಡದ್ದು ಇದೇ ದಿನ. ಫಾಲ್ಗುಣ ಪೂರ್ಣಿಮೆಯಂದು ರಾಜ ಪೃಥುವಿನ ಆಜ್ಞೆಯಂತೆ ದೇಶದ ಎಲ್ಲ ಬಾಲಕರು ಹುಚ್ಚುಹುಚ್ಚಾಗಿ ಕುಣಿಯುತ್ತಾ ಕೂಗುತ್ತಾ ಸೌದೆ, ಕಸ, ಕಡ್ಡಿ, ಬೆರಣಿಗಳನ್ನು ಸೇರಿಸಿ ಬೆಂಕಿಹಚ್ಚಿದಾಗ ರಾಕ್ಷಸಿಯು ಭಯಗ್ರಸ್ತಳಾಗಿ ಮನುಷ್ಯಲೋಕವನ್ನೆ ತ್ಯಜಿಸಿ ಓಡಿಹೋದಳು. ಅದರ ನೆನಪಿಗಾಗಿ ಹೋಳಿಹಬ್ಬದ ದಿನದಂದು ಸೌದೆ, ಕಸ, ಕಡ್ಡಿ, ಬೆರಣಿಗಳನ್ನೆಲ್ಲ ಸೇರಿಸಿ ಸುಡುವುದು ರೂಢಿ.
ಹೋಳಿಹಬ್ಬದ ಆಚರಣೆಯಲ್ಲಿ ಪೂಜೆ, ಉಪವಾಸ ಇತ್ಯಾದಿ ಯಾವುದೇ ಧಾರ್ಮಿಕ ಆಚರಣೆಗಳು ಇಲ್ಲವೆಂದೇ ಹೇಳಬಹುದು. ಸಾಮಾನ್ಯವಾಗಿ ಹೋಳಿಹಬ್ಬಕ್ಕೆ 40 ದಿನಗಳಷ್ಟು ಮೊದಲೆ, ವಸಂತ ಪಂಚಮಿ(ಮಾಘ ಶುಕ್ಲ ಪಂಚಮಿ)ಯಂದೆ, ಸಾರ್ವಜನಿಕವಾಗಿ ಪ್ರಮುಖಸ್ಥಳದಲ್ಲಿ ಮರದ ದಿಮ್ಮಿಯೊಂದನ್ನು ಇರಿಸಿ, ಅದರ ಮೇಲೆ ಬೇಗ ಉರಿದು ಬೂದಿಯಾಗುವಂಥ ಹೋಳಿಕಾ ಮೂರ್ತಿಯೊಂದನ್ನು ಇಟ್ಟು, ಅದರ ತೊಡೆಯ ಮೇಲೆ ಬೆಂಕಿಯ ಬಾಧೆಗೆ ತುತ್ತಾಗದಂಥ ಬಾಲಪ್ರಹ್ಲಾದನ ಮೂರ್ತಿಯನ್ನು ಇರಿಸುತ್ತಾರೆ. ಅನಂತರ ಅಲ್ಲಿಗೆ ಊರ ಜನರು ತಮ್ಮ ಬಳಿಯಿರುವ ಮರದ ತುಂಡುಗಳೇ ಮೊದಲಾದ ಅನುಪಯುಕ್ತ ದಹನಶೀಲ ವಸ್ತುಗಳನ್ನು ತಂದು ಸುರಿಯುತ್ತಾರೆ. ಇದು ಫಾಲ್ಗುಣ ಪೂರ್ಣಿಮೆಯ ವರೆಗೂ ನಡೆಯುತ್ತದೆ. ಆ ವೇಳೆಗೆ ಅಲ್ಲಿ ದಹನಶೀಲ ವಸ್ತುಗಳ ಒಂದು ರಾಶಿಯೇ ಏರ್ಪಟ್ಟಿರುತ್ತದೆ. ಹೋಳಿಹಬ್ಬದ ದಿನ (ಫಾಲ್ಗುಣ ಪೂರ್ಣಿಮೆ) ರಾತ್ರಿ ಸರಳ ರೀತಿಯಲ್ಲಿ ಅದನ್ನು ದಹಿಸಲಾಗುತ್ತದೆ. ಈ ಸಂದರ್ಭದಲ್ಲಿ, ಕೆಲವು ಕಡೆ/ಕೆಲವೊಮ್ಮೆ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯಲಿ ಎಂದು ಋಗ್ವೇದದ ರಕ್ಷೋಘ್ನ ಮಂತ್ರಗಳನ್ನು (4.4.1-15; 10.87.1-25 ಮೊದಲಾದವು) ಪಠಿಸಲಾಗುತ್ತದೆ. ಮರುದಿನ ಬೆಳಗ್ಗೆ ಅಲ್ಲಿರುವ ಭೂತಿಯನ್ನು ಪ್ರಸಾದವಾಗಿ ಅಂಗಾಂಗಗಳಲ್ಲಿ ಧರಿಸಿಕೊಳ್ಳುತ್ತಾರೆ. ಉಚ್ಛಿಷ್ಟವಾಗಿ ತೆಂಗಿನಕಾಯಿ ಏನಾದರೂ ಉಳಿದಿದ್ದರೆ ಅದನ್ನು ಸೇವಿಸುತ್ತಾರೆ.
ದೇಶದ ಕೆಲವು ಕಡೆ, ಕೆಲವು ಮನೆಗಳಲ್ಲಿ ಅಂಗಳದಲ್ಲಿ ಅಥವಾ ಒಳಗಿನ ಅಂಕಣದಲ್ಲಿ ಕಾಮದೇವನ ವಿಗ್ರಹವನ್ನು ಇಟ್ಟು ಸರಳವಾಗಿ ಪೂಜಿಸುತ್ತಾರೆ. ಅನಂತರ ಮಾವಿನಚಿಗುರು ಹಾಗೂ ತೇಯ್ದ ಶ್ರೀಗಂಧವನ್ನು ಪ್ರಸಾದವಾಗಿ ಸೇವಿಸುವ ಪದ್ಧತಿಯಿದೆ.
ವೃತ್ತೇ ತುಷಾರಸಮಯೇ ಸಿತಪಂಚದಶ್ಯಾಃ
ಪ್ರಾತರ್ವಸನ್ತಸಮಯೇ ಸಮುಪಸ್ಥಿತೇ ಚ |
ಸಂಪ್ರಾಶ್ಯ ಚೂತಕುಸುಮಂ ಸಹ ಚಂದನೇನ
ಸತ್ಯಂ ಹಿ ಪಾರ್ಥ ಸತತಂ ಪುರುಷಸ್ಸುಖೀ ಸ್ಯಾತ್ ||
ಫಾಲ್ಗುಣ ಕೃಷ್ಣ ಪ್ರತಿಪದೆಯಂದು ವಿನೋದಾಚರಣೆ, ವಿಶೇಷವಾಗಿ ಗುಲಾಲ್ ಅಥವಾ ಬಣ್ಣದನೀರು ಅಥವಾ ಸುಗಂಧಿತ ಬಣ್ಣದ ಪುಡಿಗಳನ್ನು ಪರಸ್ಪರ ಎರಚಿಕೊಳ್ಳುವುದು ಬಳಿದುಕೊಳ್ಳುವುದು ನಡೆಯುತ್ತದೆ. ಕೆಳಸಂಸ್ಕೃತಿಯ ಜನರನ್ನು ಹೊರತುಪಡಿಸಿ, ಕೆಸರನ್ನೂ ಮಣ್ಣನ್ನೂ ಪರಸ್ಪರ ಎರಚಿಕೊಳ್ಳುವುದಕ್ಕೆ ಹೋಳಿಹಬ್ಬ ಪ್ರಾರಂಭವಾದ ದಿನಗಳಿಂದಲೂ ಅವಕಾಶವಿರಲಿಲ್ಲ. ‘ಹೋಳಿಹಬ್ಬದಲ್ಲಿ ಕಂಡಕಂಡವರ ಮೇಲೆ ಬಣ್ಣದ ನೀರನ್ನು ಎರಚಿ ಬಣ್ಣದಪುಡಿಗಳನ್ನು ತೂರಿ ಅವರ ವಸ್ತುಗಳನ್ನು ಮಲಿನ ಮಾಡುವುದು ಸಭ್ಯತೆಯೇ? – ಎಂದು ಪ್ರಶ್ನಿಸಿದರೆ, ಅದು ಸಭ್ಯತೆಯಲ್ಲ. ಅದು ಸಭ್ಯತೆಯೆಂದು ಶಾಸ್ತ್ರವು ಅನುಮತಿಸುವುದೂ ಇಲ್ಲ. ಆದರೆ ಯಾರು ಈ ಹಬ್ಬದ ಅರ್ಥ, ಪರಮಾರ್ಥಗಳನ್ನು ಅರಿತು ಸಂತೋಷದ ಸ್ಥಿತಿಯಲ್ಲಿ ಇರುತ್ತಾರೋ ಅವರ ಮೇಲೆ ಅದನ್ನು ಒಂದು ಮರ್ಯಾದೆಯಲ್ಲಿ ಎರಚುವುದು ದೋಷವಲ್ಲ’ ಎಂದು ಶ್ರೀಶ್ರೀ ರಂಗಪ್ರಿಯ ಸ್ವಾಮಿಗಳು ಸಂದೇಹಕ್ಕೆ ಸಮಾಧಾನವನ್ನು ನೀಡುತ್ತಾರೆ.
ಡೋಲಾ ಪೂರ್ಣಿಮೆ
ಬಂಗಾಳದಲ್ಲಿ ಹೋಳಿಹಬ್ಬವನ್ನು ‘ಡೋಲಾ ಪೂರ್ಣಿಮಾ’ ಅಥವಾ ‘ಡೋಲಾಯಾತ್ರಾ’ (ಪಲ್ಲಕಿ ಜಾತ್ರೆ) ಎಂದು ಬಹಳ ಗೌರವದಿಂದ ಆಚರಿಸುತ್ತಾರೆ. ಈ ರೀತಿಯಲ್ಲಿ, ಫಾಲ್ಗುಣ ಶುಕ್ಲ ಚತುರ್ದಶಿಯಿಂದ ಮೊದಲ್ಗೊಂಡು ಮೂರು ಅಥವಾ ಐದು ದಿನಗಳ ಕಾಲ ನಡೆಯುವ ಉತ್ಸವಾಚರಣೆಯನ್ನು ವೃಂದಾವನದಲ್ಲಿ ರಾಜಾ ಇಂದ್ರದ್ಯುಮ್ನ ಆರಂಭಿಸಿದನೆಂದು ಪ್ರತೀತಿಯಿದೆ. ಅಗ್ನಿದೇವನ ಬಗೆಗೆ ಗೌರವ ಹಾಗೂ ಶ್ರೀಕೃಷ್ಣನನ್ನು ಪೂಜಿಸಲು ಅವರ ಪುತ್ತಳಿಯನ್ನು ಜೋಕಾಲಿಯಲ್ಲಿ (ಡೋಲಾ) ಇರಿಸಿ ತೂಗುವುದು ಆಚರಣೆಯ ಪ್ರಮುಖ ಆಕರ್ಷಣೆ. ಉತ್ಸವಾಚರಣೆಯ ಮೊದಲ ದಿನದಂದು ಉರಿಸಿದ ಅಗ್ನಿಯನ್ನು ಉತ್ಸವದ ಕೊನೆಯ ವರೆಗೂ ಆರಿಹೋಗದಂತೆ ಕಾಪಿಡಲಾಗುತ್ತದೆ. ಅಂತಿಮ ದಿನದಂದು ಸಾಲಂಕೃತ ಪುತ್ತಳಿಗಳನ್ನು ಜೋಕಾಲಿಯಲ್ಲಿ 21 ಬಾರಿ ತೂಗಲಾಗುತ್ತದೆ.
ಉತ್ತರಪ್ರದೇಶದ ಮಥುರಾ, ವೃಂದಾವನ, ಒಡಿಶಾದ ಪುರಿಯೂ ಸೇರಿದಂತೆ ಬಂಗಾಳದಲ್ಲಿ ಇದೇ ದಿನವನ್ನು ಸಂತಶ್ರೇಷ್ಠ ಶ್ರೀ ಕೃಷ್ಣಚೈತನ್ಯ ಮಹಾಪ್ರಭುಗಳ (ಕ್ರಿ.ಶ. 1486-1533) ಜನ್ಮದಿನವಾಗಿಯೂ ವಿಜೃಂಭಣೆಯಿಂದ ಅಭಿಮಾನಿಗಳು ಆಚರಿಸುತ್ತಾರೆ.
ಕರ್ನಾಟಕದಲ್ಲಿ
‘ಕಾಮನ ಹಬ್ಬವು ಹಿಂದೆ ಬೆಂಗಳೂರು, ಚಿತ್ರದುರ್ಗ, ಇತ್ಯಾದಿ ಸ್ಥಳಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ವಿಜಯನಗರದ ಅರಸರು ತಮ್ಮ ರಾಜಧಾನಿಯಲ್ಲಿ ಹೋಳಿಹಬ್ಬವನ್ನು ಆಚರಿಸುತ್ತಿದ್ದ ವಿಧಾನವನ್ನು ಪಾಶ್ಚಾತ್ಯ ಪ್ರವಾಸಿಗಳು ವರ್ಣಿಸಿರುವರು. ಅಂತೆಯೇ ಸಾಮ್ರಾಜ್ಯದ ಪಾಳೆಯಗಾರರೂ ಸಂಗೀತ ನೃತ್ಯ ತಾಳಮೇಳಗಳೊಡನೆ ವೈಭವದಿಂದ ನಡೆಸುತ್ತಿದ್ದರು. ಹುಡುಗರು ತಿಂಗಳು ಮುಂಚೆಯೇ ಗೃಹಸ್ಥರನ್ನು ಪೀಡಿಸಿ ಕಾಮನ ಕಟ್ಟಿಗೆ ಭೀಮನ ಬೆರಣಿಗಳನ್ನು ಸಂಗ್ರಹಿಸಿ ಕೋಲಾಟದ ಪದಗಳನ್ನು ಹಾಡುತ್ತ ವಸಂತವನ್ನು ಎರಚಿ ಬೈಸಿಕೊಳ್ಳುತ್ತಾ ನಲಿಯುತ್ತಿದ್ದರು. ಕೇವಲ ಪಾಮರರಿಗೇ ಅಲ್ಲದೆ ಕಲಾಭಿಮಾನಿಗಳಿಗೆಲ್ಲ ಹೋಲಿಕೋತ್ಸವವು ಮುಖ್ಯವಾಗಿದ್ದಿತು’ ಎಂಬುದಾಗಿ ಡಾ|| ಎಸ್. ಶ್ರೀಕಂಠಶಾಸ್ತ್ರೀ ದಾಖಲಿಸಿದ್ದಾರೆ. (ಸಂಶೋಧನ ಲೇಖನಗಳು; ಪ್ರಕಾಶಕರು: ಕಾಮಧೇನು ಪುಸ್ತಕಭವನ, ಬೆಂಗಳೂರು, 2014; ಮೂಲಲೇಖನ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ 10.3.1957ರಂದು ಪ್ರಕಟವಾಗಿತ್ತು.)
‘ಹೋಳಿಹಬ್ಬದ ಸಂದರ್ಭದಲ್ಲಿ ಊರಿನ ತರುಣರೂ ವಯಸ್ಸಾದ ವೃದ್ಧರೂ ಬಲುಹುರುಪಿನಿಂದ ಹೋಳಿ ಆಚರಿಸಲು ಮನೆಯಿಂದ ಹೊರಬೀಳುವರು. ಹುಣ್ಣಿಮೆಯ ದಿವಸ ಕಾಮನ ಸುಂದರವಾದ ಪ್ರತಿಮೆ ಮಾಡಿ ಆ ಪ್ರತಿಮೆಗೆ ಅಲಂಕರಣ ಮಾಡಿ, ಸಿಂಗರಿಸಿ ಊರಿನ ಕಾಮನಕಟ್ಟೆಯ ಮುಂದಿನ ಚಪ್ಪರದ ಅಂಗಳದಲ್ಲಿ ಕಾಮನ ಪ್ರತಿಮೆ ಕೂರಿಸುವರು. ಅನಂತರ ಊರಿನ ಸುತ್ತ ತಮಟೆ ಡೋಲಿನ ವಾದ್ಯಗಳ ಅಬ್ಬರದೊಂದಿಗೆ ಕುಣಿದು ಕುಪ್ಪಳಿಸಿ ಮನೆ ಮನೆಯಿಂದ ಸೌದೆ, ಬೆರಣಿ, ಬಿದಿರು, ಹಳೆಯ ಮರದ ಸಾಮಾನುಗಳು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವರು. ಈ ಸಂದರ್ಭ ಕುರಿತ ಜನಪದ ತ್ರಿಪದಿಯೊಂದು ಹೀಗಿದೆ:
ಕಾಮಣ್ಣ ಸತ್ತಾನಂತ ಭೀಮಣ್ಣ ಗೋಳಾಡ್ತಾನೆ
ಮನೆಗೈದೈದು ಸೌದೆ ಕೊಡ್ರವ್ವೋ !
ಕಾಮಣ್ಣನಿಗೆ ಚೆಂದಾಗಿ ಕಿಚ್ಚ ಹಾಯ್ಸೋಣ ||
– ಹೀಗೆ ಹಾಡಿನ ಮೂಲಕ ಆಡಿ ಕುಣಿದು ಕುಪ್ಪಳಿಸಿ, ಸಂಗ್ರಹಿಸಿದ ಸೌದೆ-ಬೆರಣಿಗಳನ್ನು ಚಪ್ಪರಹಾಕಿದ ಕಾಮನಕಟ್ಟೆಯ ಮುಂದಿರಿಸಿ ಅದರ ಮೇಲೆ ಕಾಮನನ್ನು ಕೂರಿಸಿ ಹರಿಜನರ ಮನೆಯಲ್ಲಿ ಸಿದ್ಧಪಡಿಸಿದ ರತಿಪ್ರತಿಮೆ ಹಾಗೂ ಅವರ ಮನೆಯಿಂದಲೇ ಬೆಂಕಿಯನ್ನೂ ಕದ್ದು ತಂದು ರತಿಕಾಮರನ್ನು ಅಶ್ಲೀಲ ಬೈಗುಳಗಳಿಂದ, ಹಾಡುಗಳೊಂದಿಗೆ ನಿಂದಿಸಿ, ವಾದ್ಯದೊಂದಿಗೆ ಕುಣಿದು ಸುಡುವರು. ಮರುದಿನ ಕಾಮನನ್ನು ಸುಟ್ಟ ಬೂದಿಯನ್ನು ರೈತರು ತಮ್ಮ ಜಮೀನಿನಲ್ಲಿ ಚೆಲ್ಲಿ, ಬಿತ್ತುವ ಬೀಜಗಳೊಂದಿಗೆ ಬೆರೆಸಿ ಉಳುಮೆ ಮಾಡುವರು. ಈ ಆಚರಣೆಯಿಂದ ಮಳೆ ಬಿದ್ದು ಸಮೃದ್ಧ ಫಲ ದೊರೆಯುತ್ತದೆಂಬ ನಂಬಿಕೆ ರೈತರಲ್ಲಿದೆ. ಸುಟ್ಟ ಕಾಮಣ್ಣನ ಬೂದಿಯನ್ನು ವಿವಿಧ ಬಣ್ಣದ ಪುಡಿಯೊಂದಿಗೆ ಬೆರೆಸಿ ಆತ್ಮೀಯ ಸ್ನೇಹಿತರಿಗೆ, ನೆರೆಹೊರೆಯವರಿಗೆ ಮುಖ, ಮೈ, ಕೈ, ಬಟ್ಟೆಗಳಿಗೆ ಸಂತೋಷ-ಸಡಗರದಿಂದ ಬಳಿದು ಸಿಹಿ ಹಂಚಿ ಸಂಭ್ರಮಿಸುವರು. ಇನ್ನೂ ಕೆಲವೆಡೆ ಈ ಬಣ್ಣದ ಪುಡಿಗಳನ್ನು ನೀರಿನ ತಪ್ಪಲೆಯಲ್ಲಿ ಬೆರೆಸಿ ಸ್ನೇಹಿತರ ತಲೆಯ ಮೇಲೆ ಸುರಿದು ಸಂತೋಷ ಹಂಚಿಕೊಳ್ಳುವುದಿದೆ. ವಿವಿಧ ಬಣ್ಣದ ನೀರನ್ನು ಬಿದಿರಿನ ಬೊಂಬು ಅಥವಾ ಬಾಟಲಿಗಳಲ್ಲಿ, ಪಿಚಕಾರಿಯಲ್ಲಿ ತುಂಬಿಸಿ ಓಕುಳಿಯಾಡುವುದೂ ಇದೆ. ಈ ರೀತಿಯ ಮನರಂಜನೆಯ ಆಟ ಮುಗಿದ ಅನಂತರ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಸ್ನಾನ ಮಾಡಿ ಹೋಳಿಹಬ್ಬದ ಪ್ರಯುಕ್ತ ಸಿದ್ಧಪಡಿಸಿದ ವಿವಿಧ ಭಕ್ಷ್ಯಭೋಜ್ಯಗಳ ಔತಣಕೂಟದಲ್ಲಿ ಪಾಲ್ಗೊಂಡು ಹಬ್ಬದ ಸಂತೋಷವನ್ನು ಸಾಮೂಹಿಕವಾಗಿ ಹಂಚಿಕೊಳ್ಳುವರು.’ (ಕನ್ನಡ ವಿಷಯ ವಿಶ್ವಕೋಶ, ಸಂಪುಟ 2; ಪ್ರಕಾಶಕರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, 2007.)
‘ಕರ್ನಾಟಕದಲ್ಲೂ ಹೋಳಿಹಬ್ಬವು ಒಂದು ಜಾನಪದ ಹಬ್ಬವಾಗಿ ಆಚರಣೆಯಲ್ಲಿದೆ. ಜಾನಪದ ಪರಂಪರೆಯ ಸಾಮಾಜಿಕ ಸಂಪ್ರದಾಯಗಳ ಸಂಕೇತಗಳನ್ನು ಈ ಹಬ್ಬದ ನಡಾವಳಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹೋಳಿಹಬ್ಬದ ಆಚರಣೆಗಾಗಿ ಹಳೆಯ ವಸ್ತುಗಳನ್ನು ಸಂಗ್ರಹಿಸುವುದು, ಬೆರಣಿ, ಕಟ್ಟಿಗೆ ಕಳುವುಮಾಡಿ ತರುವುದು, ಹಳ್ಳಿಗಳಲ್ಲಿ ಹಬ್ಬದ ಬೇರೆ ಬೇರೆ ಕಾರ್ಯಗಳಿಗಾಗಿ ಬೇರೆ ಬೇರೆ ಹಕ್ಕುದಾರರಿರುವುದು, ಇವರೆಲ್ಲರ ಮೇಲೆ ಹೋಳಿಯ ನಾಯಕನೆಂದು ಹಿರಿಯನೊಬ್ಬನಿರುವುದು ಇವೆಲ್ಲ ಜಾನಪದ ಸಂಪ್ರದಾಯಗಳು. ಹೋಳಿಹಬ್ಬದ ಕುರಿತಂತೆ ಉತ್ತರಕರ್ನಾಟಕದಲ್ಲಿ ಜಾನಪದ ಲಾವಣಿಗಳು, ದುಂದುಮೆ ಹಾಡುಗಳು, ಹಿಯಾಲುಗಳು ಮೊದಲಾದ ಜಾನಪದ ಸಾಹಿತ್ಯಗಳು ಕಂಡುಬರುತ್ತವೆ’ – ಎಂದು ಲೇಖಕ ಸಂಪಟೂರು ವಿಶ್ವನಾಥ್ ದಾಖಲಿಸಿದ್ದಾರೆ. (ಹಬ್ಬಗಳು ಮತ್ತು ದಿನಾಚರಣೆಗಳು; ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು, 2014.)
ವಿದ್ವದ್ವಲಯದಲ್ಲಿ
‘ಹೋಳಿಹಬ್ಬದಲ್ಲಿ ನಡೆಯುವ ಕಾಮದಹನವನ್ನು ಪ್ರತಿಮಾ ವಿಧಾನದಿಂದ ನೋಡಬೇಕು. ಶಿವನ ಹಣೆಗಣ್ಣು ಎಂದರೆ ಜ್ಞಾನಚಕ್ಷು. ಕಾಮ ಎಂದರೆ ಕೆಟ್ಟ ಆಸೆ. ಕೆಟ್ಟ ಆಸೆಯನ್ನು ಜ್ಞಾನಸೂರ್ಯನಿಂದ ದಗ್ಧಗೊಳಿಸುವುದೇ ಕಾಮದಹನ’ – ಎಂಬುದು ಕೆಲವು ವಿದ್ವಾಂಸರ ಅಭಿಮತ.
ರತಿ, ಪ್ರೀತಿ, ಪ್ರೇಮ, ಕಾಮ ಮುಂತಾದ ಮನೋಧರ್ಮಗಳಿಲ್ಲದೆ ಜಗದ್ವ್ಯಾಪಾರವು ನಡೆಯಲಾರದು. ಋಗ್ವೇದ ಮತ್ತು ಅಥರ್ವಣವೇದಗಳಲ್ಲಿ ಕಂಡುಬರುವ ಕಾಮಸೂಕ್ತದಲ್ಲಿ ಕಾಮದಿಂದಲೇ ಪ್ರಪಂಚದ ಸೃಷ್ಟಿಯು ಆರಂಭವಾಯಿತು ಎಂದು ಹೇಳಿದೆ: ‘ಕಾಮಸ್ತದಗ್ರೇ ಸಮವರ್ತತಾಧಿ ಮನಸೋರೇತಃ ಪ್ರಥಮಂ ಯದಾಸೀತ್’ (ತೈತ್ತಿರೀಯಾರಣ್ಯಕ).
ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ.
ಕಾಮಕ್ಕೂ ಪ್ರೇಮಕ್ಕೂ ಅಜಗಜಾಂತರವಿದೆ. ಕಾಮವು ಕ್ಷಣಿಕ, ಪ್ರೇಮವು ಶಾಶ್ವತ. ಕಾಮವು ದೈಹಿಕ, ಪ್ರೇಮವು ಮಾನಸಿಕ. ಕಾಮವನ್ನು ಪುರುಷಾರ್ಥಗಳಲ್ಲಿ ಒಂದೆಂದು ಪರಿಗಣಿಸಲಾಗಿದೆಯಾದರೂ ಧರ್ಮದಿಂದ ಪ್ರಚೋದಿತವಾದ ಕಾಮದ ಗಳಿಕೆಯು (ಅರ್ಥ) ಮೋಕ್ಷಕ್ಕೆ ಕಾರಣವಾಗುವುದು. ಆದ್ದರಿಂದ ನಮ್ಮ ಆಸೆ ಆಕಾಂಕ್ಷೆಗಳಲ್ಲಿ ಧರ್ಮಸೂಕ್ಷ್ಮ, ದರ್ಶನಕಾಣ್ಕೆಯಿದ್ದು ಅಂತರಂಗ-ಬಹಿರಂಗ ಶುದ್ಧಿಯಿಂದ ಪವಿತ್ರತೆಯುಂಟಾಗಬೇಕು. ಆಗ ಕಾಮದಹನವು ಒಂದು ನಿತ್ಯಸತ್ಯದ ಬೆಳಕಿನ ಹಬ್ಬವಾಗುತ್ತದೆ – ಎಂಬುದು ವಿದ್ವಜ್ಜನರ ಅಭಿಪ್ರಾಯ.