–ಮಾಲತಿ ಹೆಗಡೆ
ಮನೋರಮಾ ಅವರ ನೈಸರ್ಗಿಕ ಬಣ್ಣಗಳ ತಯಾರಿಕೆ ನಾಡಿನಲ್ಲಿಯೇ ಪರಿಸರಸ್ನೇಹಿಯಾದ ಒಂದು ಅನುಶೋಧನೆ. ಪರಿಸರಪ್ರಿಯರಿಗೆ ಹಿತವಾಗುವಂತೆ ಇವರು ತಯಾರಿಸುವ ಬಣ್ಣಗಳು ಚರ್ಮಕ್ಕೆ, ಬಟ್ಟೆಗೆ, ಮಣ್ಣಿಗೂ ಹಿತ. ಈ ಉದ್ಯಮ ಸಾಮಾಜಿಕ ಹಿತವನ್ನೂ, ಕುಟುಂಬಕ್ಕೆ ಆರ್ಥಿಕ ಸುಸ್ಥಿರತೆಯನ್ನೂ ನೀಡಿರುವುದಲ್ಲದೆ ಹಲವರಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸಿದೆ.ಅನನ್ಯ
‘ಕಾಮನ ಬಿಲ್ಲು ಕಮಾನು ಕಟ್ಟಿದೆ’ ಎಂದು ಹಾಡುತ್ತ ಏಳು ಬಣ್ಣಗಳನ್ನೆಣಿಸುತ್ತ ಸಂಭ್ರಮಿಸುತ್ತಲೇ ಬಾಲ್ಯ ಕಳೆದವರು ನಾವು. ಪಾಠಗಳನ್ನು ಓದಿ, ಬರೆಯಿರಿ ಎನ್ನುವ ಮಾಸ್ತರರ ಆಜ್ಞೆಗಿಂತ ಚಿತ್ರ ಬಿಡಿಸಿ ಬಣ್ಣ ತುಂಬಿ ಎಂದರೆ ಹಿಗ್ಗಿದವರು ನಾವು. ಹೂವು ಹೂವಿಗೂ, ಎಲೆ ಎಲೆಗೂ ಅನನ್ಯತೆಯನ್ನಿಟ್ಟು ಚೆಲುವ ಚಿತ್ತಾರ ಬಿಡಿಸುವ ಪ್ರಕೃತಿಮಾತೆಯ ಕೌಶಲಕ್ಕೆ ಬೆರಗಾದವರು ನಾವು. ಬಣ್ಣಗಳೆಂದರೆ ಚೆಲುವು, ಬೆಡಗು, ಸೊಗಸು ಸಂಭ್ರಮಗಳ ಒಟ್ಟಂದ. ದೈನಂದಿನ ಬದುಕಿನ ಏಕತಾನತೆ ಕಳೆಯಲೆಂದೇ ಏನೋ ಭಾರತೀಯರ ಬದುಕಿನಲ್ಲಿ ಹಲವಾರು ಹಬ್ಬಗಳನ್ನು ಆಚರಿಸುವ ಕ್ರಮವಿದೆ. ಬಣ್ಣಗಳೊಂದಿಗೆ ಬೆಸೆದುಕೊಂಡು ಆಚರಿಸುವ ಹಬ್ಬವೇ ಹೋಳಿಹುಣ್ಣಿಮೆ.
ಮಾವಿನಿಂದ ಬೇವಿನವರೆಗೆ, ಮುತ್ತುಗದಿಂದ ಕೊಡಸದವರೆಗೆ ಭೂಮಿಯ ಮೇಲಿನ ಬಹುತೇಕ ಸಸ್ಯಗಳು ಚಿಗಿತು ಹೂವಾಗುವ ವಸುಂಧರೆಯನ್ನು ಶೃಂಗರಿಸುವ, ವಸಂತನಾಗಮನಕ್ಕೆ ಕಾತರಿಸಿ ನಿಲ್ಲುವ ಈ ಹೊತ್ತಿನಲ್ಲಿ ನಾಡಿನೆಲ್ಲೆಡೆ ಹೋಳಿಹುಣ್ಣಿಮೆಯ ಸಂಭ್ರಮ ಗರಿಬಿಚ್ಚಿಕೊಳ್ಳುತ್ತದೆ. ಕಾಮನನ್ನು ಸುಟ್ಟು ಪ್ರೇಮದಿಂದ ಬಣ್ಣವನ್ನಾಡುವುದೇ ಈ ಹಬ್ಬದ ವಿಶೇಷ.
ವಸಂತಮಾಸದಲ್ಲಿ ಗಿಡ ಮರ ಬಳ್ಳಿಗಳೆಲ್ಲ ಚಿಗಿತು ಇಡೀ ಪರಿಸರವೇ ಮದುವಣಗಿತ್ತಿಯಂತಾಗುವ ಕಾಲದಲ್ಲಿ ಆಚರಿಸಲ್ಪಡುವ ಹೋಳಿಹಬ್ಬವನ್ನು ಬಹುಶಃ ಪರಿಸರಸ್ನೇಹಿಯಾಗಿಯೇ ಆಚರಿಸುವ ಕ್ರಮವಿತ್ತೇನೋ. ಹಿಂದೆ ದೇಶದ ಕೆಲವು ಪ್ರದೇಶಗಳಲ್ಲಿ ಮಾತ್ರ ಆಚರಿಸಲ್ಪಡುತ್ತಿದ್ದ ಹೋಳಿಹಬ್ಬ ಈಗ ದೇಶದ ಬಹುತೇಕ ರಾಜ್ಯಗಳಲ್ಲಿ ಆಚರಿಸಲ್ಪಡುತ್ತಿದೆ. ಬಣ್ಣಗಳಿಗೆ ಬೇಡಿಕೆ ಹೆಚ್ಚಾದಂತೆ ವ್ಯಾಪಾರಸ್ಥರು ಆರ್ಸೆನಿಕ್ಯುಕ್ತ ಗಾಢವರ್ಣದ ರಾಸಾಯನಿಕ ಬಣ್ಣಗಳನ್ನು ಮಾರಲಾರಂಭಿಸಿದರು. ನೋಡಲು ಅತ್ಯಾಕರ್ಷಕವೆನಿಸುವ ಈ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಆನಂದದಲ್ಲಿ ಆಟವಾಡಲು ತೊಡಗಿದರೆ ಕೆಲ ಸಮಯದಲ್ಲಿಯೇ ಅದರ ದುಷ್ಪರಿಣಾಮಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಮೈ ಉರಿ ಕೆರೆತದಂತಹ ಸಮಸ್ಯೆ ಕಣ್ಣಿಗೆ ಬಿದ್ದರೆ ಅಲರ್ಜಿ. ಕೂದಲಿಗೆ ಬಿದ್ದರೆ ನಾಲ್ಕಾರು ದಿನ ತಲೆ ತೊಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅನೇಕರು ಒಂದೆರಡು ವರ್ಷ ಬಣ್ಣಗಳನ್ನಾಡಿದ ಮೇಲೆ ತಿರುಗಿ ಆ ಆಚರಣೆಗೇ ಶಾಶ್ವತ ವಿದಾಯ ಹೇಳಿಬಿಡುವುದು ಇದೇ ಕಾರಣಕ್ಕೆ.
ಎಳೆಯರು, ಹರಯದವರು ಮಾತ್ರ ಕಷ್ಟವಾದರೂ ಇಷ್ಟವೆಂದುಕೊಂಡೇ ಬಣ್ಣವನ್ನಾಡುತ್ತಾರೆ.
ನಿಸರ್ಗದಲ್ಲಿ ಅಸಂಖ್ಯಾತ ಬಣ್ಣಗಳಿದ್ದರೂ ಹೋಳಿಹಬ್ಬವನ್ನು ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಬಣ್ಣಗಳಿಂದ ಆಚರಿಸುತ್ತಿರುವುದು ದುರಂತವಲ್ಲವೇ? ಸುರಕ್ಷಿತವಾಗಿ, ಪರಿಸರಸ್ನೇಹಿಯಾಗಿ, ನೈಸರ್ಗಿಕ ಬಣ್ಣಗಳಿಂದ ಹೋಳಿಹಬ್ಬವನ್ನಾಚರಿಸಿ ಎನ್ನುವ ಪ್ರಜ್ಞಾವಂತರ ಕೂಗನ್ನು ಕೇಳಿ ಮಾರುಕಟ್ಟೆಯಲ್ಲಿ ಹುಡುಕಿದರೆ ನೈಸರ್ಗಿಕ ಬಣ್ಣಗಳು ಸಿಗುವುದು ಕಷ್ಟವೇ….
ಭೂಮಿಯ ಬಿಕ್ಕು
ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಸಂದರ್ಭದಲ್ಲಿ ಸಾವಿರಾರು ಟನ್ ಬಣ್ಣ ಭೂಮಿ ಪಾಲಾಗುತ್ತದೆ. ಬಣ್ಣವಾಡಿದ ನಂತರ ಮನೆಯನ್ನೂ, ರಸ್ತೆಯನ್ನೂ, ಬಣ್ಣವಾಡಲು ಧರಿಸಿದ ಬಟ್ಟೆಗಳನ್ನೂ ತೊಳೆಯುವಾಗ ಕೋಟ್ಯಂತರ ಲೀಟರ್ ರಾಸಾಯನಿಕಯುಕ್ತ ನೀರು ಭೂಮಿಯೊಡಲನ್ನು ಸೇರುತ್ತದೆ. ರಾಸಾಯನಿಕ ಬಣ್ಣಭರಿತ ಬಟ್ಟೆಗಳು ತ್ಯಾಜ್ಯದ ರೂಪದಲ್ಲಿ ಭೂಮಿಗೇ ಸೇರುತ್ತದೆ. ಈ ಕಷ್ಟ ಸಹಿಸಲಾರದೆ ಭೂಮಿ ಬಿಕ್ಕುವುದಲ್ಲವೇ? ಅದನ್ನು ಆಲಿಸಲು ಮನವಿರಬೇಕು, ಪ್ರಜ್ಞಾವಂತಿಕೆ ಬೇಕು.
‘ಭೂಮಿಗೆ ಕಷ್ಟವೆಂದು ಬಣ್ಣವಾಡುವುದನ್ನು ಬಿಡಲಾಗುವುದಿಲ್ಲ. ಹಬ್ಬ ಆಚರಿಸುವುದು ನಮ್ಮ ಸಂಪ್ರದಾಯ. ಮಾರುಕಟ್ಟೆಯಲ್ಲಿ ಸಿಗುವುದೆಲ್ಲವೂ ರಾಸಾಯನಿಕ ಬಣ್ಣಗಳೇ, ನಾವೇನು ಮಾಡಲಾದೀತು?’ ಎಂದು ವಾದಿಸುವವರಿದ್ದಾರೆ. ಅಂಥವರು ಪರ್ಯಾಯ ಮಾರ್ಗಗಳ ಬಗ್ಗೆ ನಡೆದ ಚಿಂತನೆಯನ್ನೂ, ಪ್ರಯತ್ನಗಳನ್ನೂ ಗಮನಿಸುವುದೊಳಿತು.
ಅನನ್ಯ ಉದ್ಯಮ ಜನ್ಮತಾಳಿತು
ನಾನು ರಾಸಾಯನಿಕ ಬಣ್ಣಗಳಿಗೆ ಬೆನ್ನುತಿರುವಿ ಹುಡುಕಿದಾಗ ಸಿಕ್ಕಿದ್ದು ನೈಸರ್ಗಿಕ ಬಣ್ಣಗಳ ಉದ್ಯಮದ ಮನೋರಮಾ ಅವರ ಮನೋಜ್ಞವಾದ ಕಥೆ. ಉತ್ತರಕನ್ನಡದ ಪ್ರವಾಸಿಕ್ಷೇತ್ರವಾದ ಸೋಂದಾ ಕಳೆದ ಹದಿನೈದು ವರ್ಷಗಳಿಂದ ನೈಸರ್ಗಿಕ ಬಣ್ಣದಿಂದಲೂ ಪ್ರಸಿದ್ದವಾಗಿದೆ. ಸೋಂದಾ ವ್ಯಾಪ್ತಿಯಲ್ಲಿ ಬರುವ ನಂದೀಹೊಂಡ ಕಾಡಿನ ಮಡಿಲಿನ ಒಂದೇ ಮನೆಯ ಒಂದು ಊರು. ಮೂಲತಃ ಸಾವಯವ ಕೃಷಿಕರಾದ ಮನೋರಮಾ ಸೂರ್ಯನಾರಾಯಣ ಜೋಷಿ ತಮ್ಮ ಅಡಿಕೆತೋಟದಲ್ಲಿ ಮಿಶ್ರಬೆಳೆಯಾಗಿ ಬಾಳೆ, ಮೆಣಸು, ತೆಂಗನ್ನು ಬೆಳೆಯುತ್ತಾರೆ. ಗದ್ದೆಯಲ್ಲಿ ಭತ್ತ ಮತ್ತು ಕಬ್ಬನ್ನು ಬೆಳೆಯುತ್ತಾರೆ. “ವರ್ಷದಲ್ಲಿ ಒಮ್ಮೆ ಮಾತ್ರ ಆದಾಯ ಸಿಗುವ ಅಡಿಕೆಗೆ ವಿಪರೀತ ಬೆಲೆ ಏರಿಳಿತಗಳು. ಆದ್ದರಿಂದ ಹಣ ಹೂಡಿದ ಅಲ್ಪ ಅವಧಿಯಲ್ಲಿ ಲಾಭ ಬರುವಂತಹ ಏನಾದರೂ ಉದ್ಯಮ ಆರಂಭಿಸಬೇಕು, ಅದು ಪರಿಸರಕ್ಕೆ ಪೂರಕವಾಗಿರಬೇಕು, ಸಮಾಜಕ್ಕೆ ಉಪಯುಕ್ತವಾಗಿರಬೇಕು” ಎಂದು ಅವರು ವಿಚಾರ ಮಾಡಿದರು.
ಅದೇ ಸಮಯದಲ್ಲಿ ಪುಣೆಯ ಸಂಸ್ಥೆಯೊಂದು ಹೋಳಿಹುಣ್ಣಿಮೆಗೆ ಪರಿಸರಸ್ನೇಹಿಯಾದ ಬಣ್ಣ ತಯಾರಿಸಿ ಕೊಡುವುದಾದರೆ ಖರೀದಿಸುತ್ತೇವೆ ಎಂದಿತು. ಬಣ್ಣ ಆಡುವ ಸಂಪ್ರದಾಯದ ಅರಿವಿಲ್ಲದ ಮನೋರಮಾ ಅವರಿಗೆ ಇದೊಂದು ಸವಾಲಿನಂತೆ ಭಾಸವಾಯಿತು. ಆ ಕೆಲಸದಲ್ಲಿ ಹೊಸತನವಿತ್ತು. ಪರಿಸರದಲ್ಲಿ ನೂರಾರು ಬಣ್ಣಗಳಿರುವಾಗ ನಾಲ್ಕೈದು ಬಣ್ಣಗಳನ್ನು ತಯಾರಿಸಲು ಸಾಧ್ಯವಿಲ್ಲವೆ? – ಎಂದುಕೊಳ್ಳುತ್ತಲೇ ಪ್ರಯೋಗಕ್ಕಿಳಿದರು. ನೈಸರ್ಗಿಕ ಬಣ್ಣ ತಯಾರಿಸುವುದಕ್ಕೆ ಸಿದ್ಧ ಸೂತ್ರಗಳೇನೂ ಇರಲಿಲ್ಲ. “ಒಣಗಿದ ಹೂವು, ಅರಿಶಿನ, ಕುಂಕುಮ, ಅಕ್ಕಿಹಿಟ್ಟು, ಬೀಟ್ರೂಟ್, ಪಾಲಕ್ ಸೊಪ್ಪು, ಕೆಂಪುಮಣ್ಣು ಎಲ್ಲವನ್ನು ಮಿಶ್ರ ಮಾಡುವುದು – ‘ಹೇಗಿದೆ ಬಣ್ಣ?’ ಎನ್ನುತ್ತಿದ್ದ ನನ್ನನ್ನು ಗಂಡ, ಮಕ್ಕಳು ಗೇಲಿ ಮಾಡುತ್ತಿದ್ದರು. ಆದರೆ ನಾನು ಸತತವಾಗಿ ಈ ವಿಷಯದಲ್ಲಿ ಪ್ರಯತ್ನ ಮಾಡುವುದನ್ನು ಕಂಡು ನಂತರ ಸಲಹೆ ಸಹಕಾರ ನೀಡಿದ್ದಲ್ಲದೆ ಕೆಲಸದಲ್ಲಿ ಕೈಗೂಡಿಸಿದರು” ಎಂದು ಮನೋರಮಾ ನಗುತ್ತಾರೆ.
ಉತ್ತಮ ಗುಣಮಟ್ಟದ ನೈಸರ್ಗಿಕ ಬಣ್ಣಕ್ಕೆ ತುಂಬಾ ಬೇಡಿಕೆ ಬಂತು. ಉದ್ಯಮವನ್ನು ಪುಣೆಯಿಂದ ಬೆಂಗಳೂರಿನ ಸಾವಯವ ಮಳಿಗೆಗಳಿಗೂ ವಿಸ್ತರಿಸಿದರು. ಇವರು ತಯಾರಿಸುವ ಬಣ್ಣಗಳಲ್ಲಿ ಅರಿಶಿನ ಪ್ರಧಾನ ಪಾತ್ರ ವಹಿಸಿದೆ. ಕುಂಕುಮ ಇಂಡಿಗೋ ಅಕ್ಕಿಹಿಟ್ಟು. .ಹೀಗೆ ಬೆರೆಸಿ ಕೆಂಪು ನೀಲಿ ಕೇಸರಿ ಹಸಿರು ಹಳದಿ ಹೀಗೆ ಐದು ಬಣ್ಣಗಳನ್ನು ತಯಾರಿಸುತ್ತಾರೆ. ಬಣ್ಣಗಳು ಚರ್ಮಕ್ಕೆ ಹಿತಕರವಾಗಿರಬೇಕು ಎಂಬ ಕಾರಣಕ್ಕೆ ಲಕ್ಕಿಸೊಪ್ಪು, ಪಚ್ಚಕರ್ಪೂರ, ಕಹಿಜೀರಿಗೆ, ಬಜೆ, ಚಕ್ಕೆಯಪುಡಿಯನ್ನು ಅಲ್ಪ ಪ್ರಮಾಣದಲ್ಲಿ ಮಿಶ್ರಣ ಮಾಡುತ್ತಾರೆ.
ಯಾವುದೇ ಬಗೆಯ ತರಬೇತಿ ಇಲ್ಲದೆ ರಕ್ತಗತ ಪರಿಸರಾಸಕ್ತಿಯಿಂದ ಸಮಾಜಕ್ಕೆ ಉಪಯುಕ್ತವಾದ ಉದ್ಯಮವೊಂದನ್ನು ಹುಟ್ಟುಹಾಕಿದ ಮನೋರಮಾ ಜೋಷಿಯವರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಿದ್ದಾರೆ. ಆರಂಭದಲ್ಲಿ ಬಣ್ಣ ತಯಾರಿಸುವಾಗ ಮನೆಯವರೇ ಕೆಲಸವನ್ನು ನಿರ್ವಹಿಸಿದರು. ಈಗ ಏಳು ಮಹಿಳೆಯರಿಗೆ ವರ್ಷದಲ್ಲಿ ಮೂರು ತಿಂಗಳು ಕೆಲಸ ನೀಡುತ್ತಾರೆ. “ಭತ್ತ ಅಡಿಕೆಯ ಕೊಯಿಲು ಮುಗಿಸಿದ ನಂತರ ಕೆಲಸವಿಲ್ಲದೇ ಸುಮ್ಮನೇ ಕೂಡುತ್ತಿದ್ದೆವು. ಈಗ ಬಣ್ಣದ ತಯಾರಿಗೆ ಬರುವುದರಿಂದ ಆರ್ಥಿಕವಾಗಿ ಅನುಕೂಲವಾಗುತ್ತದೆ’’ ಎನ್ನುತ್ತಾರೆ ಪ್ಯಾಕಿಂಗಿಗೆ ಬರುವ ಸವಿತಕ್ಕ; “ಬಣ್ಣಗಳನ್ನು ತಿಕ್ಕಿ ಮಿಶ್ರ ಮಾಡುವ, ಜರಡಿ ಹಿಡಿಯುವ, ಪ್ಯಾಕಿಂಗ್ ಮಾಡುವ ಗಡಿಬಿಡಿಯ ಕೆಲಸದ ನಡುವೆ ಹತ್ತಾರು ಜನ ಒಟ್ಟುಗೂಡುವುದರಿಂದ ಮಾತುಕತೆ, ಹರಟೆ, ರೇಗಿಸುವುದು, ಹಾಡು, ಅಂತ್ಯಾಕ್ಷರಿ…. ಒಟ್ಟೊಟ್ಟಿಗೇ ನಡೆದಿರುತ್ತದೆ.”
“ನಗರಗಳಲ್ಲಿ ಒಂದು ದಿನ ಹೋಳಿಹಬ್ಬವಾದರೆ ಅದನ್ನು ತಯಾರಿಸುವ ನಮಗೆ ಮೂರು ತಿಂಗಳು ಹೋಳಿಯ ಧೂಳು, ಸಂಭ್ರಮ. ಪ್ರತಿವರ್ಷವೂ ಹೋಳಿಹುಣ್ಣಿಮೆಗೆ ನಮ್ಮದು ಭರದ ಸಿದ್ಧತೆ” ಎಂಬುದು ಅಲ್ಲಿ ಕೆಲಸ ಮಾಡುವವರ ಒಕ್ಕೊರಲ ನುಡಿ. ಬಣ್ಣ ತಯಾರಿಕೆಗೆ ಬೇಕಾಗುವ ಅಕ್ಕಿ, ಅರಿಶಿನ, ಕುಂಕುಮ… ಮುಂತಾದ ಕಚ್ಛಾವಸ್ತುಗಳನ್ನು ಸುತ್ತಮುತ್ತಲಿನ ರೈತರ ಬಳಿ ಖರೀದಿಸುತ್ತಾರೆ. ಮನೋರಮಾ ಅವರ ಮಗ ವಿವೇಕ ಅಪ್ಪ ಅಮ್ಮನೊಂದಿಗೆ ಉದ್ಯಮದಲ್ಲಿಯೂ ನೆರವಾಗುತ್ತಿದ್ದಾರೆ. ಕಾಗದದ ಪ್ಯಾಕೆಟ್ನಲ್ಲಿ ಲಭಿಸುವ ಇವರ ಬಣ್ಣಗಳು ‘ಮೈತ್ರಿ’ ಎಂಬ ಹೆಸರಿನಲ್ಲಿ ಪುಣೆ, ಗೋವಾ, ಬೆಂಗಳೂರು, ಕೈಗಾ, ಧಾರವಾಡದ ಸಾವಯವ ಮಳಿಗೆಗಳಲ್ಲಿ ಲಭಿಸುತ್ತವೆ.
“ವರ್ಷದಲ್ಲಿ ಒಂದೇ ದಿನ ಆಡುವ ಬಣ್ಣದಾಟಕ್ಕೆ ಸಾವಿರಾರು ಟನ್ ಬಣ್ಣ ಉಪಯೋಗಿಸುತ್ತಾರೆ. ಆದರೆ ಖರೀದಿಸುವವರು ಯಾರೂ ತುಂಬ ದಿನಗಳ ಮೊದಲು ಖರೀದಿಸುವುದಿಲ್ಲ. ಹಬ್ಬ ಮುಗಿದ ಮೇಲೆಯೂ ಖರೀದಿಸುವುದಿಲ್ಲ. ಬೇಡಿಕೆ ಕೊನೆಯ ಘಳಿಗೆಯಲ್ಲಿ ಬಂದರೆ ತಕ್ಷಣ ತಯಾರಿಸುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಮಾನವಶ್ರಮ, ಸಮಯ ಎರಡೂ ಬೇಕು. ಬೇಡಿಕೆ-ಪೂರೈಕೆಯಲ್ಲಿ ಹೊಂದಾಣಿಕೆ ಇರುವಂತೆ ನೋಡಿಕೊಳ್ಳಬೇಕು” ಎನ್ನುತ್ತಾರೆ ಮನೋರಮಾ. ಇಂತಹ ಎಲ್ಲ ಸವಾಲುಗಳನ್ನು ಎದುರಿಸಿಯೂ ಇವರು ತಯಾರಿಸುವ ಬಣ್ಣ ಬಲು ಬೇಡಿಕೆಯನ್ನುಳಿಸಿಕೊಂಡಿದೆ. ಅನೇಕ ಶಾಲಾ ಕಾಲೇಜು ಕ್ಯಾಂಪಸ್ಗಳಲ್ಲಿ ಪ್ರತಿವರ್ಷ ಇವರಿಂದ ಬಣ್ಣಗಳನ್ನು ಖರೀದಿಸಿ ಸುರಕ್ಷಿತ ಹೋಳಿಯನ್ನು ಆಚರಿಸುವವರಿದ್ದಾರೆ.
ನಾಡಿನಲ್ಲಿಯೇ ಅಪರೂಪದ ಯತ್ನ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯವು ಮನೋರಮಾರನ್ನು ‘ಕೃಷಿಪಂಡಿತ’ ಪ್ರಶಸ್ತಿನೀಡಿ ಗೌರವಿಸಿದೆ. ಹಲವಾರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಕೃಷಿಯೊಂದಿಗೆ ಜೊತೆಯಾಗಿ ಸಾಗುವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಈ ಉಪಕಸುಬು ಗ್ರಾಮವನ್ನು, ನಗರವನ್ನು ಬೆಸೆದಿದೆ. “ನಾವು ತಯಾರಿಸುವ ಬಣ್ಣಗಳಿಂದ ಸಾವಿರಾರು ಜನರು ನೆಮ್ಮದಿಯ ಹಬ್ಬ ಆಚರಿಸುತ್ತಾರೆ… ಈ ಸಮಾಜಕ್ಕೆ ಒಳಿತಾಗುವ ಕೆಲಸ ನಮ್ಮಿಂದ ಆಗುತ್ತಿದೆ” – ಎನ್ನುವುದು ಇವರ ಹೆಮ್ಮೆ. ಹಬ್ಬಗಳ ಆಚರಣೆಯನ್ನು ಪರಿಸರಸ್ನೇಹಿಯಾಗಿಸಲೇಬೇಕಾದ ತುರ್ತು ಇದ್ದೇ ಇದೆ ಅಲ್ಲವೇ?
ವಿವೇಕ ಜೋಷಿ ಸಂಪರ್ಕ ಸಂಖ್ಯೆ: 9480265616