ಅಷ್ಟಾಂಗವೆಂಬುದು ಆಯುರ್ವೇದಶಾಸ್ತ್ರಕ್ಕೆ ಪರ್ಯಾಯಭೂತವಾದದ್ದು. ಕಾಯಚಿಕಿತ್ಸೆ, ಶಲ್ಯತಂತ್ರ, ಶಾಲಾಕ್ಯತಂತ್ರ, ಕೌಮಾರಭೃತ್ಯ, ಭೂತವಿದ್ಯೆ, ಅಗದತಂತ್ರ, ರಸಾಯನ, ಮತ್ತು ವಾಜೀಕರಣ – ಎಂಬಿವೇ ಎಂಟು ಅಂಗಗಳು. ಇವೆಂಟು ಅಂಗಗಳು ಮನುಷ್ಯನು ಸುಖವಾಗಿರಲು ಬೇಕಾದ ಎಲ್ಲ ಅಂಶಗಳನ್ನೂ ಒಳಗೊಳ್ಳುತ್ತವೆ. ಹೀಗಾಗಿ ಆಯುರ್ವೇದವು ಮನುಷ್ಯರ ಪೂರ್ಣವಾದ ಆರೋಗ್ಯದ ಸಾಧನೆಯ ದೃಷ್ಟಿಯಿಂದ ಭಾರತದ ಪ್ರಾಚೀನರು ತಂದಿರುವ ವ್ಯವಸ್ಥೆಯಾಗಿದೆ. ಮನುಷ್ಯನಿಗೆ ಆವಶ್ಯಕವಾದ ರೋಗರಾಹಿತ್ಯ ಹಾಗೂ ಪಾರಲೌಕಿಕವಾದ ಸುಖ – ಇವೆರಡಂಶಗಳನ್ನೂ ಗಮನಿಸಿ ಅದಕ್ಕೆ ವ್ಯವಸ್ಥೆಯನ್ನು ಕಲ್ಪಿಸುವ ಸಂಕಲ್ಪವೂ ಯತ್ನಗಳೂ ವೇದಕಾಲದಿಂದಲೇ ನಡೆದುಬಂದಿವೆ. ಹೀಗಾಗಿ ಆಯುರ್ವೇದವು ಸುಮಾರು ಏಳು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆಯೆAದು ಹೇಳಿದರೆ ತಪ್ಪಾಗಲಾರದು.
ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ – ಎಂಬ ಮಾತನ್ನು ಯಾರು ಕೇಳಿಲ್ಲ? ಇದನ್ನು ಹೇಳಿದವರು ದಾಸಶ್ರೇಷ್ಠರೆನಿಸಿದ ಕನಕದಾಸರು, ಹದಿನಾರನೆಯ ಶತಮಾನದವರು. ಇದೇ ವಿಷಯವನ್ನೇ ಮತ್ತೂ ಆಳವಾಗಿ ಪರೀಕ್ಷಿಸಿ ಉತ್ತಮವಾದ ಸೂಕ್ತಿಯನ್ನು ಇತ್ತವನು ವಾಗ್ಭಟ. ಇಂದಿನ ಪಾಕಿಸ್ತಾನದಲ್ಲಿ ಏಳನೆಯ ಶತಮಾನದಲ್ಲಿ ಜನಿಸಿದ ಈತನ ಉಕ್ತಿ ಬಹಳ ಮಾರ್ಮಿಕವಾದದ್ದು. ಆತನ ಮಾತು ಹೀಗೆ:
ಸುಖಾರ್ಥಾಃ ಸರ್ವಭೂತಾನಾಂ ಮತಾಃ ಸರ್ವಾಃ ಪ್ರವೃತ್ತಯಃ |
ಸುಖಂ ಚ ನ ವಿನಾ ಧರ್ಮಾತ್, ತಸ್ಮಾತ್ ಧರ್ಮಪರೋ ಭವೇತ್ ||
ಎಲ್ಲ ಪ್ರಾಣಿಗಳ ಎಲ್ಲ ಪ್ರವೃತ್ತಿಗಳೂ ಸುಖವನ್ನಪೇಕ್ಷಿಸಿ ಹೊರಟಿರತಕ್ಕವಾಗಿರುತ್ತವೆ. ಆದರೆ ಸುಖವೆಂಬುದು ಧರ್ಮದಿಂದಲ್ಲದೆ ಲಭ್ಯವಾಗದು ಎಂದೇ ಧರ್ಮಪರನಾಗಿರತಕ್ಕದ್ದು – ಎನ್ನುವ ಮಾತು ಸಮಸ್ತ ಮನುಷ್ಯರಿಗೂ ಸಮಸ್ತಕಾಲಕ್ಕೂ ಅನ್ವಯವಾಗತಕ್ಕದ್ದು.
ಈ ಶ್ಲೋಕವು ಅಷ್ಟಾಂಗಹೃದಯದಲ್ಲಿ ಲಭ್ಯವಾದದ್ದು. ಅಷ್ಟಾಂಗವೆಂಬುದು ಆಯುರ್ವೇದಶಾಸ್ತ್ರಕ್ಕೆ ಪರ್ಯಾಯಭೂತವಾದದ್ದು. ಕಾಯಚಿಕಿತ್ಸೆ, ಶಲ್ಯತಂತ್ರ, ಶಾಲಾಕ್ಯತಂತ್ರ, ಕೌಮಾರಭೃತ್ಯ, ಭೂತವಿದ್ಯೆ, ಅಗದತಂತ್ರ, ರಸಾಯನ, ಮತ್ತು ವಾಜೀಕರಣ – ಎಂಬಿವೇ ಎಂಟು ಅಂಗಗಳು. ಇವೆಂಟು ಅಂಗಗಳು ಮನುಷ್ಯನು ಸುಖವಾಗಿರಲು ಬೇಕಾದ ಎಲ್ಲ ಅಂಶಗಳನ್ನೂ ಒಳಗೊಳ್ಳುತ್ತವೆ. ಹೀಗಾಗಿ ಆಯುರ್ವೇದವು ಮನುಷ್ಯರ ಪೂರ್ಣವಾದ ಆರೋಗ್ಯದ ಸಾಧನೆಯ ದೃಷ್ಟಿಯಿಂದ ಭಾರತದ ಪ್ರಾಚೀನರು ತಂದಿರುವ ವ್ಯವಸ್ಥೆಯಾಗಿದೆ.
ಮನುಷ್ಯನಿಗೆ ಆವಶ್ಯಕವಾದ ರೋಗರಾಹಿತ್ಯ ಹಾಗೂ ಪಾರಲೌಕಿಕವಾದ ಸುಖ – ಇವೆರಡಂಶಗಳನ್ನೂ ಗಮನಿಸಿ ಅದಕ್ಕೆ ವ್ಯವಸ್ಥೆಯನ್ನು ಕಲ್ಪಿಸುವ ಸಂಕಲ್ಪವೂ ಯತ್ನಗಳೂ ವೇದಕಾಲದಿಂದಲೇ ನಡೆದುಬಂದಿವೆ. ಹೀಗಾಗಿ ಆಯುರ್ವೇದವು ಸುಮಾರು ಏಳು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆಯೆಂದು ಹೇಳಿದರೆ ತಪ್ಪಾಗಲಾರದು.
ಆಯುರ್ವೇದವನ್ನು ಕುರಿತಾದ ಬರವಣಿಗೆಗಳು
ರಾಮಚಂದ್ರರಾಯರು ಆಯುರ್ವೇದವನ್ನು ಕುರಿತಾಗಿ ಮಾಡಿದ ಮೊದಲ ಬರವಣಿಗೆಯೆಂದರೆ ಆಯುರ್ವೇದ ಪರಿಚಯವೆಂಬ ಕಿರುಕೃತಿ – ಎನ್ನಬಹುದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪನಿರ್ದೇಶಕರಾಗಿದ್ದ ಕೆ. ಸಿ. ಶಿವಪ್ಪನವರು ರಾಮಚಂದ್ರರಾಯರಿಂದ ಒಂದು ಉಪನ್ಯಾಸ ಮಾಲೆಯನ್ನೇರ್ಪಡಿಸಿದರು, ಆಯುರ್ವೇದವನ್ನು ಕುರಿತಾಗಿ. ಐವತ್ತಕ್ಕೂ ಕಡಮೆ ಪುಟಗಳಲ್ಲಿ ಆಯುರ್ವೇದದ ಬಗ್ಗೆ ಒಂದು ಸಮಗ್ರವಾದ ಅವಲೋಕನವನ್ನು ಮಾಡಿಸಿಕೊಡುವ ಕೃತಿಯಿದೆಂದು ಹೇಳಬಹುದು. ಆಯುರ್ವೇದವು ದೊಡ್ಡ ಸಾಗರ; ಬೃಹತ್ತಾದ ಆನೆಯನ್ನು ಒಂದು ಪುಟ್ಟಕನ್ನಡಿಯಲ್ಲಿ ತೋರಿಸಿದರೆ ಹೇಗೋ ಹಾಗೆ, ಈ ಕೃತಿಯು ಆಯುರ್ವೇದದ ಬಗ್ಗೆ ಒಂದು ಒಟ್ಟಾರೆ ಚಿತ್ರವನ್ನು ಕೊಡುತ್ತದೆ.
ಆಯುರ್ವೇದದ ಜಾನಪದ ಮೂಲ, ಆಯುರ್ವೇದ ಎಂದರೇನು, ಶರೀರ ಮತ್ತು ರೋಗ, ತ್ರಿದೋಷ ಎಂದರೇನು, ಆಯುರ್ವೇದದ ವಿಭಾಗಗಳು, ಪಶುವೈದ್ಯ-ವೃಕ್ಷಾಯುರ್ವೇದ, ಆಯುರ್ವೇದದ ಔಷಧಿಗಳು, ರೋಗಿಗಳ ಪರೀಕ್ಷೆ, ಆರೋಗ್ಯದ ಊರುಗೋಲುಗಳು ಹಾಗೂ ಚಿಕಿತ್ಸೆಯ ನಾಲ್ಕು ಪಾದಗಳು – ಎಂಬ ಹತ್ತು ಅಧ್ಯಾಯಗಳನ್ನುಳ್ಳ ಈ ಕಿರುಕೃತಿಯು ಬಹಳ ಸರಳವಾದ ಭಾಷೆಯಲ್ಲಿ ಲಿಖಿತವಾದ ಕೃತಿ.
ಈ ಕೃತಿಯು ೧೯೮೧ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟಿತವಾಗಿತ್ತು. ಬಹಳ ಕಾಲ ಇದರ ಪ್ರತಿಗಳು ಲಭ್ಯವಾಗಿರಲಿಲ್ಲವಾಗಿ, ಬೆಂಗಳೂರಿನ “ಸಾಕ್ಷಿ” ಸಂಸ್ಥೆಯು – ಅರ್ಥಾತ್, ಶ್ರೀಆರೋಬಿಂದೋ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆಯು – ಇದರ ಮರುಮುದ್ರಣವನ್ನು ೨೦೧೨ರಲ್ಲಿ ಮಾಡಿತು. ಈ ಕೃತಿಗೆ ಮುನ್ನುಡಿಯನ್ನು ಬರೆದ ಡಾ|| ಬಾಲಮುರಳೀಕೃಷ್ಣರವರು ರಾಮಚಂದ್ರರಾಯರ ಈ ಪ್ರಯತ್ನದ ಬಗ್ಗೆ ಹೀಗೆ ಹೇಳಿದ್ದಾರೆ: “ಆಯುರ್ವೇದದ ಎಲ್ಲ ಮಜಲುಗಳನ್ನು ಆಳ-ಅಗಲಗಳನ್ನು ರಸವತ್ತಾಗಿ ತಿಳಿಸಿ ಹೇಳಿದ್ದಾರೆ”. ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಪ್ರತಿಯೊಬ್ಬರೂ, ಹಾಗೂ ಆಯುರ್ವೇದದ ಬಗ್ಗೆ ಕುತೂಹಲಿಗಳಾದವರೆಲ್ಲರೂ ಸಹ, ಸಂಗ್ರಹಿಸಬೇಕಾದ ಕಿರುಪುಸ್ತಕವಿದು.
ಆರು ಸಂಪುಟಗಳಲ್ಲಿ ಬಂದ Encyclopedia of Indian Medicine ಎಂಬ ಕೃತಿಯು ಆಯುರ್ವೇದದ ಎಲ್ಲ ಮುಖ್ಯ ವಿಷಯಗಳನ್ನೂ ಒಳಗೊಂಡಿದೆ. ಆ ಆರು ಸಂಪುಟಗಳ ಶೀರ್ಷಿಕೆಗಳು ಹೀಗಿವೆ.
೧. Historical Perspective (131pp)
೨. Conceptual (236pp)
೩. Clinical Examination, Diagnosis, and methods of treatment (162pp)
೪. Diseases, Drugs and their preparations (314pp)
೫. Materia Medica (in 2 parts) (722pp)
೬. Folk Medicine (319pp)
ಎಂದರೆ ಐತಿಹಾಸಿಕ ಅವಲೋಕನ, ತಾತ್ತ್ವಿಕ-ನೋಟ, ನಿದಾನ-ಚಿಕಿತ್ಸೆಗಳು, ರೋಗ-ಔಷಧಗಳು, ಔಷಧ-ಮೂಲಗಳು ಹಾಗೂ ಜಾನಪದ-ವೈದ್ಯ – ಎಂಬಿವು ಆ ಆರು ಸಂಪುಟಗಳ ವಿಷಯಗಳು. (ಕೊನೆಯ ಸಂಪುಟಗಳಲ್ಲಿ ಅವರ ಪುತ್ರನ ಪಾತ್ರವು ಪ್ರಧಾನವಾಗಿದೆ.)
ಈ ವಿಶ್ವಕೋಶದ ಪೀಠಿಕೆಯಲ್ಲಿ, ಪಶ್ಚಿಮ-ದೇಶಗಳಲ್ಲಿ ಆಯುರ್ವೇದದ ಬಗ್ಗೆ ಎಷ್ಟೊಂದು ಅಜ್ಞಾನವು ತುಂಬಿದೆ! – ಎಂದು ಮರುಕವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಭಾರತದಲ್ಲಿ ಸಹ ಆಯುರ್ವೇದವು ಅವನತಿಯನ್ನು ಕಂಡಿರುವುದನ್ನೂ ಪ್ರಸ್ತಾವಿಸಿದ್ದಾರೆ. ಅದರಲ್ಲಿಯ ಖೇದಾಸ್ಪದಪ್ರಸಂಗವನ್ನು ಅವರ ಮಾತಿನಲ್ಲಿಯೇ ಹೇಳುವುದಾದರೆ, “The generation of practising physicians who are also scholarly has almost disappeared”: ಶಾಸ್ತ್ರ-ಜ್ಞಾನವನ್ನು ತಲ-ಸ್ಪರ್ಶಿಯಾಗಿ ಸಂಪಾದಿಸಿರುವ ವೈದ್ಯರು ಇಂದು ಕಾಣಸಿಗುವಂತೆಯೇ ಇಲ್ಲವಾಗಿದೆ – ಎಂಬ ಮಾತು ಎಷ್ಟು ಸತ್ಯವೋ ಅಷ್ಟೇ ದುಃಖಾಸ್ಪದವದ ವಿಷಯವೂ ಆಗಿದೆ.
ಭಾರತದ ಇತಿಹಾಸವನ್ನು ಕುರಿತಾಗಿಯೂ ಆಯುರ್ವೇದ-ವೈದ್ಯವನ್ನು ಕುರಿತಾಗಿಯೂ ವಿದ್ವಾಂಸರಲ್ಲಿ ಭಿನ್ನಮತಗಳು ಎಷ್ಟೋ ಇವೆ. ಯಾವ ವಿವಾದದಲ್ಲೂ ಯಾವುದೋ ಒಂದು ಪಕ್ಷವನ್ನು ವಹಿಸಿಕೊಂಡು ವಿಷಯ-ನಿರೂಪಣೆಯನ್ನು ಮಾಡಿಲ್ಲ – ಎಂದು ಆರಂಭದಲ್ಲಿ ಹೇಳಿಕೊಂಡಿದ್ದಾರೆ.
ನಾನಾ-ಚಿತ್ರಗಳನ್ನೂ ಒಳಗೊಂಡಿರುವ ಈ ವಿಶ್ವಕೋಶವು ಪ್ರಾಯಃ ಆಯುರ್ವೇದವನ್ನು ಕುರಿತಾದ ಮೊಟ್ಟಮೊದಲ ವಿಶ್ವಕೋಶ. ವೇದಕಾಲದಿಂದಾರಂಭಿಸಿ ವೈದ್ಯವಿದ್ಯೆ, ವೈದ್ಯಲಕ್ಷಣ ಮುಂತಾದ ವಿಷಯಗಳ ಇತಿಹಾಸವನ್ನು ಚರ್ಚಿಸಿದ್ದಾರೆ. ಚರಕ-ಸುಶ್ರುತ-ವಾಗ್ಭಟ-ಮಾಧವಕರ ಮುಂತಾದ ಎಲ್ಲ ಮುಖ್ಯ ಆಯುರ್ವೇದ-ಪ್ರತಿಪಾದಕರ ಬಗ್ಗೆಯೂ ಅವರ ಕೊಡುಗೆಗಳ ಬಗ್ಗೆಯೂ ಮಾತುಗಳು ಬಂದಿವೆ. ಆಂಗ್ಲಭಾಷೆಯ ಅಕಾರಾದಿಕ್ರಮದಲ್ಲಿ ವಿಷಯಗಳನ್ನು ನಿರೂಪಿಸಿದೆ. ಮುಖ್ಯರಾದ ಆಯುರ್ವೇದ-ವಿದರು, ಅವರ ಕೃತಿಗಳು, ಔಷಧದ್ರವ್ಯ-ಸಂಪತ್ತು ಮುಂತಾದ ಎಲ್ಲ ವಿಷಯಗಳನ್ನು ಈ ಕೃತಿಗಳು ಒಳಗೊಂಡಿವೆ. ನಮ್ಮ ದೇಶದ ಔಷಧ-ಪ್ರಕ್ರಿಯೆಗಳಷ್ಟೇ ಅಲ್ಲದೆ, ವಿದೇಶದ ವೈದ್ಯಕವನ್ನು ಕುರಿತಾದ ಲೇಖಗಳೂ ಇಲ್ಲಿವೆ. ಉದಾಹರಣೆಗೆ Arabian Medicine ಎಂಬ ಬಗ್ಗೆ ೩ ಪುಟಗಳಷ್ಟು ವಿಷಯಗಳಿವೆ. ಚರಕ-ಚರಕ-ಸಂಹಿತೆಗಳನ್ನು ಕುರಿತಾಗಿ ೫ ಪುಟಗಳಿವೆ. ಚೀನಾ-ದೇಶದ ವೈದ್ಯಕವನ್ನು ೩ ಪುಟಗಳಲ್ಲಿ ತಿಳಿಸಿದೆ. ೪ ಪುಟಗಳಷ್ಟು ಗ್ರಂಥಾವಳಿಯಿದೆ. ನಾನಾಭಾಷೆಗಳಲ್ಲಿನ ಆಯುರ್ವೇದ-ಗ್ರಂಥಗಳ ಒಂದೊಂದು ಪುಟದ ಚಿತ್ರವನ್ನು ಫೋಟೋ-ಕಾಪಿ ಮಾಡಿ ಸೇರಿಸಿದ ೧೬ ಪುಟಗಳಿವೆ.
ಇದಲ್ಲದೆ ತಮ್ಮ ದರ್ಶನೋದಯವೆಂಬ ಗ್ರಂಥದಲ್ಲಿ ಸುಮಾರು ೭೦ ಪುಟಗಳಷ್ಟು ದೀರ್ಘವಾಗಿ ಆಯುರ್ವಿಜ್ಞಾನವನ್ನು ನಿರೂಪಿಸಿದ್ದಾರೆ. ಈ ಕೃತಿಗಳಲ್ಲೆಲ್ಲಾ ಅನೇಕ ವಿಷಯಗಳು ಪುನರುಕ್ತವಾಗಿರುವುದೂ ಉಂಟು. ವಿಭಿನ್ನ-ಕಾಲಗಳಲ್ಲಿ ವಿಭಿನ್ನ-ಪ್ರಕಾಶಕರಿಗಾಗಿ ವಿಭಿನ್ನ-ವಾಚಕರಿಗಾಗಿ ಬರೆದ ಪುಸ್ತಕಗಳಿವಾದ್ದರಿಂದ ಈ ಬಗೆಯ ಪುನರುಕ್ತಿಗಳು ಅನಿವಾರ್ಯವೂ ಹೌದು.
ಅವರ Indian Medicine in Tibet ಎಂಬುದು ೨೮ ಪುಟಗಳನ್ನೊಳಗೊಂಡ ಒಂದು ಅನುಬಂಧ (ತಮ್ಮ ದರ್ಶನೋದಯ-ಕೃತಿಗೆ). ದರ್ಶನೋದಯವು ೧೯೯೮ರಲ್ಲಿ ಪ್ರಕಟವಾದ ಕೃತಿ. ೩೨೩ ಪುಟಗಳನ್ನು ಹೊಂದಿದೆ.
Mental Health in Ayurveda ಎಂಬ ಅವರ ಮತ್ತೊಂದು ಕೃತಿಯು ಮೊದಲ ಬಾರಿಗೆ ೧೯೮೫ರಲ್ಲಿ ಪ್ರಕಟವಾಗಿದ್ದು, ೨೦೦೦ದಲ್ಲಿ NIMHANS ಸಂಸ್ಥೆಯಿಂದ ಮರುಪ್ರಕಟವಾಗಿದೆ. ೧೯೮೫ರಲ್ಲೇ ಆರು ಪುಟಗಳ ಒಂದು ಲೇಖನವೂ ಪ್ರಕಟವಾಗಿದೆ. ಅದರ ಹೆಸರು – The conception of Nadi – its examination ಎಂದು. ಇದು ಒಂದು ಜರ್ನಲ್ಲಿನಲ್ಲಿ ಪ್ರಕಟವಾದ ಕೃತಿ.
ಪಾಶ್ಚಾತ್ಯ–ವೈದ್ಯದಿಂದಾದ ಈಚಿನ ಆಕ್ರಮಣ
ಆಯುರ್ವೇದದ ಜಾನಪದ-ಮೂಲವನ್ನು ಚಿತ್ರಿಸುತ್ತಾ, ರಾಮಚಂದ್ರರಾಯರು ಹೀಗೆ ಹೇಳಿದ್ದಾರೆ: “ಭಾರತದಲ್ಲಿ ದೀರ್ಘಕಾಲದಿಂದ ಬಳಕೆಯಲ್ಲಿದ್ದ ಒಂದೇ ವೈದ್ಯ-ಪದ್ಧತಿಯೆಂದರೆ ಆಯುರ್ವೇದ. ೧೮೫೭ರಲ್ಲಿ ಪಾಶ್ಚಾತ್ತ್ಯ -ವೈದ್ಯವನ್ನು ಕಲಿಸುವ ಕಾಲೇಜುಗಳು ಭಾರತದ ನಾಲ್ಕು ನಗರಗಳಲ್ಲಿ ಆರಂಭಗೊಂಡವು, ಬ್ರಿಟಿಷರ ಆಳ್ವಿಕೆಯು ಬಂದಮೇಲೆ. ಅದಾಗಿ ಒಂದು ಕಾಲು ಶತಮಾನವು ಕಳೆದ ಮೇಲೆಯೇ ಈ ಆಧುನಿಕ-ವೈದ್ಯವು ಭಾರತದಲ್ಲಿ ಬಳಕೆಗೆ ಬಂದದ್ದು. ಆದರೂ ಇಂದು ಅದರ ವ್ಯಾಪ್ತಿಯು, ವಿಶೇಷವಾಗಿ ನಗರಗಳಲ್ಲಿ, ಅಚ್ಚರಿ ಮೂಡಿಸುವಂತಹುದೇ ಸರಿ.’’
ಇಲ್ಲಿಯ ಜಾನಪದ-ವೈದ್ಯವನ್ನು ಪಾಶ್ಚಾತ್ತ್ಯ-ವೈದ್ಯವು ಹಿಮ್ಮೆಟ್ಟಿಸುತ್ತಿರುವುದಕ್ಕಿಂತಲೂ ಆಶ್ಚರ್ಯಕರವಾದುದೆಂದರೆ ಜನ-ಮಾನಸದ ಮೇಲೆ ಪಾಶ್ಚಾತ್ತ್ಯ-ವೈದ್ಯವು ಒತ್ತಿರುವ ಅಚ್ಚು. ಇದಕ್ಕೆ ಕಾರಣವನ್ನು ರಾಮಚಂದ್ರರಾಯರು ಗುರುತಿಸಿಟ್ಟಿದ್ದಾರೆ. ನಮ್ಮ ವೇಷ-ಭೂಷಣಗಳೂ, ಆಹಾರ-ಆಚಾರಗಳೂ, ವಿಹಾರ-ವಿಚಾರಗಳೂ, ಭಾಷೆ-ಬಿನ್ನಾಣಗಳೂ ಆಧುನಿಕತೆಯತ್ತ ಒಲಿದಾಗ ವೈದ್ಯದ ಆಯ್ಕೆಯೂ ಆ ಕಡೆಗೂ ಒಲಿಯಿತು”. ಆದರೆ ಇದರ ಜೊತೆಗೇ ಮತ್ತೂ ಒಂದು ವಿಷಯವನ್ನು ಅವರು ಹೇಳಲು ಮರೆತಿಲ್ಲ. ಅದೆಂದರೆ “ಈ ನಾಗರಿಕತೆಯ ಗಾಳಿ ಅಷ್ಟಾಗಿ ಬೀಸುವೆಡೆಗಳಲ್ಲೂ ನಾಡವೈದ್ಯದ ಹದವು ಅಷ್ಟಾಗಿ ಕುಗ್ಗಿಲ್ಲ.’’
ಅವರು ಈ ಮಾತನ್ನು ಹೇಳಿ ಹಲವು ವರ್ಷಗಳಾಗಿವೆ. ಈಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆಯೆಂದೇ ಹೇಳಬೇಕು.
ಆಯುರ್ವೇದಕ್ಕಿರುವ ಜಾನಪದ ನೆಲೆ
ಇದಕ್ಕೆ ಕಾರಣಗಳನ್ನು ವಿಶದಪಡಿಸುತ್ತ ರಾಮಚಂದ್ರರಾಯರು ಹೇಳುತ್ತಾರೆ: ನಮ್ಮಲ್ಲಿ ಆಯುರ್ವೇದ ದಿನದಿನದ ಬದುಕಿಗೆ ಸಂಬಂಧಿಸಿದ್ದು ನಾವು ಮಾಡುವ ಊಟ, ಉಡುವ ಬಟ್ಟೆ, ಕೈಗೊಳ್ಳುವ ಕೆಲಸ – ಇವೆಲ್ಲವೂ ನಾಡವೈದ್ಯದ ಮೂಲತತ್ತ್ವಗಳನ್ನು ಅವಲಂಬಿಸಿದುವೇ”. ಬೇರೆ ಬೇರೆ ಋತುಗಳಲ್ಲಿಯ ಹಬ್ಬಹರಿದಿನಗಳಲ್ಲಿಯ ಭಕ್ಷ್ಯ-ಭೋಜ್ಯಗಳಾಗಲಿ, ನಿತ್ಯಗಟ್ಟಲೆಯ ಸ್ನಾನ, ಆಸನ, ವ್ಯಾಯಾಮ ಮೊದಲಾದುವುಗಳಾಗಲಿ, ಆಯುರ್ವೇದದ ತತ್ತ್ವಗಳನ್ನು ಅನುಸರಿಸಿ ಬಂದಿರತಕ್ಕವೇ.
ಆಯುರ್ವೇದವು ನಿರೂಪಿಸುವ ಸ್ವಸ್ಥವೃತ್ತ-ಸದ್ವೃತ್ತಗಳು ನಮ್ಮ ಜನದ ಸಂಸ್ಕೃತಿಗೆ ನೇರವಾಗಿ ಸಂಬಂಧಿಸಿದುವು. ಆಯುರ್ವೇದ-ಗ್ರಂಥಗಳಲ್ಲಿ ರೋಗಾನುತ್ಪಾದನೀಯವೆಂಬ ಅಧ್ಯಾಯವು ಕಾಣಸಿಗುವುದುಂಟು: “ಕೆಸರು ತುಳಿದು ಕಾಲು ತೊಳೆದುಕೊಳ್ಳುವುದಕ್ಕಿಂತ ತುಳಿಯದಿರುವುದೇ ಲೇಸು” – ಎನ್ನುವಂತೆ. ಪ್ರಕ್ಷಾಲನಾದ್ಧಿ ಪಂಕಸ್ಯ ದೂರಾದ್ ಅಸ್ಪರ್ಶನಂ ವರಮ್!
ಹಳ್ಳಿಯ ಮದ್ದು, ಅಜ್ಜಿಯ ಮದ್ದು – ಮುಂತಾದುವಲ್ಲಿ ಆಯುರ್ವೇದಜ್ಞಾನವು ಊರಿದೆ. ಚರಕನೇ ತೋರಿಸುವಂತೆ ದನಕಾಯುವವರು, ಬೇಡರು, ಕಾಡುಜನರು, ತಪಸ್ವಿಗಳು – ಇವರಿಂದ ಈ ಚಿಕಿತ್ಸೆಯ ಬಗೆಗಳು ಉಳಿದುಬಂದಿವೆ.
ಆಯುರ್ವೇದ ಎಂದರೇನು?
ಈ ಪ್ರಶ್ನೆಯನ್ನು ಹಾಕಿಕೊಂಡು, “ಆಯುರ್ವಿಂದತಿ ವೇತ್ತಿ ಚ” ಎಂಬ ಪ್ರಸಿದ್ಧ ವ್ಯುತ್ಪತ್ತಿಯನ್ನು ಕೊಟ್ಟಿದ್ದಾರೆ. ಆಯುಸ್ಸನ್ನು ಅರಿಯುವುದು, ಪಡೆದುಕೊಳ್ಳುವುದು – ಇವೆರಡೂ ಈ ವಿದ್ಯೆಯಿಂದ ಸಾಧಿತವಾಗುವುವು. ನಮ್ಮ ಸುಖ-ದುಃಖಗಳಿಗೆ ಆಗಿಬರುವ ಹಿತಾಹಿತಗಳನ್ನು ತಿಳಿಸಿಕೊಡುವ ವಿದ್ಯೆಯೇ ಆಯುರ್ವೇದ. ಆಯುರ್ವೇದವನ್ನು ಐದನೆಯ ವೇದವೆಂದಿರುವುದೂ ಉಂಟು. ಅಥರ್ವವೇದದ ಉಪವೇದವಾಗಿ ಇದನ್ನು ಪರಿಗಣಿಸಲಾಗಿದೆ. ಅಥರ್ವದಲ್ಲಿ ಭೈಷಜ್ಯವೆಂಬ ಭಾಗವಿದೆ.
ಆಯುರ್ವೇದದ ವ್ಯಾಪ್ತಿ
ಕಾಶ್ಮೀರದಿಂದ ಕೇರಳದವರೆಗೆ, ಗುಜರಾತಿನಿಂದ ಬಂಗಾಳದವರೆಗೆ ಒಂದೇ ಬಗೆಯಾಗಿ ಹರಡಿಕೊಂಡಿರುವ ವೈದ್ಯ-ಪದ್ಧತಿ, ಆಯುರ್ವೇದ. ಬರೀ ಇಲ್ಲಿ ಮಾತ್ರವೇನು, ನೇಪಾಳ, ಟಿಬೆಟ್, ಬರ್ಮ (ಇಂದಿನ ಮ್ಯಾನ್ಮಾರ್), ಶ್ರೀಲಂಕಾ, ಇಂಡೋನೇಷ್ಯಾ – ಇಲ್ಲೆಲ್ಲ ಆಯುರ್ವೇದವಿದ್ದದ್ದೇ. ಕೊನೆಗೆ ದೂರದೇಶಗಳಾದ ಅಲೆಗ್ಸಾಂಡ್ರಿಯ, ಅರೇಬಿಯ, ಇತ್ತ ಚೀಣ, ಮಂಗೋಲಿಯಗಳಲ್ಲೂ ಆಯುರ್ವೇದದ ಪ್ರಭಾವವಿರುವುದು.
ಭಾರತದಲ್ಲಿಯೇ ವೈದಿಕರೂ, ಬೌದ್ಧರೂ, ಜೈನರೂ, ಯೋಗಿಗಳೂ, ನಾಥ-ಸಿದ್ಧರೂ, ತಾಂತ್ರಿಕರೂ ಆಯುರ್ವೇದವನ್ನು ಬೆಳೆಸಿದ್ದಾರೆ. ಚರಕ-ಸುಶ್ರುತ-ವಾಗ್ಭಟರ ಮಾತಿಗೆ ಇಡೀ ದೇಶದಲ್ಲಿ ಬೆಲೆಯಿದೆ. ಇದರ ಜೊತೆಗೆ ಬಂಗಾಳದಲ್ಲಿ ರಸ-ವಿದ್ಯೆಯೂ, ಕೇರಳದಲ್ಲಿ ವಿಷ-ವೈದ್ಯವೂ ವಿಶೇಷವಾಗಿ ಬೆಳೆದುಬಂದವು.
ವೈದ್ಯ–ವಿದ್ಯೆಯು ಬೇಕೇಕೆ?
ನಮ್ಮೆಲ್ಲರ ಆರೋಗ್ಯವೂ ಒಮ್ಮೆಯೋ ಮತ್ತೊಮ್ಮೆಯೋ ಕೆಡುವುದುಂಟಷ್ಟೆ? ಅದೇಕೆ ಕೆಡುತ್ತದೆ? – ಎಂಬುದನ್ನು ಅರಿತರೆ, ಪರಿಹಾರದ ಬಗ್ಗೆ ಯೋಚನೆ ಮಾಡಬಹುದಷ್ಟೆ? ರೋಗದ ಆಗಮನ, ರೋಗವು ಸ್ಥಾಪಿತವಾಗುವ ಬಗೆ, ಊರುವ ಬಗೆ, ಅದು ತೋರಿಕೊಳ್ಳುವ ಪರಿ, ಅದರ ಪರಿಹಾರ – ಇವೆಲ್ಲವನ್ನೂ ತಿಳಿಯುವುದು ಅವಶ್ಯವಷ್ಟೆ?
ಜ್ವರವು ಬಂದಾಗ ಮೈಬಿಸಿಯಾಗುವುದಲ್ಲವೇ? ಶರೀರತಾಪವು ಒಳಗಿರುವ ರೋಗದ ಒಂದು ಲಕ್ಷಣ. ತಾಪವನ್ನಿಳಿಸಿದ ಮಾತ್ರಕ್ಕೆ ಮೂಲತಃ ರೋಗವು ಉತ್ಪಾಟಿತವಾಗಿದೆಯೆಂಬ ಭ್ರಮೆ ಬರಬಾರದಷ್ಟೆ.
ಇಷ್ಟಲ್ಲದೆ, ಆರೋಗ್ಯಪ್ರಾಪ್ತಿಯತ್ತ ಶರೀರವು ಸ್ವತಃ ಯತ್ನಿಸುತ್ತಲೇ ಇರುತ್ತದೆ. ಅದಕ್ಕೊಂದಿಷ್ಟು ಸಹಕಾರವನ್ನು ಕೊಡುವುದೆಷ್ಟೋ ಅಷ್ಟೇ ವೈದ್ಯರು ಮಾಡುವುದು.
ಈ ಶರೀರವನ್ನೂ ಪ್ರಕೃತಿಯನ್ನೂ ತಾತ್ತ್ವಿಕವಾಗಿ ಅರಿತುಕೊಳ್ಳದೆ ವೈದ್ಯವಿದ್ಯೆಯು ಯಥಾವತ್ತಾಗಿಯೂ ಫಲಕಾರಿಯಾಗಿಯೂ ಬೆಳೆಯದು. ತಾತ್ತ್ವಿಕವಾದ ಹಿನ್ನೆಲೆಯನ್ನು ಕೊಡಲು ಗ್ರೀಕರ ವೈದ್ಯದಲ್ಲಿ ಕಿಂಚಿತ್ತಾದ ಯತ್ನವಾಯಿತಾದರೂ ಅದು ಮಧ್ಯಯುಗದಲ್ಲಿ ಮರೆಯಾದದ್ದನ್ನು ರಾಮಚಂದ್ರರಾಯರು ಗುರುತಿಸಿದ್ದಾರೆ. ಅಲ್ಲದೆ, ಭಾರತದಲ್ಲಿ ಮಾತ್ರ ಆರಂಭದಿಂದಲೂ ಆಯುರ್ವೇದಕ್ಕೆ ಅವಶ್ಯವೆನಿಸುವ ತತ್ತ್ವದೃಷ್ಟಿಯು ಅನುಸ್ಯೂತವಾಗಿ ಬಂದಿರುವುದನ್ನೂ ಸ್ಪಷ್ಟಪಡಿಸಿದ್ದಾರೆ.
ಷಡ್-ದರ್ಶನಗಳಲ್ಲಿ ಅತ್ಯಂತ ಪ್ರಾಚೀನವೆನಿಸುವುದು ಕಪಿಲ-ಮಹರ್ಷಿಯ ಸಾಂಖ್ಯ-ಸಿದ್ಧಾAತ. ರಾಮಚಂದ್ರರಾಯರು ಹೇಳುವಂತೆ, ಅದುವೇ “ಬೌದ್ಧ, ಜೈನ, ಯೋಗ, ವೇದಾಂತ – ಮೊದಲಾದ ದರ್ಶನಗಳ ಮೂಲಪ್ರಕ್ರಿಯೆಗಳನ್ನು ಒದಗಿಸಿರುವುದು”. ಆಯುರ್ವೇದದಲ್ಲಿ ನ್ಯಾಯ-ವೈಶೇಷಿಕದರ್ಶನಗಳ ಅಳವಡಿಕೆಯು ಸಹ ಜೊತೆಗೇ ಸೇರಿಕೊಂಡೇ ಬಂದಿದೆ.
ಶರೀರ–ಶರೀರಿ
ಶರೀರವೂ ಜಗತ್ತೂ ಪಂಚಭೂತಗಳಿಂದ ನಿರ್ಮಿತವಾಗಿರತಕ್ಕವು. ಮೂಲತಃ ತ್ರಿಗುಣಗಳ ವ್ಯಾಪಾರವೇ ಇವೆರಡರ ಹಿಂಬದಿಯಲ್ಲೂ ಇರುವುದು. ಶರೀರವು ಪಾಂಚಭೌತಿಕವಾದರೂ ಇದನ್ನೇ ಆಧಾರವಾಗಿಟ್ಟುಕೊಂಡು ಚೈತನ್ಯವು ಶರೀರದಲ್ಲಿ ನೆಲೆಗೊಂಡಿರುವುದು. ಶರೀರವು ಆ ಚೈತನ್ಯಕ್ಕಾಗಿಯೇ ಇರುವುದರಿಂದ, ಜೀವತತ್ತ್ವ ಅಥವಾ ಚೈತನ್ಯವು ಶರೀರಿಯೆನಿಸುತ್ತದೆ.
ಶರೀರವೆಂದಾಗ ಬರಿಗಣ್ಣಿಗೇ ಕಾಣುವ ಕೈಕಾಲು-ತಲೆ ಮುಂತಾದವಲ್ಲದೆ, ಬರಿಗಣ್ಣಿಗೆ ಗೋಚರಿಸದ ಹೃದಯ-ಜಠರಗಳೂ ಮೂಳೆ-ಮಾಂಸಗಳೂ, ಸ್ನಾಯು-ಧಮನಿಗಳೂ ಸೇರುತ್ತವಷ್ಟೆ.
ಇವಲ್ಲದೆ, ಪಂಚಜ್ಞಾನೇಂದ್ರಿಯಗಳೂ (ಕಣ್ಣು-ಕಿವಿಗಳು, ಮೂಗು-ನಾಲಿಗೆಗಳು, ಹಾಗೂ ಚರ್ಮ), ಹಾಗೂ ಪಂಚಕರ್ಮೇಂದ್ರಿಯಗಳೂ (ಕೈಕಾಲುಗಳು, ಪಾಯು-ಉಪಸ್ಥಗಳು – ಎಂದರೆ ಮಲವಿಸರ್ಜನಾಂಗ- ಜನನೇಂದ್ರಿಯಗಳು, ಹಾಗೂ ನಾಲಿಗೆ – ಎಂಬಿವು) ಸೇರುತ್ತವೆ. ಇವುಗಳ ಜೊತೆಗೆ ಮನಸ್ಸೆಂಬ ಇಂದ್ರಿಯವೂ ಸೇರಿಕೊಳ್ಳುತ್ತದೆ.
ಅಂತೂ ಔಷಧವನ್ನು ಕೊಡುವುದೆಂದರೆ ಶರೀರ-ಮನಸ್ಸು-ಚೈತನ್ಯ – ಇವು ಮೂರನ್ನೂ ಲೆಕ್ಕಕ್ಕೆ ತೆಗೆದುಕೊಂಡೇ ಕೊಡತಕ್ಕದ್ದು. ಹೀಗೆ ಸೇರುವಿಕೆಯೇ ಯೋಗವೆನಿಸುತ್ತದೆ.
ಕೆಲವು ಪಾರಿಭಾಷಿಕ–ಪದಗಳು
ಈ ಸಂದರ್ಭದಲ್ಲಿ ಆಯುರ್ವೇದದ ಮುಖ್ಯ ಪಾರಿಭಾಷಿಕಪದಗಳಾದ ಯೋಗ-ಸಮ್ಯಗ್ಯೋಗ-ಹೀನಯೋಗ-ಮಿಥ್ಯಾಯೋಗ-ಅತಿಯೋಗ-ಅಯೋಗ-ಅಸಾತ್ಮ್ಯೇಂದ್ರಿಯಾರ್ಥಯೋಗ ಹಾಗೂ ಪ್ರಜ್ಞಾಪರಾಧ – ಇವಿಷ್ಟನ್ನೂ ಪುಟ್ಟಪುಟ್ಟ ವಾಕ್ಯಗಳಲ್ಲಿ ರಾಮಚಂದ್ರರಾಯರು ಬಹಳ ವಿಶಿಷ್ಟವಾಗಿ ನಿರೂಪಿಸಿದ್ದಾರೆ.
ತ್ರಿದೋಷ–ತತ್ತ್ವ
ಆಯುರ್ವೇದದಲ್ಲಿ ಆರೋಗ್ಯ-ಅನಾರೋಗ್ಯಗಳೆರಡನ್ನೂ ತ್ರಿದೋಷಗಳ ಆಧಾರದ ಮೇಲೇ ವಿವರಿಸಲಾಗಿದೆ. ಮೂಲ-ಗ್ರಂಥಗಳೇ ತಿಳಿಸುವಂತೆ, “ರೋಗಸ್ತು ದೋಷ-ವೈಷಮ್ಯಂ, ದೋಷ-ಸಾಮ್ಯಮರೋಗತಾ”. ಈ ಮೂಲ-ವಾಕ್ಯವನ್ನು ಕೊಡದಿದ್ದರೂ ಈ ಮಾತಿನ ಯಥಾವತ್ತಾದ ಅನುವಾದವನ್ನಿತ್ತು ರಾಮಚಂದ್ರರಾಯರು ರೋಗತತ್ತ್ವವನ್ನು ವಿವರಿಸಿದ್ದಾರೆ. ಕಫ-ವಾತ-ಪಿತ್ತಗಳೇ ಆ ಮೂರು ದೋಷಗಳು. ಶರೀರ-ಗತವಾದ ಸಪ್ತ-ಧಾತುಗಳೂ – ಎಂದರೆ ರಸ-ರಕ್ತ-ಮಾಂಸಗಳು, ಮೇದಸ್(ಕೊಬ್ಬು)-ಅಸ್ಥಿ(ಮೂಳೆ)-ಮಜ್ಜಾಗಳು ಹಾಗೂ ಶುಕ್ರ – ಇವು ಏಳೂ ದೂಷ್ಯಗಳು – ಎಂದರೆ ದೋಷಗಳ ಏರುಪೇರಿನಿಂದಾಗಿ ಕೆಡಬಲ್ಲವು.
ತ್ರಿದೋಷಗಳಲ್ಲಿ ಪಂಚಭೂತಮಯತೆಯೇ ಇರುವುದು. ಪೃಥ್ವೀತತ್ತ್ವ-ಜಲತತ್ತ್ವಗಳಿಂದ ಕಫವೂ, ತೇಜಸ್ತತ್ತ್ವದಿಂದ ಪಿತ್ತವೂ, ವಾಯುತತ್ತ್ವ-ಆಕಾಶತತ್ತ್ವಗಳ ಸೇರ್ಪಡೆಯಿಂದ ವಾತವೂ ಉಂಟಾಗುತ್ತವೆ. ತ್ರಿದೋಷಗಳು ಇಡೀ ಶರೀರವನ್ನೇ ವ್ಯಾಪಿಸಿರುವುದಾದರೂ ಅವಕ್ಕೆ ಪ್ರಧಾನಕಾರ್ಯಕ್ಷೇತ್ರಗಳೂ ಉಂಟು. ಹೊಕ್ಕುಳಿನಿಂದ ಕೆಳಕ್ಕೆ ವಾತವೂ, ಹೊಕ್ಕಳಿನಿಂದ ಎದೆಯವರೆಗೆ ಪಿತ್ತವೂ, ಎದೆಯಿಂದ ಮೇಲಕ್ಕೆ ಕಫವೂ ತ್ರಿದೋಷಗಳ ಕ್ಷೇತ್ರವಾಗಿವೆ.
ಜಠರಾಗ್ನಿ
ನಾವು ಸೇವಿಸುವ ಆಹಾರವನ್ನು ಅರಗಿಸಿಕೊಂಡು ಅದರ ಸತ್ತ್ವವನ್ನೂ ಶರೀರದಲ್ಲೆಲ್ಲ ಹರಡಬೇಕೆಂದರೆ ಜಠರಾಗ್ನಿಯೆಂಬ ಕಲ್ಪನೆಯನ್ನು ಮಾಡಿಕೊಂಡಿದೆ – ಎಂಬ ವಿಷಯವನ್ನು ಹೇಳುತ್ತಾ, ಇದಕ್ಕೆ “ಹೊಟ್ಟೆಯುರಿ” ಎಂಬ ವಾಡಿಕೆಯ ಅರ್ಥವನ್ನು ಹಚ್ಚಬಾರದು! – ಎಂದು ಹಾಸ್ಯಚಟಾಕಿಯನ್ನೂ ರಾಮಚಂದ್ರರಾಯರು ಅಲ್ಲಿ ಹಾರಿಸಿದ್ದಾರೆ! ಇಂತಹ ನುಡಿಗಳಿಂದಾಗಿ ಅವರ ಬರಹವು ರಂಜಕವಾಗಿದೆ. ಈ ಸಂದರ್ಭದಲ್ಲೇ ಮಂದಾಗ್ನಿ-ತೀಕ್ಷ್ಣಾಗ್ನಿ-ವಿಷಮಾಗ್ನಿಗಳೆಂಬ ಪರಿಭಾಷೆಗಳನ್ನೂ ಸರಳವಾಗಿ ವಿವರಿಸಿದ್ದಾರೆ.
ತ್ರಿದೋಷ–ಕಾಲ–ಸಂಬಂಧ
ಶರೀರದಲ್ಲಿ ದೈಶಿಕವಾಗಿ ತ್ರಿದೋಷಗಳ ಸ್ಥಾನಗಳನ್ನು ಹೇಳುವಂತೆಯೇ ಪ್ರಕೃತಿಯಲ್ಲಿ ಕಾಲಿಕವಾಗಿಯೂ ತ್ರಿದೋಷಗಳ ವೇಳೆಗಳನ್ನು ಆಯುರ್ವೇದ ಗುರುತಿಸಿದೆ. ರಾಯರ ಮಾತಿನಲ್ಲೇ ಹೇಳುವುದಾದರೆ “ಹಗಲಾಗಲೀ ರಾತ್ರಿಯಾಗಲೀ ಮೊದಲ ನಾಲ್ಕು ಗಂಟೆಗಳು (ಮುಂಜಾನೆ ಮತ್ತು ರಾತ್ರಿಯ ಮೊದಲ ಭಾಗ) ಕಫ ಹೆಚ್ಚುವ ಕಾಲ. ಹತ್ತರಿಂದ ಎರಡರವರೆಗೆ (ಮಧ್ಯಾಹ್ನ ಮತ್ತು ನಡುರಾತ್ರಿ) ಪಿತ್ತದ ಕಾಲ. ಎರಡರಿಂದ ಆರರವರೆಗೆ (ಹಗಲು, ರಾತ್ರಿಗಳ ಕೊನೆಯ ಭಾಗ) ವಾತದ ಕಾಲ.
ಋತುಗಳಲ್ಲಿಯೂ ಈ ವಿಭಾಗವು ಗೋಚರವಾಗುತ್ತದೆ. ಗ್ರೀಷ್ಮರ್ತುವಿನಲ್ಲಿ ಛಳಿ ಹಾಗೂ ಗಾಳಿಗಳು ಇರುವುವಾಗಿ ಆಗ ವಾತ ಹೆಚ್ಚು. ಶರದೃತು-ಮಳೆಗಾಲಗಳಲ್ಲಿ ಪಿತ್ತ ಹೆಚ್ಚು. ಹೇಮಂತ-ವಸಂತಗಳಲ್ಲಿ ಕಫ ಹೆಚ್ಚು.
ತ್ರಿದೋಷ–ಆಹಾರ–ಸಂಬಂಧ
ಹಾಗೆಯೇ ಆಹಾರದಲ್ಲೂ ಷಡ್ರಸಗಳಲ್ಲೂ ತ್ರಿದೋಷ-ವ್ಯಾಪಾರವುಂಟು. ಸಿಹಿ-ಒಗರು-ಬಿರುಸುಗಳು ವಾತಕ್ಕೆ ಅನುಕೂಲ; ಹುಳಿ-ಖಾರ-ಉಪ್ಪುಗಳು ಪಿತ್ತಕ್ಕೆ; ಸಿಹಿ-ಹುಳಿ-ಕಾರಗಳು ಕಫ-ವರ್ಧಕ.
ತ್ರಿದೋಷಗಳ ಆಧಾರದ ಮೇಲೆ ತರಕಾರಿಗಳನ್ನೂ ವಿಂಗಡಿಸಬಹುದು. ಇತ್ತ ಶರೀರದಲ್ಲೂ ಕಫ-ವಾತ-ಪಿತ್ತಗಳ ನಾಡೀಗತಿಗಳನ್ನು ಗಮನಿಸಿಕೊಂಡೇ ಔಷಧವನ್ನು ಕೊಡುವುದೂ.
ಈ ತ್ರಿದೋಷಸಿದ್ಧಾಂತದ ಪ್ರಭಾವವನ್ನು ಯುನಾನೀ-ವೈದ್ಯದಲ್ಲೂ ಕಾಣಬಹುದು. ಗ್ರೀಕರಲ್ಲಿ ಈ ಬಗ್ಗೆ ಕಿಂಚಿತ್ತಾದ ಸಾಮ್ಯವು ತೋರುವುದಾದರೂ, ಆಯುರ್ವೇದದಲ್ಲಿ ಇವುಗಳ ಸರ್ವ-ವ್ಯಾಪಕತೆಯನ್ನು ನಿರೂಪಿಸಿರುವಂತೆ ಅವರಿಗೆ ಕಲ್ಪಿಸಿಕೊಳ್ಳಲೂ ಆಗಿಲ್ಲವೆಂಬುದನ್ನು ರಾಮಚಂದ್ರರಾಯರು ಗಮನಿಸಿದ್ದಾರೆ.
ಆಯುರ್ವೇದದ ಅಷ್ಟಾಂಗಗಳು
ಆಯುರ್ವೇದದಲ್ಲಿಯ ಅಷ್ಟಾಂಗಗಳ ಉಲ್ಲೇಖವು ಮಹಾಭಾರತದಲ್ಲೇ ಬರುವುದನ್ನು ರಾಮಚಂದ್ರರಾಯರು ಎರಡು ಎಡೆಗಳಲ್ಲಿ ಸೂಚಿಸಿದ್ದಾರೆ. ಮೊದಲನೆಯ ಅಂಗವಾದ ಕಾಯ-ಚಿಕಿತ್ಸೆಯೆಂಬುದು ಮೊದಲನೆಯದು. ಆಯುರ್ವೇದದಲ್ಲಿ ಇದೇ ಮುಖ್ಯವಾದ ವಿಭಾಗವೆಂದೂ, ಚರಕ-ಸಂಹಿತೆಯು ಈ ವಿಭಾಗವನ್ನೇ ಹೆಚ್ಚಾಗಿ ಹಿಡಿದಿದೆಯೆಂದೂ, ರಾಮಚಂದ್ರರಾಯರು ಸೂಚಿಸಿದ್ದಾರೆ.
ಮೈಗೆ ಕಬ್ಬಿಣದ ಮೊಳೆಯ ಚೂರು ಮುಂತಾದವು ಚುಚ್ಚಿ ಒಳಗೆ ಸೇರಿಕೊಂಡುಬಿಡುವುದುಂಟು. ಅವನ್ನು ಶಲ್ಯವೆನ್ನುತ್ತಾರೆ. ಅವನ್ನು ತೆಗೆಯಲು ಶಸ್ತ್ರಪ್ರಯೋಗವು ಅವಶ್ಯ. ಮುಂದಿನ ಆರೈಕೆಯನ್ನು ಒಳಗೊಂಡ ಈ ಅಂಗಕ್ಕೆ ಶಲ್ಯ-ತಂತ್ರವೆಂದು ಹೆಸರು. ಇದು ಸುಶ್ರುತ-ಸಂಹಿತೆಯಲ್ಲಿ ವಿಶಿಷ್ಟವಾಗಿ ನಿರೂಪಿತವಾಗಿದೆ.
ಮೂರನೆಯದಾದ ಶಾಲಾಕ್ಯ-ತಂತ್ರವು ಊರ್ಧ್ವಾಂಗ-ಚಿಕಿತ್ಸೆಯೆನಿಸಿಕೊಳ್ಳುತ್ತದೆ. ಗಂಟಲು, ಕಿವಿ-ಕಣ್ಣು-ಮೂಗುಗಳು ಹಾಗೂ ತಲೆ – ಇಲ್ಲಿ ತೋರಿಕೊಳ್ಳುವ ರೋಗಗಳಿಗೆ ಇಲ್ಲಿ ಚಿಕಿತ್ಸೆಯನ್ನು ಹೇಳಿದೆ. ಶಲಾಕಾ ಎಂದರೆ ಸೂಜಿಯಂತಹ ಚೂಪಾದ ಶಸ್ತ್ರ. ಇದರ ಬಳಕೆಯು ಹೆಚ್ಚಾದ ಕಾರಣ ಈ ಅಂಗಕ್ಕೆ ಶಾಲಾಕ್ಯವೆಂಬ ಹೆಸರು. “ಇಂದು ಈ ವಿಭಾಗವು ಬೇರೆಯಾಗಿ ಬಳಕೆಯಲ್ಲಿಲ್ಲ” ಎಂಬ ಮಾತಿನಿಂದ ಇಂದು ಆಯುರ್ವೇದವು ನಡೆಯುತ್ತಿರುವ ಬಗೆಯನ್ನು ತಾವು ಗಮನಿಸಿರುವುದನ್ನು ರಾಮಚಂದ್ರರಾಯರು ಸೂಚಿಸಿದ್ದಾರೆ.
ನಾಲ್ಕನೆಯದಾದ ಕೌಮಾರ-ಭೃತ್ಯವು ಮಕ್ಕಳ ರೋಗ, ಬೆಳವಣಿಗೆ ಮುಂತಾದುವನ್ನು ಗಮನಿಸುತ್ತದೆ. ಬುದ್ಧನ ವೈದ್ಯನಾದ ಜೀವಕನು ಇದರಲ್ಲಿ ಪರಿಣತನೆಂದು ಪ್ರಸಿದ್ಧಿಯಿದೆ. ಭೂತ-ವಿದ್ಯೆಯೆಂಬ ಐದನೆಯ ಅಂಗವನ್ನು ಕುರಿತಾಗಿ ರಾಮಚಂದ್ರರಾಯರು ಹೇಳುವುದನ್ನು ಅವರ ಮಾತಿನಲ್ಲಿಯೇ ಹೇಳಬಹುದು: “ಇದರ ಹೆಸರಿನಿಂದ ಗಾಬರಿಪಡಬೇಕಾದ ಕಾರಣವಿಲ್ಲ. ಮನೋ-ರೋಗಗಳನ್ನು ಕುರಿತಾದದ್ದು ಇದು. ಉನ್ಮಾದ, ಅಪಸ್ಮಾರ ಮೊದಲಾದ ರೋಗಗಳು ಭೂತ-ಪಿಶಾಚ-ಗ್ರಹ ಮೊದಲಾದ ದುಷ್ಟ-ಶಕ್ತಿಗಳಿಂದ ಆದುವೆಂಬ ಕಲ್ಪನೆ ನಮ್ಮ ದೇಶದಲ್ಲಿದ್ದಂತೆ ಪಾಶ್ಚಾತ್ತ್ಯರಲ್ಲೂ ಈಚಿನವರೆಗೂ ಇದ್ದದ್ದೇ.’’
ಆರನೆಯದಾದ ಅಗದ-ತಂತ್ರವು ವಿಷ-ವೈದ್ಯವನ್ನು ಕುರಿತಾದದ್ದು. ಹಾವು-ಚೇಳುಗಳೂ ನಾಯಿ-ನರಿಗಳೂ ಕಚ್ಚಿದಾಗ, ನಮ್ಮನ್ನು ದ್ವೇಷಿಸುವವರು ನಮ್ಮ ಆಹಾರದಲ್ಲಿ “ಮದ್ದು ಹಾಕಿದಾಗ”, ಅದರಿಂದಾಗುವ ಬಾಧೆಯ ಪರಿಹಾರಕ್ಕೆ ಬೇಕಾದದ್ದೇ ಈ ತಂತ್ರ. ಇದರ ಜ್ಞಾನವು ಎಷ್ಟು ಪ್ರವೃದ್ಧವಾಗಿತ್ತು – ಎಂಬುದಕ್ಕೆ ಅಲೆಕ್ಸಾಂಡರನೇ ಇದನ್ನು ಮೆಚ್ಚಿದ್ದನ್ನು ರಾಮಚಂದ್ರರಾಯರು ಸೂಚಿಸಿದ್ದಾರೆ. ಕೇರಳದಲ್ಲಿ ಈ ವಿದ್ಯೆ ಹೆಚ್ಚು ಬೆಳೆದಿದೆ.
ರಸಾಯನವೆಂಬುದು ಏಳನೆಯದು. ಶರೀರಕ್ಕೆ ಮುಪ್ಪಾವರಿಸದಂತೆ, ಯೌವನವು ದೀರ್ಘವಾಗುವಂತೆ ಮಾಡುವ ವೈದ್ಯವಿದು. ಇಲ್ಲಿಯ ಔಷಧಗಳು ಸಿದ್ಧೌಷಧಗಳೆನಿಸುತ್ತವೆ. ಇದರಲ್ಲಿ ಪಾದರಸದ ಬಳಕೆ ಹೆಚ್ಚು. ಲೋಹದ ಬಳಕೆಯೂ ಉಂಟು. ಬಂಗಾಳ-ಅಸ್ಸಾಂಗಳಲ್ಲಿ ಈ ವಿದ್ಯೆ ಹೆಚ್ಚಾಗಿ ಬೆಳೆದದ್ದನ್ನು ರಾಮಚಂದ್ರರಾಯರು ಗಮನಿಸಿ ಗುರುತಿಸಿದ್ದಾರೆ.
ಎಂಟನೆಯದಾದ ವಾಜೀಕರಣವೆಂಬುದೇ ಕೊನೆಯ ಅಂಗ. ವೀರ್ಯ-ಧಾತು-ವರ್ಧನಾದಿಗಳು ಇದರ ವಿಷಯ. ಚರಕ-ಸುಶ್ರುತಗಳಲ್ಲಿ ಈ ಬಗ್ಗೆ ನಿರೂಪಣೆಯು ಹೆಚ್ಚಾಗಿಲ್ಲ.
ಹೀಗೆ ಅಂಗಗಳು ಎಂಟೆಂದಿದ್ದರೂ ಇಂದು ಹೆಚ್ಚು ಬಳಕೆಯಲ್ಲಿರುವುದು ಮೊದಲನೆಯ ಅಂಗವೊಂದೇ ಎಂದು ರಾಮಚಂದ್ರರಾಯರು ಸೂಚಿಸಿದ್ದಾರೆ.
ಪಶುವೈದ್ಯ–ವೃಕ್ಷಾಯುರ್ವೇದ
ಸಸ್ಯಗಳೂ ಪ್ರಾಣಿಗಳೂ ಪಾಂಚಭೌತಿಕವೇ ಆದ್ದರಿಂದ ಪಶುವೈದ್ಯ-ವೃಕ್ಷಾಯುರ್ವೇದಗಳೆಂಬ ವಿಶಿಷ್ಟ-ವಿಭಾಗಗಳೂ ಆಯುರ್ವೇದದಲ್ಲುಂಟು. ತ್ರಿದೋಷ-ಸಿದ್ಧಾಂತಕ್ಕೂ ಹಾಗೆಯೇ ಇಲ್ಲಿ ಅನ್ವಯವಿದೆ. ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಅಶೋಕನು ಪಶುಗಳಿಗೆಂದೇ ಬೇರೆ ಚಿಕಿತ್ಸಾಲಯಗಳನ್ನು ಏರ್ಪಡಿಸಿದ್ದುದು ಅವನ ಶಾಸನಗಳಿಂದ ತಿಳಿದುಬರುತ್ತದೆಯೆಂಬುದಾಗಿ ರಾಮಚಂದ್ರರಾಯರು ಒಕ್ಕಣಿಸಿದ್ದಾರೆ. ಆನೆಗಳ ರೋಗಗಳನ್ನು ಇಲ್ಲಿನ ವೈದ್ಯರು ಗುಣಪಡಿಸುತ್ತಿದ್ದುದನ್ನು ಮೆಗಾಸ್ತನೀಸನು ಗುರುತಿಸಿದ್ದಾನೆ.
ಹನ್ನೊಂದನೆಯ ಶತಮಾನದ ಆದಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಅಲ್-ಬಿರೂನಿಯು ಸಹ ಗಜ-ವೈದ್ಯವನ್ನು ಕುರಿತಾದ ಗ್ರಂಥವೊಂದು ಬಳಕೆಯಲ್ಲಿದ್ದುದನ್ನು ಉಲ್ಲೇಖಿಸಿದ್ದಾನೆ. ಚರಕ-ಸಂಹಿತೆಯಲ್ಲಿ ಸಿದ್ಧ-ಸ್ಥಾನವೆಂಬ ಪರಿಚ್ಛೇದದಲ್ಲಿಯೇ ಪಶು-ವೈದ್ಯದ ಪ್ರಸ್ತಾವವಿದೆ. ಆನೆ-ಕುದುರೆಗಳಲ್ಲದೆ ಜಿಂಕೆ-ಒಂಟೆಗಳು, ಹಾವು-ಇಲಿಗಳು, ಕೊನೆಗೆ ಗಿಡ-ಮರಗಳು – ಇವಕ್ಕೂ ಚಿಕಿತ್ಸೆಯುಂಟೆಂಬುದನ್ನು ಆಯುರ್ವೇದವು ಹೇಳುತ್ತದೆ. ಸೈನ್ಯಗಳಲ್ಲಿ ಆನೆಗಳೂ ಕುದುರೆಗಳೂ ಬೇಕಾಗಿದ್ದುದರಿಂದಲೇ ಗಜವೈದ್ಯ-ಅಶ್ವವೈದ್ಯಗಳು ಬೆಳೆದವು.
ಗೋ–ಅಶ್ವ–ಶ್ಯೇನಗಳ ವೈದ್ಯ
ಹಾಗೆಯೇ ಹಾಲು-ಮೊಸರು-ತುಪ್ಪಗಳು ಚೆನ್ನಾಗಿ ಉಂಟಾಗಲು ಗೋವುಗಳ ಆರೋಗ್ಯವೂ ಮುಖ್ಯವಾಗಿ ಗವಾಯುರ್ವೇದವೂ ಬೆಳೆದುಕೊಂಡಿತು.
ಅಶ್ವಾಯುರ್ವೇದ-ಗವಾಯುರ್ವೇದಗಳನ್ನು ನಕುಲ-ಸಹದೇವರಿಗೆ ದ್ರೋಣಾಚಾರ್ಯರೇ ಹೇಳಿಕೊಟ್ಟರೆಂಬ ಮಾತು ಮಹಾಭಾರತದಲ್ಲಿದೆ. ಅಶ್ವ-ಚಿಕಿತ್ಸೆಯೆಂಬ ಕೃತಿಯೊಂದಿದ್ದು ಅದನ್ನು ನಕುಲನು ಬರೆದನೆಂಬ ಪ್ರತೀತಿಯಿದೆ. ಹಾಗೆಯೇ ರಾಮಾಯಣದಲ್ಲಿ ಗಜಾಯುರ್ವೇದವನ್ನು ಪಾಲಕಾಪ್ಯನೆಂಬ ಋಷಿಯು ರೋಮಪಾದನಿಗೆ ಬೋಧಿಸಿದುದರ ಉಲ್ಲೇಖವಿದೆ.
ಶಾಲಿಹೋತ್ರನು ಸುಶ್ರುತನ ಗುರುವೆಂದೂ ಆತನು ಅಶ್ವಾಯುರ್ವೇದವನ್ನು ರಚಿಸಿದನೆಂದೂ ಪ್ರತೀತಿಯಿದೆ. ಅಶ್ವಗಳ ದೇಹ-ರಚನೆ, ಜಾತಿಗಳು, ತದನುಗುಣ ಸ್ವಭಾವಗಳು, ಅವುಗಳ ಪೋಷಣ-ಕ್ರಮ, ಅವಕ್ಕೆ ತಗುಲುವ ರೋಗಗಳು, ಅದಕ್ಕೆ ಬೇಕಾಗುವ ಚಿಕಿತ್ಸೆ – ಇವೆಲ್ಲವನ್ನೂ ಎಂಟು “ಸ್ಥಾನ”ಗಳಲ್ಲಿ ವಿವರಿಸಿದೆ. ಗ್ರಂಥವು ಭಾಗಶಃ ಲಬ್ಧವಾಗಿದೆ.
ಇನ್ನು ಇದೇ ರೀತಿಯಾಗಿ ಗೋವುಗಳ ವಿಷಯದಲ್ಲಿ ಇರುವ ಗ್ರಂಥವೆಂದರೆ ಗವಾಯುರ್ವೇದ. ಈ ಬಗ್ಗೆ ರಾಮಚಂದ್ರರಾಯರು ತಿಳಿಸುತ್ತಾ “ಗೋ-ವೈದ್ಯರು ಮೊನ್ನೆಮೊನ್ನೆಯವರೆಗೂ ಹಳ್ಳಿಗಳ ಕಡೆ ಇರುತ್ತಿದ್ದರು” ಎಂಬ ಸೂಚನೆಯನ್ನು ಕೊಡುತ್ತಾರೆ.
ಶ್ಯೇನ(ಹದ್ದು)ಗಳ ಬಗ್ಗೆಯೂ ಗ್ರಂಥವುಂಟು. ಶ್ಯೈನಿಕ-ಶಾಸ್ತ್ರವೆಂಬ ಕೃತಿಯಲ್ಲಿ ಹದ್ದುಗಳ ಅನಾರೋಗ್ಯ, ಚಿಕಿತ್ಸೆಗೆ ಬೇಕಾದ ಮದ್ದು – ಇವುಗಳನ್ನು ತಿಳಿಸಿದೆ. ಹದ್ದುಗಳನ್ನು ಸಾಕಿ ಅವುಗಳಿಂದ ಕೆಲಸಮಾಡಿಸಿಕೊಳ್ಳುತ್ತಿದ್ದ ಮಂದಿ ಅಂದು ಇದ್ದರು. ಬರೀ ರಾಜರುಗಳಲ್ಲದೆ ಅನೇಕ ಶ್ರೀಮಂತರೂ ಅವುಗಳಿಂದ ಉಪಯೋಗಪಡೆದುಕೊಳ್ಳುವುದಿರುತ್ತಿತ್ತು.
ವೃಕ್ಷಾಯುರ್ವೇದ
ಇನ್ನು ಗಿಡ-ಮರಗಳನ್ನು ಕುರಿತಾದದ್ದು ವೃಕ್ಷಾಯುರ್ವೇದ. ಕ್ರಿಸ್ತಪೂರ್ವ ಒಂದನೆಯ ಶತಮಾನದ ಪರಾಶರನ ಕೃತಿಯ ಹೆಸರೇ ವೃಕ್ಷಾಯುರ್ವೇದ. ಇದರ ಆವಶ್ಯಕತೆ ಬಹಳ ತೀವ್ರವಾಗಿಯೇ ಇದ್ದಿತೆಂದು ಹೇಳಬಹುದು. ಈಗಿನ ಕಾಲದಲ್ಲಿ ನಗರಗಳಲ್ಲಿ ಸ್ಥಳಾವಕಾಶವೇ ಕಡಮೆಯಾಗಿಹೋಗಿದೆ. ಆದರೆ ಹಿಂದೆ ಹಳ್ಳಿಗಳಿರಲಿ, ನಗರಗಳಲ್ಲೂ ಸಹ ವಿಶಾಲವಾದ ನಿವೇಶನಗಳು, ಮನೆಯ ಸುತ್ತ ಗಿಡಮರಗಳು ಸರ್ವೇಸಾಮಾನ್ಯವೇ ಆಗಿದ್ದವು.
ಆಯುರ್ವೇದವು ಔಷಧಗಳಿಗಾಗಿ ಅವಲಂಬಿಸುವುದು ಮುಖ್ಯವಾಗಿ ಗಿಡ-ಮರಗಳನ್ನೇ. ಆದ್ದರಿಂದ ಅವುಗಳ ಪರಿಚಯವು ಚೆನ್ನಾಗಿದ್ದರೆ ಅನೇಕ ವೈದ್ಯೋಪಚಾರಗಳು ಮನೆಯಲ್ಲೇ ನಡೆದುಹೋಗುವ ಅನುಕೂಲ-ಸಂನಿವೇಶವಿರುತ್ತಿತ್ತು. ಊರಿನೊಳಗೆ ಉದ್ಯಾನ-ವನ, ಊರಿನಾಚೆ ವನ – ಇವು ಇರುತ್ತವೆಂದೇ ಹೇಳಲೇಬೇಕಾಗಿರಲಿಲ್ಲ.
ಸಂಸ್ಕೃತದಲ್ಲಿರುವ ಒಂದು ಗಾದೆಮಾತಿನಂತೆ, “ನಾಸ್ತಿ ಮೂಲಮ್ ಅನೌಷಧಮ್”. ಔಷಧವಾಗಿ ಬಳಕೆಗೆ ಬರದ ಮೂಲಿಕೆಯೆಂಬುದೇ ಇಲ್ಲ. ಗಿಡ-ಮರಗಳ ನಾರು-ಬೇರುಗಳೇ ವೈದ್ಯರ ಸರ್ವಸ್ವ. ಅವಾದರೂ ಎಲ್ಲೆಡೆ ಲಭ್ಯ. ಹೀಗಾಗಿ ಔಷಧಗಳ ಬೆಲೆಯೇ ಬಲು ಕಡಮೆ. ಔಷಧಗಳಿಗಾಗಿ ಇರುವ “ಮೆಡಿಕಲ್ ಶಾಪ್”ಗಳೇ ಅಂದು ಇದ್ದುದಿಲ್ಲ. ಔಷಧದಲ್ಲಿ ನಾನಾ-ದ್ರವ್ಯ-ಸಂಯೋಗಾದಿಗಳು ಬೇಕಾಗಿದ್ದಲ್ಲಿ ಅದನ್ನು ಆಯಾ ವೈದ್ಯರೇ ಮಾಡಿಕೊಡುತ್ತಿದ್ದರು. ಈ ಹಿನ್ನೆಲೆಯಲ್ಲಿ ವೃಕ್ಷಾಯುರ್ವೇದವೂ ನಮ್ಮಲ್ಲಿ ಚೆನ್ನಾಗಿಯೇ ಪ್ರಸರಿಸಿತು.
ಈ ಹಿನ್ನೆಲೆಯಲ್ಲಿ “ತರು-ಚಿಕಿತ್ಸಾ”, “ಉಪವನ-ವಿನೋದ” ಮೊದಲಾದ ಕೃತಿಗಳು ವಿರಚಿತವಾದವು. ಗಿಡ-ಮರಗಳಿಗೆ, ಲತಾ-ಗುಲ್ಮಗಳಿಗೆ ತಗಲುವ ರೊಗಗಳೇನು, ಅವಕ್ಕೆ ಬೇಕಾದ ಚಿಕಿತ್ಸೆಗಳೇನು, ಸಸ್ಯ-ಸಂಪತ್ತು ಸಮೃದ್ಧವಾಗಲು ಬೇಕಾದ ಗೊಬ್ಬರವೇ ಮೊದಲಾದ ಉಪಚಾರಗಳೇನು? – ಇವೆಲ್ಲವನ್ನೂ ಈ ಬಗೆಯ ಕೃತಿಗಳು ತಿಳಿಸಿಕೊಡುತ್ತಿದ್ದವು.
ಸಸ್ಯೌಷಧಗಳ ಹಿರಿಮೆ
ಆಯುರ್ವೇದದಲ್ಲಿ ಬಳಸುವ ಔಷಧಿಗಳು ಬಹುತೇಕ ಗಿಡಮರಗಳ ಅಂಗಗಳಿಂದಲೇ ತಯಾರಿಸುವಂತಹವು. ಕೆಮಿಕಲ್ಲುಗಳಿಂದ ತಯಾರಿಸಿದ ಔಷಧಗಳನ್ನು ಪಾಶ್ಚಾತ್ತ್ಯ-ವೈದ್ಯದಲ್ಲಿ ಕಾಣುತ್ತೇವೆ.
ಆದರೆ ಸಸ್ಯ-ರಾಶಿಯಿಂದಾದ ಔಷಧಿಗಳೇ ಪ್ರಶಸ್ತವಾದವು – ಎಂಬೀ ಬಾವವನ್ನು ಚೆನ್ನಾಗಿ ಬಿಂಬಿಸುವ ಎರಡು ಶ್ಲೋಕಗಳನ್ನು ರಾಮಚಂದ್ರರಾಯರು ಕೊಟ್ಟಿದ್ದಾರೆ. ಅವನ್ನು ರಚಿಸಿದವರು ಆದ್ಯ ಅನಂತಾಚಾರ್ಯರೆಂಬುವರು. ಅವು ಹೀಗಿವೆ:
ಸಹಜತ್ವಾತ್ ಸೇಂದ್ರಿಯತ್ವಾತ್ ಸ್ವದೇಶಿತ್ವೇನ ಸಾಮ್ಯತಃ |
ಸೌಲಭ್ಯಾತ್ ಸರ್ವ-ಲೋಕಾನಾಂ ಲಾಭಾಚ್ಚಾಲ್ಪಶ್ರಮೇಣ ಚ ||
ಮೂಲ್ಯೇನಾಲ್ಪೇನ ಲಭ್ಯತ್ವಾಚ್ಛೀಘ್ರಂ ರೋಗಾಪಹಾರತಃ |
ಚಿಕಿತ್ಸೌಷಧಿಜಾ ದೈವೀ ನೈವಾನ್ಯಾ ಸಾ ರಸಾದಿಜಾ ||
ಈ ಮಾತಿನ ಅರ್ಥವಿದು: ಆಯುರ್ವೇದದಲ್ಲಿ ಬಳಸುವ ಔಷಧಿಗಳು ಸಹಜವಾದವು, ಎಂದರೆ ಸೃಷ್ಟಿಯಲ್ಲಿ ತಾವಾಗಿ ಬೆಳೆದುಬಂದಿರತಕ್ಕವು. ಮನುಷ್ಯನ ಕೃತ್ರಿಮಗಳಿಂದಾದುವಲ್ಲ.
ಎರಡನೆಯದಾಗಿ, ಅವುಗಳೂ ಸೇಂದ್ರಿಯಗಳು (ಸಸ್ಯಗಳಿಗೂ ಜೀವವುಂಟೆಂದೂ, ಅದಕ್ಕೆ ಅವುಗಳಿಗಿರುವ ಐದೂ ಇಂದ್ರಿಯಗಳೇ ಲಕ್ಷಣವೆಂದೂ ಮಹಾಭಾರತದಲ್ಲಿ ಪ್ರತಿಪಾದಿತವಾಗಿದೆ. ಜೀವಿಗಳಿಗೆ ಅನ್ಯ-ಜೀವಿ-ಗತಾಂಶವು ಸುಲಭವಾಗಿ ಸಾತ್ಮ್ಯವಾಗುವ ತತ್ತ್ವವನ್ನು ನಾವು ಗಮನಕ್ಕೆ ತೆಗೆದುಕೊಳ್ಳಬಹುದು.)
ಮೂರನೆಯದಾಗಿ, ಅವುಗಳು ಸ್ವದೇಶಿಗಳು. ಎಂದರೆ ನಮ್ಮ ದೇಶದಲ್ಲೇ ಬೆಳೆಯತಕ್ಕವುಗಳು (ಎಂದರೆ ಅವುಗಳನ್ನು ವಿದೇಶಗಳಿಂದ ತರಿಸಿಕೊಳ್ಳಬೇಕಿಲ್ಲ ಎಂಬಂಶವೊಂದು. ಆ ಕಾರಣದಿಂದಲೇ ಅವುಗಳಿಗೆ ಬೆಲೆಯು ಹೆಚ್ಚು ತಗಲುವುದಿಲ್ಲವೆಂಬುದು ಮತ್ತೊಂದು). ನಾಲ್ಕನೆಯದಾಗಿ, ಅವುಗಳಲ್ಲಿ ಎಲ್ಲರಿಗೂ ಸೌಲಭ್ಯವುಂಟು, ಎಂದರೆ ಸುಲಭವಾಗಿ ಸಂಪಾದಿಸಬಹುದು. ಹಾಗೂ ಐದನೆಯದಾಗಿ, ಕಡಮೆ ಶ್ರಮದಿಂದ ಪಡೆಯಬಹುದು. ಆರನೆಯದಾಗಿ, ಅವುಗಳ ಬೆಲೆಯೂ ಕಡಮೆಯೆಂಬುದೂ ಮತ್ತೊಂದು.
ಹೀಗೆ ಈ ಆರು ಕಾರಣಗಳಿಂದಾಗಿ ಇದನ್ನು ದೈವೀ-ಚಿಕಿತ್ಸೆಯೆನ್ನಬಹುದು. ಆದರೆ ರಸಾದಿಜವಾದ ಔಷಧಕ್ಕೆ – ಎಂದರೆ ಪಾದರಸ ಮುಂತಾದವನ್ನು ಬಳಸಿ ಸಿದ್ಧಪಡಿಸಿದ ಔಷಧಗಳಲ್ಲಿ ಈ ಎಲ್ಲ ಅಂಶಗಳೂ ಕೂಡಿಬರುವುದಿಲ್ಲ.
ಔಷಧ-ತ್ರೈವಿಧ್ಯ
ವಾಸ್ತವವಾಗಿ ಒಂದಲ್ಲ ಒಂದು ಕಾಯಿಲೆಗೆ ಔಷಧವಾಗದ ವಸ್ತುವೇ ಜಗತ್ತಿನಲ್ಲಿಲ್ಲ. ಹೀಗಾಗಿ ಅನೌಷಧವೆನಿಸುವ ವಸ್ತುವೇ ಇರದು. ಹೀಗಾಗಿ ಔಷಧಗಳನ್ನು ಮೂರಾಗಿ ವಿಂಗಡಿಸಲಾಗಿದೆ. ಪಾರ್ಥಿವ, ಔದ್ಭಿದ, ಹಾಗೂ ಜಂಗಮ – ಎಂಬುದಾಗಿ. ಪಾರ್ಥಿವೌಷಧಗಳೆಂದರೆ ಪೃಥ್ವೀಗತವಾದವು, ಎಂದರೆ ಭೂಮಿಯೊಳಗಿರತಕ್ಕವು. ಮಣಿ-ಲೋಹ-ಖನಿಜಗಳೂ ಲವಣಗಳೂ ಈ ಲೆಕ್ಕಕ್ಕೇ ಬರತಕ್ಕವು.
ಇನ್ನು ಔದ್ಭಿದವೆಂದರೆ ಸಸ್ಯ-ಸ್ತೋಮ. ಸಸ್ಯಗಳಿಗೆ ಆ ಹೆಸರೇತಕ್ಕೆಂದರೆ, ಅವು ಭೂಮಿಯನ್ನು ಸೀಳಿಕೊಂಡು ಹೊರಬರತಕ್ಕವು. ಭಿದ್ ಎಂದರೆ ಭೇದಿಸುವುದು. ಉತ್ ಎಂದರೆ ಮೇಲಕ್ಕೆ. ಹೀಗೆ ಭೂಮಿಯನ್ನು ಭೇದಿಸಿಕೊಂಡು ಮೇಲೆ ಬರುವುವಾದ್ದರಿಂದ ಉದ್ಭಿದ್, ಉದ್ಭಿಜ್ಜ, ಉದ್ಭಿದ – ಎಂಬ ಮೂರು ಹೆಸರುಗಳು ಅವಕ್ಕಿವೆ. ಉದ್ಭಿದದಿಂದ ಬಂದಂತಹವು ಔದ್ಭಿದಗಳು. ಇವು ಎರಡನೆಯ ಬಗೆ.
ಮೂರನೆಯ ಬಗೆಯೆಂದರೆ ಜಂಗಮೌಷಧಿಗಳು. ಚಲನಶೀಲವಾದವು ಜಂಗಮಗಳು. ಎಂದರೆ ಪಶು-ಪಕ್ಷಿಗಳು, ಕೃಮಿ-ಕೀಟಗಳು. ಹಸುವು ಕೊಡುವ ಹಾಲು ಜೀವ-ಪೋಷಕ. ಅದು ಔಷಧವೂ ಆಗಬಲ್ಲದು. ಗೋವಿನ ಮೂತ್ರ-ಪುರೀಷಗಳೂ ಅಷ್ಟೇ, ಅನೇಕ ದೋಷಗಳನ್ನು ಪರಿಹರಿಸಬಲ್ಲುವು. ಜೇನುನೊಣಗಳಿಂದಾಗುವ ಜೇನುತುಪ್ಪವು ಹಲವು ಔಷಧ-ಗುಣಗಳಿಂದ ಯುಕ್ತವಾದದ್ದು. ಹಲವು ಪ್ರಾಣಿಗಳ ಕೊಂಬು-ಗೊರಸುಗಳು, ಮೂಳೆ, ಮೊದಲಾದ ಶರೀರದ ಹಲವು ಒಳಭಾಗಗಳು – ಇವಕ್ಕೆಲ್ಲಾ ಔಷಧೀಯ-ಗುಣಗಳಿವೆ.
ಇವೆಲ್ಲದರಲ್ಲೂ ಮದ್ದಿಗಾಗಿ ಹೆಚ್ಚಾಗಿ ಬಳಕೆಯಾಗುವ ವಸ್ತುಗಳೆಂದರೆ ಔದ್ಭಿದಗಳೇ. ಚರಕನು ಹೇಳಿರುವ ಔಷಧಿ-ದ್ರವ್ಯಗಳು ೫೭೪. ಅವಲ್ಲಿ ೧೭೦ ಪ್ರಾಣಿ-ಜನ್ಯ (ಜಂಗಮ), ಸುಮರು ೩೪೦ ಸಸ್ಯ-ಜನ್ಯ (ಔದ್ಭಿದ), ೬೪ ಖನಿಜ(ಪಾರ್ಥಿವ)-ದ್ರವ್ಯಗಳು.
ಸಸ್ಯ–ವಿಭಾಗ
ಔಷಧಿ-ವನಸ್ಪತಿ-ವೃಕ್ಷ-ಗುಚ್ಛ-ಗುಲ್ಮ-ತೃಣಜಾತಿ-ಪ್ರತಾನ-ವಲ್ಲೀ – ಇವುಗಳಲ್ಲಿ ಭೇದವನ್ನು ನೋಡುವುದು ಉಂಟು. ಮನು-ಸ್ಮöÈತಿಯ ಈ ಶ್ಲೋಕಗಳನ್ನು ಇಲ್ಲಿ ಗಮನಿಸಬಹುದು:
ಉದ್ಭಿಜ್ಜಾಃ ಸ್ಥಾವರಾಃ ಸರ್ವೇ ಬೀಜ-ಕಾಂಡ-ಪ್ರರೋಹಿಣಃ | ಔಷಧ್ಯಃ ಫಲಪಾಕಾಂತಾಃ ಬಹು-ಪುಷ್ಪ-ಫಲೋಪಗಾಃ || ಅಪುಷ್ಪಾಃ ಫಲವಂತೋ ಯೇ ತೇ ವನಸ್ಪತಯಃ ಸ್ಮೃತಾಃ | ಪುಷ್ಪಿಣಃ ಫಲಿನಶ್ಚೈವ ವೃಕ್ಷಾಸ್ತೂಭಯತಃ ಸ್ಮೃತಾಃ || ಗುಚ್ಛ-ಗುಲ್ಮಂ ತಂ ತ್ರಿವಿಧಂ ತಥೈವ ತೃಣಜಾತಯಃ | ಬೀಜ-ಕಾಂಡ-ರುಹಾಣ್ಯೇವ ಪ್ರತಾನಾ ವಲ್ಲ್ಯ ಏವ ಚ ||
ಇದನ್ನು ಕಿಂಚಿತ್ತಾಗಿ ವಿಸ್ತರಿಸುವುದಾದರೆ: ಆಲ, ಅರಳಿ, ಅತ್ತಿ ಮುಂತಾದವು ವನಸ್ಪತಿಗಳು – ಎಂದರೆ ಪುಷ್ಪಿಸದೆ ಫಲಿಸತಕ್ಕವು. ಮಾವು, ತೆಂಗು, ಮುಂತಾದವು ವೃಕ್ಷಗಳು – ಎಂದರೆ ಪುಷ್ಪಿಸಿ ಫಲಿಸತಕ್ಕವು. ದ್ರಾಕ್ಷಿ, ಮಲ್ಲಿಗೆ ಮುಂತಾದುವುಗಳು ಲತೆಗಳು. ಎಂದರೆ ಹಬ್ಬುವ ಕುಡಿಗಳಿಂದ ಕೂಡಿದವು. ಪಡವಲ, ಸೌತೆ, ಮೊದಲದವು ಓಷಧಿಗಳು – ಎಂದರೆ ಫಲ ಕೊಟ್ಟೊಡನೆ ಒಣಗತಕ್ಕವು.
ಇವೆಲ್ಲವುಗಳಲ್ಲಿ ಯಾವ ಭಾಗವು ಉಪಯೋಗಕ್ಕೆ ಬರದೆಂದು ಹೇಳಲಾಗದು. ರಾಮಚಂದ್ರರಾಯರು ತೋರಿಸುವಂತೆ “ದಂಟು, ಬೇರು, ನಾರು, ತೊಗಟೆ, ರಸ, ಎಲೆ, ತೈಲ, ಕಾಯಿ, ಚಿಗುರು, ಮುಳ್ಳು, ಹೂವು, ಹಾಲು – ಎಲ್ಲವೂ ಔಷಧಿಗಳಾಗಬಲ್ಲವು.”
ಔಷಧಿಗಳ ಪಟ್ಟಿಯ ಬೆಳವಣಿಗೆಯನ್ನು ರಾಮಚಂದ್ರರಾಯರು ಗುರುತಿಸುತ್ತಾ ಹೇಳುತ್ತಾರೆ: ವೇದಗಳಲ್ಲಿ ೧೦೦ ಗಿಡಗಳು, ಸುಶ್ರುತನಲ್ಲಿ ೩೮೫, ಧನ್ವಂತರಿ-ನಿಘಂಟಿನಲ್ಲಿ ೪೯೦ ಗಿಡಗಳು, ಜೊತೆಗೆ ೩೨೪ ಮೂಲಿಕೆಗಳು. ಮದನಪಾಲ-ನಿಘಂಟಿನಲ್ಲಿ ೮೭೦. ಬೃಹನ್ನಿಘಂಟು-ರತ್ನಾಕರದಲ್ಲಿ ೧೬೦೦. “ಇಂದು ಆಯುರ್ವೇದದಲ್ಲಿ ೨೦೦೦ಕ್ಕೂ ಮೀರಿದ ಔಷಧಿವರ್ಗದ ಗಿಡಮರಗಳಿವೆ. ಇವುಗಳಲ್ಲಿ ಸುಮಾರು ಐನೂರರಷ್ಟು ಬರಿಯ ಕ್ರಿಮಿನಾಶಕಗಳು; ಮತ್ತೆ ಒಂದು ನೂರರಷ್ಟು ವಿಷ-ದೂಷಣಿಗಳು, ಎಂದರೆ ವಿಷವನ್ನು ಹೋಗಲಾಡಿಸುವುವು. ಸಾಮಾನ್ಯವಾಗಿ ಮದ್ದಿಗೆ ಬರುವಂಥವು ೬೬೦ ಗಿಡಗಳು” – ಎಂದು ಅಂದಾಜು ಮಾಡಿದ್ದಾರೆ. ನೂರಾರು ವರ್ಷಗಳಿಂದ ವೈದ್ಯರ ದಿನಬಳಕೆಯಲ್ಲಿರುವುದೇನೋ ಸುಮಾರು ಇನ್ನೂರು ಅಷ್ಟೇ ಎಂಬುದಾಗಿ ರಾಮಚಂದ್ರರಾಯರು ಬರೆಯುತ್ತಾರೆ.
ಸಸ್ಯ–ವೈದ್ಯದ ಪ್ರಾಶಸ್ತ್ಯ
ಆಯುರ್ವೇದದಲ್ಲಿ ಬಳಸುವ ಗಿಡ-ಮೂಲಿಕೆಗಳು ಆಧುನಿಕ-ವೈದ್ಯದಲ್ಲಿ ಬಳಸತಕ್ಕ ರಾಸಾಯನಿಕ-ದ್ರವ್ಯಗಳಿಗಿಂತ ಹೇಗೆ ಪ್ರಶಸ್ತವೆಂಬುದನ್ನು ರಾಮಚಂದ್ರರಾಯರು ಯುಕ್ತವಾಗಿ ನಿರೂಪಿಸಿದ್ದಾರೆ: “ಮನುಷ್ಯರ ಶರೀರಕ್ಕೆ ಅವು ಹೊಂದಿಕೊಳ್ಳದೆ ಇರಬಹುದು. ಶರೀರದಲ್ಲಿ ಅರಗದೆ, ಇಂಗದೆ, ಮಾರ್ಪಡದೆ ಇದ್ದುಕೊಂಡು ಕಾಲಕ್ರಮದಲ್ಲಿ ತೊಂದರೆಯನ್ನು ಉಂಟುಮಾಡಬಹುದು.”
ಇಂದು–ಅಂದು
ಔಷಧವೆಂಬುದನ್ನು ಇಂದು ಮಾತ್ರೆಗಳ ರೂಪದಲ್ಲಿ ಅಂಗಡಿಯಲ್ಲಿ ಮಾರುವುದಕ್ಕೂ, ಕೊಳ್ಳುವುದಕ್ಕೂ ಒಯ್ಯುವುದಕ್ಕೂ ಸೇವಿಸುವುದಕ್ಕೂ ಸುಲಭವೆಂದು ತೋರಬಹುದು. ಭೂಯಿಷ್ಠವಾಗಿ ಕೃತಕವಾಗಿಹೋಗಿರುವ ಇಂದಿನ ಜೀವನಕ್ಕೆ ಇದೇ ಸುಗಮವೆನಿಸಬಹುದು.
ಆದರೆ ಇತ್ತೀಚಿನವರೆವಿಗೂ ಇದ್ದ ಕ್ರಮದಲ್ಲಿ ತನ್ನದೇ ಆದ ಸೌಕರ್ಯವಿತ್ತು. ಆಯುರ್ವೇದೌಷಧಿಗಳನ್ನು ತಯಾರಿಮಾಡುವುದು ತೀರಾ ಕಷ್ಟವೆಂದೇನಿರಲಿಲ್ಲ. ವೈದ್ಯರಿಗೆ ಅದು ಸುಕರವಾಗಿತ್ತು. ರೋಗಿಗೋ ಆತನ ಮನೆಯ ಮಂದಿಗೋ ಪರಿಚಾರಕರಿಗೋ ಕೂಡ ಅದು ಬಹಳ ಕಷ್ಟಸಾಧ್ಯವೆಂದೇನಿರಲಿಲ್ಲ. ಹೀಗಾಗಿ ತೀರ ದುಬಾರಿಯೆನಿಸದ ಔಷಧಗಳು, ತೀರ ಕ್ಲಿಷ್ಟವಲ್ಲದ ಔಷಧ-ನಿರ್ಮಾಣ-ಪ್ರಕ್ರಿಯೆ, ಜೊತೆಗೆ ಮದ್ದಿನ ಪ್ರಮಾಣದಲ್ಲಿ ಒಂದು ವೇಳೆ ಹೆಚ್ಚೋ ಕಡಮೆಯೋ ಆದಲ್ಲಿ ಸಹ ರೋಗಿಯ ಮೇಲೆ ಉತ್ಕಟವೋ ಭೀಕರವೋ ಆದ ಪರಿಣಾಮವಿಲ್ಲ – ಎಂಬೀ ಅಂಶಗಳು ಗಮನೀಯವಾದುವು.
ಪ್ರಾಚೀನರ ಆಹಾರ–ಪದ್ಧತಿ
ನಮ್ಮ ಪ್ರಾಚೀನರ ಆಹಾರ-ಪದ್ಧತಿಯ ಮೇಲ್ಮೆಯನ್ನು ಸಹ ಕೊಂಡಾಡಬೇಕಾದದ್ದೇ. ನಿತ್ಯಗಟ್ಟಲೆಯ ಆಹಾರಸೇವನೆಯಲ್ಲಿ ಸಹ ದೋಷಗಳನ್ನು ಹೊಡೆದುಹಾಕುವ ಅಂಶಗಳಿರುವುದು ಸರ್ವೇಸಾಮಾನ್ಯವಾಗಿದ್ದಿತು. ಬಳಸುವ ಸಾಂಬಾರ-ಪದಾರ್ಥಗಳೂ, ಮಸಾಲೆ-ದ್ರವ್ಯಗಳೂ, ಕಾಳು-ಬೇಳೆಗಳೂ, ಧಾನ್ಯಗಳೂ ಔಷಧವಾಗಬಲ್ಲವು.
ಈ ಸಂದರ್ಭದಲ್ಲಿ ರಾಮಚಂದ್ರರಾಯರು ಹೇಳುವ ಮಾತು ಅತ್ಯಂತ ಯುಕ್ತವಾಗಿದೆ. ಪ್ರಾಚೀನರ ಅಡುಗೆ-ಪದ್ಧತಿಗಳೂ ಊಟದ ಪದ್ಧತಿಗಳೂ – ಇವುಗಳಿಂದಾಗುವ ಆರೋಗ್ಯಲಾಭದ ಬಗ್ಗೆ ನಾವಿಂದು “ಆಲೋಚನೆ ಮಾಡಿದರೆ ಹಿಂದಿನವರ ಜಾಣತನಕ್ಕೆ ಅಚ್ಚರಿಪಡುತ್ತೇವೆ.” ಇದಕ್ಕಿಂತಲೂ ಹೆಚ್ಚಾಗಿ, ಆಧುನಿಕಪರಿಸ್ಥಿತಿಯನ್ನು ಅವರು ವಿಮರ್ಶಿಸಿರುವ ಬಗೆ ಇನ್ನೂ ಚೆನ್ನಾಗಿದೆ. “ಹಳೆಯ ಕಾಲದ ಊಟ-ಉಪಚಾರಗಳ ಸ್ವಾರಸ್ಯವನ್ನು ಈಗ ಮರೆತು ಹಲವು ರೋಗಗಳಿಗೆ ತುತ್ತಾಗಿದ್ದೇವೆಯೋ ಏನೋ ಎಂದೆನಿಸುತ್ತದೆ.”
ಕೋಶ–ನಿಘಂಟುಗಳು
ಆಯುರ್ವೇದವು ನೂರಾರು ಔಷಧಿ-ವನಸ್ಪತಿಗಳನ್ನು ತರು-ಲತೆಗಳನ್ನು ಅವಲಂಬಿಸುವುದರಿಂದ ಅವುಗಳೆಲ್ಲದರ ಪರಿಚಯವು ವೈದ್ಯನಿಗೆ ವಿಶೇಷವಾಗಿ ಇರಬೇಕಾಗುತ್ತದೆ; ತಕ್ಕಮಟ್ಟಿಗೆ ರೋಗಿಗೂ ಇರಬೇಕಾಗುತ್ತದೆ. ಆದರೆ ಈ ವಿಶಾಲವಾದ ದೇಶದಲ್ಲಿ ಒಂದೇ ಗಿಡಕ್ಕೇ ಬೇರೆ ಬೇರೆಡೆ ಬೇರೆ ಬೇರೆ ಹೆಸರುಗಳು. ಒಂದೇ ಹೆಸರಿನಲ್ಲಿ ಬೇರೆ ಬೇರೆ ಗಿಡಗಳು – ಇವೆಲ್ಲಾ ಸಹಜವೇ.
ಆದುದರಿಂದ ಇವುಗಳ ರೂಪ-ಆಕಾರಗಳನ್ನು ವರ್ಣ-ಜಾತಿಗಳನ್ನು ವೀರ್ಯ-ವಿಪಾಕಗಳನ್ನು ರಸ-ಪ್ರಭಾವಗಳನ್ನು ಅರಿಯಲೂ ಸ್ಮರಿಸಲೂ ಅನುಕೂಲವೆನಿಸುವ ಕೋಶ-ನಿಘಂಟುಗಳ ಆವಶ್ಯಕತೆಯು ಇದ್ದೇ ಇರುವುದು. ಚರಕನ ಕಾಲಕ್ಕೇ ನಿಘಂಟುಗಳಿದ್ದುವೆಂದು ತಿಳಿದುಬರುತ್ತದೆ. ಈಗ ಲಭ್ಯವಿರುವ ನಿಘಂಟುಗಳಲ್ಲಿ ಧನ್ವಂತರೀ-ನಿಘಂಟು ಕ್ರಿಸ್ತಶಕ ಆರನೆಯ ಶತಮಾನಕ್ಕೆ ಸೇರುತ್ತದೆ. ಮದನಪಾಲ-ನಿಘಂಟು ಹಾಗೂ ನರಹರಿಯ ರಾಜ-ನಿಘಂಟುಗಳು ೧೪ನೆಯ ಹಾಗೂ ೧೫ನೆಯ ಶತಮಾನದ ಕೃತಿಗಳೆಂದು ಹೇಳುತ್ತಾರೆ. ಬಳಕೆಯಲ್ಲಿ ಸುಮಾರು ಇಪ್ಪತ್ತು ನಿಘಂಟುಗಳಿವೆ.
ರೋಗ–ನಿದಾನ
ನಿದಾನಂ ಖಲು ಪರಮಾರ್ಥತೋಽಜ್ಞಾತ್ವಾಽನಾರಂಭಃ ಪ್ರತೀಕಾರಸ್ಯ – ಎಂಬ ಮಾತು ಕಾಳಿದಾಸನ ಶಾಕುಂತಲ ನಾಟಕದಲ್ಲಿ ಬರುವುದನ್ನು ಸ್ಮರಿಸಿಕೊಳ್ಳಬಹುದು. ಅದರ ಅರ್ಥ: ರೋಗದ ಮೂಲ-ಕಾರಣವನ್ನು ಯಥಾವತ್ತಾಗಿ ಅರಿತುಕೊಳ್ಳದೆ ರೋಗ-ಪ್ರತೀಕಾರವನ್ನು ಆರಂಭಿಸಲಾಗದು – ಎಂಬುದಾಗಿ. ಕಾಳಿದಾಸನಿಗೆ ಇದ್ದ ವೈದ್ಯ-ಪರಿಜ್ಞಾನವನ್ನು ಇದು ತೋರಿಸಿಕೊಡುತ್ತದೆ. ಕಾವ್ಯವೊಂದರಲ್ಲಿ ಇಂತಹ ಮಾತು ಬರುವುದಾದಲ್ಲಿ ಆಯುರ್ವೇದದ ತತ್ತ್ವಗಳು ಎಷ್ಟು ಪ್ರಚುರವಾಗಿದ್ದವು – ಕವಿಗಳಲ್ಲೂ, ಓದುಗ ಜನಸಾಮಾನ್ಯರಲ್ಲೂ – ಎಂಬುದನ್ನು ಗಮನಿಸಿಕೊಳ್ಳಬಹುದು.
ರೋಗಿ-ಪರೀಕ್ಷೆಯನ್ನು ಕುರಿತಾಗಿ ರಾಮಚಂದ್ರರಾಯರು ಹೇಳಹೊರಟಿರುವ ಒಂದು ಮುಖ್ಯಾಂಶವನ್ನು ಕಾಳಿದಾಸನ ಮಾತು ತಿಳಿಸುವುದರಿಂದ ಅದನ್ನು ಇಲ್ಲಿ ಉಲ್ಲೇಖಿಸಿದೆ. ನಿದಾನವೆಂದರೆ ರೋಗವು ಉಂಟಾದದ್ದು ಏತಕ್ಕೆ, ಹೇಗೆ – ಇತ್ಯಾದಿಗಳ ಅರಿವು. ನಿದಾನವೆಂದರೆ ಆದಿಕಾರಣ, ರೋಗ-ಲಕ್ಷಣವೆಂದರೆ ಅದು ಹೊರಗೆ ತೋರಿಕೊಳ್ಳುವ ಬಗೆ. ಈ ಬಾಹ್ಯ-ಲಕ್ಷಣಗಳನ್ನು ದಮನಮಾಡಿಬಿಟ್ಟಮಾತ್ರಕ್ಕೆ ರೋಗವನ್ನು ತೆಗೆದುಹಾಕಿಯಾಯಿತೆಂದು ಭ್ರಮಿಸಬಾರದು. ರೋಗದ ಬಾಹ್ಯ-ಲಕ್ಷಣಗಳನ್ನು ಮುಚ್ಚಿಹಾಕಿದಷ್ಟೇ ಕಾರಣಕ್ಕೆ ರೋಗವೇ ಪರಿಹೃತವಾಗುವುದಿಲ್ಲವಷ್ಟೆ. ರೋಗದ ಮೂಲಕ್ಕೇ ಹೋಗಬೇಕು. ಮೂಲ-ಕಾರಣವನ್ನೇ ಕಿತ್ತೊಗೆಯಬೇಕು. ಹೀಗೆ ನಿದಾನಕ್ಕೇ ಕೈಹಾಕಿ ಅದನ್ನೇ ಉತ್ಪಾಟನೆಮಾಡುವುದನ್ನು ನಿದಾನ-ಪರಿವರ್ಜನವೆನ್ನುತ್ತಾರೆ. ನಿದಾನವೆಂದರೆ ರೋಗ-ನಿಶ್ಚಯ, ಅರ್ಥಾತ್ ಆದಿ-ಕಾರಣ-ಪರಿಜ್ಞಾನ.
ತ್ರಿ–ಪ್ರಕಾರಕ ಚಿಕಿತ್ಸೆ
ಚಿಕಿತ್ಸಾ-ಪ್ರಯೋಗವು ತ್ರಿ-ಪ್ರಕಾರವಾದದ್ದು – ದೈವ-ವ್ಯಪಾಶ್ರಯ, ಯುಕ್ತಿ-ವ್ಯಪಾಶ್ರಯ ಹಾಗೂ ಸತ್ತ್ವಾವವಜಯ – ಎಂಬುದಾಗಿ ಅವುಗಳ ಹೆಸರುಗಳು. ವ್ಯಪಾಶ್ರಯವೆಂಬುದು ಅವಲಂಬನೆಯನ್ನು ಹೇಳುತ್ತದೆ.
ದೈವಾವಲಂಬಿಯಾದದ್ದು ದೈವ-ವ್ಯಪಾಶ್ರಯ. ಇದರಲ್ಲಿ ಮಣಿ-ಮಂತ್ರ-ಬಲಿ-ಹೋಮ – ಇವುಗಳು ಸೇರುತ್ತವೆ. ದೇವತೆಗಳನ್ನು ಒಲಿಸಿಕೊಂಡು, ನಮಗೆ ಬಂದಿರುವ ರೋಗಗಳನ್ನು ಪರಿಹರಿಸಿಕೊಳ್ಳುವ ಕ್ರಮವಿದು. ಇನ್ನು ಸತ್ತ್ವಾವಜಯವೆಂಬುದು ಮನಸ್ಸನ್ನು ಗೆಲ್ಲುವ ವಿಚಾರ; ಏಕೆಂದರೆ ಸತ್ತ್ವಾವೆಂದರೆ ಮನಸ್ಸು, ಇದು ಯೋಗ-ಮಾರ್ಗವನ್ನು ಸೂಚಿಸುತ್ತದೆ. ಈ ಮೂಲಕ ರೋಗಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಸತ್ತ್ವಾವಜಯವೆಂದು ಹೆಸರು. ರಾಮಚಂದ್ರರಾಯರ ಪ್ರಕಾರ ಈಗ ಹೇಳಿದ ಇವೆರಡು ಚಿಕಿತ್ಸಾ-ಪ್ರಕಾರಗಳಿಗೂ ರೋಗ-ನಿದಾನದ ಅಗತ್ಯ ಅಷ್ಟಾಗಿ ಇರದು.
ಆದರೆ ಯುಕ್ತಿ-ವ್ಯಪಾಶ್ರಯ-ಭೇಷಜವೆಂಬುದು ಹಾಗಲ್ಲ. ರಾಮಚಂದ್ರರಾಯರು ಹೇಳುವಂತೆ “ಮನುಷ್ಯನ ಬುದ್ಧಿ-ಶಕ್ತಿಯಿಂದ ರೋಗದ ಇತಿ-ಮಿತಿಗಳನ್ನು ಅರಿತುಕೊಂಡು, ಅದಕ್ಕೆ ತಕ್ಕಂತೆ ಮದ್ದು ಮಾಡುವುದು ಇದು. ಔಷಧಿಗಳ ಉಪಯೋಗ ಇರುವುದು ಇಲ್ಲಿಯೇ. ಸ್ವಸ್ಥ-ವೃತ್ತವನ್ನು ಹೇಳುವುದು ಇಲ್ಲಿಯೇ.”
ಸಾಮಾನ್ಯವಾಗಿ ನಾವು ವೈದ್ಯರ ಬಳಿ ಹೋದಾಗ ‘ಆ’ ಅನ್ನು ಎನ್ನುತ್ತಾರೆ. ನಾವು ಬಾಯಿ ಬಿಟ್ಟರೆ ನಮ್ಮ ನಾಲಿಗೆಯನ್ನು ಗಮನಿಸಿಯೇ ವೈದ್ಯರು ಹಲವು ನಿರ್ಧಾರಗಳಿಗೆ ಬರುವುದುಂಟು. ಹಾಗೆಯೇ ಕಣ್ಣನ್ನೂ ಗಮನಿಸಿಟ್ಟು ನೋಡುವುದುಂಟು. ಕಣ್ಣಿನ ಬಣ್ಣ, ಹೊಳಪು, ಚಾಂಚಲ್ಯ – ಮುಂತಾದುವನ್ನು ಗಮನಿಸಿ ಯಾವ ಯಾವ ದೋಷಗಳು ಎಷ್ಟೆಷ್ಟು ಕೆಲಸವನ್ನು ಎಲ್ಲೆಲ್ಲಿ ಮಾಡುತ್ತಿವೆ – ಎಂಬುದನ್ನು ಅರಿತುಕೊಳ್ಳುತ್ತಾನೆ.
ಕಣ್ಣು-ನಾಲಿಗೆಗಳಷ್ಟೇ ಅಲ್ಲದೆ ಇನ್ನೂ ಆರು ಸ್ಥಾನಗಳಲ್ಲಿ ವೈದ್ಯನು ಪರೀಕ್ಷೆಮಾಡಿ ಒಂದು ನಿರ್ಣಯಕ್ಕೆ ಬರುವುದೂ ಉಂಟು. ಹೀಗೆ ಒಟ್ಟು ಎಂಟು ಸ್ಥಾನಗಳಲ್ಲಿ ಪರೀಕ್ಷೆಯನ್ನು ಮಾಡಿ ರೋಗ-ನಿಶ್ಚಯಕ್ಕೆ ಬರುವುದರಿಂದ ಈ ಕ್ರಮಕ್ಕೆ ಅಷ್ಟ-ಸ್ಥಾನ-ಪರೀಕ್ಷಾ ಎಂದು ಹೆಸರು. ಆ ಉಳಿದ ಆರು ಅಂಗಗಳಿವು: ಶಬ್ದ-ಸ್ಪರ್ಶಗಳು, ಮಲ-ಮೂತ್ರಗಳು, ಸ್ವರೂಪ ಮತ್ತು ನಾಡಿಗಳು.
ನಾಲಿಗೆಯ ಬಣ್ಣ, ಅಂಟು, ಪದರ, ಶಾಖ, ಒರಟುತನ – ಇವು ಲೆಕ್ಕಕ್ಕೆ ಬರುತ್ತವೆ. ಹಾಗೆಯೇ ರೋಗಿಯ ಕಂಠದಿಂದ ಬರುವ ಧ್ವನಿಯ ಬಿರುಸು, ತೊದಲು, ಏರಿಳಿತ ಮುಂತಾದುವೂ ಲಕ್ಷಿಸಲ್ಪಡಬೇಕಾದ ಅಂಶಗಳು. ಮೈಯನ್ನು ಮುಟ್ಟುತ್ತಲೇ ಶರೀರದ ಶಾಖವೆಷ್ಟಿದೆಯೆಂಬುದು ಮುಖ್ಯವಾಗಿ ಗೋಚರವಾಗಬೇಕಾದ ಅಂಶವಾಗಬೇಕಾಗುತ್ತದೆ. ಹಾಗೆಯೇ ಚರ್ಮದ ನಯ ಅಥವಾ ಒರಟುಗಳೂ.
ಮಲ-ಮೂತ್ರಗಳಿಂದ ತಿಳಿದು ಬರುವ ಅಂಶಗಳು ಒಂದೆರಡಲ್ಲ. ಮಲದ ಬಣ್ಣ, ತೆಳುವು ಮುಂತಾದ ಅಂಶಗಳು ನಾನಾರೋಗಗಳ ನಾನಾ ಅವಸ್ಥೆಗಳನ್ನು ಸೂಚಿಸಬಲ್ಲವು. ಮೂತ್ರದ ವರ್ಣ, ಶಾಖ, ಉರಿಗಳಿಂದ ಅನುಮೇಯವಾದ ಅಂಶಗಳು ಹಲವಿವೆ. ಅನುಮೇಯವೆಂದರೆ, ಲಕ್ಷಣವು ಹೇಗಿದ್ದರೆ ಅದರ ಕಾರಣವು ಹೇಗಿದ್ದಿರಬೇಕು – ಎಂಬ ಲೆಕ್ಕಾಚಾರ. ದೇಹದ ಸ್ವರೂಪವೇ ಹಲಕೆಲವು ಸೂಚನೆಗಳನ್ನು ಕೊಡುವುದುಂಟು. ಮುಖವು ವಿಚ್ಛಾಯವಾಗಿದ್ದರೆ, ಎಂದರೆ ಕಾಂತಿಹೀನವಾಗಿದ್ದರೆ ಕೆಲ ವಿಷಯಗಳನ್ನು ಸೂಚಿಸೀತು. ಹಾಗೆಯೇ ಕೂಡುವ ಬಗೆ, ನಡೆದಾಡುವ ಬಗೆ – ಇವುಗಳಿಂದಲೂ ಮೇಯವಾದ, ಎಂದರೆ ಅಳೆದುಕೊಳ್ಳಬಹುದಾದ, ವಿಷಯಗಳಿವೆ.
ನಾಡೀ–ಪರೀಕ್ಷೆ
ನಾಡೀ-ಪರೀಕ್ಷೆಯೆನ್ನುವುದಂತೂ ಬಹಳ ಮುಖ್ಯವಾದ ವಿಷಯವೇ. ಮಣಿಕಟ್ಟಿನ ಸ್ಥಾನದಲ್ಲಿ ನಾಡೀಮಿಡಿತವು ಗೋಚರಿಸುವುದು. ಹೆಂಗಸರ ಎಡಗೈ-ಮಣಿಕಟ್ಟಿನಲ್ಲೂ, ಗಂಡಸರ ಬಲಗೈ-ಮಣಿಕಟ್ಟಿನಲ್ಲೂ ಇದು ಪರೀಕ್ಷ್ಯವಾದದ್ದು. ಶರೀರದ ಹದಿನಾಲ್ಕು ಎಡೆಗಳಲ್ಲಿ ನಾಡಿಗಳ ಬಡಿತವನ್ನು ನೋಡಬಹುದಾದರೂ ಮಣಿಕಟ್ಟಿನಲ್ಲಿ ನೋಡುವುದೇ ಪ್ರಶಸ್ತವಾದದ್ದು.
ವಾತ, ಪಿತ್ತ, ಕಫಗಳೆಂದು ಮೂರು ನಾಡಿಗಳು. ಹೆಬ್ಬೆರಳಿನ ಬುಡದಲ್ಲಿ ಮಣಿಕಟ್ಟಿನೆಡೆಯಲ್ಲಿ ಮೊಟ್ಟಮೊದಲು ಸಿಗುವ ನಾಡಿಯೇ ವಾತ-ನಾಡಿ. ಅದರ ಪಕ್ಕದಲ್ಲಿಯೇ ಗೋಚರವಾಗುವ ನಾಡಿಯು ಪಿತ್ತ-ನಾಡಿ. ಅದರ ಪಕ್ಕದಲ್ಲಿ ದೊರಕುವುದು ಶ್ಲೇಷ್ಮ-ನಾಡಿ ಅಥವಾ ಕಫ-ನಾಡಿ.
ವೈದ್ಯನು ತನ್ನ ತರ್ಜನಿಯಿಂದ (ಎಂದರೆ ತೋರುಬೆರಳಿನಿಂದ) ವಾತ-ನಾಡಿಯನ್ನು ನೋಡುವನು. ತನ್ನ ಮಧ್ಯಮೆಯಿಂದ (ಎಂದರೆ ನಡುಬೆರಳಿನಿಂದ) ರೋಗಿಯ ಪಿತ್ತ-ನಾಡಿಯನ್ನು ಗಮನಿಸುವನು. ಹಾಗೆಯೇ ತನ್ನ ಅನಾಮಿಕೆಯಿಂದ (ಎಂದರೆ ಉಂಗುರದ ಬೆರಳಿನಿಂದ) ಕಫ-ನಾಡಿಯನ್ನು ಅಳೆದುಕೊಳ್ಳುವನು.
ಈ ಮೂರೂ ನಾಡಿಗಳ ಬಡಿತವು ಹೇಗಿರುವುದೆಂಬ ಲೆಕ್ಕದ ಮೇಲೆ ರೋಗಿಯ ರೋಗದ ಸ್ವರೂಪವನ್ನು ಅಳೆಯಬಹುದು. ಆರೋಗ್ಯವಂತನ ನಾಡಿಗೂ ರೋಗಿಷ್ಠನ ನಾಡಿಗೂ ವ್ಯತ್ಯಾಸಗಳಿರುವುವು. ರಾಮಚಂದ್ರರಾಯರು ಹೇಳುವಂತೆ, “ಯಾವ ದೋಷವು ಹೇಗೆ ವಿಷಮವಾಗಿದೆಯೆಂದು ತಿಳಿದುಕೊಳ್ಳುವುದೇ ನಾಡೀ-ಪರೀಕ್ಷೆಯ ಉದ್ದೇಶ. ಈ ವಿಚಾರವಾಗಿ ಹಲವು ಗ್ರಂಥಗಳಿದ್ದರೂ, ಇದು ತುಂಬ ಕಷ್ಟವಾದ ಪರೀಕ್ಷೆ. ಅಭ್ಯಾಸದಿಂದಲೂ, ಸಮರ್ಥರಾದ ಗುರುಗಳಿಂದಲೂ ತಿಳಿಯಬೇಕಾದ ಶಾಸ್ತ್ರ ಇದು. ಮೇಲಾಗಿ ಅನುಭವ, ಅವಧಾನ, ಪ್ರತಿಭೆ ನಾಡೀ-ಪರೀಕ್ಷೆಯಲ್ಲಿ ಮುಖ್ಯವಾಗುತ್ತವೆ.’’
ನಿದಾನ–ಪಂಚಕ
ಈ ಸಂದರ್ಭದಲ್ಲಿ ರಾಮಚಂದ್ರರಾಯರು ಆಯುರ್ವೇದದ ಹಲವು ಪಾರಿಭಾಷಿಕ-ಪದಗಳನ್ನು ಪರಿಚಯಿಸುತ್ತಾರೆ. ರೋಗದ ಪೂರ್ವರೂಪ-ರೂಪ-ಉಪಶಯ-ಸಾತ್ಮ್ಯ-ಸಂಪ್ರಾಪ್ತಿ ಎಂಬ ಐದು ಅಂಶಗಳನ್ನೊಳಗೊಂಡದ್ದು ನಿದಾನ-ಪಂಚಕ. ರೋಗ-ನಿದಾನದ ಐದು ಹಂತಗಳಿವು. ರೋಗದ ಮೊದಲ ರೂಪವೇ ಪೂರ್ವರೂಪ. ರೋಗದ ಲಕ್ಷಣಗಳು ಹೊರಗೆ ತೋರಿಕೊಳ್ಳುವುದು ರೂಪ. ಆಕಾರವೆಂದರೂ ರೂಪವೇ. ಸ್ವೀಕರಿಸಿದ ಆಹಾರವು ಶರೀರಕ್ಕೆ ಚೆನ್ನಾಗಿ ಒಗ್ಗಿಹೋಗುವುದು ಸಾತ್ಮö್ಯ. ರೋಗವು ಬೆಳೆದು ಬಂದ ಬಗೆಯು ಸ್ಪಷ್ಟವಾಗುವುದು ಸಂಪ್ರಾಪ್ತಿ.
ಇನ್ನೂ ಕೆಲವು ಪರಿಭಾಷೆಗಳು ಉಂಟು. ದೋಷಗಳು ಕೂಡಿಕೊಳ್ಳುವುದು ಸಂಚಯ. ಕೆರಳುವುದು ಪ್ರಕೋಪ. ಹರಡಿಕೊಳ್ಳುವುದು ಪ್ರಸರ. ರೋಗವು ಒಂದೆಡೆ ನೆಲೆಸುವುದು ಸ್ಥಾನ-ಸಂಶ್ರಯ. ರೋಗದ ಲಕ್ಷಣಗಳು ವ್ಯಕ್ತವಾಗುವುದು ವ್ಯಕ್ತಿ. ರೋಗವು ರೂಪಾಂತರವನ್ನು ಹೊಂದುವುದಾದಲ್ಲಿ ಅದು ಭೇದ.
ಹೀಗೆ ರೋಗಕ್ಕೆ ಸಂಬಂಧಿಸಿದಂತೆ ನಾನಾ ಪಾರಿಭಾಷಿಕ ಶಬ್ದಗಳಿವೆ.
ಅನಾರೋಗ್ಯಕ್ಕೆ ಕಾರಣ–ತ್ರಯ
ಮೂರು ಕಾರಣಗಳಿಂದಾಗಿ ಮನುಷ್ಯನ ಆರೋಗ್ಯವು ಕೆಡುತ್ತದೆ. ಮೊದಲನೆಯದು ಅಸಾತ್ಮ್ಯೇಂದ್ರಿಯಾರ್ಥ-ಸಂಯೋಗ. ಯಾವುದು ನಮ್ಮ ಮೈಗೆ ಒಗ್ಗುವುದೋ ಅದು ಸತ್ಮ್ಯವೆನಿಸುತ್ತದೆ. ಒಗ್ಗದವು ಅಸಾತ್ಮ್ಯಗಳು. ಒಗ್ಗದವು ಯಾವುವು? ನಮ್ಮ ಹೊರಗಿರುವ ಪದಾರ್ಥಗಳು. ಅವುಗಳನ್ನು ನಾವು ಸೇವಿಸಿದಾಗ ಅವು ನಮ್ಮೊಳಗೆ ಸೇರಿಕೊಳ್ಳುವಂತಾಗುತ್ತವೆ. ಸೇವಿಸಿದ ಆಹಾರವು ಜಿತವಾಗಬೇಕು. ಹಾಗಾಗದೆ, ಅದು ಹೊಂದಿಕೊಳ್ಳದೆ ಉಳಿದುಕೊಂಡಲ್ಲಿ, ಅದು ಅಸಾತ್ಮ್ಯ.
ಹೊರಗಣ ಪದಾರ್ಥಗಳೆಲ್ಲವನ್ನು ಇಂದ್ರಿಯಾರ್ಥಗಳೆನ್ನಬಹುದು. ಇಂದ್ರಿಯ-ವಿಷಯಗಳೆಂದರೂ ಇವೇ. ಸಾತ್ಮ್ಯವಾಗದ ವಸ್ತುಗಳು ನಮ್ಮನ್ನು ಪ್ರವೇಶಿಸಬಾರದು, ಅಥವಾ ಅವುಗಳೊಂದಿಗೆ ಸಂಯೋಗವಾಗಬಾರದು.
ತಡೆಯಲಾರದ ಛಳಿ-ಗಾಳಿಗಳು, ಕಣ್ಣು ಕುಕ್ಕುವ ದೀಪ, ಜೀರ್ಣವಾಗದ ಆಹಾರ – ಇವುಗಳೆಲ್ಲ
ಅಸಾತ್ಮ್ಯೇಂದ್ರಿಯಾರ್ಥ-ಸಂಯೋಗಕ್ಕೆ ಉದಾಹರಣೆಗಳು.
ಎರಡನೆಯ ಕಾರಣವೆಂದರೆ ಪ್ರಜ್ಞಾಪರಾಧ. ಯಾವುದೇ ಕೆಲಸವನ್ನು ಮಾಡಿದರೂ ಆ ಬಗ್ಗೆ ತಿಳಿವಳಿಕೆಯಿಂದ ರೋಗಗಳು ಬರದಿರುವಂತೆ ಯುಕ್ತವಾಗಿರುವುದೋ ಅದನ್ನೇ ಸ್ವಸ್ಥ-ವೃತ್ತವೆನ್ನುವುದು.
ಮೂರಂಶಗಳಿಗೆ ಗಮನವಿತ್ತರೆ ನಮ್ಮ ಆರೋಗ್ಯವು ಬಹುಮಟ್ಟಿಗೆ ಚೆನ್ನಾಗಿಯೇ ಇರುವುದು. ಅವೆಂದರೆ ಆಹಾರ-ನಿದ್ರೆ-ವ್ಯಾಯಾಮಗಳು.
ಆಹಾರ–ಜನ್ಯ–ರೋಗಗಳು
ಬಹಳ ಮಂದಿಗೆ ಬರುವ ಬಹಳ ಖಾಯಿಲೆಗಳು ಆಹಾರದಿಂದಲೇ ಬರತಕ್ಕವು. ಮಿತಿಮೀರಿ ತಿಂದರೆ ಏನಾಗುವುದೆಂಬುದನ್ನು ಬೇರೆಯಾಗಿ ಹೇಳಬೇಕಿಲ್ಲವಲ್ಲವೇ? ಎಷ್ಟು ತಿನ್ನುವುದು ಒಳ್ಳೆಯದೆಂಬುದನ್ನು ಆಯುರ್ವೇದವು ಸ್ಪಷ್ಟವಾಗಿ ಹೇಳುತ್ತದೆ: ಅರ್ಧಹೊಟ್ಟೆಯಷ್ಟು ತಿನ್ನು. ಕಾಲುಭಾಗ ನೀರಿನಿಂದ ತುಂಬು. ಇನ್ನು ಕಾಲುಭಾಗವನ್ನು ವಾಯು-ಸಂಚಾರಕ್ಕಾಗಿ ಖಾಲಿಬಿಡು – ಎಂಬುದಾಗಿ.
ಹೀಗಾಗಿ ಹೊಟ್ಟೆತುಂಬ ತಿನ್ನುವುದೇ ಸರಿಯಲ್ಲವೆನ್ನುವಾಗ ಹೊಟ್ಟೆಬಿರಿಯುವಂತೆ ತಿನ್ನುವುದರ ಬಗ್ಗೆ ಹೇಳಬೇಕೇ? ಕನ್ನಡದಲ್ಲಿ ಪ್ರಸಿದ್ಧವಾದ ಗಾದೆಯೊಂದನ್ನು ಇಲ್ಲಿ ನಾವು ಜ್ಞಾಪಿಸಿಕೊಳ್ಳಬಹುದು: “ಒಪ್ಪೊತ್ತುಂಡವ ಯೋಗಿ, ಎರಡ್ಹೊತ್ತುಂಬವ ಭೋಗಿ, ಮೂರ್ಹೊತ್ತುಂಬವ ರೋಗಿ, ನಾಲ್ಕು ಹೊತ್ತುಂಡವನನ್ನು ಹೊತ್ತುಕೊಂಡು ಹೋಗಿ.” ದಿನಕ್ಕೆ ಎಷ್ಟು ಬಾರಿ ತಿನ್ನುವುದು ಸೂಕ್ತವೆನ್ನುವುದನ್ನು ಈ ಗಾದೆಮಾತು ಹೇಳುತ್ತದೆ. ಎರಡು ಹೊತ್ತು ತಿನ್ನುವವನನ್ನೇ ಈ ಮಾತು ಭೋಗಿಯೆನ್ನುತ್ತದೆ. ಮೂರು ಹೊತ್ತು ತಿನ್ನುವವ ರೋಗಿ – ಎನ್ನುವ ಮೂಲಕ ದಿನಕ್ಕೆ ಎಷ್ಟು ಬಾರಿ ತಿನ್ನಬಾರದೆಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
ಈ ಹಿನ್ನೆಲೆಯಲ್ಲಿ ಎಷ್ಟು ಬಾರಿ ತಿನ್ನಬೇಕೆಂಬುವುದನ್ನು ಅರಿಯಬೇಕಾಗಿದೆ. ದಿನಕ್ಕೆ ಎರಡು ಬಾರಿ ತಿನ್ನುವುದನ್ನು ಆಯುರ್ವೇದವು ಪ್ರಶಂಸಿಸುತ್ತದೆ. ಅಷ್ಟೇ ಅಲ್ಲ, ಮಧ್ಯೇ ಮಧ್ಯೇ ತಿನ್ನುವುದನ್ನೂ ಅದು ನಿಷೇಧಿಸುತ್ತದೆ. “ನಾಂತರಾ ಭೋಜನಂ” ಎಂದು ಎಚ್ಚರಿಸುತ್ತದೆ. ಆಹಾರ ಸೇವನೆಗೆ ಕಾಲ-ನಿಯಮವೆಂಬುದುಂಟು. ಅ-ವೇಳೆಯಲ್ಲಿ ತಿನ್ನುವಂತಿಲ್ಲ. ಕಾಲ-ಭೋಜನವೆಂದರೆ ಕಾಲಕ್ಕೆ ಸರಿಯಾಗಿ ತಿನ್ನತಕ್ಕದ್ದು. ಹಾಗೆಯೇ ಅಧ್ಯಶನವೂ ತಪ್ಪೇ. ಅಧ್ಯಶನವೆಂದರೆ ಮೊದಲೇ ಸೇವಿಸಿದ್ದ ಅನ್ನವು ಇನ್ನೂ ಪೂರ್ಣವಾಗಿ ಜೀರ್ಣವಾಗುವ ಮುಂಚೆಯೇ ಊಟಮಾಡುವುದು.
ಕೋಽರುಕ್ ಕೋಽರುಕ್ ಕೋಽರುಕ್
ಧನ್ವಂತರಿಯೇ ಒಮ್ಮೆ ಪರೀಕ್ಷಿಸಲೆಂದು ಪಕ್ಷಿಯ ರೂಪದಲ್ಲಿ ಬಂದು ಪಕ್ಷಿಯಂತೆ ಧ್ವನಿ ಮಾಡಿದನಂತೆ ಕೋರುಕ್ ಕೋರುಕ್ ಕೋರುಕ್ – ಎಂಬುದಾಗಿ. ಅದು ಹಕ್ಕಿಯ ರುತದಂತೆ ಕಂಡರೂ ಅದು ಮೂರು ಬಾರಿ ಮಾಡಿದ ಒಂದೇ ಪ್ರಶ್ನೆಯಾಗಿದೆ. “ಯಾರು ರೋಗ-ರಹಿತರು?” (ಕಃ ಅ-ರುಕ್?) ಎಂಬುದಾಗಿ. ಅ-ರುಕ್ ಎಂದರೆ ರೋಗವಿಲ್ಲದವನು (ರುಕ್-ರುಜಾ-ಶಬ್ದಗಳಿಗೆ ರೋಗವೆಂದರ್ಥ. ರುಜಿನವೆಂಬ ಪದವೂ ಇವಕ್ಕೆ ಸಂಬಂಧಪಟ್ಟದ್ದೇ). ಅದಕ್ಕೆ ಉತ್ತರ – ಹಿತ-ಭುಕ್, ಮಿತ-ಭುಕ್, ಋತ-ಭುಕ್ – ಎಂಬುದಾಗಿ. ಯಾರು ಹಿತವಾದದ್ದನ್ನೇ ತಿನ್ನುತ್ತಾರೋ, ಮಿತವಾಗಿಯೇ ತಿನ್ನುತ್ತಾರೋ ಹಾಗೂ ಋತವಾದದ್ದನ್ನೇ ತಿನ್ನುತ್ತಾರೋ ಅವರೇ ನೀರೋಗರಾಗಿರತಕ್ಕವರು ಎಂದರೆ ರುಜಿನದ ಬಾಧೆಗಳಿಲ್ಲದವರು.
ಇದಲ್ಲದೆ ಪಥ್ಯ-ಜ್ಞಾನವೂ ಮುಖ್ಯವಾದುದು. ನಾವು ಹೋಗುವ ಮಾರ್ಗಕ್ಕೆ ಯಾವುದು ಹಿತವೋ ಅದು ಪಥ್ಯ: ಪಥಿ ಸಾಧು.
ಅಪಥ್ಯವಾದುದರ ಸೇವನೆಯನ್ನೇ ಮಾಡುತ್ತಿರುವವನಿಗೆ ಔಷಧಗಳಿಂದ ಏನು ಪ್ರಯೋಜನ? ಹಾಗೆಯೇ ಪಥ್ಯವನ್ನೇ ಸೇವಿಸುತ್ತಿದ್ದರೆ, ಅಂಥವನಿಗೆ ಔಷಧವೇಕೆ? – ಎಂದು ಕೇಳುವ ಒಂದು ಸುಭಾಷಿತವನ್ನು ರಾಮಚಂದ್ರರಾಯರು ಇಲ್ಲಿ ಉಲ್ಲೇಖಿಸಿದ್ದಾರೆ. “ಯದ್ಯಪಥ್ಯಂ ಕಿಮೌಷಧ್ಯಾ, ಯದಿ ಪಥ್ಯಂ ಕಿಮೌಷಧೈಃ ||’’
ನಿದ್ರೆಯಂತೂ ಆಹಾರದಷ್ಟೇ ಮುಖ್ಯವಾದದ್ದು. ಖಾಯಿಲೆ ಬಿದ್ದವರಿಗೆ ಒಳ್ಳೆಯ ನಿದ್ರೆಯು ರೋಗವನ್ನು ಕ್ಷಿಪ್ರವಾಗಿ ವಾಸಿ ಮಾಡಲು ಅನುಕೂಲಮಾಡಿಕೊಡುತ್ತದೆ. ದಿವಾ-ಸ್ವಾಪ – ಎಂದರೆ ಹಗಲು ನಿದ್ರೆಯು ಹಿತವಲ್ಲ. ಹಾಗೆಯೇ ರಾತ್ರಿ ನಿದ್ರೆಗೆಡುವುದೂ ಹಿತವಲ್ಲ. ಸೂರ್ಯೋದಯಕ್ಕೆ ಮೊದಲು ಏಳಬೇಕು. ಆರು ಘಂಟೆಗಳ ಕಾಲ ನಿದ್ದೆಯು ಅವಶ್ಯವಾಗಿಯೂ ಬೇಕು. ಶ್ರಮದಿಂದ ಬರುವ ನಿದ್ರೆ, ಮಾದಕ-ದ್ರವ್ಯಗಳಿಂದಾಗಿ ಬರುವ ನಿದ್ರೆ – ಇವುಗಳು ಪ್ರಶಸ್ತವಲ್ಲ. ಸುಖ-ನಿದ್ರೆಯೆಂಬುದು ಮನಸ್ಸಿಗೆ ತಮಸ್ಸು ಆವರಿಸಿದಾಗ ಬರುವಂತಹುದು.
ವ್ಯಾಯಾಮವು ಆರೋಗ್ಯದ ಮತ್ತೊಂದು ಸ್ತಂಭ. ಇಲ್ಲೂ ಅಷ್ಟೆ, ಅತಿ-ವ್ಯಾಯಾಮವು ಒಳ್ಳೆಯದಲ್ಲ. ಆದರೆ ನಿತ್ಯವೂ ವ್ಯಾಯಾಮವೆಂಬುದು ಬೇಕಾದದ್ದೇ. ವ್ಯಾಯಾಮವು ಬಲ-ವರ್ಧಕ. ಶರೀರದಲ್ಲಿ ಧಾತುಗಳನ್ನೂ ಅಗ್ನಿಯನ್ನೂ ಸಮಾವಸ್ಥೆಗೆ ತರುವಂತಹುದು. ಆಯುರ್ವೇದವಿತ್ತಿರುವ ಸ್ವಸ್ಥಲಕ್ಷಣವೇ ವಿಶಿಷ್ಟವಾದದ್ದು:
ಸಮ-ದೋಷಃ ಸಮಾಗ್ನಿಶ್ಚ ಸಮ-ಧಾತು-ಮಲ-ಕ್ರಿಯಃ |
ಪ್ರಸನ್ನಾತ್ಮೇಂದ್ರಿಯ-ಮನಾಃ ಸ್ವಸ್ಥ ಇತ್ಯಭಿಧೀಯತೇ ||
ವೈದ್ಯನ ಪಾತ್ರ
ರೋಗಿಯ ರೋಗವು ವಾಸಿಯಾಗಬೇಕಾದರೆ ಒಳ್ಳೆಯ ವೈದ್ಯನಿದ್ದರಾಯಿತೆಂದು ಮಾತ್ರವಲ್ಲ. ಉಳಿದ ಅಂಶಗಳೂ ಇವೆ. ವೈದ್ಯನಂತೂ ದಕ್ಷನಾಗಿರಬೇಕು, ಒಳ್ಳೆಯ ಗುರುವಿನಿಂದ ವಿದ್ಯೆಯನ್ನು ಸಂಪಾದಿಸಿರಬೇಕು. ಶಾಸ್ತ್ರ-ಜ್ಞಾನವನ್ನು ಚೆನ್ನಾಗಿ ಗಳಿಸಿರಬೇಕು. ಪ್ರಯೋಗ-ನಿಪುಣನಾಗಿರಬೇಕು. ಶುದ್ಧನಾಗಿರಬೇಕು.
ಆತನಿಗೆ ಇಂದ್ರಿಯಗಳಲ್ಲಿ ಪಟುತ್ವವಿರಬೇಕು. ಕಣ್ಣು ಸರಿಯಾಗಿ ಕಾಣದವನು ರೋಗಿಯ ರೋಗದ ಎಷ್ಟೋ ಸೂಕ್ಷ್ಮಾಮಂಶಗಳನ್ನು ಗಮನಿಸಿಕೊಳ್ಳಲಾರನಷ್ಟೆ. ಕಿವಿಯು ಮಂದವಿರುವ ವೈದ್ಯನಿಗೆ ರೋಗಿಯು ಹೇಳುವುದರ ಪೂರ್ಣವೂ ಯಥಾವತ್ತಾದುದೂ ಆದ ಗ್ರಹಿಕೆಯೇ ಉಂಟಾಗದಿರಬಹುದು.
ವೈದ್ಯನು ಬಹುಶ್ರುತನಾಗಿರತಕ್ಕದ್ದು ಮುಖ್ಯ. ಒಂದೇ ಶಾಸ್ತ್ರದಲ್ಲಿ ನಿಪುಣನಾದವನು ಏನೂ ಪ್ರಯೋಜನವಿಲ್ಲ. ನಾನಾ-ಶಾಸ್ತ್ರ-ಜ್ಞನಾಗಿದ್ದವನೇ ತನ್ನ ಶಾಸ್ತ್ರವನ್ನೂ ಚೆನ್ನಾಗಿ ಅರಿತುಕೊಂಡಾನು.
ಔಷಧವನ್ನು ಬಿಟ್ಟಿಯಾಗಿ ವೈದ್ಯನು ಕೊಡಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲವಾದರೂ, ದುರಾಶಾ-ಗ್ರಸ್ತನಾಗಿರಬಾರದು, ವೈದ್ಯ. ರೋಗಿಗೆ ಪೂರ್ಣಾರೋಗ್ಯವು ಲಭಿಸಿದ ಮೇಲೆಯೇ ತಾನು ಹಣವನ್ನು ಸ್ವೀಕರಿಸಬೇಕೆಂಬ ಕ್ರಮ ಆಯುರ್ವೇದದ್ದು! ಬಡವರಿಂದ ಹಣವನ್ನು ಕೀಳಬಾರದೆಂದರೂ ಧನಿಕರು ತಾವಾಗಿ ಕೊಟ್ಟಷ್ಟನ್ನು ಸ್ವೀಕರಿಸತಕ್ಕದ್ದೆಂದೂ ಕ್ರಮವು ನಿರ್ಮಿತವಾಗಿತ್ತು. ಧನಲೋಭದಿಂದ ಚಿಕಿತ್ಸೆ ಮಾಡುವುದು ಪಾಪವೆಂಬ ನಂಬಿಕೆಯು ಇತ್ತು.
ರೋಗವನ್ನು ವಾಸಿಮಾಡುವುದೆಂದು ಹೊರಟು ಔಷಧ-ರಾಶಿಯನ್ನು ರೋಗಿಗೆ ಹೇಳುವುದಲ್ಲ. ಕೂಡಿದ ಮಟ್ಟಿಗೂ ಆಹಾರದಲ್ಲೇ ಪರಿಷ್ಕಾರವನ್ನು ಸೂಚಿಸಿ ಅಷ್ಟರಿಂದಲೇ ವಾಸಿಮಾಡಲು ಯತ್ನಿಸಬೇಕು. ಅದು ಸಾಧ್ಯವೇ ಇಲ್ಲವೆಂದರೆ ಮಾತ್ರ ಔಷಧಗಳು. ಅದಕ್ಕೂ ಬಗ್ಗದ ಖಾಯಿಲೆಯು ಶಸ್ತ್ರ-ಚಿಕಿತ್ಸೆಗೆ ಮಾತ್ರವೇ ಬಗ್ಗುವುದಾದರೆ ಮಾತ್ರ ಶಸ್ತ್ರವನ್ನು ಧರಿಸಬೇಕು. ಇಷ್ಟೊಂದೆಲ್ಲಾ ನಿಯಮಗಳು ವೈದ್ಯನಿಗಿದ್ದವು.
ಔಷಧದ ಪಾತ್ರ
ಇನ್ನು ಔಷಧವು ಹೇಗಿರಬೇಕು? (ಸಂಸ್ಕೃತದಲ್ಲಿ ಓಷಧಿ, ಓಷಧೀ, ಔಷಧ, ಔಷಧಿ, ಔಷಧೀ – ಎಂಬ ಐದೂ ಪದಗಳೂ ಉಂಟು; ಎಲ್ಲವೂ ಸಮಾನಾರ್ಥಕ). ಕಾಶ್ಯಪ-ಸಂಹಿತೆಯು ಓಷಧಿಯ ಲಕ್ಷಣವನ್ನು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು. ರಾಮಚಂದ್ರರಾಯರು ಇದರ ಭಾವವನ್ನಷ್ಟೇ ಕೊಟ್ಟಿದ್ದಾರೆ.
ಓಷೋ ನಾಮ ರಸಸ್ ತಸ್ಯಾಂ ಧೀಯತೇ ಯತ್ ತದೋಷಧಿಃ |
ಓಷಾದ್ ಆರೋಗ್ಯಮಾಧತ್ತೇ ತಸ್ಮಾದ್ ಓಷಧಿರೋಷಧಿಃ ||
ಓಷವೆಂಬುದು ರಸ. ಅದರಲ್ಲಿ ನಿಹಿತವಾದದ್ದು ಯಾವುದೋ ಅದು ಓಷಧಿ. ಓಷದಿಂದಾಗಿಯೇ ಆರೋಗ್ಯವು ಸಿದ್ಧಿಸುವುದು. ಈ ಕಾರಣಕ್ಕಾಗಿಯೇ ಮದ್ದನ್ನು ಓಷಧಿಯೆನ್ನುವುದು – ಎಂಬುದು ಈ ಶ್ಲೋಕದ ಅರ್ಥ.
ಓಷಧಿಯನ್ನು ವೈದ್ಯನು ಕೊಟ್ಟದ್ದಕ್ಕೆ ರೋಗಿಗೆ ಆರೋಗ್ಯವು ಲಬ್ಧವಾಯಿತು – ಎಂಬುದರ ಲಕ್ಷಣವೇನೆಂದರೆ, ರೋಗಿಗೆ ಆ ರೋಗವು ಮತ್ತೆ ಆವೃತ್ತವಾಗದಿರುವುದು. ಇಂದು ವಾಸಿಯಾಗಿ ನಾಲ್ಕು ದಿನಕ್ಕೆ ಮತ್ತೆ ರೋಗವು ಕಾಣಿಸಿಕೊಂಡರೇನು ಬಂತು?
ಅಷ್ಟೇ ಅಲ್ಲ. ಓಷಧವನ್ನು ಕೊಟ್ಟರೆ ರೋಗಿಗೆ ಬೇರೆ ಖಾಯಿಲೆಗಳಿದ್ದರೆ ಅವೂ ವಾಸಿಯಾಗುವಂತಿರಬೇಕು. ಅನೇಕ ಖಾಯಿಲೆಗಳಿದ್ದರೂ “ಏಕ-ಮೂಲಿಕಾ-ಪ್ರಯೋಗ”ವೆಂಬ ಕ್ರಮದಿಂದ, ಒಂದೇ ಮೂಲಿಕೆಯನ್ನು ಕೊಟ್ಟೇ ನಾನಾ-ಖಾಯಿಲೆಗಳು ವಾಸಿಯಾಗುವಂತಾಗಬೇಕು. ಅದೇ ಪ್ರಶಸ್ತವಾದದ್ದು.
ಔಷಧಿಯಾಗದ ದ್ರವ್ಯವೇ ಪ್ರಪಂಚದಲ್ಲಿಲ್ಲ – ಎನ್ನುತ್ತಾನೆ. ಚರಕ (“ನಾನೌಷಧಿಭೂತಂ ಜಗತಿ ಕಿಂಚಿದ್ ದ್ರವ್ಯಂ ಉಪಲಭ್ಯತೇ”). ಎಂದರೆ, ಸರಿಯಾದ ಪ್ರಯೋಜನ, ಸರಿಯಾದ ಯುಕ್ತಿ – ಇವಿದ್ದಲ್ಲಿ ಯಾವುದೇ ವಸ್ತುವನ್ನಾದರೂ ಔಷಧಿಯನ್ನಾಗಿ ಬಳಸಬಹುದು.
ಔಷಧಿಯು ಅಮೃತವೂ ಆಗಬಹುದು, ವಿಷವೂ ಆಗಬಹುದು. ಸರಿಯಾದ ದ್ರವ್ಯ-ಸಂಯೋಗವನ್ನು ವೈದ್ಯನು ಅರಿತಿದ್ದ ಪಕ್ಷದಲ್ಲಿ ಅದು ಜೀವ-ರಕ್ಷಕ. ಇಲ್ಲವೇ ಅದುವೇ ಜೀವ-ಘಾತಕ. ಬೆಂಕಿಯು ಉಪಕಾರಿಯೂ ಹೌದು, ಅಪಕಾರಿಯೂ ಹೌದು. ಶಸ್ತ್ರಗಳು ರಕ್ಷಕವೂ ಹೌದು, ಮಾರಕವೂ ಹೌದು. ಔಷಧವೂ ಅಂತೆಯೇ. ಕಾಶ್ಯಪ-ಸಂಹಿತೆಯ ಮಾತಿದು:
ಯಥಾ ವಿಷಂ ಯಥಾ ಶಸ್ತ್ರಂ ಯಥಾಗ್ನಿರ್ ಅಶನಿರ್ ಯಥಾ |
ತಥೌಷಧಮ್ ಅವಿಜ್ಞಾತಂ, ವಿಜ್ಞಾತಂ ಅಮೃತೋಪಮಮ್ ||
ಹಾಗೆಯೇ ದುರ್ಯುಕ್ತವಾದದ್ದು ವಿಷವೇ ಆಗುತ್ತದೆ.
ಪರಿಚಾರಕನ ಪಾತ್ರ
ಮೂರನೆಯ ಅಂಶವೆಂದರೆ ಪರಿಚಾರಕ. ಇಂದಿನ ಪರಿಭಾಷೆಯಲ್ಲಿ ನರ್ಸ್. ಈತನ ಮುಖ್ಯ-ಲಕ್ಷಣವೆಂದರೆ ತಾನು ಮಾಡುವ ಕಾರ್ಯದಲ್ಲಿ ಶ್ರದ್ಧಾಸಕ್ತಿಗಳಿರಬೇಕು. ರೋಗಿಗೆ ಯಾವ ರೀತಿಯಲ್ಲೂ ತೊಂದರೆಯಾಗಬಾರದಾದ್ದರಿಂದ ತಾನಂತೂ ಬಹಳವೇ ಶುಚಿಯಾಗಿರಬೇಕು.
ದಕ್ಷತೆ ಅಥವಾ ಸಾಮರ್ಥ್ಯವೆಂಬುದೂ ಆತನಲ್ಲಿರಬೇಕಾದ ಮತ್ತೊಂದು ಮುಖ್ಯ-ಗುಣ. ವೈದ್ಯನು ಕೊಟ್ಟ ಕೆಲಸವನ್ನು ಸಮರ್ಥನಾಗಿ ನೆರವೇರಿಸಬೇಕು. ವೈದ್ಯನಿಗೆ ಸರ್ವ-ರೀತಿಯಲ್ಲೂ ಸಹಾಯಮಾಡುವ ಸಾಮರ್ಥ್ಯ-ಉತ್ಸಾಹಗಳು ತುಂಬಿರಬೇಕು. ಇಷ್ಟಲ್ಲದೆ ಆತನು ಧೀಮಂತನೂ ಆಗಿರಬೇಕು. ಎಂದರೆ ತಾನೂ ಶಾಸ್ತ್ರ-ಕುತೂಹಲಿಯಾಗಿದ್ದು, ವೈದ್ಯನ ಅಪೇಕ್ಷೆಯೇನಿರಬಹುದೆಂಬುದನ್ನರಿತು ಅದನ್ನು ಸ್ವ-ಬುದ್ಧಿಯಿಂದಲೂ ಸಾಧಿಸಿಕೊಡುವ ತವಕವಿರಬೇಕು. ವೈದ್ಯನಿಗೆ ಬೆಂಬಲವಾಗಿ ನಿಂತು ರೋಗಿಗೆ ಒತ್ತಾಸೆಯಾಗಿ ನಿಲ್ಲುವ ಪ್ರವೃತ್ತಿಯಿರಬೇಕು.
ಚಿಕಿತ್ಸೆಯ ನಾನಾ–ಮುಖಗಳು
ಚಿಕಿತ್ಸೆಗೆ ಹಲವು ಮುಖಗಳುಂಟು. ಅವನ್ನು ಶಾಸ್ತ್ರಗಳು ನಿರೂಪಿಸದೇ ಬಿಟ್ಟಿಲ್ಲ.
ವೈದ್ಯನಿಗೆ ಪ್ರತಿಯೊಬ್ಬ ರೋಗಿಯಿಂದಲೂ ಹೆಚ್ಚಾದ ಹಣವೇ ಬಂದುಬಿಡುವುದೆಂಬ ನಿರೀಕ್ಷೆಯು ತರವಲ್ಲ. ಕೆಲವೊಮ್ಮೆ ಮತ್ತೊಬ್ಬನ ಜೀವವುಳಿಸಿದ ಕಾರಣ ಧರ್ಮ-ಪ್ರಾಪ್ತಿಯಾಗುವುದು. ಕೆಲವೆಡೆ, ಒಬ್ಬ ಒಳ್ಳೆಯ ಸ್ನೇಹಿತನನ್ನು ಸಂಪಾದಿಸಿದ ಭಾಗ್ಯವು ಒದಗಿರುವುದು. ಮತ್ತೆ ಕೆಲವೆಡೆ ಧನವೇ ಪ್ರಧಾನವಾಗಿ ಪ್ರಾಪ್ತವಾಗುವುದು.
ಕೆಲವರಿಗೆ ಖಾಯಿಲೆಯನ್ನು ವಾಸಿಮಾಡಿದುದಕ್ಕಾಗಿ ಒಳ್ಳೆಯ ಕೀರ್ತಿಯ ಸಂಪಾದನೆಯಾಗುವುದು. ಕೊನೆಗೆ ಇನ್ನೇನಿಲ್ಲವೆಂದರೂ ಚಿಕಿತ್ಸಾ-ಕರ್ಮದ ಅಭ್ಯಾಸವು ಚೆನ್ನಾಗಿ ಆಗಿ, ಅದು ದೃಢಪಡುವುದೆಂಬ ಲಾಭವಿರುವುದು! ಈ ಎಲ್ಲ ಕಾರಣಗಳಿಂದಾಗಿ, ಚಿಕಿತ್ಸೆಯೆಂಬುದು ಎಂದೂ ನಿಷ್ಫಲವಲ್ಲ – ಎಂದು ಹೇಳುವ ಶ್ಲೋಕವೊಂದಿದೆ:
ಕ್ವಚಿದ್ ಧರ್ಮಃ ಕ್ವಚಿನ್ಮೈತ್ರೀ ಕ್ವಚಿದ್ ಅರ್ಥಃ ಕ್ವಚಿದ್ ಯಶಃ |
ಕರ್ಮಾಭ್ಯಾಸಃ ಕ್ವಚಿಚ್ಚೇತಿ ಚಿಕಿತ್ಸಾ ನಾಸ್ತಿ ನಿಷ್ಫಲಾ ||
ರೋಗಿಯ ಪಾತ್ರ
ಚಿಕಿತ್ಸೆಗೆ ನಾಲ್ಕು ಪಾದಗಳು – ವೈದ್ಯ, ಔಷಧಿ, ಪರಿಚಾರಕ, ಹಾಗೂ ರೋಗಿ – ಎಂಬಿವು. ರೋಗಿಯ ಬಗ್ಗೆಯೂ ಆಯುರ್ವೇದದಲ್ಲಿ ಮುಖ್ಯವಾದ ಕೆಲವು ಮಾತುಗಳಿವೆ. ರೋಗಿಯು ವೈದ್ಯನಿಗೆ ವಶನಾಗಿರತಕ್ಕದ್ದು ಆತನಲ್ಲಿರಬೇಕಾದ ಬಹುಮುಖ್ಯವಾದ ಲಕ್ಷಣ. ವೈದ್ಯನು ಹೇಳಿದಂತೆ ಕೇಳುವ ರೋಗಿಗೆ ಆರೋಗ್ಯವು ಶೀಘ್ರವಾಗಿ ಲಭಿಸುವುದು. ವೈದ್ಯನು ಹೇಳಿದ ಪಥ್ಯವನ್ನು ಎಂದರೆ ಆಹಾರ-ವಿಹಾರ-ನಿಯಮಗಳನ್ನು ರೋಗಿಯು ಯಥೋಕ್ತವಾಗಿ ಪಾಲನೆಮಾಡತಕ್ಕವನಾಗಿರಬೇಕು.
ವೈದ್ಯನ ವಿಷಯದಲ್ಲಿ ನಂಬಿಕೆಯಿರಬೇಕು. ಗೌರವವಿರಬೇಕು. ರೋಗವು ವಾಸಿಯಾದ ಬಳಿಕ ವೈದ್ಯನಲ್ಲಿ ಕೃತಜ್ಞತೆಯಿರಬೇಕು. ವೈದ್ಯನಲ್ಲಿ ಏನನ್ನೂ ಮರೆಮಾಚದೆ ಎಲ್ಲವನ್ನೂ ಯಥಾವತ್ತಾಗಿ ಹೇಳಿಕೊಳ್ಳುವವನಾಗಿರಬೇಕು. ಸತ್ಯವನ್ನೇ ಹೇಳಬೇಕು.
ಹೀಗೆ ಈ ನಾಲ್ಕು ಪಾದಗಳೂ ಚೆನ್ನಾಗಿ ಕೂಡಿಬಂದಲ್ಲಿ ರೋಗಿಗೆ ಪೂರ್ಣವಾದ ಆರೋಗ್ಯವು ಲಭಿಸುವುದರಲ್ಲಿ ಸಂಶಯವಿಲ್ಲ.
ಉಪಸಂಹಾರ
ರಾಮಚಂದ್ರರಾಯರು ನಾನಾ-ಕ್ಷೇತ್ರಗಳಲ್ಲಿ ಬಹು ಪರಿಶ್ರಮವನ್ನು ಹೊಂದಿದ್ದವರು. ಹಲವಾರು ಸಾವಿರ ಪುಟಗಳಷ್ಟು ಬರವಣಿಗೆಯನ್ನು ಮಾಡಿದ್ದವರು. ಅವರು ಇಷ್ಟು ಅಪಾರವಾದ ಕೆಲಸವನ್ನು ಮಾಡಿರುವುದೇ ಒಂದು ದೊಡ ಅಚ್ಚರಿಯ ವಿಷಯ.
ದೊಡ್ಡ ಸಾಧನೆಗಳನ್ನು ಮಾಡಿದವರಲ್ಲಿ ಕೆಲವೊಮ್ಮೆ, ಸಣ್ಣಪುಟ್ಟ ದೋಷಗಳು ಸಂಭವಿಸುವುದೂ ಉಂಟು. ಕೆಲವೆಡೆ ಅವರು ಸೂಚಿಸಿರುವ ಆಕರಗಳು ಯುಕ್ತವಾಗಿಲ್ಲ, ಅಥವಾ ಬಿಟ್ಟು ಹೋಗಿವೆ.
ಉದಾಹರಣೆಗೆ, ಮಾಂಸಭಕ್ಷಣದಲ್ಲಿ ದೋಷವಿಲ್ಲ – ಎಂಬ ಮಾತು ಆಯುರ್ವೇದ-ಗ್ರಂಥದಲ್ಲಿ ಬಂದಿದೆಯೆಂದಿದ್ದಾರೆ. ಆದರೆ ಅದು ಬಂದಿರುವುದು ಮನುಸ್ಮöÈತಿಯಲ್ಲಿ. ಮುದ್ರಣ-ದೋಷಗಳೂ ಅಲ್ಲಲ್ಲಿ ಕಂಡಿವೆ.
ಕೋಽರುಕ್? (ಯಾರು ರೋಗರಹಿತರು?) ಎಂಬ ಪ್ರಶ್ನೆಗೆ ಉತ್ತರಕೊಡುವ ವಾಕ್ಯವನ್ನು ತಪ್ಪಾಗಿ ಉದ್ಧರಿಸಿರುವುದಲ್ಲದೆ, ಅದಕ್ಕೆ ತಪ್ಪಾದ ಅನುವಾದವನ್ನೂ ಮಾಡಿದ್ದಾರೆ. “ಕ್ಷುತ-ಭುಕ್” ಎಂಬ ಪಾಠವನ್ನು ಅವರೇ ಕಲ್ಪಿಸಿರುವಂತೆ ಕಾಣುತ್ತದೆ. ಮತ್ತು ಕ್ಷುತ ಎಂಬುದಕ್ಕೆ ಹಸಿವು ಎಂದು ಅರ್ಥವನ್ನು ಮಾಡಿದ್ದಾರೆ. ಸಂಸ್ಕೃತದಲ್ಲಿ ಕ್ಷುಧ್/ಕ್ಷುತ್ – ಎಂಬುದಕ್ಕೆ ಹಸಿವು ಎಂದರ್ಥವಿದೆ. ಆದರೆ ಕ್ಷುತ – ಎಂಬುದಕ್ಕೆ ಸೀನು ಎಂದರ್ಥವಿದೆ.
ತಮ್ಮ ಕ್ರಿಯಾಶೀಲ-ವೈದುಷ್ಯದ ಕಾಲಕ್ಕೆ – ಎಂದರೆ ಸುಮಾರಾಗಿ ೧೯೬೦ರಿಂದ ೨೦೦೦ದ ಅವಧಿಯಲ್ಲಿ – ಪ್ರಚಲಿತವಿದ್ದ ಕಮ್ಯುನಿಸ್ಟರ ಅಭಿಪ್ರಾಯಗಳನ್ನೇ ಬಹಳೆಡೆ ಮಂಡಿಸಿದ್ದಾರೆ. ಮಾರ್ಕ್ಸಿಸ್ಟ್ ವಿದ್ವಾಂಸರಾದ ದೇಬೀಪ್ರಸಾದ ಚಟ್ಟೋಪಾಧ್ಯಾಯರು ಅನೇಕ ವಿಕೃತ-ವಾದ-ವ್ಯಾಖ್ಯಾನಗಳನ್ನು ಮಾಡಿದವರು; ಅಂದಿಗೆ ಅವರ ಪ್ರಸಿದ್ಧಿ ಸಾಕಷ್ಟಿತ್ತು. ರಾಮಚಂದ್ರರಾಯರು ಅವರ ಮತ್ತು ತತ್ಸದೃಶರಾದ ಅನೇಕ ವಿದ್ವಾಂಸರ ಅಭಿಪ್ರಾಯಗಳನ್ನು ಸತ್ಯವೆಂಬಂತೆ ಪ್ರತಿಪಾದಿಸಿದ್ದಾರೆ. ದೇಬೀಪ್ರಸಾದ ಚಟ್ಟೋಪಾಧ್ಯಾಯರ ಮಾತುಗಳನ್ನು ಕಂಠೋಕ್ತವಾಗಿಯೇ ಉದ್ಧರಿಸಿರುವುದೂ ಉಂಟು.
ಧರ್ಮ-ಶಾಸ್ತ್ರಗಳು ಹೇಳುವ ನಿಯಮಗಳು ಆರೋಗ್ಯ-ಸಂಪಾದನೆಗಾಗಿಯೇ ಬಂದವೆಂಬಂತೆ ಪ್ರತಿಪಾದಿಸಿರುವುದು ಒಂದರ್ಥದಲ್ಲಿ ಶೋಚನೀಯವೇ ಸರಿ. ಅಧ್ಯಾತ್ಮದತ್ತ ಸಾಗುವಲ್ಲಿ ಶರೀರಾರೋಗ್ಯವೇ ಮೊದಲಾದವು ಅತ್ಯವಶ್ಯವೇ; ಆದರೆ ಸಾಧನವನ್ನೇ ಸಾಧ್ಯವೆಂಬಂತೆ ತೋರಿಸುವುದು ಸಾಧುವಲ್ಲ. ಇನ್ನೂ ನಾಲ್ಕಾರು ವಿಷಯಗಳಲ್ಲಿ ಇಂಡಾಲಜಿಸ್ಟರು ಆಡುವ ಕುಹಕದ ಮಾತುಗಳೇ ಇವರ ಬರೆಹಗಳಲ್ಲಿ ಪುನರುಚ್ಚರಿತವಾಗಿವೆಯೆಂಬುದು ಖೇದಕರ.
ಆದರೆ ನಾನಾ-ಶಾಸ್ತ್ರಗಳಲ್ಲೂ ಕಲೆಗಳಲ್ಲೂ ಅವುಗಳ ತಾತ್ತ್ವಿಕಭಾಗಗಳಲ್ಲೂ ಪ್ರಯೋಗಗಳಲ್ಲೂ ಸಾಕಷ್ಟು ತೊಡಗಿಸಿಕೊಂಡು, ಬಹುಶ್ರುತರೆಂದು ಪ್ರಸಿದ್ಧರಾಗಿ, ನಾನಾಭಾಷಾಭಿಜ್ಞರಾಗಿದ್ದ ಅವರ ವಿಷಯದಲ್ಲಿ ದೋಷಗಳನ್ನು ತೆಗೆದುತೋರಿಸುವುದು ತರವಲ್ಲವಾದರೂ, ಓದುಗರ ಎಚ್ಚರಕ್ಕಾದರೂ ಅವುಗಳನ್ನು ಸೂಚಿಸಬೇಕಾದ ಕರ್ತವ್ಯದ ದೃಷ್ಟಿಯಿಂದ, ದಿಕ್ಸೂಚಿಯಾಗಿ ಕೇವಲ ಕೆಲವೇ ಅಂಶಗಳನ್ನು ತೋರಿಸಿದೆ. ಇದು ವಿದ್ಯಾಕ್ಷೇತ್ರದಲ್ಲಿ ನಡೆಯಬೇಕಾದ ನಿಷ್ಪಕ್ಷಪಾತವಾದ ಗುಣ-ದೋಷ-ವಿಮರ್ಶೆಯೆಂದಷ್ಟೇ ಭಾವಿಸಬೇಕಾಗಿ ನಮ್ರತೆಯಿಂದ ಕೋರಿದೆ.
ಭಾರತೀಯ-ಸಂಸ್ಕೃತಿಗೆ ಅಪಾರ-ಸೇವೆ ಸಲ್ಲಿಸಿದ ರಾಯರಿಗೆ ನಮ್ಮ ನಮನಗಳು.