ಚಿತ್ರ ಬರೆಯುವ ಕೆಲಸ ಮುಗಿಸಿ, ಬಿಡದಿಗೆ ಬಂದಾಗ ಆ ಓಟೆಯ ನೆನಪು ಬಂತು. ಅದನ್ನು ತೆಗೆದು ಪರಿಶೀಲಿಸಿದ. ಅದು ಬರೇ ಓಟೆಯಾಗಿರಲಿಲ್ಲ. ಅದರ ಒಳಗೊಂದು ಓಲೆಯೂ ಇತ್ತು. ಅದರಲ್ಲಿ ಗೂಢವಾದ ಅಕ್ಷರಗಳಲ್ಲಿ ಏನೋ ಬರೆದಿತ್ತು. ಅದಾದರೂ ಚಿತ್ರಕನ ಕುತೂಹಲಕ್ಕೆ ಕಾರಣವಾಗುತ್ತಿರಲಿಲ್ಲ. ಅದರಲ್ಲಿ ಸುಂದರವಾದ ನಕ್ಷೆಗಳಿದ್ದವು. ಒಂದು ಭವ್ಯ ಸೌಧದ ಚಿತ್ರವನ್ನೂ ಬರೆದಿತ್ತು. ಮತ್ತೆಮತ್ತೆ ನೋಡಿದಾಗ ಅದು ವಾರಣಾವತದ ಅರಮನೆಯ ಚಿತ್ರವೆಂದು ಸ್ಫುಟವಾಯಿತು. ಭಟನಾಯಕ ಇನ್ನೇನು ಹೊರಡಬೇಕು, ಅಷ್ಟರಲ್ಲಿ ಕುಳ್ಳ ಅವನನ್ನು ಒಳಗೆ ಕರೆದ. “ಏನು ಪ್ರಭೋ” “ಭಟನಾಯಕ, […]













