ಬಿಟ್ಟುಬಂದ ದೇಶಕ್ಕಿಂತ ಇಲ್ಲಿಯ ಬದುಕೇ ತನಗೆ ಉತ್ತಮವಾಗಿದೆಯೆಂದುಕೊಂಡ ರಂಗನಾಥ ಅಲ್ಲಿನ ಪೌರತ್ವವನ್ನು ಸ್ವೀಕರಿಸಿದ. ಪ್ರಾಮಾಣಿಕತೆ, ತನ್ನ ಕಾರ್ಯದಲ್ಲಿ ತೋರಿದ ನಾಯಕತ್ವಗುಣ ಹಾಗೂ ತನ್ನ ಸಂವಹನ ಶೈಲಿಗಳಿಂದಾಗಿ ಧನ್ಯಾಡಿಯ ರಂಗನಾಥ ಇಂಗ್ಲೆಂಡಿನಲ್ಲಿ ಮಿಸ್ಟರ್ ರಂಗನಾದ. ಅಷ್ಟಲ್ಲದೆ ಮುಂದೆ ನಡೆದ ಲ್ಯಾಂಕಶೈರ್ ಕೌಂಟಿಯ ಚುನಾವಣೆಯಲ್ಲಿ ಕೌನ್ಸಿಲರ್ ಆಗಿ ಚುನಾಯಿಸಲ್ಪಟ್ಟ. ಈ ವಿಷಯ ಇಂಗ್ಲೆಂಡಿನ ಪತ್ರಿಕೆಗಳಲ್ಲದೆ, ರಂಗನಾಥನ ಹುಟ್ಟೂರು ಧನ್ಯಾಡಿಯ ಸಂಜೆ ಪತ್ರಿಕೆಯಲ್ಲೂ ಸಹ ಅವನ ಭಾವಚಿತ್ರದ ಸಹಿತ ಪ್ರಕಟವಾಗಿ ಊರಿನ ಸಮಸ್ತ ಜನತೆ ಈ ವಿಷಯವನ್ನು ಕೇಳಿ ಹೊಂಪುಳಿಹೋದರು. ಮುಂದಿನ ಬಾರಿ ರಂಗನಾಥ ಊರಿಗೆ ಬಂದಾಗ ಅವನಿಗೆ ನೀಡಬೇಕಾದ ಸ್ವಾಗತದ ಬಗ್ಗೆ ಆಗಲೇ ಮಾತುಕತೆಗಳು ಪ್ರಾರಂಭವಾದವು.
ಏನು ಪ್ರಪಂಚವಿದು! ಏನು ಧಾಳಾಧಾಳಿ |
ಏನದ್ಭುತಾಪಾರಶಕ್ತಿನಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದೆಕಲ್ಲ? – ಮಂಕುತಿಮ್ಮ ||
(ಡಿವಿಜಿಯವರ ಮಂಕುತಿಮ್ಮನ ಕಗ್ಗದಿಂದ)
ರಂಗನಾಥ ಬ್ಲಾಕ್ಪೂಲಿನ ಕ್ಯೂಬಾ ಲಿಬರೆ ರೆಸ್ಟೋರೆಂಟಿನ ಎದುರು ಕ್ಯಾಬಿನಲ್ಲಿ ಬಂದಾಗಲೇ ಗಂಟೆ ಹನ್ನೆರಡು ದಾಟಿತ್ತು. ಈ ಕ್ಯೂಬನ್ ರೆಸ್ಟೋರೆಂಟ್ ಒಂದನೆಯ ಮಹಡಿಯಲ್ಲಿದ್ದರೆ, ನೆಲ ಅಂತಸ್ತಿನಲ್ಲಿ ಸಾಲ್ಸಾ ನೃತ್ಯದ ತರಗತಿ ನಡೆಯುತ್ತಿತ್ತು. ಆ ತರಗತಿಯಲ್ಲಿ ಮಧ್ಯವಯಸ್ಕ ಸಪೂರ ದೇಹದ ಟ್ಯೂಟರ್ ತನ್ನ ಎದೆಯನ್ನು ಮುಂದುಮಾಡಿಕೊಂಡು ಚಾ..ಚಾ..ಚಚ್ಚಚಾ ಎಂದು ಹೇಳುತ್ತ ಅಗತ್ಯಕ್ಕಿಂತ ಜಾಸ್ತಿಯೇ ಉತ್ಸಾಹದಿಂದ ನೆರೆದಿದ್ದ ಹದಿನೈದು ಇಪ್ಪತ್ತು ಮಂದಿಗೆ ನೃತ್ಯವನ್ನು ಹೇಳಿಕೊಡುತ್ತಿದ್ದ. ಅದನ್ನು ನೋಡುತ್ತ ರಂಗನಾಥ ಒಂದನೆಯ ಮಹಡಿಯಲ್ಲಿದ್ದ ರೆಸ್ಟೋರೆಂಟಿನತ್ತ ನಡೆದ. ರಿಸೆಪ್ಶನಿಸ್ಟಳಲ್ಲಿ ಟೇಬಲ್ಲನ್ನು ಕಾದಿರಿಸಿದ ಹ್ಯಾರಿಯ ಹೆಸರನ್ನು ಹೇಳಿ, ಆಕೆ ತೋರಿದ ಮೂಲೆ ಟೇಬಲ್ಲಿನತ್ತ ನಡೆದ. ಹ್ಯಾರಿ ಇನ್ನೂ ಬಂದಿರಲಿಲ್ಲ.
ರೆಸ್ಟೋರೆಂಟಿನ ಒಳಾಂಗಣ ಸರಿಯಾಗಿ ಕಾಣಲು ಸಹಕಾರಿಯಾಗುವ ಕುರ್ಚಿಯಲ್ಲಿ ಕುಳಿತು ರೆಸ್ಟೋರೆಂಟಿನ ಒಳಗೆ ಸುತ್ತಲೂ ಕಣ್ಣನ್ನು ಹಾಯಿಸಿದ. ಒಂದು ಕಡೆಯಲ್ಲಿ ಕರಾವೊಕೆಯ ಜೊತೆಯಲ್ಲಿ ಹಾಡುಗಾತಿಯೋರ್ವಳು ಯಾವುದೋ ಸ್ಪ್ಯಾನಿಷ್ ಹಾಡನ್ನು ಕುತ್ತಿಗೆಯನ್ನು ಉದ್ದಮಾಡಿಕೊಂಡು ಹಾಡುತ್ತಿದ್ದಳು. ಹತ್ತು-ಹದಿನೈದು ಜನರ ಗುಂಪೊಂದು ಕೂಡಿಸಿದ ಮೂರು ಟೇಬಲ್ಲುಗಳ ಸುತ್ತ ಕುಳಿತು ಯಾರದೋ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅವರ ನಗು, ಮಾತುಗಳು ಹಾಡುಗಾತಿಯ ಹಾಡನ್ನು ಮೀರಿ ಕೇಳಿಬರುತ್ತಿದ್ದವು. ಬಾರ್ ಕೌಂಟರ್ನಿಂದ ಓರ್ವ ಯುವತಿ ಹಾಗೂ ಇನ್ನೊರ್ವ ಯುವಕ ಸಪ್ಲ್ಲೈಯರ್ಸ್, ತೆಗೆದುಕೊಂಡ ಆರ್ಡರ್ಗಳಿಗೆ ಸರಿಯಾಗಿ ಟೇಬಲ್ಲುಗಳಿಗೆ ಚುರುಕಾಗಿ ಪಾನೀಯ ಸರಬರಾಜು ಮಾಡಿ ಎಲ್ಲರ ಜೊತೆಯಲ್ಲಿ ನಗುಮುಖದಿಂದ ಮಾತನಾಡುತ್ತಿದ್ದರು. ಬಣ್ಣದ ಗಾಜುಗಳ ಕಿಟಕಿಯಿಂದ ಒಳಗೆ ಬಂದ ಬೆಳಕು ರೆಸ್ಟೋರೆಂಟ್ನ ಒಂದೊಂದು ಕಡೆ ಒಂದೊಂದು ಬಣ್ಣವನ್ನು ತುಂಬಿತ್ತು. ಕಿಟಕಿಗಳಿಲ್ಲದ ಕಡೆ ಸಾಧಾರಣ ಗಾತ್ರದ ಭಾವಚಿತ್ರಗಳನ್ನು ಫ್ರೇಮ್ನ ಜೊತೆಯಲ್ಲಿ ಗೋಡೆಯಲ್ಲಿ ಸಿಕ್ಕಿಸಿದ್ದರು. ಅವೆಲ್ಲ ಕ್ಯೂಬಾಕ್ಕೆ ಸಂಬಂಧಪಟ್ಟ ಚಿತ್ರಗಳೇ. ತಲೆಯಲ್ಲಿ ಟೋಪಿ ಹಾಕಿಕೊಂಡು ಬಾಯಲ್ಲಿ ದೊಡ್ಡ ಗಾತ್ರದ ಕ್ಯೂಬನ್ ಸಿಗಾರ ಇಟ್ಟುಕೊಂಡ ನೆರಿಗೆಮುಖದ ಕ್ಯೂಬನ್ ಹಿರಿಯಜ್ಜ, ಧಡೂತಿ ದೇಹದ ನಗುವ ಯುವತಿ, ಹವನ್ನಾದ ರಸ್ತೆಗಳು, ಅದರ ಮೇಲೆ ಹಳೆಯ ಕಾರುಗಳು, ಸುಂದರ ಸಮುದ್ರತೀರದಲ್ಲಿ ಮಲಗಿಕೊಂಡಿರುವ ನೂರಾರು ಜನ, ತನಗಿಂತಲೂ ದೊಡ್ಡದಾದ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡ ಪುಟ್ಟಬಾಲಕ, ಖಾಕಿ ದಿರಿಸಿನ ಕ್ರಾಂತಿಕಾರಿಗಳಾದ ಫಿಡೆಲ್ ಕ್ಯಾಸ್ಟ್ರೊ, ಅಬೆಲ್ ಸಾಂತಾಮಾರಿಯಾ, ಹ್ಯೂಬರ್ ಮಾತೊಸ್, ಚೆ-ಗೆವಾರಾರು ಬಗೆಬಗೆಯ ಭಂಗಿಯಲ್ಲಿರುವ ಕಪ್ಪುಬಿಳುಪಿನ ಛಾಯಾಚಿತ್ರಗಳು – ಇವೆಲ್ಲ ಕ್ಯೂಬಾದ ಬದುಕನ್ನು ಪುನರ್ರೂಪಿಸುವಂತೆ ಕಾಣುತ್ತಿತ್ತು. ಬಿಲ್ಕೌಂಟರ್ನ ಮೇಲೆ Support Cuba ಎಂದು ಬರೆಯಲ್ಪಟ್ಟ ಗಾಜಿನ ಜಾರಿನಲ್ಲಿ ಒಂದಿಷ್ಟು ಪೌಂಡ್ಗಳು, ನಾಣ್ಯಗಳು ಕ್ಯೂಬಾದ ಸಹಾಯಕ್ಕೆ ಹೊರಟುನಿಂತಂತೆ ಇದ್ದಿದ್ದವು.
* * *
ಹುಟ್ಟಿದ ದೇಶವನ್ನು ಬಿಟ್ಟು, ಬದುಕನ್ನು ಕಟ್ಟಿಕೊಳ್ಳಲು ಇಂಗ್ಲೆಂಡಿನ ಲ್ಯಾಂಕಶೈರ್ ಕೌಂಟಿಯ ಬ್ಲಾಕ್ಪೂಲ್ ಎನ್ನುವ ಊರಿನ ಎನ್ಎಚ್ಎಸ್ (ನ್ಯಾಷನಲ್ ಹೆಲ್ತ್ ಸರ್ವಿಸ್, ಇಂಗ್ಲೆಂಡಿನ ಸರಕಾರದ ಅಡಿಯಲ್ಲಿ ಕೆಲಸ ಮಾಡುವ ನಾಗರಿಕ ಆರೋಗ್ಯ ಸೇವಾಸಂಸ್ಥೆ) ಆಸ್ಪತ್ರೆಯಲ್ಲಿ ಪುರುಷ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರಂಗನಾಥ. ಓದುವಾಗ ಅಷ್ಟೇನೂ ಚುರುಕಲ್ಲದ ಆತ ಹುಟ್ಟಿದ ಊರು ಧನ್ಯಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮಣರಾಯರ ಕೈಯಲ್ಲಿದ್ದ ಗಾಳಿಮರದ ಅಡರು ಪುಡಿಯಾಗಲು ಬೆನ್ನನ್ನು ಯಥಾಶಕ್ತಿ ನೀಡಿದ್ದೇ ಪ್ರಾಥಮಿಕ ಶಾಲೆಯಲ್ಲಿ ಆತನ ಸಾಧನೆಯಾಗಿತ್ತು. ಆತನ ತಂದೆ ಪದ್ಮನಾಭಯ್ಯನವರ ಮಹಾಲಸಾ ಟಿಫಿನ್ ರೂಂಗೆ ಬರುತ್ತಿದ್ದ ಮುಖ್ಯೋಪಾಧ್ಯಾಯರು ಹೋಯ್ ಯಜಮಾನ್ರೆ, ನಿಮ್ಮ ಹೋಟೆಲ್ಲಿನ ಕೆಲಸಕ್ಕೆ ಮುಂದಿನ ವರ್ಷದಿಂದ ಬೇರೆ ಜನ ಬೇಡ. ನಿಮ್ಮ ಮಗನೇ ತಯಾರಾಗುತ್ತಾನೆ ಬಿಡಿ ಎಂದು ಹೋಟೆಲ್ನ ಬನ್ಸ್ನ್ನು ಕಾಯಿಚಟ್ನಿಯಲ್ಲಿ ಮುಳುಗಿಸಿ ತಿನ್ನುತ್ತ ಹೇಳುತ್ತಿದ್ದುದ್ದನ್ನು ಕೇಳಿ ಹೋಟೆಲ್ಲಿನ ದೋಸೆಹಂಚಿನ ಹಾಗೆಯೆ ಕೆಂಪಾಗುತ್ತಿದ್ದರು ಪದ್ಮನಾಭಯ್ಯ. ಅಂತೂಇಂತೂ ಹತ್ತನೆಯ ತರಗತಿಯನ್ನು ಪಾಸು ಮಾಡುವ ಸಮಯದಲ್ಲಿ ರಂಗನಾಥನ ಗಡ್ಡಮೀಸೆ ಭರ್ಜರಿಯಾಗಿ ಬೆಳೆದಿದ್ದವು. ಒಟ್ಟಾರೆ ಪದ್ಮನಾಭಯ್ಯನವರ ಮಗ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಊರಿನವರು ಷರಾ ಹಾಕುವ ಹೊತ್ತಿನಲ್ಲಿ ರಂಗನಾಥನ ಹತ್ತನೆಯ ಇಯತ್ತೆ ಮುಗಿಯುವುದಕ್ಕೂ, ಕಾಮತರ ಅಕ್ಕನ ಗಂಡ ಬೆಂಗಳೂರಿನಿಂದ ಬರುವುದಕ್ಕೂ ಸರಿಯಾಯಿತು.
ಬಾವ, ಈ ಹುಡುಗ ಇಲ್ಲಿ ಇದ್ದರೆ ಯಾವುದಕ್ಕೂ ಉಪಯೋಗಕ್ಕೆ ಬರಲಾರ. ಕಾಫಿ ಮಾರುವುದು, ಉಮಿಒಲೆ ಎದುರು ಕರಟುವುದು ನನ್ನ ಕಾಲಕ್ಕೆ ಮುಗಿಯಲಿ. ಇವನಿಗೆ ಅದು ಬೇಡ. ಅವನನ್ನು ನಿಮ್ಮ ಕೈಗೆ ಹಾಕಿದ್ದೇನೆ. ನೀವೇ ಅವನಿಗೊಂದು ವ್ಯವಸ್ಥೆ ಮಾಡಿ ಎಂದು ಕೇಳಿದರು ಆರ್ತರಾಗಿ.
ಕಾಮತರ ಬಾವ, ಬೆಂಗಳೂರಿನಲ್ಲಿ ಮೆಡಿಕಲ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗನ ತಲೆಗೆ ಓದು ಹತ್ತದೆ ಇದ್ದರೂ, ಚುರುಕಿದ್ದಾನೆ. ಮೇಲಾಗಿ ನಾಲ್ಕು ಜನರಿಗೆ ಸಹಾಯ ಮಾಡುವ ಗುಣವಂತೂ ಇದೆ. ಯಾವುದಕ್ಕೂ ನೋಡಿಯೇ ಬಿಡೋಣವೆಂದು ಪರಿಚಯದವರ ನರ್ಸಿಂಗ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸಿದರು.
ರಂಗನಾಥನಲ್ಲಿ ನಿನ್ನ ಆಸಕ್ತಿ ಏನೆಂದು ಕೇಳುವ ರಿವಾಜೇ ಇಲ್ಲದ ಸಮಯದಲ್ಲಿ, ಹಿರಿಯರು ತೆಗೆದುಕೊಂಡ ನಿರ್ಧಾರವನ್ನು ಶಿರಬಾಗಿ ಒಪ್ಪಿ ಅದರಂತೆ ನಡೆಯುವುದರ ಬದಲು ಬೇರೇನೂ ಆಯ್ಕೆಯೇ ಇರಲಿಲ್ಲ. ಹಾಗಾಗಿ ಮಾವನ ಜೊತೆಯಲ್ಲಿ ಬೆಂಗಳೂರಿಗೆ ಬಂದು ನರ್ಸಿಂಗ್ ಕಾಲೇಜನ್ನು ಸೇರಿಕೊಂಡ. ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಮೊದಲು ಸ್ವಲ್ಪ ಕಷ್ಟಪಟ್ಟ ರಂಗನಾಥ, ನಂತರ ತನ್ನ ಬ್ಯಾಚಿನಲ್ಲಿ ಒಳ್ಳೆಯ ವಿದ್ಯಾರ್ಥಿಯೆಂದು ಹೆಸರು ಮಾಡಿಕೊಂಡ. ಕೋರ್ಸನ್ನು ಮುಗಿಸಿದ ಮೇಲೆ ಒಂದು ಆಸ್ಪತ್ರೆಯಲ್ಲಿ ಕೆಲಸವನ್ನು ಪ್ರಾರಂಭಿಸಿದ. ಪ್ರಾಮಾಣಿಕವಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ರಂಗನಾಥನಿಗೆ ತನ್ನ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರ ಪರಿಚಯವೂ ಆಗತೊಡಗಿತು. ಅವರ ಜೊತೆಯಲ್ಲಿ ಆಗಾಗ ನಡೆಯುತ್ತಿದ್ದ ಮಾತುಕತೆಯಿಂದ ಇಲ್ಲಿ ಎಷ್ಟು ಕೆಲಸ ಮಾಡಿದರೂ ಅಷ್ಟೆ, ಗುಣವಿಲ್ಲ, ಗೌರವವಿಲ್ಲ ಎಂಬ ಹತಾಶೆಯ ಭಾವನೆಗಳು ಬೇರೆ ದೇಶದತ್ತ ನೋಡಲು ಪ್ರೇರೇಪಿಸಿತು. ಮನಃಪೂರ್ವಕವಾಗಿ ಒಪ್ಪದಿದ್ದರೂ ರಂಗನಾಥ ಒಂದು ಕೈ ನೋಡಿಯೇ ಬಿಡೋಣವೆಂದು ಇಂಗ್ಲೆಂಡಿನ ಲ್ಯಾಂಕಶೈರ್ ಕೌಂಟಿಯ ಎನ್ಎಚ್ಎಸ್ನಲ್ಲಿ ಕೆಲಸಕ್ಕೆ ಸೇರಿಕೊಂಡ. ಮಗ ಫಾರಿನ್ಗೆ ಹೋಗುತ್ತಾನೆ ಎಂಬ ಖುಷಿಯೇ ಪದ್ಮನಾಭಯ್ಯನವರನ್ನು ಒಪ್ಪಿಸಿತು.
* * *
ಯೂರೋಪಿನ ಅನೇಕ ರಾಷ್ಟ್ರಗಳಂತೆ ಹಿರಿಯ ನಾಗರಿಕರ ಸಂಖ್ಯೆ ಇಂಗ್ಲೆಂಡ್ನಲ್ಲಿ ದೊಡ್ಡಮಟ್ಟದಲ್ಲಿ ಇರುವುದರಿಂದ ಹಾಗೂ ಸರಕಾರವು ಅಂತಹವರನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿಯೆಂದುಕೊಂಡಿರುವುದರಿಂದ ತನ್ನ ಉಚಿತ ಆರೋಗ್ಯ ಸೇವೆಯ ಅಡಿಯಲ್ಲಿ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಬಹಳಷ್ಟು ಸಂಪನ್ಮೂಲಗಳನ್ನು ವ್ಯಯಿಸುತ್ತದೆ. ಇಂತಹ ಕಾರ್ಯವನ್ನು ಮಾಡುವ ಎನ್ಎಚ್ಎಸ್ನ ಹಿರಿಯ ನಾಗರಿಕರ ಸೇವೆಯ ವಿಭಾಗಕ್ಕೆ ಪುರುಷ ನರ್ಸ್ ಆಗಿ ಲ್ಯಾಂಕಶೈರ್ ಕೌಂಟಿಯ ಬ್ಲಾಕ್ಪೂಲ್ ಎನ್ನುವ ಊರಿನಲ್ಲಿ ರಂಗನಾಥ ಸೇರಿಕೊಂಡ. ತನ್ನ ದಿನದ ಕಾರ್ಯದ ಅಂಗವಾಗಿ ಆತ ವಾರದ ಐದು ದಿನ ಒಂದಿಬ್ಬರು ಹಿರಿಯ ನಾಗರಿಕರ ಮನೆಯಲ್ಲಿ ಅವರ ದಿನನಿತ್ಯದ ಕೆಲಸಗಳನ್ನು ಮಾಡಲು ಸಹಕರಿಸುತ್ತಿದ್ದ. ಮನೆಯಲ್ಲಿ ಇರುತ್ತಿದ್ದ ಗರಿಷ್ಠ ಇಬ್ಬರು, ಹಲವೊಮ್ಮೆ ಓರ್ವರೆ ಉಳಿದುಕೊಂಡು ತಮ್ಮ ಸರಳ ದೈನಂದಿನ ಕೆಲಸಕ್ಕೂ ಇನ್ನೊಬ್ಬರನ್ನು ಅವಲಂಬಿಸುವ ಹಿರಿಯರ ಜೀವನ ಅವನ ಮನಸ್ಸನ್ನು ಕಲಕುತ್ತಿತ್ತು. ಬದಲಾಗುತ್ತಿರುವ ಅಥವಾ ಬದಲಾದ ಮಾನವ ಮನೋಧರ್ಮವೇ ಇದಕ್ಕೆ ಕಾರಣವಲ್ಲವೆ. ಇವರ ಬಗ್ಗೆ ಆಲೋಚನೆ ಮಾಡಲು ಸ್ಥಿತ್ಯಂತರಗೊಳ್ಳುತ್ತಿರುವ ಸಮಾಜಕ್ಕೆ ಸಮಯವಿಲ್ಲದೆ ಹೋಯಿತಲ್ಲ ಎಂಬ ಭಾವನೆ ರಂಗನಾಥನನ್ನು ಆಗಾಗ ಕಾಡುತ್ತಿತ್ತು. ತಾನು ಏನಾದರೂ ತನ್ನ ಕಡೆಯಿಂದ ಮಾಡಲು ಸಾಧ್ಯವಾಗಬಹುದೇ ಎಂಬ ಪ್ರಶ್ನೆ ಅವನ ಮನಸ್ಸಿನಲ್ಲಿ ಉಳಿದಿತ್ತು. ಹೇಗೂ ದಿನದ ಕೆಲಸದ ಅವಧಿ ಮುಗಿದ ಮೇಲೆ ತನಗೆ ಮಾಡಲಿಕ್ಕೆ ಏನೂ ಕೆಲಸವಿರುವುದಿಲ್ಲ. ತಾನೇ ಒಂದೆರಡು ಗಂಟೆ ಹೀಗೆಯೇ ಇಂತವರ ಜೊತೆಯಲ್ಲಿ ಕಳೆದರೆ ಹೇಗೆ ಎಂಬ ಆಲೋಚನೆ ಬಂದದ್ದೇ ತಡ ಅದನ್ನು ಕಾರ್ಯರೂಪಕ್ಕೆ ಇಳಿಸಿದ.
ಒಂದು ಸಂಜೆ ತಾನು ನಿಯಮಿತವಾಗಿ ಹೋಗುತ್ತಿದ್ದ ಓರ್ವ ವೃದ್ಧ ದಂಪತಿಯ ಮನೆಗೆ ಹೋಗಿ, ಅವರ ಜೊತೆಯಲ್ಲಿ ಕುಳಿತು ಮನಸ್ಸು ಪ್ರಫುಲ್ಲಗೊಳಿಸುವ ಮಾತನಾಡಿ, ರಾತ್ರಿಯ ಊಟದ ವ್ಯವಸ್ಥೆ ಮಾಡಿ, ರಾತ್ರಿ ಮನೆಯನ್ನು ಸೇರಿದ. ಮನಸ್ಸಿನಲ್ಲಿ ಏನೋ ಸಾಧಿಸಿದ ಸಂತೃಪ್ತಿ ಅಂದು ಆತನ ಮನಸ್ಸಿನಲ್ಲಿ ತುಂಬಿತ್ತು. ಒಂದೆರಡು ತಿಂಗಳಲ್ಲಿ ತನ್ನಂತೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಹದಿನೈದು ಇಪ್ಪತ್ತು ಮಂದಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಅವರೂ ಸಹ ದಿನದ ಒಂದೆರಡು ಗಂಟೆಯನ್ನು ಹೀಗೆ ವ್ಯಯಿಸಲು ಪ್ರೇರೇಪಿಸಿದ. ಹೀಗೆ ಪ್ರಾರಂಭವಾದ ಈ ಗುಂಪು ವಾರಾಂತ್ಯದಲ್ಲಿ ಹಿರಿಯ ನಾಗರಿಕರನ್ನು ಊರಿನ ಉದ್ಯಾನವನಕ್ಕೋ ಅಥವಾ ಊರಿನ ಹೊರವಲಯದಲ್ಲಿ ಹರಿಯುತ್ತಿದ್ದ ಝರಿಯ ಸಮೀಪಕ್ಕೋ, ಭಾನುವಾರದಂದು ಬಸ್ಸ್ಟ್ಯಾಂಡಿನ ಹತ್ತಿರ ನಡೆಯುತ್ತಿದ್ದ ಸಂತೆಗೋ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ. ಅವರಿಗಾಗಿ ಚಿಕ್ಕಪುಟ್ಟ ಆಟಗಳು, ಕುಡಿಯಲು ಬೇಕಾದ ಪೇಯಗಳ ವ್ಯವಸ್ಥೆಗಳನ್ನೂ ಮಾಡಿದ. ಅನೂಚಾನವಾಗಿ ಎರಡು-ಮೂರು ವರ್ಷ ನಡೆದುಕೊಂಡು ಬಂದ ಈ ಕಾರ್ಯವನ್ನು ಸಮಾಜ ನಿಧಾನವಾಗಿ ಗುರುತಿಸಿತು. ಸ್ಥಳೀಯ ವೃತ್ತಪತ್ರಿಕೆಯಲ್ಲಿ ಈ ಗುಂಪಿನ ನಿಸ್ವಾರ್ಥ ಕೆಲಸದ ಬಗ್ಗೆ ವರದಿ ಬಂದು ಅದರಿಂದ ಮತ್ತಷ್ಟು ಜನರು ಇವರ ಕೆಲಸಕ್ಕೆ ಕೈಗೂಡಿಸಿದರು. ಕೆಲವು ಸಂಘಸಂಸ್ಥೆಗಳು ಇವರಿಗೆ ಬಹುಮಾನಗಳನ್ನು ನೀಡಿದವು. ರಂಗನಾಥನ ಇಂತಹ ಅನುಭವ ಬೆಂಗಳೂರಿನಲ್ಲಿ ಅವನ ರೀತಿಯಲ್ಲಿ ಪದವಿ ಪಡೆದ ಅನೇಕ ಶುಶ್ರೂಷಕರನ್ನು ಲ್ಯಾಂಕಶೈರ್ ಹಾಗೂ ಸುತ್ತಮುತ್ತಲಿನ ಕೌಂಟಿಯ ಎನ್ಎಚ್ಎಸ್ ಆಸ್ಪತ್ರೆಗಳಿಗೆ ಕರೆದುತಂದಿತು.
ಬಿಟ್ಟುಬಂದ ದೇಶಕ್ಕಿಂತ ಇಲ್ಲಿಯ ಬದುಕೇ ತನಗೆ ಉತ್ತಮವಾಗಿದೆಯೆಂದುಕೊಂಡ ರಂಗನಾಥ ಅಲ್ಲಿನ ಪೌರತ್ವವನ್ನು ಸ್ವೀಕರಿಸಿದ. ಪ್ರಾಮಾಣಿಕತೆ, ತನ್ನ ಕಾರ್ಯದಲ್ಲಿ ತೋರಿದ ನಾಯಕತ್ವಗುಣ ಹಾಗೂ ತನ್ನ ಸಂವಹನ ಶೈಲಿಗಳಿಂದಾಗಿ ಧನ್ಯಾಡಿಯ ರಂಗನಾಥ ಇಂಗ್ಲೆಂಡಿನಲ್ಲಿ ಮಿಸ್ಟರ್ ರಂಗನಾದ. ಅಷ್ಟಲ್ಲದೆ ಮುಂದೆ ನಡೆದ ಲ್ಯಾಂಕಶೈರ್ ಕೌಂಟಿಯ ಚುನಾವಣೆಯಲ್ಲಿ ಕೌನ್ಸಿಲರ್ ಆಗಿ ಚುನಾಯಿಸಲ್ಪಟ್ಟ. ಈ ವಿಷಯ ಇಂಗ್ಲೆಂಡಿನ ಪತ್ರಿಕೆಗಳಲ್ಲದೆ, ರಂಗನಾಥನ ಹುಟ್ಟೂರು ಧನ್ಯಾಡಿಯ ಸಂಜೆ ಪತ್ರಿಕೆಯಲ್ಲೂ ಸಹ ಅವನ ಭಾವಚಿತ್ರದ ಸಹಿತ ಪ್ರಕಟವಾಗಿ ಊರಿನ ಸಮಸ್ತ ಜನತೆ ಈ ವಿಷಯವನ್ನು ಕೇಳಿ ಹೊಂಪುಳಿಹೋದರು. ಮುಂದಿನ ಬಾರಿ ರಂಗನಾಥ ಊರಿಗೆ ಬಂದಾಗ ಅವನಿಗೆ ನೀಡಬೇಕಾದ ಸ್ವಾಗತದ ಬಗ್ಗೆ ಆಗಲೇ ಸಂವಾದಗಳು ಪ್ರಾರಂಭವಾದವು.
* * *
ಒಂದು ಬೆಳಗ್ಗೆ ರಂಗನಾಥ ತನ್ನ ಕಚೇರಿಯಲ್ಲಿ ಕುಳಿತು ತನ್ನ ಇಂದಿನ ಜವಾಬ್ದಾರಿಯ ಬಗ್ಗೆ ತಿಳಿದುಕೊಳ್ಳುವ ಸಂದರ್ಭದಲ್ಲಿ, ಅವನ ಮೊಬೈಲು ರಿಂಗಾಯಿತು.
ಹಲೋ, ನಾನು ಮಿ. ರಂಗನವರಲ್ಲಿ ಮಾತನಾಡುತ್ತಿರುವೆನೆ? ಎಂದು ಇನ್ನೊಂದು ಕಡೆಯಲ್ಲಿ ಕೇಳಿಬಂತು.
ನಮಸ್ಕಾರ, ಹೌದು ನಾನು ರಂಗ ಮಾತನಾಡುತ್ತಿರುವುದು.
ಮೊದಲಿಗೆ ತಾವು ಕೌನ್ಸಿಲರ್ ಆಗಿ ಆಯ್ಕೆಯಾದುದಕ್ಕೆ ಅಭಿನಂದನೆಗಳು. ನಾನು ಸ್ಟೀಫನ್. ಲಂಡನ್ನಿನಲ್ಲಿರುವೆ. ನಾನೋರ್ವ ವಿಸಿ. ಅಂದರೆ ವೆಂಚ್ಯೂರ್ ಕ್ಯಾಪಿಟಲಿಸ್ಟ್. ತಮ್ಮ ಜೊತೆಯಲ್ಲಿ ಮಾತನಾಡಬೇಕಾಗಿದೆ, ತಮಗೆ ಸಮಯವಿದ್ದರೆ.
ವಿನಯದ ಮಾತು ಇನ್ನೊಂದು ಕಡೆಯಿಂದ ರಂಗನಾಥನಿಗೆ ಕೇಳಿಬಂತು.
ಖಂಡಿತ. ಯಾವಾಗ ಬರುವಿರಿ? ಏನು ವಿಷಯ?
ಈ ಭಾನುವಾರ ನಾನು ಬ್ಲಾಕ್ಪೂಲಿಗೆ ಬರಲಿರುವೆ. ನಿಮ್ಮನ್ನು ಮುಖತಃ ಭೇಟಿಯಾದಾಗ ಹೆಚ್ಚಿನ ವಿಷಯವನ್ನು ಮಾತನಾಡಬಹುದು.
ಆಗಲಿ, ಎಲ್ಲಿಗೆ ಬರಲಿ?
ಯಾವುದಾದರೂ ರೆಸ್ಟೋರೆಂಟ್ನಲ್ಲಿ ಊಟದ ಸಮಯದಲ್ಲಿ ಭೇಟಿಯಾಗೋಣ. ನಿಮಗೆ ನಾಳೆಯ ಒಳಗಾಗಿ ಸ್ಥಳದ ಲೊಕೇಶನ್ನನ್ನು ಕಳುಹಿಸುವೆ. ಬಾಕಿ ಅಲ್ಲಿಯೇ ಮಾತಾಡೋಣ ಎಂದು ಹೇಳಿ ಕರೆ ತುಂಡಾಯಿತು.
ಮಾರನೆಯ ದಿನ ಕ್ಯೂಬಾ ಲಿಬರೆ ಎನ್ನುವ ರೆಸ್ಟೋರೆಂಟ್ನ ಲೊಕೇಶನ್ನನ್ನು ರಂಗನಾಥನ ಮೊಬೈಲಿಗೆ ಬಂದಿತು.
* * *
ತನ್ನ ಹತ್ತಿರ ಈ ವೆಂಚ್ಯೂರ್ ಕ್ಯಾಪಿಟಲಿಸ್ಟ್ಗೆ ಇರುವುದಾದರೂ ಏನು, ಎಂದು ಸಪ್ಲೈಯರ್ ತಂದುಕೊಟ್ಟ ಲೆಮೆನೇಡನ್ನು ಹೀರುತ್ತಲೆ ಆಲೋಚಿಸುತ್ತಿದ್ದ ರಂಗನಾಥ. ಇಲ್ಲಿಯವರೆಗೆ ತಾನು ಮಾಡಿದ ಕೆಲಸ ಓರ್ವ ವೆಂಚ್ಯೂರ್ ಕ್ಯಾಪಿಟಲಿಸ್ಟ್ಗೆ ಉಪಯೋಗವಾಗುವಂತಹದ್ದೇನೂ ಅಲ್ಲ. ರಾಜಕೀಯವಾಗಿ ಆತನಿಗೆ ಏನಾದರೂ ಸಹಾಯ ಬೇಕಿದ್ದರೆ ಇಷ್ಟೊತ್ತಿಗೆ ರಾಜಕೀಯವಾಗಿ ಹೆಸರು ಮಾಡಿದವರನ್ನು ಆತ ಭೇಟಿಯಾಗಬೇಕಿತ್ತು ವಿನಃ ಈಗ ತಾನೇ ಯಕಶ್ಚಿತ್ ಕೌನ್ಸಿಲರ್ ಆದ ತನ್ನಂತಹ ಹುರಿಗೊಳ್ಳದ ರಾಜಕಾರಣಿಯನ್ನಲ್ಲ ಎಂಬ ಆಲೋಚನೆಯಲ್ಲಿ ಇರುವಾಗಲೆ ರೆಸ್ಟೋರೆಂಟ್ನ ಒಳಗೆ ಬಂದ ಓರ್ವ ವ್ಯಕ್ತಿ ರಿಸೆಪ್ಶನಿಸ್ಟಳ ಹತ್ತಿರ ಮಾತನಾಡಿ, ತನ್ನ ಟೇಬಲ್ಲಿನತ್ತ ನೋಡುತ್ತಿರುವುದನ್ನು ನೋಡಿ ಈತನೇ ಹ್ಯಾರಿ ಇರಬಹುದು ಎಂದುಕೊಂಡ ರಂಗನಾಥ. ಆತನ ಊಹೆ ಸರಿಯಾಗಿತ್ತು. ತನ್ನತ್ತ ಬಂದು ಟೇಬಲ್ಲಿನ ಎದುರು ನಿಂತು ಪಶ್ಚಾತ್ತಾಪದಿಂದ,
ನಾನು ನಿಮ್ಮನ್ನು ಕಾಯಿಸಿದೆ, ಕ್ಷಮೆಯಿರಲಿ ಎಂದು ಎದುರಿನ ಕುರ್ಚಿಯಲ್ಲಿ ಕುಳಿತ.
ಹಾಗೇನಿಲ್ಲ. ನಾನು ಸಹ ಸ್ವಲ್ಪ ಬೇಗನೆ ಬಂದೆ ಎಂದನು ರಂಗನಾಥ.
ಬೈದಿವೆ ನಾನು ಹ್ಯಾರಿ. ನೀವು ನೋಡಿಕೊಳ್ಳುತ್ತಿದ್ದಿರಲ್ಲ, ರಾಯಲ್ ಏರ್ಫೋರ್ಸಿನಲ್ಲಿ ಕೆಲಸಮಾಡುತ್ತಿದ್ದ ಏರ್ಮ್ಯಾನ್ ಸ್ಟೀಫನ್ ಅವರ ಮಗ ಎಂದು ಹಸ್ತಲಾಘವ ನೀಡಿದ. ಹಾಗೆಯೆ ಮುಂದುವರಿದು,
ನಾನು ಈಗ ಲಂಡನ್ನಿನಲ್ಲಿದ್ದೇನೆ. ನನ್ನ ತಂದೆ ಇಲ್ಲಿ ಇದ್ದಾರೆ. ತಮ್ಮಿಂದ ಬಹುವಾಗಿ ಸಹಾಯವನ್ನು ಪಡೆಯುವ ಈ ಊರಿನ ಅನೇಕರಲ್ಲಿ ಒಬ್ಬರು ನನ್ನ ತಂದೆ. ಅವರು ನಿಮ್ಮ ಸೇವಾತತ್ಪರತೆ, ಹಿರಿಯರ ಜೊತೆಯಲ್ಲಿ ನಿಮ್ಮ ಒಡನಾಟ, ಗೌರವದಿಂದ ಮಾತನಾಡುವ ವೈಖರಿ, ಪ್ರಾಮಾಣಿಕತೆ ಇವನ್ನೆಲ್ಲ ಬಹು ಮೆಚ್ಚಿಕೊಂಡಿರುವರು. ನನ್ನ ತಂದೆಯನ್ನು ನೋಡಿಕೊಳ್ಳುತ್ತಿರುವುದಕ್ಕೆ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಮೊನ್ನೆ ಕೌನ್ಸಿಲ್ ಇಲೆಕ್ಷನ್ ಆಗಿತ್ತಲ್ಲ. ಆಗ ಒಂದಿಷ್ಟು ಸ್ನೇಹಿತರನ್ನು ಒಟ್ಟುಮಾಡಿಕೊಂಡು ವೋಟ್ ಮಾಡಿ ಬಂದರೆಂದು ಈಸ್ಟರ್ಗೆ ನಾನು ಬಂದಾಗ ಅವರು ಹೇಳಿದರು. ಬೇರೆ ದೇಶದಿಂದ ಬಂದು, ಇಲ್ಲಿ ಕಾಲೂರಿ ನಮ್ಮವರಿಗೆ ಸಹಾಯಮಾಡುವುದು ಮತ್ತೆ ಇಲೆಕ್ಷನ್ನಲ್ಲಿ ಗೆಲ್ಲುವುದು ಸುಲಭವಲ್ಲ ಬಿಡಿ. ಇದಕ್ಕೆಲ್ಲ ನಿಮ್ಮ ನಾಯಕತ್ವವೇ ಕಾರಣ. ಅದಕ್ಕಾಗಿ ಹಾರ್ದಿಕ ಅಭಿನಂದನೆಗಳು.
ಅಷ್ಟೆಲ್ಲ ಹೊಗಳಿಕೆಗೆ ನಾನು ಅರ್ಹನು ಎಂದು ನಾನು ಭಾವಿಸಲಾರೆ. ಇಲ್ಲಿಯವರೆಗೆ ನಾನು ನನ್ನ ಕೆಲಸವನ್ನು ಮನಃಪೂರ್ವಕವಾಗಿ ಮಾಡುತ್ತಿರುವೆ. ಆದುದರಿಂದ ಅದು ವಿಶೇಷವೆಂದು ನನಗೆ ಅನ್ನಿಸುವುದಿಲ್ಲ.
ಅದು ನಿಮ್ಮ ದೊಡ್ಡ ಗುಣ.
ಅಷ್ಟರಲ್ಲಿ ವ್ಹೆಟರ್ ಬಂದು ಊಟಕ್ಕೆ ಬೇಕಾದ ಆರ್ಡರನ್ನು ತೆಗೆದುಕೊಂಡು ಹೋದ.
ರಂಗನಾಥ್, ನಿಮ್ಮಲ್ಲಿ ಒಂದು ವಿಷಯವನ್ನು ಮಾತನಾಡಲು ಇಲ್ಲಿಗೆ ಬರಲು ಹೇಳಿದ್ದು.
ಹ್ಯಾರಿಯತ್ತ ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದ ರಂಗನಾಥ.
ನಿಮಗೆ ಗೊತ್ತಿರುವ ಹಾಗೆ ನಾನೋರ್ವ ವೆಂಚ್ಯೂರ್ ಕ್ಯಾಪಿಟಲಿಸ್ಟ್. ಅಂದರೆ ಯಾವುದಾದರೂ ಹೊಸ ಉದ್ದಿಮೆಗಳಲ್ಲಿ ಹಣ ಹೂಡುವುದು ನನ್ನ ಕೆಲಸ. ಆ ಉದ್ದಿಮೆ ಮಾಡುವ ಲಾಭದಲ್ಲಿ ನನಗೆ ಸಿಗುವ ಪಾಲು ನನ್ನ ಲಾಭ. ಹೆಚ್ಚಿನ ಸ್ಟಾರ್ಟ್ಅಪ್ ಕಂಪೆನಿಗಳ ಉದ್ದೇಶಗಳು ನವೀನತೆಯಿಂದ ಕೂಡಿರುವುದರಿಂದ ಎಲ್ಲ ಕಂಪೆನಿಗಳು ಲಾಭವನ್ನೇ ಮಾಡುತ್ತವೆ ಎಂದು ಅಂದುಕೊಳ್ಳಲು ಸಾಧವಿಲ್ಲ. ಹಾಗಾಗಿ ನನ್ನ ಬಂಡವಾಳವು ರಿಸ್ಕ್ನಲ್ಲಿಯೇ ಇರುತ್ತವೆ. ಹೆಚ್ಚಿನ ಬಾರಿ ಸ್ಟಾರ್ಟ್ಅಪ್ ಕಂಪೆನಿಯವರೇ ತಮ್ಮ ಕಂಪೆನಿಯ ಬಗ್ಗೆ ನನ್ನಲ್ಲಿ ಹೇಳಿಕೊಂಡು ತಮ್ಮ ಕಂಪೆನಿಯಲ್ಲಿ ಬಂಡವಾಳ ಹೂಡುವಂತೆ ಕೇಳಿಕೊಳ್ಳುತ್ತಾರೆ. ಆದರೆ ಕೆಲವು ಬಾರಿ ನಾನೇ ಹೊಸ ಉದ್ದಿಮೆಯ ಐಡಿಯಾಗಳನ್ನು ಉತ್ಸಾಹಿಗಳಲ್ಲಿ ಹೇಳಿ, ಅವರಿಗೆ ಉದ್ದಿಮೆ ಸ್ಥಾಪಿಸಲು ನಾನೇ ಹಣವನ್ನು ಹೂಡಿಕೆ ಮಾಡುವುದೂ ಉಂಟು. ಈ ಸ್ಟಾರ್ಟ್ಅಪ್ಗಳು ಮುಂದೆ ಉದ್ದಿಮೆಗಳಾಗಿ ಬೆಳೆದು ನೂರಾರು ಕೈಗಳಿಗೆ ಕೆಲಸವನ್ನು ನೀಡುತ್ತವೆ. ಅದರ ಜೊತೆಯಲ್ಲಿ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಒಂದು ರೀತಿಯಲ್ಲಿ ನನ್ನದೂ ಸಮಾಜಸೇವೆ ನಿಮ್ಮ ರೀತಿಯಲ್ಲಿ ನಗುತ್ತ ನುಡಿದ ಹ್ಯಾರಿ.
ಹೋ, ಹೌದಾ. ಬಹು ಸಂತೋಷ – ಮರುನುಡಿದ ರಂಗ.
ರಂಗ, ನನ್ನ ತಂದೆಯವರು ನಿಮ್ಮ ಸೇವೆಯ ಬಗ್ಗೆ ಮೆಚ್ಚುಗೆಯಿಂದ ನುಡಿಯುವಾಗ ಈ ಆಲೋಚನೆ ನನ್ನ ಮನಸ್ಸಿನಲ್ಲಿ ಬಂತು. ನೋಡಿ, ಈಗ ಪ್ರಪಂಚದ ಹೆಚ್ಚಿನ ಮುಂದುವರಿದ ದೇಶಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಮ್ಮ ದೇಶದ ಉದಾಹರಣೆಯನ್ನೇ ತೆಗೆದುಕೊಂಡರೆ, ಇಲ್ಲಿಯ ಜನಸಂಖ್ಯೆಯಲ್ಲಿ ಈಗ ಸಾಧಾರಣ ೨೫% ಜನರ ಪ್ರಾಯ ಅರವತ್ತು ವರ್ಷ ದಾಟಿದೆ. ಮತ್ತೆ ಅಷ್ಟೇ ಪ್ರತಿಶತ ಜನರ ವಯಸ್ಸು ನಲವತ್ತರಿಂದ ಅರವತ್ತು ವರ್ಷಗಳ ನಡುವೆಯಿದೆ. ಮುಂದಿನ ವರ್ಷಗಳಲ್ಲಿ ಈ ಹಿರಿಯ ವಯಸ್ಕರ ಸಂಖ್ಯೆ ಬಹಳಷ್ಟು ಜಾಸ್ತಿಯಾಗುತ್ತದೆ. ನಮ್ಮ ದೇಶದ ಜನಸಂಖ್ಯಾಶಾಸ್ತ್ರದ ಅಂಕಿಅಂಶ ಹಾಗೂ ನಿಮ್ಮಲ್ಲಿರುವ ಕೌಶಲಗಳನ್ನು ನೋಡುವಾಗ ನನಗೊಂದು ಒಳ್ಳೆಯ ಬ್ಯುಸಿನೆಸ್ ಕಾಣುತ್ತಾ ಇದೆ.
ಹ್ಯಾರಿಯತ್ತ ಪ್ರಶ್ನಾರ್ಥಕ ದೃಷ್ಟಿಯಲ್ಲಿ ರಂಗನಾಥ ನೋಡುತ್ತಿದ್ದ.
ನಿಮಗೆ ಹಿರಿಯರ ಯೋಗಕ್ಷೇಮವನ್ನು ಹೇಗೆ ನೋಡಿಕೊಳ್ಳಬೇಕೆಂಬುದು, ಅವರಿಗೆ ಬೇಕಾಗುವ ಸಹಾಯ ಹಾಗೂ ಅದನ್ನು ಮಾಡುವ ರೀತಿ, ವೈದ್ಯಕೀಯ ಸಹಾಯ, ಇನ್ಶುರೆನ್ಸ್, ತುರ್ತುಸ್ಥಿತಿಯನ್ನು ನಿಭಾಯಿಸುವುದು, ಆ ಸಹಾಯಕ್ಕೆ ಬೇಕಾದ ಜನಸಂಪನ್ಮೂಲಗಳ ಹೊಂದಾಣಿಕೆ ಇವೆಲ್ಲದರ ಒಳಹೊರಗು ಚೆನ್ನಾಗಿಯೇ ಗೊತ್ತು. ನಿಮ್ಮನ್ನು ಜನರು ಗೌರವದಿಂದ ನೋಡುವಷ್ಟು ಕೆಲಸವನ್ನು ಈ ಕ್ಷೇತ್ರದಲ್ಲಿ ಮಾಡಿದ್ದೀರಿ. ನಿಮ್ಮ ಪ್ರಾಮಾಣಿಕತೆಯನ್ನು ಜನರು ನಂಬಿದ್ದಾರೆ. ಹಾಗಾಗಿ ನಿಮ್ಮನ್ನು ಈ ಕೌನ್ಸಿಲರ್ ಸ್ಥಾನದ ಚುನಾವಣೆಯಲ್ಲಿ ಅನಾಯಾಸವಾಗಿ ಗೆಲ್ಲಿಸಿದ್ದಾರೆ, ಅದೂ ಸ್ಥಳೀಯ ವ್ಯಕ್ತಿಯ ಎದುರು! ಅಂದ ಮೇಲೆ ನಿಮ್ಮನ್ನು ಜನರು ಹೇಗೆ ಗುರುತಿಸಿದ್ದಾರೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೆ? ಅಲ್ಲದೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಪರ್ಕ ನಿಮ್ಮಲ್ಲಿ ಸಾಕಷ್ಟಿದೆ. ಸಹಾಯ ಕೇಳುವವರ ಸಂಖ್ಯೆ ಸಾಕಷ್ಟಿದೆ, ನಾಳೆ ಅವರ ಸಂಖ್ಯೆ ಹೆಚ್ಚಾಗುವುದು ಗ್ಯಾರಂಟಿ. ಹೀಗಿರುವಾಗ ನಿಮ್ಮನ್ನೇ ಕೇಂದ್ರವಾಗಿರಿಸಿಕೊಂಡು ಒಂದು ಬ್ಯುಸಿನೆಸ್ನ್ನು ಪ್ರಾರಂಭಿಸುವ ಆಲೋಚನೆಯಿದೆ. ಮತ್ತು ಅದು ಎಲ್ಲರಿಗೂ ಅನುಕೂಲವಾಗುತ್ತದೆ.
ಯಾವ ಬ್ಯುಸಿನೆಸ್? ಎಲ್ಲರಿಗೂ ಅಂದರೆ? ಸ್ವಲ್ಪ ಬಿಡಿಸಿ ಹೇಳುವಿರಾ?
ಎಲ್ಲರಿಗೂ ಅಂದರೆ ಎಲ್ಲರಿಗೂ. ನೋಡಿ, ನಾವು ಹಿರಿಯ ನಾಗರಿಕರ ಸೇವೆಗಾಗಿ ಒಂದು ಕಂಪೆನಿಯನ್ನು ಪ್ರಾರಂಭಿಸೋಣ. ಅದಕ್ಕೆ ಬೇಕಾದ ಲೈಸೆನ್ಸ್ಗಳ ವಿಚಾರಗಳನ್ನು ನನಗೆ ಬಿಡಿ. ಕಂಪೆನಿಯ ಪ್ರಾರಂಭದಲ್ಲಿ ಬೇಕಾಗುವ ಫಂಡನ್ನು ನಾನೇ ವ್ಯವಸ್ಥೆ ಮಾಡುತ್ತೇನೆ. ನೀವು ಈಗಿನ ಎನ್ಎಚ್ಎಸ್ ಸೇವೆ ಹಾಗೂ ನಿಮ್ಮ ಸಮಾನಮನಸ್ಕರ ಗುಂಪಿನ ಮೂಲಕ ಮಾಡುತ್ತಿರುವ ಸೇವೆಯ ಬದಲಾಗಿ ನಮ್ಮ ಹೊಸ ಕಂಪೆನಿಯನ್ನು ಸೇರಿ. ನಿಮಗೆ ಸಿಇಒ ಸ್ಥಾನವನ್ನೇ ಕೊಡೋಣ. ಯಾವುದೇ ಹೊಸ ಕಂಪೆನಿ ಜನರ ಮನಸ್ಸನ್ನು ಹೇಗೆ ಪ್ರಭಾವಿಸುತ್ತದೆ ಎಂಬುದು ಮುಖ್ಯ. ಹಾಗಾಗಿ ಕಂಪೆನಿಯ ಹಾಗೂ ನಿಮ್ಮ ಹೆಸರಿನ ಮಾರ್ಕೆಟಿಂಗ್ ವಿಚಾರವನ್ನು ನನಗೆ ಬಿಡಿ. ನೀವು ಈ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ನೀವು ಈಗಾಗಲೇ ಪ್ರಸಿದ್ಧಿಯನ್ನು ಹೊಂದಿದ್ದೀರಿ. ಹಾಗಾಗಿ ನಿಮ್ಮನ್ನು ಮಾರ್ಕೆಟ್ ಮಾಡುವುದು ಕಷ್ಟವಲ್ಲ. ನಿಮ್ಮ ಸೇವೆಯನ್ನು ಈಗ ಪಡೆಯುತ್ತಿರುವವರ ಜೊತೆಯಲ್ಲಿ ಅನೇಕರು ಈ ಹೊಸ ಕಂಪೆನಿಯ ಕ್ಲೈಂಟ್ ಆಗುವುದು ನಿಕ್ಕಿ. ಈ ಕಂಪೆನಿಯಲ್ಲಿ ನೀವೇ ನಿರ್ಧಾರ ತೆಗೆದುಕೊಳ್ಳುವುದರಿಂದ ನಿಮ್ಮ ಕ್ಲೈಂಟ್ಗಳಿಗೆ ಯಾವ ರೀತಿಯ ಸೇವೆಗಳನ್ನು ನೀಡಬಹುದೆಂದು ನೀವೇ ನಿರ್ಧರಿಸಿ. ಇದೇನು ಉಚಿತ ಸೇವೆಯಲ್ಲ. ಹಾಗಾಗಿ ಪ್ರತಿಯೊಂದು ಸೇವೆಗೂ ಇಂತಿಷ್ಟು ಹಣ ಎಂದು ನಿರ್ಧರಿಸಬಹುದು. ನಿಮಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಪರ್ಕವಿರುವುದರಿಂದ ಕಂಪೆನಿಯ ಕ್ಲೈಂಟ್ಗಳ ಸಂಖ್ಯೆ ಜಾಸ್ತಿಯಾದರೂ ನಮಗೆ ಬೇಕಾದ ಗುಣಮಟ್ಟದ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬಹುದು. ಈ ಎಲ್ಲ ದಿನನಿತ್ಯದ ನಿರ್ಧಾರಗಳನ್ನು ನೀವೇ ನೋಡಿಕೊಳ್ಳಿ. ನಾನು ಯಾವುದರಲ್ಲಿಯೂ ತಲೆಹಾಕುವುದಿಲ್ಲ. ತ್ರೈಮಾಸಿಕದಲ್ಲೊಮ್ಮೆ ನಮ್ಮ ಲಾಭನಷ್ಟ ಹಾಗೂ ಬೇಕಾದ ಹೂಡಿಕೆಗಳ ಬಗ್ಗೆ ನಾನು ನಿಮ್ಮಲ್ಲಿ ಮಾತನಾಡುತ್ತೇನೆ. ನೀವು ಈ ಕಂಪೆನಿಯ ಶೇರುಗಳನ್ನು ಸಹ ಹೊಂದಿರುತ್ತೀರಿ. ಹಾಗಾಗಿ ಕಂಪೆನಿಯ ಲಾಭಾಂಶ ನಿಮ್ಮ ಸಂಬಳದ ಜೊತೆಯಲ್ಲಿ ಸಿಗುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಹಳಷ್ಟು ಬದಲಾಗುವುದು.
ರಂಗನ ಮುಖವನ್ನೇ ನೋಡುತ್ತ ನುಡಿದ ಹ್ಯಾರಿ, ರಂಗನ ಮನಸ್ಸನ್ನು ಆತನ ಮುಖದ ಮೂಲಕ ಓದಲು ಪ್ರಯತ್ನಿಸಿದ. ರಂಗ ನುಡಿದ,
ಅಂದರೆ ನಾವೀಗ ನೀಡುತ್ತಿರುವ ಸೇವೆಯನ್ನೇ ವ್ಯವಹಾರವಾಗಿ ಬದಲಾಯಿಸುವ ಇಚ್ಛೆ ಅಲ್ಲವೆ ನಿಮಗೆ ಮಾತಿನಲ್ಲಿ ಸ್ವಲ್ಪಮಟ್ಟಿನ ಕುಹಕವಿತ್ತು. ಅದನ್ನು ಅರಿತ ಹ್ಯಾರಿ,
ವೆಲ್, ಇದೇನು ವಿಶೇಷವಲ್ಲ. ಈಗಾಗಲೇ ಇಂತಹ ಸೇವೆಯನ್ನು ನೀಡುವ ಕೆಲವು ಸಂಸ್ಥೆಗಳಿವೆ. ಆದರೆ ಅವು ಸಣ್ಣಮಟ್ಟದವುಗಳು. ಈಗಿನ ಹಾಗೂ ಭವಿಷ್ಯದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಾನು ಇದರ ಬಗ್ಗೆ ಆಲೋಚಿಸುತ್ತಿದ್ದೇನೆ. ಒಂದು ವೇಳೆ ನಾವು ಈಗ ಇಂತಹ ಕಂಪೆನಿಯನ್ನು ಪ್ರಾರಂಭಿಸಿದರೆ ಮುಂದೊಂದು ದಿನ ಇದನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯಬಹುದು. ಸಾಧ್ಯವಾದರೆ ಇಡೀ ಯುರೋಪ್ ಖಂಡದಲ್ಲಿ ನಮ್ಮ ವ್ಯವಹಾರವನ್ನು ಸ್ಥಾಪಿಸಬಹುದು. ಇನ್ನೊಂದು ವಿಚಾರ ರಂಗ, ಈ ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಮೌಲ್ಯವಿದೆ. ಎಲ್ಲವೂ ಮಾರಾಟದ ವಸ್ತುಗಳು. ಯಾವುದೂ ಉಚಿತವಲ್ಲ. ಆದರೆ ಆ ಮೌಲ್ಯವೇನು ಎಂಬುದು ಮಾತ್ರ ಅವರವರ ಚೌಕಾಸಿಗೆ ಬಿಟ್ಟದ್ದು. ಒಂದುವೇಳೆ ನಿಮಗೇನಾದರೂ ಉಚಿತವಾಗಿ ಸಿಕ್ಕಿತು ಅಂತಾದರೆ ಅದರ ಮೌಲ್ಯ ನೀವೇ ಆಗಿರುತ್ತೀರಿ. ನೀವು ಎನ್ಎಚ್ಎಸ್ ಮೂಲಕ ಹಾಗೂ ನಿಮ್ಮ ಗುಂಪಿನ ಜೊತೆಯಲ್ಲಿ ಮಾಡುವ ಕೆಲಸವನ್ನು ಒಂದು ಕಂಪೆನಿಯ ಮೂಲಕ ಮಾಡಿ ಪ್ರತಿರೂಪವಾಗಿ ಹಣವನ್ನು ಪಡೆಯೋಣವೆಂದಷ್ಟೇ ಹೇಳುತ್ತಿರುವೆ.
ಅದು ಅಷ್ಟಕ್ಕೆ ಮುಗಿಯುವುದಿಲ್ಲ, ಹ್ಯಾರಿಯವರೆ. ನಿಮಗೆ ನಿಮ್ಮ ಕಂಪೆನಿಯ ಆರ್ಥಿಕ ಬೆಳವಣಿಗೆ ಮುಖ್ಯವಲ್ಲವೆ. ಅದನ್ನು ಹೆಚ್ಚಿಸಲು ನೀವು ಈ ಹಿರಿಯರನ್ನು ಸೇವೆಯ ಹೆಸರಿನಲ್ಲಿ ಬುಟ್ಟಿಗೆ ಹಾಕಿಕೊಂಡು, ಒಮ್ಮೆ ಅವರು ನಿಮ್ಮ ಮೇಲೆ ಅವಲಂಬಿತರಾಗಿ ಬೇರೆ ಹೋಗುವುದಿಲ್ಲವೆಂದ ಮೇಲೆ ಅವರಿಂದ ಪಡೆಯುವ ಶುಲ್ಕವನ್ನು ಹೆಚ್ಚಿಸಿಯೇ ಅಲ್ಲವೆ ನಿಮ್ಮ ಲಾಭಾಂಶವನ್ನು ಹೆಚ್ಚಿಸಿಕೊಳ್ಳುವುದು, ಅಲ್ಲವೆ? ಇಷ್ಟಕ್ಕೂ ನಿಮ್ಮ ಕಂಪೆನಿಯಲ್ಲಿ ನನ್ನ ಅಗತ್ಯದ ಬಗ್ಗೆ ಆಲೋಚಿಸುತ್ತಿರುವೆ. ಬಹುಶಃ ನಿಮಗೆ ಬೇಕಾದ ಕ್ಲೈಂಟ್ ಸಂಖ್ಯೆಯನ್ನು ಹೆಚ್ಚಿಸಲು ಅಲ್ಲವೆ ನೀವು ನನ್ನನ್ನು ಕಂಪೆನಿಯ ಸಿಇಒ ಆಗಿಸುತ್ತಿರುವುದು? ರಂಗ ಪ್ರಶ್ನಿಸಿದ.
ರಂಗ, ಭವಿಷ್ಯದಲ್ಲಿ ವ್ಯವಹಾರ ಹೀಗೆಯೇ ನಡೆಯುತ್ತದೆ ಎಂದು ಈಗ ಹೇಳಲು ಆಗುವುದಿಲ್ಲ. ಎಲ್ಲವೂ ಡಿಮ್ಯಾಂಡ್ ಹಾಗೂ ಸಪ್ಲೈ ಮೇಲೆ ಅವಲಂಬಿತ. ಈ ಕ್ಷೇತ್ರದಲ್ಲಿ ಬೇರೆ ಕಂಪೆನಿಗಳು ಬಂದೋ ಅಥವಾ ನಮ್ಮ ಗುಣಮಟ್ಟ ಕಡಮೆಯಾಗಿಯೋ ನಮಗೆ ಬೇಡಿಕೆ ಕಡಮೆಯಾದರೆ ಕಂಪೆನಿಯನ್ನು ಉಳಿಸಿಕೊಳ್ಳಲು ಶುಲ್ಕವನ್ನು ಕಡಮೆ ಮಾಡಬೇಕಾಗಬಹುದು. ಅಥವಾ ನಾಳೆ ನಮ್ಮ ಕಂಪೆನಿಗೆ ಸೇವೆಯ ಬೇಡಿಕೆ ಜಾಸ್ತಿ ಸಿಕ್ಕಿ ಅಷ್ಟನ್ನು ನಮಗೆ ಸುಧಾರಿಸಿಕೊಂಡು ಹೋಗಲು ಸಾಧ್ಯವಾಗದೆ ಹೋದರೆ ನಮ್ಮ ಶುಲ್ಕ ಜಾಸ್ತಿಯಾಗಿಯೇ ಆಗುವುದು. ಇನ್ನೊಂದು ವಿಚಾರ, ರಂಗ. ನಾನು ಕಂಪೆನಿಗೆ ಬೇರೆಯವರನ್ನು ಸಿಇಒ ಆಗಿ ನೇಮಿಸಬಹುದಿತ್ತು. ನೀವು ಊಹಿಸಿದ್ದು ಸರಿ. ನಿಮ್ಮ ಹೆಸರು ಹಾಗೂ ನಿಮ್ಮ ಇತಿಹಾಸಗಳನ್ನು ನೋಡಿ ನಿಮ್ಮನ್ನು ನೇಮಿಸಲು ಬಯಸುವೆ. ನಿಮ್ಮ ಮೇಲೆ ಜನರು ಇಟ್ಟ ನಂಬಿಕೆಯ ಮೂಲಕ ಕ್ಲೈಂಟ್ಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ ಎಂಬುದು ಆರೋಪವಾಗಬಾರದು. ಯಾಕೆಂದರೆ ಅದು ತಪ್ಪಲ್ಲ. ನಿಮ್ಮ ಮೇಲೆ ಜನರು ಇಟ್ಟಂತಹ ನಂಬಿಕೆ ಹಾಗು ನಿಮ್ಮ ಸೇವಾಮನೋಧರ್ಮ ಇವೆರಡಕ್ಕೂ ನನ್ನ ದೃಷ್ಟಿಯಲ್ಲಿ ಮೌಲ್ಯವಿವೆ. ಅವನ್ನು ನೀವು ಕೆಲಸದ ಮಾಡುವ ಕಂಪೆನಿಯ ಉನ್ನತಿಗೆ, ಅಲ್ಲಿ ಕೆಲಸ ಮಾಡುವವರ ಉದ್ಯೋಗಿಗಳ ಜೊತೆಯಲ್ಲಿ ನಿಮ್ಮ ಆರ್ಥಿಕ ಪ್ರಗತಿಗೆ ಉಪಯೋಗಿಸಿಕೊಂಡರೆ ಏನು ತಪ್ಪು?
ತನ್ನ ಮಾತು ಸ್ವಲ್ಪ ಕಟುವಾಯಿತೆಂದು ಹ್ಯಾರಿಗೆ ಅನ್ನಿಸಿತು. ಏನು ಹೇಳುವುದೆಂದು ತಿಳಿಯದ ರಂಗನಾಥ ಸುಮ್ಮನೆ ಉಳಿದ. ಹ್ಯಾರಿಯೇ ಮುಂದುವರಿದ,
ನನ್ನ ಮಾತು ಸ್ವಲ್ಪ ಕಟುವಾಯಿತೇನೋ. ನಿಮ್ಮ ಮನಸ್ಸಿನ ದುಗುಡ ಏನೆಂದು ನಾನು ಅರಿಯಬಲ್ಲೆ. ನೀವು ಇಷ್ಟರವರೆಗೆ ಸೇವೆ ಎಂದುಕೊಂಡಿದ್ದಕ್ಕೆ ಪ್ರತಿರೂಪವಾಗಿ ಹಣವನ್ನು ಮಾಡುವುದು ಸರಿಯೆ ಎಂದಲ್ಲವೆ. ನೋಡಿ, ನಮ್ಮ ಪ್ರತಿಯೊಂದು ಕಾರ್ಯದಲ್ಲೂ ಸ್ವಾರ್ಥವಿದ್ದೇ ಇದೆ. ಯಾರಾದರೂ ಸ್ವಾರ್ಥವಿಲ್ಲದೆ ಕೆಲಸ ಮಾಡುತ್ತಿರುವೆ ಎಂದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂಬರ್ಥವಷ್ಟೆ. ಈ ರೆಸ್ಟೋರೆಂಟ್ನಲ್ಲಿಯೇ ನೋಡು. ಓ ಅಲ್ಲಿ, ಅಲ್ಲಿ ತಲ್ಲೀನಳಾಗಿ ಹಾಡುತ್ತಿದ್ದಾಳಲ್ಲ. ಆಕೆಯೇನು ತನ್ನ ಮನಸ್ಸಂತೋಷಕ್ಕಾಗಿ ಹಾಡುತ್ತಿದ್ದಾಳೆಂದು ಅಂದುಕೊಂಡಿದ್ದೀರ? ಬ್ಯುಸಿನೆಸ್ಸಿನಲ್ಲಿರುವ ನನಗೆ ಆಕೆ ತನ್ನ ಹಾಡನ್ನು ಮಾರಲು ಇಟ್ಟಿದ್ದಾಳೆ ಎಂದು ಅನ್ನಿಸುತ್ತದೆ. ಅದನ್ನು ನೀವು ಆಸ್ವಾದಿಸಿ, ರೆಸ್ಟೋರೆಂಟ್ನಿಂದ ಹೊರಗೆ ಹೋಗುವಾಗ ಪ್ರತಿಫಲವಾಗಿ ಮಾಲೀಕನಿಗೆ ಹಣ ನೀಡುತ್ತೀರಿ. ಈಗಷ್ಟೆ ವ್ಹೇಟರ್ ಊಟ ಕೊಟ್ಟು ಹೋದನಲ್ಲ, ಕೊಡುವಾಗ ಅವನು ತಮ್ಮ ಮನೆಗೆ ಬಂದವರನ್ನು ಉಪಚರಿಸುವ ರೀತಿಯಲ್ಲಿ ಮಾತನಾಡಿಸಿದನಲ್ಲ. ಯಾಕೆ ಹಾಗೆ ಮಾಡಿದ? ಯಾಕೆಂದರೆ ಆತನು ತೋರಿದ ಆತಿಥ್ಯಕ್ಕೂ ಈ ಮಾಲೀಕ ನಮಗೆ ಚಾರ್ಜ್ ಮಾಡುತ್ತಾನೆ. ಇಲ್ಲಿ ಇರುವ ಕ್ಯೂಬಾದ ರಸ್ತೆಗಳ, ಬೀಚ್ಗಳ, ಅಲ್ಲದೆ ಕ್ರಾಂತಿಕಾರಿ ನಾಯಕರ ಚಿತ್ರಗಳು ಇವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಈ ಹೋಟೆಲ್ಲಿನ ಮಾಲೀಕ ಮಾರಲು ಇಟ್ಟಂತಹ ಸರಕುಗಳೇ. ಇಲ್ಲಿ ಕುಳಿತ ಎಲ್ಲರೂ ಅದನ್ನು ನೋಡಿದ್ದಕ್ಕೆ ಕ್ಯೂಬಾದ ಬಗ್ಗೆ ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ, ಪಟ್ಟ ಸಂತೋಷಕ್ಕೆ, ಮರೆತ ಕ್ಷಣಿಕ ದುಃಖಕ್ಕೆ ಪ್ರತಿಯಾಗಿ ತಮ್ಮ ಪಾಲಿನ ಹಣವನ್ನು ನೀಡಿ ಹೋಗುವವರೆ.
ನಿಮ್ಮ ಮೇಲೆ ಯಾವುದೇ ಒತ್ತಾಯವಿಲ್ಲ ಅಥವಾ ನಿಮ್ಮ ನಿರ್ಧಾರವನ್ನು ಇಂದೇ ನೀವು ನನಗೆ ತಿಳಿಸಬೇಕಿಲ್ಲ. ಒಂದು ವಾರದ ನಂತರ ನಾನೇ ನಿಮ್ಮನ್ನು ಸಂಪರ್ಕಿಸುತ್ತೇನೆ. ಆಗ ನಿಮ್ಮ ನಿರ್ಧಾರವನ್ನು ಹೇಳಿದರೆ ಸಾಕು ಎಂದು ಹೇಳುವಾಗ ಹ್ಯಾರಿಯ ಮೊಬೈಲ್ ರಿಂಗಾಯಿತು. ಕಾಲ್ನ್ನು ಸ್ವೀಕರಿಸಿ ಹೌದಾ ಈಗ ಬರುವೆ ಎಂದು ನುಡಿದು, ಇನ್ನೊಂದು ಕಂಪೆನಿಯಲ್ಲಿ ನಮ್ಮ ಹೂಡಿಕೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ನನಗೀಗ ಅಲ್ಲಿಗೆ ಹೋಗಬೇಕು. ಕ್ಷಮಿಸಿ, ನಿಮ್ಮ ಎಲ್ಲ ಪ್ರಶ್ನೆಗಳಿಗೂ ನಾನು ಸಮರ್ಪಕವಾದ ಉತ್ತರವನ್ನು ನೀಡಿರುವೆನೋ ಇಲ್ಲವೋ ತಿಳಿಯದು. ನಿಮ್ಮ ಜೊತೆಯಲ್ಲಿ ಇನ್ನಷ್ಟು ಸಮಯ ಕಳೆಯುವ ಆಸೆಯಿತ್ತು. ಆದರೆ ಇಂದು ಆಗದು. ಒಂದು ವೇಳೆ ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು ನನಗೆ ಕಾಲ್ ಮಾಡಿ ಎಂದು ಹೇಳಿ, ಹಸ್ತಲಾಘವವನ್ನು ನೀಡಿ, ಬಿಲ್ಲನ್ನು ಪಾವತಿಸಿ ಹ್ಯಾರಿ ಹೊರಗೆ ನಡೆದ.
ಅಷ್ಟಾಗಲೇ ಮಧ್ಯಾಹ್ನ ಮೂರುಗಂಟೆಯಾಗಿತ್ತು. ರೆಸ್ಟೋರೆಂಟ್ನ ಒಳಗೆ ಗ್ರಾಹಕರು ಯಾರೂ ಉಳಿದಿರದೆ ತಾನೊಬ್ಬನೆ ಇರುವುದರ ಅರಿವು ಹ್ಯಾರಿ ಹೊರಗೆ ನಡೆದಾಗ ರಂಗನಿಗೆ ಅನ್ನಿಸಿತು. ಭೂಮಿಯಲ್ಲಿ ಎಲ್ಲವೂ ಮಾರಾಟಕ್ಕಿದೆ ಎನ್ನುವ ಹ್ಯಾರಿಯ ಮನೋಧರ್ಮ, ರಂಗನಾಥನನ್ನು ರೆಸ್ಟೋರೆಂಟ್ನ ಒಳಭಾಗವನ್ನು ಬೇರೆಯೇ ರೀತಿಯಲ್ಲಿ ನೋಡುವಂತೆ ಮಾಡಿತು. Suಠಿಠಿoಡಿಣ ಅubಚಿ ಎಂದು ಬರೆಯಲ್ಪಟ್ಟ ಗಾಜಿನ ಜಾರ್ ತನ್ನನ್ನು ನೋಡಿ ನಕ್ಕಂತೆ ಆಯಿತು. ರೆಸ್ಟೋರೆಂಟ್ನ ಹಾಡುಗಾರ್ತಿಯು ಹಾಡನ್ನು ಮುಗಿಸಿ, ಸಂಜೆ ಕ್ಲೈಂಟ್ಗಳನ್ನು ರಂಜಿಸಲು ಹಾಡಬೇಕಾದ ಹಾಡುಗಳ ಪಟ್ಟಿ ತಯಾರು ಮಾಡುತ್ತಿದ್ದಳು. ಸರ್ವರ್ಗಳಿಬ್ಬರು ಎಲ್ಲ ಟೇಬಲ್ಲುಗಳ ಮೇಲಿನ ಬಟ್ಟೆಗಳನ್ನು ತೆಗೆದು ಸಂಜೆಯ ಅತಿಥಿಗಳನ್ನು ಸ್ವಾಗತಿಸಲು ಹೊಸಬಟ್ಟೆಗಳನ್ನು ಹಾಸುತ್ತಿದ್ದರು. ಉಪಯೋಗಿಸಿದ ತಟ್ಟೆ, ಗ್ಲಾಸುಗಳು ತೊಳೆಯಲ್ಪಟ್ಟು ಸಂಜೆ ಬರುವ ಅತಿಥಿಗಳಿಗೆ ತಮ್ಮನ್ನು ಹೊಸದಾಗಿ ಒಪ್ಪಿಸಿಕೊಳ್ಳಲು ಕಾಯುತ್ತಿದ್ದವು. ರೆಸ್ಟೋರೆಂಟ್ನ ಒಳಭಾಗದ ಕ್ಯೂಬಾದ ಚಿತ್ರಗಳನ್ನು ರಂಗ ಇನ್ನೊಮ್ಮೆ ಅವಲೋಕಿಸಿದ. ಈ ಚಿತ್ರಗಳು ಉದ್ದೀಪಿಸುವ ಭಾವನೆಗಳೂ ಸರಕಾಗಿ ಹೋದವೆ ಎಂಬ ಆಲೋಚನೆಯೇ ರಂಗನಾಥನಿಗೆ ಹೊಸತೆನಿಸಿತು. ಎದುರಿನಲ್ಲಿದ್ದ ಚೆ-ಗೆವಾರಾನ ಛಾಯಾಚಿತ್ರವನ್ನು ನೋಡಿ,
ನಿನ್ನನ್ನೂ ಸಹ ಜನರು ಬಿಡದೆ ಮಾರಾಟದ ಸರಕಾಗಿಸಿದರಲ್ಲ, ಚೆ-ಗೆವಾರಾ. ಮತ್ತೆ ನನ್ನಂತವನ ಬಾಳು ಬೇರೆ ಹೇಗಾದೀತು? ಅಂತರಂಗದ ಮಾತನ್ನು ರಂಗ, ತನ್ನ ಅರಿವಿಗೆ ಬರದಂತೆ ಗಟ್ಟಿಯಾಗಿಯೇ ನುಡಿದ.
ಪಾಪ, ಛಾಯಾಚಿತ್ರದಲ್ಲಿರುವ ಉದ್ದಕೂದಲಿನ ಚೆ-ಗೆವಾರಾ ಬೇರೇನೂ ಮಾಡಬಲ್ಲ, ದಿಗಂತದತ್ತ ನೆಟ್ಟ ನೋಟವನ್ನು ಕದಲಿಸದೆ ನೋಡುವುದನ್ನು ಬಿಟ್ಟು?
ಆಡಿಟಿಪ್ಪಣಿ: ಚೆ-ಗೆವಾರಾ ದಕ್ಷಿಣ ಅಮೆರಿಕಾದ ಕ್ರಾಂತಿಕಾರಿ, ಗೆರಿಲ್ಲಾ ನಾಯಕನಾಗಿದ್ದು ಕ್ಯೂಬಾ ಕ್ರಾಂತಿಯಲ್ಲಿ ಮಹತ್ತ್ವದ ಪಾತ್ರವನ್ನು ವಹಿಸಿದ್ದನು. ಕ್ಯೂಬಾದ ಸರಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿ, ಸ್ವಲ್ಪ ಸಮಯದ ನಂತರ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಕ್ರಾಂತಿಯ ನಾಯಕತ್ವವನ್ನು ವಹಿಸಿಕೊಂಡಿದ್ದನು. ಅಲ್ಬರ್ಟೋ ಕೋರ್ಡಾ ಎನ್ನುವ ಕ್ಯೂಬಾದ ಛಾಯಾಚಿತ್ರಗಾರ ತೆಗೆದ ಚೆ-ಗೆವಾರಾನ ಛಾಯಾಚಿತ್ರ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಛಾಯಾಚಿತ್ರವಾಗಿದೆ.