“ಮಹಾರಾಜ! ನನಗೊಂದು ಶಾಪವಿತ್ತು. ನನ್ನ ತಂದೆಯಾದ ವಿದ್ಯಾಧರ ರಾಜನಿಗೆ ನಾನೆಂದರೆ ತುಂಬ ಪ್ರೀತಿ. ನನ್ನನ್ನು ಬಿಟ್ಟು ಅವನು ಊಟ ಮಾಡುತ್ತಿರಲಿಲ್ಲ. ಒಂದು ಚತುರ್ದಶಿಯಂದು ನಾನು ಇಲ್ಲಿಗೆ ಬಂದವಳು ಗೌರೀಪೂಜೆ ಮಾಡುತ್ತಾ ತುಂಬ ಹೊತ್ತಿನವರೆಗೂ ಇಲ್ಲಿಯೇ ಉಳಿದುಬಿಟ್ಟೆನು. ತಂದೆ ನನ್ನನ್ನು ಕಾದು ಕಾದು, ಊಟ ಮಾಡದೆ ಉಪವಾಸವಿದ್ದನು. ನಾನು ಹೋದಾಗ ಸಿಟ್ಟು ಮಾಡಿಕೊಂಡು – “ಹಸಿವೆ ನನ್ನನ್ನು ತಿಂದುಹಾಕಿತು. ಹಾಗೆಯೇ ರಾಕ್ಷಸನೊಬ್ಬನು ಪ್ರತಿ ಚತುರ್ದಶಿ ಮತ್ತು ಅಷ್ಟಮಿ ತಿಥಿಗಳಂದು ಶಿವಪೂಜೆಗೆ ಹೊರಟ ನಿನ್ನನ್ನು ತಿನ್ನುವನು. ನೀನು ಅವನ ಹೃದಯವನ್ನು ಭೇದಿಸಿಕೊಂಡು ಹೊರಬರುತ್ತೀಯೆ” ಎಂದು ನನಗೆ ಶಾಪ ಕೊಟ್ಟನು. ಕೊನೆಗೆ “ಅಂಗದೇಶದ ರಾಜನಾದ ಯಶಃಕೇತುವು ಬಂದು ಆ ರಾಕ್ಷಸನನ್ನು ಕೊಂದಾಗ ನಿನಗೆ ಶಾಪವಿಮೋಚನೆ ಆಗುತ್ತದೆ” ಎಂದನು.
ಛಲ ಬಿಡದ ತ್ರಿವಿಕ್ರಮನು ಮತ್ತೊಮ್ಮೆ ಆ ಮುಳ್ಳುಮುತ್ತುಗದ ಮರದ ಬಳಿಗೆ ಹೋಗಿ ಹೆಣವನ್ನು ಕೆಳಗಿಳಿಸಿ ಹೊತ್ತುಕೊಂಡು ಶ್ಮಶಾನದ ಕಡೆಗೆ ನಡೆದನು. ಬೇತಾಳನು ಅವನ ಮಾರ್ಗಾಯಾಸಪರಿಹಾರಕ್ಕೆಂದು ಮತ್ತೊಂದು ಕಥೆಯನ್ನು ಹೇಳಲಾರಂಭಿಸಿದನು.
ಹಿಂದೆ ಅಂಗದೇಶದಲ್ಲಿ ಯಶಃಕೇತುವೆಂಬ ರಾಜನಿದ್ದನು. ಅವನಿಗೆ ದೀರ್ಘದರ್ಶಿ ಎಂಬುವನು ಮಂತ್ರಿಯಾಗಿದ್ದನು. ಅವನು ರಾಜಕಾರ್ಯಗಳಲ್ಲಿ ದಕ್ಷನಾಗಿದ್ದನು. ರಾಜನು ರಾಜ್ಯಭಾರವನ್ನು ಮಂತ್ರಿಗೆ ಒಪ್ಪಿಸಿ ತಾನು ಸ್ತ್ರೀಲೋಲುಪನಾಗಿ ಅಂತಃಪುರದೊಳಗೆ ಇದ್ದು ಬಿಟ್ಟಿದ್ದನು. ಹೀಗೇ ಕೆಲವು ದಿನಗಳು ಕಳೆಯಲು ಪ್ರಜೆಗಳು – “ನಮ್ಮ ರಾಜನು ಹೆಸರಿಗೆ ಮಾತ್ರ ರಾಜ. ಈ ಮಂತ್ರಿಯೇ ರಾಜನನ್ನು ಸ್ತ್ರೀಲೋಲನನ್ನಾಗಿ ಮಾಡಿ ತಾನು ರಾಜಭೋಗವನ್ನು ಅನುಭವಿಸುತ್ತ್ತಿದ್ದಾನೆ” ಎಂದು ಆಡಿಕೊಳ್ಳತೊಡಗಿದರು.
ಹೀಗೆ ವೃಥಾ ಅಪವಾದವನ್ನು ಕೇಳಬೇಕಾಗಿ ಬಂದದ್ದರಿಂದ ದೀರ್ಘದರ್ಶಿಯು ತುಂಬ ನೊಂದುಕೊಂಡನು. ಅವನು ತನ್ನ ಹೆಂಡತಿಯಾದ ಮೇಧಾವಿನಿಯೊಂದಿಗೆ ಈ ವಿಷಯದಲ್ಲಿ ಸಮಾಲೋಚನೆ ಮಾಡಿದಾಗ ಅವಳು – “ನೀವು ತೀರ್ಥಯಾತ್ರೆಯ ನೆಪದಿಂದ ಕೆಲವು ದಿನ ಊರು ಬಿಟ್ಟು ಹೊರಗೆಲ್ಲಾದರೂ ಹೋಗಿ ಬನ್ನಿ. ಆಗ ಜವಾಬ್ದಾರಿ ತನ್ನ ಮೇಲೆ ಬಂದಾಗ ರಾಜನು ಸರಿಹೋಗುತ್ತಾನೆ. ನಿಮ್ಮ ಮೇಲಿನ ಅಪವಾದವೂ ಕಳೆಯುತ್ತದೆ” ಎಂದು ಸಲಹೆ ಕೊಟ್ಟಳು.
ಅದರಂತೆ ಮಂತ್ರಿಯು ರಾಜನ ಅಪ್ಪಣೆಯನ್ನು ಪಡೆದು ರಾಜಧಾನಿಯಿಂದ ಹೊರಟು ಊರೂರು ತಿರುಗುತ್ತ ಪಾಂಡ್ಯದೇಶಕ್ಕೆ ಬಂದು, ಅಲ್ಲಿ ಒಂದು ಶಿವದೇವಾಲಯದಲ್ಲಿ ಉಳಿದುಕೊಂಡಿದ್ದನು. ನಿಧಿದತ್ತನೆಂಬ ವರ್ತಕನೂ ಆಗ ಪೂಜೆಗೆಂದು ಅಲ್ಲಿಗೆ ಬಂದಿದ್ದನು. ಪರಸ್ಪರ ಪರಿಚಯವಾದ ಮೇಲೆ ನಿಧಿದತ್ತನು ದೀರ್ಘದರ್ಶಿಗೆ ತಾನು ವ್ಯಾಪಾರಕ್ಕಾಗಿ ಸುವರ್ಣದೀಪಕ್ಕೆ ಹೋಗುತ್ತಿರುವುದಾಗಿ ತಿಳಿಸಿ, ಅವನನ್ನು ತನ್ನೊಂದಿಗೆ ಬರುವಂತೆ ಹೇಳಿದನು.
ದೀರ್ಘದರ್ಶಿಯು ಒಪ್ಪಿಕೊಂಡು ಅವನೊಂದಿಗೆ ಹೋದನು. ಅವರು ಸಮುದ್ರಮಾರ್ಗವಾಗಿ ಪ್ರಯಾಣ ಮಾಡಿ ಸುವರ್ಣದ್ವೀಪವನ್ನು ತಲಪಿದರು. ಅಲ್ಲಿ ನಿಧಿದತ್ತನು ಚೆನ್ನಾಗಿ ವ್ಯಾಪಾರ ಮಾಡಿದನು.
ಅದಾದ ಮೇಲೆ ಅವರು ಸಮುದ್ರಮಾರ್ಗವಾಗಿ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಒಂದು ವಿಶೇಷ ಕಾಣಿಸಿತು. ಸಮುದ್ರದ ಮಧ್ಯದಲ್ಲಿ ಅಲೆಗಳ ನಡುವೆ ಕಲ್ಪವೃಕ್ಷವೊಂದು ಕಾಣಿಸಿತು. ಆ ಮರದ ಮೇಲೊಂದು ರತ್ನದ ಮಂಚವಿತ್ತು. ಅದರಲ್ಲಿ ದಿವ್ಯಸ್ತ್ರೀಯೊಬ್ಬಳು ಕುಳಿತಿದ್ದಳು. ಇವರಿಬ್ಬರೂ ಆಶ್ಚರ್ಯದಿಂದ ನೋಡುತ್ತಿರಲು ಅವಳು ವೀಣೆಯನ್ನು ನುಡಿಸುತ್ತಾ –
ಯತ್ಕರ್ಮಬೀಜಮುಪ್ತಂ ಯೇನ ಪುರಾ ನಿಶ್ಚಿತಂ
ಸ ತದ್ಭುಙ್ತೇ |
ಪೂರ್ವಕೃತಸ್ಯ ಹಿ ಶಕ್ಯೋ ವಿಧಿನಾಪಿ ನ
ಕರ್ತುಮನ್ಯಥಾಭಾವಃ ||
ಎಂದು ಹಾಡಿ ಮರುಕ್ಷಣದಲ್ಲಿ ಆ ಮರ ಮತ್ತು ಮಂಚಗಳ ಸಹಿತವಾಗಿ ನೀರಿನಲ್ಲಿ ಮುಳುಗಿಬಿಟ್ಟಳು. ಇವರು ಬೆರಗಾಗಿ ನೋಡುತ್ತ್ತಿರಲು ನಾವಿಕರು – “ಇದೇನು ಹೊಸದಲ್ಲ. ನಾವು ಇದನ್ನು ನೋಡುತ್ತಲೇ ಇರುತ್ತೇವೆ” ಎಂದರು. ತೀರಕ್ಕೆ ಬಂದ ಮೆಲೆ ದೀರ್ಘದರ್ಶಿಯು ನಿಧಿದತ್ತನಿಗೆ ಧನ್ಯವಾದಗಳನ್ನು ತಿಳಿಸಿ, ಅಲ್ಲಿಂದ ತನ್ನ ಊರಿಗೆ ಹಿಂದಿರುಗಿದನು.
ಎಲ್ಲರೂ ಅವನನ್ನು ಆದರದಿಂದ ಬರಮಾಡಿಕೊಂಡರು. ರಾಜನು ಕುತೂಹಲದಿಂದ “ತೀರ್ಥಯಾತ್ರೆಯ ಕಾಲದಲ್ಲಿ ಏನು ವಿಶೇಷವನ್ನು ಕಂಡೆ?” ಎಂದು ಕೇಳಿದನು. ದೀರ್ಘದರ್ಶಿಯು ಆ ದಿವ್ಯಸ್ತ್ರೀಯ ವೃತ್ತ್ತಾಂತವನ್ನು ವರ್ಣಿಸಿದಾಗ ರಾಜನಿಗೆ ತಾನು ಅವಳನ್ನು ನೋಡಲೇಬೇಕೆಂದು ಇಚ್ಛೆಯಾಯಿತು. ಅವನು ರಾಜ್ಯವನ್ನು ಮಂತ್ರಿಗೆ ಒಪ್ಪಿಸಿ, ತಾನು ತಾಪಸವೇಷವನ್ನು ಧರಿಸಿಕೊಂಡು ಹೊರಟೇಬಿಟ್ಟನು. ದಾರಿಯಲ್ಲಿ ಕುಶನಾಭನೆಂಬ ಮುನಿಯನ್ನು ಕಂಡು, ಅವನ ಮಾರ್ಗದರ್ಶನದಂತೆ ಲಕ್ಷ್ಮೀದತ್ತನೆಂಬ ವರ್ತಕನೊಂದಿಗೆ ಸಮುದ್ರಮಾರ್ಗದಲ್ಲಿ ಸುವರ್ಣದ್ವೀಪಕ್ಕೆ ಹೊರಟನು. ದಾರಿಯಲ್ಲಿ ಆ ಕಲ್ಪವೃಕ್ಷವೂ, ದಿವ್ಯಸ್ತ್ರೀಯೂ ಕಾಣಿಸಿದರು. ಈಗಲೂ ದಿವ್ಯಸ್ತ್ರೀ ವೀಣೆ ನುಡಿಸುತ್ತಾ ಅದೇ ಹಾಡು ಹಾಡಿ, ನೀರಿನಲ್ಲಿ ಮುಳುಗಿದಳು.
ರಾಜನು ತಡಮಾಡದೆ ತಾನೂ ನೀರಿನಲ್ಲಿ ಮುಳುಗಿ ಅವಳನ್ನು ಹಿಂಬಾಲಿಸಿದನು. ಲಕ್ಷ್ಮೀದತ್ತನು ಗಾಬರಿಗೊಳ್ಳಲು “ಅಯ್ಯಾ, ಗಾಬರಿಯಾಗಬೇಡ. ಅವನು ತಾಪಸವೇಷದಲ್ಲಿದ್ದ ಯಶಃಕೇತುವೆಂಬ ರಾಜ. ಈ ಸ್ತ್ರೀ ಹಿಂದಿನ ಜನ್ಮದಲ್ಲಿ ಅವನ ಹೆಂಡತಿಯಾಗಿದ್ದಳು. ಅವಳಿಗಾಗಿಯೇ ಅವನು ಈಗ ಬಂದಿದ್ದಾನೆ. ಅವಳನ್ನು ಪಡೆದೇ ಹಿಂದಿರುಗುತ್ತಾನೆ” ಎಂದು ಆಕಾಶವಾಣಿ ಆಯಿತು. ಅವನು ನಿಶ್ಚಿಂತನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು.
ಇತ್ತ ಯಶಃಕೇತುವು ಸಮುದ್ರದೊಳಗೆ ಮುಂದೆ ಹೋಗಲು ಅಲ್ಲೊಂದು ನಗರವಿತ್ತು. ಆದರೆ ಮನೆಗಳೆಲ್ಲ ನಿರ್ಜನವಾಗಿದ್ದವು. ಅವನು ಹುಡುಕುತ್ತ ಹೋದರೆ ಯಾವ ಮನೆಯಲ್ಲೂ ಅವಳು ಕಾಣಿಸಲಿಲ್ಲ. ಹಾಗೆ ಮುಂದೆ ಹೋದಾಗ ಒಂದು ಎತ್ತರವಾದ ಮಣಿಮಂದಿರ ಕಾಣಿಸಿತು. ಅದರ ಒಳಗೆ ಹೋಗಿ ನೋಡಲು ಅಲ್ಲಿ ಅವಳು ರತ್ನಮಂಚದ ಮೇಲೆ ಮಲಗಿದ್ದಳು. ಇವನು ಹತ್ತಿರ ಹೋಗುತ್ತಿದ್ದಂತೆಯೇ ಎದ್ದು ಇವನನ್ನು ಸ್ವಾಗತಿಸಿ ಸತ್ಕರಿಸಿದಳು. ಬಳಿಕ ಇವನು ತನ್ನ ಪರಿಚಯ ಹೇಳಿಕೊಂಡು “ನೀನು ಯಾರು?” ಎಂದು ಇವನು ಕೇಳಿದಾಗ ಅವಳು – “ನಾನು ಮೃಗಾಂಕಸೇನನೆಂಬ ವಿದ್ಯಾಧರನ ಮಗಳು ಮೃಗಾಂಕವತಿ. ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ನಮ್ಮ ತಂದೆಯೂ ಪುರಜನರೂ ಎಲ್ಲಿ ಹೋದರೋ ನನಗೆ ಗೊತ್ತಿಲ್ಲ. ಆದ್ದರಿಂದ ನಾನು ಬೇಸರವಾಗಿ ಕಲ್ಪವೃಕ್ಷದ ಮೇಲೆ ಬಂದು ಕುಳಿತು, ವಿಧಿವಿಲಾಸವನ್ನು ಹೇಳಿಕೊಂಡು ಹೇಗೋ ಸಮಾಧಾನ ಮಾಡಿಕೊಳ್ಳುತ್ತೇನೆ” ಎಂದು ಹೇಳಿದಳು. “ನೀನು ನನ್ನ ಹೆಂಡತಿಯಾಗಬೇಕು” ಎಂದು ರಾಜನು ಕೇಳಿಕೊಂಡಾಗ ಅವಳು – “ಆಗಬಹುದು. ಆದರೆ ನನ್ನದೊಂದು ಕರಾರು ಇದೆ. ನಾನು ಪ್ರತಿ ಪಕ್ಷದಲ್ಲೂ ಅಷ್ಟಮಿ ಮತ್ತು ಚತುರ್ದಶಿ ತಿಥಿಯಂದು ಎಲ್ಲಿಗೋ ಹೋಗಿಬರುತ್ತೇನೆ. ಎಲ್ಲಿಗೆ, ಯಾಕೆ ಎಂದು ನೀನು ಕೇಳಬಾರದು. ಹೋಗುವುದಕ್ಕೆ ಅಡ್ಡಿಪಡಿಸಲೂಬಾರದು” ಎಂದಳು.
ರಾಜನು ಒಪ್ಪಿಕೊಂಡನು. ಅವಳನ್ನು ಗಾಂಧರ್ವವಿವಾಹ ಮಾಡಿಕೊಂಡು ಅವಳೊಂದಿಗೆ ಸುಖವಾಗಿ ಕಾಲ ಕಳೆಯುತ್ತಿದ್ದನು. ಹೀಗಿರುತ್ತಿರಲು ಒಮ್ಮೆ ಅವಳು ಹೇಳಿದ್ದ ದಿನ ಬಂತು. ಅಂದು ಅವಳು “ನಾನು ಎಲ್ಲಿಗೋ ಹೋಗುತ್ತಿದ್ದೇನೆ. ನೀನು ಇಲ್ಲಿಯೇ ಇರು. ಇಲ್ಲಿ ಎಲ್ಲಿ ಬೇಕಾದರೂ ತಿರುಗಾಡಬಹುದು. ಆದರೆ ಅಲ್ಲಿರುವ ಸ್ವರ್ಣಮಂದಿರಕ್ಕೆ ಮಾತ್ರ ಹೋಗಬೇಡ. ಹಾಗೇ ಅಲ್ಲಿರುವ ಬಾವಿಯ ಹತ್ತಿರಕ್ಕೂ ಹೋಗಬೇಡ. ಏಕೆಂದರೆ ನೀನು ಅಲ್ಲಿ ಬಿದ್ದೆಯಾದರೆ ಭೂಲೋಕಕ್ಕೆ ಹೋಗಿಬಿಡುತ್ತೀಯೆ” ಎಂದು ಹೇಳಿ ಹೊರಟುಹೋದಳು.
ರಾಜನು ಕುತೂಹಲದಿಂದ ಕತ್ತಿ ಹಿಡಿದುಕೊಂಡು, ಅವಳ ಹಿಂದೆಯೇ, ಅವಳಿಗೆ ಗೊತ್ತಾಗದ ಹಾಗೆ ಹೋದನು. ಸ್ವಲ್ಪ ದೂರ ಹೋದ ಮೇಲೆ ಅಲ್ಲಿ ಭಯಂಕರ ಆಕಾರದ ರಾಕ್ಷಸನೊಬ್ಬನು ಎದುರಾದನು. ಅವನು ಮೃಗಾಂಕವತಿಯನ್ನು ಎತ್ತಿ ತನ್ನ ಬಾಯಿಯೊಳಗೆ ಹಾಕಿಕೊಂಡು ನುಂಗಿಬಿಟ್ಟನು. ರಾಜನು ಕೋಪದಿಂದ ಹತ್ತಿರ ಹೋಗಿ ಅವನ ತಲೆಯನ್ನು ಕಡಿದುಬಿಟ್ಟನು. ಆ ಕೂಡಲೇ ರಾಕ್ಷಸನ ಶರೀರವನ್ನು ಸೀಳಿಕೊಂಡು ಮೃಗಾಂಕವತಿಯು ಹೊರಗೆ ಬಂದಳು. ರಾಜನು ಅವಳನ್ನು ಆಲಿಂಗಿಸಿಕೊಂಡು “ಪ್ರಿಯೆ, ಇದೇನು ಮಾಯೆಯೋ, ಕನಸೋ…?” ಎಂದು ಕೇಳಿದನು.
ಆಗ ಅವಳು “ಮಹಾರಾಜ! ನನಗೊಂದು ಶಾಪವಿತ್ತು. ನನ್ನ ತಂದೆಯಾದ ವಿದ್ಯಾಧರ ರಾಜನಿಗೆ ನಾನೆಂದರೆ ತುಂಬ ಪ್ರೀತಿ. ನನ್ನನ್ನು ಬಿಟ್ಟು ಅವನು ಊಟ ಮಾಡುತ್ತಿರಲಿಲ್ಲ. ಒಂದು ಚತುರ್ದಶಿಯಂದು ನಾನು ಇಲ್ಲಿಗೆ ಬಂದವಳು ಗೌರೀಪೂಜೆ ಮಾಡುತ್ತಾ ತುಂಬ ಹೊತ್ತಿನವರೆಗೂ ಇಲ್ಲಿಯೇ ಉಳಿದುಬಿಟ್ಟೆನು. ತಂದೆ ನನ್ನನ್ನು ಕಾದು ಕಾದು, ಊಟ ಮಾಡದೆ ಉಪವಾಸವಿದ್ದನು. ನಾನು ಹೋದಾಗ ಸಿಟ್ಟು ಮಾಡಿಕೊಂಡು – “ಹಸಿವೆ ನನ್ನನ್ನು ತಿಂದು ಹಾಕಿತು. ಹಾಗೆಯೇ ರಾಕ್ಷಸನೊಬ್ಬನು ಪ್ರತಿ ಚತುರ್ದಶಿ ಮತ್ತು ಅಷ್ಟಮಿ ತಿಥಿಗಳಂದು ಶಿವಪೂಜೆಗೆ ಹೊರಟ ನಿನ್ನನ್ನು ತಿನ್ನುವನು. ನೀನು ಅವನ ಹೃದಯವನ್ನು ಭೇದಿಸಿಕೊಂಡು ಹೊರಬರುತ್ತೀಯೆ” ಎಂದು ನನಗೆ ಶಾಪ ಕೊಟ್ಟನು. ಕೊನೆಗೆ “ಅಂಗದೇಶದ ರಾಜನಾದ ಯಶಃಕೇತುವು ಬಂದು ಆ ರಾಕ್ಷಸನನ್ನು ಕೊಂದಾಗ ನಿನಗೆ ಶಾಪವಿಮೋಚನೆ ಆಗುತ್ತದೆ” ಎಂದನು. ನನಗೀಗ ಶಾಪವಿಮೋಚನೆ ಆಯ್ತ್ತು. ನಾನು ನಮ್ಮ ಲೋಕಕ್ಕೆ ಹೋಗುತ್ತೇನೆ” ಎಂದಳು. “ನೀನು ನಿನ್ನ ದೇಶಕ್ಕೆ ಹಿಂದಿರುಗಬಹುದು. ಅಥವಾ ಇಲ್ಲಿಯೇ ಬೇಕಾದರೂ ಇರಬಹುದು” ಎಂದೂ ಅವನಿಗೆ ಹೇಳಿದಳು.
ಅವಳು ಹೊರಟು ಹೋಗುವಳೆಂದು ಕೇಳಿ ರಾಜನಿಗೆ ಬಹಳ ದುಃಖವಾಯಿತು. “ನೀನು ಹೋಗುವುದೇ ಹೌದಾದರೆ ದಯವಿಟ್ಟು ಒಂದು ವಾರ ಇಲ್ಲಿಯೇ ಇದ್ದು ಆಮೇಲೆ ಹೋಗು” ಎಂದು ಅವನು ಅವಳನ್ನು ಬೇಡಿಕೊಂಡನು. ಅವಳು ಹಾಗೇ ಆಗಲೆಂದು ಒಪ್ಪಿದಳು. ಮಂದೆ ಆರು ದಿನಗಳನ್ನು ಅವನು ಅವಳೊಂದಿಗೆ ಆನಂದದಿಂದ ಕಳೆದನು. ಏಳನೆಯ ದಿನ ಉಪಾಯವಾಗಿ ಅವಳನ್ನು ಆ ಬಾವಿಯ ಹತ್ತಿರಕ್ಕೆ ಕರೆತಂದನು. ಅಲ್ಲಿ ಅವಳೊಂದಿಗೆ ಮಾತನಾಡುತ್ತ್ತಾ ಇದ್ದವನು ಇದ್ದಕ್ಕಿದ್ದಂತೆ ಅವಳನ್ನು ತಬ್ಬಿಕೊಂಡು ಆ ಬಾವಿಯೊಳಗೆ ಹಾರಿಬಿಟ್ಟನು. ಎದ್ದಾಗ ಅವನು ಅವಳೊಂದಿಗೆ ತನ್ನ ಊರಿನ ಉದ್ಯಾನದಲ್ಲಿದ್ದ ಕೊಳದಲ್ಲಿದ್ದನು. ಅಲ್ಲಿದ್ದ ಉದ್ಯಾನಪಾಲಕರು ಅದನ್ನು ನೋಡಿ ಸಂತೋಷಪಟ್ಟು ಮಂತ್ರಿಗೆ ಸುದ್ದಿ ತಿಳಿಸಿದರು. ತಮ್ಮ ರಾಜನು ಹಿಂದಿರುಗಿರುವುದನ್ನು ಕಂಡು ಎಲ್ಲರಿಗೂ ಆನಂದವೋ ಆನಂದ. ಹೀಗೇ ಒಂದು ವಾರ ಕಳೆಯಿತು. ಮೃಗಾಂಕವತಿಯು ತಾನಿನ್ನು ತಂದೆಯ ಹತ್ತಿರ ಹೋಗುತ್ತೇನೆ ಎಂದುಕೊಂಡು ಅದಕ್ಕೆ ಸಿದ್ಧಳಾಗಲು ಅವಳಿಗೆ ಹಿಂದೆ ಗೊತ್ತಿದ್ದ ಆಕಾಶದಲ್ಲಿ ಹಾರುವ ವಿದ್ಯೆಯೇ ಈಗ ಮರೆತುಹೋಗಿತ್ತು! ಅದರಿಂದ ಅವಳಿಗೆ ಬಹಳ ದುಃಖವಾಯಿತು. ಆದರೆ ರಾಜನಿಗಂತೂ ಸಂತೋಷವೇ ಆಯಿತು. ಇದನ್ನು ನೋಡಿದ ಮಂತ್ರಿಯು ಮಾತ್ರ ತಡೆಯಲಾರದ ದುಃಖವನ್ನು ಅನುಭವಿಸಿದನು. ಅವನು ಅರಮನೆಯಿಂದ ತನ್ನ ಮನೆಗೆ ಹೋದವನು ಆ ದಿನ ರಾತ್ರಿಯೇ ಎದೆಯೊಡೆದು ಪ್ರಾಣಬಿಟ್ಟನು. ಯಶಃಕೇತುವು ತಾನೇ ರಾಜ್ಯಭಾರವನ್ನು ವಹಿಸಿಕೊಂಡು, ಮೃಗಾಂಕವತಿಯ ಜೊತೆಗೆ ಚಿರಕಾಲ ರಾಜ್ಯವನ್ನು ಆಳಿಕೊಂಡಿದ್ದನು.
ಹೀಗೆ ಕಥೆಯನ್ನು ಹೇಳಿ ಮುಗಿಸಿ ಬೇತಾಳನು – “ಮಹಾರಾಜ, ನನಗೊಂದು ಸಂದೇಹ. ಆ ಮಂತ್ರಿಯು ಎದೆಯೊಡೆದು ಸತ್ತಿದ್ದೇಕೆ? ರಾಜನಿಗೆ ಅಕಸ್ಮಾತ್ ಆಗಿ ಅಷ್ಟೆಲ್ಲ ಅಭ್ಯುದಯ ಉಂಟಾಯಿತು ಎಂದೋ? ಇಲ್ಲ್ಲ, ಆ ದಿವ್ಯಸ್ತ್ರೀಯು ತನಗೆ ಸಿಗಲಿಲ್ಲವಲ್ಲ ಎಂಬ ದುಃಖದಿಂದಲೋ? ಇಲ್ಲ, ರಾಜನು ಮರಳಿ ಬಂದಿದ್ದರಿಂದ ತನಗೆ ರಾಜ್ಯಭೋಗ ತಪ್ಪಿತು ಎಂದೋ? ಈ ಪ್ರಶ್ನೆಗೆ ನೀನು ತಿಳಿದಿದ್ದೂ ಉತ್ತರ ಹೇಳದಿದ್ದರೆ ನಿನ್ನ ತಲೆ ಒಡೆದು ಹೋಗುವುದು ಖಂಡಿತ” ಎಂದನು.
ತ್ರಿವಿಕ್ರಮನು – “ಅಯ್ಯಾ, ಅದು ಯಾವುದೂ ಕಾರಣವಲ್ಲ. ಏಕೆಂದರೆ ಆ ಮಂತ್ರಿಯು ಖಂಡಿತವಾಗಿಯೂ ಶುದ್ಧಚರಿತ್ರನು. ಅವನು ಹಾಗೆಲ್ಲ ಯೋಚಿಸುವುದು ಸಾಧ್ಯವೇ ಇಲ್ಲ. ಅವನಿಗೆ ಆದದ್ದು ಒಂದೇ ಚಿಂತೆ. ಸಾಮಾನ್ಯಸ್ತ್ರೀಯರಲ್ಲಿ ಆಸಕ್ತನಾಗಿದ್ದಕ್ಕೇ ರಾಜನು ರಾಜ್ಯವನ್ನು ಇಷ್ಟು ಉಪೇಕ್ಷಿಸಿದನಲ್ಲ, ಇನ್ನು ಈ ದಿವ್ಯಸ್ತ್ರೀ ಇಲ್ಲೇ ಇರುತ್ತಾಳೆ ಎಂದ ಮೇಲೆ ರಾಜ್ಯದ ಗತಿ ಏನಾದೀತು? ತಾನು ಇನ್ನೆಷ್ಟು ಕಷ್ಟಪಡಬೇಕಾದೀತು? ಹೀಗೆ ಚಿಂತಿಸಿದ್ದರಿಂದಲೇ ಅವನು ಎದೆಯೊಡೆದು ಸತ್ತನು” ಎಂದನು.
ಹೀಗೆ ಅವನು ಮಾತನಾಡುತ್ತಲೇ ಬೇತಾಳನು ಮಾಯವಾಗಿ ಮತ್ತೆ ಮೊದಲಿದ್ದ ಸ್ಥಳಕ್ಕೇ ಹೋಗಿಬಿಟ್ಟನು.