ಯುವರಾಜನಾದ ಮೇಲೆ ಒಮ್ಮೆ ಜೀಮೂತವಾಹನನು ತಂದೆಯ ಬಳಿಗೆ ಹೋಗಿ ನಿವೇದಿಸಿಕೊಂಡನು – “ಅಪ್ಪಾ! ಈ ಕಲ್ಪವೃಕ್ಷವನ್ನು ನಾವು ಯಾರಿಗೋಸ್ಕರ ಕಾಪಾಡಿಕೊಂಡು ಬರಬೇಕು? ಈ ಹಿಂದೆ ಅದನ್ನು ತನ್ನದೆಂದು ಕಾಪಾಡಿಕೊಂಡು ಬಂದವರು ಯಾರೂ ಈಗ ಬದುಕಿಲ್ಲ. ಅದಕ್ಕೂ ಅವರಿಗೂ ಈಗ ಸಂಬಂಧವೇ ಇಲ್ಲ. ಅದ್ದರಿಂದ ನಾನು ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತೇನೆ. ಏಕೆಂದರೆ ಪರೋಪಕಾರದಂತಹ ಸತ್ಕಾರ್ಯ ಸ್ಥಿರವೇ ಹೊರತು ಐಶ್ವರ್ಯವಲ್ಲ..’’
ಇಲ್ಲಿಯವರೆಗಿನ ಪ್ರಯತ್ನವೆಲ್ಲ ವಿಫಲವಾದರೂ ನಿರಾಶನಾಗದೆ ತ್ರಿವಿಕ್ರಮಸೇನನು ಹದಿನೇಳನೆಯ ಬಾರಿ ಹೆಣವನ್ನು ಮರದಿಂದ ಕೆಳಗಿಳಿಸಿ, ಹೆಗಲಮೇಲೆ ಹಾಕಿಕೊಂಡು ಶ್ಮಶಾನದತ್ತ ಹೊರಟನು. ಹೆಣದಲ್ಲಿದ್ದ ಬೇತಾಳನು – “ರಾಜನ್! ನಿನ್ನ ಆಯಾಸ ಪರಿಹಾರಕ್ಕೆಂದು ಮತ್ತೊಂದು ಕಥೆಯನ್ನು ಹೇಳುತ್ತೇನೆ. ಗಮನವಿಟ್ಟು ಕೇಳು” ಎಂದು ಹೇಳಿ ಈ ಕಥೆಯನ್ನು ಹೇಳಲಾರಂಭಿಸಿದನು –
ಕನಕಪುರವೆಂಬ ನಗರವಿದೆ. ಅಲ್ಲಿ ಯಶೋಧನನೆಂಬ ರಾಜನಿದ್ದನು. ಅವನು ಹೆಸರಿಗೆ ತಕ್ಕಂತೆ ಕೀರ್ತಿಶಾಲಿಯಾಗಿದ್ದನು. ಮಹಾಪರಾಕ್ರಮಿಯಾದ ಅವನು ಪ್ರಜೆಗಳನ್ನು ಪ್ರೀತಿಯಿಂದ ಸಲಹುತ್ತಿದ್ದನು. ಪಾಪಭೀರುವಾದ ಅವನ ಶೌರ್ಯವೂ ಔದಾರ್ಯವೂ ಎಲ್ಲ್ಲೆಡೆ ಪ್ರಸಿದ್ಧವಾಗಿದ್ದವು.
ಅದೇ ನಗರದಲ್ಲಿ ಒಬ್ಬ ಶ್ರೀಮಂತ ವರ್ತಕನಿದ್ದನು. ಅವನಿಗೆ ಉನ್ಮಾದಿನಿಯೆಂಬ ಮಗಳಿದ್ದಳು. ಅವಳು ಅದೆಷ್ಟು ಸುಂದರಿಯಾಗಿದ್ದಳೆಂದರೆ ಅವಳನ್ನು ನೋಡಿದ ಯಾವ ಯುವಕನಿಗೇ ಆದರೂ ಹುಚ್ಚು ಹಿಡಿದು ಬಿಡುತ್ತಿತ್ತು. ಹಾಗೆಂದೇ ಅವಳ ಹೆಸರೂ ಅನ್ವರ್ಥವೇ ಆಗಿತ್ತು.
ಉನ್ಮಾದಿನಿಯು ಪ್ರಾಪ್ತವಯಸ್ಕಳಾದಾಗ ಒಮ್ಮೆ ವರ್ತಕನು ರಾಜನ ಬಳಿಗೆ ಹೋಗಿ – “ರಾಜನ್! ನನಗೆ ರತ್ನದಂತಹ ಒಬ್ಬಳು ಮಗಳಿದ್ದಾಳೆ. ಅವಳೀಗ ವಿವಾಹಯೋಗ್ಯಳಾಗಿದ್ದಾಳೆ. ಅವಳನ್ನು ತಮಗೆ ತಿಳಿಸದೆ ಬೇರೆಯವನಿಗೆ ಮದುವೆ ಮಾಡಿಕೊಡಲು ನನಗೆ ಇಷ್ಟವಿಲ್ಲ. ಏಕೆಂದರೆ ಭೂಮಿಯ ಮೇಲಿರುವ ಎಲ್ಲ ರತ್ನಗಳಿಗೂ ರಾಜನೇ ಒಡೆಯ ಎಂಬ ನೀತಿಯು ಪ್ರಸಿದ್ಧವೇ ಆಗಿದೆ. ಈ ಕನ್ಯಾರತ್ನದ ವಿಷಯದಲ್ಲೂ ಮೊದಲ ಅಧಿಕಾರ ನಿಮ್ಮದೇ. ಅವಳನ್ನು ಸ್ವೀಕರಿಸುವುದು ಅಥವಾ ಬಿಡುವುದು ನಿಮಗೇ ಸೇರಿದ್ದು” ಎಂದು ನಿವೇದಿಸಿಕೊಂಡನು.
ರಾಜನು ವರ್ತಕನ ಮಾತಿನಿಂದ ಸಂತುಷ್ಟನಾಗಿ ಆ ಹುಡುಗಿಯನ್ನು ನೋಡಿಕೊಂಡು ಬರಲು ಕೆಲವು ಬ್ರಾಹ್ಮಣರನ್ನು ವರ್ತಕನ ಮನೆಗೆ ಕಳುಹಿಸಿದನು. ಅವರು ಉನ್ಮಾದಿನಿಯ ದಿವ್ಯಸೌಂದರ್ಯವನ್ನು ಕಂಡು ದಿಗ್ಭ್ರಾಂತರಾಗಿ – “ಇಂಥ ರೂಪವತಿಯಾದವಳು ನಮ್ಮ ಮಹಾರಾಜನ ಹೆಂಡತಿಯಾದಳೆಂದರೆ ಮತ್ತೆ ಅವನು ರಾಜ್ಯಭಾರದ ವಿಷಯದಲ್ಲೋ, ಪ್ರಜೆಗಳ ವಿಷಯದಲ್ಲೋ ಗಮನಹರಿಸುವುದು ಸಾಧ್ಯವೇ ಇಲ್ಲ. ಹೇಗಾದರೂ ಈ ಮದುವೆಯನ್ನು ತಪ್ಪಿಸಬೇಕು” ಎಂದು ಪರಸ್ಪರ ಮಾತನಾಡಿಕೊಂಡು, ರಾಜನ ಬಳಿಗೆ ಬಂದು – “ಆ ಹುಡುಗಿ ಒಳ್ಳೆಯ ಲಕ್ಷಣವಂತೆಯಲ್ಲ” ಎಂದು ಸುಳ್ಳುಹೇಳಿಬಿಟ್ಟರು.
ಅವರ ಮಾತನ್ನು ನಂಬಿ ರಾಜನು ಅವಳನ್ನು ಮದುವೆಯಾಗುವ ವಿಚಾರವನ್ನು ಕೈಬಿಟ್ಟನು. ವರ್ತಕನು ರಾಜನ ಅಪ್ಪಣೆಯನ್ನು ಪಡೆದು ಸೇನಾಪತಿಯಾದ ಬಲಧರನೆಂಬಾತನಿಗೆ ಅವಳನ್ನು ಕೊಟ್ಟು ಮದುವೆ ಮಾಡಿದನು. ಉನ್ಮಾದಿನಿಯು ಗಂಡನ ಮನೆಯಲ್ಲಿ ಸುಖವಾಗಿದ್ದಳು. ತಾನು ಲಕ್ಷಣವಂತೆಯಲ್ಲವೆಂದು ರಾಜನು ತನ್ನನ್ನು ನಿರಾಕರಿಸಿದ ಎಂಬ ದುಃಖವೊಂದು ಅವಳ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿತ್ತು.
ಈ ನಡುವೆ ವಸಂತಕಾಲ ಬಂತು. ಆ ದಿನಗಳಲ್ಲಿ ಒಮ್ಮೆ ರಾಜನು ವಸಂತೋತ್ಸವವನ್ನು ನೋಡುವುದಕ್ಕೆಂದು ಆನೆಯ ಮೇಲೆ ಕುಳಿತು ಸವಾರಿ ಹೊರಟಿದ್ದನು. “ಸರ್ವಾಂಗ ಸುಂದರನಾದ ಅವನ ರೂಪವನ್ನು ನೋಡಿದರೆ ಕುಲಸ್ತ್ರೀಯರ ಮನಸ್ಸು ಕಲಕಿ ಹೋಗೀತು. ಆದ್ದರಿಂದ ರಾಜನ ಸವಾರಿ ಬರುವಾಗ ಕುಲಸ್ತ್ರೀಯರೆಲ್ಲರೂ ಮನೆಯೊಳಗೇ ಇರತಕ್ಕದ್ದು” ಎಂದು ಡಂಗೂರ ಸಾರಲಾಯ್ತು. ಅಂತೆಯೇ ಅವರೆಲ್ಲ ಮನೆಯೊಳಗೇ ಇದ್ದುಬಿಟ್ಟರು. ಆದರೆ ರಾಜನು ತನ್ನನ್ನು ನಿರಾಕರಿಸಿದ್ದ ಎಂದು ಕೇಳಿ ದುಃಖಿತಳಾಗಿದ್ದ ಉನ್ಮಾದಿನಿಯು ಮಾತ್ರ ಅವನು ತನ್ನನ್ನು ನೋಡಲಿ ಎಂದೇ, ಅವನು ಬರುವ ಹೊತ್ತಿಗೆ ಸರಿಯಾಗಿ ತನ್ನ ಮನೆಯ ಉಪ್ಪರಿಗೆ ಹತ್ತಿ ಸವಾರಿ ನೋಡುತ್ತ ನಿಂತಳು. ರಾಜನ ಕಣ್ಣಿಗೆ ಅವಳು ಬೀಳುತ್ತಲೇ ಅವನು ಅವಳ ಮೇಲಿನ ಮೋಹದಿಂದ ಹುಚ್ಚು ಹಿಡಿದಂಥವನಾದ. ವಿಚಾರಿಸಲಾಗಿ ಹಿಂದೆ ತಾನು ನಿರಾಕರಿಸಿದ್ದ ಹೆಣ್ಣೇ ಅವಳು ಎಂದು ತಿಳಿದನು. ಸರ್ವಲಕ್ಷಣಸಂಪನ್ನೆಯೂ, ಅಪೂರ್ವ ರೂಪವತಿಯೂ ಆದ ಅವಳನ್ನು ಲಕ್ಷಣವಂತೆ ಅಲ್ಲವೆಂದು ಹೇಳಿದ ಬ್ರಾಹ್ಮಣರ ಮೇಲೆ ಅವನಿಗೆ ತಡೆಯಲಾರದಷ್ಟು ಸಿಟ್ಟು ಬಂತು. ಅರಮನೆಗೆ ಹಿಂದಿರುಗಿದ ಅವನು ಆ ಕೂಡಲೇ ಬ್ರಾಹ್ಮಣರನ್ನು ನಗರದಿಂದ ಗಡೀಪಾರು ಮಾಡಿಸಿ, ತಾನು ಉನ್ಮಾದಿನಿಯನ್ನೇ ಚಿಂತಿಸುತ್ತ, ಅವಳ ನೆನಪಿನಲ್ಲಿಯೇ ನಿದ್ರಾಹಾರಗಳನ್ನು ಉಪೇಕ್ಷಿಸಿ ದಿನಕಳೆದಂತೆ ಕೃಶನಾಗತೊಡಗಿದನು.
ಆಪ್ತೇಷ್ಟರು ಬಂದು ಆತ್ಮೀಯವಾಗಿ ವಿಚಾರಿಸಿದಾಗ ರಾಜನ ಚಿಂತೆಯ ನಿಜವಾದ ಕಾರಣ ಗೊತ್ತಾಯ್ತು. ಆಗ ಅವರೆಲ್ಲ – “ಮಹಾರಾಜ! ಇದರಲ್ಲಿ ಕೊರಗುವಂಥದ್ದೇನಿದೆ…? ಅವಳನ್ನು ವಶಪಡಿಸಿಕೊಂಡರಾಯ್ತು!’’ ಎಂದು ಸುಲಭವಾಗಿ ಪರಿಹಾರವನ್ನು ಹೇಳಿಬಿಟ್ಟರು. ಆದರೆ ಧಾರ್ಮಿಕನೂ ಪಾಪಭೀರುವೂ ಆದ ರಾಜನು ಅವರ ಮಾತನ್ನು ಒಪ್ಪಲಿಲ್ಲ. ಈ ಸಂಗತಿ ಸೇನಾಪತಿಯಾದ ಬಲಧರನ ಕಿವಿಗೂ ಬಿತ್ತು. ಅವನು ಆ ಕೂಡಲೆ ರಾಜನ ಬಳಿಗೆ ಬಂದು ನಮಸ್ಕರಿಸಿ “ಪ್ರಭೋ! ಸೇವಕನ ಸ್ತ್ರೀ ಎಂದರೆ ಅವಳು ಒಡೆಯನ ಸ್ತ್ರೀಯೇ ಹೊರತು ಪರಾಂಗನೆಯಲ್ಲ. ಅವಳನ್ನು ನಾನೇ ಅರ್ಪಿಸುತ್ತೇನೆ. ಒಪ್ಪಿಸಿಕೊಳ್ಳಬೇಕು. ಅಥವಾ ಅದು ಇಷ್ಟವಿಲ್ಲದಿದ್ದರೆ ನಾನು ಅವಳನ್ನು ದೇವಸ್ಥಾನಕ್ಕೆ ದೇವದಾಸಿಯಾಗಿ ಬಿಡುತ್ತೇನೆ. ದೇವದಾಸಿಯನ್ನು ಗ್ರಹಿಸುವುದರಿಂದ ದೋಷ ಬರುವುದಿಲ್ಲ” ಎಂದು ವಿನಂತಿಸಿಕೊಂಡನು.
ಆದರೆ ರಾಜನು ಒಪ್ಪಲಿಲ್ಲ. ಸೇನಾಪತಿಯು ಮತ್ತೆ ಮತ್ತೆ ಬೇಡಿಕೊಂಡಾಗ ಕೋಪದಿಂದ – “ರಾಜನಾಗಿದ್ದು ಕೊಂಡು ನಾನೇ ಇಂಥ ಅಧರ್ಮ ಮಾಡುವುದೆ! ನಾನೇ ಧರ್ಮದ ಸೀಮೆಯನ್ನು ಮೀರಿ ನಡೆದರೆ ನನ್ನ ಪ್ರಜೆಗಳು ಹೇಗೆ ಸನ್ಮಾರ್ಗದಲ್ಲಿ ನಡೆದಾರು? ನೀನು ರಾಜಭಕ್ತ ಎಂಬುದೇನೋ ಹೌದು. ಅದರೂ ಪಾಪಕರ್ಮದಲ್ಲಿ ತೊಡಗುವಂತೆ ನನ್ನನ್ನು ಅದು ಹೇಗೆ ಪ್ರೇರೇಪಿಸುತ್ತಿದ್ದೀಯೆ? ನೀನು ನಿನ್ನ ಧರ್ಮಪತ್ನಿಯನ್ನು ಬಿಡುವುದು ತಪ್ಪು. ಹಾಗೊಂದು ವೇಳೆ ಅವಳನ್ನು ಬಿಟ್ಟೆಯೆಂದಾದರೆ ನಾನು ಆ ಅಪರಾಧವನ್ನು ಕ್ಷಮಿಸುವುದಿಲ್ಲ. ಅಂಥ ಅಪರಾಧವನ್ನು ಅನುಮೋದಿಸುವುದಕ್ಕಿಂತ ಪ್ರಾಣವನ್ನು ಬಿಡುವುದೇ ಮೇಲು!’’ ಎಂದು ಹೇಳಿದನು.
ಪೌರರೂ ಜಾನಪದರೂ ಒಟ್ಟಾಗಿ ಬಂದು ಸೇನಾಪತಿ ಹೇಳಿದ ಮಾತನ್ನೇ ನಿವೇದಿಸಿಕೊಂಡರು. ಆಗಲೂ ರಾಜನು ಅದನ್ನು ನಿರಾಕರಿಸಿಬಿಟ್ಟನು, ಮತ್ತು ಅದೇ ಕೊರಗಿನಲ್ಲಿಯೇ ಸ್ವಲ್ಪಕಾಲದ ಅನಂತರ ದಿವಂಗತನಾದನು. ಅದನ್ನು ಕಂಡು ದುಃಖವನ್ನು ತಡೆಯಲಾರದೆ ರಾಜಭಕ್ತನಾದ ಸೇನಾಪತಿಯೂ ಅಗ್ನಿಪ್ರವೇಶ ಮಾಡಿ ಪ್ರಾಣಬಿಟ್ಟನು.
ಹೀಗೆ ಕಥೆಯನ್ನು ಹೇಳಿ ಮುಗಿಸಿ ಬೇತಾಳನು – “ಮಹಾರಾಜ! ಆ ರಾಜ ಮತ್ತು ಸೇನಾಪತಿ – ಇವರಿಬ್ಬರಲ್ಲಿ ಯಾರು ಹೆಚ್ಚಿನ ಸತ್ತ್ವಶಾಲಿ? ಈ ಪ್ರಶ್ನಗೆ ಉತ್ತರ ಹೇಳು. ಉತ್ತರ ತಿಳಿದಿದ್ದೂ ಹೇಳದಿದ್ದರೆ ನಿನ್ನ ತಲೆ ಒಡೆದುಹೋದೀತು” ಎಂದು ಹೇಳಿದನು.
ತ್ರಿವಿಕ್ರಮಸೇನನು ತಡಮಾಡದೆ “ರಾಜನೇ ಹೆಚ್ಚಿನ ಸತ್ತ್ವಶಾಲಿ” ಎಂದು ಉತ್ತರ ಹೇಳಿದನು. “ಅದು ಹೇಗೆ ಸಾಧ್ಯ…? ಸೇನಾಪತಿ ಏಕಲ್ಲ? ಮಹಾರಾಜನಿಗೆ ತನ್ನ ಅಂಥ ಸುಂದರಿಯಾದ ಹೆಂಡತಿಯನ್ನು ಬಿಟ್ಟುಕೊಡಲೂ ಅವನು ಸಿದ್ಧನಾಗಿದ್ದ. ಕೊನೆಗೆ ರಾಜನು ಸತ್ತನೆಂಬ ದುಃಖದಿಂದ ತಾನೂ ಪ್ರಾಣ ಬಿಟ್ಟ. ಅವನ ಸತ್ತ್ವವೇನು ಕಡಮೆಯೇ..? ರಾಜನು ಯಾರದ್ದೋ ಹೆಂಡತಿಯನ್ನು ಬಿಟ್ಟಿದ್ದರಲ್ಲ್ಲಿ ಆಶ್ಚರ್ಯವೇನಿದೆ? ಅದೇನು ದೊಡ್ಡದು!’’ ಎಂದು ಬೇತಾಳನು ಮತ್ತೆ ಕೇಳಿದನು.
ತ್ರಿವಿಕ್ರಮಸೇನನು – “ಅದು ಹಾಗಲ್ಲ. ಸತ್ಕುಲಪ್ರಸೂತನೂ ರಾಜಭಕ್ತನೂ ಆದ ಸೇನಾಪತಿಯು ತನ್ನ ಒಡೆಯನಿಗಾಗಿ ಹೆಂಡತಿಯನ್ನು ಬಿಟ್ಟುಕೊಡಲು ಸಿದ್ಧನಾಗಿದ್ದಾಗಲಿ, ಪ್ರಾಣಬಿಟ್ಟಿದ್ದಾಗಲಿ ದೊಡ್ಡದೇನಲ್ಲ. ಏಕೆಂದರೆ ತಮ್ಮ ಪ್ರಾಣವನ್ನೇ ಕೊಟ್ಟಾದರೂ ರಾಜನನ್ನು ರಕ್ಷಿಸುವುದು ಸೇವಕರಾದವರ ವ್ರತವೇ ಆಗಿರುತ್ತದೆ. ರಾಜರು ಹಾಗಲ್ಲ. ಅವರು ತಮಗೆ ಬೇಕೆನಿಸಿದರೆ ಮದ್ದಾನೆಗಳಂತೆ ಧರ್ಮದ ಶೃಂಖಲೆಗಳನ್ನೆಲ್ಲ ಕಿತ್ತು ವ್ಯವಹರಿಸುತ್ತಾರೆ. ನಹುಷಮಹಾರಾಜನಂಥವರೂ ಹಾಗೆ ಮಾಡಲಿಲ್ಲವೆ? ಅವರನ್ನು ತಡೆಯುವವರು ಯಾರೂ ಇರುವುದಿಲ್ಲ. ಅವರು ನಡೆದದ್ದೇ ದಾರಿ. ಹೀಗಿದ್ದೂ ಯಶೋಧನನು ಉನ್ಮಾದಿನಿಯನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯವಿದ್ದೂ ಅದು ಸರಿಯಲ್ಲವೆಂದು ನಿಶ್ಚಯಿಸಿ ಅಮಾರ್ಗದಲ್ಲಿ ಹೆಜ್ಜೆಯಿಡಲಿಲ್ಲವಲ್ಲ! ಆದ್ದರಿಂದ ಅವನೇ ಹೆಚ್ಚಿನವನೆಂದು ನನ್ನ ಅಭಿಪ್ರಾಯ” ಎಂದನು.
ಬೇತಾಳನು ಕೂಡಲೇ ಅವನ ಹೆಗಲಿನಿಂದ ಛಂಗನೆ ಮಾಯವಾಗಿ ಮತ್ತೆ ಮೊದಲಿದ್ದ ಸ್ಥಳಕ್ಕೇ ಹೋಗಿಬಿಟ್ಟನು.