ತುಂಬ ಹೊತ್ತಾದರೂ ಅಣ್ಣನಾಗಲಿ, ಗಂಡನಾಗಲಿ ಹಿಂದಿರುಗದೆ ಇದ್ದಾಗ ಮದನಸುಂದರಿಯು ತಾನೇ ಮಂದಿರದ ಒಳಗೆ ಬಂದು ನೋಡುತ್ತಾಳೆ, ಅವರಿಬ್ಬರ ರುಂಡಮುಂಡಗಳೂ ಬೇರೆ ಬೇರೆಯಾಗಿ ಬಿದ್ದಿವೆ! “ಅಯ್ಯೋ, ಇದೇನು ಅನಾಹುತವಾಯ್ತು!’’ ಎಂದು ಅವಳು ತಲೆ ಚಚ್ಚಿಕೊಂಡು ಅತ್ತು ಕರೆದು ಮಾಡಿದಳು. ಕೊನೆಗೆ ತನ್ನ ಅತ್ಯಂತ ಪ್ರಿಯರಾದ ಇವರಿಬ್ಬರೂ ಮೃತರಾದ ಮೇಲೆ ತಾನಿನ್ನು ಬದುಕಿದ್ದು ಫಲವೇನು? ತಾನೂ ಪ್ರಾಣಾರ್ಪಣೆ ಮಾಡುತ್ತೇನೆ ಎಂದು ನಿರ್ಧರಿಸಿಕೊಂಡು ದೇವಿಗೆ ಕೈಮುಗಿದು “ದೇವಿ, ಮುಂದಿನ ಜನ್ಮದಲ್ಲಿಯೂ ಇವನೇ ನನಗೆ ಅಣ್ಣನಾಗುವಂತೆ, ಇವರೇ ನನಗೆ ಗಂಡನಾಗುವಂತೆ ಅನುಗ್ರಹ ಮಾಡು” ಎಂದು ಬೇಡಿಕೊಂಡಳು. ಆಮೇಲೆ ಪಕ್ಕದಲ್ಲಿದ್ದ ಅಶೋಕವೃಕ್ಷಕ್ಕೆ ಬಳ್ಳಿಯಿಂದ ನೇಣುಹಾಕಿಕೊಳ್ಳಲು ತೊಡಗಿದಳು.
ರಾಜಾ ತ್ರಿವಿಕ್ರಮನು ಮತ್ತೆ ಮುಳ್ಳುಮುತ್ತುಗದ ಮರದ ಬಳಿಗೆ ಬಂದು ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು ಶ್ಮಶಾನದ ಕಡೆಗೆ ಮೌನವಾಗಿ ಹೆಜ್ಜೆ ಹಾಕಿದನು. ಆಗ ಹೆಣದಲ್ಲಿದ್ದ ಬೇತಾಳನು – “ರಾಜನ್! ನಿನ್ನ ಪ್ರಾಮಾಣಿಕ ಪರಿಶ್ರಮವನ್ನು ಕಂಡು ನನಗೆ ಸಂತೋಷವಾಗುತ್ತಿದೆ. ಇರಲಿ, ನಿನ್ನ ಆಯಾಸ ಕಳೆಯುವುದಕ್ಕಾಗಿ ಕಥೆಯೊಂದನ್ನು ಹೇಳುತ್ತೇನೆ” ಎಂದು ಹೇಳಿ ಈ ಕಥೆಯನ್ನು ಹೇಳಿದನು –
ಹಿಂದೆ ಶೋಭಾವತೀ ಎಂಬ ನಗರದಲ್ಲಿ ಯಶಃಕೇತು ಎಂಬ ರಾಜನಿದ್ದ. ಆ ನಗರದಲ್ಲಿ ಗೌರೀದೇವಿಯ ಸುಂದರವೂ ವಿಶಾಲವೂ ಆದ ಮಂದಿರವಿತ್ತು. ಆ ಮಂದಿರದ ಬಲಭಾಗದಲ್ಲಿ ಗೌರೀತೀರ್ಥವೆಂಬ ವಿಶಾಲವಾದ ಕೊಳವಿತ್ತು. ಆಷಾಢಶುದ್ಧ ಚತುರ್ದಶಿಯಂದು ಅಲ್ಲಿ ಸ್ನಾನ ಮಾಡಿದರೆ ಬಹಳ ಪುಣ್ಯ ಲಭಿಸುವುದೆಂದು ಪ್ರತೀತಿ ಇತ್ತು. ಹಾಗಾಗಿ ಅಂದು ನಾನಾ ದಿಕ್ಕುಗಳಿಂದ ನೂರಾರು ಜನ ತೀರ್ಥಸ್ನಾನ ಮಾಡಲೆಂದು ಅಲ್ಲಿಗೆ ಬಂದು ಸೇರುತ್ತಿದ್ದರು.
ಒಮ್ಮೆ ಬ್ರಹ್ಮಸ್ಥಲವೆಂಬ ಊರಿನಿಂದ ಧವಲನೆಂಬ ಅಗಸರ ಯುವಕನು ಆ ತಿಥಿಯಂದು ಸ್ನಾನ ಮಾಡುವುದಕ್ಕೆಂದು ಅಲ್ಲಿಗೆ ಬಂದಿದ್ದನು. ಅಲ್ಲಿ ಅವನು ಶುದ್ಧಪಟನೆಂಬ ಅಗಸನ ಮಗಳಾದ ಮದನಸುಂದರಿ ಎಂಬ ಯುವತಿಯನ್ನು ಕಂಡನು. ಅವಳೂ ತೀರ್ಥಸ್ನಾನಕ್ಕೆಂದೇ ಬಂದಿದ್ದಳು. ಸುಂದರಿಯಾದ ಅವಳನ್ನು ಕಂಡು ಧವಲನು ಅವಳನ್ನೇ ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದನು. ಮನೆಗೆ ಹೋಗಿ ಅವನು ತನ್ನ ತಾಯಿಗೆ ಈ ವಿಷಯವನ್ನು ತಿಳಿಸಿದಾಗ ಅವಳೂ ಸಂತೋಷಪಟ್ಟಳು. ಏಕೆಂದರೆ ಶುದ್ಧಪಟನು ಅವಳಿಗೆ ಪರಿಚಯದವನೇ ಆಗಿದ್ದ. ಅವಳು ತಡಮಾಡದೆ ಅವನೊಂದಿಗೆ ಮಾತುಕತೆ ನಡೆಸಿ, ಮದನಸುಂದರಿಯೊಂದಿಗೆ ತನ್ನ ಮಗನ ಮದುವೆಯನ್ನು ನೆರವೇರಿಸಿಬಿಟ್ಟಳು. ನೂತನ ದಂಪತಿಗಳು ಬ್ರಹ್ಮಸ್ಥಲಕ್ಕೆ ಬಂದು ಅಲ್ಲಿ ಸುಖವಾಗಿ ದಾಂಪತ್ಯ ನಡೆಸುತ್ತಿದ್ದರು.
ಮದನಸುಂದರಿಗೆ ಒಬ್ಬ ಅಣ್ಣನಿದ್ದನು. ಅವನು ದೇವೀಪೂಜೋತ್ಸವದ ಸಂದರ್ಭದಲ್ಲಿ ತಂದೆಯ ಆಜ್ಞೆಯಂತೆ ತಂಗಿಯನ್ನೂ, ಭಾವನನ್ನೂ ಬ್ರಹ್ಮಸ್ಥಲದಿಂದ ಶೋಭಾವತಿಗೆ ಕರೆತಂದನು. ಆ ಮೂವರೂ ಗೌರೀದೇವಿಯ ಮಂದಿರದ ಹತ್ತಿರ ಬಂದಾಗ ಧವಲನು “ಒಳಗೆ ಹೋಗಿ ದೇವತಾದರ್ಶನ ಮಾಡಿಕೊಂಡು ಹೋಗೋಣ” ಎಂದನು. ಆದರೆ ಭಾವಮೈದುನನು “ನಾವೀಗ ಬರಿಗೈಯಲ್ಲಿದ್ದೇವೆ. ಅದರಲ್ಲೂ ನೀವು ದಂಪತಿಗಳು ಬರಿಗೈಯಲ್ಲಿ ದೇವದರ್ಶನ ಮಾಡುವುದು ಸರಿಯಲ್ಲ. ನೀವಿಬ್ಬರೂ ಇಲ್ಲೇ ನಿಂತಿರಿ. ನಾನು ಒಳಗೆ ಹೋಗಿ ಎಲ್ಲರ ಪರವಾಗಿ ನಮಸ್ಕರಿಸಿ ಬರುತ್ತೇನೆ” ಎಂದು ಹೇಳಿ ಅವರನ್ನು ಅಲ್ಲಿಯೇ ನಿಲ್ಲಿಸಿ ತಾನೊಬ್ಬನೇ ಮಂದಿರದ ಒಳಗೆ ಹೋದನು. ಅಲ್ಲಿ ನೋಡುತ್ತಾನೆ, ಹದಿನೆಂಟು ಕೈಗಳುಳ್ಳ ಚಾಮುಂಡಿಕಾ ಮೂರ್ತಿಯು ವಿರಾಜಮಾನವಾಗಿತ್ತು. ಪಾದತಲದಲ್ಲಿ ಮಹಿಷಾಸುರನು ಹತನಾಗಿ ಬಿದ್ದಿದ್ದಾನೆ. ಅದನ್ನು ನೋಡುತ್ತಿದ್ದಂತೆ ವಿಧಿಪ್ರೇರಣೆಯಿಂದ ಅವನ ಮನಸ್ಸಿನಲ್ಲಿ ಒಂದು ಯೋಚನೆ ಹುಟ್ಟಿಕೊಂಡಿತು – ಎಷ್ಟೋ ಜನ ಭಕ್ತರು ಇಲ್ಲಿಗೆ ಬಂದು ದೇವಿಗೆ ಬಗೆಬಗೆಯ ಜೀವಗಳನ್ನು ಬಲಿಯಾಗಿ ಅರ್ಪಿಸಿ ಪೂಜೆ ಮಾಡುತ್ತಾರೆ. ನಾನೂ ಏಕೆ ಹೀಗೆ ನನ್ನ ಪ್ರಾಣವನ್ನೇ ಬಲಿಯಾಗಿ ಅರ್ಪಿಸಿಕೊಂಡು ಸಿದ್ಧಿಯನ್ನು ಪಡೆದುಕೊಳ್ಳಬಾರದು?
ಹೀಗೆ ಯೋಚನೆ ಬಂದಿದ್ದೇ ತಡ, ಅವನು ಅತ್ತಿತ್ತ ನೋಡಿದನು. ಬೇರೆ ಯಾರೂ ಇರಲಿಲ್ಲ. ಆಗ ಗರ್ಭಗುಡಿಯಲ್ಲಿದ್ದ ಖಡ್ಗ ಅವನ ಕಣ್ಣಿಗೆ ಬಿತ್ತು. ಅವನು ಕೂಡಲೇ ಆ ಖಡ್ಗವನ್ನು ತೆಗೆದುಕೊಂಡು ಬಂದು ಅದರಿಂದ ತನ್ನ ತಲೆಯನ್ನು ಕತ್ತರಿಸಿಕೊಂಡು ಬಿಟ್ಟನು.
ಇತ್ತ ಅವನಿಗಾಗಿ ಕಾಯುತ್ತಾ ನಿಂತಿದ್ದ ಧವಲನು ತುಂಬ ಹೊತ್ತಾದರೂ ಅವನು ಬಾರದೇ ಇದ್ದುದನ್ನು ಕಂಡು ಗಾಭರಿಯಾದನು. ಆಮೇಲೆ ಹೆಂಡತಿಗೆ “ನೀನು ಇಲ್ಲೇ ನಿಂತಿರು. ನಾನು ನೋಡಿಕೊಂಡು ಬರುತ್ತೇನೆ” ಎಂದು ತಿಳಿಸಿ ಲಗುಬಗೆಯಿಂದ ಮಂದಿರದತ್ತ ಓಡಿದನು. ಅಲ್ಲಿ ಒಳಗೆ ಬಂದು ನೋಡುತ್ತಾನೆ, ದೇವಿಯ ಎದುರು ತನ್ನ ಭಾವಮೈದುನನು ತಲೆ ಕತ್ತರಿಸಿಕೊಂಡು ಬಿದ್ದಿದ್ದಾನೆ! ಅದನ್ನು ಕಂಡು ಅವನಿಗೂ ಏನೋ ಒಂದು ಆವೇಶ ಬಂದುಬಿಟ್ಟಿತು. ಆ ಆವೇಶದಿಂದ ಅವನು ಅದೇ ಖಡ್ಗದಿಂದ ತನ್ನ ತಲೆಯನ್ನೂ ಕತ್ತರಿಸಿಕೊಂಡನು.
ತುಂಬ ಹೊತ್ತಾದರೂ ಅಣ್ಣನಾಗಲೀ, ಗಂಡನಾಗಲೀ ಹಿಂದಿರುಗದೇ ಇದ್ದಾಗ ಮದನಸುಂದರಿಯು ತಾನೇ ಮಂದಿರದ ಒಳಗೆ ಬಂದು ನೋಡುತ್ತಾಳೆ, ಅವರಿಬ್ಬರ ರುಂಡಮುಂಡಗಳೂ ಬೇರೆ ಬೇರೆಯಾಗಿ ಬಿದ್ದಿವೆ! “ಅಯ್ಯೋ, ಇದೇನು ಅನಾಹುತವಾಯ್ತು!’’ ಎಂದು ಅವಳು ತಲೆ ಚಚ್ಚಿಕೊಂಡು ಅತ್ತು ಕರೆದು ಮಾಡಿದಳು. ಕೊನೆಗೆ ತನ್ನ ಅತ್ಯಂತ ಪ್ರಿಯರಾದ ಇವರಿಬ್ಬರೂ ಮೃತರಾದ ಮೇಲೆ ತಾನಿನ್ನು ಬದುಕಿದ್ದು ಫಲವೇನು? ತಾನೂ ಪ್ರಾಣಾರ್ಪಣೆ ಮಾಡುತ್ತೇನೆ ಎಂದು ನಿರ್ಧರಿಸಿಕೊಂಡು ದೇವಿಗೆ ಕೈಮುಗಿದು “ದೇವಿ, ಮುಂದಿನ ಜನ್ಮದಲ್ಲಿಯೂ ಇವನೇ ನನಗೆ ಅಣ್ಣನಾಗುವಂತೆ, ಇವರೇ ನನಗೆ ಗಂಡನಾಗುವಂತೆ ಅನುಗ್ರಹ ಮಾಡು” ಎಂದು ಬೇಡಿಕೊಂಡಳು. ಆಮೇಲೆ ಪಕ್ಕದಲ್ಲಿದ್ದ ಅಶೋಕವೃಕ್ಷಕ್ಕೆ ಬಳ್ಳಿಯಿಂದ ನೇಣು ಹಾಕಿಕೊಳ್ಳಲು ತೊಡಗಿದಳು.
ಆ ಕೂಡಲೇ “ಮಗಳೆ, ದುಸ್ಸಾಹಸ ಮಾಡಬೇಡ, ನಿನ್ನ ಸತ್ತ್ವಾತಿಶಯವನ್ನು ನೋಡಿ ನನಗೆ ಸಂತೋಷವಾಗಿದೆ. ಚಿಂತೆ ಮಾಡಬೇಡ. ನಾನು ಇವರಿಬ್ಬರನ್ನೂ ಬದುಕಿಸುತ್ತೇನೆ. ಕತ್ತರಿಸಿ ಬಿದ್ದಿರುವ ಈ ಎರಡು ತಲೆಗಳನ್ನೂ, ಎರಡು ಮುಂಡಗಳನ್ನೂ ಜೋಡಿಸು. ನಿನ್ನ ಅಣ್ಣನೂ, ಗಂಡನೂ ಬದುಕುತ್ತಾರೆ” ಎಂದು ಅಶರೀರವಾಣಿ ಕೇಳಿಸಿತು. ಮದನಸುಂದರಿಗೆ ಅತ್ಯಂತ ಸಂತೋಷವಾಯ್ತು. ಆ ಸಂತೋಷದ ಭರದಲ್ಲಿ ಅವಳು ತಾನು ಏನು ಮಾಡುತ್ತಿರುವೆನೆಂಬ ಅರಿವಿಲ್ಲದೆ ಗಡಿಬಿಡಿಯಲ್ಲಿ ಗಂಡನ ತಲೆಯನ್ನು ಅಣ್ಣನ ಮುಂಡಕ್ಕೂ, ಅಣ್ಣನ ತಲೆಯನ್ನು ಗಂಡನ ಮುಂಡಕ್ಕೂ ಜೋಡಿಸಿ ಬಿಟ್ಟಳು. ಮರುಕ್ಷಣವೇ ಅವರಿಬ್ಬರಿಗೂ ಜೀವ ಬಂತು.
ಎಲ್ಲರೂ ದೇವಿಗೆ ನಮಸ್ಕರಿಸಿ ಅಲ್ಲಿಂದ ಹೊರಟರು. ದಾರಿಯಲ್ಲಿ ಹೋಗುತ್ತಿರುವಾಗ ಗಮನಿಸಿ ನೋಡಿದಾಗ ಮದನಸುಂದರಿಗೆ ತಾನು ಮಾಡಿದ ತಪ್ಪು ಅರಿವಾಯ್ತು. ಈಗ ಏನು ಮಾಡಬೇಕು? ಎಂದು ಅರ್ಥವಾಗದೆ ಅವಳು ಪರಿತಾಪಪಟ್ಟಳು.
ಹೀಗೆ ಕಥೆಯನ್ನು ಹೇಳಿ ಮುಗಿಸಿ ಬೇತಾಳನು “ಮಹಾರಾಜ! ಈಗ ನೀನು ಉತ್ತರ ಹೇಳು. ಅವರಿಬ್ಬರಲ್ಲಿ ಅವಳ ಗಂಡ ಯಾರು? ಉತ್ತರ ತಿಳಿದಿದ್ದೂ ನೀನು ಹೇಳದಿದ್ದರೆ ನಿನ್ನ ತಲೆ ಒಡೆದು ಚೂರಾಗುತ್ತದೆ” ಎಂದನು.
ರಾಜಾ ತ್ರಿವಿಕ್ರಮನು ನಸುನಕ್ಕು – “ಅದರಲ್ಲೇನಿದೆ…? ಗಂಡನ ತಲೆಯು ಯಾವ ಮುಂಡಕ್ಕೆ ಜೋಡಣೆಯಾಗಿದೆಯೋ ಅವನೇ ಅವಳ ಗಂಡ. ಏಕೆಂದರೆ ಶರೀರದ ಎಲ್ಲಾ ಅಂಗಾಂಗಗಳಲ್ಲಿಯೂ ಅತ್ಯಂತ ಪ್ರಧಾನವಾದುದು ತಲೆಯೇ. ಮನುಷ್ಯನನ್ನು ಗುರುತಿಸುವುದೂ ತಲೆಯಿಂದಲೇ” ಎಂದನು.
ಅವನ ಉತ್ತರದಿಂದ ಬೇತಾಳನಿಗೇನೋ ಸಮಾಧಾನವಾಯ್ತು. ಆದರೆ ಉತ್ತರಕೊಡುವುದಕ್ಕಾಗಿ ಅವನು ಮಾತನಾಡಿಬಿಟ್ಟಿದ್ದರಿಂದ ವ್ರತಭಂಗವಾಗಿತ್ತು. ಬೇತಾಳನು ಆ ಕೂಡಲೇ ಅವನ ಹೆಗಲಿನಿಂದ ನೆಗೆದು ಮಾಯವಾಗಿ ಮೊದಲಿದ್ದ ಸ್ಥಳಕ್ಕೇ ಹೋಗಿಬಿಟ್ಟನು.