ಯುವರಾಜನಾದ ಮೇಲೆ ಒಮ್ಮೆ ಜೀಮೂತವಾಹನನು ತಂದೆಯ ಬಳಿಗೆ ಹೋಗಿ ನಿವೇದಿಸಿಕೊಂಡನು – “ಅಪ್ಪಾ! ಈ ಕಲ್ಪವೃಕ್ಷವನ್ನು ನಾವು ಯಾರಿಗೋಸ್ಕರ ಕಾಪಾಡಿಕೊಂಡು ಬರಬೇಕು? ಈ ಹಿಂದೆ ಅದನ್ನು ತನ್ನದೆಂದು ಕಾಪಾಡಿಕೊಂಡು ಬಂದವರು ಯಾರೂ ಈಗ ಬದುಕಿಲ್ಲ. ಅದಕ್ಕೂ ಅವರಿಗೂ ಈಗ ಸಂಬಂಧವೇ ಇಲ್ಲ. ಅದ್ದರಿಂದ ನಾನು ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತೇನೆ. ಏಕೆಂದರೆ ಪರೋಪಕಾರದಂತಹ ಸತ್ಕಾರ್ಯ ಸ್ಥಿರವೇ ಹೊರತು ಐಶ್ವರ್ಯವಲ್ಲ..’’
ಛಲ ಬಿಡದ ತ್ರಿವಿಕ್ರಮಸೇನನು ಹದಿನಾರನೆಯ ಸಾರಿ ಹೆಣವನ್ನು ಹೆಗಲಮೇಲೆ ಹಾಕಿಕೊಂಡು ಶ್ಮಶಾನದ ಕಡೆಗೆ ಹೊರಟನು. ಹೆಣದಲ್ಲಿದ್ದ ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು –
ಹಿಮಾಲಯದ ತಪ್ಪಲಿನಲ್ಲಿ ಕಾಂಚನಪುರವೆಂಬ ವಿದ್ಯಾಧರರ ವಸತಿ ಇದೆ. ಜೀಮೂತಕೇತು ಎಂಬುವನು ವಿದ್ಯಾಧರರಿಗೆ ಅಧಿಪತಿಯಾಗಿ ಅಲ್ಲಿ ವಾಸವಾಗಿದ್ದನು. ಅವನ ಮನೆಯ ಕೈತೋಟದಲ್ಲೇ ಕಲ್ಪವೃಕ್ಷವಿತ್ತು. ಜೀಮೂತಕೇತುವಿನ ಮಗ ಜೀಮೂತವಾಹನ. ಅವನು ಬೋಧಿಸತ್ತ್ವನ ಅಂಶದಿಂದ ಹುಟ್ಟಿದವನು. ಅವನಿಗೆ ತನ್ನ ಹಿಂದಿನ ಜನ್ಮದ ಸ್ಮರಣೆ ಇತ್ತು. ಅವನು ಹುಟ್ಟಿನಿಂದಲೇ ದಾನವೀರನೂ, ಮಹಾಸತ್ತ್ವನೂ, ಸಕಲಜೀವರಾಶಿಗಳಲ್ಲಿ ಅನುಕಂಪೆಯುಳ್ಳವನೂ, ಗುರುಶುಶ್ರೂಷಾತತ್ಪರನೂ ಆಗಿದ್ದನು.
ಯುವರಾಜನಾದ ಮೇಲೆ ಒಮ್ಮೆ ಜೀಮೂತವಾಹನನು ತಂದೆಯ ಬಳಿಗೆ ಹೋಗಿ ನಿವೇದಿಸಿಕೊಂಡನು – “ಅಪ್ಪಾ! ಈ ಕಲ್ಪವೃಕ್ಷವನ್ನು ನಾವು ಯಾರಿಗೋಸ್ಕರ ಕಾಪಾಡಿಕೊಂಡು ಬರಬೇಕು? ಈ ಹಿಂದೆ ಅದನ್ನು ತನ್ನದೆಂದು ಕಾಪಾಡಿಕೊಂಡು ಬಂದವರು ಯಾರೂ ಈಗ ಬದುಕಿಲ್ಲ. ಅದಕ್ಕೂ ಅವರಿಗೂ ಈಗ ಸಂಬಂಧವೇ ಇಲ್ಲ. ಅದ್ದರಿಂದ ನಾನು ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತೇನೆ. ಏಕೆಂದರೆ ಪರೋಪಕಾರದಂತಹ ಸತ್ಕಾರ್ಯ ಸ್ಥಿರವೇ ಹೊರತು ಐಶ್ವರ್ಯವಲ್ಲ..’’
ಜೀಮೂತಕೇತುವು ಮಗನ ಮಾತನ್ನು ಒಪ್ಪಿಕೊಂಡನು. ಜೀಮೂತವಾಹನನು ಕಲ್ಪವೃಕ್ಷದ ಬಳಿಗೆ ಹೋಗಿ – “ದೇವ! ನಮ್ಮ ಪೂರ್ವಿಕರ ಇಷ್ಟಾರ್ಥಗಳನ್ನೆಲ್ಲ ನೀನು ನೆರವೇರಿಸಿದ್ದೀಯೆ. ಈಗ ನನ್ನದೊಂದು ಇಷ್ಟಾರ್ಥವನ್ನು ನೆರವೇರಿಸು. ಈ ಲೋಕದಲ್ಲಿ ಬಡತನ ಇಲ್ಲದಂತೆ ಮಾಡು. ನಿನ್ನನ್ನು ಈ ಲೋಕಕ್ಕಾಗಿ ನಾನು ಬಿಟ್ಟುಕೊಟ್ಟಿದ್ದೇನೆ” ಎಂದು ಹೇಳಿ ಕೈ ಮುಗಿದನು. “ಹಾಗೇ ಆಗಲಿ” ಎಂದು ಹೇಳಿ ಕಲ್ಪವೃಕ್ಷವು ಅಲ್ಲಿಂದ ಮೇಲೆ ಹಾರಿ ಹೋಗಿ, ಆಕಾಶದಿಂದ ಚಿನ್ನದ ಮಳೆಯನ್ನು ಸುರಿಸಿತು. ಅದರಿಂದ ಲೋಕದ ಜನರೆಲ್ಲರ ಬಡತನವು ತೀರಿಹೋಯಿತು. ಮಾತ್ರವಲ್ಲ, ಜೀಮೂತವಾಹನನ ಕೀರ್ತಿಯು ಎಲ್ಲೆಡೆ ಪಸರಿಸಿತು.
ಆದರೆ ಇದನ್ನು ಕಂಡು ಅವನ ದಾಯಾದಿಗಳಿಗೆ ಹೊಟ್ಟೆಕಿಚ್ಚು ಹೆಚ್ಚಾಗಿ ಅವರು ಅವನ ರಾಜ್ಯವನ್ನು ಕಿತ್ತುಕೊಳ್ಳಬೇಕೆಂದು ಯುದ್ಧದ ಸಿದ್ಧತೆ ಮಾಡತೊಡಗಿದರು. ಅದನ್ನು ತಿಳಿದು ಜೀಮೂತವಾಹನನು ತಂದೆಯ ಬಳಿಗೆ ಹೋಗಿ – “ಅಪ್ಪಾ, ನೀನು ಆಯುಧ ಹಿಡಿದೆಯೆಂದರೆ ನಿನ್ನನ್ನು ಎದುರಿಸುವ ಶಕ್ತಿ ಯಾರಿಗಿದೆ? ಆದರೂ ನಶ್ವರವಾದ ಈ ಶರೀರಕ್ಕಾಗಿ ಬಂಧುಗಳನ್ನು ಕೊಂದು ರಾಜ್ಯವಾಳುವುದೇ? ಈ ರಾಜ್ಯದಿಂದ ನಮಗೆ ಆಗಬೇಕಾದ್ದೇನಿದೆ? ನಾವು ಎಲ್ಲಾದರೂ ದೂರ ಹೋಗಿ ಧರ್ಮವನ್ನು ಆಚರಿಸಿಕೊಂಡು ಇರೋಣ. ಈ ರಾಜ್ಯಲೋಭಿಗಳು ರಾಜ್ಯವನ್ನಾಳಿಕೊಂಡು ಸುಖವಾಗಿರಲಿ” ಎಂದನು.
ಜೀಮೂತಕೇತುವು – “ವತ್ಸ! ನಾನು ರಾಜ್ಯ ಬೇಕೆಂದು ಅಂದುಕೊಂಡಿದ್ದು ನಿನಗೋಸ್ಕರವಾಗಿ. ನೀನೇ ಹೀಗೆ ಹೇಳುವುದಾದರೆ ಮುದುಕನಾದ ನನಗೇನಂತೆ?’’ ಎಂದುಬಿಟ್ಟನು.
ಜೀಮೂತವಾಹನನು ಆಗಿಂದಾಗಲೇ ತಂದೆತಾಯಿಯರನ್ನು ಕರೆದುಕೊಂಡು, ಮಲಯಪರ್ವತಕ್ಕೆ ಬಂದು ಅಲ್ಲಿ ಆಶ್ರಮವನ್ನು ಕಟ್ಟಿಕೊಂಡು ಅವರ ಸೇವೆಯಲ್ಲಿ ನಿರತನಾಗಿ ಇದ್ದುಬಿಟ್ಟನು. ಅಲ್ಲಿ ಅವನಿಗೆ ಸಿದ್ಧರಾಜನಾದ ವಿಶ್ವಾವಸುವಿನ ಮಗನಾದ ಮಿತ್ರಾವಸುವಿನ ಸ್ನೇಹವಾಯಿತು. ಒಮ್ಮೆ ಮಿತ್ರಾವಸುವಿನ ತಂಗಿಯಾದ ಮಲಯವತಿಯು ಪೂಜೆಗೆಂದು ಗೌರಿ ದೇವಾಲಯಕ್ಕೆ ಬಂದಿದ್ದಳು. ಅದೇ ಸಮಯಕ್ಕೆ ಆಕಸ್ಮಿಕವಾಗಿ ಜೀಮೂತವಾಹನನೂ ಅಲ್ಲಿಗೆ ಬಂದಿದ್ದನು. ಪ್ರಥಮದರ್ಶನದಲ್ಲಿಯೇ ಅವರಿಬ್ಬರಿಗೂ ಪರಸ್ಪರ ಪ್ರೀತಿಯುಂಟಾಯಿತು. ಜೀಮೂತವಾಹನನು ಜಾತಿಸ್ಮರನಾಗಿದ್ದುದರಿಂದ ಹಿಂದಿನ ಜನ್ಮದಲ್ಲಿ ಅವಳೇ ತನ್ನ ಹೆಂಡತಿಯಾಗಿದ್ದಳೆಂಬುದನ್ನು ನೆನಪು ಮಾಡಿಕೊಂಡನು. ವಿಷಯವನ್ನು ತಿಳಿದ ವಿಶ್ವಾವಸುವು ಸಂತೋಷದಿಂದಲೇ ಮಗಳನ್ನು ಜೀಮೂತವಾಹನನಿಗೆ ಕೊಟ್ಟು ಮದುವೆ ಮಾಡಿದನು. ದಂಪತಿಗಳು ಸುಖವಾಗಿದ್ದರು.
ಹೀಗಿರಲು ಒಮ್ಮೆ ಜೀಮೂತವಾಹನನು ಗೆಳೆಯನಾದ ಮಿತ್ರಾವಸುವಿನೊಂದಿಗೆ ಸಮುದ್ರದ ತೀರದಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿ ಮೂಳೆಗಳ ರಾಶಿಯೊಂದನ್ನು ಕಂಡನು. “ಇವು ಯಾರ ಮೂಳೆಗಳು?’’ ಎಂದು ಅವನು ಕುತೂಹಲದಿಂದ ಕೇಳಿದನು. ಆಗ ಮಿತ್ರಾವಸುವು – “ಗೆಳೆಯಾ! ಇವು ನಾಗಗಳ ಮೂಳೆಗಳು. ನಾಗಗಳಿಗೂ ಗರುಡನಿಗೂ ಶತ್ರುತ್ವ ಇರುವುದು ನಿನಗೆ ತಿಳಿದೇ ಇದೆ. ಗರುಡನು ಪಾತಾಳಲೋಕಕ್ಕೆ ನುಗ್ಗಿ ಪ್ರತಿದಿನ ಅನೇಕ ನಾಗಗಳನ್ನು ಸಾಯಿಸುತ್ತಿದ್ದನು. ಆಗ ಅವುಗಳ ಒಡೆಯನಾದ ವಾಸುಕಿಯು ಪ್ರತಿದಿನ ತಾನೇ ಓರ್ವ ನಾಗನನ್ನು ಗರುಡನ ಆಹಾರಕ್ಕಾಗಿ ಕಳುಹಿಸುತ್ತೇನೆಂದೂ, ಗರುಡನು ಪಾತಾಳಕ್ಕೆ ಬಂದು ಉಳಿದವರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕೆಂದೂ ಅವನೊಂದಿಗೆ ಒಪ್ಪಂದ ಮಾಡಿಕೊಂಡನು. ಹೀಗೆ ದಿನಕ್ಕೊಬ್ಬನಂತೆ ಬಂದು ಪ್ರಾಣತೆತ್ತ ನಾಗಗಳ ಮೂಳೆಗಳ ರಾಶಿ ಇದು” ಎಂದು ತಿಳಿಸಿದನು.
ಅದನ್ನು ಕೇಳಿ ಜೀಮೂತವಾಹನನು ತುಂಬ ವ್ಯಥೆಪಟ್ಟನು. ವಾಸುಕಿಯು ನಾಗಗಳಿಗೆಲ್ಲ ರಾಜನಾಗಿದ್ದುಕೊಂಡು ತಾನೇ ಕೈಯಾರೆ ತನ್ನ ಪ್ರಜೆಗಳನ್ನು ಶತ್ರುವಾದ ಗರುಡನಿಗೆ ಹೀಗೆ ಒಪ್ಪಿಸುವುದೇ… ಛೇ… ವಾಸುಕಿಗೆ ಸಾವಿರ ಹೆಡೆಗಳಂತೆ. ಅವುಗಳಲ್ಲಿ ಒಂದು ಹೆಡೆಯಿಂದಲಾದರೂ ‘ಇದೋ, ಮೊದಲು ನನ್ನನ್ನು ಬಲಿ ತೆಗೆದುಕೋ’ ಎಂದು ಹೇಳಲು ಅವನಿಗೆ ಬಾಯಿ ಬರದೇ ಹೋಯ್ತ್ತೆ…?’ ಎಂದು ಅವನು ನೊಂದುಕೊಂಡನು. ಅಷ್ಟು ಹೊತ್ತಿಗೆ ಸೇವಕನೊಬ್ಬನು ಬಂದು ಮಿತ್ರಾವಸುವಿಗೆ “ನಿಮ್ಮನ್ನು ನಿಮ್ಮ ತಂದೆ ಕರೆಯುತ್ತಿದ್ದಾರೆ” ಎಂದನು. ಜೀಮೂತವಾಹನನು ಕೂಡಲೇ – “ಗೆಳೆಯಾ, ನೀನು ಹೋಗು, ನಾನು ಸ್ವಲ್ಪ ಹೊತ್ತು ಇಲ್ಲೇ ಇದ್ದು ಆಮೇಲೆ ಬರುತ್ತೇನೆ” ಎಂದು ಹೇಳಿದನು. ಹಾಗೇ ಆಗಲೆಂದು ಮಿತ್ರಾವಸು ಅಲ್ಲಿಂದ ಹೊರಟು ಹೋದನು.
ಜೀಮೂತವಾಹನನು ಅಲ್ಲೇ ಸುತ್ತಾಡುತ್ತಿದ್ದಾಗ ಹತ್ತಿರದಲ್ಲೇ ಎಲ್ಲೋ ಕರುಣಕ್ರಂದನ ಕೇಳಿಸಿತು. ಅವನು ಹತ್ತಿರ ಹೋಗಿ ನೋಡಿದಾಗ ಆಗ ತಾನೇ ರಾಜಭಟರು ಸುಂದರನಾದ ಒಬ್ಬ ಹುಡುಗನನ್ನು ಅಲ್ಲಿಗೆ ತಂದುಬಿಟ್ಟು ಹೋಗಿದ್ದರು. ವಿಚಾರಿಸಿದಾಗ ಅವನು ಅಂದು ಗರುಡನಿಗೆ ಬಲಿಯಾಗಬೇಕಿರುವ ನಾಗ ಎಂದು ತಿಳಿಯಿತು. ಅವನ ಜೊತೆಯಲ್ಲಿದ್ದಾಕೆ – “ಮಗನೇ ಶಂಖಚೂಡ! ನಿನ್ನನ್ನು ಬಿಟ್ಟು ನಾನು ಹೇಗೆ ಜೀವಿಸಲಿ? ನಿನ್ನನ್ನು ರಕ್ಷಿಸುವವರು ಯಾರೂ ಇಲ್ಲವಾಯ್ತೆ? ಸೂರ್ಯನ ಕಿರಣ ತಾಕಿದರೂ ವ್ಯಥೆಪಡುವ ನಿನ್ನ ಕೋಮಲ ಶರೀರ ಆ ದುಷ್ಟ ಗರುಡನು ತಿನ್ನುವಾಗ ಆಗುವ ನೋವನ್ನು ಹೇಗೆ ಸಹಿಸೀತು..?’’ ಎಂದು ಗೋಳಿಡುತ್ತಿದ್ದಳು.
ಜೀಮೂತವಾಹನನು ಆ ತಾಯಿಯನ್ನು ಸಾಂತ್ವನಪಡಿಸುತ್ತ್ತ – “ಅಮ್ಮಾ! ಹೆದರಬೇಡ. ನಿನ್ನ ಮಗನನ್ನು ನಾನು ರಕ್ಷಿಸುತ್ತೇನೆ” ಎಂದು ಹೇಳುತ್ತಾ ಹತ್ತಿರ ಹೋದನು. ಅವಳಾದರೋ ಅಪರಿಚಿತನಾದ ಅವನನ್ನು ಕಂಡು ಗರುಡನೇ ಬಂದನೆಂದು ಭ್ರಮಿಸಿ – “ಹೇ ಗರುಡ! ನನ್ನನ್ನು ತಿನ್ನು, ನನ್ನನ್ನು ತಿನ್ನು. ನನ್ನ ಮಗನನ್ನು ಬಿಟ್ಟುಬಿಡು” ಎಂದು ಹೇಳಿದಳು.
ಶಂಖಚೂಡನು – “ಅಮ್ಮಾ! ಚಂದ್ರನಂತೆ ಆಹ್ಲಾದಕರನಾದ ಈ ಮಹಾಪುರುಷನೆಲ್ಲಿ, ಭಯಂಕರನಾದ ಆ ಗರುಡನೆಲ್ಲಿ…!’’ ಎಂದನು. ಆಗ ಜೀಮೂತವಾಹನನು ತನ್ನ ಪರಿಚಯ ಹೇಳಿಕೊಂಡು – “ನಿನ್ನ ಮಗನನ್ನು ರಕ್ಷಿಸಲೆಂದೇ ನಾನು ಬಂದಿರುವೆ. ನಿನ್ನ ಮಗನ ಜೀವಕ್ಕೆ ಬದಲಾಗಿ ನಾನು ನನ್ನ ಜೀವವನ್ನು ಗರುಡನಿಗೆ ಅರ್ಪಿಸುತ್ತೇನೆ. ನೀನು ನಿಶ್ಚಿಂತೆಯಿಂದ ಮಗನನ್ನು ಕರೆದುಕೊಂಡು ಮನೆಗೆ ಹೋಗು” ಎಂದನು. ಆದರೆ ಅವಳಾಗಲಿ, ಸ್ವತಃ ಶಂಖಚೂಡನೇ ಆಗಲಿ, ಅವನ ಪ್ರಸ್ತಾವವನ್ನು ಒಪ್ಪಲೇ ಇಲ್ಲ. “ನನ್ನ ಮಗನಿಗಿಂತ ವಿದ್ಯಾಧರ ಅಧಿಪತಿಯಾದ ನೀನು ಹೆಚ್ಚು” ಎಂದು ಆ ತಾಯಿ ಹೇಳಿದಳು. ಶಂಖಚೂಡನು “ರತ್ನವನ್ನು ಕೊಟ್ಟು ಕಲ್ಲನ್ನು ಉಳಿಸಿಕೊಳ್ಳುವ ಮೂರ್ಖತೆಯನ್ನು ಯಾರೂ ಮಾಡಲಾರರು. ನಿನ್ನಂತಹ ಮಹಾತ್ಮರು ಎಲ್ಲೋ ಕೆಲವರಿರುತ್ತಾರೆ. ನಿನ್ನನ್ನು ಬಲಿಕೊಟ್ಟು ನನ್ನ ಪ್ರಾಣವನ್ನು ಉಳಿಸಿಕೊಂಡು ನಾನು ನನ್ನ ಕುಲಕ್ಕೆ ಕಲಂಕವನ್ನು ತರಲಾರೆ. ನೀನು ಹೊರಟುಬಿಡು. ಇನ್ನೇನು ಗರುಡನು ಬಂದೇಬಿಡುತ್ತಾನೆ. ಎದುರಿಗೆ ವಧ್ಯಶಿಲೆ ಕಾಣಿಸುತ್ತಿದೆಯಲ್ಲವೇ? ಇಲ್ಲಿರುವುದು ಕ್ಷೇಮಕರವಲ್ಲ. ನಾನು ಗರುಡನು ಬರುವುದರೊಳಗಾಗಿ ಗೋಕರ್ಣೇಶ್ವರನ ದರ್ಶನ ಮಾಡಿಕೊಂಡು ಬಂದು ಆ ವಧ್ಯಶಿಲೆಯನ್ನು ಏರಿಬಿಡುತ್ತೇನೆ’’ – ಹೀಗೆಂದು ಹೇಳಿ ತಾಯಿಗೆ ನಮಸ್ಕಾರ ಮಾಡಿ ಲಗುಬಗೆಯಿಂದ ಅಲ್ಲಿಂದ ಹೋದನು.
ಈಗ ಪರೋಪಕಾರ ಮಾಡಲು ತನಗೊಂದು ಒಳ್ಳೆಯ ಅವಕಾಶ ದೊರಕಿತು ಎಂದು ಭಾವಿಸಿ ಹಿಗ್ಗಿದ ಜೀಮೂತವಾಹನನು ಕೊಡಲೇ ವಧ್ಯಶಿಲೆಯನ್ನೇರಿ ಮಲಗಿಬಿಟ್ಟನು. ಆಗಲೇ ಗಗನವನ್ನು ನಡುಗಿಸುವಂತೆ ಶಬ್ದ ಮಾಡುತ್ತ್ತ ಆ ಶಿಲೆಯ ಮೇಲೆ ಬಂದೆರಗಿದ ಗರುಡನು ಅಲ್ಲಿ ಮಲಗಿದ್ದಾತನನ್ನು ತನ್ನ ಕೊಕ್ಕಿನಿಂದ ಎತ್ತಿಕೊಂಡು ಮಲಯಪರ್ವತಕ್ಕೆ ಹೋದನು. ಅಲ್ಲಿ ದೊಡ್ಡ ಕಲ್ಲೊಂದರ ಮೇಲೆ ಅವನನ್ನು ಹಾಕಿ ಕೊಕ್ಕಿನಿಂದ ಕುಕ್ಕಿಕುಕ್ಕಿ ತಿನ್ನಲಾರಂಭಿಸಿದನು. ಜೀಮೂತವಾಹನನಾದರೋ “ಪ್ರತಿ ಜನ್ಮದಲ್ಲಿಯೂ ಹೀಗೆ ಪರೋಪಕಾರಕ್ಕಾಗಿಯೇ ನನ್ನ ಜೀವನವಿರಲಿ. ಸ್ವರ್ಗ-ಮೋಕ್ಷಗಳು ನನಗೆ ಬೇಕಾಗಿಲ್ಲ” ಎಂದು ಹೇಳಿಕೊಂಡು ಆನಂದದಿಂದಲೇ ಇದ್ದನು.
ತಾನು ಕುಕ್ಕಿ ತಿನ್ನುತ್ತಿರುವ ವ್ಯಕ್ತಿಯು ಒಂದಿಷ್ಟೂ ಹೆದರದೆ, ಕಿರುಚಿಕೊಳ್ಳದೆ ಆನಂದದಿಂದ ಇರುವುದನ್ನು ಕಂಡು ಗರುಡನು ಆಶ್ಚರ್ಯಪಟ್ಟು – “ನೀನು ಖಂಡಿತವಾಗಿಯೂ ನಾಗನಲ್ಲ. ಯಾರೋ ಮಹಾತ್ಮನಿರಬೇಕು. ಯಾರಯ್ಯ ನೀನು..?’’ ಎಂದು ಕೇಳಿದನು.
ಇತ್ತಲಾಗಿ ಅವನು ಜೀಮೂತವಾಹನನನ್ನು ಎತ್ತಿಕೊಂಡು ಹೋಗುತ್ತಿರುವಾಗ ಅವನ ತಲೆಯ ಮೇಲಿದ್ದ ರತ್ನವು ರಕ್ತದಿಂದ ತೋಯ್ದು ಮಲಯವತಿಯ ಹತ್ತಿರ ಬಿದ್ದಿತ್ತು. ಅವಳು ಗಾಬರಿಯಾಗಿ ಅದನ್ನು ಅತ್ತೆ-ಮಾವಂದಿರಿಗೆ ತೋರಿಸಿದಳು. ಜೀಮೂತಕೇತು ಧ್ಯಾನದೃಷ್ಟಿದಿಂದ ನಡೆದಿದ್ದೆಲ್ಲವನ್ನು ತಿಳಿದುಕೊಂಡು ಹೆಂಡತಿ ಮತ್ತು ಸೊಸೆಯೊಂದಿಗೆ ಜೀಮೂತವಾಹನನಿದ್ದಲ್ಲಿಗೆ ಧಾವಿಸಿಬಂದನು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಶಂಖಚೂಡನು – “ಗರುಡದೇವ! ಇದೇನಯ್ಯ.. ವಿದ್ಯಾಧರರಾಜನನ್ನು ತಿನ್ನುತ್ತಿದ್ದೀಯಲ್ಲ..! ನೀನು ತಿನ್ನಬೇಕಾದ ನಾಗ ನಾನು, ಅವನಲ್ಲ..’’ ಎಂದು ಕೂಗಿಕೊಂಡನು. ಜೀಮೂತವಾಹನನ ಪ್ರಾಣ ಆಗಲೇ ಹೊರಟುಹೋಯಿತು. ಗರುಡನು ಗಾಬರಿಯಾಗಿ “ಅಯ್ಯೋ… ನಾನು ಗೊತ್ತಿಲ್ಲದೆ ವಿದ್ಯಾಧರರಾಜನನ್ನು ಕೊಂದುಬಿಟ್ಟೆನಲ್ಲ..’’ ಎಂದು ವ್ಯಥೆಪಟ್ಟನು.
ಮಲಯವತಿಯು ಆಕಾಶದ ಕಡೆಗೆ ನೋಡುತ್ತ ಗೌರಿ ದೇವಿಯನ್ನು ನೆನೆದು – “ಅಮ್ಮಾ! ಮುಂದೆ ವಿದ್ಯಾಧರರಿಗೆ ಚಕ್ರವರ್ತಿಯಾಗಲಿರುವವನು ನಿನ್ನ ಪತಿಯಾಗುತ್ತಾನೆ ಎಂದು ನನಗೆ ವರ ಕೊಟ್ಟಿದ್ದೆ! ನಿನ್ನ ಮಾತು ಸುಳ್ಳಾಯಿತು. ಇದು ಸರಿಯೆ..? ನನ್ನ ಗಂಡನನ್ನು ಬದುಕಿಸು” ಎಂದು ಆರ್ತಳಾಗಿ ಪ್ರಾರ್ಥಿಸಿ ಕೊಂಡಳು. ಗೌರಿಯು ಪ್ರತ್ಯಕ್ಷಳಾಗಿ ಕಲಶೋದಕವನ್ನು ಚಿಮುಕಿಸಿದಾಗ ಜೀಮೂತವಾಹನನಿಗೆ ಜೀವ ಬಂತು. ಗರುಡನು – “ಅಯ್ಯಾ, ನಿನ್ನ ಪರೋಪಕಾರವನ್ನೂ, ಉದಾರತೆಯನ್ನೂ ಮೆಚ್ಚಿದೆ. ನಿನಗೇನು ವರ ಬೇಕು, ಬೇಡಿಕೋ. ಕೊಡುತ್ತೇನೆ” ಎಂದನು.
ಜೀಮೂತವಾಹನನು – “ಹಾಗಿದ್ದರೆ ನೀನು ಇನ್ನುಮೇಲೆ ನಾಗರನ್ನು ತಿನ್ನಬೇಡ. ಮತ್ತು ನೀನು ಈ ಹಿಂದೆ ತಿಂದಿರುವ ನಾಗರೆಲ್ಲರೂ ಮತ್ತೆ ಜೀವಿಸುವಂತಾಗಲಿ” ಎಂದು ವರವನ್ನು ಬೇಡಿಕೊಂಡನು. ಗರುಡನು “ತಥಾಸ್ತು” ಎಂದನು. ವಿದ್ಯಾಧರರೆಲ್ಲರೂ ಅಲ್ಲಿಗೇ ಬಂದು ಜೀಮೂತವಾಹನನನ್ನು ಹಿಮಾಲಯಕ್ಕೆ ಕರೆದುಕೊಂಡು ಹೋದರು. ಮುಂದೆ ಜೀಮೂತವಾಹನನು ವಿದ್ಯಾಧರಚಕ್ರವರ್ತಿಯಾಗಿ ಮಲಯವತಿಯೊಡನೆ ಬಹುಕಾಲ ಸುಖವಾಗಿದ್ದನು.
ಹೀಗೆ ಕಥೆಯನ್ನು ಹೇಳಿ ಮುಗಿಸಿ ಬೇತಾಳನು – “ರಾಜನ್! ಜೀಮೂತವಾಹನ ಮತ್ತು ಶಂಖಚೂಡ ಇವರಿಬ್ಬರಲ್ಲಿ ಯಾರ ಸತ್ತ್ವ ಹೆಚ್ಚಿನದು? ಈ ಪ್ರಶ್ನೆಗೆ ಉತ್ತರವನ್ನು ತಿಳಿದಿದ್ದೂ ಹೇಳದಿದ್ದರೆ ನಿನ್ನ ತಲೆ ಒಡೆದು ಚೂರಾಗುವುದೆಂಬದನ್ನು ಮರೆಯಬೇಡ” ಎಂದನು.
ತ್ರಿವಿಕ್ರಮಸೇನನು – “ಶಂಖಚೂಡನ ಸತ್ತ್ವವೇ ಹೆಚ್ಚಿನದು. ಜೀಮೂತವಾಹನನೂ ಸತ್ತ್ವವಂತನೆಂಬುದು ನಿಜವಾದರೂ ಬೋಧಿಸತ್ತ್ವನ ಅಂಶದಿಂದ ಜನಿಸಿದ್ದ ಅವನಲ್ಲಿ ಸತ್ತ್ವಗುಣ ಹಿಂದಿನ ಜನ್ಮಗಳಿಂದಲೇ ಬಂದಿದ್ದು. ಶಂಖಚೂಡ ಹಾಗಲ್ಲ. ಹಾಗಿದ್ದೂ ಅವನು ತಾನು ಸಾವಿನಿಂದ ಪಾರಾಗಿದ್ದೇನೆ ಎಂದು ತಿಳಿದ ಮೇಲೂ ಗರುಡನನ್ನು ಹುಡುಕಿಕೊಂಡು ಹೋಗಿ “ನನ್ನನ್ನು ತಿನ್ನು” ಎಂದು ಬೇಡಿಕೊಂಡನಲ್ಲವೇ…? ಹಾಗಾಗಿ ಅವನ ಸತ್ತ್ವವೇ ಹೆಚ್ಚಿನದು..’’ ಎಂದು ಉತ್ತರಿಸಿದನು.
ಅವನು ಮಾತನಾಡಿದ್ದರಿಂದ ಬೇತಾಳನು ಆ ಕೂಡಲೇ ಅವನ ಹೆಗಲಿನಿಂದ ಮಾಯವಾಗಿ ಮತ್ತೆ ಅದೇ ಜಾಗಕ್ಕೆ ಹೋಗಿ ಸೇರಿಕೊಂಡನು.