ಹರಿಸ್ವಾಮಿಯು ಪಾತ್ರೆಯನ್ನು ಎತ್ತಿಕೊಂಡು ಹತ್ತಿರದಲ್ಲಿದ್ದ ಕೊಳದ ಬಳಿಗೆ ಬಂದನು. ಅಲ್ಲಿದ್ದ ಆಲದಮರದ ಕೆಳಗೆ ಪಾತ್ರೆಯನ್ನಿಟ್ಟು ಕೈಕಾಲು ತೊಳೆದುಕೊಳ್ಳಲು ಕೊಳಕ್ಕೆ ಇಳಿದನು. ಅಷ್ಟುಹೊತ್ತಿಗೆ ಒಂದು ಹದ್ದು ಎಲ್ಲಿಂದಲೋ ಕೃಷ್ಣಸರ್ಪವೊಂದನ್ನು ತನ್ನ ಕೊಕ್ಕು ಮತ್ತು ಕಾಲುಗಳಿಂದ ಹಿಡಿದುಕೊಂಡು ಬಂದು ಅದೇ ಆಲದಮರದ ಮೇಲೆ ಕುಳಿತುಕೊಂಡಿತು. ಪ್ರಾಣಸಂಕಟದಲ್ಲಿದ್ದ ಹಾವಿನ ಬಾಯಿಂದ ವಿಷದ ಜೊಲ್ಲು ಸುರಿದು ಮರದ ಮೇಲಿಂದ ನೇರವಾಗಿ ಆ ಪರಮಾನ್ನದೊಳಗೆ ಬಿತ್ತು.
ತ್ರಿವಿಕ್ರಮಸೇನನು ಆರಂಭಿಸಿದ ಕೆಲಸವನ್ನು ಹೇಗಾದರೂ ಕೊನೆ ಮುಟ್ಟಿಸಲೇಬೇಕು ಎಂಬ ಛಲದಿಂದ ಹದಿಮೂರನೆಯ ಸಲ ಹೆಣವನ್ನು ಹೆಗಲ ಮೇಲೆ ಹಾಕಿಕೊಂಡು ಶ್ಮಶಾನದ ಕಡೆಗೆ ಹೊರಟನು. ಆಗ ಹೆಣದಲ್ಲಿದ್ದ ಬೇತಾಳನು – ‘’ರಾಜನ್, ನಿನ್ನ ಮಾರ್ಗಾಯಾಸ ಪರಿಹಾರಕ್ಕೆಂದು ನಾನು ಈ ಬಾರಿ ಸಣ್ಣಕಥೆಯೊಂದನ್ನು ಹೇಳುವೆನು” ಎಂದು ಹೇಳಿ ಈ ಕಥೆಯನ್ನು ಹೇಳಲಾರಂಭಿಸಿದನು.
ಹಿಂದೆ ವಾರಾಣಸಿಯಲ್ಲಿ ದೇವಸ್ವಾಮಿ ಎಂಬ ಧನಿಕನಾದ ಬ್ರಾಹ್ಮಣನಿದ್ದನು. ಅವನ ಮಗನು ಹರಿಸ್ವಾಮಿ. ಅವನು ಪ್ರಾಪ್ತವಯಸ್ಕನಾದಾಗ ಲಾವಣ್ಯವತಿಯೆಂಬ ಕನ್ಯೆಯೊಂದಿಗೆ ಅವನ ವಿವಾಹವಾಯಿತು. ಲಾವಣ್ಯವತಿಯು ಹೆಸರಿಗೆ ತಕ್ಕಂತೆ ಅನುಪಮ ಸುಂದರಿಯಾಗಿದ್ದಳು. ಒಮ್ಮೆ ಬೆಳದಿಂಗಳ ರಾತ್ರಿಯಂದು ಹರಿಸ್ವಾಮಿಯು ಹೆಂಡತಿಯೊಂದಿಗೆ ಮಹಡಿಯ ಮಚ್ಚಿನ ಮೇಲೆ ಮಲಗಿ ನಿದ್ದೆ ಮಾಡಿದ್ದನು. ಅದೇ ಹೊತ್ತಿಗೆ ಮದನವೇಗನೆಂಬ ವಿದ್ಯಾಧರ ಕುಮಾರನು ಆಕಾಶಮಾರ್ಗದಲ್ಲಿ ಹೋಗುತ್ತಿದ್ದವನು ಲಾವಣ್ಯವತಿಯನ್ನು ಕಂಡನು. ಅವಳ ರೂಪವನ್ನು ಕಂಡು ಮರುಳಾಗಿ ಅವನು ಆ ಕ್ಷಣವೇ ಅವಳನ್ನು ಹೊತ್ತುಕೊಂಡು ಆಕಾಶಮಾರ್ಗದಿಂದ ಹೋಗಿಬಿಟ್ಟನು.
ಸ್ವಲ್ಪ ಹೊತ್ತಾದ ಮೇಲೆ ಹರಿಸ್ವಾಮಿಯು ನಿದ್ದೆ ತಿಳಿದೆದ್ದು ನೋಡುತ್ತಾನೆ, ಪಕ್ಕದಲ್ಲಿ ಮಲಗಿದ್ದ ಹೆಂಡತಿ ಇರಲಿಲ್ಲ. ಎಲ್ಲ ಕಡೆ ಎಷ್ಟು ಹುಡುಕಿದರೂ ಅವಳು ಸಿಗಲೇ ಇಲ್ಲ. ಹುಡುಕಿ, ಹುಡುಕಿ ನಿರಾಶನಾಗಿ ಕೊನೆಗೆ ಅವನು ಬಂಧುಗಳ ಮಾತಿನಿಂದ ಹೇಗೋ ಧೈರ್ಯವನ್ನು ತಂದುಕೊಂಡು ತೀರ್ಥಯಾತ್ರೆಗೆಂದು ಹೊರಟನು. ತೀರ್ಥಯಾತ್ರೆಯಿಂದ ಪಾಪಗಳೆಲ್ಲ ಕಳೆದುಹೋದರೆ ಆಮೇಲೆ ಅವಳು ಸಿಗಬಹುದು ಎಂದು ಅವನ ನಂಬಿಕೆಯಾಗಿತ್ತು.
ಹೀಗೆ ತೀರ್ಥಯಾತ್ರೆ ಮಾಡುತ್ತ ಅವನು ಒಮ್ಮೆ ಹಸಿವೆಯಿಂದ ಬಳಲಿ ಪದ್ಮನಾಭನೆಂಬ ಬ್ರಾಹ್ಮಣನ ಮನೆಯ ಬಾಗಿಲಿಗೆ ಬಂದನು. ಆಗ ಮನೆಯೊಳಗೆ ಅನೇಕ ಮಂದಿ ಬ್ರಾಹ್ಮಣರು ಊಟ ಮಾಡುತ್ತಿದ್ದರು. ಬಾಗಿಲಿಗೆ ಬಂದು ನಿಂತಿದ್ದ ಇವನನ್ನು ಕಂಡು ಆ ಮನೆಯೊಡತಿ ‘ಅಯ್ಯೋ, ಈ ಹಸಿವೆಯೆಂಬುದು ಎಷ್ಟು ಕೆಟ್ಟದ್ದು, ಯಾರನ್ನಾದರೂ ಕುಗ್ಗಿಸಿ ಬಿಡುತ್ತದೆ..’ ಎಂದು ಅಂದುಕೊಂಡು, ಕರುಣೆಯಿಂದ ಅವನಿಗೆ ಒಂದು ಪಾತ್ರೆಯ ತುಂಬ ತುಪ್ಪ ಮತ್ತು ಸಕ್ಕರೆ ಹಾಕಿದ್ದ ಪರಮಾನ್ನವನ್ನು ತಂದುಕೊಟ್ಟಳು. ‘’ಎಲ್ಲಾದರೂ ಕೊಳದ ಬಳಿ ಹೋಗಿ ಇದನ್ನು ತಿನ್ನು. ನಮ್ಮ ಮನೆಯಲ್ಲಿ ಬ್ರಾಹ್ಮಣರೆಲ್ಲ ಊಟ ಮಾಡುತ್ತಿದ್ದು, ಸ್ಥಳವೇ ಇಲ್ಲವಾಗಿದೆ” ಎಂದು ಹೇಳಿದಳು.
ಹರಿಸ್ವಾಮಿಯು ಪಾತ್ರೆಯನ್ನು ಎತ್ತಿಕೊಂಡು ಹತ್ತಿರದಲ್ಲಿದ್ದ ಕೊಳದ ಬಳಿಗೆ ಬಂದನು. ಅಲ್ಲಿದ್ದ ಆಲದ ಮರದ ಕೆಳಗೆ ಪಾತ್ರೆಯನ್ನಿಟ್ಟು ಕೈಕಾಲು ತೊಳೆದುಕೊಳ್ಳಲು ಕೊಳಕ್ಕೆ ಇಳಿದನು. ಅಷ್ಟುಹೊತ್ತಿಗೆ ಒಂದು ಹದ್ದು ಎಲ್ಲಿಂದಲೋ ಕೃಷ್ಣಸರ್ಪವೊಂದನ್ನು ತನ್ನ ಕೊಕ್ಕು ಮತ್ತು ಕಾಲುಗಳಿಂದ ಹಿಡಿದುಕೊಂಡು ಬಂದು ಅದೇ ಆಲದಮರದ ಮೇಲೆ ಕುಳಿತುಕೊಂಡಿತು. ಪ್ರಾಣಸಂಕಟದಲ್ಲಿದ್ದ ಹಾವಿನ ಬಾಯಿಂದ ವಿಷದ ಜೊಲ್ಲು ಸುರಿದು ಮರದ ಮೇಲಿಂದ ನೇರವಾಗಿ ಆ ಪರಮಾನ್ನದೊಳಗೆ ಬಿತ್ತು.
ಕೈಕಾಲು ತೊಳೆದುಕೊಂಡು ಬಂದ ಹರಿಸ್ವಾಮಿಯು ಇದರ ಅರಿವೇ ಇಲ್ಲದೆ, ಪರಮಾನ್ನವನ್ನು ಉಂಡನು. ಉಣ್ಣುತ್ತಿದ್ದಂತೆಯೇ ಅವನಿಗೆ ವಿಷದ ವೇದನೆಯಾಯಿತು. ‘ಅರೇ ಇದೇನಿದು, ತುಪ್ಪ ಸಕ್ಕರೆ ಸೇರಿಸಿದ ಪರಮಾನ್ನ ವಿಷವಾಗಿದ್ದು ಹೇಗೆ?’ ಎಂದು ಯೋಚಿಸುತ್ತಾ ಅವನು ಹೇಗೋ ಪದ್ಮನಾಭನ ಮನೆಯವರೆಗೆ ಬಂದು ಮನೆಯೊಡತಿಯನ್ನು ಕುರಿತು – ‘’ಅಮ್ಮಾ, ನೀವು ನೀಡಿದ ವಿಷಮಿಶ್ರಿತವಾದ ಪರಮಾನ್ನವನ್ನು ಸೇವಿಸಿದ ನನ್ನ ಪ್ರಾಣ ಹೋಗುತ್ತಿದೆ. ಬೇಗನೆ ವಿಷವೈದ್ಯರನ್ನು ಕರೆಸಿ. ಇಲ್ಲವಾದರೆ ನಿಮಗೆ ಬ್ರಹ್ಮಹತ್ಯಾದೋಷ ಬರುತ್ತದೆ” ಎಂದು ಹೇಳುತ್ತಿದ್ದಂತೆಯೇ ಅಲ್ಲಿಯೇ ಕಣ್ಣು ಹೊರಳಿಸುತ್ತಾ ಬಿದ್ದು ಪ್ರಾಣಬಿಟ್ಟನು.
ಅದನ್ನು ಕಂಡು ಪದ್ಮನಾಭನು ಹೆಂಡತಿಗೆ – ‘’ದುಷ್ಟೇ, ಇದೇನು ಮಾಡಿಬಿಟ್ಟೆ. ಮನೆಗೆ ಬಂದ ಅತಿಥಿಗೆ ವಿಷ ಹಾಕಿ ಸಾಯಿಸಿದೆಯಲ್ಲ..’’ ಎಂದು ಹೇಳಿ ಅವಳನ್ನು ಮನೆಯಿಂದ ಹೊರಹಾಕಿದನು. ಅವಳು ವಿಷಾದದಿಂದ ‘ಒಳ್ಳೆಯ ಕೆಲಸ ಮಾಡಿದರೂ ಹೀಗೆ ಅಪವಾದ ಕೇಳಬೇಕಾಗಿ ಬಂತಲ್ಲ…’ ಎಂದು ದುಃಖಿಸುತ್ತಾ ಯಾವುದೋ ಒಂದು ತೀರ್ಥಕ್ಷೇತ್ರಕ್ಕೆ ಹೋಗಿ ಅಲ್ಲೇ ಇದ್ದುಬಿಟ್ಟಳು.
ಹೀಗೆ ಕಥೆಯನ್ನು ಮುಗಿಸಿ ಬೇತಾಳನು – ‘’ಮಹಾರಾಜ ! ಆ ಬ್ರಾಹ್ಮಣನನ್ನು ಕೊಂದ ದೋಷ ಯಾರಿಗೆ ತಟ್ಟಬೇಕು? ಪರಮಾನ್ನವನ್ನು ಕೊಟ್ಟ ಗೃಹಿಣಿಗೋ..? ಪರಮಾನ್ನದ ಮೇಲೆ ವಿಷವನ್ನು ಕಕ್ಕಿದ ಹಾವಿಗೋ? ಹಾವು ವಿಷವನ್ನು ಕಕ್ಕುವಂತೆ ಮಾಡಿದ ಆ ಹದ್ದಿಗೋ..? ಈ ವಿಷಯದಲ್ಲಿ ನಿರ್ಣಯ ಮಾಡಲು ರಾಜನಿಗೂ ಸಾಧ್ಯವಾಗಲಿಲ್ಲ. ನಿನಗೆ ಗೊತ್ತಿದ್ದರೆ ಹೇಳು. ಇಲ್ಲದಿದ್ದರೆ ನಿನ್ನ ತಲೆ ಸಿಡಿದುಹೋಗುತ್ತದೆ” ಎಂದು ಹೇಳಿದನು.
ತ್ರಿವಿಕ್ರಮನು – ‘’ಇದರಲ್ಲಿ ದೋಷ ಯಾರದ್ದೆಂದು ಹೇಳೋಣ! ಹಾವಿನದ್ದೆಂದು ಹೇಳೋಣವೇ? ಪಾಪ, ಅದೇನು ಮಾಡೀತು.., ಶತ್ರುವಾದ ಹದ್ದಿನ ಬಾಯಿಗೆ ಸಿಕ್ಕಿ ವಿಲವಿಲ ಒದ್ದಾಡಿದಾಗ ಸಹಜವಾಗಿ ಅದರ ಬಾಯಿಂದ ವಿಷ ಹೊರಗೆ ಬಂದಿದೆ. ಅದರದ್ದೇನೂ ತಪ್ಪ್ಪಿಲ್ಲ. ಇನ್ನು ಹದ್ದಿನ ದೋಷವೆನ್ನೋಣವೇ? ಅದರದ್ದೇನು ತಪ್ಪು? ಅದಕ್ಕೆ ಹಸಿವಾಗಿತ್ತು. ಅದರ ಆಹಾರವೇ ಆಗಿದ್ದ ಹಾವು ಸಿಕ್ಕಿತೆಂದು ಅದು ಸಂತೋಷದಿಂದ ತಿನ್ನುತ್ತಲಿತ್ತು. ಅದರದ್ದೂ ಏನೂ ತಪ್ಪಿಲ್ಲ. ಇನ್ನು ಅವನಿಗೆ ಪರಮಾನ್ನವನ್ನು ನೀಡಿದ ದಂಪತಿಗಳದ್ದು ತಪ್ಪು ಎನ್ನೋಣವೇ? ಅದೂ ಸರಿಯಲ್ಲ. ಏಕೆಂದರೆ ಮನೆಯ ಬಾಗಿಲಿಗೆ ಬಂದಿದ್ದ ಹಸಿದ ಅತಿಥಿಗೆ ಅವರು ಧರ್ಮಬುದ್ಧಿಯಿಂದಲೇ ಅನ್ನದಾನ ಮಾಡಿದ್ದಾರೆ. ಹಾಗಾಗಿ ಅವರದ್ದೂ ಏನೂ ತಪ್ಪಿಲ್ಲ. ಹೀಗಿರುವಾಗ ಆ ಬ್ರಹ್ಮಹತ್ಯಾದೋಷ ಯಾರಿಗಾದರೂ ಬರಬೇಕೆಂದಿದ್ದರೆ, ವಿಷಯವನ್ನು ಸರಿಯಾಗಿ ತಿಳಿಯದೆ, ವಿಮರ್ಶೆ ಮಾಡದೆ ಹಾವು, ಹದ್ದು ಮತ್ತು ಆ ದಂಪತಿಗಳು – ಇವರಲ್ಲಿ ಯಾರ ಮೇಲಾದರೂ ಆ ತಪ್ಪನ್ನು ಯಾರು ಹೊರೆಸುತ್ತಾರೋ ಅವರಿಗೆ ಬರಬೇಕು, ಅಷ್ಟೆಯೇ” ಎಂದನು.
ಹೀಗೆ ರಾಜನಿಗೆ ಮೌನಭಂಗವಾಗಿದ್ದರಿಂದ ಬೇತಾಳನು ಅವನ ಹೆಗಲಿನಿಂದ ಮಾಯವಾಗಿ ಮತ್ತೆ ಮೊದಲಿನ ಸ್ಥಳಕ್ಕೇ ಹೋಗಿಬಿಟ್ಟನು.