ಮದಿಸಿದ ಆನೆಯೊಂದು ಬಂಧನದಿಂದ ಕಿತ್ತುಕೊಂಡು, ಮಾವಟಿಗನ ಅಂಕೆಗೂ ಸಿಗದೆ, ಅವನನ್ನೇ ಕೆಳಗೆ ಬೀಳಿಸಿ, ಕಂಡ ಕಂಡ ಮರಗಳನ್ನೆಲ್ಲ ಬೀಳಿಸುತ್ತ ಮಂದೆ ಬರುತ್ತಿತ್ತು. ಆನೆಯನ್ನು ಕಂಡು ಪರಿಜನರೆಲ್ಲರೂ ಹೆದರಿ, ರಾಜಕುಮಾರಿಯನ್ನು ಅಲ್ಲಿಯೇ ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ರಾಜಕುಮಾರಿಯು ನಡುಗುತ್ತ ನಿಂತಿದ್ದಾಗ ಮನಃಸ್ವಾಮಿಯು ಧೈರ್ಯದಿಂದ ಹತ್ತಿರ ಬಂದು ಅವಳನ್ನು ಎತ್ತಿಕೊಂಡು, ಆನೆಯ ದೃಷ್ಟಿಯಿಂದ ಮರೆಮಾಡಿ ಸುರಕ್ಷಿತವಾದ ಜಾಗಕ್ಕೆ ಒಯ್ದನು.
ತ್ರಿವಿಕ್ರಮಸೇನನು ಹದಿನೈದನೆಯ ಸಾರಿ ಹೆಣವನ್ನು ಮರದಿಂದ ಕೆಳಗಿಳಿಸಿ, ಹೆಗಲ ಮೇಲೆ ಹಾಕಿಕೊಂಡು ಶ್ಮಶಾನಾಭಿಮುಖವಾಗಿ ಹೊರಟನು. ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು.
ನೇಪಾಳ ದೇಶದಲ್ಲಿ ಶಿವಪುರವೆಂಬ ನಗರವಿದೆ. ಹಿಂದೆ ಅಲ್ಲಿ ಯಶಃಕೇತುವೆಂಬ ರಾಜನಿದ್ದನು. ಅವನು ಹೆಸರಿಗೆ ತಕ್ಕಂತೆ ಕೀರ್ತಿವಂತನಾಗಿದ್ದನು. ಅವನಿಗೆ ಶಶಿಪ್ರಭೆಯೆಂಬ ಮಗಳಿದ್ದಳು.
ಒಮ್ಮೆ ವಸಂತಮಾಸದಲ್ಲಿ ಶಶಿಪ್ರಭೆಯು ಜಾತ್ರೆಯ ಉತ್ಸವವನ್ನು ನೋಡುವುದಕ್ಕೆಂದು ಹೋಗಿದ್ದಳು. ಅಲ್ಲಿಗೆ ಬಂದಿದ್ದ ಮನಃಸ್ವಾಮಿಯೆಂಬ ಸುಂದರನಾದ ಯುವಕನೊಬ್ಬನನ್ನು ಅವಳು ಕಂಡಳು. ಅವನೂ ಇವಳನ್ನು ಕಂಡನು. ಇಬ್ಬರಿಗೂ ಪರಸ್ಪರ ಮೋಹ ಉಂಟಾಯಿತು. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡುತ್ತ್ತ ಹಾಗೆಯೆ ನಿಂತುಬಿಟ್ಟರು.
ಆಗ ಇದ್ದಕ್ಕಿದ್ದಂತೆ ಹತ್ತಿರದಲ್ಲೇ ಜನರ ಹಾಹಾಕಾರ ಕೇಳಿಸಿತು. ಏನಾಯ್ತ್ತೆಂದು ಇವರು ಗಾಬರಿಯಿಂದ ನೋಡಿದರು. ಮದಿಸಿದ ಆನೆಯೊಂದು ಬಂಧನದಿಂದ ಕಿತ್ತುಕೊಂಡು, ಮಾವಟಿಗನ ಅಂಕೆಗೂ ಸಿಗದೆ, ಅವನನ್ನೇ ಕೆಳಗೆ ಬೀಳಿಸಿ, ಕಂಡ ಕಂಡ ಮರಗಳನ್ನೆಲ್ಲ ಬೀಳಿಸುತ್ತ ಮಂದೆ ಬರುತ್ತಿತ್ತು. ಆನೆಯನ್ನು ಕಂಡು ಪರಿಜನರೆಲ್ಲರೂ ಹೆದರಿ, ರಾಜಕುಮಾರಿಯನ್ನು ಅಲ್ಲಿಯೇ ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ರಾಜಕುಮಾರಿಯು ನಡುಗುತ್ತ ನಿಂತಿದ್ದಾಗ ಮನಃಸ್ವಾಮಿಯು ಧೈರ್ಯದಿಂದ ಹತ್ತಿರ ಬಂದು ಅವಳನ್ನು ಎತ್ತಿಕೊಂಡು, ಆನೆಯ ದೃಷ್ಟಿಯಿಂದ ಮರೆಮಾಡಿ ಸುರಕ್ಷಿತವಾದ ಜಾಗಕ್ಕೆ ಒಯ್ದನು. ಆನೆ ಘೀಳಿಡುತ್ತಾ ಅಲ್ಲಿಂದ ಹೊರಟುಹೋಯ್ತು. ಆಗ ಹಿಂದಿರುಗಿದ ಪರಿಜನರೆಲ್ಲರೂ ಮನಃಸ್ವಾಮಿಯನ್ನು ಕೊಂಡಾಡಿದರು. ಶಶಿಪ್ರಭೆಯು ಮತ್ತೆಮತ್ತೆ ತಿರುಗಿ ನೋಡುತ್ತ, ಅವರೊಂದಿಗೆ ಅರಮನೆಗೆ ಹೋದಳು.
ಈ ಘಟನೆಯಿಂದ ಅವರಿಬ್ಬರಲ್ಲಿ ಪರಸ್ಪರ ಅನುರಾಗ ಇನ್ನಷ್ಟು ಹೆಚ್ಚಾಯ್ತು. ಮನಃಸ್ವಾಮಿಯಂತೂ ಅವಳಿಲ್ಲದೆ ತಾನು ಬದುಕುವುದು ಸಾಧ್ಯವೇ ಇಲ್ಲ, ಅವಳನ್ನು ಹೇಗಾದರೂ ಪಡೆಯಬೇಕು ಎಂದು ನಿಶ್ಚಯಿಸಿ, ಮೂಲದೇವನೆಂಬ ಸಿದ್ಧನ ಹತ್ತಿರ ಹೋಗಿ ಅವನ ಸಹಾಯವನ್ನು ಕೋರಿದನು. ಅವನು ಸಹಾಯ ಮಾಡುವುದಕ್ಕೆ ಒಪ್ಪಿಕೊಂಡನು. ಆಮೇಲೆ ಮೂಲದೇವನು ಒಂದು ವಿಶಿಷ್ಟವಾದ ಗುಳಿಗೆಯನ್ನು ತನ್ನ ಬಾಯಿಗೆ ಹಾಕಿಕೊಂಡನು. ಆ ಕೂಡಲೇ ಅವನು ಒಬ್ಬ ವೃದ್ಧ ಬ್ರಾಹ್ಮಣನಾಗಿ ಮಾರ್ಪಟ್ಟನು. ಮತ್ತೊಂದು ಅಂಥದ್ದೇ ಗುಳಿಗೆಯನ್ನು ಮನಃಸ್ವಾಮಿಯ ಬಾಯಿಗೆ ಹಾಕಿದನು. ಅವನು ಆ ಕೂಡಲೇ ಹುಡುಗಿಯಾಗಿ ಮಾರ್ಪಟ್ಟನು. ಅನಂತರ ಮೂಲದೇವನು ಆ ಹುಡುಗಿಯನ್ನು ಕರೆದುಕೊಂಡು ಮಹಾರಾಜನ ಹತ್ತಿರ ಹೋಗಿ ಹೇಳಿದನು – “ಮಹಾರಾಜ! ನನಗೊಬ್ಬ ಮಗನಿದ್ದಾನೆ. ಅವನಿಗೆ ಮದುವೆ ಮಾಡಬೇಕೆಂದು ನಾನು ಎಷ್ಟೋ ದೂರದಿಂದ ಈ ಹುಡುಗಿಯನ್ನು ಇವಳ ತಂದೆತಾಯಿಯನ್ನು ಯಾಚಿಸಿ ಹೇಗೋ ತಂದಿದ್ದೇನೆ. ಆದರೆ ಇಲ್ಲಿ ಬಂದು ನೋಡುತ್ತೇನೆ, ನನ್ನ ಮಗನೇ ಕಾಣಿಸುತ್ತಿಲ್ಲ. ಅವನು ಎಲ್ಲೋ ಹೋಗಿ ಬಿಟ್ಟಿದ್ದಾನೆ. ನಾನು ಅವನನ್ನು ಹುಡುಕಬೇಕಾಗಿದೆ. ಅದಕ್ಕೆಂದು ಹೊರಟಿದ್ದೇನೆ. ಆದರೆ ಅಲ್ಲಿಯವರೆಗೆ ಇವಳನ್ನೇನು ಮಾಡಲಿ? ನೀನು ಎಲ್ಲರಿಗೂ ರಕ್ಷಕನಲ್ಲವೆ? ಆದುದರಿಂದ ಇವಳನ್ನು ನಿನ್ನ ಅರಮನೆಯಲ್ಲೇ ಬಿಟ್ಟು ಹೋಗುತ್ತೇನೆ. ನಾನು ಹಿಂದಿರುಗುವವರೆಗೆ ಇವಳನ್ನು ನೀನೇ ರಕ್ಷಿಸಬೇಕು” ಎಂದು ಬೇಡಿಕೊಂಡನು.
ರಾಜನಿಗೆ ಸಾಧ್ಯವಿಲ್ಲ ಎಂದು ಹೇಳಲು ಧೈರ್ಯ ಬರಲಿಲ್ಲ. ಏಕೆಂದರೆ ಸಿಟ್ಟು ಬಂದರೆ ಈ ಬ್ರಾಹ್ಮಣ ಶಾಪ ಕೊಟ್ಟರೂ ಕೊಟ್ಟಾನು! ಹಾಗೆಂದು ಅವನು ಒಪ್ಪಿಕೊಂಡನು. ಮಗಳನ್ನು ಕರೆದು – “ಈ ಹುಡುಗಿಯನ್ನು ನಿನ್ನ ಅಂತಃಪುರದಲ್ಲಿ ಇಟ್ಟುಕೊಂಡಿರು. ಊಟ ತಿಂಡಿ ಇತ್ಯಾದಿಗಳೆಲ್ಲ ನಿನ್ನ ಜೊತೆಯಲ್ಲಿಯೇ ಆಗಲಿ. ರಾತ್ರಿ ಇವಳು ನಿನ್ನ ಹತ್ತಿರವೇ ಮಲಗಲಿ” ಎಂದು ಹೇಳಿ ಅವಳನ್ನು ಒಪ್ಪಿಸಿದನು. ಬ್ರಾಹ್ಮಣನು ನಿಶ್ಚಿಂತೆಯಿಂದ ಅಲ್ಲಿಂದ ತೆರಳಿದನು. ರಾಜಕುಮಾರಿಯು ಹುಡುಗಿಯನ್ನು ತನ್ನ ಅಂತಃಪುರಕ್ಕೆ ಕರೆದುಕೊಂಡು ಹೋಗಿ ತನ್ನೊಂದಿಗೇ ಇರಿಸಿಕೊಂಡಳು. ಹೀಗೇ ಒಂದೆರಡು ದಿನಗಳು ಕಳೆದವು.
ರಾಜಕುಮಾರಿ ಶಶಿಪ್ರಭೆಯು ಈಗಲೂ ವಿರಹವ್ಯಥೆಯಿಂದ ಬಳಲುತ್ತಿದ್ದಳು. ರಾತ್ರಿ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ಒಮ್ಮೆ ಹುಡುಗಿಯ ರೂಪದ ಮನಃಸ್ವಾಮಿಯು ಅವಳನ್ನು – “ನಿನಗೇನು ಚಿಂತೆ? ಹೀಗೇಕೆ ಕೊರಗುತ್ತಿದ್ದಿ?’’ ಎಂದು ಕೇಳಿದನು. ಶಶಿಪ್ರಭೆಯು ಸಂಕೋಚದಿಂದ ಹೇಳದಿದ್ದಾಗ – “ನೀನು ಹೇಳದಿದ್ದರೆ ನಾನು ಊಟವನ್ನು ಮಾಡುವುದಿಲ್ಲ” ಎಂದು ಹಟ ಹಿಡಿದನು. ಆಗ ಅವಳು ತಾನು ಮನಃಸ್ವಾಮಿಯನ್ನು ಪ್ರೀತಿಸುತ್ತಿರುವುದಾಗಿಯೂ, ಅವನಿಲ್ಲದೆ ಬದುಕುವುದೇ ಕಷ್ಟವಾಗಿದೆ ಎಂದೂ ತಿಳಿಸಿದಳು. ಹಾಗಿದ್ದರೆ ತನ್ನ ನಿಜರೂಪವನ್ನು ಪ್ರಕಟಿಸುವುದಕ್ಕೆ ಇದು ಯೋಗ್ಯವಾದ ಕಾಲ ಎಂದು ತಿಳಿದು ಹುಡುಗಿಯ ರೂಪದಲ್ಲಿದ್ದ ಮನಃಸ್ವಾಮಿಯು ತನ್ನ ಬಾಯಿಯಲ್ಲಿದ್ದ ಗುಳಿಗೆಯನ್ನು ಹೊರತೆಗೆದು ನಿಜರೂಪು ಪಡೆದನು. ಶಶಿಪ್ರಭೆಗೆ ತುಂಬಾ ಸಂತೋಷವಾಗಿ ಅವನೊಡನೆ ಗಾಂಧರ್ವವಿವಾಹ ಮಾಡಿಕೊಂಡು ಸುಖವಾಗಿ ಇದ್ದುಬಿಟ್ಟಳು. ಅಲ್ಲಿಂದ ಮುಂದೆ ಅವನು ಹಗಲೆಲ್ಲ ಗುಳಿಗೆಯನ್ನು ಬಾಯಲ್ಲಿರಿಸಿಕೊಂಡು ಹುಡುಗಿಯಾಗಿರುತ್ತಿದ್ದನು. ರಾತ್ರಿ ಬೇರೆ ಯಾರೂ ಹತ್ತಿರದಲ್ಲಿ ಇಲ್ಲದಿರುವಾಗ ಗುಳಿಗೆಯನ್ನು ತೆಗೆದು ಗಂಡಾಗಿ ಶಶಿಪ್ರಭೆಯೊಂದಿಗೆ ವಿಹರಿಸುತ್ತಿದ್ದನು.
ಹೀಗಿರಲು ಒಮ್ಮೆ ಶಶಿಪ್ರಭೆಯು ತನ್ನ ಸೋದರಮಾವನ ಮದುವೆಗೆ ಹೋಗುವ ಪ್ರಸಂಗ ಬಂತು. ಆಗ ಅವಳು ಹುಡುಗಿಯ ರೂಪದ ಮನಃಸ್ವಾಮಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದಳು. ಮಂತ್ರಿಯ ಮಗನೂ ಅಲ್ಲಿಗೆ ಬಂದಿದ್ದನು. ಅವನು ಈ ಹುಡುಗಿಯನ್ನು ಕಂಡು ಮರುಳಾಗಿ ಬಿಟ್ಟನು. ಮಾತ್ರವಲ್ಲ, ಅವಳಿಗಾಗಿ ಅನ್ನ ನೀರು ಬಿಟ್ಟು ಕೊರಗತೊಡಗಿದನು. ವಸ್ತುತಃ ಈಗಾಗಲೇ ಅವನಿಗೆ ಮದುವೆಯಾಗಿತ್ತು. ಅದರೂ ಅವನು ಇವಳಿಗಾಗಿ ಇಷ್ಟೊಂದು ಹಂಬಲಿಸುವುದನ್ನು ಕಂಡು ಜನರೆಲ್ಲರೂ – “ಆದರೇನಂತೆ, ಇವಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದರಾಯ್ತು. ಅವಳ ತಂದೆ ಯಾವಾಗ ಬರುವನೋ ಗೊತ್ತಿಲ್ಲ. ಅವನು ಬಂದಾಗ ಏನೋ ಒಂದು ಹೇಳಿ ಸಮಾಧಾನ ಮಾಡಿದರಾಯ್ತು. ಇಲ್ಲವಾದರೆ ಇವನೇನಾದರೂ ಸತ್ತನೆಂದಾದರೆ ಅದೇ ದುಃಖದಿಂದ ಇವನ ತಂದೆ ಮಂತ್ರಿಯೂ ಸತ್ತುಬಿಟ್ಟಾನು” ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ರಾಜನಿಗೂ ಅದೇ ಸರಿ ಎನಿಸಿತು. ಅವನು ಮದುವೆ ಮಾಡಿಸಲು ಸಿದ್ಧನಾದನು.
ಅಗ ಆ ಹುಡುಗಿ ಹೇಳಿದಳು – “ಮಹಾರಾಜ! ಇದೇನಿದು? ತನ್ನ ಮಗನಿಗೆ ಮದುವೆ ಮಾಡಿಸಬೇಕೆಂದು ನನ್ನನ್ನು ವೃದ್ಧ ಬ್ರಾಹ್ಮಣನು ಕರೆದುಕೊಂಡು ಬಂದಿದ್ದಾನೆ. ಈಗ ನೀನು ಈ ಮಂತ್ರಿಯ ಮಗನನ್ನು ಮದುವೆಯಾಗು ಎನ್ನುತ್ತಿದ್ದೀಯೆ. ಯಾರಿಗೋ ತಂದ ಕನ್ಯೆಯನ್ನು ಹೀಗೆ ಮತ್ತೊಬ್ಬರಿಗೆ ಕೊಡುವುದು ಧರ್ಮವೆ? ನೀನು ರಾಜ. ಇದರ ಧರ್ಮಾಧರ್ಮಗಳೆಲ್ಲವೂ ನಿನಗೇ ಸೇರಿದ್ದು. ಅದು ಹೇಗೂ ಇರಲಿ, ನೀನು ಹೇಳಿದೆ ಎಂಬುದಕ್ಕಾಗಿ ನಾನು ಇವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪುತ್ತೇನೆ. ಆದರೆ ನನ್ನದು ಒಂದು ಕರಾರು ಇದೆ. ನೀನು ಕೂಡಲೇ ಮದುವೆ ಮಾಡಿದರೂ ನಾನು ಈಗ ನನ್ನ ಗಂಡನೊಂದಿಗೆ ಇರುವುದಿಲ್ಲ. ಆರು ತಿಂಗಳು ಕಳೆದ ಮೇಲೆ ಇರುತ್ತೇನೆ. ಅಲ್ಲಿಯವರೆಗೆ ಇವನು ತೀರ್ಥಯಾತ್ರೆ ಮಾಡಿಕೊಂಡು ಬರಲಿ. ಆಮೇಲೆ ಒಟ್ಟಿಗೆ ಇರುತ್ತೇನೆ. ನೀನು ಈ ಕರಾರಿಗೆ ಒಪ್ಪುವುದಿಲ್ಲವಾದರೆ ನಾನು ಈಗಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.’’
ರಾಜನು ಹಾಗಾದರೂ ಆಗಲಿ ಎಂದು ಅಂದುಕೊಂಡು ಮಂತ್ರಿಕುಮಾರನನ್ನು ಅದಕ್ಕೆ ಒಪ್ಪಿಸಿದನು. ಅದರಂತೆ ಮದುವೆಯಾಯಿತು. ಮಂತ್ರಿಕುಮಾರನು ಹೊಸ ಹೆಂಡತಿಯನ್ನು ತನ್ನ ಮೊದಲನೆಯ ಹೆಂಡತಿಯ ಹತ್ತಿರ ಬಿಟ್ಟು ತಾನು ತೀರ್ಥಯಾತ್ರೆಗೆ ಹೋದನು. ಸವತಿಯರಿಬ್ಬರೇ ಒಟ್ಟಿಗೆ ಇದ್ದಾಗ, ಸಮಯ ನೋಡಿಕೊಂಡು ಒಂದು ರಾತ್ರಿ ಹುಡುಗಿಯ ರೂಪದಲ್ಲಿದ್ದ ಮನಃಸ್ವಾಮಿಯು ಅವಳಿಗೆ ಮೊದಲು ಪುರಾಣಕಥೆಯ ಉದಾಹರಣೆಯೊಂದನ್ನು ಹೇಳಿ `ದೈವಕೃಪೆ ಇದ್ದರೆ ಹೆಣ್ಣೂ ಗಂಡಾಗಬಹುದು’ ಎಂದು ತಿಳಿಸಿದಳು. ಆಮೇಲೆ – “ನನಗೆ ವಿಷ್ಣುವಿನ ವರವಿದೆ. ನೀನು ಇಷ್ಟಪಡುವಿಯಾದರೆ ನಾನು ನಿನಗಾಗಿ ರಾತ್ರಿ ಗಂಡಸಾಗಬಲ್ಲೆ” ಎಂದು ಹೇಳಿದನು. ಅವಳು ಆಸಕ್ತಿ ತೋರಿಸಿದಾಗ ತನ್ನ ಬಾಯಲ್ಲಿದ್ದ ಗುಳಿಗೆಯನ್ನು ಹೊರತೆಗೆದು ಗಂಡಸಾಗಿಬಿಟ್ಟನು. ಅಂದಿನಿಂದ ಅವನು ಹಗಲೆಲ್ಲ ಹುಡುಗಿಯಾಗಿಯೂ, ರಾತ್ರಿ ಗಂಡಸಾಗಿಯೂ ಅವಳ ಸಹವಾಸದಲ್ಲಿ ಇದ್ದುಬಿಟ್ಟನು. ಆರು ತಿಂಗಳ ಅವಧಿ ಮುಗಿಯಲು ಇನ್ನು ಕೆಲವೇ ದಿನಗಳಿದ್ದಾಗ ಅವಳನ್ನು ಎತ್ತಿಕೊಂಡು ಎಲ್ಲಿಗೋ ಹೋಗಿಬಿಟ್ಟನು.
ಮೂಲದೇವನಿಗೆ ಈ ವಿಷಯವೆಲ್ಲ ತಿಳಿಯಿತು. ಅವನು ಮತ್ತೆ ವೃದ್ಧ ಬ್ರಾಹ್ಮಣನ ರೂಪವನ್ನು ಧರಿಸಿಕೊಂಡು ಶಶಿ ಎಂಬ ಯುವಕನನ್ನು ಕರೆದುಕೊಂಡು ಮಹಾರಾಜನ ಬಳಿಗೆ ಬಂದು – “ನನ್ನ ಮಗ ಸಿಕ್ಕಿದ್ದಾನೆ, ಅವನೇ ಇವನು. ನಾನು ನಿನ್ನಲ್ಲಿ ಬಿಟ್ಟುಹೋಗಿದ್ದ ಹುಡುಗಿ ಎಲ್ಲಿ? ಅವಳನ್ನು ನನ್ನ ಸೊಸೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ” ಎಂದನು.
ರಾಜನು – “ಸ್ವಾಮಿ, ಅಪರಾಧವಾಗಿ ಹೋಯ್ತು. ಅವಳು ಎಲ್ಲಿಯೋ ಹೋಗಿಬಿಟ್ಟಳು. ದಯವಿಟ್ಟು ಕ್ಷಮಿಸಬೇಕು. ಅವಳ ಬದಲಿಗೆ ನನ್ನ ಮಗಳನ್ನೇ ನಿಮ್ಮ ಮಗನಿಗೆ ಕೊಡಲು ಸಿದ್ಧನಿದ್ದೇನೆ” ಎಂದು ಬೇಡಿಕೊಂಡನು. ಮೂಲದೇವನು ಒಪ್ಪಿಕೊಂಡನು. ಶಶಿಗೂ ರಾಜಕುಮಾರಿ ಶಶಿಪ್ರಭೆಗೂ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿತು. ಶಶಿಯು ಹೆಂಡತಿಯನ್ನು ಮನೆಗೆ ಕರೆತಂದನು.
ಆಗ ಮನಃಸ್ವಾಮಿಯು ಅಲ್ಲಿಗೆ ಬಂದು – “ಶಶಿಪ್ರಭೆ ನನ್ನ ಹೆಂಡತಿ. ಗುರುವಿನ ಅನುಗ್ರಹದಿಂದ ಅವಳನ್ನು ನಾನು ಹಿಂದೆಯೇ ಗಾಂಧರ್ವ ವಿಧಿಯಿಂದ ಮದುವೆ ಮಾಡಿಕೊಂಡಿದ್ದೇನೆ” ಎಂದನು. ಶಶಿಯಾದರೋ – “ನೀನು ಯಾರೋ ನನಗೆ ಗೊತ್ತಿಲ್ಲ. ಮಹಾರಾಜನು ಇವಳನ್ನು ನನಗೆ ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಟ್ಟಿದ್ದಾನೆ. ಹಾಗಿರುವಾಗ ಇವಳು ನಿನ್ನ ಹೆಂಡತಿಯಾಗುವುದು ಹೇಗೆ ಸಾಧ್ಯ?’’ ಎಂದು ವಾದಿಸಿದನು. ಕೊನೆಗೂ ಅವರ ವಿವಾದ ಬಗೆಹರಿಯಲೇ ಇಲ್ಲ. ಶಶಿಪ್ರಭೆ ಯಾರ ಹೆಂಡತಿಯಾಗಬೇಕೆಂದು ತೀರ್ಮಾನವಾಗಲೇ ಇಲ್ಲ.
ಹೀಗೆ ಕಥೆಯನ್ನು ಹೇಳಿ ಮುಗಿಸಿ ಬೇತಾಳನು – “ಮಹಾರಾಜ! ಶಶಿಪ್ರಭೆಯು ನ್ಯಾಯವಾಗಿ ಅವರಿಬ್ಬರಲ್ಲಿ ಯಾರ ಹೆಂಡತಿಯಾಗಬೇಕು? ನೀನು ಉತ್ತರ ಹೇಳು. ತಿಳಿದಿದ್ದೂ ಹೇಳದಿದ್ದರೆ ನಿನ್ನ ತಲೆ ಒಡೆದು ಚೂರಾಗುತ್ತದೆ ಎಂಬುದು ನೆನಪಿರಲಿ” ಎಂದು ಹೇಳಿದನು.
ತ್ರಿವಿಕ್ರಮಸೇನನು – “ಶಶಿಪ್ರಭೆಯು ಶಶಿಗೆ ಹೆಂಡತಿಯಾಗುವುದೇ ನ್ಯಾಯ. ಏಕೆಂದರೆ ಮಹಾರಾಜನು ಅವಳನ್ನು ಬಹಿರಂಗವಾಗಿ, ಅಗ್ನಿಸಾಕ್ಷಿಯಾಗಿ ಅವನಿಗೆ ಧಾರೆ ಎರೆದುಕೊಟ್ಟಿದ್ದಾನೆ. ಆ ಮದುವೆ ಧಾರ್ಮಿಕವಾಗಿಯೇ ನಡೆದಿದೆ. ಮನಃಸ್ವಾಮಿ ಅವಳನ್ನು ಮದುವೆಯಾಗಿದ್ದು ಕಳ್ಳತನದಿಂದ, ಗಾಂಧರ್ವವಿಧಿಯಿಂದ. ಆದುದರಿಂದ ಅವಳು ಶಶಿಗೇ ಸೇರಬೇಕು” ಎಂದು ಉತ್ತರಕೊಟ್ಟನು.
ಹೀಗೆ ಮಾತನಾಡಿಬಿಟ್ಟಿದ್ದರಿಂದ ಅವನ ಮೌನವ್ರತ ಭಂಗವಾಗಿತ್ತು. ಬೇತಾಳನು ಆ ಕೂಡಲೇ ಅವನ ಹೆಗಲಿನಿಂದ ಮಾಯವಾಗಿ ಮತ್ತೆ ಮೊದಲಿದ್ದ ಸ್ಥಳಕ್ಕೇ ಹೋಗಿಬಿಟ್ಟನು.