ರತ್ನವತಿಯು ಕೂಡಲೇ ಅವನ ಶರೀರವನ್ನು ಶೂಲದಿಂದ ಕೆಳಗಿಳಿಸಿ, ಚಿತೆಯ ಮೇಲೆ ಇಡಿಸಿ ತಾನೂ ಸಹಗಮನ ಮಾಡುವುದಕ್ಕಾಗಿ ಚಿತೆಯನ್ನು ಏರಿದಳು. ಅವಳ ದೃಢನಿಶ್ಚಯವನ್ನು ತಿಳಿದು ಶ್ಮಶಾನಾಧಿಪತಿಯಾದ ಭೈರವನಿಗೆ ತುಂಬ ಸಂತೋಷವಾಯಿತು. ಅವನು ಅದೃಶ್ಯನಾಗಿದ್ದುಕೊಂಡೇ ಆಕಾಶದಿಂದ “ಮಗಳೆ, ನೀನೇ ವರಿಸಿದ ನಿನ್ನ ಈ ಸ್ವಯಂವರ ಪತಿಯಲ್ಲಿ ನಿನಗಿರುವ ಭಕ್ತಿಯನ್ನು ಕಂಡು ಮೆಚ್ಚಿದ್ದೇನೆ. ಏನು ವರ ಬೇಕು, ಕೇಳಿಕೋ” ಎಂದನು.
ಛಲ ಬಿಡದ ತ್ರಿವಿಕ್ರಮಸೇನನು ಹದಿನಾಲ್ಕನೆಯ ಸಾರಿ ಹೆಣವನ್ನು ಹೆಗಲಮೇಲೆ ಹಾಕಿಕೊಂಡು ಶ್ಮಶಾನದ ಕಡೆಗೆ ಹೆಜ್ಜೆ ಹಾಕಿದನು. ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು.
ಶ್ರೀರಾಮಚಂದ್ರನ ರಾಜಧಾನಿಯಾಗಿದ್ದ ಅಯೋಧ್ಯೆಯಲ್ಲಿ ಹಿಂದೆ ವೀರಕೇತುವೆಂಬ ರಾಜನು ಆಳುತ್ತಿದ್ದನು. ಆಗ ಅಲ್ಲಿ ರತ್ನದತ್ತನೆಂಬ ವರ್ತಕನಿದ್ದನು. ಅವನು ಮಹಾಧನಿಕ. ಅವನಿಗೆ ರತ್ನವತಿಯೆಂಬ ಅತ್ಯಂತ ರೂಪವತಿಯಾದ ಮಗಳಿದ್ದಳು. ಅವಳು ಪ್ರಾಪ್ತವಯಸ್ಕಳಾದಾಗ ಅವಳ ರೂಪ ಮತ್ತು ಗುಣಗಳನ್ನು ಕಂಡು ದೊಡ್ಡದೊಡ್ಡ ವರ್ತಕರು ಮಾತ್ರವಲ್ಲ, ಮಹಾರಾಜನೂ ರತ್ನದತ್ತನ ಬಳಿಗೆ ಬಂದು “ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು” ಎಂದು ಕೇಳಿಕೊಂಡರು. ಆದರೆ ರತ್ನವತಿಯು ಅದೇಕೋ ಪುರುಷದ್ವೇಷಿಣಿಯಾಗಿದ್ದಳು. ಸಾಮಾನ್ಯಗಂಡುಗಳೇನು, ದೇವಲೋಕದ ಇಂದ್ರನೇ ಬಂದರೂ ನಾನು ಮದುವೆಯಾಗಲೊಲ್ಲೆ. ಪ್ರಾಣವನ್ನಾದರೂ ಬಿಟ್ಟೇನು. ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಅವಳು ಹಟ ಹಿಡಿದಿದ್ದಳು.
ಹೀಗಿರುತ್ತಿರಲು ಒಮ್ಮೆ ಅಯೋಧ್ಯೆಯಲ್ಲಿ ಇದ್ದಕ್ಕಿದ್ದಂತೆ ಕಳ್ಳರ ಕಾಟ ಶುರುವಾಯಿತು. ಮನೆಯೊಳಗೆ ಇರಿಸಿದ್ದ ಒಡವೆಗಳು ಅದು ಯಾವ ಮಾಯದಲ್ಲೋ ಕಾಣೆಯಾಗತೊಡಗಿದವು. ಸಂತ್ರಸ್ತರಾದ ಪ್ರಜೆಗಳು ರಾಜನ ಬಳಿಗೆ ಹೋಗಿ ನಿವೇದಿಸಿಕೊಂಡರು. ರಾಜನು ಅವರಿಗೆ ಅಭಯ ಹೇಳಿ, ರಕ್ಷಣೆಗೆ ಇನ್ನಷ್ಟು ಭಟರನ್ನು ನಿಯೋಜಿಸಿದನು. ಆದರೂ ಪ್ರಯೋಜನವಾಗಲಿಲ್ಲ. ಅವರು ಕಾದಿದ್ದೇ ಬಂತು. ಕಳ್ಳತನ ಮಾತ್ರ ಹಾಗೆಯೆ ಮಂದುವರಿಯಿತು. ಕೊನೆಗೆ ರಾಜನು ತಾನೇ ಕಾವಲು ತಿರುಗಲು ಹೊರಟನು.
ಒಂದು ರಾತ್ರಿ ಅವನು ಮಾರುವೇಷದಲ್ಲಿ ಖಡ್ಗವನ್ನು ಹಿಡಿದುಕೊಂಡು ಒಂಟಿಯಾಗಿ ಹೀಗೆ ಕಾವಲು ಕಾಯುತ್ತಿದ್ದಾಗ ಯಾವುದೋ ಒಂದು ಮನೆಯ ಹಿಂದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಂಡು ಅವನನ್ನು ಹಿಂಬಾಲಿಸಿದನು. ಇವನೇ ಎಲ್ಲ ಕಡೆ ಕಳ್ಳತನ ಮಾಡುತ್ತಿರಬೇಕು ಎಂದು ಅಂದುಕೊಂಡನು. ಅಷ್ಟು ಹೊತ್ತಿಗೆ ಅವನು ಹೇಗೋ ಇವನನ್ನು ನೋಡಿ “ಯಾರು ನೀನು?’’ ಎಂದು ಕೇಳಿದನು. ರಾಜನು ಒಂದಿಷ್ಟ್ಟೂ ಭಯಪಡದೆ “ನಾನೊಬ್ಬ ಕಳ್ಳ” ಎಂದು ಹೇಳಿದನು.
ಆಗ ಅವನು “ಓಹೋ, ನೀನೂ ಕಳ್ಳನೋ…? ಹಾಗಿದ್ದರೆ ಸರಿಯಾಯ್ತು ಬಿಡು. ನಮ್ಮಿಬ್ಬರ ಕಸುಬೂ ಒಂದೇ ಎಂದಾಯ್ತು. ನೀನೀಗ ನನ್ನ ಗೆಳೆಯ. ಬಾ, ನಮ್ಮ ಮನೆಗೆ ಹೋಗೋಣ” ಎಂದು ಹೇಳಿ ನಗರದ ಹೊರಗಿದ್ದ ಕಾಡಿನೊಳಗೆ ಅವನನ್ನು ಕರೆದುಕೊಂಡು ಹೋದನು. ಅಲ್ಲಿ ನೆಲಮಾಳಿಗೆಯಲ್ಲಿ ಅವನ ಭವ್ಯವಾದ ಮನೆಯಿತ್ತು. ಮನೆಯೊಳಗೆ ಇವನನ್ನು ಆಸನದಲ್ಲಿ ಕುಳ್ಳಿರಿಸಿ ಕಳ್ಳನು ಒಳಗೆ ಹೋದನು. ರಾಜನು ಬೆರಗಾಗಿ ನೋಡುತ್ತಿರಲು ದಾಸಿಯೊಬ್ಬಳು ಬಳಿಗೆ ಬಂದು ಅವನ ಕಿವಿಯಲ್ಲಿ – “ಅಯ್ಯೋ, ಮೃತ್ಯುವಿನ ಬಾಯಿಯೊಳಗೆ ನೀನೇಕೆ ಬಂದೆ? ನಿನಗೆ ಬದುಕಬೇಕೆಂಬ ಆಸೆ ಇದ್ದರೆ ಈ ಕೂಡಲೇ ಇಲ್ಲಿಂದ ಹೊರಟುಹೋಗು” ಎಂದು ಹೇಳಿದಳು.
ರಾಜನು ತಡಮಾಡದೆ ಅಲ್ಲಿಂದ ಹೊರಬಂದು ಅರಮನೆ ತಲಪಿದನು. ಕೂಡಲೇ ತನ್ನ ಸ್ಯೆನ್ಯವನ್ನು ಒಡಗೂಡಿಕೊಂಡು ಮತ್ತೆ ಕಾಡಿನಲ್ಲಿದ್ದ ಅದೇ ನೆಲಮಾಳಿಗೆಯ ಮನೆಗೆ ಬಂದು ಮುತ್ತಿಗೆ ಹಾಕಿದನು. ಕಳ್ಳನಿಗೆ ತಾನು ಈಗ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ತಿಳಿದರೂ ಅವನು ಸಾಧ್ಯವಿದ್ದಷ್ಟು ಹೋರಾಟ ಮಾಡಿದನು. ಸ್ಯೆನ್ಯದ ಕೆಲವು ಪ್ರಮುಖರನ್ನು ಕೊಂದನು. ಆಗ ರಾಜನು ತಾನೇ ಅವನಿಗೆ ಎದುರಾಗಿ, ಅವನೊಂದಿಗೆ ಖಡ್ಗಯುದ್ಧವನ್ನೂ ಮಲ್ಲಯುದ್ಧವನ್ನೂ ಮಾಡಿ ಅವನನ್ನು ಸೆರೆ ಹಿಡಿದು, ರಾತ್ರಿಯೇ ಅರಮನೆಗೆ ಸಾಗಿಸಿದನು.
ಮುಂಜಾನೆ “ಈ ಪಾಪಿಯನ್ನು ಮೆರವಣಿಗೆ ಮಾಡಿಸಿ ಶೂಲಕ್ಕೇರಿಸಿ” ಎಂದು ಭಟರಿಗೆ ಆಜ್ಞೆ ಮಾಡಿದನು. ಭಟರು ನಗರದ ರಸ್ತೆಗಳಲ್ಲಿ ಡಿಂಡಿಮ ಘೋಷ ಮಾಡುತ್ತ, ಮೆರವಣಿಗೆಯಲ್ಲಿ ಅವನನ್ನು ವಧ್ಯಭೂಮಿಯತ್ತ ಕರೆದೊಯ್ದರು. ಮೆರವಣಿಗೆ ರತ್ನದತ್ತನ ಮನೆಯ ಎದುರು ಹೋಗುತ್ತಿದ್ದಾಗ ಮಹಡಿಯ ಮೇಲಿದ್ದ ರತ್ನವತಿಯು ಇದನ್ನು ನೋಡಿದಳು. ಆ ಕಳ್ಳನ ಮೈಯೆಲ್ಲ ಧೂಳಾಗಿತ್ತು. ಅಲ್ಲಲ್ಲಿ ಗಾಯಗಳಾಗಿದ್ದವು. ಈ ಸ್ಥಿತಿಯಲ್ಲಿದ್ದ ಅವನನ್ನು ಕಾಣುತ್ತಿದ್ದಂತೆ ಅದು ಹೇಗೋ, ಅವಳ ಮನಸ್ಸಿನಲ್ಲಿ ಅವನ ಮೇಲೆ ಮೋಹ ಹುಟ್ಟಿಬಿಟ್ಟಿತು. ಅವಳು ತಂದೆಯ ಬಳಿಗೆ ಹೋಗಿ – “ಅವನೇ ನನ್ನ ಗಂಡ. ಹೇಗಾದರೂ ಮಾಡಿ ಅವನನ್ನು ಬಿಡಿಸಿಕೊಂಡು ಬಾ. ನಾನು ಅವನೊಂದಿಗೆ ಜೀವನ ಮಾಡುತ್ತೇನೆ. ಇಲ್ಲದಿದ್ದರೆ ಅವನನ್ನು ಶೂಲಕ್ಕೆ ಏರಿಸಿದರೆಂದಾದರೆ ನಾನೂ ಅವನೊಂದಿಗೇ ಸಹಗಮನ ಮಾಡಿ ಸಾಯುತ್ತೇನೆ’’ ಎಂದು ದೃಢವಾಗಿ ಹೇಳಿದಳು. ರತ್ನದತ್ತನು ಬೇರೆ ದಾರಿ ತೋರದೆ ರಾಜನ ಬಳಿಗೆ ಹೋಗಿ “ನನ್ನ ಐಶ್ವರ್ಯವನ್ನೆಲ್ಲ ಬೇಕಾದರೂ ಕೊಡುತ್ತೇನೆ. ಆತನನ್ನು ಬಿಟ್ಟುಬಿಡು’’ ಎಂದು ಕೇಳಿಕೊಂಡನು.
ಆದರೆ ರಾಜನು ಒಪ್ಪಲಿಲ್ಲ. “ನಾನೇ ಸ್ವತಃ ಹೋರಾಡಿ, ನನ್ನ ಜೀವವನ್ನೇ ಪಣಕ್ಕಿಟ್ಟು ಇವನನ್ನು ಹಿಡಿದು ತಂದಿದ್ದೇನೆ. ಅದೂ ಅಲ್ಲದೆ ಅನೇಕ ದಿನಗಳಿಂದ ನಮ್ಮ ನಗರವನ್ನು ಕೊಳ್ಳೆ ಹೊಡೆದ ಪಾಪಿ ಇವನು. ನೀನು ಕೋಟಿ ವರಹ ಕೊಡುತ್ತೇನೆಂದರೂ ನಾನು ಇವನನ್ನು ಬಿಡುವುದಿಲ್ಲ. ಇವನು ಸಾಯಲೇಬೇಕು” ಎಂದನು.
ರತ್ನದತ್ತನು ನಿರಾಶನಾಗಿ ಮನೆಗೆ ಹಿಂದಿರುಗಿದನು.
ಅಷ್ಟು ಹೊತ್ತಿಗೆ ರತ್ನವತಿಯು ಸ್ನಾನ ಮಾಡಿ, ಸೀರೆಯುಟ್ಟು ಶ್ಮಶಾನಕ್ಕೆ ಹೊರಟೇಬಿಟ್ಟಳು. ಅವಳ ತಾಯಿತಂದೆಗಳೂ, ಬಂಧುಗಳೂ ಅಳುತ್ತಲೇ ಅವಳನ್ನು ಹಿಂಬಾಲಿಸಿದರು. ಅವರು ಶ್ಮಶಾನಕ್ಕೆ ತಲಪಿ ನೋಡುತ್ತಾರೆ, ಈಗತಾನೇ ಕಳ್ಳನನ್ನು ಶೂಲಕ್ಕೆ ಏರಿಸಲಾಗಿತ್ತು. ಅವನ ಪ್ರಾಣವಿನ್ನೂ ಹೋಗಿರಲಿಲ್ಲ. ಕುಟುಕುಜೀವ ಉಳಿದುಕೊಂಡಿತ್ತು. ಆ ಅವಸ್ಥೆಯಲ್ಲಿ ಅವನು ಜನರ ಬಾಯಿಂದ ರತ್ನವತಿಯ ವಿಷಯವನ್ನು ಕೇಳಿ ತಿಳಿದು, ಒಂದು ಕ್ಷಣ ಕಣ್ಣೀರು ಹಾಕಿದನು. ಮರುಕ್ಷಣವೇ ಒಮ್ಮೆ ನಕ್ಕು ಪ್ರಾಣಬಿಟ್ಟನು.
ರತ್ನವತಿಯು ಕೂಡಲೇ ಅವನ ಶರೀರವನ್ನು ಶೂಲದಿಂದ ಕೆಳಗಿಳಿಸಿ, ಚಿತೆಯ ಮೇಲೆ ಇಡಿಸಿ ತಾನೂ ಸಹಗಮನ ಮಾಡುವುದಕ್ಕಾಗಿ ಚಿತೆಯನ್ನು ಏರಿದಳು. ಅವಳ ದೃಢನಿಶ್ಚಯವನ್ನು ತಿಳಿದು ಶ್ಮಶಾನಾಧಿಪತಿಯಾದ ಭೈರವನಿಗೆ ತುಂಬ ಸಂತೋಷವಾಯಿತು. ಅವನು ಅದೃಶ್ಯನಾಗಿದ್ದುಕೊಂಡೇ ಆಕಾಶದಿಂದ “ಮಗಳೆ, ನೀನೇ ವರಿಸಿದ ನಿನ್ನ ಈ ಸ್ವಯಂವರ ಪತಿಯಲ್ಲಿ ನಿನಗಿರುವ ಭಕ್ತಿಯನ್ನು ಕಂಡು ಮೆಚ್ಚಿದ್ದೇನೆ. ಏನು ವರ ಬೇಕು, ಕೇಳಿಕೋ” ಎಂದನು.
ಅದನ್ನು ಕೇಳಿ, ಭೈರವನಿಗೆ ನಮಸ್ಕರಿಸಿ ಅವಳು – “ಸ್ವಾಮಿನ್! ನನ್ನ ತಂದೆಗೆ ಗಂಡುಮಕ್ಕಳಿಲ್ಲ. ನಾನು ಸತ್ತರೆ ಅವನೂ ಸತ್ತುಬಿಡುತ್ತಾನೆ. ಆದ್ದರಿಂದ ಅವನಿಗೆ ನೂರುಜನ ಗಂಡುಮಕ್ಕಳಾಗಲಿ’’ ಎಂದು ಬೇಡಿಕೊಂಡಳು. ಭೈರವನು “ಹಾಗೇ ಆಗಲಿ. ಆದರೂ ನೀನು ಇನ್ನೊಂದು ವರವನ್ನು ಕೇಳು. ಏಕೆಂದರೆ ನಿನ್ನಂಥ ಸತ್ತ್ವಶಾಲಿನಿಗೆ ಒಂದೇ ವರ ಸಾಲದು” ಎಂದನು. ಅವಳು – “ಹಾಗಿದ್ದರೆ ನನ್ನ ಗಂಡನು ಬದುಕಲಿ. ಮುಂದೆ ಅವನು ಧಾರ್ಮಿಕನಾಗಿ ಬಾಳಲಿ” ಎಂದು ಕೇಳಿಕೊಂಡಳು. ಭೈರವನು “ಹಾಗೇ ಆಗಲಿ. ನಿನ್ನ ಗಂಡ ಗಾಯದ ಗುರುತೂ ಇಲ್ಲದಂತೆ ಸ್ವಸ್ಥನಾಗಿ ಏಳಲಿ. ಧಾರ್ಮಿಕನಾಗಿ ಬಾಳಲಿ. ಈ ನಗರದ ರಾಜನಾದ ವೀರಕೇತುವೂ ಸಂತೋಷವಾಗಿರಲಿ’’ ಎಂದು ಹೇಳಿದನು.
ಮರುಕ್ಷಣವೇ ಕಳ್ಳನು ಪೂರ್ಣ ಸ್ವಸ್ಥನಾಗಿ ಎದ್ದುನಿಂತನು. ರತ್ನದತ್ತನು ಅವನನ್ನೂ ಮಗಳನ್ನೂ ಅತ್ಯಂತ ಸಂತೋಷದಿಂದ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಉತ್ಸವವನ್ನು ಏರ್ಪಡಿಸಿದನು. ನೆಂಟರಿಷ್ಟರು ಬಂದು ನಲಿದಾಡಿದರು. ಈ ಎಲ್ಲ ವಿಷಯವನ್ನೂ ತಿಳಿದ ವೀರಕೇತು ಮಹಾರಾಜನು ಆ ಕಳ್ಳನನ್ನು ಕರೆದು ಸತ್ಕಾರ ಮಾಡಿ, ಅವನನ್ನು ತನ್ನ ಸೇನಾಪತಿಯನ್ನಾಗಿ ಮಾಡಿಕೊಂಡನು. ಕಳ್ಳನೂ ಮುಂದೆಂದೂ ಕಳ್ಳತನ ಮಾಡದೆ ಧರ್ಮಮಾರ್ಗದಲ್ಲೇ ಜೀವನ ನಡೆಸುತ್ತಾ ಸುಖವಾಗಿದ್ದನು.
ಹೀಗೆ ಕಥೆಯನ್ನು ಹೇಳಿ ಮುಗಿಸಿದ ಬೇತಾಳನು.