ಛಲ ಬಿಡದ ತ್ರಿವಿಕ್ರಮನು ಎಂಟನೆಯ ಸಾರಿ ಮತ್ತೆ ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು ಶ್ಮಶಾನದತ್ತ ಮೌನವಾಗಿ ಹೆಜ್ಜೆ ಹಾಕಿದನು. ಆಗ ಹೆಣದಲ್ಲಿದ್ದ ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು –

ಅಂಗದೇಶದಲ್ಲಿ ವೃಕ್ಷಘಟವೆಂಬ ಹೆಸರಿನ ಒಂದು ದೊಡ್ಡ ಅಗ್ರಹಾರವಿದೆ. ಹಿಂದೆ ಅಲ್ಲಿ ವಿಷ್ಣುಸ್ವಾಮಿ ಎಂಬ ಧನಿಕನಾದ ಬ್ರಾಹ್ಮಣನಿದ್ದನು. ಅನುರೂಪಳಾದ ಪತ್ನಿಯಲ್ಲಿ ಅವನಿಗೆ ಕ್ರಮವಾಗಿ ಮೂವರು ಗಂಡು ಮಕ್ಕಳು ಜನಿಸಿದರು. ಅವರೆಲ್ಲರೂ ಬೆಳೆದು ಯುವಕರಾದರು.
ವಿಷ್ಣುಸ್ವಾಮಿಯು ಆಗಾಗ್ಗೆ ಬೇರೆ ಬೇರೆ ಯಜ್ಞಗಳನ್ನು ಮಾಡುತ್ತಿದ್ದನು. ಒಮ್ಮೆ ಅವನು ವಿಶಿಷ್ಟವಾದ ಯಜ್ಞವೊಂದನ್ನು ಆರಂಭಿಸಿದನು. ಆ ಯಜ್ಞದಲ್ಲಿ ಆಮೆಯೊಂದರ ಆವಶ್ಯಕತೆ ಇತ್ತು. ಅದಕ್ಕಾಗಿ ಅವನು ತನ್ನ ಮೂರು ಮಕ್ಕಳನ್ನು ಕರೆದು ‘’ಸಮುದ್ರಕ್ಕೆ ಹೋಗಿ ಒಂದು ಆಮೆಯನ್ನು ಹಿಡಿದು ತನ್ನಿ’’ ಎಂದು ಆಜ್ಞೆ ಮಾಡಿದನು. ಅವರು ಸಮುದ್ರಕ್ಕೆ ಹೋಗಿ ಆಮೆಯನ್ನೇನೋ ಹುಡುಕಿದರು. ಆಮೇಲೆ ಅವರಲ್ಲಿ ಹಿರಿಯನು ತಮ್ಮಂದಿರಿಗೆ ಹೇಳಿದನು – ‘’ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ಈ ಆಮೆಯನ್ನು ಎತ್ತಿಕೊಂಡು ಬನ್ನಿ. ಏಕೆಂದರೆ ಆಮೆ ಪಾಚಿ ಕಟ್ಟಿ ನುಣುಪಾಗಿರುತ್ತದೆ. ಅದು ನನ್ನ ಕೈ ಜಾರಿ ಕೆಳಗೆ ಬಿದ್ದು ಹೋದೀತು.’’
ಆಗ ಅವರೆಂದರು – ‘’ನೀನು ಹೇಳುವುದೇನೋ ನಿಜವೇ. ಆದರೆ ನಮ್ಮ ಕೈಯೂ ಜಾರುತ್ತದೆಯಲ್ಲವೇ?’’
ಹಿರಿಯನು – ‘’ತಮ್ಮಂದಿರೇ! ನಾನು ಭೋಜನಚಂಗ (ಊಟದ ವಿಷಯದಲ್ಲಿ ಅತ್ಯಂತ ನಾಜೂಕಿನವನು) ಎಂಬುದು ನಿಮಗೆ ತಿಳಿದಿದೆಯಲ್ಲವೆ? ಈ ಆಮೆಯನ್ನು ಎತ್ತಿಕೊಂಡೆನೆಂದಾದರೆ ಮುಂದೆ ನನಗೆ ಊಟ ಮಾಡುವುದಕ್ಕೇ ಸಾಧ್ಯವಾಗಲಿಕ್ಕಿಲ್ಲ’’ ಎಂದನು.
ಆಗ ಎರಡನೆಯವನು – ‘’ನೀನು ಭೋಜನಚಂಗನಿದ್ದರೆ ನಾನು ನಾರೀಚಂಗ (ಹೆಂಗಸರ ವಿಷಯದಲ್ಲಿ ಅತ್ಯಂತ ನಾಜೂಕಿನವನು) ನಿದ್ದೇನೆ. ನಿನಗಿಂತ ನಾನೇ ಹೆಚ್ಚಿನವನು. ಹಾಗಾಗಿ ನಾನೊಲ್ಲೆ’’ ಎಂದನು.
‘’ಹಾಗಿದ್ದರೆ ಮೂರನೆಯವನು ಎತ್ತಿಕೊಳ್ಳಲಿ’’ ಎಂದು ಹಿರಿಯನು ಹೇಳಿದನು. ಅದನ್ನು ಕೇಳಿ ಮೂರನೆಯವನು ಹುಬ್ಬುಗಂಟಿಕ್ಕಿ ‘’ನಾನು ಶಯ್ಯಾಚಂಗ (ಹಾಸಿಗೆಯ ವಿಷಯದಲ್ಲಿ ಅತ್ಯಂತ ನಾಜೂಕಿನವನು)ನಿದ್ದೇನೆ. ನಿಮ್ಮಿಬ್ಬರಿಗಿಂತ ನಾನೇ ಹೆಚ್ಚಿನವನು’’ ಎಂದು ಹೇಳಿದನು.
ಹೀಗೆ ಅವರ ನಡುವೆ ಯಾರು ಹೆಚ್ಚಿನವನು ಎಂದು ಜಗಳವೇರ್ಪಟ್ಟಿತು. ಅದನ್ನು ನಿರ್ಣಯ ಮಾಡಲು ಸಾಧ್ಯವಾಗದೆ ಅವರು ಆಮೆಯನ್ನು ಅಲ್ಲಿಯೇ ಬಿಟ್ಟು, ಆ ಪ್ರದೇಶದ ರಾಜನಾದ ಪ್ರಸೇನಜಿತನನ್ನು ನೋಡುವುದಕ್ಕೆಂದು ವಿಟಂಕಪುರಕ್ಕೆ ಬಂದರು. ರಾಜನನ್ನು ಕಂಡು ನಿವೇದಿಸಿಕೊಂಡರು. ಎಲ್ಲವನ್ನೂ ಕೇಳಿದ ರಾಜನು – ‘’ನೀವು ಇಲ್ಲೇ ಉಳಿದುಕೊಳ್ಳಿ. ನಾನು ನಿಧಾನವಾಗಿ ನಿಮ್ಮನ್ನು ಪರೀಕ್ಷಿಸಿ ನಿರ್ಣಯ ಹೇಳುತ್ತೇನೆ’’ ಎಂದು ಹೇಳಿದನು. ಅವರಿಗೆ ಷಡ್ರಸೋಪೇತವಾದ ಭೋಜನದ ವ್ಯವಸ್ಥೆಯನ್ನು ಮಾಡಿದನು. ಅವರಲ್ಲಿ ಇಬ್ಬರು ಆನಂದದಿಂದ ಭೋಜನ ಮಾಡಿದರು. ಆದರೆ ಭೋಜನಚಂಗನು ಮಾತ್ರ ಮುಖವನ್ನು ಸಿಂಡರಿಸಿಕೊಂಡು ಸುಮ್ಮನೆ ಕುಳಿತಿದ್ದನು. ಆಗ ರಾಜನು – ‘’ಬ್ರಾಹ್ಮಣೋತ್ತಮ! ಇದೇನಿದು…? ಮಧುರವೂ, ಸುಗಂಧಪುರ್ಣವೂ ಆದ ಭೋಜನ ಎದುರಿಗಿದ್ದರೂ ಏಕೆ ಸ್ವೀಕರಿಸುತ್ತಿಲ್ಲ…?’’ ಎಂದು ಕೇಳಿದನು.
ಆಗ ಭೋಜನಚಂಗನು – ‘’ಮಹಾರಾಜ! ಈ ಅನ್ನದಿಂದ ಹೆಣಸುಟ್ಟ ಹೊಗೆಯ ದುರ್ಗಂಧ ಬರುತ್ತಿದೆ’’ ಎಂದನು. ರಾಜನಿಗೆ ಆಶ್ಚರ್ಯವಾಯ್ತು. ಅವನು ಅನ್ನವನ್ನು ಮೂಸಿ ನೋಡಿದನು. ಉಳಿದವರೂ ಮೂಸಿ ನೋಡಿದರು. ಎಲ್ಲರಿಗೂ ಅನ್ನದ ಪರಿಮಳ ಅನುಭವಕ್ಕೆ ಬಂತು. ಆದರೆ ಭೋಜನಚಂಗನು ಮಾತ್ರ ಮೂಗನ್ನು ಮುಚ್ಚಿಕೊಂಡು ‘’ಇದನ್ನು ತಿನ್ನಲು ಸಾಧ್ಯವೇ ಇಲ್ಲ’’ ಎಂದುಬಿಟ್ಟನು. ರಾಜನಿಗೆ ಇನ್ನಷ್ಟು ಆಶ್ಚರ್ಯವಾಗಿ ಹೀಗಾಗಲು ಕಾರಣವೇನೆಂದು ವಿಚಾರಿಸಲು ಅಧಿಕಾರಿಗಳನ್ನು ನೇಮಿಸಿದನು. ಅವರು ಎಲ್ಲವನ್ನೂ ವಿಚಾರಿಸಿ ನೋಡಿ ‘’ಈ ಅಕ್ಕಿ ಊರಿನ ಹೊರಗಿರುವ ಶ್ಮಶಾನದ ಪಕ್ಕದಲ್ಲಿರುವ ಗದ್ದೆಯಲ್ಲಿ ಬೆಳೆದ ಭತ್ತದಿಂದ ಬಂದದ್ದು’’ ಎಂದು ತಿಳಿಸಿದರು. ರಾಜನು ಆಶ್ಚರ್ಯಪಟ್ಟು ‘’ನೀನು ಭೋಜನಚಂಗನೇ ಹೌದು’’ ಎಂದು ಹೇಳಿ ಅವನಿಗೆ ಬೇರೆಯದೇ ಅನ್ನವನ್ನು ಮಾಡಿಸಿ ಊಟದ ವ್ಯವಸ್ಥೆ ಮಾಡಿದನು.
ಊಟವಾದ ಮೇಲೆ ಅವರನ್ನು ವಿಶ್ರಾಂತಿಗಾಗಿ ತಮ್ಮ ತಮ್ಮ ಬಿಡದಿಗೆ ಕಳುಹಿಸಿದನು. ಆಮೇಲೆ ವೇಶ್ಯಾಸ್ತ್ರೀಯೊಬ್ಬಳನ್ನು ಕರೆದು ‘’ನೀನು ಚೆನ್ನಾಗಿ ಅಲಂಕಾರ ಮಾಡಿಕೊಂಡು ಅವರಲ್ಲಿ ಎರಡನೆಯವನ ಕೋಣೆಗೆ ಹೋಗಿ ಅವನ ಸೇವೆ ಮಾಡು’’ ಎಂದು ಆಜ್ಞೆ ಮಾಡಿ ಕಳುಹಿಸಿದನು. ಆ ವೇಶ್ಯೆಯಾದರೋ ತುಂಬಾ ಸುಂದರಿ. ರಾಜನ ಆಜ್ಞೆಯಂತೆ ಅವಳು ಇನ್ನಷ್ಟು ಅಲಂಕಾರ ಮಾಡಿಕೊಂಡು ಪೂರ್ಣಿಮೆಯ ಚಂದ್ರನಂತೆ ಶೋಭಿಸುತ್ತಾ ಅವನ ಕೋಣೆಯನ್ನು ಪ್ರವೇಶಿಸಿದಳು. ಆದರೆ ಅವಳನ್ನು ನೋಡುತ್ತಿದ್ದಂತೆಯೇ ಆ ನಾರೀಚಂಗನು ಮೂರ್ಛೆ ಬಂದಂತವನಾಗಿ ಎಡಗೈಯಿಂದ ಮೂಗನ್ನು ಮುಚ್ಚಿಕೊಂಡು – ‘’ಈ ಕ್ಷಣ ಇಲ್ಲಿಂದ ಹೊರಟು ಹೋಗು. ನಿನ್ನ ಮೈಯಿಂದ ಆಡಿನ ವಾಸನೆ ಬರುತ್ತಿದೆ. ಆ ವಾಸನೆಯನ್ನು ಸೇವಿಸುತ್ತಿದ್ದರೆ ನಾನು ಸತ್ತೇ ಹೋಗುತ್ತೇನೆ’’ ಎಂದು ಕಿರುಚಿದನು. ಅವಳು ಕೋಣೆಯಿಂದ ಹೊರಗೆ ಬಂದಳು. ರಾಜನು ಆ ವಿಷಯವನ್ನು ಕೇಳಿ ಆಶ್ಚರ್ಯಪಟ್ಟು – ‘’ಶ್ರೀಗಂಧ, ಪಚ್ಚಕರ್ಪೂರವೇ ಮೊದಲಾದ ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಸುವಾಸನೆಯನ್ನು ಹರಡುತ್ತಿರುವ ಇವಳ ಶರೀರದಿಂದ ಆಡಿನ ವಾಸನೆ ಹೇಗೆ ಬರುವುದಕ್ಕೆ ಸಾಧ್ಯ?’’ ಎಂದು ಸಂಶಯಕ್ಕೊಳಗಾದನು. ಮತ್ತೆ ವಿಚಾರಿಸಲಾಗಿ ಅವಳೇ ‘’ನಾನು ಮಗುವಾಗಿದ್ದಾಗ ನನ್ನ ತಾಯಿ ತೀರಿಕೊಂಡಳಂತೆ. ಆಗ ಆಡಿನ ಹಾಲನ್ನು ಕುಡಿಸಿ ನನ್ನನ್ನು ಬೆಳೆಸಿದರಂತೆ’’ ಎಂದು ತಿಳಿಸಿದಳು. ರಾಜನು ನಾರೀಚಂಗನ ಆ ವಿಶಿಷ್ಟ ಸಾಮರ್ಥ್ಯಕ್ಕೆ ಬೆರಗಾದನು.
ಮೂರನೆಯವನಾದ ಶಯ್ಯಾಚಂಗನಿಗೆ ಮಲಗುವುದಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡಿಸಲಾಗಿತ್ತು. ಮಂಚದ ಮೇಲೆ ಒಂದರ ಮೇಲೆ ಒಂದರAತೆ ಏಳು ಸುಪ್ಪತ್ತಿಗೆಗಳನ್ನು ಹಾಸಿ, ಅದರ ಮೇಲೆ ಚೆನ್ನಾಗಿ ಒಗೆದು ಪರಿಶುದ್ಧವಾದ, ತೆಳುವಾದ ವಸ್ತ್ರವನ್ನು ಹಾಸಲಾಗಿತ್ತು. ಅವನು ಅದರ ಮೇಲೆ ಸ್ವಲ್ಪಹೊತ್ತು ಮಾತ್ರ ಮಲಗಿದ್ದನಷ್ಟೆ. ಆಮೇಲೆ ಗಟ್ಟಿಯಾಗಿ ಕಿರುಚಿಕೊಂಡು, ಬೆನ್ನನ್ನು ತುರಿಸಿಕೊಳ್ಳುತ್ತಾ ಎದ್ದು ಕುಳಿತನು. ಹತ್ತಿರದಲ್ಲೇ ಇದ್ದ ಸೇವಕರು ಏನಾಯ್ತೆಂದು ವಿಚಾರಿಸಲಾಗಿ, ಅವನ ಬೆನ್ನಿನ ಮೇಲೆ ಒಂದು ಕೂದಲೆಳೆಯಷ್ಟು ಸಣ್ಣದಾದ ಒತ್ತಿದ ಕೆಂಪನೆಯ ಗುರುತಿತ್ತು. ಅವರು ಅದನ್ನು ರಾಜನಿಗೆ ನಿವೇದಿಸಿಕೊಂಡರು. ರಾಜನು ‘’ಹಾಗಿದ್ದರೆ ಆ ಹಾಸಿಗೆಯ ಅಡಿಯಲ್ಲಿ ಏನಾದರೂ ಇರಬೇಕು. ಚೆನ್ನಾಗಿ ಹುಡುಕಿ ನೋಡಿ’’ ಎಂದು ಆಜ್ಞೆ ಮಾಡಿದನು. ಅವರು ಒಂದೊಂದು ಸುಪ್ಪತ್ತಿಗೆಯನ್ನೂ ತೆಗೆದು, ಬಿಡಿಸಿ ಸೂಕ್ಷ್ಮವಾಗಿ ಪರಿಶೀಲಿಸಿದರು. ಎಲ್ಲಕ್ಕಿಂತ ಕೆಳಗಿದ್ದ ಸುಪ್ಪತ್ತಿಗೆಯ ತಳದಲ್ಲಿ ಮಂಚದ ಮೇಲೆ ಒಂದು ಕೂದಲು ಅಂಟಿಕೊಂಡಿತ್ತು! ಅದನ್ನು ತೆಗೆದು ಅವರು ರಾಜನಿಗೆ ತೋರಿಸಿದರು. ‘ಏಳು ಹಾಸಿಗೆಗಳ ಕೆಳಗೆ ಒಂದು ಕೂದಲೆಳೆ ಇದ್ದರೆ ಅದು ಇವನ ಮೈಗೆ ಒತ್ತಿದ ಬಗೆ ಹೇಗೆ?’ ಎಂದು ರಾತ್ರಿಯಿಡಿ ಯೋಚನೆ ಮಾಡುತ್ತಾ ರಾಜನು ಆಶ್ಚರ್ಯಪಡುತ್ತಿದ್ದನು.
ಬೆಳಗಾಗುತ್ತಲೇ ಅವನು ಆ ಮೂವರನ್ನೂ ಕರೆಸಿ ‘’ನೀವು ಮೂವರೂ ಒಬ್ಬರಿಗಿಂತ ಒಬ್ಬರು ಸುಕುಮಾರರಿದ್ದೀರಿ… ನಿಮ್ಮ ನಾಜೂಕುತನಕ್ಕೆ ನಾನು ಬೆರಗಾಗಿಬಿಟ್ಟಿದ್ದೇನೆ’’ ಎಂದು ಹೇಳಿ ಪ್ರತಿಯೊಬ್ಬನಿಗೂ ಒಂದೊಂದು ಲಕ್ಷ ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿದನು. ಅವರು ಆಮೆಯನ್ನು ಮನೆಗೆ ಒಯ್ಯಬೇಕಾಗಿದ್ದ ವಿಚಾರವನ್ನೇ ಮರೆತು ಬಿಟ್ಟು ಮನೆಗೆ ಹೋಗಿ ಸುಖವಾಗಿದ್ದರು. ಆದರೂ ತಂದೆಯು ಆರಂಭಿಸಿದ್ದ ಯಜ್ಞಕ್ಕೆ ಮಧ್ಯದಲ್ಲಿ ವಿಘ್ನ ಬಂದಿದ್ದರಿಂದ ಅದರ ಪಾಪ ಅವರಿಗೂ ತಟ್ಟಿತು.
ಹೀಗೆ ಕಥೆಯನ್ನು ಮುಗಿಸಿ ಬೇತಾಳನು – ‘’ರಾಜನ್! ಆ ಮೂವರೂ ಸುಕುಮಾರರೇ, ನಾಜೂಕಿನವರೇ. ಆದರೂ ಅವರಲ್ಲಿ ಯಾರು ಅತಿ ಹೆಚ್ಚು ಸುಕುಮಾರ? ಈ ಪ್ರಶ್ನೆಗೆ ಉತ್ತರ ಕೊಡು. ನೆನಪಿರಲಿ, ಉತ್ತರವನ್ನು ತಿಳಿದಿದ್ದೂ ನೀನು ಹೇಳದಿದ್ದರೆ ನಿನ್ನ ತಲೆ ಹೋಳಾಗಿ ಹೋಗುತ್ತದೆ’’ ಎಂದನು.
ರಾಜಾ ತ್ರಿವಿಕ್ರಮನು ‘’ನನ್ನ ದೃಷ್ಟಿಯಲ್ಲಿ ಶಯ್ಯಾಚಂಗನೇ ಹೆಚ್ಚು ಸುಕುಮಾರ. ಏಕೆಂದರೆ ಅವನ ಅಂಗಕ್ಕೆ ನೇರವಾಗಿ ಕೂದಲಿನ ಸ್ಪರ್ಶವಾಗದಿದ್ದರೂ ಅವನ ಶರೀರಕ್ಕೆ ಪೀಡೆ ಆಗಿದೆ. ಉಳಿದಿಬ್ಬರ ಕಥೆ ಹಾಗಲ್ಲ. ಅವರ ಇಂದ್ರಿಯಗಳಿಗೆ ಸ್ಪರ್ಶವಾಗಿದೆ. ಹಾಗಾಗಿ ಅವರಿಗೆ ಪೀಡೆಯಾಗಿದ್ದಿರಬಹುದು’’ ಎಂದು ಉತ್ತರಕೊಟ್ಟನು.
ಅವನು ಉತ್ತರ ಹೇಳುವುದಕ್ಕಾಗಿ ಮಾತನಾಡಿದ್ದರಿಂದ ಬೇತಾಳನು ಛಂಗನೆ ಅವನ ಹೆಗಲಿನಿಂದ ಹಾರಿ ಮತ್ತೆ ಅದೇ ಮರಕ್ಕೆ ಹೋಗಿ ಮೊದಲಿನಂತೆ ನೇತುಹಾಕಿಕೊಂಡನು.