ರಾಜಾ ತ್ರಿವಿಕ್ರಮನು ಛಲವನ್ನು ಬಿಡದೆ ಒಂಭತ್ತನೆಯ ಸಾರಿ ಮತ್ತೆ ಮುಳ್ಳುಮುತ್ತುಗದ ಮರದಿಂದ ಹೆಣವನ್ನು ಇಳಿಸಿ, ತನ್ನ ಹೆಗಲ ಮೇಲೆ ಹೊತ್ತುಕೊಂಡು ಶ್ಮಶಾನದ ಕಡೆಗೆ ಹೆಜ್ಜೆ ಹಾಕಿದನು. ಆಗ ಹೆಣದಲ್ಲಿದ್ದ ಬೇತಾಳನು – “ರಾಜನ್! ಸಮೃದ್ಧಿಯಾದ ರಾಜ್ಯದ ಒಡೆತನ ಎಲ್ಲಿ! ಶ್ಮಶಾನದಲ್ಲಿ ಹೆಣವನ್ನು ಹೊತ್ತುಕೊಂಡು ಹೀಗೆ ತಿರುಗುವುದು ಎಲ್ಲಿ…! ಆ ಭಿಕ್ಷುವಿನ ಮಾತನ್ನು ಕೇಳಿ ನೀನು ಹೀಗೆ ಕಷ್ಟ ಪಡುತ್ತಿರುವುದನ್ನು ಕಂಡು ನನಗೆ ವ್ಯಥೆಯಾಗುತ್ತಿದೆ. ಇರಲಿ, ನಿನ್ನ ಮಾರ್ಗಾಯಾಸ ಪರಿಹಾರಕ್ಕಾಗಿ ಮತ್ತೊಂದು ಕಥೆಯನ್ನು ಹೇಳುತ್ತೇನೆ. ಕೇಳಿಸಿಕೋ…’’ ಎಂದು ಹೇಳಿ ಈ ಕಥೆಯನ್ನು ಹೇಳಿದನು –

ಉಜ್ಜಯಿನಿಯಲ್ಲಿ ಹಿಂದೆ ವೀರದೇವನೆಂಬ ರಾಜನಿದ್ದನು. ಅವನಿಗೆ ಪದ್ಮರತಿ ಎಂಬುವವಳು ಪಟ್ಟದ ರಾಣಿಯಾಗಿದ್ದಳು. ದೀರ್ಘಕಾಲದವರೆಗೆ ಆ ದಂಪತಿಗಳಿಗೆ ಸಂತಾನವಿರಲಿಲ್ಲ. ಮುಂದೆ ಅವರು ಗಂಗಾನದಿಯ ತೀರಕ್ಕೆ ಹೋಗಿ ಶಿವನನ್ನು ಆರಾಧಿಸಿದರು. ಹೀಗೆ ಆರಾಧನೆ ಮಾಡುತ್ತಿದ್ದಾಗ ಒಮ್ಮೆ ಆಕಾಶವಾಣಿ ಕೇಳಿಸಿತು – “ರಾಜನ್! ನಿನಗೆ ಕುಲದೀಪಕನಾಗಬಲ್ಲ ಒಬ್ಬ ಮಗನೂ, ಲಾವಣ್ಯವತಿಯಾದ ಒಬ್ಬಳು ಮಗಳೂ ಜನಿಸುವರು.’’
ಅದನ್ನು ಕೇಳಿ ದಂಪತಿಗಳು ಸಂತೋಷದಿಂದ ನಗರಕ್ಕೆ ಹಿಂದಿರುಗಿದರು. ಕಾಲಕ್ರಮದಲ್ಲಿ ಅವರಿಗೆ ಶೂರದೇವನೆಂಬ ಮಗನೂ, ಅನಂಗರತಿಯೆಂಬ ಮಗಳೂ ಜನಿಸಿದರು. ದಿನಗಳು ಕಳೆದಂತೆ ಅವರಿಬ್ಬರೂ ಬೆಳೆದು ದೊಡ್ಡವರಾದರು.
ಅನಂಗರತಿಯು ವಿವಾಹಯೋಗ್ಯಳಾದಾಗ ರಾಜನು ಅವಳಿಗೆ ವರಾನ್ವೇಷಣೆ ಮಾಡಲು ತೊಡಗಿದನು. ನಾನಾ ದೇಶಗಳ ರಾಜಕುಮಾರರ ಚಿತ್ರಪಟಗಳನ್ನು ತರಿಸಿಕೊಂಡು ಮಗಳಿಗೆ ತೋರಿಸಿದನು. ಅವಳಿಗೆ ಅವರಲ್ಲಿ ಯಾರೊಬ್ಬನೂ ಒಪ್ಪಿಗೆಯಾಗಲಿಲ್ಲ. “ಹಾಗಿದ್ದರೆ ನಾನು ನಿನ್ನ ಸ್ವಯಂವರವನ್ನು ಏರ್ಪಡಿಸುತ್ತೇನೆ. ಅಲ್ಲಿ ನೂರಾರು ರಾಜಕುಮಾರರು ಬರುತ್ತಾರೆ. ಅವರಲ್ಲಿ ಯಾರನ್ನಾದರೂ ನೀನೇ ಪ್ರತ್ಯಕ್ಷ ನೋಡಿ ಆಯ್ಕೆ ಮಾಡಿಕೋ’’ ಎಂದು ರಾಜನು ಮಗಳಿಗೆ ಹೇಳಿದನು. ಆದರೆ ಅವಳು ಅದಕ್ಕೂ ಒಪ್ಪಲಿಲ್ಲ. “ಸ್ವಯಂವರದಲ್ಲಿ ಭಾಗವಹಿಸಲು ನನಗೆ ನಾಚಿಕೆಯಾಗುತ್ತದೆ. ನನಗೆ ಹೆಚ್ಚಿನ ಅಪೇಕ್ಷೆಯೇನಿಲ್ಲ. ವಿದ್ಯಾವಂತನೂ, ಸುಂದರನೂ ಆದ ಯಾವನಾದರೂ ಒಬ್ಬ ಯುವಕನಿಗೆ ನನ್ನನ್ನು ಕೊಟ್ಟು ಮದುವೆ ಮಾಡು’’ ಎಂದು ಕೇಳಿಕೊಂಡಳು.
ರಾಜನು ಈಗ ಅಂತಹ ವರನನ್ನು ಹುಡುಕುವುದಕ್ಕೆ ಆರಂಭ ಮಾಡಿದನು. ಈ ವರ್ತಮಾನವನ್ನು ಕೇಳಿ ದಕ್ಷಿಣಾಪಥದಿಂದ ನಾಲ್ವರು ಯುವಕರು ಉಜ್ಜಯಿನಿಗೆ ಬಂದರು. ನಾಲ್ವರೂ ವಿದ್ಯಾವಂತರೂ, ಸುಂದರರೂ ಆಗಿದ್ದರು. ರಾಜನು ಎಲ್ಲರನ್ನೂ ಸ್ವಾಗತಿಸಿ ಸತ್ಕಾರ ಮಾಡಿದನು. ಆಮೇಲೆ ಅವರಲ್ಲಿ ಮೊದಲನೆಯವನು ಹೇಳಿದನು – “ರಾಜನ್! ನಾನು ಪಂಚಪಟ್ಟಕನೆಂಬ ಶೂದ್ರ. ಬಟ್ಟೆ ನೇಯುವುದು ನನ್ನ ಕಸುಬು. ನನ್ನ ಹೆಸರೇ ಹೇಳುವಂತೆ ನಾನು ಪ್ರತಿದಿನ ಐದು ದಿವ್ಯವಾದ ಬಟ್ಟೆಗಳನ್ನು ನೇಯುತ್ತೇನೆ. ಅವುಗಳಲ್ಲಿ ಒಂದನ್ನು ದೇವರಿಗೆ ಅರ್ಪಿಸುತ್ತೇನೆ. ಇನ್ನೊಂದನ್ನು ಬ್ರಾಹ್ಮಣನಿಗೆ ಕೊಡುತ್ತೇನೆ. ಮೂರನೆಯದನ್ನು ನಾನು ಇಟ್ಟುಕೊಳ್ಳುತ್ತೇನೆ. ನಾಲ್ಕನೆಯದನ್ನು ನನ್ನ ಹೆಂಡತಿಗೆ ಕೊಡುತ್ತೇನೆ. ಐದನೆಯದನ್ನು ಮಾರಿ ಅದರಿಂದ ಬಂದ ಹಣದಿಂದ ನನ್ನ ಸಂಸಾರವನ್ನು ನಡೆಸಿಕೊಳ್ಳುತ್ತೇನೆ.’’
ಎರಡನೆಯ ಯುವಕನು – “ರಾಜನ್! ನಾನೊಬ್ಬ ವೈಶ್ಯ. ನಾನು ಎಲ್ಲಾ ಮೃಗಪಕ್ಷಿಗಳ ಭಾಷೆಯನ್ನೂ ಬಲ್ಲೆ’’ ಎಂದು ಹೇಳಿಕೊಂಡನು.
ಆಗ ಮೂರನೆಯ ಯುವಕನು – “ರಾಜನ್ ! ನಾನು ಕ್ಷತ್ರಿಯ. ನನ್ನ ಹೆಸರು ಖಡ್ಗಧರ. ಖಡ್ಗವಿದ್ಯೆಯಲ್ಲಿ ನನಗೆ ಸಮಾನರು ಯಾರೂ ಇಲ್ಲ’’ ಎಂದು ಹೇಳಿದನು.
ಕೊನೆಯದಾಗಿ ನಾಲ್ಕನೆಯವನು ಹೇಳಿದನು – “ರಾಜನ್! ನಾನು ಜೀವದತ್ತನೆಂಬ ಬ್ರಾಹ್ಮಣ. ನಾನು ಸತ್ತವರನ್ನೂ ಜೀವಸಹಿತವಾಗಿ ತೋರಿಸಬಲ್ಲೆ.’’
ಹೀಗೆ ನಾಲ್ವರು ಯುವಕರೂ ತಮ್ಮ ತಮ್ಮ ವಿದ್ಯೆಗಳನ್ನು ಹೇಳಿಕೊಂಡು ಅನಂಗರತಿಯನ್ನು ತನಗೇ ಕೊಡಬೇಕು ಎಂದು ಕೇಳಿಕೊಂಡಾಗ ವೀರದೇವನಿಗೂ ಅನಂಗರತಿಗೂ ಆ ನಾಲ್ವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ತಿಳಿಯಲಿಲ್ಲ.
ಹೀಗೆ ಕಥೆಯನ್ನು ಹೇಳಿ ಮುಗಿಸಿದ ಬೇತಾಳನು ತ್ರಿವಿಕ್ರಮಸೇನನನ್ನು – “ರಾಜನ್! ಈಗ ನೀನು ಹೇಳು. ಆ ನಾಲ್ವರಲ್ಲಿ ಯಾರಿಗೆ ಅನಂಗರತಿಯನ್ನು ಕೊಡಬೇಕು? ಈ ಪ್ರಶ್ನೆಗೆ ಉತ್ತರವನ್ನು ತಿಳಿದೂ ನೀನು ಹೇಳದಿದ್ದರೆ ನಿನ್ನ ತಲೆ ಹೋಳುಗಳಾಗಿ ಒಡೆದು ಹೋಗುತ್ತದೆ, ಎಚ್ಚರ’’ ಎಂದು ಹೇಳಿದನು.
ತ್ರಿವಿಕ್ರಮನು – “ಅಯ್ಯಾ, ಇದೇನು ಅಂಥ ಗಹನವಾದ ಪ್ರಶ್ನೆಯೆ…? ಸುಮ್ಮನೆ ಕಾಲಹರಣ ಮಾಡುವುದಕ್ಕೂ, ನಾನು ಮಾತನಾಡುವಂತೆ ಮಾಡುವುದಕ್ಕೂ ನೀನು ಇಂಥ ಪ್ರಶ್ನೆಯನ್ನು ಕೇಳುತ್ತಿರುವೆ. ಆ ನಾಲ್ವರಲ್ಲಿ ಮೊದಲನೆಯವನು ನೇಕಾರಿಕೆ ಮಾಡುವವನು. ಕ್ಷತ್ರಿಯಕನ್ಯೆಯನ್ನು ಅವನಿಗೆ ಹೇಗೆ ತಾನೆ ಕೊಡಬಹುದು? ಎರಡನೆಯವನು ವೈಶ್ಯ. ಅವನಿಗೆ ಮೃಗಪಕ್ಷಿಗಳ ಭಾಷೆ ಗೊತ್ತಿದ್ದರೆ ಏನಾಯ್ತು…, ಅವನಿಗೂ ಕ್ಷತ್ರಿಯಕನ್ಯೆಯನ್ನು ಕೊಡುವುದು ಯೋಗ್ಯವಲ್ಲ. ನಾಲ್ಕನೆಯವನು ಬ್ರಾಹ್ಮಣ. ಅವನ ಮಾತಿನಿಂದಲೇ ಅವನು ಸ್ವಕರ್ಮಭ್ರಷ್ಟನೂ, ಪತಿತನೂ ಆಗಿರುವನೆಂದು ತಿಳಿಯುತ್ತದೆ. ಇಂದ್ರಜಾಲವಿದ್ಯೆಯನ್ನು ಸಂಪಾದಿಸಿಕೊಂಡು ಅವನು ಏನನ್ನೂ ಮಾಡಬಹುದು. ಆದರೂ ಕ್ಷತ್ರಿಯಕನ್ಯೆಗೆ ಅವನು ಯೋಗ್ಯ ವರನಲ್ಲ. ಇನ್ನುಳಿದವನು ಮೂರನೆಯವನು. ಅವನು ಕ್ಷತ್ರಿಯ. ಅವನು ತನ್ನ ಕುಲಕ್ಕೆ ತಕ್ಕುದಾದ ಖಡ್ಗವಿದ್ಯೆಯಲ್ಲಿ ನಿಪುಣ, ವೀರ. ಖಡ್ಗಧರ ಎಂಬ ಹೆಸರಿನ ಆ ಯುವಕನೇ ಅನಂಗರತಿಗೆ ಸರಿಯಾದ ವರ’’ ಎಂದು ಹೇಳಿದನು.
ಅವನ ಯೋಗ್ಯವಾದ ಉತ್ತರದಿಂದ ಬೇತಾಳನಿಗೆ ಸಮಾಧಾನವಾಯಿತು. ಆದರೆ ಅವನು ಮಾತನಾಡಿದ್ದರಿಂದ ವ್ರತಭಂಗವಾಯ್ತೆಂದು ಬೇತಾಳನು ಅವನ ಹೆಗಲಿನಿಂದ ಛಂಗನೆ ಹಾರಿ ಮತ್ತೆ ಮೊದಲಿದ್ದ ಸ್ಥಳಕ್ಕೇ ಹೋಗಿಬಿಟ್ಟನು.