ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2015 > ಸಹಿಷ್ಣುತೆ ಹಿಂದುಧರ್ಮಕ್ಕೆ ಶಾಪವೇ?

ಸಹಿಷ್ಣುತೆ ಹಿಂದುಧರ್ಮಕ್ಕೆ ಶಾಪವೇ?

ಬೆಂಗಳೂರಿನಲ್ಲಿ ದಿನಾಂಕ ೨೦೧೫ ಫೆಬ್ರುವರಿ ೧೫ರಂದು ಡಾ|| ಎಂ. ಚಿದಾನಂದಮೂರ್ತಿ ಅವರಿಂದ `ಭಾರತ ಭಂಜನ’ ಗ್ರಂಥವು ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ಡಾ|| ಎಸ್.ಆರ್. ರಾಮಸ್ವಾಮಿ ಅವರು ಮಾಡಿದ ಅಧ್ಯಕ್ಷಭಾಷಣ.

Bharatha Bhanjana Cover

`ಭಾರತ ಭಂಜನ’ (‘Breaking India). ಮೂಲ ಲೇಖಕರು : ರಾಜೀವ ಮಲ್ಹೋತ್ರಾ ಮತ್ತು ಅರವಿಂದನ್ ನೀಲಕಂಡನ್. ಕನ್ನಡ ಅನುವಾದ : ಲಕ್ಷ್ಮೀಕಾಂತ ಹೆಗಡೆ. ಮುನ್ನುಡಿ : ಡಾ|| ಎಸ್.ಎಲ್. ಭೈರಪ್ಪ. ಕನ್ನಡ ಆವೃತ್ತಿಯ ಪ್ರಕಾಶಕರು : ವಸಂತ ಪ್ರಕಾಶನ, ನಂ. ೩೬೦, ೧೦ನೇ `ಬಿ’ ಮೇಯ್ನ್, ೩ನೇ ಬ್ಲಾಕ್, ಜಯನಗರ, ಬೆಂಗಳೂರು – ೫೬೦ ೦೧೧.

ಪುಟಗಳು : ೭೩೪

ಬೆಲೆ : ರೂ. ೫೦೦-೦೦

ಇತ್ತೀಚೆಗೆ ಅಮೀರ್‌ಖಾನರ ` PK ‘ ಚಿತ್ರದ ಬಗೆಗೆ ವಿವಾದ ನಡೆಯುತ್ತಿದೆ. ಆ ಚಿತ್ರದ ಗುಣ-ದೋಷಗಳ ವಿಷಯವನ್ನು ಸದ್ಯಕ್ಕೆ ಪಕ್ಕಕ್ಕೆ ಇಡೋಣ. ನಾವು ಕೇಳಬೇಕಾದ ಪ್ರಶ್ನೆ: ಅಮೀರ್‌ಖಾನ್ ಇಸ್ಲಾಮನ್ನೂ ಪ್ರವಾದಿ ಮಹಮ್ಮದರನ್ನೂ ಹಾಸ್ಯ ಮಾಡುವ ಸಾಹಸವನ್ನೇಕೆ ಮಾಡಬಾರದು? ಹಾಗೇನಾದರೂ ಮಾಡಿದ್ದಿದ್ದರೆ ಟೀಕೆಗಳನ್ನು ಕೇಳಿಸಿಕೊಳ್ಳುವುದಕ್ಕೂ ಅವರು ಉಳಿದಿರುತ್ತಿರಲಿಲ್ಲ! ಅಮೀರ್‌ಖಾನರ ಧಾರ್ಷ್ಟ್ಯವನ್ನು ಮೊಗುಮ್ಮಾಗಿ ಬೆಂಬಲಿಸುವವರು `ಸೆಕ್ಯುಲರ್’ ಮಾಧ್ಯಮಗಳು ಮತ್ತು ಸುನ್ನಿ ಮುಸ್ಲಿಮರು.

ಪ್ರವಾದಿಗಳ ವಿಷಯ ಹಾಗಿರಲಿ. ಕೇವಲ ಇಬ್ಬರು `ನನ್’ಗಳಿಗೆ ಸಂಬಂಧಿಸಿದ ಕಥೆಯನ್ನು ಬಳಸಿರುವ `ಪಿತವಿನುಂ ಪುತ್ರನುಂ’ ಎಂಬ ಮಲಯಾಳಂ ಚಿತ್ರಕ್ಕೆ ಎರಡು ವರ್ಷಗಳಿಂದ ಸೆನ್ಸಾರ್ ಸರ್ಟಿಫಿಕೇಟ್ ಅನುಮೋದನೆ ಸಿಕ್ಕಿಲ್ಲ – ಕ್ರೈಸ್ತರ ಮನಸ್ಸಿಗೆ ನೋವು ಉಂಟಾಗಬಹುದು ಎಂಬ ಕಾರಣದಿಂದ.

ಸಹಿಷ್ಣುತೆಯೇ ಹಿಂದೂಧರ್ಮಕ್ಕೆ ಶಾಪವಾಗಿದೆಯೆ? ಈ ಪ್ರವೃತ್ತಿಯನ್ನೇ `ಸದ್ಗುಣ-ವಿಕೃತಿ’ ಎಂದು ಕೆಲವರು ಕರೆದಿರುವುದು.

ಜಾತಿಯ ಹೆಸರು ಹೇಳಿದರೆ ಹೌಹಾರುತ್ತಾರೆ. ಆದರೆ ತಥಾಕಥಿತ `ಕೆಳಜಾತಿ’ಯಿಂದ ಬಂದು ತನ್ನ ಸಾಧನೆಗಳಿಂದ ಜಗತ್ತನ್ನೇ ವಿಸ್ಮಯಗೊಳಿಸಿರುವ ಮಾತಾ ಅಮೃತಾನಂದಮಯಿ ಅವರ ಬಗೆಗಾದರೂ ಈ ಭಂಜಕಪಡೆ ಒಂದು ಒಳ್ಳೆಯ ಮಾತನ್ನಾಡುತ್ತಾರೆಯೆ? ಅಂಥವರನ್ನೂ ಟೀಕಿಸಲು ಏನಾದರೂ ನೆವ ಸಿಕ್ಕೀತೇನೊ ಎಂದು ಕಾದು ಕುಳಿತಿರಬಹುದು.

ಈ ಪರಿಸ್ಥಿತಿಯ ಮೂಲವನ್ನು ನಾವು ಗ್ರಹಿಸಬೇಕಾಗಿದೆ.

ಭರ್ತ್ಸನೆಯ ದೀರ್ಘ ಇತಿಹಾಸ

ಹಿಂದೂಧರ್ಮದ ಭರ್ತ್ಸನೆಯ `ಪ್ರಾಜೆಕ್ಟ್’ಗೆ ದೀರ್ಘ ಇತಿಹಾಸ ಇದೆ.

ಭಾರತವನ್ನು ಭೌಗೋಲಿಕವಾಗಿ ಮಾತ್ರವಲ್ಲದೆ ಜನಾಂಗೀಯವಾಗಿಯೂ ವಶಪಡಿಸಿಕೊಳ್ಳಬೇಕೆಂಬ ಬ್ರಿಟಿಷರ ಆಕಾಂಕ್ಷೆಗೆ ಪ್ರತಿರೋಧವಾಗಿದ್ದುದು ಹಿಂದೂಧರ್ಮವೆಂಬ `ಸಾಫ್ಟ್ ಪವರ್’. ಇಸ್ಲಾಮೀ ಆಕ್ರಮಣದಂತಹ ಇತಿಹಾಸದಲ್ಲೇ ಬರ್ಬರ ಆಕ್ರಮಣವನ್ನೂ ಹಿಂದೂಧರ್ಮ ಜೀರ್ಣಿಸಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದುದು ಬ್ರಿಟಿಷರಿಗೆ ಸವಾಲಾಗಿತ್ತು. ಆ ಹಿನ್ನೆಲೆಯಲ್ಲಿ ಹಿಂದೂಗಳ ಶ್ರದ್ಧಾಬಿಂದುಗಳ ಅವಹೇಳನ ಮಾಡುವ ಅಭಿಯಾನವನ್ನು ಮೆಕಾಲೆಯಿಂದ ಕರ್ಜನ್‌ವರೆಗಿನ ಅಧಿಕಾರಿಗಳೂ ಮಿಶನರಿಗಳೂ ಸತತವಾಗಿ ನಡೆಸಿದರು.

ಆ ಸಂಸ್ಕೃತಿಭಂಜಕ ಪರಂಪರೆ ಈಗಲೂ ಜೀವಂತವಾಗಿ ರುವುದನ್ನು ನೋಡುತ್ತಿದ್ದೇವೆ.

ಭಗವದ್ಗೀತೆಯಂತಹ ಜಗತ್ತಿನಲ್ಲಿಯೆ ಅದ್ವಿತೀಯವಾದ ಮಾರ್ಗದರ್ಶಕ ಗ್ರಂಥ ಕೂಡಾ ಈ ಸಂಸ್ಕೃತಿವೈರಿ (`ಫಿಲಿಸ್ಟೈನ್’) ಪಡೆಗಳಿಗೆ ಈಗ ಸಹ್ಯವೆನಿಸಿಲ್ಲ.

ವಿರೋಧಿಗಳನ್ನು ಟೀಕಿಸಿ ಪ್ರಯೋಜನವಿಲ್ಲ. ವೈಚಾರಿಕವಾಗಿಯೂ ಸಾಂಸ್ಥಿಕವಾಗಿಯೂ ನಾವು ಹೆಚ್ಚು ಬಲಿಷ್ಠರಾಗುವುದನ್ನು ಬಿಟ್ಟು ಬೇರೆ ಪರಿಹಾರವಿಲ್ಲ.

೧೮ನೇ ಶತಮಾನದಲ್ಲಿ ಯೂರೋಪಿನ ವಿದ್ವಾಂಸರಿಂದಲೇ ಸ್ಫೋಟಗೊಂಡ ಸಾಂಸ್ಕೃತಿಕಭಾರತದ ಚಿತ್ರವು ಬ್ರಿಟಿಷರನ್ನು ಎಷ್ಟು ಸ್ತಂಭಿತಗೊಳಿಸಿತ್ತೆಂದರೆ ಅದನ್ನು ಸಾಮ್ರಾಜ್ಯಶಾಹಿಗೆ ಅನುಕೂಲಕರವಾಗಿ ವ್ಯಾಖ್ಯಾನ ಮಾಡುವುದಕ್ಕಾಗಿಯೇ ಎಷ್ಟೋ ದಶಕಗಳ ಕಾಲ ವಿದ್ವಾಂಸರನ್ನು ತೊಡಗಿಸಲಾಯಿತು. ಆ ಕಾರ್ಯಸರಣಿಯ ಒಂದು ಕೂಸು `ಆರ್ಯ ಆಕ್ರಮಣ’ ವಾದ.

ಯೂರೋಪಿನ ಮತ್ತು ಕ್ರೈಸ್ತಮತದ ಪರಿಸ್ಥಿತಿಗೆ ಸೆಮೆಟಿಕ್-ಮೂಲಕ್ಕಿಂತ ಭಾರತಮೂಲದ ಪ್ರತಿಪಾದನೆಯೇ ಅನುಕೂಲಕರವಾಗಿದೆಯೆಂಬ ಕಾಣ್ಕೆಯ ಪರಿಣಾಮವಾಗಿ ಜರ್ಮನರು ತಮ್ಮನ್ನು `ಆರ್ಯ’ರೆಂದು ಕರೆದುಕೊಂಡದ್ದು, ಆ ಧೋರಣೆ ಈಚಿನ ಹಿಟ್ಲರನ ಕಾಲದವರೆಗೆ ಮುಂದುವರಿದದ್ದು – ಇದೆಲ್ಲ ಇತಿಹಾಸ.

ಪಶ್ಚಿಮ ಯೂರೋಪಿನ ಪ್ರಭಾವವಲಯ ನಾಲ್ಕೈದು ನೂರು ವರ್ಷ ಕಾಲ ಜಗತ್ತಿನ ಮೂಲೆಮೂಲೆಗೆ ಹರಡಲು ಉಪಸ್ತಂಭಕವಾಗಿ ಒದಗಿದ ಒಂದು ಸಾಧನವೆಂದರೆ ವಿಕೃತಗೊಳಿಸಲ್ಪಟ್ಟ ಪೂರ್ವೇತಿಹಾಸ.

ಈಗ ಹಾಸ್ಯಾಸ್ಪದ ಎನಿಸಬಹುದಾದರೂ (ಭಾಗಶಃ ಬೈಬಲ್-ಆಧಾರಿತವಾಗಿ) ಪಶ್ಚಿಮ ಯೂರೋಪಿನವರು ಅವಲಂಬಿಸಿದ ಒಂದು ಧೋರಣೆಯೆಂದರೆ – ಇಡೀ ಜಗತ್ತು ಅವರಿಗೆ ಎಂದರೆ ಪಶ್ಚಿಮ ಯೂರೋಪಿನವರಿಗೆ ಅವರ ಪೂರ್ವಜರಿಂದ ಬಂದಿದ್ದ ಜಹಗೀರು – ಎಂಬುದು. ಈ ತಳಹದಿಯ ಮೇಲೆಯೆ ಅವರು ಚರಿತ್ರೆಯನ್ನು ಬರೆಯಿಸುತ್ತಹೋದರು.

ಈ ವಿಕೃತೀಕರಣದ ಪರಿಣಾಮ ಕೇವಲ ಬೌದ್ಧಿಕ ಕ್ಷೇತ್ರಕ್ಕೆ ಪರಿಮಿತವಾಗಲಿಲ್ಲ; ರಾಜ್ಯಾಧಿಕಾರ ಕ್ಷೇತ್ರಕ್ಕೂ ಹರಡಿತು; ಲಕ್ಷಲಕ್ಷ ಸಂಖ್ಯೆಯ ನರಸಂಹಾರಕ್ಕೂ ಕಾರಣವಾಯಿತು – ಆಸ್ಟ್ರೇಲಿಯ, ಲ್ಯಾಟಿನ್ ಅಮೆರಿಕ ಮೊದಲಾದೆಡೆ.

ಇಂಗ್ಲೆಂಡಿನ ಔದ್ಯೋಗೀಕರಣಕ್ಕೆ ಬಂಡವಾಳವಾದದ್ದು ಪ್ಲಾಸಿಯ ಲೂಟಿ. ಇಂಗ್ಲೆಂಡಿನ ಸೇನೆಯ ಆಧುನಿಕೀಕರಣಕ್ಕೆ ಬಂಡವಾಳವಾದದ್ದು ಮರಾಠಾ ಸಾಮ್ರಾಜ್ಯದ ಲೂಟಿ. ಈ ಹಲವಾರು ಆಧಾರಭೂತ ಸತ್ಯಸಂಗತಿಗಳನ್ನು ಈಗಲೂ ಯಾವ ಪಾಠ್ಯಗಳೂ ನಿಸ್ಸಂಕೋಚವಾಗಿ ಹೇಳುತ್ತಿಲ್ಲವೆಂಬುದು ವಿಸ್ಮಯಕರವಲ್ಲವೆ?

ಭಾರತದಲ್ಲಿ ಮಾತ್ರವಲ್ಲ. ಜಗತ್ತಿನಲ್ಲಿ ಎಲ್ಲೆಲ್ಲಿ ವಸಾಹತುಶಾಹಿಯು ಏರ್ಪಟ್ಟಿತೋ ಅಲ್ಲೆಲ್ಲ ಇದೇ ಬಗೆಯ ಇತಿಹಾಸ-ವಿಕೃತೀಕರಣ ಕೆಲಸಮಾಡಿದೆ.

ಸಾಮ್ರಾಜ್ಯ-ಪ್ರವರ್ತಿತ ಮಾನಸಿಕತೆಯಿಂದ ಹೊರಬರುವುದು ದುಷ್ಕರವೆನಿಸಿರುವ ಸುಮಾರು ೫೦ ದೇಶಗಳೇ ಇವೆ. ಆ ಹತ್ತಾರೆಡೆಗಳಲ್ಲಿಯೂ ಸ್ವಂತ ಅಸ್ಮಿತೆಯ ಪುನಃಸ್ಥಾಪನಪ್ರಯತ್ನಗಳು ನಡೆದಿವೆ. ಹೀಗಿರುವುದರಿಂದ ಭಾರತದಲ್ಲಿ ನಡೆದಿರುವ ನಿಜೇತಿಹಾಸಾನ್ವೇಷಣೆ ಯಾರೋ ಕೆಲವರು ಮಂದಬುದ್ಧಿಯವರಿಂದ ನಡೆದಿದೆಯೆಂದು ಭಾವಿಸಲು ಕಾರಣವಿಲ್ಲ. ಆಸ್ಟ್ರೇಲಿಯ, ಇಡೀ ದಕ್ಷಿಣೇಷ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕ – ಮೊದಲಾದ ಹತ್ತಾರು ದೇಶಗಳು ಇದೇ ಸವಾಲನ್ನು ಎದುರಿಸಿವೆ.

ಸಾಂಸ್ಕೃತಿಕವಾಗಿಯೂ ವ್ಯಾವಹಾರಿಕವಾಗಿಯೂ ಜಗತ್ತಿನಲ್ಲಿ ಭಾರತಕ್ಕೆ ಇದ್ದ ಉನ್ನತ ಸ್ಥಾನವನ್ನು ಯೂರೋಪಿನ ಶ್ರೇಷ್ಠ ವಿದ್ವಾಂಸರು ಮ್ಯಾಕ್ಸ್‌ಮುಲ್ಲರನಿಗಿಂತ ಎಪ್ಪತ್ತೆಂಬತ್ತು ವರ್ಷ ಹಿಂದೆಯೆ ಮನಗಂಡಿದ್ದರು. ಈಚಿನವರಿಗೆ ವಿಚಿತ್ರವೆನಿಸಬಹುದಾದ ಈ ಸಂಗತಿಗಳನ್ನು ಬುದ್ಧಿಪೂರ್ವಕವಾಗಿ ಅಲ್ಲಗಳೆಯಲು ಮ್ಯಾಕ್ಸ್‌ಮುಲ್ಲರ್ ಮೊದಲಾದವರು ನಡೆಸಿದ ಪ್ರಯತ್ನಗಳನ್ನು `ಬ್ರೇಕಿಂಗ್ ಇಂಡಿಯಾ’ ಗ್ರಂಥ ಪೀಠಿಕಾಭಾಗದಲ್ಲಿಯೆ ಉಲ್ಲೇಖಿಸಿದೆ. ಸ್ವೋಪಜ್ಞ ತ್ರಯಸ್ಥ ವಿದ್ವಾಂಸರಿಗೆ ಇದೆಲ್ಲ ಪರಿಚಿತವೇ ಆಗಿದ್ದರೂ, ಇವು ಜನಸಾಮಾನ್ಯರ ಸ್ತರದಲ್ಲಿ ವ್ಯಾಪಕವಾಗಿ ಪ್ರಚುರಗೊಳ್ಳಬೇಕಾದ ಆವಶ್ಯಕತೆಯಿದೆ.

ಯೂರೋಪಿನ ಆಧುನಿಕೀಕರಣದ ಎಷ್ಟೋ ಅಂಶಗಳು ಭಾರತದಿಂದ ಪ್ರೇರಿತವಾಗಿದ್ದವು ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದ ೧೮೨೯ಕ್ಕೆ ಹಿಂದೆ ಇದ್ದ ಫ್ರೆಡ್ರಿಕ್ ಶ್ಲೆಗೆಲ್ (Friedrich Schlegel) ಮೊದಲಾದವರ ಹೆಸರುಗಳು ಈಚಿನ ಸಾಮಾನ್ಯ ಅಕ್ಷರಸ್ಥರಿಗೂ ಪರಿಚಿತವಿರಲಾರದು. ಇತಿಹಾಸದ ಈ ಪಾರ್ಶ್ವಭೂಮಿಗೆ ಗಮನ ಸೆಳೆದು `ಬ್ರೇಕಿಂಗ್ ಇಂಡಿಯಾ’ ಉಪಕರಿಸಿದೆ. ಜರ್ಮನಿ-ಭಾರತಗಳ ನಡುವೆ ಸಂಸ್ಕೃತ ಭಾಷಾ-ಸಾಹಿತ್ಯ ಸಂದರ್ಭದಲ್ಲಿ ಏರ್ಪಟ್ಟ ನಂಟಸ್ತಿಕೆಗೂ ಭೂಮಿಕೆಯಾದದ್ದು ಮೇಲೆ ಹೇಳಿದ ಸಂದರ್ಭ.

ಸನಾತನಭಾರತದ ಪ್ರಾಚೀನತೆಯನ್ನು ಅಲ್ಲಗಳೆಯಬೇಕು ಎಂಬ ಉದ್ದೇಶದಿಂದ ಪ್ರೇರಿತವಾದದ್ದು ಸಂಪೂರ್ಣ ನಿರಾಧಾರವಾದ `ಆರ್ಯ ಆಕ್ರಮಣ’ ವಾದ.

ಇತಿಹಾಸಭಂಜನ

ಆರ್ಯರೂ ದ್ರಾವಿಡರೂ ಪ್ರತ್ಯೇಕ ಜನಾಂಗಗಳವರು, ಆರ್ಯರ ವಂಶಿಕರಾದ ಭಾರತೀಯ ಸಮಾಜೋನ್ನತವರ್ಗಗಳ ವರ್ತನೆಯೇ ಈಗಿನ ಎಲ್ಲ ಸಾಮಾಜಿಕ ಅಸ್ತವ್ಯಸ್ತತೆಗಳಿಗೆ ಕಾರಣ – ಎಂಬ ಮಂಡನೆ ಕಳೆದ ನೂರೈವತ್ತು ವರ್ಷಗಳಿಂದ ಪ್ರಚಲಿತಗೊಂಡಿದೆ. ಮೊದಲಿಗೆ ಸಾಮ್ರಾಜ್ಯಶಾಹಿಯ ದೃಢೀಕರಣಕ್ಕಾಗಿ ಐರೋಪ್ಯರಿಂದ ಪ್ರವರ್ತಿತವಾದ ಈ ವಾದಸರಣಿ ಅನಂತರದ ಕಾಲದಲ್ಲಿ ತಮಿಳುನಾಡು ರಾಜಕಾರಣಕ್ಕೆ ಅವಲಂಬವಾಗಿ ಬಳಕೆಯಾಯಿತು. ವಿವಿಧ ಜನಸಮುದಾಯಗಳ ನಡುವೆ ಪ್ರತ್ಯೇಕತಾಭಾವನೆಯನ್ನು ಬೆಳೆಸಲು ಈ ಕಲ್ಪಿತವಾದವು ಒದಗಿಬಂದಿತು. ಈ ಪ್ರಕ್ರಿಯೆ ಎಷ್ಟು ದೂರ ಸಾಗಿತೆಂದರೆ, ಇಡೀ ಭಾರತೀಯ ಸಮಾಜ ಗೌರವಿಸುವ ರಾಮಾಯಣಾದಿ ವಾಙ್ಮಯಕ್ಕೂ ಬೇರೆ ಬಣ್ಣ ಬಳಿಯಲಾಯಿತು. ಆಧಾರವಿಲ್ಲದ ಈ ವಿಕೃತ ಮಂಡನೆಗಳು ನಿರ್ಭಿಡೆಯಾಗಿ ಮುಂದುವರಿದುದಕ್ಕೆ ಕಾರಣಗಳು ಹಲವು: (೧) ಇದರ ಪ್ರವರ್ತನೆಗೆ ರಾಜಕೀಯಾಧಿಕಾರವು ಪೋಷಣೆ ನೀಡಿದುದು; (೨) ದ್ವೇಷದ ಆಯಾಮವನ್ನು ಒಳಗೊಂಡ ಯಾವುದೇ ಧೋರಣೆ ಬೇಗ ಅನುಯಾಯಿಗಳನ್ನು ಪಡೆದುಕೊಳ್ಳುವುದು; (೩) ಸಮಾಜದಲ್ಲಿ ಒಡಕನ್ನು ಬೆಳೆಸುವ ಯಾವುದೇ ಪ್ರಯತ್ನಗಳಿಗೆ ಅನ್ಯಮತಾವಲಂಬಿಗಳ ಪ್ರಬಲ ಸಮರ್ಥನೆ ದೊರೆಯುವುದು; ಇತ್ಯಾದಿ. ಈ `ದ್ರಾವಿಡ ಅಭಿಯಾನ’ದ ಒಂದು ಪ್ರಮುಖ ಮಜಲು – ಪಾದರಿ ರಾಬರ್ಟ್ ಕಾಲ್‌ಡ್ವೆಲ್ ಆಧಾರರಹಿತ ಭಾಷಾಭೇದಗಳನ್ನೂ ಅದರ ಅನುಮಿತಿಯಾಗಿ ಜನಾಂಗಭೇದವಾದವನ್ನೂ ಹುಟ್ಟುಹಾಕಿದುದು. ಈ ದುಸ್ತರ್ಕವನ್ನು ತಮ್ಮ ಅನುಕೂಲಕ್ಕೆ ಕ್ರೈಸ್ತವಲಯಗಳು ಕ್ಷಿಪ್ರವಾಗಿ ಬಳಸಿಕೊಂಡವು. ಹೊಸ ಇತಿಹಾಸವೇ ರಚನೆಗೊಂಡಿತು; ಶೈವಸಿದ್ಧಾಂತವು ಹಿಂದೂಧರ್ಮದ ಭಾಗವೇ ಅಲ್ಲ, ಅದು ಕ್ರೈಸ್ತಮತಪ್ರೇರಿತ – ಎಂಬಂತಹ ವಿಚಿತ್ರವಾದಗಳನ್ನು ತೇಲಿಬಿಡಲಾಯಿತು; ರಾಮಾಯಣಕಥೆಯನ್ನೇ ವಿಲೋಮಗೊಳಿಸಲಾಯಿತು – ರಾವಣನು ಉದಾತ್ತಗುಣಗಳ ಆಗರ, ಇತ್ಯಾದಿ. ೧೯೬೦ರ ದಶಕದಲ್ಲಿ `ರಾವಣ ಕಾವ್ಯಂ’ ಎಂಬ ರಚನೆಯನ್ನೂ ಡಿಎಂಕೆ ಸರ್ಕಾರವೇ ಪ್ರಸಿದ್ಧಿಸಿತು. ಇಂತಹ ಪ್ರವರ್ತನೆಗಳೊಡಗೂಡಿ ಸಾಮಾಜಿಕ ಅಸ್ತವ್ಯಸ್ತತೆಗಳು ಹರಡಿದವು.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಸೆಕ್ಯುಲರಿಸಂ ಎಂಬ ನಿಧರ್ಮೀಯತೆಯೂ ಉದಯಿಸಿ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣವಾಗಿಸಿತು.

ಹಿಂದೆ ವಸಾಹತುಶಾಹಿಗೆ ಉಪಸ್ತಂಭಕವಾಗಿ `ಅಟ್ರಾಸಿಟಿ ಲಿಟರೇಚರ್’ ಎಂಬ ಪ್ರಕಾರವು ಹರಡಿತ್ತು; ಯಾವುದೋ ಜನವರ್ಗದ ಮೇಲೆ ಇನ್ನೊಂದು ವರ್ಗದ ಆಕ್ರಮಣವೂ ಶೋಷಣೆಯೂ ಇತಿಹಾಸದುದ್ದಕ್ಕೂ ನಡೆದಿದೆ – ಎಂಬ ಜಾಡಿನದು. ಸ್ವಾತಂತ್ರ್ಯೋತ್ತರ ವಿಘಟನೋತ್ಸುಕರು ಈ ಸಾಹಿತ್ಯತಂತ್ರವನ್ನೂ ಹುಲುಸಾಗಿ ಬೆಳೆಸಿದರು, ಈಗಲೂ ಬೆಳೆಸುತ್ತಿದ್ದಾರೆ.

ಪಟ್ಟಭದ್ರ ಬೌದ್ಧಿಕ ವಲಯಗಳು, ಮಾಧ್ಯಮಗಳು, ರಾಜ್ಯಾಧಿಕಾರ – ಈ ಮೂರೂ ಅಂಗಗಳ ಬೆಂಬಲ ಪಡೆದ ವ್ಯಾಪಕ ವ್ಯೂಹದ ಎದುರಿಗೆ ಸತ್ಯದ ಧ್ವನಿಯೇ ಕ್ಷೀಣಿಸಿದ ಸ್ಥಿತಿ ತಲೆದೋರಿತ್ತು. ಆದರೆ ಆ ಕೂಟಕ್ಕೆ ಸಮರ್ಥ ಸವಾಲಾಗಬಲ್ಲ ಪ್ರತಿಭಾರ ಏರ್ಪಡಲು ದೀರ್ಘಕಾಲ ಹಿಡಿಯಿತು.

ಈ ಸಾಂಸ್ಕೃತಿಕ ಆಘಾತ ಎಷ್ಟು ದೂರ ನಡೆದಿದೆ ಎಂಬುದರ ಕಲ್ಪನೆ ಜನಸಾಮಾನ್ಯರಿಗೆ ಇರಲಾರದು.

ತೀವ್ರ ವಿದೇಶೀ ಆಕ್ರಮಣಗಳ ಕರಾಳ ಕಾಲಖಂಡದಲ್ಲಿ ಇಲ್ಲಿಯ ಸಂಸ್ಕೃತಿಗೆ ಕವಚವಾಗಿ ಏರ್ಪಟ್ಟ ಭಕ್ತಿಪಂಥವನ್ನೇ ಛೆಕೊಸ್ಲೊವಾಕಿಯಾದ ಕೆಮಿಲ್ ಜ್ವೆಲೆಬಿಲ್ (Kamil Zvelebil) ಮೊದಲಾದವರು ಅವಹೇಳನ ಮಾಡಿದ್ದಾರೆ; ಭಾರತೀಯರನ್ನು `ಆರ್ಯ’-`ದ್ರಾವಿಡ’ರೆಂದು ಹೋಳುಮಾಡುವ ಪ್ರಯಾಸಗಳಲ್ಲಿ ತೊಡಗಿದ್ದಾರೆ. ಮಾತ್ರವಲ್ಲದೆ ದಕ್ಷಿಣಭಾರತೀಯರಲ್ಲಿ ಬುದ್ಧಿಭೇದವನ್ನುಂಟುಮಾಡಲು ಮುರುಗ ಅಥವಾ ಸುಬ್ರಹ್ಮಣ್ಯನು ಮೂಲತಃ ಒಬ್ಬ ಕ್ರೈಸ್ತ ದೇವತೆ – ಇಂತಹ ಆಭಾಸದ ಮಂಡನೆಗಳ ದುಸ್ಸಾಹಸಗಳು `ಇನ್‌ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್’ನಂತಹ ಪ್ರತಿಷ್ಠಿತ ಸಂಸ್ಥೆಯ ಆಶ್ರಯದಲ್ಲಿಯೆ ಆಗುತ್ತಿವೆಯೆಂದರೆ ಏನು ಹೇಳಬೇಕು?

ಈ ಸಾಂಸ್ಕೃತಿಕ ದುರಾಕ್ರಮಣಸರಣಿಯ ಈಚಿನ ಒಂದು ಅಧ್ಯಾಯವೆಂದರೆ ಚೆನ್ನೈ ಅಡಯಾರ್ ಕಲಾಕ್ಷೇತ್ರದಂತಹ `ಐಕಾನಿಕ್’ ಸಂಸ್ಥೆಯನ್ನೇ ವಿರೂಪಗೊಳಿಸಿದುದು.

ಇಂತಹ ಅವಾಂತರಗಳ ನಡುವೆ ತಮ್ಮ ಸ್ವೀಯ ಸಮುದಾಯವನ್ನೇ ಎದುರುಹಾಕಿಕೊಂಡು ತಥೋಕ್ತ `ಅಸ್ಪೃಶ್ಯ’ ವರ್ಗಗಳ ಉಚ್ಛ್ರಾಯಕ್ಕಾಗಿ ಶ್ರಮಿಸಿದವರು ಸುಬ್ರಹ್ಮಣ್ಯ ಭಾರತಿ, ರಾಜಾಜಿ, ರಮಣಶಿಷ್ಯರಾದ ಕಾವ್ಯಕಂಠ ಗಣಪತಿ ಮುನಿಗಳು ಮೊದಲಾದವರು – ಎಂಬ ಇತಿಹಾಸವೂ ವಿಸ್ಮರಣೆಗೆ ಒಳಗಾಗಿದೆ. ಹೀಗೆ ಇತಿಹಾಸಭಂಜನವೂ ಧಾರಾಳವಾಗಿಯೆ ನಡೆದಿದೆ.

ಸತ್ಯಶೋಧನ ಅಭಿಯಾನ

ಸಮಾಜವನ್ನು ಒಳಗಿಂದೊಳಗೆ ವಿಘಟಿತಗೊಳಿಸುವ ಹಲವು ವಲಯಗಳ ಸತತ ಪ್ರಯಾಸಗಳ ಬಗೆಗೆ ಸಾಮಾನ್ಯ ಜನತೆಗೆ ಅರಿವಿಲ್ಲದೆ ಇಲ್ಲ. ಆದರೆ ಈ ವಿವಿಧ ಬಗೆಯ ಪ್ರಯತ್ನಗಳ ಬೇರು-ಬಿಳಲುಗಳ ಮತ್ತು ಅವುಗಳ ಪರಸ್ಪರ ಸಂಬಂಧಗಳ ಕ್ರೋಡೀಕೃತ ಚಿತ್ರವನ್ನು ತೆರೆದಿಡುವ ಆವಶ್ಯಕತೆ ಇದೆ. ಇದು ಕಷ್ಟದ ಕೆಲಸ ಮಾತ್ರವಲ್ಲ; ಸ್ವಾತಂತ್ರ್ಯೋತ್ತರ ಸನ್ನಿವೇಶದಲ್ಲಿ ಇದು ಪ್ರವಾಹಕ್ಕೆ ಎದುರಾಗಿ ಈಜುವಂತಹದೂ ಆಗಿದೆ. ಇಂತಹ ಸತ್ಯಾನ್ವೇಷಕರು ಉದ್ದಕ್ಕೂ ಸರ್ಕಾರದ, ಸರ್ಕಾರಾವಲಂಬಿ ಅಧಿಷ್ಠಿತವಲಯಗಳ ಮತ್ತು ಮುಖ್ಯಧಾರೆಯ ಮಾಧ್ಯಮಗಳ ವಿರೋಧವನ್ನು ಎದುರಿಸಬೇಕಾಗಿದೆ. ಇಂತಹ ಪ್ರತಿಬಂಧಗಳನ್ನು ಉಪೇಕ್ಷಿಸಿ ಋಜುಮಾರ್ಗದಲ್ಲಿ ಮುಂದೆಸಾಗಲು ದಿಟ್ಟತನವೂ ಪ್ರಖರ ಬೌದ್ಧಿಕ ತೀಕ್ಷ್ಣತೆಯೂ ಶೋಧಪ್ರವೃತ್ತಿಯೂ ಬೇಕಾಗುತ್ತದೆ. ಈ ದುರ್ಗಮವಾದ ಕಾರ್ಯದ ಅನಿವಾರ್ಯತೆಯನ್ನೂ ತುರ್ತನ್ನೂ ಮನಗಂಡ ಹಲವರು ಶ್ರೇಷ್ಠ ಚಿಂತಕರು ಕಳೆದ ನಾಲ್ಕು ದಶಕಗಳಿಂದ ಈ ಋಜುಮಾರ್ಗ ಸತ್ಯಶೋಧನದ ಮತ್ತು ಪ್ರಕಟೀಕರಣದ ಅಭಿಯಾನವನ್ನು ಸತತವಾಗಿಯೂ ದೃಢವಾಗಿಯೂ ನಡೆಸಿದ್ದಾರೆ. ಈ ಕಾರ್ಯದಲ್ಲಿ `ವಾಯ್ಸ್ ಆಫ್ ಇಂಡಿಯಾ’ ಪ್ರವರ್ತಕರಾದ ರಾಮಸ್ವರೂಪ್ ಮತ್ತು ಸೀತಾರಾಮ ಗೋಯಲ್, ಅರುಣ್ ಶೌರಿ, ಡಾ|| ನವರತ್ನ ಎಸ್. ರಾಜಾರಾಮ್, ಡೇವಿಡ್ ಫ್ರಾಲೀ ಅವರ ಮತ್ತು ಕರ್ನಾಟಕದ ಸ್ತರದಲ್ಲಿ ಡಾ|| ಎಂ. ಚಿದಾನಂದಮೂರ್ತಿ, ಡಾ|| ಕೆ.ಎಸ್. ನಾರಾಯಣಾಚಾರ್ಯ, ಡಾ|| ಎಸ್.ಎಲ್. ಭೈರಪ್ಪ, ಶತಾವಧಾನಿ ಡಾ|| ರಾ. ಗಣೇಶ್ ಮೊದಲಾದವರ ಯೋಗದಾನ ಮಹತ್ತ್ವದ್ದಿದೆ. ಇತಿಹಾಸ-ಸಮಾಜಶಾಸ್ತ್ರಾದಿ ಕ್ಷೇತ್ರಗಳಲ್ಲಿ ಮಡುಗಟ್ಟಿರುವ ವಿಘಾತಗಳನ್ನು ಪ್ರಾಮಾಣಿಕ ಪಾಂಡಿತ್ಯದ ಮತ್ತು ಸಮಾಜಸ್ವಾಸ್ಥ್ಯಚಿಂತನೆಯ ಆಧಾರದ ಮೇಲೆ ಸಮರ್ಥವಾಗಿ ಎದುರಿಸಿ ಈ ಧೀಮಂತರೆಲ್ಲ ಸಮಾಜಕ್ಕೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ವಿದ್ವಾಂಸರೆಲ್ಲ ಇಂದಿನ ಸಮಾಜದ ಅಭಿವಂದನೆಗೆ ಅರ್ಹರಾಗಿದ್ದಾರೆ.

ಮೂರು ದಶಕಗಳ ಹಿಂದೆ ಕ್ಷೀಣಸ್ಥಿತಿಯಲ್ಲಿದ್ದ ಈ ಸತ್ಯಶೋಧಕ ಧ್ವನಿಗೆ ಈಗ ಸ್ವರಭಾರ ದೊರೆಯುತ್ತಿರುವುದೂ, ಈ ಧ್ವನಿಗೆ ಹೆಚ್ಚುಹೆಚ್ಚು ಸ್ವರಗಳು ಸೇರತೊಡಗಿರುವುದೂ ಶುಭಸೂಚನೆ. ಈ ಚಿಂತನಸ್ಫುಟತೆಯ ಪರಿಣಾಮ ಮುಂದಿನ ದಿನಗಳಲ್ಲಿ ಹೆಚ್ಚು ಪ್ರಖರವಾಗಿ ಗೋಚರಿಸುವ ಸಂಕೇತಗಳು ಈಗ ಕಾಣುತ್ತಿವೆ. ಈ ಸಮಸಾಮಯಿಕ ವೈಚಾರಿಕ ಅಭಿಯಾನಕ್ಕೆ ತಮ್ಮ `ಬ್ರೇಕಿಂಗ್ ಇಂಡಿಯಾ’ (`Breaking India’) ಹಾಗೂ ಇತರ ಬರಹಗಳಿಂದ ವೇಗವನ್ನು ಉಂಟುಮಾಡಿದ್ದಾರೆ, ಡಾ|| ರಾಜೀವ ಮಲ್ಹೋತ್ರಾ. ಅರವಿಂದನ್ ನೀಲಕಂಡನ್ ಅವರೊಡಗೂಡಿ ರಾಜೀವ್ ಮಲ್ಹೋತ್ರಾ ಅವರು ಈಗ್ಗೆ ನಾಲ್ಕು ವರ್ಷ ಹಿಂದೆ ಹೊರತಂದ ಈ ಸಂಶೋಧನಕೃತಿಯು ಕಳೆದೊಂದು ದಶಕದ ಬಹುಚರ್ಚಿತ ಗ್ರಂಥಗಳಲ್ಲಿ ಒಂದೆನಿಸಿದೆ.

ವಿಶ್ಲೇಷಣೆಯಮಟ್ಟಿಗೆ ಈ ೬೫೦ ಪುಟಗಳ ಬೃಹತ್ ಶೋಧಗ್ರಂಥವು Dravidian and Dalit Fault-lines ಕುರಿತದ್ದಾಗಿದ್ದರೂ, ಕ್ರೈಸ್ತ-ಇಸ್ಲಾಮೀ-ಮಾರ್ಕ್ಸಿಸ್ಟ್ ವ್ಯೂಹಗಳನ್ನೂ ಒಳಗೊಂಡಂತೆ ಪ್ರಕೃತ ಸನ್ನಿವೇಶದ ಸಮಗ್ರ ಚಿತ್ರವನ್ನೇ ಇದು ಪ್ರಾತಿನಿಧಿಕವಾಗಿ ಸ್ಫೋಟಗೊಳಿಸಿದೆ.

ವಿಕೃತ ಸೆಕ್ಯುಲರಿಸಂಗೆ ಅನುಗುಣವಾದ ಧೋರಣೆಗಳು ಸತತವಾಗಿ ಅಮಲುಗೊಂಡಿರುವುದು, ವಿದ್ವದ್‌ವಲಯದಲ್ಲಿ ನಿರಸ್ತವಾಗಿರುವ `ಆರ್ಯ ಆಕ್ರಮಣ’ ಮತ್ತಿತರ ಸಂಗತಿಗಳೂ ಇಸ್ಲಾಮೀ ದೊರೆಗಳ ವೈಭವೀಕರಣವೂ ರಾಷ್ಟ್ರೀಯತಾಪರ ಸಾಧಕರ ಬಗೆಗೆ ಅಲಕ್ಷ್ಯವೂ ಶಾಲಾಪಾಠ್ಯಗಳಲ್ಲಿ ಮುಂದುವರಿದಿರುವುದು; – ಇವನ್ನು ಗಮನಿಸುವಾಗ, ಸಮಾಜ ವಿಘಟನೋದ್ಯಮದಲ್ಲಿ ಹಿಂದಿನ ಸರ್ಕಾರಗಳ ಪಾತ್ರವಿರುವುದು ನಿಚ್ಚಳಗೊಳ್ಳುತ್ತದೆ. ದೇಶೀಯರ ಅತ್ಯುಚ್ಚ ಸಾಧನೆಗಳೂ ಅಲಕ್ಷಿತವಾಗಿವೆ, ಇಲ್ಲವೇ ವಿಕೃತವಾಗಿ ವ್ಯಾಖ್ಯಾನಗೊಂಡಿವೆ. ಲೂಟಿಗಾರರು ವೈಭವೀಕೃತರಾಗಿದ್ದಾರೆ. ಬ್ರಿಟಿಷ್ ಆಳ್ವಿಕೆಗೆ ಹಿಂದಿನ ಪರ್ವದಲ್ಲಿ ಭಾರತ ಜಗತ್ತಿನಲ್ಲಿಯೆ ಅಗ್ರಣಿಯ ಸ್ಥಾನದಲ್ಲಿದ್ದುದನ್ನು ಯೂರೋಪಿನ ಶ್ರೇಷ್ಠ ವಿದ್ವಾಂಸರೇ ಪ್ರತಿಪಾದಿಸಿದ್ದಿದೆ. ಆದರೆ ಯಾವತ್ತೂ ಇತಿಹಾಸವನ್ನು ಬರೆಯುವವರು – ಬರೆಯಿಸುವವರು ವಿಜೇತರೇ ಎಂಬ ನ್ಯಾಯದಂತೆ, ಮೇಲಣ ತಥ್ಯಕ್ಕೆ ವಿರುದ್ಧವಾದ ಮಂಡನೆಗಳೇ ಅಧಿಕಾರಸ್ಥ ವಲಯಗಳಿಂದ ಪ್ರಚಲನೆಗೊಂಡವು. ಈ ಅಸಮತೋಲನವು ಸ್ವಾತಂತ್ರ್ಯೋತ್ತರ ಕಾಲದಲ್ಲಿಯೂ ಮುಂದುವರಿದಿರುವುದು ದೊಡ್ಡ ವಿಪರ್ಯಾಸ.

ಭಾರತವನ್ನು ವಿಘಟಿತಗೊಳಿಸುವುದರಲ್ಲಿ ಯಾವಾವ ಶಕ್ತಿಗಳು ಉದ್ಯುಕ್ತವಾಗಿವೆ ಮತ್ತು ಅವೆಲ್ಲ ಹೇಗೆ ಒಂದರೊಡನೊಂದು ಹೊಂದಿಕೊಂಡು ಕಾರ್ಯಗತವಾಗಿವೆ ಎಂಬುದನ್ನು `ಬ್ರೇಕಿಂಗ್ ಇಂಡಿಯಾ’ ವಿಶದವಾಗಿ ತೆರೆದಿರಿಸಿದೆ. ಜಿಹಾದಿಗಳು, ಮಾವೋವಾದಿಗಳು, ಉಗ್ರವಾದಿಗಳು, ಕೆಲವು ತಥೋಕ್ತ `ಬುದ್ಧಿಜೀವಿ’ ವಲಯಗಳು – ಇವರೆಲ್ಲರ ಒಕ್ಕೂಟವನ್ನು ನಿಷ್ಪ್ರಭಾವಗೊಳಿಸುವುದು ಯಾವುದೇ ಸರ್ಕಾರಕ್ಕೆ ಆದ್ಯತೆಯ ವಿಷಯ ಆಗಬೇಕಾಗಿತ್ತು. ಹಾಗೆ ಆಗದಿರುವುದು ದೊಡ್ಡ ದುರಂತ. ಈ ಶಿಥಿಲತೆಯ ಕಾರಣದಿಂದಾಗಿ ಸಭ್ಯಸಮಾಜದ ಮೇಲೆ ಆಕ್ರಮಣಗಳು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಈ ಪ್ರಕ್ರಿಯೆಯ ಬೇರುಗಳನ್ನು ಮನವರಿಕೆ ಮಾಡಿಸಿ `ಬ್ರೇಕಿಂಗ್ ಇಂಡಿಯಾ’ ಉಪಕರಿಸಿದೆ.

ಬೆಂಗಳೂರು, ಮುಂಬಯಿ, ಅಹಮದಾಬಾದ್ ಮೊದಲಾದೆಡೆ ಬಾಂಬ್ ಸ್ಫೋಟವನ್ನು ಆಯೋಜಿಸಿದ ಯಾಸೀನ್ ಭಟ್ಕಳ್ ಸೆರೆಸಿಕ್ಕಿದುದು ನೇಪಾಳ ಗಡಿಯಲ್ಲಿ. ಈ ಜಾಲ ಎಷ್ಟು ವಿಸ್ತಾರವಾಗಿ ಹರಡಿದೆ ಎಂದು ಇದರಿಂದ ಊಹಿಸಬಹುದು. ಇಷ್ಟಾಗಿಯೂ, ಈ ಕಾರ್ಯಾಚರಣೆಗಳು ಮಾವೋವಾದಿಗಳಿಂದಲೂ ಭೂಗತ ಚರ್ಚ್-ಪೋಷಿತ ಸಂಘಟನೆಗಳಿಂದಲೂ ಬೆಂಬಲಿತವಾಗಿವೆ ಎಂಬುದು ವಿದಿತವೇ ಆಗಿದ್ದರೂ, ಅದು ಎಲ್ಲಿಯೂ ಉಲ್ಲೇಖಗೊಳ್ಳುವುದೇ ಇಲ್ಲ. ಈಗ್ಗೆ ೧೫ ವರ್ಷ ಹಿಂದೆ ಅಪಹೃತವಾದ ಲಾಹೋರಿನತ್ತ ಹೊರಟಿದ್ದ ವಿಮಾನವು ನೇಪಾಳದಿಂದ ಪ್ರಸ್ಥಾನಗೊಂಡಿತ್ತೆಂಬುದು ಆಕಸ್ಮಿಕವಲ್ಲ.

ಕಳೆದೆರಡು ದಶಕಗಳಲ್ಲಿ ನೇಪಾಳ ಭಾಗದಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಬೇರೂರಿ ಸಕ್ರಿಯವಾಗಿದೆ. ಇದುವರೆಗೆ ಆಗೊಮ್ಮೆ ಈಗೊಮ್ಮೆ ವಿಷಯದ ಮೇಲ್ಪದರವನ್ನಷ್ಟೆ ಕುರಿತ ಮಾತು ಕೇಳಿಬಂದಿದೆ. ಆದರೆ ಈ ಅತ್ಯಂತ ಗಂಭೀರ ವಿಷಯವನ್ನು ಆಳಕ್ಕೆ ಹೋಗಿ ಅರಿತುಕೊಳ್ಳಬೇಕಾಗಿದೆ. ನೋಡಿಯೂ ನೋಡದಂತೆ ಇರುವುದು ಗಂಭೀರ ಸಮಸ್ಯೆಗೆ ಪರಿಹಾರ ಆಗಲಾರದು. ಈ ಬೆಳವಣಿಗೆಗಳ ವಿರುದ್ಧ ಮಹಾಸಮರವೇ ನಡೆಯಬೇಕಾಗಿದೆ.

ಏಕತ್ರಿತ ಭಂಜಕಶಕ್ತಿ

ಈಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಮಾವೋವಾದಿ ಮತ್ತು ಮಿಷನರಿಗಳ ಸಾಹಚರ್ಯದ ಪುರಾವೆಗಳನ್ನು `ಬ್ರೇಕಿಂಗ್ ಇಂಡಿಯಾ’ ನೀಡಿದೆ. ಐತಿಹಾಸಿಕವಾಗಿ ಪರಸ್ಪರ ವಿರುದ್ಧಗಳಾಗಿದ್ದ ವಲಯಗಳು ಭಾರತ-ಭಂಜನದ ಗುರಿಯಲ್ಲಿ ಏಕತ್ರಿತರಾಗಿರುವುದು ಗಮನಿಸಬೇಕಾದ ಸಂಗತಿ. ಜಗತ್ತಿನ ಹಲವಾರೆಡೆಗಳಲ್ಲಿ ಇದೇ ವಿದ್ಯಮಾನ ಕಾಣುತ್ತಿದೆ. ಹೀಗೆ `ಬ್ರೇಕಿಂಗ್ ಇಂಡಿಯಾ’ ಗ್ರಂಥದ ಸಂದೇಶದ ಪ್ರಸ್ತುತತೆ ಭಾರತದಾಚೆಗೂ ಇದೆ. ಭಾರತದೊಳಗಿನ ಸಾಮಾಜಿಕ ಸ್ಥಿತಿ ಹೆಚ್ಚು ಅಸ್ತವ್ಯಸ್ತಗೊಳ್ಳುತ್ತ ಸಾಗಿರುವುದಲ್ಲದೆ ದೊಡ್ಡ ಪ್ರಮಾಣದಲ್ಲಿ ಆತಂಕವಾದವು ಆಮದಾಗುತ್ತಲೂ ಇದೆ. ಈ ಗಂಭೀರ ಸ್ಥಿತಿಗೆ ಅನುಗುಣವಾದ ಪ್ರಮಾಣದ ಪ್ರತಿಕ್ರಿಯೆ ಇನ್ನೂ ಏರ್ಪಡಬೇಕಾಗಿದೆ.

ಮಾಧ್ಯಮಗಳಲ್ಲಿ ಪರಿಚಿತವೇ ಆಗಿರುವ ಮತ್ತು ಭಾರತ-ಭಂಜನಕ್ಕೆ ಪೋಷಣೆ ನೀಡುತ್ತಿರುವ ಪ್ರಮುಖ ಸಂಘಟನೆಗಳ ಯಾದಿಯನ್ನೂ `ಬ್ರೇಕಿಂಗ್ ಇಂಡಿಯಾ’ ಗ್ರಂಥದಲ್ಲಿ ನೀಡಲಾಗಿದೆ. ಪೂರ್ವಾಂಚಲಭಾರತದ ಸ್ಥಳೀಯ ಜನಜಾತಿಗಳಿಗೂ ವಿಘಟನಾಸಕ್ತ ಅಮೆರಿಕ ಶಕ್ತಿಗಳಿಗೂ ನಡುವೆ ಸಂಪರ್ಕಗಳನ್ನೇರ್ಪಡಿಸುವ ಕಾರ್ಯಾವಳಿ ಪ್ರದೀಪ್ ನಿನಾನ್ ಥಾಮಸ್ ಮತ್ತಿತರರಿಂದ ನಡೆಯುತ್ತಿರುವುದು ಹೊರಪಟ್ಟಿದೆ.

ಹಿಂದೆ ಪೂರ್ವಾಂಚಲದಲ್ಲಿ ಅಧಿಕಪ್ರಮಾಣದಲ್ಲಿದ್ದ ಚರ್ಚ್ ಚಟುವಟಿಕೆ ಈಚಿನ ವರ್ಷಗಳಲ್ಲಿ ಒಡಿಶಾ ಭಾಗಗಳಿಗೂ ಹರಡಿದೆ. ಈ ಚಟುವಟಿಕೆಗಳಿಗೆ ಕಮ್ಯೂನಿಸ್ಟರ ಬೆಂಬಲವನ್ನು ಗಳಿಸುವ ವ್ಯಾಪಕ ಪ್ರಯತ್ನಗಳಲ್ಲಿ ರವಿ ಜಕರಿಯಾ ತಂಡ ಸಕ್ರಿಯವಾಗಿದೆ.

ಅನೇಕ ವರ್ಷಗಳಿಂದ ಮತಾಂತರಕಾರ್ಯದಲ್ಲಿ ತೊಡಗಿರುವ `ವರ್ಲ್ಡ್ ವಿಷನ್’ ಸಂಘಟನೆಗೆ ಅಮೆರಿಕದ `ಸಿಐಎ’ಯ ನಂಟಸ್ತಿಕೆ ಇದೆ. ಭಾರತದ ಬಹುಪ್ರಸಾರ ಪತ್ರಿಕೆಗಳಲ್ಲಿ ಅರ್ಧದಷ್ಟರ ಸ್ವಾಮ್ಯ ಈಗ ಚರ್ಚ್-ಸಂಬಂಧಿತ ಸಂಸ್ಥೆಗಳ ಕೈಯಲ್ಲಿದೆ.

“ಬಡವರಿಗೆ ನ್ಯಾಯ ದೊರಕಿಸುವುದಕ್ಕಾಗಿ ಎಲ್ಲರೂ ಬಂದೂಕುಧಾರಿಗಳಾಗಿ” ಎಂಬ ಕರೆ ತಥೋಕ್ತ ಪ್ರತಿಷ್ಠಿತ ಸೆಕ್ಯುಲರಿಸ್ಟರಿಂದಲೇ ಹೊರಟ ನಿದರ್ಶನಗಳಿವೆ – ವಿಶೇಷವಾಗಿ ಪುಣೆ, ಮುಂಬಯಿ, ಸೂರತ್ ನಡುವಣ ಭಾಗಗಳಲ್ಲಿ. ಬಂಧಿತ ಉಗ್ರವಾದಿಗಳನ್ನು ಖುಲಾಸೆ ಮಾಡಿಸುವುದರಲ್ಲಿ ಸೆಕ್ಯುಲರಿಸ್ಟರ ಸತತ ಬೆಂಬಲವನ್ನು ಪಡೆಯಲಾಗುತ್ತಿರುವುದು ರಹಸ್ಯವಲ್ಲ. ಇದಕ್ಕೆ ಅಂತಿಮ ಪರಿಹಾರವೆಂದರೆ ಸತ್ಯಾಧಾರಿತ ಇತಿಹಾಸದ ರಚನೆ, ಪ್ರಾಚುರ್ಯ ಮತ್ತು ಕಾರ್ಯಾನ್ವಯ. ಈ ಸಾಂದರ್ಭಿಕತೆಯ ದೃಷ್ಟಿಯಿಂದಲೂ `ಬ್ರೇಕಿಂಗ್ ಇಂಡಿಯಾ’ದಂತಹ ಸಂಶೋಧನಪ್ರಯತ್ನಗಳು ಮಹತ್ತ್ವವನ್ನು ಪಡೆದುಕೊಂಡಿವೆ.

ಕಣ್ತೆರೆಸುವ ಪುಸ್ತಕ

“ಇದೊಂದು ಕಣ್ಣು ತೆರೆಸುವ ಪುಸ್ತಕ. ನಮಗೆ ದೇಶದೊಳಗೇ ಸಾಕಷ್ಟು ಆಂತರಿಕ ಶತ್ರುಗಳಿರುವುದು ಗೊತ್ತಿರುವುದೇ. ಆದರೆ ಭಾರತದೊಳಗಿನ `ಡಮ್ಮಿ’ಗಳನ್ನು ಬಳಸಿಕೊಂಡು ಭಾರತೀಯ ಸಮಾಜವನ್ನು ದುರ್ಬಲಗೊಳಿಸುತ್ತಿರುವ ದೇಶದಾಚೆಯ ಶತ್ರುವಲಯಗಳೂ ಭಾರತದ ಸ್ವಾಯತ್ತತೆಯನ್ನೂ ಸಂಸ್ಕೃತಿಯನ್ನೂ ಭಂಜಿಸುವುದರಲ್ಲಿ ತೊಡಗಿವೆ.”

– ಈ ವಿಶ್ಲೇಷಣೆಯನ್ನು ನೀಡಿದವರು ಖ್ಯಾತ ನ್ಯಾಯವಾದಿ ರಾಮಜೇಠಮಲಾನಿ – `ಬ್ರೇಕಿಂಗ್ ಇಂಡಿಯಾ’ ಮೂಲ ಕೃತಿ ಯನ್ನು ದೆಹಲಿಯಲ್ಲಿ ಈಗ್ಗೆ ನಾಲ್ಕು ವರ್ಷ ಹಿಂದೆ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ (೨೦೧೧ರ ಜನವರಿ ೧೧).

ಈ ವಾಸ್ತವವನ್ನು ಅರಿತಾಗ ಭಾರತವನ್ನು ಕುರಿತ ಸಂವಾದವೆಲ್ಲ ಪರದೇಶೀ ನುಡಿಗಟ್ಟಿನಲ್ಲಿಯೇ ಸದಾ ನಡೆಯುತ್ತಿರುವುದರ ಮರ್ಮ ಬಯಲಾಗುತ್ತದೆ. ತಥಾಕಥಿತ `ದಲಿತ’ ವರ್ಗಗಳನ್ನು ಮುಂದಿರಿಸಿಕೊಂಡು ಭಾರತೀಯ ಸಮಾಜದ ಮೇಲೆ ಸತತವಾಗಿ ನಡೆದಿರುವ ಆಘಾತಗಳು ದೂರಗಾಮಿಯಾದವು. ದುರ್ಬಲರ ಸಬಲೀಕರಣ, ಮಾನವಹಕ್ಕುಗಳ ಸ್ಥಾಪನೆ – ಮೊದಲಾದ ಆಕರ್ಷಕ ಹೆಸರುಗಳಡಿಯಲ್ಲಿ ಈ ಆಘಾತಗಳು ನಡೆದಿವೆ.

ದ್ರಾವಿಡ ಪ್ರತ್ಯೇಕತಾವಾದದ ಒಂದು ಅಂಶವನ್ನು ಕೇಂದ್ರವಾಗಿರಿಸಿಕೊಂಡು ಅದರ ಆಳ-ನೀಳಗಳನ್ನು ಬೆದಕಿದುದರಿಂದ `ಬ್ರೇಕಿಂಗ್ ಇಂಡಿಯಾ’ದಂತಹ ಶೋಧಪೂರ್ವಕ ಹೆಬ್ಬೊತ್ತಿಗೆ ಬರಬೇಕಾಯಿತು. ಇಂತಹ ವಿದ್ಯಮಾನಗಳ ದೊಡ್ಡ ರಾಶಿಯೇ ಎದುರಿಗಿರುವಾಗ, ಈಗ ಯಾವ ಗಾತ್ರದ ವೈಚಾರಿಕ ಸಮರ ನಡೆಯಬೇಕಾದ ಆವಶ್ಯಕತೆ ಇದೆ ಎಂಬುದರ ಕಲ್ಪನೆ ಮೂಡೀತು.

ವಿದ್ವತ್‌ಕ್ಷೇತ್ರದವರಿಂದ ನಡೆಯಬೇಕಾಗಿದ್ದ ಈ ಸಂಶೋಧನಪೂರ್ವಕ ಜನಜಾಗೃತಿ ಅಭಿಯಾನವನ್ನು ಕಾರ್ಪೊರೇಟ್ ವಲಯದ, `ಐಟಿ’ ಕ್ಷೇತ್ರದ ಮತ್ತು ಮಾಧ್ಯಮ ಸಲಹೆಗಾರರೂ ಆಗಿರುವ ರಾಜೀವ ಮಲ್ಹೋತ್ರಾ ಕಳಕಳಿಯಿಂದ ಆಯ್ದುಕೊಂಡು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸಂಸ್ಕೃತಿಯ ದೃಢೀಕರಣದ ಆಶಯದ ಇಂತಹ ಪ್ರಯಾಸಗಳಿಗೆ ಇಡೀ ಭಾರತೀಯ ಸಮಾಜದ ಅಭಿನಂದನೆ ಸಲ್ಲಬೇಕಾಗಿದೆ.

ಅನ್ಯ ಮತಗಳನ್ನೋ ಆಸಕ್ತ ವಿದೇಶೀ ವಲಯಗಳನ್ನೋ ಆಕ್ಷೇಪಿಸಿ ಪ್ರಯೋಜನವಿಲ್ಲ. ನಮ್ಮ ಮನೆಯನ್ನು ಸುಭದ್ರಗೊಳಿಸಿಕೊಳ್ಳಬೇಕಾದವರು ನಾವೇ. ಅಲಕ್ಷಿಸಿದ ಜಮೀನಿಗೇ ಕಳೆಗಳು ಅಮರಿಕೊಳ್ಳುವುದು.

ಹೀಗೆ ಈಗಿನ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತವಾಗಿರುವ `ಬ್ರೇಕಿಂಗ್ ಇಂಡಿಯಾ’ದಂತಹ ಸಂಶೋಧನಕೃತಿಯ ಕನ್ನಡ ಅನುವಾದ ಪ್ರಕಾಶನಗೊಳ್ಳುವುದಕ್ಕೆ ಕಾರಣರಾದ ಎಲ್ಲರೂ ಅಭಿನಂದನೀಯರಾಗಿದ್ದಾರೆ. ತುಂಬಾ ಸೂಕ್ಷ್ಮತೆಗಳನ್ನು ಒಳಗೊಂಡ ಇಂತಹ ಕೃತಿಯ ಅನುವಾದ ಸುಲಭವಲ್ಲ. ಈ ಜಟಿಲ ಕಾರ್ಯವನ್ನು ಲೇಖಕ ಲಕ್ಷ್ಮೀಕಾಂತ ಹೆಗಡೆ ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಂಪಾದನಕಾರ್ಯದಲ್ಲಿ ಡಾ|| ರ.ವಿ. ಜಹಾಗಿರದಾರ ಅವರು ಯೋಗದಾನ ಮಾಡಿದ್ದಾರೆ. ಈ ಶ್ರೇಷ್ಠ ಗ್ರಂಥ ಕನ್ನಡದಲ್ಲಿ ಬರಬೇಕೆಂಬ ಕಳಕಳಿಯಿಂದ ಹಿರಿಯ ಚಿಂತಕ ಡಾ|| ಎಸ್.ಎಲ್. ಭೈರಪ್ಪ ಅವರು ದೀರ್ಘವಾದ ಅನುಮೋದನಪೂರ್ವಕ ಮುನ್ನುಡಿಯನ್ನು ಬರೆದುಕೊಟ್ಟು ಈ ಪ್ರಕಟನೆಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಸತತವಾಗಿ ಮೌಲಿಕ ಗ್ರಂಥಗಳನ್ನು ಹೊರತರುತ್ತ ಅಮೂಲ್ಯ ಸಾಹಿತ್ಯಸೇವೆ ಮಾಡುತ್ತಿರುವ ವಸಂತ ಪ್ರಕಾಶನ ಅತ್ಯಂತ ಆಸ್ಥೆ ವಹಿಸಿ ಈ ಗ್ರಂಥವನ್ನು ಪ್ರಕಟಮಾಡಿದೆ. ಈ ಎಲ್ಲ ಮಹನೀಯರಿಗೂ ವಂದನೆ ಸಲ್ಲುತ್ತದೆ.?

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat