ನಮ್ಮ ದೇಶದ ಆಂದೋಲನಗಳಲ್ಲಿ ಒಂದು ಕುತ್ಸಿತತೆ ಇದೆ. ಆಂದೋಲನಗಳ ವೈಚಾರಿಕ ತಳಹದಿ ದುರ್ಬಲವೆನಿಸಿದಾಗ ಅವನ್ನು ರಾಜಕೀಯಗೊಳಿಸಿ ಅದು ಪ್ರಾದೇಶಿಕ ಅಸ್ಮಿತೆಯ ವಿಷಯವೆಂದು ಮಂಡಿಸಲಾಗುತ್ತದೆ. ಜಾನಪದ ಕಥೆಯಲ್ಲಿ ನೀನಾದರೇನು ಯಾರಾದರೇನು! ನನಗೆ ಬೇಕಾದ್ದೇನೆಂದಷ್ಟೆ ನನಗೆ ಗೊತ್ತು ಎಂದು ತೋಳ ಹೇಳಿದಂತೆ ಇದು. ೧೯೮೦ರ ದಶಕದಲ್ಲಿ ಇಂಥದೇ ಕಪಟತೆ ನಡೆದು ಅದಕ್ಕೆ ತುಂಬಾ ಬೆಲೆಯನ್ನು ತೆರಬೇಕಾಗಿಬಂದಿತ್ತು. ಪಂಜಾಬ್ ಈಗಲೂ ಅದೇ ಪ್ರಮಾದವನ್ನು ಪುನರಾವರ್ತಿಸುತ್ತಿದೆಯೆ?
ಈಚಿನ ಕೃಷಿ ಸಂಬಂಧಿತವಾದ ಮೂರು ಸುಧಾರಣಾ ಶಾಸನಗಳನ್ನು ಕಳೆದ (೨೦೨೧) ನವೆಂಬರ್ ತಿಂಗಳಲ್ಲಿ ರದ್ದುಗೊಳಿಸಲಾಯಿತಷ್ಟೆ. ವಾಸ್ತವದೃಷ್ಟಿಯಿಂದ ನೋಡುವಾಗ ಇದು ಆಂದೋಲನಕಾರರ ಗೆಲವೂ ಅಲ್ಲ, ಸರ್ಕಾರದ ಸೋಲೂ ಅಲ್ಲ. ವಿಶೇಷವಾಗಿ ದೇಶದೆಲ್ಲೆಡೆಯ ಸಣ್ಣ ಹಿಡುವಳಿ ರೈತರ ಸಂಕ್ಷೇಮದ ದೃಷ್ಟಿಯಿಂದ ಸಾಕಷ್ಟು ಪೂರ್ವಾಲೋಚನೆಯಿಂದ ಸರ್ಕಾರ ಪ್ರಾಮಾಣಿಕ ಹೆಜ್ಜೆ ಇರಿಸಿತ್ತೆಂಬುದನ್ನು ಕೆಲವು ರೈತಸಮುದಾಯಗಳಿಗೆ ಮನವರಿಕೆ ಮಾಡಿಸುವುದರಲ್ಲಿ ಸರ್ಕಾರ ಸಫಲಗೊಳ್ಳಲಿಲ್ಲ – ಎಂಬ ಪ್ರಧಾನಿ ನರೇಂದ್ರಮೋದಿಯವರ ಹೇಳಿಕೆ ಮಾರ್ಮಿಕವಾದ್ದು. ಸರ್ಕಾರವು ಇಡೀ ದೇಶದ ಹಿತವನ್ನು ಲಕ್ಷ್ಯದಲ್ಲಿರಿಸಿಕೊಂಡು ಯೋಜಿಸಿದ್ದವು ಈ ಸುಧಾರಣೆಗಳು. ಆದರೆ ಒಂದು ಪ್ರಾಂತದ (ಪಂಜಾಬ್) ಸ್ವಹಿತಾಸಕ್ತ ವಲಯಗಳಿಂದ ಸಂಘಟಿತವಾದ ವಿರೋಧದ್ದು ಮೇಲುಗೈಯಾಯಿತೆಂಬುದು ವಿಷಾದಕರ. ಪ್ರತಿಭಟನೆಗಳು ಬಹುತೇಕ ನಿಸ್ತೇಜ ಸ್ಥಿತಿ ತಲಪಿದ್ದಾಗ ಸರ್ಕಾರವು ಅವಕ್ಕೆ ಬೆಲೆ ಕೊಟ್ಟು ಶಾಸನಗಳ ರದ್ದತಿಗೆ ಅನುಮತಿಸಿತೆಂಬುದನ್ನು ಗಮನಿಸಿದಾಗ ರದ್ದತಿಯು ರಾಜಕೀಯ ಪರಿಗಣನೆಗಳಿಂದ ಚೋದಿತವಾಗಿತ್ತೆಂದು ಆರೋಪಿಸಲಾಗದು. ನಿಷ್ಕಾರಣವಾದ ಪ್ರತಿಭಟನೆಗಳ ಮೂಲಕ ನರೇಂದ್ರಮೋದಿಯವರ ವರ್ಚಸ್ಸಿಗೆ ಭಂಗ ತರುವ ಉದ್ದೇಶವಂತೂ ಈಗ ಗತಾರ್ಥವಾದಂತಾಯಿತು.
ಕೆಲವರು ವ್ಯಾಖ್ಯೆ ಮಾಡಿರುವಂತೆ ಬರಲಿರುವ ಚುನಾವಣೆಗಳ ಅಂದಾಜಿನಿಂದ ಶಾಸನ-ರದ್ದತಿ ನಡೆಯಿತೆಂದು ಊಹಿಸಲು ಆಧಾರವಿಲ್ಲ. ಏಕೆಂದರೆ ರೈತರ ಹಿತದ ದೃಷ್ಟಿಯಿಂದ ಸಂಕಲ್ಪಿತವಾಗಿದ್ದ ಈ ಕಾಯದೆಗಳಿಗೆ ಸಿದ್ಧತೆ ದೀರ್ಘಕಾಲದಿಂದ ನಡೆದಿದ್ದುದು ಬಹಿರಂಗ ಸಂಗತಿಯೇ ಆಗಿದೆ. ಕಾಯದೆಗಳು ರದ್ದಾದ ಮೇಲೂ ರೈತ ಪ್ರತಿನಿಧಿಗಳೆನಿಸಿಕೊಂಡವರು ವಿದ್ಯುತ್ತಿಗೆ ಸಂಬಂಧಿಸಿದ ಶಾಸನದ ರದ್ದತಿ ಮೊದಲಾದ ಹೊಸ ಬೇಡಿಕೆಗಳನ್ನು ಮುಂದೊತ್ತುತ್ತಿರುವುದು ಆಂದೋಲನಗಳ ಹಿಂದಿನ ಉದ್ದೇಶಗಳನ್ನು ಶಂಕಿಸುವಂತಾಗಿದೆ.
ಪಂಜಾಬ್ ಮತ್ತು ಅಲ್ಪಪ್ರಮಾಣದಲ್ಲಿ ಹರ್ಯಾಣಾ – ಈ ಭಾಗಗಳವರನ್ನುಳಿದು ಅನ್ಯಪ್ರಾಂತಗಳ ರೈತ ಸಮುದಾಯಗಳಿಂದ ಸಂಕಲ್ಪಿತ ಕಾಯದೆಗಳಿಗೆ ವಿರೋಧ ವ್ಯಕ್ತಗೊಂಡಿರಲಿಲ್ಲ ಎಂಬುದು ನಿಜಸ್ಥಿತಿ. ಹರ್ಯಾಣಾದ ನೆರೆಯ ಉತ್ತರಪ್ರದೇಶದ ಅಧಿಕ ಭಾಗಗಳ ರೈತವಲಯದಲ್ಲಿಯೂ ಹೊಸ ಕಾಯದೆಗಳ ಬಗೆಗೆ ಅಸಮಾಧಾನವೇನೂ ತೋರಿರಲಿಲ್ಲ. ಆಂದೋಲನದ ಮುಂಚೂಣಿಯಲ್ಲಿದ್ದ ರಾಕೇಶ್ ತಿಕಾಯತ್ ಉತ್ತರಪ್ರದೇಶಕ್ಕೆ ಸೇರಿದವರೇ. ದೇಶದ ಉಳಿದೆಡೆಗಳಲ್ಲಿ ನಡೆದ ಸಹಾನುಭೂತಿಜನ್ಯ ಪ್ರದರ್ಶನಗಳು ತೋರಿಕೆಗಳೂ ನಾಮಮಾತ್ರದವೂ ಆಗಿದ್ದವು. ಈ ವಿವರಗಳನ್ನು ಪರಿಶೀಲಿಸಿದಲ್ಲಿ ಹೊಮ್ಮುವ ವಾಸ್ತವಗಳೆಂದರೆ – ಮೊದಲನೆಯದಾಗಿ ಪಂಜಾಬಿನಲ್ಲಿ ಹಸಿರು ಕ್ರಾಂತಿಯ ಪ್ರಮುಖ ಫಲಾನುಭವಿಗಳಾಗಿದ್ದ ಮಧ್ಯವರ್ತಿಗಳ ಪಾಳೆಗಾರಿಕೆಯ ಮುಂದುವರಿಕೆಯ ಆಕಾಂಕ್ಷೆ, ಎರಡನೆಯದಾಗಿ ಜಾಠ ವರ್ಗದವರಲ್ಲದವರಿಗೆ ಈಚೀಚೆಗೆ ಸಲ್ಲುತ್ತಿರುವ ರಾಜಕೀಯ ಪ್ರಾಧಾನ್ಯ – ಈ ಅಂಶಗಳಿಂದ ಚೋದಿತಗೊಂಡು ಕೃಷಿ ಕಾಯದೆಗಳನ್ನು ವ್ಯಾಜವಾಗಿಸಿಕೊಂಡು ೨೦೨೦ರ ಅಂತ್ಯದಿಂದಾರಂಭಿಸಿ ಪ್ರತಿಭಟನೆಗಳು ಸಾಗಿದವೆಂದು ಅನುಮಾನಿಸಿದರೆ ತಪ್ಪಾಗದೆನಿಸುತ್ತದೆ. ಉಳಿದಂತೆ ಧಾನ್ಯಗಳಿಗೆ ಕನಿಷ್ಠ ಬೆಂಬಲಬೆಲೆಯ ನಿರ್ಣಯದ ವ್ಯವಸ್ಥೆ ಮೊದಲಾದ ಅಂಶಗಳನ್ನು ಕುರಿತಂತೆ ಸಂವಾದ-ಸಮಾಲೋಚನೆಗಳಿಗೆ ಕೇಂದ್ರಸರ್ಕಾರ ಎಂದೂ ವಿಮುಖವಾಗಿರಲಿಲ್ಲ. ಇದರ ಪರಾಮರ್ಶನೆಗಾಗಿ ತಜ್ಞ ಸಮಿತಿಯೊಂದನ್ನು ಏರ್ಪಡಿಸುವುದಾಗಿ ಪ್ರಧಾನಿಗಳು ೨೦೨೧ ನವೆಂಬರ್ ೧೯ರ ಭಾಷಣದಲ್ಲಿಯೂ ಸ್ಥಿರೀಕರಿಸಿದ್ದಾರೆ.
೨೦೨೧ರ ಉದ್ದಕ್ಕೂ ದೆಹಲಿ ಆಸುಪಾಸಿನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಒಂದು ವೈಚಿತ್ರ್ಯ ಗಮನಸೆಳೆಯುತ್ತದೆ. ಸಾಮಾನ್ಯವಾಗಿ ಜನಾಂದೋಲನಗಳು ಬಡವರ್ಗಗಳ ಹಿತದ ಪರವಾಗಿ ನಡೆಯುತ್ತವೆ. ಆದರೆ ಈಗಿನ ಪ್ರತಿಭಟನಸರಣಿ ಆಢ್ಯ ಶ್ರೀಮಂತವರ್ಗಗಳ ಸ್ವಾರ್ಥದ ಸಂರಕ್ಷಣೆಗಾಗಿ ನಡೆದಿದೆ!
ಈಗ್ಗೆ ಐದು ದಶಕಗಳ ಹಿಂದೆ ಕೃಷಿಯ ಆಧುನಿಕೀಕರಣದ ಮುಂಚೂಣಿಯಲ್ಲಿದ್ದದ್ದು ಪಂಜಾಬ್. ಆದರೆ ಈಗ ಆ ಸ್ಥಿತಿ ಉಳಿದಿಲ್ಲ. ಈಗಿನ ಪಂಜಾಬ್ ಕೇಂದ್ರಸರ್ಕಾರದಿಂದ ಲಭ್ಯವಾಗುತ್ತಿರುವ ವಿಶೇಷ ಸವಲತ್ತುಗಳ ಉಪಜೀವಿಯಾಗಿದೆ. ಕೇಂದ್ರಸರ್ಕಾರ ನೀಡುವ ವಿಶೇಷ ಸವಲತ್ತುಗಳಲ್ಲಿ ಸಿಂಹಪಾಲು ಪಂಜಾಬಿಗೇ ಸಲ್ಲುತ್ತ ಬಂದಿದೆ.
ಅತ್ಯಧಿಕ ಪ್ರಮಾಣದ ಭತ್ತ ಗೋಧಿಗಳನ್ನು ಪಂಜಾಬಿನಿಂದ ಕೊಳ್ಳುವುದು ಕೇಂದ್ರಸರ್ಕಾರಕ್ಕೆ ಭಾರವೆನಿಸತೊಡಗಿದೆ. ಹಾಲಿ ಇರುವ ವ್ಯವಸ್ಥೆಯಂತೆ ಕನಿಷ್ಠ ಬೆಂಬಲಬೆಲೆ ಸೂತ್ರದನ್ವಯ ಕಳೆದೊಂದು ವರ್ಷದಲ್ಲಿ (೨೦೨೧-೨೨) ಆಹಾರಧಾನ್ಯಗಳ ಖರೀದಿಗಾಗಿ ಕೇಂದ್ರಸರ್ಕಾರದಿಂದ ಪಂಜಾಬಿಗೆ ಹರಿದುಹೋದ ಹಣ ಹತ್ತಿರಹತ್ತಿರ ರೂ. ೧.೦೮ ಲಕ್ಷ ಕೋಟಿಯಷ್ಟು ಇತ್ತು. ಒಂದೇ ಒಂದು ರಾಜ್ಯ ಇಷ್ಟು ಅಧಿಕ ಸವಲತ್ತನ್ನು ಸ್ವಾಯತ್ತೀಕರಿಸಿಕೊಂಡರೆ ದೇಶದ ಆರ್ಥಿಕ ಸಮತೋಲನ ಉಳಿದೀತೆ? ರೈತ ಪ್ರತಿನಿಧಿಗಳೊಡನೆ ಕೇಂದ್ರಸರ್ಕಾರ ನಡೆಸಿದ ಮಾತುಕತೆಗಳಲ್ಲಿ ಈ ಅಸಮತೋಲಿತ ಸ್ಥಿತಿ ಕುರಿತು ಜನಪ್ರತಿನಿಧಿಗಳಾರೂ ಅದಕ್ಕೆ ತಾರ್ಕಿಕ ಸಮರ್ಥನೆ ನೀಡಲಾರದೆಹೋದರು. ಅವರ ಒಂದೇ ಉತ್ತರ ಪ್ರತಿಭಟನೆ. ಇದಕ್ಕೆ ಏನೆನ್ನಬೇಕು? ಬೇರೆ ರಾಜ್ಯಗಳಿಗಿಲ್ಲದ ಅಧಿಕ ಸವಲತ್ತು ನಮ್ಮ ಹಕ್ಕು ಎಂದು ಸಾಧಿಸುತ್ತಿರುವವರ ತರ್ಕಹೀನ ಹಠಮಾರಿತನ ಎಷ್ಟು ಕಾಲ ಸಹ್ಯವೆನಿಸೀತು? ಕಾಲಪುರುಷ ಉತ್ತರಿಸಬೇಕು.
ಕೇಂದ್ರಸರ್ಕಾರಲಬ್ಧ ಪೋಷಣೆ ಇದುವರೆಗೆ ಅಬಾಧಿತವಾಗಿದ್ದುದರಿಂದ ಬೇಸಾಯ ಪದ್ಧತಿಯ ಪುನರ್ವಿನ್ಯಾಸ ಮೊದಲಾದ ಚಿಕಿತ್ಸಕ ಮನಃಸ್ಥಿತಿ ಇದುವರೆಗಂತೂ ಪಂಜಾಬಿನ ರೈತರಲ್ಲಿ ಕಂಡಿಲ್ಲ – ಅನಾಯಾಸವಾಗಿ ಕೇಂದ್ರಸರ್ಕಾರದ ಪೋಷಣೆ ದೊರೆಯುತ್ತಿದ್ದುದರಿಂದ.
ನಮ್ಮ ದೇಶದ ಆಂದೋಲನಗಳಲ್ಲಿ ಒಂದು ಕುತ್ಸಿತತೆ ಇದೆ. ಆಂದೋಲನಗಳ ವೈಚಾರಿಕ ತಳಹದಿ ದುರ್ಬಲವೆನಿಸಿದಾಗ ಅವನ್ನು ರಾಜಕೀಯಗೊಳಿಸಿ ಅದು ಪ್ರಾದೇಶಿಕ ಅಸ್ಮಿತೆಯ ವಿಷಯವೆಂದು ಮಂಡಿಸಲಾಗುತ್ತದೆ. ಜಾನಪದ ಕಥೆಯಲ್ಲಿ ನೀನಾದರೇನು ಯಾರಾದರೇನು! ನನಗೆ ಬೇಕಾದ್ದೇನೆಂದಷ್ಟೆ ನನಗೆ ಗೊತ್ತು ಎಂದು ತೋಳ ಹೇಳಿದಂತೆ ಇದು. ೧೯೮೦ರ ದಶಕದಲ್ಲಿ ಇಂಥದೇ ಕಪಟತೆ ನಡೆದು ಅದಕ್ಕೆ ತುಂಬಾ ಬೆಲೆಯನ್ನು ತೆರಬೇಕಾಗಿಬಂದಿತ್ತು. ಪಂಜಾಬ್ ಈಗಲೂ ಅದೇ ಪ್ರಮಾದವನ್ನು ಪುನರಾವರ್ತಿಸುತ್ತಿದೆಯೆ?
ತಾತ್ತ್ವಿಕವಾಗಿ ನೋಡುವಾಗ ಸಂವಿಧಾನಪ್ರದತ್ತ ಅಭಿಪ್ರಾಯಭೇದ ಪ್ರಕಟೀಕರಣದ ಅವಕಾಶವನ್ನು ದುರುಪಯೋಗಪಡಿಸಿಕೊಂಡು ರಾಜ್ಯಾಂಗಕ್ಕೂ ನಾಗರಿಕ ಸಮಾಜಕ್ಕೂ ವಿಘಾತ ತರುವ ಜಾಡಿನ ಸಾಹಸಗಳಿಂದ ಯಾರಿಗೂ ಲಾಭವಾಗದು. ವಿಚಾರಶೂನ್ಯ ಪ್ರತಿಭಟನೆಗಳನ್ನು ದಮನ ಮಾಡುವ ಶಕ್ತಿ ಸರ್ಕಾರಕ್ಕೆ ಇಲ್ಲದೆ ಇಲ್ಲ. ನೀತಿವಂತಿಕೆಯಂತೂ ಸರ್ಕಾರದ ಪರವಾಗಿಯೆ ಇದೆ. ದೇಶದ ವಾತಾವರಣ ಕೆಡದಿರಲೆಂಬ ದೃಷ್ಟಿಯಿಂದ ಕೇಂದ್ರಸರ್ಕಾರ ಸಂಯಮ ವಹಿಸಿದೆ. ತೀವ್ರ ಕ್ರಮಗಳಿಗೆ ಮೊರೆಹೋಗದೆ ಆಂದೋಲನದ ನಾಯಕರೊಡನೆ ಸಮಾಲೋಚನೆಯನ್ನು ಮುಂದುವರಿಸಿದೆ.
ಯಾವುದೊ ಒಂದು ಪ್ರಾಂತದ ಸ್ವಾರ್ಥದ ಆಧಾರದ ಮೇಲೆ ರಾಜ್ಯಾಂಗವನ್ನೂ ಸಂಸತ್ತಿನ ಅಧಿಕಾರವನ್ನೂ ಧಿಕ್ಕರಿಸುವುದನ್ನಾಗಲಿ ಅದನ್ನು ವಿರೋಧವನ್ನೆ ಬದುಕಾಗಿಸಿಕೊಂಡಿರುವ ಕೆಲವು ಹೊಣೆಗೇಡಿ ವಲಯಗಳು ಎತ್ತಿಕಟ್ಟುವುದನ್ನಾಗಲಿ ಸಭ್ಯಸಮಾಜ ಅಧಿಕ ಕಾಲ ಸಹಿಸಬಾರದು.