ಪ್ರಚಲಿತ
-ಎಸ್.ಆರ್.ಆರ್.
ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವುದಕ್ಕೆ ಮುಂಚೆ ವಿದ್ಯಾರ್ಥಿಗಳ ಮತ್ತು ತರುಣರ ಅಭಿಪ್ರಾಯವನ್ನು ಸಂಗ್ರಹಿಸುವುದಕ್ಕಾಗಿ ನಡೆದ ವ್ಯಾಪಕ ಸಮೀಕ್ಷೆಯಿಂದ ಹೊರಪಟ್ಟ ಮಾಹಿತಿ ಆಲೋಚನೆಗೆ ಅರ್ಹವಾಗಿದೆ: ವಿದ್ಯಾರ್ಥಿ ಸಮುದಾಯದಲ್ಲಿ ಸುಮಾರು ಶೇ. ೬೭ರಷ್ಟು ಮಂದಿಯ ಅಭಿಪ್ರಾಯ ವಿವಾಹಕ್ಕೆ ಯೋಗ್ಯ ವಯಸ್ಸು ೨೮ ರಿಂದ ೩೦ ವರ್ಷ – ಎಂದಿತ್ತು.
ಕೇಂದ್ರಸರ್ಕಾರದ ಯಾವುದೇ ಯೋಜನೆಯೋ ಮಸೂದೆಯೋ ಮಂಡಿತವಾದರೂ ಅದನ್ನು ವಿರೋಧಿಸಬೇಕೆಂಬ ಪ್ರವೃತ್ತಿ ಈಗ ಬೆಳೆದಿದೆ. ಯಾವುದೇ ಧೋರಣೆಯಿಂದ ಯಾರೋ ಕೆಲವರಿಗೆ ಅಸಮಾಧಾನವಾಗುವ ಸಂಭವ ಇದ್ದೇ ಇರುತ್ತದೆ. ಆದರೆ ಈಗ ನಡೆಯುತ್ತಿರುವುದು ವಿರೋಧಕ್ಕಾಗಿ ವಿರೋಧ ಎಂಬ ಮನೋಭೂಮಿಕೆಯ ವರ್ತನೆ. ವಿವಾಹವಾಗಲಿರುವ ಕನ್ಯೆಯ ಕನಿಷ್ಠ ವಯಸ್ಸು ಎಷ್ಟಿರಬೇಕು – ಎಂಬುದನ್ನು ಕುರಿತದ್ದು ಇತ್ತೀಚಿನ ತಗಾದೆ. ವಯಸ್ಸು ೨೧ ಇರುವಂತೆ ಶಾಸನ ಮಾಡುವುದು ಕೇಂದ್ರಸರ್ಕಾರದ ಉದ್ದೇಶ. ಕುಟುಂಬನಿರ್ವಹಣೆಯ ಹಾಗೂ ಅನ್ಯ ಹೊಣೆಗಾರಿಕೆಗಳ ಹೆಚ್ಚಿನ ಭಾರ ಬೀಳುವುದು ಗೃಹಿಣಿಯ ಹೆಗಲ ಮೇಲೆ ಎಂಬ ವಾಸ್ತವವನ್ನು ಬಹುಮಂದಿ ಅಂಗೀಕರಿಸಿಯಾರು. ಈ ಹಿನ್ನೆಲೆಯಲ್ಲಿ ಇದೀಗ ಗಂಡಸಿಗೆ ಅನ್ವಯಗೊಳ್ಳುತ್ತಿರುವ ೨೧ ವರ್ಷದ ಕನಿಷ್ಠ ವಯೋಮಾನ ನಿಯಮ ಸ್ತ್ರೀಗೂ ಅನ್ವಯವಾಗಲೆಂಬ ಚಿಂತನೆಯಲ್ಲಿ ಜಟಿಲತೆಯೇನಿಲ್ಲ ಮತ್ತು ಸಮಾಜದ ಬಹುತೇಕ ಭಾಗ ಅದನ್ನು ವಿರೋಧಿಸುತ್ತಿದೆಯೆನಿಸುತ್ತಿಲ್ಲ. ಗಂಡಸಿನ ಕನಿಷ್ಠ ವಯೋಮಾನ ನಿಗದಿ ಹದಿನೆಂಟೇ ಇರಲಿ ಎಂದಂತೂ ಯಾರೂ ಕೇಳುತ್ತಿಲ್ಲವಷ್ಟೆ! ಹೆಣ್ಣಿನ ಕನಿಷ್ಠ ವಯೋಮಾನವನ್ನು ಹೆಚ್ಚಿಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅಪೇಕ್ಷಣೀಯವೆಂಬ ತನ್ನ ನಿಲವನ್ನು ಕೇಂದ್ರಸರ್ಕಾರ ಹಿಂದಿನಿಂದ ವ್ಯಕ್ತಪಡಿಸುತ್ತ ಬಂದಿದೆ. ಕಳೆದ ವರ್ಷದ ಸ್ವಾತಂತ್ರ್ಯ ದಿನೋತ್ಸವ ಭಾಷಣದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಈ ಅಂಶವನ್ನು ಪ್ರಸ್ತಾವಿಸಿದ್ದರು.
ಕೇಂದ್ರಸರ್ಕಾರವು ಸಂಗ್ರಹಿಸಿರುವ ಅಂಕಿ-ಅಂಶಗಳಂತೆ ಬಾಲ್ಯವಿವಾಹಗಳು ಅಧಿಕ ಪ್ರಮಾಣದಲ್ಲಿ ನಡೆಯುತ್ತಿರುವುದು ಗ್ರಾಮೀಣ ಭಾಗಗಳಲ್ಲಿ. ಪರಿಶಿಷ್ಟ ಜಾತಿಗಳಲ್ಲಿ ಶೇ. ೩೪.೯ರಷ್ಟೂ ಪರಿಶಿಷ್ಟ ಬುಡಕಟ್ಟುಗಳಲ್ಲಿ ಶೇ. ೩೧ರಷ್ಟೂ ಬಾಲ್ಯವಿವಾಹಗಳು ಆಗುತ್ತಿವೆಯೆಂಬುದು ಕೇಂದ್ರ ಸರ್ಕಾರದ ಪರಿಶೀಲನೆಯಿಂದ ವಿದಿತವಾಗಿದೆ.
ಶಾಸನದ ಹೊರತಾಗಿಯೇ ಸಮಾಜದಲ್ಲಿ ವಿವಾಹ ವಯೋಮಾನ ಈಚಿನ ಕಾಲದಲ್ಲಿ ಹೆಚ್ಚುತ್ತಿದೆಯೆಂಬ ವಾಸ್ತವವನ್ನೂ ಗಮನಿಸಬೇಕು. ಟಾಟಾ ಸಂಸ್ಥೆ ನಡೆಸಿದ ದೇಶವ್ಯಾಪಿ ಸಮೀಕ್ಷೆಯಿಂದ ಹೊರಪಟ್ಟ ಸ್ಥಿತಿ ಈಗ ವಿವಾಹದ ಸರಾಸರಿ ವಯೋಮಾನ ೨೨.೧ ವರ್ಷ ಆಗಿದೆಯೆಂಬುದು. ಆದ್ದರಿಂದ ಉದ್ದಿಷ್ಟ ಶಾಸನವು ಸಾಮಾಜಿಕ ಸ್ಥಿತಿಯನ್ನು ಪ್ರತಿಫಲಿಸುವಂತಹದೇ ಆಗಿದೆಯೆಂಬುದು ಸ್ಪಷ್ಟವಿದೆ.
ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವುದಕ್ಕೆ ಮುಂಚೆ ವಿದ್ಯಾರ್ಥಿಗಳ ಮತ್ತು ತರುಣರ ಅಭಿಪ್ರಾಯವನ್ನು ಸಂಗ್ರಹಿಸುವುದಕ್ಕಾಗಿ ನಡೆದ ವ್ಯಾಪಕ ಸಮೀಕ್ಷೆಯಿಂದ ಹೊರಪಟ್ಟ ಮಾಹಿತಿ ಆಲೋಚನೆಗೆ ಅರ್ಹವಾಗಿದೆ: ವಿದ್ಯಾರ್ಥಿ ಸಮುದಾಯದಲ್ಲಿ ಸುಮಾರು ಶೇ. ೬೭ರಷ್ಟು ಮಂದಿಯ ಅಭಿಪ್ರಾಯ ವಿವಾಹಕ್ಕೆ ಯೋಗ್ಯ ವಯಸ್ಸು ೨೮ ರಿಂದ ೩೦ ವರ್ಷ – ಎಂದಿತ್ತು. ಆ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. ೩೭ರಷ್ಟು ಮಂದಿ ಕೆಳ-ಮಧ್ಯಮ ವರ್ಗದವರು (ಎಂದರೆ ವಾರ್ಷಿಕ ಆದಾಯ ರೂ. ೭೦ ಸಾವಿರದಿಂದ ರೂ. ೨.೭ ಲಕ್ಷದೊಳಗೆ ಇರುವವರು). ಈ ವಿವಿಧ ಮಾಹಿತಿಗಳ ಆಧಾರದ ಮೇಲೆ ತಜ್ಞ ಸಮಿತಿಯು ಉದ್ದಿಷ್ಟ ಶಾಸನವು ಸ್ತ್ರೀಯರ ಹಿತರಕ್ಷಣೆಗೂ ಸಬಲೀಕರಣಕ್ಕೂ ಸಹಾಯಕವಾಗುತ್ತದೆಂಬ ನಿಲವನ್ನು ತಳೆದದ್ದು ಸಹಜವೇ ಆಗಿದೆ.
ಈಗ ಕಾನೂನಿನಡಿ ಇರುವ ಕನಿಷ್ಠ ವಯೋಮಾನ (ಸ್ತ್ರೀಯರಿಗೆ ೧೮ ವರ್ಷ, ಪುರುಷರಿಗೆ ೨೧ ವರ್ಷ) ೧೯೭೮ರಿಂದ ಅಮಲಿನಲ್ಲಿದೆ. ಆದರೆ ಇದು ಸರ್ವಸಮರ್ಪಕವಾಗಿದೆಯೆಂದು ಭಾವಿಸಬಹುದಾದ ಸ್ಥಿತಿ ಇಲ್ಲ.
ತಂದೆತಾಯಿಯರ ಇಚ್ಛೆಯಂತೆ ವಿವಾಹವಾಗುತ್ತಿರುವ ೧೮-೨೦ ವಯೋಮಾನದ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ಇನ್ನೂ ಶಿಕ್ಷಣ ಪಡೆಯುತ್ತಿರುತ್ತಾರೆ. ಭಾರತದಲ್ಲಿ ಪ್ರತಿವರ್ಷ ೧೮ನೇ ವಯಸ್ಸಿನೊಳಗಡೆಯೇ ಸುಮಾರು ೧೫ ಲಕ್ಷದಷ್ಟು ಹೆಣ್ಣುಮಕ್ಕಳು ವಿವಾಹವಾಗುತ್ತಿದ್ದಾರೆಂದು ಅಂದಾಜಿದೆ. ಇಡೀ ಜಗತ್ತಿನ ಅಪ್ರಾಪ್ತವಯಸ್ಕ ಬಾಲಿಕಾಕನ್ಯೆಯರ ಸಂಖ್ಯೆಯ ಪೈಕಿ ಮೂರರಲ್ಲೊಂದು ಭಾಗದಷ್ಟು ಮಂದಿ ಇರುವುದು ಭಾರತದಲ್ಲಿ ಎಂದು ವರದಿಗಳು ಹೇಳಿವೆ. ಇಂತಹ ಸಮಸ್ಯೆಗಳು ಸಾಮಾಜಿಕ ಸ್ವರೂಪದವಾಗಿದ್ದು ಅವಕ್ಕೆ ಕಾನೂನೊಂದೇ ಪರಿಹಾರ ನೀಡಬಲ್ಲದೆಂದು ನಿರೀಕ್ಷಿಸುವುದು ಅವಾಸ್ತವವಾಗುತ್ತದೆ. ಆದರೂ ಕಳೆದ ಒಂದೂವರೆ ದಶಕದಲ್ಲಿ (೨೦೦೫ರಿಂದೀಚೆಗೆ) ಬಾಲಿಕಾ ವಿವಾಹಗಳ ಪ್ರಮಾಣವು ಶೇ. ೪೭ರಿಂದ ಶೇ. ೨೭ಕ್ಕೆ ಇಳಿಕೆಯಾಗಿದೆಯೆಂದು ಯೂನಿಸೆಫ್‍ನ ಅಧ್ಯಯನ ತಿಳಿಸಿದೆ. ಇದು ಕಾನೂನು-ನಿರ್ದೇಶನದ ಅಪೇಕ್ಷ್ಯತೆಯನ್ನು ತೋರಿಸುತ್ತದೆ.
ಉದ್ದಿಷ್ಟ ‘Prohibition of Child Marriage (Amendment) Bill ೨೦೨೧’ ಶಾಸನದಿಂದ ಹಲವಾರು ಅನುಕೂಲಗಳು ಲಭಿಸಬಲ್ಲವೆಂಬುದೂ ಹಲವಾರು ಸಮಸ್ಯೆಗಳಿಗೆ ಪರಿಹಾರಕವಾಗಬಹುದೆಂಬುದೂ ಸ್ಪಷ್ಟವೇ ಆಗಿದೆ. ಕೆಲವು ಪ್ರಮುಖ ಸಂಭವನೀಯ ಪ್ರಯೋಜನಗಳನ್ನು ಗುರುತಿಸುವುದಾದರೆ:
೧. ಪುರುಷ-ಸ್ತ್ರೀ ಅಸಮಾನತೆಯನ್ನು ನೀಗಿಸುವುದು;
೨. ಅಪ್ರಾಪ್ತವಯಸ್ಕ ವಿವಾಹಗಳನ್ನು ನಿವಾರಿಸುವುದು;
೩. ಹೆಣ್ಣುಮಕ್ಕಳ ಶಿಕ್ಷಣ ಅರ್ಧಾಂತಕವಾಗುವುದನ್ನು ತಪ್ಪಿಸುವುದು;
೪. ಪ್ರೌಢಶಾಲೆಯ ಹಂತದಿಂದಲೇ ಹೆಣ್ಣುಮಕ್ಕಳು ಶಾಲೆಯನ್ನು ತ್ಯಜಿಸುವುದನ್ನು ತಪ್ಪಿಸುವುದು;
೫. ಪೂರ್ವವಯಸ್ಸಿನಲ್ಲಿಯೆ ಗರ್ಭಧಾರಣೆಯನ್ನೂ ಅಪೌಷ್ಟಿಕತೆಯನ್ನೂ ತಡೆಗಟ್ಟುವುದು;
೬. ಅನಾರೋಗ್ಯಕ್ಕೆ ಈಡಾದ ಅವಧಿಪೂರ್ವ ಜನನಗಳನ್ನು ತಡೆಯುವುದು;
೭. ಬಾಲವಿಧವೆಯರಾಗುವುದನ್ನು ನಿವಾರಿಸುವುದು;
೮. ಹೆಣ್ಣುಮಕ್ಕಳ ಆರ್ಥಿಕ ಸಬಲತೆಗೆ ಆಸ್ಪದ ನೀಡುವುದು.
ಈ ದಿಶೆಯ ಸುಧಾರಣೆಗಳನ್ನು ಊಹನಿಕ ಕಾರಣಗಳಿಂದ ವಿರೋಧಿಸುವವರದು ಕಾಲಬಾಹ್ಯ ಚಿಂತನಪ್ರವೃತ್ತಿಯೆಂದಷ್ಟೆ ಹೇಳಬಹುದು. ಮಸೂದೆಯಲ್ಲಿ ಯಾವುದೇ ಮತೀಯ ಅಂಶಗಳಿಲ್ಲ. ಮುಸ್ಲಿಂ ಸಮುದಾಯದಲ್ಲಿಯೂ ಪ್ರಗತಿಪರರು (ಉದಾಹರಣೆಗೆ ವಿಖ್ಯಾತ ಅರೇಬಿಕ್ ವಿದುಷಿ ಜಮೀದಾರಂಥವರು) ಮಸೂದೆಯು ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣಾವಕಾಶ ಕಲ್ಪಿಸಿ ಅವರ ಭವಿಷ್ಯವನ್ನು ಉತ್ತಮಗೊಳಿಸುತ್ತದೆ – ಎಂದು ಅಭಿಪ್ರಾಯ ತಳೆದಿದ್ದಾರೆ. ಮಸೂದೆಯನ್ನು ವಿರೋಧಿಸುತ್ತಿರುವ ಬಣಗಳು ಮಂಡಿಸುತ್ತಿರುವ ವಾದಗಳು ಪ್ರಮುಖವಾಗಿ ಎರಡು: (೧) ಮತದಾನ ಅರ್ಹತೆ ಮೊದಲಾದ ನಿಯಮಗಳಲ್ಲಿ ೧೮ ವರ್ಷದ ವಯೋಮಾನ ನಿರ್ದಿಷ್ಟವಾಗಿರುವುದರಿಂದ ವಿವಾಹ ಸಂಬಂಧಿತ ಕಾನೂನಿನಲ್ಲಿಯೂ ಅದನ್ನೇ ಏಕೆ ಉಳಿಸಿಕೊಳ್ಳಬಾರದು? – ಎಂಬುದು; (೨) ವರದಕ್ಷಿಣೆಯ ನಿಷೇಧ ಮೊದಲಾದವಕ್ಕೆ ಈಗಾಗಲೆ ಕಾನೂನುಗಳು ಇದ್ದರೂ ಅವೇನೂ ನಿಂತಿಲ್ಲವಲ್ಲ? – ಎಂಬುದು. ಇಂತಹ ವಾದಗಳು ಅಪ್ರಾಸಂಗಿಕವೆಂಬುದು ಸ್ಪಷ್ಟವೇ ಆಗಿದೆ; ಮತ್ತು ಇವೇ ಬಣಗಳು ಲೈಂಗಿಕಾಪರಾಧ ದಂಡನೆಗೆ ಹೊಸ ಕಾನೂನು ಬೇಕು – ಎಂದು ಆಗ್ರಹಿಸುತ್ತಿವೆಯಲ್ಲ! ಆದ್ದರಿಂದ ಮಸೂದೆಗೆ ವ್ಯಕ್ತವಾಗಿರುವ ವಿರೋಧವು ಹಾರಿಕೆಯ ವಾದಗಳನ್ನು ಅವಲಂಬಿಸಿದೆಯೆಂದೂ ಅದು ಉಪೇಕ್ಷ್ಯವೆಂದೂ ಕೇಂದ್ರಸರ್ಕಾರದ ಉದ್ದಿಷ್ಟ ಶಾಸನವು ಅನುಸರಣಾರ್ಹವಾಗಿದೆಯೆಂದೂ ಅನ್ನಿಸುತ್ತದೆ.