ದ್ರಷ್ಟಾರ ಸಾವರಕರ್ ೨
- ಎಸ್.ಆರ್. ರಾಮಸ್ವಾಮಿ
ಬ್ರಿಟಿಷ್ ಪ್ರಭುತ್ವಕ್ಕೆ ಆರ್ಥಿಕವಾಗಿ ಪೆಟ್ಟುಕೊಡುವ ಕ್ರಮಗಳು ಅವಶ್ಯವೆಂಬುದು ಸಾವರಕರರ ಚಿಂತನೆಯಾಗಿತ್ತು. ಈ ದಿಕ್ಕಿನಲ್ಲಿ ಅವರು ಯೋಜಿಸಿದ ಒಂದು ಕ್ರಮವೆಂದರೆ ವಿದೇಶೀ ವಸ್ತ್ರಗಳ ದಹನ. ಈ ಸಾಂಕೇತಿಕ ಆಂದೋಲನ ದೂರಗಾಮಿ ಪರಿಣಾಮ ಬೀರಿತು. ಕ್ರಮೇಣ ಅದು ಆಗಷ್ಟೆ ಗರಿಗೆದರುತ್ತಿದ್ದ ಸ್ವದೇಶೀ ಚಳವಳಿಯ ಭಾಗವೂ ಆಯಿತು.
ಸಾವರಕರ್ ಅನುಭವಿಸಿದಷ್ಟು ಕಷ್ಟಕೋಟಲೆಗಳನ್ನೂ ದೀರ್ಘಕಾಲದ ಕಠಿಣ ಕಾರಾಗೃಹವಾಸವನ್ನೂ ಅನುಭವಿಸಿದವರು ಭಾರತದಲ್ಲಿರಲಿ, ಜಗತ್ತಿನಲ್ಲಿಯೆ ವಿರಳ. ‘ಮೃತ್ಯುಂಜ’ ಎಂಬ ಅಭಿಧಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇರಲಾರರು.
೧೯೫೦ರಲ್ಲಿ ಮುಂಬಯಿ ಸಭೆಯೊಂದರಲ್ಲಿ ೧೮೫೭ರ ಸ್ವಾತಂತ್ರ್ಯ ಸಂಗ್ರಾಮವನ್ನು ಕುರಿತು ಮಾತನಾಡುವಾಗ ಸಾವರಕರರು “ತಾತ್ಯಾಟೋಪೆ! ನೀನು ಈ ನಿರುತ್ಸಾಹದ ನಾಡಿನಲ್ಲಿ ಏಕೆ ಜನಿಸಿದೆ?” ಎಂದು ಉದ್ವಿಗ್ನರಾಗಿ ಉದ್ಗರಿಸಿದ್ದರು. ಇತ್ತೀಚೆಗೆ – ೨೦೦೪ರಲ್ಲಿಯೂ ಅನಂತರವೂ – ಸಾವರಕರರ ಹೆಸರನ್ನುಚ್ಚರಿಸುವ ಯೋಗ್ಯತೆಯೂ ಇಲ್ಲದ ಕಾಂಗ್ರೆಸ್ ನಾಯಕಮಣಿಗಳು ಸಾವರಕರರ ಬಗೆಗೆ ಕೀಳುಮಾತುಗಳನ್ನಾಡುವುದನ್ನು ಕೇಳುವಾಗ “ನಾವು ಸಾವರಕರರಂಥ ಅಪ್ರತಿಮ ನಾಯಕರನ್ನು ಪಡೆಯಲು ಅರ್ಹರಲ್ಲವೇನೊ” ಎಂದು ಅನಿಸೀತು.
ಈಗಿನ ಹಲವರು ಇತಿಹಾಸ “ಬರೆಯು”ವವರು; ಇನ್ನು ಕೆಲವರು ಇತಿಹಾಸವನ್ನು “ತಿರುಚು”ವವರು. ಆದರೆ ಸಾವರಕರ್ ಇತಿಹಾಸವನ್ನು “ಸೃಷ್ಟಿಸಿ”ದವರು. ಇಡೀ ವಿಶ್ವದ ಕ್ರಾಂತಿಕಾರಿಗಳ, ದೇಶಭಕ್ತರ ಸಾಲಿನಲ್ಲಿ ಸಾವರಕರರದು ಹೆಮ್ಮೆಯ ಸ್ಥಾನವಿದೆಯೆಂಬುದು ವಿವಾದಾತೀತ.
ಖ್ಯಾತ ಇತಿಹಾಸಕಾರ ಜಿ.ಎಸ್. ಸರ್ದೇಸಾಯಿ ಸಾವರಕರರಿಗೆ ಹೇಳಿದ್ದುದು ಇದೇ ಮಾತನ್ನೇ: “ನಾವೆಲ್ಲ ಇತಿಹಾಸವನ್ನು ನಿರೂಪಿಸುವವರು ಮಾತ್ರ. ನೀವಾದರೋ ಇತಿಹಾಸವನ್ನು ನಿರ್ಮಿಸಿದವರು.”
ಸಾವರಕರ್ ವ್ಯಕ್ತಿಯಲ್ಲ: ಅದೊಂದು ಶಕ್ತಿಪುಂಜ.
ಸಾವರಕರ್ ಕ್ರಾಂತಿಕಾರಿಯಷ್ಟೆ ಅಲ್ಲ; ಕ್ರಾಂತಿಶಾಸ್ತ್ರವನ್ನೇ ಆವಿಷ್ಕರಿಸಿದವರು.
ವಿಕೃತ ಮಾನಸಿಕತೆ
ಹಿಂದಿನ ಎನ್.ಡಿ.ಎ. ಸರ್ಕಾರವು ಅಂಡಮಾನಿನಲ್ಲಿ ‘ಸ್ವಾತಂತ್ರ್ಯ ಜ್ಯೋತಿ’ಯೊಡನೆ ಸ್ಥಾಪಿಸಿದ್ದ ಸ್ಮಾರಕಫಲಕವನ್ನು ಕಿತ್ತುಹಾಕುವ ಕೀಳು ಕೆಲಸವನ್ನು ಕಾಂಗ್ರೆಸ್ ಯು.ಪಿ.ಎ. ಸರ್ಕಾರದ ತೈಲ-ಇಂಧನ ಸಚಿವ ಮಣಿಶಂಕರ ಅಯ್ಯರ್ ಮಾಡಿದರು. ಯಾವುದೇ ಸರ್ಕಾರ ಇದಕ್ಕಿಂತ ಕ್ಷುದ್ರ ವರ್ತನೆಯಲ್ಲಿ ತೊಡಗೀತೆಂದು ಕಲ್ಪಿಸಿಕೊಳ್ಳುವುದು ಅಶಕ್ಯ. ದೇಶದ ಅಪ್ರತಿಮ ಸ್ವಾತಂತ್ರö್ಯ ಹೋರಾಟಗಾರನೊಬ್ಬನ ಬಗೆಗೆ ಕಾಂಗ್ರೆಸ್ ನೇತೃತ್ವ ನಡೆದುಕೊಳ್ಳುತ್ತ ಬಂದಿರುವ ರೀತಿಯು ಅಕ್ಷಮ್ಯ. ಸಾವರಕರರಂಥವರ ಅಸೀಮ ತ್ಯಾಗವೂ ಆತ್ಮಾರ್ಪಣೆಯೂ ಆಗಿರದಿದ್ದಲ್ಲಿ ದೇಶಕ್ಕೆ ಸ್ವಾತಂತ್ರö್ಯ ಲಭಿಸುತ್ತಿರಲಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿಯೂ ಇರುತ್ತಿರಲಿಲ್ಲ.
ಇಷ್ಟಕ್ಕೂ ಆ ಫಲಕದಲ್ಲಿದ್ದುದಾದರೂ ಏನು? “ಕುರುಡು ಕುರುಡಾಗಿ ನಾವು ರಾಷ್ಟ್ರಭಕ್ತಿಯ ವ್ರತವನ್ನು ಹಿಡಿದಿಲ್ಲ. ಇತಿಹಾಸದ ಪ್ರಖರ ಪ್ರಕಾಶದಡಿಯಲ್ಲಿ ನಾವು ಅರಿವನ್ನು ಕಂಡುಕೊಂಡು ದೃಢವಾದ ಪ್ರತಿಜ್ಞೆಯನ್ನು ಸ್ವೀಕರಿಸಿದ್ದೇವೆ. ಈ ಅಗ್ನಿಜ್ವಾಲೆಯಲ್ಲಿ ಸುಟ್ಟುಹೋಗಬೇಕೆಂಬುದೇ ನಮ್ಮ ನಿಶ್ಚಯವಾಗಿದೆ. ಆತ್ಮಬಲಿದಾನದ ವ್ರತವನ್ನು ನಾವು ಸ್ವೀಕರಿಸಿದ್ದೇವೆ.” ಈ ಉದಾತ್ತ ದರ್ಶನವು ಸತ್ತಾಲೋಲುಪ ಕಾಂಗ್ರೆಸ್ ನೇತೃತ್ವಕ್ಕೆ ಹೇಗೆತಾನೆ ಅರ್ಥವಾದೀತು! ಸೂರ್ಯನತ್ತ ಉಗುಳಿದರೆ ಅದು ಬೀಳುವುದು ಉಗುಳಿದವರ ಮೇಲೆಯೇ.
ಪ್ರಖರ ರಾಷ್ಟ್ರಭಕ್ತಿಯೂ ವಿವಾದದ ವಸ್ತುವಾಗುವುದು ಸಾಧ್ಯವೆ? ಯಾರ ರಾಷ್ಟ್ರಭಕ್ತಿಯು ಸ್ಫಟಿಕೋಪಮವಾಗಿದ್ದಿತೋ, ಯಾರು ಸ್ವಾತಂತ್ರ್ಯ ಸಂಘರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಬವಣೆಗಳನ್ನು ಅನುಭವಿಸಿದರೋ, ಯಾರು ಕ್ರಾಂತಿಪುಂಜವಾಗಿದ್ದುದು ಮಾತ್ರವಲ್ಲದೆ ಕ್ರಾಂತಿಶಾಸ್ತ್ರವನ್ನೇ ನಿರ್ಮಿಸಿದವರೆಂದು ಇಡೀ ಜಗತ್ತಿನ ಪ್ರಶಂಸೆಗೆ ಭಾಜನರಾದರೋ ಅಂತಹ ಅನನ್ಯ ವೀರರನ್ನು ಕ್ಷುಲ್ಲಕ ರಾಜಕಾರಣದ ನೆಲೆಯಿಂದ ನೇತಾರರೆನಿಸಿದವರ ಒಂದು ಬಣವು ಟೀಕೆಗೊಳಪಡಿಸುತ್ತ ಬಂದದ್ದನ್ನು ಒಂದು ವಿಧಿವೈಕಟ್ಯವೆಂದಷ್ಟೆ ಭಾವಿಸಬೇಕೇನೊ. ದೀರ್ಘಕಾಲದ ಬಂಧನದಿಂದಲೂ ಕಠಿಣ ಕಾರಾವಾಸದಿಂದಲೂ ಮುಕ್ತರಾದ ಮೇಲೂ ದೇಶೀಯ ಸರ್ಕಾರವೇ ಅವರ ಬಗೆಗೆ ದುರಾಗ್ರಹದಿಂದ ವರ್ತಿಸಿದ ಸೋಜಿಗವನ್ನು ದೇಶವು ನೋಡಬೇಕಾಯಿತು.
ಅದು ಹೇಗಾದರಿರಲಿ. ಜನಸಾಮಾನ್ಯರ ದೃಷ್ಟಿಯಲ್ಲಂತೂ ಸ್ವಾತಂತ್ರ್ಯವೀರರಲ್ಲಿ ಸಾವರಕರರು ಅಗ್ರಣಿಗಳೆಂಬ ಗಣನೆ ಅವರ ಸ್ವರ್ಗವಾಸವಾದ ಅರ್ಧಶತಮಾನದ ತರುವಾಯವೂ ಮುಂದುವರಿದಿರುವುದು ಆರೋಗ್ಯಕರ ಮಾನಸಿಕತೆ ನಮ್ಮ ಜನತೆಯ ಬಹುದೊಡ್ಡ ವರ್ಗದಲ್ಲಿ ಜೀವಂತವಿದೆ ಎಂಬುದನ್ನು ಪುರಾವೆಗೊಳಿಸುತ್ತದೆ.
ಮನೋನಿಶ್ಚಲತೆ
ಸಾವರಕರರು ತತ್ಕಾಲೀನ ವಿದೇಶೀ ಪ್ರಭುತ್ವದ ಕೈಯಲ್ಲಿ ಅನುಭವಿಸಿದ ಕಷ್ಟಕೋಟಲೆಗಳನ್ನು ಕುರಿತು ಯೋಚಿಸುವಾಗ ಸಾವರಕರರು ಮಾನವಚೇತನದ ಕ್ಷಮತೆಯ ಆತ್ಯಂತಿಕ ಪರಿಧಿಯನ್ನು ತೋರಿಸಿಕೊಟ್ಟರು ಎನ್ನಬೇಕಾಗುತ್ತದೆ. ಈ ಪ್ರಮಾಣದ ಮನೋಬಲವನ್ನು ಲೋಕಾತೀತವೆನ್ನಬಹುದು. ಏಕಾಂಗಿಯಾಗಿಯಾದರೂ ನ್ಯಾಯಬಾಹಿರ ಪ್ರಭುತ್ವದ ವಿರುದ್ಧ ಸೆಣಸುವೆನೆಂಬ ನಿಶ್ಚಲತೆಯನ್ನು ವಿರಳವಾಗಿಯಷ್ಟೆ ಕಾಣಬಹುದು. ತಮ್ಮವರ ಎಂದರೆ ಸ್ವಧರ್ಮೀಯರ ಒಂದು ವರ್ಗದಿಂದಲೂ ಅಸಮ್ಮತಿಯನ್ನು ಎದುರಿಸಬೇಕಾಗಿ ಬಂದದ್ದು ಸಾವರಕರರ ಸಂಘರ್ಷದ ಒಂದು ಆಯಾಮ.
ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ವಿವಿಧ ಸನ್ನಿವೇಶಗಳಿಂದ ರಾಷ್ಟ್ರೀಯತಾಪರ ಶ್ರದ್ಧೆಯೇ ಹೃಸ್ವಗೊಳ್ಳುತ್ತ ಸಾಗಿದುದು ಈಚಿನ ಇತಿಹಾಸದ ಒಂದು ದುರಂತ. ಆ ವಿಕ್ಷಿಪ್ತ ಪರಿಸರದಲ್ಲಿಯೂ ಪ್ರಖರ ರಾಷ್ಟ್ರವಾದವನ್ನು ಎತ್ತಿಹಿಡಿದ ವಿರಳರಲ್ಲಿ ಒಬ್ಬರು ಸಾವರಕರ್.
‘ಪ್ರಥಮ’ಗಳ ಸರಣಿ
ಸಾವರಕರರ ತ್ಯಾಗಮಯ ಜೀವಿತದ ಹಲವು ‘ಪ್ರಥಮ’ಗಳನ್ನು ಮೆಲುಕುಹಾಕಿದರೂ ಅವರ ಅನನ್ಯತೆ ಎದ್ದುಕಾಣುತ್ತದೆ.
- ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ಭಾರತದ ಲಕ್ಷ್ಯ – ಎಂದು ಆಂಗ್ಲಪ್ರಭುತ್ವವನ್ನು ಸಂಬೋಧಿಸಿ ಕಂಠೋಕ್ತವಾಗಿ ಸಾರಿದುದು ಮಾತ್ರವಲ್ಲದೆ ಆ ಉದ್ದೇಶದ ಸಾಧನೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಾಂತಿಕಾರಿ ಆಂದೋಲನವನ್ನು ಸಂಘಟಿಸಿದ ಆದ್ಯರು ಸಾವರಕರ್.
- ವಿದೇಶೀ ವಸ್ತ್ರಗಳ ದಹನವನ್ನು ಮೊತ್ತಮೊದಲು ಸಂಘಟಿಸಿದವರು ಸಾವರಕರ್.
- ತಾವು ನಡೆಸಿದ ಸ್ವಾತಂತ್ರ್ಯ ಹೋರಾಟದ ಕಾರಣದಿಂದ ತಮ್ಮ ವಿಶ್ವವಿದ್ಯಾಲಯ ಪದವಿಯನ್ನು ಮುಟ್ಟುಗೋಲು ಹಾಕಿಸಿಕೊಂಡ ಪ್ರಥಮರು ಸಾವರಕರ್.
- ಬ್ರಿಟಿಷ್ ಸಮ್ರಾಟನಿಗೆ ತಮ್ಮ ನಿಷ್ಠೆಯನ್ನು ಘೋಷಿಸಲು ನಿರಾಕರಿಸಿದ ಕಾರಣಕ್ಕಾಗಿ ಬ್ಯಾರಿಸ್ಟರ್ ಸನ್ನದನ್ನು ಪಡೆಯದ ಮೊದಲಿಗರು ಸಾವರಕರ್.
- ಮುದ್ರಣ-ಪ್ರಕಾಶನಕ್ಕೂ ಮೊದಲೇ ಎರಡು ಸರ್ಕಾರಗಳಿಂದ ನಿಷೇಧಕ್ಕೆ ಗುರಿಯಾದ ‘ಗೌರವ’ ಪಡೆದ ಜಗತ್ತಿನ ಪ್ರಥಮ ಕೃತಿಯ (‘೧೮೫೭ರ ಸ್ವಾತಂತ್ರ್ಯ ಸಮರ’) ಲೇಖಕರು ಸಾವರಕರ್.
- ಬ್ರಿಟಿಷ್ ಪ್ರಭುತ್ವದ ಧೋರಣೆಗಳನ್ನು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಟೀಕೆ ಮಾಡಿ ಭಾರತದ ಸ್ವಾತಂತ್ರ್ಯಾರ್ಹತೆಯನ್ನು ವಿವಿಧ ದೇಶಗಳ ಗಮನಕ್ಕೆ ತಂದ ಮೊದಲಿಗರು ಸಾವರಕರ್.
- ತಮ್ಮ ರಾಜಕೀಯ ಬಂಧನವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ದು ಪರಾಮರ್ಶನಯೋಗ್ಯ ಮೊಕದ್ದಮೆಯನ್ನಾಗಿಸಿದ ಮೊದಲಿಗರು ಸಾವರಕರ್.
- ಎರಡು ಜೀವಾವಧಿ ಶಿಕ್ಷೆಗಳಿಗೆ ಗುರಿಯಾದ ರಾಜಕೀಯ ಬಂದಿಯಾಗಿ ಜಗತ್ತಿನಲ್ಲೆ ದಾಖಲೆ ಮಾಡಿದ ಮೊದಲಿಗರು ಸಾವರಕರ್.
- ಲೇಖನಸಾಧನಗಳನ್ನು ಸೆರೆಮನೆಯ ಅಧಿಕಾರಿಗಳು ಅಲಭ್ಯಗೊಳಿಸಿದ್ದಾಗ ಕಾರಾಗÀÈಹದ ಗೋಡೆಗಳ ಮೇಲೆಯೆ ಬೃಹತ್ ಕಾವ್ಯವನ್ನು ರಚನೆ ಮಾಡಿ ಅದನ್ನು ನೆನಪಿನಿಂದ ಹೊರಜಗತ್ತಿಗೆ ದಾಟಿಸಿದ ಮೊದಲ ಕವಿ ಸಾವರಕರ್.
- ರತ್ನಾಗಿರಿಯಲ್ಲಿ ಗೃಹಬಂಧನದಲ್ಲಿ ಇದ್ದಾಗಲೇ ಅಸ್ಪೃಶ್ಯತಾನಿವಾರಣೆಗಾಗಿ ಮತ್ತು ಜಾತ್ಯತೀತ ಸಮಾಜಕ್ಕಾಗಿ ಆಂದೋಲನ ನಡೆಸಿದ ಮೊದಲಿಗರು ಸಾವರಕರ್.
ಗುಣಗ್ರಹಣ
ಸಾವರಕರರ ಬಗೆಗೆ ಗಣ್ಯ ಚಿಂತಕ ಪ್ರೊ|| ಯಶವಂತ ಗೋಪಾಲ ಭಾವೆ ಅವರು ‘Savarkar: The muchmailgned and misunderstood revoluationary and freedom fighter’ ಎಂಬ ಗ್ರಂಥವನ್ನು ಈಗ್ಗೆ ನಾಲ್ಕು ದಶಕಗಳ ಹಿಂದೆ ಬರೆದರು. ಸ್ವಾರಸ್ಯಕರ ಅಂಶವೆಂದರೆ – ಭಾವೆ ಅವರಿಗೆ ಈ ಗ್ರಂಥವನ್ನು ಬರೆಯಲು ಪ್ರೇರಣೆಯನ್ನೂ ಪ್ರೋತ್ಸಾಹವನ್ನೂ ನೀಡಿದವರು ಖ್ಯಾತ ಪತ್ರಕರ್ತ ‘ಮೈನ್ಸ್ಟ್ರೀಮ್’ ಪತ್ರಿಕೆಯ ಸಂಪಾದಕ ನಿಖಿಲ್ ಚಕ್ರವರ್ತಿ. ನಿಖಿಲ್ ಚಕ್ರವರ್ತಿಯವರಾದರೋ ಭಾರತದಲ್ಲಿನ ವಾಮಪಂಥಿ ಪ್ರಯಾಸಗಳಿಗೆ ಮಾರ್ಗದರ್ಶಕರಾಗಿ ಗುರುಸ್ಥಾನೀಯರಾಗಿದ್ದವರು. ಇದು ಸೋಜಿಗವಾದರೂ ಸತ್ಯ.
ಒಮ್ಮೆ ನಿಖಿಲ್ ಚಕ್ರವರ್ತಿಯವರ ಮನೆಯಲ್ಲಿ ನಡೆದ ಮಿತ್ರಗೋಷ್ಠಿಯಲ್ಲಿ ಭಾವೆ ಅವರೂ ಸೇರಿದ್ದರು. ಆಗ ಅವರಿಗೆ ನಿಖಿಲ್ದಾ ಹೇಳಿದರು: “ಭಾವೆ ಅವರೆ, ವೀರ ಸಾವರಕರರ ಬಗೆಗೆ ಮಹಾರಾಷ್ಟ್ರದಿಂದಾಚೆಗೆ ಬಹಳ ಕಡಮೆ ಜನಕ್ಕೆ ತಿಳಿದಿದೆ. ಅವರ ಬಗೆಗೆ ಇದುವರೆಗೆ ಬಂದಿರುವ ಸಾಹಿತ್ಯದಲ್ಲಿ ಹೆಚ್ಚಿನ ಭಾಗ ಮರಾಠಿ ಭಾಷೆಯಲ್ಲಿದೆ. ನೀವು ಇಂಗ್ಲಿಷಿನಲ್ಲಿ ಒಂದು ಗ್ರಂಥ ಬರೆದಲ್ಲಿ ಅನೇಕರ ಮನಸ್ಸಿನಲ್ಲಿರುವ ಅಪಕಲ್ಪನೆಗಳು ದೂರವಾದಾವು.”
ಈ ಸಲಹೆ ಕಮ್ಯೂನಿಸ್ಟ್ ಧಾರೆಯ ಪ್ರಮುಖರೊಬ್ಬರಿಂದ ಬಂದದ್ದನ್ನು ಕೇಳಿ ಆಶ್ಚರ್ಯಗೊಂಡು ಭಾವೆ ನಿಖಿಲ್ದಾ ಅವರನ್ನು ಪ್ರಶ್ನಿಸಿದರು: “ನಿಖಿಲ್ದಾ ಅವರೆ, ವಾಮಪಂಥಿಗಳಲ್ಲಿ ಹೆಚ್ಚಿನವರು ಸಾವರಕರರನ್ನು ಸಾಂಪ್ರದಾಯಿಕರೆಂದು ಕರೆದು ಅವಹೇಳನ ಮಾಡುವುದು ರೂಢಿಯಾಗಿದೆ. ಅವರು ಕ್ರಾಂತಿಕಾರಿಗಳಲ್ಲಿ ಅಗ್ರಣಿ ಎಂಬುದನ್ನೂ ಸ್ವಾತಂತ್ರö್ಯ ಹೋರಾಟಗಾರೆಂಬುದನ್ನೂ ಕೂಡಾ ವಾಮವಾದಿಗಳು ನಿರಾಕರಿಸುತ್ತಾರೆ. ಆ ಜಾಡಿಗೆ ಅಪವಾದಾತ್ಮಕವಾಗಿ ತಾವು ಮಾತನಾಡುತ್ತಿದ್ದೀರಲ್ಲ!”
ಇದಕ್ಕೆ ನಿಖಿಲ್ದಾ ಮುಗುಳ್ನಕ್ಕು ಉತ್ತರಿಸಿದರು: “೧೯೩೦ರ ವರ್ಷಗಳಲ್ಲಿ ನಾನೂ ನನ್ನ ಓರಗೆಯ ಅನೇಕರೂ ಸ್ವಾತಂತ್ರ್ಯ ಹೋರಾಟದಲ್ಲಿ ಮಗ್ನರಾಗಿದ್ದೆವು. ನಮ್ಮಲ್ಲಿ ಎಲ್ಲ ಧಾರೆಯ ಯುವಕರೂ ಇದ್ದರು. ಆದರೂ ಎಲ್ಲರಲ್ಲಿ ಇದ್ದ ಸಮಾನಾಂಶವೆಂದರೆ ಸ್ವಾತಂತ್ರ್ಯಸೇನಾನಿಗಳ ಬಗೆಗೆ ನಿತಾಂತ ಆದರಣೆ ಮತ್ತು ಗೌರವ.”
ನಿಖಿಲ್ದಾ ಅವರ ಸಲಹೆಯಂತೆ ಭಾವೆ ಅವರು ಅನಂತರದ ದಿನಗಳಲ್ಲಿ ಗ್ರಂಥ ಬರೆದದ್ದು ಮೊದಲಾದದ್ದೆಲ್ಲ ಬೇರೆಯ ಕಥೆ. ಈ ಪ್ರಸಂಗವನ್ನು ಉಲ್ಲೇಖಿಸಿದುದರ ಆಶಯ – ೧೯೩೦ರ ದಶಕದ ಯುವಕರ ಮಾನಸಿಕತೆ ಹೇಗಿತ್ತೆಂಬುದನ್ನು ಸೂಚಿಸುವುದು. ಅದಾದ ಮೂರುನಾಲ್ಕು ದಶಕಗಳಾದ ಮೇಲೆ ವಾಮವಾದ ಪ್ರಭಾವಿತರ ಮಾನಸಿಕತೆ ಹೇಗಾಗಿದ್ದಿತೆಂಬುದು ಸುವಿದಿತ. ಇದು ಕಾಲಮಹಿಮೆ.
* * *
ದ್ರಷ್ಟಾರ ಸಾವರಕರ್ ಲೇಖನಮಾಲೆಯ ಲೇಖನಗಳು ಇಲ್ಲಿವೆ:
https://utthana.in/?tag=savarkar
ಸಾಮಾಜಿಕ ಪ್ರಾಗ್ಭೂಮಿಕೆ
ಲೋಕಮಾನ್ಯ ತಿಲಕ್, ವೀರ ಸಾವರಕರ್ – ಇವರ ಎದುರಿಗೆ ಹಲವು ವಿಶೇಷ ಸವಾಲುಗಳು ಇದ್ದವು. ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯಂತೂ ಇದ್ದೇ ಇದ್ದಿತು. ಭಾರತೀಯ ಸಮಾಜದ ನಿಸ್ತೇಜ ಸ್ಥಿತಿಗೆ ಅನ್ಯ ಕಾರಣಗಳೂ ಇದ್ದವು. ರಾಷ್ಟ್ರೀಯತೆಯ ಪ್ರಜ್ಞೆಯಾಗಲಿ ಸ್ವಾತಂತ್ರ್ಯದ ಆಕಾಂಕ್ಷೆಯಾಗಲಿ ಎಲ್ಲ ದೇಶೀಯರಲ್ಲಿಯೂ ಇದ್ದಿತೆನ್ನಲಾಗದು. ವಿದೇಶೀ ಆಳ್ವಿಕೆಯ ಮುಂದುವರಿಕೆಯಲ್ಲಿ ಸಮಸ್ಯೆಯೇನೂ ಇಲ್ಲವೆಂದು ಭಾವಿಸಿದ್ದ ಒಂದು ತಥೋಕ್ತ ‘ಶಿಕ್ಷಿತ’ ವರ್ಗವೂ ಇಲ್ಲದಿರಲಿಲ್ಲ. ತಾವು ಸಾಂಪ್ರದಾಯಿಕ ಶಾಸ್ತ್ರಾಧ್ಯಯನ ಮಾಡುತ್ತ ಪಾರಂಪರಿಕ ಸಂಸ್ಕೃತಿಯ ಸಂದೇಶವನ್ನು ಪ್ರಸಾರ ಮಾಡಿದರೆ ಸಾಕು – ಎಂದು ಭಾವಿಸಿದ್ದ ಒಂದು ಗಣನೀಯ ವರ್ಗವೂ ಇದ್ದಿತು. ಇಂತಹ ಆಲಸ್ಯದ ಮತ್ತು ಯಥಾಸ್ಥಿತಿವಾದದ ಪ್ರಾಚುರ್ಯವನ್ನು ತಗ್ಗಿಸಿ ಜನತೆಯಲ್ಲಿ ಹೆಚ್ಚಿನ ಸ್ವಾಭಿಮಾನವನ್ನೂ ಸ್ವಾತಂತ್ರ್ಯಾಕಾಂಕ್ಷೆಯನ್ನೂ ಬೆಳೆಸಬೇಕಾಗಿತ್ತು. ಈ ಲಕ್ಷ್ಯಕ್ಕಾಗಿ ತಿಲಕರು ಗಣೇಶೋತ್ಸವ, ಶಿವಾಜಿ ಜಯಂತಿ ಮೊದಲಾದ ವಿನೂತನ ಆಂದೋಲನಗಳನ್ನು ಹುಟ್ಟುಹಾಕಿದುದು ಪ್ರಸಿದ್ಧವೇ ಆಗಿದೆ. ತಿಲಕರು ನಿರ್ಮಿಸಿದ್ದ ಬುನಾದಿಯ ಮೇಲೆ ನವಜಾಗೃತಿಪ್ರಸರಣದ ಕಾರ್ಯವನ್ನು ಕೈಗೊಂಡು ಅದಕ್ಕೆ ಹೊಸ ಆಯಾಮಗಳನ್ನು ಸೇರಿಸಿದವರು ಸಾವರಕರ್.
ಇದರ ಜೊತೆಜೊತೆಯಲ್ಲಿ ಪಾಶ್ಚಾತ್ಯ ಜಗತ್ತಿನ ಈಚಿನ ಶತಮಾನಗಳ ವಿಜ್ಞಾನ-ತಂತ್ರಜ್ಞಾನಗಳ ಬೆಡಗಿಗೂ ಪಾಶ್ಚಾತ್ಯ ಮೂಲದ್ದೆಲ್ಲ ಶ್ರೇಷ್ಠವೆಂಬ ನಿರಾಧಾರ ಮಾನಸಿಕತೆಗೂ ಸಿಲುಕಿದ್ದ ಅಲ್ಪಪ್ರಮಾಣದದ್ದಾದರೂ ಪ್ರಭಾವಿಯಾಗಿದ್ದ ಸಮಾಜೋನ್ನತ ವರ್ಗದ ದೃಷ್ಟಿದೋಷವನ್ನು ನೇರ್ಪಡಿಸಬೇಕಾದ ಆವಶ್ಯಕತೆಯೂ ಇದ್ದಿತು. ಈ ಜಾಡಿನ ವಿಕೃತಿಗಳನ್ನು ದೃಢಗೊಳಿಸುವುದರಲ್ಲಿ ಬ್ರಿಟಿಷ್-ಪ್ರವರ್ತಿತ ಶಿಕ್ಷಣವಿನ್ಯಾಸವು ಎಷ್ಟು ಸಾಫಲ್ಯ ಗಳಿಸಿತ್ತೆಂದರೆ ಒಂದೂವರೆ ಶತಮಾನ ಕಳೆದ ಮೇಲೂ ಆ ಪ್ರಭಾವದ ದಟ್ಟಣೆಯನ್ನು ನೀಗಿಕೊಳ್ಳಲಾಗಿಲ್ಲ.
* * *
ವ್ಯೂಹಾತ್ಮಕ ಚಿಂತನೆ
ಹೇಗೆ ಮುಂದುವರಿಯಬೇಕೆಂಬ ಬಗೆಗೆ ಮಾನಸಿಕ ಗೊಂದಲ ಏರ್ಪಟ್ಟಿರುವಾಗ ಚಿಂತನೆಯನ್ನು ಮತ್ತೆ ಶ್ರೀಕಾರದಿಂದ ಆರಂಭಿಸುವುದು ಸಹಾಯಕವೆಂದು ಹಲವು ಅನುಭವಗಳು ಇವೆ. ಭಾರತದ ಮೊದಲ ರಾಷ್ಟ್ರವ್ಯಾಪಿ ಸ್ವಾತಂತ್ರö್ಯಸಂಗ್ರಾಮ ಅರ್ಧಾಂತಕವಾಗಿದ್ದ ಹಿನ್ನೆಲೆಯಲ್ಲಿ ಕೆಲವೇ ವರ್ಷಗಳ ತರುವಾಯ ವಾಸುದೇವ ಬಲವಂತ ಫಡಕೆ ಮುನ್ನೂರು ವರ್ಷಗಳ ಹಿಂದೆ ಶಿವಾಜಿ ಅನುಸರಿಸಿದ್ದ ಸಂಘಟನತಂತ್ರಗಳನ್ನು ಅಳವಡಿಸಿಕೊಂಡಿದ್ದ; ಪುಣೆಯ ಆಸುಪಾಸಿನ ಗಿರಿಜನರನ್ನು ಒಟ್ಟುಗೂಡಿಸಿ ಅವರನ್ನು ಬ್ರಿಟಿಷ್-ವಿರೋಧಿ ಸಂಘರ್ಷಕ್ಕೆ ಅಣಿಗೊಳಿಸಿದ್ದ. ಆದರೆ ಈ ಪ್ರಯಾಸವು ಬ್ರಿಟಿಷರ ಪ್ರಾಬಲ್ಯಕ್ಕೆ ಹೋಲಿಸಿದರೆ ಸಹಜವಾಗಿ ಅಲ್ಪಪ್ರಮಾಣದ್ದು ಆಗಿದ್ದುದರಿಂದ ಅದು ನಿರೀಕ್ಷಿಸಿದಷ್ಟು ಉತ್ಕರ್ಷ ಪಡೆಯಲಿಲ್ಲ. ಈ ಅನುಭವದ ಹಿನ್ನೆಲೆಯಲ್ಲಿ ಸಾಮ್ರಾಜ್ಯಶಾಹಿಯನ್ನು ಸಶಸ್ತ್ರ ಹೋರಾಟದ ಮೂಲಕ ಎದುರಿಸುವುದು ಪರಿಣಾಮಕಾರಿಯಾಗದೆನ್ನಿಸಿತು; ಗೆರಿಲ್ಲಾ ತಂತ್ರಗಳೂ ರೈಫಲ್ಗಳು ಮೊದಲಾದ ಆಧುನಿಕ ಯುದ್ಧೋಪಕರಣಗಳೂ ಅವಶ್ಯವೆನಿಸಿತು.
ಈ ಹಿನ್ನೆಲೆಯನ್ನೆಲ್ಲ ಸಾವರಕರರು ಆಳವಾಗಿ ಅಧ್ಯಯನ ಮಾಡಿದ್ದರು; ಮತ್ತು ಆ ದಿನಗಳ ಸಾಂಪ್ರದಾಯಿಕ ನಾಯಕತ್ವವು ಅಳವಡಿಸಿಕೊಂಡಿದ್ದ, ತಾತ್ತ್ವಿಕ ಅಧಿಷ್ಠಾನವಿಲ್ಲದ ಸೌಮ್ಯಮಾರ್ಗದ ಅನುಸರಣೀಯತೆಯ ಭ್ರಮೆಯಿಂದ ದೂರವಾಗಿದ್ದರು; ಪ್ರತಿಯಾಗಿ ತಿಲಕರ ತೇಜಸ್ವಿ ಮಾರ್ಗದ ಅನುಯಾಯಿಯಾಗಿದ್ದರು. ಈ ಮಾರ್ಗದ ಒಂದು ಪ್ರಮುಖ ಲಕ್ಷಣವೆಂದರೆ ಸ್ವಾತಂತ್ರಾö್ಯನುಕೂಲ ಬೆಳವಣಿಗೆಗಳು ಆಗಲಿ ಎಂದು ಕಾದು ಕುಳಿತಿರದೆ ಅಂತಹ ಬೆಳವಣಿಗೆಗಳಿಗೆ ಪೂರಕ ಪರಿಸರವನ್ನು ತಾವೇ ಕಲ್ಪಿಸುವುದು.
ಹತ್ತೊಂಬತ್ತನೇ ಶತಮಾನದ ಅಂತ್ಯಭಾಗದಲ್ಲಿ ಪ್ರಚಲಿತವಿದ್ದ ಇನ್ನೊಂದು ಧೋರಣೆಯೆಂದರೆ – ಸಮಾಜಸುಧಾರಣೆ ನಡೆಯುತ್ತಹೋದರೆ ಅದರಿಂದ ಸಮಾಜಶಕ್ತಿ ವೃದ್ಧಿಸುತ್ತದೆ ಎಂಬುದು. ಅಗರಕರ್ ಮೊದಲಾದವರ ಸುಧಾರಣಪ್ರಯತ್ನಗಳನ್ನು ಸಾವರಕರರು ಮೆಚ್ಚಿದ್ದರೂ, ಅದು ಪರ್ಯಾಪ್ತವಾಗದೆಂಬ ದೃಷ್ಟಿಯನ್ನೂ ತಳೆದಿದ್ದರು.
ಜನಜಾಗರಣ
ಸಾವರಕರರೂ ಒಂದು ಅರ್ಥದಲ್ಲಿ ಸುಧಾರಕರೇ. ಆದರೆ ಅವರ ಕಲ್ಪನೆಯ ಸುಧಾರಣೆಯೂ ಕ್ರಾಂತಿಕಾರಿ ರೀತಿಯದೇ ಆಗಿತ್ತು.
ಸಾವರಕರರ ಸಾಧನೆಯನ್ನು ಗ್ರಹಿಸಬೇಕಾದರೆ ಮೇಲೆ ನಿದರ್ಶನಾರ್ಥ ಸೂಚಿಸಿದ ಹಿನ್ನೆಲೆ ಮುನ್ನೆಲೆ ಸಾಂದರ್ಭಿಕತೆಯನ್ನು ಅವಗತ ಮಾಡಿಕೊಳ್ಳಬೇಕಾಗುತ್ತದೆ. ತಿಲಕರು ತಾತ್ತ್ವಿಕವಾಗಿ ಸಶಸ್ತ್ರಸಂಘರ್ಷಕ್ಕೂ ಭೂಗತ ಆಂದೋಲನಗಳಿಗೂ ವಿರೋಧಿಗಳಾಗಿರಲಿಲ್ಲ. ಆದರೆ ಆ ಮಾರ್ಗವು ಫಲಕಾರಿಯಾಗದೆಂಬುದು ಅವರಿಗೆ ಖಚಿತಗೊಂಡಿತ್ತು. ಸಾವರಕರರು ದೇಶಾಂತರ ಸಂಘಟನ ಕಾರ್ಯ ಮೊದಲಾದ ವಿಧಾನಗಳಿಂದ ಸಶಸ್ತ್ರಸಂಘರ್ಷಾದಿ ವಿಧಾನಗಳನ್ನು ಹೆಚ್ಚು ಸಕ್ಷಮಗೊಳಿಸಬಯಸಿದರು.
ಬ್ರಿಟಿಷ್ ಪ್ರಭುತ್ವದಿಂದ ಆಗುತ್ತಿದ್ದ ಅಪಾರ ಶೋಷಣೆ, ದಮನಶಾಹಿಯ ವ್ಯಾಪಕತೆ – ಇವನ್ನು ಆಧಾರಸಹಿತವಾಗಿ ಬಯಲುಮಾಡುವ ಆವಶ್ಯಕತೆ ಇದ್ದಿತು. ಬ್ರಿಟಿಷರಿಂದ ನಡೆದಿದ್ದ ಶೋಷಣೆಯನ್ನು ದಾದಾಭಾಯಿ ನವರೋಜಿ ಅವರು ವಿವರವಾಗಿ ಪ್ರಕಟೀಕರಿಸಿದುದು ಆಗಿತ್ತು. ಸಾವರಕರರು ಆ ಹಂತದಿಂದ ಇನ್ನು ಕೆಲವು ಹೆಜ್ಜೆ ಮುಂದೆ ಸಾಗಬಯಸಿದರು. ಬ್ರಿಟಿಷ್ ಆಳ್ವಿಕೆಗೆ ಪ್ರಮುಖ ಆಧಾರವಾಗಿದ್ದುದು ಅವರು ವರ್ಷಗಳುದ್ದಕ್ಕೂ ನಡೆಸಿದ್ದ ನಿರ್ಭಿಡೆಯಾದ ಕೊಳ್ಳೆ. ಭಾರತದ ಸಂಪನ್ಮೂಲಗಳನ್ನು ಹೊರೆಹೊರೆಯಾಗಿ ಇಂಗ್ಲೆಂಡಿಗೆ ಸಾಗಿಸಿದ್ದರು; ಇನ್ನೊಂದುಕಡೆ ಮುಗಿಲೆತ್ತರ ತೆರಿಗೆಗಳನ್ನು ಹೇರಿದ್ದರು; ಮತ್ತೊಂದುಕಡೆ ಭಾರತದ ಸ್ವಾವಲಂಬನೆಗೂ ಸಮೃದ್ಧಿಗೂ ಆಧಾರವಾಗಿದ್ದ ಕೃಷಿ, ಸ್ಥಳೀಯ ತಂತ್ರಜ್ಞಾನ, ಕುಶಲ ಕೈಗಾರಿಕೆಗಳನ್ನು ಉಧ್ವಸ್ತಗೊಳಿಸಿದ್ದರು. ೧೭ನೇ ಶತಮಾನದವರೆಗೆ ಅಂತರರಾಷ್ಟ್ರೀಯ ವಾಣಿಜ್ಯದಲ್ಲಿ ವಿಶ್ವದಲ್ಲಿಯೇ ಮೇಲಿನ ಸ್ಥಾನದಲ್ಲಿದ್ದ ಭಾರತವನ್ನು ಬಡದೇಶದ ಮತ್ತು ಪರಾವಲಂಬಿಯ ಸ್ಥಾನಕ್ಕೆ ಇಳಿಸಿದ್ದರು. ಇವೆಲ್ಲ ಬ್ರಿಟಿಷ್ ಇತಿಹಾಸಜ್ಞರೂ ದಾಖಲೆ ಮಾಡಿಟ್ಟಿರುವ ಸಂಗತಿಗಳೇ.
ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಪ್ರಭುತ್ವಕ್ಕೆ ಆರ್ಥಿಕವಾಗಿ ಪೆಟ್ಟುಕೊಡುವ ಕ್ರಮಗಳು ಅವಶ್ಯವೆಂಬುದು ಸಾವರಕರರ ಚಿಂತನೆಯಾಗಿತ್ತು. ಈ ದಿಕ್ಕಿನಲ್ಲಿ ಅವರು ಯೋಜಿಸಿದ ಒಂದು ಕ್ರಮವೆಂದರೆ ವಿದೇಶೀ ವಸ್ತ್ರಗಳ ದಹನ. ಈ ಸಾಂಕೇತಿಕ ಆಂದೋಲನ ದೂರಗಾಮಿ ಪರಿಣಾಮ ಬೀರಿತು. ಕ್ರಮೇಣ ಅದು ಆಗಷ್ಟೆ ಗರಿಗೆದರುತ್ತಿದ್ದ ಸ್ವದೇಶೀ ಚಳವಳಿಯ ಭಾಗವೂ ಆಯಿತು.
‘ಹಿಂದುತ್ವ’ದ ದಾರ್ಶನಿಕ
ಸಾವರಕರ್ ಒಂದುಕಡೆ ರಾಜಕೀಯ ಪ್ರಾಕಾರದಲ್ಲಿ ಕ್ಷಾತ್ರವೃತ್ತಿಯನ್ನು ಸಚೇತನಗೊಳಿಸಿದಂತೆ ಇನ್ನೊಂದುಕಡೆ ಸಮಾಜದ ಆಂತರಿಕ ಸಾಮಾಜಿಕ ಸುಧಾರಣೆಗೆ ಗಮನಹರಿಸಿದ ದಾರ್ಶನಿಕರೂ ಆದರು. ಈ ಚೇತರಿಕೆಯನ್ನು ‘ಹಿಂದುತ್ವ’ ಎಂಬ ಹೆಸರಿನಿಂದ ಅವರು ಸಂಕೇತಿಸಿದರು.
ಹಿಂದುಧರ್ಮ ಎಂಬ ಶಬ್ದದಲ್ಲಿ ಧಾರ್ಮಿಕ-ಆಧ್ಯಾತ್ಮಿಕ ಧ್ವನಿಯು ಪ್ರಮುಖವಾಗಿರುವ ಕಾರಣ, ಹಿಂದು ಜನಾಂಗದ ಚಿಂತನೆ ಮತ್ತು ವರ್ತನೆಯ ಎಲ್ಲ ಆಯಾಮಗಳನ್ನೂ ಒಳಗೊಳ್ಳುವಂತಹ ಸರ್ವಗ್ರಾಹಿ ಶಬ್ದವಾಗಿ ‘ಹಿಂದುತ್ವ’ ಎಂಬ ಪರಿಭಾಷೆಯನ್ನು ರೂಪಿಸಿದರು, ಸಾವರಕರ್.
ಹೈಹಯ ವಂಶದ ರಾಜ ಸಹಸ್ರಬಾಹು ಕಾರ್ತವೀರ್ಯನು ಕಾಲಕ್ರಮದಲ್ಲಿ ಪ್ರಜಾಪೀಡಕನಾದಾಗ ಶಸ್ತ್ರಧಾರಿಯಾಗಿ ಆತತಾಯಿಯನ್ನು ಮುಗಿಸಿದ ಜಾಮದಗ್ನö್ಯ ಪರಶುರಾಮನನ್ನು ದೊಡ್ಡ ಋಷಿಯೆಂದು ವೇದಯುಗದಲ್ಲಿಯೇ ಪರಿಗಣಿಸಲಾಗಿದೆ. ಇದೂ ಹಿಂದುಧರ್ಮಪರಂಪರೆಯ ಭಾಗವೇ ಎಂಬುದನ್ನು ಮರೆಯಬಾರದು.
ಉದಾತ್ತ ಆಧ್ಯಾತ್ಮಿಕ ಚಿಂತನೆಯನ್ನು ಭೌತಸ್ತರದಲ್ಲಿ ಅಳವಡಿಸಲು ನಿರಂತರ ಶ್ರಮಿಸಿದವರು ಸಾವರಕರ್.
ಒಂದು ರಾಷ್ಟ್ರದ ಮುನ್ನಡೆಯಲ್ಲಿ ಅದರ ಇತಿಹಾಸದ ಸರಿಯಾದ ಗ್ರಹಿಕೆಯದು ಒಂದು ಪ್ರಮುಖ ಸ್ಥಾನವಿದೆಯೆಂದು ಮನಗಂಡು, ಭಾರತದ ಇತಿಹಾಸದ ಸುಷ್ಠೂಕರಣದ ದಿಶೆಯಲ್ಲಿಯೂ ಪಥದರ್ಶಕ ಕಾರ್ಯ ಮಾಡಿದವರು ಸಾವರಕರ್. ಈಗಿರುವಂತಹ ಸೌಕರ್ಯಗಳಿಲ್ಲದ ಕಾಲದಲ್ಲಿ ಸಾವರಕರ್ ಬರೆದ ೧೮೫೭ರ ಸ್ವಾತಂತ್ರ್ಯ ಸಮರದ ಇತಿಹಾಸ, ಮರಾಠಾ ಇತಿಹಾಸಕ್ಕೆ ಸಂಬಂಧಿಸಿದ ‘ಹಿಂದು-ಪದ-ಪಾದಶಾಹಿ’, ‘ಭಾರತದ ಆರು ಸ್ವರ್ಣಿಮ ಅಧ್ಯಾಯಗಳು’, ಇಟಲಿಯ ದೇಶಭಕ್ತಾಗ್ರಣಿ ಮೆಟ್ಸಿನಿಯ ಜೀವನಚರಿತ್ರೆ ಮೊದಲಾದ ಕೃತಿಗಳು ಹೊಸದೊಂದು ಇತಿಹಾಸಪ್ರಸ್ಥಾನವನ್ನೇ ರೂಪಿಸಿದವು. (ಸಶೇಷ)