ಗಾಂಧಿಯವರೂ ಸುಧಾರಣೆಯ ಪರವಾಗಿದ್ದವರೇ. ಆದರೆ ಸುಧಾರಣೆಗೆ ಒಂದು ಕ್ರಾಂತಿಕಾರಿ ಸ್ವರೂಪವನ್ನು ಕೊಡಲು ಹೊರಟವರು ಅಂಬೇಡ್ಕರ್ ಮತ್ತು ಸಾವರಕರ್. ಹಿಂದೆ ಯಾವುದೊ ಕಾಲದಲ್ಲಿ ಸಮಾಜಸ್ವಾಸ್ಥö್ಯಕ್ಕೆ ಪೋಷಕವಾಗಿದ್ದ ಜಾತಿವ್ಯವಸ್ಥೆ ಆಧುನಿಕ ಕಾಲದಲ್ಲಿ ಕಾಲಬಾಹ್ಯವೆನಿಸಿತ್ತು. ಅಂತಹ ರೂಢಿಗಳಿಂದ ಪಕ್ಕಕ್ಕೆ ಸರಿದಲ್ಲಿ ಮಾತ್ರ ಸಮಾಜದಲ್ಲಿ ಹೆಚ್ಚಿನ ಗತಿಶೀಲತೆ ಉಂಟಾದೀತು – ಎಂಬುದು ಸಾವರಕರರ ಪರಾಮರ್ಶನೆಯಾಗಿತ್ತು. ಪೌರೋಹಿತ್ಯಾದಿ ಕಲಾಪಗಳು ಒಂದು ವರ್ಗದವರಿಗೇ ಮೀಸಲಾಗಿದ್ದುದು; ಅಂತರ್ಜಾತೀಯ ವಿವಾಹಕ್ಕೆ ನಿಷೇಧ; ಮತಾಂತರಿತರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುವುದಕ್ಕೆ ಇದ್ದ ನಿಷೇಧ; – ಇಂತಹ ಪರಿಮಿತಿಗಳು ಸಮಾಜದ ಹಿನ್ನಡೆಗೆ ಕಾರಣವಾಗಿವೆ – ಎಂದು ಸಾವರಕರರು ಸ್ಪಷ್ಟ ಶಬ್ದಗಳಲ್ಲಿ ಘೋಷಿಸಿದರು.
ಜನರ ಮನದಲ್ಲಿ ಹಲವೊಮ್ಮೆ ನಿರಾಧಾರ ಮುದ್ರಿಕೆಗಳು ಏರ್ಪಟ್ಟಿರುತ್ತವೆ. ಅವು ಎಷ್ಟು ದೃಢವಾಗಿ ಬೇರುಬಿಟ್ಟಿರುತ್ತವೆಂದರೆ ಅವುಗಳನ್ನು ಉಚ್ಚಾಟಿಸುವುದು ಅಸಾಧ್ಯವೆನಿಸುವಮಟ್ಟಿಗೆ ದುಷ್ಕರವಾಗಿರುತ್ತದೆ.
೧೯ನೇ ಶತಮಾನದ ಅಂತ್ಯಭಾಗದ ಮತ್ತು ೨೦ನೇ ಶತಮಾನದ ಆರಂಭದ ದಶಕಗಳಲ್ಲಿ ಇಡೀ ದೇಶದಲ್ಲಿ ಸಾಂಪ್ರದಾಯಿಕ ಮನೋಭಾವವು ಸಾರ್ವತ್ರಿಕವಾಗಿತ್ತು. ಅದರಿಂದ ಭಿನ್ನವಾದ ನಿಲವನ್ನು ಯಾರಾದರೂ ವ್ಯಕ್ತಪಡಿಸಿದರೆ ಅದನ್ನು ಸಂದೇಹದೃಷ್ಟಿಯಿಂದ ನೋಡಲಾಗುತ್ತಿತ್ತು.
ಒಂದು ಸುತರಾಂ ಆಧಾರರಹಿತ ಭಾವನೆ ಪ್ರಚಲಿತವಾಗಿದ್ದುದೆಂದರೆ ಸಾವರಕರರ ಪ್ರಭುತ್ವವಿರೋಧಿ ಧೋರಣೆಗಳ ಮೂಲ ಆಶಯವು ಸಾಂಪ್ರದಾಯಿಕತೆಯ ದೃಢೀಕರಣಕ್ಕಾಗಿ ನಡೆದಿದ್ದವು ಎಂಬುದು.
ಈ ಜಾಡಿನ ಅನಿಸಿಕೆಗಳು ಬುಡವಿಲ್ಲದವೆಂಬುದು ಸಾವರಕರರ ಮಾತು-ಬರಹ-ವರ್ತನೆಗಳಿಂದ ಸ್ಫುಟಪಡುತ್ತದೆ. ಅವರು ಸಾಂಪ್ರದಾಯಿಕರಾಗಿರುವ ವಿಷಯ ಒತ್ತಟ್ಟಿಗಿರಲಿ; ವಿಜ್ಞಾನಸಂಬಂಧಿ ಹಾಗೂ ಇತರ ವಿಷಯಗಳಲ್ಲಿ ಸಾವರಕರರ ಚಿಂತನೆ ಎಷ್ಟು ಪ್ರಗತಿಪರವಾಗಿದ್ದಿತೆಂದರೆ ಅದರಿಂದ ತಥೋಕ್ತ ಸಾಂಪ್ರದಾಯಿಕರೂ ವಿಚಲಿತರಾದದ್ದುಂಟು. ನಿದರ್ಶನಕ್ಕೆ: ಸಾವರಕರರು ಆಧುನಿಕ ವಿಜ್ಞಾನವನ್ನು ಬರಮಾಡಿಕೊಳ್ಳಬೇಕೆಂದು ಹೇಳುತ್ತಿದ್ದುದು ಆಗ ‘ರಾಷ್ಟ್ರೀಯವಾದಿ’ಗಳೆನಿಸಿದ್ದವರಲ್ಲಿ ಬಹುಮಂದಿಗೆ ಸಮ್ಮತವಿರಲಿಲ್ಲ. ಎಲ್ಲ ‘ಆಧುನಿಕತೆ’ಯೂ ನಮ್ಮ ಧರ್ಮದ ಊರ್ಜಿತತೆಗೆ ಮಾರಕ – ಎಂದು ನಂಬಿದ್ದವರಿಗೆ ಆಗಲೂ ಈಗಲೂ ಕೊರತೆಯಿಲ್ಲ.
ಈ ಮಾನಸಿಕ ದ್ವಿಮುಖತೆ ಹಲವು ವಿನೋದಕರ ಪ್ರಸಂಗಗಳಿಗೆ ಎಡೆಗೊಟ್ಟದ್ದೂ ಉಂಟು. ಒಮ್ಮೆ ಹೀಗಾಯಿತು. ಆಕಸ್ಮಿಕವಾಗಿ ಹುಟ್ಟಿನಿಂದ ಸಾವರಕರರ ಸಮುದಾಯಕ್ಕೆ ಸೇರಿರದ ಚಿಂತಕರೊಬ್ಬರು ಸಾವರಕರರನ್ನು ಕುರಿತು ಉತ್ಕೃಷ್ಟ ಗ್ರಂಥವೊಂದನ್ನು ರಚಿಸಿದರು. ಅದು ಬಹುಮಂದಿಯ ಆದರಣೆಗೆ ಪಾತ್ರವಾಯಿತು. ಆದರೆ ಒಂದು ದೊಡ್ಡ ಜನವರ್ಗದಲ್ಲಿ ನಡೆದ ಗುಸುಗುಸು ಪ್ರಚಾರವೆಂದರೆ ಆ ಗ್ರಂಥವನ್ನು ಸಾವರಕರರನ್ನು ಸಮರ್ಥಿಸುವುದಕ್ಕಾಗಿ ಯಾರೋ ಬ್ರಾಹ್ಮಣರೇ ಬೇರೆ ಹೆಸರಿನಲ್ಲಿ ಬರೆದಿದ್ದರು – ಎಂದು!
ದೂರದೃಷ್ಟಿಯ ಚಿಂತನೆ
ಯಾವ ಸಾಮಾಜಿಕ ಪರಿಸರದಲ್ಲಿ ಸಾವರಕರರು ಶ್ರಮಿಸಬೇಕಾಯಿತೆಂಬುದನ್ನು ಸೂಚಿಸಲು ಮೇಲಣ ಪ್ರಸಂಗವನ್ನು ಉಲ್ಲೇಖಿಸಬೇಕಾಯಿತು.
ಮುಸ್ಲಿಮರ ಸಹಕಾರವನ್ನು ಸವಲತ್ತುಗಳ ಮತ್ತು ಆಮಿಷಗಳ ಮೂಲಕ ಕೊಂಡುಕೊಳ್ಳುವುದಕ್ಕೆ ಸಾವರಕರರ ವಿರೋಧ ಇದ್ದಿತೆಂಬ ಕಾರಣದಿಂದ ಅವರಿಗೆ ‘ಸಾಂಪ್ರದಾಯಿಕ’ರೆಂಬ ಅಥವಾ ‘ಮುಸ್ಲಿಂವಿರೋಧಿ’ಗಳೆಂಬ ಹಣೆಪಟ್ಟಿ ಅಂಟಿಸುವುದು ಬಾಲಿಶವೆನಿಸುತ್ತದೆ.
ಸಾವರಕರರ ಚಿಂತನೆ ಸದಾ ದೂರದೃಷ್ಟಿಯದಿರುತ್ತಿತ್ತು. ಅನೇಕ ವಿಷಯಗಳಲ್ಲಿ ಅವರು ಸಮಕಾಲೀನರಿಗಿಂತ ಮುಂದೆ ಇರುತ್ತಿದ್ದರು. ಅವರು ಪ್ರವರ್ತಿಸಿದ ಅನೇಕ ನಡವಳಿಗಳು ಎಷ್ಟು ಮಹತ್ತ್ವದವಾಗಿದ್ದವೆಂಬುದು ಈಗ ಮೆಲುಕುಹಾಕಿದರೆ ವೇದ್ಯವಾಗುತ್ತದೆ. ಉದಾಹರಣೆಗೆ: ತರುಣರೆಲ್ಲ ಪ್ರತಿದಿನ ದೇಹವ್ಯಾಯಾಮ ಮಾಡಬೇಕೆಂಬುದು ಅವರ ಒಂದು ಸೂತ್ರ. ತಮ್ಮ ಅನುಯಾಯಿ ವರ್ಗದವರನ್ನೆಲ್ಲ ಅವರು ವ್ಯಾಯಾಮಶೀಲರನ್ನಾಗಿ ಮಾಡಿದ್ದರು. ಹಿಂದೂ ಯುವಕರು ಹೆಚ್ಚುಹೆಚ್ಚಾಗಿ ಸೇನೆಯಲ್ಲಿ ಸೇರ್ಪಡೆಗೊಳ್ಳಬೇಕೆಂಬ ಅವರ ಮಂಡನೆಯ ತಾರ್ಕಿಕತೆ ಹಲವು ದಶಕಗಳಾದ ಮೇಲೆ ನೇತಾಜಿಯವರ ಆಜಾದ್ ಹಿಂದ್ ಫೌಜ್ ಪ್ರವರ್ತನೆಯಲ್ಲಿ ಸಮರ್ಥನೆಗೊಂಡಿತು.
ಸಾವರಕರರ ರಾಜಕೀಯ ಚಿಂತನೆಗಳನ್ನು ಹಲವರು ಒಪ್ಪದಿರಬಹುದು. ಆದರೆ ಸಾವರಕರರ ಸಮಾಜಸುಧಾರಕ ಪ್ರಯಾಸಗಳ ಅನಿವಾರ್ಯತೆಯನ್ನೂ ಸಾಮಯಿಕತೆಯನ್ನೂ ಅಲ್ಲಗಳೆಯುವುದು ಅಪ್ರಾಮಾಣಿಕವಾಗುತ್ತದೆ. ಆ ದಿನಗಳಲ್ಲಿ ಉನ್ನತ ವರ್ಗಗಳಲ್ಲಿ ‘ಫ್ಯಾಷನಬಲ್’ ಆಗಿರದಿದ್ದ ಅಸ್ಪೃಶ್ಯತಾನಿವಾರಣೋದ್ಯಮ, ಭಾಷೆಯ ಸಂಸ್ಕರಣ ಮೊದಲಾದ ದಿಕ್ಕುಗಳಲ್ಲಿ ಅಪಾರ ಶ್ರಮವನ್ನು ತೊಡಗಿಸಿದ ಸಾವರಕರರನ್ನು ‘ಸ್ವಾತಂತ್ರö್ಯವೀರ’ರೆಂದು ಮಾತ್ರವಲ್ಲದೆ ಸುಧಾರಕರಲ್ಲಿ ಅಗ್ರಪಂಕ್ತಿಯವರೆಂದೂ ಪರಿಗಣಿಸುವುದು ಯುಕ್ತವಾಗುತ್ತದೆ.
ಸುಧಾರಣದೃಷ್ಟಿ
ವಿದೇಶೀ ಪ್ರಭುತ್ವದ ವಿರುದ್ಧ ಸಂಘರ್ಷವು ಹೆಚ್ಚು ತೀವ್ರ ಸ್ವರೂಪದ್ದು ಆಗಬೇಕೆಂದು ಸಾವರಕರರು ಅಪೇಕ್ಷೆಪಟ್ಟಂತೆಯೆ ಸಮಾಜಸುಧಾರಣೆಯ ವಿಷಯದಲ್ಲಿಯೂ ಅವರದು ಅಷ್ಟೇ ಪರಿಣಾಮಕಾರಿ ಚಿಂತನೆಯಾಗಿದ್ದಿತು. ಇದು ಒಂದು ದೃಷ್ಟಿಯಿಂದ ತಿಲಕರ ಚಿಂತನೆಯ ಮುಂದುವರಿಕೆ ಎಂಬಂತೆ ಇದ್ದಿತು. ಸ್ತ್ರೀಯರ ಹಿತದ ಸಂರಕ್ಷಣೆ ಮೊದಲಾದ ಸುಧಾರಕ ಚಟುವಟಿಕೆಗಳೇನೋ ಹಿಂದಿನಿಂದ ನಡೆದಿದ್ದವು. ಆ ಜಾಡಿನ ರಚನಾತ್ಮಕ ಕಾರ್ಯಾವಳಿಗೆ ತಿಲಕರ ಸಹಾನುಭೂತಿ ಇದ್ದರೂ ಅವು ಆಗಿನ ಸನ್ನಿವೇಶದಲ್ಲಿ ಅಪರ್ಯಾಪ್ತವೆಂಬ ಅನಿಸಿಕೆಯೂ ಅವರಲ್ಲಿ ಇದ್ದಿತು. ಇದರ ಬಗೆಗೆ ಗಾಢವಾಗಿ ಚಿಂತಿಸಿದ ಸಾವರಕರರು ಅಸ್ಪೃಶ್ಯತಾನಿವಾರಣೆ ಎಲ್ಲ ಸುಧಾರಕ ಕಾರ್ಯಾವಳಿಗಳಿಗೆ ಕೇಂದ್ರಸ್ಥವಾಗಿರಬೇಕೆಂಬ ನಿಲವನ್ನು ತಳೆದರು. ಗಾಂಧಿಯವರೂ ಸುಧಾರಣೆಯ ಪರವಾಗಿದ್ದವರೇ. ಆದರೆ ಸುಧಾರಣೆಗೆ ಒಂದು ಕ್ರಾಂತಿಕಾರಿ ಸ್ವರೂಪವನ್ನು ಕೊಡಲು ಹೊರಟವರು ಅಂಬೇಡ್ಕರ್ ಮತ್ತು ಸಾವರಕರ್.
ಹಿಂದೆ ಯಾವುದೊ ಕಾಲದಲ್ಲಿ ಸಮಾಜಸ್ವಾಸ್ಥö್ಯಕ್ಕೆ ಪೋಷಕವಾಗಿದ್ದ ಜಾತಿವ್ಯವಸ್ಥೆ ಆಧುನಿಕ ಕಾಲದಲ್ಲಿ ಕಾಲಬಾಹ್ಯವೆನಿಸಿತ್ತು. ಅಂತಹ ರೂಢಿಗಳಿಂದ ಪಕ್ಕಕ್ಕೆ ಸರಿದಲ್ಲಿ ಮಾತ್ರ ಸಮಾಜದಲ್ಲಿ ಹೆಚ್ಚಿನ ಗತಿಶೀಲತೆ ಉಂಟಾದೀತು – ಎಂಬುದು ಸಾವರಕರರ ಪರಾಮರ್ಶನೆಯಾಗಿತ್ತು. ಪೌರೋಹಿತ್ಯಾದಿ ಕಲಾಪಗಳು ಒಂದು ವರ್ಗದವರಿಗೇ ಮೀಸಲಾಗಿದ್ದುದು; ಅಂತರ್ಜಾತೀಯ ವಿವಾಹಕ್ಕೆ ನಿಷೇಧ; ಮತಾಂತರಿತರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುವುದಕ್ಕೆ ಇದ್ದ ನಿಷೇಧ; – ಇಂತಹ ಪರಿಮಿತಿಗಳು ಸಮಾಜದ ಹಿನ್ನಡೆಗೆ ಕಾರಣವಾಗಿವೆ – ಎಂದು ಸಾವರಕರರು ಸ್ಪಷ್ಟ ಶಬ್ದಗಳಲ್ಲಿ ಘೋಷಿಸಿದರು. ಆ ದಿನಗಳಲ್ಲಿ ಎಂದರೆ ೨೦ನೇ ಶತಮಾನದ ಮೊದಲ ಪಾದದ ದಶಕಗಳಲ್ಲಿ ಈ ಜಾಡಿನ ಚಿಂತನೆ ಕ್ರಾಂತಿಕಾರಕವೆಂದೇ ಎನಿಸಿತು. ಈ ಸತರ್ಕ ಪರಿವರ್ತನೆಗೆ ಸಾಂಪ್ರದಾಯಿಕ ಸಮಾಜದ ಅನುಮೋದನೆ ದೊರೆಯುವುದು ಆಗ ಸುಲಭವಿರಲಿಲ್ಲ. ಒಂದು ಗಣನೀಯ ಪ್ರಮಾಣದ ಸಮಾಜವರ್ಗದ ಅಸಹಕಾರವನ್ನು ಎದುರಿಸಬೇಕಾಗುವ ಸಂಭವದ ಅರಿವಿದ್ದರೂ ಸಾವರಕರರು ಹಿಂದೆಗೆಯದೆ ಅಸ್ಪೃಶ್ಯತಾನಿವಾರಣೆಯ ಪರವಾಗಿಯೂ ದಯಾನಂದಸರಸ್ವತಿಗಳು ಪ್ರವರ್ತಿಸಿದ್ದ ಪರಾವರ್ತನದ ಪರವಾಗಿಯೂ ದೃಢವಾದ ನಿಲವನ್ನು ತಳೆದರು. ಅಂಡಮಾನಿನ ಸೆರೆಯಲ್ಲಿ ಬಂಧಿತರಾಗಿದ್ದ ದಿನಗಳಲ್ಲಿ ಚಿಂತನೆ ನಡೆಸಿದಂತೆಲ್ಲ ಸಾವರಕರರ ಮನಸ್ಸಿಗೆ ಅಸ್ಪೃಶ್ಯತಾನಿವಾರಣೆ ಹೆಚ್ಚುಹೆಚ್ಚು ಮುಖ್ಯವೆನಿಸತೊಡಗಿತ್ತು.
ದ್ರಷ್ಟಾರ ಸಾವರಕರ್ ಲೇಖನಮಾಲೆಯ ಹಿಂದಿನ ಲೇಖನಗಳು ಇಲ್ಲಿವೆ: https://utthana.in/?tag=savarkar
ಪತಿತಪಾವನಮಂದಿರ
೧೯೨೪ರಲ್ಲಿ ಬಂಧನಮುಕ್ತರಾಗಿ ರತ್ನಗಿರಿಯಲ್ಲಿ ಸ್ಥಾನಬದ್ಧತೆಯಲ್ಲಿ ಇರುವಾಗಲೇ ಸಾವರಕರ್ ತಮ್ಮ ಸಮಾಜಸುಧಾರಣ ಕಲ್ಪನೆಯನ್ನು ಸಾಕಾರಗೊಳಿಸಲೆಳಸಿದರು. ಅವರು ಕೈಗೊಂಡ ಮೊದಲ ಕ್ರಮವೆಂದರೆ ಪತಿತಪಾವನಮಂದಿರದ ಸ್ಥಾಪನೆ.
ಪತಿತಪಾವನಮಂದಿರದ ಸ್ಥಾಪನೆ ಒಂದು ದೃಷ್ಟಿಯಿಂದ ಸಾಂಕೇತಿಕವಾಗಿದ್ದಿತು. ಅದರ ಪ್ರತಿಷ್ಠಾಪನೆಯನ್ನು ವೈದಿಕ ಕಲಾಪಗಳೊಂದಿಗೆ ಓರ್ವ ನಿಮ್ನಜಾತಿಗೆ ಸೇರಿದಾತನಿಂದ ಮಾಡಿಸಲಾಯಿತು. ಮಂದಿರದಲ್ಲಿ ಎಲ್ಲ ಹಿಂದೂಗಳಿಗೂ ಪ್ರವೇಶ ಮುಕ್ತವಾಗಿರತಕ್ಕದ್ದೆಂದು ಮೊದಲೇ ನಿಶ್ಚಯಿಸಲಾಗಿತ್ತು; ಹಾಗೆಯೇ ನಡೆಯಿತು. ಸಾವರಕರರ ಆಶಯವಿದ್ದದ್ದು ದೇಶದೆಲ್ಲೆಡೆ ಎಲ್ಲ ಮಂದಿರಗಳಲ್ಲಿಯೂ ತಥೋಕ್ತ ‘ಅಸ್ಪೃಶ್ಯ’ ವರ್ಗದವರಿಗೂ ಪ್ರವೇಶ ಇರಬೇಕು ಎಂಬುದಾಗಿತ್ತು. ಇದನ್ನು ಪ್ರಸ್ತಾವಿಸಿ ಸಾವರಕರರು ದೇಶದ ಎಲ್ಲ ಪ್ರಮುಖ ಪವಿತ್ರ ಕ್ಷೇತ್ರಗಳ ಅಧಿಕಾರಿಗಳಿಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದರು. ಎಲ್ಲ ಜಾತಿಗಳವರ ಸಾಮೂಹಿಕ ಭೋಜನ ಮೊದಲಾದ ಪೂರಕ ಕಾರ್ಯಾವಳಿಗಳನ್ನೂ ಸಾವರಕರರು ನಡೆಸಿದರು.
ಸಾರ್ವಜನಿಕ ವೇದಿಕೆಗಳಲ್ಲಿ ಎಷ್ಟೊ ವರ್ಷ ಹಿಂದಿನಿಂದ ಅಸ್ಪೃಶ್ಯತೆಯ ವಿರುದ್ಧ ಘೋಷಣೆಗಳು ಆಗುತ್ತಿದ್ದವು. ಆದರೆ ಅಸ್ಪೃಶ್ಯತಾನಿವಾರಣೆಗಾಗಿ ತಮ್ಮಿಂದಾದ ಅರ್ಥಪೂರ್ಣ ಕ್ರಮಗಳನ್ನು ನಡೆಸಿದವರು ಸಾವರಕರ್.
ಸಾವರಕರರನ್ನು ಸಂಪ್ರದಾಯಜಡರೆಂದು ನಿರಾಧಾರವಾಗಿ ಟೀಕಿಸುವ ಪ್ರಥೆ ಮನೆಮಾಡಿರುವುದರಿಂದ ಮೇಲಣ ವಿವರಗಳನ್ನು ಇಲ್ಲಿ ಸ್ಮರಿಸಿದ್ದಾಯಿತು.
೧೯೩೧ರ ಆರಂಭದಲ್ಲಿ ಪತಿತಪಾವನಮಂದಿರದ ಪ್ರಾಂಗಣದಲ್ಲಿ ಅಸ್ಪೃಶ್ಯತಾನಿವಾರಣ ಸಮ್ಮೇಳನವೊಂದು ಆಯೋಜಿತವಾಯಿತು. ಸಾವರಕರರೇ ಅದರ ಅಧ್ಯಕ್ಷತೆ ವಹಿಸಿದರು. ಸವರ್ಣೀಯರು ನಿಮ್ನಜಾತಿಗಳವರ ಬಗೆಗೆ ತಾಯಿಯು ಮಕ್ಕಳಲ್ಲಿ ತೋರುವಂತಹ ವಾತ್ಸಲ್ಯವನ್ನು ತೋರಬೇಕು – ಎಂದು ಸಾವರಕರರು ಭಾವೋದ್ವಿಗ್ನರಾಗಿ ಹೇಳಿದರು.
ಪ್ರಯತ್ನದಾರ್ಢ್ಯ
ಅಸ್ಪೃಶ್ಯತಾನಿವಾರಣೆಯ ದಿಶೆಯಲ್ಲಿ ಸಾವರಕರರು ಕೈಗೊಂಡ ದೃಢಮನಸ್ಕ ಕ್ರಮಗಳನ್ನು ವಿಠ್ಠಲರಾವ್ಜೀ ಶಿಂಧೆ ಮೊದಲಾದ ಗಣ್ಯರೆಲ್ಲ ಹಾರ್ದವಾಗಿ ಮೆಚ್ಚಿ ಶುಭಾಶÀಂಸನೆಗಳನ್ನು ತಿಳಿಸಿದರು.
ಸಾವರಕರರು ಕೇವಲ ಅಂಧ ಸ್ವದೇಶಭಕ್ತಿಯಿಂದ ಚಳವಳಿ ನಡೆಸುತ್ತಿದ್ದವರಲ್ಲ. ಅವರ ನಿರ್ಧಾರಗಳೆಲ್ಲವೂ ಪ್ರಜ್ಞಾಪೂರ್ವಕವಾಗಿರುತ್ತಿದ್ದವು. ಅವರದೇ ಆರಂಭಕಾಲದ ಕವಿತೆಯೊಳಗಿನ ಒಂದು ಚರಣದ ಮಾತುಗಳು ಇವು:
“ನಾವು ಕೇವಲ ಅಂಧಭಕ್ತಿಯಿಂದ ರಾಷ್ಟ್ರವ್ರತವನ್ನು ಸ್ವೀಕರಿಸಿರುವವರಲ್ಲ. ನಮ್ಮ ಕಾರ್ಯವು ಮನುಷ್ಯಸಹಜ ಪ್ರವೃತ್ತಿಯಿಂದ ಪ್ರೇರಿತವಾಗಿರುವಂತಹದು ಮತ್ತು ಇದಕ್ಕೆ ನೈಜ ಇತಿಹಾಸದ ಸಮರ್ಥನೆಯೂ ಇದೆ. ನಮ್ಮ ಪ್ರಯಾಸವು ಬೆಂಕಿಯೊಡನೆ ಚೆಲ್ಲಾಟವಾಡಿದಂತೆ ಎಂಬುದರ ಅರಿವೂ ನಮಗೆ ಇದೆ. ನಾವು ಆರಿಸಿಕೊಂಡಿರುವ ಮಾರ್ಗ ದುರ್ಗಮವಾದುದೆಂದು ತಿಳಿದೂ ನಾವು ಆತ್ಮಯಜ್ಞಕ್ಕೆ ಮುಂದಾಗಿದ್ದೇವೆ.”
ಅತ್ಯಂತ ಕಠಿಣ ಬಾಹ್ಯ ಸನ್ನಿವೇಶಗಳು ಇದ್ದಾಗಲೂ ಅವುಗಳಿಂದ ಪೂರ್ಣ ಅಸಂಪೃಕ್ತರಾಗಿ ರಾಷ್ಟ್ರಚಿಂತನೆಯಲ್ಲಿಯೂ ಕಾವ್ಯರಚನೆಯಲ್ಲಿಯೂ ಸಾವರಕರರು ತೊಡಗಿಕೊಂಡದ್ದು ಒಂದು ಅನುಪಮ ಸಾಧನೆ ಎಂಬುದು ಎದ್ದುಕಾಣುತ್ತದೆ. ಇಂತಹ ಮನೋದಾರ್ಢ್ಯವು ಸಕಲವಿಧ ಸೌಕರ್ಯಗಳನ್ನು ಹೊಂದಿದವರಲ್ಲಿಯೂ ವಿರಳವಾಗಷ್ಟೆ ಕಾಣಬಹುದು. ವಿಸ್ಮಯಕರ ಅಂತಃಶ್ಚೈನ್ಯವೇ ಅದರ ಮೂಲಸ್ರೋತ.
ಸ್ಥಾನಬದ್ಧತೆಯ ಅವಧಿಯಲ್ಲಿ ಸಾವರಕರರು ತಮ್ಮ ಸಮಾಜಾಭಿಮುಖತೆಯನ್ನು ಬೇರೊಂದು ದಿಕ್ಕಿನಲ್ಲಿ ತೊಡಗಿಸಲು ನಿಶ್ಚಯಿಸಿದರು. ಅದೆಂದರೆ ಅಸ್ಪೃಶ್ಯತಾನಿವಾರಣೆಯ ಪ್ರಚಾರ ಮತ್ತು ಕಾರ್ಯಾನ್ವಯಕ್ಕೆ ಆದ್ಯತೆ. ಈ ವಿಷಯದಲ್ಲಿ ಅವರ ಗಾಢಶ್ರದ್ಧೆ ಇದ್ದದ್ದೇ. ಈ ದಿಕ್ಕಿನ ಆಂದೋಲನ ಆಗಿನ ಎಂದರೆ ೨೦ನೇ ಶತಮಾನದ ನಡುಭಾಗದ ಸನ್ನಿವೇಶದಲ್ಲಿ ಅತ್ಯಂತ ಸಂಗತವೆಂದು ಅವರು ನಿಶ್ಚಯಿಸಿದರು. ಅವರು ಕೈಗೊಂಡ ಕಾರ್ಯಾವಳಿಯಲ್ಲಿ ಹಲವು ಸೂಕ್ಷಾö್ಮಂಶಗಳನ್ನೂ ಸೇರ್ಪಡೆ ಮಾಡಿದರು. ಅಸ್ಪೃಶ್ಯತಾನಿವಾರಣೆಯು ಸಮಾಜಹಿತ ದೃಷ್ಟಿಯಿಂದ ಅವಶ್ಯ ಮತ್ತು ಸಹಕಾರಿ ಎಂಬುದನ್ನು ಆಧುನಿಕಮನಸ್ಕರಾರೂ ನಿರಾಕರಿಸುತ್ತಿರಲಿಲ್ಲ. ಅದೂ ಮಹಿಳಾಕಲ್ಯಾಣ, ಸಾರ್ವಜನಿಕ ಶಿಕ್ಷಣ, ಕ್ಷಾತ್ರಗುಣವರ್ಧನೆ ಮೊದಲಾದವುಗಳಂತೆ ಒಂದು ಮುಖ್ಯ ಸುಧಾರಣ ಕ್ಷೇತ್ರ – ಎಂಬ ರೀತಿಯ ಚಿಂತನೆ ಪ್ರಚಲಿತವಾಗಿತ್ತು. ಸಾವರಕರರು ಆ ಚಿಂತನೆಯಿಂದ ಇನ್ನು ಹಲವು ಹೆಜ್ಜೆ ಮುಂದೆ ಸಾಗಿದರು; ಅಸ್ಪೃಶ್ಯತೆಯ ಆಚರಣೆಯು ಸನಾತನ ಹಿಂದೂಧರ್ಮಕ್ಕೇ ಅನುಗುಣವಾದುದಲ್ಲ – ಎಂದು ಮಂಡನೆ ಮಾಡಿದರು.
ತಿಲಕ್ ಚಿಂತನಧಾರೆಯ ಮುಂದುವರಿಕೆ
ಇದಾದರೋ ಲೋಕಮಾನ್ಯ ತಿಲಕರ ಚಿಂತನೆಯ ಮುಂದುವರಿಕೆಯೇ ಆಗಿತ್ತು ಎನ್ನಬಹುದು. ಯಾರು ಹಿಂದೂ ಎಂಬ ಬಗೆಗೆ ತಿಲಕರು ನೀಡಿದ್ದ ಸೂತ್ರೀಕರಣದ ಆಶಯವನ್ನು ಸಾವರಕರರು ಇನ್ನಷ್ಟು ಸ್ಫುಟೀಕರಿಸಿದರು; ಭಾರತವನ್ನು ತಂದೆಯೆಂದೂ ತಾಯಿಯೆಂದೂ ಯಾರು ಸ್ವೀಕರಿಸಿದ್ದಾರೋ ಅವರು – ಯಾವುದೇ ಜಾತಿಗೆ ಸೇರಿದವರಿರಲಿ – ಹಿಂದೂಗಳೇ ಎಂದು ಸಾರಿದರು.
ಆಸಿಂಧು-ಸಿಂಧು-ಪರ್ಯಂತಾ
ಯಸ್ಯ ಭಾರತ ಭೂಮಿಕಾ |
ಪಿತೃಭೂಃ ಪುಣ್ಯಭೂಶ್ಚೆöÊವ
ಸ ವೈ ಹಿಂದುರಿತಿ ಸ್ಮೃತಃ ||
ಸಾವರಕರರ ಆಂದೋಲನಕ್ಕೆ ಆ ದಿನಗಳಲ್ಲಿ ನಿರೀಕ್ಷಿತ ಮಟ್ಟದ ಸ್ಪಂದನ ದೊರೆಯಲಿಲ್ಲ. ಆದರೆ ಅದಾದ ಏಳೆಂಟು ದಶಕಗಳ ತರುವಾಯವೂ ಅನುಸರಣೀಯವಾಗಿ ಉಳಿದಿರುವ ಸಮಾಜಸುಧಾರಣೆಯೊಂದರ ಆವಶ್ಯಕತೆಗೆ ಸಾವರಕರರು ಆ ದಿನಗಳಲ್ಲಿಯೆ ತೀಕ್ಷ÷್ಣ ಗಮನ ಸೆಳೆದಿದ್ದುದು ಸ್ಮರಣೀಯ.
ಸಾಮಾಜಿಕ-ಧಾರ್ಮಿಕ ನಡವಳಿಗಳಿಗೆ ವೈಚಾರಿಕ-ವೈಜ್ಞಾನಿಕ ಆಧಾರ ಇರಬೇಕೆಂದು ಪ್ರತಿಪಾದಿಸಿದವರು ಸಾವರಕರ್. ಆದ್ದರಿಂದ ಅವರನ್ನು ರೂಢಿವಾದಿಗಳೆಂದೂ ಸಾಂಪ್ರದಾಯಿಕರೆಂದೂ ಪರಿಗಣಿಸುವುದು ಸಾಧ್ಯವೇ ಇಲ್ಲ.
ಅವರನ್ನು ‘ಜಾತಿವಾದಿ’ಗಳೊಡನೆಯೂ ‘ಮೂಲಭೂತವಾದಿ’ಗಳೊಡನೆಯೂ ಸಮೀಕರಿಸುವುದಕ್ಕೆ ಆಧಾರ ದೊರೆಯದು. ಹೀಗಿರುವಾಗ ಹಿಂದೂಧರ್ಮದ ಪಾರಂಪರಿಕ ಪ್ರಾಕಾರಕ್ಕೆ ಸಾವರಕರರ ದೃಗ್ರೀತಿ ಹೊಂದುತ್ತದೆಯೇ? – ಎಂದರೆ, ನಿಶ್ಚಿತವಾಗಿ ಹೊಂದುತ್ತದೆ ಎಂದೇ ಉತ್ತರಿಸಬೇಕಾಗುತ್ತದೆ. ಸಾವರಕರರು ಮಾಡಿದ ಕೆಲಸವೆಂದರೆ ಹಿಂದೂಧರ್ಮದಲ್ಲಿ ಕಾಲಗತಿಯಿಂದ ಒಳಸರಿದಿದ್ದ, ವಿಸ್ಮರಣೆಗೊಳಗಾಗಿದ್ದ ಒಂದು ಮುಖ್ಯ ಆಯಾಮಕ್ಕೆ ಸ್ವರಭಾರ ನೀಡಿ ಸ್ಫುಟೀಕರಿಸಿದ್ದು.
ಹತ್ತೊಂಬತ್ತನೇ ವಯಸ್ಸಿನಲ್ಲಿಯೇ ಬಾಲವಿಧವೆಯರ ಬವಣೆ ಕುರಿತು ಮಾರ್ಮಿಕ ಪದ್ಯ ಬರೆದಿದ್ದವರು ಸಾವರಕರ್. ಸಾಂಪ್ರದಾಯಿಕ ವಲಯಗಳ ತೀವ್ರ ವಿರೋಧವನ್ನು ಲೆಕ್ಕಿಸದೆ ದೇವಾಲಯಗಳ ದ್ವಾರ ಎಲ್ಲ ಜಾತಿಗಳವರಿಗೂ ತೆರೆದಿರಬೇಕೆಂದು ಪ್ರಚಾರಾಭಿಯಾನ ನಡೆಸಿದ್ದಲ್ಲದೆ ಇದನ್ನು ಹಲವಾರೆಡೆ ಕಾರ್ಯಗತಗೊಳಿಸಿದ ಸಾವರಕರರನ್ನು ಈ ಕಾರಣಕ್ಕಾಗಿಯಾದರೂ ಇಂದಿನವರು ನೆನೆಯಬೇಡವೆ?
ಅಂಬೇಡ್ಕರರ ವಿಶ್ಲೇಷಣೆ
ಅಂಬೇಡ್ಕರರಿಗೂ ಸಾವರಕರರಿಗೂ ನಡುವೆ ಹಲವು ಅಭಿಪ್ರಾಯಭೇದಗಳಿದ್ದವು. ಹೀಗಿದ್ದಾಗಲೂ ಅಂಬೇಡ್ಕರ್ ಆಡಿರುವ ಮಾತುಗಳು ಈ ಇಬ್ಬರು ದೇಶಭಕ್ತರ ಸಮುನ್ನತಿಯನ್ನು ಎತ್ತಿತೋರಿಸುತ್ತವೆ: “ಭಾರತದ ಮುಸ್ಲಿಮರ ಬಗ್ಗೆ ಸಾವರಕರರಿಗೆ ವಿದ್ವೇಷವಿತ್ತೆಂದು ಹೇಳುವುದು ಸಾವರಕರರಿಗೆ ಅನ್ಯಾಯವೆಸಗಿದಂತಾಗುತ್ತದೆ. ಅವರು ರಚನಾತ್ಮಕ ಸಲಹೆಗಳನ್ನು ಮುಂದಿರಿಸಿದ್ದಾರೆ.” (‘Pakistan or the Partition of India’ by Ambedkar, ಪುಟ 132). ಮುಂದುವರಿದು ಅಂಬೇಡ್ಕರ್ ಹೀಗೆಂದಿದ್ದಾರೆ: “ಸಾವರಕರರು ಮುಂದೊಡ್ಡಿರುವ ಪರ್ಯಾಯ ಚಿಂತನೆ ಹೆಚ್ಚು ಸ್ಪಷ್ಟವೂ, ಧೈರ್ಯವಂತವೂ, ನಿರ್ಣಾಯಕವೂ ಆಗಿದೆ. ಪ್ರತಿಯಾಗಿ ‘ಅಲ್ಪಸಂಖ್ಯಾತ’ರ ಹಕ್ಕುಗಳನ್ನು ಕುರಿತ ಕಾಂಗ್ರೆಸ್ಸಿನ ನಿಲವು ಅನಿಯಮಿತವೂ, ಅಸ್ಪಷ್ಟವೂ, ಅನಿಶ್ಚಿತವೂ ಆಗಿದೆ.” (ಪುಟ ೧೩೩).
- ಭಾರತದ ಸಾಂಸ್ಕೃತಿಕ, ಜನಪದೀಯ, ರಾಷ್ಟ್ರೀಯ ಐಕ್ಯಾಧಾರವನ್ನು ಕಾಂಗ್ರೆಸ್ ಅರಿಯಲೇ ಇಲ್ಲ. ಸಾವರಕರರ ದೃಷ್ಟಿಯಲ್ಲಿ ಇದು ಸ್ವತಸ್ಸಿದ್ಧವಾಗಿತ್ತು. ಆದ್ದರಿಂದ ಅವರ ಚಿಂತನೆಯೆಲ್ಲ ನೇರವಾಗಿತ್ತು. “ಈ ದೇಶವನ್ನು ನಾವು ಹಿಂದುಸ್ಥಾನವೆಂದು ಕರೆದ ಮಾತ್ರಕ್ಕೆ ಹಿಂದುಗಳಲ್ಲದವರ ಹಕ್ಕುಗಳಿಗೆ ಧಕ್ಕೆಯಾಗಿಬಿಡುತ್ತದೆಯೆ?… ಚೀನಾ, ಹಂಗೇರಿ, ಪೋಲೆಂಡ್ ಮೊದಲಾದೆಡೆಗಳಲ್ಲಿಯೂ ಮುಸ್ಲಿಮರಿದ್ದಾರೆ. ಹಾಗೆಂದು ಈ ದೇಶಗಳ ಹೆಸರುಗಳನ್ನು ಬದಲಾಯಿಸಿದ್ದಾರೆಯೆ?” (೧೯೩೯ರ ಕೋಲ್ಕತಾದ ಹಿಂದು ಮಹಾಸಭೆಯ ಅಧಿವೇಶನದ ಅಧ್ಯಕ್ಷ ಭಾಷಣ.)
- ಮತಾಂತರದ ಪರಿಣಾಮ ರಾಷ್ಟ್ರಾಂತರವೇ; ಇದನ್ನು ಎಲ್ಲ ಮಾರ್ಗಗಳಿಂದಲೂ ತಡೆಗಟ್ಟಬೇಕು – ಎಂದು ಪ್ರಖರವಾಗಿ ಪ್ರತಿಪಾದಿಸಿದವರು ಸಾವರಕರ್.
- ಮತಾಂತರಿತರನ್ನು ಮತ್ತೆ ಮಾತೃಧರ್ಮಕ್ಕೆ ಸೇರಿಸಿಕೊಳ್ಳುವ ‘ಶುದ್ಧಿ’ ಪ್ರಕ್ರಿಯೆಯನ್ನು ಸಾವರಕರ್ ಸಹಜವಾಗಿಯೇ ಬೆಂಬಲಿಸಿದರು.
* * *
ರಾಷ್ಟ್ರನಿರ್ಮಾಣಕ್ಕೆ ಸಾವರಕರ್ ನೀಡಿದ ದಿಶಾದರ್ಶನದ ಪ್ರಸ್ತುತತೆ ಅವರ ನಿಧನದ ಐವತ್ತಾರು ವರ್ಷಗಳ ನಂತರವೂ ಪ್ರಸ್ಫುಟಗೊಳ್ಳುತ್ತಿದೆ.
ಮುಂಬಯಿಯ ಒಂದು ಸ್ಮರಣೋತ್ಸವದಲ್ಲಿ (೫-೩-೧೯೬೬) ಶ್ರೀಗುರೂಜಿ ನೀಡಿದ ಕರೆ ನಮಗೆ ದಾರಿದೀಪವಾಗಲಿ.
“ಸಾವರಕರರಷ್ಟು ಓಜಃಪೂರ್ಣವಾಗಿಯೂ ಸಾತತ್ಯದಿಂದಲೂ ಪ್ರಭಾವಕಾರಿಯಾಗಿಯೂ ರಾಷ್ಟ್ರಕಾರ್ಯವನ್ನು ಬೇರಾವ ವ್ಯಕ್ತಿಯೂ ಮಾಡಲಾರರು. ಸಾಮೂಹಿಕವಾಗಿಯಾದರೂ ಅವರ ದಿಶಾದರ್ಶನಕ್ಕನುಗುಣವಾಗಿ ಕರ್ತವ್ಯ ನಿರ್ವಹಿಸಲು ನಮ್ಮ ಯೋಗ್ಯತೆಯಿರುವಷ್ಟು ಶ್ರಮಿಸೋಣ.”
(ಸಶೇಷ)