ಒಂದು ಹಳ್ಳಿಗೆ ಹೋಗಿದ್ದೆ. ಹತ್ತಾರು ಎಕರೆಗಳಲ್ಲಿ ಅವರು ವೈವಿಧ್ಯಮಯ ಕೃಷಿ ಮಾಡುತ್ತಿದ್ದರು. ಫಲಭಾರದಿಂದ ತೂಗುತ್ತಿದ್ದ ಅಡಕೆಮರಗಳು, ಗೊನೆ ಹೊತ್ತು ತೊನೆಯುತ್ತಿರುವ ತೆಂಗುಗಳು, ಕೃಷಿಮೇಳದಲ್ಲಿ ಮೊದಲ ಬಹುಮಾನ ತಂದುಕೊಟ್ಟ ಅಷ್ಟೆತ್ತರದ ಬಾಳೆಗೊನೆಗಳು, ಸಾಲಾಗಿ ಬರುತ್ತಿದ್ದ ದನಗಳು ಎಲ್ಲವೂ ಇದ್ದ ಅವರಲ್ಲಿ ಕೈಗೊಬ್ಬ ಕಾಲಿಗೊಬ್ಬ ಕೆಲಸದವನೂ ಇದ್ದ. ಕುತೂಹಲದಿಂದ ಕೇಳಿದ್ದೆ, “ಕೆಲಸಕ್ಕೆ ಬೇಕಾದಷ್ಟು ಜನ ನಿಮಗೆ ಸಿಗುತ್ತಾರಾ?” ಅವರು, “ನನಗೆ ಕೆಲಸದ ಜನಕ್ಕೆ ದರಿದ್ರವೇ ಇಲ್ಲ. ಸಂಬಳ ಮಾತ್ರವಲ್ಲ, ವರ್ಷಕ್ಕೊಮ್ಮೆ ಬೋನಸ್ ಅಂತ ಪಾತ್ರೆಗಳನ್ನು ಕೊಡುತ್ತೇನೆ. ಅವರಲ್ಲಿ ಮದುವೆಯಾಗುವುದಾದರೆ ಹತ್ತು ಸಾವಿರ ಕೊಡುತ್ತೇನೆ. ನನಗೆ ಬೇಡ ಅಂದ್ರೂ ಜನ ಸಿಗುತ್ತಾರೆ” ಎಂದಿದ್ದರು.
ಹತ್ತು ವರ್ಷಗಳ ಬಳಿಕ ನಾನು ಮತ್ತೆ ಇಲ್ಲಿಗೆ ಬರುವಾಗ ಕೃಷಿಯಲ್ಲಿ ಅತ್ಯದ್ಭುತ ಪ್ರಗತಿಯಾಗಿರಬಹುದೆಂದು ಎಣಿಸಿದ್ದರೆ ತೋಟದ ಚಿತ್ರವೇ ಬದಲಾಗಿತ್ತು. ಕೊಳೆರೋಗ ಬಂದು ಅಡಕೆಗೊನೆಗಳು ಒಣಗಿ ಜೋತಾಡುತ್ತಿವೆ. ಸುಕ್ಕುಗಟ್ಟಿದ ತೆಂಗಿನಮರಗಳ ಬುಡದಲ್ಲಿ ಬಿದ್ದಿದ್ದ ಬೊಂಡಗಳೂ ಬ್ರಹ್ಮಕಪಾಲದ ಹಾಗೆ ಮಂಗಗಳ ದಾಹವಡಗಿಸಿ ಬಿದ್ದುಕೊಂಡಿವೆ. ಅಷ್ಟು ದೊಡ್ಡ ಕೊಟ್ಟಿಗೆಯಲ್ಲಿ ಒಂದೇ ಒಂದು ಬಡಕಲು ದನವಿದೆ. ಮನೆಯೊಳಗೆ ನೋಡಿದರೆ ಶ್ಮಶಾನ ಮೌನ. ಜೇಡದ ಬಲೆ ಗುಡಿಸದೆ ವರ್ಷಗಳೇ ಕಳೆದಿರಬಹುದು.
ಅಂದು ಆತ್ಮವಿಶ್ವಾಸದಿಂದ ಮಾತನಾಡಿದ ಯಜಮಾನರು ಚೈತನ್ಯರಹಿತರಾಗಿದ್ದಾರೆ. ಅವರಿಗೆ ಡಯಾಬಿಟಿಸ್. ಹೆಂಡತಿಗೆ ಇನ್ನೂ ಏನೋ ಒಂದು. ಮಾತಿನಲ್ಲಿ ನಿಸ್ತೇಜವಿದೆ. “ಐವತ್ತು ಎಕರೆ ಜಾಗ ಉಂಟು. ಯಾರಿಗೆ ಹೇಳಿ? ತೋಟಕ್ಕೆ ಬೇಸಗೆಯಲ್ಲಿ ನೀರುಹಾಕಲು ಜನವಿಲ್ಲದೆ ನೋಡಿ ಮರಗಳೆಲ್ಲ ಊದುಬತ್ತಿಯ ಹಾಗಾಗಿವೆ. ಮದ್ದು ಬಿಡಲು ಬರುತ್ತೇನೆಂದು ಒಪ್ಪಿಕೊಂಡವ ಕೈಕೊಟ್ಟ. ರೋಗ ಬಂದು ಇದ್ದ ಅಡಕೆಗಳೂ ಬುಡದಲ್ಲಿ ಇವೆ. ಒಂದು ಕಡೆಯಿಂದ ಮಂಗಗಳ ಕಾಟ. ಹಂದಿ, ನವಿಲು ಎಲ್ಲ ಬರ್ತವೆ. ದಿನದ ಖರ್ಚು ನಡೆಯುವುದೇ ಕಷ್ಟವಾಗಿದೆ. ಜಾಗ ಮಾರಿ ಎಲ್ಲಾದರೂ ಹೋಗುವ ಅಂದ್ರೆ ಹಳ್ಳಿಗೆ ಗಿರಾಕಿ ಬರುವುದಿಲ್ಲ. ರಬ್ಬರ್ ಹತ್ತೆಕರೆಯಲ್ಲಿ ಹಾಕಿದ್ದೇನೆ. ಟ್ಯಾಪಿಂಗಿಗೆ ಜನ ಸಿಗದೆ ಎರಡು ವರ್ಷಗಳಿಂದ ಹಾಗೆಯೇ ಉಂಟು” ನಿಡುಸುಯ್ಲಿಟ್ಟರು.
“ನಿಮ್ಮ ಮಕ್ಕಳು ಯಾರಾದ್ರೂ ಬಂದು ನಿಲ್ಲಬಹುದಲ್ಲ? ಬಂಗಾರದಂತಹ ಜಾಗ ಗುಡ್ಡೆಗೆ ಸೇರಿದೆ” ಎಂದೆ ವಿಷಾದದಿಂದ. “ಯಾರು! ಅವರಾ?” ಅವರ ಮುಖದಲ್ಲಿ ಮೂಡಿದ ಭಾವ ವರ್ಣನಾತೀತವಾಗಿತ್ತು. “ಒಂದು ದಿನಕ್ಕೆ ಬರುವುದು ಕಷ್ಟದಲ್ಲಿ. ಇಲ್ಲಿ ಕರೆಂಟ್ ಸರಿ ಇಲ್ಲ, ಏರ್ ಕಂಡೀಷನ್ ಇಲ್ಲ ಅಂತ ಮರುದಿನವೇ ಹೊರಟು ನಿಲ್ಲುತ್ತಾರೆ. ಒಬ್ಬ ಇಂಜಿನಿಯರ್, ಇನ್ನೊಬ್ಬ ಸಿ.ಎ. ಧರ್ಮಕ್ಕೆ ಕೊಟ್ಟರೂ ಅವರಿಗೆ ಜಾಗ ಬೇಡವಂತೆ. ನನಗೋ ತೋಟಕ್ಕೆ ಹೋಗಲಿಕ್ಕೆ ಗೊತ್ತಿಲ್ಲ. ಈ ಡಯಾಬಿಟಿಸ್ನಿಂದಾಗಿ ಕಾಲಿಗೆ ಮುಳ್ಳು ಚುಚ್ಚಿದರೆ ಗ್ಯಾಂಗ್ರೀನ್ ಆಗುತ್ತದೆ. ಹೆಚ್ಚೋ ಕಡಮೆಯೋ ಗಿರಾಕಿ ಬಂದ್ರೆ ಕೊಟ್ಟು ಯಾವುದಾದರೂ ವೃದ್ಧಾಶ್ರಮಕ್ಕೆ ಹೋಗುವುದು ಎಂದು ಯೋಚಿಸಿದ್ದೇನೆ” ಎಂದು ಕರುಣಾರ್ದ್ರ ದನಿಯಿಂದ ಅವರು ಹೇಳಿದರು.
ಇನ್ನೊಂದೆಡೆ ಹೋಗಿದ್ದೆ. ಭಾರೀ ದೊಡ್ಡ ಜಮೀನಲ್ಲ. ಆದರೂ ಹಿರಿಯರಾದ ತಂದೆ ಶ್ರಮವಹಿಸಿ ಅಡಿಕೆ ಕೃಷಿ ಮಾಡಿದ್ದರು. ಮೂರೆಕರೆ ರಬ್ಬರ್ ಹಾಕಿದ್ದರು. ಮಗ ಎಲೆಕ್ಟ್ರಾನಿಕ್ ಡಿಪ್ಲೊಮಾ ಮಾಡಿ ಉದ್ಯೋಗದ ಬೇಟೆಯಲ್ಲಿದ್ದ. ಒಂದು ಮರಕ್ಕೆ ಎರಡು ರೂಪಾಯಿಯಂತೆ ಕೂಲಿ ಕೊಟ್ಟು ರಬ್ಬರ್ ಹಾಲು ತೆಗೆಸುತ್ತಿದ್ದರು. ಅವನು ದಿನಕ್ಕೆ ಮುನ್ನೂರು ಮರದಿಂದ ಹಾಲು ತೆಗೆಯುತ್ತಿದ್ದ. ಒಂದು ಸಲ ಯಜಮಾನರ ಮಗ ರಬ್ಬರ್ ಮರಗಳನ್ನು ನೋಡಿದಾಗ ಆತ ಇನ್ನೂರು ಮರಗಳನ್ನು ಮಾತ್ರ ಟ್ಯಾಪಿಂಗ್ ಮಾಡಿ ನೂರು ಮರಗಳ ಕೂಲಿಯನ್ನು ಹೆಚ್ಚಾಗಿ ಪಡೆಯುತ್ತಿರುವ ಸತ್ಯವೊಂದು ಗೋಚರಿಸಿತು. ಆಗ ಅವರು ಒಂದು ಲೆಕ್ಕ ಹಾಕಿದರು. ತಾನು ಕಲಿತ ನೌಕರಿಯಲ್ಲಿ ಮುಂದುವರಿದರೆ ತಿಂಗಳಿಗೆ ಮೂವತ್ತು ಸಾವಿರ ಬರಬಹುದು. ಪರರ ಕೈಕೆಳಗೆ ದುಡಿಯಬೇಕು. ದೂರದ ಊರಿಗೆ ಹೋದರೆ ಖರ್ಚು ಬೇರೆ. ಅದರ ಬದಲು ತಾನೇ ರಬ್ಬರ್ ಟ್ಯಾಪಿಂಗ್ ಕಲಿತು ಸ್ವಂತ ಜಾಗದಲ್ಲಿ ದುಡಿದರೆ ಹೆಚ್ಚು ಆದಾಯವೂ ಬರುತ್ತೆ. ಕೂಲಿಯ ಹಣ ಉಳಿತಾಯವಾಗುತ್ತದೆ. ಮುಪ್ಪಿನಲ್ಲಿರುವ ಹೆತ್ತವರಿಗೆ ಬದುಕಿನ ಭದ್ರತೆಯೂ ಸಿಗುತ್ತದೆ.
ಡಿಪ್ಲೊಮಾ ಮಾಡಿದ ಯುವಕ ಕೇಂದ್ರೀಯ ರಬ್ಬರ್ ಮಂಡಳಿ ಉಚಿತವಾಗಿ ನೀಡಿದ ಟ್ಯಾಪಿಂಗ್ ತರಬೇತಿ ಪಡೆದು ಸ್ವಂತ ಟ್ಯಾಪಿಂಗ್ ಆರಂಭಿಸಿದ ಮೊದಲ ತಿಂಗಳಲ್ಲಿ ಕೂಲಿಯವನಿಗಿಂತ ಇಪ್ಪತ್ತು ಸಾವಿರ ರೂಪಾಯಿಗಳ ರಬ್ಬರ್ ಷೀಟ್ ಅಧಿಕ ಬಂದಿತು. ಕೂಲಿಯಿಂದ ಉಳಿತಾಯವಾದದ್ದು ಹದಿನೆಂಟು ಸಾವಿರ. ಕಡಮೆ ಶ್ರಮ, ಮಧ್ಯಾಹ್ನದವರೆಗೆ ದುಡಿಮೆ. `ಇಷ್ಟು ಸಂಪಾದನೆ ಸಿಗುವಾಗ ಬೇರೆ ಉದ್ಯೋಗ ಬೇಕೆ?’ ಇದು ಅವರ ಪ್ರಶ್ನೆ. ಅವರು ತೋಟಕ್ಕೆ ಮದ್ದು ಬಿಡಲು, ಕಾಯಿ ಕೀಳಲು ಜನಗಳನ್ನು ಆಶ್ರಯಿಸುವುದೇ ಇಲ್ಲ. ಸಾಧ್ಯವಿರುವಷ್ಟು ಯಂತ್ರಗಳನ್ನು ತಂದಿಟ್ಟುಕೊಂಡಿದ್ದಾರೆ. ಅದರ ಬಳಕೆ ಮಾಡಿ ತಾವೊಬ್ಬರೇ ಕೆಲಸಗಳನ್ನು ನಿರ್ವಹಿಸುತ್ತಾರೆ.
ಕೃಷಿಕ ಬಂಧುಗಳು ತಮ್ಮ ಸ್ವಯಂಕೃತ ಅಪರಾಧದಿಂದಾಗಿ ಪರಂಪರೆಯಿಂದ ಬಂದ ಕೃಷಿ ಯಜ್ಞವನ್ನು ಕೈಬಿಡುವಂತಾಗಿದೆ. ಗಂಡಿರಲಿ, ಹೆಣ್ಣಿರಲಿ ಮಕ್ಕಳು ಒಂದು ಅಥವಾ ಎರಡೇ ಇರಲಿ ಎಂಬ ಸೂತ್ರವನ್ನು ಕನಿಷ್ಠ ಕೃಷಿಕನಾದರೂ ದೂರವಿಡಬಹುದಿತ್ತು. ಕೃಷಿಯ ಆದಾಯಕ್ಕಿಂತ ಸರಕಾರಿ ಉದ್ಯೋಗದಲ್ಲಿ ಗಳಿಕೆ ಜಾಸ್ತಿಯೆಂಬ ದೂರದ ಬೆಟ್ಟವನ್ನು ಸವರಿ ನೋಡದೆ ನುಣ್ಣಗೆ ಎಂದು ತೀರ್ಮಾನಿಸಿದ ಪಾಪದ ಫಲವಾಗಿ ಬಂಗಾರ ಬೆಳೆಯುವ ಭೂಮಿಗಳು ಕಡಮೆ ಬೆಲೆಗೆ ಉದ್ಯಮಪತಿಗಳ ವಶವಾಗುತ್ತಿವೆ ಅಥವಾ ಹಾಳು ಬಿದ್ದಿವೆ. ಅಪ್ಪ ಒದ್ದೆ ಬಟ್ಟೆಯುಟ್ಟೇ ಬದುಕಿದರೂ ಮಗನಿಗೆ ಕಷ್ಟದ ಕಾವಳ ಸೋಂಕಬಾರದೆಂದು ಪ್ಯಾಂಟು ಹಾಕಿಯೇ ಬೆಳೆಸಿದರು. ಮನೆಯೊಳಗೂ ಚಪ್ಪಲಿ ಹಾಕಿಕೊಂಡೇ ನಡೆದಾಡಿದ ಮಗನಿಗೆ ತೋಟದ ಮಣ್ಣು ಅಲರ್ಜಿಯಾಯಿತು. ನಮ್ಮ ಉದ್ಯೋಗವೇ ಸುಖದಾಯಕವೆಂದು ತೀರ್ಮಾನಿಸಿದ ಮಕ್ಕಳು ಹಳ್ಳಿಯ ಜೀವನದ ಕಷ್ಟಗಳ ಬಗೆಗೆ ತಮ್ಮದೇ ತೀರ್ಮಾನ ಕೈಗೊಂಡಿದ್ದಾರೆ. ಹೆಣ್ಣುಮಕ್ಕಳು ಕೂಡ ಕೃಷಿಕನ ಬದುಕಿಗೆ ಆಸರೆಯಾಗಲು ಸಿದ್ಧರಿಲ್ಲ. ಇಂಥ ದುರಂತ ಸ್ಥಿತಿ ಹಳ್ಳಿಗಳಲ್ಲಿ ವಿಡಂಬನೆ ಮಾಡುವಂತಾಗಿದೆ.
ಏನೂ ಶ್ರಮವಹಿಸದೆ ಎಲ್ಲವನ್ನೂ ಕೂಲಿಯವರಿಂದಲೇ ಮಾಡಿಸಬೇಕೆಂಬ ಐಷಾರಾಮೀ ವಿಧಾನಕ್ಕೆ ಶರಣಾಗದಿರುತ್ತಿದ್ದರೆ ಡಯಾಬಿಟಿಸ್ನಂತಹ ಸಮಸ್ಯೆಗಳು ರೈತರನ್ನು ಕಾಡುತ್ತಿರಲಿಲ್ಲವೇನೋ! ನನ್ನ ಮಗ ಇಂಜಿನಿಯರಾಗಬೇಕು, ಬೇರೆಯವರ ಮಕ್ಕಳು ನನ್ನಲ್ಲಿ ದುಡಿಯಬೇಕು ಎಂಬ ಮನೋಭಾವ ಬದಲಾದರೆ ಸ್ವಂತ ದುಡಿಮೆಯಿಂದ ಕೃಷಿಯನ್ನು ಉಳಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ವ್ಯವಸಾಯ ಮೂಲೆ ಸೇರಿ ಎಲ್ಲ ಹೊಟ್ಟೆಗಳಿಗೂ ಸಾಲುವಷ್ಟು ಆಹಾರ ಸಿಗುವುದು ಸಂಶಯ. ಈಗಲೇ ಎಚ್ಚತ್ತುಕೊಳ್ಳುವುದು ಉತ್ತಮ. ಅನೇಕ ಪ್ರದೇಶಗಳಲ್ಲಿ ಕೂಲಿಯವರನ್ನು ಅವಲಂಬಿಸುವ ಬದಲು ಆ ಪರಿಸರದ ರೈತರು ಸಮೂಹಕೃಷಿ ಯೋಜನೆ ಮಾಡಿಕೊಂಡಿದ್ದಾರೆ. ಒಂದು ದಿನ ಎಲ್ಲ ರೈತರೂ ಒಬ್ಬೊಬ್ಬನೇ ರೈತನ ಮನೆಯಲ್ಲಿ ಒಂದುಗೂಡಿ ಎಲ್ಲ ಕೆಲಸಗಳನ್ನೂ ಮಾಡುವುದರ ಮೂಲಕ ಕೃಷಿಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಕೆಟ್ಟು ಪಟ್ಟಣ ಸೇರುವುದು ಗಾದೆಯ ಮಾತು. ಎಲ್ಲರೂ ಕೆಡದೆ ಪಟ್ಟಣ ಸೇರಿ ಪರಂಪರಾಗತವಾಗಿ ಬಂದ ಹೊಲಗದ್ದೆಗಳನ್ನು ಹಾಳುಬಿಟ್ಟು ಯಾರಿಗೋ ಮುಕ್ಕಾಸಿಗೆ ಅದನ್ನು ಮಾರುವಂತೆ ಮಾಡುತ್ತಿದ್ದಾರೆ.
ಈ `ಪಲಾಯನ’ವಾದಕ್ಕೆ ದಂಡ ತೆರಬೇಕಾದ ದಿನಗಳು ಬರುವ ಮೊದಲು ಯುವಜನರು ತಮ್ಮ ಹಿರಿಯರಿಗೆ ಕೃಷಿಭೂಮಿಯಿದ್ದರೆ ಅದರಲ್ಲಿ ಬೆಳೆ ಮಾಡಿ ಲಾಭ ಪಡೆಯಲು ಯೋಚಿಸುವುದು ಉತ್ತಮ. ಅವರ ಶ್ರೇಯಸ್ಸಿಗಾಗಿ ನೇಗಿಲ ಮೊನೆ ನೆಲಕ್ಕೊತ್ತಿ ತಮ್ಮ ಬದುಕನ್ನು ದಂಡಿಸಿದ ಹಿರಿಯ ಜೀವಗಳಿಗೂ ನಿಶ್ಚಿಂತೆಯ ಆಧಾರ ಸಿಗುತ್ತದೆ. ಅನ್ನ ಕೊಡುವ ಭೂಮಿಯನ್ನು ನಂಬಿ ಕೆಟ್ಟವರಿಲ್ಲ. ಇನ್ನಾವುದೋ ಉದ್ಯೋಗದಿಂದ ಗಳಿಸಬಲ್ಲಷ್ಟೇ ಹಣ ಅದರಿಂದಲೂ ಬರುವುದರಲ್ಲಿ ಸಂದೇಹವಿಲ್ಲ.?