
ಈಗ್ಗೆ ಹತ್ತು ವರ್ಷಗಳ ಹಿಂದೆ (2011-12) ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ‘ಇಂಡಿಯಾ ಎಗೆನ್ಸ್ಟ್ ಕರಪ್ಶನ್’ ಘೋಷಣೆಯೊಡಗೂಡಿ ಅಣ್ಣಾ ಹಜಾರೆಯವರ ಮಾರ್ಗದರ್ಶನದಲ್ಲಿ ಸಂಘಟನೆ ಆರಂಭವಾದಾಗ ಇಂತಹದೊಂದು ಜನಾಧಾರಿತ ಆಂದೋಲನ ಅತ್ಯಂತ ಆವಶ್ಯಕವಾಗಿತ್ತೆಂದು ಇಡೀ ದೇಶ ಭಾವಿಸಿತ್ತು. ಆದರೆ ಅಲ್ಪಕಾಲದಲ್ಲಿ ಅಣ್ಣಾ ಹಜಾರೆಯವರನ್ನೇ ಮೂಲೆಗುಂಪು ಮಾಡಿ ಕೇಜ್ರಿವಾಲ್ ನೇರ ರಾಜಕಾರಣಕ್ಕೇ ಇಳಿದರು. ಬಹುಮಟ್ಟಿಗೆ ಅಣ್ಣಾ ಹಜಾರೆಯವರ ವ್ಯಕ್ತಿತ್ವಪ್ರಭಾವದಿಂದ ನಿರ್ಮಾಣಗೊಂಡಿದ್ದ ಸದಭಿಪ್ರಾಯವೇ ಕೇಜ್ರಿವಾಲ್ರ ರಾಜಕೀಯಾಕಾಂಕ್ಷೆಗೆ ಮುಖ್ಯ ಬಂಡವಾಳವಾಗಿ ಕೆಲಸ ಮಾಡಿತ್ತು. ಅವರು ದೆಹಲಿಯ ಮುಖ್ಯಮಂತ್ರಿಯೂ ಆದರು.
ನಮ್ಮ ದೇಶಕ್ಕೆ ಭ್ರಮನಿರಸನ ಹೊಸ ಅನುಭವವೇನಲ್ಲ. ಒಂದುಕಡೆ ಭ್ರಷ್ಟಾಚಾರ ಬೆಳೆದಂತೆ ಇನ್ನೊಂದುಕಡೆ ‘ಆಮ್ ಆದ್ಮಿ ಪಕ್ಷ’ದ ‘ಸಾಧನೆ’ಗಳೆಂದು ಪ್ರಚಾರ ಮಾಡಲಾಗಿರುವ ಯೋಜನೆಗಳ ಪೊಳ್ಳುತನ ಬಯಲಾಗುತ್ತಬಂದಿದೆ. ಈಗಲಾದರೋ ತಮ್ಮ ಯೋಜನೆಗಳ ನಿಸ್ಸತ್ತ್ವತೆಯ ಮೇಲೆ ಗವುಸು ಹೊದೆಸಲು ಕೇಜ್ರಿವಾಲ್ ಪ್ರಚಾರಕ್ಕಾಗಿಯೇ ಅಪಾರ ಹಣ ಖರ್ಚು ಮಾಡುತ್ತಿದ್ದಾರೆ. ಕಳೆದ ವರ್ಷ (2021-22) ಪೂರ್ಣಪುಟ ಜಾಹೀರಾತು ಮೊದಲಾದವಕ್ಕೆ ಅವರು ವ್ಯಯ ಮಾಡಿದ್ದು ರೂ. 488 ಕೋಟಿಯಷ್ಟು. ಆದರೂ ಆಮ್ ಆದ್ಮಿ ಪಕ್ಷ ತನ್ನ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲಾಗುತ್ತಿಲ್ಲ. ಈಗ್ಗೆ ಮೂರು ತಿಂಗಳಷ್ಟೆ ಹಿಂದೆ (ಆಗಸ್ಟ್ 17) ಅಬಕಾರಿ ಖಾತೆಯಲ್ಲಿ ರೂ.140 ಕೋಟಿಯಷ್ಟು ಅವ್ಯವಹಾರಕ್ಕಾಗಿ ಸಿ.ಬಿ.ಐ. ತನಿಖಾ ಸಂಸ್ಥೆ ಕೇಜ್ರಿವಾಲ್ರ ಉಪ-ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಸೇರಿದಂತೆ 15 ಮಂದಿಯ ವಿರುದ್ಧ ಎಫ್.ಐ.ಆರ್. ದಾಖಲೆ ಮಾಡಬೇಕಾಯಿತು. ಸರ್ಕಾರೀ ಹೆಂಡದಂಗಡಿಗಳ ಪರವಾನಗಿಗಳನ್ನು ರದ್ದು ಮಾಡಿ ಎ.ಎ.ಪಿ. ಸರ್ಕಾರ ಖಾಸಗಿ ‘ಹೆಂಡದ ದೊರೆ’ಗಳಿಗೆ ಅನುಮತಿಗಳನ್ನು ಬಟವಾಡೆ ಮಾಡತೊಡಗಿತ್ತು. ಇದರಿಂದ ಸರ್ಕಾರಕ್ಕೆ ಆದ ನಷ್ಟ (2022-23) ರೂ.2375 ಕೋಟಿಗೂ ಹೆಚ್ಚು. ಇದು ಒಂದು ನಿದರ್ಶನ ಮಾತ್ರ.
ಎ.ಎ.ಪಿ.ಯ ಬಂಡ್ವಾಳ್ವಿಲ್ಲದ್ಬಡಾಯಿಗೆ ಮಿತಿಯೇ ಇಲ್ಲ. ಆರ್ಥಿಕವಾಗಿ ತಮ್ಮ ಸರ್ಕಾರ ಸುಸ್ಥಿತಿಯಲ್ಲಿದೆಯೆಂಬುದೊಂದು ಅದರ ಪ್ರಚಾರ. ಇದರ ಹಿಂದಿನ ತಥ್ಯವನ್ನು ಕಳೆದ ಜುಲೈ 5ರಂದು ದೆಹಲಿ ಶಾಸನಸಭೆಯಲ್ಲಿ ಮಂಡಿತವಾದ ‘ಕಂಟ್ರೋಲರ್ ಅಂಡ್ ಆಡಿಟರ್-ಜನರಲ್ ವರದಿ’ ಹೊರಹಾಕಿದೆ. ದೆಹಲಿ ಸರ್ಕಾರದ ಪೊಲೀಸ್ ಖಾತೆ ಮೊದಲಾದವುಗಳ ಖರ್ಚನ್ನು ಭರಿಸುತ್ತಿರುವುದು ಕೇಂದ್ರಸರ್ಕಾರದ ಗೃಹಸಚಿವಾಲಯ. ಇಂಥವನ್ನು ಹೊರತುಪಡಿಸಿದರೆ ಎ.ಎ.ಪಿ.ಯ 2021-22ರ ಖೋತಾ ರೂ. 3038 ಕೋಟಿಯಷ್ಟು.
ಎ.ಎ.ಪಿ. ಸರ್ಕಾರ ಬಿಡಿಬೀಸಾಗಿ ಹಂಚುತ್ತಿರುವ ಸಬ್ಸಿಡಿಗಳ ಪ್ರಮಾಣ 2015-16ರಲ್ಲಿ ರೂ. 1867.6 ಕೋಟಿ ಇದ್ದದ್ದು 2019-20ರ ವೇಳೆಗೆ ರೂ.3593 ಕೋಟಿಯಷ್ಟು ಆಗಿದೆ.
ಆರೋಗ್ಯ ಮತ್ತಿತರ ಖಾತೆಗಳಲ್ಲಿ ಉಪಕರಣ ಖರೀದಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ದಾಖಲೆಗೊಂಡಿದೆ.
ಇಡೀ ದೆಹಲಿಯಲ್ಲಿ ಶಾಲಾಶಿಕ್ಷಣ ಎಷ್ಟು ಅಧೋಗತಿ ತಲಪಿದೆಯೆಂಬುದನ್ನು ಶಿಕ್ಷಣ ಇಲಾಖೆಯ ನಿರ್ದೇಶನಾಲಯ ದಾಖಲೆ ಮಾಡಿದೆ. ಕೆಲವು ಪ್ರಕರಣಗಳು ನ್ಯಾಯಾಲಯಕಟ್ಟೆಯನ್ನೂ ಏರಿವೆ.
ನೀರು ಸರಬರಾಜು ಖಾತೆಯನ್ನೂ ಕೇಜ್ರಿವಾಲ್ ಬಿಟ್ಟಿಲ್ಲ. ಅದರಲ್ಲಿ ರೂ. 26,000 ಕೋಟಿಯಷ್ಟು ಅವ್ಯವಹಾರ ದಾಖಲೆಯಾಗಿದೆ.
ಮನೀಶ್ ಸಿಸೋದಿಯ ಭ್ರಷ್ಟಾಚಾರವನ್ನು ಸಿ.ಬಿ.ಐ. ತನಿಖೆ ಮಾಡತೊಡಗಿದ ಕೂಡಲೆ ಕೇಜ್ರಿವಾಲ್ ಪ್ರಚಾರಾಧಿಕಾರಿ ಸ್ವಾಮಿನಾಥನ್ ನಾಯರ್ ತಲೆತಪ್ಪಿಸಿಕೊಂಡು ಅಮೆರಿಕಕ್ಕೆ ಪಲಾಯನ ಮಾಡಿದ್ದಾರೆ. ಅಬಕಾರಿ ಹಗರಣದಲ್ಲಿ ಅವರದ್ದೂ ಕೀಲಕಪಾತ್ರವಿತ್ತು. (ನಾಲ್ಕೈದು ವರ್ಷಗಳ ಹಿಂದೆಯೂ ಹವಾಲಾ-ಸಂಬಂಧಿತ ದುವ್ರ್ಯವಹಾರಕ್ಕಾಗಿ ಬಂಧಿತರಾಗಿದ್ದರು.)
ಪಬ್ಲಿಕ್ ವಕ್ರ್ಸ್ ಖಾತೆಯಲ್ಲಿ ಕಳಪೆ ಕಾಮಗಾರಿ ಮಾಡಿಸಿದ ಆರೋಪ ಸಾಬೀತಾಗಿ ಕೇಜ್ರಿವಾಲ್ ಸಂಪುಟ ಸದಸ್ಯ ಸತ್ಯೇಂದ್ರ ಜೈನ್ ಸೆರೆಮನೆ ಸೇರಿದ್ದಾರೆ. ಅವರ ವಿರುದ್ಧ ‘ಮನಿ ಲಾಂಡರಿಂಗ್’ ಆಪಾದನೆಗಳೂ ಇವೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ತಮ್ಮ ವೈಯಕ್ತಿಕ ಪಾತ್ರವಿಲ್ಲವೆಂದು ಮಂಡಿಸಲು ಈಚಿನ ದಿನಗಳಲ್ಲಿ ಕೇಜ್ರಿವಾಲ್ ಶ್ರಮಿಸುತ್ತಿದ್ದಾರೆ. ಆದರೆ ಇದನ್ನೆಲ್ಲ ವ್ಯರ್ಥಪ್ರಯಾಸವೆನ್ನಬೇಕಾಗಿದೆ. ಏಕೆಂದರೆ ಸರ್ಕಾರದ ಪರವಾಗಿ ಲೆಫ್ಟಿನೆಂಟ್-ಗವರ್ನರ್ ಅವರಿಗೆ ಅನುಮೋದನೆಗಾಗಿ ಪ್ರೇಷಿತವಾದ ಯೋಜನೆಗಳಲ್ಲೆಲ್ಲ ‘ಮುಖ್ಯಮಂತ್ರಿಗಳ ಸಮ್ಮತಿ ಪ್ರಾಪ್ತವಾಗಿದೆ’ ಎಂಬ ಒಕ್ಕಣೆ ಇದೆ.
ಎಲ್ಲ ಪ್ರಮುಖ ಯೋಜನೆಗಳಲ್ಲಿಯೂ ಧಾರಾಳ ರಿಯಾಯತಿಗಳನ್ನೂ ಸವಲತ್ತುಗಳನ್ನೂ ಕೇಜ್ರಿವಾಲ್ ಸರ್ಕಾರ ವಿತರಿಸುತ್ತಿರುವುದೇ ದಕ್ಷ ಹಣಹೂಡಿಕೆ ಮತ್ತು ಉಸ್ತುವಾರಿಗಳ ನ್ಯೂನತೆಯನ್ನು ಬಿಂಬಿಸುತ್ತದೆ.
2012ರಲ್ಲಿ ತುಂಬಾ ನಿರೀಕ್ಷೆಯಿಂದ ಅರವಿಂದ ಕೇಜ್ರಿವಾಲ್ರನ್ನು ಬೆಂಬಲಿಸಿದ್ದ ಪ್ರಶಾಂತಭೂಷಣ್, ಮೇಧಾ ಪಟ್ಕರ್, ಸಂತೋಷ್ ಹೆಗ್ಡೆ, ಬಾಬಾ ರಾಮ್ದೇವ್, ಯೋಗೇಂದ್ರ ಯಾದವ್ ಮೊದಲಾದ ಯಾರೂ ಈಗ ಅವರ ಸಂಗಡಿಕೆಯಲ್ಲಿ ಉಳಿದಿಲ್ಲ.
ಇದೀಗ ಪ್ರಚಾರವೆಂಬ ಏಕೈಕ ಕೀಲುಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಅರವಿಂದ ಕೇಜ್ರಿವಾಲ್ರವರ ಪಯಣ ಎಷ್ಟು ದೂರ ನಡೆದೀತೋ ಕಾದುನೋಡೋಣ.