“ದಿಗಂತದಾಚೆಗೆ ನದಿವನದಾಕಡೆ
ಆ ಬೆಟ್ಟದ ಮರೆಗಿದೆ ತಾಯ್ನಾಡು!
ಅವಳ ಪುಣ್ಯಪದರಜದಿ ಜನಿಸಿದೆವು
ಸೇರುವೆವಾ ಸತ್ಯದ ನೆಲೆಬೀಡು.
“ಕೇಳಿರಿ, ಕೆರಳಿರಿ, ಕಹಳೆ ಮೊಳಗುತಿದೆ;
ಭಾರತ ಬಾರೆಂದೆಮ್ಮ ಕರೆಯುತಿದೆ,
ಕೋಟೆ ಡಿಲ್ಲಿಗಳು ಕೋಟಿ ಬಾಂಧವರು
ಸ್ವಾಗತ ನಿಮಗೆಂದೆಲ್ಲ ಕರೆಯುವರು.
“ಸಿದ್ಧರಾಗಿ – ಹೋ! ಜೀವವ ಹಿಡಿದು,
ಒಂದಾಗಿರಿ ಮುಂದಾಗಿರಿ ಬನ್ನಿ.
ದೇವರ ದಯೆಯಿದೆ – ಹಗೆಯನು ಮುರಿದು
ಸತ್ಯಬಿಡದೆ ಸ್ವಾತಂತ್ರ್ಯವ ತನ್ನಿ.
“ಡಿಲ್ಲಿಯ ಮಾರ್ಗವು ಸ್ವತಂತ್ರ ಮಾರ್ಗವು
ಮರಣಗೊಂಡರೂ ಸಾವುಂಟೆ?
ಸ್ವತಂತ್ರರಾಷ್ಟ್ರದ ಪಾವನಧೂಳಿಯ
ಚುಂಬಿಸಿ ಸತ್ತರೆ ನೋವುಂಟೆ?
“ತೊಲಗಿ ಭಾರತವ ಬಿಟ್ಟು ಬ್ರಿಟಿಷರು
ಒಳಗೆ-ವೀರರದೊ ಭೇರಿ ಹೊಡೆದರು;
ಹೊರಗೆ-ಹೀಗೆ ನಾವ್ ಕಾದಿ ಪಡೆವೆವು
ರಕ್ತದುರ್ಗವನು ಡಿಲ್ಲಿ ಹಿಡಿವೆವು.
“ರಕ್ತ ಬೇಕು – ಬಿಸಿರಕ್ತ ಬೇಕೆಮಗೆ,
ರಕ್ತ ಕೊಡುವ ಯುವಶಕ್ತಿ ಬೇಕೆಮಗೆ;
ರಕ್ತ – ರಾಷ್ಟ್ರ ಸ್ವಾತಂತ್ರ್ಯ ಸಾಧನೆಗೆ,
ರಕ್ತ-ರಕ್ತ-ಬೆನ್ನಟ್ಟಿರಿ-ಹಗೆ ದಗೆ.”
* * *
ತರುಣ ಧಮನಿಯಲಿ ಸ್ವಾತಂತ್ರ್ಯದ ಬಿಸಿ-
ರಕ್ತ ಕುದಿಸುತಿರೆ ನೇತಾಜಿಯ ಕರೆ;
ಯುವಜನರದೊ – ಬರೆದರು ನೆತ್ತರ ಮಸಿ
ಯಿಂದ ಭಾರತದ ರಣಗಾನದ ಗೆರೆ!
`ಕೆಂಪು ಕೋಟೆ ಹಿಡಿ, ಡಿಲ್ಲಿವರೆಗೆ ನಡಿ’
ಪುರುಷಸಿಂಹ ನೇತಾಜಿ ಗುಡುಗಿದಂ!
ಮದ್ದುಗುಂಡುಗಳೊ, ಸೈನ್ಯಸರಕುಗಳೊ
ಸಿದ್ಧವಿಲ್ಲವೆಂದಾರು ಅಂಜಿದಂ?
ಸಹಸ್ರಸಂಖ್ಯರ್ ಸ್ವತಂತ್ರಯೋಧರ್
ರಾಷ್ಟ್ರದೇವಿ ಕರೆ ಕೇಳಿ ನುಗ್ಗಿದರ್!
“ಸೋಲೊ ಗೆಲವೊ ಸೇನಾನಿಯೆ ಬಲ್ಲರ್
ಮಾಡುವೆವಥವಾ ಮಡಿಯುವೆವೆಲ್ಲರ್;
“ನಮ್ಮಯ ನೇತಾ, ಭಾಗ್ಯವಿಧಾತಾ,
ಜಗ್ಗದೆ ಕುಗ್ಗದೆ ನಡೆಯಿರಿ ನಿರತ;
ಬಾಂಧವರಿರಲಿ ಸೈಂಧವರಿರಲಿ
ಸ್ವಾತಂತ್ರ್ಯದ ಹಗೆಯನ್ನು ಕೊಡಿ ಬಲಿ!
“ಸ್ವತಂತ್ರಭಾರತ ಸೇನಾ ಪಥಕಂ
ಸಾಗಲಿ ಹೋಗಲಿ ಡಿಲ್ಲಿಯ ತನಕಂ;
ರಕ್ತದುರ್ಗವನು ಸಾಧಿಸಿ – ಹಾರಿಸಿ
ರಾಷ್ಟ್ರಧ್ವಜವನು, ಜಯಧ್ವನಿ ಬಾರಿಸಿ.
“ಮಾತೃಭೂಮಿ ಸ್ವಾತಂತ್ರ್ಯದಿ ಮೆರೆದರೆ,
ಹೆಣ್ಣಿಗು ಗಂಡಿಗು ಸಮಪಾಲು;
ಮಾತೃಭೂಮಿ ಪರತಂತ್ರದಿ ಕೊಳೆತರೆ
ಹೆಣ್ಣಿಗು ಗಂಡಿಗು ಸಮಗೋಳು.”
-ಹೆಣ್ಣು ಹಿಂದೆನದೆ, ಗಂಡು ಮುಂದೆನದೆ
ಸ್ವತಂತ್ರ ಭಾರತ ಸೇನೆ ಸಾಗಿತು;
ಝಾಂಸಿ ಪಥಕದಧಿರಾಣಿ ಸಿಂಹಿಣಿ!
ಲಕ್ಷ್ಮಿ – ಕಾದಿದಳು ಮುನ್ನಿಂತು.
ಭಾರತ ಬರ್ಮದ ಗಡಿಯಲಿ ಕಾಳಗ
ಕೈ ಕೈ ಮೀಸಗಿತು ಹಗಲಿರುಳು;
ಭಾರತಮಾತೆಯ ದಾಸ್ಯದ ಕೆಸರಿಂ
ಎತ್ತುವ ಒತ್ತುವ ಜಗಳಗಳು
ದುಡ್ಡಿಗಾಗಿಯೇ ದೇಹವ ದೇಶವ
ಮಾರಿದ ಜನ ಬ್ರಿಟಿಷರ ಘನಪಡೆಗೆ;
ನಾಡಿನುನ್ನತಿಗೆ ನೆತ್ತರು ಚೆಲ್ಲುವ
ರಕ್ತಬೀಜದಳ ಜಯ್ ಹಿಂದ್ ಕಡೆಗೆ!
* * *
“ಮುಸಲ್ಮಾನ ಸಿಖ್ ಕ್ರಿಶ್ಚನ್ ಹಿಂದು
ಬ್ರಾಹ್ಮಣ ಶೂದ್ರರು ದಲಿತರು ಒಂದು;
ಒಂದೆ ರಕ್ತ – ಸ್ವಾತಂತ್ರ್ಯದ ಸಿಂಧು
ಮಾಡುವೆವಥವಾ ಮಡಿಯುವೆವಿಂದು!
“ಧರ್ಮವೊಂದೆ – ದಾಸ್ಯದ ನೊಗ ಮುರಿವುದೆ,
ಮತವೊಂದೇ – ಕ್ರಾಂತಿಯ ಕೆರಳಿಸುವುದೆ;
ಪಂಥವೊಂದೇ – ತೊಲಗಿರಿ ಸಾಕೆನುವುದೆ
ಕುಲವೊಂದೇ – ಕೃತಿ ಮಾಡಿ ಮಡಿಯುವುದೆ!
“ರಾಜನಿಷ್ಠೆಯೋ, ರಾಷ್ಟ್ರನಿಷ್ಠೆಯೋ
ದಾಸತ್ತ್ವವೊ ಸ್ವಾತಂತ್ರ್ಯವೊ – ಹೇಗೆ?
ಗದ್ದುಗೆ ಉರುಳಲಿ ಭಾರತ ಬೆಳಗಲಿ
ಸ್ವಾತಂತ್ರ್ಯಕೆ ಸಾವಪ್ಪುದೆ ಮೇಗೆ.
“ನಮ್ಮ ನಾಡಿನೊಳ್ ನಾವ್ ಗುಲಾಮರೊ?
ನಮ್ಮ ಕಯ್ಯ ಕರವಾಳ ಕಸಿದರೊ!
ನಮ್ಮ ಬಾಯ್ಗೆ ಬಿಗಿ ಬೀಗವಿಕ್ಕಿದರೊ
ನಮ್ಮ ಬರಹ ನಿರ್ಬಂಧಿಸಿರುವರೊ!
“ನಿರ್ಬಂಧದ ಶತಶೃಂಖಲೆ ಕಡಿಯಿರಿ,
ನಿರ್ಬಂಧಿಸುವರ ಕೊಚ್ಚಿಕೆಡಹಿರಿ;
ಕ್ರಾಂತಿಯ ಝಂಝಾವಾತವೆಬ್ಬಿಸಿರಿ
ಸ್ವಾತಂತ್ರ್ಯಕೆ ಬಲಿದಾನವೊಪ್ಪಿಸಿರಿ.
“ಸ್ವಾತಂತ್ರ್ಯವೆ ಸಿರಿ, ಸ್ವಾತಂತ್ರ್ಯವೆ ಹರಿ,
ಸ್ವಾತಂತ್ರ್ಯವು ಸಿಗದುಂಟೆ ಶಾಂತಿಯು?
ಸ್ವಾತಂತ್ರ್ಯವೆ ವರ, ಸ್ವಾತಂತ್ರ್ಯವೆ ಹರ,
ಸ್ವಾತಂತ್ರ್ಯವೆ ವೀರಗೆ ವಿಶ್ರಾಂತಿಯು!”
* * *
ಇಂಫಾಲ್ ಕದನದಿ ಸ್ವತಂತ್ರ ಭಾರತ
ಸೇನೆ ಸಂಕಟದಿ ಸಿಲುಕಿತ್ತು;
ಅಶನ ವಸನ ಧನ ವಾಹನ ಸಾಧನ
ಮದ್ದುಗುಂಡುಗಳು – ಮುಗಿದಿತ್ತು!
ಸೇನಾನಾಯಕ ಹೇಳಿದ ಗದ್ಗದ;
“ಮೃತ್ಯುಮುಖಕೆ ಮುನ್ನುಗ್ಗುವುದೆ?”
ಸೈನಿಕರೆಂದರು: “ಪ್ರಾಣವ ತೆತ್ತರು
ಇಂಫಾಲ್ ಹಿಡಿಯದೆ ಹೋಗುವುದೆ?
“ಅಡಿಯನೊಂದ ಮುಂದಿಡಲು ಸ್ವರ್ಗವು!
ಹೆಜ್ಜೆಯೊಂದ ಹಿಂದಿಡಲು ನರಕವು!
ಸತ್ತು-ಸ್ವರ್ಗವನೆ ಪಡೆಯಲಿರ್ಪೆವು;
ಬದುಕಿ ನರಕದಲಿ ನರಳಲೊಪ್ಪೆವು.
“ಸ್ವಾತಂತ್ರ್ಯಕೆ ಬಲಿದಾನವಾದವಗೆ
ಸ್ವರ್ಗದಿ ಸಂಭ್ರಮ ಸ್ವಾಗತವು;
ಪರತಂತ್ರದಿ ನರಳುವ ಹೆಂಬೇಡಿಗೆ
ಬದುಕೆಂಬುದೆ ನಿಜ ರೌರವವು.
“ನೇತಾಜಿಯ ನುಡಿ ನಡೆಸದೆ ಮರಳೆವು
ಬೆಂಕಿಗೆ ಬೆಂದರು ಬೀಳುವೆವು!”
-ಏನು ಶಕ್ತಿಯೊ? ರಾಷ್ಟ್ರಭಕ್ತಿಯೊ?
ಕೇಳಿಯೆ ಮೈನವಿರೇಳುವವು.
ಸೈನಿಕರೀವಿಧ ಸಾಹಸ ಪುಲಕಿತ
ಕ್ರಾಂತಿಕದನ ಕಥೆ ಕೇಳಿದನು;
ಬಾಷ್ಪಲೋಚನ ಸುಭಾಸ “ಬಾಂಧವರೆ
ಬನ್ನಿ ಸಾಕೆ”ನುತ ಹೇಳಿದನು.
ಅನ್ನ ಮುಗಿದು ಪಡೆ ಬನ್ನವೊಮ್ಮೆ ಪಡೆ,
ನೆನೆ ನೇತಾಜಿಯ ಕಿಡಿನುಡಿ; “ಮುನ್ನಡೆ-
ದಾಸ್ಯದ ಮಧುಪರಮಾನ್ನವು ವಿಷವು,
ಸ್ವಾತಂತ್ರ್ಯದ ವಿಷವಮೃತ ಸದೃಶವು!”
* * *
ಹಸಿವೆಯ ಬೆಂಕಿಗೆ ಭಾರತ ಬಳಲಿತು
ಬಂಗಾಲವು ಹಾ! ಕಂಗಾಲ;
ಎರಡು ದಶಕದಲಿ ದಾಸ್ಯನರಕದಲಿ
ಬ್ರಿಟನು ಬರಿಸಿತಾ ಬರಗಾಲ.
ಉಪವಾಸದ ಭುಗಿಲೆದ್ದಿತು, ಬಿದ್ದಿತು
ಬೆಂಕಿಗೆ ನುಸಿವೊಲ್ ಜನರಾಶಿ;
ಕರುಳಿನ ಕರುಣೆಯ ಕೂಗು ಕೇಳುತಲಿ
ಮರುಗಿದ ಕರಗಿದ ನೇತಾಜಿ!
“ಭಾರತ ಬೆಂದರೆ ಯಾರಿಗೆ ತೊಂದರೆ!
ಬ್ರಿಟನು ರಾಣಿ ತೆರೆಯಾಳುವಳೈ!
ನಮ್ಮ ಜನರ ನಾವ್ ಬದುಕಿಸಬಲ್ಲೆವು
ಅಕ್ಕಿ ಕೊಡುವೆನಿದೊ – ಸಾಗಿಸಿರೈ.”
-ಸ್ವತಂತ್ರ ಭಾರತ ಸೇನೆಯು ನೀಡಿದ
ಸಹಾಯ ಹಸ್ತವ ಹಿಂದೂಡೆ;
ಅತಂತ್ರಭಾರತ! ಸ್ವರಾಜ್ಯ ಕೇಳಿದ
ಮುಂದಾಳುಗಳನು ಮರೆಮಾಡೆ!
“ಬದುಕಿಸಲಾರರು, ಬದುಕಲು ಬಿಡರು,
ಬದುಕೆಂಬುದೆ ಭಾರತ ಜನಕಿಲ್ಲವೆ?
ಪರಕೀಯರ ಬಳಿ, ನರಕೀಯತೆಯಲಿ
ಬದುಕಿದ್ದರೆ ಬಾಳುವೆ ಸಾವಲ್ಲವೆ?
ಜಪಾನು ಬಂದರು, ಜರ್ಮನಿ ಬಂದರು,
ಬ್ರಿಟನಿದ್ದರು ಫಲ ನಮಗೊಂದೆ;
ಜಪಾನು ಜರ್ಮನಿ ಬ್ರಿಟನವು ಬೇಡ
ತೊಲಗಿರಿ ನಮ್ಮಯ ನೆಲದಿಂದೆ.
“ಸ್ವಾತಂತ್ರ್ಯಕೆ ಜಗಜನತಾರಾಜ್ಯಕೆ
ಕಾದುವೆವೆಂಬುದು ನಿಜವೇನು?
ನಮ್ಮ ತಾಯ್ನೆಲಕೆ ನಿಮ್ಮ ತತ್ತ್ವಗಳು
ಹೊಂದದೆ – ನಂಬುಗೆ ನಮಗೇನು?
“ಬಿಳಿಯರಿಗೆಲ್ಲವು ಬೇರೆಯೆ ತತ್ತ್ವವು
ಕರಿಯ ಜನರು ಕುರಿ ಮಂದೆಗಳೆ?
ಯೂರೋಪ್ ಬೆಳಗಲಿ ಭಾರತ ಮುಳುಗಲಿ
ಎಂಬುದು ನವನವ ತತ್ತ್ವಗಳೆ?
“ತತ್ತ್ವಕು ಕೃತ್ಯಕು ಮಾತಿಗೆ ಮನಸಿಗು
ಸಂಬಂಧವ ನೀವ್ ತಿಳಿದಿಲ್ಲ;
ತತ್ತ್ವ ಮಾತುಗಳ ಹೇಳಿ ವಂಚಿಸಿದ
ನಿಮ್ಮಲಿ ನಂಬುಗೆ ನಮಗಿಲ್ಲ.
“ಮೊದಲಿನ ಯುದ್ಧದಿ ನಿಮ್ಮೊಡಗೂಡುತೆ
ಸ್ವಾತಂತ್ರ್ಯಕೆ ಹೋರಾಡಿದೆವು;
ಎದೆಯಲಿ ಗುಂಡನು, ತಲೆಯಲಿ ಲಾಥಿಯ
ಸೆರೆಮನೆ ಸುಖವನು ನೋಡಿದೆವು.
“ಹಿಂದಿನ ಕಹಿಯಿಂ ಮುಂದಿನ ಮಾರ್ಗವ
ಚಂದದಿ ಕಂಡೆವು ನಾವೊಂದು;
ಇಂದಿನ ಯುದ್ಧದಿ ನಿಮ್ಮೊಡಗೂಡೆವು
ನಿಮಗಿದಿರೆದ್ದೆವು ನಾವ್ ನೊಂದು
“ಹಿಂಸ್ರ, ವಿನಾಶದಿ ಧ್ವಂಸನಿರೂಪದಿ
ಯೂರೋಪ್ ರಾಕ್ಷಸಪುರಿಯಾಯ್ತು;
ಶಾಂತಿಸಮತೆಯಲಿ ಕ್ರಾಂತಿ ಕ್ರಮತೆಯಲಿ
ಏಶ್ಯ ದೇವನಗರಿಯಿಂತು.
“ಸಮ್ರಾಟರ ಘನಮಕುಟವನುರುಳಿಸಿ
ಸರ್ವಾಧಿಪರನು ತಲೆಮೆಟ್ಟಿ;
ಸ್ವಾತಂತ್ರ್ಯದ ಸಂದೇಶ ಸಾರುತಲಿ
ಸಮತೆಯ ರವಿ ಬರುತಿಹನಟ್ಟಿ”
* * *
ಇಂತು ವೀರರನು ಕೂಗಿ ಕರೆದನದೊ
ಸ್ವಾತಂತ್ರ್ಯಕೆ ಬಲಿದಾನ ಕೊಡಿ;
ಕಹಳೆ ಮೊಳಗುತಿದೆ; ಸೈನ್ಯ ಸಾಗುತಿದೆ
ನೇತಾಜಿಗೆ ನೀವ್ ಕೈನೀಡಿ.
ಸ್ವತಂತ್ರ ಭಾರತ ಸೇನಾಗಾನವ
ಹಿಗ್ಗಿ ಹಾಡಿ ನಾವ್ ಸಾಗುವೆವು.
ಸ್ವತಂತ್ರ ರಾಷ್ಟ್ರದ ಸೂರ್ಯೋದಯದಲಿ
ನೇತಾಜಿಗೆ ತಲೆ ಬಾಗುವೆವು.