ನಾವು ಕಲಿಯುವ ಶಿಕ್ಷಣವು ನಮಗೆ ಸ್ವಯಂಉದ್ಯೋಗ ಹೊಂದುವುದರೆಡೆಗೆ ಸಿದ್ಧ ಮಾಡಬೇಕು. ಪ್ರಸ್ತುತ ಎಲ್ಲರೂ ಪದವಿಯನ್ನು ಪಡೆದರೆ ಕೆಲಸ ಸಿಗಬೇಕೆಂದರೆ ಸಾಧ್ಯವೇ? ಪದವಿಯೊಂದಿಗೆ ಕೌಶಲವು ಅಗತ್ಯವೇ ತಾನೇ! ಎಲ್ಲರೂ ಪದವಿ ಪಡೆಯುತ್ತಾರೆ, ಆದರೆ ಕೆಲವರು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಂದರೆ ನಾವು ಗಳಿಸಿರುವ ಪದವಿಯ ಪ್ರಯೋಜನವಾದರೂ ಏನು? ನಾವು ಕಲಿತದ್ದು ಕೇವಲ ಉದ್ಯೋಗಕ್ಕೆ ಸೀಮಿತವಾಯಿತೆ, ಅದರ ಜ್ಞಾನವನ್ನು ಬಳಸಿಕೊಂಡು ನಾನೇನಾದರೂ ಮಾಡಬಲ್ಲೆನೆ ಮತ್ತು ಅದರಿಂದ ಹತ್ತಾರು ಜನಕ್ಕೆ ಉಪಯೋಗವಿದೆಯೆ? – ಎಂಬುದರ ಕುರಿತು ನಾವೆಲ್ಲರೂ ಆಲೋಚಿಸಿದ್ದೇವೆಯೆ? ಆಲೋಚಿಸುವುದು ಕೂಡ ಒಳಿತು. ಹೊಸಶಿಕ್ಷಣದ ನೀತಿಗಳಲ್ಲಿ ಹಲವು ಸುಧಾರಣಾ ಕ್ರಮಗಳನ್ನು, ಮತ್ತು ಮುಕ್ತ ಅವಕಾಶಗಳನ್ನು ದೊರಕಿಸಿರುವುದು ಸ್ವಾಗತಾರ್ಹವಾಗಿದೆ.
ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ – ಎಂಬ ಕನಕದಾಸರ ಕೀರ್ತನೆಯ ಸಾಲಿನಂತೆ ಎಲ್ಲರೂ ಒಂದಿಲ್ಲೊಂದು ರೂಪದಲ್ಲಿ ತಮ್ಮ ಉದರಕ್ಕೆ ಸೇವೆ ಮಾಡುವವರೇ. ಆದ್ದರಿಂದ ಉದ್ಯೋಗವಿಲ್ಲದಿದ್ದರೆ ಉದರಕ್ಕೆ ವೈರಾಗ್ಯವೇ. “ಅನ್ನದಾತಾ ಸುಖೀ ಭವ” ಎಂಬ ಕಾಲವಿತ್ತು. ಆದರೆ ಈಗ “ಉದ್ಯೋಗದಾತಾ ಸುಖೀ ಭವ” ಎನ್ನುವಂತಾಗಿದೆ. ಇದು ವಿಪರ್ಯಾಸವೇ ಸರಿ. ಎಲ್ಲೇ ಉದ್ಯೋಗಮೇಳ ನಡೆದರೂ ವಿದ್ಯಾರ್ಥಿಗಳು, ಯುವಕರು ಸಾಲುಗಟ್ಟಿ ನಿಲ್ಲುವುದನ್ನು ಕಂಡರೆ ಎಲ್ಲೋ ಮನಸ್ಸಿಗೆ ತಳಮಳವಾಗುತ್ತದೆ.
ಉದ್ಯೋಗವೆಂದರೆ ಅದು ಒಬ್ಬ ವ್ಯಕ್ತಿಗೆ ಆತ್ಮಗೌರವ, ಸಮಾಜದಲ್ಲಿ ಅವನಿಗೊಂದು ಸ್ಥಾನಮಾನ ಹಾಗೂ ಜೀವನದ ಭರವಸೆಯನ್ನು ನೀಡುತ್ತದೆ. ಉದ್ಯೋಗದಿಂದ ಸಂಪಾದಿಸಿದ ಹಣದಿಂದಲೇ ಜೀವನ ನಿರ್ವಹಣೆ ತಾನೇ! ಒಬ್ಬ ಮನುಷ್ಯನಿಗೆ ಉದ್ಯೋಗವು ತನ್ನ ಪಾಲಿನ ಕರ್ತವ್ಯವೂ ಆಗಿರುತ್ತದೆ. ತಾನಲ್ಲದೆ, ತನ್ನ ಅವಲಂಬಿತರನ್ನು ಸಹ ಸಂತೈಸಿಕೊಂಡು ಜೀವನವನ್ನು ಜಯಿಸಲು ಉದ್ಯೋಗ ಅಥವಾ ಕಸಬೇ ಆಧಾರ.
ಉದ್ಯೋಗವೆಂದರೆ ಕೇವಲ ಸರ್ಕಾರಿ ಹಾಗೂ ಖಾಸಗಿ ಕಂಪೆನಿ ಅಥವಾ ಕಚೇರಿಗೆ ಹೋಗುವುದಲ್ಲ. ತನ್ನ ಜೀವನನಿರ್ವಹಣೆಗೆ ಅನುಕೂಲಕರವಾದದ್ದೆಲ್ಲ ಉದ್ಯೋಗವೇ. ಅದರಲ್ಲಿ ಕೆಲವು ವಂಶಪಾರಂಪರಿಕವಾಗಿ ಬಂದಿವೆ, ಅದನ್ನು ಕುಲಕಸಬು ಎನ್ನುವರು. ಇದರೆಡೆಗೆ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಕಳೆಗುಂದಿರುವುದು ಬೇಸರದ ಸಂಗತಿ. ಇನ್ನೊಂದೆಡೆ ಈಗಿನ ಯುವಜನರ ಮತ್ತು ಪೋಷಕರ ಮನಃಸ್ಥಿತಿ ಕೇವಲ ಸರ್ಕಾರದ ಉದ್ಯೋಗದ ಕಡೆಗಿದೆ.. ಅದು ರೂಪಾಯಿ ೧೦,೦೦೦ ಆಗಲಿ ೧೦ ಲಕ್ಷವಾಗಲಿ ಸರ್ಕಾರಿಯಾದರೆ ಸಾಕು. ಸರ್ಕಾರಿ ಉದ್ಯೋಗವಿದ್ದರೆ ವಿವಾಹ, ಇಲ್ಲದಿದ್ದರೆ ವಿಯೋಗ ಎಂಬ ಮನಃಸ್ಥಿತಿಯಿಂದ ಹೊರಬರಬೇಕು. ಬರಬೇಕೆಂದರೆ ಇನ್ನಿತರ ವಲಯದಲ್ಲಿ ಉದ್ಯೋಗವನ್ನು ಸಾಧಿಸಿ, ಇನ್ನು ನಾಲ್ಕು ಜನಕ್ಕೆ ಉದ್ಯೋಗದಾತರಾದರೆ ಆ ಮನಃಸ್ಥಿತಿಯಿಂದ ಕೊಂಚವಾದರೂ ಜನರು ಹಿಂದೆ ಸರಿಯುತ್ತಾರೆ.
ಈಗಿನ ಶಿಕ್ಷಣವು ಉದ್ಯೋಗ ಆಸಕ್ತರನ್ನು ಸೃಷ್ಟಿ ಮಾಡುತ್ತಿದೆಯೇ ಹೊರತು, ಉದ್ಯೋಗದಾತರನ್ನಲ್ಲ. ಎಲ್ಲರೂ ಯಾವುದಾದರೂ ಒಂದು ಪದವಿ ಕೋರ್ಸ್ ಮಾಡಿಕೊಂಡು ಕೆಲಸ ಹುಡುಕಿಕೊಂಡರೆ ಜೀವನವನ್ನು ಗೆದ್ದುಬಿಟ್ಟಿದ್ದೇವೆ ಎಂಬಂತೆ ವರ್ತಿಸುತ್ತಿರುವುದು, ಅರ್ಥೈಸಿಕೊಂಡಿರುವುದನ್ನು ಕಾಣಬಹುದು. ನೆನಪಿರಲಿ, ಉದ್ಯೋಗದಾಚೆಗೂ ಜೀವನವಿದೆ, ಉದ್ಯೋಗಿಯಾಗುವುದೇ ಜೀವನವಲ್ಲ. ನಾಲ್ಕು ಜನರಿಗೆ ಸ್ಫೂರ್ತಿಯಾಗುವುದು ಹಾಗೂ ಅವರ ಜೀವನನಿರ್ವಹಣೆಗೆ ಮಾರ್ಗ ಮಾಡಿಕೊಡುವುದು, ಹೊಸತನದ ಅನ್ವೇಷಣೆ, ಜೀವನದ ರಸವನ್ನು ಆಸ್ವಾದಿಸುವುದೇ ಜೀವನವೆಂಬುದು ನನ್ನ ಭಾವನೆ.
ಪ್ರಸ್ತುತ ನೂತನ ಶಿಕ್ಷಣ ನೀತಿಯು ಕೌಶಲಾಧಾರಿತವಾಗುತ್ತಿರುವುದು ಸಂತಸದ ಸಂಗತಿ. ನಿಜಹೇಳಬೇಕೆಂದರೆ ಹೊಸ ಶಿಕ್ಷಣ ನೀತಿಯನ್ನು ನಮ್ಮಂತಹವರು ಸದುಪಯೋಗಪಡಿಸಿಕೊಂಡು ದೇಶದ ಸ್ವಾಸ್ಥ್ಯಕ್ಕೆ ಜೀವಿಸಬೇಕು. ಹೊಸಶಿಕ್ಷಣವು ಹಲವು ಆಯಾಮಗಳಲ್ಲಿ ವಿದ್ಯಾರ್ಥಿಗೆ ಉಪಯೋಗಕರವಾಗಿದೆ.
ಅದು ಒಂದೇ ವಿಷಯದ ಕಡೆ ಗಮನಹರಿಸದೆ, ವಿದ್ಯಾರ್ಥಿಯು ತನಗೆ ಆಸಕ್ತಿ ಇರುವ ಕೌಶಲ ಆಧಾರಿತ ವಿಷಯಗಳ ಕಡೆಗೂ ಗಮನವಹಿಸಿ. ತನ್ನ ಕೌಶಲವನ್ನು ವೃದ್ಧಿ ಮಾಡಿಕೊಂಡು ತನ್ನ ಹಾಗೂ ತನ್ನವರ ಅಭಿವೃದ್ಧಿ ಕಡೆಗೆ ಕೆಲಸ ಮಾಡಬಹುದು.
ಪ್ರತಿಯೊಬ್ಬರಿಗೂ ಶಿಕ್ಷಣವು ಅಗತ್ಯ ಹಾಗೂ ಅದು ಮೂಲಭೂತ ಹಕ್ಕು. ಅಂತಹ ಶಿಕ್ಷಣವು ನಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡಬೇಕೇ ಹೊರತು ಪರಾವಲಂಬಿಯನ್ನಾಗಿ ಅಲ್ಲ. ಶಿಕ್ಷಣವು ನಮಗೆ ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ, ತನ್ನದೇ ಆದಂತಹ ಸ್ಪಷ್ಟ ನಿರ್ಧಾರ ತೆಗೆದುಕೊಂಡು, ಎದುರಾಗುವ ಸಮಸ್ಯೆಗಳ ಸಾಗರವನ್ನು ಲಂಘಿಸಿ ದೃಢನಿಶ್ಚಯದೊಂದಿಗೆ ನಿಲ್ಲುವಂತಹ ಬಲವನ್ನು ತುಂಬಬೇಕು. ಅದು ಕೇವಲ ಪಠ್ಯಕ್ಕೆ ಸೀಮಿತವಾಗದೆ ಜೀವನಕ್ಕೆ ಆಧಾರವಾಗಬೇಕು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಒಂದು ಉದಾಹರಣೆ ಕೊಡುವ ಮೂಲಕ ಹೇಳಲು ಇಚ್ಛಿಸುವೆ. ವೈದ್ಯಕೀಯ ವೃತ್ತಿ ಮತ್ತು ಶಿಕ್ಷಣವನ್ನು ಉದಾಹರಣೆಗೆ ತೆಗೆದುಕೊಂಡರೆ, ಅಲ್ಲಿ ವೈದ್ಯಕೀಯ ಕಾಲೇಜಿನೊಂದಿಗೆ ಆಸ್ಪತ್ರೆಯೂ ಇರುತ್ತದೆ. ಇದರ ಅರ್ಥ ಕಲಿತ ಪಠ್ಯದ ಜ್ಞಾನವನ್ನು ನಾವು ಅಲ್ಲಿಯೇ ಪ್ರಾಯೋಗಿಕವಾಗಿಯೂ ಅಭ್ಯಾಸಮಾಡುತ್ತೇವೆ. ಕಾರ್ಯವಿಧಾನವನ್ನು ಕಲಿಯುತ್ತೇವೆ. ಬೆಳಗ್ಗೆ ಪಠ್ಯವನ್ನು ಕಲಿತರೆ ಅಥವಾ ಚಿಕಿತ್ಸಾ ವಿಧಾನವನ್ನು ಕಲಿತರೆ ಸಂಜೆ ಅದೇ ಪ್ರಾಯೋಗಿಕ ಕಲಿಕೆಯಾಗಿರುತ್ತದೆ. ಹಾಗೂ ಅಲ್ಲಿ ನಮಗೆ ಬೋಧಿಸುವವರೆಲ್ಲರೂ ಸ್ವತಃ ವೈದ್ಯರೇ. ಅನಂತರ ಅಧ್ಯಾಪಕರು. ಬೆಳಗ್ಗೆ ಅಧ್ಯಾಪಕರಾಗಿ ಬೋಧನೆ ಮಾಡಿ, ಸಂಜೆ ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನೂ ಸಹ ನೀಡುತ್ತಾರೆ. ಅಂದರೆ ಅಲ್ಲಿ ನೈಜ ಉದಾಹರಣೆ ಅನುಭವಗಳನ್ನು ಪಡೆಯುತ್ತೇವೆ. ಆದ್ದರಿಂದ ನಮಗೆ ಅಲ್ಲಿ ವೃತ್ತಿಯ ಅನುಭವ, ಸೇವಾಮನೋಭಾವವು ಕಲಿಯುತ್ತಿರುವ ಹಂತದಲ್ಲೇ ದೊರಕುತ್ತದೆ.
ಅದೇ ತರಹ ಒಂದು ವಾಣಿಜ್ಯ ಶಿಕ್ಷಣವನ್ನು ತೆಗೆದುಕೊಂಡರೆ ಅದನ್ನು ಕಾಲೇಜಿನಲ್ಲಿ ಬೋಧಿಸಲಾಗುತ್ತದೆ. ಆದರೆ ಅದನ್ನು ಎಂದಿಗೂ ಒಂದು ಕಂಪೆನಿಯಲ್ಲೋ ಅಥವಾ ವಾಣಿಜ್ಯಸಂಸ್ಥೆಯಲ್ಲೋ ನೀಡುವುದಿಲ್ಲ. ಅಲ್ಲಿ ನಮಗೆ ಬೋಧಿಸುವವರು ಅಧ್ಯಾಪಕರು. ಅವರಲ್ಲಿ ಎಷ್ಟು ಜನ ಉದ್ಯಮಿಗಳು? – ಎಂಬ ಪ್ರಶ್ನೆ ಏಳುತ್ತದೆ. ಇದ್ದರೂ ಕೂಡ ಅಂತಹ ಉದಾಹರಣೆ ಬಹಳ ಕಡಮೆ ಹಾಗೂ ಅವರಿಗೆ ಒಂದು ಸಂಸ್ಥೆಯನ್ನು ನಿಭಾಯಿಸುವ ಅನುಭವವಿರುವುದಿಲ್ಲ. ಹಾಗೂ ಅಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ತಿಳಿವಳಿಕೆ ಕಡಮೆಯೇ. ಆದ್ದರಿಂದ ನಮಗಲ್ಲಿ ಪ್ರಾಯೋಗಿಕ ಶಿಕ್ಷಣದ ಜ್ಞಾನವೇ ಇಲ್ಲದಂತಾಗುತ್ತದೆ. ಆದ್ದರಿಂದ ವೈದ್ಯಕೀಯ ಶಿಕ್ಷಣದಂತೆಯೇ ಎಲ್ಲ ಶಿಕ್ಷಣ ವ್ಯವಸ್ಥೆಯೂ ಆದಾಗ ಮಾತ್ರ ಉಪಯೋಗವಾಗುತ್ತದೆ ಹಾಗೂ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದು ನನ್ನ ಅನಿಸಿಕೆ.
ನಾವು ಕಲಿಯುವ ಶಿಕ್ಷಣವು ನಮಗೆ ಸ್ವಯಂಉದ್ಯೋಗ ಹೊಂದುವುದರೆಡೆಗೆ ಸಿದ್ಧ ಮಾಡಬೇಕು. ಪ್ರಸ್ತುತ ಎಲ್ಲರೂ ಪದವಿಯನ್ನು ಪಡೆದರೆ ಕೆಲಸ ಸಿಗಬೇಕೆಂದರೆ ಸಾಧ್ಯವೇ? ಪದವಿಯೊಂದಿಗೆ ಕೌಶಲವು ಅಗತ್ಯವೂ ತಾನೇ! ಎಲ್ಲರೂ ಪದವಿ ಪಡೆಯುತ್ತಾರೆ, ಆದರೆ ಕೆಲವರು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಂದರೆ ನಾವು ಗಳಿಸಿರುವ ಪದವಿಯ ಪ್ರಯೋಜನವಾದರೂ ಏನು? ನಾವು ಕಲಿತದ್ದು ಕೇವಲ ಉದ್ಯೋಗಕ್ಕೆ ಸೀಮಿತವಾಯಿತೆ, ಅದರ ಜ್ಞಾನವನ್ನು ಬಳಸಿಕೊಂಡು ನಾನೇನಾದರೂ ಮಾಡಬಲ್ಲೆನೆ ಮತ್ತು ಅದರಿಂದ ಹತ್ತಾರು ಜನಕ್ಕೆ ಉಪಯೋಗವಿದೆಯೆ? – ಎಂಬುದರ ಕುರಿತು ನಾವೆಲ್ಲರೂ ಆಲೋಚಿಸಿದ್ದೇವೆಯೆ? ಆಲೋಚಿಸುವುದು ಕೂಡ ಒಳಿತು. ಹೊಸ ಶಿಕ್ಷಣ ನೀತಿಯಲ್ಲಿ ಹಲವು ಸುಧಾರಣಾ ಕ್ರಮಗಳು ಮತ್ತು ಮುಕ್ತ ಅವಕಾಶಗಳು ದೊರಕಿರುವುದು ಸ್ವಾಗತಾರ್ಹವಾಗಿದೆ. ವಿದ್ಯಾರ್ಥಿಯು ಒಂದು ವಿಷಯವನ್ನು ತೆಗೆದುಕೊಂಡರೆ ಅದಕ್ಕೆ ಬೇಕಿರುವ ಅಥವಾ ಅಗತ್ಯವಿರುವ ಕೌಶಲಗಳನ್ನು ಸಹಾ ಒದಗಿಸುತ್ತದೆ. ಅದೇ ವಿಷಯದಲ್ಲಿ ಆಳವಾದ ಮತ್ತು ಹೆಚ್ಚಿನ ಅಧ್ಯಯನಕ್ಕೂ ಮಾರ್ಗವನ್ನು ತೋರಿಸುತ್ತದೆ. ಇಂತಹ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿರುವುದು ದೇಶದಲ್ಲಿ ಉದ್ಯೋಗ ಸಮಸ್ಯೆಗೆ ಉತ್ತರವೂ ಆಗಬಹುದು.
ಆ ಸಲುವಾಗಿ ವಿದ್ಯಾರ್ಥಿಗಳಿಗೆ ನೂತನ ಶಿಕ್ಷಣ ಪದ್ಧತಿಯ ಬಗ್ಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುವುದು ಅತ್ಯಗತ್ಯ. ಹಾಗೂ ಅವರಲ್ಲಿರುವ ಸಂದೇಹಗಳಿಗೆ ಉತ್ತರವನ್ನು ಕೊಟ್ಟರೆ ವಿದ್ಯಾರ್ಥಿಗಳು ನೂತನ ಶಿಕ್ಷಣ ನೀತಿಯಲ್ಲಿ ಇರುವಂತಹ ಹಲವು ಸಂಶಯಗಳನ್ನು ದೂರ ಮಾಡಿಕೊಂಡು ಅದನ್ನು ಚೆನ್ನಾಗಿ ಅರಿಯುತ್ತಾರೆ. ಹಿರಿಯರ ಅನುಭವದ ಮಾತುಗಳು ಗಾದೆಗಳಾಗಿವೆ. ಅಂತಹ ಒಂದು ಗಾದೆಯನ್ನು ಇಲ್ಲಿ ಹಂಚಿಕೊಳ್ಳಬಹುದು. ಅದೆಂದರೆ ‘ಬೆಳೆಯುವ ಸಿರಿ ಮೊಳಕೆಯಲ್ಲಿ’. ಆ ಗಾದೆಯಂತೆ ಒಂದು ಗಿಡದ ಬೆಳವಣಿಗೆಯನ್ನು ಅದು ಹೇಗೆ ಮೊಳಕೆ ಒಡೆಯುತ್ತದೆ ಎಂಬುದರ ಆಧಾರದ ಮೇಲೆ ತಿಳಿಯಬಹುದು. ನಮ್ಮೆಲ್ಲರ ಶಿಕ್ಷಣದ ಅಡಿಪಾಯವು ಬಾಲ್ಯ ಶಿಕ್ಷಣವೇ ಆಗಿದೆ. ಬಾಲ್ಯದಲ್ಲಿ ನಾವೇನು ಕಲಿಯುತ್ತೇವೆ ಅದೇ ಮುಂದುವರಿಯುವುದು, ಹಾಗೂ ನಮಗೆ ಅದೇ ಭದ್ರಬುನಾದಿಯಾಗಿರುತ್ತದೆ. ಅಂತಹ ಬಾಲ್ಯ ಶಿಕ್ಷಣದಲ್ಲಿ ಬದಲಾವಣೆಯನ್ನು ಕಾಣುತ್ತಿರುವುದು ಖುಷಿಯ ಸಂಗತಿ. ಈ ಶಿಕ್ಷಣ ನೀತಿಯಲ್ಲಿ ಪ್ರತಿಯೊಂದು ಮಗುವಿನ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ವೃದ್ಧಿಗೊಳಿಸುವ ಹಾಗೂ ಸದೃಢಗೊಳಿಸಿಕೊಳ್ಳುವ ಪ್ರಯತ್ನವಾಗುತ್ತಿದೆ. ಮಗು ತನಗೆ ಇಷ್ಟವಿರುವ ಯಾವುದೇ ಒಂದು ವಿಷಯದಲ್ಲಿ ಸದೃಢರಾಗಲು ಪ್ರಯತ್ನಿಸಬಹುದು. ಕ್ರಿಯಾತ್ಮಕ ಹಾಗೂ ನೈತಿಕ ನೆಲೆಗಟ್ಟಿನಲ್ಲಿ, ಶಿಕ್ಷಣವು ಮಕ್ಕಳು ಕ್ರಿಯಾಶೀಲರಾಗಿ ತಮ್ಮ ಸರ್ವತೋಮುಖ ಬೆಳವಣಿಗೆಗೆ ಗಮನವಹಿಸುತ್ತಾರೆ. ಹೀಗೆ ಮಗುವಿನಿಂದಲೇ ಮೌಲ್ಯಯುತ, ಕೌಶಲಾಧಾರಿತ ಸಹಿಷ್ಣುಭಾವ, ಸಹಬಾಳ್ವೆ, ಪರರ ಬಗೆಗೆ ಗೌರವ, ತಾವಲ್ಲದೆ, ತನ್ನವರನ್ನೂ, ತನ್ನವರ ಬಗೆಗೂ ಚಿಂತನೆ ಮತ್ತು ಅಭಿವೃದ್ಧಿ, ಮುಖ್ಯವಾಗಿ ದೇಶದ ಬೆಳವಣಿಗೆಯ ಕಾರ್ಯದಲ್ಲಿ ಭಾಗವಹಿಸುವಿಕೆಯನ್ನು ಮಗು ಕಲಿಯುತ್ತದೆ.
‘ಕಂಫರ್ಟ್ ಜೋನ್’ ಪದವನ್ನು ಕೇಳಿದಾಗ ಎಲ್ಲರಲ್ಲೂ ಒಂದು ತರಹದ ಖುಷಿ ಮೂಡುತ್ತದೆ. ಒಂದು ಉದ್ಯೋಗ ಗಿಟ್ಟಿಸಿಕೊಂಡು ಬೇಕಾದ ಹಾಗೆ ಜೀವನ ಮಾಡಬಹುದು ಎಂದೆಲ್ಲ ಕನಸು ಕಟ್ಟಿಕೊಳ್ಳುತ್ತಾರೆ ಅಥವಾ ಅರ್ಥೈಸಿಕೊಳ್ಳುತ್ತಾರೆ. ಈಗಿನ ದಿನಗಳಲ್ಲಂತೂ ಕ್ಯಾಂಪಸ್ ಸೆಲೆಕ್ಷನ್ಗಳದ್ದೇ ಕಾರುಬಾರು. ವರ್ಷಕ್ಕಿಷ್ಟು ಲಕ್ಷ ಎಂದಾಕ್ಷಣ ಬಾಯಿ ಬಾಯಿಬಿಡುತ್ತ ಹೊರಡುವವರೇ ಹೆಚ್ಚು. ಆದರೆ ಅವರು ತಮ್ಮ ಓದಿನ ಸಾರ್ಥಕತೆ ಮೆರೆಯುವರೆ? – ಎಂಬುದೇ ಅನುಮಾನ. ಒಂದೆರಡು ಅಥವಾ ಇಂತಿಷ್ಟು ವರ್ಷಕ್ಕೆ ಅಂತ ಅಗ್ರಿಮೆಂಟ್, ಅನಂತರ ಅವರು ಹಾಕಿದ ತಾಳಕ್ಕೆ ತಕ್ಕಹಾಗೆ ಕುಣಿಯುವುದು! ಆಗಲಿಲ್ಲವೆಂದರೆ ಇಂತಿಷ್ಟು ನಷ್ಟದ ಹಣವನ್ನು ನಾವೇ ಕಟ್ಟಿಕೊಡಬೇಕಾಗುತ್ತದೆ. ಹೀಗೆ ತಮಗೆ ಸ್ವಾತಂತ್ರ್ಯವೇ ಇಲ್ಲದೆ ಮತ್ತೊಬ್ಬರು ಹೇಳುವ, ಕೊಡುವ ಯೂನಿಫಾರ್ಮ್ ಸೂಟ್ ಬೂಟಿನೊಳಗೆ ಮೈಯನ್ನು ತೂರಿಸಿ, ರುಚಿಯನ್ನು ಅರಿಯದೆ ಅಥವಾ ಆಸ್ವಾದಿಸದೆ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಂಡು, ಬೈಕೋ ಕಾರೋ ಹತ್ತಿ ಲ್ಯಾಪ್ಟಾಪ್ ಹಿಡಿದರೆ ವೇಳೆ ಮುಗಿಯುವವರೆಗೂ ಯಾಂತ್ರಿಕ ಜೀವನವೇ. ಆಫೀಸಿಗೆ ಹೋಗಿ ಕುಳಿತರೆ ಇತರ ಮಾನವರೊಂದಿಗೆ ಸಂವಹನವೇ ಅಪರೂಪ. ಮಾತನಾಡಿದರೂ ಸಹ ಸಿಡುಕಿನೊಂದಿಗೆ. ಇಂತಹ ಜೀವನವು ಎಷ್ಟು ತಾನೇ ರಸವತ್ತಾಗಿರುತ್ತದೆ? ಅದು ಕೇವಲ ಹಣ-ಹೆಸರು ತಂದುಕೊಡಬಹುದೇ ವಿನಾ ನೆಮ್ಮದಿಯ ಜೀವನವನ್ನಲ್ಲ. ಹಾಗೆಂದು ಆ ಜೀವನವನ್ನು ನಾನು ಅವಹೇಳನ ಮಾಡುತ್ತಿಲ್ಲ, ಯಾಂತ್ರಿಕ ಬದುಕಿನ ರೀತಿಯನ್ನು ತಿಳಿಸಿದೆ ಅಷ್ಟೇ.
ಆದ್ದರಿಂದ ಎಲ್ಲೋ ಹೋಗಿ ಯಾರೋ ಗೊತ್ತೇ ಇರದವರ ಕಂಪೆನಿಯಲ್ಲಿ ದುಡಿಯುವುದಕ್ಕಿಂತ, ನಮ್ಮ ಸಾಮರ್ಥ್ಯವನ್ನೇ ಬಳಸಿಕೊಂಡು, ನಮ್ಮ ಜನರನ್ನು ಜೊತೆಗೂಡಿಸಿ ನಡೆಯುವುದು, ಉದ್ಯೋಗದಾತರಾಗುವುದು ಹರ್ಷದಾಯಕ. ನಾವು ಬೆಳೆದು ನಮ್ಮವರನ್ನು ಬೆಳೆಸುವುದು ಅಥವಾ ಅವರ ಅನ್ನಕ್ಕೆ ದಾರಿಯಾಗುವುದು, ಆಶ್ರಯವಾಗುವುದು – ಮನಸ್ಸಿಗೆ ನೆಮ್ಮದಿ ಹಾಗೂ ಬದುಕಿಗೊಂದು ಸಾರ್ಥಕತೆಯ ಭಾವವನ್ನು ತಂದುಕೊಡುವುದರಲ್ಲಿ ಸಂಶಯವೇ ಇಲ್ಲ. ಈ ಸಾರ್ಥಕತೆ ನೆಮ್ಮದಿ ಪಡೆಯಬೇಕಾದರೆ ಶ್ರಮ ಅನಿವಾರ್ಯ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ನಿಶ್ಚಿತ.
ಈಗಿನ ನೆಲೆಗಟ್ಟಿನಲ್ಲಿ ಒಂದು ಉದ್ಯೋಗ ಸೃಷ್ಟಿಸಲು ಹಲವು ಆಯಾಮಗಳಿಂದ ಯೋಚಿಸಿ ನಿರ್ಧರಿಸಬೇಕು. ಎಲ್ಲದಕ್ಕಿಂತ ಮೊದಲಾಗಿ ನಾವು ಈ ನಿಟ್ಟಿನಲ್ಲಿ ಸಂಪೂರ್ಣವಾದ ಜ್ಞಾನವನ್ನು ಹೊಂದಿರತಕ್ಕದ್ದು ಅತಿ ಆವಶ್ಯಕ.
ಈ ವಿಚಾರವಾಗಿ ಸಂಪೂರ್ಣ ನೆಲೆನಿಂತ ನಂತರ ಮತ್ತೊಬ್ಬರಿಗೆ ಆಶ್ರಯವಾಗಲು ಸಾಧ್ಯ. ನಾವು ಮಾಡುತ್ತಿರುವ ಕಾರ್ಯ ಹಾಗೂ ನೀಡುತ್ತಿರುವ ಉದ್ಯೋಗವು ಪ್ರಗತಿಯನ್ನು ಕಾಣುವಂತಿರಬೇಕು. ಅದು ಯಾವ ವಿಧದಲ್ಲೂ ಯಾವ ಜೀವಿಗೂ ಹಾನಿಕರವಾಗಿರದಂತೆ, ಪ್ರತಿಯೊಬ್ಬರಿಗೂ ಉಚಿತ ಹಾಗೂ ಉಪಯೋಗಕರ ಎಂದೆನಿಸುತ್ತಿರಬೇಕು. ಆ ಉದ್ಯೋಗವು ದೇಶದ ಪ್ರಗತಿಗೂ ಪೂರಕವಾಗಿದ್ದರೆ, ನಮ್ಮ ಏಳಿಗೆಯ ಜೊತೆಜೊತೆಗೆ, ನಮ್ಮವರುಗಳ ಹಾಗೂ ರಾಷ್ಟçದ ಏಳಿಗೆ ಸಾಧ್ಯ. ಮತ್ತು ಅದು ಸಮಾಜದ ಸ್ವಾಸ್ಥ್ಯಕ್ಕೂ ಕಾರಣವಾಗುವುದು. ಹಾಗೆಂದ ಮಾತ್ರಕ್ಕೆ ಈ ಹಾದಿ ಬಹಳ ಸುಗಮವೇನೂ ಅಲ್ಲ. ಈ ಹಾದಿಯಲ್ಲಿ ಹಲವು ಏಳುಬೀಳುಗಳು ಸಾಮಾನ್ಯ. ನಾಲ್ಕು ಜನರಿಗೆ ಉದ್ಯೋಗದಾತರಾಗುವವರು ಇಂತಹ ಏಳುಬೀಳುಗಳಿಗೆ ಮನಸ್ಸನ್ನು ಸಿದ್ಧ ಮಾಡಿಕೊಂಡಿರಬೇಕು. ಉದ್ಯೋಗ ಸೃಷ್ಟಿ ಮಾಡುವಾಗ ಕೆಲವು ಟೀಕೆಗಳು ಬರುತ್ತವೆ. ಅವನ್ನು ಕಿವಿಗೆ ಹಾಕಿಕೊಳ್ಳದೆ ಸರಿಯಾದ ಹಾದಿಯಲ್ಲಿ ನಡೆಯುವುದು ಉತ್ತಮ. ಉದ್ಯೋಗವೆಂದರೆ ಹಣದ ಹರಿವು ಸರ್ವೇಸಾಮಾನ್ಯ. ಆದರೆ ಅದರ ನಿರ್ವಹಣೆಯೇ ಬಹಳ ಮಹತ್ತ್ವದ್ದೆನಿಸುವುದು. ಜನರೊಂದಿಗೆ ಉತ್ತಮ ಬಾಂಧವ್ಯ ಸಂವಹನೆಯೂ ಕೂಡ ಪ್ರಗತಿಯಲ್ಲಿ ಪಾತ್ರವಹಿಸುತ್ತದೆ.
ಉದ್ಯೋಗದ ಸ್ಥಳ, ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಕಟ್ಟಡ, ಮಾಲಿನ್ಯ ನಿಯಂತ್ರಣ, ಮಾನವ ಸಂಪನ್ಮೂಲದ ಸದ್ಬಳಕೆ, ಸುತ್ತಮುತ್ತಲಿನ ವಾತಾವರಣದ ಬಗ್ಗೆ ಕಾಳಜಿ, ಆರ್ಥಿಕ ನಿರ್ವಹಣೆ, ಸರ್ಕಾರಿ ಸವಲತ್ತುಗಳ ಬಳಕೆ, ತೆರಿಗೆ ಪಾವತಿ, ಉದ್ಯೋಗಿಗಳ ಭದ್ರತೆ, ಅವರಿಗೆ ಆರೋಗ್ಯ ಯೋಜನೆಗಳು, ಇನ್ಶೂರೆನ್ಸಗಳನ್ನು ಒದಗಿಸುವುದು ಹಾಗೂ ಇನ್ನಿತರ ಅತ್ಯಾವಶ್ಯಕ ಅಂಶಗಳೆಡೆಗೂ ಗಮನವಹಿಸುವುದು ಉದ್ಯೋಗದಾತನ ಆದ್ಯ ಕರ್ತವ್ಯವಾಗಿದೆ. ಇದರ ಕಡೆಗೆ ಗಮನವಹಿಸಿದರೆ ಯಶಸ್ಸನ್ನು ಖಂಡಿತವಾಗಿಯೂ ಗಳಿಸಬಹುದು. ಈ ನಿಟ್ಟಿನಲ್ಲಿ ಅದರ ಬಗೆಗೆ ಆವಶ್ಯಕ ಅಧ್ಯಯನ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ಮತ್ತು ಮೈಗೂಡಿಸಿಕೊಂಡರೆ ನಾವು ಯಶಸ್ವಿಯಾಗಿ ಉದ್ಯೋಗದಾತರಾಗುವುದರಲ್ಲಿ ಸಂಶಯವೇ ಇಲ್ಲ.
ನನ್ನ ಸುತ್ತಮುತ್ತಲಿನ ಜಗತ್ತಿನಲ್ಲಿ ನನಗೆ ಉದ್ಯೋಗದಾತನಾಗಲು ಸ್ಫೂರ್ತಿ ಎಂದರೆ ‘ನನ್ನ ತಾತ ಹಾಗೂ ಮಾವಂದಿರು’. ನಾನು ಹುಟ್ಟುವ ಮೊದಲಿನಿಂದಲೂ ಅವರು ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ೪೨ನೇ ವರ್ಷಾಚರಣೆಯಲ್ಲಿ ಸಾಗುತ್ತಿದೆ. ೧೯೮೦ರಲ್ಲಿ ಶುರುವಾದ ‘ಶ್ರೀ ಮಾತಾ ಹಿಂದೂ ಮಿಲಿಟರಿ ಹೋಟೆಲ್’, ‘ವೆಂಕಟಪ್ಪನ ಹೋಟ್ಲು’ ಎಂದೇ ಪ್ರಸಿದ್ಧಿ. ಮೊದಮೊದಲು ಮೊಟ್ಟೆ ತಿನಿಸುಗಳಿಂದ ಶುರುವಾದ ಹೋಟೆಲ್. ಇಂದು ಹಲವು ಬಗೆಯ ಶುಚಿ ರುಚಿಯಾದ ಮಾಂಸಾಹಾರಿ ಖಾದ್ಯಗಳನ್ನು, ರಾಗಿ ಮುದ್ದೆ, ನಾಟಿ ಕೋಳಿ ಸಾರು ಔತಣವನ್ನೂ ಸರಗೂರು ತಾಲೂಕಿನ ಜನತೆಗೆ ಲಭ್ಯವಾಗಿಸಿದೆ.
ಪ್ರಾರಂಭದಲ್ಲಿ ಹಲವು ವಿಧದ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿಯೂ ಭದ್ರವಾಗಿ ತಲೆಯೆತ್ತಿ ನಿಂತಿದೆ. ಹಲವು ಬಾರಿ ರೂ. ೫೦ ಸಾಲ ಮಾಡಿ ಹೋಟೆಲ್ ನಡೆಸಿದ ಸಂದರ್ಭಗಳನ್ನು ತಾತ ಆಗಾಗ ನೆನಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಮಾಡಿದ ಅಡುಗೆಯೂ ಮಿಕ್ಕಿದ ಉದಾಹರಣೆಗಳು ಉಂಟು. ಆದರೆ ಈಗ ಅದಕ್ಕೆಲ್ಲ ಎಡೆ ಇಲ್ಲದಂತೆ ಅತ್ಯುತ್ತಮ ರೀತಿಯಲ್ಲಿ ಹೋಟೆಲ್ ನಿರ್ವಹಿಸಲಾಗುತ್ತಿದೆ. ಹೊಟೇಲಿನಲ್ಲಿ ಕೆಲಸ ಮಾಡುವ ಹುಡುಗರು ಅಥವಾ ಯುವಕರು ಸಂತೋಷದಿಂದಲೇ ಕೆಲಸ ಮಾಡುತ್ತಾರೆ. ನಾನು ಸಹ ಬಿಡುವಿನ ಸಮಯದಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡುವೆ. ಹಾಗೂ ನನ್ನ ಅಜ್ಜಿ ಹೋಟೆಲ್ ಉದ್ಯಮಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ದಿನಕ್ಕೆ ೧೨೦ ರಿಂದ ೧೫೦ ಮುದ್ದೆಗಳನ್ನು ಒಲೆಯಲ್ಲಿ ಬೇಯಿಸಿ ತಿರುವಿ ಕಟ್ಟುತ್ತಾರೆ. ಜೊತೆಜೊತೆಗೆ ಇನ್ನೂ ಹತ್ತುಹಲವು ಕೆಲಸಗಳನ್ನು ಮಾಡುತ್ತಾರೆ. ಇವರು ನನಗೆ ಸ್ಫೂರ್ತಿಯ ಸೆಲೆ.
ನನ್ನ ತಾತ ಅವರ ಅಣ್ಣನೊಂದಿಗೆ ಪ್ರಾರಂಭಿಸಿದ ಹೋಟೆಲನ್ನು ಇಂದು ಮಾವಂದಿರು ನಿರ್ವಹಣೆ ಮಾಡುತ್ತಿದ್ದಾರೆ. ಈಗಲೂ ನಮ್ಮ ತಾತ ಸಪ್ಲೈ ಮಾಡುತ್ತಾರೆ. ಇದು ಅವರ ಕಾರ್ಯಕ್ಷಮತೆ ಹಾಗೂ ಉದ್ಯೋಗದೊಂದಿಗಿನ ಪ್ರೀತಿ ಮತ್ತು ನಂಟನ್ನು ತೋರಿಸುತ್ತದೆ. ಇನ್ನೊಂದು ವಿಷಯ, ಕಾಲುನೋವು ಇದ್ದರೂ ಸಹ ಅವರು ಹೋಟೆಲ್ಗೆ ಹೋಗುವುದನ್ನು ನಿಲ್ಲಿಸುವುದಿಲ್ಲ. ಕಾರಣ ಅವರಿಗೆ ಸುಮ್ಮನೆ ಆಲಸಿಯಂತೆ ಕುಳಿತು ಕಾಲಕಳೆಯುವುದು ಇಷ್ಟವಿಲ್ಲ. ಇದು ಅವರಿಂದ ನಾವು ಕಲಿಯಬೇಕಾದ ಪಾಠ. ಮನೆಯಲ್ಲಿಯೇ ಮುದ್ದೆ ಹಾಗೂ ಮಸಾಲೆಯನ್ನು ಸಿದ್ಧಪಡಿಸುತ್ತಾರೆ ಹಾಗೂ ಈ ಹೋಟೆಲ್ ಉದ್ಯಮದಿಂದ ಐದು ಜನ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆ.
“ಲಾಭ ನಷ್ಟಗಳ ಆಚೆಗೆ ಹೋಟೆಲ್ ಉದ್ಯಮದಲ್ಲಿ ಹಸಿದವರಿಗೆ ಅನ್ನ ನೀಡಿದ ತೃಪ್ತಿಯ ಮನೋಭಾವ ಹಾಗೂ ಸಾರ್ಥಕತೆ ಸಿಕ್ಕಿದೆ” ಎನ್ನುತ್ತಾರೆ ನನ್ನ ತಾತ ವೆಂಕಟಾಚಲ ಶೆಟ್ರು ಹಾಗೂ ಮಾವಂದಿರಾದ ಗಿರೀಶ್ ಮತ್ತು ಸಂತೋಷ್. ಕೆಲವರು ಹಣವಿಲ್ಲದೆ ಹಸಿದು ಬಂದು ಹೋಟೆಲ್ನಲ್ಲಿ ಊಟ ಮಾಡಿರುವ ಉದಾಹರಣೆಗಳು ಹಲವಿವೆ. ಅಂತಹವರು ತಾತನನ್ನು ಅನ್ನದಾತಪ್ರಭುಗಳು ಎಂದು ಸಂಬೋಧಿಸುವುದನ್ನು ಕೇಳಿದ್ದೇನೆ. ಅದು ಅವರ ಕೃತಜ್ಞತಾಭಾವವನ್ನು ಸೂಚಿಸುತ್ತದೆ.
ಇದನ್ನೆಲ್ಲ ಹತ್ತಿರದಿಂದ ಕಂಡ ನನಗೆ ಭವಿಷ್ಯದಲ್ಲಿ ಉದ್ಯೋಗದಾತನಾಗುವುದೇ ಉತ್ತಮ ಹಾಗೂ ಈ ರೀತಿ ಸಾರ್ಥಕತೆಯ ಭಾವವನ್ನು ಹೊಂದುವುದೇ ಉತ್ತಮವೆನಿಸುತ್ತದೆ. ಈ ಅನುಭವಗಳನ್ನೆಲ್ಲ ಪಡೆದ ನನಗೆ ಭವಿಷ್ಯದಲ್ಲಿ ಉದ್ಯೋಗದಾತನಾಗುತ್ತೇನೆ ಎಂಬ ಭರವಸೆ ಇದೆ. ಆ ನಿಟ್ಟಿನಲ್ಲಿ ನನ್ನ ಅನುಭವ ನನಗೆ ಪಾಠವಾಗಿದೆ ಹಾಗೂ ಒಂದು ಚೌಕಟ್ಟಾಗಿ ದೊರೆತಿದೆ. ಆದ್ದರಿಂದ ಉದ್ಯೋಗಿಯಾಗಿ ಕಂಫರ್ಟ್ ಜೋನ್ ಸೇರುವುದಕ್ಕಿಂತ ಉದ್ಯೋಗದಾತನಾಗಿ ನಾಲ್ಕು ಜನರ ಜೀವನಕ್ಕೆ ಆಧಾರವಾಗುವುದು, ದೇಶದ ಯಶಸ್ಸಿನಲ್ಲಿ ನನ್ನ ಕಾರ್ಯವನ್ನು ಪಾಲುದಾರಿಕೆಯನ್ನಾಗಿಸಿ, ಕಷ್ಟವಾದರೂ ನೆಮ್ಮದಿಯ ಹಾಗೂ ಸಾರ್ಥಕತೆಯ ಜೀವನವನ್ನು ನಿರ್ವಹಿಸುವೆ.